Categories
ಪಶುವೈದ್ಯ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಪ್ರೊ. ಎಸ್.ಎಂ. ಜಯದೇವಪ್ಪ

ಪಶು ಶಸ್ತ್ರಚಿಕಿತ್ಸೆಯಲ್ಲಿ ಅಪಾರ ಪರಿಣತಿಯುಳ್ಳ ಪ್ರೊ. ಎಸ್.ಎಂ. ಜಯದೇವಪ್ಪ ಕಾಯಕವೇ ಕೈಲಾಸ ತತ್ವದಲ್ಲಿ ನಂಬಿಕೆಯುಳ್ಳವರು.
೧೯೪೩ರಲ್ಲಿ ದಾವಣಗೆರೆ ಜಿಲ್ಲೆಯ ಮಾಯಕೊಂಡ ಗ್ರಾಮದಲ್ಲಿ ಜನನ. ಪಶು ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿ. ೧೯೬೬ರಿಂದ ಪಶುಪಾಲನಾ ಇಲಾಖೆಯಲ್ಲಿ ಸೇವೆ ಸಲ್ಲಿಕೆ. ಬೆಂಗಳೂರಿನ ಪಶುವೈದ್ಯಕೀಯ ಮಹಾ ವಿದ್ಯಾಲಯದ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ವಿವಿಧ ಶ್ರೇಣಿಗಳಲ್ಲಿ ೩೦ ವರ್ಷಗಳ ಸುದೀರ್ಘ ಅವಧಿಯ ಕರ್ತವ್ಯ ನಿರ್ವಹಣೆ. ೨೦೦೩ರಲ್ಲಿ ಸೇವೆಯಿಂದ ನಿವೃತ್ತಿ.
ಶ್ರೀಯುತರು ಪಶುವಿಜ್ಞಾನದ ಅಂಗಗಳಾದ ಶಿಕ್ಷಣ, ಸಂಶೋಧನೆ ಹಾಗೂ ವಿಸ್ತರಣೆ ಕ್ಷೇತ್ರಗಳಲ್ಲಿ ನಡೆಸಿದ ಅಧ್ಯಯನದಿಂದ ಸಮಾಜಕ್ಕೆ ಮತ್ತು ರೈತ ವರ್ಗಕ್ಕೆ ಅಪಾರ ಪ್ರಯೋಜನ, ರಾಷ್ಟ್ರ, ರಾಜ್ಯಮಟ್ಟದ ವಿಶ್ವವಿದ್ಯಾಲಯಗಳ ಪಶುವೈದ್ಯಕೀಯ ಮತ್ತು ಕೃಷಿ ವಿಜ್ಞಾನ ಜರ್ನಲ್‌ಗಳಲ್ಲಿ ಶ್ರೀಯುತರ ೧೩೦ಕ್ಕೂ ಹೆಚ್ಚಿನ ಸಂಶೋಧನಾತ್ಮಕ ಲೇಖನಗಳು ಪ್ರಕಟ. ಹತ್ತಾರು ಲೇಖನಗಳಿಗೆ ಚಿನ್ನದ ಪದಕ. ವಿಚಾರ ಸಂಕಿರಣ, ಸಮ್ಮೇಳನಗಳಲ್ಲಿ ಭಾಗವಹಿಸಿ ಉಪಯುಕ್ತ ಉಪನ್ಯಾಸಗಳನ್ನು ಮಂಡಿಸಿದ ಅನುಭವ ಅವರದು.
ಜಾನುವಾರುಗಳಲ್ಲಿ ಒಡೆದಿರುವ ಮೂತ್ರಕೋಶ ಸರಿಪಡಿಸುವಿಕೆ, ಸಿಡಿಗಾಲಿರುವ ದನಗಳ ಸ್ಥಿತಿ ಸುಧಾರಣೆ, ಮುರಿದ ಕೊಂಬುಗಳನ್ನು ಸರಿಪಡಿಸುವಿಕೆ, ಸಾಕು ನಾಯಿಗಳು, ಬೀದಿ ನಾಯಿಗಳಿಗೆ ಕಡಿಮೆ ವೆಚ್ಚದಲ್ಲಿ ಶಸ್ತ್ರ ಚಿಕಿತ್ಸೆ ಮಾಡುವ ವಿಧಾನದಲ್ಲಿ ನಿಪುಣತೆ, ನಿವೃತ್ತಿ ನಂತರವೂ ಸಾಕು ಪ್ರಾಣಿಗಳು ಮತ್ತು ರಾಸುಗಳ ಸೇವೆಯಲ್ಲಿ ನಿರತರಾಗಿರುವ ಪಶು ವೈದ್ಯರು ಪ್ರೊ. ಎಂ. ಜಯದೇವಪ್ಪ.

Categories
ಆಯುರ್ವೇದ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಟಿ.ಎಲ್.ದೇವರಾಜ್

ಪಾರಂಪರಿಕ ವೈದ್ಯ ಪದ್ಧತಿಯಾಗಿರುವ ಆಯುರ್ವೇದ ಚಿಕಿತ್ಸಾ ವಿಧಾನದಲ್ಲಿ ಅಪಾರ ಪರಿಣತಿ ಪಡೆದ ಖ್ಯಾತ ವೈದ್ಯರು ಶ್ರೀ ಟಿ.ಎಲ್.ದೇವರಾಜ್ ಅವರು.
ಹಾಸನ ಜಿಲ್ಲೆಯ ತೇರಣ್ಯದಲ್ಲಿ ೧೯೩೮ರ ಸೆಪ್ಟೆಂಬರ್ ೨೨ರಂದು ಜನನ, ಮೈಸೂರು ವಿಶ್ವವಿದ್ಯಾಲಯದಿಂದ ಹಿಂದಿ ಭಾಷೆಯಲ್ಲಿ ಇಂಟರ್ ಮೀಡಿಯೇಟ್ ಎಂ.ಎ ಪದವಿ ಪೂರೈಸಿದ ಅವರು ತದನಂತರ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಆಯುರ್ವೇದ ವೈದ್ಯ ಪದವಿ ಪಡೆದರು.
ನಾಗಪುರ, ಮದ್ರಾಸ್, ಕರ್ನಾಟಕ, ಮೈಸೂರು, ಕೇರಳ ವಿಶ್ವವಿದ್ಯಾಲಯಗಳಲ್ಲಿ ಪರೀಕ್ಷಕರಾಗಿ ಕೆಲಸ ನಿರ್ವಹಣೆ. ಕರ್ನಾಟಕ ಮೆಡಿಕಲ್ ಪ್ಲಾಂಟ್ಸ್ ಅಥಾರಿಟಿ, ಕರ್ನಾಟಕ ಆಯುರ್ವೇದ ಮತ್ತು ಕೇಂದ್ರ ನೋಂದಣಿ ಮಂಡಳಿಯ ಸದಸ್ಯರಾಗಿ ಸೇವೆ. ಆಯುರ್ವೇದ ಕುರಿತು ಸುಮಾರು ೩೬ ಪುಸ್ತಕಗಳನ್ನು ಬರೆದಿರುವರು. ಅವರ ಕೆಲವು ಪುಸ್ತಕಗಳು ರಷ್ಯನ್ ಮತ್ತು ಸ್ಪೇನ್ ಭಾಷೆಗೂ ತರ್ಜುಮೆಗೊಂಡಿವೆ.
ಪಂಚಕರ್ಮ ಚಿಕಿತ್ಸಾ ವಿಧಾನ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕುರಿತು ಕನ್ನಡ, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಪುಸ್ತಕಗಳನ್ನು ಹಾಗೂ ಅನೇಕ ನಿಯತಕಾಲಿಕೆಗಳಲ್ಲಿ ಆಯುರ್ವೇದ ಕುರಿತ ಲೇಖನಗಳನ್ನು ಬರೆದಿದ್ದಾರೆ. ೨೦೦೭ರ ಸಾಲಿನಲ್ಲಿ ವೈದ್ಯ ಶ್ರೀರಾಮ ನಾರಾಯಣ ವೈದ್ಯ ಪ್ರಶಸ್ತಿ ಬಂದಿದ್ದು, ಈ ಪ್ರಶಸ್ತಿ ಪಡೆದ ಏಕೈಕ ಕನ್ನಡಿಗ ಎಂಬ ಹಿರಿಮೆ ಇವರದು.
ಜೊತೆಗೆ ಅಂತರರಾಷ್ಟ್ರೀಯ ಸೇವಾ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಆಯುರ್ವೇದ ಆಕಾಡೆಮಿ, ಅಗ್ನಿಮೇಳ ಆಯುರ್ವೇದ ಅನುಷ್ಠಾನ, ಬೆಂಗಳೂರು ರತ್ನ ಹೀಗೆ ಅನೇಕ ಪ್ರಶಸ್ತಿಗಳಿಗೆ ಶ್ರೀಯುತರು ಭಾಜನರು. ಆಯುರ್ವೇದದ ಪ್ರಯೋಜನವನ್ನು ಸಮಾಜಕ್ಕೆ ಪರಿಚಯಿಸಿ, ಆ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿದವರು ಶ್ರೀ ಟಿ.ಎಲ್.ದೇವರಾಜ್.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು/ಹೊರದೇಶ ಕನ್ನಡಿಗ

ಡಾ. ಎಂ.ಬಿ.ಉದೋಷಿ

ಕನ್ನಡ ನಾಡಿನಲ್ಲಿ ಹುಟ್ಟಿ ವೃತ್ತಿ ನೈಪುಣ್ಯತೆ ಮತ್ತು ಸೇವಾ ಮನೋಭಾವದಿಂದ ದೇಶದಾಚೆಗೂ ತಮ್ಮ ಪ್ರತಿಭೆಯನ್ನು
ಪರಿಚಯಿಸಿದವರು ಡಾ. ಎಂ.ಬಿ.ಉದೋಷಿ ಅವರು.
ದೇಶದ ಅನೇಕ ಪ್ರತಿಭೆಗಳಂತೆ ತಮ್ಮ ವೃತ್ತಿಗೊಂದು ಘನತೆಯನ್ನು ಬಯಸಿ, ಅಮೆರಿಕೆಗೆ ಕಾಲಿಟ್ಟ ಶ್ರೀಯುತರು ವೃತ್ತಿ ಬದುಕಿನಿಂದಾಚೆಗೂ ತಮ್ಮ ಸೇವೆಯನ್ನು ವಿಸ್ತರಿಸಿಕೊಂಡದ್ದು ಅವರ ವಿಶಿಷ್ಟ ವ್ಯಕ್ತಿತ್ವಕ್ಕೆ ಸಾಕ್ಷಿ.
ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಲೇ ಅಮೆರಿಕದಂತಹ ದೂರ ದೇಶದಲ್ಲಿ ನೆಲೆಸಿರುವ ಕನ್ನಡಿಗರ ಭಾವನೆಗಳಿಗೂ ಸ್ಪಂದಿಸುತ್ತ ಕನ್ನಡ ಸಂಘಗಳನ್ನು ಕಟ್ಟಿ ಸಕ್ರಿಯವಾಗಿ ದುಡಿಯುತ್ತಿದ್ದಾರೆ ಶ್ರೀಯುತರು.
ಹೊರದೇಶದಲ್ಲಿದ್ದರೂ ವೈದ್ಯಕೀಯ ಕರ್ತವ್ಯದೊಂದಿಗೆ ತಾಯಿನುಡಿ ಕನ್ನಡವನ್ನೂ ಉಳಿಸಿ ಬೆಳೆಸುವ ಕನ್ನಡ ಸೇವೆಗೆ ನಿಂತ ಉದೋಷಿ ಅವರಿಗೆ ಸಂದಿರುವ ಗೌರವ, ಸಮ್ಮಾನಗಳು ಹತ್ತು-ಹಲವು.
ದೇಶದಾಚೆಗೆ ಕನ್ನಡದ ಸೇವೆಯನ್ನು ಚಾಚಿದವರು ಡಾ. ಎಂ.ಬಿ.ಉದೋಷಿ.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು/ಹೊರದೇಶ ಕನ್ನಡಿಗ

ಡಾ. ಉಮಾ ಮೈಸೂರ್ಕರ್‌

ದೂರದ ಅಮೆರಿಕೆಯಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಕಲೆಯ ವೈಭವವನ್ನು ಪರಿಣಾಮಕಾರಿಯಾಗಿ ಬಿಂಬಿಸುವ ಕೆಲಸ ಮಾಡುತ್ತಿರುವವರು ಡಾ. ಉಮಾ ಮೈಸೂರ‌ ಅವರು.
ಕನ್ನಡ ಕೂಟದ ಸದಸ್ಯರಾಗಿ ಅವರು ಸಲ್ಲಿಸುತ್ತಿರುವ ಸೇವೆ ಅನನ್ಯ. ೧೯೭೦ರಿಂದ ನ್ಯೂಯಾರ್ಕ್‌ನಲ್ಲಿ ನೆಲೆಸಿರುವ ಈ ಕನ್ನಡತಿ ವೃತ್ತಿಯಲ್ಲಿ ಪ್ರಸೂತಿ ತಜ್ಞೆ, ಪ್ರವೃತ್ತಿಯಲ್ಲಿ ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ಸಕ್ರಿಯರು. ಉತ್ತರ ಅಮೆರಿಕದ ಹಿಂದೂ ಟೆಂಪಲ್ ಸೊಸೈಟಿಯ ಅಧ್ಯಕ್ಷರಾಗಿ ಹಿಂದೂ ಧರ್ಮ ಪ್ರಚಾರಕ್ಕಾಗಿ ಅವರು ಸಲ್ಲಿಸುತ್ತಿರುವ ಸೇವೆ ಅಭಿನಂದನಾರ್ಹ.
ಶ್ರೀಯುತರ ಸೇವಾ ಕೈಂಕರ್ಯ ಅಮೆರಿಕದಲ್ಲಿ ಮಾತ್ರವಲ್ಲದೇ ತವರು ನೆಲದ ಬೆಂಗಳೂರಿನಲ್ಲಿ ಬಡ ಮಹಿಳೆಯರ ವಸತಿ ನಿಲಯ ನಿರ್ಮಾಣಕ್ಕೆ, ಅಂಗವಿಕಲರ ಕಲ್ಯಾಣಕ್ಕಾಗಿ ಆರ್ಥಿಕ ನೆರವಿನ ರೂಪದಲ್ಲಿ ಸಂದಿದೆ.
ನ್ಯೂಯಾರ್ಕ್‌ನ ಕನ್ನಡ ಕೂಟದ ಅಧ್ಯಕ್ಷರೂ ಆಗಿರುವ ಡಾ. ಉಮಾ ಮೈಸೂರ‌ ಅವರು ತಮ್ಮ ನಿಸ್ವಾರ್ಥ ಸಮಾಜ ಸೇವೆಯ ಮೂಲಕ ಅನಿವಾಸಿ ಕನ್ನಡಿಗರಿಗೆ ಮಾದರಿ.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು/ಹೊರದೇಶ ಕನ್ನಡಿಗ

ಶ್ರೀ ಕೆ. ಉಪೇಂದ್ರ ಭಟ್

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪದ್ಧತಿಯ ಕಿರಾನಾ ಘರಾಣೆಯ ಯಶಸ್ವಿ ಗಾಯಕ ಪಂಡಿತ್ ಕೆ.ಉಪೇಂದ್ರ ಭಟ್ ಅವರ ಸಾಧನೆಯಷ್ಟೇ ಅವರ ವ್ಯಕ್ತಿತ್ವವೂ ಶಿಖರ ಸದೃಶ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿ ಬೆಳೆದ ಶ್ರೀಯುತರು ಸಂಗೀತ ಪಯಣ ಆರಂಭಿಸಿದ್ದು ಮಂಗಳೂರಿನ ಶ್ರೀ ಪಂಡಿತ್ ನಾರಾಯಣ ಪೈ ಅವರ ಬಳಿ, ಆ ಬಳಿಕ ಪಂಡಿತ ಮಾಧವ ಗುಡಿ ಮತ್ತು ಖ್ಯಾತ ಹಿಂದೂಸ್ತಾನಿ ಹಾಡುಗಾರ ಪಂಡಿತ್ ಭೀಮಸೇನ ಜೋಷಿ ಅವರ ಕಾವಲಿನಲ್ಲಿ ನಿಯಮಿತ ತರಬೇತಿ ಪಡೆದು ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವರು. ಸದ್ಯ ಪೂಜ್ಯ ಭೀಮಸೇನ ಜೋಷಿ ಅವರೊಂದಿಗೆ ಪುಣೆಯಲ್ಲಿ ಅವರ ವಾಸ.
ಮುಂಬಯಿಯ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯದಿಂದ ‘ಸಂಗೀತ ವಿಶಾರದ ಮತ್ತು ಸಂಗೀತ ಅಲಂಕಾರ’ ವಿಷಯದಲ್ಲಿ ಸ್ನಾತಕೋತ್ತರ ಪದವಿ, ದೈವದತ್ತವಾಗಿ ಒಲಿದ ಕಂಠ ಸಿರಿಯ ಉಪೇಂದ್ರರ ಹಾಡುಗಾರಿಕೆಯಲ್ಲಿ ವ್ಯವಸ್ಥಿತ ರಾಗದ ಆಲಾಪನೆಗಳು, ಸ್ಪಷ್ಟ ಉಚ್ಚಾರ, ಶಕ್ತಿಶಾಲಿ ತಾನಗಳ ಸೊಬಗುಂಟು.
ಜಲಂಧರ್‌ನ ಹರಿವಲ್ಲಭ ಸಂಗೀತ ಸಮ್ಮೇಳನ, ಪುಣೆಯ ಸವಾಯಿ ಗಂಧರ್ವ ಸಂಗೀತೋತ್ಸವಗಳಲ್ಲಿ, ಇಂಗ್ಲೆಂಡ್, ಅಮೆರಿಕ, ದುಬೈ, ಬಕ್ರೇನ್ ಮುಂತಾದೆಡೆ ಅಲ್ಲಿನ ಪ್ರಸಿದ್ದ ಸಭೆ-ಸಮಾರಂಭಗಳಲ್ಲೂ ಉಪೇಂದ್ರ ಭಟ್ ಅವರ ಸಂಗೀತ ಮಾಧುರ್ಯದ ಕಂಪು ಪಸರಿಸಿದೆ.
೧೯೯೬ರಲ್ಲಿ ಜರುಗಿದ ಸಂತ ಜ್ಞಾನೇಶ್ವರರ ೭ನೇ ಜನ್ಮ ಶತಾಬ್ಬಿ ಸಂದರ್ಭದಲ್ಲಿ ಪ್ರಸ್ತುತ ಪಡಿಸಿದ ಕಾರ್ಯಕ್ರಮದಲ್ಲಿ ಪಂಡಿತ್‌ ಉಪೇಂದ್ರರ ಸಂಗೀತ ಪ್ರೌಢಿಮೆಗೆ ಅಂದಿನ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾರಿಂದ ಶ್ಲಾಘನೆ. ೨೦೦೦ದಲ್ಲಿ ಉತ್ತರ ಅಮೆರಿಕಾ ವತಿಯಿಂದ ‘ಮ್ಯೂಜಿಷಿಯನ್ ಆಫ್ ದಿ ಇಯರ್’ ಗೌರವಕ್ಕೆ ಅವರು ಪಾತ್ರರು.
ಸುಮಧುರ ಸಂಗೀತದಿಂದ ಜನಮೆಚ್ಚುಗೆ ಪಡೆದ ಶಾಸ್ತ್ರೀಯ ಹಾಡುಗಾರರು ಶ್ರೀ ಕೆ. ಉಪೇಂದ್ರ ಭಟ್.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು/ಹೊರದೇಶ ಕನ್ನಡಿಗ

ಶ್ರೀ ವಿಜಯಕುಮಾರ್ ಶೆಟ್ಟಿ

ಮುಂಬೈನಲ್ಲಿ ನಾಟಕ ತಂಡ ರಚಿಸಿ ಕನ್ನಡ ಸಂಸ್ಕೃತಿ, ಕಲೆ, ಶ್ರೇಷ್ಠತೆಯನ್ನು ಉಳಿಸಿ ಬೆಳೆಸುತ್ತಿರುವವರು ತೋನ್ಸೆ ವಿಜಯ ಕುಮಾರ್ ಶೆಟ್ಟಿ ಅವರು.
ಉಡುಪಿ ಜಿಲ್ಲೆಯ ತೋನ್ಸೆ ಗ್ರಾಮದವರಾದ ವಿಜಯ ಕುಮಾರ್ ವಿಜ್ಞಾನ ಪದವೀಧರರು. ಎಳೆವಯಸ್ಸಿನಿಂದಲೂ ರಂಗಭೂಮಿಯಲ್ಲಿ ಆಸಕ್ತಿ ತಳೆದಿದ್ದ ಅವರು, ಪ್ರವೃತ್ತಿಯಾಗಿ ಆಯ್ದುಕೊಂಡಿದ್ದು ರಂಗಭೂಮಿಯನ್ನು.
ಉದ್ಯೋಗ ನಿಮಿತ್ತ ಮುಂಬೈ ವಾಸಿಯಾಗಿರುವ ಅವರು ರಂಗ ಸಾಧಕರ ಸಂಪರ್ಕದಿಂದ ‘ಕಲಾಜಗತ್ತು’ ರಂಗ ತಂಡ ಸ್ಥಾಪನೆ, ಮಕ್ಕಳ ಭವಿಷ್ಯ ನಿರ್ಮಾಣಕ್ಕಾಗಿ ಚಿಣ್ಣರ ಬಿಂಬದ ರಚನೆ ಶ್ರೀಯುತರ ಸಮಾಜಮುಖಿ ನಿಲುವಿಗೆ ಸಾಕ್ಷಿ. ಈವರೆಗೆ ಎರಡು ಸಾವಿರಕ್ಕೂ ಹೆಚ್ಚಿನ ತುಳು-ನಾಟಕಗಳ ಪ್ರದರ್ಶನ ನೀಡಿರುವ ಅವರು ೪೦ಕ್ಕೂ ಹೆಚ್ಚಿನ ಕನ್ನಡ ಮತ್ತು ತುಳು ನಾಟಕ ಕೃತಿಗಳ ಲೇಖಕರು.
‘ಬದಿ’ ತುಳು ನಾಟಕ ಕೃತಿಗೆ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಲಭಿಸಿದೆ. ಶ್ರೀಯುತರ ಸೇವಾ ಮನೋಭಾವಕ್ಕೆ ಮಹಾರಾಷ್ಟ್ರದ ಅಭಿಮಾನಿ ಬಳಗದಿಂದ ತುಳು ನಾಟಕ ಕಲಾರತ್ನ ಪ್ರಶಸ್ತಿ, ಶ್ರೇಷ್ಠ ಹೊರನಾಡ ಕನ್ನಡಿಗ ಗೌರವಗಳು ಸಂದಿವೆ.
ನಟ, ನಿರ್ದೇಶಕ, ಸಂಘಟಕ, ಕಲಾ ಪೋಷಕರಾಗಿ ಅರ್ಥಪೂರ್ಣ ಸೇವೆ ಸಲ್ಲಿಸುತ್ತಿರುವವರು ಶ್ರೀ ತೋನ್ಸೆ ವಿಜಯ ಕುಮಾರ್ ಶೆಟ್ಟಿ.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು/ಹೊರದೇಶ ಕನ್ನಡಿಗ

ಡಾ. ನೀರಜ್ ಪಾಟೀಲ

ಗ್ರೇಟ್ ಬ್ರಿಟನ್ ಪಾರ್ಲಿಮೆಂಟ್‌ಗೆ ಸದ್ಯದಲ್ಲಿಯೇ ನಡೆಯುವ ಚುನಾವಣೆಯಲ್ಲಿ ಲೇಬರ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆ ಆಗಿರುವ ಹೆಮ್ಮೆಯ ಕನ್ನಡಿಗ ನೀರಜ್ ಪಾಟೀಲ್‌.
ನಮ್ಮ ರಾಜ್ಯದ ಕಲ್ಬುರ್ಗಿಯವರಾದ ಶ್ರೀಯುತರು ಅಲ್ಲಿ ಕೆಲವು ವರ್ಷ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಗ್ರೇಟ್ ಬ್ರಿಟನ್‌ಗೆ ತೆರಳಿ ಅಲ್ಲಿಯೇ ವೈದ್ಯ ವೃತ್ತಿಯನ್ನು ಮುಂದುವರೆಸುತ್ತ ಅಲ್ಲಿಯ ರಾಜಕೀಯ ಜೀವನಕ್ಕೂ ಪಾದಾರ್ಪಣೆಗೈದರು. ಲಂಡನ್ ನಗರದ ಕಾರ್ಪೋರೇಷನ್‌ಗೆ ಕೌನ್ಸಿಲರಾಗಿ ಆಯ್ಕೆಯಾಗಿ ಅವಿಸ್ಮರಣೀಯ ಸೇವೆ ಸಲ್ಲಿಸಿದರು.
ನಮ್ಮ ರಾಜ್ಯದಲ್ಲಿ ನಡೆದ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಗುಲ್ಬರ್ಗ ತಾಲ್ಲೂಕಿನ ಕಮಲಾಪುರದಲ್ಲಿ ಮತದಾರರು, ಶಾಸಕ ಸ್ಥಾನದ ಆಕಾಂಕ್ಷಿಗಳ ಸಭೆ ಕರೆದು ಚುನಾವಣೆಯ ಮಹತ್ವ, ಯೋಗ್ಯರ ಆಯ್ಕೆಯ ಅಗತ್ಯ ಕುರಿತು ಜಾಗೃತಿ ಮೂಡಿಸಿದ್ದರು.
ಇಂಗ್ಲೆಂಡ್‌ನ ಲ್ಯಾಂಬೆತ್ ಕೌನ್ಸಿಲ್‌ನ ಗಾಡ್ಸ್ ಅಂಡ್ ಸೇಂಟ್ ಥಾಮಸ್ ಆಸ್ಪತ್ರೆಯ ಗವರ್ನಿಂಗ್ ಅಡ್ಮಿನಿಸ್ಟೇಟರ್ ಆಗಿ ಇತ್ತೀಚೆಗೆ ನೇಮಕಗೊಂಡಿದ್ದಾರೆ.
ಇವರ ಸಾಧನೆಗೆ ಬಹರೇನ್‌ನ ಕನ್ನಡ ಸಂಘವು ‘ವಿಶ್ವ ಮಾನವ ಪ್ರಶಸ್ತಿ’ಯನ್ನು ನೀಡಿ ಗೌರವಿಸಿದೆ. ಇಂತಹ ಪ್ರತಿಭಾವಂತ ಕನ್ನಡದ ಸುಪುತ್ರ ಡಾ. ನೀರಜ್ ಪಾಟೀಲ್.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು/ಹೊರದೇಶ ಕನ್ನಡಿಗ

ಡಾ. ಉದಯ ಬಿ.ಎಸ್.ಪ್ರಕಾಶ್

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾರಿಸಿದ ಖ್ಯಾತ ವೈದ್ಯರು ಡಾ. ಉದಯ ಬಿ.ಎಸ್.ಪ್ರಕಾಶ್ ಅವರು. ಶ್ವಾಸಕೋಶ ಸಂಬಂಧಿ ಆರೋಗ್ಯ ಸಮಸ್ಯೆಗಳಲ್ಲಿ ಜಾಗತಿಕ ಮಟ್ಟದ ಮನ್ನಣೆ ಪಡೆದ ತಜ್ಞರು.
ವೈದ್ಯ ವಿಜ್ಞಾನದಲ್ಲಿ ಅನೇಕ ಪದವಿ ಗಳಿಸಿದ್ದಾರೆ. ಭಾರತದಲ್ಲೇ ಅಲ್ಲದೇ ಅರ್ಜೆಂಟೀನಾ, ಆಸ್ಟ್ರೇಲಿಯಾ, ಆಸ್ಟ್ರಿಯಾ, ಬ್ರೆಜಿಲ್, ಕೆನಡಾ, ಅಮೆರಿಕ, ಸಿಂಗಾಪುರ್, ಸ್ಪೇನ್ ಸೇರಿದಂತೆ ೨೫ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಪ್ರತಿಷ್ಠಿತ ವೇದಿಕೆಗಳಲ್ಲಿ ಪುಪ್ಪುಸ ಕಾಯಿಲೆಗೆ ಸಂಬಂಧಿಸಿದಂತೆ ಮೌಲಿಕ ಪ್ರಬಂಧಗಳನ್ನು ಮಂಡಿಸಿ ಪ್ರಶಂಸೆ ಗಳಿಸಿರುವರು. ಅನೇಕ ಲೇಖನಗಳು, ಪುಸ್ತಕಗಳನ್ನೂ ಪ್ರಕಟಿಸಿರುವರು.
ಇಪ್ಪತ್ತು ಸಾವಿರ ಸದಸ್ಯರಿರುವ ವಿಶ್ವದ ಅತಿ ಬೃಹತ್ ವೈದ್ಯ ಸಂಸ್ಥೆ ‘ಅಮೆರಿಕಾ ಕಾಲೇಜ್ ಆಫ್ ಬೆಸ್ಟ್ ಫಿಜಿಷಿಯನ್ಸ್’ನ ಅಧ್ಯಕ್ಷರಾಗಿ ದುಡಿದ ಹಿರಿಮೆ ಅವರದು.
ಸದ್ಯ ಅಮೆರಿಕಾದ ಪ್ರತಿಷ್ಠಿತ ಮೆಯೊ ಕ್ಲಿನಿಕ್‌ನಲ್ಲಿ ವಿಶೇಷ ತಜ್ಞ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಡಾ. ಉದಯ ಬಿ.ಎಸ್.ಪ್ರಕಾಶ್.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ/ಸಂಕೀರ್ಣ

ಶ್ರೀ ನಿತಿನ್ ಷಾ

ಪುಸ್ತಕ ಪ್ರಕಾಶಕರಾಗಿ ಕನ್ನಡ ಸಾಹಿತ್ಯ ಬೆಳವಣಿಗೆಗೆ ಹಾಗೂ ಪುಸ್ತಕ ಸಂಸ್ಕೃತಿಯ ಉಳಿವಿಗೆ ಶ್ರಮಿಸುತ್ತಿರುವ ಅಪರೂಪದ ವ್ಯಕ್ತಿ ನಿತಿನ್ ಷಾ ಅವರು.
೧೯೬೧ರಲ್ಲಿ ಶ್ರೀಯುತರ ಜನನ. ಭಾರತದಲ್ಲೇ ಅತಿ ದೊಡ್ಡದಾದ ಪುಸ್ತಕ ಭಂಡಾರ ಸಪ್ನಬುಕ್ ಹೌಸ್ ಸ್ಥಾಪಕರು. ಅಮ್ಮಾ ಬುಕ್‌ನಲ್ಲಿ ದಾಖಲೆ ನಿರ್ಮಿಸಿದ ಖ್ಯಾತಿಗೆ ಪಾತ್ರರು ಶ್ರೀ ನಿತಿನ್ ಷಾ.
ದಕ್ಷ ಷಾ ಚಾರಿಟಬಲ್ ಟ್ರಸ್ಟ್ ಮೂಲಕ ಜಾತಿ ಭೇದವಿಲ್ಲದೆ ಬಡಬಗ್ಗರು, ದೀನದಲಿತರ ಸೇವೆ. ಹಲವು ಶಾಲೆಗಳಿಗೆ ದಾನ-ದತ್ತಿ ನೀಡಿಕೆ, ಸಾವಿರಾರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿವರೆಗೆ ಉಚಿತ ಶಿಕ್ಷಣ ಕೊಡಿಸುತ್ತಿರುವ ಕೊಡುಗೈ ದಾನಿ ಅವರು. ಗುಜರಾತ್‌ನ ಭೂಕಂಪ ನಿರಾಶ್ರಿತರಿಗೆ ಲಕ್ಷಾಂತರ ರೂಪಾಯಿ ನೆರವು ನೀಡಿ ಮಾನವೀಯತೆ ಮೆರೆದವರು ಶ್ರೀಯುತರು.
೧೯೯೦ರಿಂದ ಕನ್ನಡ ಪುಸ್ತಕಗಳ ಪ್ರಕಾಶನ ಆರಂಭಿಸಿ ಸಾಹಿತ್ಯ, ವಿಮರ್ಶೆ ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚಿನ ಪುಸ್ತಕಗಳನ್ನು ಪ್ರಕಟಿಸಿರುವುದು ಶ್ರೀಯುತರ ಹಿರಿಮೆ. ಎರಡು ವರ್ಷಗಳಿಂದೀಚೆಗೆ ದಿನಕ್ಕೊಂದು ಪುಸ್ತಕದಂತೆ ಅನೇಕ ಕೃತಿಗಳ ಪ್ರಕಟಣೆಗೆ ಬದ್ಧರಾಗಿರುವರು.
ಶ್ರೀಯುತರು ಅಖಿಲ ಭಾರತ ಪುಸ್ತಕ ಪ್ರಕಾಶಕರು ಮತ್ತು ಮಾರಾಟಗಾರರ ಸಂಘದ ಕಾರ್ಯನಿರ್ವಾಹಕ ಸಮಿತಿ ಸದಸ್ಯರು, ಜೈನ ಸಮಾಜ ವಿಭಾಗದ ಸದಸ್ಯರು, ಪ್ರೆಸ್‌ಕ್ಲಬ್‌ನ ಕಾರ್ಪೋರೇಟ್ ಸದಸ್ಯರೂ ಆಗಿರುವರು.
ಶ್ರೀಯುತರ ಸೇವೆಯನ್ನು ಪರಿಗಣಿಸಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಅತ್ಯುತ್ತಮ ಪ್ರಕಾಶನ ಸಂಸ್ಥೆ ಪ್ರಶಸ್ತಿಯ ಗೌರವ, ಸುಪ್ರಸಿದ್ಧ ಲೇಖಕರು ಮತ್ತು ಸಂಘ ಸಂಸ್ಥೆಗಳಿಂದ ಸನ್ಮಾನ ಸಂದಿದೆ.
ಸ್ಪರ್ಧೆಗೆ ಎದೆಯೊಡ್ಡಿ ಪುಸ್ತಕ ಸಂಸ್ಕೃತಿಯನ್ನು ಕಾಪಾಡುತ್ತಿರುವ ಹಾಗೂ ಸಾಮಾಜಿಕ ಸೇವೆಗೂ ತಮ್ಮನ್ನು ತೆರೆದುಕೊಂಡ ಅಪರೂಪದ ವ್ಯಕ್ತಿತ್ವ ಶ್ರೀ ನಿತಿನ್ ಷಾ ಅವರದು.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ/ಸಂಕೀರ್ಣ

ಶ್ರೀ ಸಿದ್ಧನಗೌಡ ಚೆನಬಸಗೌಡ ಪಾಟೀಲ

ಕರ್ನಾಟಕದ ಗಡಿ ಭಾಗವಾದ ಬೆಳಗಾವಿಯಲ್ಲಿ ಕನ್ನಡಪರ ಹೋರಾಟದ ಮುಂಚೂಣಿ ನಾಯಕರಲ್ಲಿ ಶ್ರೀ ಸಿದ್ಧನಗೌಡ ಪಾಟೀಲ ಅವರು, ಸಹಕಾರ ಗ್ರಾಹಕ ಕ್ಷೇತ್ರದಲ್ಲೂ ಇವರದು ಅನನ್ಯ ಸಾಧನೆ.
ಬೆಳಗಾವಿ ನಗರದ ಒಂದು ನೂರು ವರ್ಷದ ಇತಿಹಾಸದಲ್ಲಿ ಪ್ರಪ್ರಥಮ ಕನ್ನಡ ಮೇಯರ್‌ರಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರದು.ಅನೇಕರ ವಿರೋಧದ ನಡುವೆಯೂ ಜನ ಹಿತವಾದ ಅಭಿವೃದ್ಧಿ ಯೋಜನೆಗಳ ‘ಮಾಸ್ಟರ್‌ಪ್ಲಾನ್’ ತಯಾರಿಸಿ ನಾಗರಿಕ ಸಮಸ್ಯೆಗಳನ್ನು ಪರಿಹರಿಸಿದ ಕೀರ್ತಿ ಇವರದು. ಬೆಳಗಾವಿಯಲ್ಲಿ ಅನೇಕ ಕನ್ನಡ ಶಾಲೆಗಳನ್ನು ಸ್ಥಾಪಿಸಿ ಅವುಗಳ ಬೆಳವಣಿಗೆಗೆ ಯೋಜನೆ ರೂಪಿಸಿ ಜಾರಿಗೆ ತಂದರು. ನಗರದ ಅನೇಕ ಬೀದಿಗಳಿಗೆ ಹಾಗೂ ವರ್ತುಲಗಳಿಗೆ ಕನ್ನಡದ ಹೆಸರುಗಳನ್ನು ನಾಮಕರಣ ಮಾಡಿದರು. ೧೯೫೯-೬೦ರ ಜನಗಣತಿ ಸಮಯದಲ್ಲಿ ಅರ್ಜಿಯಲ್ಲಿ ‘ಕನ್ನಡಿಗ’ ರೆಂದು ನಮೂದಿಸುವಂತೆ ಜನರನ್ನು ಜಾಗೃತಗೊಳಿಸಿದರು. ೧೯೫೨-೫೩ರಲ್ಲಿ ಪಂಡಿತ ಜವಾಹರಲಾಲ ನೆಹರೂ ಅವರಿಗೆ ಕಪ್ಪು ಬಾವುಟ ತೋರಿಸಿ ಆಂಧ್ರಪ್ರದೇಶಕ್ಕೆ ಸೇರಿಸಿದ್ದ ಬಳ್ಳಾರಿಯನ್ನು ಕರ್ನಾಟಕಕ್ಕೆ ಹಿಂಪಡೆಯಲು ಶ್ರಮಿಸಿದವರಲ್ಲಿ ಒಬ್ಬರು.
ಪ್ರತಿಕೂಲ ಸನ್ನಿವೇಶದಲ್ಲಿಯೂ ೧೯೫೪ ರಿಂದ ಬೆಳಗಾವಿಯಲ್ಲಿ ನಾಡಹಬ್ಬ ಆಚರಣೆಯನ್ನು ಪ್ರಾರಂಭಿಸಿದ್ದು ಶ್ರೀಯುತ ಪಾಟೀಲ ಅವರು.
ಸುಮಾರು ೪೦ ವರ್ಷಗಳ ಕಾಲ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ ಶ್ರೀಯುತರು ಕರ್ನಾಟಕ ರಾಜ್ಯ ಸಹಕಾರಿ ಗ್ರಾಹಕರ ಮಹಾ ಮಂಡಳದ ನಿರ್ದೇಶಕರಾಗಿ, ಅಧ್ಯಕ್ಷರಾಗಿ ದುಡಿದು ರಾಜ್ಯದಲ್ಲಿಯೇ ಮಾದರಿ ಸಂಸ್ಥೆ ಎಂಬ ಗೌರವ ಪಡೆಯಲು ಕಾರಣರಾದರು. ಅನೇಕ ಪ್ರಶಸ್ತಿ ಗೌರವಗಳನ್ನು ಪಡೆದಿರುವ ಸಿದ್ಧನಗೌಡ ಚನಬಸಗೌಡ ಪಾಟೀಲ ಅವರು ಕರ್ನಾಟಕದ ಹೆಮ್ಮೆಯ ಪುತ್ರರು.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ/ಸಂಕೀರ್ಣ

ಶ್ರೀ ಕೇವಲಚಂದ್ ಜೈನ್

ಆರೋಗ್ಯ, ಶಿಕ್ಷಣ, ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆಗಾಗಿ ತಮ್ಮನ್ನು ಅರ್ಪಿಸಿಕೊಂಡವರು ಕೇವಲ್ ಚಂದ್ ಜೈನ್ ಅವರು.
ಕಳೆದ ೫೦ ವರ್ಷಗಳಿಂದ ಬೆಂಗಳೂರಿನಲ್ಲಿ ಉದ್ಯಮಿಯಾಗಿ ನೆಲೆಸಿರುವ ಅವರು ಸ್ಥಾಪಿಸಿರುವ ಸಂಸ್ಥೆಗಳು ಹತ್ತು-ಹಲವು. ಶ್ರೀಯುತರು ಕಾಲಿಟ್ಟ ಕ್ಷೇತ್ರದಲ್ಲೆಲ್ಲ ಯಶ ಕಂಡವರು.
ಮಹಾವೀರ ಜೈನ್ ಟ್ರಸ್ಟ್ ಸಂಸ್ಥಾಪಕರಾಗಿ ಅದರ ಮೂಲಕ ಮಹಾವೀರ ಸ್ಮಾರಕ ಆಸ್ಪತ್ರೆ ನಿರ್ವಹಣೆ, ಭಗವಾನ್ ಮಹಾವೀರ್ ಜೈನ್ ನೇತ್ರಾಲಯದ ಮೂಲಕ ದೀನರಿಗೆ ಚಿಕಿತ್ಸೆ, ಜೈನ್ ವಿದ್ಯಾಲಯ ಮತ್ತು ಕಾಲೇಜು ಮೂಲಕ ಶಿಕ್ಷಣ ನೀಡುತ್ತಿರುವರು.
ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಪ್ರಭುತ್ವ ಹೊಂದಿರುವ ಕೇವಲ್ ಚಂದ್ ಅವರು ಹಲವು ಲೇಖನಗಳನ್ನು ಬರೆದಿರುವರು. ‘ಸರ್ವ ಧರ್ಮ’ ಕೃತಿಯ ಮೂಲಕ ದೇಶಕ್ಕೆ ‘ಜಗತ್ ಮೇ ಧರ್ಮ ಸರ್ವೋಪಾಹಾರಿ’, ‘ಜೀವನ ಮತ್ತು ಧರ್ಮ’ ಹಾಗೂ ‘ಜೀವನ ದರ್ಪಣ’ ತತ್ವಸಂದೇಶ ನೀಡಿದ ಹಿರಿಮೆ ಅವರದು.
ಶ್ರೀಯುತರು ಸಮಾಜಕ್ಕೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ‘ಸಮಾಜ ಭೂಷಣ’ ಮತ್ತು ‘ಜ್ಞಾನ ರತ್ನ’ ಪ್ರಶಸ್ತಿಗಳನ್ನು
ಪಡೆದಿರುವರು.
ಮೂಲಭೂತ ಸೌಲಭ್ಯಗಳಿಂದ ವಂಚಿತರಾದ ದೀನರ ಬಗ್ಗೆ ಅಪಾರ ಕಾಳಜಿ ಹೊಂದಿ ಅವರಿಗೆ ನೆರವಾಗುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ ಶ್ರೀ ಕೇವಲ್ ಚಂದ್ ಜೈನ್.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ/ಸಂಕೀರ್ಣ

ಶ್ರೀ ಎಸ್.ಸಿ. ಬರ್ಮನ್

ಅತ್ಯುತ್ತಮ ಕಾರ್ಯ ನಿರ್ವಹಣೆಗಾಗಿ ರಾಷ್ಟ್ರಪತಿಗಳ ಪದಕ ಗೌರವಕ್ಕೆ ಪಾತ್ರರಾದ ದಕ್ಷ ಪೊಲೀಸ್ ಅಧಿಕಾರಿಯಾಗಿದ್ದವರು ಶರತ್ ಚಂದ್ರ ಬರ್ಮನ್ ಅವರು.
೧೯೩೯ರ ಜೂನ್ ೫ ರಂದು ಜನನ, ಕೋಲ್ಕತ್ತಾ ವಿಶ್ವವಿದ್ಯಾಲಯದಿಂದ ಮಾರ್ಡನ್ ಹಿಸ್ಟರಿ ಕೋರ್ಸ್‌ನಲ್ಲಿ ಪದವಿ.
೧೯೬೪ನೇ ತಂಡದ ಐಪಿಎಸ್ ಅಧಿಕಾರಿ. ಆರಂಭಿಕ ತರಬೇತಿ ನಂತರ ಹುಬ್ಬಳ್ಳಿ ಉಪ ವಿಭಾಗದಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಆರಂಭ. ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ ದಕ್ಷ ಆಡಳಿತ ನೀಡಿದ ಹೆಗ್ಗಳಿಕೆ ಶ್ರೀಯುತರದು.
ಬೆಂಗಳೂರಿನಲ್ಲಿ ನಡೆದ ಭುವನ ಸುಂದರಿ ಸ್ಪರ್ಧೆಯ ಪರ ವಿರೋಧದ ಹೋರಾಟ ಉತ್ತುಂಗ ತಲುಪಿದ ಅವಧಿಯಲ್ಲಿ ಬರ್ಮನ್ ಬೆಂಗಳೂರು ಪೊಲೀಸ್ ಕಮೀಷನರ್ ಆಗಿದ್ದರು. ಆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ಕರ್ತವ್ಯ ಪ್ರಜ್ಞೆಯನ್ನು ಮೆರೆದಿದ್ದು ಅವರ ಕಾರ್ಯ ದಕ್ಷತೆಗೆ ನಿದರ್ಶನ.
ಸಿಐಡಿ ವಿಭಾಗದ ಡಿಜಿಪಿ, ಬೆಂಗಳೂರು ನಗರ ಕಮೀಷನರ್, ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ, ಐಜಿ (ಕಾರಾಗೃಹ), ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಆಯುಕ್ತರು, ಹೀಗೆ ವಿವಿಧ ಸ್ತರಗಳಲ್ಲಿ ಸೇವೆ ಸಲ್ಲಿಕೆ. ಎಡಿಜಿಪಿಯಾಗಿ ನಕ್ಸಲೀಯ ಚಟುವಟಿಕೆ ನಿಯಂತ್ರಣ ಮತ್ತು ಹುಬ್ಬಳ್ಳಿ-ಧಾರವಾಡದ ಈದ್ಗಾ ಮೈದಾನದ ವಿವಾದ ಸಮಸ್ಯೆಯನ್ನು ಯಶಸ್ವಿಯಾಗಿ ನಿಭಾಯಿಸಿದ ಹಿರಿಮೆಗೆ ಪಾತ್ರರಾದವರು ನಿವೃತ್ತ ಪೊಲೀಸ್‌ ಮಹಾನಿರ್ದೇಶಕರು

