Categories
ರಂಗಭೂಮಿ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಸಂಜೀವಪ್ಪ ಗಟ್ಟೂರು

ವೃತ್ತಿ ರಂಗಭೂಮಿಯಲ್ಲಿ ಸ್ತ್ರೀ ಪಾತ್ರಗಳನ್ನು ಸೊಗಸಾಗಿ ಅಭಿನಯಿಸುತ್ತ, ಹೆಸರು ಪಡೆದವರು ಸಂಜೀವಪ್ಪ.ಆರ್.ಗಣ್ಣೂರ್ ಅವರು.
ಶ್ರೀ ಕುಮಾರೇಶ್ವರ ಕೃಪಾಪೋಷಿತ ಪಂಡಿತ ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಘದಲ್ಲಿ ಹದಿನಾರನೆಯ ವಯಸ್ಸಿನಿಂದಲೇ ಸಂಗೀತ ಹಾಗೂ ನಾಟಕಗಳಲ್ಲಿ ಸಕ್ರಿಯರಾಗಿದ್ದ ಸಂಜೀವಪ್ಪ ಅರವತ್ತಕ್ಕೂ ಹೆಚ್ಚು ನಾಟಕಗಳಲ್ಲಿ ಸ್ತ್ರೀ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ.
ಅಕ್ಕಮಹಾದೇವಿ, ತವರುಮನೆ, ಮಲಮಗಳು, ನಂಬೆಕ್ಕ, ರತ್ನಹಾರ, ಆದವಾನಿ ಲಕ್ಷ್ಮಮ್ಮ, ಹೀಗೆ ಹಲವಾರು ನಾಟಕಗಳಲ್ಲಿ ಮಹಿಳಾ ಪಾತ್ರಗಳ ಮೂಲಕ ಮನಸೂರೆಗೊಂಡಿರುವ ಸಂಜೀವಪ್ಪ ದಂತಕತೆಯಾಗಿದ್ದಾರೆ. ಇವರಿಗೆ ಕರ್ನಾಟಕ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಗೌರವ ಲಭಿಸಿದೆ.

Categories
ಅಂಕಣಗಳು ಕನ್ನಡ ಕಲೆ ರಂಗಭೂಮಿ ಸಂಗೀತ

ರಂಗಭೂಮಿಯ ನಡಿಗೆ

ವೃತ್ತಿರಂಗಭೂಮಿಯು ಪ್ರಚಲಿತವಾಗಿ ಎಲ್ಲ ಕಡೆ ಚಾಚಿಕೊಂಡು ಕೆಲಸ ನಿರ್ವಹಿಸುತ್ತಾ ಇದ್ದ ಕಾಲದಲ್ಲೇ ಇದನ್ನು ನೋಡುತ್ತಾ ಬಂದ ಒಂದು ಸಮೂಹ ಇದರ ಬಗ್ಗೆ ಯೋಚನೆ ಮಾಡುವ, ಈ ರಂಗಭೂಮಿಯ ಪ್ರಯೋಗಗಳ ವಸ್ತುವಿನ ಕುರಿತಾಗಿ ಅವುಗಳ ಅಭಿವ್ಯಕ್ತಿಯ ಕುರಿತಾಗಿ ಚರ್ಚಿಸುವ ಸಲುವಾಗಿ ಒಂದು ಕಡೆ ಕಲೆತವು. ಈ ಬಗೆಯ ರಂಗಭೂಮಿಯ ಕುರಿತಾಗಿ ಆ ಮನಸ್ಸುಗಳಲ್ಲಿ ಒಂದು ಸಣ್ಣ ಅತೃಪ್ತಿ ಕೆಲಸ ಮಾಡಲು ಪ್ರಾರಂಭಿಸಿತ್ತು. ಅವುಗಳ ಫಲವಾಗಿ ಮತ್ತೊಂದು ಬಗೆಯ ರಂಗಭೂಮಿ ಜೀವ ತಳೆಯಲು ಸಿದ್ಧವಾಯಿತು. ಅಂದಿನ ವೃತ್ತಿ ರಂಗಭೂಮಿ ಪ್ರದರ್ಶಿಸುತ್ತಿದ್ದ ನಾಟಕಗಳ ವಸ್ತು ಆಗಿರಬಹುದು, ಅದರ ರೀತಿಯಾಗಿರಬಹುದು, ಅವು ಸಮಕಾಲೀನ ಸ್ಪರ್ಶವನ್ನು ಪಡೆದುಕೊಳ್ಳದೇ ಹೋಗಿದ್ದ ಕಾರಣಕ್ಕಾಗಿ, ಅಂದಿನ ಜನಜೀವನದ ಆಶೋತ್ತರಗಳನ್ನು ಬಿಂಬಿಸೋಕೆ ಸಾಧ್ಯವಾಗುವಂತಹ ರಂಗಭೂಮಿಯ ಹುಡುಕಾಟದಲ್ಲಿ ಫಲಿಸಿದ್ದೇ ಆಧುನಿಕ ರಂಗಭೂಮಿ.

