Categories
ಕನ್ನಡ ಕುವೆಂಪು: ಪುನರಾಲೋಕನ ಡಾ|| ಜಿ ಎಸ್ ಶಿವರುದ್ರಪ್ಪ ರಾಷ್ಟ್ರಕವಿ ಕೃತಿ ಸಂಚಯ

ಕುವೆಂಪು ಮತ್ತು ಕನ್ನಡ ಸಾಹಿತ್ಯ ಪರಂಪರೆ

ಕೃತಿ:ಕುವೆಂಪು ಮತ್ತು ಕನ್ನಡ ಸಾಹಿತ್ಯ ಪರಂಪರೆ
ಲೇಖಕರು: ಕನ್ನಡ, ಕುವೆಂಪು: ಪುನರಾಲೋಕನ, ಡಾ|| ಜಿ ಎಸ್ ಶಿವರುದ್ರಪ್ಪ, ರಾಷ್ಟ್ರಕವಿ ಕೃತಿ ಸಂಚಯ
ಕೃತಿಯನ್ನು ಓದಿ

Categories
ಕನ್ನಡ ಕುವೆಂಪು: ಪುನರಾಲೋಕನ ಡಾ|| ಜಿ ಎಸ್ ಶಿವರುದ್ರಪ್ಪ ರಾಷ್ಟ್ರಕವಿ ಕೃತಿ ಸಂಚಯ

ಕುವೆಂಪು ಅವರ ಕಿಂದರಿಜೋಗಿ: ಒಂದು ದುರಂತ ಕತೆಯೆ?

ಕವಿ ಕುವೆಂಪು ಅವರ ‘ಬೊಮ್ಮನಹಳ್ಳಿಯ ಕಿಂದರಿಜೋಗಿ’, ಅದು ಪ್ರಕಟವಾದಾಗ, ಅವರ ಮಾತಿನಲ್ಲಿಯೇ ಹೇಳುವುದಾದರೆ, ‘ಏಕ್‌ದಂ ಕರ್ನಾಟಕವನ್ನೆಲ್ಲ ಬೆರಗುಗೊಳಿಸಿತ್ತು’  (ನೆ.ದೋ.ಪು. ೬೨೭). ಅದರ ಕಥಾವಸ್ತು, ಅದನ್ನು ಕುವೆಂಪು ನಿರ್ವಹಿಸಿರುವ ಕ್ರಮದೊಳಗಿನ ಸ್ವಾರಸ್ಯಗಳು, ಕಥನದ ನಿರರ್ಗಳ ತೀವ್ರಗತಿ ಮತ್ತು ಅದರೊಳಗಿನ ವಿನೋದ ಸಂದರ್ಭಗಳು ಕನ್ನಡನಾಡಿನ ಮಕ್ಕಳನ್ನು ಈ ಹೊತ್ತಿಗೂ ಬೆರಗುಗೊಳಿಸುವಂತಿವೆ. ಈ ಕವಿತೆ ಈಗಾಗಲೆ ಹಲವರು ಗುರುತಿಸಿರುವಂತೆ ಇಂಗ್ಲಿಷ್ ಕವಿ ರಾಬರ್ಟ್ ಬ್ರೌನಿಂಗ್‌ನ ‘ದಿ ಪೈಡ್ ಪೈಪರ್ ಆಫ್ ಹ್ಯಾಮಲಿನ್’ ಕವಿತೆಯ ಪ್ರೇರಣೆಯಿಂದ ರೂಪುಗೊಂಡದ್ದು. ಕುವೆಂಪು ಅವರು ಮೈಸೂರಿನ ವೆಸ್ಲಿಯನ್ ಮಿಷನ್ ಹೈಸ್ಕೂಲಿನ ವಿದ್ಯಾರ್ಥಿಯಾಗಿದ್ದಾಗ (೧೯೨೧-೧೯೨೨ನೇ ಸಾಲಿನಲ್ಲಿ) ಶ್ರೀ ಸುಂದರ ಎಂಬ ಹೆಸರಿನ ಇಂಗ್ಲಿಷ್ ಅಧ್ಯಾಪಕರು ಒಮ್ಮೆ ತರಗತಿಯಲ್ಲಿ ಬ್ರೌನಿಂಗ್ ಕವಿಯ ಈ ಪದ್ಯವನ್ನು, ‘ನಾಟಕೀಯವಾಗಿ ಓದಿ, ಇಂಗ್ಲಿಷಿನಲ್ಲಿ ಅಲ್ಲಲ್ಲಿ ತುಸು ಅರ್ಥ ವಿವರಣೆ ಕೊಡುತ್ತ, ತಾವೂ ಬಿದ್ದುಬಿದ್ದು ನಗುತ್ತ ವಿದ್ಯಾರ್ಥಿಗಳನ್ನು ನಗೆಯ ಹೊನಲಿನಲ್ಲಿ ತೇಲಿಸಿಬಿಟ್ಟರು’. (ನೆ.