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ/ಸಂಕೀರ್ಣ

ಶ್ರೀ ಪಿ. ವಲಿ

ರಸ್ತೆ ಅಪಘಾತಗಳಲ್ಲಿ ಮಡಿದ, ಕಾಲುವೆ, ಬಾವಿಗಳಲ್ಲಿ ತೇಲುವ ಅನಾಥ ಶವಗಳಿಗೆ ಸಂಸ್ಕಾರ ಮಾಡುವ ಮೂಲಕ ನಿಸ್ವಾರ್ಥ ಸೇವೆಗೆ ಹೆಸರಾದವರು ಪಿ. ವಲಿ ಅವರು.
ಮೂಲತಃ ಬಳ್ಳಾರಿಯವರಾದ ವಲಿ ಹುಟ್ಟಿನಿಂದ ಬಡವರು. ಆದರೆ ಮನಸ್ಸು ಮತ್ತು ಸೇವಾ ಕೈಂಕರ್ಯ ಯಾವ ಸಿರಿವಂತಿಕೆಯನ್ನು ನಾಚಿಸುವಂಥದ್ದು. ಶ್ರೀಯುತರು ಬಳ್ಳಾರಿ, ಸಂಡೂರು ಮತ್ತು ಆಂಧ್ರ ಗಡಿಭಾಗದ ಅನಾಥ ಶವಗಳ ಆಪ್ತಬಂಧು ಎನಿಸಿದ್ದಾರೆ.
ವಾರಸುದಾರರಿಲ್ಲದ ಶವಗಳ ಸಂಸ್ಕಾರಕ್ಕೆ ವಲಿಯೇ ವಾರಸುದಾರರು. ಜಾತಿ, ಕುಲ, ಮತ, ವರ್ಗ ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ ಅತ್ಯಂತ ಶ್ರದ್ಧೆಯಿಂದ, ನಿಷ್ಠೆಯಿಂದ ಸಂಸ್ಕಾರ ಮಾಡುವ ಶ್ರೀಯುತರ ಸಾಮಾಜಿಕ ಸೇವೆ ಸ್ತುತ್ಯಾರ್ಹ.
ಆಟೋ ಚಾಲಕ ವೃತ್ತಿಯ ವಲಿ ಅವರಿಗೆ ಅದರಿಂದ ಸಿಗುವ ಸಂಪಾದನೆಯಿಂದಲೇ ಜೀವನ ದೂಗಿಸಬೇಕಾದ ಅನಿವಾರ್ಯತೆ. ಪ್ರತಿಫಲಾಪೇಕ್ಷೆ ಇಲ್ಲದ ಶವಸಂಸ್ಕಾರದ ಸೇವೆಗೆ ಪತ್ರ ಪತ್ನಿ ಸಹಕಾರ ಉಂಟು.
‘ಮಾನವ ಜನ್ಮ ದೊಡ್ಡದು. ನಾವು ಇನ್ನೊಬ್ಬರಿಗೆ ಒಳ್ಳೆಯದು ಮಾಡಿದರೆ ದೇವರು ನಮಗೆ ಒಳ್ಳೆಯದು ಮಾಡುತ್ತಾನೆ’ ಎಂದು ನಂಬಿದ ಅವರ ಈ ಸೇವಾ ಕೈಂಕರ್ಯಕ್ಕೆ ಸಂಘ-ಸಂಸ್ಥೆಗಳಿಂದ ಸಂದಿರುವ ಗೌರವ ಹತ್ತಾರು. ಇಂಥ ನಿಸ್ವಾರ್ಥ ಸಮಾಜ ಸೇವಕನನ್ನು ದಸರಾ ನವರಾತ್ರಿ ರಂಗೋತ್ಸವ ೨೦೦೮ರ ಸಂದರ್ಭದಲ್ಲಿ ರಂಗಾಯಣ ಸಂಸ್ಥೆ ಸನ್ಮಾನಿಸಿ ಗೌರವಿಸಿದೆ. ದೀನರ ವಾರಸುದಾರ, ಆಪ್ತಬಂಧು ಮತ್ತು ಸಮಾಜ ಸೇವಕ ಶ್ರೀ ಪಿ.ವಲಿ.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ/ಸಂಕೀರ್ಣ

ಶ್ರೀ ಎಸ್.ಎಸ್. ಪಾಟೀಲ

ಹೈದ್ರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ನೆರವಾಗುವ ಅನೇಕ ಉದ್ದಿಮೆಗಳನ್ನು ಸ್ಥಾಪಿಸಿ ಸುಮಾರು ಹತ್ತು ಸಾವಿರ ಮಂದಿಗೆ ಉದ್ಯೋಗ ನೀಡಿರುವ ನಮ್ಮ ನಾಡಿನ ಹೆಮ್ಮೆಯ ಉದ್ಯಮಿ ಶ್ರೀ ಎಸ್.ಎಸ್. ಪಾಟೀಲ ಅವರು. ಇವರ ನೇತೃತ್ವದ ‘ಪಾಟೀಲ ಗ್ರೂಪ್ ಆಫ್ ಇಂಡಸ್ಟ್ರೀಸ್’ ಕಂಪನಿ ಗುಲ್ಬರ್ಗದಲ್ಲಿ ‘ದಾಲ್’ (ಬೇಳೆ) ಕಾರ್ಖಾನೆ, ಘಟಪ್ರಭಾ, ಬೆಳಗಾವಿಯಲ್ಲಿ ಆರ್.ಸಿ.ಸಿ. ಹಾಗೂ ಪಿ.ಎಸ್.ಸಿ. ಕಂಬ ಉತ್ಪಾದನಾ ಕಾರ್ಖಾನೆ, ಮಹಾರಾಷ್ಟ್ರದ ನಾಗಪುರದಲ್ಲಿ ಕಾಂಕ್ರೀಟ್ ಸ್ಲಿಪರ್‌ಗಳ ಉತ್ಪಾದನಾ ಕಾರ್ಖಾನೆ, ಮಧ್ಯಪ್ರದೇಶದ ಬಿಲಾಸಾಪುರದಲ್ಲಿ, ಗೋವಾದ ಮಡಗಾಂವ್‌ನಲ್ಲಿ ಒರಿಸ್ಸಾದ ಭುವನೇಶ್ವರದಲ್ಲಿ ಪಶ್ಚಿಮ ಬಂಗಾಲದ ಅನಾರದಲ್ಲಿ, ಪಂಜಾಬ್‌ನ ಚಂಡೀಗಡ್‌ನಲ್ಲಿ ಭಾರತೀಯ ರೈಲ್ವೆಗಾಗಿ ಸ್ತ್ರೀಪರ್ಸ್ ಮತ್ತು ಸಿಮೆಂಟ್ ಕಂಬ ಉತ್ಪಾದನಾ ಕಾರ್ಖಾನೆಗಳನ್ನು ನಡೆಸುತ್ತಿದೆ ಬೆಳಗಾವಿ ಹಾಗೂ ಜೀವರ್ಗಿಯಲ್ಲಿ ಕರ್ನಾಟಕ ಸರ್ಕಾರವು ನಡೆಸುತ್ತಿರುವ ಫುಡ್ ಪಾರ್ಕ್‌ಗಳಲ್ಲಿ ಸಹಭಾಗಿತ್ವ ಪಡೆದಿದೆ. ಜರ್ಮನಿ ದೇಶದ ವೋಸ್ತೋ ಕಂಪನಿಯ ಸಹಯೋಗದೊಂದಿಗೆ ಹೈದ್ರಾಬಾದನಲ್ಲಿ ರೈಲ್ವೆ ಉಪಕರಣಗಳನ್ನು ತಯಾರಿಸುವ ಕಾರ್ಖಾನೆ ಸ್ಥಾಪನೆ ಮಾಡಿದ್ದಾರೆ.
ಹೈದ್ರಾಬಾದ್‌ನ ಮೆಡಚಲ್‌ನಲ್ಲಿ, ದಕ್ಷಿಣ ಕೊರಿಯಾದ ಬೊಯಿಲ್ ಮೆಡಿಕಾ ಕಂಪನಿಯ ಸಹಭಾಗಿತ್ವದಲ್ಲಿ ಸಂಗಮ್ ಹೆಲ್ತ್‌ಕೇರ್ ಸಂಸ್ಥೆಯನ್ನು ಸ್ಥಾಪಿಸಿ ವೈದ್ಯಕೀಯ ಉಪಕರಣಗಳನ್ನು ತಯಾರಿಸಲಾಗುತ್ತಿದೆ. ಮೂರು ಸಾವಿರ ಮಂದಿಗೆ ಉದ್ಯೋಗ ನೀಡಿರುವ ಈ ಸಂಸ್ಥೆ ಹೊರದೇಶಗಳಿಗೆ ಉಪಕರಣಗಳನ್ನು ರಫ್ತು ಮಾಡುತ್ತಿದೆ.
ಅನೇಕ ಪ್ರಮುಖ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಶ್ರೀ ಪಾಟೀಲರು ಜಗತ್ತಿನ ಪ್ರಮುಖ ದೇಶಗಳ ಪ್ರವಾಸವನ್ನು ಮಾಡಿ ಅಪಾರ ಅನುಭವ ಗಳಿಸಿದ್ದಾರೆ.
ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಧಾರ್ಮಿಕ ಸಂಸ್ಥೆಗಳಿಗೆ, ಮಠಮಾನ್ಯಗಳಿಗೆ ಗಣನೀಯ ಪ್ರಮಾಣದ ವಂತಿಗೆಯನ್ನು ನೀಡಿ ಸಮಾಜಕ್ಕೆ ನೆರವಾಗುತ್ತಿದ್ದಾರೆ ಶ್ರೀ ಎಸ್.ಎಸ್. ಪಾಟೀಲ್‌.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ/ಸಂಕೀರ್ಣ

ಶ್ರೀ ಎನ್.ಆರ್.ನಾರಾಯಣ ರಾವ್

ಹೋಟೆಲ್ ಉದ್ಯಮದಲ್ಲಿ ಯಶಸ್ಸಿನ ಮೈಲಿಗಲ್ಲು ಸ್ಥಾಪಿಸಿದ ನೇರಂಬಳ್ಳಿ ರಾಘವೇಂದ್ರ ನಾರಾಯಣ ರಾವ್ ಅವರ ಗೆಲುವಿನ ಗುಟ್ಟು ಇರುವುದು ಅವರ ಸರಳ ವ್ಯಕ್ತಿತ್ವ ಮತ್ತು ಉತ್ತಮ ಸಂಘಟನಾ ಕೌಶಲದಲ್ಲಿ.
ಕೋಟೇಶ್ವರದ ನೇರಂಬಳ್ಳಿಯಲ್ಲಿ ೧೯೨೭ರಲ್ಲಿ ಜನನ, ಮೆಟ್ರಿಕ್‌ವರೆಗೆ ವಿದ್ಯಾಭ್ಯಾಸ. ತಮ್ಮ ತಂದೆ ಎನ್.ರಾಘವೇಂದ್ರ ಆಚಾರ್ಯರು ಕೆ.ಆರ್.ನಗರದಲ್ಲಿ ನಡೆಸುತ್ತಿದ್ದ ಹೋಟೆಲು ಉದ್ಯಮಕ್ಕೆ ೧೯ನೇ ವಯಸ್ಸಿನಲ್ಲಿಯೇ ಪಾದಾರ್ಪಣೆ.
೧೯೫೯ರಿಂದ ಚಿತ್ರದುರ್ಗ, ಚಿಕ್ಕಬಳ್ಳಾಪುರ, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಹೋಟೆಲ್ ಉದ್ಯಮದ ವಿಸ್ತರಣೆ. ಕಾಲಿಟ್ಟ ಕಡೆಯಲ್ಲೆಲ್ಲ ಯಶಸ್ಸು, ಕೀರ್ತಿ, ಐಶ್ವರ್ಯ ಪ್ರಾಪ್ತಿ.
ಸಮಾಜಮುಖಿ ವ್ಯಕ್ತಿತ್ವದ ನಾರಾಯಣ ರಾವ್ ಅವರು ತಮ್ಮ ೮೨ನೇ ವಯಸ್ಸಿನಲ್ಲೂ ಸಮಾಜಸೇವೆಯಲ್ಲಿ
ಲವಲವಿಕೆಯಿಂದಿರುವರು.
ಕೋಟೇಶ್ವರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಯಲ್ಲಿ ಅವರದು ಪ್ರಮುಖ ಪಾತ್ರ. ಗುರು ಮಠ ಸೋದೆಯಲ್ಲಿ ಗುರುಕುಲ ಪದ್ಧತಿಗೆ ನಾಂದಿ. ಮಠದ ಜೀರ್ಣೋದ್ಧಾರಕ್ಕೆ ಸಹಕಾರ. ಬದರಿ, ತಿರುಪತಿ, ಉಡುಪಿ ಮೊದಲಾದ ಯಾತ್ರಾ ಸ್ಥಳಗಳಲ್ಲಿ ಯಾತ್ರಾರ್ಥಿಗಳ ಕೊಠಡಿ ನಿರ್ಮಾಣಕ್ಕೆ ಧನಸಹಾಯ, ಎಲ್ಲವರ್ಗದ ದುರ್ಬಲರಿಗೆ ಹಣಕಾಸು ನೆರವು. ಅನೇಕಾರು ಸಾಹಿತಿಗಳಿಗೆ ಅವರ ಕೃತಿಗಳನ್ನು ಹೊರತರುವಲ್ಲಿ ನಾರಾಯಣ ರಾವ್ ಅವರು ನೀಡಿರುವ ಪ್ರೋತ್ಸಾಹ ಸ್ತುತ್ಯಾರ್ಹ.
ಕನ್ನಡ ನಾಡು-ನುಡಿ, ನೆಲ-ಜಲ, ಕಲೆ-ಸಂಸ್ಕೃತಿ ಕ್ಷೇತ್ರಗಳ ಸೇವೆಯಲ್ಲೂ ಮುಂಚೂಣಿಯಲ್ಲಿರುವವರು ಶ್ರೀ ಎನ್.ಆರ್.ನಾರಾಯಣ ರಾವ್ ಅವರು.

Categories
ಕ್ರೀಡೆ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಕುಮಾರಿ ಶಿಖಾ ಟಂಡನ್

ರಾಷ್ಟ್ರ-ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡುವ ಮೂಲಕ ಕನ್ನಡ ನಾಡಿಗೆ, ರಾಷ್ಟ್ರಕ್ಕೆ ಕೀರ್ತಿ ತಂದವರು
ಭರವಸೆಯ ಈಜುಗಾರ್ತಿ ಶಿಖಾ ಟಂಡನ್.
೧೯೮೫ರಲ್ಲಿ ಜನಿಸಿದ ಶಿಖಾ ೧೯೮೭ರಿಂದ ಕರ್ನಾಟಕದ ನಿವಾಸಿ, ಬೆಂಗಳೂರಿನ ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜಿನಲ್ಲಿ ಎಂ.ಎಸ್ಪಿ ಬಯೊಟೆಕ್ನಾಲಜಿ ಅಭ್ಯಾಸ. ಕೆ.ಸಿ.ರೆಡ್ಡಿ ಸ್ವಿಮ್ಮಿಂಗ್ ಸೆಂಟರ್‌ನ ಪ್ರತಿಭೆ, ಪ್ರಸ್ತುತ ನಿಹಾರ್ ಅಮೀನ್ ಅವರ ಮಾರ್ಗದರ್ಶನದಲ್ಲಿ ಈಜಿನ ವಿವಿಧ ಮಜಲುಗಳ ಕಲಿಕೆ.
ಕಳೆದ ಒಂದೂವರೆ ದಶಕದಿಂದ ಅಸಂಖ್ಯ ಈಜು ಸ್ಪರ್ಧೆಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಅವರು, ೨೦೦೪ರಲ್ಲಿ ಅಥೆನ್ಸ್‌ನಲ್ಲಿ ನಡೆದ ಒಲಂಪಿಕ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಭಾರತದ ಏಕೈಕ ಈಜುಗಾರ್ತಿ,
೨೦೦೫ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯಾ ಓಪನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಪದಕ ಗೆದ್ದ ಏಕೈಕ ಭಾರತೀಯಳು ಎಂಬ ಹಿರಿಮೆಗೆ ಪಾತ್ರರು. ಬ್ಯಾಕ್‌ಸ್ಟೋಕ್, ಫ್ರೀಸ್ಟೈಲ್ ಮತ್ತು ಬಟರ್‌ಫೈ ವಿಭಾಗಗಳಲ್ಲಿ ಸತತ ಏಳು ಬಾರಿ ರಾಷ್ಟ್ರಮಟ್ಟದಲ್ಲಿ ವೈಯಕ್ತಿಕ ದಾಖಲೆ ನಿರ್ಮಿಸಿದ ಕೀರ್ತಿಗೆ ಅವರು ಭಾಜನರು.
ಈವರೆಗೆ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಐದು ಚಿನ್ನದ ಪದಕ, ೧೭ ರಜತ ಪದಕ ಗೆದ್ದಿರುವರು. ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಪುರಸ್ಕೃತ ತರಾದ ಶಿಖಾ ಟಂಡನ್ ನಾಡಿನ ಭವಿಷ್ಯದ ಭರವಸೆಯ ಮಿಂಚು.

Categories
ಕ್ರೀಡೆ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಜೆ.ಜೆ. ಶೋಭಾ

ಅಂತಾರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಗಳಲ್ಲಿ ಕನ್ನಡ ನಾಡಿಗೆ, ದೇಶಕ್ಕೆ ಕೀರ್ತಿ ತಂದವರು ಜೆ.ಜೆ.ಶೋಭಾ
ಅವರು.
ಹೆಪ್ಟಫ್ಲಾನ್, ಉದ್ದ ಜಿಗಿತ ಹಾಗೂ ಹರ್ಡಲ್ಸ್ ಅಥ್ಲೆಟಿಕ್ಸ್ ಕ್ರೀಡೆಗಳಲ್ಲಿ ದೇಶವನ್ನು ಪ್ರತಿನಿಧಿಸುವ ಶೋಭಾ ಹುಟ್ಟಿದ್ದು ೧೯೭೮ರಲ್ಲಿ. ಬಿ.ಎ. ಪದವೀಧರರು. ಸದ್ಯ ಸಿಕಂದರಾಬಾದ್‌ನಲ್ಲಿ ನೆಲೆಸಿರುವ ಶ್ರೀಯುತರು ಕನ್ನಡದ ಹೆಮ್ಮೆಯ ಕುವರಿ. ಎರಡು ತಿಂಗಳ ಹಿಂದೆ ಚೀನಾದ ಬೀಜಿಂಗ್‌ನಲ್ಲಿ ನಡೆದ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಕೆಲವೇ ಅದೃಷ್ಟಶಾಲಿಗಳಲ್ಲಿ ಅವರೂ ಒಬ್ಬರು.
೧೯೯೭ರಲ್ಲಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಕ್ಷೇತ್ರಕ್ಕೆ ಕಾಲಿರಿಸಿದ ಅವರು ಈವರೆಗೆ ನಿರ್ಮಿಸಿರುವ ದಾಖಲೆಗಳು ಹತ್ತು-ಹಲವು. ಅವುಗಳಲ್ಲಿ ಪ್ರಮುಖವಾದುದು ಹೆಪ್ಟಾನ್ ಕ್ರೀಡೆಯಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿರುವುದು.
ಕಳೆದ ವರ್ಷ ಜೋರ್ಡಾನ್‌ನಲ್ಲಿ ನಡೆದ ೧೭ನೇ ಏಷ್ಯನ್‌ ಅಥ್ಲೆಟಿಕ್ಸ್‌ ಛಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ, ಗುವಾಹತಿಯಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಎರಡು ಚಿನ್ನದ ಪದಕ, ಕತಾರ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್ನಲ್ಲಿ ಕಂಚಿನ ಪದಕ ಸೇರಿದಂತೆ ಈವರೆಗೆ ೧೫ಕ್ಕೂ ಹೆಚ್ಚಿನ ಚಿನ್ನದ ಪದಕ ಗೆದ್ದ ದಾಖಲೆ ಅವರದು.
ಕ್ರೀಡಾ ಕ್ಷೇತ್ರದ ಸಾಧನೆಗಾಗಿ ೨೦೦೪ರಲ್ಲಿ ಪ್ರತಿಷ್ಠಿತ ಅರ್ಜುನ ಪುರಸ್ಕಾರ ಪಡೆದಿರುವ ಶ್ರೀಮತಿ ಜೆ.ಜೆ. ಶೋಭಾ ಅವರು ಭವಿಷ್ಯದಲ್ಲಿ ಇನ್ನೂ ಹತ್ತಾರು ದಾಖಲೆಗಳನ್ನು ನಿರ್ಮಿಸುವ ಕನಸು ಹೊತ್ತವರು.

Categories
ಕರಕುಶಲಕಲೆ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಆರ್. ನಾರಾಯಣಪ್ಪ

ನಶಿಸುತ್ತಿರುವ ಕೈಮಗ್ಗ ನೇಕಾರಿಕೆಯ ಉಳಿವಿಗಾಗಿ ಶ್ರಮಿಸುತ್ತಿರುವವರು ಆರ್.ನಾರಾಯಣಪ್ಪ ಅವರು. ಮಂಡ್ಯ ಜಿಲ್ಲೆಯ ಮೇಲುಕೋಟೆಯವರಾದ ಶ್ರೀಯುತರು ಕುಶಲ ನೇಕಾರರೆಂದೇ ಖ್ಯಾತಿವೆತ್ತವರು. ನೇಕಾರಿಕೆಯಲ್ಲಿ ಇತಿಹಾಸ ಸೃಷ್ಟಿಸುವ ಅವರ ಹಂಬಲ ಈಡೇರಿದ್ದು ರೋಚಕ ಕಥೆ. ಬೆಂಕಿಪೊಟ್ಟಣದಲ್ಲಿಡುವಂತಹ ಮಸ್ಲಿನ್ ಸೀರೆಯನ್ನು ನೇಯ್ದು ದಾಖಲೆ ನಿರ್ಮಿಸುವ ಮೂಲಕ ಕನಸು ನನಸು. ಆ ಸೀರೆಯ ತೂಕ ಕೇವಲ ೩೦ ಗ್ರಾಂಗಳು ಮಾತ್ರ. ಅದನ್ನು ಮೈಸೂರು ಮಹಾರಾಜರಿಗೆ ಉಡುಗೊರೆಯಾಗಿ ನೀಡಿ ಅವರಿಂದ ಸನ್ಮಾನ, ಬಹುಮಾನ ಪಡೆದ ಹಿರಿಮೆ ನಾರಾಯಣಪ್ಪ ಅವರದು. ೨೦೦೧ರಲ್ಲಿ ರಾಜ್ಯ ಹಾಗೂ ೨೦೦೩ರಲ್ಲಿ ರಾಷ್ಟ್ರ ಪ್ರಶಸ್ತಿ ಸಂದಿದೆ. ದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಜವಳಿ ಉತ್ಸವದಲ್ಲಿ ಆ ಸೀರೆ ಪ್ರದರ್ಶನ ಭಾಗ್ಯ ಕಂಡಿದೆ.
ಕಳೆದ ೪೫ ವರ್ಷಗಳಿಂದ ನೇಯ್ದೆ ವೃತ್ತಿಯಲ್ಲಿ ಸಕಲ ಪಾರಂಗತರು. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧಿಕೃತ ನೇಕಾರರು. ಕಾಸರಗೋಡು ನೇಕಾರ ಸಹಕಾರ ಸಂಸ್ಥೆಯಲ್ಲಿಯೂ ದುಡಿದಿರುವ ಅವರು ಅಖಿಲ ಭಾರತ ಕೈಮಗ್ಗ ಅಭಿವೃದ್ಧಿ ಮಂಡಳಿ ಸದಸ್ಯರಾಗಿಯೂ ಸೇವೆ ಸಲ್ಲಿಸಿರುವರು.
ಮನಸ್ಸಿನಲ್ಲಿ ಅಂದುಕೊಂಡಿದ್ದನ್ನು ಹಠ ಬಿಡದೆ ಸಾಧಿಸುವ ಛಲಗಾರ, ಸಾಧಕ ಶ್ರೀ ಆರ್.ನಾರಾಯಣಪ್ಪ.

Categories
ಕರಕುಶಲಕಲೆ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಪುಟ್ಟರಾಜು

ನೈಸರ್ಗಿಕ ಮರಗಳ ಬಣ್ಣ ಬಣ್ಣದ ಚಕ್ಕೆಗಳನ್ನು ಬಳಸಿ ಉಬ್ಬುಚಿತ್ರ ತಯಾರಿಸುವ ವಿಶಿಷ್ಟ ಕಲಾವಿದ ಆರ್.ಪುಟ್ಟರಾಜು. ೧೯೩೮ರಲ್ಲಿ ಚಾಮರಾಜನಗರ ಜಿಲ್ಲೆ ಮುಳ್ಳೂರಿನಲ್ಲಿ ಜನನ. ಸದ್ಯ ಅವರು ಮೈಸೂರು ನಿವಾಸಿ. ‘ಕಾವಾ’ದಲ್ಲಿ ಕುಂದಕಲೆಯಲ್ಲಿ ಡ್ರಾಯಿಂಗ್ ಮತ್ತು ಪೇಂಟಿಂಗ್ ತರಬೇತಿ. ೧೪೬೪ರಲ್ಲಿ ಅವರು ತಯಾರಿಸಿದ ಉಬ್ಬು ಚಿತ್ರ ಡಿವೋಷನ್ ಅಮೇರಿಕಾದ ಷಿಕಾಗೋ ಪಟ್ಟಣದಲ್ಲಿ ಪ್ರದರ್ಶನ ಭಾಗ್ಯ ಕಂಡು ಮೆಚ್ಚುಗೆ ಪಡೆದ ಶ್ರೇಷ್ಠ ಕೃತಿ.
ಈವರೆಗೂ ಒಂದು ಸಾವಿರಕ್ಕೂ ಹೆಚ್ಚಿನ ಉಬ್ಬು ಚಿತ್ರ ತಯಾರಿಸಿರುವ ಅವರು ಯಾವುದೇ ವಸ್ತು ವಿಷಯ ನೀಡಿದರೂ ಕೃತಕ ಬಣ್ಣಗಳ ಹಂಗಿಲ್ಲದೇ ನೈಸರ್ಗಿಕ ಮರದ ಬಣ್ಣದ ಚಕ್ಕೆಗಳಿಂದ ಉಬ್ಬು ಚಿತ್ರ ತಯಾರಿಸುವುದರಲ್ಲಿ ನಿಷ್ಣಾತರು. ಅವರು ಆವಿಷ್ಕರಿಸಿರುವ ಭಾವಚಿತ್ರ ಮತ್ತು ಉಬ್ಬುಚಿತ್ರ ಮಾದರಿಗಳು ನೂರಾರು ಮಂದಿಯ ಜೀವನೋಪಾಯಕ್ಕೆ ಸಹಕಾರಿ. ಪುಟ್ಟರಾಜು ಅವರು ತಯಾರಿಸಿರುವ ಉತ್ತಮ ಕಲಾಕೃತಿಗಳಿಗೆ ಮೈಸೂರು ದಸರಾ ಪ್ರಶಸ್ತಿ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಅನೇಕ ಸಂಸ್ಥೆಗಳಿಂದ ಗೌರವ.
ಮಳೆ, ಗಾಳಿ, ಬೆಂಕಿ, ನೀರು, ಇಬ್ಬನಿ, ಚಳಿ, ಬಗೆ, ದಾಹ ಇವೆ ಮೊದಲಾದ ವಿಷಯಗಳ ಬಗೆಗೆ ಶ್ರೀಯುತರು ತಯಾರಿಸಿರುವ ಎಲ್ಲ ಕಲಾಕೃತಿಗಳು ವಿಶಿಷ್ಟ.
ನೈಸರ್ಗಿಕ ಮರಗಳ ಚಕ್ಕೆಗಳೂ ಕಲಾವಿದನ ಕೈಗೆ ಸಿಕ್ಕರೆ ಅದ್ಭುತ ಕಲಾಕೃತಿಯಾಗಿ ರೂಪುಗೊಳ್ಳಬಲ್ಲವು ಎಂಬ ಕಲಾವಂತಿಕೆಯನ್ನು ಮೆರೆದವರು ಶ್ರೀ ಆರ್. ಪುಟ್ಟರಾಜು.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಕುರುಂಜಿ ವೆಂಕಟರಮಣಗೌಡ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಪ್ರಮುಖ ಶಿಕ್ಷಣ ಸಂಸ್ಥೆಯಾದ ಕೆ.ವಿ.ಜಿ ಶಿಕ್ಷಣ ಸಮೂಹ ಸಂಸ್ಥೆಗಳ ಬೆನ್ನೆಲುಬು
ಡಾ. ಕುರಂಜಿ ವೆಂಕಟರಮಣ ಗೌಡ ಅವರು.
ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕಿನ ಕುರಂಜಿಬಾಗ್‌ನವರು. ೭೭ ವರ್ಷ ವಯಸ್ಸಿನ ಗೌಡರು ಮೂಲತಃ ಕೃಷಿಕರು. ಮಾಡಿದ್ದು ಮಾತ್ರ ಶೈಕ್ಷಣಿಕ ಕೃಷಿ, ಕೆವಿಜಿ ವೈದ್ಯಕೀಯ ಕಾಲೇಜು, ಆಸ್ಪತ್ರೆ, ಕೆ.ವಿ.ಜಿ ದಂತ ವೈದ್ಯಕೀಯ ಕಾಲೇಜು, ಕೆವಿಜಿ ಆಯುರ್ವೇದ ಕಾಲೇಜು, ಕೆವಿಜಿ ಮೊಬೈಲ್ ಹೆಲ್ತ್ ಯೂನಿಟ್, ಪಾಲಿಟೆಕ್ನಿಕ್, ಕೈಗಾರಿಕಾ ತರಬೇತಿ ಸಂಸ್ಥೆ, ಪ್ರಥಮ ದರ್ಜೆ ಕಾಲೇಜು, ಕಾನೂನು ಕಾಲೇಜು ಹೀಗೆ ಪಟ್ಟಿ ದೊಡ್ಡದು.
ಈ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದ ಅನೇಕ ಪ್ರತಿಭಾವಂತರು ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವರು. ತಮ್ಮ ಶಿಕ್ಷಣ ಸಂಸ್ಥೆಗಳ ಮೂಲಕ ವಿದ್ಯೆಯನ್ನು ಧಾರೆಯೆರೆಯುತ್ತಿರುವವರು ಡಾ. ಕುರಂಜಿ ವೆಂಕಟರಮಣ ಗೌಡ ಅವರು.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಶ್ರೀ ಬಸವರಾಜ ಪಾಟೀಲ್ ಸೇಡಂ

“ಶಾಲೆಗಳು ಸಾಮಾಜಿಕ ಪರಿವರ್ತನೆಯ ಕೇಂದ್ರವಾಗಬೇಕು” ಎಂಬ ಧೇಯ ವಾಕ್ಯದೊಂದಿಗೆ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ, ನುಡಿದಂತೆ ನಡೆಯುತ್ತಿರುವ ನಮ್ಮ ನಡುವಿನ ಅಪರೂಪದ ಸರಳ ವ್ಯಕ್ತಿ ಶ್ರೀ ಬಸವರಾಜ ಪಾಟೀಲ
ಸೇಡಂ ಅವರು.
ಗುಲ್ಬರ್ಗ ಜಿಲ್ಲೆ ಸೇಡಂ ತಾಲ್ಲೂಕಿನ ತರನಹಳ್ಳಿಯಲ್ಲಿ ಜನನ. ಬಿ.ಎಸ್.ಸಿ. ಪದವಿವರೆಗೆ ಅಧ್ಯಯನ, ಸಮಾನ ಮನಸ್ಕರೊಡನೆ ಜೊತೆಗೂಡಿ “ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ” ಯ ಸ್ಥಾಪನೆ. ಇದರ ಆಶ್ರಯದಲ್ಲಿ ೩೫ ಕ್ಕೂ ಹೆಚ್ಚು ವಿದ್ಯಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಇವು ಶೈಕ್ಷಣಿಕ ಕ್ಷೇತ್ರಕ್ಕೆ ಸೇಡಂ ಅವರ ಹೆಮ್ಮೆಯ ಕೊಡುಗೆಗಳಾಗಿವೆ. ಹೈದರಾಬಾದ್ ಕರ್ನಾಟಕದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗಾಗಿ ಪ್ರತ್ಯೇಕ ವಿಭಾಗವೊಂದನ್ನು ತೆರೆದು ಈ ಪ್ರದೇಶದ ಐದು ಜಿಲ್ಲೆಗಳಲ್ಲಿ ಈಗಾಗಲೇ ಸುಮಾರು ೨೦ ಕೋಟಿ ರೂಗಳಿಗೂ ಅಧಿಕ ವೆಚ್ಚಮಾಡಿ ತಾಯ್ಯಾಡಿನ ಬೆಳವಣಿಗೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ.
ಎಂ.ಪಿ. ಯಾಗಿ, ಎಂ.ಎಲ್.ಸಿ. ಯಾಗಿ, ಸಾರ್ವಜನಿಕ ಲೆಕ್ಕಪತ್ರ ವ್ಯವಹಾರ ಸಮಿತಿಯ ಸದಸ್ಯರಾಗಿ, ರಾಜ್ಯ ಭಾರತೀಯ ಜನತಾಪಾರ್ಟಿಯ ಅಧ್ಯಕ್ಷರಾಗಿ, ನಿಷ್ಕಳಂಕ ಸೇವೆಸಲ್ಲಿಸಿದ ಹಿರಿಮೆ ಇವರದು.
ಸಮಾಜ ಸೇವೆ ಮಾಡುತ್ತ ಇತರರಿಗಾಗಿ ಬದುಕುವ ಅಪರೂಪದ ವ್ಯಕ್ತಿಗಳಲ್ಲಿ ಶ್ರೀ ಬಸವರಾಜ ಪಾಟೀಲ ಸೇಡಂ ಅವರೂ ಒಬ್ಬರು.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಪ್ರೊ. ವಿ.ಬಿ. ಕುಟಿನೋ

ಗುಲಬರ್ಗಾ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಕಾರ್ಮಿಕ ಹಾಗೂ ಪರಿಸರ ಕಾನೂನು ವಿಷಯಗಳಲ್ಲಿ ಆಳವಾದ ಜ್ಞಾನವುಳ್ಳ ಅಂತಾರಾಷ್ಟ್ರೀಯಮಟ್ಟದ ಶಿಕ್ಷಣ ತಜ್ಞ ಪ್ರೊ. ವಿ.ಬಿ. ಕುಟಿನೋ ಅವರು.
ಎಲ್.ಎಲ್.ಎಂ., ಪಿ.ಎಚ್.ಡಿ. ಪದವಿ ಪಡೆದು ಬೆಳಗಾವಿ, ಧಾರವಾಡ ಬೆಂಗಳೂರು ಮೊದಲಾದ ಕಡೆ ಕಾನೂನು ಉಪನ್ಯಾಸಕರಾಗಿ ದುಡಿದು ೨೦೦೨ ರಿಂದ ೨೦೦೬ ರವರೆಗೆ ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆಸಲ್ಲಿಕೆ. ಕಾರ್ಮಿಕ ಕಾಯ್ದೆ ಹಾಗೂ ಪರಿಸರ ಕಾನೂನು ಇವರ ಆಸಕ್ತಿಯ ಕ್ಷೇತ್ರಗಳು, ಈ ವಿಷಯಗಳ ಬಗೆಗೆ ಅನೇಕ ಪುಸ್ತಕಗಳ ರಚನೆ.
ಕೌಲಾಲಂಪೂರ್, ಸಿಡ್ನಿ, ಅಡಿಲೇಡ್ ಮೆಲಬರ್ನ್, ಕ್ಯಾನ್‌ಬೆರಾ, ಹಾಲೆಂಡ್ ಮೊದಲಾದ ವಿಶ್ವವಿದ್ಯಾಲಯಗಳ ಕೋರಿಕೆ ಮೇರೆಗೆ ವಿವಿಧ ವಿಷಯಗಳನ್ನು ಕುರಿತು ಯೋಜನಾವರದಿಗಳನ್ನು ಸಿದ್ಧಪಡಿಸಿ ನೀಡಿದ್ದಾರೆ.
ಅನೇಕ ಗಣ್ಯ ವೇದಿಕೆಗಳಲ್ಲಿ ಹಾಗೂ ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿ ಪ್ರಶಂಸೆಗಳಿಸಿದ ಮೇಧಾವಿ. ಬೆಂಗಳೂರು ಕಾನೂನು ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ಅವಧಿಯಲ್ಲಿ ಅನೇಕ ಮಹತ್ವಪೂರ್ಣ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಂಡುದು, ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಕಾಲದಲ್ಲಿ ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮಟ್ಟವನ್ನು ಹೆಚ್ಚಿಸುವಲ್ಲಿ ಜಾರಿಗೊಳಿಸಿದ ಯೋಜನೆಗಳು ಅವರ ಶೈಕ್ಷಣಿಕ ಪ್ರಬುದ್ಧತೆಗೆ ಸಾಕ್ಷಿಗಳು.
ಯು.ಜಿ.ಸಿ.ಯ ಸದಸ್ಯರಾಗಿ ಮತ್ತು ಯು.ಜಿ.ಸಿ.ಯ ಬೃಹತ್ ಯೋಜನೆಗಳ ಪರಿಶೀಲಕರಾಗಿ ನಿರ್ವಹಿಸಿದ ಇವರ ಕಾವ್ಯ ಪ್ರಶಂಸಾರ್ಹ.
ಕಾನೂನು, ಪರಿಸರ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅರ್ಪಣಾಭಾವದಿಂದ ಅಧ್ಯಯನ ನಡೆಸಿ ಉತ್ತುಂಗಕ್ಕೇರಿರುವ ಗಣ್ಯವ್ಯಕ್ತಿ ಪ್ರೊ. ವಿ.ಬಿ. ಕುಟಿನೋ ಅವರು.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಪ್ರೊ. ಕೆ.ಎಸ್. ನಾರಾಯಣಾಚಾರ್ಯ

ಕಲಿತದ್ದು, ಬೋಧಿಸಿದ್ದು ಆಂಗ್ಲ ಸಾಹಿತ್ಯವನ್ನಾದರೂ ಗಮಕಿಗಳಾಗಿಯೂ ಹೆಸರು ಮಾಡಿದವರು ಕೆ.ಎಸ್.ನಾರಾಯಣಾಚಾರ್ಯ ಅವರು.
ಕನಕಪುರದಲ್ಲಿ ೧೯೩೩ರಲ್ಲಿ ಜನನ. ತಂದೆ ಬಹುದೊಡ್ಡ ವೇದ ವಿದ್ವಾಂಸರು. ಪ್ರಾರಂಭಿಕ ಶಿಕ್ಷಣ ಪಡೆದಿದ್ದು ಹುಟ್ಟೂರಿನಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಬಿಎ ಆನ‌, ಆಂಗ್ಲ ಎಂಎ ಪದವಿ. ‘ಡಬ್ಲ್ಯೂ.ಬಿ.ಯೇಟ್ಸ್, ಟಿ.ಎಸ್.ಎಲಿಯೆಟ್ ಅವರ ಕಾವ್ಯದ ಮೇಲೆ ಭಾರತೀಯ ತತ್ವಶಾಸ್ತ್ರದ ಪ್ರಭಾವ’ ವಿಷಯ ಕುರಿತು ಸಂಶೋಧನಾ ಪ್ರಬಂಧ ಮಂಡನೆ. ಉಪನ್ಯಾಸಕರಾಗಿ ಅಧ್ಯಾಪನ ವೃತ್ತಿ ಆರಂಭ. ಪ್ರಾಚಾರ್ಯರಾಗಿ ನಿವೃತ್ತಿ.
ವೇದಗಳನ್ನು ಕುರಿತು ೧೦ ಸಂಪುಟಗಳ ಕೃತಿಗಳು, ರಾಮಾಯಣ, ಮಹಾಭಾರತ, ಭಗವದ್ಗೀತೆ ಸೇರಿದಂತೆ ೧೩೦ಕ್ಕೂ ಹೆಚ್ಚು ಗ್ರಂಥಗಳು ಶ್ರೀಯುತರಿಂದ ರಚನೆ. ನೂರಾರು ಉಪನ್ಯಾಸಗಳನ್ನು ನೀಡಿದ ಹೆಗ್ಗಳಿಕೆ ಅವರದು. ಕನ್ನಡ, ಆಂಗ್ಲ ತಮಿಳು, ಸಂಸ್ಕೃತ ಭಾಷೆಗಳಲ್ಲಿ ಪ್ರಾವೀಣ್ಯತೆ.
ಶ್ರೀಯುತರಿಂದ ಕೌಟಿಲ್ಯ ರಾಷ್ಟ್ರೀಯ ಅಧ್ಯಯನ ಸಂಸ್ಥೆ ಸ್ಥಾಪನೆ. ೨೦೦೫ರಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರಗಳು ಅವರಿಗೆ ಸಂದಿವೆ. ಗಮಕ ಪರಿಷತ್ತಿನ ಸಮ್ಮೇಳನದಲ್ಲಿ ಅಧ್ಯಕ್ಷತೆಯ ಗೌರವದ ಜತೆಗೆ ಗಮಕ ರತ್ನಾಕರ ಬಿರುದಿಗೆ ಅವರು ಪಾತ್ರರು.
ವೃತ್ತಿ ಮತ್ತು ಪ್ರವೃತ್ತಿ ಎರಡರಲ್ಲೂ ಸಮಾನ ಸಾಧನೆ ಮಾಡಿದವರು ಶ್ರೀ ಕೆ.ಎಸ್.ನಾರಾಯಣಾಚಾರ್ಯ.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಇಮ್ರಾನ್ ಖುರೇಷಿ

ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮದಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿದ ಸಂವೇದನಾಶೀಲ ಪತ್ರಕರ್ತ ಇಮ್ರಾನ್ ಖುರೇಷಿ ಅವರು.
ಶ್ರೀಯುತರದು ಸುದ್ದಿ ಮಾಧ್ಯಮದಲ್ಲಿ ಸಾರ್ಥಕ ೩೦ ವರ್ಷಗಳ ಸೇವಾ ಕೈಂಕರ್ಯ. ಮುದ್ರಣ, ವಿದ್ಯುನ್ಮಾನ ಹೀಗೆ ಮಾಧ್ಯಮ ಯಾವುದೇ ಇರಲಿ ಸುದ್ದಿ ಮೂಲಕ ಸಮಾಜವನ್ನು ಜಾಗೃತಿಗೊಳಿಸುವ ಸಾರ್ಥಕ ಕೆಲಸ.
ಪ್ರತಿಷ್ಠಿತ ಸುದ್ದಿ ಸಂಸ್ಥೆಯೊಂದಕ್ಕೆ ಟ್ರೈನಿ ಜರ್ನಲಿಸ್ಟ್ ಆಗಿ ವೃತ್ತಿ ಜೀವನಕ್ಕೆ ಕಾಲಿಟ್ಟ ಅವರು ಆನಂತರ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗೆ ಸೇರಿದರು. ಬಳಿಕ ‘ಇಂಡಿಯನ್ ಎಕ್ಸ್‌ಪ್ರೆಸ್‌’ಗೆ ವೃತ್ತಿ ಜೀವನದ ಜಿಗಿತ. ೧೯೮೪ರಲ್ಲಿ ‘ದಿ ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಗೆ ಮುಖ್ಯ ವರದಿಗಾರರಾಗಿ ಸೇರಿ ಅನೇಕ ಯುವ ಪತ್ರಕರ್ತರನ್ನು ರೂಪಿಸಿದ ಹಿರಿಮೆ
ಅವರದು.
ರಂಜಕತೆಗೆ ಒತ್ತು ನೀಡುವ ಮಾಧ್ಯಮದಲ್ಲಿದ್ದರೂ ಇಮ್ರಾನ್ ಅವರು ವೃತ್ತಿಯಲ್ಲಿ ಮಾನವೀಯತೆಯನ್ನು ಮೆರೆಯುವ ಪತ್ರಕರ್ತರೆಂಬುದಕ್ಕೆ ಅವರು ಮಾಡಿರುವ ವರದಿಗಳೇ ಸಾಕ್ಷಿ. ೧೯೮೧ರಲ್ಲಿ ಬೆಂಗಳೂರಿನಲ್ಲಿ ಸಂಭವಿಸಿದ ಸರ್ಕಸ್
ಕಂಪೆನಿಯ ಬೆಂಕಿ ದುರಂತ ಕುರಿತು ಅವರು ಮಾಡಿದ ವರದಿ ಮರೆಯಲಸದಳ.
೧೯೯೪ರಲ್ಲಿ ವಿದ್ಯುನ್ಮಾನ ಮಾಧ್ಯಮಕ್ಕೆ ಪ್ರವೇಶ. ಶ್ರೀಯುತರು ಸದ್ಯ ಆಜ್ ತಕ್/ಹೆಡ್‌ಲೈನ್ಸ್ ಟುಡೇ ರಾಷ್ಟ್ರೀಯ ಸುದ್ದಿ
ವಾಹಿನಿಯ ಸಂಪಾದಕರು.
‘ಮೊದಲು ಮಾನವೀಯತೆ ಆನಂತರ ವರದಿ’ ಎಂಬ ಜೀವನತತ್ವ ಅಳವಡಿಸಿಕೊಂಡ ವೃತ್ತಿಯಲ್ಲಿ ಬದ್ಧತೆ, ಪ್ರಾಮಾಣಿಕ ಹಾಗೂ ನೈತಿಕತೆಗಳನ್ನು ಉಳಿಸಿಕೊಂಡ ಅಪರೂಪದ ಪತ್ರಕರ್ತರು ಶ್ರೀ ಇಮ್ರಾನ್ ಖುರೇಷಿ.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಚಂದ್ರಕಾಂತ್

