Categories
ಕಲೆ ನೃತ್ಯ ಭರತನಾಟ್ಯ ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ಎಚ್‌.ಆರ್. ಕೇಶವಮೂರ್ತಿ

ಚಿಕ್ಕಮಗಳೂರು ತಾಲೂಕಿನ ಹೋಚಿಹಳ್ಳಿ ಗ್ರಾಮದಲ್ಲಿ ೧೯೧೯ರಲ್ಲಿ ಶ್ರೀ ಬಿ. ರಾಮಸ್ವಾಮಿ ಮತ್ತು ಶ್ರೀಮತಿ ಸೀತಮ್ಮನವರ ಪುತ್ರರಾಗಿ ಕೇಶವಮೂರ್ತಿಯವರು ಜನಿಸಿದರು. ಬಡತನದ ದೆಸೆಯಿಂದ ಪ್ರಾಥಮಿಕ ಹಂತದಲ್ಲೇ ವಿದ್ಯಾಭ್ಯಾಸಕ್ಕೆ ಸಂಚಕಾರ ಬಂದರೂ ಧೃತಿಗೆಡದೆ ತುಮಕೂರಿನಲ್ಲಿ ಚಿಕ್ಕಪ್ಪ ಮೊಸಳೆ ನರಸಿಂಹಯ್ಯನವರ ಮನೆಯಲ್ಲಿ ದೈನಂದಿನ ವೆಚ್ಚದ ಸಲುವಾಗಿ ಶ್ರಮಜೀವನ ನಡೆಸುತ್ತಾ ಎಸ್‌.ಎಸ್‌.ಎಲ್‌.ಸಿ. ಮುಗಿಸಿದರು. ಜತೆಗೆ ಚಿಕ್ಕಪ್ಪ ನರಸಿಂಹಯ್ಯನವರಿಂದ ಅಲ್ಪ ಸ್ವಲ್ಪ ಸಂಸ್ಕೃತ ಪಾಠವೂ ಆಯಿತು. ಮುಂದೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹಣದ ಮುಗ್ಗಟ್ಟು  ಬಹಳವಾಗಿ ತಲೆದೋರಿದ್ದರಿಂದ ಓದಿಗೆ ತಿಲಾಂಜಲಿಯಿತ್ತು ಸಂಪಾದನೆಗಾಗಿ ಬೇರೆ ದಾರಿ ಹುಡುಕುವುದು ಅನಿವಾರ್ಯವಾಯಿತು.

ತಮ್ಮ ಸ್ನೇಹಿತರ ಜೊತೆಗೂಡಿ ಮೈಸೂರಿನ ಆಸ್ಥಾನ ವಿದ್ವಾಂಸರಾಗಿದ್ದ ಸಿ.ಎಸ್‌. ಶ್ರೀನಿವಾಸಮೂರ್ತಿ ಅವರಲ್ಲಿ ಕೊಳಲು ವಾದನ ಕಲಿಯಲು ಪ್ರಾರಂಭಿಸಿದರು. ತುಮಕೂರಿನ ನಾಟಕ ಸಂಘಗಳ ಸಂಪರ್ಕ ಹಾಗೂ ಸಂಗೀತದ ಪಾಠ ಕೇಶವಮೂರ್ತಿಯವರಲ್ಲಿ ನೃತ್ಯದ ಗೀಳನ್ನೂ ಹುಟ್ಟು ಹಾಕಿರಬಹುದು. ಹೀಗಾಗಿ ೧೯೪೩ರಲ್ಲಿ ನೃತ್ಯಾಸಕ್ತರಾಗಿ ಬೆಂಗಳೂರಿಗೆ ವಲಸೆ ಬಂದರು. ಈ ಹೊತ್ತಿಗೆ ಅವರಿಗೆ ಮದುವೆಯೂ ಆಗಿತ್ತು. ಪತ್ನಿ ಶಾರದಮ್ಮನವರ ಜೊತೆಗೂಡಿ ಬೆಂಗಳೂರಿನಲ್ಲಿ ವಾಸಿಸುತ್ತಾ ಸಂಸಾರ ನಿರ್ವಹಣೆಗಾಗಿ ಶಾಲೆಯೊಂದರಲ್ಲಿ ಅಧ್ಯಾಪಕ ಗಳಿಸಿದರು.