ಇಲ್ಲಿ ಇವರು ಜೀವನೋಪಾಯಕ್ಕಾಗಿ ರಂಗಭೂಮಿಯನ್ನು ಆಶ್ರಯಿಸಿಕೊಳ್ಳಲಿಲ್ಲ. ಕೇವಲ ಸಂತೋಷಕ್ಕೆ, ಅವರು ತಮ್ಮ ಭೌದ್ಧಿಕ ಚಿಂತನೆಗೆ, ಹೊಸ ಹುಡುಕಾಟಕ್ಕೆ ಪ್ರಚಲಿತವಾಗಿದ್ದಂತಹ ಪೌರಾಣಿಕ ನಾಟಕಗಳ ಮರು ಓದಿಗೆ, ಆಧುನಿಕೆ ಓದಿಗೆ, ಅದರ ಕ್ರಿಯಾಶೀಲ ಚಿಂತನೆಗೆ ಮತ್ತು ಆಧುನಿಕ ಅಭಿವ್ಯಕ್ತಿಗೆ ಹಾತೊರೆದಿದ್ದರು. ಅಂತಹ ಸಂದರ್ಭದಲ್ಲಿ ಹುಟ್ಟಿದ್ದು ಹವ್ಯಾಸಿ ರಂಗಭೂಮಿ. ಆದರೆ ಹವ್ಯಾಸಿ ರಂಗಭೂಮಿಯ ಪ್ರೇಕ್ಷಕರು ಕೇವಲ ಪಟ್ಟಣಿಗರು, ವಿದ್ಯಾವಂತರು, ನಗರವಾಸಿಗಳು, ಮಧ್ಯಮ ವರ್ಗದವರು ಮಾತ್ರವೇ ಆಗಿದ್ದರು. ಈ ರಂಗಭೂಮಿಯ ಕೇಂದ್ರ ಕಾಲೇಜುಗಳಾಗಿದ್ದವು. ಹಾಗಾಗಿ ಕಾಲೇಜು ಅಧ್ಯಾಪಕರು, ಸಂಸ್ಥಾಪಕರು, ಪೋಷಕರು ಮತ್ತು ವಿದ್ಯಾರ್ಥಿಗಳು, ಸರಕಾರಿ ಕಛೇರಿಗಳ ನೌಕರರು, ಬ್ಯಾಂಕ್ ಉದ್ಯೋಗಿಗಳು. ಇವರೆಲ್ಲರೂ ಸೇರಿಕೊಂಡು ರಂಗಚಟುವಟಿಕೆಗಳನ್ನು ನಗರಗಳಲ್ಲಿ ಸಂಜೆಯ ಹೊತ್ತು ಹಮ್ಮಿಕೊಳ್ಳೋಕೆ ಪ್ರಾರಂಭಿಸಿದರು. ಸಾಮಾಜಿಕವಾದ ಸಮಕಾಲೀನ ವಸ್ತುಗಳಿಗೆ ಆದ್ಯತೆ ಇರುತ್ತಿತ್ತು. ಪೌರಾಣಿಕ, ಐತಿಹಾಸಿಕ, ಚಾರಿತ್ರಿಕ ವಸ್ತುಗಳೂ ಕೂಡ ಸಮಕಾಲೀನವಾಗಿ ಪ್ರಸಕ್ತ ಆಗುವ ಹಾಗೆ ರಚಿತಗೊಂಡವು. ಈ ಸಂದರ್ಭದಲ್ಲಿ ನಾಟಕಕಾರ ಕೇಂದ್ರವ್ಯಕ್ತಿಯಾದ. ಆತ ಬರೆದ ಹಾಗೆ ನಾಟಕಗಳನ್ನು ಆಡಿಸಬೇಕಾಗುತ್ತಿತ್ತು. ವೃತ್ತಿರಂಗಭೂಮಿಯ ಆಡಂಬರದ ರಂಗಸಜ್ಜಿಕೆಗೆ, ವಸ್ತ್ರಗಳ ಬದಲಾಗಿ ವಾಸ್ತವ ಮಾರ್ಗದ ರಂಗಸಜ್ಜಿಕೆ, ಪ್ರಯೋಗಗಳು ಬಳಕೆಗೆ ಬಂದವು. ಈ ಸಂದರ್ಭದಲ್ಲಿ ಇಂಥಹ ರಂಗಮಾರ್ಗಕ್ಕೆ ಕಾರಣರಾದವರು ಟಿ.ಪಿ.ಕೈಲಾಸಂ, ಶ್ರೀರಂಗರು ಮತ್ತು ಪರ್ವತವಾಣಿ.

