Categories
Ebook ಕರ್ನಾಟಕ ಗ್ಯಾಸೆಟಿಯರ್ ತುಮಕೂರು ಜಿಲ್ಲಾ

ಆಡಳಿತ ಮತ್ತು ರಾಜಸ್ವ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಆಡಳಿತ ಮತ್ತು ರಾಜಸ್ವ ಎನ್ ಚಂದ್ರಶೇಖರ್
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ
ಪುಟ ಸಂಖ್ಯೆ 88

Download  View

ಭಾರತದಲ್ಲಿ ಜಿಲ್ಲೆಗಳು ಬಹು ಹಿಂದಿನಿಂದಲೂ ರಾಜ್ಯಾಡಳಿತದ ಪ್ರಮುಖ ಘಟಕಗಳಾಗಿವೆ. ಇತಿಹಾಸದುದ್ದಕ್ಕೂ ಅನೇಕ ರೂಪಗಳಲ್ಲಿ ಆಡಳಿತದ ಮುಖ್ಯ ಘಟಕವಾಗಿ ಜಿಲ್ಲೆಗಳನ್ನು ಪರಿಗಣಿಸುತ್ತಾ ಬರಲಾಗಿದೆ. ಭಾರತದಲ್ಲಿ ಪ್ರಪ್ರಥಮ ಐತಿಹಾಸಿಕ ಸಾಮ್ರಾಜ್ಯವನ್ನು ಸ್ಥಾಪಿಸಿದ ಮೌರ್ಯರು ತಮ್ಮ ವಿಶಾಲ ಸಾಮ್ರಾಜ್ಯವನ್ನು ಸಮರ್ಥ ಮತ್ತು ಪರಿಣಾಮಕಾರಿ ಆಡಳಿತಕ್ಕಾಗಿ ಅನೇಕ ಪ್ರಾಂತಗಳನ್ನಾಗಿ ವಿಂಗಡಿಸಿದ್ದರು. ಈ ಪ್ರಾಂತಗಳನ್ನು ‘ಆಹಾರ’, ‘ವಿಷಯ-ಮತ್ತು ‘ಪ್ರದೇಶಗಳೆಂದು ವಿಂಗಡಿಸಿದ್ದರು. ಪ್ರತಿಯೊಂದು ಪ್ರಾಂತವೂ ರಾಜ್ಯಪಾಲರ ಆಡಳಿತದಲ್ಲಿರುತ್ತಿತ್ತು. ರಾಜಕುಮಾರರೂ ಒಮ್ಮೊಮ್ಮೆ ಪ್ರಾಂತಾಧಿಕಾರಿಗಳಾಗಿ ನೇಮಕಗೊಳ್ಳುತ್ತಿದ್ದರು. ಆಗ ಅವರನ್ನು ಕುಮಾರ ಮಹಾಮಾತ್ರರೆಂದು ಕರೆಯಲಾಗುತ್ತಿತ್ತು. ಇನ್ನುಳಿದ ಪ್ರಾಂತಾಧಿಕಾರಿಗಳನ್ನು ಮಹಾಮಾತ್ರರೆಂದು ಕರೆಯಲಾಗುತ್ತಿತ್ತು. ಕೇಂದ್ರದಲ್ಲಿದ್ದಂತೆ ಮಂತ್ರಿಗಳಿಂದ ಕೂಡಿದ ಸಮಾಲೋಚನಾ ಸಭೆಯೊಂದು ಪ್ರತೀ ಪ್ರಾಂತದಲ್ಲಿಯೂ ಇದ್ದು ಮಹಾಮಾತ್ರರಿಗೆ ಸಹಾಯ ಮಾಡುತ್ತಿತ್ತು ಎಂದು ಹೇಳಲಾಗಿದೆ. ಜೊತೆಗೆ ಬೇರೆ ಬೇರೆ ಅಧಿಕಾರಿಗಳೂ ಮಹಾಮಾತ್ರರಿಗೆ ಸಹಾಯ ಮಾಡಲು ನೇಮಕಗೊಳ್ಳುತ್ತಿದ್ದರು. ಅವರಲ್ಲಿ ‘ಯೂತ’ (ತೆರಿಗೆ ಸಂಗ್ರಹಕಾರ) ‘ರಜುಕ’ (ಕಂದಾಯ ವಸೂಲಿಕಾರ), ‘ಸ್ಥಾನಿಕ’ (ಜಿಲ್ಲಾಧಿಕಾರಿ) ಮುಂತಾದವರಿದ್ದರು. ಪ್ರಾಂತಗಳನ್ನು ಜಿಲ್ಲೆಗಳನ್ನಾಗಿ ವಿಂಗಡಿಸುತ್ತಿದ್ದು ‘ಸ್ಥಾನಿಕ’ ಎಂಬ ಪದನಾಮ ಹೊಂದಿದ್ದ ಅಧಿಕಾರಿಗಳು ಅವುಗಳ ಆಡಳಿತವನ್ನು ನಡೆಸುತ್ತಿದ್ದರು. ಸ್ಥಾನಿಕರಿಗೆ ನೆರವಾಗಲು ‘ಗೋಪ’ ಎಂಬ ಅಧಿಕಾರಿವರ್ಗ ಇರುತ್ತಿತ್ತು. ಆಡಳಿತದ ಸಣ್ಣ ಘಟಕ ‘ಗ್ರಾಮ’ ವಾಗಿತ್ತು. ಗ್ರಾಮಿಕ ಎಂಬ ಅಧಿಕಾರಿಯು ಗ್ರಾಮ ಸಭೆಯ ಸಹಾಯದಿಂದ ಅಲ್ಲಿನ ಆಡಳಿತವನ್ನು ನಡೆಸುತ್ತಿದ್ದನು.

ಸಂಬಂಧಿತ ಪುಸ್ತಕಗಳು