i ಸುಳಿ ಸಾರಾ ಅಬೂಬಕ್ಕರ್ ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡ ಭವನ, ಜೆ.ಸಿ.ರಸ್ತೆ ಬೆಂಗಳೂರು - 560 002 ii SULI : A Novel written by Smt. Sara Aboobacker, Published by Manu Baligar, Director, Department of Kannada and Culture, Kannada Bhavana, J.C.Road, Bengaluru - 560 002. ಈ ಆವೃತ್ತಿಯ ಹಕ್ಕು : ಕರ್ನಾಟಕ ಸರ್ಕಾರ ಮುದ್ರಿತ ವರ್ಷ : 2011 ಪ್ರತಿಗಳು : 1000 ಪುಟಗಳು : xvi + 279 ಬೆಲೆ : ರೂ. 65/- ರಕ್ಷಾಪುಟ ವಿನ್ಯಾಸ : ಕೆ. ಚಂದ್ರನಾಥ ಆಚಾರ್ಯ ಮುದ್ರಕರು : ಮೆ|| ಮಯೂರ ಪ್ರಿಂಟ್ ಆ್ಯಡ್ಸ್ ನಂ. 69, ಸುಬೇದಾರ್ ಛತ್ರಂ ರೋಡ್ ಬೆಂಗಳೂರು - 560 020 ದೂ : 23342724 iii ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಗಳು ಸಿಎಂ/ಪಿಎಸ್/26/11 ವಿಧಾನಸೌಧ ಬೆಂಗಳೂರು 560 001 ಕರ್ನಾಟಕ ಸರ್ಕಾರ ಶುಭ ಸಂದೇಶ ವಿಶ್ವ ಕನ್ನಡ ಸಮ್ಮೇಳನದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಕನ್ನಡ ನಾಡು ಏಕೀಕರಣಗೊಂಡು 55ನೇ ವರ್ಷಕ್ಕೆ ಹೆಜ್ಜೆಯನ್ನಿಟ್ಟಿದೆ. ಈ ಸಂದರ್ಭವನ್ನು ರಚನಾತ್ಮಕವಾಗಿ ದಾಖಲಿಸಿ ಸ್ಮರಣೀಯಗೊಳಿಸಬೇಕೆಂಬುದು ಸರ್ಕಾರದ ಮಹದಾಶಯ. ಅದಕ್ಕಾಗಿ ಬೆಳಗಾವಿಯಲ್ಲಿ ``ವಿಶ್ವ ಕನ್ನಡ ಸಮ್ಮೇಳನ’’ ವನ್ನು ಇದೇ ಮಾರ್ಚ್ ತಿಂಗಳಿನಲ್ಲಿ ಆಯೋಜಿಸಲಾಗಿದೆ. ಇದನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸುವುದು ಕರ್ನಾಟಕ ಸರ್ಕಾರದ ಆಶಯವಾಗಿದೆ. ಇದರ ಅಂಗವಾಗಿ ನಾಡಿನ ವಿವಿಧ ಕ್ಷೇತ್ರಗಳಲ್ಲಾಗಿರುವ ಪ್ರಗತಿಯ ಆತ್ಮಾವಲೋಕನದ ಜೊತೆಗೆ ಕನ್ನಡ ಸಾಹಿತ್ಯದ ಸೃಜನಶೀಲ ಮತ್ತು ಸೃಜನೇತರ ಪ್ರಕಾರಗಳ 100 ಕೃತಿಗಳನ್ನು ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ಪ್ರಕಟಿಸಲಾಗುತ್ತಿದೆ. ಕನ್ನಡದ ಖ್ಯಾತ ಲೇಖಕರ ಮಹತ್ವದ ಕೃತಿಗಳನ್ನು ಪ್ರಕಟಿಸಿ, ಸುಲಭ ಬೆಲೆಯಲ್ಲಿ ಸಾಹಿತ್ಯಾಸಕ್ತರಿಗೆ ಒದಗಿಸುವ ಹಂಬಲ ನಮ್ಮದು. ಈ ಸಾಹಿತ್ಯ ಮಾಲಿಕೆಯಲ್ಲಿನ ಕೃತಿರತ್ನಗಳನ್ನು ಕನ್ನಡಿಗರು ಸಹೃದಯತೆಯಿಂದ ಸ್ವಾಗತಿಸುವ ಮೂಲಕ ಇವುಗಳ ಪ್ರಯೋಜನವನ್ನು ಪಡೆದುಕೊಂಡರೆ ಸರ್ಕಾರದ ಈ ಯೋಜನೆ ಸಾರ್ಥಕವಾಗುತ್ತದೆ ಎಂದು ಭಾವಿಸುತ್ತೇನೆ. ದಿನಾಂಕ 24.01.2011 (ಬಿ.ಎಸ್. ಯಡಿಯೂರಪ್ಪ) iv ಗೋವಿಂದ ಎಂ. ಕಾರಜೋಳ ಕನ್ನಡ ಮತ್ತು ಸಂಸ್ಕೃತಿ, ಸಣ್ಣ ನೀರಾವರಿ ಹಾಗೂ ಜವಳಿ ಸಚಿವರು ವಿಧಾನಸೌಧ ಬೆಂಗಳೂರು - 01 ಕರ್ನಾಟಕ ಸರ್ಕಾರ ಚೆನ್ನುಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಸುಮಾರು 100 ಕನ್ನಡದ ಮೇರುಕೃತಿಗಳನ್ನು ಮರುಮುದ್ರಿಸಲು ಉದ್ದೇಶಿಸಿರುತ್ತದೆ. ಈ ಯೋಜನೆಯಡಿ ಕನ್ನಡ ಸಾಹಿತ್ಯದ ಬೇರೆ ಬೇರೆ ಕಾಲಘಟ್ಟಗಳಲ್ಲಿ ರಚನೆಗೊಂಡ ಕಥೆ, ಕಾದಂಬರಿ, ವಿಚಾರ ಸಾಹಿತ್ಯ, ಪ್ರಬಂಧ, ವಿಮರ್ಶೆ, ನಾಟಕ, ಕವನ ಸಂಕಲನ- ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳ ಕೆಲವು ಪ್ರಾತಿನಿಧಿಕ ಕೃತಿಗಳನ್ನು ಪ್ರಕಟಿಸಲಾಗುತ್ತಿದೆ. ಈ ಪ್ರಾತಿನಿಧಿಕ ಕೃತಿಗಳನ್ನು ಸರ್ಕಾರದಿಂದ ರಚಿತವಾದ ಆಯ್ಕೆ ಸಮಿತಿಯು ಮುದ್ರಣಕ್ಕೆ ಆಯ್ಕೆ ಮಾಡಿರುತ್ತದೆ. ಈ ಕೃತಿಗಳನ್ನು ಮುದ್ರಣಕ್ಕೆ ಆಯ್ಕೆ ಮಾಡಿದ ಆಯ್ಕೆ ಸಮಿತಿಯ ಎಲ್ಲಾ ವಿದ್ವಾಂಸರಿಗೂ ನನ್ನ ಧನ್ಯವಾದಗಳು. ಈ ಮಹತ್ವದ ಕೃತಿಗಳನ್ನು ಸಹೃದಯ ಕನ್ನಡಿಗರಿಗೆ ಸುಲಭ ಬೆಲೆಯಲ್ಲಿ ತಲುಪಿಸಬೇಕೆಂಬುದು ನಮ್ಮ ಹೆಗ್ಗುರಿಯಾಗಿರುತ್ತದೆ. ಕನ್ನಡ ಸಾಹಿತ್ಯದ ಮೈಲಿಗಲ್ಲುಗಳಾಗಿರುವ ಈ ಪುಸ್ತಕಗಳು ಭಾವಿ ಪೀಳಿಗೆಯವರಿಗೆ ದಾರಿದೀಪಗಳಾಗಿವೆ. ಈ ಕೃತಿಗಳ ಪ್ರಯೋಜನವನ್ನು ಕನ್ನಡ ಜನತೆ ಹಾಗೂ ವಿದ್ಯಾರ್ಥಿಗಳು ಪಡೆದರೆ ನಮ್ಮ ಶ್ರಮ ಸಾರ್ಥಕವೆಂದು ಭಾವಿಸುತ್ತೇನೆ. ದಿನಾಂಕ 18.01.2011 (ಗೋವಿಂದ ಎಂ. ಕಾರಜೋಳ) v ಅಧ್ಯಕ್ಷರ ಮಾತು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡದ ಮೇರುಕೃತಿಗಳನ್ನು ಪುನರ್‍ಮುದ್ರಣ ಮಾಡಲು ಒಂದು ಯೋಜನೆಯನ್ನು ಕೈಗೊಂಡಿತು. ಕೃತಿಗಳ ಆಯ್ಕೆಗಾಗಿ ಸರ್ಕಾರವು ಒಂದು ಸಮಿತಿಯನ್ನು ರಚಿಸಿತು. ಈ ಮಹತ್ವದ ಯೋಜನೆಯ ಸಮಿತಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುವ ಸುಯೋಗ ನನ್ನದಾಯಿತು. ಈ ಯೋಜನೆಯ ಮಹತ್ವವನ್ನು ನಾನು ವಿವರಿಸುವ ಅಗತ್ಯವಿಲ್ಲ. ಕನ್ನಡದ ಶ್ರೇಷ್ಠ ಕೃತಿಗಳನ್ನು ಸುಲಭ ಬೆಲೆಗೆ ಕನ್ನಡಿಗರ ಕೈಗಳಲ್ಲಿರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹಲವು ಯೋಜನೆಗಳನ್ನು ಕೈಗೊಂಡಿರುವುದಕ್ಕಾಗಿ ಸರ್ಕಾರವನ್ನೂ ಇಲಾಖೆಯನ್ನೂ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಕನ್ನಡ ಸಂಸ್ಕೃತಿಗೆ ಈ ಯೋಜನೆಗಳು ಮಹತ್ವದ ಕೊಡುಗೆಯನ್ನು ನೀಡುತ್ತವೆ. ಕನ್ನಡದ ಮೇರುಕೃತಿಗಳನ್ನು ಆರಿಸುವುದು ಸುಲಭದ ಕೆಲಸವಲ್ಲ. ಇಂತಹ ಆಯ್ಕೆಯಲ್ಲಿ ಬೇರೆ ಬೇರೆ ಅಭಿಪ್ರಾಯಗಳಿಗೆ ಸಾಧಾರವಾಗಿಯೇ ಅವಕಾಶವಿರುತ್ತದೆ. ಕನ್ನಡ ನಾಡಿನ ಶ್ರೇಷ್ಠ ಸಾಹಿತಿಗಳು ಈ ಸಮಿತಿಯ ಸದಸ್ಯರಾಗಿದ್ದದ್ದು ಸುದೈವದ ಸಂಗತಿ. ಕೃತಿಗಳನ್ನು ಚರ್ಚಿಸಿ ಮಹತ್ವದ ನಿರ್ಧಾರಕ್ಕೆ ಬಂದ ಸಮಿತಿಯು ಕಷ್ಟಸಾಧ್ಯವಾದ ಕಾರ್ಯವನ್ನು ಸಾಧಿಸಿದೆ. ಇದಕ್ಕಾಗಿ ನಾನು ಸಮಿತಿಯ ಎಲ್ಲ ಸದಸ್ಯರಿಗೂ ಕೃತಜ್ಞನಾಗಿದ್ದೇನೆ. ಈ ಕಾರ್ಯದ ನಿರ್ವಹಣೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀ ಮನು ಬಳಿಗಾರ್ ಅವರು ನೆರವಾಗಿದ್ದಾರೆ. ಅವರ ಮತ್ತು ಅವರ ಸಿಬ್ಬಂದಿಯವರ ಅಮೂಲ್ಯ ಸಹಕಾರಕ್ಕೆ ನಾನು ಕೃತಜ್ಞ. ಕನ್ನಡ ನಾಡಿನ ಮನೆಮನೆಗಳಲ್ಲಿ ಸಾಹಿತ್ಯದ ಮಂಗಳ ದೀಪದ ಬೆಳಕನ್ನು ಹರಡುವ ಈ ಯೋಜನೆಯ ಪೂರ್ಣಪ್ರಯೋಜನವನ್ನು ಕನ್ನಡಿಗರು ಪಡೆದುಕೊಳ್ಳಲಿ ಎಂದು ಹಾರೈಸುತ್ತೇನೆ. ಸಿರಿಗನ್ನಡಂ ಗೆಲ್ಗೆ ! ದಿನಾಂಕ 16.12.2010 ಎಲ್.