ದೋ. ಪು.೧೦೮-೧೦೯) ಈ ಸಂದರ್ಭದಲ್ಲಿ ಸುಂದರಂ ಅವರ ಈ ಓದುಗಾರಿಕೆ ತಮ್ಮ ಮೇಲೆ ಮಾಡಿದ ಪರಿಣಾಮವನ್ನು ಕುರಿತು ಕುವೆಂಪು ಹೇಳುತ್ತಾರೆ: ‘ಪೈಡ್ ಪೈಪರ್ ಆಫ್ ಹ್ಯಾಮಲಿನ್ ತನ್ನ ನೃತ್ಯಮಯ ಶೈಲಿಯಿಂದಲೂ, ಬಾಲಕ ಚೇತನಗಳಿಗೆ ಕಚಕುಳಿಯಿಟ್ಟು ನಗಿಸುವಂತಹ ಹಾಸ್ಯದಿಂದಲೂ ನನ್ನ ಮೆಚ್ಚಿಗೆಯನ್ನು ಸೂರೆಗೊಂಡಿತು’ (ನೆ.ದೋ. ಪು. ೧೦೯). ಹೀಗೆ ಬಾಲಕ ಕುವೆಂಪು ಅವರ ‘ಅಂತಃಕರಣದ ಭಾವಕೋಶವನ್ನು ಪ್ರವೇಶಿಸಿದ’ ಬ್ರೌನಿಂಗ್‌ನ ಕವಿತೆಯ ನೆನಪು, ಮುಂದೆ ಐದಾರು ವರ್ಷಗಳ ಅನಂತರ, ಅಂದರೆ ೧೯೨೬ರಲ್ಲಿ ಅವರು ಶಿವಮೊಗ್ಗದಲ್ಲಿ ಖಾಯಿಲೆಯಿಂದ ಸುಧಾರಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ, (ಆಗ ಅವರಿಗೆ ೨೧ ವರ್ಷ), ನವೆಂಬರ್ ೧೯, ೧೯೨೬ರಂದು, ಕೇವಲ ನಾಲ್ಕೆ ದು ಗಂಟೆಗಳ ಅವಧಿಯಲ್ಲಿ, ೪೨೮ ಪಂಕ್ತಿಗಳಷ್ಟು ಸುದೀರ್ಘವಾದ ‘ಬೊಮ್ಮನ ಹಳ್ಳಿಯ ಕಿಂದರಿಜೋಗಿಯಾಗಿ ಅವತರಿಸಿತು. ಸ್ವಾರಸ್ಯದ ಸಂಗತಿಯೆಂದರೆ ಅದನ್ನು ಬರೆಯುವಾಗ ಅವರ ಎದುರಿಗೆ ಇಂಗ್ಲಿಷ್ ಭಾಷೆಯ ಬ್ರೌನಿಂಗ್ ಕವಿಯ ಮೂಲಕವಿತೆ ಇರಲೇ ಇಲ್ಲ!’ (ನೆ.ದೋ. ಪು.೧೦೯).

ಅನಂತರ ೧೯೨೮ರಲ್ಲಿ ಮೈಸೂರಿನ ಮಹಾರಾಜಾ ಕಾಲೇಜು ಕರ್ನಾಟಕ ಸಂಘದಿಂದ ಪ್ರಕಟವಾದ ‘ಕಿರಿಯರ ಕಾಣಿಕೆ’ ಎಂಬ ಸಂಗ್ರಹದಲ್ಲಿ ಮೊದಲು ಕಾಣಿಸಿಕೊಂಡ ‘ಬೊಮ್ಮನಹಳ್ಳಿಯ ಕಿಂದರಿ ಜೋಗಿ’ ಅತ್ಯಂತ ಜನಪ್ರಿಯವಾಗಿ, ಅವರ ಕಾವ್ಯಜೀವನದ ಮೊದಲ ದಿನಗಳಲ್ಲಿ ಅವರಿಗೆ ತುಂಬ ಪ್ರಸಿದ್ಧಿಯನ್ನು ತಂದುಕೊಟ್ಟ ಕವಿತೆಯಾಗಿದೆ. ‘ಕಿರಿಯರ ಕಾಣಿಕೆ’ಯ ಮುನ್ನುಡಿಯಲ್ಲಿ ಪ್ರೊ. ಟಿ.