Categories
ಅಂಕಣಗಳು ಕುರುವ ಬಸವರಾಜ್ ಅಂಕಣ ಜಾನಪದ ಸಂಸ್ಕೃತಿ ಸಮುದಾಯ ಸಂಸ್ಕೃತಿ-ಸಮುದಾಯ

ಗರಿಕೆ ಎಂಬ ಜನಪದರ ಬೆನವ

ನಮ್ಮ ನೆಲದಲ್ಲಿ ಎಲ್ಲೆಂದರಲ್ಲಿ ಸಹಜವಾಗಿ ಕಾಣಬರುವ ಹಚ್ಚಹಸುರಿನ ಸಸ್ಯ ಗರಿಕೆ. ಗಾಯಕ್ಕೆ ಔಷಧವಾಗುವ ಈ ಸಸ್ಯ ಸಗಣಿ ಬೆನವ ತಲೆ ಏರಿ ಕೂತು ಪೂಜೆಗೂ ಒಳಗಾಗುತ್ತದೆ. ತೀರ ತೆಳುವಾದ ಗಾತ್ರದಲ್ಲಿ, ನೆಲದಲ್ಲೆ ಹಬ್ಬುವ ಗುಣದ ಇದರ ಕುರಿತು ಜನರಲ್ಲಿ ನಾನಾ ತರಹದ ಪ್ರಕ್ರಿಯೆ ಇದೆ. ಎಷ್ಟು ಕಿತ್ತರೂ ನೆಲೆದಲ್ಲೇ ಉಳಿದ ಕೊಂಚ ತುಂಡು ಚಿಗಿತು ಹಬ್ಬಬಲ್ಲ ಸ್ವರೂಪದ್ದು. ಮಳೆಯಿಲ್ಲದೆ ಎಷ್ಟೋ ವರ್ಷಗಳ ಕಾಲ ಒಣಗಿ, ತುಂಡು ಕಡ್ಡಿಯಾಗಿ ಹಾಗೆಯೇ ಬಿದ್ದಿದ್ದರೂ ಆನಂತರ ಅದ್ಯಾವಾಗಲೋ ಹನಿ ಬಿದ್ದರೂ ಮತ್ತೆ ಚಿಗುರಿ ಬೆಳೆಯಬಲ್ಲ ಸಸ್ಯಜಾತಿ ಇದು. ಹಾಗಾಗಿಯೇ ಜನಪದ ಹಾಡುಗಾರ್ತಿ/ ಕವಿ ಗರಿಕೆಯನ್ನು ತವರಿಗೆ ಹೋಲಿಸುತ್ತಾರೆ. ನನ್ನ ತವರು ಗರಿಕೆಯ ಕುಡಿಯಹಾಗೆ ಹಬ್ಬಲಿ ಎಂದು.

ಎಷ್ಟು ಕಿತ್ತರೂ ಅಷ್ಟು ಸುಲಭದಲ್ಲಿ ಅಳಿಸಲಾಗದಷ್ಟು ಪ್ರಮಾಣಕ್ಕೆ ಉಳಿಯುವ, ರೈತರಿಗೆ ಅದರಲ್ಲೂ ಎರೆ/ ಕಪ್ಪನೆ ಮಣ್ಣಿನ ಹೊಲದವರಿಗೆ ಕಳೆಯ ಸಮಸ್ಯೆಯ ಸಸ್ಯವಾಗಿದ್ದರೆ, ನಗರದವರಿಗೆ ತಂಪಿನ ಹುಲ್ಲುಹಾಸು.

ಕರುಂಕೆ, ಕರಿಕೆ, ಕರಕಿ, ಕರಿಕಿ, ಕರ್ಕಿ, ಗರಕೆ, ಗರಿಕೆ (ಕನ್ನಡ, ಕನ್ನಡ ನಿಘಂಟು: ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು. ಪುಟ 1661), ಹೀಗೆ ಗರಿಕೆಗಿರುವ ಹಳೆಗನ್ನಡ, ಹೊಸಗನ್ನಡ ಪದಗಳ ಪಟ್ಟಿಯೇ ದೊರೆಯುತ್ತದೆ. ಇದನ್ನೇ ತಮಿಳಿನಲ್ಲಿ ‘ಕರಿಕ’, ತುಳುವಿನಲ್ಲಿ ‘ಕರಿಕೆ’, ತೆಲುಗಿನಲ್ಲಿ ‘ಕರಿಕ’ ಎಂಬ ಸಾಮ್ಯ ಪದಗಳಿರುವುದನ್ನು ಗಮನಿಸಬಹುದು. ಅಂದರೆ ಇಡೀ ದಕ್ಷಿಣ ಭಾರತದ ಮುಖ್ಯ ಭಾಷೆಗಳೆಲ್ಲೆಲ್ಲಾ ಸಮೀಪದ ಪದಗಳಲ್ಲಿ ಬಳಕೆಯಾಗುವುದರಿಂದ ಇದು ಮೂಲ ದ್ರಾವಿಡ ಭಾಷಾ ಪದದ ಮುಂದುವರಿಕೆ ಎನಿಸದಿರದು.ಅಷ್ಟೆ ಅಲ್ಲ ‘ಸಗಣಿ ಬೆನವ’ನ ಮೂರ್ತಿ ಪೂಜೆಯ ಆಚರಣೆಯೂ ಅಂತಹದೆ ವಿಸ್ತಾರತೆಯ ಅಂಶದ್ದೆಂದು ಗುರುತಿಸಬಹುದಾಗಿದೆ.

ಯಾರನ್ನೇ ಕುರಿತಾದರೂ ತಂಬಾ ಬೇಸರಕ್ಕೆ ಒಳಗಾದಾಗ ನೋವಿನಿಂದ ಬೇಸತ್ತು ನುಡಿವ ಹಳ್ಳಿಗಾಡಿನ ಸಾಮಾನ್ಯ ಬೈಗುಳ ‘ನಿನ್ನ ಮನೆ ಎಕ್ಕುಟ್ಟೋಗ’ ಎಂಬುದು. ಅಂದರೆ ನಿನ್ನ ಮನೆ, ಮನೆತನ ನಾಶವಾಗಿ ಇಲ್ಲವಾಗಲಿ ಎಂದರ್ಥ. ವಾಚ್ಯಾರ್ಥದಲ್ಲಿ ನೋಡಿದರೂ ಮನೆಯಲ್ಲಿ ಎಕ್ಕ ಹುಟ್ಟುವುದು ಎಂದರೆ, ಮನೆಯವರು ಯಾರೂ ಇಲ್ಲವಾಗಿ ವಾಸಕ್ಕೂ ಇರಲಾಗದೆ, ಕಸಗುಡಿಸುವವರು ಇಲ್ಲದೆ, ಸಾರಿಸುವವರು ಇಲ್ಲದೆ ಬಹುಕಾಲ ಹಾಳುಬೀಳುವುದು. ಹಾಳುಬಿದ್ದ ಆ ಜಾಗದಲ್ಲಿ ಸ್ವಲ್ಪ ಕಾಲದ ನಂತರ ಹಲವು ಮನೆಗಳಲ್ಲಿ ಎಕ್ಕದ ಗಿಡ ಹುಟ್ಟುವುದು ಸಾಮಾನ್ಯ ಸಹಜ. ಹೀಗೆ ಮನೆಯಲ್ಲಿ ಎಕ್ಕದ ಗಿಡ ಹುಟ್ಟುವುದೆಂದರೆ ಮನೆಯವರೆಲ್ಲ ಹಾಳಾಗಿ ವಾಸವಿಲ್ಲದೆ ಹೋದಾಗ. ಅಂದರೆ ‘ನಿಮ್ಮ ಮನೆ ಹಾಳಾಗಲಿ’ ಎಂಬುದು ಹಳ್ಳಿಗರು ಭಾವಿಸುವ ಅರ್ಥ.