ಮೊದಲಿಗೆ ಉತ್ತರದ ಸುಪ್ರಸಿದ್ಧ ಕಥಕ್‌ನೃತ್ಯ ಕಲಾವಿದ ಸೋಹನ್‌ಲಾಲ್‌ರವರಿಂದ ಕಥಕ್‌ಕಲಿತರು. ಮುಂದೆ ಭರತನಾಟ್ಯದ ವೈವಿಧ್ಯತೆಗೆ ಮಾರುಹೋಗಿ ನಟುವನಾರ್ ಗುಂಡಪ್ಪನವರ ಶಿಷ್ಯರಾಗಿ ಅವರಿಂದ ಭರತನಾಟ್ಯ ಕಲೆಯಲ್ಲೂ ಸಾಕಷ್ಟು ಪಾಂಡಿತ್ಯ ಗಳಿಸಿದರು.

ಕೇಶವಮೂರ್ತಿಯವರು ೧೯೪೯ರಲ್ಲಿ ತಮ್ಮದೇ ಆದ ಕೇಶವ ನೃತ್ಯಶಾಲೆಯನ್ನು ಪ್ರಾರಂಭಿಸಿದರು. ತನ್ಮೂಲಕ ಅನೇಕ ವಿದ್ಯಾರ್ಥಿನಿಯರನ್ನು ನಾಟ್ಯಕಲೆಯಲ್ಲಿ ತಯಾರು ಮಾಡಿ ನಾಟ್ಯಾಚಾರ್ಯರೆನಿಸಿದರು. ಮಕ್ಕಳಾದ ವಸಂತಲಕ್ಷ್ಮಿ, ಸುಮಿತ್ರಾ, ಶ್ಯಾಂಪ್ರಕಾಶ್‌, ಹಾಗೂ ರಾಮ್ ಕುಮಾರ್ ಅವರುಗಳೂ ಸಹ ನೃತ್ಯಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಪ್ರತಿವರ್ಷವೂ ತಪ್ಪದೆ ವಾರ್ಷಿಕೋತ್ಸವವನ್ನು ನಡೆಸುತ್ತಾ ವಿದ್ಯಾರ್ಥಿಗಳಿಂದ ನಾಟ್ಯ ಮಾಡಿಸಿ ಹುರಿದುಂಬಿಸುತ್ತಿದ್ದಾರೆ. ಕರ್ನಾಟಕ ಸೆಕೆಂಡರಿ ಎಜುಕೇಷನ್‌ಬೋರ್ಡ್ ನಡೆಸುವ ನೃತ್ಯ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡುವುದೇ ಅಲ್ಲದೆ ತಮ್ಮ ಶಾಲೆಯ ವತಿಯಿಂದ ಸರ್ಟಿಫಿಕೇಟ್‌ಕೋರ್ಸ್, ಡಿಪ್ಲೊಮಾ ಕೋರ್ಸ್ ಮತ್ತು ಡಿಗ್ರಿ ಕೋರ್ಸ್‌ಗಳನ್ನೂ ನೀಡಲು ಪ್ರಾರಂಭಿಸಿದರು.

ರಾಜ್ಯಾದ್ಯಂತ-ರಾಷ್ಟ್ರಾದ್ಯಂತ ಅನೇಕ ಸಂಘ ಸಂಸ್ಥೆಗಳ ಆಹ್ವಾನದ ಮೇರೆಗೆ ಕೇಶವ ನೃತ್ಯ ಶಾಲೆಯು ನೂರಾರು ಕಾರ್ಯಕ್ರಮಗಳು ನಡೆಯುತ್ತಾ ಬಂದವು. ಕೇಶವ ನೃತ್ಯ ಶಾಲೆಯ ವಿಭಿನ್ನತೆ ಇರುವುದೇ ನೃತ್ಯನಾಟಕಗಳಲ್ಲಿ ಒಂದಕ್ಕಿಂತ ಒಂದು ಅಮೋಘವಾದ ನೃತ್ಯ ನಾಟಕಗಳು ಸಭಿಕರನ್ನು ಕೈಬೀಸಿ ಕರೆದು ರಸದೌತಣ ನೀಡುವಲ್ಲಿ ಯಶಸ್ವಿಯಾದವು. ಇಂತಹ ನೃತ್ಯನಾಟಕಗಳ ಪ್ರದರ್ಶನಕ್ಕೆ, ಸಂಯೋಜನೆಗೆ ಕೇಶವಮೂರ್ತಿಯವರು ವಹಿಸಿದ ಶ್ರಮ ಅಪಾರ. ಸುಮಾರು ೩೬ ಕ್ಕೂ ಹೆಚ್ಚು ಪೌರಾಣಿಕ, ಸಾಮಾಜಿಕ, ಚಾರಿತ್ರಿಕ, ಜಾನಪದ ವಸ್ತು ವಿಶೇಷವುಳ್ಳ ನೃತ್ಯನಾಟಕಗಳು ಹಲವಾರು ಬಾರಿ ಪ್ರದರ್ಶನಗೊಂಡಿರುವುದು ಗಮನಾರ್ಹ. ಇವೆಲ್ಲಕ್ಕೂ ಕಲಶಪ್ರಾಯದಂತೆ ಕಳೆದ ಹತ್ತುವರ್ಷಗಳಿಂದ ಕನ್ನಡ ಕವಿ ಕಾವ್ಯ ಪರಂಪರೆ ಮಾಲಿಕೆಯ ಅಡಿಯಲ್ಲಿ ಆದಿಕವಿ ಪಂಪನಿಂದ ಹಿಡಿದು ಹೆಸರಾಂತ ಕವಿಗಳ ಕಾವ್ಯವನ್ನು ರಂಗದ ಮೇಲೆ ತರುವ ಕೆಲಸ ನಿರಂತರವಾಗಿ ನಡೆಯುತ್ತಿದೆ.