ಎಸ್. ವೆಂಕಣ್ಣಯ್ಯನವರು ಈ ಕವಿತೆ ರಾಬರ್ಟ್ ಬ್ರೌನಿಂಗ್ ಕವಿಯ ‘ದಿ ಪೈಡ್ ಪೈಪರ್ ಆಫ್ ಹ್ಯಾಮಲಿನ್’ ಕವಿತೆಯ ಆಧಾರದ ಮೇಲೆ ರಚಿತವಾದದ್ದು–ಎಂದು ಬರೆದಿದ್ದಾರೆ’ ನಿಜ. ಬ್ರೌನಿಂಗ್‌ನ ಕವಿತೆಯ ಆಧಾರದ ಮೇಲೆ ಇದು ರಚಿತವಾಗಿದೆ. ಆದರೆ ಇದು ಎಷ್ಟರಮಟ್ಟಿಗೆ ಬ್ರೌನಿಂಗ್‌ನ ಕವಿತೆಯನ್ನು ಆಧರಿಸಿದೆ ಎಂಬುದನ್ನು ಕುರಿತು, ಕಳೆದ ಹಲವು ವರ್ಷಗಳಲ್ಲಿ ಕೆಲವರು ಬ್ರೌನಿಂಗ್ ಕವಿತೆಯನ್ನೂ, ಕುವೆಂಪು ಕವಿತೆಯನ್ನೂ ಇರಿಸಿಕೊಂಡು ತೌಲನಿಕ ವಿವೇಚನೆಯನ್ನು ನಡೆಸಿದ್ದಾರೆ. ಈ ಪ್ರಯತ್ನಗಳಲ್ಲಿ ಮುಖ್ಯವಾದದ್ದು ಮತ್ತು ವಿವರವಾದದ್ದು ಡಾ. ಎನ್.ಎಸ್. ತಾರನಾಥ ಅವರ ಲೇಖನ (ಸಮರಸ: ೧೯೯೨ ಪು. ೩೯-೫೯). ಬ್ರೌನಿಂಗ್‌ನ ಕವಿತೆಯನ್ನು ಆಧರಿಸಿ ರಚಿತವಾದ ‘ಕಿಂದರಿ ಜೋಗಿ’ ಬ್ರೌನಿಂಗ್‌ನ ಕವಿತೆಯ ಅನುವಾದವಲ್ಲ. ಆದರೆ ಅದಕ್ಕಿಂತ ಪರಿಷ್ಕೃತವೂ ದೀರ್ಘವೂ, ಮತ್ತು ಉತ್ತಮವೂ ಆದ ಒಂದು ನಿರ್ಮಿತಿ–ಎನ್ನುವುದು ತಾರನಾಥರ ಲೇಖನದ ಸಾರಾಂಶವಾಗಿದೆ. ಕುವೆಂಪು ಅವರೆ ತಮ್ಮ ‘ನೆನಪಿನ ದೋಣಿಯಲ್ಲಿ’ (ಪು. ೧೦೯) ‘ಬೊಮ್ಮನ ಹಳ್ಳಿಯ ಕಿಂದರಿಜೋಗಿ’ಯನ್ನು ಬ್ರೌನಿಂಗ್ ಕವಿಯ ಕಥನ ಕವನದ ಭಾಷಾಂತರ ಎಂದು ಅನೇಕರು ತಪ್ಪಾಗಿ ತಿಳಿದಿದ್ದಾರೆ. ಅದು ಭಾಷಾಂತರವೂ ಅಲ್ಲ. ಅನುವಾದವೂ ಅಲ್ಲ. ಆ ಕಥೆಯನ್ನಾಧರಿಸಿದ ‘ರೂಪಾಂತರ ಸೃಷ್ಟಿ’ ಎಂದು ಸ್ಪಷ್ಟಪಡಿಸಿದ್ದಾರೆ. ಈ ರೂಪಾಂತರ ಸೃಷ್ಟಿಯಲ್ಲಿ ಬ್ರೌನಿಂಗ್ ಕವಿಯ ಕಥಾವಸ್ತುವಿಗೆ ಕನ್ನಡನಾಡಿನ ನೆಲದ ಸೊಗಡನ್ನು ತುಂಬಿ, ಇದು ಇಲ್ಲಿಯೆ ಈ ನೆಲದ ಮಣ್ಣಿಂದಲೆ ಸಂಭವಿಸಿದ್ದೇನೋ ಎಂಬಂತೆ ನಂಬಿಸಿದ್ದು ಕುವೆಂಪು ಅವರ ವೈಶಿಷ್ಟ ವಾಗಿದೆ. ಈಗಾಗಲೆ ಅದು ತುಂಗಾತೀರದ ಬಲಗಡೆಯಲ್ಲಿ, ದಟ್ಟವಾದ ಮಲೆನಾಡಿನ ಕಾಡುಗಳ ನಡುವಣ ಬೊಮ್ಮನಹಳ್ಳಿಯೊಳಗೆ ಹಿಂದೊಮ್ಮೆ ನಡೆದ ಘಟನೆಯೆಂಬಂತೆ ನಿರೂಪಿತವಾಗಿ, ಈ ನಾಡಿನ ಕಾಲ-ದೇಶಾದಿ ಚೌಕಟ್ಟಿನೊಳಗೆ ತನ್ನ ಅಸ್ತಿತ್ವವನ್ನು ಸ್ಥಾಯಿಯಾಗಿ ಸ್ಥಾಪಿಸಿಕೊಂಡು ಬಿಟ್ಟಿದೆ.