ಬೆಂಗಳೂರಿನಲ್ಲಿ ಇಂಥಹ ಒಂದು ರಂಗಭೂಮಿಯ ಅಂಕುರಾರ್ಪಣವಾದದ್ದು 1909 ರಲ್ಲಿ. The ameatur democratic association ಸ್ಥಾಪನೆಯಾಯಿತು. ನಂತರದ ವರ್ಷಗಳಲ್ಲಿ ಉತ್ತರ ಕರ್ನಾಟಕದಲ್ಲಿ, ಹಳೇ ಮೈಸೂರಿನ ಕಡೆಗಳಲ್ಲಿ ಇದರ ಗಾಳಿ ಬೀಸತೊಡಗಿತು. ಪಾಶ್ಚಾತ್ಯ ವಿದ್ಯಾಭ್ಯಾಸದ ಪದ್ಧತಿಯಿಂದ ಪ್ರಭಾವಿತರಾಗಿ, ಇಂಗ್ಲೆಂಡಿನಲ್ಲಿ ಉಚ್ಚ ಶಿಕ್ಷಣ ಪಡೆದು ಬಂದಂತಹ ಶ್ರೀರಂಗರು, ಟಿ.ಪಿ.ಕೈಲಾಸಂ ಅವರುಗಳು ತಾಯ್ನಾಡಿಗೆ ಮರಳಿದ ಮೇಲೆ ಆಗ ಪ್ರಚಲಿತವಾಗಿದ್ದ ರಂಗಭೂಮಿಯನ್ನು ಕಂಡು ರೋಸಿ ಹೋಗಿ, ಹೊಸ ಮಾದರಿಯ ರಂಗಭೂಮಿ ನಿರ್ಮಿಸಲು ಪ್ರಯತ್ನಿಸಿದರು. ಸಾಮಾಜಿಕ ನಾಟಕಗಳ ಕಡೆ ಎಲ್ಲರ ಗಮನ ಸೆಳೆದರು. ನಂತರ ಪರ್ವತವಾಣಿಯವರು ಸಹ ಆ ಸಾಲಿಗೇ ಸೇರ್ಪಟ್ಟರು. ವಸ್ತು, ತಂತ್ರಗಾರಿಕೆ, ಅಭಿನಯ ಶೈಲಿ ಎಲ್ಲವೂ ಬದಲಾದವು. ಪಾಶ್ಚಾತ್ಯ ನಾಟಕಗಳ ಅನುವಾದಗಳು, ರಂಗರೂಪಗಳು, ಸ್ವತಂತ್ರ ಕೃತಿಗಳು ಹೆಚ್ಚು ಹೆಚ್ಚು ಬರಲಾರಂಭಿಸಿದವು. ಮಾಸ್ತಿ ವೆಂಕಟೇಶ ಅಯ್ಯಂಗಾರ್, ದ.ರಾ.ಬೇಂದ್ರೆ, ಸಿ.ಕೆ.ವೆಂಕಟರಾಮಯ್ಯ, ಲಕ್ಷ್ಮಣರಾವ್ ಬೇಂದ್ರೆ, ನಾರಾಯಣ ರಾವ್ ಹುಯಿಲಗೋಳ್ ಎಲ್ಲರೂ ಈ ಕೈಂಕರ್ಯಕ್ಕೆ ಕೈ ಜೋಡಿಸಿದರು. ಆದರೆ ಎಲ್ಲವೂ ಮಾತಿಗೆ ಪ್ರಾಶಸ್ತ್ಯ ಇರುವಂತಹ ನಾಟಕಗಳಾಗಿ ಹೊರಹೊಮ್ಮಿದವು. ಮಾತಿನ ಚಮತ್ಕಾರದ ವ್ಯಾಮೋಹದಿಂದ ವಿದ್ಯಾವಂತ ಜನಗಳನ್ನು ಸೆಳೆಯುವಲ್ಲಿ ಸಮರ್ಥವಾಯಿತು. ಹಾಡು, ಕುಣಿತ, ವೈಭವಗಳೆಲ್ಲ ಮರೆಯಾದವು. ನಿರ್ದೇಶಕನ ಕೈ ಚಳಕವೆಂಬುದು ಕಾಣೆಯಾಗಿತ್ತು.