ಇದಕ್ಕೆ ವಿರುದ್ಧವಾಗಿ ‘ಒಳ್ಳೇದಾಗಲಿ’ ಎಂಬುದಕ್ಕೆ ‘ನಿಮಗೆ ಒಳ್ಳೇದಾಗಲಿ’ ಎಂಬ ನೇರ ಪದಗಳ ಬಳಕೆಯೇ ಹೆಚ್ಚು. ಆದರೆ, ಇಲ್ಲಿ ನೋಡಿ ರಾಮನಗರ, ಮಾಗಡಿ, ಕನಕಪುರ ಭಾಗದ ಇರುಳಿಗರು(ಇಲ್ಲಿಗರು) ಬುಡಕಟ್ಟಿನ ಜನರಾದಿಯಾಗಿ ಹೆಚ್ಚಿನ ಜನರಲ್ಲಿ ಸಾವಿನ ನಂತರ ಹೂಳಲು(ಮಣ್ಣಿಗೆ) ಹೋದವರೆಲ್ಲ ಹಿಂದಿರುಗಿ ಬರುವಾಗ ಸತ್ತವರ ಮನೆಯ ಒಳಭಾಕ್ಕೆ ಗರಿಕೆ ಕುಡಿ ಎಸೆದು ದೀಪ ನೋಡಿ ಹೋಗುವ ಪದ್ಧತಿ ಇದೆ. ಅದು ಇವರ ವಂಶ- ಮನೆತನ ಗರಿಕೆ ಕುಡಿಯ ಹಾಗೆ ಹಬ್ಬಲಿ, ಹೆಚ್ಚಲಿ, ಬೆಳೆಯಲಿ ಎಂಬುದರ ಸೂಚಕ- ಸಾಂಕೇತಿಕ ಕ್ರಿಯೆ/ ಆಚರಣೆ.

“ಹಾಲುಂಡ ತವರೀಗೆ ಎನೆಂದು ಹರಸಲೆ
ಹೊಳೆದಂಡೇಲಿರುವ ಕರಕೀಯ| ಕುಡಿಯಂಗ
ಹಬ್ಬಾಲೆ ಅವರ ರಸಬಳ್ಳಿ”
– ಎಂದು ತವರನ್ನು ಹರಸುವ ಸಾಕಷ್ಟು ಜನಪದ ಹಾಡುಗಳಿವೆ.

ಗಣೇಶನ ಪ್ರತೀಕವಾಗಿ ಸಗಣಿಯ ಸಣ್ಣ ಮಿದ್ದೆಯನ್ನು ಮೊಳೆ ಮೇಲಾಗಿರುವ ಬುಗುರಿಯಂತೆ, ಗೋಪುರದ ಆಕಾರದಂತೆ ಮಿದ್ದು, ಅದರ ತುದಿಗೆ ಗರಿಕೆ ಕುಡಿಯನ್ನು ಸಿಕ್ಕಿಸಿದ ರೂಪವನ್ನು ‘ಬೆನವ’, ‘ಸಗಣಿ ಬೆನವ’ ಎಂದು ಕರೆಯುತ್ತೇವೆ. ಯಾವುದೇ ಪೂಜೆಗಳು, ಮಂಗಳಕಾರ್ಯಗಳ ಆರಂಭದಲ್ಲಿ ಈ ಬೆನವನ ಆಕಾರ ಇಟ್ಟು ಪೂಜಿಸುವುದು ಇಂದಿಗೂ ಹಳ್ಳಿಗಾಡಿನಲ್ಲಿ ಆಚರಣೆಯಲ್ಲಿದೆ. ಮಧ್ಯ ಕರ್ನಾಟಕದ ಭಾಗದಲ್ಲಿ ಇದನ್ನು ಕೆರಕ/ ಕೆರಕಪ್ಪ ಎಂದೂ ಕರೆಯಲಾಗುತ್ತದೆ. ಗರಿಕೆ ಪದ ದಕ್ಷಿಣ ಭಾರತದ ಎಲ್ಲಾ ದ್ರಾವಿಡ ಭಾಷೆಗಳಲ್ಲೂ ತುಸು ವ್ಯತ್ಯಾಸದಲ್ಲಿ ಬಳಕೆಯಲ್ಲಿರುವುದನ್ನು ಗಮನಿಸಬಹುದು.

ಗರಿಕೆಯನ್ನು ಕರಿಕೆ ಎಂದೂ ಕರೆಯುತ್ತೇವೆ. ಈ ಕರಿಕೆಯನ್ನು ಸಿಕ್ಕಿಸಿದ ರೂಪವೆ ಕೆರಕಪ್ಪ. ಕೆರಕ+ ಅಪ್ಪ= ಕೆರಕಪ್ಪ, ಇಲ್ಲಿನ ಅಪ್ಪ ವಿಶೇಷವಾದುದು. ಕನ್ನಡವು ಸೇರಿದಂತೆ ದ್ರಾವಿಡ ಭಾಷೆಗಳಲ್ಲಿ ಮಕ್ಕಳು ತಮ್ಮ ತಂದೆಯನ್ನು ಸಂಭೋಧಿಸುವುದು ‘ಅಪ್ಪ’ ಎಂದೆ. ಸೋಲಿಗರು, ಇರುಳಿಗರು, ಜೇನುಕುರುಬರು ಒಳಗೊಂಡ ನಮ್ಮ ನಾಡಿನ ಇತರ ಅನೇಕ ಸಮುದಾಯಗಳಲ್ಲೂ ಅವರು ಮುಖ್ಯವಾಗಿ ಪೂಜಿಸುವುದು ಕುಲದ ಹಿರಿಯರನ್ನು. ಈ ಹಿನ್ನೆಲೆಯಲ್ಲಿ ಇಟ್ಟು ನೋಡಿದಾಗ ಹಿರಿಯ ಎಂಬ ಅರ್ಥದಲ್ಲಿ ಅಪ್ಪ ಎಂಬ ವಿಶೇಷಣ ಸೇರಿಸಿ ಕೆರಕಪ್ಪ, ಬೆನಪ್ಪ ಹೀಗೆ ಕರೆದಿರುವುದು, ಕರೆಯುತ್ತಿರುವುದನ್ನು ಗಮನಿಸಬಹುದು. ‘ಪಿಳ್ಳಪ್ಪ’ ಎಂಬುದು ಬೆನಪ್ಪನಿಗೆ ಕರೆಯುವ ಇನ್ನೊಂದು ಹೆಸರು. ಪಿಳ್ಳಪ್ಪದಲ್ಲಿ ಪಿಳ್ಳ ಅಥವಾ ಪಿಳ್ಳೆ ಎಂದರೆ ಚಿಕ್ಕದು, ಎಳೆಯದು, ಮಗು ಎಂಬ ಅರ್ಥಗಳಿವೆ.

ಅಷ್ಟಲ್ಲದೆ ಈ ಬೆನವನ ಆಕಾರ, ಬಳಸಲಾದ ಪರಿಕರ, ಬಳಸುತ್ತಿರುವ ರೂಪ, ಬಳಕೆಯ ಉದ್ದೇಶ, ಪ್ರಾಧಾನ್ಯತೆ ಎಲ್ಲವನ್ನು ಅವಲೋಕಿಸಿದಾಗ ಇದು ಅತ್ಯಂತ ಪ್ರಾಚೀನ ಆಚರಣೆಯ ಇಂದಿನ ಮುಂದುವರಿಕೆಯ ಕುರುಹು ಆಗಿ ಇಲ್ಲಿ ಆಚರಣೆಗೊಳ್ಳುತ್ತಿರುವುದನ್ನು, ಆ ಮೂಲಕ ಭಿತ್ತರಗೊಳ್ಳುತ್ತಿರುವುದನ್ನು ನೋಡಬಹುದು. ನಮ್ಮ ಪುರಾತನ ಮಾನವರು ಆಹಾರ ಧಾನ್ಯಗಳ ಬಳಕೆಯನ್ನು ಕಂಡುಕೊಂಡುದು ಏಳು ಸಾವಿರ ವರ್ಷಗಳ ಹಿಂದೆ ಎಂಬುದು ತಿಳಿಯುತ್ತದೆ. ಅದಾದ ಕೆಲವು ಸಾವಿರ ವರ್ಷಗಳ ನಂತರ; ಅಂದರೆ ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದೆ ಬೇಸಾಯ ಪಶುಪಾಲನೆಗೆ ತೊಡಗಿದ ವಿವರಗಳು ನಮ್ಮ ನೆಲೆದಲ್ಲಿ ದೊರೆಯುತ್ತವೆ.