ಸುವರ್ಣವರ್ಷ ಮಹೋತ್ಸವ: ೧೯೪೯ರಲ್ಲಿ ಪ್ರಾರಂಭವಾದ ಕೇಶವ ನೃತ್ಯಶಾಲೆ ೧೯೯೯ರಲ್‌ಇ ೫೦ ವರ್ಷಗಳನ್ನು ಪೂರೈಸಿದ ಮಹತ್ತರ ಸಾಧನೀಯ ವರ್ಷ. ಏನೇ ಅಡಚಣೆ, ಎಡರು ತೊಡರುಗಳ ನಡುವೆಯೂ ನಿರಂತರವಾಗಿ ಈ ಸಂಸ್ಥೆ ವಿದ್ಯಾರ್ಥಿಗಳಿಗೆ ತರಬೇತಿ ನೀಡುವತ್ತ ಮತ್ತು ನೃತ್ಯ ಪ್ರದರ್ಶನಗಳತ್ತ ಸತತವಾಗಿ ಶ್ರಮಿಸಿದ ಹಾದಿ ಅನುಕರಣೀಯ.

ಸುವರ್ಣವರ್ಷದ ಆಚರಣೆ ಅದ್ವಿತೀಯವಾಗಿ ಪ್ರಾರಂಭವಾಯಿತು. ಸುಮಾರು ೫೦೦ಕ್ಕೂ ಹೆಚ್ಚು ನರ್ತಕ ನರ್ತಕಿಯವರು ಪಾಲ್ಗೊಂಡು, ೫೦ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ವರ್ಷದುದ್ದಕ್ಕೂ ಸಾದರ ಪಡಿಸಿದರು. ಏಕ ವ್ಯಕ್ತಿ ನೃತ್ಯ ಪ್ರದರ್ಶನ, ದ್ವಂದ್ವ ನೃತ್ಯ ಪ್ರದರ್ಶನ, ನೃತ್ಯನಾಟಕಗಳು ಪ್ರದರ್ಶಿತಗೊಂಡವು . ಪ್ರತಿತಿಂಗಳೂ ನೃತ್ಯ ಕಾರ್ಯಾಗಾರಗಳು ನಡೆದು ಸುವರ್ಣ ಮಹೋತ್ಸವವನ್ನು ಇನ್ನೂ ಹೆಚ್ಚು ಅರ್ಥಪೂರ್ಣವಾಗುವಂತೆ ಮಾಡಿದವು.

ಸಮಾರೋಪ ಸಮಾರಂಭದ ದಿನ ನೃತ್ಯಕ್ಷೇತ್ರದಲ್ಲಿ ಅವಿರತವಾಗಿ ತಮ್ಮನ್ನು ತೊಡಗಿಸಿಕೊಂಡ ಅನೇಕ ಮಹನೀಯರಿಗೆ ಸನ್ಮಾನ ಮಾಡಿ ಆ ಮೂಲಕ ಕೇಶವ ನೃತ್ಯಶಾಲೆ ತನ್ನ ಘನತೆಯನ್ನೂ ಹೆಚ್ಚಿಸಿಕೊಂಡಿತು.

