Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸ್ವಾತಂತ್ರ‍್ಯ ಹೋರಾಟಗಾರರು

ಬಸವರಾಜ ಬಿಸರಳ್ಳಿ

ಕೊಪ್ಪಳ ಜಿಲ್ಲೆಯವರಾದ ಬಸವರಾಜ ಬಿಸರಳ್ಳಿ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದವರು. ಖಾದಿ ಪ್ರಚಾರ ನಿರತ
ಸಮಾಜಸೇವಕರು ಸಹ.
೧೯೨೭ರಲ್ಲಿ ಜನಿಸಿದ ಬಸವರಾಜ ಅವರು ಎಳವೆಯಲ್ಲೇ ಗಾಂಧಿ ಪ್ರಭಾವಕ್ಕೊಳಗಾದವರು. ಖಾದಿ ಬಟ್ಟೆ ಧರಿಸಿ ಗೆಳೆಯರೊಂದಿಗೆ ಪ್ರಭಾತಪೇರಿ ನಡೆಸಿ ಬಾಲ್ಯದಲ್ಲೇ ಬಂಧನಕ್ಕೊಳಗಾದವರು. ೧೯೪೭ರ ಆಗಸ್ಟ್ ೧೪ರ ಮಧ್ಯರಾತ್ರಿ ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಮೇಲೆ ತ್ರಿವರ್ಣಧ್ವಜ ಹಾರಿಸಿ ೧೫ ದಿನ ಜೈಲುವಾಸ ಅನುಭವಿಸಿದ ದೇಶಪ್ರೇಮಿ. ೧೯೪೮ರಲ್ಲಿ ಬಿಸರಳ್ಳಿಯಲ್ಲಿ ಗಾಂಧೀಜಿಯವರ ಚಿತಾಭಸ್ಮವಿರಿಸಿ ಮೂರ್ತಿ ಸ್ಥಾಪಿಸಿದ ಹಿರಿಮೆ. ೧೦೦ ಚರಕ ತರಿಸಿ ಗಾಂಧೀಜಿ ಹೆಸರಲ್ಲಿ ಸಂಘ ಸ್ಥಾಪಿಸಿ ೧೦೦ ಮಂದಿ ಹೆಣ್ಣುಮಕ್ಕಳಿಗೆ ನೂಲು ತಯಾರಿಸುವ ತರಬೇತಿ ನೀಡಿದವರು. ಮೂವರು ದಲಿತ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ ಮುನ್ನೆಲೆಗೆ ತಂದವರು. ಗ್ರಾಮದಲ್ಲಿ ಮದ್ಯಪಾನ ಅಂಗಡಿ ಮುಚ್ಚಿಸಿ ಹರಿಜನರಿಗೆ ಹೊಟೇಲ್ ಪ್ರವೇಶ ಕಲ್ಪಿಸಿದವರು. ಸಾಹಿತ್ಯದಲ್ಲೂ ಕೃಷಿ ಮಾಡಿರುವ ಇವರು ೧೬ ಪುಸ್ತಕಗಳ ಲೇಖಕರು. ಇನ್ನು ೧೦ ಪುಸ್ತಕಗಳು ಪ್ರಕಟಣೆಯ ಹಂತದಲ್ಲಿದ್ದು ಇಳಿವಯಸ್ಸಿನಲ್ಲೂ ಬತ್ತದ ಕ್ರಿಯಾಶೀಲತೆಗೆ ಸಾಕ್ಷಿ.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು/ಹೊರದೇಶ ಕನ್ನಡಿಗ

ಡಾ.ಎ.ಎ. ಶೆಟ್ಟಿ

ಕುಂದಾಪುರದ ಅಸೋಡೆಯವರಾದ ಡಾ. ಎ.ಎ.ಶೆಟ್ಟಿ ಜಗತ್ತಿನ ಹೆಸರಾಂತ ಎಲುಬು ಮತ್ತು ಮೂಳೆ ಶಸ್ತ್ರಚಿಕಿತ್ಸಕರು. ವಿದೇಶದಲ್ಲಿ ಕನ್ನಡದ ಕೀರ್ತಿ ಬೆಳಗಿದ ವೈದ್ಯಕೀಯ ವಿಜ್ಞಾನಿ.
ವೈದ್ಯಕೀಯ ವೃತ್ತಿಯಲ್ಲಿ ಅತ್ಯುತ್ತಮ ಸಾಧನೆಗೈದಿರುವ ಡಾ. ಎ.ಎ.ಶೆಟ್ಟಿ ಅವರು ಲಂಡನ್ನಲ್ಲಿ ಸ್ನಾತಕೋತ್ತರ ವೈದ್ಯಕೀಯ ಪದವಿ, ಪಿ.ಎಚ್.ಡಿ ಪದವಿ ಪಡೆದವರು. ಮಣಿಪಾಲದ ಕೆ.ಎಂ.ಸಿ., ವೈದ್ಯಕೀಯ ಕ್ಷೇತ್ರದಲ್ಲಿ ‘ಸರ್ಜನ್ರ ಸರ್ಜನ್’ ಎಂದೇ ಪ್ರಖ್ಯಾತರಾದ ಅವರು ಇಂಗ್ಲೆಂಡಿನಲ್ಲಿ ಪ್ರತಿ ವರ್ಷ ನೂರಾರು ಸರ್ಜನ್ರನ್ನು ತರಬೇತಿಗೊಳಿಸುತ್ತಿದ್ದಾರೆ. ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಕಾಗ್ನಿಜ್ ಟ್ರಾನ್ಪ್ಲಾಂಟ್ ಶಸ್ತ್ರಚಿಕಿತ್ಸೆ ನಡೆಸಿದ ಹೆಗ್ಗಳಿಕೆ. ಕ್ಯಾನ್ಸರ್ ಹಾಗೂ ತಲಸ್ಸೇಮಿಯ ರೋಗಗಳ ನಿರ್ಮೂಲನೆಗೆ ನೆರವಾಗುವ ಔಷಧ ತಯಾರಿಕೆಯಲ್ಲಿ ಸಫಲರಾದವರು. ಸ್ಟೆಮ್ಸೆಲ್ ಸಂಶೋಧನೆಯಲ್ಲಿ ಪೇಟೆಂಟ್ ಹೊಂದಿರುವವರು. ಕೀಲುನೋವು, ಮೂಳೆನೋವು, ಅಕರ ಜೀವಕೋಶ ಚಿಕಿತ್ಸೆಯ ಮೂಲಕ ಮೂಳೆ ಬೆಳವಣಿಗೆಯಾಗುವಂತಹ ಚಿಕಿತ್ಸಾ ಸಂಶೋಧನೆಯು ಅತ್ಯಂತ ಕಡಿಮೆ ದರದಲ್ಲಿ ಜನಸಾಮಾನ್ಯರಿಗೆ ಲಭ್ಯವಾಗುವಂತೆ ಮಾಡಿದವರು. ಅನೇಕ ರಾಜ್ಯ-ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿರುವ ಹೆಮ್ಮೆಯ ಕನ್ನಡಿಗರು.

Categories
ನ್ಯಾಯಾಂಗ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಚ್.ಎಲ್.ದತ್ತು

ನ್ಯಾಯಾಂಗ ಕ್ಷೇತ್ರದಲ್ಲಿ ಹೆಗ್ಗುರುತು ಮೂಡಿಸಿದ ಕನ್ನಡಿಗರು ಎಚ್.ಎಲ್.ದತ್ತು. ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ಹಿರಿಮೆಯ ಸಾಧಕರು.
ನ್ಯಾಯಾಂಗ ಕ್ಷೇತ್ರಕ್ಕೆ ಚಿಕ್ಕಮಗಳೂರು ಜಿಲ್ಲೆಯ ಕೊಡುಗೆ ಎಚ್.ಎಲ್.ದತ್ತು. ಚಿಕ್ಕಮಗಳೂರಿನ ಚಿಕ್ಕಪಟ್ಟಣಗೆರೆ ಗ್ರಾಮದಲ್ಲಿ ಜನಿಸಿದ ದತ್ತು ಅವರ ತಂದೆ ಇಂಗ್ಲೀಷ್ ಶಿಕ್ಷಕರು. ಕಡೂರು, ತರೀಕೆರೆ ಮತ್ತು ಬೀರೂರಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ದತ್ತು ಅವರು ೧೯೭೫ರಲ್ಲಿ ವಕೀಲರಾಗಿ ವೃತ್ತಿಬದುಕು ಆರಂಭಿಸಿದರು. ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಸರ್ಕಾರಿ ಅಭಿಯೋಜಕರಾಗಿ ೮೩ರಿಂದ ೧೯೯೦ರವರೆಗೆ ಕಾರ್ಯನಿರ್ವಹಿಸಿದ ಅವರು ೯೦ರಿಂದ ೯೩ರವರೆಗೆ ಸರ್ಕಾರಿ ವಕೀಲರಾಗಿ ಸೇವೆ ಸಲ್ಲಿಸಿದರು. ೧೯೯೫ರ ಡಿಸೆಂಬರ್ ೧೮ರಂದು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡ ದತ್ತು ಅವರು ೨೦೦೭ರ ಫೆಬ್ರವರಿ ೧೨ರಂದು ಛತ್ತೀಸಗಢ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದರು. ಆನಂತರ ಕೇರಳ ಹೈಕೋರ್ಟ್ಗೆ ವರ್ಗಾವಣೆ. ೨೦೧೪ರಲ್ಲಿ ಪ್ರತಿಷ್ಠಿತ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯ ಅತ್ಯುನ್ನತ ಹುದ್ದೆಗೆ ನೇಮಕಗೊಳ್ಳುವ ಮೂಲಕ ಕರುನಾಡಿಗೆ ಕೀರ್ತಿ ತಂದವರು. ಪ್ರಸ್ತುತ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿರುವ ದತ್ತು ಅವರು ನ್ಯಾಯಾಂಗ ವ್ಯವಸ್ಥೆಯಲ್ಲಿ ಮಾನವೀಯ ನಡೆಗೆ ಹೆಸರಾದವರು. ರೋಟರಿಕ್ಲಬ್ ಮೂಲಕ ಅನೇಕ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡವರು.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಎಂ.ಜಿ. ಗೋಪಾಲ್

ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಗುರುತರವಾದ ಕೆಲಸ ಮಾಡಿದವರು ಡಾ. ಎಂ.ಜಿ.ಗೋಪಾಲ್. ಪ್ರತಿಷ್ಠಿತ ಕೆಂಪೇಗೌಡ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿವೃತ್ತ ಪ್ರಾಂಶುಪಾಲರು.
೧೯೫೪ರ ನವೆಂಬರ್ ೧೮ರಂದು ಜನಿಸಿದ ಡಾ. ಎಂ.ಜಿ.ಗೋಪಾಲ್ ಅವರು ದಾವಣಗೆರೆಯ ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದವರು. ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಚರ್ಮಶಾಸ್ತ್ರದಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವಿ ಗಳಿಸಿದ ಅವರು ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಚರ್ಮಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರು, ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದವರು. ೩೪ ವರ್ಷಗಳ ಸೇವಾವಧಿಯಲ್ಲಿ ಕಿಮ್ಸ್ನ ಪ್ರಾಂಶುಪಾಲ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಿದವರು. ವೈದ್ಯಕೀಯ ರಾಷ್ಟ್ರೀಯ ಸಮ್ಮೇಳನಗಳಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ, ರಾಷ್ಟ್ರೀಯ-ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಅಧ್ಯಕ್ಷರಾಗಿ ತಮ್ಮ ಅನುಭವವನ್ನು ಧಾರೆಯೆರೆದಿರುವ ಡಾ. ಎಂ.ಜಿ.ಗೋಪಾಲ್ ಅವರ ಅನೇಕ ಪ್ರಶಸ್ತಿ- ಗೌರವಗಳಿಗೂ ಪಾತ್ರರು.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಪಿ.ಮೋಹನರಾವ್

ವೈದ್ಯೋ ನಾರಾಯಣೋ ಹರಿ ಎಂಬ ಲೋಕನುಡಿಗೆ ಅನ್ವರ್ಥವಾಗಿರುವವರು ಡಾ.ಪಿ.ಮೋಹನ್ರಾವ್. ವೃತ್ತಿಪರ ವೈದ್ಯ, ವೈದ್ಯಾಧಿಕಾರಿ, ವೈದ್ಯಕೀಯ ಮಂಡಳಿಯ ಸಲಹೆಗಾರ ಮತ್ತು ಆಡಳಿತಗಾರರಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಬಹುಮುಖಿ ಸೇವೆ ಸಲ್ಲಿಸಿದವರು.
ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಭೆ ಡಾ. ಪಿ.ಮೋಹನರಾವ್, ಉಡುಪಿ ಮೂಲದವರಾದ ಪಿ.ಮೋಹನ್ರಾವ್ ಹುಟ್ಟಿದ್ದು ೧೯೪೦ರಲ್ಲಿ. ಚೆನ್ನೈನ ಕಿಲ್ ಪೌಕ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದ ಮೋಹನ್ ರಾವ್ ಮಂಗಳೂರಿನ ಕಸ್ತೂರಿಬಾ ವೈದ್ಯಕೀಯ ಕಾಲೇಜಿನಲ್ಲಿ ಎಂ.ಡಿ ಶಿಕ್ಷಣ ಪೂರೈಸಿದರು. ಭಾರತೀಯ ಎಲೆಕ್ಟೋ ಕಾರ್ಡಿಯೋಲಜಿ ಸಂಸ್ಥೆಯಿಂದ ಫೆಲೋಶಿಪ್ ಪಡೆದವರು. ೧೯೬೪ರಲ್ಲಿ ಪೆರಂಬೂರಿನ ಭಾರತೀಯ ರೈಲ್ವೆ ಆಸ್ಪತ್ರೆಯ ವೈದ್ಯರಾಗಿ ವೃತ್ತಿಬದುಕು ಆರಂಭಿಸಿದ ಅವರು ಆನಂತರ ವಿಶೇಷ ವೈದ್ಯಾಧಿಕಾರಿಗಳಾದರು. ೧೯೮೫ರಿಂದ ೨೦೧೧ರವರೆಗೆ ಎಚ್ಎಎಲ್ನಲ್ಲಿ ವೈದ್ಯಕೀಯ ಸೇವೆಗಳ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಹೊಸಕೋಟೆಯಲ್ಲಿ ಎಂವಿಜೆ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಆಸ್ಪತ್ರೆಯ ಆರಂಭಕ್ಕೆ ಬುನಾದಿ ಹಾಗಿದ ಅವರು ಪ್ರಸ್ತುತ ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಸೀತಾರಾಮಭಟ್

ವೈದ್ಯಕೀಯ ಕ್ಷೇತ್ರದಲ್ಲಿ ಹೃದಯ ಶಸ್ತ್ರಚಿಕಿತ್ಸೆಯಲ್ಲಿ ಗಮನಾರ್ಹ ಸೇವೆ ಸಲ್ಲಿಸಿದವರು ಡಾ.ಪಿ.ಎಸ್.ಸೀತಾರಾಮ ಭಟ್. ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಯ ಮೂಲಕ ಹಲವರಿಗೆ ಜೀವದಾನ ಮಾಡಿದ ವೈದ್ಯರು.
ವೈದ್ಯಕೀಯ ಉಪನ್ಯಾಸಕ, ಆಡಳಿತಗಾರ ಮತ್ತು ಅತ್ಯುತ್ತಮ ಕೌಶಲ್ಯದ ಶಸ್ತ್ರಚಿಕಿತ್ಸಕರಾಗಿ ಹೆಸರುವಾಸಿಯಾಗಿರುವ ಸೀತಾರಾಮ ಭಟ್ ಅವರು ಬೆಂಗಳೂರಿನ ಪ್ರತಿಷ್ಠಿತ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಕಾಡಿಯೋತೋರಿಕ್ ಶಸ್ತ್ರಚಿಕಿತ್ಸಾ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು. ಸಂಸ್ಥೆಯಲ್ಲಿ ಎರಡು ದಶಕಕ್ಕೂ ಮೀರಿದ ಸೇವೆ ಅವರದ್ದು. ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ೨೦೧೭ರಲ್ಲಿ ಮೊಟ್ಟಮೊದಲ ಬಾರಿಗೆ ಹೃದಯ ಕಸಿ ಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಹೆಗ್ಗಳಿಕೆ ಸೀತಾರಾಮ ಭಟ್ಕದ್ದು. ಪ್ರತಿ ದಿನ ಸಂಸ್ಥೆಯಲ್ಲಿ ಮಕ್ಕಳೂ ಸೇರಿದಂತೆ ೧೫ ಮಂದಿಗೆ ಹೃದಯ ಶಸ್ತ್ರಚಿಕಿತ್ಸೆ ನೆರವೇರಿಸಲಾಗುತ್ತಿದ್ದು ಆ ಕಾರ್ಯದಲ್ಲಿ ಸೀತಾರಾಮಭಟ್ಕದ್ದು ಪ್ರಮುಖ ಪಾತ್ರ ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ, ಪಶ್ಚಿಮಬಂಗಾಳ, ಮಧ್ಯಪ್ರದೇಶ, ರಾಜಸ್ತಾನ, ತಮಿಳುನಾಡು, ಕೇರಳ, ಉತ್ತರಪ್ರದೇಶ, ಒರಿಸ್ಸಾ, ಬಿಹಾರ ಮುಂತಾದೆಡೆ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿರುವ ಅವರು ಆರೋಗ್ಯ ಪ್ರವಾಸೋದ್ಯಮದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ವಿದೇಶಗಳ ರೋಗಿಗಳಿಗೆ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಶಸ್ತ್ರಚಿಕಿತ್ಸೆ ನೆರವೇರಿಸಿ ನಾಡಿನ ಕೀರ್ತಿ ಬೆಳಗಿದ್ದಾರೆ.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ವಿಠಲರಾವ್ ಗುರುರಾವ್ ನಾಡಗೌಡ

ಹುಬ್ಬಳ್ಳಿಯ ಡಾ. ವಿಠಲರಾವ್ ಗುರುರಾವ್ ನಾಡಗೌಡ ಅವರು ವೈದ್ಯಕೀಯ ವೃತ್ತಿಯಲ್ಲಿ ನಾಲ್ಕು ದಶಕಗಳಿಂದಲೂ ನಿರತರು. ರಕ್ತದೊತ್ತಡ ಮತ್ತು ಮಧುಮೇಹ ರೋಗಗಳಿಗೆ ಸಂಬಂಧಿಸಿದಂತೆ ನಿರಂತರ ಶಿಬಿರಗಳನ್ನು ನಡೆಸುತ್ತಿರುವ ವೈದ್ಯರು.
ಚರ್ಮರೋಗ, ನರರೋಗ, ಯಕೃತ್ ರೋಗ, ದಂತ, ಎಲುಬು ಕೀಲು ಹಾಗೂ ಫಿಸಿಯೋಥೆರಪಿ ವಿಭಾಗದಲ್ಲಿ ಸತತ ವೈದ್ಯಸೇವೆ ಇವರದ್ದು. ಧಾರವಾಡ, ಹಾವೇರಿ, ಗದಗ, ವಿಜಯಪುರ, ಬಾಗಲಕೋಟೆ, ಬೆಳಗಾಗಿ, ಕಾರವಾರ ಹಾಗೂ ಕೊಪ್ಪಳ ಜಿಲ್ಲೆಗಳ ಗ್ರಾಮೀಣ ಭಾಗಗಳಲ್ಲಿ ಬಡ ರೋಗಿಗಳಿಗಾಗಿ ವೈದ್ಯಕೀಯ ಶಿಬಿರಗಳನ್ನು ನಡೆಸಿದವರು. ಆಂಧ್ರಪ್ರದೇಶದ ಮಂತ್ರಾಲಯ ಹಾಗೂ ಗೋವಾದಲ್ಲಿಯೂ ಶಿಬಿರ ನಡೆಸಿದ ಹೆಗ್ಗಳಿಕೆ. ೪೧ ವರ್ಷಗಳ ವೃತ್ತಿಜೀವನದಲ್ಲಿ ಐದು ಲಕ್ಷದವರೆಗೆ ಔಷಧಿಗಳನ್ನು ವಿತರಿಸಿದ ಹೆಚ್ಚುಗಾರಿಕೆ. ವೈದ್ಯಕೀಯ ಸಂಘಟ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ಭಾರತೀಯ ವೈದ್ಯರ ಸಂಘದ ಕರ್ನಾಟಕ ಘಟಕದಿಂದ ಜೀವಮಾನ ಸಾಧನೆ ಪ್ರಶಸ್ತಿ, ಅಮೆರಿಕದ ‘ಟ್ರಯಲ್ಸ್ಟೇಜ’ ಗೌರವಕ್ಕೂ ಪಾತ್ರವಾಗಿರುವ ಅವರು ವೈದ್ಯಕೀಯ ಪ್ರಬಂಧಗಳ ಮಂಡನೆಯಲ್ಲೂ ಪ್ರವೀಣರು, ಬಂಗಾರದ ಪದಕಗಳ ವಿಜೇತರೂ ಸಹ,

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ರಂಗದೊರೆ ಸ್ಮಾರಕ ಆಸ್ಪತ್ರೆ

ವೈದ್ಯಕೀಯ ಕ್ಷೇತ್ರದಲ್ಲಿ ನಿಸ್ವಾರ್ಥತೆಯಿಂದ ರೋಗಿಗಳ ಸೇವೆಯಲ್ಲಿ ತೊಡಗಿರುವ ಸಂಸ್ಥೆ ಬೆಂಗಳೂರಿನ ರಂಗದೊರೆ ಸ್ಮಾರಕ ಆಸ್ಪತ್ರೆ
ಶ್ರೀ ಶೃಂಗೇರಿ ಶಾರದಾಪೀಠ ಪರಮಪೂಜ್ಯ ಜಗದ್ಗುರುಗಳಾದ ಶ್ರೀಭಾರತೀತೀರ್ಥ ಮಹಾಸ್ವಾಮಿಗಳ ದೂರದೃಷ್ಟಿಯ ಸಂಕಲ್ಪದಲ್ಲಿ ಪ್ರಾರಂಭಿಸಲ್ಪಟ್ಟಿರುವ ರಂಗದೊರೆ ಸ್ಮಾರಕ ಆಸ್ಪತ್ರೆ ರಾಜ್ಯದ ಪ್ರತಿಷ್ಠಿತ ಸುಸಜ್ಜಿತ ಆಸ್ಪತ್ರೆಯಾಗಿದೆ. ಸವಲತ್ತು, ವಿಶೇಷ ಪರಿಣಿತಿ, ತಜ್ಞವೈದ್ಯರ ನಿರಂತರ ಸಲಹೆ-ಸೂಚನೆ, ಮಾರ್ಗದರ್ಶನ ಮತ್ತು ಅನುಭವದ ಸಂಪರ್ಕ ಸಾಧನದಿಂಧಾಗಿ ರಾಜ್ಯದ ವಿಶೇಷ ಆಸ್ಪತ್ರೆಯಾಗಿ ಸ್ಥಾನ ಪಡೆದಿದೆ. ಚಿಕಿತ್ಸೆ, ವೈದ್ಯೋಪಚಾರಗಳೆಲ್ಲವೂ ಇಲ್ಲಿ ‘ಸೇವೆ’ಯೇ. ರೋಗಿಗಳ ಸಮುದಾಯದ ಸೇವೆಯಲ್ಲಿ ಒಂದು ದಶಕದ ಹೆಜ್ಜೆಗುರುತು ಈ ಆಸ್ಪತ್ರೆಯದ್ದು. ವ್ಯಾಪಾರಿ ಮನೋಭಾವವಿಲ್ಲದೆ, ವೈದ್ಯೋಪಚಾರವನ್ನು ಶ್ರೀಸಾಮಾನ್ಯನಿಗೆ ಸುಲಭ ದರದಲ್ಲಿ ಒದಗಿಸಿದ ಹೆಗ್ಗಳಿಕೆ ಈ ಆಸ್ಪತ್ರೆಯದ್ದಾಗಿದ್ದು ಮಾದರಿಯಾಗಿದೆ.