ಇತ್ತೀಚಿನ ಅನೇಕ ವರ್ಷಗಳಿಂದ ನಮ್ಮ ಪ್ರೆ ಮರೀ ತರಗತಿಗಳ ಯಾವ ಪಠ್ಯಪುಸ್ತಕದೊಳಗೂ-ಕಾಣಿಸದ ಮತ್ತು ಆ ಕಾರಣದಿಂದ ಕನ್ನಡನಾಡಿನ ಮಕ್ಕಳಿಗೆ ಬಹುಮಟ್ಟಿಗೆ ಅಪರಿಚಿತವಾಗಿ ಉಳಿದಿರುವ ಈ ಕವಿತೆಯನ್ನು, ಈಗ ಓದುತ್ತ ಓದುತ್ತ ಹೋದ ಹಾಗೆ ಥಟ್ಟನೆ ‘ಬೊಮ್ಮನ ಹಳ್ಳಿಯ ಕಿಂದರಿಜೋಗಿ’ಯ ವಸ್ತು ಮೇಲುನೋಟಕ್ಕೆ ಅತ್ಯಂತ ರಂಜಕವಾದ ಒಂದು ಮಕ್ಕಳ ‘ನೀತಿ ಕತೆ’ಯಂತೆ ತೋರಿದರೂ, ಇದರ ಒಳಗೆ ಒಂದು ದುರಂತ ವಸ್ತುವಿನ್ಯಾಸ ಅಡಗಿಕೊಂಡಿದೆಯಲ್ಲ–ಎಂದು ಅನ್ನಿಸುತ್ತದೆ. ಹಾಗೆಯೆ ವಿಚಾರ ಮಾಡಿ ನೋಡಿದರೆ, ಇದು ಮುಖ್ಯವಾಗಿ ‘ಅಪರಾಧ ಮತ್ತು ಶಿಕ್ಷೆ’ಯ (Crime and Punishment) ಆಶಯವನ್ನುಳ್ಳ ಕತೆಯಾಗಿ ತೋರುತ್ತದೆ. ಬೊಮ್ಮನಹಳ್ಳಿಯ ಗೌಡ (ಬ್ರೌನಿಂಗ್‌ನ ಕವಿತೆಯಲ್ಲಿ ಊರಿನ ಮೇಯರ್) ನಮ್ಮ ಪ್ರಸ್ತುತ ವ್ಯವಸ್ಥೆಯ ಪ್ರತೀಕವೂ ಹೌದು. ಆ ಗೌಡ, ಕತೆಯ ಚೌಕಟ್ಟಿನಲ್ಲಿ ನೋಡುವುದಾದರೆ, ಯಾವ ವ್ಯವಸ್ಥೆಯನ್ನು ಪ್ರತಿನಿಧಿಸುತ್ತಾನೆಯೋ, ಅದು ಭ್ರಷ್ಟವಾಗಿದೆ. ಆ ಭ್ರಷ್ಟತೆ ಅಭಿವ್ಯಕ್ತವಾಗುವುದು, ಗೌಡ ಕಿಂದರಿ ಜೋಗಿಗೆ ಕೊಟ್ಟ ವಚನವನ್ನು ತನ್ನ ಪುಢಾರಿತನದ ಉಡಾಫೆಯಿಂದ ತಿರಸ್ಕರಿಸುವುದರಲ್ಲಿ. ಈ ಬಗೆಯ ನಡವಳಿಕೆ ಭ್ರಷ್ಟಗೊಂಡ ವ್ಯವಸ್ಥೆಯಲ್ಲಿ ತೀರಾ ಪರಿಚಿತವಾದದ್ದು. ಒಟ್ಟಿನಲ್ಲಿ ಆ ಊರ ಜನದ ಪ್ರತಿನಿಧಿಯಾದ ಗೌಡ ತನ್ನ ನಯವಂಚಕ ಪ್ರವೃತ್ತಿಯಿಂದ ‘ಅಪರಾಧ’ ಮಾಡಿದ. ಮತ್ತು ಹಾಗೆ ನಡೆದುಕೊಂಡ ತಮ್ಮ ನಾಯಕನ ವರ್ತನೆಯನ್ನು ಪ್ರಶ್ನಿಸದ ಹಾಗೂ ಒಂದಿಷ್ಟಾದರೂ ಪ್ರತಿಭಟಿಸದ ಆ ಊರ ಜನ ತಮ್ಮ ನಿಷ್ಕಿ ಯತೆಯಿಂದಾಗಿ ಒಂದು ರೀತಿಯಲ್ಲಿ ತಾವೂ ಆ ಅಪರಾಧದಲ್ಲಿ ಭಾಗಿಯಾದಂತಾಯಿತು. ಅಲೌಕಿಕ ಶಕ್ತಿ ಸಾಮರ್ಥ್ಯಗಳನ್ನು ಹೊಂದಿದ ಕಿಂದರಿಜೋಗಿ ಈ ಅಪರಾಧಕ್ಕೆ ತಕ್ಕ ಶಿಕ್ಷೆ ಮಾಡಲು