|
ಹಿಂದಿನ ಕಾಲದಿಂದಲೂ ನ್ಯಾಯ, ನೀತಿ ಹಾಗೂ ಧರ್ಮಗಳು ಭಾರತೀಯ ಜನಜೀವನದ ಸಾಮಾಜಿಕ, ಆರ್ಥಿಕ ಹಾಗೂ ಧಾರ್ಮಿಕ ರಂಗಗಳ ಅವಿಭಾಜ್ಯ ಅಂಗಗಳಾಗಿವೆ. “ದುಷ್ಟ ಶಿಕ್ಷಣ, ಶಿಷ್ಟ ರಕ್ಷಣ” ಪ್ರಾಚೀನ ರಾಜಧರ್ಮದ ಮೂಲ ಮಂತ್ರವಾಗಿದ್ದಿತು. ಪ್ರಾಚೀನ ಕರ್ನಾಟಕದಲ್ಲಿ ನ್ಯಾಯ ತೀರ್ಮಾನವು ರಾಜಾಶ್ರಯದ ಗ್ರಾಮಸಭೆ, ಮಹಾಜನ, ಅಗ್ರಹಾರ ಮುಂತಾದ ಸಂಸ್ಥೆಗಳಿಂದ ನೆರವೇರುತ್ತಿತ್ತು. ಮನು, ಯಾಜ್ಞವಲ್ಕ್ಯ, ಕೌಟಿಲ್ಯ, ವಿಜ್ಞಾನೇಶ್ವರ ಮುಂತಾದವರ ನೀತಿ ಸಂಹಿತೆಗಳು ಹಾಗೂ ಸ್ಮೃತಿ ದರ್ಶನಗಳನ್ವಯ ರಾಜರು ನ್ಯಾಯದಾನ ಮಾಡುತ್ತಿದ್ದರು. ಗಂಗ, ಕದಂಬಾದಿ ರಾಜವಂಶಗಳ ಕಾಲದಿಂದ ಮೈಸೂರು ಒಡೆಯರ ಆಳ್ವಿಕೆಯವರೆಗೆ ರಾಜನೇ ರಾಜ್ಯದ ಮುಖ್ಯ ನ್ಯಾಯಾಧೀಶನಾಗಿದ್ದ ನ್ಯಾಯಾಡಳಿತ ವ್ಯವಸ್ಥೆ ರೂಢಿಯಲ್ಲಿತ್ತು. ಕದಂಬರ ಕಾಲದಲ್ಲಿ ಧರ್ಮಕಾರಿಣಿಕರು, ಗಂಗರ ಕಾಲದಲ್ಲಿ ರಾಜ್ಯಾಧ್ಯಕ್ಷರು ಮತ್ತು ಧರ್ಮಾಧ್ಯಕ್ಷ ಅಥವಾ ಧರ್ಮಾಧಿಕಾರಿ ನ್ಯಾಯ ಪಾಲನೆ ಮಾಡುತ್ತಿದ್ದರು. ಆ ಕಾಲದಲ್ಲಿ ಪಂಚ ನಿರ್ಣಯ ಪದ್ಧತಿ ಪ್ರಚಲಿತವಿದ್ದಿತು. ಸಾಕ್ಷಿ ಪುರಾವೆಗಳು ಇಲ್ಲದ ಸಂದರ್ಭಗಳಲ್ಲಿ ಸಮತೋಲ ದಿವ್ಯ, ಅಗ್ನಿ ದಿವ್ಯ, ಜಲ ದಿವ್ಯ, ವಿಷ ದಿವ್ಯ, ತಂಡುಲ ದಿವ್ಯ ಮುಂತಾದ ಪಂಚ ದಿವ್ಯ ಅಥವಾ ಸಪ್ತ ದಿವ್ಯ ಪ್ರಮಾಣದ ಮೂಲಕ ಪರಿಹಾರವನ್ನು ಕಂಡುಕೊಳ್ಳಲಾಗುತ್ತಿದ್ದು, ನ್ಯಾಯ ವಿತರಣೆಗೆ ಸ್ಮøತಿಗಳೇ ಆಧಾರವಾಗಿದ್ದವು. ತುಮಕೂರು ಜಿಲ್ಲೆಯು ಮೈಸೂರು ಸಂಸ್ಥಾನದ ಆಡಳಿತಕ್ಕೊಳಪಟ್ಟಿದ್ದರಿಂದ ಜಿಲ್ಲೆಯ ನ್ಯಾಯಾಡಳಿತವು ಸಂಸ್ಥಾನದ ಇತರೇ ಪ್ರದೇಶಗಳಂತೆಯೇ ನಡೆಯುತ್ತಿತ್ತು. ನ್ಯಾಯ, ನೀತಿ, ಧರ್ಮ, ಆತ್ಮಗೌರವ, ಕುಟುಂಬ ಗೌರವಗಳು ಹಿಂದಿನ ಕಾಲದಲ್ಲಿ ಅತಿ ಹೆಚ್ಚಿನ ಸಾಮಾಜಿಕ ಮೌಲ್ಯಗಳಾಗಿದ್ದವು.