|
ದೇಶದ ದುರ್ಬಲ ವರ್ಗದವರನ್ನು ಮತ್ತು ಮಹಿಳೆಯರನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಮೇಲೆತ್ತುವ ಮೂಲಕ ಯಾವುದೇ ದೇಶದ ಅಭಿವೃದ್ಧಿ ಸಾಧ್ಯ. ಮೇಲು-ಕೀಳು, ಸ್ತ್ರೀ-ಪುರುಷ, ಮೇಲ್ಜಾತಿ-ಕೆಳಜಾತಿ ಎಂಬ ಭೇದಗಳನ್ನು ನಿವಾರಿಸಿ, ಸಮಾನತೆಯನ್ನು ಸಾಧಿಸಿದಲ್ಲಿ, ಅಂತಹ ದೇಶ ಸಂಪೂರ್ಣವಾಗಿ ಮುಂದುವರಿದಂತಹ ದೇಶವೆಂಬ ಪರಿಗಣನೆಗೆ ಬರಲು ಸಾಧ್ಯ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಾಜ ಕಲ್ಯಾಣದ ವಿವಿಧ ಯೋಜನೆಗಳ ಮೂಲಕ ರಾಷ್ಟ್ರವನ್ನು ಅಭಿವೃದ್ಧಿಗೊಳಿಸಲು ಪ್ರಯತ್ನಿಸುತ್ತಿವೆ. ಇದೇ ರೀತಿಯಲ್ಲಿ ರಾಜ್ಯದ ಜನತೆಯ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಾನಮಾನದಲ್ಲಿ ಸಮಾನತೆಯನ್ನು ಸ್ಥಾಪಿಸುವುದು ಕರ್ನಾಟಕ ಸರ್ಕಾರದ ಧ್ಯೇಯವೂ ಆಗಿದೆ. ದಲಿತರು, ಹಿಂದುಳಿದವರು, ಮಹಿಳೆಯರು, ಮಕ್ಕಳು, ಕಾರ್ಮಿಕರು, ವಿಕಲಚೇತನರು ಮುಂತಾದವರ ಏಳಿಗೆಗಾಗಿ ಕೈಗೊಳ್ಳುವ ಕಾರ್ಯಗಳೆಲ್ಲವೂ ಸಮಾಜ ಸೇವೆಯ ವಿವಿಧ ವಿಧಾನಗಳಾಗಿವೆ. ಸರ್ಕಾರದೊಂದಿಗೆ ಖಾಸಗಿ ಸಂಸ್ಥೆಗಳೂ ಈ ನಿಟ್ಟಿನಲ್ಲಿ ತಮ್ಮ ಕಾರ್ಯ ಯೋಜನೆಯನ್ನು ರೂಪಿಸಿಕೊಂಡು, ಕರ್ನಾಟಕವನ್ನು ಪ್ರಗತಿಪರ ಹಾಗೂ ಸರ್ವ ಸಮಾನತೆಯ ರಾಜ್ಯವನ್ನಾಗಿಸಲು ಪ್ರಯತ್ನಿಸುತ್ತಿವೆ. |