Categories
ಕನ್ನಡ ಕರ್ನಾಟಕ ಸಂಗೀತ ಕಲೆ ವ್ಯಕ್ತಿ ಪರಿಚಯ ಸಂಗೀತ

ವ್ಯಕ್ತಿ ಪರಿಚಯ – ಇ.ಪಿ. ಅಲಮೇಲು

೬-೪-೧೯೩೬ ರಂದು ಮದ್ರಾಸಿನಲ್ಲಿ ಜನಿಸಿದ ಅಲಮೇಲು ಅವರು ಬೆಂಗಳೂರಿನ ‘ಗಾನ ಮಂದಿರಂ’ ಸಂಗೀತಾಲಯದಲ್ಲಿ ಜಿ. ಚೆನ್ನಮ್ಮನವರಿಂದಲೂ ಮುಂದೆ ಆರ್.ಕೆ. ಶ್ರೀನಿವಾಸಮೂರ್ತಿಯವರಲ್ಲೂ ವೀಣಾ ವಾದನವನ್ನು ಅಭ್ಯಾಸ ಮಾಡಿದರು. ವಿದ್ವತ್‌ ಪರೀಕ್ಷೆಯಲ್ಲಿ ಚಿನ್ನದ ಪದಕ ಗಳಿಸಿದರು. ಗಾನ ಮಂದಿರಂನಲ್ಲಿ ಉಪಾಧ್ಯಾಯರಾಗಿ, ಪ್ರಾಂಶುಪಾಲರಾಗಿ ಅನೇಕಾನೇಕ ಶಿಷ್ಯರಿಗೆ ಸಂಗೀತ ಶಿಕ್ಷಣ ನೀಡಿದ್ದಾರೆ. ಆಕಾಶವಾಣಿ, ದೂರದರ್ಶನ ಕೇಂದ್ರಗಳಿಂದ ಇವರ ವೀಣಾ ವಾದನ ಪ್ರಸಾರವಾಗುತ್ತಿರುತ್ತದೆ. ‘ಸಂಸ್ಕೃತ ಸೌರಭ’ಕ್ಕಾಗಿ ಕೆಲವು ರೂಪಕಗಳನ್ನೂ ನೀಡಿದ್ದಾರೆ.

ರಮಣಾಂಜಲಿ ತಂಡದೊಡನೆ ಅಮೆರಿಕಾ, ಇಂಗ್ಲೆಂಡ್‌, ಸಿಂಗಾಪುರ್, ಯೂರೋಪ್‌, ಫಿಲಿಫೈನ್ಸ್‌, ಮಲೇಷಿಯಾ, ಹಾಂಗ್‌ಕಾಂಗ್‌, ಸಿಲೋನ್‌ ಮುಂತಾದ ದೇಶಗಳಲ್ಲಿ ಪ್ರವಾಸ ಮಾಡಿರುವ ಅನುಭವಿ ಕಲಾವಿದರು. ಇವರ ತನಿ ವಾದನದ ‘ದಿ ಎಕ್ಸ್ಟೆಸಿ ಆಫ್‌ ಸಿಕಾಡೆಸ್‌’ ಧ್ವನಿಸುರುಳಿ ಯೂರೋಪ್‌ನಲ್ಲಿ ಬಿಡುಗಡೆ ಕಂಡಿದೆ. ಹಲವಾರು ಧ್ವನಿಸುರುಳಿಗಳಿಗೆ ವೀಣೆಯಲ್ಲಿ ಸಹಕಾರ ನೀಡಿರುತ್ತಾರೆ.

ಗಾಯನ ಸಮಾಜದ ಸಮಿತಿಯ ಸದಸ್ಯೆಯಾಗಿ, ಗಾಯನ ಸಾಮ್ರಾಜ್ಯದ ಸಂಪಾದಕಿಯಾಗಿ, ರಾಜ್ಯ ಪರೀಕ್ಷಾ ಮಂಡಲಿಯಲ್ಲಿ ಪರೀಕ್ಷಕರಾಗಿ, ಪಠ್ಯಪುಸ್ತಕ ಸಮಿತಿಯ ಸದಸ್ಯೆಯಾಗಿ ಹಲವಾರು ರೀತಿಯಲ್ಲಿ ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿಯವರಿಗೆ ‘ಸಂಗೀತ ಕಲಾರವಿಂದ’, ‘ಸೇವಾ ರತ್ನ’, ‘ವೀಣಾ ಪಾಣಿ’, ‘ಕರ್ನಾಟಕ ಕಲಾಶ್ರೀ’ ಮುಂತಾದ ಹಲವು ಸನ್ಮಾನಗಳೂ, ಪ್ರಶಸ್ತಿಗಳೂ ದೊರಕಿವೆ.

ಗುರುರಾಜ ಮಹಿಮೆ, ಶ್ರೀನಿವಾಸ ಕಲ್ಯಾಣ, ಬನಶಂಕರಿ ಮಹಾತ್ಮೆ, ಗಣೇಶ ಪುರಾಣ, ಹನುಮದ್ವಿಲಾಸ – ಸಂಗೀತ ರೂಪಕಗಳನ್ನು ರಾಘವೇಂದ್ರ ಸ್ವಾಮಿಗಳ ರಚನೆಗಳನ್ನು ರಾಗ ತಾಳ ಪ್ರಸಾರದೊಡನೆಯೂ ಪ್ರಕಟಿಸಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ಇವರ ಲೇಖನಗಳೂ ಮುದ್ರಿತವಾಗಿರುತ್ತವೆ.