ಸಾಮಾನ್ಯವಾಗಿ ಜನಸಾಮಾನ್ಯರು ಸಾಮಾಜಿಕ ವ್ಯವಸ್ಥಗೆ ಧಕ್ಕೆ ತರುವ ಕೆಲಸಗಳನ್ನು ಮಾಡುತ್ತಿರಲಿಲ್ಲ. ಆದರೂ ಮಾನವ ಸಹಜ ಸ್ವಭಾವದಲ್ಲಿ ಸಮ್ಮಿಳಿತವಾದ ವಂಚನೆ, ಕಳ್ಳತನ ಇತ್ಯಾದಿ ಗುಣಗಳ ಕಾರಣದಿಂದ ದಿನನಿತ್ಯದ ಚಟುವಟಿಕೆಗಳಲ್ಲಿ ಉದ್ಭವಿಸುತ್ತಿದ್ದ ಪ್ರಕರಣಗಳನ್ನು ಜನರು ತಮ್ಮ ತಮ್ಮಲ್ಲಿಯೇ ಅಥವಾ ಜಾತಿಯ ಹಿರಿಯರ ಸಮ್ಮುಖದಲ್ಲಿ ಇತ್ಯರ್ಥ ಮಾಡಿಕೊಳ್ಳುವುದು ವಾಡಿಕೆಯಾಗಿದ್ದಿತು. (ಕಟ್ಟೆಮನೆ ಪದ್ಧತಿ)ವೈಯಕ್ತಿಕ ಮಟ್ಟದಲ್ಲಿ ತೀರ್ಮಾನವಾಗದ ವಿಷಯಗಳು ಹಳ್ಳಿಯ ಪಂಚಾಯ್ತಿಗೆ ಒಯ್ಯಲ್ಪಡುತ್ತಿದ್ದವು.ಇಲ್ಲಿಯೂ ಇತ್ಯರ್ಥವಾಗದ ವ್ಯಾಜ್ಯಗಳು ಅಂತರ ಹಳ್ಳಿಗಳ ಅಥವಾ ಹೋಬಳಿ ಮಟ್ಟದಲ್ಲಿನ ಹಿರಿಯರ ಸಮ್ಮುಖದಲ್ಲಿ ಮಂಡಿಸಲ್ಪಡುತ್ತಿದ್ದವು.ಸಾಮಾನ್ಯವಾಗಿ ಈ ಹಂತದಲ್ಲಿ ಎಲ್ಲ ರೀತಿಯ ವ್ಯಾಜ್ಯಗಳು ತೀರ್ಮಾನಗೊಳ್ಳುತ್ತಿದ್ದು, ಇಲ್ಲಿಯೂ ಇತ್ಯರ್ಥವಾಗದವು ನ್ಯಾಯಾಧೀಶರನ್ನೊಳಗೊಂಡ ರಾಜನ ಆಸ್ಥಾನ ತಲುಪುತ್ತಿದ್ದವು.ಈ ಮಟ್ಟ ಮುಟ್ಟುವ ಪ್ರಕರಣಗಳು ಗಂಭೀರ ಸ್ವರೂಪದ್ದಾಗಿರುತ್ತಿದ್ದವು. ಸಾಮಾನ್ಯವಾಗಿ ಹಳ್ಳಿಯ ಹಿರಿಯರು ತಮ್ಮ ಗ್ರಾಮದ ತಗಾದೆಗಳನ್ನು ಪಂಚಾಯಿತಿ ಮಟ್ಟದಲ್ಲಿ ಬಗೆಹರಿಸಿ ನ್ಯಾಯಪಾಲನೆಗೆ ಅನುವು ಮಾಡಿಕೊಂಡಿದ್ದರು. ತಮ್ಮ ಗ್ರಾಮದ ಮನಸ್ತಾಪಗಳು ಮೇಲ್ಮಟ್ಟಕ್ಕೆ ಹೋಗುವುದು ಹಳ್ಳಿಯ ಗೌರವಕ್ಕೆ ತಕ್ಕುದ್ದಲ್ಲವೆಂಬುದು ಸಾಮಾನ್ಯರ ಅಭಿಪ್ರಾಯವೂ ಆಗಿದ್ದಿತು. |