ಶಿವಮೊಗ್ಗ ಜಿಲ್ಲೆಯ ಸ್ಥಳೀಯ ಪತ್ರಿಕೋದ್ಯಮಕ್ಕೆ ಹೊಸ ದಿಕ್ಕು ಮೂಡಿಸಿದ ಕೀರ್ತಿ ನಾವಿಕ ದಿನ ಪತ್ರಿಕೆಯ ಸಂಪಾದಕ ಎಸ್.ಚಂದ್ರಕಾಂತ್ ಅವರದು. ೧೯೫೧ರಲ್ಲಿ ಶಿವಮೊಗ್ಗದಲ್ಲಿ ಜನನ. ೧೯೭೭ರಲ್ಲಿ ಪತ್ರಿಕೋದ್ಯಮ ಪ್ರವೇಶ. ಇಲ್ಲಿವರೆಗೂ ವರ್ಷಗಳ ೩೧ ಕಾಲ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ.
ಶಿವಮೊಗ್ಗ ಜಿಲ್ಲೆಯ ಶರಾವತಿ, ಎಚ್ಚರಿಕೆ, ಮಲೆನಾಡ ವಾಣಿ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ ಅನುಭವ. ಜಿಲ್ಲೆಯ ಸಾಂಸ್ಕೃತಿಕ, ರಾಜಕೀಯ, ಸಾಹಿತ್ಯಕ ಕ್ಷೇತ್ರಗಳಿಗೆ ಪತ್ರಿಕೆಯ ಮೂಲಕ ಅನನ್ಯ ಸೇವೆ.
ಶಿವಮೊಗ್ಗ ಜಿಲ್ಲೆಯ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಜಿಲ್ಲೆಯ ಪ್ರೆಸ್‌ಕ್ಲಬ್ ಸ್ಥಾಪಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಅವರು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕರಾಗಿ ಹಾಲಿ ಸೇವೆ.
ಪರೋಪಕಾರಿ ಸಂಘ, ಪ್ರತಿಭಾ ರಂಗ, ಮಲೆನಾಡು ಕನ್ನಡ ಸಂಘ ಮೊದಲಾದ ಸಂಘಗಳಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಬೆಳವಣಿಗೆಗಳಿಗೆ ಸಾಕ್ಷಿಯಾಗಿ, ಜನಾಭಿಪ್ರಾಯವನ್ನು ಮೂಡಿಸುತ್ತಿರುವ ನಾವಿಕ ದಿನಪತ್ರಿಕೆಯ ಸಂಪಾದಕರಾಗಿ ಅನನ್ಯ ಕೊಡುಗೆ ನೀಡಿದವರು ಎಸ್.ಚಂದ್ರಕಾಂತ್.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬೆ.ಸು.ನಾ. ಮಲ್ಯ

ಬಾಲ್ಯದಿಂದಲೂ ರಾಷ್ಟ್ರೀಯವಾದಿ ಧೋರಣೆ ಹೊಂದಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗಿ, ನಿಷ್ಠಾವಂತ ಪತ್ರಕರ್ತ ಮನ್ನಣೆಗೆ ಪಾತ್ರರಾದವರು ಬೆಳ್ಳಾಯಿ ಸುಬ್ರಾಯ ನಾರಾಯಣ ಮಲ್ಯ ಅವರು.
ಕಾರ್ಕಳದಲ್ಲಿ ಹುಟ್ಟಿ, ಬೆಂಗಳೂರಿನಲ್ಲಿ ನೆಲೆ ನಿಂತು ‘ವಿಕ್ರಮ’ ವಾರಪತ್ರಿಕೆಯ ಸಂಪಾದಕರಾಗಿ ೪೧ ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿದವರು ಶ್ರೀಯುತರು.
೧೯೪೨ರ ರಾಷ್ಟ್ರೀಯ ಚಳವಳಿಯ ನೇತಾರರಿಗೆ, ಭೂಗತ ಕಾರ್ಯಕರ್ತರಿಗೆ ನೆರವು. ಬುರ್ಲಿ ಬಿಂದು ಮಾಧವರಾಯರಿಂದ ಸ್ಫೂರ್ತಿ ಪಡೆದು, ಕಾಲೇಜು ವ್ಯಾಸಂಗಕ್ಕೆ ಕೊನೆ ಹಾಡಿ ಸ್ವಾತಂತ್ರ್ಯ ಚಳವಳಿಗೆ ಧುಮುಕಿದವರು. ೧೯೭೫ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸೆರೆವಾಸ ಅನುಭವಿಸಿರುವರು ಬೆಸುನಾ ಮಲ್ಯ
ಅಖಿಲ ಭಾರತ ವೃತ್ತ ಪತ್ರಿಕಾ ಸಂಘದ ಕಾರ್ಯಸಮಿತಿ ಸದಸ್ಯತ್ವ, ಪತ್ರಿಕಾ ಅಕಾಡೆಮಿಯ ಸದಸ್ಯತ್ವ ಹಾಗೂ ಕರ್ನಾಟಕ ಸಣ್ಣ ಮತ್ತು ಜಿಲ್ಲಾ ಪತ್ರಿಕಾ ಸಂಪಾದಕರ ಸಂಘದಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ.
ಕನ್ನಡ, ಸಂಸ್ಕೃತ, ಆಂಗ್ಲ, ಹಿಂದಿ, ಮರಾಠಿ ಮತ್ತು ಕೊಂಕಣಿ ಭಾಷೆಗಳಲ್ಲಿ ಪಾಂಡಿತ್ಯ ಪಡೆದಿರುವ ಶ್ರೀಯುತರು ಕನ್ನಡಕ್ಕೆ ಅನುವಾದಿಸಿರುವ ದೇಶದ ಹಿರಿಯ ನಾಯಕರ ಓಜಸ್ವಿ ಭಾಷಣಗಳು ಕಿರಿಯರೆಲ್ಲ ಓದಲೇಬೇಕಾದ ಬರಹಗಳು. ‘ವಿಕ್ರಮ ಎಂದರೆ ಬೆಸುನಾ ಮಲ್ಯ ಬೆಸುನಾ ಎಂದರೆ ‘ವಿಕ್ರಮ’ ಎನ್ನುವಷ್ಟರ ಮಟ್ಟಿಗೆ ಆ ಪತ್ರಿಕೆಗೆ ಸರ್ವಸ್ವವನ್ನೂ ಧಾರೆ ಎರೆದವರು ಶ್ರೀಯುತರು.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಕೆ.ಬಿ. ಗಣಪತಿ

ಪತ್ರಿಕೋದ್ಯಮ ಕ್ಷೇತ್ರದಲ್ಲಿ ನಿರಂತರ ಕೃಷಿಗೈಯುತ್ತ ಸಾಹಿತ್ಯ ಪರಿಚಾರಿಕೆಯನ್ನು ನಡೆಸುತ್ತ ಬಂದಿರುವ ಉಭಯ ವಲಯ ಪ್ರತಿಭಾವಂತರು ಶ್ರೀ ಕೆ.ಬಿ. ಗಣಪತಿ ಅವರು.
“ಮೈಸೂರು ಮಿತ್ರ” ಬೆಳಗಿನ ಕನ್ನಡ ದಿನಪತ್ರಿಕೆ ಹಾಗೂ ‘ಸ್ಟಾರ್ ಆಫ್ ಮೈಸೂರು ಸಂಜೆ ಇಂಗ್ಲಿಷ್ ದಿನಪತ್ರಿಕೆಗಳ ಸ್ಥಾಪಕ, ಸಂಪಾದಕರಾಗಿ ಮೂರು ದಶಕಗಳಿಂದ ಯಶಸ್ವಿಯಾಗಿ ಪ್ರಕಟಿಸುತ್ತಿರುವ ಹಿರಿಯ ಪತ್ರಕರ್ತರು.
ಕರ್ನಾಟಕ ಹೈಕೋರ್ಟಿನ ವಕೀಲ ವೃತ್ತಿ, ಮುಂಬಯಿ ಪ್ರೆಸ್ ಜರ್ನಲ್ ಹಾಗೂ “ಇಂಡಿಯನ್ ಎಕ್ಸ್‌ಪ್ರೆಸ್” ಉಪಸಂಪಾದಕ ಜವಾಬ್ದಾರಿ ಮೊದಲಾದ ಮೌಲಿಕ ಕಾವ್ಯಾನುಭವದ ಹಿನ್ನೆಲೆ ಉಳ್ಳವರು.
ಆದರ್ಶವಾದಿ, ದಿ ಕ್ರಾಸ್ ಅಂಡ್ ದಿ ಕೂರ್ಗ್, ಕೊಡಗಿನ ಮೇಲೆ ಶಿಲುಬೆಯ ನೆರಳು ಮುಂತಾದ ಕಾದಂಬರಿಗಳನ್ನು “ಅಮೆರಿಕಾ ಎನ್ ಏರಿಯಾ ಆಫ್ ಲೈಟ್” ಎಂಬ ಪ್ರವಾಸಕಥನವನ್ನು ಬರೆದು ಪ್ರಕಟಿಸಿದ್ದಾರೆ.
ಅನೇಕ ಸಂಸ್ಥೆಗಳಲ್ಲಿ ಗೌರವ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಅಮೆರಿಕಾ, ಇಂಗ್ಲೆಂಡ್, ಯೂರೋಪ್, ಜಪಾನ್ ಮೊದಲಾದ ದೇಶಗಳ ಪ್ರವಾಸ ಮಾಡಿದ್ದಾರೆ.
ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ, ಹೆಚ್.ಕೆ. ವೀರಣ್ಣಗೌಡ ಪತ್ರಿಕೋದ್ಯಮ ಪ್ರಶಸ್ತಿ ಮುಂತಾದ ಗೌರವಗಳು ಸಂದಿವೆ ಶ್ರೀ ಕೆ.ಬಿ. ಗಣಪತಿ ಅವರಿಗೆ

Categories
ಪತ್ರಿಕೋದ್ಯಮ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ರವಿ ಬೆಳಗೆರೆ

ಬರವಣಿಗೆಯನ್ನೇ ಉಸಿರಾಗಿಸಿಕೊಂಡ ಸೃಜನಶೀಲ ಬರಹಗಾರ, ಉತ್ಸಾಹಿ ಪತ್ರಕರ್ತ ರವಿ ಬೆಳಗೆರೆ ಅವರು.
ಬಳ್ಳಾರಿಯಲ್ಲಿ ೧೯೫೮ರಲ್ಲಿ ಜನನ. ಎರಡು ವರ್ಷ ತುಮಕೂರಿನ ಸಿದ್ಧಗಂಗಾ ಪ್ರೌಢಶಾಲೆಯಲ್ಲಿ ಕಲಿಕೆ. ಬಿ.ಎ. ವರೆಗೆ ಬಳ್ಳಾರಿಯಲ್ಲಿ ವಿದ್ಯಾಭ್ಯಾಸ. ಧಾರವಾಡ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ
ಪದವಿ.
ಕೆಲಕಾಲ ಬಳ್ಳಾರಿ, ಹಾಸನ ಮತ್ತು ಹುಬ್ಬಳ್ಳಿ ಕಾಲೇಜುಗಳಲ್ಲಿ ಇತಿಹಾಸ ಉಪನ್ಯಾಸಕ ವೃತ್ತಿ. ಹೈಸ್ಕೂಲು ಮೇಷ್ಟ್ರು, ಹೋಟೆಲ್ ಮಾಣಿ, ರೂಮ್ ಬಾಯ್, ರಿಸೆಪ್ಪನಿಸ್ಟ್, ಹಾಲು ಮಾರುವ ಗೌಳಿ, ದಿನಪತ್ರಿಕೆ ಹಂಚುವ ಹುಡುಗನಾಗಿ, ಈಗ ಪತ್ರಕರ್ತರಾಗಿ ರವಿ ಬೆಳಗೆರೆಯವರು ಪಡೆದ ಜೀವನಾನುಭವ ಅನನ್ಯ.
ಅತಿಚಿಕ್ಕ ವಯಸ್ಸಿಗೇ ಅನೇಕ ಪತ್ರಿಕೆಗಳಲ್ಲಿ ಸಂಪಾದಕ ಹುದ್ದೆ ನಿರ್ವಹಣೆ. ಈತನಕ ಅವರ ೫೦ಕ್ಕೂ ಹೆಚ್ಚಿನ ಪುಸ್ತಕಗಳು ಪ್ರಕಟ. ಖುದ್ವಂತ್ ಸಿಂಗ್, ಪ್ರತಿಮಾ ಬೇಡಿ, ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಮೊದಲಾದವರ ಬರಹಗಳು ಅವರಿಂದ ಕನ್ನಡಕ್ಕೆ ಅನುವಾದ. ಸಣ್ಣಕತೆ ಅವರ ಇಷ್ಟದ ಸಾಹಿತ್ಯ ಪ್ರಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಮಾಧ್ಯಮ ಅಕಾಡೆಮಿಗಳ ಪ್ರಶಸ್ತಿಗಳಿಗೆ ಶ್ರೀಯುತರು ಭಾಜನರು.
ಸದ್ಯ ಅವರು ‘ಹಾಯ್ ಬೆಂಗಳೂರು’ ವಾರ ಪತ್ರಿಕೆ ಮತ್ತು ‘ಓ ಮನಸೇ..’ ಪಾಕ್ಷಿಕದ ಸಂಪಾದಕರು. ಪ್ರಾರ್ಥನಾ ಎಜುಕೇಶನ್ ಸೊಸೈಟಿಯ ಸಂಸ್ಥಾಪಕ ಕಾರ್ಯದರ್ಶಿ.
ಉಸಿರೇ ಆಗಿರುವ ಬರವಣಿಗೆಯ ಜತೆಗೆ ಸಿನೆಮಾ ನಿರ್ಮಾಣ, ನಿರ್ದೇಶನ ಮತ್ತು ನಟನೆ ಅವರ ಆಸಕ್ತಿ ಕ್ಷೇತ್ರಗಳು. ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮದೇ ಸ್ಪೋಪಜ್ಞೆ ಮೆರೆದು ಹೆಸರಾದವರು ಶ್ರೀ ರವಿ ಬೆಳಗೆರೆ.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಕೃಷ್ಣಮೂರ್ತಿ ಹೆಗಡೆ

ಕನ್ನಡ ಪತ್ರಿಕೋದ್ಯಮದ ಮೈಲಿಗಲ್ಲು ಎನಿಸಿದ ‘ಸಂಯುಕ್ತ ಕರ್ನಾಟಕ’ ದಿನಪತ್ರಿಕೆಯ ಹುಬ್ಬಳ್ಳಿಯ ಸ್ಥಾನಿಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿರುವವರು ಕೃಷ್ಣಮೂರ್ತಿ ಹೆಗಡೆ ಅವರು.
೧೯೫೧ರಲ್ಲಿ ಜನನ. ೧೯೭೪ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಕಳೆದ ೩೧ ವರ್ಷಗಳಿಂದ ಅವರು ಈ ಕ್ಷೇತ್ರದಲ್ಲಿ ಸೇವಾ ನಿರತರು. ದೈನಂದಿನ ಆಗು-ಹೋಗುಗಳು ಸೇರಿದಂತೆ ಜನಸಾಮಾನ್ಯರ ಮೇಲೆ ಬೆಳಕು ಚೆಲ್ಲುವಂತಹ ವರದಿಗಾರಿಕೆ ಸೇರಿದಂತೆ ಶ್ರೀಯುತರು ಸಾಹಿತ್ಯ, ರಾಜಕೀಯ ವರದಿಗಾರಿಕೆಯಲ್ಲಿ ವಿಶಿಷ್ಟತೆ ಮೆರೆದವರು.
೧೯೭೪ರಲ್ಲಿ ನಾಡಿನ ಪ್ರಮುಖ ಪತ್ರಿಕೆ ‘ವಿಕ್ರಮ’ದ ಪತ್ರಿಕೆಗೆ ಸೇರುವ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭ, ಬಳಿಕ ಪ್ರತಿಷ್ಠಿತ ರಾಷ್ಟೋತ್ಥಾನ ಪರಿಷತ್ತಿನ ಪ್ರಕಟಣೆಯಾದ ‘ಉತ್ಥಾನ’ ಮಾಸಿಕ ಪತ್ರಿಕೆಯಲ್ಲಿ ಉಪಸಂಪಾದಕ ಹುದ್ದೆ. ೧೯೭೭ರಲ್ಲಿ ಬೆಂಗಳೂರಿನ ‘ಪ್ರಜಾ ಪ್ರಭುತ್ವ ವಾರಪತ್ರಿಕೆಯಲ್ಲಿ ಕೆಲ ಕಾಲ ವರದಿಗಾರರಾಗಿ ಕಾರ್ಯನಿರ್ವಹಣೆ. ಕೆಲ ದಿನಗಳ ಬಳಿಕ ‘ಸಂಯುಕ್ತ ಕರ್ನಾಟಕ’ ದಿನಪತ್ರಿಕೆಯಲ್ಲಿ ವರದಿಗಾರ ಹುದ್ದೆಯ ಅಲಂಕಾರ.
ಸದ್ಯಕ್ಕೆ ‘ಸಂಯುಕ್ತ ಕರ್ನಾಟಕ’ದ ಸ್ಥಾನಿಕ ಸಂಪಾದಕರಾಗಿ ಕೃಷ್ಣಮೂರ್ತಿ ಹೆಗಡೆ ಅವರು ಸೇವೆ ಸಲ್ಲಿಸುತ್ತಿರುವರು.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಪದ್ಮರಾಜ್ ದಂಡಾವತಿ

ತೀಕ್ಷ್ಣ ರಾಜಕೀಯ ವಿಶ್ಲೇಷಕರಾಗಿ ಮಾತ್ರವಲ್ಲದೇ ಸದಭಿರುಚಿಯ ಸಾಹಿತ್ಯಕ ವರದಿಗಳಿಗೆ ಹೆಸರಾದ ಪತ್ರಕರ್ತರು ಪದ್ಮರಾಜ ದಂಡಾವತಿ ಅವರು.
ವಿಜಾಪುರ ಜಿಲ್ಲೆ ಮುದ್ದೇಬಿಹಾಳದಲ್ಲಿ ಜನನ. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಅವರು ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರರು. ಪತ್ರಿಕೋದ್ಯಮ ಪ್ರವೇಶಿಸಿದ್ದು ಆಕಸ್ಮಿಕ. ‘ಶೂದ್ರ’ ಸಾಹಿತ್ಯಕ ಪತ್ರಿಕೆಯಲ್ಲಿ ನಾಲ್ಕು ವರ್ಷ ಉಪ ಸಂಪಾದಕರಾಗಿ ಕೆಲಸ. ೧೯೮೨ರಲ್ಲಿ ಪ್ರತಿಷ್ಠಿತ ದೈನಿಕ ‘ಪ್ರಜಾವಾಣಿ’ಗೆ ಸೇರ್ಪಡೆ. ೨೭ ವರ್ಷಗಳ ಕಾಲ ಈ ಪತ್ರಿಕೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಣೆ. ಈಗ ಪತ್ರಿಕೆಯ ಸಂಪಾದಕೀಯ ವಿಭಾಗದ ಮುಖ್ಯಸ್ಥರಾದ ಸಹ-ಸಂಪಾದಕ ಹುದ್ದೆಗೆ ಬಡ್ತಿ. ಅವರು ಉತ್ತಮ ವಾಗಿಗಳೂ ಹೌದು.
ಹೇಳಬೇಕಾಗಿರುವ ವಿಷಯವನ್ನು ಸರಳವಾಗಿ, ಸಾಮಾನ್ಯ ಓದುಗನು ಸುಲಭವಾಗಿ ಅರ್ಥ ಮಾಡಿಕೊಳ್ಳುವಂತೆ ನಿರೂಪಿಸಬಲ್ಲ ಬರವಣಿಗೆಯ ಶೈಲಿ ಅವರದು.
ಅತ್ಯುತ್ತಮ ಸುದ್ದಿ ವಿಶ್ಲೇಷಣೆಗಾಗಿ ಎರಡು ಬಾರಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಖಾದ್ರಿ ಶಾಮಣ್ಣ ಪ್ರಶಸ್ತಿ ಪುರಸ್ಕೃತರು.
ಕಾರ್ಯನಿರತ ಪತ್ರಕರ್ತರ ಸಂಘ, ಬೆಂಗಳೂರು ವರದಿಗಾರರ ಕೂಟದ ಪದಾಧಿಕಾರಿಯಾಗಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿಯೂ ಶ್ರೀಯುತರು ಕಾರ್ಯನಿರ್ವಹಿಸಿರುವರು.
ಮಾಧ್ಯಮ ಅಕಾಡೆಮಿಗಾಗಿ ಅವರು ಬರೆದ ಕೃತಿಗಳು ‘ಪತ್ರಿಕಾ ಭಾಷೆ’ ಮತ್ತು ‘ರಿರ್ಪೋಟಿಂಗ್’, ಅವರು ಬರೆದ ‘ಅವಲೋಕನ’ ಕೃತಿ ಬೆಂಗಳೂರು ಪ್ರೆಸ್‌ಕ್ಲಬ್‌ನಿಂದ ಪ್ರಕಟ. ೨೦೦೬ರಲ್ಲಿ ಶ್ರವಣಬೆಳಗೊಳದಲ್ಲಿ ನಡೆದ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಅವರು ಬರೆದ ‘ಗೊಮ್ಮಟ’ ಕೃತಿಯನ್ನು ವಾರ್ತಾ ಇಲಾಖೆಯು ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರಕಟಿಸಿದೆ.
ವೃತ್ತಿಯಲ್ಲಿ ನಿಷ್ಠೆ, ಶ್ರದ್ಧೆ ಮತ್ತು ನಿತ್ಯ ಜೀವನದಲ್ಲಿ ಪ್ರಾಮಾಣಿಕತೆಯ ಮೌಲ್ಯಗಳನ್ನು ರೂಢಿಸಿಕೊಂಡು ಕಿರಿಯರಿಗೆ ಮಾದರಿಯಾಗಿ ಬದುಕುತ್ತಿದ್ದಾರೆ ಶ್ರೀ ಪದ್ಮರಾಜ ದಂಡಾವತಿ.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ

ವಿದ್ಯಾರ್ಥಿ ದೆಸೆಯಿಂದಲೇ ಅತ್ಯಂತ ಪ್ರತಿಭಾನ್ವಿತರಾಗಿರುವ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಅವರು ಕರ್ನಾಟಕದ ಪ್ರಪ್ರಥಮ ಮಹಿಳಾ ಹೃದ್ರೋಗ ತಜ್ಞೆ ಶೈಕ್ಷಣಿಕ ವರ್ಷದುದ್ದಕ್ಕೂ ಚಿನ್ನದ ಪದಕಗಳನ್ನು ಸೂರೆಗೊಂಡವರು.
ಹೃದಯದ ರಂಧ್ರವನ್ನು ಶಸ್ತ್ರಚಿಕಿತ್ಸೆ ಇಲ್ಲದೆ ಮುಚ್ಚಿದ ಖ್ಯಾತಿ ಇವರದು. “ವರ್ಲ್ಡ್ ಕಾಂಗ್ರೆಸ್”ನಲ್ಲಿ ಸತತವಾಗಿ ಎರಡುವರ್ಷ ಮಂಡಿಸಿದ ಸಂಶೋಧನಾತ್ಮಕ ಪ್ರಬಂಧಗಳಿಗೆ ‘ಬೆಸ್ಟ್ ಪೇಪರ್ ಅವಾರ್ಡ್’ ದೊರೆತಿದೆ.
ರಾಷ್ಟ್ರೀಯ ಸಿಎಫ್‌ಐ ಸಮ್ಮೇಳನದಲ್ಲಿ ಉಪನ್ಯಾಸ ನೀಡಿದ ಪ್ರಥಮ ಕನ್ನಡತಿ, ಕರ್ನಾಟಕದಲ್ಲಿ ಮಕ್ಕಳ ಹೃದ್ರೋಗ ಚಿಕಿತ್ಸಾಕೇಂದ್ರವನ್ನು ಪ್ರಪ್ರಥಮವಾಗಿ ಸ್ಥಾಪಿಸಿದ ಹೆಗ್ಗಳಿಕೆ ಇವರದು. ಬೀದರ್‌ನಲ್ಲಿ ನಡೆದ ಅಖಿಲ ಭಾರತ ೭೨ನಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉಪನ್ಯಾಸ ನೀಡಿದ ಏಕೈಕ ಹೃದ್ರೋಗ ತಜ್ಞೆ.
ಡಾ. ಬಿ.ಸಿ. ರಾಯ್ ಪ್ರಶಸ್ತಿ, ಫ.ಗು. ಹಳಕಟ್ಟಿ ಪುರಸ್ಕಾರ, ಅಮೇರಿಕಾದಲ್ಲಿ ಸಾರ್ವಜನಿಕ ಸನ್ಮಾನ, ಚಾಣಕ್ಯ, ಕೌಟಿಲ್ಯ ಗ್ಲೋಬಲ್ ಅವಾರ್ಡ್ ಮೊದಲಾದ ಪ್ರತಿಷ್ಠಿತ ಪ್ರಶಸ್ತಿ ಗೌರವಗಳು ಇವರಿಗೆ ಸಂದಿವೆ.
ಮಧ್ಯಪಾನ, ಧೂಮಪಾನ ಚಟಗಳನ್ನು ಸಮಾಜದಿಂದ ತೊಲಗಿಸಲು ಉಪನ್ಯಾಸ, ವಿಚಾರಗೋಷ್ಠಿ, ಕರಪತ್ರ, ಪುಸ್ತಕ ಪ್ರಕಟಣೆ, ಬ್ಯಾಲಿ, ಪಾದಯಾತ್ರೆ ಮೊದಲಾದವುಗಳ ಮೂಲಕ ಜನಜಾಗೃತಿ ಉಂಟು ಮಾಡುತ್ತಿದ್ದಾರೆ.
ವೈದ್ಯ ವೃತ್ತಿ ಹಾಗೂ ಸಮಾಜಸೇವೆಗಳಿಂದ ಪೂರ್ಣವಾಗಿ ತಮ್ಮನ್ನು ಸಮಾಜಕ್ಕೆ ಅರ್ಪಿಸಿಕೊಂಡ ಅಪರೂಪದ ಗಣ್ಯವ್ಯಕ್ತಿ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ ಅವರು.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ|| ಬಿ.ಕೆ. ಶ್ರೀನಿವಾಸಮೂರ್ತಿ

ಗ್ರಾಮೀಣ ಪ್ರದೇಶದಲ್ಲಿ ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸಿ ಸಹಸ್ರಾರು ಮಂದಿಯ ಆರೋಗ್ಯದ ಕಾಳಜಿ ವಹಿಸುತ್ತಿರುವ ಖ್ಯಾತ ಹೃದಯತಜ್ಞ ಡಾ|| ಬಿ.ಕೆ. ಶ್ರೀನಿವಾಸಮೂರ್ತಿ,
ಬಳ್ಳಾರಿಯವರಾದ ಶ್ರೀನಿವಾಸಮೂರ್ತಿ ಅವರು ಮೈಸೂರಿನಲ್ಲಿ ಎಂ.ಬಿ.ಬಿ.ಎಸ್. ಪೂರೈಸಿ ಇಂಗ್ಲೆಂಡಿನ ರಾಯಲ್ ಕಾಲೇಜ್‌ ಆಫ್ ಫಿಜಿಷಿಯನ್ಸ್ ನಿಂದ ಎಂ.ಆರ್.ಸಿ.ಪಿ. ವೈದ್ಯ ಪದವಿ ಪಡೆದಿದ್ದಾರೆ. ಬಳ್ಳಾರಿಯ ಸರಕಾರಿ ವೈದ್ಯಕೀಯ ಕಾಲೇಜು, ಅಮೇರಿಕಾದ ಚೆಸ್ಟ್‌ನಟ್ ಹಿಲ್ ಹಾಸ್ಪಿಟಲ್, ಇಂಗ್ಲೆಂಡಿನ ಡಾನ್‌ಕಾಸ್ಟ‌ ರಾಯಲ್ ಇನ್‌ಫರರೀ ಮೊದಲಾದ ಕಡೆ ತಜ್ಞ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸಿ ಜನಪ್ರಿಯರಾಗಿದ್ದಾರೆ.
ಹೃದಯ ಹಾಗೂ ಮಧುಮೇಹ ಕಾಯಿಲೆಗಳ ಬಗ್ಗೆ ವಿಶೇಷ ಅಧ್ಯಯನ ಮಾಡಿರುವ ಡಾ|| ಮೂರ್ತಿ ಅವರು ಅನೇಕ ಪ್ರಬಂಧಗಳನ್ನು ರಾಷ್ಟ್ರಮಟ್ಟದ ವಿವಿಧ ವೈದ್ಯ ವೇದಿಕೆಗಳಲ್ಲಿ ಮಂಡಿಸಿದ್ದಾರೆ.
ಚೀನಾ, ಥಾಯ್‌ಲ್ಯಾಂಡ್ ಇಂಡೋನೇಷ್ಯಾ, ಈಜಿಪ್ಟ್, ದುಬೈ ಮೊದಲಾದ ಕಡೆ ನಡೆದ ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದಾರೆ. ಭಾರತ ಸರ್ಕಾರದ ಸ್ವಾಸ್ಥ್ಯ ಸಚಿವಾಲಯದ ಸೆಂಟ್ರಲ್‌ ಕೌನ್ಸಿಲ್‌ನ ಮೆಂಬರಾಗಿ ಸೇವೆ ಸಲ್ಲಿಸಿರುವರು.
ಎ.ಪಿ.ಐ. ಕರ್ನಾಟಕ ಚಾಪ್ಟರ್‌ನಿಂದ ಬಂಗಾರ ಪದಕ ಪಡೆದಿರುವುದಲ್ಲದೇ ಕಾರ್ಡಿಯಾಲಾಜಿಕಲ್ ಸೊಸೈಟಿ ಆಫ್ ಇಂಡಿಯಾದಿಂದ ಸನ್ಮಾನಿತರಾಗಿದ್ದಾರೆ. ಇನ್ನೂ ಅನೇಕ ಸಂಸ್ಥೆಗಳು ಇವರನ್ನು ಗೌರವಿಸಿವೆ. ಸದ್ಯ ಬಳ್ಳಾರಿಯಲ್ಲಿ ವೈದ್ಯಕೀಯ ಚಿಕಿತ್ಸೆ ಹಾಗೂ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಡಾ|| ಬಿ.ಕೆ. ಶ್ರೀನಿವಾಸಮೂರ್ತಿ ಅವರು.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ವೆಂಕಟರಮಣ ನೀಲಂ

ನರವಿಜ್ಞಾನ ಕ್ಷೇತ್ರದ ಬಹುದೊಡ್ಡ ಹೆಸರು ಡಾ. ವೆಂಕಟರಮಣ ಕೆ. ನೀಲಂ,
ತಿರುಪತಿ ಶ್ರೀ ವೆಂಕಟೇಶ್ವರ ವೈದ್ಯಕೀಯ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್ ಪದವಿ. ಬಳಿಕ ನ್ಯೂರೋ ಸರ್ಜ ೯ರಿಯಲ್ಲಿ ಮಾಸ್ಟರ್ ಆಫ್ ಸರ್ಜರಿ ಮಾಡಿರುವ ಶ್ರೀಯುತರು ೧೯೮೬ರಲ್ಲಿ ನಿಮ್ಹಾನ್ಸ್‌ನ ಉತ್ತಮ ವೈದ್ಯ ವಿದ್ಯಾರ್ಥಿ ಎಂಬ ಹಿರಿಮೆಗೆ ಪಾತ್ರರು. ಜರ್ಮನಿಯಲ್ಲಿ ಮೈಕ್ರೋ ನ್ಯೂರೋ ಸರ್ಜರಿ ತರಬೇತಿ ಪಡೆದು ಕಳೆದ ೨೦ ವರ್ಷಗಳಿಂದ ನರವೈದ್ಯ ವಿಜ್ಞಾನ ರಂಗದಲ್ಲಿ ಪರಿಣಾಮಕಾರಿ ಚಿಕಿತ್ಸೆ ನೀಡುವ ನುರಿತ ವೈದ್ಯರಾಗಿ ಜನಪ್ರಿಯರು.
ಈವರೆಗೆ ಇಪ್ಪತ್ತು ಸಾವಿರಕ್ಕೂ ಹೆಚ್ಚಿನ ನರರೋಗ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿರುವರು. ನಿಮ್ಹಾನ್ಸ್ ಮತ್ತು ಮಣಿಪಾಲ ಆಸ್ಪತ್ರೆಯಲ್ಲಿ ಸಹಾಯಕ ಪ್ರಾಧ್ಯಾಕರಾಗಿ ಹಾಗೂ ನಿರ್ದೇಶಕರಾಗಿ, ಈಗ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ಉಪಾಧ್ಯಕ್ಷರು ಮತ್ತು ನಿರ್ದೇಶಕರಾಗಿ ಶ್ರೀ ವೆಂಕಟರಮಣ ಕೆ.ನೀಲಂ ಅವರಿಂದ ಸೇವೆ ಸಲ್ಲಿಕೆ.
ನರವಿಜ್ಞಾನ ಕ್ಷೇತ್ರದಲ್ಲಿ ಅವರು ಪಡೆದಿರುವ ಅಪಾರ ಜ್ಞಾನ ಮತ್ತು ಅನುಭವ ರಾಷ್ಟ್ರ, ಅಂತಾರಾಷ್ಟ್ರೀಯ ವೈದ್ಯಕೀಯ ಜರ್ನಲ್‌ಗಳಲ್ಲಿ ಲೇಖನಗಳಾಗಿ ಪ್ರಕಟ. ನ್ಯೂರೋ ಸರ್ಜರಿಗೆ ಸಂಬಂಧಿಸಿದಂತೆ ಹೆಚ್ಚಿನ ಅಧ್ಯಯನ, ಸಂಶೋಧನೆ ಕೈಗೊಂಡು ಹಲವು ಕೃತಿಗಳನ್ನೂ ಶ್ರೀಯುತರು ಬರೆದಿರುವರು.
ಭಾರತೀಯ ನ್ಯೂರೋಸರ್ಜಿಕಲ್ ಸೊಸೈಟಿಯ ಸದಸ್ಯತ್ವ ಸೇರಿದಂತೆ ಅನೇಕ ವೈದ್ಯಕೀಯ ಸಂಸ್ಥೆಗಳ ಸದಸ್ಯತ್ವಕ್ಕೆ ಶ್ರೀಯುತರು ಭಾಜನರು.
ಕರ್ನಾಟಕದಲ್ಲಿ ಪ್ರಥಮ ಬಾರಿಗೆ ನ್ಯೂರೋ-ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ ಕೀರ್ತಿಗೆ ಭಾಜನರಾದವರು ಶ್ರೀ ಡಾ. ವೆಂಕಟರಮಣ ಕೆ.ನೀಲಂ.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಸುಬ್ರಾಯಪ್ಪ

ವೈದ್ಯಕೀಯ ವೃತ್ತಿಯನ್ನು ಒಂದು ಸಾಮಾಜಿಕ ಸೇವೆ ಎಂದೇ ಭಾವಿಸಿ ದುಡಿಯುತ್ತಿರುವ ಅಪರೂಪದ ಪ್ರತಿಭೆ ಡಾ. ಸುಬ್ರಾಯಪ್ಪ ಅವರು.
ಕಳೆದ ೨೫ ವರ್ಷಗಳಿಂದ ವೈದ್ಯ ಕ್ಷೇತ್ರದಲ್ಲಿ ದುಡಿಯುತ್ತಾ ರೋಗಿಗಳನ್ನು ಮಕ್ಕಳಂತೆ ಆರೈಕೆ ಮಾಡುತ್ತ ತಮ್ಮ ಮಾತಿನಿಂದಲೇ ಮನಗೆಲ್ಲುತ್ತಿರುವ ಕಾಯಕಜೀವಿ ಇವರು.
ವಿದ್ಯಾರ್ಥಿದೆಸೆಯಲ್ಲಿಯೇ ಅವಿರತ ಶ್ರಮ ಮತ್ತು ಶಿಸ್ತಿನ ಅಧ್ಯಯನಕ್ಕೆ ಹೆಸರಾದ ಸುಬ್ರಾಯಪ್ಪ ಅವರು ಯಾವುದೇ ರೋಗವನ್ನು ಅಮೂಲಾಗ್ರವಾಗಿ ಅಭ್ಯಸಿಸಿ, ಅತ್ಯಂತ ಖಚಿತವಾದ ಶುಶೂಷೆ ನೀಡುವುದರಲ್ಲಿ ಸಿದ್ಧಹಸ್ತರು. ಮನೆಯಲ್ಲಿರಲಿ, ಆಸ್ಪತ್ರೆಯಲ್ಲಿರಲಿ ಹಗಲಿರುಳೆನ್ನದೆ ರೋಗಿಗಳ ಸೇವೆಗಾಗಿ ತಮ್ಮೆಲ್ಲ ಸಮಯವನ್ನು, ಸೇವೆಯನ್ನು ಮುಡುಪಾಗಿಟ್ಟವರು ಡಾ. ಸುಬ್ರಾಯಪ್ಪ.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಡಿ. ನಾಗರಾಜ್

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ(ನಿಮ್ಹಾನ್ಸ್)ಯನ್ನು ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಂಸ್ಥೆಯಾಗಿ
ರೂಪಿಸಿರುವ ಕೀರ್ತಿ ಡಾ.ಡಿ. ನಾಗರಾಜ ಅವರದು.
ನಿಮ್ಹಾನ್ಸ್‌ನ ನರವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ೧೯೭೯-೮೦ರಲ್ಲಿ ಸೇರಿದ ಅವರು, ೨೦೦೨ರಿಂದ ಸಂಸ್ಥೆಯ ನಿರ್ದೇಶಕ-ಉಪಕುಲಪತಿ ಜವಾಬ್ದಾರಿ ಹೊತ್ತಿರುವರು.
ಹೋರಾಡಿ
ಸಂಸ್ಥೆಗೆ ಸೇರಿದ ಹತ್ತು ಎಕರೆ ಜಾಗ ಒತ್ತುವರಿಯಿಂದಾಗಿ ಕೈತಪ್ಪುವುದರಲ್ಲಿದ್ದಾಗ ಒತ್ತುವರಿದಾರರ ವಿರುದ್ಧ ಆ ಜಾಗವನ್ನು ಮರಳಿ ಪಡೆಯುವ ಮೂಲಕ ವೃತ್ತಿಧರ್ಮ ಎತ್ತಿಹಿಡಿದವರು ಶ್ರೀಯುತರು. ಮಾನಸಿಕ ಆರೋಗ್ಯದಿಂದ ಬಳಲುತ್ತಿರುವ ದೇಶದ ಎರಡು ಕೋಟಿಗೂ ಹೆಚ್ಚಿನ ಜನರ ಆರೋಗ್ಯ ಸುಧಾರಿಸಲು ಅಲ್ಪಾವಧಿಯ ಕೋರ್ಸ್‌ಗಳನ್ನು ಆರಂಭಿಸಿ ಸಿಬ್ಬಂದಿ ರೂಪಿಸುವ ಯೋಜನೆಯ ಹಿಂದೆ ಡಾ. ನಾಗರಾಜ ಅವರ ಪರಿಶ್ರಮ ಅಪಾರ.
ಶ್ರೀಯುತರ ೨೧೦ಕ್ಕೂ ಹೆಚ್ಚಿನ ಸಂಶೋಧನಾತ್ಮಕ ಲೇಖನಗಳು ರಾಷ್ಟ್ರೀಯ, ಅಂತರರಾಷ್ಟ್ರೀಯ ಜರ್ನಲ್‌ಗಳಲ್ಲಿ ಪ್ರಕಟ. ನರವಿಜ್ಞಾನ ಕ್ಷೇತ್ರದ ಆವಿಷ್ಕಾರಗಳ ಕುರಿತು ಅಪಾರ ಜ್ಞಾನ ಹೊಂದಿರುವ ಅವರು ಆ ಬಗ್ಗೆ ನಿರರ್ಗಳವಾಗಿ ಮಾತನಾಡಬಲ್ಲರು.
ಡಾ. ನಾಗರಾಜ ಅವರು ನ್ಯೂರಾಲಜಿಕಲ್ ಸೊಸೈಟಿ ಆಫ್ ಇಂಡಿಯಾ, ಇಂಡಿಯನ್ ಅಕಾಡೆಮಿ ಆಫ್ ನ್ಯೂರಾಲಜಿ ಹಾಗೂ ನ್ಯಾಷನಲ್ ಅಕಾಡೆಮಿ ಆಫ್ ಮೆಡಿಕಲ್ ಸೈನ್ಸ್‌ನ ಆಜೀವ ಸದಸ್ಯರು.
ವೃತ್ತಿ ಗೌರವ ಮತ್ತು ಕಳಕಳಿಯ ಮೂಲಕ ಸಮಾಜ ಸೇವೆಗೆ ಕಟಿಬದ್ಧರಾದವರು ಡಾ. ನಾಗರಾಜ.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಎಚ್.ವಿ. ಕೊಟ್ಟೂರೇಶ್

ಶಿವಮೊಗ್ಗದಲ್ಲಿ ನವಜಾತ ಶಿಶು ಚಿಕಿತ್ಸೆಗೆ ಸಂಬಂಧಿಸಿದಂತೆ ಹೆಸರು ಮಾಡಿದ ಪ್ರಸಿದ್ಧ ಮಕ್ಕಳ ತಜ್ಞ ಡಾ. ಕೊಟ್ಟೂರೇಶ್
ಅವರು.
ಅಲ್ಲಿನ ಕೊಟ್ಟೂರೇಶ ಪ್ರಸೂತಿ ಮತ್ತು ಮಕ್ಕಳ ಆಸ್ಪತ್ರೆಯ ಸ್ಥಾಪಕರು. ಬೆಳಗಾವಿಯಲ್ಲಿ ಜವಹರಲಾಲ್ ನೆಹರೂ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಎಂಬಿಬಿಎಸ್ ಪದವಿ ಪಡೆದವರು.
ನವಜಾತ ಶಿಶುವಿನ ಆರೈಕೆ, ಚಿಕಿತ್ಸೆ ಕುರಿತಂತೆ ಮಣಿಪಾಲದ ಕೆ.ಎಂ.ಸಿ. ಅಲ್ಲದೆ ಮಹಾರಾಷ್ಟ್ರ, ಕೇರಳ ಮತ್ತಿತರ ಕಡೆ ವಿಷಯ ಮಂಡಿಸಿ ಜಾಗೃತಿ ಮೂಡಿಸಿದ್ದಾರೆ.
ಅವಧಿ ಪೂರ್ವ ಜನಿಸುವ ಕಡಿಮೆ ತೂಕವುಳ್ಳ ಮಗು, ಆರೈಕೆಗೆ ಹೆಚ್ಚಿನ ಕಾಳಜಿ ನೀಡಬೇಕಾದ ಶಿಶುಗಳ ಬಗೆಗೆ ಹೆಚ್ಚಿನ ಕಾಳಜಿ ವಹಿಸುವ ವೈದ್ಯರು. ೭೫೦, ೯೦೦ ಗ್ರಾಂ ತೂಕ ಹೊಂದಿ ಜನಿಸಿದ ಶಿಶು ಕೂಡಾ ಉತ್ತಮವಾಗಿ ಚೇತರಿಸಿಕೊಂಡಿವೆ ಎಂಬುದು ಆಸ್ಪತ್ರೆಯಲ್ಲಿ ಸಿಗುವ ಗುಣಮಟ್ಟದ ಚಿಕಿತ್ಸೆ ಮತ್ತು ನವಜಾತ ಶಿಶುಗಳ ಆರೈಕೆ ಕುರಿತು ಇವರಿಗಿರುವ ಕಾಳಜಿಯ ದ್ಯೋತಕ.
ವೈದ್ಯಕೀಯ ರಂಗದಲ್ಲಿ ಶ್ರೀಯುತರ ಸೇವೆಯನ್ನು ಪರಿಗಣಿಸಿ ಶಿವಮೊಗ್ಗ ಮತ್ತು ಆಸುಪಾಸಿನ ಜಿಲ್ಲೆಗಳ ಅನೇಕ ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ.
ಮಕ್ಕಳ ಆರೋಗ್ಯ ಮತ್ತು ಪಾಲನೆಯ ಬಗೆಗೆ ವಿಶೇಷ ಗಮನ ನೀಡುವ ಕರ್ನಾಟಕದ ಖ್ಯಾತ ವೈದ್ಯರು ಡಾ. ಎಚ್.ವಿ. ಕೊಟ್ಟೂರೇಶ್.