ಈ ಎಲ್ಲವನ್ನು ನೋಡಿದಾಗ ಬೇಸಾಯ ಕಂಡುಕೊಂಡು, ಉಳುಮೆಗೆ ತೊಡಗಿ, ಬೆಳೆ ಬೆಳೆದು, ಸಗಣಿ ಎಂಬುದು ಬರೀ ಸಗಣಿ ಅಲ್ಲ, ಅದು ಫಲವತ್ತಿನ ಗೊಬ್ಬರ/ ಫರ್ಟಿಲಿಟಿ. ಬೆಳೆ ಬೆಳೆಯುವ ನೆಲಕ್ಕೆ ಬಹುಮುಖ್ಯವಾದ ಫಲವತ್ತತೆಯನ್ನು ಅದು ತಂದುಕೊಡುತ್ತದೆ ಎಂದು ಕಂಡುಕೊಂಡುದರ ರೂಪ ಇದು. ತನಗೆ, ತನ್ನ ಬದುಕಿಗೆ ಅತ್ಯಂತ ಮಹತ್ವದ್ದೆಂದು ಭಾವಿಸುದುದೆಲ್ಲವನ್ನು ಅವನು ದೈವವಾಗಿ ಕಂಡಿದ್ದಾನೆ. ಇಂತಹ ರೈತರ ಆಧಾರಿಯಾದ, ಫಲವತ್ತತೆಯ ಪ್ರತೀಕವಾದ ಸಗಣಿಗೆ ಇಡೀ ಸಸ್ಯ ಸಂಕುಲದ ಪ್ರತೀಕವಾದ ಕರಿಕೆ/ ಗರಿಕೆಯ ತುಂಡೊಂದನ್ನು ಸಿಕ್ಕಿಸುವ ಮೂಲಕ ಮಾಡಿಕೊಂಡ ಆಕಾರ/ ಆಕೃತಿಯನ್ನು ತನ್ನೆಲ್ಲಾ ಮುಖ್ಯ ಪೂಜೆಗಳ ಆರಂಭದಲ್ಲಿ ಸಂಕೇತ ರೂಪವಾಗಿ ಬಳಕೆಗೆ ತಂದುಕೊಂಡಿರುವ ಸಾಧ್ಯತೆಯ ಅಂಶವನ್ನು ಗುರುತಿಸಬಹುದು. ಇದು ಮೂರ್ತಿ ಪೂಜೆಯ ಅತ್ಯಂತ ಪ್ರಾಥಮಿಕ ಮತ್ತು ಆದಿಮ ಆರಂಭದ ಮಟ್ಟದ ಒಂದು ಸಂಕೇತ ಆಕಾರ/ ಆಕೃತಿ ಎಂದು ಒಂದು ನೆಲೆಯಿಂದ ಗುರುತಿಸಬಲ್ಲ ಅಂಶ ಇಲ್ಲಿನದು.

ಬೇಸಾಯ ಸಂಬಂಧಿಯಾದ ಎಲ್ಲಾ ಆಚರಣೆಗಲ್ಲೂ ಇರಲೇಬೇಕಾದ, ಈಗಲೂ ಇಡುತ್ತಿರುವ ಆಕೃತಿ ಇದು. ರೈತರ ಬಹುಮುಖ್ಯ ಹಬ್ಬಗಳಲ್ಲೊಂದಾದ ‘ಹೊನ್ನಾರು’ ಅಥವಾ ‘ಹೊನ್ನೇರು’, ಇಲ್ಲವೆ ಯುಗಾದಿಯ ಹಬ್ಬದ ಭಾಗವಾಗಿ ಹೊಲಕ್ಕೆ ಹೋಗಿ ಸಗಣಿ ಬೆನವನ ಇಟ್ಟು, ಉಳುವ ನೇಗಿಲು ಮತ್ತು ಭೂಮಿಯನ್ನು ಪೂಜಿಸಿಯೇ ಬೇಸಾಯ ಆರಂಭಿಸುವ ‘ಮೊದಲ ಬೇಸಾಯ’ದ ಆಚರಣೆಯಲ್ಲಿ ಇಟ್ಟೇ ಇಡುವ ಆಕಾರ ಈ ಗರಿಕೆ ಬೆನವನದು. ಅಲ್ಲದೆ ಬಿತ್ತುವ ಮೊದಲ ದಿನ ಬಿತ್ತುವ ಕೂರಿಗೆ, ಬಿತ್ತುವ ಧಾನ್ಯವ ಇಟ್ಟು ಪೂಜಿಸುವಾಗಲು, ಕಣದ ಪೂಜೆಯ ಸಂದರ್ಭಗಳಲ್ಲೂ ಗರಿಕೆ ಬೆನವ ಇರಲೇಬೇಕಾದ ಮೂರ್ತಿ.

ಮೊದಲ ಪೂಜೆಯ ಈ ಬೆನವ ನಂತರ ಬಳಕೆಗೆ ಬಂದ ಅದೇ ಉದ್ದೇಶದ/ ಪರಿಕಲ್ಪನೆಯ ಗಣೇಶನಿಗೂ ಆರೋಪಿತಗೊಂಡು ಎರಡೂ ಏಕವಾಗಿದೆ. ಈಗಲೂ ಹಳ್ಳಿಗಾಡಿನಲ್ಲಿ ಸಗಣಿ ಬೆನವನ ಪೂಜೆಯೂ ಇದೆ. ಹಾಗೆಯೆ ಮೂರ್ತಿರೂಪದಲ್ಲಿ ಕೂರಿಸುವ ಗಣೇಶನ ಆರಾಧನೆಯೂ ಇದೆ. ಗಣೇಶನೇ ಬೇರೆ ಬೆನವನೆ ಬೇರೆ. ಮೊದಲ ಪೂಜೆಯ ಅರ್ಥದ ಸಾಮ್ಯದಿಂದ ಎರಡೂ ಒಂದರಲ್ಲಿ ಒಂದು ಸೇರಿದಂತಿದೆ.

ಆ ಪೂಜಾರ್ಹ ಎನಿಸಿರುವ ಬೆನಕನಿಗೆ ಎಲ್ಲಾ ಪೂಜೆಗಳ ಮೊದಲು ಇದನ್ನೆ ಪೂಜಿಸುವುದಿದೆ. ಹಲವು ಬುಡಕಟ್ಟುಗಳಲ್ಲಿ ವಿಶೇಷವಾಗಿ ಇರುಳರಲ್ಲಿ ಮೂರ್ತಿರೂಪದ ಸಹಜವಾದ ದೇವರೇ ಇದು. ಇರುಳಿಗರು ತಮ್ಮ ಕಷ್ಟ- ಸುಖ, ಅನಾರೋಗ್ಯದ ಪರಿಹಾರ, ಕಣಿ/ ಭವಿಷ್ಯ ತಿಳಿಯಲು ಮಾಡುವ ‘ಕಣಿಶಾಸ್ತ್ರಕ’ಕ್ಕೆ ಎದುರಿಗೆ ಈ ಗರಿಕೆ ಬೆನವ ಇರಲೇಬೇಕು. ಇದನ್ನು ಅವರು ಪಿಳ್ಳೆ, ಪಿಳ್ಯಪ್ಪ, ಪಿಳ್ಳಾರಿ ಎಂದು ಕರೆಯುತ್ತಾರೆ.

ಫಲವತ್ತತೆಯ ಸಂಕೇತವಾದ ಸಗಣಿ ಹಾಗೂ ಸಸ್ಯ ಸಂಕುಲದ ಸಂಕೇತ ಗರಿಕೆ; ಈ ಎರಡರ ಸಮತೂಕದ ಸಂಯೋಜನೆಯ ಆಕಾರ; ಅಂದರೆ ಇನ್ನೊಂದರ್ಥದಲ್ಲಿ ಸಗಣಿ ಗರ್ಭವಾದರೆ, ಗರಿಕೆ ಮೊಳಕೆ. ಸಗಣಿ ಮೊಟ್ಟೆಯೊಳಗಿನ ಲೋಳೆಯಂತಾದರೆ, ಗರಿಕೆ ಮೊಟ್ಟೆಯೊಳಗಿನ ಭಂಡಾರದಂತೆ; ಜೀವ- ಶಕ್ತಿಗಳ ಪ್ರತೀಕದಂತೆ; ಸೃಷ್ಟಿ ಪ್ರಕೃತಿಯ ಪ್ರತಿಮೆಯಂತೆ. ಇದು ಪ್ರಾಚೀನ ಪಶುಪಾಲಕ ಹಾಗೂ ಕೃಷಿಕರ ಆಶಯವಾಗಿರುವಂತೆ ಕಾಣುತ್ತದೆ.