ಕನ್ನಡ ಕವಿಕಾವ್ಯ ಪರಂಪರೆ: ಆದಿಕವಿ ಪಂಪನಿಂದ ಪ್ರಾರಂಭವಾಗಿ ನವೋದಯದವರೆಗೂ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ತಮ್ಮ ಕಾವ್ಯ ಕೃತಿಗಳ ಮೂಲಕ ಅಪಾರವಾದ ಹೆಸರು ಮಾಡಿರುವ ಸುಮಾರು ಇಪ್ಪತ್ತು ಕವಿವರ್ಯರ ಕೃತಿಗಳನ್ನು ನೃತ್ಯದ ಮೂಲಕ ರಂಗಕ್ಕೆ ತರಬೇಕೆಂಬ ಆ ಯೋಜನೆ ೧೯೫ರಲ್ಲಿ ಪ್ರಾರಂಭವಾಯಿತು. ಈ ಮಾಲಿಕೆಯ ಅಡಿಯಲ್ಲಿ ಈಗಾಗಲೇ ಹನ್ನೊಂದು ಕವಿಗಳ ಕಾವ್ಯಗಳನ್ನು ರಂಗದ ಮೇಲೆ ತಂದಿದ್ದು ಇನ್ನೂ ಆರು ಕವಿಗಳ ಕಾವ್ಯಗಳನ್ನು ಪ್ರದರ್ಶನಕ್ಕೆ ಸಿದ್ಧಪಡಿಸುತ್ತಿದ್ದಾರೆ.

ಮುಖ್ಯವಾಗಿ ಆದಿಕವಿ ಪಂಪನ ಭರತ ಬಾಹುಬಲಿ, ರನ್ನನ, ಗದಾಯುದ್ಧ, ನಾಗವರ್ಮನ ಕಾದಂಬರಿ, ಜನ್ನನ ಯಶೋಧರ ಚರಿತೆ, ನಾಗಚಂದ್ರನ ರಾಮಚಂದ್ರ ಚರಿತ ಪುರಾಣ, ನೇವಿ ಚಂದ್ರನ ಲೀಲಾವತಿ ಪ್ರಬಂಧ, ಹರಿಹರನ ಗಿರಿಜಾ ಕಲ್ಯಾಣ, ರಾಘವಾಂಕನ ಹರಿಶ್ಚಂದ್ರ ಕಾವ್ಯ, ಚಾಮರಸನ ಪ್ರಭುಲಿಂಗಲೀಲೆ, ನಾರಣಪ್ಪನ ಕುಮಾರವ್ಯಾಸ ಭಾರತ ಮುಂತಾದ ನೃತ್ಯ ನಾಟಕಗಳು ಜನಮನ್ನಣೆಗೆ ಪಾತ್ರವಗಿವೆ. ಹಾಗೆಯೇ ಕನ್ನಡ ಮತ್ತು ಸಂಸ್ಕೃತ ಭಾಷೆಯ ಸಾಹಿತ್ಯ ಉಳ್ಳ ೩೦ಕ್ಕೂ ಹೆಚ್ಚು ನೃತ್ಯ ನಾಟಕಗಳನ್ನು ಸಂಯೋಜಿಸಿ ಪ್ರದರ್ಶಿಸಿದ ಹೆಗ್ಗಳಿಕೆಯೂ ಕೇಶವಮೂರ್ತಿ ಅವರದ್ದಾಗಿದೆ. ಶ್ರೀ ಎಚ್‌.ಆರ್. ಕೇಶವಮೂರ್ತಿ ಅವರ ಪತ್ನಿ ಶಾರದಮ್ಮ, ಕೆಲಮಟ್ಟಿಗೆ ವೀಣಾ ವಾದನದಲ್ಲಿ ಪರಿಶ್ರಮ ಉಳ್ಳವರಾಗಿದ್ದಾರೆ. ಪುತ್ರಿ ವಸಂತ ಲಕ್ಷ್ಮಿ ತಮ್ಮದೇ ಆದ ವಿಶ್ರುತ ನೃತ್ಯ ಶಾಲೆ ನಡೆಸುತ್ತಿದ್ದು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ನೃತ್ಯ ಪ್ರಾಧ್ಯಾಪಕಿ ಆಗಿದ್ದಾರೆ, ಮತ್ತೊಬ್ಬ ಪುತ್ರಿ ಸುಮಿತ್ರಾ ದೇವಿ ಕೇಶವಮೂರ್ತಿ ಅವರೇ ನಡೆಸುತ್ತಿರುವ ವೆಂಕಟೇಶ ವಿದ್ಯಾಲಯದಲ್ಲಿ ಮುಖ್ಯೋಪಾಧ್ಯಾಯಿನಿ, ಹಿರಿಯ ಪುತ್ರ ಬಿ.ಕೆ. ಶ್ಯಾಂಪ್ರಕಾಶ್‌ಆಕಾಶವಾಣಿ ನಿಲಯದ ವೀಣಾ ಕಲಾವಿದೆ. ಮತ್ತಿಬ್ಬರು ಪುತ್ರರಾದ ರಾಮ್‌ಕುಮರ ಮತ್ತು ರವಿಶಂಕರ ರೂಪಾ ಉತ್ತಮ ನೃತ್ಯ ಪಟುವಾಗಿದ್ದಾರೆ.