Categories
ಚಲನಚಿತ್ರ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಪ್ರಮೀಳಾ ಜೋಷಾಯ್

ಕಲಾತ್ಮಕ ಮತ್ತು ಕಮರ್ಷಿಯಲ್ ಚಿತ್ರಗಳ ಎಲ್ಲ ಬಗೆಯ ಪಾತ್ರಗಳಿಗೂ ಜೀವತುಂಬಿ ನಟಿಸುವ ಅಭಿನೇತ್ರಿ ಶ್ರೀಮತಿ ಪ್ರಮೀಳಾ ಜೋಷಾಯ್ ಅವರು.
ಬೆಂಗಳೂರಿನ ಶ್ರೀಮತಿ ಜಯಮ್ಮ ಮತ್ತು ಸ್ಯಾಮ್ಯುಯಲ್ ಜೋಷಾಯ್ ಅವರ ಪುತ್ರಿ, ಪ್ರಮೀಳಾ ಅವರ ಪ್ರತಿಭೆ ಬೆಳಕಿಗೆ ಬಂದಿದ್ದು ರಂಗಭೂಮಿ ಮತ್ತು ಚಲನಚಿತ್ರರಂಗದಲ್ಲಿ.
೧೯೭೬ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಈ ಅಭಿನೇತ್ರಿ ನಟಿಸಿದ ಮೊದಲ ಚಿತ್ರ ಸಾಮಾಜಿಕ ವಸ್ತುವನ್ನು ಒಳಗೊಂಡ ‘ಹರಕೆ’. ಉತ್ತರ ಕರ್ನಾಟಕದಲ್ಲಿ ಚಾಲ್ತಿಯಲ್ಲಿದ್ದ ದುಷ್ಟ ಬಸವಿ ಪದ್ಧತಿಯ ಕರಾಳ ಮುಖಗಳನ್ನು ಪರಿಚಯಿಸುವ ಕಥಾಹಂದರ ಈ ಚಿತ್ರದ್ದು. ಭಕ್ತ ಸಿರಿಯಾಳ, ತಾಯಿಯ ಆಸೆ, ಗುಣನೋಡಿ ಹೆಣ್ಣುಕೊಡು, ಪಟ್ಟಣಕ್ಕೆ ಬಂದ ಪತ್ನಿಯರು, ಕಪ್ಪುಕೊಳ, ಬೆಂಕಿ, ಪ್ರಥಮ ಉಷಾ ಕಿರಣ ಇವೇ ಮೊದಲಾದ ಚಿತ್ರಗಳಲ್ಲಿ ಪ್ರಮೀಳಾ ಅವರದು ಮನೋಜ್ಞ ಅಭಿನಯ, ನಿರ್ವಹಿಸಿದ ಪಾತ್ರಕ್ಕೆ ನ್ಯಾಯ ಒದಗಿಸಿಕೊಡುವ ಸಜ್ಜನಿಕೆ ಅವರದು.
ನಟಿಯಾಗಿ ಖ್ಯಾತಿ ಪಡೆದ ಮೇಲೆ ರಂಗಭೂಮಿಗೂ ಕಾಲಿಟ್ಟರು. ಮರಾಠಿಯ ವಿಜಯ್ ತೆಂಡೂಲ್ಕರ್ ಅವರ ಯಶಸ್ವಿ ನಾಟಕ ಸಖರಾಮ್‌ ಬೈಂಡ‌ ಕನ್ನಡಾನುವಾದ ನಾಟಕದ ಮೂಲಕ ರಂಗಭೂಮಿ ಪ್ರವೇಶ. ಉತ್ತರ ಕರ್ನಾಟಕದ ಅನೇಕ ವೃತ್ತಿರಂಗ ಕಂಪೆನಿಗಳ ನಾಟಕಗಳಲ್ಲಿ ಅಭಿನಯ. ಜೊತೆಗೆ ಕಿರುತೆರೆಯ ಧಾರಾವಾಹಿಗಳಲ್ಲೂ ನಟಿಸಿದ ಅನುಭವ. ಕನ್ನಡ, ತಮಿಳು, ತೆಲುಗು ಮತ್ತು ತುಳು ಭಾಷೆಗಳಲ್ಲಿ ೩೫೦ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿರುವುದು ಪ್ರಮೀಳಾ ಅವರ ಸಾಧನೆ.
ಸ್ವತಃ ಅಭಿನಯಿಸಿ, ನಿರ್ಮಿಸಿರುವ ‘ತಾಯಿ’ ಚಿತ್ರಕ್ಕೆ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿಗಳ ಗೌರವ ಸಂದಿರುವುದು ಪ್ರಮೀಳಾ ಜೋಷಾಯ್ ಅವರ ಕಲಾಪ್ರೌಢಿಮೆಗೆ ಸಿಕ್ಕಿರುವ ಗೌರವ. ಇವರು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರು. ಸೆನ್ಸಾರ್ ಮಂಡಳಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿರುವರು.
ಪತಿ ನಟ ಸುಂದರ್ ರಾಜ್ ಅವರೊಂದಿಗೆ ಕನ್ನಡ ಚಿತ್ರರಂಗದಲ್ಲಿ ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ಪ್ರತಿಭಾವಂತ ಕಲಾವಿದೆ ಶ್ರೀಮತಿ ಪ್ರಮೀಳಾ ಜೋಷಾಯ್.

Categories
ಚಲನಚಿತ್ರ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಡಿ. ಶ್ರೀನಿವಾಸ್ ಕಡವಿಗೆರೆ

ಕ್ಯಾಮೆರಾ ಕಲೆಯನ್ನು ಕಸುಬಾಗಿ ಸ್ವೀಕರಿಸಿ ಆ ಕ್ಷೇತ್ರದಲ್ಲಿ ಬದುಕನ್ನು ಕಟ್ಟಿಕೊಂಡವರು ಡಿ.ಶ್ರೀನಿವಾಸ್‌ ಕಡವಿಗೆರೆ
ಅವರು.
೧೯೬೬ರಲ್ಲಿ ಶ್ರೀಯುತರ ಜನನ. ಎಸ್ಸೆಸ್ಸೆಲ್ಸಿವರೆಗೆ ವಿದ್ಯಾಭ್ಯಾಸ. ಬಳಿಕ ಕ್ಯಾಮೆರಾದ ಕಲೆಗಾರಿಕೆಯಲ್ಲಿ ನೈಮಣ್ಯತೆ ಸಂಪಾದನೆ. ಚಲನಚಿತ್ರ ಮತ್ತು ಧಾರಾವಾಹಿಗಳ ಕ್ಯಾಮೆರಾ ಸಹಾಯಕರಾಗಿ ಸೇರ್ಪಡೆ.
ತೋಟಗಾರಿಕೆ ಇಲಾಖೆಗಾಗಿ ನಿರ್ಮಿಸಲಾದ ಸಾಕ್ಷ್ಯಚಿತ್ರಕ್ಕೆ ಕ್ಯಾಮೆರಾ ಸಹಾಯಕರಾಗಿ ದುಡಿದಿರುವ ಶ್ರೀನಿವಾಸ್ ಅವರು ಆಹಾ ಬ್ರಹ್ಮಚಾರಿ, ಮುದ್ದಿನ ಮಾವ, ಶಿರಡಿ ಸಾಯಿಬಾಬಾ ಮತ್ತು ಪ್ರೇಮ ಸಿಂಹಾಸನ ಚಿತ್ರಗಳಿಗೂ ಕ್ಯಾಮೆರಾ ಸಹಾಯಕರಾಗಿ ಸೇವೆ ಸಲ್ಲಿಸಿದ್ದಾರೆ.
ಕಥೆಗಾರ, ಮಾಯಾಮೃಗ, ದಶಾವತಾರ, ಅವಲೋಕನ, ಭಾಗ್ಯ, ಪುಣ್ಯ, ಮನೆಯೊಂದು ಮೂರು ಬಾಗಿಲು ಸೇರಿದಂತೆ ೧೫ಕ್ಕೂ ಹೆಚ್ಚು ಕಿರುತೆರೆಯ ಧಾರಾವಾಹಿಗಳಿಗೂ ಕ್ಯಾಮೆರಾ ಸಹಾಯಕರಾಗಿ ದುಡಿದಿರುವರು.
ಸಾವಿರಕ್ಕೂ ಹೆಚ್ಚಿನ ಕಂತುಗಳಲ್ಲಿ ಪ್ರಸಾರಗೊಂಡ ‘ವಠಾರ ಧಾರಾವಾಹಿಯ ಛಾಯಾಗ್ರಾಹಕರೂ ಆಗಿರುವ ಶ್ರೀನಿವಾಸ್ ಅ ಮೂಲಕ ‘ಸಾವಿರದ ಸರದಾರ’ರು ಕೀರ್ತಿಗೆ ಭಾಜನರು.
ಕ್ಯಾಮೆರಾವನ್ನು ಕಲ್ಪನೆಗೆ ಅನುಗುಣವಾಗಿ ದುಡಿಸಿಕೊಳ್ಳುವ ಕಲೆಯನ್ನು ಮೈಗೂಡಿಸಿಕೊಂಡಿರುವವರು ಶ್ರೀ ಡಿ.ಶ್ರೀನಿವಾಸ್ ಕಡವಿಗೆರೆ.

Categories
ಚಲನಚಿತ್ರ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬಸಂತ ಕುಮಾರ ಪಾಟೀಲ

ಉದ್ದಿಮೆದಾರ, ಚಲನಚಿತ್ರ ನಿರ್ಮಾಪಕ, ವಿತರಕ, ನಟರಾಗಿ ಪರಿಚಿತರಾದವರು ಬಸಂತ ಕುಮಾರ ಪಾಟೀಲ ಅವರು. ಬಾಗಲಕೋಟೆ ಜಿಲ್ಲೆಯ ಹುನಗುಂದದವರಾದ ಪಾಟೀಲರು ಚಿತ್ರರಂಗದಲ್ಲಿ ಹೆಸರು ಮಾಡುವ ಮುನ್ನ ಸಿಮೆಂಟ್ ತಯಾರಿಕಾ ರಂಗದಲ್ಲಿ ಯಶಸ್ಸು ಕಂಡವರು. ಸಿಮೆಂಟ್ ಪೈಪ್, ಕಂಬಗಳ ತಯಾರಿಕೆಯ ಮೂಲಕ ‘ವಿಜಾಪುರ ಸನ್ ಪೈಪ್’ ಉದ್ದಿಮೆ ಸ್ಥಾಪನೆ. ವಿಜಾಪುರ ನಗರಕ್ಕೆ ನೀರು ಸರಬರಾಜು ಕಲ್ಪಿಸುವ ಯೋಜನೆಯಡಿ ನಿರ್ವಹಿಸಿದ ಪಾತ್ರ ವಿಶಿಷ್ಟವಾದುದು.
ಪಾಟೀಲರು ನಿರ್ಮಿಸಿದ, ಗಿರೀಶ ಕಾಸರವಳ್ಳಿ ನಿರ್ದೇಶನದ ‘ನಾಯಿ ನೆರಳು’ ಹಾಗೂ ‘ಗುಲಾಬಿ ಟಾಕೀಸ್’ ಚಿತ್ರಗಳಿಂದ ಕನ್ನಡಕ್ಕೆ ಅಂತಾರರಾಷ್ಟ್ರೀಯ ಮನ್ನಣೆ ಲಭಿಸಿದೆ.
ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿಯೂ ಕೆಲಸ ಮಾಡಿರುವ ಶ್ರೀ ಬಸಂತ ಕುಮಾರ ಪಾಟೀಲ್‌ರದು ಮಹಾತ್ಯಾಗ, ಮಾಂಗಲ್ಯಭಾಗ್ಯ, ಅನುರಾಗ ಬಂಧನದಂತಹ ಉತ್ತಮ ಚಿತ್ರಗಳನ್ನು ನೀಡಿದ ಹೆಗ್ಗಳಿಕೆ.

Categories
ಚಲನಚಿತ್ರ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಪಿ. ಸಾಯಿಕುಮಾರ್

ತಮ್ಮ ೧೧ನೆಯ ವಯಸ್ಸಿನಲ್ಲಿಯೆ ರಂಗಭೂಮಿಯ ನಂಟು ಬೆಳೆಸಿಕೊಂಡು, ಇಂದು ೫೦ ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸಿದ ಜನಪ್ರಿಯ ಸಿನಿಮಾ ನಟ ‘ಡೈಲಾಗ್‌ಕಿಂಗ್’ ಶ್ರೀ ಸಾಯಿಕುಮಾರ್.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯವರಾದ ಶ್ರೀ ಸಾಯಿಕುಮಾರ್ ಅವರು ತಂದೆ ತಾಯಿ ಕೂಡ ರಂಗಭೂಮಿಯಿಂದ ಬಂದವರು. ತಂದೆ ಪಿ.ಜೆ. ಶರ್ಮ ತಾಯಿ ಕೃಷ್ಣಜ್ಯೋತಿ, ೧೯೬೧ರಲ್ಲಿ ಜನಸಿದ ಶ್ರೀ ಸಾಯಿಕುಮಾರ್ ಅವರು ಎಂ.ಎ. ಪದವೀಧರರು.
ತಂದೆ ತಾಯಿ ಜೊತೆ ರಂಗಭೂಮಿಯ ಒಡನಾಟದಲ್ಲಿಯೇ ಬೆಳೆದವರು. ೧೯೯೩ ನೇ ಇಸವಿಯಲ್ಲಿ ಬೆಳ್ಳಿತೆರೆಗೆ ಪ್ರವೇಶ
ಮಾಡಿದರು.
ಪೊಲೀಸ್ ಸ್ಟೋರಿ, ಲಾ ಅಂಡ್ ಆರ್ಡರ್, ಇಂಡಿಪೆಂಡನ್ಸ್ ಡೇ, ಮಹಾಸಾದ್ವಿ ಮಲ್ಲಮ್ಮ, ನಾಗದೇವತೆ, ರೇಣುಕಾದವಿ ಮಹಾತ್ಯೆ, ಅಗ್ನಿ ಐ.ಪಿ.ಎಸ್., ದುರ್ಗದ ಹುಲಿ ಮೊದಲಾದ ೫೦ ಚಲನಚಿತ್ರಗಳಲ್ಲಿ ಅಭಿನಯಿಸಿದ ಹೆಗ್ಗಳಿಕೆ ಇವರದು. ಶ್ರೀ ಸಾಯಿಕುಮಾರ್ ಅವರು ಅಮೋಘವಾಗಿ ಅಭಿನಯಿಸಿದ ‘ಶ್ರೀ ಕ್ಷೇತ್ರ ಕೈವಾರ ತಾತಯ್ಯ” ಅತ್ಯುತ್ತಮ ಚಿತ್ರವೆಂದು ಪ್ರಶಸ್ತಿ ಪಡೆದು ಅಪಾರ ಜನಮನ್ನಣೆ ಗಳಿಸಿದೆ.
ಕಂಚಿನ ಕಂಠದಲ್ಲಿ, ಶ್ರೇಷ್ಠ ಶೈಲಿಯಲ್ಲಿ, ಸ್ಪಷ್ಟ ಉಚ್ಚಾರದೊಡನೆ ಪಾತ್ರದ ಸಂಭಾಷಣೆಯನ್ನು ನಿರ್ವಹಿಸುವ ಇವರ ರೀತಿ ಪ್ರಶಂಸನೀಯ. ಸಿನೇಮಾ ಪ್ರೇಕ್ಷಕರು ಪ್ರೀತಿಯಿಂದ ಇವರಿಗಿರುವ ಬಿರುದು ‘ಡೈಲಾಗ್ ಕಿಂಗ್’.
ಸಿನಿಮಾ ಪಾತ್ರಕ್ಕೆ ಜೀವತುಂಬುವ ಅಪ್ರತಿಮ ಕಲಾವಿದ ಶ್ರೀ ಪಿ. ಸಾಯಿಕುಮಾರ್.

Categories
ಚಲನಚಿತ್ರ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ

ಭೌಗೋಳಿಕ ಮತ್ತು ಭಾಷೆಗಳ ಎಲ್ಲೆ ಮೀರಿದ ಸಾಧನೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರದು. ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕೊನೆಟಮ್ಮಪೇಟದಲ್ಲಿ ೧೯೪೬ರ ಜೂನ್ ೪ರಂದು ಜನನ, ತೆಲುಗು ಚಿತ್ರರಂಗದ ಮೂಲಕ ಗಾಯನ ಕ್ಷೇತ್ರಕ್ಕೆ ೧೯೬೬ರಲ್ಲಿ ಪದಾರ್ಪಣೆ. ಒಟ್ಟು ೩೯ ಸಾವಿರಕ್ಕೂ ಅಧಿಕ ಗೀತೆಗಳ ಸರದಾರರು ಶ್ರೀಯುತರು. ಕನ್ನಡ, ಮಾತೃಭಾಷೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಭಾವಪರವಶತೆಯಿಂದ ಹಾಡಿರುವರು. ಎಸ್‌ಪಿಬಿ ಅವರ ದಾಖಲೆಗಳು ಹತ್ತು-ಹಲವು. ೩೫ ವರ್ಷಗಳ ಸೇವೆ ಸಲ್ಲಿಸಿರುವ ಅವರು ೧೯೮೧ರ ಫೆಬ್ರವರಿ ೮ರಂದು ಬೆಂಗಳೂರಿನಲ್ಲಿ ಬೆಳಗಿನ ೯ರಿಂದ ರಾತ್ರಿ ೯ರವರೆಗೂ ೧೭ ಹಾಡುಗಳ ಧ್ವನಿ ಮುದ್ರಣದಲ್ಲಿ ಭಾಗವಹಿಸಿದ್ದು ಇಂದಿಗೂ ಒಂದು ಅದ್ಭುತ ದಾಖಲೆ.
ಹಿನ್ನೆಲೆ ಗಾಯನ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ‘ಗಾನಯೋಗಿ ಪಂಚಾಕ್ಷರಿ ಗವಾಯಿ’ ಚಿತ್ರಕ್ಕಾಗಿ ಹಂಸಲೇಖ ಸಂಗೀತ ನಿರ್ದೇಶನದಲ್ಲಿ ಹಾಡಿದ ಗೀತೆಗೆ ೧೯೯೫ರಲ್ಲಿ ರಾಷ್ಟ್ರೀಯ ಪ್ರಶಸ್ತಿ ಗೌರವ. ೧೯೯೯ರಲ್ಲಿ ಆಂಧ್ರದ ಪೊಟ್ಟಿ ಶ್ರೀರಾಮುಲು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗೌರವ, ೨೦೦೧ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಸಂದಿದೆ. ಹಿಂದಿಯ ‘ಏಕ್ ದುಜೇ ಕೇ ಲಿಯೇ’ಚಿತ್ರವೂ ಸೇರಿದಂತೆ ಒಟ್ಟು ಆರು ಬಾರಿ ರಾಷ್ಟ್ರೀಯ ಪ್ರಶಸ್ತಿ ರಾಜ್ಯದ ‘ಸಂಗೀತಾ ಗಂಗಾ’ ಪ್ರಶಸ್ತಿ, ಅನೇಕ ಬಾರಿ ಆಂಧ್ರ ಸರ್ಕಾರದ ನಂದಿ ಪ್ರಶಸ್ತಿ ಇವರಿಗೆ ಸಂದ ಗೌರವಗಳು.
ಅವರು ನಡೆಸಿಕೊಡುವ ‘ಎದೆ ತುಂಬಿ ಹಾಡುವೆನು’ ಎಂಬ ಕನ್ನಡದ ಪ್ರತಿಭಾ ಶೋಧ ಕಾರ್ಯಕ್ರಮ ಜನಪ್ರಿಯತೆ ಪಡೆದಿದೆ. ತಮ್ಮ ಹಾಡುಗಳ ಮೂಲಕ ಕನ್ನಡ ಜನರ ಮೆಚ್ಚುಗೆಗೆ ಪಾತ್ರರಾಗಿರುವ ಹೃದಯವಂತ ಹಿನ್ನೆಲೆ ಗಾಯಕರು ಡಾ. ಎಸ್.ಪಿ.ಬಾಲಸುಬ್ರಹ್ಮಣ್ಯಂ.

Categories
ಚಲನಚಿತ್ರ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಸ್.ಕೆ. ಭಗವಾನ್ (ದೊರೆ-ಭಗವಾನ್)

ಕಾದಂಬರಿ ಆಧಾರಿತ ಚಿತ್ರಗಳನ್ನು ನಿರ್ಮಿಸುವ ಮೂಲಕ ಕನ್ನಡ ಜನತೆಗೆ ಸದಭಿರುಚಿಯ ಚಿತ್ರಗಳನ್ನು ನೀಡಿದ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಜೋಡಿಯಲ್ಲಿ (ದೊರೆ-) ಭಗವಾನರೂ ಒಬ್ಬರು.
೭೪ ವರ್ಷದ ಶ್ರೀಯುತರು ಮೂಲತಃ ಬೆಂಗಳೂರಿನವರು. ‘ಕರ್ನಾಟಕ ನಾಟಕ ಸಭಾ’ದ ಮೂಲಕ ವೃತ್ತಿರಂಗಭೂಮಿ ಪ್ರವೇಶ. ಆನಂತರ ಚಿತ್ರ ನಿರ್ಮಾಪಕರಾಗಿ, ನಿರ್ದೇಶಕ, ಸಹ ನಿರ್ದೇಶಕರಾಗಿ ದುಡಿದ ಅವರಿಂದ ಕನ್ನಡ ಚಿತ್ರರಂಗಕ್ಕೆ ಸಂದ ಕಾಣಿಕೆ ಅಪಾರ, ಅನನ್ಯ.
ಅವರು ನಿರ್ದೇಶಿಸಿದ ೪೮ ಚಿತ್ರಗಳಲ್ಲಿ ೨೦ ಚಿತ್ರಗಳು ಕನ್ನಡದ ಪ್ರಸಿದ್ಧ ಲೇಖಕರ ಕಾದಂಬರಿಗಳನ್ನು ಆಧರಿಸಿ ನಿರ್ಮಿಸಿದವು ಎಂಬುದು ಗಮನಾರ್ಹ ಸಂಗತಿ. ಭಗವಾನರ ನಿರ್ದೇಶನದ ‘ಸಂಧ್ಯಾರಾಗ’ ಚಿತ್ರಕ್ಕೆ ಅತ್ಯುತ್ತಮ ಚಿತ್ರ ಮತ್ತು ಅತ್ಯುತ್ತಮ ನಿರ್ದೇಶನ ವಿಭಾಗಗಳಲ್ಲಿ ರಾಷ್ಟ್ರಪ್ರಶಸ್ತಿಯ ಗರಿ. ಎರಡು ಕನಸು, ಚಂದನದ ಗೊಂಬೆ, ಮುನಿಯನ ಮಾದರಿ, ಹೊಸ ಬೆಳಕು, ಜೀವನ ಚೈತ್ರ ಚಿತ್ರಗಳಿಗೆ ರಾಜ್ಯ ಪ್ರಶಸ್ತಿಯ ಗೌರವ.
೧೯೭೦-೮೦ರ ದಶಕದಲ್ಲಿ ಕನ್ನಡ ಚಿತ್ರರಂಗ ಕಂಡ ಅನೇಕ ಉತ್ತಮ ಚಿತ್ರಗಳ ಪೈಕಿ ಶ್ರೀಯುತರು ನಿರ್ಮಿಸಿದ ಚಿತ್ರಗಳೂ ಉಂಟು. ಡಾ. ರಾಜ್‌ಕುಮಾರ್ ಮತ್ತು ಅನಂತನಾಗ್ ಅವರಂಥ ಕಲಾವಿದರನ್ನು ರೂಪಿಸುವಲ್ಲಿ ದೊರೆ-ಭಗವಾನ್ ನಿರ್ದೇಶಕದ್ವಯರ ಕಾಣಿಕೆ ಹಿರಿದು.
ಸದ್ಯ ಶ್ರೀಯುತರು, ಡಾ. ರಾಜ್‌ಕುಮಾರ್ ಮತ್ತು ಪಾರ್ವತಮ್ಮ ರಾಜ್‌ಕುಮಾರ್ ಅವರು ಮೈಸೂರಿನಲ್ಲಿ ಸ್ಥಾಪಿಸಿರುವ ‘ಶಕ್ತಿಧಾಮ’ ಮಹಿಳಾ ಪುನರ್ವಸತಿ ಕೇಂದ್ರದ ಸ್ಥಾಪಕ ಟ್ರಸ್ಟಿ, ಇಳಿವಯಸ್ಸಿನಲ್ಲೂ ಚಿತ್ರರಂಗದ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುವವರು ಶ್ರೀ ಭಗವಾನ್.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಶ್ರೀ ಎಸ್.ಎಂ. ಶಂಕರಾಚಾರ್ಯ

ಸಾಂಪ್ರದಾಯಿಕ ಶಿಲ್ಪಕಲೆಯ ವಿವಿಧ ಪ್ರಕಾರಗಳಲ್ಲಿ ಪರಿಣತಿ ಪಡೆದಿರುವ ಶಿಲಾ ಹಾಗೂ ಲೋಹ ಶಿಲ್ಪಿ ಶ್ರೀ ಎಸ್.ಎಂ. ಶಂಕರಾಚಾರ್ಯ ಅವರು.
ಕೋಲಾರ ಜಿಲ್ಲೆಯ ಶಿವಾರಪಟ್ಟಣದವರು. ೧೨.೦೭.೧೯೨೧ರಲ್ಲಿ ಜನನ. ತಂದೆ ಶ್ರೀ ಮಾಳಿಗಾಚಾರ್ಯರಿಂದ ಮಾರ್ಗದರ್ಶನ. ಅಮರಕೋಶ, ಸಂಸ್ಕೃತ, ಶಿಲ್ಪ, ಶಿಲ್ಪಾಗಮ ಮತ್ತು ಜ್ಯೋತಿಷ್ಯಶಾಸ್ತ್ರದಲ್ಲಿ ಅನುಭವ. ಹೆಸರಾಂತ ಶಿಲ್ಪಿಗಳಾದ ಶ್ರೀ ಚನ್ನಪ್ಪಾಚಾರ್ಯರಲ್ಲಿ ಶಿಷ್ಯವೃತ್ತಿ.
ಶಿಲ್ಪಾಗಮ ರೀತ್ಯಾ ಇವರು ನಿರಿಸಿಕೊಡುವ ವಿಗ್ರಹಗಳಿಗೆ ವಿಶೇಷ ಬೇಡಿಕೆ ಇದೆ. ಮಧುಗಿರಿಯ ಸರ್ಕಾರಿ ಕಾಲೇಜಿಗೆ ವೀಣಾ ಸರಸ್ವತಿ ವಿಗ್ರಹ, ಚಿಕ್ಕಬಳ್ಳಾಪುರದ ವಿದ್ಯುತ್ ಇಲಾಖೆಗೆ ಶ್ರೀ ಚಾಮುಂಡೇಶ್ವರಿ ವಿಗ್ರಹ, ಲಿಂಗರಾಜಪುರಂನ ಶಂಕರಮಠಕ್ಕೆ ರಾಜಗೋಪುರದ ಹಿತ್ತಾಳೆ ಕಳಸಗಳು, ಬಂಗಾರಪೇಟೆಯ ಬಸವೇಶ್ವರ ದೇವಾಲಯಕ್ಕೆ ಬಸವೇಶ್ವರ ವಜ್ರಾಂಗಿ ಮತ್ತು ಬಾಗಿಲುವಾಡಗಳು, ಅನೇಕ ಊರುಗಳ ಬೇಡಿಕೆಗಳಂತೆ ಶ್ರೀ ವಿಷ್ಣುಸಂಪುಟ, ದೇವಿಸಂಪುಟ ಹಾಗೂ ಶಿವ ಸಂಪುಟ ಶಿಲಾವಿಗ್ರಹಗಳನ್ನು ರಚಿಸಿಕೊಟ್ಟಿರುತ್ತಾರೆ.
ತಮ್ಮ ಕಲಾಸಾಧನೆಗೆ ಅನೇಕ ಬೆಳ್ಳಿಪದಕಗಳನ್ನು, ಗೌರವ ಸನ್ಮಾನಗಳನ್ನು ಪಡೆದಿದ್ದಾರೆ. ಶಿವಾರಪಟ್ಟಣದಲ್ಲಿರುವ ಶಿಲ್ಪಕಲಾ ಸಹಕಾರ ಸಂಘದ ಕಾರ್ಯದರ್ಶಿಯಾಗಿ ೧೨ ವರ್ಷ ಸೇವೆಸಲ್ಲಿಸಿದ್ದಾರೆ.
೨೦೦೩ನೇ ಸಾಲಿನ ಶಿಲ್ಪಕಲಾ ಅಕಾಡೆವಿಯ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ ಶಿಲ್ಪಿ ಶ್ರೀ ಎಸ್. ಎಂ. ಶಂಕರಾಚಾರ್ಯ ಅವರು

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಶ್ರೀ ಕೋಟೆಮೂಲೆ ಗುಣವಂತೇಶ್ವರ ಭಟ್

ಶಿಲ್ಪಿಯಾಗಿ, ಶಿಲ್ಪಕಲಾ ಶಿಕ್ಷಕರಾಗಿ ಕೋಟೆಮೂಲೆ ಗುಣವಂತೇಶ್ವರ ಭಟ್ ಅವರು ಮಾಡಿದ ಕೆಲಸ ಅನುಪಮ. ಉಡುಪಿ ಜಿಲ್ಲೆ ಕಾರ್ಕಳ ಸಮೀಪದ ಹಿರಿಯಂಗಡಿಯಲ್ಲಿ ೧೯೬೦ರಲ್ಲಿ ಜನನ. ಹತ್ತನೇ ತರಗತಿವರೆಗೆ ವಿದ್ಯಾಭ್ಯಾಸ. ತಂದೆ ಶಂಕರ ಭಟ್ಟರಿಂದ ಬಾಲ್ಯದಿಂದಲೇ ಮರದ ಕೆತ್ತನೆ ತರಬೇತಿ. ೧೯೮೫ರಲ್ಲಿ ಪುತ್ತೂರಿನಲ್ಲಿ ವಿವೇಕಾನಂದ ವುಡ್ ಆರ್ಟ್ಸ್ ಸಂಸ್ಥೆ ಆರಂಭಿಸಿ, ಹತ್ತಾರು ಮಂದಿಗೆ ಉದ್ಯೋಗದಾತರಾದವರು ಗುಣವಂತೇಶ್ವರ ಭಟ್. ೧೯೯೧ರಲ್ಲಿ ಬಿಡದಿಯ ಕೆನರಾ ಬ್ಯಾಂಕಿನ ಕುಶಲಕರ್ಮಿಗಳ ತರಬೇತಿ ಸಂಸ್ಥೆಯಲ್ಲಿ ಗುರುಗಳಾದ ಅಶೋಕ ಗುಡಿಗಾರ ಮತ್ತು ಜಿ.ಎಲ್.ಭಟ್ ಅವರ ಮಾರ್ಗದರ್ಶನದಲ್ಲಿ ಎರಡು ವರ್ಷಗಳ ಕಾಲ ಮರ ಮತ್ತು ಕಲ್ಲಿನ ಸಾಂಪ್ರದಾಯಿಕ ಕಲೆ ಅಭ್ಯಾಸ. ೧೯೯೭ರಲ್ಲಿ ಕಾರ್ಕಳದ ಸಿ.ಇ.ಕಾಮತ್ ಕುಶಲಕರ್ಮಿಗಳ ತರಬೇತಿ ಸಂಸ್ಥೆಯಲ್ಲಿ ಶಿಲ್ಪಕಲಾ ಶಿಕ್ಷಕರಾಗಿ ನೂರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಅನುಭವ ಶ್ರೀಯುತರದು.
ನಲ್ಲೂರು ಕೂಷ್ಮಾಂಡಿನಿ ಬಸದಿ ಸಮೀಪ ಐದೂವರೆ ಅಡಿ ಎತ್ತರದ ಆನೆ ನಿರ್ಮಾಣ, ರಾಮಚಂದ್ರಾಪುರ ಮಠಕ್ಕೆ ಕಲ್ಲಿನ ಹನುಮಂತ, ನಾಗನಕಟ್ಟೆ, ಬೆಳ್ಳಿಯ ಮಂಟಪ, ಮರದ ಸಿಂಹಾಸನ ರಚಿಸಿಕೊಟ್ಟಿರುವುದು ಗುಣವಂತೇಶ್ವರ ಭಟ್ ಅವರ ಹಿರಿಮೆ.
೧೯೯೪ರಲ್ಲಿ ಮೈಸೂರು ದಸರಾ ಪ್ರಶಸ್ತಿ ಪಡೆದಿರುವ ಶ್ರೀಯುತರು ಅನೇಕ ಶಿಬಿರಗಳಲ್ಲಿ, ಕಾರ್ಯಾಗಾರಗಳಲ್ಲಿ ಕಿರಿಯರಿಗೆ ಶಿಲ್ಪಕಲಾ ಕುಶಲತೆಯ ಅನುಭವವನ್ನು ಧಾರೆ ಎರೆದಿರುವರು.
ಮರದ ಕೆತ್ತನೆ ಕಲೆಯಲ್ಲಿ ಹಾಗೂ ಶಿಲ್ಪಕಲಾಕೃತಿಗಳ ನಿರ್ಮಾಣದಲ್ಲಿ ಪ್ರಾವೀಣ್ಯತೆ ಪಡೆದು ಈ ಎರಡೂ ಕ್ಷೇತ್ರದಲ್ಲಿ ಹೆಸರು ಮಾಡಿದವರು ಕೋಟೆಮೂಲೆ ಗುಣವಂತೇಶ್ವರ ಭಟ್.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಶ್ರೀ ಕೆ. ನಾರಾಯಣ ರಾವ್‌

ಮಲೆನಾಡಿನ ಮಣ್ಣಿನಲ್ಲಿ ಹುಟ್ಟಿ ಆ ಮಣ್ಣಿಗೆ ಜೀವ ತುಂಬುವ ಕಲಾವಂತಿಕೆಯನ್ನು ಪಡೆದ ಪ್ರತಿಭಾವಂತ ಕಲಾವಿದರು
ಕೆ.ನಾರಾಯಣ ರಾವ್ ಅವರು.
ಕಲೆ ಎಂದರೆ ತಪಸ್ಸು ಎಂದು ನಂಬಿದವರು ಈ ಕಲಾವಿದ. ಚಿಕ್ಕಂದಿನಿಂದಲೂ ಇದ್ದ ಕಲಾಸಕ್ತಿಯಿಂದ ಮಣ್ಣಿನಲ್ಲಿ ಗೊಂಬೆಗಳನ್ನು ತಯಾರಿಸುವ ಕಲೆ ಸಿದ್ಧಿ. ಮುಂದೆ ಸಿಮೆಂಟ್ ಮಾಧ್ಯಮದಲ್ಲಿ ಬೃಹದಾಕಾರದ ಶಿಲ್ಪಗಳನ್ನು, ಗೋಪುರಗಳನ್ನು ನಿರ್ಮಿಸಿ ಕರ್ನಾಟಕದಲ್ಲಿ ಮಾತ್ರವೇ ಅಲ್ಲದೆ ಗಡಿಯಾಚೆಗೂ ಕನ್ನಡದ ಕೀರ್ತಿ ಪತಾಕೆ ಹಾರಿಸಿದವರು ಶ್ರೀಯುತರು.
ಶಿವಮೊಗ್ಗದಲ್ಲಿ ೧೯೫೩ರಲ್ಲಿ ಜನನ. ಅವರಿಗೆ ಕಲೆ ವಂಶಪಾರಂಪರ್ಯವಾಗಿ ಬಂದ ಬಳುವಳಿ. ನಾರಾಯಣರಾವ್‌ ಅವರ ಮುತ್ತಜ್ಜ ತಿಪ್ಪಜ್ಜನವರು ರಚಿಸಿರುವ ‘ಶ್ರೀ ವಿಶ್ವರೂಪ ದರ್ಶನ’ ಕೃತಿ ಕರ್ನಾಟಕ ಸಾಂಪ್ರದಾಯಿಕ ಕಲೆಯ ಉತ್ಕೃಷ್ಟ ಕೃತಿ ಎಂಬ ಮನ್ನಣೆಗೆ ಪಾತ್ರ
ಸಾಂಪ್ರದಾಯಿಕ ಶಿಲ್ಪಗಳಿಗೂ ನೈಜತೆಯ ಸ್ಪರ್ಶ ನೀಡಿ ಯಶ ಕಂಡವರು ನಾರಾಯಣರಾವ್‌, ಹಿತಮಿತ ಆಭರಣ, ಪ್ರಮಾಣ ಬದ್ಧತೆ, ಮುಖದಲ್ಲಿನ ಭಾವ ಅವರ ಕೃತಿಗಳ ವೈಶಿಷ್ಟ್ಯ. ಅವರು ರಚಿಸಿದ ಬೃಹತ್ ಶಿಲ್ಪಗಳಲ್ಲಿ ಪ್ರಮುಖವಾದವು- ಕುಂದಾಪುರ ಹಂಗೂರಿನ ೮೫ ಅಡಿ ಎತ್ತರದ ವೀರಾಂಜನೇಯ ವಿಗ್ರಹ, ತುಮಕೂರಿನಲ್ಲಿ ಶ್ರೀ ರಾಮಲಕ್ಷ್ಮಣರನ್ನು ಹೊತ್ತ ೭೦ ಅಡಿ ಎತ್ತರದ ಪ್ರಸನ್ನಾಂಜನೇಯ ವಿಗ್ರಹಗಳು.
ವಿಶ್ವ ವಿಖ್ಯಾತ ಮೈಸೂರು ದಸರಾ ಮೆರವಣಿಗೆಗಾಗಿ ೧೯೯೯ರಲ್ಲಿ ಶಿವಮೊಗ್ಗ ಜಿಲ್ಲೆಗಾಗಿ ಅವರು ರಚಿಸಿಕೊಟ್ಟ ಈಸೂರು ದುರಂತ ಸ್ತಬ್ಧ ಚಿತ್ರಕ್ಕೆ ಪ್ರಥಮ ಬಹುಮಾನ ಸಂದಿದೆ.
ಸಿಮೆಂಟ್ ಮಾಧ್ಯಮದಲ್ಲಿ ಗೋಪುರ ಶಿಲ್ಪಗಳನ್ನು ರಚಿಸುವುದರಲ್ಲಿ ವಿಶೇಷ ಆಸಕ್ತಿ ತಳೆದು, ಅದನ್ನೇ ವೃತ್ತಿಯಾಗಿಸಿ ಸ್ವೀಕರಿಸಿದ ಶ್ರೀ ಕೆ.ನಾರಾಯಣ ರಾವ್ ಕಲೆಯೆಂಬುದು ನಿಂತ ನೀರಾಗದೆ, ಸದಾ ಹರಿಯುವ ನದಿಯಂತಿರಬೇಕು
ಎಂದು ಬಯಸುವವರು.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಶ್ರೀ ಎಸ್.ಪಿ.ಜಯಣ್ಣಾಚಾರ್

ಶಿಲ್ಪಕಲೆ, ಎರಕದ ವಿಗ್ರಹಗಳ ತಯಾರಿಕೆ, ಸ್ವರ್ಣ ಶಿಲ್ಪ ರಚನೆ ಹಾಗೂ ತಗಡಿನಲ್ಲಿ ರೇಖಿನ ಕೆಲಸ ಮಾಡುವುದರಲ್ಲಿ ನಿಷ್ಣಾತರೆನಿಸಿದ ಕಲಾವಿದರು ಎಸ್.ಪಿ.ಜಯಣ್ಣಾಚಾರ್ ಅವರು.
ಚಿಕ್ಕಮಗಳೂರು ಜಿಲ್ಲೆ ಬೀರೂರು ತಾಲ್ಲೂಕಿನ ಹುಲ್ಲೇನಹಳ್ಳಿಯಲ್ಲಿ ೧೯೪೭ರಲ್ಲಿ ಶ್ರೀಯುತರ ಜನನ. ತಂದೆ ಕೆ.ಎಸ್.ಪುಟ್ಟಶಾಮಾಚಾರ್ ಹೆಸರಾಂತ ಶಿಲ್ಪಿ ಮತ್ತು ನಕಾಶೆ ಕೆಲಸಗಾರರು. ಅವರಿಗೆ ಸಹಾಯಕರಾಗಿ ಕೆಲಸ ಮಾಡುತ್ತ ಹಲವು ಕಲಾಪ್ರಕಾರಗಳಲ್ಲಿ ಪರಿಣತಿ. ಜತೆಗೆ ಮೈಸೂರಿನ ಹೆಸರಾಂತ ಸ್ವರ್ಣಶಿಲ್ಪಿ ಚನ್ನಪ್ಪಾಚಾರ್ ಅವರ ಬಳಿ ನಕಾಶೆ ಕೆಲಸ ಕುರಿತ ಕೌಶಲ್ಯಗಾರಿಕೆ ಸಿದ್ಧಿ.
ಶ್ರೀ ಜಯಣ್ಣಾಚಾರ್‌ರವರು ತಯಾರಿಸಿರುವ ಮೂಡಬಿದರೆ ಜೈನಮಠದಲ್ಲಿರುವ ಜೈನ ತೀರ್ಥಂಕರ ಪ್ರತಿಮೆಗಳು, ಬೆಂಗಳೂರಿನ ವಿವಿಧೆಡೆ ಇರುವ ವಿಶ್ವೇಶ್ವರಯ್ಯ ಮತ್ತು ಮಹಾತ್ಮಾ ಗಾಂಧಿಯವರ ಎದೆಮಟ್ಟದ ಪ್ರತಿಮೆಗಳು, ತಮಿಳುನಾಡಿನ ಗೋಪಿನಾಥಂನಲ್ಲಿರುವ ಮಾರಿಯಮ್ಮನ ವಿಗ್ರಹಗಳು ವಿಶಿಷ್ಟ ಕಲೆಗಾರಿಕೆಯಿಂದ ಗಮನ ಸೆಳೆಯುತ್ತವೆ.
ಹಿತ್ತಾಳೆ, ಬೆಳ್ಳಿಯ ದ್ವಾರ ಕವಚಗಳು, ಪ್ರಭಾವಳಿಗಳು, ಕಿರೀಟ, ಆಭರಣಗಳು, ಕಾರ್ಕಳದ ಮಹಾಮ್ಮಾಯಿ ದೇವಾಲಯಕ್ಕೆ ಬಾಗಿಲುವಾಡ ತಯಾರಿಕೆ ಹಾಗೂ ಭೂತಾರಾಧನೆಗೆ ಬೇಕಾದ ದೈವಗಳಿಗೆ ತಲೆಪಟ್ಟಿ, ತಲೆಮಣಿ, ಕತ್ತಿ, ಗುರಾಣಿಗಳು, ಕವಚಗಳ ತಯಾರಿಕೆಯಲ್ಲಿ ಶ್ರೀಯುತರು ಕೈಚಳಕ ಮೆರೆದಿರುವರು.
ಸ್ವರ್ಣಶಿಲ್ಪ ತಯಾರಿಕೆಯಲ್ಲಿ ಹಾಗೂ ವಿಗ್ರಹಗಳ ಎರಕದ ಕಲೆಗಾರಿಕೆಯಲ್ಲೂ ಪರಿಣತರಿರುವ ಶ್ರೀಯುತರಿಗೆ ೧೯೮೮ರಲ್ಲಿ ಮೈಸೂರು ದಸರಾ ಪ್ರಶಸ್ತಿ, ಕರ್ನಾಟಕ ಕರಕುಶಲ ನಿಗಮದಿಂದ ರಾಜ್ಯಮಟ್ಟದ ಪ್ರಶಂಸಾ ಪತ್ರ, ಬೇಲೂರಿನಲ್ಲಿ ನಡೆದ ಶಿಲೋತ್ಸವದ ಅಮರಶಿಲ್ಪಿ ಜಕಣಾಚಾರಿ ಪ್ರಶಸ್ತಿ ಸಂದಿವೆ.
ಹಲವು ಕಲಾಪ್ರಕಾರಗಳಲ್ಲಿ ಕಲಾಕೃತಿಗಳ ನಿರ್ಮಾಣದ ಜತೆಗೆ ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಶಿಲ್ಪಕಲೆಯ ಪರಿಚಯ, ಪ್ರಾತ್ಯಕ್ಷಿಕೆ ನೀಡುತ್ತ ಕಲೆಯ ಪ್ರಸಾರ ಮಾಡುತ್ತಿರುವವರು ಶ್ರೀ ಜಯಣ್ಣಾಚಾರ್.

Categories
ಚಿತ್ರಕಲೆ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬಿ.ಜಿ.ಮಹಮದ್

ಕಳೆದ ಮೂವತ್ತೈದು ವರ್ಷಗಳಿಂದ ಕಲಾಕಾರರಾಗಿ, ಕಲಾಶಿಕ್ಷಕರಾಗಿ ಅವಿರತವಾಗಿ ದುಡಿಯುತ್ತಿರುವವರು ಬಿ.ಜಿ.ಮಹಮದ್ ಅವರು.
ಉಡುಪಿಯಲ್ಲಿ ೧೯೨೪ರಲ್ಲಿ ಜನನ, ಉಡುಪಿಯ ಮಂಗೇಶರಾಲಿ, ನಾರಾಯಣ ಪದ್ಮಸಾಲಿ ಅವರ ಬಳಿ ಹಲವು ವರ್ಷಗಳ ಕಾಲ ಕಲಾಭ್ಯಾಸ. ಬಳಿಕ ಅವರೇ ಸ್ಥಾಪಿಸಿದ ಬಿಜಿಎಂ ಲಲಿತಕಲಾ ಕಾಲೇಜಿನಲ್ಲಿ ೩೫ ವರ್ಷಗಳಿಂದ ಕಲಾಶಿಕ್ಷಕರಾಗಿ ಸೇವೆ.
ಶ್ರೀಯುತರು ರಚಿಸಿರುವ ಕಲಾಕೃತಿಗಳು ಅನೇಕ ಕಡೆ ಪ್ರದರ್ಶನ ಕಂಡಿವೆ. ಚಿತ್ರಕಲೆಯಲ್ಲಿ ಅವರು ಮಾಡಿರುವ ಕೆಲಸಕ್ಕಾಗಿ ಕರ್ನಾಟಕ ಲಲಿತ ಕಲಾ ಅಕಾಡೆಮಿಯಿಂದ ೧೯೮೦ರಲ್ಲಿ ಪ್ರಶಸ್ತಿ, ಬಹುಮಾನ ಪುರಸ್ಕೃತರು. ಜತೆಗೆ ಲಲಿತ ಕಲಾ ಅಕಾಡೆಮಿ ಸದಸ್ಯರಾಗಿ ಸೇವೆ.
ಮಂಗಳೂರಿನ ಸೆಂಟ್ರಲ್ ಮತ್ತು ಗ್ರೀನ್ ಸ್ಟುಡಿಯೋದಲ್ಲಿ ಕಲಾವಿದರಾಗಿರುವ ಶ್ರೀ ಬಿ.ಜಿ.ಮಹಮದ್ ಅವರು ಕೊಳಲುಗಾನ ಸಾಧಕರೂ ಹೌದು.

Categories
ಚಿತ್ರಕಲೆ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಯಶವಂತ ತಿಪ್ಪಾಜಿರಾವ್‌ ಹಿಬಾರೆ

ಬಡತನದ ಬೇಗೆಯಲ್ಲಿ ನೊಂದು ಬೆಂದರೂ ಛಾಯಾಚಿತ್ರ ಲೋಕದಲ್ಲಿ ಅರಳಿದ ಪ್ರತಿಭೆ ಯಶವಂತ ತಿಪ್ಪಾಜಿರಾವ್‌
ಹಿಬಾರೆ ಅವರು.
ಬೀದರ್ ಜಿಲ್ಲೆಯ ಹಳ್ಳಿಖೇಡ ಗ್ರಾಮದಲ್ಲಿ ಜನನ. ಕುಂಚಕಲೆ ಮತ್ತು ಛಾಯಾಚಿತ್ರ ಕಲಾ ಪ್ರಕಾರದಲ್ಲಿ ಕೃಷಿ ಮಾಡುತ್ತಿರುವ ಹಿಬಾರೆ ಅಪ್ಪಟ ಗ್ರಾಮೀಣ ಪ್ರತಿಭೆ.
೬೭ ವರ್ಷದ ಹಿಬಾರೆಯವರಿಗೆ ಕುಂಚಕಲೆ ದೈವದತ್ತವಾಗಿ ಒಲಿದು ಬಂದ ಕಲೆ. ಎಳೆವೆಯಿಂದಲೇ ಅದರ ಕಡೆ ಒಲವು ಹೆಚ್ಚು. ಬಾಲ್ಯದಲ್ಲಿ ಅವರ ಆಸೆ-ಆಸಕ್ತಿಗಳನ್ನು ಗಮನಿಸಿ ಮಾರ್ಗದರ್ಶನ ನೀಡುವ ಮೂಲಕ ಪ್ರೋತ್ಸಾಹಿಸಿದವರು ಅವರ ತಂದೆ. ಕನಸುಗಳಿಗೆ ಕುಂಚದಿಂದ ಬಣ್ಣ ತುಂಬಿ ಉತ್ತಮ ಕಲಾಕೃತಿಗಳನ್ನು ರಚಿಸಿ ಹಿರಿಯರಿಂದ ಭೇಷ್ ಎನಿಸಿಕೊಂಡವರು. ತಮ್ಮ ಒಂಬತ್ತನೇ ವಯಸ್ಸಿಗೇ ಉತ್ತಮ ಕಲಾವಿದರಾಗಿ ರೂಪುಗೊಂಡರು.
ಕಳೆದ ೪೨ ವರ್ಷದಿಂದ ಛಾಯಾಗ್ರಾಹಕರಾಗಿಯೂ ಸೇವೆ ಸಲ್ಲಿಸುತ್ತಿರುವ ಶ್ರೀಯುತ ಯಶವಂತ ತಿಪ್ಪಾಜಿರಾವ್‌ ಹಿಬಾರೆ ಎಲೆಮರೆಯ ಕಾಯಿಯಂತೆ ನೇಪಥ್ಯದಲ್ಲುಳಿದ ಅಪ್ರತಿಮ ಕಲಾ ಪ್ರತಿಭೆ.

Categories
ಚಿತ್ರಕಲೆ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಕೆ. ಚಂದ್ರನಾಥ ಆಚಾರ್ಯ

ಜಲವರ್ಣ, ತೈಲವರ್ಣ ಮತ್ತು ಇಲ್ಲಸ್ಟ್ರೇಟೆಡ್ ಮಾಧ್ಯಮಗಳಲ್ಲಿ ಸಮಾನ ಪ್ರಭುತ್ವ ಹೊಂದಿರುವ ಕಲಾವಿದ ಕೆ.ಚಂದ್ರನಾಥ
ಆಚಾರ್ಯ ಅವರು.
೧೯೪೯ರಲ್ಲಿ ಪುತ್ತೂರಿನ ಕಲಾವಿದರ ಕುಟುಂಬದಲ್ಲಿ ಜನನ. ಚಂದ್ರನಾಥರಿಗೆ ಅವರ ಅಜ್ಜ ಮಹಾಲಿಂಗಾಚಾರ್ಯರೇ ಕಲಾಜೀವನದ ಮೊದಲ ಗುರು, ಆದರ್ಶ, ಪ್ರೇರಕ ಶಕ್ತಿ, ಖ್ಯಾತ ಕಲಾವಿದ ದಿ.ಕೆ.ಕೆ.ಹೆಬ್ಬಾರ್‌ರವರ ಪ್ರೋತ್ಸಾಹದಿಂದ ಕಲಾಲೋಕ ಪ್ರವೇಶ, ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಶಿಷ್ಯ ವೇತನದಿಂದ ಎರಡು ವರ್ಷ ಕಾಲ ‘ಶಾಂತಿ ನಿಕೇತನ’ದಲ್ಲಿ ಗ್ರಾಫಿಕ್ಸ್ ಡಿಪ್ಲೊಮಾ ಅಭ್ಯಾಸ.
ಹಸಿವು, ತೃಷೆ, ಸಂತೋಷಗಳಂತಹ ಸುಪ್ತ ಆಕಾಂಕ್ಷೆಗಳು ಮತ್ತು ಸಾವನ್ನು ಕುರಿತು ಇರುವ ಭಯವನ್ನು ಮನಸ್ಸಿನ ಒಳಹೊಕ್ಕು ನೋಡಿ ಪೇಂಟಿಂಗ್ಸ್ ಮೂಲಕ ಬಿಂಬಿಸುವಲ್ಲಿ ಶ್ರೀಯುತರು ಪರಿಣಿತರು.
ಪ್ರಿಂಟ್‌ಮೇಕಿಂಗ್, ಪುಸ್ತಕಗಳ ರಕ್ಷಾಪುಟ ವಿನ್ಯಾಸದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಆಚಾರ್ಯರು. ಕಲಾತ್ಮಕ ಚಲನಚಿತ್ರಗಳಿಗೆ ಕಲಾನಿರ್ದೇಶನ ನೀಡಿದ ಖ್ಯಾತಿಯೂ ಅವರದು.
ಮೂರೂವರೆ ದಶಕಗಳಿಗೂ ಹೆಚ್ಚು ಕಾಲ ನಿಯತಕಾಲಿಕಗಳಲ್ಲಿ ಚಿತ್ರಕಲಾವಿದರಾಗಿ ಸೇವೆ. ಕುಂಚ ಕಲೆಯ ಶ್ರೀಮಂತಿಕೆಯನ್ನು ಪರಿಚಯಿಸಿಕೊಡುವ ಮೂಲಕ ನಿಯತಕಾಲಿಕಗಳಿಗೆ ವಿಭಿನ್ನ ಆಯಾಮ ನೀಡಿದ ಕೀರ್ತಿ ಅವರದು.
ಶ್ರೀಯುತರ ಸಾಧನೆಯನ್ನು ಪರಿಗಣಿಸಿ ಎರಡು ಬಾರಿ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ, ೨೦೦೪ರಲ್ಲಿ ನಾಡೋಜ ಹಡಪದ್‌ ಪ್ರಶಸ್ತಿ ಹಾಗೂ ಬೇಂದ್ರೆ ಸ್ಮಾರಕ ಸಂಘದಿಂದ ಗೌರವ ಸಂದಿದೆ. ದೇಶ ವಿದೇಶಗಳಲ್ಲಿ ಚಂದ್ರನಾಥ್ ಅವರ ಕಲಾಕೃತಿಗಳು ಪ್ರದರ್ಶನ ಕಂಡಿವೆ.
ಸ್ವಂತ ಕಲ್ಪನೆ, ಪರಿಶ್ರಮ ಮತ್ತು ಕುಶಲತೆಗಳ ಮೂಲಕ ವ್ಯಕ್ತಿತ್ವ ರೂಪಿಸಿಕೊಂಡಿರುವ ಚಂದ್ರನಾಥ ಆಚಾರ್ಯ ಕಿರಿಯ ತಲೆಮಾರಿನ ಕಲಾವಿದರಿಗೆ ಆದರ್ಶಪ್ರಾಯ.

Categories
ಚಿತ್ರಕಲೆ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಪ್ರೊ ವಿ.ಎಂ. ಶೋಲಾಪುರ್‌ಕ‌ರ್‌

ಕಾಷ್ಠಶಿಲ್ಪ ಮತ್ತು ಬಣ್ಣಗಳ ಮೂಲಕ ವಿಶಿಷ್ಟ ಕಲಾಕೃತಿಗಳನ್ನು ರೂಪಿಸುವ ಕಾಷ್ಠ ಚಿತ್ರಕಲಾ ಪ್ರಕಾರದ ಪ್ರಖ್ಯಾತ ಕಲಾವಿದರು ಪ್ರೊ. ವಿ.ಎಂ. ಶೋಲಾಪುರ್‌ಕ‌.
೧೯೩೧ರ ಸೆಪ್ಟೆಂಬರ್‌ನಲ್ಲಿ ಜನನ, ಸದ್ಯ ಮೈಸೂರು ನಿವಾಸಿ, ಮುಂಬಯಿಯ ನೂತನ ಕಲಾ ಮಂದಿರ, ಸರ್ ಜೆ.ಜೆ.ಸ್ಕೂಲ್ ಆಫ್ ಆರ್ಟ್, ಜಿ.ಡಿ. ಆರ್ಟ್ ಸಂಸ್ಥೆಗಳಲ್ಲಿ ಕಲಾ ಶಿಕ್ಷಣ ಅಭ್ಯಾಸ.
ಕಾಷ್ಠಶಿಲ್ಪ ಅವರ ಅಭಿವೃ ಮಾಧ್ಯಮ. ಫ್ರೀ ಪ್ರೆಸ್ ಜನರಲ್, ಟೈಮ್ಸ್ ಆಫ್ ಇಂಡಿಯಾ, ಮುಂಬಯಿಯ ಡೈಲಿ ಪತ್ರಿಕೆಗಳಿಗೆ ಕಲಾ ವಿಮರ್ಶಕರಾಗಿ ಕಾರ್ಯ ನಿರ್ವಹಿಸಿದ ಅನುಭವ ಅವರದು.
ಇಂದು ಅನೇಕ ಕಲಾವಿದರಿಗೆ ಕಲೆಯ ಶಿಕ್ಷಣ ನೀಡುತ್ತಿರುವ ಮೈಸೂರಿನ ಚಾಮರಾಜೇಂದ್ರ ದೃಶ್ಯ ಕಲಾ ಅಕಾಡೆಮಿ ಸ್ಥಾಪಕ ಡೀನ್ ಎಂಬ ಹಿರಿಮೆಯ ಶ್ರೀಯುತರಿಂದ ಕಾಷ್ಠ ಶಿಲ್ಪ ಕಲಾ ಪ್ರಕಾರದಲ್ಲಿ ನಿರಂತರ ಸಾಧನೆ ಸಾಗಿದೆ.
ಬೆಂಗಳೂರು, ಮುಂಬಯಿ, ಕೊಚ್ಚಿನ್, ಗೋವಾ ಮತ್ತಿತರ ಕಡೆ ಆಯಿಲ್ ಮತ್ತು ಟೆರಾ ಕೋಟಾ; ಮರ ಆಧಾರಿತ ಸಂಯೋಜನೆ, ಕೊಚ್ಚಿನ್‌ನಲ್ಲಿ ಮಾರ್‌ಕ್ವೆಂಟ್ರಿ ಪ್ರಕಾರದಲ್ಲಿ ಶೋಲಾಪುರ್‌ಕರ್‌ ಅವರು ತಯಾರಿಸಿದ ಕಲಾಕೃತಿಗಳು ಪ್ರದರ್ಶನ ಕಂಡಿವೆ.
ಪ್ರಕೃತಿ ದತ್ತವಾದ ವಸ್ತುಗಳೇ ಅವರ ಅಭಿವ್ಯಕ್ತಿ ಮಾಧ್ಯಮ. ಸಂಬಂಧಗಳ ರೂಪಾಂತರವನ್ನು ವಿಶಿಷ್ಟ ಸಂಯೋಜನೆಯ ಮೂಲಕ ತಮ್ಮ ಕಲಾಕೃತಿಗಳಲ್ಲಿ ಬಿಂಬಿಸುವ ಕಲಾವಿದ ಶ್ರೀ ಶೋಲಾಪುರ್‌ಕ‌ ಅವರು.

Categories
ಯಕ್ಷಗಾನ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಅರಳುಕುಪ್ಪೆ ಎಸ್.ನಂಜಪ್ಪ

ಬಾಲ್ಯದಿಂದಲೇ ಯಕ್ಷಗಾನ ಕಲೆಯಲ್ಲಿ ಸಿದ್ಧಿ ಪಡೆದು ಗುರುಪರಂಪರೆಯನ್ನು ಬೆಳೆಸಿಕೊಂಡು ಬಂದ ಭಾಗವತರು ಎ.ಎಸ್. ನಂಜಪ್ಪ ಅವರು.
ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ಅರಳಗುಪ್ಪೆ ಗ್ರಾಮದಲ್ಲಿ ೧೯೩೭ರಲ್ಲಿ ಶ್ರೀಯುತರ ಜನನ. ಎಸ್ಸೆಸ್ಸೆಲ್ಸಿವರೆಗೆ ವಿದ್ಯಾಭ್ಯಾಸ. ಯಕ್ಷಗಾನ ಬಯಲಾಟಕ್ಕೆ ಪ್ರಸಿದ್ಧಿ ಪಡೆದಿದ್ದ ಅರಳಗುಪ್ಪೆ ಗ್ರಾಮದ ಉತ್ಸಾಹಿ ಯುವಕರು ಸೇರಿಕೊಂಡು ಮೂರು-ನಾಲ್ಕು ತಂಡಗಳ ರಚನೆ, ವರ್ಷದಲ್ಲಿ ಹತ್ತರಿಂದ ಇಪ್ಪತ್ತು ಬಾರಿ ಯಕ್ಷಗಾನ ಬಯಲಾಟ ಆಡುತ್ತ ಅದೇ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಶ್ರೀಯುತರು.
ಮೊದಲಿಗೆ ಭಾಗವತ ಸಿದ್ದಲಿಂಗಪ್ಪ ಅವರ ಬಳಿ ಶಿಷ್ಯವೃತ್ತಿ. ಬಳಿಕ ಭಾಗವತರಾದ ದಿವಾಕರಾಚಾರ್ಯ, ಶಾಂತವೀರಪ್ಪ ಅವರ ಬಳಿ ದಕ್ಷಿಣಾದಿ ಧಾಟಿಯ ಯಕ್ಷಗಾನ ಕಲಿಕೆ.
ಯಕ್ಷಗಾನದಲ್ಲಿ ಅನೇಕ ಪಾತ್ರಗಳನ್ನು ನಿರ್ವಹಿಸುವುದರ ಜತೆಗೆ ಭಾಗವತರ ಜತೆಯಲ್ಲಿ ಹಿಮ್ಮೇಳದಲ್ಲಿ ಹಾಡುತ್ತ, ತಾಳ ಹಾಕುತ್ತ, ಶನಿಮಹಾತ್ಮ ಕಥೆ, ನಳದಮಯಂತಿ ಕಥೆ, ಸತ್ಯವ್ರತ, ಚೆನ್ನಬಸವ ಪುರಾಣ ಓದುತ್ತ ಬೆಳೆದವರು ನಂಜಪ್ಪ ಅವರು.
ಶ್ರೀಯುತರು ಅತ್ಯಂತ ಸಮರ್ಥವಾಗಿ ನಿಭಾಯಿಸುತ್ತಿದ್ದ ದಕ್ಷಯಜ್ಞದ ಬ್ರಹ್ಮನ ಪಾತ್ರ ಕಂಡು ಜಾನಪದ ತಜ್ಞರಾದ ಎಚ್.ಎಲ್‌ನಾಗೇಗೌಡರು, ಜೀ.ಶಂ.ಪರಮಶಿವಯ್ಯ ಅವರು ಬೆನ್ನು ತಟ್ಟಿ ಪ್ರೋತ್ಸಾಹಿಸಿರುವರು.
ಆಕಾಶವಾಣಿ ಮತ್ತು ದೂರದರ್ಶನ ಕಲಾವಿದರಾಗಿಯೂ ಶ್ರೀಯುತರು ಹತ್ತಾರು ಕಾರ್ಯಕ್ರಮಗಳನ್ನು ನೀಡಿರುವರು. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ಜಾನಪದ ಜ್ಞಾನ-ವಿಜ್ಞಾನ ಪ್ರಶಸ್ತಿ, ಕರ್ನಾಟಕ ಜಾನಪದ ಪರಿಷತ್‌ನಿಂದ ದೊಡ್ಡಮನೆ ಲಿಂಗೇಗೌಡ ಪ್ರಶಸ್ತಿಗಳಿಗೆ ಶ್ರೀಯುತರು ಭಾಜನರು.
ಯಕ್ಷಗಾನ ಬಯಲಾಟದಲ್ಲಿ ಸಾಧನೆ ಮಾಡುತ್ತ, ಶಿಷ್ಯವೃಂದವನ್ನು ಬೆಳೆಸುತ್ತ ಗುರುಪರಂಪರೆಯ ಉಳಿವಿಗೆ ಶ್ರಮಿಸುತ್ತಿರುವವರು ಶ್ರೀ ಎ.ಎಸ್.ನಂಜಪ್ಪ.

Categories
ಯಕ್ಷಗಾನ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಪಾತಾಳ ವೆಂಕಟರಮಣ ಭಟ್

ಸ್ತ್ರೀಯರು ರಂಗಭೂಮಿ, ಯಕ್ಷಗಾನ ಪ್ರಕಾರಕ್ಕೆ ಹೆಚ್ಚಾಗಿ ಪ್ರವೇಶಿಸದ ದಿನಗಳಲ್ಲಿ ಸ್ತ್ರೀ ಪಾತ್ರಗಳನ್ನು ನಿಭಾಯಿಸಿ ಸೈ ಎನಿಸಿಕೊಂಡವರು ಪಾತಾಳ ವೆಂಕಟರಮಣ ಭಟ್ಟ ಅವರು.
ದಕ್ಷಿಣ ಕನ್ನಡ ಜಿಲ್ಲೆಯವರಾದ ಪಾತಾಳ ವೆಂಕಟರಮಣ ಭಟ್ಟರು ಪುತ್ತೂರು ಕೃಷ್ಣಭಟ್ಟರಿಂದ ತೆಂಕುತಿಟ್ಟಿನ ಅಭ್ಯಾಸ. ಮುಲ್ಕಿಮೇಳ, ಸುರತ್ಕಲ್ ಮಹಾಮಾಯಿ ಮೇಳ, ಧರ್ಮಸ್ಥಳದ ಮಂಜುನಾಥೇಶ್ವರ ಯಕ್ಷಗಾನ ಮಂಡಳಿಗಳಲ್ಲಿ
ದುಡಿದಿರುವರು.
ರಂಭೆ, ಊರ್ವಶಿ, ಮೇನಕೆ, ಸತ್ಯಭಾಮೆ, ಸುಭದ್ರೆ, ದೌಪದಿ, ಮೀನಾಕ್ಷಿ, ಸ್ವಯಂಪ್ರಭೆಯಂತಹ ಸೌಂದರ್ಯದ ಪ್ರತೀಕವಾದ ಈ ಪಾತ್ರಗಳನ್ನು ರಂಗದ ಮೇಲೆ ಅಷ್ಟೇ ಪರಿಣಾಮಕಾರಿಯಾಗಿ ಅಭಿನಯಿಸಿದ ಹಿರಿಮೆಗೆ ಪಾತ್ರರು. ಬೇಲೂರಿನ ಶಿಲಾ ಬಾಲಿಕೆಯರ ಅಂಗಭಂಗಿಗಳನ್ನು ಬೇಲೂರಿಗೆ ಹೋಗಿ ಸ್ವತಃ ಅಭ್ಯಸಿಸಿ ಯಕ್ಷಗಾನದಲ್ಲಿ ಅಳವಡಿಸಿದವರು. ಸ್ತ್ರೀ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡುವ ೭೮ರ ಹರೆಯದ ಭಟ್ಟರಿಗೆ ಈಗಲೂ ಯಕ್ಷಗಾನವೇ ಬದುಕು. ಚೆನ್ನೈನ ಹಿಂದೂಧರ್ಮ ಸಂಘವು ಮಣಿವಿಳಾ ಬಿರುದು ನೀಡಿ ಗೌರವಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಎಡನೀರು ಮಠ, ಸ್ವರ್ಣ ಯಕ್ಷಗಾನ ಮಂಡಳಿ, ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ ಪುರಸ್ಕಾರ, ಕರಾವಳಿ ಯಕ್ಷಗಾನ ಮಂಡಳಿ, ಬಿ.ಬಿ.ಶೆಟ್ಟಿ ಪ್ರಶಸ್ತಿ, ಪಟ್ಟಾಜೆ ಪ್ರಶಸ್ತಿ, ದೇರಾಜೆ ಪ್ರಶಸ್ತಿ, ಕಲ್ಕೂರ ಪ್ರಶಸ್ತಿಗಳು, ಗೌರವಗಳು ಸಂದಿವೆ.
ತೆಂಕು ಬಡಗು ಎರಡೂ ತಿಟ್ಟುಗಳಲ್ಲಿ ವೇಷಗಳನ್ನು ಮಾಡಿ ಭಾವಾಭಿನಯ ಮತ್ತು ಮೋಹಕ ನೃತ್ಯ ಲಾಲಿತ್ಯಗಳಿಂದ ವೈವಿಧ್ಯಮಯ ವೇಷಗಳಲ್ಲಿ ಮೆರೆದ ನಾಡಿನ ಪ್ರತಿಭಾನ್ವಿತ ಯಕ್ಷಗಾನ ಕಲಾವಿದರು ಶ್ರೀ ಪಾತಾಳ ವೆಂಕಟರಮಣ ಭಟ್ಟರು.

Categories
ಯಕ್ಷಗಾನ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಸಣ್ಣಕ್ಕ ಬಂಗ್ಲೆಗುಡ್ಡೆ

ಅದ್ಭುತ ನೆನಪಿನ ಶಕ್ತಿಯ ಕಂಚಿನ ಕಂಠಸಿರಿಯ ಹಿರಿಯ ಜಾನಪದ ಪ್ರತಿಭೆ ಸಣ್ಣಕ್ಕ ಬಂಗ್ಲೆಗುಡ್ಡೆ.
ಪ್ರಕೃತಿ ಸಿರಿಯನ್ನು ನೋಡಿ, ಜಾನಪದ ಸಂಪತ್ತನ್ನು ಉಳಿಸಿ, ಬೆಳೆಸುತ್ತಲೇ ಬೆಳೆದ ಸಣ್ಣಕ್ಕ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಸಣ್ಣ ಗ್ರಾಮ ಕಸಬಾದವರು. ೮೫ ವರ್ಷ ವಯಸ್ಸಿನ ಸಣ್ಣಕ್ಕ ಜಾನಪದದ ಅಪ್ರತಿಮ ಪ್ರತಿಭೆ.
ಚಿಕ್ಕ ವಯಸ್ಸಿನಲ್ಲಿಯೇ ಮೌಖಿಕ ಸಾಹಿತ್ಯವನ್ನು ಆಸಕ್ತಿಯಿಂದ ಆಲಿಸುತ್ತಾ, ಅದನ್ನೇ ಅರಗಿಸಿಕೊಂಡು, ಸಂದರ್ಭ ಒದಗಿದಾಗಲೆಲ್ಲಾ ಹಾಡುತ್ತಾ ತಮ್ಮ ಒಂಟಿತನವನ್ನು ಮರೆತವರು ಅವರು. ಈಗವರು ಜಾನಪದ ಗೀತೆ, ಸಾಹಿತ್ಯ, ಕಥೆಗಳ ಬಹುದೊಡ್ಡ ಸಂಪತ್ತು.
ಈ ಜಾನಪದ ಸಿರಿಯಜ್ಜಿಯ ಪ್ರತಿಭೆಗಾಗಿ ಸುಳ್ಯ ತಾಲ್ಲೂಕಿನ ೧೨ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಕನ್ನಡ ಸಿರಿ’, ತುಳು ಸಾಹಿತ್ಯ ಅಕಾಡೆಮಿಯಿಂದ ೨೦೦೭ರಲ್ಲಿ ಗೌರವ ಪ್ರಶಸ್ತಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನಿಂದ ‘ಗಡಿನಾಡ ಸಿರಿ’ ಗೌರವ ಸಂದಿವೆ.
ಸಣ್ಣಕ್ಕ ಈಗ ನಮ್ಮ ನಡುವೆ ಇರುವ ದೊಡ್ಡ ಜಾನಪದ ಆಸ್ತಿ. ಅವರಿಂದ ಮೊಗೆದಷ್ಟೂ ಹೊರಬರುವ ಜಾನಪದ ಸಾಹಿತ್ಯಕ್ಕೆ ಬರ ಇಲ್ಲ.

Categories
ಯಕ್ಷಗಾನ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಕೆ. ಗೋವಿಂದ ಭಟ್

ಯಕ್ಷಗಾನದ ತಾಳಮದ್ದಲೆಯ ಶ್ರೇಷ್ಠ ಅರ್ಥಧಾರಿಯಾಗಿ ಕಥಕ್ಕಳಿ, ಹರಿಕಥಾ ಪ್ರಕಾರದಲ್ಲಿ ಪರಿಣತಿ ಪಡೆದಿರುವ ಕಲಾವಿದರು ಕೆ.ಗೋವಿಂದ ಭಟ್ಟ ಅವರು.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಸಫಲಪುರ ಮನೆಯಲ್ಲಿ ೧೯೪೦ರಲ್ಲಿ ಜನನ, ಗೋವಿಂದ ಭಟ್ಟರಿಗೆ ಯಕ್ಷಗಾನ ಪ್ರಕಾರದ ಎಲ್ಲ ಮಟ್ಟುಗಳು ಕರಗತ.
ಕೇರಳದ ಶ್ರೀ ರಾಜನ್ ಅಯ್ಯರ್ ಅವರ ಬಳಿ ಕಥಕ್ಕಳಿ, ಶೇಣಿ ಗೋಪಾಲಕೃಷ್ಣ ಭಟ್ಟರಿಂದ ಹರಿಕಥೆ, ಮಲ್ಪೆ ರಾಮದಾಸ ಸಾಮಗ ಅವರಿಂದ ಯಕ್ಷಗಾನ ಅರ್ಥಗಾರಿಕೆಯ ಪಾಠ, ಸುಮಾರು ೫೮ ವರ್ಷಗಳಿಂದ ಧರ್ಮಸ್ಥಳ ಮೇಳ, ಮೂಲ್ಕಿ, ಕೂಡ್ಲು, ಸುರತ್ಕಲ್, ಇರಾ, ಮೊದಲಾದ ಕಡೆ ಯಕ್ಷಗಾನ ವೃತ್ತಿ ತಿರುಗಾಟದಲ್ಲಿ ಭಟ್ಟರ ಹೆಸರು ಚಿರಪರಿಚಿತ. ದುಬೈ, ಅಬುದಾಬಿ, ಬೆಹರೇನ್, ಇಂಗ್ಲೆಂಡ್, ಜಪಾನ್ ದೇಶಗಳಲ್ಲಿಯೂ ಶ್ರೀಯುತರಿಂದ ಯಕ್ಷಗಾನದ ಸಿರಿವಂತಿಕೆಯ ಯಶಸ್ವಿ ಪ್ರದರ್ಶನ.
ರಂಗದ ಮೇಲೆ ಅವರು ಅಭಿನಯಿಸಿರುವ ಯಕ್ಷ ವೇಷಧಾರಿ ಪಾತ್ರಗಳು ಅಸಂಖ್ಯ. ಅರ್ಧ ನಾರೀಶ್ವರ, ರಂಗಾ-ರಂಗ, ಅರ್ಜುನ, ದೇವೇಂದ್ರ, ಶತ್ರುಘ್ನ, ಅಂಬೆ, ಚಂದ್ರಮತಿ, ದಮಯಂತಿ, ಶೂರ್ಪನಖಿ, ಹಿಡಿಂಬೆ ಇವೆ ಮೊದಲಾದ ಪಾತ್ರಗಳು ಭಟ್ಟರ ಅಭಿನಯದ ಮೂಲಕ ರಂಗದ ಮೇಲೆ ಜೀವ ಪಡೆದಿವೆ.
ಆಕಾಶವಾಣಿ ಮತ್ತು ದೂರದರ್ಶನದ ‘ಎ’ ಗ್ರೇಡ್ ಕಲಾವಿದರಾಗಿ ಧರ್ಮಸ್ಥಳ ಯಕ್ಷಗಾನ ತರಬೇತಿ ಕೇಂದ್ರದ ಪ್ರಾಚಾರ್ಯರಾಗಿ ಅತ್ಯುತ್ತಮ ಹರಿದಾಸರಾಗಿ ಅವರು ಸಲ್ಲಿಸಿರುವ ಸೇವೆ ಅನುಪಮ.
ಮಣಿ ಮೇಖಲ, ರತ್ನ ಕಂಕಣ, ರಾಣಿ ಚಿತ್ರಾಂಗದಾ, ಕನಕರೇಖೆ, ಭಗವಾನ್ ಮಹಾವೀರ, ಸುರತ್ಕಲ್ ಕ್ಷೇತ್ರ ಮಹಾತ್ಮ ವೀರಘಟೋತ್ಕಜ, ರಾಜಶೇಖರ ವಿಳಾಸ ಇವರು ರಚಿಸಿರುವ ಯಕ್ಷಗಾನ ಪ್ರಸಂಗಗಳಲ್ಲಿ ಕೆಲವು.

Categories
ಜಾನಪದ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಲಿಂಗದೇವವೀರರು ಮಹಾದೇವಪ್ಪ

ಹಳೇ ಮೈಸೂರು ಭಾಗದ ವಿಶಿಷ್ಟ ಜಾನಪದ ಕಲೆ ವೀರಗಾಸೆ ನೃತ್ಯ ಪದ್ಧತಿಯಲ್ಲಿ ಸಾಧನೆ ಮಾಡಿ ಹೆಸರಾದವರು ಲಿಂಗದೇವವೀರರು ಮಹಾದೇವಪ್ಪ ಅವರು.
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ೧೯೬೦ರಲ್ಲಿ ಜನನ, ಚಿಕ್ಕಂದಿನಿಂದಲೇ ವೀರಭದ್ರನ ಕುಣಿತದಲ್ಲಿ ತರಬೇತಿ ಪಡೆದು ಆ ಕಲೆಗಾಗಿ ಬದುಕನ್ನೇ ಮೀಸಲಿಟ್ಟವರು ಶ್ರೀಯುತರು.
ಹಳ್ಳಿಗಾಡಿನಲ್ಲಿ ಹಬ್ಬ-ಹರಿದಿನಗಳ ಸಂದರ್ಭದಲ್ಲಿ ಜಾನಪದ ನೃತ್ಯ, ಕಂಸಾಳೆ, ಹಾಡು, ನಾಟಕಗಳ ಪ್ರದರ್ಶನ ಸಾಮಾನ್ಯ. ಅಂತಹ ಸಂದರ್ಭಗಳಲ್ಲಿ ಮಹಾದೇವಪ್ಪ ಅವರು ಹಾಜರ್, ಬೇರೆಯವರು ನೃತ್ಯ ಮಾಡುವುದನ್ನು ನೋಡನೋಡುತ್ತ ಆ ನೃತ್ಯ ಮಾಡುವ ಕಲಾವಿದರ ಹಾವಭಾವ, ವೀರಭದ್ರನ ಕುರಿತು ಹೇಳುವ ಪದಗಳ ಧಾಟಿಯನ್ನು ಹಾಗೂ ಹೆಜ್ಜೆ ಹಾಕುವ ವಿಧಾನವನ್ನು ಕರಗತ ಮಾಡಿಕೊಂಡು ಮುಂದೆ ವೀರಭದ್ರ ಕುಣಿತದ ಅಪ್ರತಿಮ ಕಲಾವಿದರೆನಿಸಿದರು. ಶ್ರೀಯುತರು ನಮ್ಮ ರಾಜ್ಯದಲ್ಲಿ ಮಾತ್ರವೇ ಅಲ್ಲದೇ ಹೊರರಾಜ್ಯಗಳಲ್ಲೂ ವೀರಭದ್ರನ ಕುಣಿತ ಪ್ರದರ್ಶನ ನೀಡುವ ಮೂಲಕ ಕಲೆಯನ್ನು ಪ್ರಚುರಪಡಿಸಿರುವರು. ರಾಜಧಾನಿ ದೆಹಲಿಯಲ್ಲೂ ವೀರಭದ್ರ ನೃತ್ಯ ಪ್ರದರ್ಶನ ನೀಡಿ ಶ್ರೀಮತಿ ಸೋನಿಯಾ ಗಾಂಧಿ ಅವರಿಂದ ಪ್ರಶಂಸೆಗೆ ಪಾತ್ರರು.
ವೀರಗಾಸೆ ನೃತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಬೆಂಗಳೂರು ಮಹಾನಗರ ಪಾಲಿಕೆಯಿಂದ ೨೦೦೬ನೇ ಸಾಲಿನ ಕೆಂಪೇಗೌಡ ಪ್ರಶಸ್ತಿಗೆ ಭಾಜನರು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪ್ರಶಸ್ತಿ, ಸುತ್ತೂರು ಶ್ರೀ ಕ್ಷೇತ್ರ ಪ್ರಶಸ್ತಿ ಸೇರಿದಂತೆ ಹಲವು ಸಂಘ-ಸಂಸ್ಥೆಗಳಿಂದ ಅವರಿಗೆ ಲಭಿಸಿರುವ ಗೌರವ ಅಸಂಖ್ಯ.
ವೀರಭದ್ರನ ಕುಣಿತವನ್ನು ಪರಿಶ್ರಮದಿಂದ ಅಭ್ಯಾಸ ಮಾಡಿ ಪ್ರದರ್ಶನಗಳನ್ನು ನೀಡುತ್ತ ಆ ಕಲೆಯನ್ನು ಜೀವಂತವಾಗಿಸಿರುವವರು ಶ್ರೀ ಲಿಂಗದೇವವೀರರು ಮಹಾದೇವಪ್ಪ.

Categories
ಜಾನಪದ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಭೋವಿ ಜಯಮ್ಮ

ಕೋಲಾಟ, ಮದುವೆ, ವಸಗೆ, ಸೋಬಾನೆ ಪದ, ಹೊಗಳುವ, ಜರಿಯುವ ಪದಗಳನ್ನು ತಾಸುಗಟ್ಟಲೇ ಅನಾಯಾಸವಾಗಿ ಹಾಡುವುದರಲ್ಲಿ ಜನಪ್ರಿಯರಾದವರು ಬೋವಿ ಜಯಮ್ಮ ಅವರು.
ಕೋಟೆಗಳ ನಾಡು ಚಿತ್ರದುರ್ಗ ಜಿಲ್ಲೆಯ ಕೆಳಕೋಟೆಯವರಾದ ಬೋವಿ ಜಯಮ್ಮ ೮೦ ರ ಇಳಿವಯಸ್ಸಿನಲ್ಲೂ ರಾತ್ರಿಯಿಡೀ ಹಾಡುವ ಜಾನಪದ ಕೋಗಿಲೆ. ಅಜ್ಜಿ ದೊಡ್ಡ ಹನುಮಕ್ಕ ಮಹಾನ್ ಹಾಡುಗಾರ್ತಿ, ಗುಣಸಾಗರಿ, ಮದುಗದ ಕೆಂಪಮ್ಮ, ಈರೋಜಿ, ಕಾಡುಸಿದ್ಧಮ್ಮ, ಬಾಲನಾಗಮ್ಮ ಈ ಕಥನಗೀತೆಗಳನ್ನು ಅವರು ಕಲಿತದ್ದು ತಮ್ಮ ಅಜ್ಜಿಯಿಂದ. ಸ್ಥಳದಲ್ಲೇ ಸಂದರ್ಭಕ್ಕೆ ತಕ್ಕಂತೆ ಪದಕಟ್ಟಿ, ಹಿಮ್ಮೇಳ, ಮುಮ್ಮೇಳಗಳ ಮೂಲಕ ಹಾಡುವುದು ಜಯಮ್ಮ ತಂಡದ ವಿಶೇಷ. ಸಾವಿನ ಸೂತಕದಲ್ಲಿ ಕಳೆಕಟ್ಟಬಲ್ಲ ಹಾಡುಗಾರಿಕೆಗೆ ಅವರು ಹೆಸರುವಾಸಿ. ಕೋಲುಪದ, ಕಥನಗೀತೆ ಹಾಗೂ ಸೋಬಾನೆ ಈ ಮೂರು ಬಗೆಯ ಹಾಡುಗಾರಿಕೆ ಅವರಿಗೆ ಸಿದ್ಧಿಸಿದೆ.
ಕಳೆದ ೩೦ವರ್ಷಗಳಿಂದ ಆಕಾಶವಾಣಿಯ ವಿವಿಧ ಕೇಂದ್ರಗಳಲ್ಲಿ ಹಾಡಿರುವ ಅವರಿಗೆ ಮೈಸೂರು ದಸರಾ ಉತ್ಸವದಲ್ಲಿ ಗೌರವ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಮೈಸೂರಿನಲ್ಲಿ ನಡೆದ ಅಖಿಲ ಭಾರತ ಜಾನಪದ ಸಮಾವೇಶದಲ್ಲಿ ‘ಜನಪದ ಕಲಾಶ್ರೀ ಜಯಮ್ಮ’ ಗೌರವಗಳು ಸಂದಿವೆ. ಶ್ರೀಯುತರು ಜಾನಪದ ಅಕಾಡೆಮಿ ಸದಸ್ಯರಾಗಿಯೂ ಸೇವೆ ಸಲ್ಲಿಸಿರುವರು.
ಚಿತ್ರದುರ್ಗದ ಸಮಗ್ರ ಇತಿಹಾಸವನ್ನು ಕಥನ ಗೀತೆಯ ಮೂಲಕ ಹಾಡಬಲ್ಲ ಏಕೈಕ ಅಪರೂಪದ ಹಾಡುಗಾರ್ತಿ ಎಂಬ ಗೌರವ, ಹಿರಿಮೆಗೆ ಪಾತ್ರರಾದವರು ಶ್ರೀ ಬೋವಿ ಜಯಮ್ಮ.

Categories
ಜಾನಪದ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಚೌಡಿಕೆ ಉಚ್ಚಂಗೆಮ್ಮ

ಮೋಡಿ ಮಾಡುವ ಕಂಠಸಿರಿ, ಮಾಧುರ್ಯ ತುಂಬಿದ ಧ್ವನಿ, ವಿಶಿಷ್ಟ ರೀತಿಯ ಚೌಡಿಕೆ ಹಾಡುಗಾರಿಕೆಯನ್ನು ಕರಗತ ಮಾಡಿಕೊಂಡಿರುವ ಅಪರೂಪದ ಜಾನಪದ ಹಾಡುಗಾರ್ತಿ ಶ್ರೀಮತಿ ಚೌಡಿಕೆ ಉಚ್ಚಂಗೆಮ್ಮ.
ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕು ನಿಬಗೂರು ಗ್ರಾಮದ ಕಾಲಗೆರೆಯ ಶ್ರೀಮತಿ ಉಚ್ಚಂಗೆಮ್ಮ ಅವರಿಗೆ ಈಗ ೬೦ರ ಹರೆಯ. ಕೃಷದೇಹ, ಕಟ್ಟಿಕೊಂಡ ಜಡೆ, ಹಣೆಯಲ್ಲಿ ಕಾಸಗಲದ ಕುಂಕುಮ. ಹಾಡಲು ನಿಂತರೆ ಚೌಡಿಕೆ ರಾಣಿ ! ದೈವದತ್ತ ಇಂಪಾದಕಂಠ, ನಿರಂತರ ಸಾಧನೆಯ ಹಿನ್ನೆಲೆಯಲ್ಲಿ ಚೌಡಿಕೆ ಹಾಡುಗಳನ್ನು ಏರಿಸಿ, ಇಳಿಸಿ, ಹಿಗ್ಗಿಸಿ, ಕುಗ್ಗಿಸಿ, ವಿಸ್ತರಿಸಿ ಹಾಡುವ ಪರಿಯಂತೂ ಅನನ್ಯ. ಚೌಡಿಕೆ ಕಲೆಯೇ ಇವರಿಗೆ ಜೀವನೋಪಾಯ.
೧೯೮೭ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ಏರ್ಪಡಿಸಿದ ಕರ್ನಾಟಕ ಜಾನಪದ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ. ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿಯು ೨೦೦೦ನೆಯ ಸಾಲಿನ ಜಾನಪದ ಪ್ರಶಸ್ತಿ ನೀಡಿ ಗೌರವಿಸಿದೆ.
ಜಾನಪದ ಜಾತ್ರೆ ಸೇರಿದಂತೆ ನಾಡಿನ ಸಂಘ ಸಂಸ್ಥೆಗಳು ಏರ್ಪಡಿಸುವ ಸಾಂಸ್ಕೃತಿಕ ಕಾರಕ್ರಮಗಳಲ್ಲಿ ಪಾಲ್ಗೊಂಡು ಗ್ರಾಮೀಣ ಸಂಸ್ಕೃತಿಯ ಸೊಗಡನ್ನು ಕಲಾಭಿಮಾನಿಗಳಿಗೆ ಉಣಿಸುತ್ತಿರುವ ನಾಡಿನ ಹೆಮ್ಮೆಯ ಕಲಾವಿದೆ ಶ್ರೀಮತಿ ಚೌಡಿಕೆ ಉಚ್ಚಂಗೆಮ್ಮ ಅವರು.

Categories
ಜಾನಪದ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಶಿವಲಿಂಗಪ್ಪ ಹಗಲುವೇಷಗಾರ

ವಿಶಿಷ್ಟ ಜಾನಪದ ಕಲೆಯ ಹಗಲುವೇಷ ಪ್ರಕಾರದಲ್ಲಿ ಪ್ರಭುತ್ವ ಪಡೆದ ಹಿರಿಯ ಕಲಾವಿದರು ಶಿವಲಿಂಗಪ್ಪ ಅವರು. ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ಯಾಪಲಪರ್ವಿ ಗ್ರಾಮದ ಈ ಜಾನಪದ ಕಲಾಕುಸುಮಕ್ಕೀಗ ೬೦ರ ಹರೆಯ. ಅಲೆಮಾರಿ ಬದುಕು ಸಾಗಿಸುತ್ತ, ಗ್ರಾಮಗಳ ಹೊರಗೆ ಗುಡಾರಗಳಲ್ಲಿ ದಿನದೂಡುವ ವಿಶಿಷ್ಟ ಜೀವನಶೈಲಿ. ಬದುಕಲು ಆಸ್ತಿ, ಮನೆಗಳ ಹಂಗು ಬೇಕಿಲ್ಲ ಎನ್ನುವ ನಿಜ ಅನಿಕೇತನ. ಈ ಜಾನಪದ ಜಂಗಮರ ಬಳಿ ಇರುವ ಆಸ್ತಿಯೆಂದರೆ ಹಾರ್ಮೋನಿಯಂ, ತಬಲ ಹಾಗೂ ವೇಷಭೂಷಣದ ಉಡುಪುಗಳು ಮಾತ್ರ.
ಐದನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿರುವ ಶ್ರೀಯುತರ ಮಾತೃಭಾಷೆ ತೆಲುಗು ಮತ್ತು ಬುಡ್ಡ. ಅವರು ಕನ್ನಡ, ತಮಿಳು, ಹಿಂದಿ, ತೆಲುಗು ಭಾಷೆಗಳಲ್ಲೂ ಮಾತನಾಡಬಲ್ಲ ಬಹುಮುಖ ಪ್ರತಿಭೆ, ಹನ್ನೆರಡು ಮಂದಿ ಹಗಲುವೇಷಗಾರ ಕಲಾವಿದರ ತಂಡ ರಚಿಸಿಕೊಂಡಿರುವ ಶ್ರೀಯುತರು ಭೀಮಾಂಜನೇಯ ಯುದ್ಧ, ಮೋಹಿನಿ ಭಸ್ಮಾಸುರ, ಜಟಾಸುರನ ವಧೆ, ಸುಂದ ಉಪಸುಂದ ಇವೇ ಮೊದಲಾದ ಪ್ರದರ್ಶನಗಳಿಗೆ ಹಗಲುವೇಷ ಹಾಕುವರು.
ಹಂಪಿ, ಮೈಸೂರು ದಸರಾ ಉತ್ಸವಗಳಲ್ಲಿ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯಗಳಲ್ಲೂ ಹಗಲುವೇಷ ಪ್ರದರ್ಶನ ನೀಡಿದ ಹೆಗ್ಗಳಿಕೆ. ಶ್ರೀಯುತರ ಪ್ರತಿಭೆಯನ್ನು ಪರಿಗಣಿಸಿ ಸರ್ಕಾರ ಹಾಗೂ ಸಂಘ-ಸಂಸ್ಥೆಗಳಿಂದ ಹಲವಾರು ಪ್ರಮಾಣ ಪತ್ರ, ಪ್ರಶಸ್ತಿಗಳ ಗೌರವ ಲಭಿಸಿದೆ.
ಅಲೆಮಾರಿ ಜೀವನ ಸಾಗಿಸಿದರೂ ಅಳಿಯುತ್ತಿರುವ ಹಗಲುವೇಷ ಕಲೆಯನ್ನು ಬೆಳೆಸುತ್ತಿರುವವರು ಶ್ರೀ ಶಿವಲಿಂಗಪ್ಪ.