ಗರಿಕೆ 12-30 ಸೆಂ.ಮೀ. ಎತ್ತರ ಬೆಳೆವ, ಹೆಚ್ಚು ಪೌಷ್ಟಿಕವಾದ ಸಾರ್ವಕಾಲಿಕ ಸಸ್ಯ. ವಿಶಾಲವಾಗಿ ಹರಡುವ, ಮೈದಾನ, ಗುಡ್ಡಪ್ರದೇಶಗಳೆರಡರಲ್ಲಿ ಬೆಳೆವ ಗುಣವಳ್ಳದ್ದು. ಸಂಸ್ಕೃತದಲ್ಲಿ ‘ದೂರ್ವ’ ಎಂದರೆ ಇಂಗ್ಲೀಷಿನಲ್ಲಿ Cynodon Dactyolon ಎಂದೆನಿಸಿಕೊಳ್ಳುವ ಈ ಗರಿಕೆ ಪಾಂಡವರು ವಾರಣಾವತ ಹೊಕ್ಕಾಗ ಎದುರುಗೊಂಡ ಪುರಜನರು ತಂದಿದ್ದ ಮಂಗಳ ವಸ್ತುಗಳಲ್ಲಿ ಇದು ಒಂದಾಗಿದ್ದುದು ಗಮನಾರ್ಹ’ (ಬಿ.ಜಿ.ಎಲ್. ಸ್ವಾಮಿ: ಸಸ್ಯ ಪುರಾಣ).

ನಗರದವರ ಕಣ್ಸೊಬಗಿನ ಗರಿಕೆ, ಹಳ್ಳಿಗರಿಗೆ ಒಂದು ಕಳೆ ಹುಲ್ಲು. ಗರಿಕೆ ಹತ್ತಿದ ಎರೆ ನೆಲದ ಕಳೆ ತೆಗೆವುದು ಕಷ್ಟ. ಆದರೆ, ಇಂತಹ ಕಳೆ ಗರಿಕೆ ಔಷಧಿ ಸಸ್ಯವಾಗಿರುವುದು ಒಂದು ವಿಶೇಷ. ಗೀರಿದ, ತರಚಿದ, ರಕ್ತ ವಸರುವ ಗಾಯಗಳಿಗೆ ಇದರ ರಸ ಒಳ್ಳೆಯ ಔಷಧ. ಸಕ್ಕರೆ ಕಾಯಿಲೆ/ ಸಿಹಿಮೂತ್ರ ರೋಗಕ್ಕೆ ಇದು ಒಳ್ಳೆಯ ಮದ್ದು. ಗರಿಕೆಯ ಹುಲ್ಲು, ಬೇರು, ಎಲೆಗಳಿಂದ ತಯಾರಿಸಿದ ಕಷಾಯವು ರಕ್ತಮೂತ್ರಕ್ಕೆ, ಬಿಳಿ ಸೆರಗು, ಆಮಶಂಕೆಗಳಿಗೆ ಉತ್ತಮ ಔಷಧ.

‘ಬೆಳಗಾಗ ಎದ್ದು ಒಂದು ಹಿಡಿ ಹಸುರು ಕರಿಕೆ ಹುಲ್ಲನ್ನು ಕಲ್ಲಿನಿಂದ ಜಜ್ಜಿ ತೆಗೆದ ರಸವನ್ನು ಕುಡಿದರೆ (40 ದಿನ) ರಕ್ತವೃದ್ಧಿಯಾಗುತ್ತದೆಯೆಂದು ಹೇಳುತ್ತಾರೆ. ಈ ವಿಧಾನವನ್ನು ಅಳಲೆಕಾಯಿ ಪಂಡಿತನ ಕಸುಬು ಎಂದು ತಾತ್ಸಾರ ಮಾಡಬಾರದು. ಅಮೇರಿಕಾದಲ್ಲಿ ಈಚೀಚೆಗೆ ಗ್ರಾಸ್ ಎಕ್ಸಾಟ್ರಾಕ್ಟ್ ಎಂಬುದೊಂದು ಇಂಜಿಕ್ಷನ್ ತಯಾರಿಯಾಗಿದೆ. ಗರಿಕೆಯ ಹುಲ್ಲಿನಿಂದ ಅನೀಮಿಯ ರೋಗಿಗಳಿಗೆ ಐದಾರು ಇಂಜೆಕ್ಷನ್ ನೀಡಿದರೆ ಆರೋಗ್ಯ ಮರುಕಳಿಸುತ್ತದೆ.’*2

ಹೀಗೆ ಗರಿಕೆ ನಮ್ಮಲ್ಲಿ ಹಲವು ಬಗೆಗಳಿಂದ ಉಪಯುಕ್ತವಾಗಿ ಪಾಲ್ಗೊಳ್ಳುತ್ತದೆ. ನಾವು ಕಳೆಯೆನ್ನುವ ಅನೇಕ ಸಸ್ಯಗಳು ಔಷಧಿಗಳಾಗಿರುವುದು ವಿಶೇಷ. ಕಂಡವರಿಗೆ, ಅರಿತವರಿಗೆ ಉಂಟೆಂದರೆ ಉಂಟು.

Categories
ಅಂಕಣಗಳು ಕುರುವ ಬಸವರಾಜ್ ಅಂಕಣ

ಬಹುನಾದ ವಿನ್ಯಾಸದ ತಮಟೆ ಎಂಬ ವಾದ್ಯದ ಸುತ್ತ

ಅಚ್ಚರಿ ಎನಿದಿರದು! ಒಂದು ವಾದ್ಯ ಸಮಾಜವೊಂದರಲ್ಲಿ, ಸಂಸ್ಕೃತಿಯೊಂದರಲ್ಲಿ ಪಾಲ್ಗೊಳ್ಳುತ್ತಿರುವ, ಒಳಗೊಳ್ಳುತ್ತಿರುವ ರೀತಿ ಕಂಡರೆ; ಒಂದು ಅಥವಾ ಹಲವು ವರ್ಷಗಳ ವೃತ್ತದಲ್ಲಿ ಅದು ಭಾಗವಹಿಸುವ ಕಾರ್ಯಗಳನ್ನು ಕಂಡರೂ ತಣ್ಣಗಿನ ಬೆರಗು ಸುಳಿದಾಡುತ್ತದೆ. ತನ್ನ ಅಸಂಖ್ಯ ಗತ್ತುಗಳ ಮೂಲಕ ನಾಡಿನ ಉದ್ದಗಲಕ್ಕೂ ವ್ಯಾಪಿಸಿರುವ, ಆವರಿಸಿರುವ ವಾದ್ಯ ವಿಶೇಷ ‘ತಮಟೆ’.

ಅದೊಂದು ಗಿಜಿಗುಡುವ ಜನಜಂಗುಳಿಯ ಜಾತ್ರೆ. ದೇವರ ಉತ್ಸವ, ರಥೋತ್ಸವ, ಮೆರವಣಿಗೆಗಳು ಏನೆಲ್ಲಾ ನಡೆದಿವೆ. ಏತನ್ಮಧ್ಯೆ ದೇವರ ಗುಡಿಯ ಒಂದೆಡೆ ಜನ ತುಂಬಿ ನೆರೆದಿದ್ದಾರೆ. ಅಲ್ಲಿ ‘ಜಡ್ಡಿನಕ’ ಜಡ್ಡಿನಕನ’ ತಮಟೆಯ ನಾದ ಕೇಳುತ್ತಿದೆ. ಮುತ್ತಿದ ಜನಸರಿಸಿ ಒಳಗೆ ಕಣ್ಣು ತೂರಿದರೆ, ಅಲ್ಲೊಬ್ಬ ನುರಿತ ತಮಟೆಗಾರ ತಮಟೆ ನುಡಿಸುತ್ತಿದ್ದಾನೆ. ಚಡ್ಡಿಯ ಹುಡುಗನೊಬ್ಬ ಏನೋ ತಡಕಿ ಹುಡುಕುತ್ತಾ ನಡೆದಿದ್ದಾನೆ. ತಮಟೆಯ ನಾದ ಒಮ್ಮೊಮ್ಮೆ ಬಿರುಸಾಗುತ್ತದೆ, ಒಮ್ಮೊಮ್ಮೆ ನಿಧಾನವಾಗುತ್ತದೆ. ಜನ ಹುಡುಗನೊಟ್ಟಿಗೆ ನಡೆದಾಡುತ್ತಿದ್ದಾರೆ.