ಸಾಂಘಿಕ-ಚಟುವಟಿಕೆಗಳು: ತಮ್ಮ ಐವತ್ತೈದು ವರ್ಷದ ಕಲಾಜೀವನದಲ್ಲಿ ಗುರು-ಶ್ರೀ ಕೇಶವಮೂರ್ತಿಯವರು ತಮ್ಮ ನೃತ್ಯಶಾಲೆ ಮಾತ್ರವಲ್ಲದೆ ನೃತ್ಯಕ್ಕೆ ಸಂಬಂಧ ಪಟ್ಟ ಹಲವಾರು ಸಂಘ ಸಂಸ್ಥೆಗಳಲ್ಲೂ ಪಾತ್ರ ವಹಿಸಿದ್ದಾರೆ. ನೃತ್ಯ ಕಲಾವಿದರ ಏಳಿಗೆಗಾಗಿ ಕರ್ನಾಟಕ ನೃತ್ಯ ಕಲಾ ಪರಿಷತ್ತನ್ನು ಸ್ಥಾಪಿಸಿ ಅದರ ಅಧ್ಯಕ್ಷರಾಗಿ ಹಲವಾರು ವರ್ಷಗಳು ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಸೆಕೆಂಡರಿ ಬೋರ್ಡ್ ನಡೆಸುವ ನೃತ್ಯ ಪರೀಕ್ಷೆಗಳ ಪಠ್ಯವಸ್ತು ಸಮಿತಿಗೆ ಅಧ್ಯಕ್ಷರಾಗಿ ನೃತ್ಯಕ್ಕೆ ಸಂಬಂಧಿಸಿದಂತೆ ಪಠ್ಯವನ್ನು ನಿರ್ದಿಷ್ಟಗೊಳಿಸಿದ್ದಾರೆ. ಭರತನಾಟ್ಯದ ಮಾಧ್ಯಮಿಕ ದರ್ಜೆ ಪಠ್ಯ ಪುಸ್ತಕ ಸಮಿತಿಗೆ ಅಧ್ಯಕ್ಷರಾಗಿದ್ದು ಪುಸ್ತಕ ಹೊರತಂದಿದ್ದಾರೆ. ಹಲವಾರು ವರ್ಷ ನೃತ್ಯ ಪರೀಕ್ಷೆಗಳ ಮೌಲ್ಯ ಮಾಪನದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.

ನೃತ್ಯದ ಬಗ್ಗೆ ಹಲವಾರು ಸೋದಾಹರಣ ಭಾಷಣಗಳನ್ನೂ,ಪ್ರಾತ್ಯ ಕ್ಷಿಕೆಗಳನ್ನೂ ನಡೆಸಿಕೊಟ್ಟಿರುವ ಶ್ರೀಯುತರು ನಾಟ್ಯವಿಚಾರ ಸಂಗ್ರಹ ಎಂಬ ಪುಸ್ತಕದಲ್ಲಿ ತಮ್ಮ ಅನೇಕ-ಚಿಂತನೆಗಳನ್ನು, ಭಾಷಣಗಳನ್ನು ಉದಾಹರಿಸಿದ್ದಾರೆ.

ಭರತನಾಟ್ಯಕ್ಕೆ ಬೇಕಾದ ಜತಿಸ್ವರ, ಶೃಂಗಾರ ಪದಗಳು, ಶಬ್ದ, ವರ್ಣ, ತಿಲ್ಲಾನ, ನವರಸ ರಾಮಾಯಣಗಳನ್ನು ರಚಿಸಿರುವುದಲ್ಲದೆ ಹಲವಾರು ನೃತ್ಯನಾಟಕಗಳಿಗೆ ತಮ್ಮ ಸಾಹಿತ್ಯವನ್ನು ಅಳವಡಿಸಿದ್ದಾರೆ.