ಎಸ್. ಶೇಷಗಿರಿ ರಾವ್ ಅಧ್ಯಕ್ಷ ಕನ್ನಡದ ಮೇರುಕೃತಿಗಳ ಆಯ್ಕೆ ಸಮಿತಿ vi ಹೊನ್ನುಡಿ ನಾಡಿನ ಭಾಷೆ, ಸಂಸ್ಕೃತಿ ಮತ್ತು ಜನಜೀವನದ ಪರಿಮಾಣವನ್ನು ಅಳೆಯುವುದರಲ್ಲಿ ಅಲ್ಲಿನ ಸಾಹಿತ್ಯದ ಕೃತಿಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಸುಮಾರು ಎರಡು ಸಾವಿರದ ಐದನೂರು ವರ್ಷಗಳಿಗೂ ದೀರ್ಘವಾದ ಐತಿಹಾಸಿಕ ಪರಂಪರೆ ಚೆಲುವ ಕನ್ನಡ ನಾಡಿನದು. ಹಾಗೆಯೇ ಅದರ ಸಾಹಿತ್ಯ ಕೂಡ ಪಂಪ, ಕುಮಾರವ್ಯಾಸ, ಶರಣರು, ದಾಸರು ಮೊದಲಾದವರಿಂದ ಸಮೃದ್ಧವಾಗಿ ಬೆಳೆದಿದೆ. ಅದರ ಸಮೃದ್ಧತೆಗೆ ಏಳು ಜ್ಞಾನಪೀಠಗಳ ಗರಿಮೆಯೇ ಸಾಕ್ಷಿ. ಕರ್ನಾಟಕವು ಏಕೀಕರಣಗೊಂಡು 55ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಈ ಸಂದರ್ಭದಲ್ಲಿ ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನವನ್ನು ಆಚರಿಸುತ್ತಿರುವುದು ಒಂದು ಐತಿಹಾಸಿಕವೂ ಹಾಗೂ ಮಹತ್ವಪೂರ್ಣವೂ ಆದ ವಿಶಿಷ್ಟ ಘಟನೆ. ವಿಶ್ವ ಕನ್ನಡ ಸಮ್ಮೇಳನದ ಸಂಭ್ರಮಾಚರಣೆಯ ಅಂಗವಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕನ್ನಡ ನಾಡಿನ ವಿವಿಧ ಕ್ಷೇತ್ರಗಳಲ್ಲಾಗಿರುವ ಪ್ರಗತಿಯ ಆತ್ಮಾವಲೋಕನದ ಜೊತೆಗೆ ಕನ್ನಡ ಸಾಹಿತ್ಯದ ಸೃಜನಶೀಲ ಹಾಗೂ ಸೃಜನೇತರ ಪ್ರಕಾರದ 101 ಕೃತಿಗಳನ್ನು, ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ಪ್ರಕಟಿಸಲಾಗುತ್ತಿದೆ. ಈ ವಿಶಿಷ್ಟ ಕೃತಿಗಳನ್ನು ಆಯ್ಕೆ ಮಾಡಿದ ಆಯ್ಕೆ ಸಮಿತಿ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ನನ್ನ ವಂದನೆಗಳು. ಈ ಸಾಹಿತ್ಯ ಮಾಲಿಕೆಯನ್ನು ಸಾಹಿತ್ಯಾಭಿಮಾನಿಗಳು ಸ್ವಾಗತಿಸುವ ಮೂಲಕ ಈ ಕೃತಿಗಳ ಸದುಪಯೋಗ ಪಡೆದುಕೊಳ್ಳುತ್ತಾರೆಂದು ಭಾವಿಸಿದ್ದೇನೆ. (ಐ.ಎಂ. ವಿಠ್ಠಲಮೂರ್ತಿ) ವಿಶೇಷಾಧಿಕಾರಿಗಳು ವಿಶ್ವ ಕನ್ನಡ ಸಮ್ಮೇಳನ vii ಎರಡು ನುಡಿ ಕರ್ನಾಟಕ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ `ವಿಶ್ವ ಕನ್ನಡ ಸಮ್ಮೇಳನ’ದ ಅಂಗವಾಗಿ ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿರುವ ಸಾಹಿತಿಗಳ ಮಹತ್ವದ ಕೃತಿಗಳನ್ನು ಓದುಗರಿಗೆ ಒದಗಿಸಬೇಕೆಂಬ ಸದಾಶಯ ಹೊಂದಿರುತ್ತದೆ. ಈ ಯೋಜನೆಯಡಿ ಸುಮಾರು 100 ಕೃತಿಗಳನ್ನು ಪ್ರಕಟಿಸಲು ಉದ್ದೇಶಿಸಿದೆ. ಈ ಕೃತಿಗಳನ್ನು ಆಯ್ಕೆಮಾಡಲು ಖ್ಯಾತ ವಿದ್ವಾಂಸರಾದ ಪ್ರೊ. ಎಲ್.ಎಸ್. ಶೇಷಗಿರಿರಾವ್‍ರವರ ಅಧ್ಯಕ್ಷತೆಯಲ್ಲಿ ನಾಡಿನ ಹೆಸರಾಂತ ಸಾಹಿತಿ / ವಿದ್ವಾಂಸರುಗಳನ್ನೊಳಗೊಂಡ ಆಯ್ಕೆ ಸಮಿತಿಯನ್ನು ರಚಿಸಿದೆ. ಈ ಆಯ್ಕೆ ಸಮಿತಿಯು ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಗೆ ಕನ್ನಡ ಸಾಹಿತ್ಯದ ವಿವಿಧ ಕಾಲಘಟ್ಟಗಳಲ್ಲಿ ಬಂದ ಪ್ರಾತಿನಿಧಿಕ ಕೃತಿಗಳನ್ನು ಆಯ್ಕೆ ಮಾಡಿರುತ್ತದೆ. ಆಯ್ಕೆ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರಿಗೆ ಸರ್ಕಾರದ ಪರವಾಗಿ ವಂದನೆಗಳು ಸಲ್ಲುತ್ತವೆ. ಈ ಪುಸ್ತಕಗಳನ್ನು ಹೊರತರಲು ಅನುಮತಿ ನೀಡಿ ಸಹಕರಿಸಿದ ಎಲ್ಲಾ ಲೇಖಕರು ಹಾಗೂ ಹಕ್ಕುದಾರರುಗಳಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ. ಕನ್ನಡದ ಮೇರುಕೃತಿ ಸಾಹಿತ್ಯ ಮಾಲಿಕೆಯನ್ನು ಓದುಗರು ಸ್ವಾಗತಿಸುತ್ತಾರೆಂದು ನಂಬಿದ್ದೇನೆ. ದಿನಾಂಕ 17.01.2011 (ರಮೇಶ್ ಬಿ.ಝಳಕಿ) ಸರ್ಕಾರದ ಕಾರ್ಯದರ್ಶಿಗಳು ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ viii ಪ್ರಕಾಶಕರ ಮಾತು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ‘ವಿಶ್ವ ಕನ್ನಡ ಸಮ್ಮೇಳನ’ದ ಅಂಗವಾಗಿ ಸುಮಾರು ನೂರು ಪುಸ್ತಕಗಳನ್ನು ಪ್ರಕಟಿಸಲು ಉದ್ದೇಶಿಸಿರುತ್ತದೆ. ಈ ಯೋಜನೆಯಡಿ ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಈ ಮೂರೂ ಕಾಲಘಟ್ಟಗಳಲ್ಲಿ ರಚನೆಗೊಂಡ, ಕನ್ನಡದಲ್ಲಿ ಮಹತ್ವದ ಕೃತಿಗಳೆಂದು ಪರಿಗಣಿತವಾಗಿರುವ ಪುಸ್ತಕಗಳನ್ನು ಸರ್ಕಾರವು ನೇಮಿಸಿರುವ ಆಯ್ಕೆ ಸಮಿತಿಯು ಮರುಮುದ್ರಣಕ್ಕೆ ಆಯ್ಕೆ ಮಾಡಿರುತ್ತದೆ. ಈ ಸಾಹಿತ್ಯ ಮಾಲೆಯಲ್ಲಿ ಈಗಾಗಲೇ ಇಲಾಖೆಯು ಸಮಗ್ರ ಸಾಹಿತ್ಯ ಪ್ರಕಟಣೆಯಡಿ ಪ್ರಕಟಿಸಿರುವ ಲೇಖಕರ ಕೃತಿಗಳನ್ನು ಪರಿಗಣಿಸಿರುವುದಿಲ್ಲ. ಕನ್ನಡದ ಮೇರುಕೃತಿಗಳ ಮರುಮುದ್ರಣಕ್ಕೆ ಪುಸ್ತಕಗಳನ್ನು ಆಯ್ಕೆ ಮಾಡಿದ ಆಯ್ಕೆ ಸಮಿತಿಯ ಅಧ್ಯಕ್ಷರಾದ ಪ್ರೊ.. ಎಲ್.ಎಸ್. ಶೇಷಗಿರಿ ರಾವ್‍ರವರಿಗೆ ಹಾಗೂ ಸಮಿತಿಯ ಸದಸ್ಯರುಗಳಾದ ಡಾ. ಚಂದ್ರಶೇಖರ ಕಂಬಾರ, ಡಾ. ಹಂಪ ನಾಗರಾಜಯ್ಯ, ಡಾ. ಎಂ.ಎಂ.ಕಲಬುರ್ಗಿ, ಡಾ. ದೊಡ್ಡರಂಗೇಗೌಡ, ಡಾ. ಎಚ್.ಜೆ. ಲಕ್ಕಪ್ಪಗೌಡ, ಡಾ. ಅರವಿಂದ ಮಾಲಗತ್ತಿ, ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಡಾ. ಪಿ.ಎಸ್. ಶಂಕರ್, ಶ್ರೀಮತಿ ಸಾರಾ ಅಬೂಬಕ್ಕರ್, ಡಾ. ಪ್ರಧಾನ್ ಗುರುದತ್ತ ಇವರುಗಳಿಗೆ ನನ್ನ ಕೃತಜ್ಞತೆಗಳು. ಈ ಯೋಜನೆಯಡಿ ಮರುಮುದ್ರಣಕ್ಕೆ ಆಯ್ಕೆಯಾಗಿರುವ ಪುಸ್ತಕಗಳ ಮುದ್ರಣಕ್ಕೆ ಅನುಮತಿ ನೀಡಿದ ಎಲ್ಲ ಲೇಖಕರಿಗೂ, ಹಕ್ಕುದಾರರಿಗೂ ಮತ್ತು ಕರಡಚ್ಚು ತಿದ್ದಿದವರಿಗೂ ನನ್ನ ವಂದನೆಗಳು. ಸದರಿ ಪ್ರಕಟಣಾ ಯೋಜನೆಯ ಪುಸ್ತಕಗಳನ್ನು ಹೊರತರಲು ಸಹಕರಿಸಿದ ಶ್ರೀ ಎಚ್. ಶಂಕರಪ್ಪ, ಜಂಟಿ ನಿರ್ದೇಶಕರು, (ಸು.ಕ.), ಶ್ರೀಮತಿ ವೈ.ಎಸ್.ವಿಜಯಲಕ್ಷ್ಮಿ, ಸಹಾಯಕ ನಿರ್ದೇಶಕರು ಹಾಗೂ ಪ್ರಕಟಣಾ ಶಾಖೆಯ ಸಿಬ್ಬಂದಿಗೆ ನನ್ನ ನೆನಕೆಗಳು. ವಿಶ್ವ ಕನ್ನಡ ಸಮ್ಮೇಳನದ ಲಾಂಛನವನ್ನು ಸಿದ್ಧಪಡಿಸಿಕೊಟ್ಟ ಹಿರಿಯಕಲಾವಿದರಾದ ಶ್ರೀ ಸಿ. ಚಂದ್ರಶೇಖರ ಅವರಿಗೂ ನನ್ನ ನೆನಕೆಗಳು ಹಾಗೂ ಈ ಪುಸ್ತಕಗಳನ್ನು ಸುಂದರವಾಗಿ ಮುದ್ರಿಸಿಕೊಟ್ಟಿರುವ ಮಯೂರ ಪ್ರಿಂಟ್ ಆ್ಯಡ್ಸ್‍ನ ಮಾಲೀಕರಾದ ix ಶ್ರೀ ಬಿ.