Categories
ರಾಜ್ಯೋತ್ಸವ 2018

ಶ್ರೀ ಕಲ್ಕನೆ ಕಾಮೇಗೌಡ

ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿಯ ಕಲ್ಮನೆ ಕಾಮೇಗೌಡರು ಆಧುನಿಕ ಭಗೀರಥರೆಂದೇ ಹೆಸರುವಾಸಿಯಾದ ಪರಿಸರಪ್ರೇಮಿ. ಅಂತರ್ಜಲವೃದ್ಧಿ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಸದಾ ಮಾದರಿ. ೧೪ ಚೆಕ್ ಡ್ಯಾಂಗಳನ್ನು ನಿರ್ಮಿಸಿದ ಸಾಹಸಿ.
ಕಾಮೇಗೌಡರು ಶಾಲೆಯ ಹೊಸ್ತಿಲು ತುಳಿದವರಲ್ಲ, ಚಿಕ್ಕದೊಂದು ಮನೆ, ಕಿರುಭೂಮಿ ಹಾಗೂ ಒಂದಷ್ಟು ಕುರಿ ಮಂದೆಯೇ ಆಸ್ತಿ. ಆದರೆ, ಪರಿಸರಪ್ರೇಮ ಮಾತ್ರ ಬೆಟ್ಟದಷ್ಟು, ಕುಂದೂರು ಬೆಟ್ಟದ ಪೂರ್ವದಂಚಿನ ತಳತುದಿಯಲ್ಲಿ ಹಕ್ಕಿ, ಪಕ್ಷಿ, ಜನಜಾನುವಾರುಗಳಿಗಾಗಿ ಬರೋಬ್ಬರಿ ಹದಿನಾಲ್ಕು ಚೆಕ್ ಡ್ಯಾಂಗಳನ್ನು ನಿರ್ಮಿಸಿ ಮಳೆನೀರು ಇಂಗಿಸಿ ಜೀವರಾಶಿಗಳಿಗೆ ಮರುಜೀವ ನೀಡಿದವರು. ಸಾವಿರಾರು ಗಿಡಗಳನ್ನು ನೆಟ್ಟು ಪೋಷಿಸಿದವರು. ಸಮಾಜಸೇವೆಯೇ ದೇಶಸೇವೆಯೆಂಬ ಭಾವದ ಕಾಮೇಗೌಡರು ಅಪ್ಪಟ ಕಾಯಕಯೋಗಿ, ನಿತ್ಯ ಸಸಿಗಳಿಗೆ ನೀರೆರೆಯುವುದು, ಒಂದಲ್ಲ ಒಂದು ಗಿಡ ನೆಡುವುದು ಕಾಮೇಗೌಡರ ದಿನಚರಿ, ಅರವತ್ತು ವರ್ಷಗಳಿಂದಲೂ ಯಾರ ನೆರವಿಲ್ಲದೆ ಕೆರೆಕಟ್ಟೆ ಸಂರಕ್ಷಣೆ ಮಾಡಿರುವ ಕಾಮೇಗೌಡರು ಪರಿಸರ ಬೆಳವಣಿಗೆಯಲ್ಲಿ ಹೊಸ ಅಧ್ಯಾಯವನ್ನೇ ಸೃಷ್ಟಿಸಿರುವ ಆಧುನಿಕ ಭಗೀರಥರೇ ಸರಿ.

Categories
ಕೃಷಿ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಮೂಕಪ್ಪ ಶಿವಪ್ಪ ಪೂಜಾ

ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಚಿನ್ನಿಕಟ್ಟೆ ಗ್ರಾಮದ ಮೂಕಪ್ಪ ಶಿವಪ್ಪ ಪೂಜಾರ್ ದೇಸೀ ತಳಿಯ ಸಂರಕ್ಷಕ, ಸಾವಯವ ಕೃಷಿಕ ಹಾಗೂ ದೇಸೀ ತಳಿಯ ಬೆಳೆಗಾರ,
ಹಾವೇರಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಮಾತ್ರ ಕಂಡುಬರುವ ‘ಗುಳಿ ರಾಗಿ’ ಪದ್ಧತಿಯನ್ನು ಉಳಿಸಿಕೊಂಡು ಬರುವುದರ ಜೊತೆಗೆ ಈ ಸಾಂಪ್ರದಾಯಿಕ ಕೃಷಿ ಪದ್ಧತಿಗೆ ಮತ್ತೆ ಪುನಶ್ವೇತನ ನೀಡಿದ ಹಿರಿಮೆ ಮೂಕಪ್ಪ ಪೂಜಾರರದ್ದು. ದೇಶಾದ್ಯಂತ ಸಂಚರಿಸಿ ದೇಸೀ ಬಿತ್ತನೆ ಬೀಜಗಳ ಪ್ರಯೋಜನದ ಬಗ್ಗೆ ರೈತರಲ್ಲಿ ಜನಜಾಗೃತಿ ಮೂಡಿಸಿದ ಕೃಷಿಕರು. ಒಣಭೂಮಿ ಭತ್ತದ ಕೃಷಿಯಲ್ಲೂ ಸಹ ಮೂಕಪ್ಪ ಪರಿಣಿತರು. ಕರಿಮುಂಡಗ, ಕರಿದಡಿಬುಡ್ಡ ತಳಿಗಳು ಮಾತ್ರವಲ್ಲದೆ, ದೇಸೀ ತಳಿ ತರಕಾರಿ ಬೀಜಗಳ ಸಂರಕ್ಷಣೆಯಲ್ಲಿ ಸದಾ ನಿರತರು. ದೇಶಾದ್ಯಂತ ನಡೆಯುವ ಬೀಜಮೇಳದ ಉಪನ್ಯಾಸಕರು ಸಹ. ೨೦೧೭ರಲ್ಲಿ ನಡೆದ ವಿಶ್ವ ಸಾವಯವ ಸಮಾವೇಶದಲ್ಲಿ ಪಾಲ್ಗೊಂಡ ಹಿರಿಮೆ ಈ ಕೃಷಿಸಾಧಕರದ್ದು.

Categories
ಕೃಷಿ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಮಹಾದೇವಿ ಅಣ್ಣಾರಾವ ವಣದೆ

ಕಲಬುರಗಿ ಜಿಲ್ಲೆಯ ಅಳಂದ ಪಟ್ಟಣದ ಮಹಾದೇವಿ ಅಣ್ಣಾರಾವ ವಣದೆ ಬೇಸಾಯಗಾರರಿಗೆ ಮಾದರಿಯಾಗಿರುವ ಪ್ರಗತಿಪರ ರೈತಮಹಿಳೆ, ತೋಟಗಾರಿಕೆಯಲ್ಲಿ ಸಾಧನೆಗೈದ ಛಲದಂಕಮಲ್ಲೆ.
ಮಹಾದೇವಿ ಶಾಲೆಯ ಮೆಟ್ಟಿಲು ಹತ್ತಿದವರಲ್ಲ, ಕೃಷಿಯನ್ನೇ ನೆಚ್ಚಿ ಬದುಕಿದವರು. ಅಳಂದದಲ್ಲಿನ ೪೪ ಗುಂಟೆ ಜಮೀನಿನಲ್ಲಿ ಚಿನ್ನದ ಬೆಳೆ ತೆಗೆದ ಸಾಹಸಿ ಇವರು. ಅಲ್ಪ ಭೂಮಿಯಲ್ಲೇ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ತರಕಾರಿ, ಚೆಂಡು ಹೂ, ಗಲಾಡಿಯಾ ಹೂವ, ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ ಮುಂತಾದ ಬೆಳೆಗಳನ್ನು ಬೆಳೆದು ಭರ್ಜರಿ ಫಸಲು ತೆಗೆದ ನೇಗಿಲಯೋಗಿ, ತಾವು ಬೆಳೆದ ಹೂ, ದವಸಧಾನ್ಯಗಳನ್ನು ತಾವೇ ಖುದ್ದು ಮಾರಿ ಮಾರುಕಟ್ಟೆ ಸೃಷ್ಟಿಸಿಕೊಂಡವರು. ಹೈನೋದ್ಯಮದಲ್ಲೂ ಲಾಭದ ಸಾಧನೆಗೈದವರು. ೭೨ರ ಇಳಿವಯಸ್ಸಿನಲ್ಲೂ ಬೇಸಾಯದಲ್ಲಿ ತೊಡಗಿರುವ ಮಹಾದೇವಿ ಅಣ್ಣಾರಾವ ವಣದೆ ಅವರು ತೋಟಗಾರಿಕೆಯ ಶ್ರೇಷ್ಠ ಮಹಿಳೆ, ಉತ್ತಮ ರೈತಮಹಿಳೆ, ಮಹಿಳಾ ಸಾಧಕಿ ಮತ್ತಿತರ ಪ್ರಶಸ್ತಿ, ನಾಡಿನ ಗಣ್ಯಮಾನ್ಯರಿಂದ ಸನ್ಮಾನಗಳಿಂದ ಭೂಷಿತರು.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀಮತಿ ಮಾರ್ಗರೇಟ್ ಆಳ್ವಾ

ಸಮಾಜಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡ ವಿಶಿಷ್ಟ ವ್ಯಕ್ತಿತ್ವ ಮಾರ್ಗರೇಟ್ ಆಳ್ವಾ ಅವರದ್ದು. ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರ ಅಭ್ಯುದಯಕ್ಕಾಗಿ ಶ್ರಮಿಸಿದ ಪ್ರಮುಖರು.
ಮಂಗಳೂರಿನ ಕ್ರೈಸ್ತ ಕುಟುಂಬದ ಕುಡಿಯಾಗಿ ೧೯೪೨ರ ಏಪ್ರಿಲ್ ೧೪ರಂದು ಜನಿಸಿದ ಮಾರ್ಗರೇಟ್ ಆಳ್ವಾ ಅವರು ಸುಶಿಕ್ಷಿತರು. ಬೆಂಗಳೂರಿನ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಬಿ.ಎ, ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದವರು. ವಿದ್ಯಾಭ್ಯಾಸದ ಬಳಿ ವಕೀಲೆಯಾಗಿ ವೃತ್ತಿಬದುಕು ಆರಂಭಿಸಿದ ಮಾರ್ಗರೇಟ್ ಆಳ್ವಾ ಅವರು ಮಹಿಳೆ ಮತ್ತು ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗಾಗಿ ಶ್ರಮಿಸುವ ‘ಕರುಣಾ’ ಎಂಬ ಸರ್ಕಾರೇತರ ಸಂಸ್ಥೆಯನ್ನು ಹುಟ್ಟುಹಾಕಿ ಸೇವೆ ಸಲ್ಲಿಸಿದವರು. ಪತಿಯ ಪ್ರೋತ್ಸಾಹದ ಮೇರೆಗೆ ೧೯೬೯ರಲ್ಲಿ ರಾಜಕಾರಣಕ್ಕೆ ಧುಮುಕಿದ ಅವರು ೧೯೭೪ರಿಂದ ೯೨ರವರೆಗೆ ಸತತವಾಗಿ ನಾಲ್ಕು ಬಾರಿ ರಾಜ್ಯಸಭಾ ಸದಸ್ಯೆಯಾಗಿ ಜನಸೇವೆಯಲ್ಲಿ ತೊಡಗಿಸಿಕೊಂಡವರು. ರಾಜ್ಯಸಭೆಯ ಉಪಾಧ್ಯಕ್ಷೆಯೂ ಆಗಿದ್ದ ಅವರು ೧೯೯೯ರಲ್ಲಿ ೧೩ನೇ ಲೋಕಸಭೆಗೆ ಉತ್ತರಕನ್ನಡ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದರು. ೨೦೦೯ರಲ್ಲಿ ಉತ್ತರಾಕಾಂಡನ ಪ್ರಪ್ರಥಮ ಮಹಿಳಾ ರಾಜ್ಯಪಾಲೆಯಾಗಿದ್ದ ಅವರು ೨೦೧೨ರಿಂದ ೧೪ರವರೆಗೆ ರಾಜಸ್ತಾನದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದು ವಿಶೇಷ.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಕೆ. ಕೃಷ್ಣಕುಮಾರ್ ಪೂಂಜ

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಫರಂಗಿಪೇಟೆಯವರದ ಕೃಷ್ಣಕುಮಾರ್ ಪೂಂಜ ಅವರು ಸಮಾಜಸೇವೆಗಾಗಿ ಬದುಕು ಮುಡಿಪಿಟ್ಟ ನಿಜಸೇವಕರು. ಜನಸಾಮಾನ್ಯರ ಆರೋಗ್ಯ ರಕ್ಷಣೆಗಾಗಿ ಅಹರ್ನಿಶಿ ಶ್ರಮಿಸಿದ ಕರುಣಾಮಯಿ.
೧೯೫೪ರಲ್ಲಿ ಫರಂಗಿಪೇಟೆಯಲ್ಲಿ ಜನಿಸಿದ ಕೃಷ್ಣಕುಮಾರ್ ಪೂಂಜ ಬಿ.ಕಾಂ ಪದವೀಧರರು. ವಿಜಯಾಬ್ಯಾಂಕ್ ವೃತ್ತಿಯಲ್ಲಿದ್ದುಕೊಂಡೇ ಸಮಾಜಸೇವೆಯನ್ನೇ ಪ್ರವೃತ್ತಿಯಾಗಿಸಿಕೊಂಡವರು. ಸೇವೆಯಿಂದ ಸಾರ್ಥಕತೆ ಎಂಬುದು ಅವರ ಧೈಯವಾಕ್ಯ. ಸೇವಾಂಜಲಿ ಪ್ರತಿಷ್ಠಾನದ ಧರ್ಮದರ್ಶಿಯಾಗಿ ೨೫ ವರ್ಷಗಳಿಂದಲೂ ಪ್ರತಿ ತಿಂಗಳಗೊಂದರಂತೆ ೫೪೫ ಉಚಿತ ವೈದ್ಯಕೀಯ ಶಿಬಿರ ಸಂಘಟಿಸಿ ಲಕ್ಷಾಂತರ ಜನರಿಗೆ ನೆರವಾದವರು. ೯೯ ರಕ್ತದಾನ ಶಿಬಿರ, ೬೦ ಉಚಿತ ನೇತ್ರ ತಪಾಸಣಾ ಶಿಬಿರ, ೨೦ಕ್ಕೂ ಹೆಚ್ಚು ದಂತ ಚಿಕಿತ್ಸಾ ಶಿಬಿರ, ೩೦೦೦ ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ, ೧೨೦ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು. ಲಲಿತಕಲೆಗಳ ತರಬೇತಿ, ಉಚಿತ ಆರೋಗ್ಯ ಕೇಂದ್ರ ಸ್ಥಾಪನೆ, ೩೦೦೦ ಜನರಿಗೆ ಆರೋಗ್ಯ ಕಾರ್ಡ್ ವಿತರಣೆ ಮುಂತಾದ ಸೇವಾಕೈಂಕರ್ಯ ಕೈಗೊಂಡ ಹಿರಿಮೆ ಇವರದ್ದು. ಹಲವು ಪ್ರಶಸ್ತಿ-ನೂರಾರು ಸನ್ಮಾನಗಳಿಂದ ತ್ತೇಜಿತಗೊಂಡ
ಸೇವಾನಿರತರು.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ರಾಚಪ್ಪ ಹಡಪದ

ಕಿತ್ತೂರು ಚೆನ್ನಮ್ಮನ ನಾಡಿನ ಬೈಲಹೊಂಗಲ ತಾಲ್ಲೂಕಿನ ಹೊಳೆಹೊಸೂರಿನ ರಾಚಪ್ಪ ಹಡಪದ ಹಿರಿಯ ಸಮಾಜವಾದಿ, ಹೋರಾಟ, ಸಮಾಜಸೇವೆಯಲ್ಲಿ ಸಾರ್ಥಕತೆ ಕಂಡುಕೊಂಡ ಹಿರಿಯರು.
ಎರಡನೇ ತರಗತಿಯಷ್ಟೇ ಓದಿದ ರಾಚಪ್ಪ ಹಡಪದ ಬದುಕಿನ ಅನುಭವ ಶಾಲೆಯಲ್ಲಿ ರೂಪಗೊಂಡವರು. ಎಳವೆಯಲ್ಲೇ ಮನಸ್ಸಿನ ಮೇಲೆ ಸ್ವಾತಂತ್ರ್ಯ ಆಂದೋಲನದ ಪ್ರಭಾವಕ್ಕೊಳಗಾಗಿ ಸಮಾಜವಾದಿ ಹೋರಾಟಕ್ಕೆ ಧುಮುಕಿದವರು, ಲೋಹಿಯಾ ಸಿದ್ಧಾಂತ, ಗಾಂಧೀಜಿ ಪ್ರಣೀತ ತತ್ವಗಳ ಪಾಲಕರು, ಸಮಾಜವಾದಿ ಧುರೀಣ ಶಾಂತವೀರಗೋಪಾಲಗೌಡರು, ಚಿಂತಕರಾದ ಪ್ರೊ. ನಂಜುಂಡಸ್ವಾಮಿ, ಪಿ.ಲಂಕೇಶ್, ಪ್ರೊ. ರಾಮದಾಸ್, ಪೂರ್ಣಚಂದ್ರತೇಜಸ್ವಿ ಅವರೊಡನೆ ಆತ್ಮೀಯ ಒಡನಾಟ ಹೊಂದಿದ್ದ ರಾಚಪ್ಪ ಹಡಪದ ಅವರು ಭೂಸತ್ಯಾಗ್ರಹ ಚಳವಳಿಗಳಲ್ಲಿ ಸಕ್ರಿಯರಾಗಿದ್ದವರು. ಧಾರವಾಡ ಸಮೀಪದ ಹೆಬ್ಬಳ್ಳಿಯಲ್ಲಿ ಜಮೀನ್ದಾರರು ೧೨ ಸಾವಿರ ಎಕರೆ ಜಮೀನನ್ನು ಗೇಣಿದಾರರ ಹೆಸರಿಗೆ ಹಂಚದಿದ್ದರ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು. ತುರ್ತು ಪರಿಸ್ಥಿತಿಯ ವಿರುದ್ದದ ಜಯಪ್ರಕಾಶ್ ನಾರಾಯಣರ ಚಳವಳಿಯ ಭಾಗವಾಗಿದ್ದವರು. ನಿರಂತರವಾಗಿ ಸಮಾಜಮುಖಿಯಾಗಿ ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ರಾಚಪ್ಪ ಹಡಪದ ಅವರು ತತ್ವ- ಸಿದ್ಧಾಂತಗಳ ಪಾಲನೆಗೆ ಬದುಕಿ ಮೀಸಲಿಟ್ಟ ಅಪರೂಪದ ವ್ಯಕ್ತಿತ್ವ.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಆನಂದ ಸಿ. ಕುಂದರ್

ಸಮುದಾಯದ ಸೇವೆಯನ್ನು ದೈವಸೇವೆಯೆಂದು ಕೈಗೊಂಡವರು ಆನಂದ್ ಸಿ. ಕುಂದರ್. ಹಲವು ಕ್ಷೇತ್ರಗಳಲ್ಲಿ ಅಶಕ್ತರಿಗೆ ನೆರವಾದ ಬಂಧು. ಶಿಕ್ಷಣದ ಜ್ಯೋತಿ ಬೆಳಗಿದ ದಯಾಳು.
ದಕ್ಷಿಣ ಕನ್ನಡ ಜಿಲ್ಲೆಯ ಮಣೂರು-ಪಡುಕೆರೆಯ ಆನಂದ್ ಸಿ. ಕುಂದರ್ ಕುಂದಾಪುರದಲ್ಲಿ ಕಾಲೇಜು ಶಿಕ್ಷಣ ಪೂರೈಸಿದವರು. ಜನತಾಶಿಕ್ಷಣ ಸಂಸ್ಥೆ ಹಾಗೂ ಗೀತಾನಂದ ಫೌಂಡೇಶನ್ ಮೂಲಕ ಶಿಕ್ಷಣ, ಆರೋಗ್ಯ, ಕಲೆ, ಸಂಸ್ಕೃತಿ, ಧಾರ್ಮಿಕ, ಕ್ರೀಡೆ, ಪರಿಸರ ಮತ್ತು ನೈರ್ಮಲ್ಯದಂತಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡವರು. ೨೫ ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ನೋಟ ಪುಸ್ತಕ, ೮೦೦ ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ವಿಕಲಚೇತನರಿಗೆ ಗಾಲಿಕುರ್ಚಿ ವಿತರಣೆ, ಮಳೆನೀರು ಸಂಗ್ರಹಗಾರಗಳ ನಿರ್ಮಾಣ, ೧೨ ಸಾವಿರ ಗಿಡಗಳ ವಿತರಣೆ, ಪ್ಲಾಸ್ಟಿಕ್ ವಿರೋಧಿ ಜಾಥಾ, ಉಚಿತ ಆರೋಗ್ಯ ತಪಾಸಣಾ ಶಿಬಿರಗಳ ಆಯೋಜನೆ, ತುರ್ತು ರಕ್ತನಿಧಿ ಸ್ಥಾಪನೆ ಮುಂತಾದವು ಆನಂದ ಅವರು ಕೈಗೊಂಡ ಸಾಮಾಜಿಕ ಕಾರ್ಯಗಳು, ಪರಿಸರ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮತ್ತಿತರ ಗೌರವಗಳಿಗೆ ಪಾತ್ರರು.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಸಿ.ರಾಮು