ಇವರಿಗೆ ೧೯೮೧ರಲ್ಲಿ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾ ತಿಲಕ ಪ್ರಶಸ್ತಿ, ೧೯೯೦ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೧೯೯೪ರಲ್ಲಿ ಬೆಂಗಳೂರು ಗಾಯನ ಸಮಾಜದಿಂದ ವರ್ಷದ ಕಲಾವಿದ ಪ್ರಶಸ್ತಿ, ೧೯೯೮ರಲ್ಲಿ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಶಾಂತಲಾ ಪ್ರಶಸ್ತಿ, ೨೦೦೦ದಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರಗಳಲ್ಲದೆ ೧೯೯೦ರಲ್ಲಿ ಕರ್ನಾ ಟಕ ನೃತ್ಯ ಕಲಾಪರಿಷತ್ತಿನ ನೃತ್ಯ ಕಲಾಶಿರೋಮಣಿ ಪ್ರಶಸ್ತಿ, ೧೯೯೩ರಲ್ಲಿ ಕರ್ನಾಟಕ ನವೋದಯದ ಅಚಲ ಪ್ರಶಸ್ತಿ ಹಾಗೂ ಇನ್ನೂ ಹಲವಾರು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿಸಿವೆ.

Categories
ಕಲೆ ನೃತ್ಯ ಭರತನಾಟ್ಯ

ಮೃಗಶೀರ್ಷ ಹಸ್ತ

ಕೃತಿ: : ಕಲೆ, ನೃತ್ಯ, ಭರತನಾಟ್ಯ
ಲೇಖಕರು: ಕಲೆ, ನೃತ್ಯ, ಭರತನಾಟ್ಯ
ಕೃತಿಯನ್ನು ಓದಿ

Categories
ಕಲೆ ನೃತ್ಯ ಭರತನಾಟ್ಯ

ಪದ್ಮಕೋಶ ಹಸ್ತ

ಲಕ್ಷಣ: ಎಲ್ಲ ಬೆರಳುಗಳನ್ನು ವಿರಳವಾಗಿ ಮಾಡಿ ಬೆರಳುಗಳ ತುದಿಯನ್ನು ಸ್ವಲ್ಪವಾಗಿ ಮಡಿಸಿ ಒಂದಕ್ಕೊಂದು ಸೇರುವಂತೆ, ಧನುಸ್ಸಿನಂತೆ ಬಗ್ಗಿಸಿದರೆ ಪದ್ಮಕೋಶ ಎಂದರೆ ಕಮಲದ ಮೊಗ್ಗು, ಅಥವಾ ಪೂರ್ಣವಾಗಿ ಅರಳದ ಕಮಲ ಎಂದರ್ಥ. ದಿನನಿತ್ಯ ಜೀವನದಲ್ಲಿ ಉಗುರು ಸೂಚಿಸಲು, ಚಿಕ್ಕದು ಎನ್ನಲು, ಗುಂಡಗಿರುವುದು, ಚೆಂಡು, ಊಟ ಮಾಡುವಾಗ ಮುಂತಾದವುಗಳ ಸಂವಹನ ಮಾಡಲು ಉಪಯೋಗಿಸಲಾಗುವುದು. ಮಣಿಪುರಿ ನೃತ್ಯದಲ್ಲಿ ಈ ಹಸ್ತಕ್ಕೆ ಶಾರ್ದೂಲಸ್ಯವೆಂದೂ ಕರೆಯುತ್ತಾರೆ.