ಹೊರಡುತ್ತಾನೆ. ಆ ಶಿಕ್ಷೆಯ ಸ್ವರೂಪವೆಂದರೆ ಆ ಊರಿನ ಮಕ್ಕಳನ್ನೆಲ್ಲ ತನ್ನ ಕಿಂದರಿಯ ಮೋಡಿಯಿಂದ ಮರುಳುಗೊಳಿಸಿ ತನ್ನ ಹಿಂದೆ ಸೆಳೆದುಕೊಂಡು ಹೋಗಿ, ಬಾಯಿ ತೆರೆದ ಬೆಟ್ಟದ ಹೊಟ್ಟೆಯೊಳಗೆ ಶಾಶ್ವತವಾಗಿ ಮುಚ್ಚಿಹಾಕಿ ಬಿಡುತ್ತಾನೆ. ಅಂದರೆ ಏನಾಯಿತು? ತಪ್ಪು ಮಾಡಿದವನು ಮುಖ್ಯವಾಗಿ ಆ ಊರ ಗೌಡ; ಆದರೆ ಶಿಕ್ಷೆಯಾದದ್ದು ಆ ಊರಿನ ಮುಗ್ಧ ಮಕ್ಕಳಿಗೆ; ಅಷ್ಟೆ ಅಲ್ಲ ಅದಕ್ಕಿಂತಲೂ ಮಿಗಿಲಾಗಿ ಹೆತ್ತ ಮಕ್ಕಳನ್ನು ಕಳೆದುಕೊಳ್ಳುವ ಸ್ಥಿತಿಗೆ ಬಂದ ತಂದೆ-ತಾಯಂದಿರಿಗೆ. ಆದರೆ ಕವಿತೆಯನ್ನು ಓದುವಾಗ ಅದರ ವರ್ಣನೆಯ ಮೋಡಿಯಿಂದಲೋ ಏನೋ, ಆ ಕಿಂದರಿ ಜೋಗಿಯ ಹಿಂದೆ ಓಡಿದ ಊರಿನ ಮಕ್ಕಳಿಗೆ ಅಂಥ ಭಯಂಕರವಾದ ಶಿಕ್ಷೆ ಒದಗಿತೆಂಬಂತೆ ಕೂಡಲೇ ನಮಗೆ ಅನ್ನಿಸುವುದಿಲ್ಲ. ಯಾಕೆಂದರೆ ಆ ಮಕ್ಕಳ ಪ್ರತಿನಿಧಿಯಾಗಿ ಹಿಂದಕ್ಕೆ ಉಳಿದ ‘ಒಬ್ಬನೆ ಕುಂಟ’ನು ನಿರೂಪಿಸು ವಂತೆ, ಜೋಗಿಯು ಕಿಂದರಿ ಬಾರಿಸಿದಾಗ ಮಕ್ಕಳೆಲ್ಲರೂ ನಾನಾವಿಧವಾದ ಬಣ್ಣದ ಮನೆಗಳ ಪಟ್ಟಣವನ್ನೂ, ಉದುರಿಬಿದ್ದ ರಸವತ್ತಾದ ಹಣ್ಣುಗಳನ್ನೂ, ಬಗೆಬಗೆಯ ಆಟದ ಸಾಮಾನುಗಳನ್ನೂ, ಜಿಂಕೆ-ಮೊಲ ಮೊದಲಾದ ಮುದ್ದು ಪ್ರಾಣಿಗಳು ತುಂಬಿದ ವನಗಳನ್ನೂ ಕಂಡರೆಂಬಂತೆ ವರ್ಣಿಸಿ, ಇಂಥ ಒಂದು ಸುಂದರ ಜಗತ್ತಿಗೆ ಮಕ್ಕಳು ಹೋದರೆಂಬಂತೆ ನಂಬಿಸಿ, ಹಿಂದಕ್ಕೆ ಉಳಿದ ಕುಂಟ ಹುಡುಗನ ಬಾಯಲ್ಲಿ ‘ಅಯ್ಯೋ ಹೋಯಿತೆ ಆ ನಾಕ. ಅಯ್ಯೋ ಬಂದಿತೆ ಈ ಲೋಕ’ ಎಂದು ಉದ್ಗಾರ ಹೊರಡಿಸಿದರೂ, ಆ ಮಕ್ಕಳು ಮಾತ್ರ ತಮ್ಮ ಅಕ್ಕರೆಯ ತಂದೆ-ತಾಯಂದಿರಿಂದ ಹಾಗೂ ತಮ್ಮ ಬಾಲ್ಯದ ಬದುಕಿನಿಂದ ವಂಚಿತರಾಗಿ, ಬಾಗಿಲು ತೆರೆದು ಅನಂತರ ಮುಚ್ಚಿಕೊಂಡ ಬೆಟ್ಟದ ಹೊಟ್ಟೆಯೊಳಗೆ ಅಡಗಿ ಹೋದರೆಂಬ ದುರಂತ ವಾಸ್ತವವನ್ನು ಮರೆಯುವುದು ಸಾಧ್ಯವಿಲ್ಲ. ಅಷ್ಟೆ ಅಲ್ಲ ಆ ಊರಿನ ತಂದೆ-ತಾಯಂದಿರು