ಇದು ಹೀಗೆ ಬಹಳಷ್ಟು ವರ್ಷಗಳ ಕಾಲ ನಡೆಯಿತು. ನಂತರದ ಅವಧಿಯಲ್ಲಿ ದೇಶದಲ್ಲಿ ಒಂದು ಕ್ರಾಂತಿಕಾರಕ ಬೆಳವಣಿಗೆಯಾಯಿತು. ಕಮಲಾದೇವಿ ಚಟ್ಟೋಪಾದ್ಯಾಯ ಅವರ ಬಹುದಿನದ ಕನಸು “National school of Drama” ಸ್ಥಾಪಿತಗೊಂಡಿತು. ರಂಗಭೂಮಿಯನ್ನು ಶೈಕ್ಷಣಿಕವಾಗಿ ಕಲಿಯುವಂತಹ ಒಂದು ವ್ಯವಸ್ಥೆ ಜಾರಿಯಾಯಿತು. ಈ ಸಂಸ್ಥೆಯಲ್ಲಿ ಕರ್ನಾಟಕದಿಂದಲೂ ಬಹಳಷ್ಟು ಜನ ಅಲ್ಲಿಗೆ ತೆರಳಿ ಕಲಿತುಬಂದರು. ಅಲ್ಲಿಂದ ಕಲಿತುಬಂದವರಲ್ಲಿ ಬಿ.ವಿ.ಕಾರಂತರು ಪ್ರಾಯೋಗಿಕ ರಂಗಭೂಮಿಯ ಅಭ್ಯುದಯಕ್ಕೆ ಕಾರಣರಾದರು. ಜೊತೆಗೇ ಬಿ.ಚಂದ್ರಶೇಖರ್, ಆರ್.ನಾಗೇಶ್, ಪ್ರಸನ್ನ, ಸಿ.ಜಿ.ಕೃಷ್ಣಸ್ವಾಮಿ, ನರಸಿಂಹನ್, ಮೈಸೂರಿನ ಸಿಂಧುವಳ್ಳಿ ಅನಂತಮೂರ್ತಿ, ನ.ರತ್ನ, ವಿಶ್ವನಾಥ ಮಿರ್ಲೆ, ಹೀಗೇ ಹಲವರು ಇಂತಹ ಪ್ರಯೋಗಗಳನ್ನು ನಿರಂತರವಾಗಿ ಮಾಡುತ್ತಲೇ ಬಂದರು. ಹೀಗೆ ಬೆಂಗಳೂರಿನಲ್ಲಿ ಕೆಲಸ ಮಾಡಿದವರದ್ದೊಂದು ದೊಡ್ಡ ಪಟ್ಟಿಯೇ ನೀಡಬಹುದು.

ರಂಗಭೂಮಿಯ ಸುವರ್ಣಯುಗ ಎಂದೇ ಕರೆಯಲ್ಪಡುವ 1970-80 ರ ದಶಕದ ನಾಟಕಗಳಂತು ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾದವು. ಹಾಡು, ಕುಣಿತದ ಜೊತೆ ಜೊತೆಯಲ್ಲೇ ಆಧುನಿಕ ಚಿಂತನೆಯೂ ಬೆರೆತುಕೊಂಡಿತು. ಹಲವಾರು ಜಾನಪದ ಪ್ರಕಾರಗಳನ್ನು ನಾಟಕದೊಳಗೆ ಮಿಳಿತಗೊಳ್ಳುವ ಹಾಗೆ ನಿರ್ದೇಶಕರು ಹೊಸತನವನ್ನು ತಂದರು. ರಂಗಭೂಮಿ ಎಂಬುದು ಸಂಭ್ರಮದ ಚಟುವಟಿಕೆಯಾಗಿ ಪರಿಣಮಿಸಿತು. ಇದರ ಪ್ರಭಾವ ಇಡೀ ಕರ್ನಾಟಕದಾದ್ಯಂತ ಹರಡಿತು. ಗಿರೀಶ್ ಕಾರ್ನಾಡ್, ಲಂಕೇಶ್ ಮತ್ತು ಚಂದ್ರಶೇಖರ ಕಂಬಾರರ ಭರಾಟೆ ಶುರುವಾಗಿದ್ದು ಇದೇ ಕಾಲಘಟ್ಟದಲ್ಲಿ. ಕಾಲೇಜು ವಿದ್ಯಾರ್ಥಿಗಳಲ್ಲಿ ರಂಗಭೂಮಿಯ ಬಗ್ಗೆ ಆಯಸ್ಕಾಂತದಂತಹ ಸೆಳೆತ ಪ್ರಾರಂಭವಾಯಿತು. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಡ್ಯಾನ್ಸ್,ಡ್ರಾಮಾ, ಮ್ಯೂಸಿಕ್ ವಿಭಾಗ ತೆರೆಯಲ್ಪಟ್ಟಿತು. ಕಾಲೇಜು ಕಾಲೇಜುಗಳ ನಡುವೆ ನಾಟಕ ಸ್ಪರ್ಧೆಗಳು ಏರ್ಪಟ್ಟವು. ರಂಗ ಶಿಬಿರಗಳು ಹಮ್ಮಿ ಕೊಂಡವು. ರಂಗಭೂಮಿಗೆ ಒಂದಲ್ಲ ಒಂದು ರೀತಿಯಲ್ಲಿ ವೃತ್ತಿಪರತೆಯ ಸಮೀಕರಣವೊಂದು ಅಗತ್ಯ – ಎಂಬ ಸ್ಪಷ್ಟವಾದ ಅರಿವೊಂದು ಕಾಣಿಸಕೊಳ್ಳತೊಡಗಿತು.

