Categories
Ebook ಕರ್ನಾಟಕ ಕೈಪಿಡಿ ೨೦೧೨ ಕರ್ನಾಟಕ ಗ್ಯಾಸೆಟಿಯರ್

ಸಾರಿಗೆ ಮತ್ತು ಸಂಪರ್ಕ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಸಾರಿಗೆ ಮತ್ತು ಸಂಪರ್ಕ ನೀಲಾ  ಮಂಜುನಾಥ್
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ
ಪುಟ ಸಂಖ್ಯೆ 60

Download  View

ಕರ್ನಾಟಕ ರಾಜ್ಯಕ್ಕೆ ಶ್ರೀಮಂತವೂ ಸಂಪದ್ಭರಿತವೂ ಆದ ಆರ್ಥಿಕ ಹಾಗೂ ಸಾಂಸ್ಕೃತಿಕ ಪರಂಪರೆಯಿದೆ. ಕೌಟಿಲ್ಯ ಮುಂತಾದ ಭಾರತೀಯ ಚಿಂತಕರ ಗ್ರಂಥಗಳಲ್ಲಿ, ಹಾಗೂ ಪ್ಲಿನಿ, ಟಾಲೆಮಿ ಮತ್ತು ಆಲ್ಬೆರುನಿಯಂತಹ ವಿದೇಶಿಯರ ಪ್ರವಾಸ ಕಥನಗಳಲ್ಲಿ ಕರ್ನಾಟಕದ ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆಗೆ ಸಂಬಂಧಿಸಿದಂತೆ ಸಾಕಷ್ಟು ಉಲ್ಲೇಖಗಳಿವೆ. ಕರ್ನಾಟಕದ ವಿವಿಧೆಡೆಗಳಲ್ಲಿ ಪ್ರಾಗೈತಿಹಾಸಿಕ ತಾಣಗಳೂ ಸೇರಿದಂತೆ ದೊರೆತಿರುವ ಅಶೋಕನ ಹತ್ತಾರು ಶಿಲಾಶಾಸನಗಳು, ಆ ಕಾಲದ ಸಾಮಾಜಿಕ-ಸಾಂಸ್ಕೃತಿಕ ಸಂಬಂಧಗಳ ಬಗ್ಗೆ ಮಾಹಿತಿ ನೀಡುತ್ತವೆ. ಶಾತವಾಹನ ಅರಸ ಹಾಲನು ರಚಿಸಿರುವ ‘ಗಾಥಾಸಪ್ತಸತಿ’ ಯಲ್ಲಿ ದೊಡ್ಡ ಹಾಗೂ ಸಣ್ಣ ರಸ್ತೆಗಳ ಬಗ್ಗೆ ಉಲ್ಲೇಖವಿದೆ. ಪ್ರಾಚೀನ ಕರ್ನಾಟಕದಲ್ಲಿದ್ದ ರಸ್ತೆ ವ್ಯವಸ್ಥೆ ಹಾಗೂ ವಾಣಿಜ್ಯ ವ್ಯವಸ್ಥೆಗಳ ಬಗ್ಗೆ ಶಾಸನಗಳಲ್ಲಿ ಮಾಹಿತಿ ಲಭಿಸುತ್ತದೆ. ಮಂಡ್ಯ ತಾಲ್ಲೂಕಿನ ಹಲ್ಲೆಗೆರೆಯಲ್ಲಿ ದೊರೆತಿರುವ ಗಂಗ ಅರಸ ದೊರೆ ಒಂದನೆಯ ಶಿವಮಾರನ ಕ್ರಿ.ಶ. 713ರ ತಾಮ್ರಶಾಸನ, ಕಿಲಿನಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಹಾಗೂ ಗ್ರಾಮದ ನಡುವೆ ಹಾದು ಹೋಗುತ್ತಿದ್ದ “ರಾಜಪಥ”ದ ಬಗ್ಗೆ ದಾಖಲಿಸುತ್ತದೆ. ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರಗಳಾದ ತೇರದಾಳ ಮತ್ತು ಹಲಸಿಗಳನ್ನು ಜೋಡಿಸುತ್ತಿದ್ದ ಮುಖ್ಯರಸ್ತೆಯ ಬಗ್ಗೆ ಕ್ರಿ.ಶ.1123ರ ಶಾಸನವೊಂದು ತಿಳಿಸುತ್ತದೆ. ಚೋಳ ಶಾಸನವೊಂದು ತಂಜಾವೂರಿನಿಂದ ಆರಂಭಗೊಳ್ಳುತ್ತಿದ್ದ ರಾಜಪಥವೊಂದು ಚಾಳುಕ್ಯರ ರಾಜಧಾನಿಯಾಗಿದ್ದ ಕಲ್ಯಾಣ ಅಂದರೆ, ಇಂದಿನ ಬಸವಕಲ್ಯಾಣವನ್ನು ತಲುಪುತ್ತಿದ್ದುದರ ಬಗ್ಗೆ ಉಲ್ಲೇಖಿಸುತ್ತದೆ. ಇದೇ ರೀತಿ ಇನ್ನೊಂದು ಹೆದ್ದಾರಿ ಅಥವಾ ಪ್ರಧಾನ ಮಾರ್ಗವು ಕೊಂಕಣ ಪ್ರದೇಶವನ್ನು ಕರ್ನಾಟಕದ ಒಳಭಾಗದೊಂದಿಗೆ ಜೋಡಿಸುತ್ತಿದ್ದು, ಇಂದಿಗೂ ಗೋವಾದ ಗಡಿಭಾಗದಲ್ಲಿ ಈ ಹೆಸರಿನ ಸ್ಥಳವೊಂದಿದೆ. ಈ ರಸ್ತೆಗಳ ಉದ್ದಕ್ಕೂ ಕುಡಿಯುವ ನೀರಿನ ಸೌಲಭ್ಯವುಳ್ಳ ಅರವಟ್ಟಿಕೆ, ಛತ್ರ ಮತ್ತು ನೆರಳನ್ನು ನೀಡುವ ಮರದ ತೋಪುಗಳು ಇರುತ್ತಿದ್ದವು. ತೆಪ್ಪ ಮತ್ತು ದೋಣಿಗಳ ಮೂಲಕ ನದಿ ಮತ್ತು ತೊರೆಗಳ ನಡುವೆ ಸಂಚರಿಸುವುದು ಸರ್ವೇ ಸಾಮಾನ್ಯವಾಗಿತ್ತು. ಸರಕುಗಳನ್ನು ತಲೆಯ ಮೇಲೆ, ಕಾವಡಿಗಳಲ್ಲಿ ಅಥವಾ ಎತ್ತು, ಕತ್ತೆ ಮತ್ತು ಕೋಣಗಳ ಮೇಲೆ ಸಾಗಿಸಲಾಗುತ್ತಿತ್ತು. ರಸ್ತೆಗಳಿದ್ದ ಕಡೆ ಎತ್ತಿನಗಾಡಿ, ಬಂಡಿಗಳು ಸಂಚರಿಸುತ್ತಿದ್ದವು. ತುಂಗಭದ್ರಾ ನದಿಗೆ ಅಡ್ಡಲಾಗಿ ಹಂಪೆಯಲ್ಲಿ ಕಟ್ಟಿದ್ದ ಹಳೆಯ ಸೇತುವೆ, ಇಂದು ಕುರುಹಾಗಿಯಷ್ಟೇ ಉಳಿದಿದ್ದು, ಹಿಂದೆ ಹಂಪಿ ಮತ್ತು ಆನೆಗೊಂದಿಯನ್ನು ಇದು ಜೋಡಿಸುತ್ತಿತ್ತು. ಇಂತಹ ಹಳೆಯ ಸೇತುವೆಗಳನ್ನು ಹರಿಹರ, ಶ್ರೀರಂಗಪಟ್ಟಣ, ರಾಮನಗರ, ಶಿವಸಮುದ್ರ, ಪಾಣೆಮಂಗಳೂರು, ಕೂಳೂರು ಮುಂತಾದ ಸ್ಥಳಗಳಲ್ಲಿ ಇಂದಿಗೂ ನೋಡಬಹುದಾಗಿದೆ.

ಸಂಬಂಧಿತ ಪುಸ್ತಕಗಳು