ಸಹಕಾರ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ದುಡಿದವರು ಸಿ. ರಾಮು, ರಾಮನಗರ ಜಿಲ್ಲೆಯ ವಿಶಿಷ್ಟ ಪ್ರತಿಭೆ.
ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಕುಪ್ಪೆಪಾಳ್ಯದವರಾದ ಸಿ.ರಾಮು ಅವರು ಬಿಸ್ಕೂರ್ನಲ್ಲಿ ಪ್ರಾಥಮಿಕ, ಕುದೂರಿನಲ್ಲಿ ಪ್ರೌಢಶಾಲಾ ಶಿಕ್ಷಣ, ಬೆಂಗಳೂರಿನಲ್ಲಿ ಐಟಿಐ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದವರು. ೧೯೬೫ರಲ್ಲಿ ಹೆಚ್ ಎಂ.ಟಿ ಗಡಿಯಾರ ಕಾರ್ಖಾನೆಗೆ ಸಾಮಾನ್ಯ ನೌಕರರಾಗಿ ಸೇರಿ ಕಾರ್ಮಿಕ ನಾಯಕರಾಗಿ ರೂಪಗೊಂಡವರು, ಕಾರ್ಖಾನೆಯ ಸಹಕಾರ ಸಂಘದ ಉಪಾಧ್ಯಕ್ಷರಾಗಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದವರು. ೧೯೯೨ರಲ್ಲಿ ಪೀಣ್ಯದಲ್ಲಿ ಸ್ವಂತ ಕಾರ್ಖಾನೆಯನ್ನು ತೆರೆದು ಹೆಚ್ ಎಂ ಟಿ ಕಾರ್ಖಾಣೆಗೆ ಬಿಡಿಭಾಗಗಳನ್ನು ಸರಬರಾಜು ಮಾಡುತ್ತಿದ್ದ ಅವರು ಆತ್ಮೀಯ ಗೆಳೆಯರ ಬಳಗ ಎಂಬ ಗೃಹ ನಿರ್ಮಾಣ ಸಂಸ್ಥೆ ಆರಂಭಿಸಿ ೪೦೦ಕ್ಕೂ ಹೆಚ್ಚು ನಿವೇಶನ ಹಂಚಿದವರು. ಪ್ರತಿಷ್ಠಿತ ಸಹಕಾರಿ ಬ್ಯಾಂಕ್ಗಳಲ್ಲಿ ಒಂದಾದ ಜನತಾ ಸೇವಾ ಕೋಆಪರೇಟಿವ್ ಬ್ಯಾಂಕ್ನ ನಿರ್ದೇಶಕರಾಗಿ, ಅಧ್ಯಕ್ಷರಾಗಿ ೧೯ ವರ್ಷಗಳಿಂದ ಕಾರ್ಯನಿರ್ವಹಿಸುತ್ತಾ ಬ್ಯಾಂಕ್ ಅನ್ನು ಆರ್ಥಿಕವಾಗಿ ಸದೃಢಗೊಳಿಸಿದವರು. ಉತ್ತಮ ಸಹಕಾರಿ ಪ್ರಶಸ್ತಿಯನ್ನೂ ಪಡೆದಿರುವ ಅವರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೌಲಭ್ಯ ಒದಗಿಸಿ, ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಕುವೆಂಪು ಪ್ರಶಸ್ತಿ, ನಾಡೋಜ ಪ್ರೊ. ಜಿ.ವೆಂಕಟಸುಬ್ಬಯ್ಯ ಪ್ರಶಸ್ತಿಗೂ ಭಾಜನರಾಗಿದ್ದಾರೆ.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಅಮ್ಮೆಂಬಳ ಆನಂದ

ಉಡುಪಿ ಜಿಲ್ಲೆಯ ಅಮ್ಮೆಂಬಳದವರಾದ ಅಮ್ಮೆಂಬಳ ಆನಂದ ಮಾಧ್ಯಮ ಕ್ಷೇತ್ರದಲ್ಲಿ ಅವಿರತವಾಗಿ ದುಡಿದ ಹಿರಿಯ ಜೀವ, ತತ್ವನಿಷ್ಠ ಪತ್ರಕರ್ತರು.
ಬಂಟ್ವಾಳದಲ್ಲಿ ೧೯೨೬ರಲ್ಲಿ ಜನಿಸಿದ ಆನಂದ ಅವರು ಮಾಧ್ಯಮ ಲೋಕದಲ್ಲಿ ಕೃಷಿಗೈದವರು. ಕೇಂದ್ರದ ಮಾಜಿ ಸಚಿವರಾದ ಜಾರ್ಜ್ ಫರ್ನಾಂಡಿಸ್ ಅವರ ಸಹಪಾಠಿ. ದಿನಕರ ದೇಸಾಯಿ ಅವರ ಜನಸೇವಕ ಪತ್ರಿಕೆಯಲ್ಲಿ ಹದಿನೆಂಟು ವರ್ಷಗಳ ಕಾಲ ಸಂಪಾದಕರಾಗಿ ದುಡಿದವರು. ನವಭಾರತ, ಪ್ರಜಾವಾಣಿ, ಸಂಯುಕ್ತಕರ್ನಾಟಕ ಹಾಗೂ ಉದಯವಾಣಿಯ ವರದಿಗಾರರಾಗಿ ಅಕ್ಷರ ಸೇವೆ ಸಲ್ಲಿಸಿದವರು. ೪೦ರ ದಶಕದಲ್ಲಿ ಮುಂಬಯಿ ಹೊಟೇಲ್ ಮಾಣಿಗಳಿಗಾಗಿ ರಾತ್ರಿ ಕನ್ನಡ ಶಾಲೆ ತೆರೆದು ಕನ್ನಡ ಕಲಿಸಿದವರು. ಸಮಾಜವಾದಿ ಆದರ್ಶಕ್ಕೆ ಒಳಗಾಗಿ ಸಾಮಾಜಿಕ ಬದ್ಧತೆಯಿಂದ ದುಡಿದವರು. ಜನಪ್ರಗತಿ ಪತ್ರಿಕೆಗೆ ಬರೆಯುತ್ತಿದ್ದ ಅವರು ಪತ್ರಿಕೋದ್ಯಮದಲ್ಲಿ ಐವತ್ತು ವರ್ಷಗಳ ಕಾಲ ಸೇವೆಸಲ್ಲಿಸಿದ ಆದರ್ಶವಾದಿ.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬಸವರಾಜ ಸ್ವಾಮಿ

ರಾಯಚೂರಿನಲ್ಲಿ ಸುದ್ದಿಮೂಲ ಎಂಬ ಜಿಲ್ಲಾ ಪತ್ರಿಕೆಯೊಂದನ್ನು ಸಮರ್ಥವಾಗಿ ಕಟ್ಟಿ ನಡೆಸುತ್ತಿರುವ ಬಸವರಾಜ ಸ್ವಾಮಿ ಅವರು ಜಿಲ್ಲಾ ಪತ್ರಿಕೋದ್ಯಮಕ್ಕೆ ಹೊಸ ಆಯಾಮ ದೊರಕಿಸಿಕೊಟ್ಟವರು.
ರಾಜ್ಯಮಟ್ಟದ ಪತ್ರಿಕೆಗಳಿಗೆ ಸರಿಸಮನಾಗಿ ಜಿಲ್ಲಾ ಪತ್ರಿಕೆಯನ್ನು ಸಜ್ಜುಗೊಳಿಸಿ ಅನೇಕ ಆವೃತ್ತಿಗಳನ್ನು ತರುವ ಮೂಲಕ ಹೊಸದೊಂದು ಶಕೆ ಆರಂಭಿಸಿದ ಬಸವರಾಜ ಸ್ವಾಮಿ ಅನೇಕ ಸಾಮಾಜಿಕ ಸಂಘ-ಸಂಸ್ಥೆಗಳನ್ನು ಸ್ಥಾಪಿಸಿ ಜನಮುಖಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ.
ಬಸವರಾಜಸ್ವಾಮಿ ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಕರ್ನಾಟಕ ಸಣ್ಣ ಪತ್ರಿಕೆಗಳ ಸಂಪಾದಕರ ಸಂಘ, ಮೊದಲಾದ ವೃತ್ತಿಪರ ಸಂಸ್ಥೆಗಳ ಗೌರವ ಪುರಸ್ಕಾರಗಳು ಲಭಿಸಿವೆ.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಜಿ. ಎನ್. ರಂಗನಾಥರಾವ್

ಹಿರಿಯ ಪತ್ರಕರ್ತರಾದ ಜಿ.ಎನ್.ರಂಗನಾಥರಾವ್ಅ ವರು ಪ್ರಜಾವಾಣಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿದ್ದು, ಸುಧಾ ಪತ್ರಿಕೆಯ ಸಹ ಸಂಪಾದಕರಾಗಿ ಕೆಲಸ ಮಾಡಿದ್ದಾರೆ.
ಜಿಎನ್ನಾ ಪ್ರಸ್ತುತ ಕಸ್ತೂರಿ ಮಾಸಿಕದ ಸಂಪಾದಕರು. ಹಲವಾರು ಆಂಗ್ಲ ಕೃತಿಗಳನ್ನು ಕನ್ನಡಕ್ಕೆ ತಂದಿರುವ ಜಿಎನ್ನಾರ ಅವರು ಭಾರತೀಯ ವಿದ್ಯಾಭವನದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ.
ಇವರು ರಚಿಸಿರುವ ಪತ್ರಿಕೋದ್ಯಮ ಪಠ್ಯ ಬೆಂಗಳೂರು ವಿವಿಯ ಪಠ್ಯ ಪುಸ್ತಕವಾಗಿದೆ. ಇವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಹಾಗೂ ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಎಂ.ಜೆ.ಬ್ರಹ್ಮಯ್ಯ

ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಮುದುಗೆರೆ ಗ್ರಾಮದವರಾದ ಎಂ.ಜೆ.ಬ್ರಹ್ಮಯ್ಯ ಅವರು ಹಿರಿಯ ಸ್ವಾತಂತ್ರ್ಯ ಹೋರಾಟಗಾರರು. ದೇಶಪ್ರೇಮದ ಪ್ರತೀಕ. ನಾಡಸೇವೆಗಾಗಿ ಅಹರ್ನಿಶಿ ದುಡಿದವರು.
೧೯೩೮ರ ವಿದುರಾಶ್ವತ್ಥ ಧ್ವಜ ಸತ್ಯಾಗ್ರಹದ ದಟ್ಟ ಪ್ರಭಾವಳಿಯಲ್ಲಿ ಬೆಳೆದ ಬ್ರಹ್ಮಯ್ಯ ಅವರು ೧೯೪೭ರಲ್ಲಿ ‘ಮೈಸೂರು ಚಲೋ’ ಚಳುವಳಿಯಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಿದವರು. ಸ್ವಾತಂತ್ರ್ಯಾನಂತರ ಕಾಲದಲ್ಲಿ ಸರ್ಕಾರಿ ಸೇವೆಯಲ್ಲಿದ್ದು ನಿವೃತ್ತರಾದವರು. ಗಾಂಧಿಮೌಲ್ಯಗಳ ನೆಲೆಯಲ್ಲೇ ಬದುಕು ಸಾಗಿಸಿದ ಬ್ರಹ್ಮಯ್ಯ ಅವರು ಆ ದೆಸೆಯಲ್ಲೇ ಈವರೆಗೂ ಅನೇಕ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದು ಹೊಸ ಪೀಳಿಗೆಗೆ ಮಾದರಿಯಾಗಿರುವವರು.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಪಿ. ರಾಮದಾಸ್

ಕೈಗಾರಿಕಾ ಕ್ಷೇತ್ರದಲ್ಲಿ ತಮ್ಮದೇ ಕೊಡುಗೆ ನೀಡಿರುವ ಸಾಧಕರು ಪಿ.ರಾಮದಾಸ್, ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೂ ವಿಸ್ತಾರಗೊಂಡ ಬಹುಮುಖ ಪ್ರತಿಭೆ.
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ ಸಮೀಪದ ಪುತ್ತಿಗೆ ಗ್ರಾಮದವರಾದ ಪಿ.ರಾಮದಾಸ್ ೧೯೪೬ರಲ್ಲಿ ಜನಿಸಿದರು. ಮೂಡಬಿದರೆಯಲ್ಲಿ ಪ್ರಾಥಮಿಕ ಶಿಕ್ಷಣ, ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪೂರೈಸಿ ಸುರತ್ಕಲ್ನ ಕೆಆರ್ಇಸಿ ಕಾಲೇಜಿನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದವರು. ಮೆಷಿನ್ ಟೂಲ್ಸ್ನಲ್ಲಿ ಎಂ.ಟೆಕ್ ಮಾಡಿದ ಅವರು ೧೯೭೦ರಲ್ಲಿ ಎಚ್ಎಂಟಿಯಲ್ಲಿ ವೃತ್ತಿಜೀವನ ಆರಂಭ. ೧೩ ವರ್ಷಗಳ ನಿರಂತರ ಸೇವೆ. ಬಳಿಕ ಕೊಲ್ಕತ್ತಾದ ಎಂಎಂಸಿಯಲ್ಲಿ ಮುಖ್ಯ ಡಿಸೈನ್ ಇಂಜಿನಿಯರ್ ಆಗಿ ಸೇವೆ. ೧೯೯೪ರಲ್ಲಿ ತಮ್ಮದೇ ಎಎಂಎಸ್ ಸ್ಥಾಪನೆ. ಶೇ. ೯೦ಕ್ಕೂ ಅಧಿಕ ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವಿಕೆ. ೧೫೦೦ಕ್ಕೂ ಹೆಚ್ಚು ಕುಟುಂಬಗಳಿಗೆ ಆಸರೆಯಾಗಿರುವ ಅವರು ಸಂಸ್ಥೆಯನ್ನು ೫೦೦ ಕೋಟಿ ರೂ. ವಹಿವಾಟಿನ ಮಟ್ಟಕ್ಕೆ ಬೆಳೆಸಿದ ಕೀರ್ತಿ ಪಡೆದಿದ್ದಾರೆ. ಧಾರ್ಮಿಕ, ಪರಿಸರ ಮತ್ತು ಸಾಮಾಜಿಕ ಕ್ಷೇತ್ರದಲ್ಲೂ ಸೇವೆಗೈದಿರುವ ಅವರು ಭೀಷ್ಮ ಪಿತಾಮಹ, ಕೈಗಾರಿಕಾ ರತ್ನ ಪ್ರಶಸ್ತಿ ಪುರಸ್ಕೃತರು ಸಹ.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ನಮ ಶಿವಾಯಂ ರೇಗುರಾಜ್

ಸಮಾಜಸೇವೆ ಮತ್ತು ಉದ್ಯಮ ಕ್ಷೇತ್ರದಲ್ಲಿ ತಮ್ಮದೇ ಗುರುತು ಮೂಡಿಸಿರುವವರು ನಮ ಶಿವಾಯಂ ರೇಗುರಾಜ್. ಪ್ರತಿಷ್ಠಿತ ನಿಟ್ಟೂರ್ ತಾಂತ್ರಿಕ ತರಬೇತಿ ಫೌಂಡೇಶನ್ನ ವೈವಸ್ಥಾಪಕ ನಿರ್ದೇಶಕರು.
೧೯೪೨ರ ಆಗಸ್ಟ್ ೬ರಂದು ತಮಿಳುನಾಡಿನ ಕೋಟ್ರಲಂನಲ್ಲಿ ಜನಿಸಿದ ರೇಗುರಾಜ್ ಅವರು ಭಾರತೀಯ ಸೇವೆಯ ನಿವೃತ್ತ ಮೇಜರ್ ಕೆ. ನಮಶಿವಾಯಂರ ಸುಪುತ್ರರು. ಚೆನ್ನೈನಲ್ಲಿ ೧೯೬೩ರಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದ ರೇಗುರಾಜ್ ಅವರು ತಾನ್ಸಿ ಟೂಲ್ ರೂಂನಲ್ಲಿ ಉದ್ಯೋಗಕ್ಕೆ ಸೇರಿದರು. ಆಟೋಮೊಬೈಲ್ ಇಂಜಿನಿಯರಿಂಗ್ನಲ್ಲಿ ಸ್ವಯಂ ಆಸಕ್ತಿ ಬೆಳೆಸಿಕೊಂಡ ಅವರು ೧೯೬೭ರಲ್ಲಿ ನಿಟ್ಟೂರ್ ಟೆಕ್ನಿಕಲ್ ಟ್ರೈನಿಂಗ್ ಫೌಂಡೇಷನ್ಗೆ ವಾಣಿಜ್ಯ ವ್ಯವಸ್ಥಾಪಕರಾಗಿ ಸೇರಿದರು. ಯುವಪೀಳಿಗೆಗೆ ಡೈ ಮೇಕಿಂಗ್ ಮತ್ತು ಟೂಲ್ ಮೇಕಿಂಗ್ನಲ್ಲಿ ತರಬೇತಿ ನೀಡುವ ಜವಾಬ್ದಾರಿ ವಹಿಸಿಕೊಂಡರು. ಆನಂತರದ್ದು ನಿರಂತರ ಸೇವೆ. ದೇಶದ ೧೫ ಕೇಂದ್ರಗಳಲ್ಲಿ ೧೦ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಹೆಗ್ಗಳಿಕೆಯ ರೇಗುರಾಜ್ ಅವರು ಪ್ರತಿಷ್ಠಿತ ರಾಷ್ಟ್ರಪತಿ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವ-ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಪಿ.ಬಿ ಸಂತಪ್ಪನವರ್

ಶಿಕ್ಷಣ ಕ್ಷೇತ್ರದಲ್ಲಿ ಗುರುತಾರ್ಹ ಸೇವೆ ಸಲ್ಲಿಸಿದವರು ಡಾ. ಪಿ.ಬಿ.ಶಾಂತಪ್ಪನವರ್. ವಿದ್ಯಾರ್ಥಿಗಳ ಮನಗೆದ್ದ ಸಂಸ್ಕೃತ ವಿದ್ವಾಂಸರು.
ಕಲಬುರಗಿ ಜಿಲ್ಲೆಯವರಾದ ಶಾಂತಪ್ಪನವರ್ ಶಿಕ್ಷಣ ತಜ್ಞರು. ಕನ್ನಡ, ಸಂಸ್ಕೃತ, ಇಂಗ್ಲೀಷ್, ಹಿಂದಿ ಮತ್ತು ಮರಾಠಿ ಭಾಷೆಯ ಮೇಲೆ ಸಮಾನ ಹಿಡಿತ ಸಾಧಿಸಿರುವವರು. ೧೯೫೨ರಲ್ಲಿ ಜನಿಸಿದ ಶಾಂತಪ್ಪನವರ್ ಅವರು ಕಲಬುರಗಿ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ, ಡೀನ್ ಆಗಿ ಕಾರ್ಯನಿರ್ವಹಿಸಿದವರು. ವಿದ್ಯಾರ್ಥಿಗಳ ಏಳೆಗೆ ಶ್ರಮಿಸಿದ ಗುರು.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಡಿ. ಸುರೇಂದ್ರಕುಮಾರ್

ಶಿಕ್ಷಣ, ಸಮಾಜಸೇವೆ ಮತ್ತು ಗ್ರಾಮೀಣ ಸೇವೆಯಲ್ಲಿ ಸದಾ ನಿರತರಾಗಿರುವವರು ಶ್ರೀ ಧರ್ಮಸ್ಥಳ ಸುರೇಂದ್ರಕುಮಾರ್, ಶ್ರೀಕ್ಷೇತ್ರದ ಹಲವು ಧಾರ್ಮಿಕ-ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡವರು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರದ ಸುರೇಂದ್ರಕುಮಾರ್ ೧೯೫೧ರ ಮೇ. ೩೧ರಂದು ಜನಿಸಿದರು. ವಿದ್ಯಾಭ್ಯಾಸದ ಬಳಿಕ ಶ್ರೀ ಧರ್ಮಸ್ಥಳ ಕ್ಷೇತ್ರದ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯರಾದವರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರಾಗಿ ಶ್ರಮಿಸಿದವರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯಶಸ್ವಿ ಅನುಷ್ಠಾನಗೊಳಿಸಿದ ಅವರು ಶ್ರೀಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ ಮೂಲಕ ಸಾಹಿತ್ಯ, ಕಲೆ, ಸಂಸ್ಕೃತಿಕ ಚಟುವಟಿಕೆಗಳನ್ನು ಕೈಗೊಂಡವರು. ಶ್ರೀ ಕ್ಷೇತ್ರದ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನದ ಉಪಾಧ್ಯಕ್ಷರಾಗಿ ಐದು ದಶಕಗಳಿಂದಲೂ ಶ್ರಮಿಸಿದ್ದು ಚಿತ್ರಕಲಾ ಪರಿಷತ್ತಿನ ಸದಸ್ಯರು, ಕರ್ನಾಟಕ ಬ್ಯಾಂಕಿನ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ನರಸಿಂಹಯ್ಯ

ನಿವೃತ್ತ ಪೊಲೀಸ್ ಇನ್ಸ್ಪೆಕ್ಟರ್ ನರಸಿಂಹಯ್ಯ ಅವರು ಪೊಲೀಸ್ ಕ್ರೀಡಾಪಟುವಾಗಿ ಸೇವೆಸಲ್ಲಿಸಿದವರು. ಕ್ರೀಡಾಂಗಣದಲ್ಲಿ ಇಲಾಖೆಯ ಗೌರವ ಹೆಚ್ಚಿಸಿದವರು.
ಬೆಂಗಳೂರಿನವರಾದ ನರಸಿಂಹಯ್ಯ ಅವರಿಗೆ ಬಾಲ್ಯದಿಂದಲೂ ಕ್ರೀಡಾಸಕ್ತಿ ಅಪಾರ. ೧೯೬೮ರಲ್ಲಿ ರಾಜ್ಯ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡ ಮೇಲೆ ನೂರ್ಮಡಿಗೊಂಡ ಕ್ರೀಡಾಪ್ರೇಮ. ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಲೇ ಇಲಾಖಾ ಕ್ರೀಡಾಚಟುವಟಿಕೆಗಳಲ್ಲಿ ತೊಡಗಿಕೊಂಡವರು. ಪೊಲೀಸ್ ಇಲಾಖೆಯ ರಾಜ್ಯ ಮತ್ತು ಅಂತಾರಾಜ್ಯ ಅಥ್ಲೆಟಿಕ್ಸ್ ವಿಭಾಗದಲ್ಲಿ ೩೪ ಬಾರಿ ಪ್ರಥಮ ಸ್ಥಾನ, ೧೧ ಬಾರಿ ದ್ವಿತೀಯ ಸ್ಥಾನ, ೮ ವರ್ಷಗಳ ಕಾಲ ವೈಯಕ್ತಿಕ ಚಾಂಪಿಯನ್, ಹತ್ತು ವರ್ಷಗಳ ಕಾಲ ಆಲ್ ಇಂಡಿಯಾ ಪೊಲೀಸ್ ಸ್ಪೋಟ್ಸ್ಗೆ ಆಯ್ಕೆ ಮುಂತಾದ ಮಹತ್ವದ ಸಾಧನೆಗೈದವರು, ಇಲಾಖಾ ಸೇವೆ ಮತ್ತು ಕ್ರೀಡಾಸಾಧನೆಗೆ ಮುಖ್ಯಮಂತ್ರಿಗಳ ಪದಕ, ರಾಷ್ಟ್ರಪತಿಗಳ ಶ್ಲಾಘನೀಯ ಸೇವಾಪದಕ ಪಡೆದವರು, ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೂ ಭಾಜನರು.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಸಿ.ಕೆ.ಜೋರಾಪೂರ