ಪದ್ಮಕೋಶವನ್ನು ಹೋಲುವ ಮತ್ತೊಂದು ಅಸಂಯುತ ಹಸ್ತವಿದೆ. ಅದೇ ಕದಂಬ ಹಸ್ತ. ಇದರಲ್ಲಿ ಐದು ಬೆರಳುಗಳ ತುದಿಗಳನ್ನು ಸೇರಿಸಿ ಹಿಡಿಯುತ್ತಾರೆ. ಸಾಮಾನ್ಯವಾಗಿ ಪದ್ಮಕೋಶದ ವಿನಿಯೋಗಗಳನ್ನು ಇಲ್ಲಿ ಉಪಯೋಗಿಸಬಹುದು. ಹಸ್ತ ಮುಕ್ತಾವಳಿಯಲ್ಲಿ ಇದು ಉಲ್ಲೇಖಿತವಾಗಿದೆ.
ವಿನಿಯೋಗ: ಬಿಲ್ವ ಮತ್ತು ಬೇಲದ ಹಣ್ಣುಗಳು, ಸ್ತನಗಳು, ವರ್ತುಲ (ಗುಂಡಗೆ), ಚೆಂಡಿನಿಂದ ಆಡುವುದು, ಕುಡಕೆ (ಭರಣಿ), ಊಟ ಮಾಡುವುದು, ಹೂವಿನ ಮಧ್ಯಭಾಗ, ಮಾವಿನ ಹಣ್ಣು, ಹೂಮಳೆ, ಹೂಗುಚ್ಚ, ಜಪಭಾವವನ್ನು ಸೂಚಿಸುವುದು, ಘಂಟಾರೂಪವನ್ನು ತೋರಿಸುವುದು, ಹುತ್ತ, ನೈದಿಲೆ, ಮೊಟ್ಟೆ, ಅಲಂಕಾರ ಭೂಷಣ. ನಾರಂಗಿವೃಕ್ಷ.
ಇತರೆ ವಿನಿಯೋಗ: ಮಿಂಚು, ಗಿರಿಕರ್ಣಿಕಾ ಪುಷ್ಪ, ರೆಂಬೆ ಬಗ್ಗಿರುವುದು, ಚಿನ್ನದ ಪಾತ್ರೆ, ಚಕೋರ ಪಕ್ಷಿ, ಯಜ್ಞಗಳಲ್ಲಿಯ ಆಮಿಷ, ದೇವತೆಗಳ ಪೂಜೆಗಾಗಿ ಕೊಡುವ ಬಲಿ, ಅಗ್ರಪಿಂಡ, ಹೂಗಳನ್ನು ಚೆಲ್ಲುವುದು, ಗಡ್ಡಧಾರಿ, ಕಾಣಿಕೆ, ತಟ್ಟೆ, ಪಿಂಡ, ನೈದಿಲೆ, ೫ ತಲೆಹಾವು, ಕಲ್ಲೆಸೆಯುವುದು, ಪಾರ್ವತಿ-ಚಾಮುಂಡಿಯರೇ ಮೊದಲಾದ ದೇವಿಯರ ದರ್ಶನ.
ಪದ್ಮಕೋಶ ಹಸ್ತವನ್ನು ಕಂಪಿಸುತ್ತಲೇ ಕೆಳಕ್ಕೆ ಹಿಡಿಯುವುದು ಸಪ್ತ ಸ್ವರಗಳಲ್ಲಿ ಒಂದಾದ ನಿಷಾದದ ಸಂಕೇತ. ಪದ್ಮಕೋಶಹಸ್ತವನ್ನು ಸಣ್ಣಗೆ ಅಲ್ಲಾಡಿಸುವುದು ೨೭ ನಕ್ಷತ್ರಗಳ ಪೈಕಿ ಒಂದಾದ ವಿಶಾಖಾ ಎಂತಲೂ, ಪದ್ಮಕೋಶವನ್ನು ಕೆಳಮುಖವಾಗಿ ಹಿಡಿಯುವುದು ಜ್ಯೇಷ್ಠ ನಕ್ಷತ್ರವೆಂದೂ, ಪದ್ಮಕೋಶ ಹಸ್ತಗಳನ್ನು ಬೆಸೆದು ಹೆಬ್ಬೆರಳು ಮತ್ತು ಕಿರುಬೆರಳನ್ನು ಜೋಡಿಸುವುದು ಕುಂಭರಾಶಿಯೆಂದೂ, ಪದ್ಮಕೋಶಗಳನ್ನು ಸ್ವಸ್ತಿಕವಾಗಿರಿಸುವುದು ಪುಗ ವೃಕ್ಷದ ಸಂಕೇತವೆಂದೂ ಅರ್ಥೈಸಲಾಗಿದೆ. ಎಡಕೈಯಲ್ಲಿ ಪದ್ಮಕೋಶವನ್ನು ಕೆಳಮುಖವಾಗಿ ಹಿಡಿದು, ಬಲಗೈಯಲ್ಲಿ ಪತಾಕವನ್ನು ಅದರ ಹಿಂದೆ ಹಿಡಿಯುವುದು ಕರಡಿ ಎಂದು ಸೂಚಿಸುತ್ತದೆ. ಸಂಕರ ಹಸ್ತ ವಿಭಾಗದಲ್ಲಿ ಪದ್ಮಕೋಶವನ್ನು ಮೇಲ್ಭಾಗದಲ್ಲಿ ಹಿಡಿದರೆ ಚಂದ್ರನೆಂದು ಅರ್ಥ.