ಇಂಥ ಸಂದರ್ಭದಲ್ಲಿ ಕರ್ನಾಟಕಕ್ಕೆ ಬಂದ ಬಿ.ವಿ.ಕಾರಂತರ ರಂಗಪ್ರಯೋಗಗಳು ಕನ್ನಡ ಹವ್ಯಾಸಿ ರಂಗಭೂಮಿಗೆ ಹೊಸ ದಿಕ್ಕೊಂದನ್ನು ತೆರೆಸಿದವು. ೧೯೬೭ ರಲ್ಲಿ ಶ್ರೀರಂಗರ ನೀಕೊಡೆ ನಾ ಬಿಡೆ ಪ್ರಯೋಗದಿಂದ ಆರಂಭಿಸಿದ ಕಾರಂತರು ಮುಂದಿನ ಐದಾರು ವರ್ಷಗಳಲ್ಲಿ ನಿರ್ದೇಶನ ಮತ್ತು ಅನೌಪಚಾರಿಕ ರಂಗಶಿಕ್ಷಣಗಳಿಗೆ ಸಂಬಂದಿಸಿದ ಮುಖ್ಯ ಕೆಲಸಗಳನ್ನು ಮಾಡಿದರು. ೧೯೭೨ ರಲ್ಲಿ ಅವರು ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಪ್ರಯೋಗಿಸಿದ ಸಂಕ್ರಾಂತಿ, ಜೋಕುಮಾರಸ್ವಾಮಿ ಮತ್ತು ಈಡಿಪಸ್ ಪ್ರಯೋಗಗಳು ಒಂದು ಪ್ರಮುಖ ಮೈಲಿಗಲ್ಲೆಂದು ಪರಿಗಣಿತವಾಗಿವೆ. ಒಂದೇ ಮಾತಿನಲ್ಲಿ ಬಿ.ವಿ.ಕಾರಂತರ ರಂಗ ಆವಿಷ್ಕಾರವನ್ನು ಸಂಗ್ರಹಿಸಿ ಹೇಳುವುದಾದರೆ ಅದು ವೃತ್ತಿ ಮತ್ತು ಹವ್ಯಾಸಿ ರಂಗಮಾರ್ಗಗಳೆರಡರ ಪರಿಣಾಮಕಾರಿ ಸಮೀಕರಣ, ಅರ್ಥಾತ್, ಆದ್ಯರಂಗಾಚಾರ್ಯರು ತಾತ್ವಿಕವಾಗಿ ಏನನ್ನು ಹೇಳಿದ್ದರೋ ಅದನ್ನು ಕಾರಂತ ಪ್ರಯೋಗಗಳು ಕಲಾತ್ಮಕವಾಗಿ ಸಾಕ್ಷಾತ್ಕರಿಸಿ ತೋರಿಸಿದವು. ಮೊದಲನೆಯದಾಗಿ ಈ ಪ್ರಯೋಗಗಳಲ್ಲಿ ದೃಶ್ಯವೈಭವ ಮರಳಿ ಬಂತು.ಸಂಗೀತ ನೃತ್ಯಗಳೂ ಮತ್ತೊಮ್ಮೆ ರಂಗಕ್ಕೆ ಬಂದವು. ಕಾರಂತರದ್ದೇ ವಿಶಿಷ್ಟ ಛಾಪಿನ ಸಂಗೀತದಲ್ಲಿ ಮಾತು- ಗೀತಗಳೆರಡನ್ನೂ ಸಮರ್ಥವಾಗಿ ಮೇಳೈಸಿಕೊಂಡ ಕಂಪೆನಿ ಸಂಗೀತದ ಸೃಜನಶೀಲ ಪುನರಾವಿಷ್ಕಾರ ಸಾಧಿತವಾಯಿತು.