ಇದು ತಮಟೆಗಾರ ಮತ್ತು ಆತನ ಮಗನಿಗೆ ಜಾತ್ರೆಯ ಜನ ಒಡ್ಡಿದ ಸವಾಲು. ಇದು ನಡೆಯುವುದು ಹೀಗೆ; ತಮಟೆಗಾರನಿಗೆ ಮಾತ್ರ ಗೊತ್ತಾಗುವಂತೆ ದೇವರ ಪೌಳಿಯ ಆಸುಪಾಸಲ್ಲಿ ನೋಟೊಂದನ್ನು ಅವಿಸಿ ಅಂದರೆ, ಒಂದೆಡೆ ನೋಟಿಟ್ಟು ಮೇಲೊಂದು ಗುರುತಿಗೆ ಕಲ್ಲು ಇಡಲಾಗುತ್ತದೆ. ತಟ್ಟನೆ ಯಾರೂ ಅಲ್ಲಿರುವ ನೋಟನ್ನು ಕಂಡುಹಿಡಿಯಲಾರರು. ಎಲ್ಲಿ ಇಡಲಾಗಿದೆ ಎಂಬುದು ಆ ಹುಡುಗನಿಗೆ ಒಂಚೂರೂ ಗೊತ್ತಾಗದಂತೆ, ತಮಟೆಗಾರನಿಗೆ ಮಾತ್ರ ಗೊತ್ತಾಗುವಂತೆ ಇಡಲಾಗುತ್ತದೆ. ನಂತರ ತಮಟೆಗಾರ ‘ಜಡ್‌ನಕ’ ‘ಜಡ್‌ನಕ’ ನುಡಿಸುತ್ತಾನೆ ಮಗ ಹುಡುಕ ತೊಡಗುತ್ತಾನೆ. ಹಣ ಇರುವ ದಿಕ್ಕಿನಲ್ಲಿ ಸಾಗಿದಾಗ ತಮಟೆಯ ಗತ್ತು ತುಸು ಬಿರುಸಾಗಿ ‘ಜಡ್‌ನಕ’ ‘ಜಡ್‌ನಕ’ವೇ ಆದರೂ ‘ಅಲ್ಲೇ ಅಲ್ಲೇ ಹತ್ತಿರದಲ್ಲೆ ಇದೆ’ ಎಂದು ಹೇಳಿದಂತೆ ಭಾಸವಾಗುವಹಾಗೆ ನುಡಿಸುತ್ತಾನೆ. ಹಣ ಅವಿಸಿಟ್ಟ ಜಾಗದಿಂದ ದೂರ ಸರಿದರೆ ‘ಜಡ್…ನಕ’ ‘ಜಡ್…ನಕ’ ಎಂದು ತೇಲಿಸಿ/ಜಾರಿಸಿ ‘ಅಲ್ಲಿಲ್ಲ, ಅಲ್ಲ ಅಲ್ಲ ಅಲ್ಲಲ್ಲ’ ಎಂಬಂತೆ ಒಂದೇ ಗತ್ತಿನ ನಾದದಲ್ಲಿಯೇ ಉಂಟುಮಾಡುತ್ತಾನೆ. ಅವಿತಿಟ್ಟ ಹಣದ ಬಳಿ ಸಾಗಿದಂತೆ ಗತ್ತಿನ ಬಿರುಸು ಏರುತ್ತದೆ, ತ್ವರಿತವಾಗುತ್ತದೆ. ‘ಅಲ್ಲಿದೆ’ ‘ಅಲ್ಲೇ ಇದೆ’ ಎಂಬಂತೆ. ಹುಡುಗ ಗುರುತಿಸಿ ತೆಗೆದಾಗ ಖುಷಿಯೋ ಖುಷಿ, ೨೦-೨೦ ಕ್ರಿಕೇಟ್ ಗೆದ್ದುದಕ್ಕಿಂತ ಹೆಚ್ಚೆಂಬಂತೆ.

ಇದು ತಮಟೆಯಂತಹ ವಾದ್ಯವೊಂದು ಚಮತ್ಕಾರವಾಗಿ ಬಳಕೆಕೊಂಡ ಸಂದರ್ಭವೊಂದರ ಚಿತ್ರಣವಷ್ಟೆ. ಅದರ ನಾದ ವೈಶಿಷ್ಟ, ಅದು ಬದುಕಿನ ಭಾಗವಾಗಿ ಒಡನಾಡುವ ರೀತಿ ನೀತಿಗಳ ಕುರಿತು ಒಂದಿಷ್ಟು ನೋಡೋಣ;

ಕರಾವಳಿಯ ಹೊರೆತಾದ ಕರ್ನಾಟಕದ ಜನಪದರ ಬದುಕಿನಲ್ಲಿ ಅಷ್ಟು ವಿಶೇಷದ್ದಾಗಿ ಪಾಲ್ಗೊಳ್ಳತ್ತಿರುವ ವಾದ್ಯ ‘ತಮಟೆ’. ಉತ್ತರ ಕರ್ನಾಟಕದಲ್ಲಿ ಈ ವಾದ್ಯವನ್ನು ‘ಹಲಗೆ’ ಎಂದೇ ಕರೆಯುತ್ತಾರೆ. ಇದರ ಒಂದುಬದಿ ಪೂರ್ತಿಯಾಗಿ ಹಲಗೆಯಂತೆ ಕಾಣುವುದರಿಂದ ಹೀಗೆ ಕರೆದಿರುವ ಸಾದ್ಯತೆ ಹೆಚ್ಚು. ಅದರೆ ತಮಟೆ ಎಂಬುದು ಅದರ ನಾದದಿಂದ ಬಂದ ಹೆಸರು. ತಮಟೆಯ ನಾದದ ಮುಖ್ಯ ಹೊಮ್ಮುವಿಕೆಯೆ ‘ತಮ’ ‘ತಮ’ ‘ತಮ’ ಇಲ್ಲವೆ ‘ಟಮ’ ‘ಟಮ’ ‘ಟಮ’ ಎಂಬುದು. ಹಾಗಾಗಿಯೆ ಇದರ ಹೆಸರು ‘ತಮಟೆ’ ಎಂದಾಗಿದೆ. ‘ಟಮಟೆ’ ಎನ್ನುವುದೂ ಇದೆ. ಅಲ್ಲದೆ ತಬಟೆ, ತವಟೆ, ತಪ್ಪಾ, ತಪಟೆ, ತಪ್ಪಟೆ, ತಮ್ಮಟೆ, ತಮ್ಮಟ್ಟೆ, ತಂಬಟ, ತಂಬಟೆ ಎಂದೆಲ್ಲಾ ಹೆಸರುಗಳುಂಟು. ತಮಿಳುನಾಡಿನಲ್ಲಿಯು ಹೆಚ್ಚು ಜನಪ್ರಿಯವಾದ ವಾದ್ಯವಿದು. ತಮಿಳಿನಲ್ಲಿ ಇದನ್ನು ತಪ್ಪಟ್ಟ, ತಪ್ಪಟ್ಟೈ, ತಮ್ಪಟ್ಟ, ತಪ್ಪಾಟ ಎನ್ನುತ್ತಾರೆ. ಅಲ್ಲಿ ತಮಟೆ ನುಡಿಸಿ ಕುಣಿಯವ ಕಲೆಯನ್ನು ‘ತಪ್ಪಾಟಂ’ ಎನ್ನಲಾಗುತ್ತದೆ. ಆಂದ್ರ ಪ್ರದೇಶ, ಕೇರಳಗಳಲ್ಲೂ, ಮಹಾರಾಷ್ಡ್ರದ ಹಲಭಾಗಗಳಲ್ಲೂ ಈ ವಾದ್ಯದ ಬಳಕೆಯಿದೆ. ತೆಲುಗಿನಲ್ಲಿ ತಮಟೆಯನ್ನು ತಪ್ಪೆಟ, ತಮ್ಮಟ ಎಂದು, ಮಲೆಯಾಳದಲ್ಲಿ ತಪ್ಪಿಟ್ಟ, ತಮ್ಮಿಟ್ಟ ಎಂದು, ತುಳುವಿನಲ್ಲಿ ತಬಿಟೆ, ತಮ್ಮಟೆ, ತಂಬಟ, ತಂಬಟೆ, ತಮಟೆ*೧ ಎಂಬ ಹೆಸರುಗಳಲ್ಲಿ ಕರೆಯುವುದರ ಬಳಕೆ ರೂಪಗಳು ದೊರೆಯುತ್ತವೆ.