ತಮ್ಮ ನಾಳಿನ ಭವಿಷ್ಯದ ಪ್ರತೀಕವಾದ ಮಕ್ಕಳನ್ನು–ಊರಗೌಡನ ತಪ್ಪಿನಿಂದ– ಶಾಶ್ವತವಾಗಿ ಕಳೆದುಕೊಳ್ಳುವಂತಾಯಿತೆಂಬುದು ದುಃಖಮಯವೂ, ಕರುಣಾಜನಕವೂ ಆದ ಸಂಗತಿ ಮಾತ್ರವಲ್ಲ, ಬೆಳೆದು ಬದುಕಬೇಕಾದ ಆ ಊರಿನ ಮಕ್ಕಳ ವರ್ತಮಾನದ ಬದುಕನ್ನು ಹೀಗೆ ಹಠಾತ್ತನೆ ಮೊಟಕುಗೊಳಿಸಿದ ಕಿಂದರಿಜೋಗಿಯ ಈ ಶಿಕ್ಷೆ ಅತ್ಯಂತ ಕ್ರೂರವೂ, ಅಮಾನವೀಯವೂ ಆದುದೆಂಬುದರಲ್ಲಿ ಸಂದೇಹವಿಲ್ಲ. ಇಂಥ ದುರಂತದ ಕರಾಳ ಛಾಯೆಯೊಂದಿಗೆ ಕೊನೆಗೊಳ್ಳುವ ಈ ವಸ್ತುವನ್ನು, ಅದರಲ್ಲೇನೂ ‘ದುರಂತ’ವೇ ಇಲ್ಲವೆಂಬಂತೆ ಮುಚ್ಚಿ ಹೇಳುವ ಈ ಕವಿತೆಯ ಲವಲವಿಕೆ, ವಿನೋದ ಪ್ರಜ್ಞೆ ಹಾಗೂ ಕಲೆಗಾರಿಕೆಗಳು ಆಶ್ಚರ್ಯಕರವಾಗಿವೆ. ಜತೆಗೆ ಇದು ಮಕ್ಕಳಿಗೆ ಹೇಳುವ ನೀತಿಕತೆಯ ಘೋಷಣೆಯನ್ನು ತನ್ನ ಮುಕ್ತಾಯದಲ್ಲಿ ಒಳಗೊಳ್ಳುತ್ತ ಓದುಗರ ಗಮನವನ್ನು ಬೇರೆಯ ಕಡೆ ತಿರುಗಿಸಿಬಿಡುತ್ತದೆ.

ಆದರೆ ಕುವೆಂಪು ಅವರಿಗೆ ‘ಆಧಾರ’ವಾದ, ಬ್ರೌನಿಂಗ್ ಕವಿಯ ‘ಪೈಡ್ ಪೈಪರ್ ಆಫ್ ಹ್ಯಾಮಲಿನ್’ ಕವಿತೆಗೆ ದೊರೆತ ಪ್ರೇರಣೆಯೇ ಒಂದು ದುರಂತವಸ್ತು ಮೂಲದ್ದು ಎನ್ನುವ ಸಂಗತಿ ಸ್ವಾರಸ್ಯವಾಗಿದೆ. ಬ್ರೌನಿಂಗ್ ತನ್ನ ‘ಪೈಡ್ ಪೈಪರ್’ ಕವಿತೆಗೆ ಮೂಲವಾದ ಕತೆಯೊಂದನ್ನು ತನ್ನ ಎಳೆಯಂದಿನಲ್ಲಿ ಒಂದು ಜನಪದ ಕತೆಯೆಂಬಂತೆ ಕೇಳಿದ್ದ ಮತ್ತು ಆ ಬಗೆಯ ಕತೆಗಳನ್ನೊಳಗೊಂಡ ‘ದಿ ವಂಡರ್ ಬುಕ್ ಆಫ್ ಲಿಟ್ಲ್ ವರ್ಲ್ಡ್ (The wonder book of little world; Ed Nathanial Wanley 1678) ಎಂಬ ಪುಸ್ತಕದಿಂದ ‘ಪೈಡ್ ಪೈಪರ್ ಕವಿತೆಗೆ ಆಕರವಾದ ಐತಿಹ್ಯವೊಂದನ್ನು ಆಯ್ದುಕೊಂಡನೆಂದು ಹೇಳಲಾಗಿದೆ.