ಎಲ್. ಶ್ರೀನಿವಾಸ್ ಮತ್ತು ಸಿಬ್ಬಂದಿ ವರ್ಗದವರಿಗೂ ನನ್ನ ನೆನಕೆಗಳು. ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ಕನ್ನಡ ಓದುಗರಿಗೆ ಹಲವಾರು ವರ್ಷಗಳಿಂದ ದೊರಕದೇ ಇದ್ದ ಎಷ್ಟೋ ಪುಸ್ತಕಗಳು ಲಭ್ಯವಾಗುತ್ತಿರುವುದು ಹೆಮ್ಮೆಯ ಸಂಗತಿ. ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ಸಾಹಿತ್ಯಾಭಿಮಾನಿಗಳಿಗೆ ಅಕ್ಷರದಾಸೋಹ ನಡೆಸುವ ಆಶಯ ನಮ್ಮದು. ಈ ಕೃತಿಗಳನ್ನು ಕನ್ನಡಿಗರು ಸ್ವಾಗತಿಸುತ್ತಾರೆಂದು ನಂಬಿದ್ದೇನೆ. ದಿನಾಂಕ 11.01.2011 ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ x ಕನ್ನಡದ ಮೇರುಕೃತಿಗಳ ಆಯ್ಕೆ ಸಮಿತಿ ಅಧ್ಯಕ್ಷರು ಪ್ರೊ. . ಎಲ್.ಎಸ್. ಶೇಷಗಿರಿ ರಾವ್ ಸದಸ್ಯರು ಡಾ|| ಚಂದ್ರಶೇಖರ ಕಂಬಾರ ಡಾ|| ಎಂ.ಎಂ. ಕಲಬುರ್ಗಿ ಡಾ|| ದೊಡ್ಡರಂಗೇಗೌಡ ಡಾ|| ಅರವಿಂದ ಮಾಲಗತ್ತಿ ಡಾ|| ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ಡಾ|| ಪ್ರಧಾನ್ ಗುರುದತ್ತ ಡಾ|| ಹಂಪ ನಾಗರಾಜಯ್ಯ ಡಾ|| ಎಚ್.ಜೆ. ಲಕ್ಕಪ್ಪಗೌಡ ಶ್ರೀಮತಿ ಸಾರಾ ಅಬೂಬಕ್ಕರ್ ಡಾ|| ಪಿ.ಎಸ್. ಶಂಕರ್ ಸದಸ್ಯ ಕಾರ್ಯದರ್ಶಿ ಶ್ರೀ ಮನು ಬಳಿಗಾರ್, ಕ.ಆ.ಸೇ. ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ xi ಅರ್ಪಣೆ 1965ರ ಭಾರತ, ಪಾಕಿಸ್ತಾನ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿ ಅಮರರಾದ ವೀರ ಯೋಧ, ನನ್ನೊಲವಿನ ಸಹೋದರ ದಿವಂಗತ ಕ್ಯಾಪ್ಟನ್ ಮಹಮ್ಮದ್ ಹಾಶಿಂ ಇವರಿಗೆ. ಹೆತ್ತವರಿಗಿಂತಲೂ ಹುಟ್ಟಿದ ನೆಲ ಹಿರಿದೆಂದು ತಿಳಿದೆ, ಈ ನೆಲಕ್ಕಾಗಿ ನೆತ್ತರು ಹರಿಸಿದೆ; ಹೆತ್ತೊಡಲ ಉರಿಸಿ, ಕ್ಷಣ ಮಾತ್ರದಲಿ ಕಣ್ಮರೆಯಾದ, ಹೆತ್ತವರೂ ಕಣ್ಮರೆಯಾದರು. ಒಡಹುಟ್ಟಿದವರೆದೆಯಿಂದ ನೆತ್ತರ ಹನಿ ಇನ್ನೂ ತೊಟ್ಟಿಕ್ಕುತ್ತಲೇ ಇದೆಯಲ್ಲಾ ತಮ್ಮಾ? ಮತ್ತೆಂದು ಒಂದಾಗೋಣ? ಕೊನೆಯ ದಿನ ತಾನೇ? ಅದಕೂ ಮೊದಲು ನಿನಗಿದೊ ನನ್ನದೊಂದು ಪುಟ್ಟ ಕಾಣಿಕೆ. ಒಂದು ಬೊಗಸೆ ಕಣ್ಣೀರಿನೊಡನೆ, -ಸಾರಾ ಆಬೂಬಕ್ಕರ್ xii ಎರಡು ಮಾತು ಹನ್ನೊಂದು ವರ್ಷಗಳ ಹಿಂದೆ ನಾನು ಇಳಿತ, ಭರತ, ಪ್ರವಾಹ, ಸುಳಿ, ಎಂಬ ನಾಲ್ಕು ಭಾಗಗಳ ಕಾದಂಬರಿಯನ್ನು ರಚಿಸಿ `ಸುಳಿಯಲ್ಲಿ ಸಿಕ್ಕವರು’ ಹಾಗೂ `ಪ್ರವಾಹ ಸುಳಿ’ ಎಂಬ ಎರಡು ಭಾಗಗಳಲ್ಲಿ ಬಿಡಿ ಬಿಡಿಯಾಗಿ ಪ್ರಕಟಿಸಿದೆ. ಇದು ಒಂದೇ ಹೊತ್ತಗೆಯಾಗಿ ಪ್ರಕಟಿಸಬೇಕಾಗಿತ್ತೆಂಬ ಸಲಹೆ ಆಗಲೇ ಬಂದಿತ್ತು. ಆದರೆ ಆಗ ಅದು ಸಾಧ್ಯವಾಗಿರಲಿಲ್ಲ. ಈಗ ಈ ನಾಲ್ಕೂ ಭಾಗಗಳನ್ನು ಒಟ್ಟು ಸೇರಿಸಿ ಒಂದೇ ಹೊತ್ತಗೆಯಾಗಿ ಪ್ರಕಟಿಸುತ್ತಿದ್ದೇನೆ. ಈ ಕೃತಿಗಳಿಗೆ ಕರ್ನಾಟಕ ಲೇಖಕಿಯರ ಸಂಘದ ಪ್ರತಿಷ್ಠಿತ ಪ್ರಶಸ್ತಿಯಾದ ಅನುಪಮಾ ನಿರಂಜನ ಪ್ರಶಸ್ತಿ, ಮೈಸೂರಿನ ಸಾವಿತ್ರಮ್ಮ ದೇ.ಜ.ಗೌ. ಪ್ರಶಸ್ತಿ ಹಾಗೂ ರತ್ಮಮ್ಮ ಹೆಗಡೆ ಮಹಿಳಾ ಸಾಹಿತ್ಯ ಪ್ರಶಸ್ತಿಗಳು ಲಭಿಸಿವೆ. ಈ ಕಾದಂಬರಿಯಲ್ಲಿ ಚಿತ್ರಿಸಲ್ಪಟ್ಟಿರುವ ಎಲ್ಲಾ ಪಾತ್ರಗಳೂ ಘಟನೆಗಳೂ ಕೇವಲ ನನ್ನ ಕಲ್ಪನೆಯಿಂದ ಮೂಡಿ ಬಂದುವುಗಳಾಗಿವೆ. ಈ ಕಾದಂಬರಿಯಲ್ಲಿ ಚಿತ್ರಿಸಲ್ಪಟ್ಟಿರುವ ಘಟನೆಗಳು ಅಥವಾ ಪಾತ್ರಗಳು ಜೀವಂತವಿರುವವರಿಗಾಗಲಿ, ಅಥವಾ ಗತಿಸಿದವರಿಗಾಗಲಿ ಅನ್ವಯಿಸುವಂತಿದ್ದರೆ ಅದು ಕೇವಲ ಆಕಸ್ಮಿಕ ಎಂದಷ್ಟೆ ನಾನು ಹೇಳ ಬಲ್ಲೆ. ಈ ಕೃತಿಯ ಪ್ರಕಟಣೆಗೆ ಸಹಕರಿಸಿದ ಎಲ್ಲ ಸೋದರ ಸೋದರಿಯರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. 27.12.2004 ಸಾರಾ ಅಬೂಬಕ್ಕರ್ xiii ಪರಿವಿಡಿ ಶುಭ ಸಂದೇಶ iii ಚೆನ್ನುಡಿ iv ಅಧ್ಯಕ್ಷರ ಮಾತು v ಹೊನ್ನುಡಿ vi ಎರಡು ನುಡಿ vii ಪ್ರಕಾಶಕರ ಮಾತು viii ಕನ್ನಡದ ಮೇರುಕೃತಿಗಳ ಆಯ್ಕೆ ಸಮಿತಿ x ಅರ್ಪಣೆ x i ಎರಡು ಮಾತು xii ಇಳಿತ 1 ಭರತ 84 ಪ್ರವಾಹ 139 ಸುಳಿ 219 xv ಸುಳಿ 1 ಇಳಿತ ಸಮುದ್ರ ತೀರದ ಆ ಹಾದಿಯಲ್ಲಿ ಮುಂದುವರಿದಾಗ ಮಮ್ಮೂಟಿಯ ದೃಷ್ಟಿ ಸುತ್ತಲೂ ಹರಿಯಿತು. ಒಂದೆಡೆ ಹೊಲಗದ್ದೆಗಳು ಹಸಿರು ಪೈರುಗಳಿಂದ, ತೊಂಡೆ ಚಪ್ಪರದ ಮೇಲೆ ಹರಡಿದ ಬಿಳಿ ಹೂಗಳಿಂದ ಮತ್ತು ನೆಲದಲ್ಲೇ ಹರಡಿದ ಸಿಹಿ ಗುಂಬಳ ಬಳ್ಳಿಯಲ್ಲಿ ಬಿಟ್ಟ ಹಳದಿ ಹೂಗಳಿಂದ ಕಂಗೊಳಿಸುತ್ತಿದ್ದರೆ, ಇನ್ನೊಂದೆಡೆ ತೆಂಗಿನ ಕಾಯಿಗಳ ಗೊಂಚಲುಗಳಿಂದ ತುಂಬಿಕೊಂಡು ತಲೆ ಎತ್ತಿ ನಿಂತ ತೆಂಗಿನಮರಗಳು. ಅದರಾಚೆ ಅಲೆಗಳ ಮೇಲೆ ಅಲೆಗಳನ್ನುರುಳಿಸಿ ತೀರಕ್ಕಪ್ಪಳಿಸುವ ನೀಲ ಸಾಗರದ ತೆರೆಗಳು. ತೆಂಗುಗಳ ಸಾಲಿಗೂ ಸಾಗರಕ್ಕೂ ನಡುವಿನ ಮರಳ ಹಾಸಿನಲ್ಲಿ ಉರುಳಾಡಿ, ಸಮುದ್ರದಲ್ಲಿ ಈಜಿದ್ದು, ಸಾಗರದ ತೆರೆಗಳೊಡನೆ ಆಟವಾಡಿದ್ದು ಎಲ್ಲವೂ ಇನ್ನೂ ಹಸಿ ಹಸಿ ನೆನಪುಗಳು ಹೌದು. ಈ ಹತ್ತು ವರ್ಷಗಳಲ್ಲಿ ತನ್ನೂರು ಒಂದಿನಿತೂ ಬದಲಾಗಿರಲಿಲ್ಲ. ಬದಲಾಗಿದ್ದು ತಾನೇ. ಯಾರ ಊಹೆಗೂ ನಿಲುಕದಂತಹ, ಯಾರೂ ನಂಬಲಾಗದಂತಹ ಬದಲಾವಣೆ. ಮಮ್ಮೂಟಿಯ ತುಟಿಯಲ್ಲಿ ಮಂದಹಾಸ ಅರಳಿತು. ಕಾರಿನ ವೇಗಮಾಪಕದೆಡೆಗೆ ಕಣ್ಣು ಹೊರಳಿಸಿ ಕಾರಿನ ವೇಗವನ್ನು ನಿಧಾನಗೊಳಿಸುತ್ತಾ ಸ್ಟಿಯರಿಂಗ್ ವೀಲನ್ನು ಹಿಡಿದಿದ್ದ ಕೈಗಳೆಡೆಗೆ ದೃಷ್ಟಿ ಹರಿಸಿದಾಗ ಕಂಡದ್ದು ಬಲಗೈ ಬೆರಳುಗಳ ಮೇಲಿದ್ದ ಸುಟ್ಟ ಗಾಯದ ಕಲೆಗಳು. ಕಾರನ್ನು ಒಂದು ಮರದ ನೆರಳಿನಲ್ಲಿ ನಿಲ್ಲಿಸಿ ಜೇಬಿನಿಂದ ವಿದೇಶಿ ಸಿಗರೇಟಿನ ಪೊಟ್ಟಣವೊಂದನ್ನು ಹೊರತೆಗೆದು ಸಿಗರೇಟೊಂದನ್ನು ಸೇದುತ್ತಾ ಮತ್ತೊಮ್ಮೆ ಸುತ್ತಲೂ ದೃಷ್ಟಿಸಿದನು. ಆಗ ತಾನೇ ಹುಟ್ಟಿದ ಸೂರ್ಯನ ಹೊಂಗಿರಣಗಳು ಪ್ರಕೃತಿಯ ಮಡಿಲಲ್ಲಿ ಅರಳಿ ನಿಂತ ಹೂಗಳೊಡನೆ, ಸಾಗರದ ನೀಲಿ ಬಣ್ಣದ ಅಲೆಗಳೊಡನೆ ಆಟವಾಡುವುದನ್ನು ನೋಡುತ್ತಾ ಮೈ ಮರೆತನು. ಹಾಗೆಯೇ ಆತನ ದೃಷ್ಟಿ ಕೈಬೆರಳಿನ ಸುಟ್ಟಗಾಯದ ಕಲೆಗಳೆಡೆಗೆ ಹರಿಯಿತು. ಎಂದಿಗೂ ಮಾಯದ ಕಲೆಗಳು. ಹತ್ತಿಪ್ಪತ್ತು ವರ್ಷಗಳ ಹಿಂದಿನ ತನ್ನ ಬಾಳಿನ ಒಂದು ಪುಟದ ದಾಖಲೆ ಅದಾಗಿತ್ತು. 