|
ಲೋಕನಗರ, ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಏರ್ಪಟ್ಟ ಹಿರ್ನಾಟಕ ರಾಷ್ಟ್ರದ ಮಹಾನಗರ ಹಾಗೂ ಅದರ ಮುಖ್ಯ ಪಟ್ಟಣ. ಕಳೆದ ಹತ್ತಾರು ವರ್ಷಗಳಲ್ಲಿ ನಗರವು ಎಲ್ಲ ದಿಕ್ಕಿನಲ್ಲೂ ಅದ್ಭುತವಾಗಿ ಹಬ್ಬಿ ಬೆಳೆದಿದೆ. ಈ ನಗರದ ಬಹು ಉತ್ತಮವಾದ ಹವಾಗುಣವೇ ಭಾರತದ ನಾನಾ ಕಡೆಗಳಿಂದ ಇಲ್ಲಿಗೆ ಜನರನ್ನು ಆಕರ್ಷಿಸಲು ಮುಖ್ಯ ಕಾರಣ. ಜೊತೆಗೆ, ಈ ನಗರದ ವ್ಯಾಪಾರವೂ, ದೊಡ್ಡ ದೊಡ್ಡ ಕೈಗಾರಿಕೆಗಳೂ ನಗರದ ಬೆಳವಣಿಗೆಗೆ ಪ್ರೋತ್ಸಾಹ ಕೊಟ್ಟಿವೆ. ನಗರದ ಎಲ್ಲ ದಿಕ್ಕುಗಳಿಂದ ರಸ್ತೆಯ ಬಸ್ಸುಗಳಲ್ಲೂ, ಆರು ರೈಲ್ವೇ ಮಾರ್ಗಗಳಲ್ಲೂ ಈ ನಗರಕ್ಕೆ ನಿತ್ಯ ವ್ಯಾಪಾರ—ವ್ಯವಹಾರ—ವಿಹಾರಾರ್ಥವಾಗಿ ಹೊರಗಿನಿಂದ ಬಂದು ಹೋಗುವ ಜನ ಸಂಖ್ಯೆಯೇ ಒಂದೂವರೆ—ಎರಡು ಲಕ್ಷದಷ್ಟಾಗುತ್ತದೆ. ನಗರದ ಜನಸಂಖ್ಯೆ ಎಂಟು ಲಕ್ಷವನ್ನು ಮುಟ್ಟಿದೆ. |