[1] ಮತ್ತು ಈ ಐತಿಹ್ಯವು ಮಧ್ಯಕಾಲೀನ ಯುಗದಲ್ಲಿ ಸಂಭವಿಸಿದ ‘ಮಕ್ಕಳ ಧರ್ಮಯುದ್ಧ’ (Children’s crusade)ಕ್ಕೆ ಸಂಬಂಧಪಟ್ಟದ್ದಾಗಿದೆ. ಪಶ್ಚಿಮ ಯೂರೋಪಿನ ಕ್ರೆ ಸ್ತ ಧರ್ಮಾನುಯಾಯಿಗಳು, ಪವಿತ್ರ ನಗರವೆಂದು ಪರಿಗಣಿತವಾಗಿರುವ ಜೆರುಸಲೇಂ ನಗರವನ್ನು ಮುಸ್ಲಿಂ ಆಕ್ರಮಣಗಳಿಂದ ಬಿಡಿಸಿಕೊಳ್ಳಲು ನಡೆಯಿಸಿದ ಎಂಟು ಸೈನಿಕ ಕಾರ್ಯಾಚರಣೆಗಳು ಚರಿತ್ರೆಯಲ್ಲಿ ‘ಧರ್ಮಯುದ್ಧ’ (crusade)ಗಳೆಂದು ಉಲ್ಲೇಖಿತವಾಗಿವೆ. ಇವುಗಳಲ್ಲಿ ಅತ್ಯಂತ ದಾರುಣವಾದದ್ದು ಹಾಗೂ ಕರುಣಾಜನಕವಾದದ್ದು ‘ಮಕ್ಕಳ ಧರ್ಮಯುದ್ಧ’ (Children’s crusade) ಎಂದು ಹೆಸರಾದ, ಹದಿಮೂರನೆಯ ಶತಮಾನದ ಎರಡು ದುರ್ಘಟನೆಗಳು. ಸ್ಟೀಫನ್ ಎಂಬ ಕುರುಬ ಹುಡುಗನೊಬ್ಬನ ಮುಂದಾಳುತನದಲ್ಲಿ ಹನ್ನೆರಡು ವರ್ಷಕ್ಕೂ ಕೆಳಗಿನ ವಯೋಮಾನದ ಮೂವತ್ತು ಸಾವಿರ ಮಕ್ಕಳ ದಂಡೊಂದು ಕ್ರಿ.ಶ. ೧೨೧೨ರಲ್ಲಿ ಜೆರುಸಲೇಂ ನಗರವನ್ನು ಮುಸ್ಲಿಮರ ಆಕ್ರಮಣದಿಂದ ಬಿಡಿಸಲು ಹೊರಟು, ಮಾರ್ಗ ಮಧ್ಯದಲ್ಲಿ ಅನಾಹುತ ಪರಂಪರೆಗಳಿಗೆ ಒಳಗಾಯಿತು. ಹಡಗು ಒಡೆದು ಸಾವಿರಾರು ಮಕ್ಕಳು ಸತ್ತುಹೋದರು. ಉಳಿದ ಮಕ್ಕಳು ವಿವೇಚನಾರಹಿತರೂ ಸ್ವಾರ್ಥಿಗಳೂ ಆದ ವರ್ತಕರ ಕೈಗೆ ಸಿಕ್ಕು ಗುಲಾಮರಾಗಿ ಮಾರಲ್ಪಟ್ಟರು. ಈ ಘಟನೆಯ ನಂತರ ನಿಕೊಲಾಸ್ ಎಂಬ ಜರ‍್ಮನ್ ಹುಡುಗನ ನೇತೃತ್ವದಲ್ಲಿ ಇಪ್ಪತ್ತು ಸಾವಿರ ಸಂಖ್ಯೆಯ ಮಕ್ಕಳ ಸಮೂಹ ಜೆರುಸಲೇಂ ನಗರದ ಕಡೆ ಹೊರಟು ಮೊದಲ ಮಕ್ಕಳ ಪಡೆಯಂತೆಯೇ ತೊಂದರೆಗೆ ಈಡಾಗಿ ನಾಶ ಹೊಂದಿತು. ಮಕ್ಕಳಿಗೆ ಒದಗಿದ ಈ ಸಾಮೂಹಿಕ ವಿಪತ್ಪರಂಪರೆ, ಒಂದು ರೂಪಕವಾಗಿ ಉಳಿದು ‘ಪೈಡ್ ಪೈಪರ್’ ಕತೆಯೊಳಗೆ, ಪೈಡ್ ಪೈಪರ್‌ನ ಹಿಂದೆ ನಡೆದ ಹ್ಯಾಮಲಿನ್ ಊರಿನ ಮಕ್ಕಳ ವರ್ತನೆಯಾಗಿ ರೂಪಾಂತರವನ್ನು ಪಡೆದುಕೊಂಡಂತೆ ತೋರುತ್ತದೆ. ಒಟ್ಟಿನಲ್ಲಿ ಬ್ರೌನಿಂಗ್‌ನಿಗೆ ದೊರೆತ ಐತಿಹ್ಯದೊಳಗಣ ದುರಂತದ ಅಂಶ, ಕನ್ನಡ ‘ಕಿಂದರಿ ಜೋಗಿ’ ಕವಿತೆಯಲ್ಲೂ ಹುಡುಕಿದರೆ ಕಾಣುವಷ್ಟು ಹುದುಗಿಕೊಂಡಿದೆ.