Categories
ಜಾನಪದ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಈರಬಡಪ್ಪ

ನೂರಾರು ಜಾನಪದ ಕಥೆಗಳನ್ನು ತಮ್ಮ ಮಸ್ತಿಷ್ಕದಲ್ಲಿ ತುಂಬಿಟ್ಟುಕೊಂಡಿರುವ ಜಾನಪದ ಭಂಡಾರ ಈರಬಡಪ್ಪ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಕಲಮರಹಳ್ಳಿಯಲ್ಲಿ ಜನನ. ಓದು-ಬರಹ ಬಾರದಿದ್ದರೂ ಈರಬಡಪ್ಪ ಅವರು ಹೇಳುವ ಜಾನಪದ ಕಥೆಗಳು ತಮ್ಮ ವಿಶಿಷ್ಟತೆಯ ಮೂಲಕ ಶಿಷ್ಟ ಸಾಹಿತ್ಯದೊಂದಿಗೆ ಸರಿಸಮವಾಗಿ ನಿಲ್ಲಬಲ್ಲವು. ಹಳ್ಳಿಯ ಎಲ್ಲ ಜೀವಸತ್ವಗಳನ್ನು ಮೈಗೂಡಿಸಿಕೊಂಡಿರುವ ಅವರ ಕಥೆಗಳು ವಸ್ತು ವೈವಿಧ್ಯದಿಂದ ಕೂಡಿದ್ದು, ಅದ್ಭುತ ಲೋಕವನ್ನೇ ತೆರೆದಿಡುವ ಚಮತ್ಕಾರವುಳ್ಳವು.
ಚಮತ್ಕಾರ ಅವರ ಕಥೆಗಳ ಜೀವಾಳ, ಪ್ರತಿಯೊಂದು ಕಥೆಯಲ್ಲೂ ಸಮುಚಿತವಾದ ಸಂಭಾಷಣೆ, ವಿಭಿನ್ನ ನಿರೂಪಣೆ ಅವರ ವೈಶಿಷ್ಟ್ಯ. ಕಥೆಗಳನ್ನು ಗ್ರಾಮೀಣ ಪರಿಸರಕ್ಕೆ ಹೊಂದಿಸಿ ತತ್ಕಾಲೀನ ಜೀವನವನ್ನು ಚಿತ್ರಿಸುವಂತೆ ಮಾಡಿ ಥಟ್ಟನೆ ಪ್ರಾಚೀನ ಕಾಲದ ವಸ್ತುವನ್ನು ಎತ್ತಿಕೊಳ್ಳುವ ಮೂಲಕ ಕಥೆಗೆ ಹೊಸತೊಂದು ತಿರುವು ನೀಡುವ ಕಲೆಗಾರಿಕೆ ಅವರದು. ಶ್ರೀಯುತರ ಸಹಜ ಪ್ರತಿಭೆಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಗೌರವ, ಮೈಸೂರಿನ ದಸರಾ ನವರಾತ್ರಿ ರಂಗೋತ್ಸವ ಗೌರವಗಳು ಸಂದಿವೆ.
ಜಾನಪದ ಕಥೆಗಳ ಆಗರ ಎನಿಸಿರುವ ಈರಬಡಪ್ಪ ಅನನ್ಯ ಕಥೆಗಾರರು. ಅವರಲ್ಲಿರುವ ಜಾನಪದ ಕಥಾ ಸಾಹಿತ್ಯ ಖಾಲಿಯಾಗದ ಬತ್ತದ ತೊರೆಯಂತೆ, ಮೊಗೆದಷ್ಟೂ ಉಕ್ಕುಕ್ಕಿ ಬರುತ್ತದೆ.

Categories
ಜಾನಪದ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಡಾ. ಅಂಬಳಿಕೆ ಹಿರಿಯಣ್ಣ

ಸೈದ್ಧಾಂತಿಕ ಮತ್ತು ಅನ್ವಯಿಕ ಜಾನಪದ ಕ್ಷೇತ್ರದಲ್ಲಿ ಆಳವಾದ ಪರಿಜ್ಞಾನ ಪಡೆದವರು ಡಾ. ಅಂಬಳಿಕೆ ಹಿರಿಯಣ್ಣ
ಅವರು.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಅಂಬಳಿಕೆಯಲ್ಲಿ ಜನನ, ಜಾನಪದ ಗೀತೆ, ಕಥೆ, ಲಾವಣಿ ಇವೇ ಮೊದಲಾದ ಪ್ರಕಾರಗಳಲ್ಲಿ ಅವರು ನಡೆಸಿರುವ ಅಧ್ಯಯನ, ಸಂಶೋಧನೆ, ನೀಡಿದ ಕೊಡುಗೆ ಅಪಾರ.
ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು ಮತ್ತು ಜಾನಪದ ಪ್ರಾಧ್ಯಾಪಕರಾಗಿ ಸೇವೆ. ಕರ್ನಾಟಕ, ಕುವೆಂಪು, ಗುಲ್ಬರ್ಗಾ, ಗುವಾಹತಿ, ಹೈದ್ರಾಬಾದಿನ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಎಂ.ಫಿಲ್, ಪಿಎಚ್.ಡಿ. ಕಾರ್ಯಕ್ರಮಗಳ ಮೌಲ್ಯ ನಿಷ್ಕರ್ಷಕರಾಗಿ ಸೇವೆ ಸಲ್ಲಿಕೆ. ಸುಮಾರು ೧೭ ವಿದ್ಯಾರ್ಥಿಗಳಿಗೆ ಪಿಎಚ್.ಡಿ ಮಾರ್ಗದರ್ಶನ ನೀಡಿದ ಹಿರಿಮೆ ಅವರದು.
ಶಿವಮೊಗ್ಗ ಜಿಲ್ಲೆಯ ಜಾನಪದ ಕಥೆಗಳು, ತೀರ್ಥಹಳ್ಳಿ ಸುತ್ತಿನ ಲಾವಣಿಗಳು, ಕಾಡುಗೊಲ್ಲರ ಜನಪದ ಗೀತೆಗಳು, ಜಾನಪದ ವಿವಕ್ಷೆ, ಹಚ್ಚೆ, ಕೌದಿ- ಇವು ಅವರು ರಚಿಸಿರುವ ಕೃತಿಗಳಲ್ಲಿ ಕೆಲವು.
ಮೂವತ್ತೂರು ವರ್ಷಗಳ ಕಾಲ ಕ್ಷೇತ್ರಕಾರ್ಯ ಸಂಶೋಧಕರಾಗಿ ಅಧ್ಯಯನ ನಡೆಸುವ ಮೂಲಕ ತಲೆತಲೆಮಾರುಗಳಿಂದ ಉಳಿದು ಬಂದಿದ್ದ ಕಂಠಸ್ಥ ಸಾಹಿತ್ಯಕ್ಕೆ ಗ್ರಂಥಸ್ಥ ರೂಪ ಕೊಟ್ಟವರು ಡಾ. ಅಂಬಳಿಕೆ ಹಿರಿಯಣ್ಣ ಅವರು.

Categories
ನೃತ್ಯ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಗೀತಾ ಬಾಲಿ

ಅಂಗವಿಕಲರ ಸೇವೆಯೇ ಜೀವನದ ಗುರಿ ಎಂದು ಭಾವಿಸಿ, ತಮ್ಮ ಜೀವನವನ್ನು ಅಂಗವಿಕಲ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಮುಡುಪಿಟ್ಟ ಶಾಸ್ತ್ರೀಯ ನೃತ್ಯಪಟು ಗೀತಾ ಬಾಲಿ ಅವರು.
ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಗಳಾದ ಭರತನಾಟ್ಯ ಮತ್ತು ಕೂಚುಪುಡಿ ನೃತ್ಯಗಳಲ್ಲಿ ಪರಿಣತಿ ಪಡೆದಿರುವ ೫೮
ವರ್ಷದ ಗೀತಾ ಬೆಂಗಳೂರಿನವರು.
ಅವರು ಕಳೆದ ೪೦ ವರ್ಷಗಳಿಂದ ನೃತ್ಯ ಕ್ಷೇತ್ರದ ಸಾಧನೆಯಲ್ಲಿ ತೊಡಗಿರುವರು. ಶ್ರೀ ರಮಣ ಮಹರ್ಷಿ ಅಂಧರ ಅಕಾಡೆಮಿಯ ಮಕ್ಕಳಿಗೆ ನೃತ್ಯ ಶಿಕ್ಷಣ ಧಾರೆಯೆರೆಯುತ್ತಿರುವರು. ನೃತ್ಯ ಕಲಿತ ಅಂಧ ಮಕ್ಕಳು ಹಲವೆಡೆ ಕಾರ್ಯಕ್ರಮ ನೀಡಿ ಮೆಚ್ಚುಗೆಗೆ ಪಾತ್ರರು.
ಗೀತಾ ಅವರು ನೃತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಅಪರಿಮಿತ ಸೇವೆಗಾಗಿ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ೨೦೦೧ನೇ ಸಾಲಿನ ಕೆಂಪೇಗೌಡ ಪ್ರಶಸ್ತಿ ಹಾಗೂ ೨೦೦೩ರಲ್ಲಿ ರಾಜ್ಯ ಸರ್ಕಾರದಿಂದ ವಿಶೇಷ ಶಿಕ್ಷಕಿ ಪ್ರಶಸ್ತಿಗಳು ಸಂದಿವೆ.
ಕಲಿತ ವಿದ್ಯೆ, ಕಲೆಯನ್ನು ಇತರರಿಗೆ ಕಲಿಸಿಕೊಟ್ಟಾಗ ಜ್ಞಾನ ದಿಗಂತ ವಿಸ್ತರಿಸುವುದು ಎಂಬ ಮಾತಿನಂತೆ ಬದುಕುತ್ತಿರುವವರು ನೃತ್ಯ ಕಲಾವಿದೆ ಶ್ರೀಮತಿ ಗೀತಾ ಬಾಲಿ.

Categories
ರಂಗಭೂಮಿ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಅಶೋಕ ಬಾದರದಿನ್ನಿ

ಹವ್ಯಾಸಿ ರಂಗಕರ್ಮಿಯಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ರಂಗಭೂಮಿಯನ್ನು ಕಟ್ಟಿ ಬೆಳೆಸುತ್ತಿರುವ ವಿರಳರಲ್ಲಿ ಒಬ್ಬರು ಶ್ರೀ ಅಶೋಕ ಬಾದರದಿನ್ನಿ ಅವರು.
೧೯೫೧ರಲ್ಲಿ ವಿಜಾಪುರ ಜಿಲ್ಲೆ ಅಚನೂರು ಗ್ರಾಮದಲ್ಲಿ ಜನನ. ಬಿ.ಎ. ಪದವೀಧರರು. ಬಾಲ್ಯದಿಂದಲೂ ರಂಗಭೂಮಿ ಕಡೆಗೆ ಒಲವು. ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಅಡ್ವಾನ್ಸ್ ಡ್ರಾಮಾದಲ್ಲಿ ಡಿಪ್ಲೊಮಾ ಪದವಿ.
ಶ್ರೀಯುತರು ನಿರ್ದೇಶಿಸಿದ ಅಂತಾರಾಷ್ಟ್ರೀಯ ಖ್ಯಾತಿಯ ರಂಗಕರ್ಮಿ ಬಿ.ವಿ.ಕಾರಂತರ ಬೆನಕ ತಂಡಕ್ಕಾಗಿ ಹ್ಯಾಮ್ಮೆಟ್ ನಾಟಕ ನಿರ್ದೇಶನ, ಅಶೋಕ್ ಅವರು ನಿರ್ದೇಶಿಸಿದ ಸಂದರ್ಭ, ಸಂಕ್ರಾಂತಿ, ಸಿಂಗಾರೆವ್ವ ಮತ್ತು ಅರಮನೆ, ಶಾಕುಂತಲ ಅತ್ಯಂತ ಜನಪ್ರಿಯ ನಾಟಕಗಳು.
ಗೆಳೆಯರ ಜತೆಗೂಡಿ ಬೆಂಗಳೂರಿನಲ್ಲಿ ‘ಅಭಿನಯ ತರಂಗ’ ಭಾನುವಾರದ ರಂಗ ಶಾಲೆ ಸ್ಥಾಪಕರು. ಅಲ್ಲಿ ಅವರು ಪ್ರಾಂಶುಪಾಲರಾಗಿ ನಿರ್ದೇಶಿಸಿದ ‘ಕೋತಿಕತೆ’, ‘ಮಾ ನಿಷಾದ ನಾಟಕಗಳು ವಿಶೇಷ ತಂತ್ರದಿಂದ ಗಮನ ಸೆಳೆದವು. ಸಿರಿಗೆರೆ ತರಳಬಾಳು ಬೃಹನ್ಮಠದಲ್ಲಿ, ಬಾಗಲಕೋಟೆ, ವಿಜಾಪುರ ಜಿಲ್ಲೆಗಳಲ್ಲಿ ರಂಗ ತರಬೇತಿ ಶಿಬಿರ ನಡೆಸಿಕೊಟ್ಟಿರುವರು. ದ.ರಾ. ಬೇಂದ್ರೆ, ಗಿರೀಶ್ ಕಾರ್ನಾಡ್, ಲಂಕೇಶ್, ಬಿ.ವಿ.ವೈಕುಂಠ ರಾಜು ಅವರ ನಾಟಕಗಳನ್ನು ರಂಗದ ಮೇಲೆ ಅಳವಡಿಸಿದ ಕೀರ್ತಿ ಅಶೋಕ್ ಅವರದು.
ಶ್ರೀಯುತರು ರಂಗಭೂಮಿಯಲ್ಲಿ ಮಾಡಿರುವ ಸಾಧನೆಗಾಗಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಪ್ರಥಮ ವಿಶ್ವಕನ್ನಡ ಸಮ್ಮೇಳನದಲ್ಲಿ ಗೌರವ, ಕೆ.ವಿ.ಶಂಕರಗೌಡ ರಂಗಭೂಮಿ ಪ್ರಶಸ್ತಿ, ಗ್ರಾಮೀಣ ಪ್ರದೇಶದಲ್ಲಿ ರಂಗಭೂಮಿ ಸೇವೆಗಾಗಿ ಸಾಣೇಹಳ್ಳಿ ಶ್ರೀಮಠದಿಂದ ಶ್ರೀ ಶಿವಕುಮಾರ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳಿಗೆ ಭಾಜನರು ಶ್ರೀ ಅಶೋಕ ಬಾದರದಿನ್ನಿ.

Categories
ರಂಗಭೂಮಿ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬೈರೇಗೌಡ

ರಂಗಭೂಮಿ, ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ದುಡಿಯುತ್ತಿರುವವರು ರಂಗನಟ, ಸಂಘಟಕ ಶ್ರೀ ಬೈರೇಗೌಡ ಅವರು.
೧೯೫೮ನೆ ಇಸ್ವಿಯಲ್ಲಿ ರಾಮನಗರ ಜಿಲ್ಲೆ ಕುರುಬರ ಹಳ್ಳಿಯಲ್ಲಿ ಜನನ. ಪದವಿ ಶಿಕ್ಷಣ ಪೂರೈಸಿ ಸಾಮಾಜಿಕ ಸೇವೆಗೆ ಪಾದಾರ್ಪಣೆ. ಅನೇಕ ಸಂಘ ಸಂಸ್ಥೆಗಳಲ್ಲಿ ಸದಸ್ಯತ್ವ ಹಾಗೂ ಪದಾಧಿಕಾರಿಯಾಗಿ ಸೇವೆ.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷರಾಗಿ ಜಿಲ್ಲಾ ಸಾಹಿತ್ಯ ಸಮ್ಮೇಳನ, ಕವಿಗೋಷ್ಠಿ ಉಪನ್ಯಾಸಮಾಲೆ, ವಿಚಾರ ಸಂಕಿರಣ, ಚರ್ಚಾ ಸ್ಪರ್ಧೆ ಏರ್ಪಾಟು. ವಿವಿಧ ಬಗೆಯ ಸಾಹಿತ್ಯಕ ಕಾಠ್ಯ ಕ್ರಮಗಳ ಸಂಯೋಜನೆ. ಸುಮಾರು ೨೦ ವರ್ಷಗಳಿಂದ ನಾಡಿನ ವಿವಿಧೆಡೆ ಪೌರಾಣಿಕ ನಾಟಕೋತ್ಸವಗಳನ್ನು ಸಂಘಟಿಸುತ್ತ ಬಂದಿರುವುದು ಇವರ ಹೆಗ್ಗಳಿಕೆ. ಪೌರಾಣಿಕ ನಾಟಕಗಳಲ್ಲಿ ಪ್ರಧಾನಪಾತ್ರ ನಿರ್ವಹಿಸುತ್ತ ತಮ್ಮ ಅಭಿನಯದಿಂದ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕಲಾಶ್ರೀ ಪ್ರಶಸ್ತಿ, ಕರ್ನಾಟಕ ಕಲಾರತ್ನ ಪ್ರಶಸ್ತಿ, ಉತ್ತಮ ನಾಗರೀಕ ಸೇವಾ ಪ್ರಶಸ್ತಿ, ರೋಟರಿ ಸೇವಾ ಪ್ರಶಸ್ತಿ, ಪರಿಸರ ಸೇವಾ ಪುರಸ್ಕಾರ, ಜಾನಪದ ಲೋಕೋತ್ಸವ ಪ್ರಶಸ್ತಿ ಮೊದಲಾದ ಗೌರವ ಪ್ರಶಸ್ತಿಗಳು ಶ್ರೀಯುತರಿಗೆ ಸಂದಾಯವಾಗಿವೆ. ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್ತಿನ ರಾಮನಗರ ಜಿಲ್ಲಾಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಶ್ರೀ ಬೈರೇಗೌಡ ಅವರು.

Categories
ರಂಗಭೂಮಿ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಮಾಲತಿ ಸುಧೀರ್

ಮೋಡಿ ಮಾಡುವ ಕಂಠ, ಭಾವನಾತ್ಮಕ ಅಭಿನಯದಿಂದ ಪ್ರೇಕ್ಷಕರ ಮನಸೂರೆಗೊಳ್ಳುವ ಕಲಾವಿದೆ ಶ್ರೀಮತಿ ಮಾಲತಿ ಸುಧೀರ್ ಅವರು.
ಮಾಲತಿ ಅವರದು ಕಲಾವಿದರ ಕುಟುಂಬ. ಪತಿ ಸುಧೀರ್ ಅವರೂ ಕನ್ನಡ ಚಿತ್ರರಂಗದ ಹೆಸರಾಂತ ನಟರಾಗಿದ್ದವರು. ಈಗ ಅವರ ಪುತ್ರರೂ ಚಿತ್ರರಂಗದಲ್ಲಿರುವರು.
೧೯೭೭ರಲ್ಲಿ ವೃತ್ತಿ ರಂಗಭೂಮಿಗೆ ಪ್ರವೇಶ ಮಾಡಿದ ಕಳೆದ ೩೦ ವರ್ಷಗಳಿಂದ ವೃತ್ತಿ ರಂಗಭೂಮಿ ಸಂಘಟಕಿಯಾಗಿ ಮತ್ತು ನಟಿಯಾಗಿ ಅವರು ಕ್ರಿಯಾಶೀಲರು. ಅವರು ಸುಳ್ಯದ ಶ್ರೀಶೈಲ ಮಲ್ಲಿಕಾರ್ಜುನ ನಾಟ್ಯ ಸಂಘ, ಗುಡಿಗೇರಿಯ ಶ್ರೀಸಂಗಮೇಶ್ವರ ನಾಟ್ಯ ಸಂಘ, ಕಮತಗಿಯ ಶ್ರೀಹುಚ್ಚೇಶ್ವರ ನಾಟ್ಯ ಸಂಘ ಹಾಗೂ ಮಿನುಗುತಾರೆ ಮಿತ್ರ ಮಂಡಳಿಗಳ
ಮೂಲಕ ನಟಿಯಾಗಿ ಬೆಳೆದವರು.
೧೯೯೮ರಲ್ಲಿ ಸುಧೀರ್ ಅವರು ಆರಂಭಿಸಿದ ‘ಕರ್ನಾಟಕ ಕಲಾವೈಭವ ಸಂಘ’ದ ಜವಾಬ್ದಾರಿ ಈಗ ಅವರ ಹೆಗಲ ಮೇಲಿದೆ. ವೃತ್ತಿ ರಂಗಭೂಮಿಯ ಉಳಿವಿನ ಜತೆಜತೆಗೆ ತಮ್ಮ ಕಲಾ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ಹೋರಾಟ ನಡೆಸುತ್ತಿರುವ ಒಬ್ಬ ಸಮರ್ಥ ರಂಗ ಸಂಘಟಕಿ.
ಕುರುಕ್ಷೇತ್ರ, ರಕ್ತರಾತ್ರಿ, ಸಿಂಧೂರ ಲಕ್ಷ್ಮಣ, ಗೌಡರ ಗದ್ದಲ, ಭೂಮಿ ತೂಕದ ಹೆಣ್ಣು, ವರ ನೋಡಿ ಹೆಣ್ಣು ಕೊಡು- ಅವರು ಅಭಿನಯಿಸಿರುವ ಕೆಲ ನಾಟಕಗಳು, ಅವುಗಳಲ್ಲಿ ಅವರು ನಿರ್ವಹಿಸಿರುವ ಪಾತ್ರಗಳಲ್ಲಿ ಪ್ರಮುಖವಾದವು- ದೌಪತಿ, ಮದಹಂಸ, ಗಂಗಾ ಮತ್ತು ಶೈಲಜಾ.
ತಮ್ಮ ಅದ್ಭುತ ಪ್ರತಿಭೆಯಿಂದ ರಂಗಭೂಮಿ ಕಲಾವಿದೆಯಾಗಿ ಜನರ ಮೆಚ್ಚುಗೆಗೆ ಪಾತ್ರರಾದವರು ಶ್ರೀಮತಿ ಮಾಲತಿ ಸುಧೀರ್.

Categories
ರಂಗಭೂಮಿ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬಿ.ಎಂ. ಕೃಷ್ಣೇಗೌಡ

ಬಾಲ್ಯದಲ್ಲೇ ನಾಟಕದಲ್ಲಿ ನಟಿಸಬೇಕೆಂಬ ಗೀಳು ಹತ್ತಿಸಿಕೊಂಡು ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಹೆಸರು ಮಾಡಿದ ಕಲಾವಿದರು ಬಿ.ಎಂ.ಕೃಷ್ಣೇಗೌಡ ಅವರು.
ತಂದೆ ಮುನೇಗೌಡ ಅವರದು ನಟನೆಯಲ್ಲಿ ಎತ್ತಿದ ಕೈ. ಯಾವ ಪಾತ್ರವನ್ನಾದರೂ ಲೀಲಾಜಾಲವಾಗಿ ಅಭಿನಯಿಸುವ ಚತುರರು. ತಂದೆ ಅಭಿನಯಿಸಿದ ನಾಟಕಗಳನ್ನು ನೋಡಿಕೊಂಡು ಬೆಳೆದ ಕೃಷ್ಣೇಗೌಡರಿಗೆ ಸಹಜವಾಗಿಯೇ ರಂಗಭೂಮಿಯಲ್ಲಿ ಆಸಕ್ತಿ.
ನೌಕರಿಗೆ ಸೇರಿದ ಮೇಲೂ ವೃತ್ತಿ ಜತೆಗೆ ನಟಿಸುವ ಹವ್ಯಾಸ ಉಳಿಸಿಕೊಂಡವರು ಶ್ರೀಯುತರು. ಕನ್ನಡಪರ ಹೋರಾಟಗಳಲ್ಲಿ ಸಕ್ರಿಯರು. ‘ಮಾರೀಚನ ಬಂಧುಗಳು’, ‘ಮಳೆ ನಿಲ್ಲುವವರೆಗೆ’, ‘ಮಹಾಸ್ವಾಮಿ’, ಭೂಕಂಪದ ನಂತರ’ ಮೊದಲಾದ ನಾಟಕಗಳಲ್ಲಿ ನಿರ್ವಹಿಸಿರುವ ಪಾತ್ರಗಳು ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿರುವುದು ಅವರ ಅಭಿನಯ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ.
ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಪ್ರದರ್ಶಿಸಿದ ‘ಸಿಕ್ಕು’ ನಾಟಕ ಪ್ರಶಂಸೆ ಗಳಿಸಿದೆ.
೧೯೮೨ರಲ್ಲಿ ‘ಸಿಂಹಾಸನ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ. ಲೋಕೇಶ್ ಅವರ ನಿರ್ದೇಶನದ ‘ಭುಜಂಗಯ್ಯನ ದಶಾವತಾರ’ ಚಿತ್ರದ ಪಾತ್ರಕ್ಕೆ ಮದ್ರಾಸ್‌ನ ಸಂಸ್ಥೆಯೊಂದರಿಂದ ಉತ್ತಮ ಪೋಷಕ ನಟ ಪ್ರಶಸ್ತಿ ಸಂದಿದೆ. ‘ಕರಿಮಲೆಯ ಕಗ್ಗತ್ತಲು’ ಚಿತ್ರದ ಅಭಿನಯಕ್ಕೂ ಉತ್ತಮ ಪೋಷಕ ನಟ ಪ್ರಶಸ್ತಿಗೆ ಭಾಜನರು. ಜೀವಮಾನದ ಸಾಧನೆಗಾಗಿ ‘ಮಾನು ಪ್ರತಿಷ್ಠಾನ’ ಪ್ರಶಸ್ತಿಯ ಗೌರವ
ಮುನ್ನೂರಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿರುವ ಕೃಷ್ಣೇಗೌಡರು ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಕ್ರಿಯಾಶೀಲರು.

Categories
ರಂಗಭೂಮಿ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ವಾಣಿ ಸರಸ್ವತಿ ನಾಯ್ಡು

ಭರತನಾಟ್ಯ, ಕಥಕ್ ಮತ್ತು ಕಥಕ್ಕಳಿ ನೃತ್ಯ ಪಟು, ರಂಗಭೂಮಿ ನಟಿ, ನೃತ್ಯಗುರು, ಕನ್ನಡ, ತೆಲುಗು, ತಮಿಳು, ಹಿಂದಿ, ಮರಾಠಿ ಭಾಷೆಬಲ್ಲ ಹಿರಿಯ ಕಲಾವಿದೆ ಶ್ರೀಮತಿ ವಾಣಿ ಸರಸ್ವತಿ ಅವರು.
೧೯೩೫ರಲ್ಲಿ ಜನನ. ಅಲಗೇರಿ ಜಟ್ಟೆಪ್ಪಾ ಕಂಪನಿಯ ಮೂಲಕ ತಮ್ಮ ೮ನೇ ವಯಸ್ಸಿನಲ್ಲಿ ರಂಗ ಪ್ರವೇಶ. ಚಿಕ್ಕಂದಿನಿಂದಲೇ ನೃತ್ಯಾಭ್ಯಾಸ ಪ್ರಾರಂಭಿಸಿ, ಶ್ರೀ ಗೋವಿಂದರಾಜ ಪಿಳ್ಳೆ ಮುಂಬೈ ಅವರಲ್ಲಿ ಭರತನಾಟ್ಯವನ್ನು ಹಾಗೂ ಮುಂಬೈನ ಶ್ರೀ ಗಣೇಶ ಪಾಂಡೆ ಮತ್ತು ಗುರು ಪಾಣಿಕರದ್ ಅವರಲ್ಲಿ ಕಥಕ್, ಕಥಕ್ಕಳಿಯಲ್ಲಿ ವಿಶೇಷ ತರಬೇತಿ ಪಡೆದರು. ನಾಟಕಗಳಲ್ಲಿ ನೃತ್ಯ ಕಲಾವಿದೆಯಾಗಿ ಪ್ರಸಿದ್ಧಿಗೆ ಬಂದರು. ಉತ್ತರ ಕರ್ನಾಟಕದ ಬಹುತೇಕ ಪ್ರಮುಖ ನಾಟಕ ಕಂಪನಿಗಳಲ್ಲಿ ವಿವಿಧ ಪಾತ್ರಗಳಲ್ಲಿ ಅಭಿನಯ. ಮುಂಬೈಯ ಪೃಥ್ವಿರಾಜ ಕಪೂರ್ ಅವರ ಹಿಂದಿನಾಟಕ ಕಂಪನಿಯಲ್ಲಿ ಒಂದು ವರ್ಷ ಅಮೋಘ ನೃತ್ಯ ಪ್ರದರ್ಶನ ನೀಡಿ ‘ನಾಟ್ಯರಾಣಿ’ ಪ್ರಶಸ್ತಿ ಗಳಿಕೆ.
ನೃತ್ಯ ಶಾಲೆಯನ್ನು ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ನೃತ್ಯ ಶಿಕ್ಷಣ ನೀಡಿಕೆ. ಇವರ ಶಿಷ್ಯರಲ್ಲಿ ಅನೇಕರು ವಿದೇಶಗಳಲ್ಲಿ ನೆಲೆಸಿದ್ದು ಅಲ್ಲಿ ನೃತ್ಯಶಾಲೆ ನಡೆಸುತ್ತಿದ್ದಾರೆ.
ಹುಬ್ಬಳ್ಳಿಯಲ್ಲಿ ಮಹಿಳೆಯರಿಂದಲೇ ಅಭಿನಯಿಸಲ್ಪಡುವ ‘ಶ್ರೀ ಗುರುರಾಜ ಸ್ತ್ರೀ ನಾಟ್ಯ ಸಂಘ’ ಸ್ಥಾಪನೆ.
ಇವರ ಕಲಾಸೇವೆಯನ್ನು ಗುರುತಿಸಿ ಕರ್ನಾಟಕ ನಾಟಕ ಅಕಾಡೆಮಿಯಿಂದ ಗೌರವ ಪ್ರಶಸ್ತಿ, ಅಲ್ಲದೇ ಅನೇಕ ಸಂಘ ಸಂಸ್ಥೆಗಳಿಂದ ಪುರಸ್ಕೃತರು.
ಅರವತ್ತನಾಲ್ಕು ವರ್ಷಗಳಿಂದ ನೃತ್ಯಸೇವೆ, ರಂಗಸೇವೆಯನ್ನು ವ್ರತದಂತೆ ಕೈಗೊಂಡು ಬಂದಿರುವ ಎಲೆಮರೆಯ ಹಿರಿಯ ಚೇತನ ಶ್ರೀಮತಿ ವಾಣಿ ಸರಸ್ವತಿ ಅವರು.

Categories
ರಂಗಭೂಮಿ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ವಿ. ರಾಮಮೂರ್ತಿ

ರಂಗಭೂಮಿಯ ಎಲ್ಲ ವಿಭಾಗಗಳಲ್ಲಿ ಅಪಾರ ಪರಿಣತಿ ಸಾಧಿಸಿರುವ ವಿಶೇಷವಾಗಿ, ಬೆಳಕಿನ ಸಂಯೋಜನೆಯಲ್ಲಿ ನಿಷ್ಣಾತರಾಗಿರುವ ಪ್ರತಿಭಾವಂತ ರಂಗಕರ್ಮಿ ಶ್ರೀ ವಿ. ರಾಮಮೂರ್ತಿ,
೧೯೩೫ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಶ್ರೀ ರಾಮಮೂರ್ತಿ ಬಾಲ್ಯದಿಂದಲೂ ನಾಟಕದ ಕಡೆಗೆ ಒಲವು ಹೊಂದಿದವರು. ರಾಷ್ಟ್ರೀಯ ನಾಟಕ ಶಾಲೆಯಿಂದ ಸ್ನಾತಕೋತ್ತರ ಪದವಿ, ರಂಗನಿರ್ವಹಣೆ ಹಾಗೂ ನಿರ್ದೇಶನದಲ್ಲಿ ವಿಶೇಷ ಅಧ್ಯಯನ, ಎನ್.ಎಸ್.ಡಿ. ರೆಪರ್ಟರೀ, ಯಾತ್ರಿಕ್ ಥಿಯೇಟರ್ ಮತ್ತು ನಾಯಿಕಾ ರಂಗ ಸಂಸ್ಥೆಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ೧೯೬೭ರಲ್ಲಿ ಹವಾಯಿ ವಿಶ್ವವಿದ್ಯಾಲಯದ ರಂಗವಿಭಾಗದಲ್ಲಿ ತರಬೇತಿ ಪಡೆದ ಅನಂತರ ೩ ವರ್ಷಗಳ ಕಾಲ ಬೆಳಕಿನ ಸಂಯೋಜನೆ ಹಾಗೂ ರಂಗ ತಂತ್ರಗಳ ಬಗೆಗೆ ವಿಶೇಷ ತರಬೇತಿ ಪಡೆದರು. ನ್ಯೂಯಾರ್ಕಿನ “ಕ್ಲಿಯೆಗಲ್ ಬ್ರದರ್ಸ್’ ಲೈಟಿಂಗ್ ಕಂಪನಿಯಲ್ಲಿ ಕೆಲಸಮಾಡಿ ಅನುಭವಗಳಿಸಿದರು.
ನಾಟಕ ನಿರ್ದೇಶಕ, ನಟ, ಮೈಮ್‌ಕಲಾವಿದ, ಸೆಟ್ಟಿಂಗ್ಸ್, ಪ್ರಸಾಧನ, ಬೆಳಕು ಸಂಯೋಜಕ ಹೀಗೆ ವಿವಿಧ ಆಯಾಮಗಳಲ್ಲಿ ಸುಮಾರು ೨೦೦ ಕ್ಕೂ ರಂಗ ನಿಲ್ದಾಣಗಳಲ್ಲಿ ದುಡಿಮೆ. ಭಾರತದ ಬೇರೆ ಬೇರೆ ಪ್ರದೇಶದ ಸುಮಾರು ೫೦ಕ್ಕೂ ಮಿಕ್ಕ ರಂಗ ಶಾಲೆಗಳಿಗೆ ಸಲಹೆಗಾರರಾಗಿ ಸೇವೆಸಲ್ಲಿಕೆ. ಅನೇಕ ವಿಶ್ವವಿದ್ಯಾಲಯಗಳ ರಂಗ ಮಂಟಪ ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಶಿಬಿರಗಳನ್ನು ನಡೆಸಿದ ಹೆಗ್ಗಳಿಕೆ.
ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಚಿಮನ್‌ಲಾಲ್ ಮೆಮೊರಿಯಲ್, ಪ್ರಶಸ್ತಿ, ಭಾರತೇಂದು ಅಕಾಡೆಮಿ ಪ್ರಶಸ್ತಿ ಎನ್.ಎಸ್.ಡಿ ಯ ಜೀವಮಾನದ ಸಾಧನೆ ಪ್ರಶಸ್ತಿ ಮೊದಲಾದ ಪ್ರಶಸ್ತಿ ಗೌರವಗಳು ಇವನ್ನು ಅರಸಿ ಬಂದಿವೆ. ಇಂದಿಗೂ ಚಟುವಟಿಕೆಯಿಂದಿರುವ ಕ್ರಿಯಾಶೀಲ ರಂಗತಜ್ಞ ಕನ್ನಡನಾಡಿನ ಹಿರಿಯ ನಿರ್ದೇಶಕರು ವಿ. ರಾಮಮೂರ್ತಿ.

Categories
ಗಮಕ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಕೆ.ಎಲ್. ನಾರಾಯಣಸ್ವಾಮಿ

ಮಹಾಕವಿಗಳ ಕಾವ್ಯಗಳ ಸೊಗಸನ್ನು ಗಾಯನದ ಮೂಲಕ ನಾಡಿನಾದ್ಯಂತ ಪ್ರಚುರಪಡಿಸುತ್ತ ಬಂದಿರುವ ಹಿರಿಯ ಗಮಕಿಗಳು ಕೆ.ಎಲ್.ನಾರಾಯಣಸ್ವಾಮಿ ಅವರು.
ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಕಣಕಟ್ಟೆ ಗ್ರಾಮದ ೮೧ ವರ್ಷದ ನಾರಾಯಣಸ್ವಾಮಿ ಅವರು ಗಮಕ ವಾಚನ ಮತ್ತು ವ್ಯಾಖ್ಯಾನ ಎರಡರಲ್ಲೂ ಪರಿಣತಿ ಪಡೆದ ಸವ್ಯಸಾಚಿ. ಸದ್ಯ ಅವರು ಬೆಂಗಳೂರು ವಾಸಿ.
ಬಿ.ಕಾಂ ಪದವೀಧರರಾದ ಅವರು ಪ್ರಾರಂಭದಲ್ಲಿ ಪ್ರೌಢಶಾಲಾ ಶಿಕ್ಷಕರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಿದ್ದ ಗಮಕ ತರಗತಿ ಸೇರಿ ೧೯೪೯ರಲ್ಲಿ ನಡೆದ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ದತ್ತಿ ಬಹುಮಾನದ ಗೌರವ ಪಡೆದರು.
ಕರ್ನಾಟಕ ಗಮಕ ಕಲಾ ಪರಿಷತ್ತು ನಡೆಸುವ ಗಮಕ ಸಮ್ಮೇಳನ, ಶಿಬಿರ, ಗಮಕ ಪ್ರಚಾರದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಅವರದು ಗಮಕ ಕಲಾ ಕ್ಷೇತ್ರದಲ್ಲಿ ಚಿರಪರಿಚಿತ ಹೆಸರು. ಹಳೆಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಪ್ರಕಾರದ ಕಾವ್ಯಗಳನ್ನು ವಾಚನ ಮಾಡಿ ಸೈ ಎನಿಸಿಕೊಂಡವರು.
ಶೃಂಗೇರಿಯಲ್ಲಿ ೧೯೮೮ರಲ್ಲಿ ನಡೆದ ಶಂಕರವಿಜಯ, ಭಾರತೀಯ ವಿದ್ಯಾ ಭವನ ಏರ್ಪಡಿಸಿದ ಕಾರ್ಯಕ್ರಮಗಳಲ್ಲಿ ತಮ್ಮ ಗಮಕ ಪಾಂಡಿತ್ಯ ಪ್ರದರ್ಶಿಸಿರುವರು.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾಶ್ರೀ’, ಭದ್ರಾವತಿಯ ಮಾರುತಿ ಸಂಗೀತ ಪಾಠಶಾಲಾದ ಕಾವ್ಯಗಾಯನ ಬಿರುದು, ಶಿವಮೊಗ್ಗದ ಗಮಕ ಕಲಾಪರಿಷತ್ತಿನಿಂದ ಗಮಕ ಕಲಾ ತಿಲಕ, ಶಿವಮೊಗ್ಗದ ತ್ಯಾಗರಾಜ ಸ್ವಾಮಿಗಳ ಆರಾಧನಾ ಸಮಿತಿಯಿಂದ ‘ಗಮಕ ಕಲಾ ಶಿರೋಮಣಿ’, ‘ಕರ್ನಾಟಕದ ಗಮಕಿ’ ‘ಗಮಕ ಕಲೋಪಾಸಕರು’, ‘ಗಮಕ ಕಲಾ ವಿದ್ವಾಂಸರು’ ಇವು ಶ್ರೀಯುತರಿಗೆ ಸಂದಿರುವ ಬಿರುದುಗಳು.
ಕವಿ ಕಾವ್ಯವನ್ನು ಜನಮನಕ್ಕೆ ಮುಟ್ಟಿಸುತ್ತಿರುವ ಶ್ರೇಷ್ಠ ಗಮಕಿಗಳು ಶ್ರೀ ಕೆ.ಎಲ್.ನಾರಾಯಣಸ್ವಾಮಿ.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀಮತಿ ಶಾಂತಾ ಆನಂದ

ಸಂಗೀತ ಕ್ಷೇತ್ರದ ಸಾಧನೆಯ ಜತೆಗೆ ಚುಟುಕ ಕವನ ರಚನೆ ಮತ್ತು ಸಮಾಜ ಸೇವೆಯಲ್ಲಿ ನಿರತರಾದವರು ಶ್ರೀಮತಿ
ಶಾಂತಾ ಆನಂದ್ ಅವರು.
೧೯೬೩ರಲ್ಲಿ ಬಳ್ಳಾರಿ ಜಿಲ್ಲೆ ಕೂಡ್ಲಿಗೆ ತಾಲ್ಲೂಕಿನ ಕೊಟ್ಟೂರಿನಲ್ಲಿ ಜನನ. ಎಸ್ಸೆಸ್ಸೆಲ್ಸಿವರೆಗೆ ವಿದ್ಯಾಭ್ಯಾಸ. ಗುರು ಹುಮಾಯೂನ್ ಹರ್ಲಾಪುರ ಅವರ ಬಳಿ ಸುಗಮ ಸಂಗೀತ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಅಭ್ಯಾಸ.
ಭದ್ರಾವತಿ ಆಕಾಶವಾಣಿಯಲ್ಲಿ ಗಾಯಕಿಯಾಗಿ, ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀರಾಮ ಮಂದಿರದಲ್ಲಿ ವಚನ ಗಾಯನ, ಮಲೆನಾಡು ಉತ್ಸವದಲ್ಲಿ ಜಾನಪದ ಗೀತ ಗಾಯನ ನೀಡಿದ ಹಿರಿಮೆ ಶಾಂತಾ ಆನಂದ್ ಅವರದು.
ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ನಿರ್ದೇಶಕಿಯಾಗಿ, ಗಾನಯೋಗಿ ಪಂಚಾಕ್ಷರ ಗವಾಯಿ ಸಂಗೀತ ಸೇವಾ ಟ್ರಸ್ಟ್ ಕಾರ್ಯದರ್ಶಿಯಾಗಿ, ಬೆಕ್ಕಿನಕಲ್ಮಠದ ಗುರುಬಸವೇಶ್ವರ ಪ್ರೌಢಶಾಲೆಯಲ್ಲಿ ಸಂಗೀತ ಶಿಕ್ಷಕಿಯಾಗಿ ಎರಡು ವರ್ಷ ಸೇವೆ ಸಲ್ಲಿಕೆ.
ರಜತ ಕಲಾಶಾಲೆ ಮೂಲಕ ಶಿಷ್ಯರಿಗೆ ತರಬೇತಿ ನೀಡುತ್ತಿರುವ ಅವರು ಸಂಗೀತ ಸೇವೆಗಾಗಿ ಚನ್ನಗಿರಿ ಹಾಲಸ್ವಾಮಿ ಅವರಿಂದ ವಚನ ಕೋಗಿಲೆ ಬಿರುದಿಗೆ ಹಾಗೂ ಸಾಮಾಜಿಕ ಸೇವೆಗಾಗಿ ಜಗಜ್ಯೋತಿ ಬಸವೇಶ್ವರ ಕಾಯಕಶ್ರೀ ಪ್ರಶಸ್ತಿಗೆ ಭಾಜನರು.
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಜನಮೆಚ್ಚುಗೆ ಗಳಿಸಿದ ಗಾಯಕಿ ಶ್ರೀಮತಿ ಶಾಂತಾ ಆನಂದ್.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಯಶವಂತ ಹಳಬಂಡಿ