ಕಥಕ್ಕಳಿಯಲ್ಲಿ ಪದ್ಮಕೋಶವನ್ನು ಊರ್ಣನಾಭವೆಂದು ಕರೆಯುವುದು ವಾಡಿಕೆ. ಊರ್ಣನಾಭ ಎಂದರೆ ಜೇಡರ ಹುಳು ಎಂದು ಅರ್ಥ. ಪದ್ಮಕೋಶದ ಎಲ್ಲಾ ಬೆರಳುಗಳನ್ನು ಇನ್ನೂ ಸ್ವಲ್ಪ ಅಂಗೈಯೊಳಗೆ ಬಾಗಿಸುವುದೇ ಊರ್ಣನಾಭ.

ಊರ್ಣನಾಭದ ವಿನಿಯೋಗ: ಕೂದಲಿನಲ್ಲಿ ಹೇನುಗಳಿದ್ದರೆ ತುರಿಸಿಕೊಳ್ಳುವುದು, ಜಿಂಕೆ೦‌ು ಮುಖ, ಕಪಿ, ಸಿಂಹ, ಕೂರ್ಮ, ತಲೆಯನ್ನು ಕೆರೆದುಕೊಳ್ಳುವುದು, ಕಳ್ಳತನ, ಆಮೆ, ಸ್ತನಗಳು, ಕ್ಷತ್ರಿಯ,ಜಾತಿ, ಕಲಶ, ಜೇಡರಹುಳು, ಕೂದಲು ಹಿಡಿಯುವುದು, ರಕ್ತಕೆಂಪು ಕರ್ಣಿಕಾರ ಹೂ, ತಲೆಬಾಚುವುದು, ಪಂಜವುಳ್ಳ ಮೃಗಗಳು, ನರಸಿಂಹಾವತಾರ, ಕುಷ್ಠ. ಯಕ್ಷಗಾನದಲ್ಲಿ ಕ್ರೂರಮೃಗಗಳು, ರೌದ್ರರಸಕ್ಕೆ ಉಪಯೋಗಿಸುತ್ತಾರೆ. ನಿತ್ಯಜೀವನದಲ್ಲಿ ಭಯಂಕರ, ಕ್ರೂರ, ಕುಷ್ಠ, ಹುಳ, ಕಿರಿಕಿರಿ, ತಲೆಕೆರೆತ ಇತ್ಯಾದಿಗೆ ಬಳಸುತ್ತಾರೆ.

ನಾಟ್ಯಶಾಸ್ತ್ರದಲ್ಲಿ ಉಲ್ಲೇಖಿತವಾದವಾದ ನೃತ್ತ ಹಸ್ತಗಳ ಪೈಕಿ ನಳಿನೀ ಪದ್ಮಕೋಶವೆಂಬ ಹಸ್ತವಿದೆ. ಪದ್ಮಕೋಶ ಹಸ್ತಗಳನ್ನು ವ್ಯಾವೃತ್ತ (ಪಾರ್ಶ್ವಗಳಲ್ಲಿ ಕೈಗಳನ್ನು ಮೇಲಕ್ಕೆತ್ತುವುದು) ಮತ್ತು ಪರಿವರ್ತಿತ(ನಾಟ್ಯಕಾಲದಲ್ಲಿ ಪಾರ್ಶ್ವಗಳಿಂದ ಹಸ್ತಗಳನ್ನು ಮುಂಭಾಗಕ್ಕೆ ತರುವುದು) ವಾಗಿ ತಿರುಗಿಸಿ ಸುತ್ತು ಹಾಕಿಸುವುದೇ ಇದರ ಲಕ್ಷಣ:
ನಳಿನೀ ಪದ್ಮಕೋಶದ ವಿನಿಯೋಗ: ನಾಗಬಂಧ, ಮೊಗ್ಗು, ಸಮನಾಗಿ, ಹಂಚುವುದು, ಹೂಗೊಂಚಲು, ಹತ್ತು ಎನ್ನುವುದಕ್ಕೆ ಮತ್ತು ಗಂಡಭೇರುಂಡ ಪಕ್ಷಿ.