 


[1] ಬ್ರೌನಿಂಗ್ ಕವಿಯ, ಈ ಕತೆಗೆ ವಸ್ತುವಾಗಿರಬಹುದಾದ ಚಾರಿತ್ರಿಕ, ಜಾನಪದ ಮೂಲಗಳನ್ನು ಕುರಿತು ಇನ್ನೂ ಹೆಚ್ಚಿನ ಸಾಮಗ್ರಿಯ ಕಡೆಗೆ ಕನ್ನಡ ಸಹೃದಯರ ಗಮನವನ್ನು ಸೆಳೆದವರು, ಅಮೆರಿಕಾದ ಪೆನ್ಸಿಲ್‌ವೇನಿಯಾದ ಶ್ರೀ ಎಚ್.ವೈ. ರಾಜಗೋಪಾಲ್–ಅವರು. ಆಸಕ್ತರಾದವರು ಅಮೆರಿಕಾದ ಸಾಹಿತ್ಯರಂಗದಿಂದ ಅರ್ಪಿತವಾದ, ಅಹಿತಾನಲ (ಡಾ. ನಾಗಐತಾಳ) ಅವರ ಪ್ರಧಾನಸಂಪಾದಕತ್ವದಲ್ಲಿ ಸಿದ್ಧವಾದ ‘ಕುವೆಂಪು ಸಾಹಿತ್ಯ ಸಮೀಕ್ಷೆ’ ಎಂಬ ಕೃತಿಯನ್ನು (೨೦೦೪) ನೋಡಬಹುದು (ವಸಂತ ಪ್ರಕಾಶನ. ನಂ. ೧೦, ತುಳಸಿವನಂ, ಬೆಂಗಳೂರು – ೫೩). ಈ ಸಂಪುಟದಲ್ಲಿ ಎಚ್.ವೈ. ರಾಜಗೋಪಾಲ್ ಬರೆದ ‘ಬೊಮ್ಮನಹಳ್ಳಿಯ ಕಿಂದರಿಜೋಗಿ’ ಎಂಬ ಲೇಖನ ಹೆಚ್ಚು ವ್ಯಾಪಕವಾಗಿ, ಬ್ರೌನಿಂಗ್ ಕವಿಯ ಪೈಡ್ ಪೈಪರ್ ಕವಿತೆಯೊಳಗಿನ ವೃತ್ತಾಂತವನ್ನು ಬಿಚ್ಚಿಡುತ್ತದೆ. ಇದು ಕುವೆಂಪು ಅವರ ಕವಿತೆಯನ್ನು ಕುರಿತ ವಿಮರ್ಶೆ ಮಾತ್ರವಲ್ಲ, ಕುವೆಂಪು ಅವರಿಗೆ ಮೂಲವಾಗಿರುವ ಬ್ರೌನಿಂಗ್ ಕವಿಯ ಕವಿತೆಯ ಮೂಲವನ್ನು ಕುರಿತ ಸಂಶೋಧನೆಯೂ ಹೌದು.

 

Categories
ಕನ್ನಡ ಕುವೆಂಪು: ಪುನರಾಲೋಕನ ಡಾ|| ಜಿ ಎಸ್ ಶಿವರುದ್ರಪ್ಪ ರಾಷ್ಟ್ರಕವಿ ಕೃತಿ ಸಂಚಯ

ಕುವೆಂಪು: ವೈಚಾರಿಕ ಮುಖ

ಕೃತಿ-ಕುವೆಂಪು: ವೈಚಾರಿಕ ಮುಖ
ಸರಣಿ-ಕನ್ನಡ, ಕುವೆಂಪು: ಪುನರಾಲೋಕನ, ಡಾ|| ಜಿ ಎಸ್ ಶಿವರುದ್ರಪ್ಪ, ರಾಷ್ಟ್ರಕವಿ ಕೃತಿ ಸಂಚಯ
ಕೃತಿಯನ್ನು ಓದಿ