ಕನ್ನಡದಲ್ಲಿ ತಮಟೆ, ತಂಬಟೆ, ತೆಲುಗಿನಲ್ಲಿ ತಮಟೆ, ತಪ್ಪಟೆ, ತಮಿಳುವಿನಲ್ಲಿ ತಮ್ಮಟ್ಟೈ, ತಪ್ಪಾಟ, ತುಳುವಿನಲ್ಲಿ ತಮ್ಮಟೆ, ತಂಬಟೆ, ಮಲೆಯಾಳದಲ್ಲಿ ತಮ್ಮಿಟ್ಟ ಮೊದಲಾದ ಎಲ್ಲಾ ಪದಗಳನ್ನು ಅವಲೋಕಿಸಿದರೆ ಕಾಣಬರುವ ಬಹು ಮುಖ್ಯವಾದ ಅಂಶ ‘ತಮಟೆ’ ಎಂಬ ಪದ / ಶಬ್ದ ಮೂಲ ದ್ರಾವಿಡ ಭಾಷೆಯ ಇಂದಿನ ಮುಂದುವರಿಕೆಯ ರೂಪ ಎಂಬುದು ಹೆಚ್ಚು ಸ್ಪಷ್ಟವಾಗುತ್ತದೆ.

ತಯಾರಿಕೆ

ತಮಟೆ ಒಂದುಬದಿಯ ಚರ್ಮಹೊದಿಕೆಯ, ಒಂದೇಬದಿ ನುಡಿಸುವಿಕೆಯ ವಾದ್ಯ, ಇದು ಜರಡಿ ಆಕಾರದ್ದು. ಎರಡರಿಂದ ಎರಡೂವರೆ ಇಂಚು ಅಗಲದ ಕಬ್ಬಿಣದ ತಗಡನ್ನ ಗುಂಡಾಕಾರಕ್ಕೆ ತಂದು ಸೇರಿಸಿದ ಬಳೆಯ ಒಂದು ಬದಿಗೆ ಹದಮಾಡಿದ ಕೋಣ, ದನ ಇಲ್ಲವೇ ಮೇಕೆಯ ಚರ್ಮ ಹೊದಿಸಿ, ಅದರ ಇನ್ನೊಂದು ಬದಿಗೆ ಚರ್ಮದ ಬಾರು/ಹುರಿಗಳಿಂದಲೇ ದುಂಡನೆಯ ರಿಂಗ್‌ನಂತಹ ಕಬ್ಬಿಣದಪಟ್ಟಿಗೆ ಒಂದೆರಡು ಇಂಚು ಅಂತರದಲ್ಲಿ ಹೊದಿಸಿದ ಚರ್ಮವನ್ನು ಎಳೆದು ಬಿಗಿಗೊಳಿಸಿದಾಗ ತಮಟೆ ಏರ್ಪಡುತ್ತದೆ. ಇದನ್ನು ತಮಟೆಗೆ ಹಾಕಿದ ಹುರಿ/ಬಾರಿನ ಕುಣಿಕೆಯನ್ನು ಎಡಹೆಗಲಿಗೆ ಬರವಂತೆ ಹೊಂದಿಸಿಕೊಂಡು, ಎದೆ ಹೊಟ್ಟೆಯ ಭಾಗಕ್ಕೆ ಆತುಕೊಂಡು ಹಿಡಿದು, ಎಡಗೈಯನ್ನು ತಮಟೆಯ ಮೇಲಂಚಿಗೆ ಬಿದಿರ ಕಿರುಕಡ್ಡಿಯೊಂದಿಗೆ ಹಿಡಿದು, ಹೆಬ್ಬೆರಳ ಗಾತ್ರದ ಗೇಣುದ್ದಕ್ಕೂ ತುಸು ಉದ್ದದ ಗುಣುಕೊಂದರಿಂದ ನುಡಿಸುವ ಮೂಲಕ ನಾದ ಹೊಮ್ಮಿಸಲಾಗುತ್ತದೆ. ಬಲಗೈಯ ನುಡಿಸುವ ಕೋಲನ್ನು ಗುಣಿ, ಗುಣಿಗೋಲು, ಕೋಲು ಎಂದರೆ, ಎಡಗೈಯ ಕಡ್ಡಿಯನ್ನು ಚಿಟಿಕೆ ಕಡ್ಡಿ ಎನ್ನಲಾಗುತ್ತದೆ. ಬಲಗೈಯ ಗುಣಿಯದೇ ಹೆಚ್ಚಿನ ಕೆಲಸ. ವೈವಿದ್ಯತೆ ಉಂಟುಮಾಡುವುದು ಈ ಗುಣಿಯಿಂದಲೇ. ಚಿಟಿಕೆ ಗಡ್ಡಿ ಬಲಗೈಯ ನುಡಿಸುವಿಕೆಗೆ ಪೂರಕ ಗತ್ತುಗಳನ್ನು ಒದಗಿಸಿ ತಾಳದ ಹದವನ್ನು, ನಾದದ ಚಲುವನ್ನು ಮೂಡಿಸಲು ದುಡಿಮೆಗೊಳ್ಳುತ್ತದೆ. ತಮಟೆಯ ನುಡಿಸುವಿಕೆಗೆ ಈ ಎರಡೂ ಅನಿವಾರ್ಯ. ಗುಣಿ ಚಿಟಿಕೆಕಡ್ಡಿಗಳಲ್ಲಿ ಯಾವ ಒಂದರಿಂದಲೇ ನುಡಿಸಲು ಸಾದ್ಯವಿಲ್ಲ. ತಾಳದ ಆವರ್ತದ ಹದಕ್ಕೆ, ಭಿನ್ನ ಭಿನ್ನ ಗತ್ತುಗಳ ಕಟ್ಟುವಿಕೆಗೆ, ಹೊಮ್ಮಿಸುವಿಕೆಗೆ ಒಂದನ್ನೊಂದು ಅವಲಂಬಿಸಿವೆ.

ಪೂರ್ವ ಸಿದ್ಧತೆ

ನುಡಿಸಲು ಆರಂಭಿಸುವ ಮುನ್ನ ತಮಟೆಗಳನ್ನು ತೆಂಗಿನ ಗರಿಯಂತಂಹ ಗರಿಗಳ ಬೆಂಕಿಯ ಉರಿಗೆ ಒಡ್ಡಿ ಕಾಯಿಸಲಾಗುತ್ತದೆ. ಖಣ ಖಣ ಖಣ ಖಣ ಖಣಣ ಸದ್ದು ಉಂಟಾಗುವವರೆಗಿನ ತುಸುಹೊತ್ತು ಕಾಯಿಸಿ ನುಡಿಸಲು ಆರಂಭಿಸಲಾಗುತ್ತದೆ.