ವರಕವಿ ಬೇಂದ್ರೆಯವರ ಸಾಹಿತ್ಯದ ಬದುಕು, ಬರಹಗಳಿಂದ ಪ್ರಭಾವಿತರಾಗಿ ಅವರ ಬಹುತೇಕ ಕವನಗಳಿಗೆ ರಾಗ ಸಂಯೋಜನೆ ಅಳವಡಿಸಿ ದನಿ ನೀಡಿದವರು ಗಾಯಕ ಯಶವಂತ ಹಳಬಂಡಿ.
ಗಂಡು ಮೆಟ್ಟಿದ ನಾಡು ಧಾರವಾಡದಲ್ಲಿ ೧೯೫೦ರಲ್ಲಿ ಕಲಾವಿದರ ಮನೆತನದಲ್ಲಿ ಜನಿಸಿದ ಹಳಬಂಡಿಯವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ್ದು ಶ್ರೀ ಲಕ್ಷ್ಮಣರಾವ್‌ ದೇವಾಂಗ ಮಠ ಹಾಗೂ ನಾರಾಯಣ ರಾವ್ ಮಜುಂದಾ‌
ಅವರ ಬಳಿ.
ಕಳೆದ ೨೮ ವರ್ಷಗಳಿಂದ ನಾಡಿನಾದ್ಯಂತ ಹಾಗೂ ಹೊರರಾಜ್ಯಗಳಲ್ಲೂ ಸಾವಿರಕ್ಕೂ ಮಿಕ್ಕಿ ಕಾಯಕ್ರಮ ನೀಡಿರುವರು. ಆಕಾಶವಾಣಿ ಮತ್ತು ದೂರದರ್ಶನದಲ್ಲಿ ‘ಬಿ’ ಹೈಗ್ರೇಡ್ ಗಾಯಕರೂ ಆಗಿರುವ ಅವರು ಹಲವು ಚಲನಚಿತ್ರಗಳಿಗೆ ಹಿನ್ನೆಲೆ ಗಾಯಕರಾಗಿ ಮುಖ್ಯವಾಗಿ ಅನುಭಾವಿ ಕವಿ ಶಿಶುನಾಳ ಷರೀಫರ ಗೀತೆಗಳಿಗೆ ನೀಡಿರುವ ಕಂಠ ಶೈಲಿ ಜನಪ್ರಿಯ.
ಸ್ವತಃ ಸಂಗೀತ ನಿರ್ದೇಶಕರಾಗಿ, ತಮ್ಮದೇ ವಾದ್ಯ ವೃಂದ ರಚಿಸಿ ಅನೇಕ ಕಾರ್ಯಕ್ರಮಗಳನ್ನು ನೀಡಿರುವರು. ಬೇಂದ್ರೆಯವರ ಗೀತೆಗಳಿಗೆ ರಾಗ ಸಂಯೋಜನೆ ಮಾಡಿ ಹಾಡಿರುವ ‘ಬೇಂದ್ರೆ ಕಾವ್ಯವಾಣಿ’ ರೂಪಕ ಅತ್ಯಂತ ಜನಪ್ರಿಯ. ಅವರ ‘ಪಾತರಗಿತ್ತಿ ಪಕ್ಕ’, ‘ಹೋಗು ಮನಸೇ’, ‘ಮಲ್ಲಿಗೆ ತರುವೆನು’ ಧ್ವನಿಸುರುಳಿಗಳು ಸಂಗೀತ ರಸಿಕರಿಗೆ ಅಚ್ಚುಮೆಚ್ಚು. ಶರಣರ ವಚನ, ದೇಶಭಕ್ತಿಗೀತೆ, ನಾಡಗೀತೆ, ಭಾವಗೀತೆಗಳನ್ನು ಜಾನಪದ ಶೈಲಿಯ ಸೊಗಡಿನೊಂದಿಗೆ ಹಾಡುವ ವಿಶಿಷ್ಟ ಶಾರೀರ ಶ್ರೀ ಯಶವಂತ ಹಳಬಂಡಿ ಅವರದು.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಟಿ.ವಿ.ರಾಜು

ಸುಗಮ ಸಂಗೀತ ಗಾಯನ ಕ್ಷೇತ್ರದಲ್ಲಿ ಟಿ.ವಿ.ರಾಜು ಅವರದು ಗಮನಾರ್ಹ ಸಾಧನೆ.
ನಗರ ಪ್ರದೇಶಗಳಲ್ಲಿ ಚಿರಪರಿಚಿತವಿರುವ ಸುಗಮ ಸಂಗೀತ ಪ್ರಕಾರವನ್ನು ಗ್ರಾಮಾಂತರ ಪ್ರದೇಶಗಳಲ್ಲೂ ಪಸರಿಸುವ ನಿಟ್ಟಿನಲ್ಲಿ ಗಾಯಕ ರಾಜು ಅವರ ಪರಿಶ್ರಮ ಶ್ಲಾಘನೀಯ.
ಮೂಲತಃ ತುಮಕೂರಿನವರಾದ ರಾಜು ಕಳೆದ ೪೫ ವರ್ಷಗಳಿಂದ ವಿವಿಧ ಸಂಘ-ಸಂಸ್ಥೆಗಳ ಸಹಕಾರದಲ್ಲಿ ಸುಗಮ ಸಂಗೀತ ಕಾರ್ಯಕ್ರಮ ನೀಡಿರುವರು. ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಸಹಯೋಗದಲ್ಲಿ ಗ್ರಾಮಾಂತರ ಪ್ರದೇಶಗಳ ಯುವಜನರಿಗೆ ಸುಗಮ ಸಂಗೀತ ತರಬೇತಿ ನೀಡುವ ಮೂಲಕ ಕಲಿತ ಕಲೆಯನ್ನು ಸಾರ್ಥಕಗೊಳಿಸಿರುವ ಅಪರೂಪದ ಕಲಾವಿದರು ಶ್ರೀಯುತರು.
ಸುಗಮ ಸಂಗೀತ ಕ್ಷೇತ್ರವನ್ನೇ ನೆಚ್ಚಿಕೊಂಡಿರುವ ಅವರು ಏರ್ಪಡಿಸಿರುವ ವಿಚಾರ ಸಂಕಿರಣ, ಕಾರ್ಯಾಗಾರ, ಸುಗಮ ಸಂಗೀತ ಸಾಪ್ತಾಹಿಕ ಕಾರ್ಯಕ್ರಮಗಳು ಹಲವಾರು. ೨೦೦೨ರಲ್ಲಿ ರಾಜ್ಯಮಟ್ಟದ ಜನ ಸಂಸ್ಕೃತಿ ಮೇಳ ಆಯೋಜನೆ ಹಾಗೂ ೨೦೦೨-೦೩ನೇ ಸಾಲಿನಲ್ಲಿ ರಾಜ್ಯ ಮಟ್ಟದ ಚಿಣ್ಣರ ಪ್ರತಿಭಾ ಪ್ರಗತಿ ಪ್ರದರ್ಶನ ಪ್ರಮುಖವಾದವು.
ಕೂಡಲ ಸಂಗಮ, ಮಹಾಶಕ್ತಿ ಗಣಪತಿ, ಶೃಂಗೇರಿ ಶಾರದೆ ಸೇರಿದಂತೆ ಅನೇಕ ಧ್ವನಿಸುರುಳಿಗಳಿಗೆ ಶ್ರೀಯುತರು ಹಾಡಿರುವರು.
ರಾಜು ಅವರು ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ‘ಕರ್ನಾಟಕ ಕಲಾಶ್ರೀ’ ಸೇರಿದಂತೆ ಹಲವು ಸಂಘ-ಸಂಸ್ಥೆಗಳಿಂದ ಸಂದಿರುವ ಗೌರವಗಳು ಹಲವು.
ಸುಗಮ ಸಂಗೀತದ ಮೂಲಕ ಕಾವ್ಯ ಪರಂಪರೆಯನ್ನು ಜನಮನಕ್ಕೆ ಮುಟ್ಟಿಸುವ ಕಾಯಕದಲ್ಲಿ ತೊಡಗಿರುವವರು ಶ್ರೀ ಟಿ.ವಿ.ರಾಜು.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಚಿ. ಶಂಕರ ರಾವ್‌

ವಿಶಿಷ್ಟ ವಿದ್ವತ್ತಿನ ವೇಣು ವಾದಕ, ಸಂಗೀತ ಸಾಧಕ ಬಿ.ಶಂಕರ ರಾವ್‌ ಅವರು.
೧೯೨೨ರಲ್ಲಿ ಬೆಂಗಳೂರಿನಲ್ಲಿ ಜನನ, ಸಂಗೀತ ಲೋಕದ ಈ ಕಾಯಕ ಜೀವಿಗೆ ಈಗ ೮೬ ಹರೆಯ. ಖ್ಯಾತ ಸಂಗೀತಗಾರರಾಗಿದ್ದ ಅಕ್ಕ ಬಾಲಾಂಬ ಮತ್ತು ಭಾವ ಶಿವರಾಮಯ್ಯನವರ ಪ್ರೋತ್ಸಾಹದಿಂದ ಚಿಕ್ಕ ವಯಸ್ಸಿನಲ್ಲೇ ಸಂಗೀತ ಲೋಕಕ್ಕೆ ಕಾಲಿಟ್ಟರು.
ಏಕಲವ್ಯ ಮಾದರಿಯಲ್ಲಿ ಸ್ವಯಂ ಸಂಗೀತ ಕಲಿಕೆ ಆರಂಭಿಸಿದ ರಾಯರು ಸತತ ಮೂರು ವರ್ಷ ಅಂತರ ವಿಶ್ವವಿದ್ಯಾಲಯ ಸಂಗೀತ ಸ್ಪರ್ಧೆಗಳಲ್ಲಿ ಪ್ರಶಸ್ತಿ ವಿಜೇತರು. ಸಂಗೀತ ಕ್ಷೇತ್ರದ ಮಹಾನ್ ಸಾಧಕ ಟಿ.ಆರ್.ಮಹಾಲಿಂಗಂ ಅವರ ಆತ್ಮೀಯ ವಲಯಕ್ಕೆ ೧೯೪೦ರಲ್ಲಿ ಸೇರ್ಪಡೆ. ಬಳಿಕ ಶ್ರೀಯುತರ ಸಂಗೀತ ಯಾನಕ್ಕೆ ಹೊಸ ತಿರುವು. ಮಹಾಲಿಂಗಂ ಅವರೊಂದಿಗಿನ ಸ್ನೇಹ-ನಂಟು ಅರ್ಧ ಶತಮಾನದ ಪರಿಧಿಯನ್ನು ದಾಟಿದ್ದು ಸಂಗೀತ ವಲಯದ ದಂತಕಥೆ. ೧೯೬೫ರಿಂದ ರಾಷ್ಟ್ರದಾದ್ಯಂತ ಶಂಕರರಾವ್‌ ಅವರು ನಡೆಸಿಕೊಟ್ಟಿರುವ ಸಂಗೀತ ಗೋಷ್ಠಿಗಳು ಹಲವು. ಶ್ರೀಯುತರ ಕೊಳಲು ವಾದನಕ್ಕೆ ಉಪರಾಷ್ಟ್ರಪತಿ ಬಿ.ಡಿ.ಜತ್ತಿಯವರಿಂದಲೂ ವಿಶೇಷ ಪ್ರಶಂಸೆ.
ಹಾಲೆಂಡ್ ಮತ್ತು ಜರ್ಮನಿವರೆಗೂ ಅವರ ಕೊಳಗಾನದ ಸವಿ ಸಂಚರಿಸಿದೆ. ಮ್ಯೂಸಿಕಲ್ ಥೆರಪಿ ಸಂಗೀತದಿಂದ ರಕ್ತದೊತ್ತಡ, ಆರ್ಥೈಟೀಸ್ ಹತೋಟಿ ಸಾಧ್ಯ ಎಂದು ಪ್ರಮಾಣಿಕರಿಸಿದ ಸಂಗೀತ ಸಾಧಕರು ಶ್ರೀಯುತರು.
ವೇಣು ವಾದನ ಕ್ಷೇತ್ರದಲ್ಲಿನ ಸಾಧನೆಗಾಗಿ ತಿರುಪತಿಯ ರಂಗನಾಥ ಸಭಾದಿಂದ ‘ವೇಣುಗಾನ ಗಂಧರ್ವ’, ಸಂದ ಶರ್ಮಾರಿಂದ ‘ಮುರಳಿ ಮೋಹಕ’ ಪ್ರಶಸ್ತಿಗಳು ಸಂದಿವೆ.
ಶ್ರೀ ಶಂಕರ ರಾವ್ ಅವರು ಸಂಯೋಜಿಸಿರುವ ಸ್ವರ ಸಂಗಮ, ಗಾನ-ರಾಗ-ಅಲಂಕಾರ, ಪಂಚರಂಜನಿ ರಾಗಗಳು ಸಂಗೀತ ವಲಯದಲ್ಲಿ ಜನಪ್ರಿಯ.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಶಿವಪ್ಪ ಯಲ್ಲಪ್ಪ ಭಜಂತ್ರಿ

ಶಹನಾಯ್ ವಾದನದಲ್ಲಿ ಪರಿಣತಿ ಪಡೆದ ಕಲಾಸಾಧಕ, ಕಲೆಯ ಆರಾಧಕರೂ ಆಗಿರುವರು ಶಿವಪ್ಪ ಎಲ್ಲಪ್ಪ ಭಜಂತ್ರಿ ಅವರು.
ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಬಾಳಬೀಡು ಗ್ರಾಮದಲ್ಲಿ ಶ್ರೀಯುತರ ಜನನ, ಮನೆತನದ ಕಸುಬಾದ ಶಹನಾಯ್ ವಾದನ ಚಿಕ್ಕಂದಿನಿಂದಲೇ ಅಭ್ಯಾಸ. ಜತೆಗೆ ಗದಗದ ಸಂಗೀತ ಸಾಹಿತ್ಯ ಮಹಾವಿದ್ಯಾಲಯದಲ್ಲಿ ಸಂಗೀತ ಮತ್ತು ಶಹನಾಯ್‌ಗಳ ಶಾಸ್ತ್ರೀಯ ಕಲಿಕೆ.
ಶಹನಾಯ್ ಸಂಗೀತ ಕಲಾವಿದರ ತಂಡ ಕಟ್ಟಿಕೊಂಡಿರುವ ಅವರು ಮದುವೆ, ಜಾತ್ರೆ, ಸಭೆ, ಸಮಾರಂಭಗಳಲ್ಲಿ ಶಹನಾಯ್ ನುಡಿಸುತ್ತ ತೃಪ್ತಿಕಂಡುಕೊಂಡು ಕಳೆದ ೩೦ ವರ್ಷಗಳಿಂದ ಇದೇ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವರು. ಅವರ ಶಹನಾಯ್ ಕೇಳಲು ಜನ ತುದಿಗಾಲಲ್ಲಿ ನಿಲ್ಲುವರು. ಮೋಡಿ ಮಾಡುವಂತಹ ಮಂತ್ರಶಕ್ತಿಯಿದೆ ಅವರ ಶಹನಾಯ್ ವಾದನಕ್ಕೆ.
ಹಾನಗಲ್‌ನ ಕುಮಾರೇಶ್ವರಮಠದಲ್ಲಿ ಹಾಗೂ ಹುಬ್ಬಳ್ಳಿಯ ಶ್ರೀ ಜಗದ್ಗುರು ಮೂರು ಸಾವಿರ ಮಠದಲ್ಲಿಯೂ ಶಹನಾಯ್ ವಾದಕರಾಗಿ ಶ್ರೀಯುತರಿಂದ ಹಲವು ವರ್ಷಗಳಿಂದ ಸೇವೆ ಸಲ್ಲಿಕೆ, ಅವರು ಕರಗತ ಮಾಡಿಕೊಂಡಿರುವ ಈ ಕಲೆಯನ್ನು ಹಲವು ವಿದ್ಯಾರ್ಥಿಗಳಿಗೂ ಕಲಿಸುತ್ತ ಶಹನಾಯ್ ಪ್ರಕಾರವನ್ನು ಬೆಳೆಸುತ್ತಿರುವರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಲವು ಕಾರ್ಯಕ್ರಮಗಳಲ್ಲಿ, ಹಾನಗಲ್‌ ನಾಡಹಬ್ಬ ಉತ್ಸವ ಸೇರಿದಂತೆ ಹಲವು ಸಾಂಸ್ಕೃತಿಕ ತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸನ್ಮಾನಿತರಾಗಿದ್ದಾರೆ ಶ್ರೀಯುತರು.
ಶಹನಾಯ್ ವಾದನದಲ್ಲಿ ನುರಿತ ಪ್ರಭಾವಶಾಲಿ ಕಲಾವಿದರೂ, ಅನುಭಾವಿಗಳೂ ಮತ್ತು ಸೇವಾ ಮನೋಭಾವವುಳ್ಳವರು ಶ್ರೀ ಶಿವಪ್ಪ ಯಲ್ಲಪ್ಪ ಭಜಂತ್ರಿ,

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಹನುಮಂತಕುಮಾರ್ ಮುಧೋಳ್

ಕುಲಕಸುಬುಗಳಾದ ಕೊಳಲು ಮತ್ತು ಶಹನಾಯ್ ವಾದನಗಳಲ್ಲಿ ಪಾಂಡಿತ್ಯ ಗಳಿಸಿ ನಾಡಿನಾದ್ಯಂತ ಈ ಕಲೆಗಳ ಪ್ರಸಾರದಲ್ಲಿ ತೊಡಗಿರುವವರು ಹನುಮಂತ ಕುಮಾರ ಮುಧೋಳ್ ಅವರು.
ಕೊಪ್ಪಳ ಜಿಲ್ಲೆಯ ಕುದರಿಮೋತಿ ಗ್ರಾಮದಲ್ಲಿ ೧೯೪೭ರಲ್ಲಿ ಜನನ. ತಂದೆ ಬಸಪ್ಪ ಭಜಂತ್ರಿಯವರ ಪೂರ್ವಜರ ಕಾಲದಿಂದಲೂ ಬೆಳೆದು ಬಂದ ಸಂಗೀತ ಮನೆತನ ಹನುಮಂತ ಕುಮಾರ್ ಅವರದು. ಪಂಡಿತ್ ಪುಟ್ಟರಾಜ ಗವಾಯಿಗಳ ಬಳಿ ಹಿಂದೂಸ್ತಾನಿ ಸಂಗೀತ ಅಭ್ಯಾಸ.
ಕೊಳಲು, ಹಾರ್ಮೋನಿಯಂ, ಕ್ಲಾರಿಯೋನೇಟ್ ವಾದಕರಾದ ಶ್ರೀಯುತರು ವೃತ್ತಿ ರಂಗಭೂಮಿ ಮತ್ತು ಹವ್ಯಾಸಿ ನಾಟಕ ಕಂಪೆನಿಗಳಲ್ಲಿ ಸಂಗೀತ ನಿರ್ದೇಶಕರಾಗಿ ದುಡಿದಿರುವರು. ಹೂವಿನ ಹಡಗಲಿಯ ರಂಗ ಭಾರತಿ ತಂಡದೊಂದಿಗೆ ಸಂಗ್ಯಾ ಬಾಳ್ಯಾ, ಜೋಕುಮಾರ ಸ್ವಾಮಿ ನಾಟಕಗಳಿಗೆ ಸಂಗೀತ ಸೇವೆ ನೀಡಿದ ಹಿರಿಮೆ ಅವರದು.
ಆಕಾಶವಾಣಿ ಮತ್ತು ದೂರದರ್ಶನಗಳಿಗೂ ಕಾರ್ಯಕ್ರಮ ನೀಡಿರುವ ಹನುಮಂತ ಕುಮಾರ್‌ ಅವರಿಂದ ಆನೆಗೊಂದಿ, ಹಂಪಿ, ಇಟಗಿ ಉತ್ಸವಗಳಲ್ಲಿ ಕೊಳಲು ವಾದನ ಪ್ರಸ್ತುತಿ. ಶ್ರೀಯುತರು ಸುಗಮ ಸಂಗೀತ ಗಾಯನಕ್ಕೆ ಸಂಗೀತದ ಸಾಥ್ ನೀಡಿರುವ ಕ್ಯಾಸೆಟ್‌ಗಳು ಹೊರಬಂದಿವೆ.
ಶ್ರೀಯುತರ ಸಂಗೀತ ಸೇವೆಗೆ ಕಲಾಪ್ರತಿಭೋತ್ಸವ ಪ್ರಶಸ್ತಿ, ವಿಶ್ವವಿಖ್ಯಾತ ದಸರಾ ಉತ್ಸವದಲ್ಲಿ ಪ್ರಶಸ್ತಿ, ಆನೆಗೊಂದಿ ಉತ್ಸವ ಸೇರಿದಂತೆ ಅನೇಕ ಉತ್ಸವಗಳಲ್ಲಿ ಸನ್ಮಾನಿತರು.
ಸಂಗೀತ ಸೇವೆಯ ಜತೆಗೆ ಹವ್ಯಾಸಿ ತಂಡಗಳಿಗಾಗಿ ನಾಟಕ ನಿರ್ದೇಶನ ಮಾಡುತ್ತ, ಹಾರ್ಮೋನಿಯಂ ಶಿಕ್ಷಕರಾಗಿ ವಿದ್ಯಾರ್ಥಿಗಳಿಗೆ ವಿದ್ಯೆಧಾರೆಯುತ್ತಿರುವವರು ಶ್ರೀ ಹನುಮಂತ ಕುಮಾರ ಮುಧೋಳ್.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಸ್ವಾಮಿ ಸಂಗಮೇಶ್ವರ ಹಿರೇಮಠ

ಸಮರ್ಥ ಹಿಂದೂಸ್ತಾನಿ ಸಂಗೀತ ಸಾಧಕ ಸ್ವಾಮಿ ಸಂಗಮೇಶ್ವರ ಹಿರೇಮಠ ಅವರು.
ಬಾಗಲಕೋಟೆ ಜಿಲ್ಲೆಯ ಮಧುರಖಂಡಿ ಗ್ರಾಮದಲ್ಲಿ ೧೯೩೦ರಲ್ಲಿ ಜನನ. ಎಸ್ಸೆಸ್ಸೆಲ್ಸಿವರೆಗೆ ವಿದ್ಯಾಭ್ಯಾಸ. ಆ ನಂತರ ಇಡೀ ಜೀವನ ಸಂಗೀತ ಸಾಧನೆಗೆ ಮುಡಿಪು. ಅವರ ತಾತನ ಕಾಲದಿಂದಲೂ ಬೆಳೆದು ಬಂದಿರುವ ಸಂಗೀತ ಪರಂಪರೆಯನ್ನು ಮುಂದುವರಿಸಿಕೊಂಡು ಬಂದವರು.
ಶ್ರೀ ಗಣಪತಿರಾವ್ ಗುರುವ ಜಮಖಂಡಿ ಅವರಲ್ಲಿ ಹಿಂದೂಸ್ತಾನಿ ಸಂಗೀತ ಅಭ್ಯಾಸ. ೨೨ನೇ ವಯಸ್ಸಿಗೇ ಕಚೇರಿ ನೀಡಿದ ಹೆಗ್ಗಳಿಕೆ ಅವರದು. ತದನಂತರ ಮೃತ್ಯುಂಜಯ ಪುರಾಣಿಕ ಮಠ, ಪ್ರಭುದೇವ ಸರದಾರ, ಗುರುಬಸವಾರ್ಯ ಬ್ಯಾಡಗಿ ಅವರಿಂದ ಸಂಗೀತ ಕಲಿಯುವ ಕಾಯಕದ ಮುಂದುವರಿಕೆ. ಧಾರವಾಡದಲ್ಲಿ ಪಂಡಿತ ಬಸವರಾಜ ರಾಜಗುರು ಅವರ ಬಳಿ ಹತ್ತು ವರ್ಷ ಕಾಲ ಶಿಷ್ಯರಾಗಿ ಹಿಂದೂಸ್ತಾನಿ ಸಂಗೀತ ಜ್ಞಾನ ಸಂಪಾದನೆ.
ಧಾರವಾಡ ಆಕಾಶವಾಣಿ ಕೇಂದ್ರದಿಂದ ಹತ್ತಾರು ಬಾರಿ ಅವರ ಸಂಗೀತ ಕಾರ್ಯಕ್ರಮಗಳ ಪ್ರಸಾರ, ಮಾಜಿ ಪ್ರಧಾನಿ ಇಂದಿರಾಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ತುಲಾಭಾರ ಸಂದರ್ಭದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ.
ದೆಹಲಿ, ಮುಂಬೈ, ಪೂನಾ, ಬೆಂಗಳೂರು,ಗೋವಾ, ಮತ್ತಿತರ ಪ್ರದೇಶಗಳಲ್ಲಿ ಸಂಗೀತ ಕಛೇರಿ ನೀಡಿದ ಹಿರಿಮೆ ಶ್ರೀ ಸ್ವಾಮಿ ಸಂಗಮೇಶ ಹಿರೇಮಠ ಅವರದು.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ವಿದ್ವಾನ್ ಎಂ.ಜಿ. ವೆಂಕಟರಾಘವನ್

ಎಳೆಯ ವಯಸ್ಸಿನಲ್ಲೇ ಸಂಗೀತಾಭ್ಯಾಸ ಪ್ರಾರಂಭಿಸಿ ಕರ್ನಾಟಕ ಸಂಗೀತದ ಹಾಡುಗಾರಿಕೆಯಲ್ಲಿ ಅಪ್ರತಿಮೆ ಪ್ರತಿಭೆ ಪ್ರದರ್ಶಿಸುತ್ತಿರುವ ಶ್ರೇಷ್ಠ ಗಾಯಕರು ವಿದ್ವಾನ್ ಎಂ. ಜಿ. ವೆಂಕಟರಾಘವನ್ ಅವರು.
ತಾಯಿ, ಸಂಗೀತ ವಿದುಷಿ ಶ್ರೀಮತಿ ಸಾವಿತ್ರಮ್ಮನವರಿಂದ ಸತತ ೧೫ ವರ್ಷಗಳ ಸಂಗೀತ ಶಿಕ್ಷಣ ಪಡೆದ ಶ್ರೀ ವೆಂಕಟರಾಘವನ್ ಅವರು ತಮ್ಮ ೧೧ನೇ ವಯಸ್ಸಿನಲ್ಲೇ ಕರ್ನಾಟಕ ಸಂಗೀತದ ೭೨ ಮೇಳ ರಾಗಗಳನ್ನು ನಿರರ್ಗಳವಾಗಿ ಹಾಡುತ್ತಿದ್ದ ಅದ್ವಿತೀಯ ಪ್ರತಿಭಾವಂತರು. ಮೇರು ಗಾಯಕ ಡಾ|| ಬಾಲ ಮುರಳಿ ಕೃಷ್ಣರವರಲ್ಲಿ ೬ ವರ್ಷಗಳ ಕಾಲ ಉನ್ನತ ಸಂಗೀತಾಭ್ಯಾಸ. ಬಿ.ಎಸ್‌ಸಿ ಹಾಗೂ ಎಂಜನಿಯರಿಂಗ್ ಪದವೀಧರರು.
ವಿಶ್ವಮಾನವ ಬಸವಣ್ಣ, ಮಹಾತ್ಮ ಏಸು, ಅಭಿಜ್ಞಾನ ಶಾಕುಂತಲ ಮೊದಲಾದ ರಾಷ್ಟ್ರೀಯ ಮಟ್ಟದ ಬ್ಯಾಲೆಗಳಿಗೆ ಸಂಗೀತ ನಿರ್ದೇಶನ ನೀಡಿದ ಹೆಮ್ಮೆ ಇವರದು.
ಕರ್ನಾಟಕದ ಸುಪ್ರಸಿದ್ಧ ‘ಪ್ರಭಾತ್ ಕಲಾವಿದರು’ ಸಂಸ್ಥೆಯ ಅನೇಕ ನೃತ್ಯರೂಪಕಗಳಿಗೆ ಹಿನ್ನೆಲೆ ಗಾಯನ, ವಚನಸಾಹಿತ್ಯ, ದಾಸಸಾಹಿತ್ಯ, ಡಾ| ಡಿವಿಜಿ ಹಾಗೂ ಅನ್ನಮಾಚಾರ್ಯರ ಕೃತಿಗಳಿಗೆ ರಾಗ ಸಂಯೋಜಿಸಿ, ಹಾಡಿದ್ದು ಸಂಗೀತ ಕ್ಷೇತ್ರಕ್ಕೆ ನೀಡಿದ ಅನನ್ಯ ಕಾಣಿಕೆ, ಡಿವಿಜಿಯವರ ‘ಅನ್ತಃಪುರ ಗೀತೆ’ಯನ್ನು ಧಾರಾವಾಹಿಯಾಗಿ ನಿರ್ಮಿಸಿ, ನಿರ್ದೇಶಿಸಿ ಬೆಂಗಳೂರು ದೂರ ದರ್ಶನದ ಮೂಲಕ ಪ್ರಸಾರ ಮಾಡಿ ಅಪಾರ ಖ್ಯಾತಿಗಳಿಸಿದರು.
ಹಂಸಿಕಾ, ಬೃಹತಿ, ಪ್ರಣಯರಾಗಿಣಿ, ಕನ್ನಡ ಹಂಸ, ಮಧುರಕನ್ನಡ ಮೊದಲಾದ ೩೦ ಹೊಸ ರಾಗಗಳನ್ನು ಸೃಷ್ಟಿಸಿ ಪ್ರಚುರ ಪಡಿಸಿದ ಹಿರಿಮೆಗೆ ಪಾತ್ರರು. ಸಂಗೀತ ಲಕ್ಷ ವಿಜ್ಞಾನ, ಸಂಗೀತ ವೈದ್ಯಕೀಯ ಮೌಲ್ಯಗಳು ಇತ್ಯಾದಿ ವಿಷಯಗಳ ಬಗ್ಗೆ ಲೇಖನ ರಚನೆ, “ನಾದ ಹಂಸ ಅಕಾಡೆಮಿ ಆಫ್ ಮ್ಯೂಸಿಕ್” ಸಂಗೀತ ಶಾಲೆಯ ಮೂಲಕ ಎಳೆಯರಲ್ಲಿ ಪರಂಪರಾಗತ ಸಂಗೀತ ಕಲೆಯನ್ನು ಬೇರೂರಿ, ಚಿಗುರಿಸುತ್ತಿದ್ದಾರೆ.
ಭಾರತ ಸರ್ಕಾರದಿಂದ ಸೀನಿಯರ್ ಫೆಲೊಷಿಪ್ ಗೌರವ, ಗುರುಶಿಷ್ಯ ಪರಂಪರೆ ಯೋಜನೆಯಲ್ಲಿ ಸಂಗೀತ ಗುರುವಾಗಿ ನೇಮಕ, ಬೆಂಗಳೂರು ವಿಶ್ವವಿದ್ಯಾನಿಲಯದ ಸಂದರ್ಶಕ ಪ್ರಾಧ್ಯಾಪಕ ಮೊದಲಾದ ಗೌರವಗಳು ಇವರ ಪಾಲಾಗಿವೆ.
ಸಂಗೀತಕ್ಕಾಗಿ ತಮ್ಮನ್ನು ಪೂರ್ಣವಾಗಿ ಅರ್ಪಿಸಿಕೊಂಡ ವೃತ್ತಿಶೀಲ ಕಲೋಪಾಸಕ ವಿದ್ವಾನ್ ಎಂ.ಜಿ. ವೆಂಕಟರಾಘವನ್
ಅವರು.

Categories
ಮಾಹಿತಿ ತಂತ್ರಜ್ಞಾನ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಅನಂತ್ ಕೊಪ್ಪ‌ರ್‌

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರುಗಳಿಸಿರುವ ಗ್ರಾಮೀಣ ಪ್ರತಿಭೆ ಶ್ರೀ ಅನಂತ್ ಕೊಪ್ಪ‌ರ್‌ ಅವರು.
ಗದಗ ಜಿಲ್ಲೆಯ ಹಿಂದುಳಿದ ಗ್ರಾಮದಲ್ಲಿ ಜನನ, ಖರಗ್‌ಪುರ್‌ನ ಐಐಟಿಯಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್ ಪದವಿ. ಬಳಿಕ ಅವರು ತಮ್ಮ ವೃತ್ತಿ ಬದುಕು ಆರಂಭಿಸಿದುದು ವಿಪ್ರೋ ಸಂಸ್ಥೆಯಲ್ಲಿ, ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೆಲ ಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿರುವರು.
ಮುಂದೆ ಕೆಲ ಕಾಲ ಟಾಟಾ ಎಲ್ಲಿ ಮತ್ತು ಬಿಎಫ್‌ಎಲ್ ಸಾಫ್ಟ್‌ವೇರ್ ಸಂಸ್ಥೆಯಲ್ಲಿಯೂ ಕೆಲಸ ಮಾಡಿದ ಅವರು ೧೯೯೭ರಲ್ಲಿ ತಮ್ಮದೇ ಕ್ಷೇಮಾ ಟೆಕ್ನಾಲಜೀಸ್ ಸಂಸ್ಥೆ ಸ್ಥಾಪಿಸಿದರು. ಇಂದು ಕ್ಷೇಮಾ ಟೆಕ್ನಾಲಜೀಸ್ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಎತ್ತರಕ್ಕೆ ಬೆಳೆದಿರುವ ಸಂಸ್ಥೆ.
೨೦೦೪ರಲ್ಲಿ ಎಂಫಸಿಸ್‌ನ ಜೊತೆ ವಿಲೀನಗೊಳ್ಳುವ ಮೊದಲು ಕ್ಷೇಮಾ ಟೆಕ್ನಾಲಜೀಸ್ ಸಂಸ್ಥೆಯು ಇಂಡಸ್ಟ್ರಿಯಲ್ ಆಟೋಮೇಷನ್, ಹೆಲ್ತ್‌ಕೇ‌, ಲೈಫ್ ಸೈನ್ಸ್, ಮೊಬೈಲ್ ಟೆಲಿಫೋನಿ ಮತ್ತಿತರ ಸಂಸ್ಥೆಗಳಿಗೂ ಸೇವೆಯನ್ನು ಒದಗಿಸುತ್ತಿತ್ತು.
ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಇನ್ಸ್‌ಟಿಟ್ಯೂಟ್‌ನಿಂದ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಪ್ರೋಫೆಷನಲ್ ಗೌರವಕ್ಕೆ ಪಾತ್ರರಾದ ಪ್ರಥಮ ಸಿಇಒ, ಗದಗ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯು ‘ಅತ್ಯುತ್ತಮ ಉದ್ಯಮಿ’ ಗೌರವ ಸಲ್ಲಿಸಿದರೆ, ೧೯೯೯ರಲ್ಲಿ ಯುವ ಉದ್ಯಮಿಗಳ ಏಷ್ಯಾ ಸಮ್ಮೇಳನದಲ್ಲಿ ವಿಶೇಷ ಉದ್ಯಮಿ ಗೌರವ.
ಬೆಂಗಳೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಮತ್ತು ಪಿಎಂಐ ಬೆಂಗಳೂರು ಘಟಕದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುವ ಅನಂತ್ ಕೊಪ್ಪ‌ರ್‌ ಪ್ರಸ್ತುತ ಬೆಂಗಳೂರಿನ ನಿವಾಸಿ.

Categories
ಮಾಹಿತಿ ತಂತ್ರಜ್ಞಾನ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಮೋಹನ್‌ದಾಸ್ ಪೈ

ರಾಜ್ಯದ ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೋಸಿಸ್‌ನ ಆಡಳಿತ ಮಂಡಳಿಯ ಮಾನವ ಸಂಪನ್ಮೂಲ ವಿಭಾಗದ ದಕ್ಷ ನಿರ್ದೇಶಕರು ಟಿ.ವಿ.ಮೋಹನ್ ದಾಸ್ ಪೈ.
ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನ ಬಿ.ಕಾಂ ಪದವಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಪದವೀಧರರು. ಇನ್ಫೋಸಿಸ್‌ನ ಅಧ್ಯಕ್ಷರಾಗಿ, ಚೀನಾದ ಇನ್ಫೋಸಿಸ್‌ನ ನಿರ್ದೇಶಕರಾಗಿ ಸೇವೆ ಸಲ್ಲಿಕೆ. ೪೯ ವರ್ಷದ ಪೈ ೧೯೯೪ರಲ್ಲಿ ಇನ್ಫೋಸಿಸ್‌ಗೆ ಸೇರಿದ್ದು, ಸಂಸ್ಥೆಯ ವಿವಿಧ ಸ್ಥಾನಗಳನ್ನು ನಿಭಾಯಿಸಿರುವರು. ನೇರ ತೆರಿಗೆ ಪದ್ಧತಿ ಸುಧಾರಿಸಲು ಕೇಂದ್ರ ಸರ್ಕಾರ ರಚಿಸಿದ ಕೇಲ್ಕರ್ ಸಮಿತಿಯ ಸದಸ್ಯರಾಗಿ, ಇ-ಕಾಮರ್ಸ್ ಮತ್ತು ತೆರಿಗೆ ಪದ್ಧತಿ ಕುರಿತ ಉನ್ನತಾಧಿಕಾರ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ ಅನುಭವ ಅವರದು. ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸುವ ‘ಅಕ್ಷಯ ಪಾತ್ರ ಫೌಂಡೇಷನ್’ ಇನ್ಫೋಸಿಸ್‌ನ ಮಹತ್ವದ ಸೇವೆ. ಪೈ ಅದರ ನೇತೃತ್ವ ವಹಿಸಿರುವರು.
ಇನ್ಫೋಸಿಸ್ ಸಂಸ್ಥೆಯ ಅಭಿವೃದ್ಧಿ, ನೀತಿ ರೂಪಿಸುವುದರಲ್ಲಿ ಪ್ರಮುಖರಾದ ಶ್ರೀಯುತ ಮೋಹನ್ ದಾಸ್ ಪೈ ಸಂಸ್ಥೆಯ ಆಧಾರಸ್ತಂಭಗಳಲ್ಲಿ ಒಬ್ಬರು.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸ್ವಾತಂತ್ರ‍್ಯ ಹೋರಾಟಗಾರರು

ಶ್ರೀ ಹಮ್ಮಣ್ಣ ಮಾಣಿ ನಾಯಕ

ಕರ್ನಾಟಕದ ಬಾರ್ಡೋಲಿ ಎಂದು ಖ್ಯಾತಿ ಪಡೆದ ಉತ್ತರ ಕನ್ನಡಜಿಲ್ಲೆ ಅಂಕೋಲಾ ತಾಲ್ಲೂಕಿನ ಶೆಟಗೇರಿ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ೯೨ ವರ್ಷ ಹರೆಯದ ಹಿರಿಯ ಗಾಂಧೀವಾದಿ ಶ್ರೀ ಹಮ್ಮಣ್ಣ ಮಾಣಿ ನಾಯಕ ಅವರು. ತಮ್ಮ ೧೪ನೆ ವಯಸ್ಸಿನಲ್ಲಿಯೆ, ಭಾರತದ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದ ಶ್ರೀ ಹಮ್ಮಣ್ಣ ನಾಯಕ ಅವರು ಉಪ್ಪಿನ ಸತ್ಯಾಗ್ರಹ, ಕಾಯಿದೆ ಭಂಗ ಚಳುವಳಿ, ಕರನಿರಾಕರಣೆ ಸಂಗ್ರಾಮ, ಚಲೇಜಾವ್‌ ಚಳುವಳಿ ಮೊದಲಾದ ಸ್ವಾತಂತ್ರ್ಯ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಅನೇಕ ಸಾರಿ ಜೈಲುವಾಸ ಅನುಭವಿಸಿದವರು.
೧೯೩೨ ರಲ್ಲಿ ಮಹಾತ್ಮಾ ಗಾಂಧೀಜಿಯವರು ಅಂಕೋಲೆಗೆ ಬಂದಾಗ ಸ್ವಯಂ ಸೇವಕರಾಗಿ ಅವರ ಮೆಚ್ಚುಗೆ ಪಡೆದವರು. ಕೇಂದ್ರ ಸರ್ಕಾರದಿಂದ ತಾಮ್ರಪಟ ಪ್ರಶಸ್ತಿ ಪಡೆದ ಕೆಲವೇ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಶ್ರೀ ಹಮ್ಮಣ್ಣ ನಾಯಕರೂ ಒಬ್ಬರು.
ಸರ್ಕಾರ ಕೊಡುತ್ತಿರುವ ಸ್ವಾತಂತ್ರ್ಯಯೋಧರ ಗೌರವಧನದಲ್ಲಿ ಬಹುಭಾಗವನ್ನು ಬಡ ಮಕ್ಕಳ ಶಿಕ್ಷಣಕ್ಕೆ, ಬಡರೋಗಿಗಳ ಚಿಕಿತ್ಸೆಗೆ, ಹರಿಜನರ ಶವಸಂಸ್ಕಾರಕ್ಕೆ ನೀಡುತ್ತಿರುವ ಕರುಣಾಳು ಇವರು.
ಈ ತಮ್ಮ ಇಳಿವಯಸ್ಸಿನಲ್ಲಿಯೂ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವದ ಮೆರವಣಿಗೆಗಳಲ್ಲಿ ಪ್ರತಿವರ್ಷ ತಪ್ಪದೆ ಭಾಗವಹಿಸುತ್ತಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾರೆ.
ಭಾರತದ ಮಾಜಿ ಪ್ರಧಾನಿ ಲಾಲಬಹಾದ್ದೂರ್ ಶಾಸ್ತ್ರಿ ಅವರು ಪ್ರತಿ ಸೋಮವಾರ ರಾತ್ರಿ ಒಂದು ಊಟ ಬಿಡಿ ಎಂದು. ಅಂದು ನೀಡಿದ್ದ ಕರೆಗೆ ಓಗೊಟ್ಟು ಸೋಮವಾರ ಮಾತ್ರ ಏಕೆ ಪ್ರತಿ ದಿನವೂ ಒಂದೇ ಹೊತ್ತು ಶಾಖಾಹಾರದ ಊಟಮಾಡುವುದಾಗಿ ಸಂಕಲ್ಪ ಕೈಗೊಂಡು ಇಂದಿಗೂ ಅದನ್ನು ಪರಿಪಾಲಿಸುತ್ತಿದ್ದಾರೆ.
ಅಪ್ಪಟ ಗಾಂಧಿವಾದಿ, ಅಖಂಡ ರಾಷ್ಟ್ರಪ್ರೇಮಿ, ಸಂಪೂರ್ಣ ಖಾದಿಧಾರಿ, ಗಾಂಧಿ ಯುಗದ ಹಿರಿಯ ಕೊಂಡಿ ಶ್ರೀ ಹಮ್ಮಣ್ಣ ಮಾಣಿ ನಾಯಕ, ಶೆಟಗೇರಿ ಅವರು.

Categories
ಕೃಷಿ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಜಿ.ಪಿ. ಶೆಟ್ಟಿ

ಕೃಷಿ ಪ್ರಯೋಗಾಲಯದ ಫಲಿತಾಂಶಗಳನ್ನು ಕ್ಷೇತ್ರಕ್ಕೆ, ರೈತರ ಬಳಿಗೆ ಕೊಂಡೊಯ್ದ ಸಾಧನೆ ಡಾ. ಜಿ.ಪಿ.ಶೆಟ್ಟಿ ಅವರದು.
ಉಡುಪಿ ಜಿಲ್ಲೆಯ ಕಾಲ್ಲೊರೆಹಳ್ಳಿಯಲ್ಲಿ ೧೯೪೦ರಲ್ಲಿ ಕೃಷಿಕ ಕುಟುಂಬದಲ್ಲಿ ಜನನ. ಸಸ್ಯ ಶರೀರ ಕ್ರಿಯಾಶಾಸ್ತ್ರದಲ್ಲಿ ಎಂಎಸ್ಸಿ ಪದವಿ. ‘ಸಸ್ಯ ಶರೀರ ಕ್ರಿಯಾಶಾಸ್ತ್ರ ಮತ್ತು ಸಸ್ಯ ಪೋಷಕಾಂಶಗಳು’ ವಿಷಯದಲ್ಲಿ ಡಾಕ್ಟರೇಟ್ ಪದವಿ. ಶಿವಾಜಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ನಿಂಬಕಾ‌ ಕೃಷಿ ಸಂಸ್ಥೆಯಲ್ಲಿ ಹತ್ತಿ ವಿಭಾಗದ ಪೋಷಕರಾಗಿ ಹಾಗೂ ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿ ಅಧಿಕಾರಿಯಾಗಿ ಅನನ್ಯ ಸೇವೆ.
ರಾಜ್ಯ ಸರ್ಕಾರದ ಸ್ವಉದ್ಯೋಗ ಯೋಜನೆಯಡಿ ಲಘು ಪೋಷಕಾಂಶಗಳು ಮತ್ತು ಮಧ್ಯಮ ಪೋಷಕಾಂಶಗಳ ಬಗ್ಗೆ ಸಂಶೋಧನೆ ನಡೆಸಿರುವ ಶ್ರೀಯುತರು ಲಘು ಪೋಷಕಾಂಶ ಉತ್ಪಾದನಾ ಘಟಕಗಳ ಸ್ಥಾಪಕರು. ಲಘು ಪೋಷಕಾಂಶ ಉಪಯೋಗ ಕುರಿತು ಕೃಷಿಕರಿಗೆ, ಕೃಷಿ ಸಂಸ್ಥೆಗಳಿಗೆ ಶ್ರೀಯುತರು ಮಾರ್ಗದರ್ಶಿ, ಆ ಮೂಲಕ ದೇಶದ ಲಘು ಪೋಷಕಾಂಶ ಉದ್ಯಮದ ಪಿತಾಮಹರೆನಿಸಿರುವರು.
ಸಾವಯವ ಗೊಬ್ಬರ ಕುರಿತು ರೈತರಿಗೆ ತಿಳಿವಳಿಕೆ ನೀಡುವ ಕೃಷಿ ವಿಜ್ಞಾನಿ ಶೆಟ್ಟಿ ಅವರು ಮುಂದಾಲೋಚನೆಯುಳ್ಳ ಕುಶಲ ಉದ್ಯಮಿಯೂ ಹೌದು. ಅವರು ಬರೆದಿರುವ ಬಹುಪಯೋಗಿ ಸಂಶೋಧನಾ ಲೇಖನಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಜರ್ನಲ್‌ಗಳಲ್ಲಿ ಪ್ರಕಾಶಿಸಿವೆ.
ಶ್ರೀಯುತರು ಕೃಷಿ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಅಖಿಲ ಭಾರತೀಯ ಸಾಧಕರ ಸಮ್ಮೇಳನದಲ್ಲಿ ಗೌರವ, ರಾಷ್ಟ್ರೀಯ ಒಕ್ಕೂಟ ಪ್ರಶಸ್ತಿ ಸಂದಿದೆ. ಪ್ರಸ್ತುತ ಅವರು ಜೈವಿಕ ಕೀಟನಾಶಕ ಸಂಶೋಧನಾ ಮಂಡಳಿಯ ಹಾಗೂ ಕೇಂದ್ರ ಸರ್ಕಾರದ ಕೃಷಿ ವ್ಯವಹಾರ ಕಾರ್ಯನಿರತ ಮಂಡಳಿ ಸದಸ್ಯರು.
ರೈತರಿಗೆ ನೆರವಾಗುತ್ತ ಕ್ರಿಯಾಶೀಲತೆ ಮತ್ತು ಸಂಶೋಧನಾ ಪ್ರವೃತ್ತಿ ರೂಢಿಸಿಕೊಂಡ ಕೃಷಿ ವಿಜ್ಞಾನಿ ಶ್ರೀ ಡಾ. ಜಿ.ಪಿ.ಶೆಟ್ಟಿ.