ಪ್ರಸನ್ನ ಅವರು ರಂಗಭೂಮಿಯನ್ನು ಚಳುವಳಿಯಾಗಿ ಮಾರ್ಪಡಿಸಿ ಸಮುದಾಯ ಸಂಸ್ಥೆ ಕಟ್ಟಿದರು. ಆ ಮೂಲಕ ಪ್ರಗತಿಪರ ಆಧುನಿಕ ಚಿಂತನೆಯೊಂದು ರಾಜ್ಯಾದ್ಯಂತ ಹರಡಿತು. ರಾಜಕೀಯ ನಾಟಕಗಳೂ ರೂಪುಗೊಂಡವು. ಬೀದಿ ನಾಟಕಗಳ ಮೂಲಕ ಆಳುವ ವರ್ಗಕ್ಕೆ ಸಡ್ಡು ಹೊಡೆದರು. ಈ ನಡುವೆ ಎ.ಎಸ್.ಮೂರ್ತಿಯವರೂ ಕೂಡ ತಮ್ಮ ಚಿತ್ರಾ ತಂಡದೊಂದಿಗೆ ಜನರಲ್ಲಿ ಜಾಗೃತಿ ಮೂಡುವಂತಹ ವಿಷಯಗಳ ಕುರಿತಾಗಿ ಬೀದಿ ನಾಟಕಗಳನ್ನು ಆಡುವುದರ ಮೂಲಕ ನಾಟಕಗಳಿಗೊಂದು ಹೊಸ ಆಯಾಮ ಕೊಡುತ್ತಿದ್ದರು.

ಭೂಪಾಲ್, ಎನ್.ಎಸ್.ಡಿ ರೆಪರ್ಟರಿ ನಾಟಕಗಳು ಪ್ರದರ್ಶನಕ್ಕಾಗಿ ಬೆಂಗಳೂರಿಗೆ ಬರುತ್ತಿದ್ದವು. ಅದರಿಂದಾಗಿ ನಗರಗಳಲ್ಲಿನ ಕಲಾವಿದರು ಭಾರತೀಯ ರಂಗಭೂಮಿಯ ಅನುಭವಗಳಿಗೆ ತೆರೆದುಕೊಂಡರು.ಅದೇ ವೇಳೆ ಹೆಗ್ಗೋಡಿನಲ್ಲಿ ಮೊಟ್ಟ ಮೊದಲ ಬಾರಿಗೆ ಕೆ.ವಿ.ಸುಬ್ಬಣ್ಣ ಅವರಿಂದ ನೀನಾಸಂ ತಿರುಗಾಟ ದ ಕಲ್ಪನೆಯ ರೆಪರ್ಟರಿಯು ಕರ್ನಾಟಕದಾದ್ಯಂತ ತಿರುಗಾಟ ಮಾಡುತ್ತಿತ್ತು. ವರುಷಕ್ಕೊಮ್ಮೆ ಬೆಂಗಳೂರಿಗೆ ಭೇಟಿ ನೀಡಲು ಆರಂಭಿಸಿದವು.

ಆಗ ರಂಗಭೂಮಿ ಮತ್ತಷ್ಟು ಶಿಸ್ತಿಗೆ ಒಳಪಡಲು ಪ್ರಾರಂಭವಾಯಿತು. ಹೆಚ್ಚು ಹೆಚ್ಚು ಜನ ರಂಗಭೂಮಿಯನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಲು ಹಾತೊರೆದರು. ಬಿ.ವಿ.ಕಾರಂತರು ಮೈಸೂರಿನಲ್ಲಿ ರಂಗಾಯಣವನ್ನು ಪ್ರಾರಂಭಿಸಿದರು.