ಸ್ವತಂತ್ರ ವಾದ್ಯ

ತಮಟೆ ಒಂದು ಸ್ವತಂತ್ರ ವಾದ್ಯ. ಸಹವರ್ತಿ ವಾದ್ಯಗಳ ಪೂರಕ ಒತ್ತಾಸರೆಯ ಅವಲಂಬನೆಯಿಲ್ಲದೆ ನುಡಿಸಬಲ್ಲ ರಾಜವಾದ್ಯ. ನಾಡಿನ ಚರ್ಮವಾದ್ಯಗಳಲ್ಲಿಯೆ ಹರೆ, ಸಮ್ಮಾಳದಂತಹ ಒಂದೆರಡು ವಾದ್ಯಗಳ ಹೊರೆತು ಮತ್ತು ಅದಕ್ಕಿಂತಲೂ ಅಸಾಮಾನ್ಯ ಸಾಮರ್ಥ್ಯ ಹೊಮ್ಮಿಸುವ ಸ್ವಸಾಮರ್ಥ್ಯದ ವಾದ್ಯ ವಿಶೇಷ. ಈ ವಾದ್ಯಕ್ಕೆ ಸಾಮರ್ಥ್ಯ ಎಂಬುದು ಬಂದುದಲ್ಲ. ತಂದುದು. ಅಥವಾ ತಂದುಕೊಂಡುದು. ವಾದ್ಯ ನುಡಿಸುವವನ ಕೈಚಳಕದ್ದು. ಈ ವಾದ್ಯದ ವಿಶೇಷವನ್ನು ಕಂಡುಕೊಂಡ ಯಾರೋ ನುಡಿಸುತ್ತಾಬಂದ, ಸಾವಿರ ಸಾವಿರ ವರ್ಷಗಳ ಹಿಂದಿನಿಂದ ಇಂದಿನವರೆಗೂ ಸದಾ ಸೃಜನಶೀಲವಾಗಿ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಲೇ ಕಂಡುಕೊಂಡ / ಸಂಯೋಜನೆಗೊಂಡ ಪರಿಷ್ಕಾರಗೊಂಡ ನಾದದ ರೂಪಗಳು.

ಮೇಳ ವಾದ್ಯ

ಎಂತಹ ವಿಶಿಷ್ಟ ವಾದ್ಯವಿದೆಂದರೆ ಒಂದೇ ಒಂದು ವಾದ್ಯವಾಗಿ ಎಷ್ಟು ಸಾಮರ್ಥ್ಯ ಉಳ್ಳದ್ದೋ ಅಷ್ಟೆಯಾಗಿ ಮೇಳವಾದ್ಯದಲ್ಲು ವೈವಿದ್ಯತೆಯಿಂದ ಹಿಡಿದಿಟ್ಟುಕೊಳ್ಳುವ ಶಕ್ತತೆಯದು. ಮೇಳವಾದ್ಯವಾಗಿಯು ಇದರ ಪಾಲ್ಗೊಳ್ಳುವಬಗೆ ನಾಯಕನ ರೀತಿಯದು. ತಮಟೆಯೊಂದಿಗೆ ತಾರ್‍ಸೆ, ದೋಣು, ರಮ್‌ದೋಣು, ನಗಾರೆ, ಹರೆ/ಈರ್‌ನಾರ್/ಉರುಮೆ ಈ ಯಾವದೇಗಳೊಂದಿಗೆ ಮೇಳಕ್ಕೆ ಸೊಬಗು ಕಟ್ಟುತ್ತದೆ. ಅಂದರೆ ಸಹವಾದ್ಯಗಳ ನಾದ ಕಡಿಮೆಯದು ಎಂದರ್ಥವಲ್ಲ. ಅವು, ಅವುಗಳ ಸಾದ್ಯತೆಯ ಕೌಶಲ್ಯದ ಪಾಲ್ಗೊಳ್ಳುವಿಕೆ ಇದ್ದೇ ಇರುತ್ತದೆ. ಅಂತಹ ಸಂದರ್ಭದಲ್ಲು ಒಟ್ಟು ಮೇಳವ ನೋಡಿದರೆ / ಆಲಿಸಿದರೆ ತಮಟೆ ಮೇಳದ ಕ್ಯಾಪ್ಟನ್‌ಆಗಿಯೇ ಮುನ್ನಡೆಸುವುದು ಆವರಿಸುವುದನ್ನು ಅರಿಯಬಹುದು.

ಸಹವಾದ್ಯಗಳೊಂದಿಗಿನ ನಾದದ ವಿನ್ಯಾಸ

ತಮಟೆ ತಾರ್‍ಸೆ ಒಂದಿಗೆ ಬೆರವ ರೀತಿ, ತಮಟೆಯ ಗತ್ತುಗಳ ನಡೆಗನುಸರಿಸಿ

ತಮಟೆ: ಜಡ್ಡಿನ್ನಕ ಜಡ್ಡಿನ್ನಕ ಜಡ್ಡಿನ್ನಕ ಜಡ್ಡಿನ್ನಕ

ಗತ್ತು ನುಡಿಯುವಾಗ

ತಾರ್‍ಸೆ: ಗರ ಗರ ಗರ ಗರ ಗರ ಗರ ಗರ ಗರ

ನುಡಿಸುತ್ತಾರೆ. ಹೀಗೆಯೇ ಇತರ ಗತ್ತುಗಳೊಂದಿಗೆ.

ಗಣ್ಣ ಗರಣ ಗಣ್ಣ ಗರಣ ಗಣ್ಣ ಗರಣ ಗಣ್ಣ ಗರಣ

ಗತ್ತುಗಳ ಕಟ್ಟುತ್ತದೆ ಅಥವಾ ಕಟ್ಟುತ್ತಾರೆ. ತಾರ್‍ಸೆ ತಮಟೆಯ ಗತ್ತುಗಳು ಹುಸಿಯ ಬಿಡುವಲ್ಲಿ ಕೆಲವೊಮ್ಮೆ ಒಂದಿಗೆ ನುಡಿಸುತ್ತಾರೆ.

ತಮಟೆ ಉರುಮೆ ವಾದ್ಯದೊಂದಿಗೆ

ತಮಟೆ : ಜಡ್ಯುನ್ ಜಡ್ಡಿನಕ ಜಡ್ಯುನ್ ಜಡ್ಡಿನಕ ಜಡ್ಯುನ್ ಜಡ್ಡಿನಕ

ಗತ್ತು ನುಡಿದಾಗ

ಉರುಮೆ: ಬುರ್‌ರ್ ಜುರ್ರಮು ಬುರ್‌ರ್ ಜುರ್ರಮು ಬುರ್‌ರ್ ಜುರ್ರಮು

ಎಂದು ಬೆರೆತ ನಾದ ಹೊಮ್ಮಿಸುತ್ತಾರೆ. ಹಾಗೆ ನೋಡಿದರೆ ಉರುಮೆ ಸ್ವತಂತ್ರ ವಾದ್ಯದ ಗುಣದ್ದು.

ನಾದದ ವಿನ್ಯಾಸ

ತಮಟೆ ಗತ್ತುಗಳನ್ನು ತೆಕ್ಕೆಹಾಕಿ ಹಿಡಿಯುವುದು ಕಷ್ಟದ ಕೆಲಸ. ಅಸಂಖ್ಯ ವಿಧಗಳು. ನುಡಿಸುವ ಒಬ್ಬೊಬ್ಬರದು ಒಂದೊಂದು ಸ್ವರೂಪದ ನಾದವಿನ್ಯಾದ ಫಲಕುಗಳನ್ನು ಕಾಣಬಹುದು. ಹಾಗೆ ಹೊಂದಿಯೇ ಸಾಗುವುದು, ಹಾಗೆ ಕಂಡುಕೊಳ್ಳುವುದು ಈ ವಾದ್ಯ ನುಡಿಸುವ ಕಲಾವಿದರ ಗುಣ. ಆದರೆ ಒಂದು ಮನೆತನದವರ ಗತ್ತುಗಳು, ಒಂದು ತೆಂಡೆಯವರ ಗತ್ತುಗಳು, ಒಂದು ಊರವರ ಗತ್ತುಗಳು, ಒಂದೊಂದು ಸೀಮೆಯವರ ಗತ್ತುಗಳಲ್ಲಿ ಸಾಮ್ಯತೆ ಇರಲು ಸಾದ್ಯ.

ತಮಟೆಯನ್ನು ಇಂತದೇ ಗತ್ತಿನೊಂದಿಗೆ ಆರಂಭಿಸಬೇಕೆಂಬ ನಿರ್ಧಿಷ್ಟತೆಯೇನಿಲ್ಲ. ಸಾಮಾನ್ಯವಾಗಿ;

  1. ಜಡ್ಡಿನ್ನಕ ಜಡ್ಡಿನ್ನಕ ಜಡ್ಡಿನ್ನಕ ಜಡ್ಡಿನ್ನಕ
  2. ಜಡ್ ಜಡ್ ಜಡ್ಡಿನ್ನಕ ಜಡ್ ಜಡ್ ಜಡ್ಡಿನ್ನಕ
  3. ಜಣ ಖಣ ಜಡ್ಡಿನ್ನಕ ಜಣ ಖಣ ಜಡ್ಡಿನ್ನಕ
  4. ಜಡ್ಡಿನ್ನಕ ಪಂಪನ್ನಕ ಜಡ್ಡಿನ್ನಕ ಪಂಪನ್ನಕ

ಎಂದೆಲ್ಲಾ ಗತ್ತುಗಳ ಮೂಲಕ ಆರಂಭಿಸುತ್ತಾರೆ.