Categories
ಕೃಷಿ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಪಾಪಮ್ಮ

ಹಳ್ಳಿ ಹಳ್ಳಿಗಳಲ್ಲಿ ಸಾವಯವ ಕೃಷಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ, ಓದು ಬರಹ ಬಾರದ ಪರಿಶಿಷ್ಟ ಜಾತಿಯ ಬಡ ಕೃಷಿಕ ಮಹಿಳೆ ಶ್ರೀಮತಿ ಪಾಪಮ್ಮ.
ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕು ಕುಂಭರಹಳ್ಳಿಯವರಾದ ಶ್ರೀಮತಿ ಪಾಪಮ್ಮ ಅವರ ಕುಟುಂಬ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡವರು. ಇರುವ ಸ್ವಲ್ಪ ಜಮೀನಿನಲ್ಲಿಯೇ ವ್ಯವಸಾಯ ಮಾಡುತ್ತಿರುವ ಶ್ರೀಮತಿ ಪಾಪಮ್ಮ “ಗ್ರಾಮವಿಕಾಸ ಸಂಸ್ಥೆ’ಯ ಕ್ರಿಯಾಶೀಲ ಕಾರ್ಯಕರ್ತೆ. ಒಕ್ಕಲುತನದ ಹೊಸ ಆವಿಷ್ಕಾರಗಳತ್ತ ಅಪರಿಮಿತ ಆಸಕ್ತಿ. ಸಾವಯವ ಕೃಷಿಯ ಮಹತ್ವವನ್ನು ಅರಿತಿರುವ ಇವರು ಅದರ ಪ್ರಯೋಜನಗಳನ್ನು ರೈತರಿಗೆ ಮನಮುಟ್ಟುವಂತೆ ವಿವರಿಸಿ ವ್ಯಾಪಕ ಜನಜಾಗೃತಿಯನ್ನು ಉಂಟುಮಾಡುತ್ತಿದ್ದಾರೆ.
ಜಾನಪದ ಜಾತ್ರೆ, ಜನಪದ ವಸ್ತುಪ್ರದರ್ಶನ, ಮೊದಲಾದ ಮೇಳಗಳಲ್ಲಿ ಗ್ರಾಮವಿಕಾಸ ಸಂಸ್ಥೆಯ’ ಮೂಲಕ ಬಿತ್ತನೆ ಬೀಜಗಳ ಸಂಗ್ರಹ ಬ್ಯಾಂಕನ್ನು ತೆರೆದು ರೈತರಿಗೆ ನೆರವಾಗುತ್ತಿದ್ದಾರೆ.
ತಮ್ಮ ಉಪಜೀವನ ಕಾರ್ಯಗಳ ನಡುವೆಯೇ ಸಮಾಜಕ್ಕೆ ಹೇಗೆ ನೆರವಾಗಬಹುದೆಂಬುದಕ್ಕೆ ಜ್ವಲಂತ ನಿದರ್ಶನ ಶ್ರೀಮತಿ ಪಾಪಮ್ಮ.

Categories
ಕೃಷಿ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಮೀರಾತಾಯಿ ಕೊಪ್ಪಿಕ‌ರ್‌

ಯಾವ ಪುರುಷನಿಗೂ ಕಡಿಮೆ ಇಲ್ಲದಂತೆ ಕೃಷಿ ನಂಬಿ ದುಡಿಯುತ್ತಿರುವ ಭೂಮಿ ತೂಕದ ಮಹಿಳೆ ಶ್ರೀಮತಿ ಮೀರಾತಾಯಿ ಕೊಪ್ಪಿಕರ್ ಅವರು.
ಧಾರವಾಡ ಜಿಲ್ಲೆಯಲ್ಲಿ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ ಮೀರಾತಾಯಿ ಅವರು, ಓದಿನ ಹಂಬಲಕ್ಕಿಂತ ಹೆಚ್ಚಾಗಿ ಕೃಷಿ ಕಡೆಗೆ ಒಲಿದವರು. ಮಲೆನಾಡು, ಬಯಲು ಸೀಮೆಗಳೆರಡನ್ನು ಹೊದ್ದಿರುವ ಗಂಡು ಮೆಟ್ಟಿನ ನಾಡಾದ ಧಾರವಾಡದಲ್ಲಿ ಕೃಷಿ ಮಾಡುವುದೆಂದರೆ ಅವರಿಗದು ಬದುಕಿನ ಪರಿ.
ಹಸಿರು ಕ್ರಾಂತಿ ಮತ್ತು ಜಾಗತೀಕರಣದ ನಾಗಾಲೋಟದಲ್ಲಿ ಅತಿಯಾದ ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸುತ್ತ ಮೂಲತಳಿಗಳನ್ನೇ ಕಳೆದುಕೊಳ್ಳುತ್ತಿದ್ದ ಕೃಷಿ ಕ್ಷೇತ್ರದಲ್ಲಿ ಸದ್ದಿಲ್ಲದೇ ದೇಸಿ ತಳಿಗಳನ್ನು ಸಂರಕ್ಷಿಸುತ್ತ ಸಾವಯವ ಕೃಷಿಯಲ್ಲಿ ತೊಡಗಿಕೊಂಡವರು. ಸಾವಯವ ಕೃಷಿಯಲ್ಲಿ ಇವರು ಮಾಡಿದ ಮೌನಕ್ರಾಂತಿ ನಾಡಿನ ನೂರಾರು ಕೃಷಿಕರಲ್ಲಿ ಬದುಕಿನ ಭರವಸೆ ಮೂಡಿಸಿದೆ.
ಸಾವಯವ ಕೃಷಿಯಲ್ಲಿ ಶ್ರೀಮತಿ ಮೀರಾತಾಯಿ ಕೊಪ್ಪಿಕರ್ ಅವರು ಮಾಡಿರುವ ಸಾಧನೆ ಬಸವಳಿದ ಬಡರೈತರಿಗೆ ಹೊಸ ದಾರಿದೀಪ.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಅಂಬಾತನಯ ಮುದ್ರಾಡಿ

ಬಹುಮುಖ ಪ್ರತಿಭೆಯ ಯಕ್ಷಗಾನದ ಅರ್ಥಧಾರಿಯಾಗಿ, ಹರಿದಾಸ ಮತ್ತು ಜಿನದಾಸರಾಗಿ ಖ್ಯಾತಿ ಪಡೆದ ಕಲಾವಿದರು ಅಂಬಾತನಯ ಮುದ್ರಾಡಿ.
ಸಾಮಗ, ಶೇಣಿ, ಪೊಲ್ಯ, ಸೀತಾನದಿ, ಕುಂಬಳೆ, ಜೋಷಿ, ಕೋಳ್ಳೂರು ಇತರ ಮುಖ್ಯರೊಂದಿಗೆ ಯಕ್ಷಗಾನದಲ್ಲಿ ಅರ್ಥಧಾರಿಯಾಗಿ ಶ್ರೀಯುತರು ಖ್ಯಾತಿ ಪಡೆದವರು. ಶ್ರೀ ಇಡುಗಂಜಿ ಮತ್ತು ಶ್ರೀ ಅಮೃತೇಶ್ವರಿ ಮೇಳಗಳಲ್ಲಿ ಎರಡು ವರ್ಷ ಅತಿಥಿ ಕಲಾವಿದರಾಗಿ ಅಂಬಾತನಯ ಮುದ್ರಾಡಿ ಅವರಿಂದ ಸೇವೆ ಸಂದಿದೆ.
ಮಂಜುಲಗಾನ- ಶಿಶುಗೀತೆ, ಭಕ್ತ ಕುಚೇಲ, ರುಕ್ಕಾಂಗದ, ಅಹಮ್ಮೋದ್ಧಾರ- ಏಕಾಂಕ ನಾಟಕಗಳು ಮತ್ತು ಭಜನೆಗಳ ರಚನೆ ಮಾಡಿರುವ ಶ್ರೀಯುತರು ಅನೇಕ ನಾಟಕಗಳನ್ನು ಬರೆದಿರುವರು. ಹೆಬ್ರಿ ಕರ್ನಾಟಕ ಸಂಘದ ಕಾರ್ಯದರ್ಶಿ, ಅಧ್ಯಕ್ಷರಾಗಿ ಗೌರವ, ಕಾರ್ಕಳ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಏಳು ವರ್ಷ ಸೇವೆ ಹಾಗೂ ಅನೇಕ ಸಾಹಿತ್ಯ ಸಮ್ಮೇಳನಗಳಲ್ಲಿ ಅಧ್ಯಕ್ಷತೆ ಮತ್ತು ಪ್ರಬಂಧ, ಕವನಗಳ ಮಂಡನೆ ಶ್ರೀಯುತರ ಹೆಗ್ಗಳಿಕೆಗಳು. ಕಳೆದ ೩೦ ವರ್ಷಗಳಿಂದ ಹರಿದಾಸರಾಗಿ ಸನಾತನ ಧರ್ಮ ಸಂಸ್ಕೃತಿಯ ಪ್ರಚಾರ, ೨೦ ವರ್ಷಗಳಿಂದ ಜೈನೇತರರಾಗಿ ಜಿನಕಥೆ ಮಾಡಿದ ಹೆಗ್ಗಳಿಕೆ ಅವರದು.
ಆಕಾಶವಾಣಿ ಕಲಾವಿದರೂ ಆಗಿರುವ ಅಂಬಾತನಯ ಮುದ್ರಾಡಿ ಅವರು ಹಲವು ಶಿಕ್ಷಣ ಸಂಸ್ಥೆಗಳಿಗೆ ಧನಸಹಾಯ ನೀಡುವ ಮೂಲಕ ಸಮಾಜ ಸೇವೆಯಲ್ಲೂ ತೊಡಗಿರುವರು.
ಶ್ರೀಯುತರು ತಮ್ಮ ಸಾಧನೆಗಾಗಿ ಪೇಜಾವರ ಶ್ರೀಗಳಿಂದ ರಾಮ ವಿಠಲ ಪುರಸ್ಕಾರ, ಪೊಳಲಿ ಶಂಕರ ನಾರಾಯಣಶಾಸ್ತ್ರಿ ಹಾಗೂ ಕುಕ್ಕಿಲ ಕೃಷ್ಣಭಟ್ಟ ಪ್ರಶಸ್ತಿಗೆ ಭಾಜನರು.
ಯಕ್ಷಗಾನ ಕಲಾವಿದರಾಗಿ ಹಾಗೂ ಹರಿದಾಸರಾಗಿ ಅರ್ಥಪೂರ್ಣ ಸೇವೆಗೈದವರು ಶ್ರೀ ಅಂಬಾತನಯ ಮುದ್ರಾಡಿ.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ. ಸಣ್ಣರಾಮನಾಯ್ಕ

ಜಾನಪದ ಮತ್ತು ಬುಡಕಟ್ಟು ವಿಷಯಗಳಲ್ಲಿ ವಿಶೇಷ ಅಧ್ಯಯನ ನಡೆಸಿ ಜಾನಪದ ಸಾಹಿತ್ಯಕ್ಕೆ ಮೌಲ್ಯಯುತ ಕಾಣಿಕೆ ನೀಡಿದವರು ಡಾ. ಸಣ್ಣರಾಮ ನಾಯ್ಕ ಅವರು.
೧೯೫೪ರಲ್ಲಿ ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಕೋಟಿಪುರ ತಾಂಡದಲ್ಲಿ ಜನನ, ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜು, ಹೊಸನಗರದ ಕೊಡಚಾದ್ರಿ ಕಾಲೇಜುಗಳಲ್ಲಿ ಅಧ್ಯಾಪನ ವೃತ್ತಿ. ಪ್ರಸ್ತುತ ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಣೆ.
ಶ್ರೀಯುತರ ಆಸಕ್ತಿಯ ಕ್ಷೇತ್ರಗಳು ಜಾನಪದ ಮತ್ತು ಬುಡಕಟ್ಟು ಅಧ್ಯಯನ. ‘ಲಂಬಾಣಿ-ಸಂಸ್ಕೃತಿ’ ಮತ್ತು ‘ಬುಡಕಟ್ಟು- ಸಂಸ್ಕೃತಿ’ ಸಂಶೋಧನಾ ಕೃತಿಗಳು. ‘ಜಡತೆ ಮತ್ತು ಚಲನೆ’ ಹಾಗೂ ‘ಅಂಬೇಡ್ಕರ್ ಮತ್ತು ಮೀಸಲಾತಿ ಕುರಿತು ವಿಚಾರ ಸಾಹಿತ್ಯ, ಬಂಕಿಮ ಚಂದ್ರರ ವಿಷವೃಕ್ಷ ಮತ್ತು ಆನಂದ ಮಠ ವಿಮರ್ಶಾ ಕೃತಿಗಳ ರಚನೆ. ‘ಕಾಮದಹನ ಮತ್ತು ‘ಕೆಮ್ಮಾವು’ ಕಥಾ ಸಂಕಲನಗಳ ಪ್ರಕಟ.
ಲಂಬಾಣಿ ಗಾದೆಗಳು, ಲಂಬಾಣಿ ಒಗಟುಲೋಕ, ಲಂಬಾಣಿ ಸಾಂಸ್ಕೃತಿಕ ಒಗಟುಗಳಂತಹ ವಿಶಿಷ್ಟ ಕೃತಿಗಳನ್ನು ನೀಡುವ ಮೂಲಕ ಜಾನಪದ ಸಾಹಿತ್ಯದ ಶ್ರೀಮಂತಿಕೆ ಹೆಚ್ಚಿಸಿದವರು ಡಾ. ಸಣ್ಣರಾಮ ನಾಯ್ಕ.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀಮತಿ ಫರಿದಾ ರಹಮತುಲ್ಲಾ ಖಾನ್

ಉರ್ದು ಕವಿ, ಸಾಹಿತಿ, ಪತ್ರಿಕೋದ್ಯಮಿ, ಶಿಕ್ಷಣ ತಜ್ಞೆ ಸಮಾಜ ಸೇವಕಿ ಅಲ್ಲದೇ ಶೋಷಿತ ಮಹಿಳೆ ಹಾಗೂ ಮಕ್ಕಳ ಸಾಮಾಜಿಕ ಅಭ್ಯುದಯಕ್ಕಾಗಿ ಶ್ರಮಿಸುತ್ತಿರುವ ಪ್ರಜ್ಞಾವಂತ ಮಹಿಳೆ ಶ್ರೀಮತಿ ಫರೀದಾ ರಹಮತುಲ್ಲಾ ಖಾನ್.
ಬೆಂಗಳೂರು, ಧಾರವಾಡ, ಅಲೀಘಡ್, ವಿಶ್ವವಿದ್ಯಾನಿಲಯಗಳಿಂದ ಸ್ನಾತಕ ಪದವಿ ಪಡೆದಿರುವ ಶ್ರೀಮತಿ ಫರೀದಾ ಅವರು ಕಳೆದ ೨೦ ವರ್ಷಗಳಿಂದ ಝರಿನ್ ಶುವಾಯೇಂ” ಉರ್ದು ಮಾಸಿಕ ಪತ್ರಿಕೆಯ ಸಂಪಾದಕಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.
“ಟೂಟೆಮಾಲಾ ಭಿಕ್ಷೆ ಮೋತಿ’, ‘ದರ್ದ್ ಕಿ ಗೂಂಜ್’, ‘ಖಾತಿಲ್ ಮಸಿಹ’ ಎಂಬ ಸಣ್ಣ ಕಥೆ ಸಂಕಲಗಳನ್ನು ‘ಅನಮೋಲ್ ಯಾದೇಂ’, ‘ಕಿಸಮತ್ ಕಾಯ್’ ಕಾದಂಬರಿಗಳನ್ನು ಬರೆದು ಪ್ರಕಟಿಸಿದ್ದಾರೆ.
ಮೌಂಟ್ ಅರಾಫತ್ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಮಕ್ಕಳಿಗೆ ನರ್ಸರಿಯಿಂದ ಹೈಸ್ಕೂಲು ವರೆಗೆ ಶಿಕ್ಷಣ ನೀಡುತ್ತಿದ್ದಾರೆ. ಕನ್ನಡ ಪ್ರಥಮ ಭಾಷೆಯೊಡನೆ ಹೋಲೀ ಮದರ್ಸ್ ಇಂಗ್ಲಿಷ್ ಸ್ಕೂಲನ್ನು ನಡೆಸುತ್ತಿದ್ದಾರೆ.
ಶೋಷಿತ ಹೆಣ್ಣುಮಕ್ಕಳ ಹಾಗೂ ಮಕ್ಕಳ ಕಲ್ಯಾಣಕ್ಕಾಗಿ ‘ಅಲ್ ಹುದ್ ವಿಮೆನ್ಸ್ ವೆಲ್ ಫೇರ್ ಸೊಸೈಟಿ’ ಸ್ಥಾಪಿಸಿದ್ದಾರೆ. ಗ್ಯಾರೇಜನಲ್ಲಿ ದುಡಿಯುವ ಹಾಗೂ ಕೊಳೆಗೇರಿ ಮಕ್ಕಳ ಬಗ್ಗೆ ವಿಶೇಷ ಆಸ್ಥೆ ವಹಿಸಿ ಅವರಿಗೆ ಉಚಿತ ಶಿಕ್ಷಣವನ್ನು ಕೊಡಿಸುತ್ತಿದ್ದಾರೆ.
ಮಹಿಳೆಯರ ಮೇಲಿನ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಕೌಟುಂಬಿಕ ಹಿಂಸೆ, ಬಾಲಕಾರ್ಮಿಕ ಪದ್ಧತಿಗಳ ವಿರುದ್ಧ ಪ್ರಬಲವಾಗಿ ಧ್ವನಿಯೆತ್ತಿ ಹೋರಾಡುತ್ತಿರುವ ಅಪರೂಪದ ವಿದ್ಯಾವಂತ ಮುಸ್ಲಿಂ ಮಹಿಳೆ ಶ್ರೀಮತಿ ಫರೀದಾ ರಹಮತುಲ್ಲಾ ಖಾನ್

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಎಸ್.ಆರ್. ರಾಮಸ್ವಾಮಿ

ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಐದು ದಶಕಗಳಿಂದ ಗಮನಾರ್ಹ ಸಾಧನೆ ಮಾಡಿ ಹೆಸರಾದವರು ಶ್ರೀ ಎಸ್.ಆರ್.ರಾಮಸ್ವಾಮಿ ಅವರು.
ಶ್ರೀಯುತರು ಕಳೆದ ೨೯ ವರ್ಷಗಳಿಂದ ‘ಉತ್ಥಾನ’ ಮಾಸಪತ್ರಿಕೆಯ ಮತ್ತು ‘ರಾಷ್ಟೋತ್ಥಾನ ಸಾಹಿತ್ಯ’ ಪ್ರಕಾಶನದ ಪ್ರಧಾನ ಸಂಪಾದಕರು. ಪರಿಸರದ ಬಗ್ಗೆ ಅಪಾರ ಕಾಳಜಿ, ಹಲವು ಪರಿಸರ ಆಂದೋಲನಗಳಲ್ಲಿ ಭಾಗಿ. ಅಭ್ಯುದಯ ಅರ್ಥಶಾಸ್ತ್ರದಲ್ಲಿ ಆಳವಾದ ಪರಿಶ್ರಮವುಳ್ಳ ಅವರು ಜಾಗತೀಕರಣದ ಹಿನ್ನೆಲೆಯಲ್ಲಿ ಬರೆದ ‘ಆರ್ಥಿಕತೆಯ ಎರಡು ಧ್ರುವ’ ಕೃತಿ ಸಕಾಲಿಕ.
ರಾಷ್ಟ್ರ ನೇತಾರ ಸುಭಾಷ್ ಚಂದ್ರ ಬೋಸ್ ಅವರ ಸಮಗ್ರ ಜೀವನ ಚರಿತ್ರೆ ‘ಕೋಲ್ಕಿಂಚು’, ಜಯಪ್ರಕಾಶ್ ನಾರಾಯಣ್‌, ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಜೀವನ ಚರಿತ್ರೆ ಒಳಗೊಂಡಂತೆ ೪೫ ಕೃತಿಗಳ ಲೇಖಕರು.
ಯಾವುದೇ ವಿಷಯವನ್ನು ತಲಸ್ಪರ್ಶಿಯಾಗಿ ನೋಡಿ, ವಿಶ್ಲೇಷಿಸುವ ಚಾಕಚಕ್ಯತೆ ಅವರಿಗುಂಟು. ಡಿವಿಜಿ, ವೀ.ಸೀತಾರಾಮಯ್ಯ ಮೊದಲಾದ ಧೀಮಂತರನ್ನು ಕುರಿತು ಅವರು ಬರೆದ ‘ದೀವಟಿಗೆಗಳು ವ್ಯಕ್ತಿಚಿತ್ರ ಮಾಲೆ ಸಂಗ್ರಹಯೋಗ್ಯ ಕೃತಿ. ಪತ್ರಿಕೋದ್ಯಮದ ಸೇವೆಗಾಗಿ ಆರ್ಯಭಟ ಪುರಸ್ಕಾರ ಪಡೆದಿರುವ ಸಮಾಜಮುಖಿ ಚಿಂತಕರು ಶ್ರೀ ಎಸ್.ಆರ್.ರಾಮಸ್ವಾಮಿ.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ. ವೀರಣ್ಣ ಬಿ.ರಾಜೂರ

ವಚನ, ಸಾಂಗತ್ಯ ಮತ್ತು ಜಾನಪದ ಕ್ಷೇತ್ರಗಳಲ್ಲಿ ಕೃಷಿ ಮಾಡಿದವರು ಡಾ. ವೀರಣ್ಣ ಬಿ. ರಾಜೂರ ಅವರು. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ಬೆನಕನಾಳದಲ್ಲಿ ಜನನ, ‘ಕನ್ನಡ ಸಾಂಗತ್ಯ ಸಾಹಿತ್ಯ’ ಕುರಿತು ಸಂಶೋಧನೆ ನಡೆಸಿ ಬಳಿಕ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಅಧ್ಯಾಪನ ವೃತ್ತಿ ಆರಂಭ.
ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷರಾಗಿ, ಅಂತಾರಾಷ್ಟ್ರೀಯ ಕಿಟೆಲ್ ಸಮ್ಮೇಳನದ ನಿರ್ದೇಶಕರಾಗಿ ಸೇವೆ ಸಲ್ಲಿಕೆ. ೨೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಪಿಎಚ್.ಡಿ ಮತ್ತು ಎಂ.ಫಿಲ್ ಮಾರ್ಗದರ್ಶಕರು. ಕರ್ನಾಟಕ ನಾಟಕ ಅಕಾಡೆಮಿಯ ಗೌರವ ಫೆಲೋಶಿಪ್ ಪಡೆದಿರುವ ಶ್ರೀಯುತರು, ಹಲವಾರು ವಿಚಾರ ಕಮ್ಮಟ, ಸಮ್ಮೇಳನಗಳಲ್ಲಿ ವಿಶೇಷ ಉಪನ್ಯಾಸ ನೀಡಿರುವರು.
ಕನ್ನಡ ಸಾಂಗತ್ಯ ಸಾಹಿತ್ಯ, ವಚನ ಅಧ್ಯಯನ, ಸ್ವರವಚನಗಳು, ಬಸವೋತ್ತರ ಯುಗದ ವಚನಕಾರರು, ಏಕಾಂಕ ನಾಟಕಗಳ ಸಂಗ್ರಹ ಅವರ ಸ್ವತಂತ್ರ ಕೃತಿಗಳು. ಉರಿಲಿಂಗ ದೇವರ ವಚನಗಳು, ಶರಣರ ನುಡಿಮುತ್ತುಗಳು, ವಚನಾಮೃತಸಾರ ಅವರು ಸಂಪಾದಿಸಿರುವ ಕೃತಿಗಳಲ್ಲಿ ಪ್ರಮುಖವಾದವು.
ವಚನ, ಸಾಂಗತ್ಯ ಮತ್ತು ಜಾನಪದ ಕ್ಷೇತ್ರಗಳಲ್ಲಿ ಡಾ. ವೀರಣ್ಣ ಬಿ.ರಾಜೂರ ಅವರು ಸಲ್ಲಿಸಿರುವ ಸೇವೆ ಮೌಲ್ಯಯುತ.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಪ್ರೊ.ಎಸ್.ಜಿ. ಸಿದ್ದರಾಮಯ್ಯ

ಸೂಕ್ಷ್ಮವಾಗಿ ಬದುಕುವುದು, ಬರೆಯುವುದು ಎರಡೂ ಪ್ರಿಯವಾದ ಕವಿ, ವಿಮರ್ಶಕ, ನಾಟಕಕಾರರು ಪ್ರೊ. ಎಸ್.ಜಿ.ಸಿದ್ದರಾಮಯ್ಯ ಅವರು.
ಪ್ರೊ.ಸಿದ್ದರಾಮಯ್ಯ ಅವರ ಬದುಕು, ಬರಹ, ಚಿಂತನಗಳನ್ನು ರೂಪಿಸಿದ ಶಕ್ತಿಗಳು ವಚನ ಸಾಹಿತ್ಯ ಹಾಗೂ ಜಾನಪದ. ತುಮಕೂರು ಜಿಲ್ಲೆ ಸಿಂಗಾಪುರ ಗ್ರಾಮದಲ್ಲಿ ೧೯೪೬ರಲ್ಲಿ ಜಾನಪದ ಸಂಸ್ಕೃತಿಯ ಪಾರಂಪರಿಕ ರೈತ ಕುಟುಂಬದಲ್ಲಿ ಜನನ, ಬೆಂಗಳೂರು ವಿಶ್ವವಿದ್ಯಾಲಯದಿಂದ ಪ್ರಥಮ ಶ್ರೇಣಿಯಲ್ಲಿ ಕನ್ನಡ ಸಾಹಿತ್ಯದಲ್ಲಿ ಎಂ.ಎ ಪದವಿ, ಮಡಿಕೇರಿ, ಸಿಂಧನೂರು ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ, ತುಮಕೂರು, ಹೊಸದುರ್ಗ, ಮಧುಗಿರಿಯಲ್ಲಿ ಪ್ರಾಂಶುಪಾಲರಾಗಿ ಹಾಗೂ ತುಮಕೂರು ಸ್ನಾತಕೋತ್ತರ ಕೇಂದ್ರದ ಗೌರವ ಪ್ರಾಧ್ಯಾಪಕರಾಗಿ ಸೇವೆ.
ಕನ್ನಡ ಸಾಹಿತ್ಯ ಪರಿಷತ್‌ನ ಭೂಮಿ ಬಳಗದ ಸಕ್ರಿಯ ಸದಸ್ಯರು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಶ್ರೀಯುತರು ಕನ್ನಡ ಸಾಹಿತ್ಯ ಲೋಕಕ್ಕೆ ಸಲ್ಲಿಸಿರುವ ಸೇವೆ ಅನುಪಮ. ಗಾಲ್ಫ್ ಉಬ್ಬಿನ ಮೇಲೆ, ಕಾಡುವ ಬೇಲಿ ಹೂ, ಅವಳೆದೆಯ ಜಂಗಮ- ಕಾವ್ಯ ಸಂಕಲನ, ಸಾಲಾವಳಿ, ಕೇಡಿಲ್ಲವಾಗಿ, ನಿಶ್ಯಬ್ದದ ಜಾಡು ವಿಮರ್ಶಾ ಕೃತಿಗಳು ಹಾಗೂ ದಂಡೆ ಮತ್ತು ದಾಳ ಅವರು ರಚಿಸಿರುವ ನಾಟಕ ಕೃತಿಗಳು.
ಶ್ರೀಯುತರು ೧೯೯೭ರಲ್ಲಿ ಪು.ತಿ.ನ. ಕಾವ್ಯ ಪ್ರಶಸ್ತಿ, ೨೦೦೩ನೇ ಸಾಲಿನ ಜಿ.ಎಸ್.ಎಸ್. ಪ್ರಶಸ್ತಿ ಹಾಗೂ ೧೯೯೬ ಮತ್ತು ೨೦೦೦ನೇ ಸಾಲಿನಲ್ಲಿ ಎರಡು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ, ಗೊರೂರುಪ್ರತಿಷ್ಠಾನ ಕಾವ್ಯ ಪ್ರಶಸ್ತಿಗೆ ಪಾತ್ರರು.
ಜೀವಪರತೆಯ ಮನೋಧರ್ಮದ ಲೇಖಕ ಪ್ರೊ. ಎಸ್.ಜಿ.ಸಿದ್ದರಾಮಯ್ಯ ಅವರು ಇದ್ದಲ್ಲೆಲ್ಲ ಸಾಹಿತ್ಯ ಚಟುವಟಿಕೆಗಳ ಕಲರವ.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀಮತಿ ವಿಜಯಾ ದಬ್ಬೆ

ಸ್ತ್ರೀವಾದಿ ದೃಷ್ಟಿಕೋನ ಒಂದು ಮಾನಸಿಕ ಸ್ಥಿತಿ, ತಾತ್ವಿಕ ನೆಲೆ. ಈ ನೆಲೆಯನ್ನು ಯಾರಾದರೂ ಹೊಂದಿರಬಹುದು ಎಂದು ಸ್ತ್ರೀವಾದಕ್ಕೆ ನವೀನ ಆಯಾಮ ನೀಡಿದವರು ಲೇಖಕಿ, ವಿಮರ್ಶಕಿ ವಿಜಯಾ ದಬ್ಬೆ.
ಕಿರಿಯರ ಬದುಕಿನಲ್ಲಿ ಅವರು ಹಚ್ಚಿದ ವಿಚಾರ, ವಿಮರ್ಶೆ, ಸ್ತ್ರೀವಾದದ ಹಣತೆ ಸರ್ವಕಾಲಕ್ಕೂ ಪ್ರಕಾಶಮಾನವಾಗಿ ಬೆಳಗುವಂಥದ್ದು.
೧೯೫೩ರಲ್ಲಿ ಹಾಸನ ಜಿಲ್ಲೆಯ ದಬ್ಬೆ ಎಂಬ ಪುಟ್ಟ ಗ್ರಾಮದಲ್ಲಿ ಜನನ. ತಂದೆ ಕೃಷ್ಣಮೂರ್ತಿ, ತಾಯಿ ಸೀತಾಲಕ್ಷ್ಮಿ ಪದವಿವರೆಗೆ ಹಾಸನದಲ್ಲಿ ಕಲಿಕೆ, ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ. ನಾಗಚಂದ್ರ ಒಂದು ಅಧ್ಯಯನ” ಅವರ ಸಂಶೋಧನಾ ಕೃತಿ.
ಸಮಾಜದ ಅಸಂಖ್ಯಾತ ಅನಾಥ ಮಹಿಳೆಯರಿಗೆ ‘ಸಮತಾ ವೇದಿಕೆ’ ಮೂಲಕ ಬದುಕಿನ ಶಕ್ತಿಯಾದವರು. ‘ಇರುತ್ತವೆ’ ಅವರ ಪ್ರಥಮ ಕವನ ಸಂಕಲನ. ಆ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರ ಪ್ರವೇಶ. ವಿಜಯಾ ಅವರು ನೀಡಿದ ಮೌಲ್ಯಯುತ ಸಾಹಿತ್ಯ ಅನೇಕ ಕಿರಿಯ ಲೇಖಕಿಯರನ್ನು ರೂಪಿಸುವಲ್ಲಿ ಸಹಾಯಕ.
ಅವರ ವಿಚಾರಲಹರಿ ಮತ್ತು ಜೀವನ ದೃಷ್ಟಿ ‘ಮಹಿಳೆ ಸಾಹಿತ್ಯ ಸಮಾಜ’ ಹಾಗೂ ‘ನಾರಿ: ದಾರಿ ದಿಗಂತ’ ಮೊದಲಾದ ಕೃತಿಗಳಲ್ಲಿ ಬಿಂಬಿತ. ಇವರ ಸಾಧನೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ವರ್ಧಮಾನ ಉದಯೋನ್ಮುಖ ಲೇಖಕಿ ಪ್ರಶಸ್ತಿ, ರತ್ನಮ್ಮ ಹೆಗಡೆ ಬಹುಮಾನ ಹಾಗೂ ಅನುಪಮಾ ಪ್ರಶಸ್ತಿ ಸಂದಿವೆ. ಲಿಂಗ ಭೇದವಿಲ್ಲದ ಸಮಾಜ ವ್ಯವಸ್ಥೆಗಾಗಿ ಹೋರಾಟ ಮಾಡುತ್ತ ಚಳವಳಿಯಲ್ಲಿ ತೊಡಗಿಸಿಕೊಂಡ ಲೇಖಕಿ ಶ್ರೀಮತಿ ವಿಜಯಾ ದಬ್ಬೆ ಅವರು.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ

ಪ್ರೊ. ಪಿ. ಬಲರಾಮ್

ಮಾಲಿಕ್ಯುಲರ್ ಬಯೋಫಿಜಿಕ್ಸ್ ಹಾಗೂ ಬಯೋಆರಾನಿಕ್ ಕೆಮೆಸ್ಟ್ರಿಗಳಲ್ಲಿ ವಿಶೇಷ ತಜ್ಞರಾಗಿರುವ ಖ್ಯಾತ ವಿಜ್ಞಾನಿಗಳು ಪ್ರೊ. ಪಿ. ಬಲರಾಮ್ ಅವರು.
ಐ.ಐ.ಟಿ. ಕಾನಪುರ ದಿಂದ ಎಂ.ಎಸ್‌ಸಿ ಪದವಿ ಹಾಗೂ ಅಮೆರಿಕಾದ ಪಿಟ್ಸ್ ಬರ್ಗ್ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿಗಳಿಕೆ.
ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್, ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ ಮತ್ತು ಥರ್ಡ್‌ವರ್ಲ್ಡ್ ಅಕಾಡೆಮಿ ಆಫ್ ಸೈನ್ಸಸ್ ಸಂಸ್ಥೆಗಳ ಫೆಲೋ.
ಸುಮಾರು ೪೦೦ಕ್ಕೂ ಹೆಚ್ಚು ಸಂಶೋಧನಾತ್ಮಕ ಪ್ರಬಂಧಗಳನ್ನು ಬರೆದು ವಿವಿಧ ವೇದಿಕೆಗಳಲ್ಲಿ ಮಂಡಿಸಿದ್ದಾರೆ. ಉಪನ್ಯಾಸಗಳನ್ನು ನೀಡಿದ್ದಾರೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ‘ಎಡಿಟೋರಿಯಲ್ ಬೋರ್ಡ್ಸ್ ಆಫ್ ಜರ್ನಲ್ಸ್ ನಲ್ಲಿ ಸೇವೆಸಲ್ಲಿಕೆ. ಭಾರತ ಸರ್ಕಾರದ ಅನೇಕ ಸಮಿತಿಗಳಲ್ಲಿ ಸದಸ್ಯರು.
ಶಾಂತಿ ಸ್ವರೂಪ ಭಟ್ನಾಗರ್ ಬಹುಮಾನ, ಜಿ.ಡಿ. ಬಿರ್ಲಾ ಪ್ರಶಸ್ತಿ, ಅಲುಮ್ಮಿ ಪ್ರಶಸ್ತಿ, ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಶ್ರೀಯುತರ ಅನನ್ಯ ಸಾಧನೆಗೆ ಅನೇಕಾನೇಕ ಪ್ರತಿಷ್ಠಿತ ಪ್ರಶಸ್ತಿ ಗೌರವಗಳು ಸಂದಿವೆ. ೧೯೯೫ ರಿಂದ ‘ಕರೆಂಟ್ ಸೈನ್ಸ್’ ಪತ್ರಿಕೆಯ ಸಂಪಾದಕರಾಗಿ ಸೇವೆಸಲ್ಲಿಕೆ.
ಪ್ರಸ್ತುತ ಬೆಂಗಳೂರಿನ ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್’ನ ನಿರ್ದೇಶಕರು, ಪ್ರಧಾನ ಮಂತ್ರಿಗಳ ವಿಜ್ಞಾನ ಸಲಹಾ ಮಂಡಳಿ ಮತ್ತು ಕೇಂದ್ರ ಮಂತ್ರಿಮಂಡಳದ ವಿಜ್ಞಾನ ಸಲಹಾಸಮಿತಿಯ ಸದಸ್ಯರಾಗಿದ್ದಾರೆ ಪ್ರಸಿದ್ಧ ವಿಜ್ಞಾನಿ ಪ್ರೊ. ಪಿ. ಬಲರಾಮ್ ಅವರು.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ

ಶ್ರೀ ಎಂ. ಅಣ್ಣಾದೊರೈ

ಭಾರತದ ಯಶಸ್ವಿ ಚಂದ್ರಯಾನ ಕಾರ್ಯಾಚರಣೆಯ ಯಶಸ್ಸಿಗೆ ಶ್ರಮಿಸಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳಲ್ಲಿ ಪ್ರಮುಖವಾಗಿ ನಿಲ್ಲುವ ವಿಜ್ಞಾನಿ ಎಂ. ಅಣ್ಣಾದೊರೈ
ಚೆನ್ನೈನಲ್ಲಿ ೧೯೫೮ರ ಜುಲೈ ೨ರಂದು ಜನನ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಚಿನ್ನದ ಪದಕ ಗಳಿಸುವ ಮೂಲಕ ಕಿರಿಯ ವಯಸ್ಸಿನಲ್ಲಿಯೇ ಸಾಧನೆಯ ಸೂಚನೆ ನೀಡಿದವರು. ಕೊಯಮತ್ತೂರಿನ ಪಿಎಸ್‌ಜಿ ತಾಂತ್ರಿಕ ಕಾಲೇಜಿನಲ್ಲಿ ಅಫ್ರೆಡ್ ಎಲೆಕ್ಟ್ರಾನಿಕ್ಸ್‌ನಲ್ಲಿ ಎಂ.ಇ ಪದವೀಧರರು.
೧೯೮೨ರಲ್ಲಿ ಬೆಂಗಳೂರಿನ ಇಸ್ರೋ ಉಪಗ್ರಹ ಕೇಂದ್ರ ಸೇರುವ ಮೂಲಕ ವೃತ್ತಿ ಬದುಕಿನ ಆರಂಭ. ಸ್ಯಾಟಲೈಟ್ ಸಿಮ್ಯುಲೇಟರ್ ಅಭಿವೃದ್ಧಿ ಪಡಿಸಿದ ತಂಡದ ನಾಯಕತ್ವ, ಐಆರ್‌ಎಸ್‌-೧ಎ, ಐಆರ್‌ಎಸ್-೧ಬಿ, ಇನ್ಸಾಟ್ – ೨ಎ ಮತ್ತು ಇನ್ಸಾಟ್ -೨ಬಿ ಉಪಗ್ರಹ ಕಾರ್ಯಾಚರಣೆಯ ತಂಡದ ವ್ಯವಸ್ಥಾಪಕರು.
ಇನ್ಸಾಟ್ ಸರಣಿಯ ೨ಸಿ, ೨ಡಿ, ೩ಬಿ, ೨೪, ೩೫, ಜಿಸ್ಯಾಟ್-೧ ಉಪಗ್ರಹಣ ಉಡಾವಣೆಯ ಯೋಜನೆಯ ನಿರ್ದೇಶಕರು. ೨೦೦೪ರಲ್ಲಿ ನಡೆದ ಚಂದ್ರಯಾನ-೧ರ ಸಿದ್ಧತೆಯ ಯೋಜನಾ ನಿರ್ದೇಶಕರಾಗಿದ್ದ ಅವರು ಇತ್ತೀಚೆಗಷ್ಟೇ ಯಶಸ್ವಿಯಾಗಿ ನಡೆದ ಚಂದ್ರಯಾನ-೧ ಕಾರ್ಯಾಚರಣೆಯಲ್ಲಿಯೂ ಮುಂದಾಳತ್ವ ವಹಿಸಿದ್ದರು.
ಉಪಗ್ರಹ ಉಡಾವಣಾ ಕಾರ್ಯಾಚರಣೆ, ತಂತ್ರಜ್ಞಾನ ಮತ್ತು ನಿರ್ವಹಣೆ ಕುರಿತಂತೆ ಇದುವರೆಗೂ ಅವರು ಮಂಡಿಸಿದ ಪ್ರಬಂಧಗಳ ಸಂಖ್ಯೆ ಸುಮಾರು ೫೫. ಉಪಗ್ರಹ ಉಡಾವಣೆ ಯೋಜನೆಯಲ್ಲಿನ ಕೊಡುಗೆಗಾಗಿ ಇಸ್ರೋದ ಪ್ರಮಾಣಪತ್ರ, ವಿಕ್ರಮ್ ಸಾರಾಭಾಯಿ ಸಂಶೋಧನಾ ಪ್ರಶಸ್ತಿ, ಇನ್ಸಾಟ್ ೨೩ ಅನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ತಂಡವನ್ನು ಮುನ್ನೆಡೆಸಿದ ಸಾಧನೆಗಾಗಿ ಪ್ರಶಸ್ತಿಗಳು ಸಂದಿವೆ.
ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕದ ಕೀರ್ತಿಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೇರಿಸಿದ ನಾಡಿನ ಶ್ರೇಷ್ಠ ವಿಜ್ಞಾನಿಗಳ ಸಾಲಿನಲ್ಲಿ ನಿಲ್ಲುತ್ತಾರೆ ಶ್ರೀ ಎಂ. ಅಣ್ಣಾದೊರೈ.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ

ಡಾ. ಎಸ್.ಕೆ. ಶಿವಕುಮಾರ್

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಪ್ರಮುಖ ವಿಜ್ಞಾನಿಗಳಲ್ಲಿ ಒಬ್ಬರು ಶ್ರೀರಂಗಪಟ್ಟಣ ಕೃಷ್ಣಮೂರ್ತಿ ಶಿವಕುಮಾರ್.
೧೯೯೮ರಿಂದಲೂ ಇಸ್ರೋದ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮ್ಯಾಂಡ್ ನೆಟ್‌ವರ್ಕ್‌ನ ನಿರ್ದೇಶಕರು. ದೂರ ಸಂವೇದಿ ಉಪಗ್ರಹಗಳ ನಿರ್ವಹಣೆ, ನಿಯಂತ್ರಣ ಘಟಕದ ಮುಖ್ಯಸ್ಥರು.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮದಲ್ಲಿ ೧೯೫೩ ಮಾರ್ಚ್‌ ೧೭ರಂದು ಜನನ, ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಸ್‌ಸಿ, ತದನಂತರ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಿಂದ ಬಿ.ಇ., ಎಂ.ಟೆಕ್ ಪದವಿ.
ಇಸ್ರೋದ ಅನೇಕ ಯಶಸ್ಸಿನಲ್ಲಿ ಭಾಗಿಯಾಗಿರುವ ಶ್ರೀಯುತರು ಇಸ್ರೋ ಅಭಿವೃದ್ಧಿಪಡಿಸಿದ ಪೂರ್ಣ ದೇಶಿ ತಂತ್ರಜ್ಞಾನದ ೧೦೦ ಅಡಿ ಸುತ್ತಳತೆಯ ಅಂತರಿಕ್ಷ ಜಾಲ ಆ್ಯಂಟೆನಾ ಅಭಿವೃದ್ಧಿಪಡಿಸುವ ಯೋಜನಾ ನಿರ್ದೇಶಕರೂ ಹೌದು. ಭಾರತದ ಪ್ರಥಮ ಚಂದ್ರಯಾನ-೧ ಯೋಜನೆಗೆ ನೆರವಾಗುವುದರ ಜೊತೆಗೆ ಭವಿಷ್ಯದ ಅಂತರಿಕ್ಷ ಯಾತ್ರೆಗಳಿಗೂ ಈ ಆ್ಯಂಟೆನಾ ಸಹಕಾರಿ.
ಶ್ರೀಯುತರು ಇಸ್ರೋ ಉಪಗ್ರಹ ಕೇಂದ್ರದಲ್ಲೂ ಕಾರ್ಯನಿರ್ವಹಿಸಿದ್ದು ಭಾಸ್ಕರ, ಆ್ಯಪಲ್, ಐಆರ್‌ಎಸ್ ಮತ್ತು ಇನ್ಸಾಟ್‌ ಉಪಗ್ರಹ ಉಡಾವಣೆ ಕಾರ್ಯಕ್ರಮಗಳಲ್ಲೂ ಭಾಗಿ.
ಭಾರತೀಯ ರಾಷ್ಟ್ರೀಯ ದೂರ ಸಂವೇದಿ ಪ್ರಶಸ್ತಿ, ಬಾಹ್ಯಾಕಾಶ ಮೂಲಸೌಕರ್ಯ ನಿರ್ವಹಣೆಯ ದಕ್ಷತೆಗಾಗಿ ಇಸ್ರೋ ಮೆರಿಟ್ ಅವಾರ್ಡ್‌ ಸಂದಿವೆ. ಅಂತರಿಕ್ಷ ಕ್ಷೇತ್ರದಲ್ಲಿ ಸ್ವಾಯತ್ತತೆ ಪಡೆಯುವ ಸಂಬಂಧ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ೪೦೦ ವಿಜ್ಞಾನಿಗಳ ತಂಡವನ್ನು ಅವರು ಮುನ್ನಡೆಸುತ್ತಿದ್ದಾರೆ.
ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಸತತವಾಗಿ ಸೇವೆ ಸಲ್ಲಿಸುತ್ತಿರುವ ಪ್ರಯೋಗಶೀಲ ವಿಜ್ಞಾನಿ ಶ್ರೀ ಎಸ್.ಕೆ.ಶಿವಕುಮಾರ್.