2 ಸುಳಿ ಸುಟ್ಟ ಗಾಯದ ಕಲೆಗಳು ಕೇವಲ ಕಲೆಗಳು ಮಾತ್ರವಾಗಿರಲಿಲ್ಲ. ಕೆಲವೊಮ್ಮೆ ಅದಕ್ಕೊಂದು ಇತಿಹಾಸವೇ ಇರುತ್ತದಲ್ಲವೇ? ಇಪ್ಪತ್ತೆಂಟು ವರ್ಷಗಳ ಹಿಂದೆ..... ನೆನಪಿನ ಕಹಿ ಬುತ್ತಿಯನ್ನು ಬಿಚ್ಚಿ ಉಣ್ಣತೊಡಗಿದನು ಮಮ್ಮೂಟಿ. * * * “ಏ ಮಮ್ಮೂಟೀ, ಎಲ್ಲಿ ಸತ್ತೆ''? ಜಮೀನ್ದಾರ ಮೂಸಾ ಹಾಜಿಯವರ ಕೂಗು. “ಬಂದೇ ಕಾಕಾ.'' ಯಾವುದೋ ಮೂಲೆಯಿಂದ ಮಮ್ಮೂಟಿಯ ಉತ್ತರ. “ಮಮ್ಮೂಟೀ, ಬಾರೋ ಬೇಗ. ನನ್ನ ಚಪ್ಪಲಿ ಎಲ್ಲಿದೆ? ಹುಡುಕಿ ಕೊಡು'' ಅವರ ಹಿರಿಯ ಮಗ ಹನೀಫ್‍ನ ಆಜ್ಞೆ. “ಈ ಮಮ್ಮೂಟಿ ಎಲ್ಲಿ ಮಾಯವಾದನೋ. ಹೊತ್ತಾಗಿ ಹೋದರೆ ಮಾರ್ಕೆಟ್ಟಿನಲ್ಲಿ ಮೀನು ಸಿಗುತ್ತದೆಯೇ? ಮಮ್ಮೂಟೀ, ...ಏ ಮಮ್ಮೂಟೀ...''ಮೂಸಾ ಹಾಜಿಯವರ ಹೆಂಡತಿ ಆಮಿನಾಬಿಯ ಹುಡುಕಾಟ. “ಆ ಹುಡುಗ ಎಲ್ಲೋ ಆಡುತ್ತಾ ಇರುತ್ತಾನೆ. ಇತ್ತೀಚೆಗೆ ನಮ್ಮ ಮಾತಿಗೆ ಕಿವಿಗೊಡುವುದೇ ಇಲ್ಲ. ಹಾಜಿಯ ಕೈಯಿಂದ ಕುಂಡೆಗೆ ಎರಡು ಏಟು ಬಿದ್ದರೆ ಸರಿ ಹೋಗುತ್ತದೆ?'' ಹಾಜಿಯವರ ತಾಯಿ ಖತೀಜಮ್ಮನವರ ಹಿಮ್ಮೇಳ. “ಆ ಡ್ರೈವರ್ ಅಂಬುವಿನ ಜೊತೆಯಲ್ಲಿ ಸಂಭಾಷಣೆಗೆ ತೊಡಗಿರಬೇಕು. ನನಗೆ ಎಲೆಯಡಿಕೆ ತಂದು ಕೊಡೂಂತ ನಿನ್ನೆ ಬೆಳಿಗ್ಗೆಯಿಂದ ಹೇಳುತ್ತಿದ್ದೇನೆ. ನಮ್ಮ ಮಾತೆಲ್ಲ ಯಾವ ಲೆಕ್ಕ? ಮೂರು ಹೊತ್ತು ಹೊಟ್ಟೆ ಬಿರಿಯುವಷ್ಟು ಬೀಳುತ್ತಿದೆಯಲ್ಲ ಹೊಟ್ಟೆಗೆ?'' ಅಡಿಗೆಯಾಕೆ ಆಚುಮ್ಮನ ಆಕ್ರೋಶ. ಅವಸರದಿಂದ ಕಕ್ಕಸಿನಿಂದ ಹೊರಬರುತ್ತಿದ್ದ ತೆಳ್ಳಗಿನ, ಕೋಲುಮುಖದ ಹನ್ನೆರಡು ವರ್ಷದ ಹುಡುಗ ಮಮ್ಮೂಟಿಯನ್ನು ಹಾಜಿಯವರ ಮಗಳು ಹದಿನೈದು ವರ್ಷದ ಜೊಹರಾ ಕೇಳಿದಳು. “ಏನೊ, ಎಲ್ರೂ ಕರೆಯುತ್ತಿದ್ದಾರೇಂತ ಅರ್ಧದಲ್ಲೇ ಓಡಿ ಬಂದೆಯಾ, ಅಥವಾ ಎಲ್ಲ ಸರಕುಗಳನ್ನೂ ಇಳಿಸಿಯೇ ಬಂದೆಯಾ?'' “ಹೋಗಿ ಅಕ್ಕಾ, ನಿಮಗೆ ಯಾವಾಗಲೂ ತಮಾಷೆ'' ಎಂದು ನಗುತ್ತಾ ಮಮ್ಮೂಟಿ ಯಜಮಾನರ ಬಳಿಗೆ ಓಡಿದನು. ವಿಶ್ರಾಂತಿ ಇಲ್ಲದ ದುಡಿತ. ಬೆಳಗ್ಗಿನ ನಮಾಜಿನ ಬಾಂಗ್ ಕೇಳಿದೊಡನೆ ಅಜ್ಜಿಗೆ ಕೈ ಕಾಲು ತೊಳೆದು ಶುದ್ಧೀಕರಿಸಲು ನೀರು ಬಿಸಿ ಮಾಡಿ ಕೊಡಬೇಕು. ಇಳಿತ 3 ಬಳಿಕ ನೀರೊಲೆಗೆ ಉರಿ ಹಾಕಿ ದನದ ಕೊಟ್ಟಿಗೆ ಶುಚಿ ಮಾಡಿ ಆಚುಮ್ಮ ಹಾಲು ಕರೆದ ಬಳಿಕ ಕರುಗಳನ್ನು ಹೊರಗಟ್ಟಿ ಮನೆಯ ಕಸ ಗುಡಿಸುವುದೂ ಮಮ್ಮೂಟಿಯದೇ ಕೆಲಸ. ಇಷ್ಟು ಕೆಲಸಗಳಾದ ಮೇಲೆ ಮನೆಯ ಹಿಂಭಾಗದ ಕೊಳದಲ್ಲಿಳಿದು ಹಲ್ಲು ತಿಕ್ಕಿ ಮುಖ ತೊಳೆಯುವಷ್ಟರಲ್ಲಿ ಒಳಗಿನಿಂದ ಯಾರದಾದರೂ ಕರೆ ಕೇಳಿಯೇ ಕೇಳಿಸುತ್ತದೆ. “ಮಮ್ಮೂಟೀ, ಏ ಮಮ್ಮೂಟೀ, ಸೂಳೆ ಮಗನೇ, ಎಲ್ಲಿ ಸತ್ತೇ?'' ಇಂತಹ ಮಾತುಗಳನ್ನೆಲ್ಲ ಕೇಳಿ ಆತನಿಗೆ ಕೋಪ ಬರುತ್ತಿರಲಿಲ್ಲ. ಆತನ ಚರ್ಮ ಒಂದು ರೀತಿ ದಪ್ಪವಾಗಿ ಬಿಟ್ಟಿದೆ. ಹನೀಫ್ ಕಿವಿ ಹಿಂಡಿದಾಗಲಾಗಲಿ, ಆಮಿನಾಬಿ ಪೊರಕೆಯಿಂದ ಬಾರಿಸಿದಾಗಲಾಗಲಿ, ಆಕೆಯ ಕಿರಿಯ ಮಗ ಫರೀದ್ ಕಲ್ಲು ಹೊಡೆದು ಗಾಯಗೊಳಿಸಿದಾಗಲಾಗಲಿ ಮಮ್ಮೂಟಿ ಅಳುವುದಿಲ್ಲ. ಆಗೆಲ್ಲ ಆತನು ಮುಖ ಮುದುಡಿಸಿ ಶೂನ್ಯದಲ್ಲಿ ದೃಷ್ಟಿನೆಟ್ಟು ಮನೆಯ ಹಿಂಭಾಗದ ಜಗಲಿಯಲ್ಲಿ ನಿಲ್ಲುತ್ತಾನೆ. ತನ್ನೂರಿನ ಪುಟ್ಟ ಗುಡಿಸಲು ಕಣ್ಣಿಗೆ ಕಟ್ಟುತ್ತದೆ. ಮಾಡಿಗೆ ಹಾಸಿದ ಹಳೆಯ ಮಡಲುಗಳೆಡೆಯಿಂದ ಬಿದ್ದ ಬಿಸಿಲು ಮನೆಯೊಳಗೆ ಬಿಸಿಲು ನೆರಳಿನ ನವ್ಯ ಚಿತ್ರ ಬಿಡಿಸುತ್ತದೆ. ಮಳೆಗಾಲದಲ್ಲಿ ಮನೆಯೊಳಗೂ ನದಿಯೇ. ಮಮ್ಮೂಟಿಯ ತಾಯಿ ಉಮ್ಮಾಲಿ ಮನೆಯೊಳಗಿರುವ ಮಣ್ಣಿನ ಮಡಕೆ, ಹಳೆಯ ಬಾಲ್ದಿಗಳನ್ನು ತಂದು ನೀರು ಸೋರುವ ಜಾಗದಲ್ಲಿರಿಸುತ್ತಾಳೆ. ಮೂಲೆಯಲ್ಲಿರುವ ಹಳೆಯ ಮಂಚದಲ್ಲಿ ಅಕ್ಕ, ಜಮೀಲಾ ಮುದುಡುತ್ತಾಳೆ. ಕೆಲವೊಮ್ಮೆ ತಾಯಿಯ ಆಡಿನ ಮರಿಗಳು ಬಂದು ಅವಳನ್ನು ಕೂಡಿಕೊಳ್ಳುತ್ತವೆ. ಮಮ್ಮೂಟಿಯ ತಿಂಗಳ ಸಂಬಳ ಹತ್ತು ರೂಪಾಯಿಗಳ ಜೊತೆಯಲ್ಲಿ ತಾಯಿಯ ಆಡಿನ ಹಾಲಿನ ವ್ಯಾಪಾರ ಮತ್ತು ಅಲ್ಲಿ ಇಲ್ಲಿ ಭತ್ತ ಕುಟ್ಟಿ, ರೊಟ್ಟಿ ಮಾಡಿ ಪಡೆದ ಸಂಪಾದನೆ. ಹೇಗೊ ತಾಯಿ ಮಗಳು ಬದುಕಿದ್ದಾರೆ ಎಂಬ ನೆಮ್ಮದಿ. ತಿಂಗಳು ತಿಂಗಳೂ ದೊರೆಯುವ ಆ ಹತ್ತು ರೂಪಾಯಿ ಮಮ್ಮೂಟಿಯನ್ನು ಆ ಮನೆಯಿಂದ ಓಡಿ ಹೋಗದಂತೆ ತಡೆದು ಆ ಮನೆಗೆ ಅಂಟಿಸಿದೆ. ಮಮ್ಮೂಟಿ ಆ ಮನೆಗೆ ಬಂದ ದಿನ ಆತನಿಗೆ ಇನ್ನೂ ಚೆನ್ನಾಗಿ ನೆನಪಿದೆ. ಆಗ ಆತ ತಮ್ಮೂರಿನಲ್ಲಿ ಶಾಲೆಗೆ ಹೋಗುತ್ತಿದ್ದ ದಿನಗಳವು. ಮೂರನೇ ತರಗತಿಗೆ ಬಂದಿದ್ದು ಅಷ್ಟಿಷ್ಟು ಓದಲು, ಬರೆಯಲು ಕಲಿತಿದ್ದ. ಆದಿನ ಸಾಯಂಕಾಲ ಶಾಲೆಯಿಂದ ಹಿಂತಿರುಗಿದಾಗ ಮೂಸಾ ಹಾಜಿಯವರ ಗುಮಾಸ್ತ ಉಂಬಾಯಿ ಜಗಲಿಯ ಮೇಲೆ ಮಣೆ ಹಾಕಿ ಕುಳಿತುಕೊಂಡು ಎಲೆಯಡಿಕೆ ಮೆಲ್ಲುತ್ತಾ ತನ್ನ ತಾಯಿಯೊಡನೆ ಹರಟುತ್ತಿದ್ದುದನ್ನು ಕಂಡನು. 4 ಸುಳಿ ‘ನೋಡು ಉಮ್ಮಾಲಿ, ನಿನ್ನ ಮಗನನ್ನು ಹಾಜ್ಯಾರರ ಮನೆಗೆ ಕಳಿಸಬೇಕೂಂತ ಹೇಳಿ ಕಳ್ಸಿದಾರೆ. ತಿಂಗಳಿಗೆ ಹತ್ತು ರೂಪಾಯಿ ಕೊಡ್ತಾರಂತೆ. ಛೆ, ನನಗಾದರೂ ಇಂತಹ ಒಬ್ಬ ಮಗನಿದ್ದಿದ್ದರೆ ನಾನೇ ಕರೆದುಕೊಂಡು ಹೋಗಿ ಅಲ್ಲಿ ಬಿಡುತ್ತಿದ್ದೆ...''