ಹೀಗೆಯೆ;

  1. ಜಣಗುಡು ಜಣಗುಡು ಜಣಗುಡು ಜಣಗುಡು ಜಡ್ಡಿನ್ನಕ
  2. ಜಡ್ ಜಡ್ಡಿ ಜಡ್ಡಿನ್ನಕ ಜಡ್ ಜಡ್ಡಿ ಜಡ್ಡಿನ್ನಕ
  3. ಜಡ ಜಡ ಜಗ್ಗುನ್ನಕ ಜಡ ಜಡ ಜಗ್ಗುನ್ನಕ

ಸಾಮಾಜಿಕ ಸಂದರ್ಭದಲ್ಲಿ ಪರಂಪರೆಯ ಸಮಾಜ ಈ ವಾದ್ಯ ಮತ್ತು ಇದನ್ನು ನುಡಿಸುವವರನ್ನು ಹೇಳಿಕೊಳ್ಳುವಂತಹ ಗೌರವದಿಂದ ವಂಚಿತವಾಗಿಯೇ ಇರುವಂತೆ ನಡೆಸಿಕೊಂಡಿದೆ. ಯಾವುದೇ ಬಗೆಯ ವಾದ್ಯವನ್ನೇ ಆಗಲಿ, ಯಾರೇ ಆಗಲಿ ಹದವರಿತು, ಹಿತವಾಗಿ ನುಡಿಸಬಲ್ಲವ ವಾದ್ಯಗಾರನೆ ಆಗಿರುತ್ತಾನೆ. ಅವನ ಹುಟ್ಟಿನ ಹಿನ್ನೆಲೆ ಅಂದರೆ ಯಾವ ಜಾತಿಯವನು ಎಂಬುದು ಇಲ್ಲಿ ಮುಖ್ಯವೇ ಅಲ್ಲ. ನುಡಿಸುವವ ಹೇಗೆ ನುಡುಸುತ್ತಾನೆ, ಎಂಥ ಕೌಶಲ್ಯ ತುಂಬಿ ನುಡಿಸುತ್ತಾನೆ ಎಂಬುದಷ್ಟೆ ಮುಖ್ಯ. ಅಲ್ಲಿ ಅವನ ಜಾತಿ ನುಡಿಸುತ್ತಿಲ್ಲ ಅವನು ನುಡಿಸುತ್ತಿದ್ದಾನೆ. ಅವನೊಂದಿಗೆ ಹಲವು ಕೌಶಲ್ಯಗಳನ್ನು ಅದೂ ನೀಡಿರಲೂಬಹುದು. ಆದರೆ ನಾದ ಜಾತಿಯದಲ್ಲ. ನಾದ ವ್ಯಕ್ತಿಯದು. ನಾದ ಅವನ ಸಾಧನೆಯದು. ಅವನ ಪರಿಶ್ರಮದ್ದು. ಜಾತಿ ವೃತ್ತಿ ಒಂದೇ ಆಗಿರುವಾಗ ಅದರ ಪಾಲನ್ನೂ ಅಲ್ಲಗಳೆಯಲಾಗದು. ಆದರೆ ಪರಂಪರೆ ಈ ವಿಚಾರದಲ್ಲಿ ಈ ಜನರಿಗೆ ಮೋಸಮಾಡಿದೆ. ಎಂದೂ ಇವರನ್ನೂ ಸಂಗೀತಗಾರರು ಎಂದು ಪರಿಗಣಿಸಿಯೇ ಇಲ್ಲ. ಇದು ಯಾವ ನ್ಯಾಯ?

ಫೈಬರ್ ಚರ್ಮದ ತಮಟೆ

ಪದೇ ಪದೇ ಕಾಯಿಸುವ ಶ್ರಮ ತಪ್ಪಿಸಿಕೊಳ್ಳಲು ಇತ್ತೀಚಿನ ವಾದ್ಯಗಾರ ಸುಲಭವಾಗಿ ದೊರಕುವ ಫೈಬರ್ ಅನ್ನು ಚರ್ಮವಾಗಿ ಬಳಸತೊಡಗಿದ್ದಾನೆ. ಪ್ರಖ್ಯಾತ ತಮಟೆ ವಾದ್ಯಗಾರ ನಾಡೋಜ ಮುನಿವೆಂಕಟಪ್ಪ ಬಳಸುವುದೇ ಈಬಗೆಯ ಫೈಬರ್ ಚರ್ಮದ್ದು. ತನ್ನ ಅಸಾಮಾನ್ಯ ಪ್ರತಿಭೆಯಿಂದ ಈ ಕಲಾವಿದ ಇಲ್ಲಿ ಯಶಸ್ಸು ಪಡೆಯುತ್ತಿದ್ದಾನೆ. ಆದರೆ ಲೆಕ್ಕಕೆ ನಿಲುಕದಷ್ಟು ಜನರು ಸಾವಿರಾರು ವರ್ಷಗಳಿಂದ ಹದಗೊಳಿಸಿ, ಪರಿಸ್ಕರಿಸಿ ತಂದ ವಾದ್ಯವನ್ನು ಅದರ ನಿಜ ಸೊಗಸಿನ ಉನ್ನತತೆಯನ್ನು ಅರಿಯದೇ, ಇಲ್ಲವೇ ಅಸಡ್ಡೆಯಿಂದ, ಕ್ವಚಿತ್ ಶ್ರಮ ತಪ್ಪಿಸಿಕೊಳ್ಳಲು ಚರ್ಮ ಬಿಟ್ಟಿದ್ದಾರೆ. ಚರ್ಮದ ನಾದದ ಸೊಬಗು ಸೂಕ್ಷ್ಮತೆಗಳೇ ಬೇರೆ. ಅದು ಕೊಡುವ ನಾದದ ಶೇಕಡಾ ಮೂವತ್ತು ಭಾಗದಷ್ಟು ಸೊಗಸನ್ನು ಫೈಬರ್ ನೀಡಲಾರದು. ಇನ್ನೂ ಕಾಲ ಮಿಂಚಿಲ್ಲ. ನಾಡಿನ ಎಲ್ಲಾ ಕಲಾವಿದರೂ ಚರ್ಮದ ತಮಟೆಗೆ ಹೊರಳುವ ಅಥವಾ ಹೊರಳಿಸುವ ಅಲೆಯನ್ನು ನಾವು ಉಂಟುಮಾಡಬೇಕಿದೆ. ಈ ವಾದ್ಯವಷ್ಟೇ ಅಲ್ಲ ಡೊಳ್ಳು, ತಾರ್‍ಸೆ, ಸಮ್ಮಾಳ, ಹರೆ ಈ ಎಲ್ಲಾ ವಾದ್ಯಗಳೂ ಚರ್ಮಮಾತ್ರದಿಂದಲೇ ರೂಪುಗೊಳ್ಳಲು ಉತ್ತೇಜಿಸಬೇಕಿದೆ. ಸಂಸ್ಕೃತಿ ಇಲಾಖೆ ಕಡ್ಡಾಯವಾಗಿ ಈ ವಾದ್ಯ ಬಳಸುವವರಿಗೆ ಆದ್ಯತೆ ನೀಡಿ ಸಂಸ್ಕೃತಿಯ ಸೊಗಸನ್ನು ಕಾಯ್ದುಕೊಳ್ಳಬಹುದಾಗಿದೆ.

(ಮುಂದುವರಿಯುವುದು)

*೧ ಕನ್ನಡ ನಿಘಂಟು; ೧೯೭೭; ಕನ್ನಡ ಸಾಹಿತ್ಯ ಪರಿಷತ್ತು, ಪಂಪಮಹಾಕವಿ ರಸ್ತೆ, ಬೆಂಗಳೂರು; ಪುಟ ೩೨೧೩.