ಗಡಿನಾಡು ಬೆಳಗಾವಿಯಲ್ಲಿ ಕನ್ನಡದ ಕಹಳೆ ಮೊಳಗಿಸಿದ ಸಿ.ಕೆ.ಜೋರಾಪೂರ ಅಪ್ಪಟ ಕನ್ನಡ ಹೋರಾಟಗಾರ. ಸಾಂಸ್ಕೃತಿಕ ಸಂಘಟನೆಗಳ ಮೂಲಕ ನಾಡಿನ ಹಿರಿಮೆ ಮೆರೆದವರು.
ಬೆಳಗಾವಿ ಜಿಲ್ಲೆಯ ಸಾಲಹಳ್ಳಿಯವರಾದ ಜೋರಾಪೂರ ಅವರು ಬಾಲ್ಯದಿಂದಲೂ ಕನ್ನಡಪ್ರೇಮಿ, ಸಾಹಿತ್ಯ ರಚನೆ, ಸಂಘಟನೆಗಳ ಮೂಲಕ ಹೆಸರಾದವರು. ಭವ್ಯಭಾರತಯಾತ್ರೆ, ಜಿಹಾದ ಮತ್ತು ಉಗ್ರಗಾಮಿ, ವಸುಧಾರಾ ಕಾದಂಬರಿ, ಬೆಳಗಾವಿ ಕನ್ನಡ ಚಳವಳಿಗಳು ಮತ್ತು ನಾಡಹಬ್ಬ ಸೇರಿದಂತೆ ೨೨ ಗ್ರಂಥಗಳ ಕರ್ತೃ, ೩ ಗ್ರಂಥಗಳ ಸಂಪಾದಕರು. ೧೯೭೬ರಲ್ಲಿ ನಾಡಹಬ್ಬ ಉತ್ಸವ ಸಮಿತಿಯ ಪ್ರಧಾನಕಾರ್ಯದರ್ಶಿಯಾಗಿ ನಾಡಹಬ್ಬ ಆಚರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ಸತತ ೪೩ ವರ್ಷಗಳಿಂದಲೂ ನುಡಿ ಪರಿಚಾರಿಕೆಗೈದವರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ, ಕರ್ನಾಟಕ ಸಂಘದ ಉಪಾಧ್ಯಕ್ಷರು, ಯುವಜನಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ಸಾಮಾಜಿಕ ಚಟುವಟಿಕೆಗಳಲ್ಲೂ ಸಕ್ರಿಯರು. ಅತ್ತಿಮಬ್ಬೆ ಪ್ರತಿಷ್ಠಾನದ ಪ್ರಶಸ್ತಿ, ರನ್ನ ಸಾಹಿತ್ಯ ಪ್ರಶಸ್ತಿ, ಜಗಜ್ಯೋತಿ ಸದ್ಭಾವನ ಪ್ರಶಸ್ತಿ ಮುಂತಾದ ಗೌರವಗಳಿಗೆ ಪಾತ್ರರು.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಮೇಜರ್ ಪ್ರದೀಪ್ ಆರ್ಯ

ದೇಶಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಮೇಜರ್ ಪ್ರದೀಪ್ ಶೌರಿ ಆರ್ಯ ಅವರು ನಾಡಿನ ಹೆಮ್ಮೆ. ಉಗ್ರಗಾಮಿಗಳ ವಿರುದ್ಧ ಹೋರಾಟದಲ್ಲಿ ತೋರಿದ ಧೈರ್ಯ-ಸಾಹಸಕ್ಕೆ ಪ್ರತಿಷ್ಠಿತ ಶೌರ್ಯ ಚಕ್ರಗೌರವಕ್ಕೆ ಪಾತ್ರರಾದವರು.
೨೦೦೪ರ ಭಾರತೀಯ ಕಂದಾಯ ಸೇವಾ ಅಧಿಕಾರಿಯಾಗಿರುವ ಮೇಜರ್ ಪ್ರದೀಪ್ ಆರ್ಯ ಅವರು ಮೂಲತಃ ಬೆಂಗಳೂರಿನವರು, ಬೆಂಗಳೂರಿನ ಫ್ರಾಂಕ್ ಆಂಥೋನಿ ಪಬ್ಲಿಕ್ ಸ್ಕೂಲ್ನಲ್ಲಿ ಶಾಲಾ ಶಿಕ್ಷಣ, ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಪದವಿ ಪಡೆದವರು. ಮಂಗಳೂರಿನಲ್ಲಿ ಸಹಾಯಕ ಆಯುಕ್ತ, ಬೆಂಗಳೂರಿನಲ್ಲಿ ಉಪ ಆಯುಕ್ತ ಹಾಗೂ ಬೆಳಗಾವಿಯಲ್ಲಿ ಜಂಟಿ ಆಯುಕ್ತರಾಗಿ ಕಾರ್ಯನಿರ್ವಹಿಸಿದವರು. ಸಮಾಜಶಾಸ್ತ್ರ, ವ್ಯಾಪಾರ ಆಡಳಿತ, ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿವರು ಅವರು ಪಿಎಚ್ಡಿ ಪದವೀಧರರು ಸಹ. ವೃತ್ತಿಯಲ್ಲಿ ವಾಣಿಜ್ಯ ಪೈಲೆಟ್ ಆಗಿರುವ ಅವರು ೧೦೬ಟಿಎ ಪ್ಯಾರಡೂಟ್ ರೆಜಿಮೆಂಟ್ಗೆ ನೇಮಕಗೊಂಡರು. ಕರ್ನಾಟಕ ಮತ್ತು ಉತ್ತರ ಈಶಾನ್ಯ ರಾಜ್ಯವಾದ ನಾಗಾಲ್ಯಾಂಡ್ನಲ್ಲಿ ಚುನಾವಣಾ ಅಕ್ರಮಗಳನ್ನು ಪತ್ತೆಹಚ್ಚಿದ್ದಕ್ಕಾಗಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಂದ ಪ್ರಶಸ್ತಿ ಪಡೆದವರು. ಕಾಶ್ಮೀರ ಕಣಿವೆಯ ಬಾರಾಮುಲ್ಲಾದ ಎಲ್ಓಸಿ ಬಳಿ ಉಗ್ರರ ನಿಮೂರ್ಲನೆಗೈದಿದ್ದಕ್ಕಾಗಿ ೨೦೧೮ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಗೌರವಾನ್ವಿತ ಶೌರ್ಯ ಪ್ರಶಸ್ತಿಗೂ ಪಾತ್ರರಾಗಿದ್ದಾರೆ.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಆರ್.ಎಸ್.ರಾಜಾರಾಮ್

ಕನ್ನಡಿಗರಲ್ಲಿ ಸದಭಿರುಚಿಯ ಓದಿನ ಆಸಕ್ತಿಯನ್ನು ಹೆಚ್ಚಿಸುವ ಮೂಲಕ ವೈಚಾರಿಕ ಪ್ರಜ್ಞೆಯನ್ನು ಬೆಳೆಸಿದವರು ಆರ್.ಎಸ್.ರಾಜಾರಾಮ್. ಕರ್ನಾಟಕದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ನವಕರ್ನಾಟಕ ಪಬ್ಲಿಕೇಷನ್ಸ್ನ ರೂವಾರಿ.
೧೯೪೧ರಲ್ಲಿ ಮಂಗಳೂರಿನಲ್ಲಿ ಜನಿಸಿದ ರಾಜಾರಾಮ್ ಅವರು ಇಂಟರ್ಮಿಡಿಯೇಟ್ಗೆ ವಿದ್ಯಾಭ್ಯಾಸ ಮೊಟಕುಗೊಳಿಸಿ ಸಾಮಾಜಿಕ ಚಟುವಟಿಕೆಗಳಿಗೆ ಧುಮುಕಿದವರು. ಕಾರ್ಮಿಕ ನಾಯಕ ಬಿ.ವಿ.ಕಕ್ಕಿಲ್ಲಾಯರ ಮಾರ್ಗದರ್ಶನದಲ್ಲಿ ಕಾರ್ಮಿಕ ಸಂಘಟನೆಯಲ್ಲಿ ಸಕ್ರಿಯರಾದವರು. ೧೯೬೦ರಲ್ಲಿ ಸ್ಥಾಪನೆಗೊಂಡ ನವಕರ್ನಾಟಕ ಪಬ್ಲಿಕೇಷನ್ಸ್ನ ಆರಂಭಿಕ ದಿನಗಳಲ್ಲೇ ಸಹಾಯಕರಾಗಿದ್ದವರು ರಾಜಾರಾಮ್. ೬೫ರಲ್ಲಿ ನವಕರ್ನಾಟಕ ಸಂಸ್ಥೆಯ ‘ಜನಶಕ್ತಿ ಪ್ರಿಂಟರ್ಸ್’ ಸಂಸ್ಥೆಯ ‘ಜನಶಕ್ತಿ ಪ್ರಿಂಟರ್ಸ್’ ಮುದ್ರಣಾಲಯದ ವ್ಯವಸ್ಥಾಪಕರಾಗಿ, ಭಾರತ-ಸೋವಿಯತ್ ಸಾಂಸ್ಕೃತಿಕ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ದಶಕದ ಸೇವೆ. ವಿದ್ಯಾರ್ಥಿ ಯುವಜನ ಸಭಾದ ಸ್ಥಾಪನೆ. ೭೨ರಿಂದ ನವಕರ್ನಾಟಕ ಪಬ್ಲಿಕೇಷನ್ಸ್ನ ಪೂರ್ಣ ಹೊಣೆಗಾರಿಕೆ, ವಿಶ್ವಕಥಾಕೋಶ, ಕನ್ನಡ ಸಾಹಿತ್ಯ ಚರಿತ್ರೆ ಬೆಳವಣಿಗೆ, ನವಕರ್ನಾಟಕ ಜ್ಞಾನವಿಜ್ಞಾನ ಕೋಶ, ನವಕರ್ನಾಟಕ ಸಾಹಿತ್ಯ ಸಂಪದ ಮಾಲಿಕೆಯಡಿ ಹಲವು ಮಹತ್ವದ ಕೃತಿಗಳ ಪ್ರಕಟಣೆ. ಅತ್ಯುತ್ತಮ ಪ್ರಾದೇಶಿಕ ಪ್ರಕಾಶಕ ಸಂಸ್ಥೆ, ಅತ್ಯುತ್ತಮ ಪ್ರಕಾಶಕ ಪುರಸ್ಕಾರ ಮತ್ತಿತರ ಗೌರವಗಳಿಗೆ ಭಾಜನರು.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ ಮತ್ತು ತಂತ್ರಜ್ಞಾನ

ಪ್ರೊ.ಸಿ.ಇ.ಜಿ.ಜಸ್ಟೋ

ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸ್ಮರಣೀಯ ಸಾಧನೆಗೈದ ಸಾಧಕರು ಪ್ರೊ. ಸಿ.ಇ.ಜಿ.ಜಸ್ಟೋ. ಹೆದ್ದಾರಿ ಇಂಜಿನಿಯರಿಂಗ್ ಕೋರ್ಸ್ ಅನ್ನು ಪ್ರಚಲಿತಗೊಳಿಸಿದ ಶಿಕ್ಷಣ ತಜ್ಞರು.
ಜಸ್ಟ್ ಮೂಲತಃ ತಮಿಳುನಾಡಿನವರು. ಕೊಯಮತ್ತೂರು ಜಿಲ್ಲೆಯ ನಾಗರಕೊಯಿಲ್ನಲ್ಲಿ ೧೯೩೫ರಲ್ಲಿ ಜನಿಸಿದವರು. ತಮಿಳುನಾಡಿನ ರೋರ್ಕಿ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವಿ, ಪಿಎಚ್ ಡಿ ಪಡೆದವರು. ಆನಂತರ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ನಿರಂತರ ಸೇವೆ. ೧೯೭೩ರಲ್ಲಿ ವಿಶೇಷ ಆಹ್ವಾನದ ಮೇರೆಗೆ ಬೆಂಗಳೂರಿನ ಪ್ರತಿಷ್ಠಿತ ಯುವಿಸಿಇ ಕಾಲೇಜಿನ ಪ್ರಾಧ್ಯಾಪಕರಾಗಿ ಪದಗ್ರಹಣ. ಹೆದ್ದಾರೆ ಇಂಜಿನಿಯರಿಂಗ್ ಕೋರ್ಸ್ ಆರಂಭಿಸಿ ಪ್ರಚುರಪಡಿಸುವಿಕೆ. ಸ್ನಾತಕೋತ್ತರ ಕೋರ್ಸ್, ಪಿಎಚ್ಡಿ ಅನ್ನು ಆರಂಭಿಸಿದ ಹೆಗ್ಗಳಿಕೆ. ೧೯೯೫ರಲ್ಲಿ ನಿವೃತ್ತಿಯ ಬಳಿಕ ಯುಜಿಸಿಯ ಯೋಜನೆ ಮೇರೆಗೆ ಎಮಿರೇಟ್ಸ್ನಲ್ಲಿ ಐದು ವರ್ಷಗಳ ಕಾಲ ವಿಶೇಷ ಅಧ್ಯಯನ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಸದ್ಯ ಬೆಂಗಳೂರಿನ ಬನಶಂಕರಿಯಲ್ಲಿ ನಿವೃತ್ತಿ ಜೀವನ ನಡೆಸುತ್ತಿರುವ ಸಾಧಕರು.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಶ್ರೀ ಶಿವಾನಂದ ಕೌಜಲಗಿ

ರಾಜಕಾರಣ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಮಾನವಾದ ಸೇವೆ ಸಲ್ಲಿಸಿದವರು ಶಿವಾನಂದ ಕೌಜಲಗಿ. ಪ್ರತಿಷ್ಠಿತ ಕೆ.ಎಲ್.ಇ ಶಿಕ್ಷಣ ಸಂಸ್ಥೆಯನ್ನು ಬೆಳೆಸಿದವರಲ್ಲಿ ಪ್ರಮುಖರು.
ಬೆಳಗಾವಿ ಜಿಲ್ಲೆಯ ಬೈಲಹೊಂಗಲದವರಾದ ಶಿವಾನಂದ ಕೌಜಲಗಿ ಅವರ ಬಿ.ಕಾಂ ಪದವೀಧರರು. ಕಾನೂನು ಪದವಿಯನ್ನೂ ಪಡೆದವರು. ಶಿಕ್ಷಣದಷ್ಟೇ ರಾಜಕಾರಣದಲ್ಲೂ ಆಸಕ್ತಿ ವಹಿಸಿದವರು. ಬೈಲಹೊಂಗಲ ವಿಧಾನಸಭಾ ಕ್ಷೇತ್ರವನ್ನು ಸತತವಾಗಿ ಪ್ರತಿನಿಧಿಸಿದವರು. ಲೋಕೋಪಯೋಗಿ ಸಚಿವರಾಗಿ , ಸಂಸದರಾಗಿ ಜನಸೇವೆ ಮಾಡಿದವರು. ಅಂತೆಯೇ ಕೆ.ಎಲ್.ಇ. ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದವರು. ಪ್ರಸ್ತುತ ಕೆ.ಎಲ್.ಇ. ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಸಂಸ್ಥೆಯ ಉನ್ನತಿಗಾಗಿ ಶ್ರಮಿಸುತ್ತಿದ್ದಾರೆ.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಕೆ.ಪಿ.ಗೋಪಾಲಕೃಷ್ಣ

ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸಿದವರು ಡಾ. ಕೆ.ಪಿ.ಗೋಪಾಲಕೃಷ್ಣ, ಪ್ರತಿಷ್ಠಿತ ನ್ಯಾಷನಲ್ ಪಬ್ಲಿಕ್ ಸ್ಕೂಲ್ನ ಸಂಸ್ಥಾಪಕ ಅಧ್ಯಕ್ಷರು.
ಸುಶಿಕ್ಷಿತ ಕುಟುಂಬದ ಹಿನ್ನೆಲೆಯಿಂದ ಬಂದ ಡಾ. ಕೆ.ಪಿ.ಗೋಪಾಲಕೃಷ್ಣ ಅವರು ೧೯೫೯ರಲ್ಲಿ ಬೆಂಗಳೂರಿನ ರಾಜಾಜಿನಗರದಲ್ಲಿ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಅನ್ನು ಆರಂಭಿಸಿದರು. ಸಂಸ್ಥಾಪಕ ಅಧ್ಯಕ್ಷ ಹಾಗೂ ಪ್ರಾಂಶುಪಾಲರಾಗಿ ಸಂಸ್ಥೆಯನ್ನು ಕಟ್ಟಿಬೆಳೆಸುವಲ್ಲಿ ಅವರದ್ದು ಸ್ಮರಣೀಯ ಪಾತ್ರ ದೂರದರ್ಶಿತ್ವದ ಶೈಕ್ಷಣಿಕ ನಡೆಯಿಂದ ಎನ್.ಪಿ.ಎಸ್. ಇಂದು ಅತ್ಯುತ್ತಮ ಶಿಕ್ಷಣ ಸಂಸ್ಥೆಯಾಗಿ ರೂಪಗೊಂಡಿದೆ. ಶಿಸ್ತು, ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದ್ದು ಈ ಜನಪ್ರಿಯತೆಯ ಹಿಂದೆ ಗೋಪಾಲಕೃಷ್ಣರ ಪರಿಶ್ರಮದ ಪಾಲು ಬಹಳವಿದ್ದು ಶಿಕ್ಷಣ ತಜ್ಞರಾಗಿ ಹೆಜ್ಜೆಗುರುತು ಮೂಡಿಸಿದ್ದಾರೆ.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಶ್ರೀ ಎ.ವಿ.ಎಸ್.ಮೂರ್ತಿ

ಶೈಕ್ಷಣಿಕ ಕ್ಷೇತ್ರದ ಸಾಧಕರಲ್ಲಿ ಎ.ವಿ.ಎಸ್.ಮೂರ್ತಿ ಅವರೂ ಸಹ ಒಬ್ಬರು. ಪ್ರತಿಷ್ಠಿತ ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ನ ಗೌರವಾನ್ವಿತ ಕಾರ್ಯದರ್ಶಿಗಳು,
ಬೆಂಗಳೂರಿನ ಬಸವನಗುಡಿಯಲ್ಲಿ ಜನಿಸಿದ ಎ.ವಿ.ಎಸ್.ಮೂರ್ತಿ ಸುಶಿಕ್ಷಿತರು. ಪ್ರತಿಷ್ಠಿತ ಬಿಷಪ್ ಕಾಟನ್ ಸ್ಕೂಲ್ನಲ್ಲಿ ಪ್ರಾಥಮಿಕ ಶಿಕ್ಷಣ. ಬಿ.ಎಂ.ಎಸ್.ಕಾಲೇಜಿನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ನಲ್ಲಿ ಪದವಿಯನ್ನು ಪ್ರಥಮ ಬ್ಯಾಂಕ್ನಲ್ಲಿ ಪೂರ್ಣಗೊಳಿಸಿದವರು. ಅಮೆರಿಕಾದ ಕನಸಾಸ್ ಸ್ಟೇಟ್ ಯುನಿವರ್ಸಿಟಿಯಲ್ಲಿ ಎಂ.ಎಸ್ ಸ್ನಾತಕೋತ್ತರ ಪದವೀಧರರು. ವಿದ್ಯಾಭ್ಯಾಸದ ಬಳಿಕ ಸ್ವಂತ ಉದ್ಯಮದಲ್ಲಿ ತೊಡಗಿಕೊಂಡ ಅವರು ರೋಟರಿ ಬೆಂಗಳೂರು ಮಿಡ್ಟೌನ್ ಅಧ್ಯಕ್ಷರಾಗಿ, ಕೆನರಾ ಬ್ಯಾಂಕ್ ಪರಿಹಾರ ಮತ್ತು ಕಲ್ಯಾಣ ಸಂಸ್ಥೆಯಲ್ಲಿ ಜಂಟಿ ಕಾರ್ಯದರ್ಶಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ವಾಸವಿ ವಿದ್ಯಾನಿಕೇತನ್ ಟ್ರಸ್ಟ್ನ ಉಪಾಧ್ಯಕ್ಷರಾಗಿ ಶಿಕ್ಷಣ ಕ್ಷೇತ್ರಕ್ಕೆ ಪಾದಾರ್ಪಣೆ. ಆನಂತರ ವಾಸವಿ ಎಜುಕೇಷನಲ್ ಟ್ರಸ್ಟ್ ಜೀವನ ಸಂಧ್ಯಾ ಟ್ರಸ್ಟ್ ಮತ್ತು ಕರ್ನಾಟಕ ಆರ್ಯವೈಶ್ಯ ಚಾರಿಟಬಲ್ ಟ್ರಸ್ಟ್ನ ಧರ್ಮದರ್ಶಿಯಾಗಿ ಸೇವೆ ಸಲ್ಲಿಸಿ ಆನಂತರ ರಾಷ್ಟ್ರೀಯ ಶಿಕ್ಷಣ ಸಮಿತಿಯ ಜಂಟಿ ಕಾರ್ಯದರ್ಶಿಯಾಗಿ, ೨೦೦೩ರಿಂದ ಕಾರ್ಯದರ್ಶಿಯಾಗಿ ಸಂಸ್ಥೆಯ ಬೆಳವಣಿಗೆಗೆ ಅಮೂಲ್ಯ ಕೊಡುಗೆ ನೀಡಿದ ಹೆಗ್ಗಳಿಕೆಗೆ ಅನೇಕ ಪ್ರಶಸ್ತಿ-ಗೌರವಗಳಿಗೆ ಭಾಜನರು.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಶ್ರೀಮತಿ ಗೀತಾ ರಾಮಾನುಜಂ

ಶಿಕ್ಷಣ ಕ್ಷೇತ್ರವೂ ಸೇರಿದಂತೆ ಹಲವು ರಂಗಗಳಲ್ಲಿ ಸಾಧನೆಗೈದಿರುವ ಬಹುಮುಖ ಪ್ರತಿಭೆ ಡಾ.ಗೀತಾ ರಾಮಾನುಜಂ, ಶಿಕ್ಷಣತಜ್ಞರು, ನಾಟಕಕಾರರು, ಅಂಕಣಕಾರರು, ಆಪ್ತ ಸಮಾಲೋಚಕಲರು, ಆಡಳಿತಗಾರರು ಜೊತೆಗೆ ವಾಗ್ರಿಗಳು ಕೂಡ.
ಸಾಂಸ್ಕೃತಿಕ ನಗರಿ ಮೈಸೂರಿನ ಕೊಡುಗೆ ಗೀತಾರಾಮಾನುಜಂ. ಮೈಸೂರು ವಿವಿಯ ವಿಜ್ಞಾನ ಪದವೀಧರೆ, ಇಂಗ್ಲೀಷ್ ಮತ್ತು ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಹಾಸನ ಜಿಲ್ಲೆಯ ಹೊಳೆನರಸೀಪುರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಬದುಕು ಆರಂಭ. ಬೆಂಗಳೂರಿನ ಜಯನಗರ ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಕೆ, ಸಾಹಿತ್ಯ ರಚನೆಯಲ್ಲಿ ಕೃಷಿ, ಸೂಳೆಕೆರೆ, ಕಾನನದ ಕಗ್ಗತ್ತಲ್ಲಿ, ಭಾಮತಿ ಮತ್ತಿತರ ನಾಟಕಗಳ ರಚನಕಾರರು, ಮಕ್ಕಳ ನಾಟಕಗಳ ನಿರ್ದೇಶಕರು, ಸಿಂಗಾಪೂರ, ಅಮೆರಿಕದ ಕ್ಯಾಲಿಫೋರ್ನಿಯಾದ ವಿವಿಯಲ್ಲಿ ಉಪನ್ಯಾಸ. ವಾಗ್ನಿಯೆಂದೇ ಜನಪ್ರಿಯ. ಪತ್ರಿಕೆಗಳ ಅಂಕಣಕಾರರಾಗಿಯೂ ಹೆಸರುವಾಸಿ, ನಿವೃತ್ತಿಯ ನಂತರ ಜಿ.ಆರ್.ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರು. ಬಡವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಿದ ಹೆಗ್ಗಳಿಕೆ. ಆಧ್ಯಾತ್ಮ ಚಿಂತನೆಯಿಂದಲೂ ಜನಮನ್ನಣೆ ಗಳಿಸಿರುವ ಗೀತಾರಾಮಾನಜುಂ ಅವರ ಸಾಧನೆಗೆ ನಾಟಕ ಅಕಾಡೆಮಿ ಪುರಸ್ಕಾರ, ವಿದ್ಯಾಧಾರಿಣಿ ಪ್ರಶಸ್ತಿ, ಡಿವಿಜಿ ಪ್ರಶಸ್ತಿ, ಇಂಡಿಯಾ ಯುನೆಸ್ಕೋ ಪುರಸ್ಕಾರ ಮತ್ತಿತರ ಗೌರವಗಳಿಗೆ ಪಾತ್ರರು.