ಎನ್ನುತ್ತಿದ್ದಂತೆ ಉಮ್ಮಾಲಿ ನಡುವೆಯೇ ತಡೆದು, “ಎಲ್ಲ ಸರಿ ಕಾಕಾ, ಆದರೆ ನನ್ನ ಹುಡುಗ ಶಾಲೆಗೆ ಹೋಗಿ ಕಲೀಬೇಕೂಂತ ಹೇಳ್ತಿದ್ದಾನಲ್ಲ?'' ಎಂದಳು. “ಹೇ, ಬಿಡು ಉಮ್ಮಾಲಿ, ನನ್ನ ನಿನ್ನ ಮಕ್ಕಳಿಗೆಲ್ಲ ಎಂತ ಇಸ್ಕೂಲು, ಎಂತ ವಿದ್ಯೆ? ಖುರ್‍ಆನ್ ಓದಿ ಐದು ಹೊತ್ತು ನಮಾಜ್ ಮಾಡಲು ಕಲಿತರೆ ಸಾಕು. ಅದಕ್ಕೆಲ್ಲ ಹಾಜ್ಯಾರರು ಏರ್ಪಾಟು ಮಾಡುತ್ತಾರೆ. ರಾತ್ರಿಯ ಹೊತ್ತು ಅವರ ಮನೆ ಪಕ್ಕದಲ್ಲಿರುವ ಮಸೀದಿಯ ಮದ್ರಸಾಗೆ ಕಳಿಸ್ತಾರೆ. ಅದು ತಾನೇ ನಮಗೆ ಬೇಕಾದದ್ದು? ಕಾಫಿರ್‍ಗಳ ಓದೆಲ್ಲ ನಮಗೇಕೆ?'' “ನೀವು ಹೇಳುವುದು ಸರಿ ಕಾಕಾ. ಆದರೆ... ನನ್ನ ಮಗ ಇನ್ನು ಹತ್ತು ವರ್ಷವೂ ತುಂಬದ ಹುಡುಗ. ಅವ ಏನು ಕೆಲಸ ಮಾಡುತ್ತಾನೆ...? ಅವನು ತಿಂದ ತಟ್ಟೆಯನ್ನೂ ಈವರೆಗೆ ಅವನು ತೊಳೆದಿಲ್ಲ...'' “ಅಯ್ಯೋ, ನಿನಗೆ ಹುಚ್ಚು ಉಮ್ಮಾಲಿ. ಹಾಜ್ಯಾರರ ಮನೆಯಲ್ಲೇನು ಗುಡ್ಡೆ ಕಡಿಯುವ ಕೆಲಸವಿದೆಯೆಂದುಕೊಂಡೆಯಾ? ಅಂಗಡಿಯಿಂದ ಏನಾದರೂ ಸಾಮಾನು ತರೋದು, ಹಾಜ್ಯಾರರಿಗೆ ಮಾಳಿಗೆಗೆ ನೀರೋ, ಚಹಾವೊ ಕೊಂಡೊಯ್ದು ಕೊಡುವುದು ಅಷ್ಟೆ. ನಿನ್ನ ಮನೆಯಲ್ಲೆಂದೂ ಕಾಣದ, ಕೇಳದ ಊಟ, ತಿಂಡಿ ತಿಂದು ಒಂದೇ ತಿಂಗಳಲ್ಲಿ ನಿನ್ನ ಮಗ ಹೇಗಾಗುತ್ತಾನೆ, ನೋಡು'' “ಊಟ ತಿಂಡಿಯ ವಿಷಯವಲ್ಲ ಕಾಕಾ. ನಾನೀವರೆಗೆ ನನ್ನ ಮಗನ ಮೇಲೆ ಕೈಯೆತ್ತಿಲ್ಲ. ಅವರೇನಾದ್ರೂ ಹೊಡೆಯೋಕೆ ಬಡೆಯಕೆ ಸುರು ಮಾಡಿದ್ರೆ?...'' ಎನ್ನುತ್ತಿರುವಾಗಲೇ ಆಕೆಯ ಕಂಠ ಗದ್ಗಗದವಾಯಿತು. ಆಕೆ ತಲೆ ತಗ್ಗಿಸಿ ಕುಳಿತಳು. “ಅಲ್ಲ ಉಮ್ಮಾಲಿ, ಹಾಗೆಲ್ಲ ಬಡಿಯೋದಕ್ಕೆ ಅವರೇನು ಮನುಷ್ಯರಲ್ಲವಾ? ಅವರಿಗೂ ಮಕ್ಕಳು ಮರಿ ಇಲ್ಲವಾ? ಈಗ ಒಂದು ಸರ್ತಿ ನೀನು ಕಳಿಸು. ಮುಂದೆ ಅಲ್ಲಿ ಅವನಿಗೆ ಸರಿ ಹೋಗದಿದ್ದರೆ ಹಿಂದಕ್ಕೆ ಕರೆದುಕಂಡು ಬಂದರಾಯಿತು. ಅದೇನು ಬೊಂಬಾಯಿಯೇ? ಮದ್ರಾಸೇ? ಎನ್ನುತ್ತಾ ಮಮ್ಮೂಟಿಯ ಕಡೆಗೆ ತಿರುಗಿ, “ಏನಪ್ಪಾ, ಬರ್ತೀಯಾ ಪಟ್ಟಣಕ್ಕೆ? ದಿನಾಲೂ ಕಾರು, ಬಸ್ಸು, ತೀ ಬಂಡಿ (ರೈಲು ಗಾಡಿ) ಎಲ್ಲ ನೋಡಬಹುದು. ಹೊಟ್ಟೆ ಬಿರಿಯುವಷ್ಟು ಬಿರಿಯಾಣಿ ಇಳಿತ 5 ತಿನ್ನಬಹುದು. ಬರ್ತೀಯಾ?'' ಎಂದು ಕೇಳಿದನು. ಹೇಗಾದರೂ ಪುಸಲಾಯಿಸಿ ಹುಡುಗನನ್ನು ಕರೆದೊಯ್ಯದಿದ್ದರೆ ಆತನು ಮೂಸಾ ಹಾಜಿಯವರಿಂದ ಕೇಳಬಾರದ ಮಾತುಗಳನ್ನೆಲ್ಲ ಕೇಳಿಸಿಕೊಳ್ಳಬೇಕಾಗುತ್ತದೆಂಬ ಆತಂಕ ಆತನದು. ಮಮ್ಮೂಟಿ ಹಿಂದೆ ಮುಂದೆ ಯೋಚಿಸದೆ. “ಹೂಂ, ಕಾಕಾ... ಬರ್ತೇನೆ...'' ಎಂದು ಬಿಟ್ಟನು. “ನೋಡಿದೆಯಾ, ಆ ಹುಡುಗನಿಗೆ ನಿನಗಿಂತ ಬುದ್ಧಿ ಇದೆ. ಕಳ್ಸು ಹುಡುಗನನ್ನು. ತಿಂಗಳಿಗೊಮ್ಮೆ ನೀನೇ ಹೋಗಿ ನೋಡಿಕೊಂಡು ಬರುವಿಯಂತೆ. ಈಗ ನೀನು ಅವನನ್ನು ಕಳಿಸಿದರೆ ಮುಂದೆ ನಿನ್ನ ಮಗಳ ಮದುವೆಗೆ ಹಾಜ್ಯಾರರು ಕೈತುಂಬಾ ಸಹಾಯ ಮಾಡ್ತಾರೆ. ಹೂಂ... ನನಗೂ ಹೊತ್ತಾಯ್ತು.'' ಎನ್ನುತ್ತಾ ಮಮ್ಮೂಟಿಯೆಡೆಗೆ ತಿರುಗಿ. “ಬಾಪ್ಪಾ, ಬೇಗ ಸಿದ್ಧವಾಗಿ ಬಾ. ಈಗಲೇ ಒಂದು ಬಸ್ಸಿದೆ.'' ಎಂದನು. ಮಮ್ಮೂಟಿ ಒಳಗೋಡಿದೊಡನೆ ಜಮೀಲ ಆತನನ್ನು ಹಿಂಭಾಗದ ಜಗಲಿಗೆ ಕರೆದೊಯ್ದು. “ಮಮ್ಮೂ, ಅವರೊಡನೆ ಹೋಗುವುದಕ್ಕೆ ಯಾಕೆ ಒಪ್ಪಿಕೊಂಡೆ? ನೀನು ಹೋದರೆ ನಮಗೆ ಇಲ್ಲಿ, ಮನೆಯಲ್ಲಿ ಗಂಡಸರೂಂತ ಯಾರಿದ್ದಾರೆ? ನಾನು ಬರುವುದಿಲ್ಲಾಂತ ಹೇಳು ಅವರಿಗೆ.'' ಎಂದಳು ಕಣ್ಣೀರು ತುಂಬಿ. “ಅಲ್ಲ ಅಕ್ಕಾ, ಅವರೂ ತಿಂಗಳಿಗೆ ಹತ್ತು ರೂಪಾಯಿ ಕೊಡ್ತಾರಂತೆ, ಹತ್ತು ರೂಪಾಯಿ! ಉಮ್ಮಾ ಹಣ ಇಲ್ಲಾಂತ ಕಳೆದ ಬಾರಿ ಹಬ್ಬಕ್ಕೆ ನಿನಗೆ ಹೊಸ ಲಂಗ ಹೊಲಿಸಲೇ ಇಲ್ಲವಲ್ಲ? ನನಗೆ ಸಿಕ್ಕಿದ ಮೊದಲ ತಿಂಗಳ ಸಂಬಳದಲ್ಲಿ ನಿನಗೊಂದು ಹೊಸ ಲಂಗ ಹೊಲಿಸ್ಕೋ ಅಕ್ಕಾ.'' ಜಮೀಲಳ ಕಣ್ಣೀರು ಉಕ್ಕಿ ಹರಿಯಿತು. ಹತ್ತು ರೂಪಾಯಿಯ ನೋಟು ಆಕೆಯ ಕಣ್ಣೆದುರು ಸುಳಿದಾಡಿತು. ಹೊಸ ಲಂಗದ ಬಟ್ಟೆ ಕಣ್ಣಿಗೆ ಕಟ್ಟಿತು. “ಆಯಿತು. ಹೋಗಿ ಬಾ. ಆದರೆ ನಿನ್ನನ್ನು ಯಾರಾದರೂ ಹೊಡೆದರೆ ಕೂಡಲೇ ಬಂದು ಬಿಡು.'' ಎಂದು ಆತನ ಕಿವಿಯಲ್ಲುಸುರಿದಳು. “ನಿನ್ನ ಬಟ್ಟೆಗಳೆಲ್ಲ ಇಲ್ಲೇ ಇರಲಿ.'' ಎಂದೂ ಸೇರಿಸಿದಳು. ಮಮ್ಮೂಟಿ ಬೇಲಿ ದಾಟುವಾಗ ತಾಯಿ ಮಗಳಿಬ್ಬರೂ ಬೇಲಿಯವರೆಗೂ ಬಂದರು. ನಗು ನಗುತ್ತಾ ಉಂಬಾಯಿಯನ್ನು ಹಿಂಬಾಲಿಸುತ್ತಿದ್ದ ಮಮ್ಮೂಟಿಯನ್ನು ಅವರಿಬ್ಬರೂ ಕಣ್ಣೀರೊರೆಸಿಕೊಳ್ಳುತ್ತಾ ನೋಡುತ್ತಾ ನಿಂತರು. ಮಮ್ಮೂಟಿಯೇನೊ ಸಂತೋಷದಿಂದಲೇ ಉಂಬಾಯಿಯನ್ನು 6 ಸುಳಿ ಹಿಂಬಾಲಿಸಿದ್ದನು. ಬಸ್ಸಿನಲ್ಲಿ ಕುಳಿತುಕೊಂಡು ಪಟ್ಟಣಕ್ಕೆ ಹೋಗುವುದೇ ಮಜವಾಗಿತ್ತು. ಕೇವಲ ಅರ್ಧ ಗಂಟೆಯ ಬಸ್ಸು ಪ್ರಯಾಣವಾದರೂ ಮಮ್ಮೂಟಿ ಸ್ವರ್ಗಕ್ಕೆ ಹೋಗುವಂತೆ ಸಂತೋಷಪಟ್ಟಿದ್ದನು. ದಾರಿಯಲ್ಲಿ ಸಿಕ್ಕಿದ ತನ್ನ ಗೆಳೆಯನೊಡನೆ, “ನಾನು ಬಸ್ಸಿನಲ್ಲಿ ಪಟ್ಟಣಕ್ಕೆ ಹೋಗುತ್ತೇನೆ'' ಎಂದು ಗತ್ತಿನಿಂದ ತಲೆ ಎತ್ತಿ ನುಡಿದನು. ಬಂದ ಕೆಲವು ದಿನಗಳವರೆಗೆ ಮಮ್ಮೂಟಿ ಉಂಬಾಯಿ ಹೇಳಿದಂತೆಯೇ ಹೆಚ್ಚಿನ ಕೆಲಸಗಳೇನೂ ಇಲ್ಲದೆ ಬೀದಿಯಲ್ಲಿ ಓಡಾಡುವ ಕಾರು, ಬಸ್ಸುಗಳನ್ನು ನೋಡುತ್ತಾ ಸಮಯ ಕಳೆಯುತ್ತಿದ್ದನು. ಕ್ರಮೇಣ ಒಂದೊಂದಾಗಿ ಹುಡುಗನ ಮೇಲೆ ಕೆಲಸದ ಹೊರೆ ಬೀಳತೊಡಗಿತು. ಅಂಗಡಿಗೆ, ಮೀನು ಮಾರುಕಟ್ಟೆಗೆ ಹೋಗುವುದಲ್ಲದೆ ಹಟ್ಟಿಯ ಕೆಲಸವನ್ನೂ ಮಾಡಬೇಕಾಯಿತು. ಅಡುಗೆಯ ಹೆಂಗಸು ಆಚುಮ್ಮ ಕೂಡಾ ಆಗಾಗ ಹುಡುಗನಿಗೆ ಪಾತ್ರೆ ತೊಳೆಯುವ, ಕಸ ಗುಡಿಸುವ ಕೆಲಸ ಒಪ್ಪಿಸಿ ತನ್ನ ಕೆಲಸದ ಹೊರೆ ಕಡಿಮೆ ಮಾಡಿಕೊಳ್ಳತೊಡಗಿದಳು. ಹೀಗೆ ಮಮ್ಮೂಟಿ ಆ ಮನೆಯಲ್ಲಿ ಎಲ್ಲರ ಅವಶ್ಯಕತೆಯಾಗಿದ್ದುಕೊಂಡು ಎಲ್ಲರಿಂದಲೂ ನಿಷ್ಪ್ರಯೋಜಕನೆಂಬ ಬಿರುದು ಪಡೆದುಕೊಂಡು ಆ ಮನೆಯ ಆಗು ಹೋಗುಗಳಲ್ಲಿ ಬೆರೆತು ಹೋದನು. ಹನೀಫನಿಂದ ಎಂದಾದರೊಮ್ಮೆ ಕಿವಿ ಹಿಂಡಿಸಿಕೊಳ್ಳುತ್ತಾ, ಯಜಮಾನಿಯಿಂದ ಆಗೀಗ ಒಂದೆರಡು ಪೆಟ್ಟು ತಿನ್ನುತ್ತಾ, ಯಜಮಾನರಿಂದ ಬೈಗಳ ಸುರಿಮಳೆ ಕೇಳುತ್ತಾ ತನಗೆ ತಿಳಿಯದಂತೆ ಆ ಮನೆಯ ನಿತ್ಯದ ವ್ಯವಹಾರಗಳಲ್ಲಿ ಒಂದಾದನು. ಆ ದಿನ ಮಾರುಕಟ್ಟೆಯಿಂದ ಒಳ್ಳೆಯ ಮೀನು ತರಬೇಕೆಂದು ಆಮಿನಾಬಿ ಐದು ರೂಪಾಯಿಗಳನ್ನು ಕೊಟ್ಟಿದ್ದಳು. ಕಪ್ಪು ಬಿಳಿ ಮಿಶ್ರಣದ ದೊಡ್ಡ ಅಂಜಲ್ ಮೀನಿನ ತುಂಡನ್ನು ಮೊಗವೀರ ಹೆಂಗಸಿನೊಡನೆ ಚರ್ಚೆ ಮಾಡಿ ಕೊಂಡಿಕೊಂಡಿದ್ದನು. “ಈಗ ತಾನೇ ಮಾರುಕಟ್ಟೆಗೆ ಬಂದ ಹಸಿ ಹಸಿ ಮೀನು. ಒಳ್ಳೇ ಹಲ್ವಾ ತುಂಡಿನಂತಿದೆ. ನಾಲ್ಕು ರೂಪಾಯಿಗೆ ಕೊಡುವವಳು. ನಿನಗಾಗಿ ನಾಲ್ಕಾಣೆ ಕಮ್ಮಿ ಮಾಡಿದ್ದೇನೆ. ಕಲ್ಲಿನಂತೆ ಗಟ್ಟಿಯಾಗಿದೆ. ತೆಗೆದುಕೊಂಡು ಹೋಗು.'' ಎಂದು ತನ್ನ ಮೀನಿನ ಶಿಫಾರಸು ಮಾಡಿದಾಗ ಹತ್ತು ವರ್ಷದ ಮಮ್ಮೂಟಿ ಉಬ್ಬಿ ಹೋದನು. “ಪಾಪ, ಈ ಮೊಗವೀರಳು ತುಂಬಾ ಒಳ್ಳೆಯವಳು. ತನಗಾಗಿ ನಾಲ್ಕಾಣೆ ಕಮ್ಮಿ ಮಾಡಿದಳಲ್ಲಾ?'' ಎಂದುಕೊಳ್ಳುತ್ತಾ ಅವಳು ಕೊಟ್ಟ ಮೀನನ್ನೂ ಚಿಲ್ಲರೆ ಹಣವನ್ನೂ ತೆಗೆದುಕೊಂಡು ಮನೆಗೆ ಹಿಂತಿರುಗಿದನು. ಸಂತೋಷದಿಂದ ಇಳಿತ 7 ತಾನುತಂದ ಮೀನನ್ನು ಯಜಮಾನಿಗೆ ತೋರಿಸುತ್ತಾ, “ಎಲ್ರಿಗೂ ನಾಲ್ಕು ರೂಪಾಯಿಗೆ ಕೊಡುವುದಂತೆ. ನನಗೆ ನಾಲ್ಕಾಣೆ ಕಮ್ಮಿ ಮಾಡಿದ್ದಾಳೆ.'' ಎಂದು ನಗುತ್ತಾ ನುಡಿದನು. ಆಮೀನಾಬಿ ಹತ್ತಿರ ಬಂದು ಮೀನನ್ನು ಕೈಯಿಂದ ಮುಟ್ಟಿನೋಡಿ ಪರೀಕ್ಷಿಸಿದಳು. ಮುಟ್ಟಿದ ಜಾಗ ಗುಳಿ ಬಿತ್ತು. ಕೆಟ್ಟುಹೋದ ಮೀನಿನ ವಾಸನೆ ಮೂಗಿಗೆ ಬಡಿಯಿತು. “ಹುಂ, ನಿನಗಾಗಿ ನಾಲ್ಕಾಣೆ ಕಮ್ಮಿ ಮಾಡಿದಳಲ್ಲವಾ? ನೀನೇನು ಅವಳ ಚಿಕ್ಕಪ್ಪನ ಮಗನೇ? ಕೆಟ್ಟು ಹೋದ ಮೀನನ್ನು ನಿನ್ನ ತಲೆಗೆ ಕಟ್ಟುವುದಕ್ಕೆ ಅವಳು ಆಟ ಹೂಡಿದಳು. ನಿನ್ನ ಬುದ್ಧಿ ಎಲ್ಲಿ ಹೋಗಿತ್ತು? ಮೀನಿನ ವಾಸನೆ ನೋಡಿ, ಮುಟ್ಟಿ ನೋಡಿ ತರಲಿಕ್ಕೆ ನಿನಗೇನು ಧಾಡಿಯಾಗಿತ್ತು? ಈಗ ಅದನ್ನು ಸಾರು ಮಾಡುವುದು ಹೇಗೆ?'' ಎಂದು ಬೈಗಳ ಮಳೆ ಸುರಿಸುತ್ತಾ “ನೋಡುವ, ಬಾಕಿ ಹಣ ಎಷ್ಟಿದೆ?. ಇವತ್ತು ಯಾರೊ ಊಟಕ್ಕೆ ಬರುತ್ತೇನೆಂದಿದ್ದರು. ಈಗೇನು ಮಾಡಲಿ?'' ಎನ್ನುತ್ತಾ ಚಿಲ್ಲರೆ ತೆಗೆದುಕೊಂಡು ಎಣಿಸಿದಳು. ನಾಲ್ಕಾಣೆ ಕಮ್ಮಿಯಾಗಿತ್ತು. ಆಮಿನಾಬಿಯ ಪಿತ್ತ ನೆತ್ತಿಗೇರಿತು. “ಸೂಳೆ ಮಗನೇ, ಸತ್ಯ ಹೇಳು! ಏನು ಮಾಡಿದೆ ನಾಲ್ಕಾಣೆ?'' ಗರ್ಜಿಸಿದಳು ಆಕೆ. “ಏನಾದರೂ ಕೊಂಡುಕೊಂಡು ತಿಂದನೇನೊ'' ಆಚುಮ್ಮ ಸೇರಿಸಿದಳು. “ಇಲ್ಲ ಉಮ್ಮಾ... ಆ ಹೆಂಗಸು... ಕೊಟ್ಟಿದ್ದು ಅಷ್ಟೆ...'' ಬಿಕ್ಕುತ್ತಾ ನುಡಿದನು ಮಮ್ಮೂಟಿ. “ಕೆಟ್ಟುಹೋದ ಮೀನು ತಂದದ್ದೂ ಅಲ್ಲದೆ ನಾಲ್ಕಾಣೆಯನ್ನೂ ತಿಂದು ಹಾಕಿದೆಯಾ? ಸುಳ್ಳು ಬೇರೆ ಬೊಗಳ್ತೀಯಾ?'' ಎನ್ನುತ್ತಾ ಆಕೆ ಮೂಲೆಯಿಂದ ಪೊರಕೆಯನ್ನು ಕೈಗೆತ್ತಿಕೊಂಡು ಹುಡುಗನ ತಿಕಕ್ಕೆ ಬಾರಿಸಿಯೇ ಬಿಟ್ಟಳು. “ಇಲ್ಲಮ್ಮಾ... ನಾನು... ಸುಳ್ಳು ಹೇಳಿಲ್ಲಮ್ಮಾ...'' ಎನ್ನುವ ಹುಡುಗನ ಮೊರೆ ಗಾಳಿಯಲ್ಲಿ ತೇಲಿ ಹೋಯಿತು. ಆಗ ತಾನೇ ಅಲ್ಲಿಗೆ ಬಂದ ಜೊಹರಾ, “ಬಿಡಮ್ಮಾ, ಪಾಪ ಹುಡುಗ, ಮೊಗವೀರ ಹೆಂಗಸು ಮೋಸಮಾಡಿದಳೇನೊ.'' ಎನ್ನುತ್ತಾ ತಾಯಿಯ ಕೈಯಿಂದ ಪೊರಕೆಯನ್ನೆತ್ತಿಕೊಂಡು ಮೂಲೆಗೆಸೆದಳು. ಮಮ್ಮೂಟಿ ಹೊರ ಜಗಲಿಯಲ್ಲಿ ಕುಳಿತುಕೊಂಡು ಬಿಕ್ಕಳಿಸುತ್ತಾ ಅಳುವನ್ನು ನುಂಗಿಕೊಳ್ಳಲು ಪ್ರಯತ್ನಿಸಿದ್ದನು. ಆದರೆ ಕುಳಿತುಕೊಂಡು ಅಳುವುದಕ್ಕಾದರೂ ಪುರುಸೊತ್ತಿದ್ದರೆ ತಾನೇ? 8 ಸುಳಿ ಒಳಗಿಂದ ಕರೆ ಕೇಳಿಸಿತು. “ಮಮ್ಮೂಟೀ, ಬೇಗ ಮಸೀದಿಗೆ ಹೋಗಿ ಮೌಲವಿಗಳ ಹತ್ತಿರ ಈ ಕೋಳಿಯ ಕತ್ತು ಕೊಯ್ಯಿಸಿ ತೆಗೆದುಕೊಂಡು ಬಾ.“ ತಾನು ಹಾಳಾದ ಮೀನು ತಂದ ಅಪರಾಧೀ ಮನೋಭಾವದಿಂದ ಕೂಡಲೇ ಕಣ್ಣೊರೆಸಿಕೊಂಡು ಒಳಗೋಡಿದನು. ಜೊಹಳರ ದೊಡ್ಡ ಹೇಂಟೆಯನ್ನೇ ಹಿಡಿದಿದ್ದರು. “ಅದು ಜೊಹರಕ್ಕನ ಹೇಂಟೆಯಲ್ಲವೇ?'' ಎಂದು ಕೇಳಲು ಬಾಯಿ ತೆಗೆಯುವಾಗಲೇ, “ಮನೆಗೆ ಅತಿಥಿಗಳು ಬರುತ್ತಿರುವಾಗ ಈ ಹುಡುಗ ಇಂತಹ ಮೀನು ತಂದು ಒಂದಕ್ಕೆರಡು ಕೆಲಸ ಮಾಡುವ ಹಾಗಾಯಿತಲ್ಲ?'' ಎನ್ನುವ ಯಜಮಾನಿಯ ಗೊಣಗಾಟ ಕೇಳಿ ಬಾಯಿ ಮುಚ್ಚಿಕೊಂಡು ಹೇಂಟೆಯ ಕಾಲು ಕಟ್ಟಿ ಮಸೀದಿಗೊಯ್ದನು. “ಪಾಪ, ತನ್ನಿಂದಾಗಿ ಜೊಹರಕ್ಕ ಹೇಂಟೆಯನ್ನು ಕಳೆದುಕೊಳ್ಳುವಂತಾಯಿತಲ್ಲ? ಆ ಮೊಗವೀರಳ ಬಳಿ ಇನ್ನೆಂದೂ ಮೀನು ಕೊಳ್ಳಬಾರದು'' ಎಂದುಕೊಳ್ಳುತ್ತಾ ಮಸೀದಿಯ ಮೌಲವಿಗಳ ಬಳಿ ಕೋಳಿಯ ಕತ್ತು ಕೊಯ್ಯಿಸಿ ಮನೆಗೆ ಹಿಂತಿರುಗಿದನು. ಮನೆಯ ಹಿಂಭಾಗದ ಕಿಟಕಿಯಲ್ಲಿ ಜೊಹರಾಳ ಬಾಡಿದ ಮುಖ ಕಂಡಾಗ ಮಮ್ಮೂಟಿ ಇನ್ನಷ್ಟು ಕುಗ್ಗಿ ಹೋದನು. ಕೋಳಿಯನ್ನು ಆಚುಮ್ಮ ಬಿಸಿ ನೀರಿಗೆ ಹಾಕಿ, “ಹೋಗು, ಇದರ ಗರಿ ಕಿತ್ತು ತಾ.'' ಎಂದು ಆಜ್ಞಾಪಿಸಿದಾಗ, “ನನ್ನಿಂದಾಗದು...'' ಎನ್ನಲು ಆತನೇನು ಮನೆಯ ಮಗನೇ? ಅರೆ ಮನಸ್ಸಿನಿಂದಲೇ ಆತನು ಕೋಳಿಯ ಪುಕ್ಕಗಳನ್ನು ಕೀಳತೊಡಗಿದನು. ಪಕ್ಕದಲ್ಲಿ ಬಂಗಾರದ ಗೆಜ್ಜೆ ತೊಟ್ಟ ಕಾಲುಗಳು, ಅವುಗಳನ್ನು ಮುಚ್ಚಿಕೊಂಡಂತಿದ್ದ ಸೀರೆಯ ಅಂಚು ಕಣ್ಣಿಗೆ ಬಿದ್ದಾಗ ಮಮ್ಮೂಟಿ ತಲೆ ಎತ್ತಿದನು. “ನೀನು ಒಳ್ಳೆ ಮೀನು ತಂದಿದ್ದರೆ ಹೀಗಾಗುತ್ತಿರಲಿಲ್ಲ'' ಎಂದು ಜೊಹರಳೆಂದಾಗ ಮಮ್ಮೂಟಿಯ ಕಣ್ಣು ತುಂಬಿತು. “ನನಗೆ ಗೊತ್ತಾಗಲಿಲ್ಲ ಜೊಹರಕ್ಕಾ,'' ಎಂದು ಬಿಕ್ಕಿದನು ಆತ. ಕೊಂಚ ಹೊತ್ತು ಅಲ್ಲೇ ನಿಂತ ಜೊಹರ, “ಹೋಗಲಿ ಬಿಡು. ಅಳಬೇಡ ಮಧ್ಯಾಹ್ನ ತುಪ್ಪದನ್ನ ಊಟ ಮಾಡುವಾ, ಆಯಿತಾ? ಎನ್ನುತ್ತಾ ಮನೆಯೊಳಗೋಡಿದಳು. ಮಧ್ಯಾಹ್ನ ತುಪ್ಪದನ್ನ ಮತ್ತು ಕೋಳಿ ಸಾರು ಉಣ್ಣುತ್ತಾ ಮಮ್ಮೂಟಿ ಎಲ್ಲವನ್ನೂ ಮರೆತನು. ಸಾರಿನಲ್ಲಿ ಮಾಂಸದ ತುಂಡಿಗಾಗಿ ಕೈಯಾಡಿಸುತ್ತಿದ್ದಾಗಲೇ ಒಳ ಬಂದ ಜೊಹರಾ ಹುಡುಗನ ತಟ್ಟೆಗೆ ಪುಟ್ಟದೊಂದು ಮಾಸಂದ ಚೂರನ್ನು ಹಾಕಿದಳು. ಮಮ್ಮೂಟಿಯ ಕಣ್ಣುಗಳು ಆತನಿಗರಿವಿಲ್ಲದಂತೆ ಒದ್ದೆಯಾದುವು. ಇಳಿತ 9 ಅಂದಿನಿಂದ ಮಮ್ಮೂಟಿ ಊಟ ಮಾಡಲು ಜೊಹರಾ ಅಡಿಗೆ ಮನೆಗೆ ಬರುವುದನ್ನೇ ಕಾಯುತ್ತಿದ್ದನು. ಆಚುಮ್ಮ ಬಡಿಸಿದ ಸಾರಿನಲ್ಲಿ ಮೀನಿನ ತಲೆ ಮಾತ್ರ ಇರುತ್ತಿದ್ದುದನ್ನು ಆತನು ಯಾರೊಡನೆಯೂ ಹೇಳುತ್ತಿರಲಿಲ್ಲ. ಆದರೆ ಆತ ಆದಷ್ಟೂ ಜೊಹರಾ ಅಡಿಗೆ ಮನೆಯಲ್ಲಿರುವಾಗ ಊಟ, ತಿಂಡಿಗೆ ಕುಳಿತುಕೊಳ್ಳುವ ಪರಿಪಾಠ ಬೆಳೆಸಿಕೊಂಡನು. ಆಚುಮ್ಮ ಊಟಕ್ಕೆ ಕರೆದಾಗಲೆಲ್ಲ ಹೊರಗೆಲ್ಲೊ ಕೆಲಸದಲ್ಲಿರುವಂತೆ ನಟಿಸುತ್ತಾ ಜೊಹರಾ ಬಂದೊಡನೆ ಅಡಿಗೆ ಮನೆಗೆ ಬರುತ್ತಿದ್ದನು. ``ಹುಡುಗನಿಗೆ ಸೊಕ್ಕು! ತಿಂದು ತಿಂದು ಚರ್ಬಿ ಬಂದು ಬಿಟ್ಟಿದೆ! ಊಟಕ್ಕೆ ಕರೆದರೆ ಎಲ್ಲೋ ಅಡಗಿಕೊಳ್ಳುತ್ತಾನೆ.'' ಎಂದು ಆಚುಮ್ಮ ಯಜಮಾನಿಗೆ ವರದಿಯೊಪ್ಪಿಸುವುದಿತ್ತು. “ಒಂದು ದಿನ ಅನ್ನ ಹಾಕಬೇಡ. ಆಗ ಅವನಿಗೆ ಬುದ್ಧಿ ಬರುತ್ತದೆ.'' ಎಂದು ಯಜಮಾನಿಯೂ ಸಲಹೆ ನೀಡುತ್ತಿದ್ದಳು. “ನಿನ್ನ ಕೆಲಸ ನೀನು ಮಾಡು.