ಇದೇ ಸಂದರ್ಭದಲ್ಲಿ ಕನ್ನಡ ರಂಗಭೂಮಿಗೆ ನಗರಗಳಲ್ಲಿ ಒಂದು ದೊಡ್ಡ ಸಮಸ್ಯೆ ಎದುರಾಯಿತು. ಟಿ.ವಿ. ಚಾನೆಲ್ ಗಳು ಒಂದಾದ ಮೇಲೊಂದರಂತೆ ಬರಲು ಪ್ರಾರಂಭವಾದವು. ಕಾರ್ಯಕ್ರಮಗಳು ರೂಪುಗೊಳ್ಳತೊಡಗಿದವು. ಆಗ ಕಲಾವಿದರಿಗೆ ಬೇಡಿಕೆ ಹೆಚ್ಚಾಯಿತು. ಇಂಥಹ ಬೇಡಿಕೆಗಳನ್ನು ಈಡೇರಿಸಲು ನಗರದ ಕಲಾವಿದರೆಲ್ಲ ಸಾಲುಗಟ್ಟಿ ನಿಂತರು. ಬೆಂಗಳೂರಿನವರದ್ದೇ ದೊಡ್ಡಪಾಲು. ಆ ಸಂದರ್ಭದಲ್ಲಿ ರಂಗಭೂಮಿಯ ಕಡೆಗೆ ಒಲವಿದ್ದರೂ ಕೆಲಸದ, ಕಾಸಿನ ಆಕರ್ಷಣೆಯಿಂದಾಗಿ ಟಿ.ವಿ ಕಾರ್ಯಕ್ರಮಗಳಿಗೆ ಮನಸೋತರು. ಜನರು ಅವರನ್ನು ಗುರುತಿಸಲು ಆರಂಭಿಸಿದರು. ಆಗ ನಟ ತನ್ನೊಳಗೆ ಮೆಲ್ಲಗೆ ತಾನು ಶ್ರೇಷ್ಟನೆಂಬ ನಂಬಿಕೆಯನ್ನು ನಂಬುತ್ತಾ ಸಾಗಿದ. ರಂಗಭೂಮಿಯೆಡೆಗೆ ಬರಲು ಪುರುಸೊತ್ತು ಇಲ್ಲದ ಹಾಗಾಯಿತು. ಬಂದರೂ ತಡವಾಗಿ ಬರುವುದು, ಒಂದು ದಿನ ಬಂದರೆ ಮತ್ತೊಂದು ದಿನ ಬಾರದೇ ಇರುವುದು ಪ್ರಾರಂಭವಾಯಿತು. ಹಾಗಾಗಿ ಬೆಂಗಳೂರಿನಲ್ಲಿ ರಂಗಭೂಮಿ ನರಳಲು ಪ್ರಾರಂಭಿಸಿತು. ಬರುವವರೂ ಕೂಡ ಟಿ.ವಿ.ಗಳಲ್ಲಿ ಅವಕಾಶ ಸಿಗಬಹುದೆಂಬ ಆಸೆಯಿಂದ ಬರತೊಡಗಿದರು. ಹಾಗಾಗಿ ಕಲಾವಿದರ ಆಸಕ್ತಿ ರಂಗಭೂಮಿಯ ಆಚೆಗೆ ವಿಸ್ತರಿಸಿಕೊಂಡಿತು.

ಆದರೆ ಇದೇ ಸಂದರ್ಭದಲ್ಲಿ ನೀನಾಸಂ ಸಂಸ್ಥೆಯಿಂದ ಡಿಪ್ಲಮೋ ಪಡೆದಂತಹ ಬಹಳಷ್ಟು ಜನ ವಿದ್ಯಾರ್ಥಿಗಳು ಮತ್ತು ರಂಗಭೂಮಿಯಲ್ಲಿ ಸಾತ್ವಿಕ ಆಸಕ್ತಿ ಉಳ್ಳಂತಹ ಕೆಲವು ಹವ್ಯಾಸೀ ನಿರ್ದೇಶಕರು ಕಾಲೇಜು ರಂಗಭೂಮಿಯಲ್ಲಿ ಸಕ್ರಿಯರಾದರು. ಬೆಂಗಳೂರಿನ ಕಾಲೇಜು ನಾಟಕೋತ್ಸವವಂತೂ ಡಿಪ್ಲಮೋ ಪಡೆದು ಬಂದಿರುವ ವಿದ್ಯಾರ್ಥಿಗಳಿಗೆ ಲ್ಯಾಬೋರೇಟರಿಗಳಂತಾಗಿಬಿಟ್ಟವು. ಕಾಲೇಜುಗಳೂ ಕೂಡ ಲಕ್ಷಗಟ್ಟಲೆ ಖರ್ಚು ಮಾಡಿ ಕಾಲೇಜಿನಲ್ಲಿ ನಾಟಕಗಳನ್ನು ಆಯೋಜಿಸುತ್ತಿದ್ದರು. ಇದು ನಿಜಕ್ಕೂ ಎಲ್ಲರಿಗೂ ಅಚ್ಚರಿ ಹುಟ್ಟಿಸುವಂತಹ ಒಂದು ಬದಲಾವಣೆಯನ್ನು ತಂದಿತು. ಅಲ್ಲಿ ಅತ್ಯಂತ ಆಸಕ್ತಿದಾಯಕವಾದ ನಾಟಕಗಳು ರೂಪುಗೊಂಡವು. ಈ ಸಂಚಲನದಿಂದಾಗಿ ಮತ್ತೆ ಕನ್ನಡ ರಂಗಭೂಮಿ ಚಿಗುರಿಕೊಂಡಿತು. ಬೇರೆ ಬೇರೆ ನಗರಗಳಲ್ಲೂ ಕಾಲೇಜು ರಂಗೋತ್ಸವಗಳು ಪ್ರಾರಂಭವಾದವು.