Categories
ಚಲನಚಿತ್ರ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ದತ್ತುರಾಜ್

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ವಿಶಿಷ್ಟ ಛಾಪು ಮೂಡಿಸಿದವರಲ್ಲಿ ಚಿ.ದತ್ತುರಾಜ್ ಸಹ ಒಬ್ಬರು. ನಿರ್ದೇಶಕ, ಬರಹಗಾರ, ಪತ್ರಕರ್ತರಾಗಿದ್ದ ಅವರು ಬಹುಮುಖಿ ಪ್ರತಿಭೆ.
ಹೆಸರಾಂತ ಚಿತ್ರಸಾಹಿತಿ ಚಿ. ಉದಯಶಂಕರ್ ಅವರ ಸಹೋದರರಾದ ಚಿ. ದತ್ತುರಾಜ್ ಅವರಿಗೆ ಬಾಲ್ಯದಿಂದಲೂ ಸಹಜವಾಗಿಯೇ ಸಿನಿಮಾದತ್ತ ಒಲವು. ೧೯೭೦ರಲ್ಲಿ ನಿರ್ದೇಶಕ ರವಿ ಅವರ ‘ಅರಶಿನ ಕುಂಕುಮ’ ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗುವ ಮೂಲಕ ಚಿತ್ರರಂಗಕ್ಕೆ ಪ್ರವೇಶ. ಆನಂತರ ೧೯೮೧ರಲ್ಲಿ ರಾಜ್ ಕುಮಾರ್ ಅಭಿನಯದ ‘ಕೆರಳಿದ ಸಿಂಹ’ ಚಿತ್ರದಿಂದ ಸ್ವತಂತ್ರ ನಿರ್ದೇಶಕನಾಗಿ ಹೆಜ್ಜೆ ಬಳಿಕ ಕಾಮನಬಿಲ್ಲು, ಅದೇ ಕಣ್ಣು, ಶೃತಿ ಸೇರಿದಾಗ, ಮೃತ್ಯುಂಜಯ, ಅರಳಿದ ಹೂವುಗಳು, ಆನಂದಜ್ಯೋತಿ ಚಿತ್ರಗಳ ನಿರ್ದೇಶನ, ನಿರ್ದೇಶನದ ಜೊತೆಗೆ ಸಂಭಾಷಣೆಕಾರರಾಗಿಯೂ ಸಮರ ಮತ್ತು ಹೃದಯಕಳ್ಳರು ಚಿತ್ರಕ್ಕೆ ಸಾಹಿತ್ಯಸೇವೆ. ಕೆಲಕಾಲ ಪತ್ರಕರ್ತರಾಗಿಯೂ ಕೆಲಸ ಮಾಡಿದ ಅವರು ‘ವಿಜಯಚಿತ್ರ’ ಪತ್ರಿಕೆಯಲ್ಲಿ ರಾಜ್ ಬದುಕಿನ ಕುರಿತು ೯೩ ಸಂಚಿಕೆಗಳಲ್ಲಿ ಬರೆದ ‘ಕಥಾನಾಯಕನಕಥೆ’ ಅಂಕಣ ಬಲು ಜನಪ್ರಿಯ. ಸದಭಿರುಚಿಯ ಚಿತ್ರಗಳನ್ನು ತೆರೆಗಿತ್ತದತ್ತುರಾಜ್ ಅವರು ಪ್ರತಿಷ್ಠಿತ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೂ ಭಾಜನರು.

Categories
ಚಲನಚಿತ್ರ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ರಾಜನ್

ಕನ್ನಡ ಚಿತ್ರಸಂಗೀತದ ಮಾಧುರ್ಯತೆಯನ್ನು ಸವಿಜೇನಾಗಿಸಿದ ಅಪೂರ್ವ ಜೋಡಿ ರಾಜನ್ ನಾಗೇಂದ್ರ ಏಳು ಭಾಷೆಯ ಚಿತ್ರಗಳಿಗೆ ಸ್ವರಸಂಯೋಜಿಸಿದ ಅನನ್ಯ ಸಾಧಕ ಸಹೋದರರು.
ಮೈಸೂರಿನ ಜಯಮಾರುತಿ ಆರ್ಕೆಸ್ಟ್ರಾದಿಂದ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟು, ಪಿ.ಕಾಳಿಂಗರಾವ್ರ ತಂಡದ ಮುಖೇನ ಮುಂಚೂಣಿಗೆ ಬಂದು ೧೯೫೨ರಲ್ಲಿ ‘ಸೌಭಾಗ್ಯಲಕ್ಷ್ಮಿ’ ಚಿತ್ರದ ಮುಖೇನ ಸಂಗೀತ ನಿರ್ದೇಶಕರಾದವರು. ನವನವೀನ ವಿಧಾನಗಳ ಅನ್ವೇಷಣೆ, ಪ್ರಯೋಗಶೀಲತೆ, ಶಾಸ್ತ್ರೀಯ ವಿಧಾನಗಳನ್ನು ಎಳ್ಳಷ್ಟು ಬಿಡದ ಸೋಪಜ್ಞ ಶೈಲಿ, ಮಾಧುರ್ಯದ ಮಂಗಳ ಸ್ವರ ರಾಜನ್-ನಾಗೇಂದ್ರರ ವಿಶೇಷತೆ. ನ್ಯಾಯವೇ ದೇವರು, ಬಯಲುದಾರಿ, ಭಾಗ್ಯವಂತರು, ನಾ ನಿನ್ನ ಮರೆಯಲಾರೆ, ಎರಡು ಕನಸು, ಗಂಧದಗುಡಿ, ಪಾವನಗಂಗಾ ಮುಂತಾದ ಚಿತ್ರಗಳ ಯಶಸ್ಸಿನ ಹಿಂದೆ ಈ ಜೋಡಿಯ ಸಂಗೀತದ್ದು ಬಹುಪಾಲು. ಕನ್ನಡ, ತಮಿಳು, ತೆಲುಗು, ತುಳು, ಹಿಂದಿ, ಮಲೆಯಾಳಂ ಸೇರಿದಂತೆ ೩೭೫ ಚಿತ್ರಗಳಿಗೆ ಸಂಗೀತ ನಿರ್ದೇಶಿಸಿದ ಇವರು ಮೂರು ಚಿತ್ರಗಳ ನಿರ್ಮಾಪಕರೂ ಸಹ, ಕರ್ನಾಟಕ-ಆಂಧ್ರಪ್ರದೇಶ ರಾಜ್ಯ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿರುವ ಈ ಜೋಡಿ ಸಂಗೀತಪ್ರೇಮಿಗಳಿಗೆ ಸದಾ ಅಚ್ಚುಮೆಚ್ಚು.

Categories
ಚಲನಚಿತ್ರ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಜೈಜಗದೀಶ್

ಕೊಡಗಿನಿಂದ ಕನ್ನಡ ಚಿತ್ರವಲಯಕ್ಕೆ ಬಂದ ಪ್ರಪ್ರಥಮ ನಟ ಜೈಜಗದೀಶ್, ನಟ, ನಿರ್ಮಾಪಕ, ನಿರ್ದೇಶಕ ಮತ್ತು ಕಿರುತೆರೆ ಕಲಾವಿದರಾಗಿ ಚಿರಪರಿಚಿತ. ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ರ ಸಿನಿಶೋಧ.
ಮೈಸೂರಿನ ರಾಮಕೃಷ್ಣ ಶಾಲೆ, ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಜೈಜಗದೀಶ್ ಪುಟ್ಟಣ್ಣ ಕಣಗಾಲ್ ಕಣ್ಣಿಗೆ ಬಿದ್ದವರೇ ೧೯೭೬ರಲ್ಲಿ ‘ಫಲಿತಾಂಶ’ ಚಿತ್ರದ ಮೂಲಕ ನಾಯಕನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ. ಹಲಬಗೆಯ ಪಾತ್ರಗಳಲ್ಲಿ ಮಿಂಚಿದ ಪ್ರತಿಭಾವಂತ, ಬಂಧನ, ಗಾಳಿಮಾತು, ಪಡುವಾರಹಳ್ಳಿ ಪಾಂಡವರು, ಮುಂಗಾರುಮಳೆ ಹೆಸರು ತಂದುಕೊಟ್ಟ ಚಿತ್ರಗಳು. ೪೨ ವರ್ಷಗಳ ಸುದೀರ್ಘ ಚಿತ್ರಪಯಣದಲ್ಲಿ ೫೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ. ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ನಟಿಸಿದ ಹಿರಿಮೆ, ಪತ್ನಿ ವಿಜಯಲಕ್ಷ್ಮಿಸಿಂಗ್ ಜೊತೆಗೊಡಿ ೨೫ಕ್ಕೂ ಅಧಿಕ ಚಿತ್ರಗಳನ್ನು ತೆರೆಗಿತ್ತ ನಿರ್ಮಾಪಕ, ನಿರ್ದೇಶಕ ಕೂಡ. ಚಲನಚಿತ್ರ ಅಕಾಡೆಮಿ, ಕಲಾವಿದರ ಸಂಘ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಯ ಸದಸ್ಯರಾಗಿಯೂ ಸೇವೆಸಲ್ಲಿಸಿದ ಜೈಜಗದೀಶ್ ಚಿತ್ರನಿರ್ಮಾಣದಲ್ಲಿ ರಾಜ್ಯ, ರಾಷ್ಟ್ರ ಹಾಗೂ ಫಿಲಂಫೇರ್ ಪ್ರಶಸ್ತಿಗಳಿಗೂ ಭಾಜನರು.

Categories
ಚಲನಚಿತ್ರ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಭಾರ್ಗವ

ಹೆಸರಾಂತ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ ಅವರ ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿ ನಂತರ ಸ್ವತಂತ್ರ ನಿರ್ದೇಶನಕ್ಕೆ ಇಳಿದ ಭಾರ್ಗವ, ದ್ವಾರಕೀಶ್ ಅವರ ಬಹಳಷ್ಟು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ವಿಷ್ಣುವರ್ಧನ ನಾಯಕರಾಗಿದ್ದ ಅನೇಕ ಯಶಸ್ವಿ ಚಿತ್ರಗಳ ನಿರ್ದೇಶಕರೂ ಆದ ಭಾರ್ಗವ ಅವರು ನಿರ್ದೇಶಿಸಿದ ಇತ್ತೀಚಿನ ಚಿತ್ರ “ಕುಮಾರರಾಮ”.

Categories
ಬಯಲಾಟ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಭೀಮರಾಯ ಬೋರಗಿ

ವಿಜಾಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಯಲಗೋಡದ ಬಯಲಾಟ ಕಲಾವಿದ ಭೀಮರಾಯ ಬೋರಗಿ, ಸಂಗೀತವನ್ನೇ ನೆಚ್ಚಿ ಬಯಲಾಟವನ್ನೇ ಬದುಕಿನ ಬುತ್ತಿಯಾಗಿಸಿಕೊಂಡವರು.
ಕಡುಬಡತನದ ಹಿನ್ನೆಲೆಯ ಭೀಮರಾಯ ಬೋರಗಿ ಅವರು ಓದಿದ್ದು ಕೇವಲ ನಾಲ್ಕನೇ ತರಗತಿ ಮಾತ್ರ ಆ ವೇಳೆಗೆ ಮನಸೆಳೆದ ಬಯಲಾಟವನ್ನು ಉಸಿರಾಗಿಸಿಕೊಂಡರು. ರಾಜ್ಯಾದ್ಯಂತ ಬಯಲಾಟದ ಸಂಗೀತ ಕಲಾವಿದರಾಗಿ ಮೂಡಿಸಿದ ಛಾಪು ಅಪಾರ. ಶ್ರೀದೇವಿ ಮಹಾತ್ಮ, ಮಹಿಷಾಸುರ ಮರ್ಧಿನಿ, ಭೀಮಾರ್ಜುನರ ಕಾಳಗ, ಚಿತ್ರಸೇನೆ ಗಂಧರ್ವ ಮುಂತಾದ ಸುಮಾರು ೪೦೦ ಬಯಲಾಟಗಳನ್ನು ನಿರ್ದೇಶಿಸಿ ಪ್ರಸ್ತುತಪಡಿಸಿದ ಹಿರಿಮೆ ಇವರದ್ದು. ಬಯಲಾಟದ ಹಿರಿಯ ಕಲಾವಿದರಾಗಿ ಆ ಕಲೆಯ ಉಳಿವಿಗೆ ಹಲವು ದಶಕಗಳ ಕಾಲ ಶ್ರಮಿಸಿದ ಭೀಮರಾಯ ಬೋರಗಿ ಅವರ ಕಲಾಸೇವೆಗೆ ಜನಮನ್ನಣೆ- ಚಪ್ಪಾಳೆಗಳೇ ಪ್ರಶಸ್ತಿ, ಮೆಚ್ಚುಗೆಯ ಮಾತುಗಳೇ ಸನ್ಮಾನ. ದೇಸೀ ಪ್ರತಿಭಾಶಕ್ತಿಗೊಂದು ರೂಪಕ.

Categories
ಬಯಲಾಟ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಎಲ್ಲವೂ ರೊಡ್ಡಪ್ಪನವರ

ಕನ್ನಡ ರಂಗಭೂಮಿ ಕಂಡ ಅಭಿಜಾತ ಕಲಾವಿದೆ ನಾಡೋಜ ಯಲ್ಲವ್ವ ರೊಡ್ಡಪ್ಪನವರ, ಬಯಲಾಟದ ಅಪ್ರತಿಮ ಪಾತ್ರಧಾರಿ.
ಬಾಲ್ಯದಿಂದಲೂ ಚೌಡಿಕೆ ಪದಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದ ಯಲ್ಲವ್ವ ೧೩ನೇ ವಯಸ್ಸಿನಲ್ಲಿ ಕಂದಗಲ್ಲ ಹನುಮಂತರಾಯರ ‘ಕುರುಕ್ಷೇತ್ರ’ ನಾಟಕದ ಮೂಲಕ ರಂಗಭೂಮಿ ಪ್ರವೇಶಿಸಿದವರು. ಕೃಷ್ಣನ ಪಾತ್ರಧಾರಿಯಾಗಿ ಕಲಾಸೇವೆಗೆ ಮುನ್ನುಡಿ, ಲೋಕಯ್ಯ ಹೊಳಬಸಯ್ಯ ಗಣಾಚಾರಿ ಮಾಸ್ತರ ಮತ್ತು ದೇಶಪಾಂಡೆಯವರ ಮೂಲಕ ಜಾನಪದ ರಂಗಭಭೂಮಿಗೆ ಪ್ರವೇಶ ಪಡೆದ ಯಲ್ಲವ್ವ ಆನಂತರ ಶ್ರೀಕೃಷ್ಣ ಸಂಗೀತ ನಾಟಕ ಕಂಪನಿಗೆ ಸೇರಿ ಹಾಡುಗಬ್ಬ ಪಾರಿಜಾತವನ್ನೇ ಬದುಕಿನ ಭಾವವಾಗಿಸಿಕೊಂಡರು. ಬಯಲಾಟದ ಪಾರಿಜಾತದಲ್ಲಿ ಅಭಿನಯ. ಸಹಜ ನಟನೆ ಮತ್ತು ಗಾಯನ ಎಲ್ಲವನ ಪ್ರತಿಭಾಶಕ್ತಿ, ಪಾರಿಜಾತದಲ್ಲಿ ಕೃಷ್ಣ, ರುಕ್ಕಿಣಿ, ಗೊಲ್ಲತಿ, ನಾರದ, ದೊರಸಾನಿ, ಸತ್ಯಭಾಮೆ ಮತ್ತಿತರ ಪಾತ್ರ ನಿರ್ವಹಿಸಿದ ಎಲ್ಲವ್ವನ ಕೃಷ್ಣ-ಕೊರವಂಜಿ ಪಾತ್ರಾಭಿನಯ ಅವಿಸ್ಮರಣೀಯ. ಅಭಿನಯದ ಜೊತೆಗೆ ಹಿಮ್ಮೇಳ ಕಲಾವಿದೆ, ಕಂಪನಿ ಮಾಲೀಕರಾಗಿಯೂ ಸಮರ್ಥವಾಗಿ ಜವಬ್ದಾರಿ ನಿಭಾಯಿಸಿದ ಎಲ್ಲವ್ವ ದಮನಿತ ಹೆಣ್ಣುಮಕ್ಕಳಿಗೊಂದು ಮಾದರಿ.

Categories
ಯಕ್ಷಗಾನ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಸೀತಾರಾಮ್ ಕುಮಾರ್ ಕಟೀಲ್

ಯಕ್ಷರಂಗದ ಚಾರ್ಲಿ ಚಾಪ್ಲಿನ್ರೆಂದೇ ಹೆಸರುವಾಸಿಯಾದ ಸೀತಾರಾಮ್ ಕುಮಾರ್ ಕಟೀಲ್ ಹಿರಿಯ ಯಕ್ಷಗಾನ ಕಲಾವಿದರು. ನೋವು ನುಂಗಿ ನಗೆಚೆಲ್ಲಿದ ಯಕ್ಷಪಟು.
ದಕ್ಷಿಣಕನ್ನಡ ಜಿಲ್ಲೆ ಮಂಗಳೂರು ತಾಲ್ಲೂಕಿನ ಕಟೀಲ್ನಲ್ಲಿ ಜನಿಸಿದ ಸೀತಾರಾಮ್ ಓದಿದ್ದು ಕೇವಲ ಐದನೇ ತರಗತಿ ಮಾತ್ರ, ಕಡುಬಡತನ ದುಡಿಮೆಗಾಗಿ ಮುಂಬಯಿಗೆ ದೂಡಿತ್ತು. ಅಪರಿಚಿತ ನಗರಿಯಲ್ಲಿ ಆಕಸ್ಮಿಕವಾಗಿ ಯಕ್ಷಗಾನದ ಸೆಳೆತಕ್ಕೆ ಸಿಲುಕಿದ್ದು ನಿಜಕ್ಕೂ ಸೋಜಿಗ. ಮುಂಬಯಿನ ಶ್ರೀ ಗುರುನಾರಯಣ ಯಕ್ಷಗಾನ ಮಂಡಳಿಯಲ್ಲಿ ಆರಂಭಿಕ ತರಬೇತಿ. ಕದ್ರಿ ಮೇಳದ ‘ಗೆಜ್ಜೆಹೆಜ್ಜೆ’ ಪ್ರಸಂಗದ ‘ಕುಡುಕಕುಳ’ ನಾಗಿ ನೀಡಿದ ಮನೋಜ್ಞ ಅಭಿನಯ ಕಲಾಬದುಕಿಗೆ ಮಹತ್ವದ ತಿರುವು. ಆನಂತರ ಪೆರ್ಡೂರು ಮೇಳ, ಸಾಲಿಗ್ರಾಮ ಮೇಳ, ಮಂಗಳಾದೇವಿ ಮೇಳ, ಮಧೂರು ಮೇಳಗಳಲ್ಲಿ ನಿರಂತರ ಸೇವೆ. ಯಕ್ಷಗಾನದ ಹಾಸ್ಯಗಾರನಾಗಿ ಜನಜನಿತ. ವಿದೇಶಗಳಲ್ಲೂ ಯಕ್ಷಗಾನದ ಕಂಪು ಬೀರಿದ ಸಾಧನೆ. ಕಲಾಸೇವೆಯ ಸುವರ್ಣ ಮಹೋತ್ಸವದಂಚಿನಲ್ಲಿರುವ ಸೀತಾರಾಮ್ ಕುಮಾರ್ ಕಲಾಪ್ರೌಢಿಮೆಗೆ ಜಿಲ್ಲಾ ಗಣರಾಜ್ಯೋತ್ಸವ ಪ್ರಶಸ್ತಿ, ಪೇಜಾವರಸ್ವಾಮಿಗಳ ವೀರವಿಠಲ ಪ್ರಶಸ್ತಿ, ವಿಶ್ವಕನ್ನಡ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು-ನೂರಾರು ಸನ್ಮಾನಗಳಿಗೆ ಭಾಜನರು.

Categories
ಯಕ್ಷಗಾನ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಹಿರಿಯಡ್ಕ ಗೋಪಾಲರಾವ್

ನಾಡೋಜ ಹಿರಿಯಡ್ಕ ಗೋಪಾಲರಾವ್ ನಾಡು ಕಂಡ ಅನನ್ಯ ಮದ್ದಳೆಗಾರ, ಯಕ್ಷಗಾನವನ್ನು ಪ್ರಪ್ರಥಮಬಾರಿಗೆ ವಿದೇಶಕ್ಕೆ ಕೊಂಡೊಯ್ದ ಮದ್ದಳೆಯ ಮಾಂತ್ರಿಕ.
೧೯೧೯ರಲ್ಲಿ ಹಿರಿಯಡ್ಕದಲ್ಲಿ ಜನಿಸಿದ ಗೋಪಾಲರಾವ್ ಅವರ ಕಲಾಪ್ರೇಮಕ್ಕೆ ತಂದೆಯೇ ಸ್ಫೂರ್ತಿ. ೧೬ನೇ ವಯಸ್ಸಿನಲ್ಲೇ ತಂದೆಯಿಂದ ಮದ್ದಳೆ ಅಭ್ಯಾಸ. ೧೯೩೪ರಲ್ಲಿ ಹಿರಿಯಡ್ಕ ಮೇಳದಲ್ಲಿ ಪ್ರಾತಧಾರಿಯಾಗಿ ಕಲಾಲೋಕಕ್ಕೆ ಪಾದಾರ್ಪಣೆ. ಆನಂತರ ಉಪಮದ್ದಳೆಗಾರ, ಮದ್ದಳೆಗಾರರಾಗಿ ರೂಪಾಂತರು. ಕಡಲತೀರಭಾರ್ಗವ ಡಾ. ಶಿವರಾಮಕಾರಂತರ ಯಕ್ಷಗಾನ ಕೇಂದ್ರದಲ್ಲಿ ಅಧ್ಯಾಪಕರಾಗಿ ಸೇವೆ. ಆನಂತರ ನಿರಂತರ ಕಲಾಪ್ರದರ್ಶನ, ಮಂದಾರ್ತಿ ಕಲಾಮೇಳ, ಬ್ರಹ್ಮಾವರದ ಯಕ್ಷಗಾನ ಕೇಂದ್ರ, ಎಂಜಿಎಂ ಕಾಲೇಜಿನ ಯಕ್ಷಗಾನ ಕೇಂದ್ರದಲ್ಲಿ ಕಲಾಸೇವೆ. ರಾಜ್ಯಾದ್ಯಂತ ಮಾತ್ರವಲ್ಲದೆ, ಈಶಾನ್ಯ ಭಾರತ, ಜರ್ಮನಿ ಸೇರಿ ಹಲವು ವಿದೇಶಗಳಲ್ಲಿ ಮದ್ದಳೆಯ ನಾದವೈಭವದ ದರ್ಶನ. ವಿದೇಶಿಗರಿಗೆ ಯಕ್ಷಗಾನ ಕಲಿಸಿದ ಈ ಗುರುವಿಗೆ ಈಗ ೯೯ರ ಇಳಿವಯಸ್ಸು. ಆದರೂ ಬತ್ತದ ಉತ್ಸಾಹ, ಜಾನಪದ ಅಕಾಡೆಮಿ ಪ್ರಶಸ್ತಿ, ರಾಜ್ಯ ಸಂಗೀತ ಅಕಾಡೆಮಿ ಪ್ರಶಸ್ತಿ, ಜಾನಪದಶ್ರೀ ಪ್ರಶಸ್ತಿ ಹಾಗೂ ನಾಡೋಜ ಗೌರವಕ್ಕೆ ಪಾತ್ರರು.

Categories
ಕ್ರೀಡೆ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಚೇತನ್.ಆರ್.

ಅಂಗವೈಕಲ್ಯವನ್ನು ಹಿಮ್ಮೆಟ್ಟಿಸಿ ಸಾಧನೆಗೈದ ವಿಶಿಷ್ಟ ಚೇತನ ಚೇತನ್. ಆರ್. ಅಂತಾರಾಷ್ಟ್ರೀಯ ಪ್ಯಾರಾ ಒಲಂಪಿಕ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದು ಕೀರ್ತಿ ಮೆರೆದ ಕ್ರೀಡಾಪಟು.
ಹಾಸನದ ನಿವಾಸಿಯಾದ ಚೇತನ್ ಅವರಿಗೆ ಬಾಲ್ಯದಿಂದಲೂ ಕ್ರೀಡಾಸಕ್ತಿ. ಅಂಗವೈಕಲ್ಯವಿದ್ದರೂ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ನೆಚ್ಚಿನ ಹವ್ಯಾಸ. ಪರಿಶ್ರಮ ಮತ್ತು ಬದ್ಧತೆಯಿಂದ ಕ್ರೀಡಾಕ್ಷೇತ್ರದಲ್ಲಿ ತಲ್ಲೀನವಾದ ಚೇತನ್ ಸೀನಿಯರ್ ನ್ಯಾಷನಲ್ ಚಾಂಪಿಯನ್ಶಿಪ್ನ ಅಥ್ಲೆಟಿಕ್ಸ್ನಲ್ಲಿ ಎರಡು ಬಾರಿ ಬೆಳ್ಳಿಪದಕ, ಒಂದು ಬಾರಿ ಕಂಚಿನ ಪದಕ ವಿಜೇತರು. ಬೆಂಗಳೂರಿನಲ್ಲಿ ೨೦೦೮ರಲ್ಲಿ ಜರುಗಿದ ಏಷಿಯನ್ ಪ್ಯಾರಾ ಒಲಂಪಿಕ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಬೆಳ್ಳಿಪದಕ, ಚೆನ್ನೈನಲ್ಲಿ ನಡೆದ ಅಂತಾರಾಷ್ಟ್ರೀಯ ಷಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಚಿನ್ನದ ಪದಕ, ೨೦೦೯ರಲ್ಲಿ ಐರ್ಲೆಂಡ್ನಲ್ಲಿ ನಡೆದ ವರ್ಡ್ಡ್ವಾರ್ಫ್ ಇಂಟರ್ ನ್ಯಾಷನಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದು ನಾಡಿಗೆ ಕೀರ್ತಿ ತಂದ ಪ್ರತಿಭಾವಂತರು.

Categories
ಕ್ರೀಡೆ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ವಿ.ಎಸ್.ವಿನಯ

ಅಂತಾರಾಷ್ಟ್ರೀಯ ಹಾಕಿ ಆಟಗಾರರಾದ ವಿ.ಎಸ್.ವಿನಯ ಭಾರತೀಯ ಹಾಕಿ ತಂಡವನ್ನು ಪ್ರತಿನಿಧಿಸಿದ ಪ್ರತಿಭಾವಂತ ಕ್ರೀಡಾಪಟು.
ಕಿತ್ತಾಳೆ ನಾಡು ಕೊಡಗಿನ ಮೂಲದವರಾದ ವಿನಯ ಅವರು ಬಾಲ್ಯದಿಂದಲೂ ಹಾಕಿ ಆಟಕ್ಕೆ ಆಕರ್ಷಿತರಾದವರು. ಸತತ ಪ್ರಯತ್ನದ ಫಲವಾಗಿ ಹಾಕಿಯಲ್ಲಿ ಪರಿಣಿತಿ ಪಡೆದವರು. ರಾಜ್ಯ ಮಟ್ಟದ ಹಾಕಿ ತಂಡದಲ್ಲಿ ಸಾಮರ್ಥ್ಯ ಪ್ರದರ್ಶಿಸಿ ರಾಷ್ಟ್ರ ತಂಡಕ್ಕೆ ಆಯ್ಕೆಯಾದವರು. ಭಾರತೀಯ ಹಿರಿಯರ ಹಾಕಿ ತಂಡದ ಸದಸ್ಯರಾಗಿ ಚಾಂಪಿಯನ್ಸ್ ಟ್ರೋಫಿ, ವಿಶ್ವಕಪ್, ಏಷ್ಯನ್ ಗೇಮ್ಸ್, ಏಷ್ಯಾಕಪ್, ಜ್ಯೂನಿಯರ್ ವಿಶ್ವಕಪ್ ಮುಂತಾದ ಪ್ರಮುಖ ಪಂದ್ಯಾವಳಿಗಳಲ್ಲಿ ಸಮರ್ಥ ಆಟದಿಂದ ಪಂದ್ಯದ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿ ಕ್ರೀಡಾಭಿಮಾನಿಗಳ ಗಮನಸೆಳೆದವರು.. ಕ್ರೀಡಾರಂಗದಲ್ಲಿ ಕರುನಾಡಿನ ಕೀರ್ತಿ ಬೆಳಗಿದ ವಿ.ಎಸ್.ವಿನಯ ಅವರ ಕ್ರೀಡಾಸಾಧನೆಗೆ ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿ, ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಪ್ರಶಸ್ತಿ, ಎಫ್ ಐ ಎಚ್ ವಾರ್ಷಿಕ ಆಟಗಾರ ಮುಂತಾದ ಪ್ರಶಸ್ತಿಗಳಿಗೆ ಭಾಜನರಾಗಿರುವ ಕ್ರೀಡಾಪ್ರತಿಭೆ.

Categories
ಕ್ರೀಡೆ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಕೆನೆತ್ ಮೊವೆಲ್

ಕೋಲಾರ ಚಿನ್ನದ ಗಣಿ ಪ್ರದೇಶದಲ್ಲಿ ಜನಿಸಿದ ಆಂಗ್ಲೋ ಇಂಡಿಯನ್ ಸಮುದಾಯದ ಕೆನೆತ್ ಮೊವೆಲ್ ಅವರು ೧೯೬೫ರಲ್ಲಿಯೇ ಕರ್ನಾಟಕ ರಾಜ್ಯಕ್ಕೆ ಮೊಟ್ಟ ಮೊದಲ ಅರ್ಜುನ ಪ್ರಶಸ್ತಿಯನ್ನು ತಂದುಕೊಟ್ಟವರು.
೧೯೬೪ರ ಟೋಕಿಯೋ ಒಲಂಪಿಕ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕೆನೆತ್ ಮೊವೆಲ್ ೩೫ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತ ತಂಡದ ಸದಸ್ಯರಾಗಿ ಭಾಗವಹಿಸಿದ್ದಾರೆ.
೧೯೬೬ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಪಾಲುಗೊಂಡ ಭಾರತ ತಂಡದ ಧ್ವಜಧಾರಿಗಳಾಗಿದ್ದ ಕೆನೆತ್ ಮೊವೆಲ್ ರಾಷ್ಟ್ರೀಯ ನೂರು ಮೀಟ??? ಓಟದಲ್ಲಿ ಸ್ಥಾಪಿಸಿದ ದಾಖಲೆ ಹನ್ನೆರಡು ವರ್ಷಗಳ ಕಾಲ ಯಾರಿಂದಲೂ ಮುರಿಯಲಾಗಿರಲಿಲ್ಲ.
ಕರ್ನಾಟಕದಲ್ಲಿ ೪೦೦ ಮೀಟರ್, ೨೦೦ ಮೀಟರ್ ಹಾಗೂ ೧೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಕೆನೆತ್ ಮೊವೆಲ್ ಸ್ಥಾಪಿಸಿದ ದಾಖಲೆಗಳು ಹತ್ತಾರು ವರ್ಷಗಳ ಕಾಲ ಅಬಾಧಿತವಾಗಿದ್ದವು.

Categories
ಚಿತ್ರಕಲೆ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬಸವರಾಜ ರೇವಣಸಿದ್ದಪ್ಪ ಉಪ್ಪಿನ

ಚಿತ್ರಕಲೆಯನ್ನು ಬದುಕಿನ ಧ್ಯಾನವಾಗಿಸಿಕೊಂಡವರು ಬಸವರಾಜ ರೇವಣಸಿದ್ದಪ್ಪ ಉಪ್ಪಿನ, ಚಿತ್ರಕಲಾ ಶಿಕ್ಷಕ, ಕಲಾವಿದರಾಗಿ ಹೆಜ್ಜೆಗುರುತಿನ ಸಾಧಕರು.
ಕಲಬುರಗಿ ಜಿಲ್ಲೆಯ ನದಿಶಿಣ್ಣೂರಿನಲ್ಲಿ ೧೯೪೫ರ ಜೂನ್ ೧೮ರಂದು ಜನಿಸಿದ ಬಸವರಾಜ ರೇವಣಸಿದ್ದಪ್ಪ ಉಪ್ಪಿನ ಅವರಿಗೆ ಬಾಲ್ಯದಿಂದಲೂ ಕುಂಚ ಮತ್ತು ಬಣ್ಣಗಳೆಡೆಗಿನ ಮೋಹ, ಕಲಬುರಗಿಯ ದಿ ಐಡಿಯಲ್ ಆರ್ಟ್ ಇನ್ಸ್ಟಿಟ್ಯೂಟ್ನಲ್ಲಿ ಚಿತ್ರಕಲೆಯಲ್ಲಿ ಡಿಪ್ಲೋಮಾ ಕೋರ್ಸ್ ಕಲಿಕೆ. ಅದೇ ಸಂಸ್ಥೆಯಲ್ಲಿ ಕಲಾಶಿಕ್ಷಕರಾಗಿ ವೃತ್ತಿಬದುಕಿನಾರಂಭ. ಕಲಿಕೆಯ ದಾಹಕ್ಕೆ ನವದೆಹಲಿಯ ಸಿಸಿಆರ್ಟಿಯಲ್ಲಿ ವಿಶೇಷ ಕೋರ್ಸ್ ಹಾಗೂ ಕಲಬುರಗಿ ವಿವಿಯಲ್ಲಿ ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ. ೧೯೭೧ರಿಂದ ೨೦೦೩ರವರೆಗೆ ಸರ್ಕಾರಿ ಪ್ರೌಢಶಾಲಾ ಕಲಾಶಿಕ್ಷಕನಾಗಿ ಸೇವೆ. ರೋಹಿತ್ ಕಲಾವೃಂದ ಹಾಗೂ ಕರ್ನಾಟಕ ರೋಹಿತ್ ಕಲಾವೃಂದ ಸಂಸ್ಥೆಯ ಸಂಸ್ಥಾಪಕರು. ಬೋಧನೆಯ ಜೊತೆಜೊತೆಗೆ ಕಲಾಕೃತಿಗಳ ರಚನೆಯಲ್ಲೂ ತೊಡಗಿದ ಅವರು ಕರ್ನಾಟಕ ಮಾತ್ರವಲ್ಲದೆ, ಹೈದರಾಬಾದ್ ಮತ್ತಿತರೆಡೆ ಏಕವ್ಯಕ್ತಿ ಪ್ರದರ್ಶನ, ದಕ್ಷಿಣ ಕೋರಿಯಾ ಸೇರಿ ಹಲವೆಡೆ ಸಮೂಹ ಚಿತ್ರಕಲಾ ಪ್ರದರ್ಶನ ಮಾಡಿದ್ದು ಚಿತ್ರಕಲೆಯ ಕುರಿತು ಹಲವು ಲೇಖನಗಳನ್ನು ಪ್ರಕಟಿಸಿದ್ದಾರಲ್ಲದೆ, ಹತ್ತಾರು ಗೌರವಗಳಿಗೂ ಭಾಜನರು.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಶ್ರೀ ಬಸಣ್ಣ ಕಾಳಪ್ಪ ಕಂಚಗಾರ

ಸಗರನಾಡೆಂದೇ ಜನಪ್ರಿಯವಾದ ಸುರಪುರ ತಾಲ್ಲೂಕಿನ ಕೊಡೇಕಲ್ನ ಶಿಲ್ಪಕಲಾವಿದ ಬಸಣ್ಣ ಕಾಳಪ್ಪ ಕಂಚಗಾರ ಅವರು ಬಹುಮುಖ ಪ್ರತಿಭೆ, ಬಹುಶ್ರುತ ಸಾಧನೆ.
ಶಿಲ್ಪಕಲೆ ಬಸಣ್ಣರಿಗೆ ಅಪ್ಪನಿಂದ ಬಂದ ಬಳುವಳಿ, ತಂದೆಯ ಆಕಾಲಿಕ ನಿಧನದಿಂದ ನಾಲ್ಕನೇ ತರಗತಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿದ ಇವರು ಆನಂತರ ನೆಚ್ಚಿಕೊಂಡಿದ್ದು ಶಿಲ್ಪಕಲೆಯನ್ನೇ ಬಡಗಿತನ, ಕಂಚುಗಾರಿಕೆಯಲ್ಲಿ ಪಳಗಿರುವ ಅವರು ಗ್ರಾಮದೇವತೆಗಳಾದ ಶ್ರೀದೇವಿ ದುರಗಮ್ಮ, ಕೆಂಚಮ್ಮ, ಆಚಜನೇಯ ಮುಂತಾದ ದೇವರುಗಳ ಕಾಷ್ಠಶಿಲ್ಪ, ಕಂಡು ಮತ್ತು ಕಲ್ಲಿನ ಮೂರ್ತಿಯನ್ನು, ಕಂಚಿನ ಲೋಹದಲ್ಲಿ ಕೊಡೇಕಲ್ ಬಸವಣ್ಣ, ಅಶ್ವಾರೂಢ ಮಲ್ಲಯ್ಯ, ಕಾಳಿಕಾದೇವಿ ಅನ್ನಪೂರ್ಣೇಶ್ವರಿ, ಮೌನೇಶ್ವರ ವಿಗ್ರಹಗಳನ್ನೂ ಸಿದ್ಧಪಡಿಸಿರುವುದು ಇವರ ಕಲಾಪ್ರೌಢಿಮೆಗೆ ಸಾಕ್ಷಿ. ಕಲಾಕೃತಿಗಳ ರಚನೆ ಮಾತ್ರವಲ್ಲದೆ, ಜ್ಯೋತಿಷ್ಯಶಾಸ್ತ್ರ, ವಾಸ್ತು, ನಾಟಿ ವೈದ್ಯ, ನಾಟಕ ರಚನಾ ಕಲೆಯನ್ನು ಕರಗತ ಮಾಡಿಕೊಂಡಿರುವುದು ವಿಶೇಷ. ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಪ್ರಶಸ್ತಿ ಹಾಗೂ ಅನೇಕ ಗೌರವಗಳಿಗೆ ಪಾತ್ರವಾಗಿರುವ ಕಲಾಚೇತನ.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಶ್ರೀ ಯಮನಪ್ಪ ಪಾಂಡಪ್ಪ ಚಿತ್ರಗಾರ

ಶಿಲ್ಪಕಲಾವಿದ ಯಮನಪ್ಪ ಪಾಂಡಪ್ಪ ಚಿತ್ರಗಾರ ಗದಗ ಜಿಲ್ಲೆಯ ಪ್ರತಿಭೆ. ಗೊಂಬೆಗಳ ತಯಾರಿಕೆಯಲ್ಲಿ ಸಿದ್ಧಹಸ್ತರು.
ಗದಗ ಜಿಲ್ಲೆಯ ಗಜೇಂದ್ರಗಡ ಹುಟ್ಟೂರು. ೧೯೨೬ರಲ್ಲಿ ಜನಿಸಿದ ಯಮನಪ್ಪ ಬಾಲ್ಯದಲ್ಲೇ ಕಲೆಯ ಸೆಳೆತಕ್ಕೊಳಗಾದವರು. ಗೊಂಬೆಗಳ ತಯಾರಿಕೆಯಲ್ಲಿ ಪಳಗಿದವರು. ಸಿಮೆಂಟ್ ಶಿಲ್ಪಗಳ ರಚನೆ, ಗ್ರಾಮದೇವತೆಗಳ ಕಲಾಕೃತಿಗಳಿಗೆ ಬಣ್ಣ ಹಚ್ಚುವಿಕೆ, ಗಣೇಶ ಪ್ರತಿಮೆಗಳ ತಯಾರಿಕೆಯಲ್ಲಿ ತೊಡಗಿದವರು. ಹಲವಾರು ದೇವಾಲಯಗಳ ಗೋಪುರಗಳು ಇವರ ಕೈಚಳಕದಿಂದ ನೋಡುಗರ ಕಣ್ಮನ ಸೆಳೆದಿವೆ. ರಾಜ್ಯದ ವಿವಿಧೆಡೆ ಉದ್ಯಾನವನಗಳಲ್ಲಿ ಮಕ್ಕಳ ಆಕರ್ಷಣೆಯ ಕಲಾಕೃತಿಗಳ ರಚಿಸಿರುವ ಇವರ ಕುರಿತ ಅನೇಕ ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಪ್ರಶಸ್ತಿ-ಗೌರವ-ಸನ್ಮಾನಗಳು ಸಾರ್ಥಕತೆಯ ಭಾವ ತಂದಿವೆ. ೯೦ರ ಇಳಿವಯಸ್ಸಿನಲ್ಲೂ ಕಲಾಕೃತಿಗಳ ರಚನೆಯಲ್ಲಿ ತನ್ಮಯರಾಗಿರುವುದು ಇವರ ಕಲಾಬದ್ಧತೆಗೆ ಸಾಕ್ಷಿ.

Categories
ಜಾನಪದ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಚೂಡಾಮಣಿ ರಾಮಚಂದ್ರ

ಶಿವಮೊಗ್ಗ ಜಿಲ್ಲೆಯ ಸಾಗರದ ವಿಶಿಷ್ಟ ಜಾನಪದ ಪ್ರತಿಭೆ ಶ್ರೀಮತಿ ಚೂಡಾಮಣಿ ರಾಮಚಂದ್ರ ಗಂಡುಕಲೆ ಡೊಳ್ಳುಕುಣಿತದಲ್ಲಿ ವಿಶೇಷ ಸಾಧನೆಗೈದವರು, ವೀರಗಾಸೆ, ಲಂಬಾಣಿ ನೃತ್ಯ, ಜಾನಪದ ಹಾಡು, ಭಜನೆ ಮತ್ತು ಕೋಲಾಟಗಳಲ್ಲೂ ಪರಿಣಿತರು. ರಾಜ್ಯದ ಪ್ರಪ್ರಥಮ ಮಹಿಳಾ ಡೊಳ್ಳುಕುಣಿತ ತಂಡ ರಚಿಸಿದ ಹೆಮ್ಮೆಯ ಹೆಜ್ಜೆಗುರುತು ಇವರದ್ದು. ರಾಜ್ಯ, ದೇಶದೆಲ್ಲೆಡೆ ಮಾತ್ರವಲ್ಲದೆ, ಲಂಡನ್, ಜರ್ಮನಿ, ಇಟಲಿ, ಫ್ರಾನ್ಸ್ ಸೇರಿದಂತೆ ೨೦ಕ್ಕೂ ಹೆಚ್ಚು ವಿದೇಶಗಳಲ್ಲಿ, ಚಲನಚಿತ್ರ-ದೂರದರ್ಶನಗಳಲ್ಲಿ ಡೊಳ್ಳುಕುಣಿತದ ಸದ್ದು ಮೊಳಗಿಸಿ ಕರುನಾಡಿನ ಜನಪದ ಸಿರಿಯ ವೈಭವವನ್ನು ದರ್ಶಿಸಿದವರು.
ಸಮಾಜಸೇವೆ, ಮಹಿಳಾ ಸಂಘಟನೆ, ತಳಸಮುದಾಯದ ಅಶಕ್ತ ಹೆಣ್ಣುಮಕ್ಕಳು ಹಾಗೂ ಹೊಸ ಪೀಳಿಗೆಗೆ ಜಾನಪದ ಕಲೆಗಳ ತರಬೇತಿ, ಬಡಮಕ್ಕಳಿಗಾಗಿ ಶಿಶುಪಾಲನಾ ಕೇಂದ್ರ ನಡೆಸುವಿಕೆ, ಮುಂತಾದ ಸಮಾಜಮುಖಿ ಚಟುವಟಿಕೆಗಳಲ್ಲಿ ನಾಲ್ಕೂವರೆ ದಶಕಗಳಿಂದ ತೊಡಗಿಕೊಂಡಿರುವ ಕ್ರಿಯಾಶೀಲರು. ೧ ಕಥಾಸಂಕಲನ, ೪ ಕವನಸಂಕಲನ, ೨ ಮಕ್ಕಳ ಕಥೆ- ಪ್ರವಾಸಕಥನವನ್ನೂ ಹೊರತಂದಿರುವ ಚೂಡಾಮಣಿ ಅವರು ಸಾಹಿತಿಯೂ ಸಹ. ಅಪರೂಪದ ಸಾಧನೆ-ಸೇವೆಗಾಗಿ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಯನ್ನೊಳಗೊಂಡಂತೆ ಹತ್ತಾರು ಪ್ರಶಸ್ತಿ-ಗೌರವಗಳಿಗೆ ಭಾಜನರು.

Categories
ಜಾನಪದ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬಸವರಾಜ ಅಲಗೂಡ

ಹೈದರಾಬಾದ್ ಕರ್ನಾಟಕ ಭಾಗದ ವಿಶಿಷ್ಟ ಪ್ರತಿಭೆ ಬಸವರಾಜ ಅಲಗೂಡ, ಶೋತೃಗಳ ಮನಗೆದ್ದ ಗೀಗೀ ಪದದ ಹಾಡುಗಾರರು. ದಶಕಗಳ ಕಾಲ ಕಲಾಸೇವೆಗೈದ ಕಲಾವಿದರು.
ಕಲಬುರಗಿ ಜಿಲ್ಲೆಯ ಕಲಬುರಗಿ ತಾಲ್ಲೂಕಿನ ಅಲಗೂಡದಲ್ಲಿ ೧೯೪೭ರ ಮೇ. ೪ರಂದು ಜನಿಸಿದ ಬಸವರಾಜ ಅಲಗೂಡ ಅವರು ಅನಕ್ಷರಸ್ಥರಾದರೂ ಕಲೆಯನ್ನೇ ಪಠ್ಯವಾಗಿಸಿಕೊಂಡವರು. ೨೦ನೇ ವಯಸ್ಸಿನಲ್ಲೇ ಕಲೆಗೆ ಮಾರು ಹೋಗಿ ಪ್ರಖ್ಯಾತ ಗೀಗೀ ಕಲಾವಿದರಾದ ಗುಂಡಪ್ಪ ಭದ್ರಪ್ಪ, ಶಿವಶರಣಪ್ಪ ಮತ್ತು ಹಜರತಸಾಬ ಅವರ ಮಾರ್ಗದರ್ಶನದಲ್ಲಿ ಗೀಗೀ ಪದ, ಲಾವಣಿಪದ, ಭಕ್ತಿಗೀತೆಗಳು, ದೇಶಭಕ್ತಿ ಗೀತೆಗಳ ಬಗ್ಗೆ ಆಳವಾದ ಅಧ್ಯಯನ ಮಾಡಿದವರು. ಮೂರೂವರೆ ದಶಕಗಳ ಕಾಲ ಜನಪದ ಗಾಯನದ ಮೂಲಕ ಜನರಲ್ಲಿ ಮೂಢನಂಬಿಕೆ, ಜಾತೀಯತೆ, ಅಸಮಾನತೆಯ ಕುರಿತು ಜಾಗೃತಿ ಮೂಡಿಸಿದವರು. ಸರ್ಕಾರದ ವಿವಿಧ ಜನಪರ ಯೋಜನೆಗಳ ಪ್ರಚಾರದಲ್ಲಿ ತೊಡಗಿದವರು. ಕಲಬುರಗಿ ಜಿಲ್ಲೆ ಮಾತ್ರವಲ್ಲದೆ, ದೂರದ ಸೊಲ್ಲಾಪುರ, ಅಕ್ಕಲಕೋಟ, ನಾಗಪೂರಗಳಲ್ಲೂ ಕಲಾಪ್ರದರ್ಶನ ಮಾಡಿರುವ ಬಸವರಾಜ ಅಲಗೂಡ ಅವರ ಕಲಾಸೇವೆ ಸ್ಮರಿಸುವಂತಹುದು.

Categories
ಜಾನಪದ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಶಂಕ್ರಮ್ಮ ಮಹಾದೇವಪ್ಪಾ

ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ರಾಮತೀರ್ಥದ ಜಾನಪದ ಪ್ರತಿಭೆ ಶಂಕ್ರಮ್ಮ ಮಹಾದೇವಪ್ಪಾ ಕನ್ನಡ ಮತ್ತು ತೆಲುಗು ಬುರಕಥೆ ಕಲಾವಿದರು. ದಶಕಗಳಿಂದಲೂ ಕಲಾಸೇವೆಯಲ್ಲೇ ಹೊಟ್ಟೆಹೊರೆಯುತ್ತಿರುವವರು.
ಬುಡ್ಗಜಂಗಮ ಸಮುದಾಯದ ಪಾರಂಪರಿಕ ಕಲೆಯಾದ ಬುರಕಥೆ ಶುದ್ಧ ಮೌಖಿಕ ಕಲೆ. ಈ ಕಲೆಯನ್ನು ಬಾಲ್ಯದಲ್ಲೇ ಕರಗತ ಮಾಡಿಕೊಂಡು ಹಳ್ಳಿಗಾಡಿನಲ್ಲಿ ಪ್ರದರ್ಶಿಸಿ ಬದುಕು ಕಟ್ಟಿಕೊಂಡವರು, ಹಳ್ಳಿಯ ಮನೆಯಂಗಳ, ಮದುವೆ ಮತ್ತಿತರ ಮಂಗಳ ಕಾರ್ಯಗಳು ಮತ್ತು ವೈಕುಂಠಯಾತ್ರೆಗಳೇ ಇವರ ಕಲಾಪ್ರದರ್ಶನದ ವೇದಿಕೆಗಳು. ರಾತ್ರಿಯಿಡೀ ರಂಜಕವಾಗಿ ಕಥೆ ಕೇಳುವ ಪರಿ ಕೇಳುಗರಿಗೆ ಅತ್ಯಾಕರ್ಷಕ. ಒಳ್ಳೆಯ ಕಥೆಗಾರ್ತಿಯೆಂದೇ ಜನಪ್ರಿಯ. ಇವರ ಕಥೆಗಳು ಧ್ವನಿಸುರಳಿಗಳಾಗಿದ್ದು ಅವುಗಳ ಅಧ್ಯಯನಕಾರರಿಗೆ ಪಿ.ಎಚ್.ಡಿ. ಸಹ ದೊರೆತಿರುವ ಹೆಗ್ಗಳಿಕೆ. ಜನಮನ್ನಣೆಯ ಜೊತೆಗೆ ಅವಿಶ್ರಾಂತ ಕಲಾಸೇವೆಗೆ ಹಲವು ಪ್ರಶಸ್ತಿ-ಗೌರವಗಳಿಗೂ ಪಾತ್ರರು.

Categories
ಜಾನಪದ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಶರಣಪ್ಪ ಭೂತೇರ (ಮಂಗಳಮುಖಿ)

ತಾಯಿ ಎಲ್ಲವ್ವನ ಭಕ್ತರಾಗಿ ಭೂತೇರ ಕುಣಿತವನ್ನು ಮೈಗೂಡಿಸಿಕೊಂಡಿರುವ ಶರಣಪ್ಪ ಭೂತೇರ ಅವರು ಅಪ್ರತಿಮ ಕಲಾವಿದರು. ಎಲ್ಲಮ್ಮನ ಆಟ, ನಗರಗಾಣಿಗನ ಆಟ, ಮಾಳವಾರ ನಾಗಶೆಟ್ಟಿ ಆಟ, ಬಡವನ ಆಟ ಮುಂತಾದ ಆಟಗಳನ್ನು ತನ್ನ ಕುಣಿತದಲ್ಲಿ ಶರಣಪ್ಪ ಅವರು ಪ್ರದರ್ಶಿಸುತ್ತಾರೆ.
ಕನ್ನಡ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಪ್ರಭುತ್ವ ಇರುವ ಶರಣಪ್ಪ, ಸಾಹಿತ್ಯ ಕಲಾಮೇಳಗಳಲ್ಲಿ ಭಾಗವಹಿಸಿರುವ ಶರಣಪ್ಪ ಅವರು ಅನೇಕ ಶಿಷ್ಯರಿಗೆ ಭೂತೇರ ಕುಣಿತ ಆಟಗಳಲ್ಲಿ ತರಬೇತಿ ಸಹ ನೀಡಿದ್ದಾರೆ.

Categories
ಜಾನಪದ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಚನ್ನಮಲ್ಲೇಗೌಡ

ಜಾನಪದ ಕ್ಷೇತ್ರಕ್ಕೆ ಗಡಿಜಿಲ್ಲೆ ಚಾಮರಾಮನಗರದ ಕೊಡುಗೆ ಚನ್ನಮಲ್ಲೇಗೌಡರು. ಅಳಿವಿನಂಚಿನಲ್ಲಿರುವ ಗೊರವರ ಕುಣಿತದ ಪುನರುತ್ಥಾನಕ್ಕಾಗಿ ಶ್ರಮಿಸಿದ ಕಲಾವಿದರು.
ಚನ್ನಮಲ್ಲೇಗೌಡರಿಗೆ ಗೊರವರ ಕುಣಿತ ಅಪ್ಪನಿಂದ ಬಂದ ಬಳುವಳಿ. ಜಾನಪದ ಶ್ರೀ ಪ್ರಶಸ್ತಿ ಪುರಸ್ಕೃತ ಪುಟ್ಟಮಲ್ಲೇಗೌಡರ ಗರಡಿಯಲ್ಲಿ ಅರಳಿದ ಕಲಾವಿದ. ಬಾಲ್ಯದಲ್ಲೇ ಒಲಿದ ಗೊರವರ ಕುಣಿತವನ್ನು ಹಳ್ಳಿಗಾಡಿನ ರಥೋತ್ಸವ, ಜಾತ್ರೆ, ಹಬ್ಬಗಳಲ್ಲಿ ಪ್ರದರ್ಶಿಸುತ್ತಲೇ ಮುಂಚೂಣಿಗೆ ಬಂದವರು. ರಾಜ್ಯದ ಹಲವೆಡೆ ಮಾತ್ರವಲ್ಲದೇ ಹೈದರಾಬಾದ್, ಅಂಡಮಾನ್, ನವದೆಹಲಿ, ನಾಗಪುರ, ಭೂಪಾಲ್ನಲ್ಲೂ ಗೊರವರ ಕುಣಿತದ ದರ್ಶನ ಮಾಡಿಸಿರುವ ಹೆಗ್ಗಳಿಕೆ. ಚನ್ನಮಲ್ಲೇಗೌಡರಿಗೆ ಈ ಕಲೆ ಕೇವಲ ಪ್ರತಿಭಾಪ್ರದರ್ಶನ ಮಾತ್ರವಲ್ಲ ಅದೇ ಬದುಕು-ಭಾವ-ಜೀವ ಎಲ್ಲಾ. ಆರು ದಶಕಗಳ ನಿರಂತರ ಕಲಾಪ್ರದರ್ಶನದ ಸಾರ್ಥಕತೆಯ ಚನ್ನಮಲ್ಲೇಗೌಡರು ಇದೀಗ ಯುವಪೀಳಿಗೆಗೆ ಕಲೆಯ ಧಾರೆಯೆರೆಯುವ ಕಾರ್ಯದಲ್ಲಿ ಮಗ್ನರು.

Categories
ಜಾನಪದ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಗಂಗಹುಚ್ಚಮ್ಮ

ಜಾನಪದ ಲೋಕಕ್ಕೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಜಲಧಿಗೆರೆಯ ವಿಶಿಷ್ಟ ಕೊಡುಗೆ ಗಂಗಹುಚ್ಚಮ್ಮ. ಇವರ ದನಿ, ಭಾವದ ಸೊಗಸನ್ನು ಸವಿದವರಷ್ಟೇ ಬಲ್ಲರು. ಮಾತಿಗಿಂತ ಹಾಡೇ ಅನುಗಾಲದ ಅಭಿವ್ಯಕ್ತಿ.
ಸೋಬಾನೆ ಪದ, ರಾಗಿಕಲ್ಲು ಪದ, ಭತ್ತಕುಟ್ಟವ ಪದ, ನಾಟಿ ಹಾಕುವ ಪದ, ಸುಗ್ಗಿಕುಣಿತದ ಪದ, ಕೋಲಾಟದ ಪದ ಮುಂತಾದ ಜನಪದೀಯ ಕಲೆಯ ಬೆಳಕಿನಲ್ಲಿ ಬೆಳಗಿದವರು. ಬಾಲ್ಯದಲ್ಲಿ ಹಿರಿಯರಿಂದ ಕರಗತವಾದ ಈ ಗಾಯನದಲ್ಲಿ ಮೂವತ್ತಾರು ವರ್ಷಗಳ ಅವಿರತ ಯಾನ ಇವರದ್ದು. ನೂರಾರು ಪದಗಳನ್ನು ಸ್ವತಃ ರಚಿಸಿ ಹಾಡಾಗಿಸಿದ ಹಿರಿಮೆ. ೧೯೮೨ರಲ್ಲಿ ಗೆಳತಿಯರೊಡಗೂಡಿ ತಂಡ ಕಟ್ಟಿಕೊಂಡು ನಾಡಿನಾದ್ಯಂತ ಸೋಬಾನೆ ಪದದ ಕಾರ್ಯಕ್ರಮಗಳನ್ನು ನೀಡಿ ಹೆಸರಾದವರು. ಸೋಬಾನೆ ಪದದೊಟ್ಟಿಗೆ ತತ್ವಪದ, ಜನಪದ, ಭಕ್ತಿಗೀತೆ, ಭಜನೆಗಳನ್ನೂ ಹಾಡುವ ಹೆಗ್ಗಳಿಕೆ. ತವರೂರಿನ ಜಲಧಿಗೆರೆಯಮ್ಮನ ಕುರಿತು ೯೦ಕ್ಕೂ ಹೆಚ್ಚು ಹಾಡು ರಚಿಸಿ ಹಾಡಿದ ವೈಶಿಷ್ಟ. ಹಳ್ಳಿಗಾಡಿನ ಹಾಡುಹಕ್ಕಿ ಗಂಗಹುಚ್ಚಮ್ಮರ ಕಲಾಸೇವೆಯನ್ನು ಅನೇಕ ಪ್ರಶಸ್ತಿಗಳು ಸಾರ್ಥಕಗೊಳಿಸಿದರೆ, ಸನ್ಮಾನ-ಗೌರವಗಳೂ ಉತ್ಸಾಹವನ್ನು ಇಮ್ಮಡಿಗೊಳಿಸಿವೆ.

Categories
ಜಾನಪದ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಗುರುವ ಕೊರಗ

ಕರಾವಳಿ ಕರ್ನಾಟಕದ ಕೊರಗ ಪರಂಪರೆಯ ಕಲೆಯನ್ನು ಉಳಿಸಿ ಬೆಳೆಸಿದ ಪ್ರಮುಖರು ಗುರುವ ಕೊರಗ, ಕಡ್ಡಾಯಿ ನುಡಿಸುವುದರ ಮೂಲಕ ಆದಿಮ ಸಂಸ್ಕೃತಿಯ ಅನನ್ಯತೆಯನ್ನು ಪರಿಚಯಿಸಿದ ಕಲಾವಿದರು.
ಕರಾವಳಿಯ ಗುಡ್ಡೆಯಂಗಡಿಯವರಾದ ಗುರುವ ಅವರು ಕೊರಗ ಬುಡಕಟ್ಟು ಸಮುದಾಯಕ್ಕೆ ಸೇರಿದವರು. ಸಹಳ, ಸಜ್ಜನ ವ್ಯಕ್ತಿತ್ವದ ಅವರು ಕಲಾರಂಗಕ್ಕೆ ಪಾದಾರ್ಪಣೆ ಮಾಡಿದ್ದು ೧೨ನೇ ವಯಸ್ಸಿನಲ್ಲಿ. ಎಳವೆಯಲ್ಲೇ ಡೋಲು ಬಾರಿಸುವುದು ಮತ್ತು ಬುಟ್ಟಿ ಹಣೆಯುವ ಕಾಯಕದಲ್ಲಿ ತೊಡಗಿಸಿಕೊಂಡವರು. ಸಾಂಪ್ರದಾಯಿಕ ಡೋಲು ಬಾರಿಸುವಿಕೆಯಲ್ಲಿ ಅಪ್ರತಿಮ ಪ್ರತಿಭೆ ಅವರದ್ದು. ಡೋಲು ಸಂಸ್ಕೃತಿಯ ಉಳಿವಿಗೆ ಅಹರ್ನಿಶಿ ಶ್ರಮಿಸಿದವರು. ೧೦೨ರ ವಯಸ್ಸಿನಲ್ಲೂ ಕಲಾಸೇವೆ ನಿರಂತರವಾಗಿದ್ದು ಗುರುವ ಕೊರಗ ಅವರ ಕಲಾನೈಪುಣ್ಯತೆಗೆ ಹಲವು ಗೌರವ-ಸನ್ಮಾನಗಳು ಸಂದಿವೆ.

Categories
ನೃತ್ಯ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಪ್ರೊ. ಎಂ.ಆರ್.ಕೃಷ್ಣಮೂರ್ತಿ

ನಾಟ್ಯರಂಗದಲ್ಲಿ ದಶಕಗಳಿಂದಲೂ ತೊಡಗಿಸಿಕೊಂಡಿರುವ ಪ್ರೊ ಎಂ.ಆರ್.ಕೃಷ್ಣಮೂರ್ತಿ ನಾಟ್ಯಾಚಾರರೆಂದೇ ಹೆಸರುವಾಸಿ. ಬೆಳ್ಳಿಹಬ್ಬದ ಸಂಭ್ರಮ ಕಂಡಿರುವ ಕಲಾಕ್ಷಿತ್ರಿಯ ಸಂಸ್ಥೆಯ ಸಂಸ್ಥಾಪಕರು, ನಾಟ್ಯ ಗುರು.
ಮೂಲತಃ ಬೆಂಗಳೂರಿನವರಾದ ಕೃಷ್ಣಮೂರ್ತಿ ಅವರು ಹುಟ್ಟಿದು ೧೯೩೬ರ ಡಿಸೆಂಬರ್ ೧೯ರಂದು. ಬಾಲ್ಯದಿಂದಲೂ ನಾಟ್ಯ, ಗಾಯನದಲ್ಲಿ ಒಲವು. ಹದಿನೈದನೇ ವಯಸ್ಸಿಗೆ ನಾಟ್ಯದಂಪತಿಗಳಾದ ಪ್ರೊ. ಯು.ಎಸ್.ಕೃಷ್ಣರಾವ್-ಚಂದ್ರಭಾಗಾದೇವಿ ಅವರ ಮಾರ್ಗದರ್ಶನದಲ್ಲಿ ಮದ್ರಾಸಿನ ರುಕ್ಷಿಣಿದೇವಿ ಅರುಂಡೇಲರ ಕಲಾಕ್ಷೇತ್ರದಲ್ಲಿ ನೃತ್ಯಾಭ್ಯಾಸ, ಮೈಲಾಪುರ್ ಗೌರಿ ಅಮ್ಮಾಳರಲ್ಲಿ ನೃತ್ಯಾಭಿನಯ, ಚಂದುಪಣಿಕ್ಕರ್ರವರಲ್ಲಿ ಕಥಕ್ಕಳಿ ಕಲಿಕೆ. ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ. ನಾಟ್ಯಶಾಸ್ತ್ರ ಶಿಕ್ಷಕರಾಗಿ ವೃತ್ತಿಜೀವನ ಆರಂಭಿಸಿದ ಕೃಷ್ಣಮೂರ್ತಿ ಅವರದ್ದು ನಲವತ್ತಕ್ಕೂ ಹೆಚ್ಚು ದೇಶಗಳಲ್ಲಿ ಕಲಾಪ್ರದರ್ಶನ ನೀಡಿದ ಹೆಗ್ಗಳಿಕೆ. ೧೯೯೧ರಲ್ಲಿ ಬೆಂಗಳೂರಿಗೆ ಮರಳಿ ‘ಕಲಾಕ್ಷಿತಿಯ’ ಸಂಸ್ಥೆ ಸ್ಥಾಪನೆ, ನೂರಾರು ಮಕ್ಕಳಿಗೆ ಭರತನಾಟ್ಯ ಕಲೆಯ ಧಾರೆಯೆರೆಯುವಿಕೆ. ಹಲವು ಜನಪ್ರಿಯ ನೃತ್ಯರೂಪಕಗಳನ್ನು ಸಂಯೋಜಿಸಿರುವ ಕೃಷ್ಣಮೂರ್ತಿ ಅವರ ಸಾರ್ಥಕ ಕಲಾಸೇವೆಗೆ ಕರ್ನಾಟಕ ಕಲಾಶ್ರೀ, ನಾಟ್ಯತಪಸ್ವಿ ಬಿರುದು, ಪುರ್ವಂಕರ ಪ್ರಶಸ್ತಿ ಮುಂತಾದ ಗೌರವಗಳು ಸಂದಿವೆ.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಡಿ.ಅಣ್ಣು ದೇವಾಡಿಗ

ದಕ್ಷಿಣ ಕನ್ನಡ ಜಿಲ್ಲೆಯ ಕಲಾಪ್ರತಿಭೆ ಡಿ. ಅಣ್ಣು ದೇವಾಡಿಗ ಅವರು ಸಂಗೀತದ ಪರಂಪರೆಯಿಂದ ಬೆಳೆದ ಬಂದ ಕಲಾವಿದರು. ನಾಗಸ್ವರ ವಾದನ ಪ್ರವೀಣರು.
ಬಾಲ್ಯದಲ್ಲೇ ಪಾರಂಪರಿಕ ಕಲೆ ನಾಗಸ್ವರಕ್ಕೆ ಮನಸೋತ ಅಣ್ಣು ದೇವಾಡಿಗ ಅವರು ಅಯ್ಯನಾರು ಸಂಗೀತ ಶಾಲೆಯ ಎಂ.ಕೋದಂಡರಾಮರಲ್ಲಿ ಪ್ರಾರಂಭಿಕ ತರಬೇತಿ ಪಡೆದು ಕಲಾಲೋಕ ಪ್ರವೇಶಿಸಿದವರು. ಟಿ.ಕೆ.ಗೋವಿಂದರಾಜ ಪಿಳ್ಳೆ, ಕೊಟ್ಟೂರು ರಾಜರತ್ನಂರ ಗರಡಿಯಲ್ಲಿ ಪರಿಣಿತಿ ಪಡೆದು ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥಸ್ವಾಮಿಯ ಸೇವೆಗೆ ನಿಯುಕ್ತರಾದವರು. ಶ್ರೀಕ್ಷೇತ್ರದಲ್ಲಿ ೪೫ ವರ್ಷಗಳಿಂದಲೂ ನಾಗಸ್ವರ ಸೇವೆಗೈಯುತ್ತಿರುವ ಇವರು ಬೆಂಗಳೂರು, ಶ್ರೀರಂಗಪಟ್ಟಣ, ತಿರುಪತಿ, ತಂಜಾವೂರು, ಮಧುರೈ ಮುಂತಾದೆಡೆ ನಾಗಸ್ವರ ಕಛೇರಿ ನಡೆಸಿರುವರು. ಆಕಾಶವಾಣಿಯ ಎ ದರ್ಜೆ ಕಲಾವಿದರೂ ಸಹ. ಹಲವು ಶಿಷ್ಯರನ್ನು ರೂಪಿಸಿದ ಗುರು, ಗಣ್ಯವ್ಯಕ್ತಿಗಳ ಮೆಚ್ಚುಗೆಗೆ ಪಾತ್ರವಾಗಿರುವ ಅಣ್ಣು ದೇವಾಡಿಗರ ಕಲಾಸಾಧನೆಗೆ ಕರ್ನಾಟಕ ಕಲಾಶ್ರೀ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ನಾಗಸ್ವರದೊರೆ ಬಿರುದು ಮತ್ತಿತರ ಗೌರವಗಳು ಸಂದಿವೆ.