೨೦೦೦ ದಿಂದೀಚೆಗೆ ಹೆಚ್ಚು ಕಡಿಮೆ ಎಲ್ಲ ನಗರಗಳಲ್ಲೂ ರಂಗತಂಡಗಳ ಸಂಖ್ಯೆ ಜಾಸ್ತಿಯಾಯಿತು. ನಿರ್ದೇಶಕರೆಲ್ಲ ಒಂದೊಂದು ತಂಡ ಕಟ್ಟಿಕೊಳ್ಳಲು ಪ್ರಾರಂಭಿಸಿದರು. ಹಳೇ ತಂಡಗಳೆಲ್ಲ ೩೦ ವರುಷ ೪೦ ವರುಷದ ಆಚರಣೆಯಲ್ಲಿ ತೊಡಗಿದ್ದರೆ ಇನ್ನು ಹಲವು ತಂಡಗಳು ದಶಮಾನೋತ್ಸವದ ಸಂಭ್ರಮದಲ್ಲಿದ್ದಾರೆ. ಸಣ್ಣ ಪುಟ್ಟ ತಂಡಗಳು ಅಣಬೆಗಳ ಹಾಗೆ ಎಲ್ಲ ಕಡೆ ತಲೆ ಎತ್ತಿ ನಿಂತಿವೆ. ರೆಪರ್ಟರಿಗಳ ಸಮಕ್ಕೂ ನಾಟಕಗಳ ಸಂಖ್ಯೆ ಏರುತ್ತಿದೆ. ಮೈಸೂರು, ಬೆಂಗಳೂರಿನಲ್ಲಂತೂ ೨೫-೩೦ ರಂಗತಂಡಗಳಿವೆ. ಎಲ್ಲರೂ ನಾಟಕ ಮಾಡುತ್ತಿದ್ದಾರೆ. ಆದರೆ ನಾಟಕ ಕೃತಿಗಳು ಹುಟ್ಟುತ್ತಿಲ್ಲ ಎಂಬ ಕೂಗಿದೆ. ಕೆಲವರು ಕತೆ, ಕಾದಂಬರಿ, ಇವುಗಳನ್ನೇ ನಾಟಕವಾಗಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ರಂಗಮಂದಿರಗಳಿಗೆ ಕ್ಯೂ ನಿಲ್ಲಬೇಕಾಗಿದೆ. ರಂಗ ಮಂದಿರಗಳ ಕೊರತೆ ಕಾಣುತ್ತಿದೆ. ಕಲಾಕ್ಷೇತ್ರ ತುಂಬುವಷ್ಟು ಜನರನ್ನು ಸೇರಿಸುವುದು ಕಷ್ಟದ ಕೆಲಸವಾಗ್ತಿದೆ. ಹಾಗಾಗಿ ಬಡಾವಣಾ ರಂಗಮಂದಿರಗಳಿಗೆ ಬೇಡಿಕೆ ಹೆಚ್ಚಾಗಿದೆ. ಜನಸಂದಣಿ, ಟ್ರಾಫಿಕ್ ಜಾಮ್ ಗಳ ಮದ್ಯೆ, ಜನ ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸುವುದೇ ಕಷ್ಟಕರವಾಗಿದೆ. ಸಿನಿಮಾ ಮಂದಿರಗಳು ಖಾಲಿ ಹೊಡೆಯಬಹುದು, ಆದರೆ ಬೆಂಗಳೂರಿನಲ್ಲೀಗ ಶನಿವಾರ, ಭಾನುವಾರಗಳಂತೂ ನಾಟಕಗಳಿಗೆ ಜನಕ್ಕೆ ಬರವಿಲ್ಲ. ಹವ್ಯಾಸಿ ರಂಗಭೂಮಿ ಎಲ್ಲ ಸಂಕಷ್ಟಗಳ ಮಧ್ಯೆಯೂ ಇಂದು ಜೀವಂತವಾಗಿರುವುದಕ್ಕೆ ಇದಲ್ಲದೇ ಬೇರೇನು ಸಾಕ್ಷಿ?

(ಲೇಖಕರು ನಾಟಕ ಅಕಾಡೆಮಿ ಸದಸ್ಯರು ಹಾಗೂ ಹಿರಿಯ ರಂಗಕರ್ಮಿಗಳು)

Categories
ಕನ್ನಡ ರಂಗಭೂಮಿ

ಬಿ.ವಿ. ಕಾರಂತ (ಜೀವನಸಾಧನೆ)

ಕೃತಿ:ಬಿ.ವಿ. ಕಾರಂತ (ಜೀವನಸಾಧನೆ)
ಲೇಖಕರು – ಮುರಳೀಧರ ಉಪಾಧ್ಯ ಹಿರಿಯಡಕ
ಕೃತಿಯನ್ನು ಓದಿ