Categories
ರಂಗಭೂಮಿ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಪಂಪಣ್ಣ ಕೋಗುಳಿ

ಕನ್ನಡ ರಂಗಭೂಮಿ ಕಂಡ ವಿಶಿಷ್ಟ ಕಲಾವಿದರು ಪಂಪಣ್ಣ ಕೋಗುಳಿ, ಸ್ತ್ರೀ ಹಾಗೂ ಪುರುಷ ಎರಡೂ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ ಪ್ರತಿಭಾವಂತರು. ನಾಟಕ ರಚನೆ, ನಿರ್ದೇಶನದಲ್ಲೂ ಛಾಪೊತ್ತಿದವರು.
ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕೋಗುಳಿ ಗ್ರಾಮದವರಾದ ಪಂಪಣ್ಣ ಅವರು ಓದಿದ್ದು ನಾಲ್ಕನೇ ತರಗತಿವರೆಗೆ ಮಾತ್ರ ಬೇಸಾಯವೇ ಬದುಕು, ಬಣ್ಣ ಹಚ್ಚಲು ಅಣ್ಣ ಉಮಾಪತಿಯೇ ಪ್ರೇರಣೆ. ಹದಿನಾಲ್ಕನೇ ವಯಸ್ಸಿನಲ್ಲಿ ಹುಟ್ಟೂರಿನಲ್ಲಿ ಸ್ತ್ರೀ ಪಾತ್ರಕ್ಕೆ ಬಣ್ಣ ಹಚ್ಚುವ ಮೂಲಕ ರಂಗಭೂಮಿಗೆ ಅಡಿ, ಸಾಮಾಜಿಕ, ಪೌರಾಣಿಕ ಹಾಗೂ ಐತಿಹಾಸಿಕ ನಾಟಕಗಳಲ್ಲಿ ಸ್ತ್ರೀ ಪಾತ್ರಗಳ ನಿರ್ವಹಣೆ. ಆನಂತರ ಪುರುಷ ಪಾತ್ರಗಳಲ್ಲೂ ಜನಪ್ರಿಯ. ಅಂಗುಲಿಮಾಲಾ ನಾಟಕದ ಅಂಗುಲಿಮಾಲಾ ಪಾತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿಯ ಹಿರಿಮೆ. ರಕ್ತರಾತ್ರಿ ನಾಟಕದ ಎಲ್ಲಾ ಪಾತ್ರಗಳಲ್ಲಿ ನಟಿಸಿದ ಖುಷಿ. ನಿರ್ದೇಶನದಲ್ಲೂ ಗುರುತು. ಮೂರು ನಾಟಕ, ಒಂದು ಕವನಸಂಕಲನ ಹೊರತಂದಿರುವ ಸೃಜನಶೀಲರು. ಆಕಾಶವಾಣಿಯಲ್ಲೂ ಧ್ವನಿಮುದ್ರಿತ ನಾಟಕಗಳ ಪ್ರಸಾರ, ನಾಟಕ ಅಕಾಡೆಮಿಯ ಗೌರವಪ್ರಶಸ್ತಿ ಸೇರಿ ಹಲವು ಗೌರವಗಳಿಂದ ಸಂಪನ್ನರು.

Categories
ರಂಗಭೂಮಿ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಪುಟ್ಟಸ್ವಾಮಿ

ದೇಸೀ ರಂಗಭೂಮಿಯಲ್ಲಿ ತಮ್ಮದೇ ಛಾಪು ಮೂಡಿಸಿದ ಕಲಾವಿದ ಪುಟ್ಟಸ್ವಾಮಿ, ನಟನೆಯ ಜೊತೆಜೊತೆಗೆ ಗಾಯನದಲ್ಲೂ ಸೇವೆ ಸಲ್ಲಿಸಿರುವ ಸಾಧಕರು.
ರಾಮನಗರ ಜಿಲ್ಲೆಯ ಹಳ್ಳಿಗಾಡಿನ ಪ್ರತಿಭೆ ಪುಟ್ಟಸ್ವಾಮಿ, ಚನ್ನಪಟ್ಟಣ ತಾಲ್ಲೂಕಿನ ಮಳೂರು ಹುಟ್ಟೂರು. ಎಳವೆಯಿಂದಲೂ ರಂಗಭೂಮಿಯ ಸೆಳೆತಕ್ಕೆ ಒಳಗಾದವರು. ದೇಸೀ ರಂಗಭೂಮಿಯಲ್ಲಿ ವಿವಿಧ ಪಾತ್ರಗಳಿಗೆ ಬಣ್ಣ ಹಚ್ಚುತ್ತಲೇ ಅರಳಿದವರು. ದಶಕಗಳ ಕಾಲ ರಂಗಸೇವೆಗೈದವರು. ಶಾಲಾ ಕಾಲೇಜುಗಳು, ಸಂಘಸಂಸ್ಥೆಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿ ಕಾರ್ಯಕ್ರಮಗಳನ್ನು ನೀಡುತ್ತಾ ಬಂದವರು. ಶಾಲಾ ಮಕ್ಕಳಿಗೆ ನಗೆಹನಿಗಳು, ಶಿಶುಗೀತೆಗಳು, ದೇವರನಾಮಗಳನ್ನು ಹೇಳಕೊಟ್ಟು ತಮ್ಮಲ್ಲಿನ ಕಲೆಯನ್ನು ಹೊಸ ಪೀಳಿಗೆಗೆ ಹಂಚಿದವರು. ಇಳಿವಯಸ್ಸಿನಲ್ಲೂ ಅವರದ್ದು ಬತ್ತದ ಉತ್ಸಾಹ. ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಏರ್ಪಡಿಸುವ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಬಹುಮಾನಗಳನ್ನು ಪಡೆದವರು. ಜಾನಪದ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುವುದು ಪುಟ್ಟಸ್ವಾಮಿ ಅವರ ಪ್ರತಿಭೆಯ ಮತ್ತೊಂದು ಮಜಲು, ೮೫ರ ಇಳಿವಯಸ್ಸಿನಲ್ಲೂ ಸಕ್ರಿಯವಾಗಿರುವ ಅವರು ಅನೇಕ ಗೌರವಗಳಿಗೆ ಭಾಜನರು.

Categories
ರಂಗಭೂಮಿ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಸ್.ಎನ್.ರಂಗಸ್ವಾಮಿ

ಕನ್ನಡ ವೃತ್ತಿರಂಗಭೂಮಿಯಲ್ಲಿ ನಟ, ನಿರ್ದೇಶಕ ಮತ್ತು ನಾಟಕಕಾರರಾಗಿ ವಿಶಿಷ್ಟ ಛಾಹೊತ್ತಿದವರು ಎಸ್.ಎನ್.ರಂಗಸ್ವಾಮಿ, ಐವತ್ತು ವರ್ಷಗಳ ಸುದೀರ್ಘ ರಂಗಸೇವೆಗೈದ ಸಾಧಕರು. ವೃತ್ತಿಯಲ್ಲಿ ಕ್ಷೌರಿಕ, ಪ್ರವೃತ್ತಿಯಲ್ಲಿ ರಂಗಕರ್ಮಿ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಚಿರಡೋಣಿ ಗ್ರಾಮದಲ್ಲಿ ನೆಲೆಸಿರುವ ಎಸ್.ಎನ್.ರಂಗಸ್ವಾಮಿ ರಂಗಭೂಮಿಗೆ ಪಾದಾರ್ಪಣೆ ಮಾಡಿದ್ದು ನಟನಾಗಿ. ಆನಂತರ ನಾಟಕ ನಿರ್ದೇಶನ-ರಚನೆಗೆ ವಿಸ್ತಾರ. ದುಡುಕಿ ಹೋದ ಮಗ, ಹುಡುಕಿ ಬಂದ ಸೊಸೆ, ಶೀಲಕೊಟ್ಟರೂ ಸೊಳೆಯಲ್ಲ, ಕೊರಳೊಂದು ತಾಳಿ ಎರಡು, ಹುಡುಗಿ ಮೆಚ್ಚಿದ ಹುಂಬ, ಶಿಕ್ಷಣ ನಮ್ಮ ರಕ್ಷಣೆ ಮುಂತಾದವು ರಂಗಸ್ವಾಮಿ ರಚಿತ ನಾಟಕಗಳು. ವೃತ್ತಿರಂಗಭೂಮಿಯಲ್ಲಿ ಹೆಸರಾದ ಕೆ.ಬಿ.ಆರ್.ಡ್ರಾಮಾ ಕಂಪನಿ, ಗಜಾನನ ಡ್ರಾಮಾ ಕಂಪನಿ ಇನ್ನಿತರ ಕಂಪನಿಗಳು ಇವರ ನಾಟಕಗಳನ್ನು ನೂರಾರು ಹಳ್ಳಿಗಳಲ್ಲಿ ಪ್ರದರ್ಶಿಸಿವೆ. ಪ್ರೇಕ್ಷಕರ ಚಪ್ಪಾಳೆಯೇ ಪ್ರಶಸ್ತಿಯೆಂದು ಭಾವಿಸಿ ರಂಗಬದ್ಧತೆಯಿಂದ ಬಾಳ್ವೆ ಮಾಡಿರುವ ರಂಗಸ್ವಾಮಿ ಅವರ ರಂಗಸಾಧನೆ ಕುರಿತು ಪತ್ರಿಕೆಗಳಲ್ಲಿ ಹತ್ತಾರು ಲೇಖನಗಳು ಪ್ರಕಟಗೊಂಡು ಸಾರ್ಥಕತೆಯ ಭಾವ ತಂದಿದೆ.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಚಂದ್ರಶೇಖರ ತಾಳ್ಯ

ಕನ್ನಡದ ಸೃಜನಶೀಲ ಸಾಹಿತಿಗಳಲ್ಲಿ ಚಂದ್ರಶೇಖರ ತಾಳ್ಯ ಸಹ ಒಬ್ಬರು. ಕಾವ್ಯ, ಗದ್ಯ, ನಾಟಕ, ಅನುವಾದ ಸಾಹಿತ್ಯ ಸೇರಿದಂತೆ ಹಲವು ಸಾಹಿತ್ಯಕ ಪ್ರಕಾರಗಳಲ್ಲಿ ಕೃಷಿ ಮಾಡಿದ ಸಾಧಕರು.
ನನ್ನ ಕಣ್ಣಗಲಕ್ಕೆ, ಸಿಂಧೂ ನದಿಯ ದಂಡೆಯ ಮೇಲೆ, ಎಲ್ಲಿ ನವಿಲು ಹೇಳಿರೇ, ಸುಡುವ ಭೂಮಿ, ಕಾವಳದ ಸಂಜೆಯಲ್ಲಿ, ಮೌನಮಾತಿನ ಸದ್ದು ತಾಳ್ಯರ ಕವನಸಂಕಲನಗಳು. ಪ್ರಭು ಅಲ್ಲಮ, ನೆಲದ ಹುಡುಕಿ ಗದ್ಯ, ಅಲ್ಲಮ ನಾಟಕ, ರಾಮಕೃಷ್ಣ ಮತ್ತು ಅವರ ಕಾಲ, ಗಾಂಧಿ ಹೋದರು: ನಮಗೆ ದಿಕ್ಕು ತೋರುವವರು ಯಾರು ಮತ್ತು ಭಾರತೀಯ ತತ್ವಶಾಸ್ತ್ರ ಇವರ ಸಾಹಿತ್ಯಕ ಕೊಡುಗೆಗಳು. ನವೋತ್ತರ ಸಾಹಿತ್ಯದ ಕಾವ್ಯ ಕಟ್ಟೋಣಕ್ಕೆ ಮಾದರಿಯಂತಹ ಕಾವ್ಯ ರಚನೆ ತಾಳ್ಯರ ವಿಶೇಷತೆ, ನಡೆ-ನುಡಿ ಎರಡರಲ್ಲೂ ಏಕಮಯತೆ, ೧೪ ಕೃತಿಗಳನ್ನು ರಚಿಸಿರುವ ಅವರು ಆರ್ಯಭಟ ಪ್ರಶಸ್ತಿ, ಜಿ.ಎಸ್.ಎಸ್. ಪ್ರಶಸ್ತಿ, ಡಿ.ಎಸ್.ಮ್ಯಾಕ್ಸ್ ಸಾಹಿತ್ಯಶ್ರೀ ಗೌರವ ಮುಂತಾದ ಪ್ರಶಸ್ತಿಗಳಿಗೆ ಭಾಜನರು.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀಮತಿ ಚ, ಸರ್ವಮಂಗಳಾ

ಕನ್ನಡ ಸಾಹಿತ್ಯ ಮತ್ತು ಸಾಮಾಜಿಕ ವಲಯದಲ್ಲಿ ತಮ್ಮದೇ ಛಾಪು ಮೂಡಿಸಿದವರು ಚ. ಸರ್ವಮಂಗಳಾ. ಕಾವ್ಯ, ಅನುವಾದ ಮತ್ತು ಸಂಪಾದನಾ ಕ್ಷೇತ್ರದಲ್ಲಿ ಕೃಷಿಗೈದವರು.
ಸಾಂಸ್ಕೃತಿಕ ನಗರಿ ಮೈಸೂರಿನವರಾದ ಸರ್ವಮಂಗಳಾ ಹುಟ್ಟಿದ್ದು ೧೯೪೮ರಲ್ಲಿ. ಓದಿನೊಟ್ಟಿಗೆ ಬರಹ, ಸಾಮಾಜಿಕ ಹೋರಾಟಗಳಿಂದ ಅರಳಿದ ಮಹಿಳಾ ಪರ ಸಶಕ್ತ ದನಿ. ಇವರ ಅಮ್ಮನಗುಡ್ಡ ಕವನಸಂಕಲನ. ೯ ಭಾಷೆಗಳಿಗೆ ಅನುವಾದಿತಗೊಂಡಿರುವ ಕೃತಿ, ಜ್ಞಾನಶ್ರೀ, ಎರಡು ದಶಕಗಳ ಕಾವ್ಯ, ಚದುರಂಗ ಮಾಚಿಕೆ ಸಂಪಾದಿತ ಕೃತಿಗಳು, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮಾಧ್ಯಮ ಎಂಬ ಮುಕ್ತವೇದಿಕೆ, ಪಿಯುಸಿಎಲ್ ಹಾಗೂ ಭಾರತ-ಚೀನಾ ಮೈತ್ರಿ ಸಂಘದ ಸಂಚಾಲಕಿ, ಮೈಸೂರು ವಿವಿ ಮಹಿಳಾ ದೌರ್ಜನ್ಯ ವಿಚಾರಣಾ ಸಮಿತಿಯ ಅಧ್ಯಕ್ಷೆಯಾಗಿಯೂ ದುಡಿದವರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಾಹಿತ್ಯ ಸಲಹಾ ಸಮಿತಿಯ ಸದಸ್ಯೆಯಾಗಿ ಸೇವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ, ದಿನಕರ್ ದೇಸಾಯಿ ಪ್ರಶಸ್ತಿ ಹಾಗೂ ಚನ್ನಗಿರಿ ತಾಲ್ಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯ ಗೌರವಕ್ಕೆ ಪಾತ್ರರು.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಹಸನ್ ನಂ ಸುರಕೋಡ

ಬೆಳಗಾವಿ ಜಿಲ್ಲೆಯ ರಾಮದುರ್ಗದ ಪ್ರತಿಭೆ ಹಸನ್ ನಯೀಂ ಸುರಕೋಡ, ಕನ್ನಡದ ಹೆಸರಾಂತ ಅನುವಾದಕರು. ಉರ್ದು, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ಪರಿಣಿತರು, ಸಮಾಜವಾದಿ ಚಿಂತಕರು.
ರಾಮಮನೋಹರ ಲೋಹಿಯಾ, ಕಿಶನ್ ಪಟ್ನಾಯಕ್, ಮಧು ಲಿಮಯೆ ಮುಂತಾದವರ ಬರಹಗಳನ್ನು ಅನ್ಯಭಾಷೆಗೂ, ಕೋಮುಸೌಹಾರ್ದತೆಯ ನೆಲೆಗಳನ್ನು ಬಿಂಬಿಸುವ ಹಲವಾರು ಬರಹಗಳನ್ನು ಕನ್ನಡಕ್ಕೂ ಅನುವಾದಿಗೊಳಿಸಿದ ಹಿರಿಮೆ ಹಸನ್ ನ ೀಂ ಸುರಕೋಡರದ್ದು. ಉರ್ದು ಭಾಷೆಯ ಮಹಾಕವಿ ಫೈಜ್ ಅಹಮದ್ ಫೈಜ್ ಕಾವ್ಯ-ಬದುಕು, ಸಾದತ್ ಹಸನ್ ಮಾಂಟೋ ಕಥನಕೃತಿಗಳು, ಅಮೃತಾಪ್ರೀತಂರ ಆತ್ಮಕತೆ, ಅಸರ್ ಆಲಿ ಅವರ ವೈಚಾರಿಕ ಬರಹಗಳನ್ನು ಕನ್ನಡಕ್ಕೆ ತಂದಿರುವ, ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಹಸನ್ ನಯೀಂ ಸುರಕೋಡ ಅವರಿಗೆ ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳು ಸಂದಿವೆ. ಉರ್ದು ಕವಿ ಸಾಹಿರ್ ಲುಧಿಯಾನವಿರ ಕುರಿತ ‘ಪ್ರೇಮ ಲೋಕದ ಮಾಯಾವಿ’ ಇವರ ವಿಶಿಷ್ಟ ಕೃತಿಯಾಗಿದೆ.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಎಂ.ಎಸ್.ಪ್ರಭಾಕರ್ (ಕಾಮರೂಪಿ)

ಕನ್ನಡ ಸಾಹಿತ್ಯಲೋಕದಲ್ಲಿ ‘ಕಾಮರೂಪಿ’ ಕಾವ್ಯನಾಮದಿಂದಲೇ ಹೆಸರುವಾಸಿಯಾಗಿರುವ ಎಂ.ಎಸ್.ಪ್ರಭಾಕರ್ರ ಪೂರ್ಣ ಹೆಸರು ಮೊಟ್ಲಹಳ್ಳಿ ಸೂರಪ್ಪ ಪ್ರಭಾಕರ. ೧೯೩೯ರಲ್ಲಿ ಕೋಲಾರದಲ್ಲಿ ಹುಟ್ಟಿದ ಕಾಮರೂಪಿ ಕನ್ನಡ ಸಾಹಿತ್ಯಕ್ಕೆ ಹೊಸ ಸಂವೇದನೆ ತಂದುಕೊಟ್ಟವರು.
ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಪದವಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ. ಪದವಿ ಪಡೆದವರು. ೧೯೬೨ರಿಂದ ೬೫ರವರೆಗೆ ಗೌಹಾತಿ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದಲ್ಲಿ ಅಧ್ಯಾಪಕರಾಗಿ, ರೀಡರ್ ಆಗಿ ಸೇವೆ ಸಲ್ಲಿಸಿದವರು. ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ ವಾರಪತ್ರಿಕೆಯ ಸಹಾಯಕ ಸಂಪಾದಕ-ಹಿಂದೂ ಪತ್ರಿಕೆಯ ಈಶಾನ್ಯ ಭಾರತ-ದಕ್ಷಿಣ ಭಾರತದ ವಿಶೇಷ ಬಾತ್ಮೀದಾರರಾಗಿ ಸೇವೆಗೈದು ನಿವೃತ್ತರಾದವರು.
ಪ್ರಭಾಕರ್ ಅವರು ಬರೆದದ್ದು ಕಡಿಮೆಯೇ. ಒಂದು ತೊಲ ಪುನುಗು ಮತ್ತು ಇತರೆ ಕಥೆಗಳು, ಕುದುರೆಮೊಟ್ಟೆ, ಅಂಜಿಕಿನ್ಯಾತಕಯ್ಯೋ ಕಿರುಕಾದಂಬರಿ ಇವರ ಕೃತಿಗಳು ಸದ್ಯ ‘ಕಾಮರೂಪಿ’ ಬ್ಲಾಗ್ನಲ್ಲಿ ಬರವಣಿಗೆ, ಹೊಸತನ, ವ್ಯಂಗ್ಯ, ತಮಾಷೆಯ ಮೂಲಕ ಜೀವನವನ್ನು ನೋಡುವ ದೃಷ್ಟಿಕೋನ ಅವರ ಬರಹದ ವಿಶೇಷ ಶಕ್ತಿ.