“ ಎಂದು ಅಜ್ಜಿ ಆಚುಮ್ಮನನ್ನು ಗದರುವುದೂ ಇತ್ತು. “ಎಷ್ಟಾದರೂ ಅಜ್ಜಿ ಮೊಮ್ಮಗಳು ಒಂದು.'' ಎಂದು ಆಚುಮ್ಮ ತನ್ನಷ್ಟಕ್ಕೆ ಗೊಣಗಿಕೊಂಡು ಸುಮ್ಮನಾಗುತ್ತಿದ್ದಳು. ಪ್ರಖರವಾದ ಸೂರ್ಯನ ಬಿಸಿಲಿನೊಂದಿಗೆ ಹಿತವಾದ ತಂಗಾಳಿಯೂ ಬೀಸುತ್ತಿದ್ದುದರಿಂದ ಮಮ್ಮೂಟಿಗೆ ಬದುಕು ಸಹನೀಯವಾಗಿತ್ತು. ಆಚುಮ್ಮ. ಆ ಹೆಸರಿನ ನೆನಪಾದೊಡನೆ ಮಮ್ಮೂಟಿಯ ಮುಖದಲ್ಲಿ ಮುಗುಳ್ನಗುವೊಂದು ಸುಳಿಯುತ್ತದೆ. ಮೂವತ್ತೊ, ಮೂವತ್ತೆರಡೋ ವರ್ಷ ಪ್ರಾಯದ ಆಚುಮ್ಮ ಗಂಡ ತಲಾಖ್ ನೀಡಿದ ಬಳಿಕ ಆ ಮನೆಗೆ ಬಂದು ಸೇರಿ ಆಗಲೇ ನಾಲ್ಕೈದು ವರ್ಷಗಳಾಗಿದ್ದುವು. ಮಕ್ಕಳಿಲ್ಲದ ನಿರ್ಗತಿಕಳಾದ ಹೆಂಗಸು ಆಕೆ. ಆಮಿನಾಬಿ ಒಮ್ಮೊಮ್ಮೆ ರೊಟ್ಟಿ ಉಬ್ಬಿಲ್ಲವೆಂದೊ, ದೋಸೆ ಸೀದು ಹೋಗಿದೆಯೆಂದೊ ಆಕೆಯನ್ನು ತರಾಟೆಗೆ ತೆಗೆದುಕೊಳ್ಳುವುದಿತ್ತು. ಯಜಮಾನಿ ಒಳಹೋಗುವವರೆಗೆ ಸುಮ್ಮನಿದ್ದ ಆಚುಮ್ಮ ಬಳಿಕ ಗೊಣಗತೊಡಗುತ್ತಿದ್ದಳು. “ಒಂದು ದಿನ ಉಬ್ಬದ ರೊಟ್ಟಿ ತಿಂದರೆ ಏನಾಗುತ್ತದೆ? ನಾಲಗೆ ದಪ್ಪವಾಗಿ ಬಿಡುತ್ತದಾ? ಹೇಗೆ ತಿಂದರೂ ಕೊನೆಗೆ ಹೋಗುವುದು ಕಕ್ಕಸಿಗೆ. ಈ ಉಳ್ಳವರ ನಾಲಗೆಗೆ ದೇವರು ಇಷ್ಟೊಂದು ರುಚಿಯನ್ನೂ ಕೊಟ್ಟಿದ್ದಾನಲ್ಲ?'' ಎನ್ನುತ್ತಾ ಕೊನೆಗೆ ಮತ್ತೂ ಒಂದು ಮಾತನ್ನು ಸೇರಿಸುತ್ತಿದ್ದಳು. “ಆತ ನನ್ನನ್ನು ಈ ರೀತಿ ನಡು ನೀರಿನಲ್ಲಿ ಕೈಬಿಡದೆ ಹೋಗಿದ್ದರೆ ಯಾರ್ಯಾರ ಅಡಿಗೆ ಮನೆಯಲ್ಲಿ ಕೈಸುಟ್ಟುಕೊಳ್ಳುತ್ತಾ ಯಾರ್ಯಾರ ಬೈಗುಳನ್ನು ಕೇಳುತ್ತಾ ನಾನೇಕೆ 10 ಸುಳಿ ನರಕವನ್ನನುಭವಿಸಬೇಕಾಗಿತ್ತು? ದೇವರಿಗೆ ಕಣ್ಣಿದ್ದರೆ ದೇವರು ಆತನನ್ನು ಖಂಡಿತವಾಗಿ ಏಳನೇ ನರಕಕ್ಕೆಸೆಯುತ್ತಾನೆ!'' ಎನ್ನುತ್ತಾ ತನ್ನ ಗಂಡನಾಗಿದ್ದವನಿಗೆ ಹಿಡಿಶಾಪ ಹಾಕುತ್ತಾ ಕಣ್ಣೊರೆಸಿಕೊಳ್ಳುತ್ತಿದ್ದಳು. “ಯಾರು ಆಚುಮ್ಮಕ್ಕಾ? ಯಾರನ್ನು ಬೈತೀರಿ?'' ಎಂದು ಮಮ್ಮೂಟಿಯೊಮ್ಮೆ ಕೇಳಿದಾಗ, “ಇನ್ಯಾರು? ಅವನೇ ಆ ಹರಾಮ ಖೋರ; ನನ್ನ ಹಿಂದಿನ ಗಂಡ. ಅವನು ಸತ್ತು ಮಣ್ಣು ತಿಂದು ಹೋಗಲಿ!'' ಎನ್ನುತ್ತಾ ಮತ್ತೊಮ್ಮೆ ನೆಲಕ್ಕೆ ಕೈ ಬಡಿದಳು. ಆ ದಿನ, ಬದುಕಿನ ಕುರಿತು, ಬದುಕಲು ಇರುವ ಒಂದು ಹಾದಿಯ ಕುರಿತು ತನಗೆ ದೊರೆತ ಪ್ರಥಮ ಪಾಠ ಮಮ್ಮೂಟಿಗೆ ಇನ್ನೂ ಚೆನ್ನಾಗಿ ನೆನಪಿದೆ. ಆ ದಿನ ಜೊಹರಾ ಮತ್ತು ಅಜ್ಜಿಯನ್ನುಳಿದು ಮನೆಯ ಇತರರೆಲ್ಲರೂ ಅದೆಲ್ಲಿಗೋ ಹೋಗಿದ್ದರು. ಜೊಹರಾ ದೊಡ್ಡವಳಾಗಿದ್ದುದರಿಂದ ಈಗ ಎಲ್ಲಿಗೂ ಹೋಗುತ್ತಿರಲಿಲ್ಲ. ಅವಳ ಕಾವಲಿಗಾಗಿ ಅಜ್ಜಿಯೂ ಮನೆಯಲ್ಲಿಯೇ ಉಳಿಯುತ್ತಿದ್ದರು. ಅವರಿಬ್ಬರೂ ಕೋಣೆಯಲ್ಲಿ ಮಲಗಿದ್ದರು. ಆಚುಮ್ಮ ಮಮ್ಮೂಟಿಯನ್ನು ಕರೆದುಕೊಂಡು ಹಟ್ಟಿಗೆ ಹೋದಳು. ಅಲ್ಲಿ ಹುಲ್ಲಿನೆಡೆಯಿಂದ ಒಂದು ಬಟ್ಟೆಯ ಗಂಟನ್ನು ತಂದು ಮಮ್ಮೂಟಿಯ ಕೈಯಲ್ಲಿಡುತ್ತಾ “ನೋಡು ಮಗೂ, ಇದನ್ನು ಆ ಅಂಗಡಿಯ ಹಿಂಭಾಗದ ಪುಟ್ಟ ಮನೆಯಲ್ಲಿರುವ ಫಾತಿಮಕ್ಕನಿಗೆ ಕೊಟ್ಟು ಬಾ. ನಿನಗೆ ಎರಡಾಣೆ ಕೊಡ್ತೇನೆ. ಯಾರಿಗೂ ಹೇಳಬೇಡ.'' ಎಂದಳು. ಮಮ್ಮೂಟಿ ಆ ಮನೆಗೆ ಬಂದು ಒಂದೆರಡು ವರ್ಷಗಳಾಗಿದ್ದರೂ ಈವರೆಗೆ ಎಂದೂ ಕಳ್ಳತನ ಮಾಡಿದವನಲ್ಲ. ಪೈಸೆಗೆ ಪೈಸೆ ಲೆಕ್ಕಹಾಕಿ ಯಜಮಾನಿಗೊಪ್ಪಿಸುತ್ತಿದ್ದನು. ಅಮಿನಾಬಿ ಎಂದಾದರೂ ತಾನೇ ಹುಡುಗನ ಕೈಗೆ ಐದು ಪೈಸೆ ಹಾಕಿದರೆ ಚಕ್ಕುಲಿಯನ್ನೋ ಬಾಳೆಹಣ್ಣನ್ನೋ ಕೊಂಡುಕೊಂಡು ತಿನ್ನುವುದಿತ್ತು. ಆ ದಿನ ಆಚುಮ್ಮ ಈ ಮಾತು ಹೇಳಿದಾಗ ಹುಡುಗನ ಕಣ್ಣುಗಳರಳಿದವು. ಭಯದಿಂದ ಕೈ ಕೊಂಚ ನಡುಗಿತು. “ಇಲ್ಲ ಆಚುಮ್ಮಕ್ಕ. ಈ ಕೆಲಸ ನನ್ನಿಂದಾಗದು. ಯಾರಾದರೂ ನೋಡಿದರೆ ನನ್ನ ಚರ್ಮ ಸುಲಿದಾರು!'' ಎಂದನು. “ಇದರಲ್ಲಿ ಎರಡು ರೂಪಾಯಿಯ ಅಕ್ಕಿ ಇದೆ. ಬೇಕಾದರೆ ನೀನು ಎಂಟಾಣೆ ತೆಗೆದುಕೊ. ನಮಗೇನು ಇವರು ತಿನ್ನುವುದಕ್ಕೆ ಒಂದು ಒಳ್ಳೆಯ ಹಣ್ಣನ್ನಾಗಲಿ ತಿಂಡಿಯನ್ನಾಗಲಿ ಕೊಡುತ್ತಾರಾ? ಮೊನ್ನೆ ಅಷ್ಟು ಕಿತ್ತಳೆ ಹಣ್ಣು ಇಳಿತ 11 ತಂದಿದ್ದರಲ್ಲಾ? ಒಂದು ಅರ್ಧ ಹಣ್ಣನ್ನಾದರೂ ನಿನ್ನ ಕೈಯಲ್ಲಿಟ್ಟರಾ? ನಾವು ಇವರ ಚಾಕರಿ ಎಷ್ಟು ಮಾಡಿದರೂ ನಮಗೆ ಸಿಕ್ಕುವುದು ಇಷ್ಟೆ. ಇವರಿಗೆ ಇಷ್ಟೆಲ್ಲಾ ಕೊಟ್ಟ ದೇವರು ನಮಗೇಕೆ ಏನನ್ನೂ ಕೊಡಲಿಲ್ಲ? ಈಗ ನಮಗೆ ಸಿಕ್ಕಿದಷ್ಟನ್ನು ನಾವೂ ಕೂಡಿಸಿಕೊಳ್ಳೋಣ. ಏನೆನ್ನುತ್ತೀ?'' ಮುಮ್ಮೂಟಿ ಮೌನ ತಾಳಿದ. ಪ್ರತಿಯೊಬ್ಬನಿಗೂ ಒಂದು ಬೆಲೆ ಇದ್ದೇ ಇದೆಯಲ್ಲ? ಎರಡಾಣೆಯನ್ನು ಒಂದೇ ಬಾರಿಗೆ ನಿರಾಕರಿಸಿದ ಮಮ್ಮೂಟಿಗೆ ಎಂಟಾಣೆಯನ್ನು ನಿರಾಕರಿಸಲಾಗಲಿಲ್ಲ. ಅವನ ಮನಸ್ಸು ತೂಗುಯ್ಯಾಲೆಯಾಡಿತು. ತಮಗೆ ದೇವರು ಏನನ್ನೂ ಕೊಡಲಿಲ್ಲ. ತಮ್ಮ ಬದುಕು ಯಾವಾಗಲೂ ಅಮಾವಾಸ್ಯೆಯ ಇಳಿತವೇ. ಆದರೆ ಯಜಮಾನರಿಗೆ ದೇವರು ಇಷ್ಟೆಲ್ಲ ಕೊಟ್ಟಿದ್ದಾನಲ್ಲ, ಯಾಕೆ? ಆಚುಮ್ಮ ಹೇಳುವುದು ಸರಿ. ಅನಾಯಾಸವಾಗಿ ಬರುವ ಹಣವನ್ನು ಯಾಕೆ ಬಿಡಬೇಕು? ಆದರೂ... ಛೆ, ಜೊಹರಕ್ಕನಿಗೆ ತಿಳಿದರೆ ಬೈಯುವುದಿಲ್ಲವಾ? “ಬೇಡ ಆಚುಮ್ಮಕ್ಕ. ಜೊಹರಕ್ಕನಿಗೆ ತಿಳಿದರೆ ಸಿಟ್ಟು ಮಾಡುತ್ತಾರೆ'' ಎಂದನು. ಆದರೆ ಆ ನಿರಾಕರಣೆ ಮೊದಲಿನಂತೆ ಶಕ್ತಿಯುತವಾಗಿರದೆ ಕ್ಷೀಣವಾಗಿತ್ತು. ಆಚುಮ್ಮಳ ತುಟಿಗಳಲ್ಲಿ ಮುಗುಳ್ನಗೆ ಇಣುಕಿತು. ಹುಡುಗ ಮೆತ್ತಗಾಗುತ್ತಿದ್ದಾನೆ ಎಂಬುದನ್ನು ತಿಳಿಯಲು ಆಕೆಗೆ ಹೆಚ್ಚು ಹೊತ್ತು ಬೇಕಾಗಲಿಲ್ಲ. “ನೀನು ಕೊಡದಿದ್ದರೆ ಬೇಡ. ನಾಳೆ ನಾಡಿದ್ದಿನಲ್ಲಿ ಹೇಗೂ ಫಾತಿಬಿ ಇಲ್ಲಿಗೆ ಬರುತ್ತಾಳೆ. ಆಗ ನಾನೇ ಅವಳಿಗೆ ಕೊಡುವೆ. ಎರಡು ರೂಪಾಯಿ ನನಗೇ ಸಿಕ್ಕುತ್ತದೆ!'' ಎನ್ನುತ್ತಾ ಕತ್ತು ಕೊಂಕಿಸಿದಳು. ಎಂಟಾಣೆ! ನಿಂತ ನಿಲುವಿನಲ್ಲಿ ಎಂಟಾಣೆ ಎಂದರೆ ಸುಮ್ಮನಾಯಿತೇ? ಊರಿಗೆ ಹೋಗುವಾಗ ಜಮೀಲಕ್ಕನಿಗೆ ಬಳೆ ಕೊಂಡೊಯ್ಯಬಹುದು. “ಹೂ... ಆಗಲಿ ... ನಾನೇ ಕೊಂಡೊಯ್ಯುವೆ. ಆದರೆ ಯಾರಿಗೂ ಹೇಳಬಾರದು.'' ಎಂದು ಮಮ್ಮೂಟಿಯೂ ತಾಕೀತು ಮಾಡಿದನು. ಅಂದಿನಿಂದ ಇಬ್ಬರೂ ಸ್ನೇಹಿತರಾದರು. ಮಮ್ಮೂಟಿಯ ತಾಯಿ ಎರಡು ತಿಂಗಳಿಗೊಮ್ಮೆ ಮಗನನ್ನು ನೋಡಿ ಹೋಗಲು ಬರುವುದಿತ್ತು. ಹಾಗೆ ಬಂದಾಗಲೆಲ್ಲ ಆಮಿನಾಬಿ ಆಕೆಗೆ ನಾಲ್ಕೈದು ಸೇರು ಅಕ್ಕಿ, ಒಂದಷ್ಟು ತೆಂಗಿನ ಕಾಯಿಗಳನ್ನಲ್ಲದೆ ಜೊಹರಳ ಹಳೆ ಸೀರೆಗಳನ್ನೂ ಜಮೀಲಳಿಗಾಗಿ ಕೊಟ್ಟು ಕಳುಹಿಸುತ್ತಿದ್ದಳು. ತನ್ನದೇ ಹಳೆಯ ಸೀರೆಗಳನ್ನು ಉಮ್ಮಾಲಿಗೆ ನೀಡುತ್ತಿದ್ದಳು. “ಮಗನ ತಿಂಗಳ ಸಂಬಳವನ್ನು ಈಗ ಒಯ್ಯಬೇಡ. 12 ಸುಳಿ ಇಲ್ಲೇ ಇರಲಿ. ನಿನ್ನ ಮಗಳ ಮದುವೆಗೆ ನಾವೇ ಚಿನ್ನದೊಡವೆ ಮಾಡಿಸಿಕೊಡುತ್ತೇವೆ.'' ಎಂದಿದ್ದರಿಂದ ಮಗನ ಸಂಬಳದ ಹಣ ಒಯ್ದಿರಲಿಲ್ಲ. ಬಸ್ ಚಾರ್ಜಿಗೆಂದು ಆಮಿನಾಬಿ ತಾನೇ ಒಂದೆರಡು ರೂಪಾಯಿಗಳನ್ನು ನೀಡುತ್ತಿದ್ದಳು. ಆರು ತಿಂಗಳಿಗೊಮ್ಮೆ ಮಮ್ಮೂಟಿಯೂ ಊರಿಗೆ ಹೋಗಿ ಬರುತ್ತಿದ್ದನು. ಮೊದಲ ಬಾರಿ ಹೋದಾಗಲೇ ಜಮೀಲಾ, “ಅಲ್ಲಿ ನಿನ್ನನ್ನು ಯಾರೂ ಹೊಡೆಯುವುದಿಲ್ಲವೇ'' ಎಂದು ಕೇಳಿದ್ದಳು. ತನ್ನ ಮಗನು ಅಷ್ಟೊಂದು ನಲುಗಿಲ್ಲದಿರುವುದನ್ನು ನೋಡಿದ ಉಮ್ಮಾಲಿ ಮುಂದೆ ಬಂದು, “ಅದೆಲ್ಲ ಕೇಳಬೇಡ ಜಮೀಲ. ಅವನು ತಪ್ಪು ಮಾಡಿದರೆ ನಾನು ಹೊಡೆಯುವುದಿಲ್ಲವಾ? ಹಿರಿಯರು ಬೇಸರದಿಂದ ಒಂದೆರಡು ಮಾತಂದರೆ ಅಥವಾ ಬುದ್ಧಿಗಾಗಿ ಹೊಡೆದು ಬಿಟ್ಟರೆ ಅದನ್ನೆಲ್ಲ ಮನಸ್ಸಿಗೆ ಹಚ್ಚಿಕೊಳ್ಳಬಾರದು. ಅವರು ಎಷ್ಟೊಂದು ಸಾಮಾನು ಕಳಿಸಿಕೊಟ್ಟಿದ್ದಾರೆ! ಜೊಹರಳ ಎಷ್ಟು ಚೆಂದದ ಲಂಗ ನಿನಗಾಗಿ ಕಳಿಸಿದ್ದಾರೆ! ಇನ್ನೂ ಹೊಸ ಲಂಗದಂತಿದೆ.'' ಎಂದಳು. ಲಂಗದ ಸೊಬಗು ಜಮೀಲಳ ಬಾಯಿ ಮುಚ್ಚಿಸಿತ್ತು. ಇದೆಲ್ಲ ಎರಡು ವರ್ಷಗಳ ಹಿಂದಿನ ಮಾತು. ಆ ಬಳಿಕ ಮಮ್ಮೂಟಿ ಹಲವು ಬಾರಿ ಊರಿಗೆ ಬಂದದ್ದಿದೆ. ಆಗೆಲ್ಲ ಆಮಿನಾಬಿ ಕೈಯೆತ್ತಿ ಕೊಟ್ಟ ಅಷ್ಟಿಷ್ಟು ಹಣ ಮತ್ತು ಇತರ ಸಾಮಾನುಗಳನ್ನು ಮಾತ್ರ ತಂದಿದ್ದನು. ಆದರೆ ಈ ಬಾರಿ ಹಾಗಲ್ಲ. ಈ ಬಾರಿ ಆತನ ಕೈಯಲ್ಲಿ ಹತ್ತು ರೂಪಾಯಿಗಳಿದ್ದುವು. ಉಮ್ಮಾಲಿ ಒತ್ತಾಯ ಮಾಡಿ ಕೇಳಿದಾಗ ಮಮ್ಮೂಟಿ ಆಚುಮ್ಮಳ ವ್ಯವಹಾರ ತಿಳಿಸಿದನು. “ಯಾಕೆ ಹೀಗ್ಮಾಡಿದೆ? ಯಜಮಾನರು ತಿಳಿದರೆ ನಿನ್ನ ಚರ್ಮ ಸುಲಿಯದೆ ಬಿಟ್ಟಾರಾ?'' ಉಮ್ಮಾಲಿ ಆತಂಕದಿಂದ ಕೇಳಿದಳು. ಮೊನೆಯಿಲ್ಲದ ಮೊಂಡು ಮಾತುಗಳು ಅವು. ಮಮ್ಮೂಟಿ ತಾಯಿಯ ಮುಖ ನೋಡಿದನು. “ಹೇ, ಬಿಡಮ್ಮ. ಈ ವಿಷಯವೆಲ್ಲ ಅವರಿಗೆ ಹೇಗೆ ತಿಳಿಯುತ್ತದೆ? ಅದೂ ಅಲ್ಲದೆ ಅವರಿಗೆ ಬೇಕಾದಷ್ಟಿದೆಯಲ್ಲ? ಅವರು ಇಡೀ ದಿನ ಮಾಳಿಗೆಯ ಮೇಲೆ ಕುಳಿತು ಯಾರ್ಯಾರೊಡನೆ ಹರಟೆ ಹೊಡೆಯುತ್ತಿರುತ್ತಾರೆ. ನಾವೇನು ಅವರಂತೆ ಸುಮ್ಮನೆ ಕುಳಿತಿರ್ತೇವಾ? ಇಡೀ ದಿನ ಕೆಲಸ ಮಾಡುವುದಿಲ್ಲವಾ?'' ಎಂದು ಆಚುಮ್ಮ ಕಲಿಸಿದ ಪಾಠವನ್ನು ತಾಯಿಗೊಪ್ಪಿಸಿದನು. ಉಮ್ಮಾಲಿ ಯೋಚನಾ ಮಗ್ನಳಾದಳು. ಹೌದು. ತನಗೇನಿದೆ? ತನ್ನ ಇಳಿತ 13 ಗಂಡನಿದ್ದಾಗ ದುಡಿದು ತಂದು ಹಾಕುತ್ತಿದ್ದರು. ಎರಡು ಹೊತ್ತಿನ ಗಂಜಿಗೆ ಕೊರತೆಯಿರಲಿಲ್ಲ. ಅವರ ಮರಣಾನಂತರ ಇಬ್ಬರು ಎಳೆಯ ಮಕ್ಕಳನ್ನು ಕಟ್ಟಿಕೊಂಡು ತಾನೇನು ಕಮ್ಮಿ ಕಷ್ಟಪಟ್ಟೇನೆ? ಈ ಹತ್ತು, ಹನ್ನೆರಡು ವರ್ಷದ ಹಸುಳೆಯನ್ನು ದುಡಿಸಿ ತಿನ್ನುವ ತನ್ನ ಬಾಳೂ ಒಂದು ಬಾಳೇ? ಮಮ್ಮೂಟಿಯನ್ನು ತುಂಬಾ ಓದಿಸಬೇಕೆನ್ನುತ್ತಿದ್ದ ತನ್ನ ಗಂಡನ ಕನಸು ಕನಸಾಗಿಯೇ ಉಳಿಯಿತು. ಜಮೀಲ ದಿನದಿಂದ ದಿನಕ್ಕೆ ಬೆಳೆಯುತ್ತಾ ಕಣ್ಣ ಕಸವಾಗುತ್ತಿದ್ದಾಳೆ. ಅವಳಿಗೊಂದು ಮದುವೆ ಮಾಡದೆ ತಾನು ನೆಮ್ಮದಿಯಿಂದಿರುವುದು ಸಾಧ್ಯವೇ? ಆದರೆ ಮದುವೆ ಮಾಡುವುದಾದರೂ ಹೇಗೆ? ...ಯೋಚನೆ ಈ ದಿಕ್ಕಿಗೆ ಹರಿದೊಡನೆ ಆಕೆ ನಿಟ್ಟುಸಿರಿಡುತ್ತಾ, “ಹೂಂ... ಏನಾದರೂ ಮಾಡ್ಕೋ. ಆದರೆ... ಮನೆಯವರ ಕಣ್ಣಿಗೆ ಬೀಳದಂತೆ ಜಾಗ್ರತೆಯಿಂದಿರು.'' ಎಂದು ತಾನೂ ವ್ಯವಸ್ಥೆಯೊಂದಿಗೆ ಹೊಂದಿಕೊಳ್ಳತೊಡಗಿದಳು. ತಾಯಿ ಏನನ್ನುವಳೊ ಎಂಬ ಚಿಂತೆಯೂ ಮನದಿಂದ ಮಾಯವಾಗಿ ಮಮ್ಮೂಟಿ ನಿರಾಳವಾಗಿ ಉಸಿರು ಬಿಟ್ಟನು. ಈಗ ಆಚುಮ್ಮ ಮತ್ತು ಮಮ್ಮೂಟಿಯ ವ್ಯವಹಾರ ನಿರಾತಂಕವಾಗಿ ಸಾಗಿತು. ದೂರದ ಹೊಲಗದ್ದೆಗಳಿಂದ ಒಕ್ಕಲು ಮಕ್ಕಳು ಅಕ್ಕಿ ಮುಡಿಗಳನ್ನು ಗಾಡಿಗಳಲ್ಲಿ ಹಾಕಿ ತಂದು ಯಜಮಾನರ ಅಟ್ಟದಲ್ಲಿ ಜೋಡಿಸಿಟ್ಟು ಹೋಗುತ್ತಿದ್ದರು. ಆ ಕುರಿತು ಆಮಿನಾಬಿ ಎಂದೂ ಲೆಕ್ಕವಿಟ್ಟವಳಲ್ಲ. ಅವುಗಳ ಮಾರಾಟವಾಗುವುದು ಮುಂದಿನ ಮಳೆಗಾಲದಲ್ಲೆ. ತೆಂಗಿನ ಕಾಯಿಗಳೂ ಅಟ್ಟದಲ್ಲಿ ತುಂಬಿರುತ್ತಿದ್ದವು. ಅವುಗಳೂ ಆಚುಮ್ಮನ ಕೈವಾಡದಿಂದ ಮಮ್ಮೂಟಿಯ ಮುಖಾಂತರ ಫಾತಿಬಿಯ ಕೈಸೇರುತ್ತಿತ್ತು. ಅಂಗಡಿಯಲ್ಲಿ ತೆರಬೇಕಾದ ಬೆಲೆಯ ಅರ್ಧ ಬೆಲೆಗೆ ಈ ಪದಾರ್ಥಗಳು ಆಕೆಗೆ ದೊರೆಯುವಂತಿದ್ದರೆ ಆಕೆಯಾದರೂ ಯಾಕೆ ಬಿಟ್ಟಾಳು? ಈ ರೀತಿ ನೆಮ್ಮದಿಯಿಂದ ಸಂತೋಷವಾಗಿರುವ ಒಂದು ದಿನದಲ್ಲಿಯೇ ಅಲ್ಲವೇ ಅದು ಸಂಭವಿಸಿದ್ದು? ಆ ದಿನ ಯಜಮಾನರ ಅದ್ಯಾವುದೋ ತೋಟದಿಂದ ಬುಟ್ಟಿಯ ತುಂಬಾ ಕಿತ್ತಳೆ ಹಣ್ಣುಗಳು ಬಂದಿದ್ದುವು. ಅಜ್ಜಿಯ ಕೋಣೆಯ ಮಂಚದಡಿಯಲ್ಲಿ ಆ ಬುಟ್ಟಿಯನ್ನಿಡಲಾಗಿತ್ತು. ಹನೀಫ್, ಫರೀದ್, ಜೊಹರಾ ಎಲ್ಲರೂ ಬೇಕಾದಷ್ಟು ತಿಂದರು. ಜೊಹರಾ ಆಚುಮ್ಮಳಿಗೆ ಒಂದು ಹಣ್ಣು ಕೊಟ್ಟಳು. ಆಗ ಮಮ್ಮೂಟಿ ಅಂಗಡಿಗೆ ಹೋಗಿದ್ದನು. ಅವನು ಬಂದ ಬಳಿಕ ಅವನಿಗೊಂದು ಹಣ್ಣು ಕೊಡಬೇಕೆಂದು ಯಾರಿಗೂ ನೆನಪಾಗಲೇ ಇಲ್ಲ. 14 ಸುಳಿ ಮಮ್ಮೂಟಿ ಒಂದೆರಡು ಬಾರಿ ಅಜ್ಜಿಯ ಕೋಣೆಗೆ ಹೋದನು. ಮಂಚದಡಿಯಲ್ಲಿಟ್ಟಿದ್ದ ಕಿತ್ತಳೆ ಬಣ್ಣದ ದೊಡ್ಡ ದೊಡ್ಡ ಹಣ್ಣುಗಳನ್ನು ನೋಡಿ ನೋಡಿ ಬಾಯಲ್ಲಿ ನೀರೂರಿಸಿಕೊಂಡು ಹಿಂತಿರುಗುತ್ತಿದ್ದನು. ಯಾರೊಡನೆಯೂ ಒಂದು ಹಣ್ಣಿಗಾಗಿ ಬಾಯಿ ತೆರೆದು ಕೇಳಲಿಲ್ಲ. ಕೊಟ್ಟಿದ್ದನ್ನೆತ್ತಿಕೊಂಡು ತಿನ್ನುವ ಪರಿಪಾಠವೇ ಹೊರತು ಬಾಯಿ ತೆರೆದು ಕೇಳುವ ಹಕ್ಕು ಇಲ್ಲವಲ್ಲ? ಹಾಗೆ ಕೇಳಿದರೆ ಇರುವ ಕೆಲಸವನ್ನೂ ಕಳೆದುಕೊಳ್ಳಬೇಕಾದೀತೆಂಬ ಭಯ. “ಏನು ಮಮ್ಮೂಟಿ, ಏನು ಬೇಕು?'' ಒಂದೆರಡು ಬಾರಿ ಕೋಣೆಗೆ ಬಂದು ಹಿಂತಿರುಗಿದ ಮಮ್ಮೂಟಿಯನ್ನು ಕಂಡು ಕಿತ್ತಳೆ ಹಣ್ಣಿನ ತೊಳೆ ಬಿಡಿಸುತ್ತಿದ್ದ ಅಜ್ಜಿ ಕೇಳಿದಳು. “ಏನಿಲ್ಲ ಅಜ್ಜೀ...''ಸುಲಿಯುತ್ತಿದ್ದ ಹಣ್ಣನ್ನೇ ನೋಡುತ್ತಿದ್ದ ಮಮ್ಮೂಟಿ ಹೇಳಿದನು. “ನನಗೆ ವಸೂ ಮಾಡಲು ಬಿಸಿ ನೀರು ತಂದಿಡು.'' ಕಿತ್ತಳೆ ಹಣ್ಣಿನ ತೊಳೆಗಳನ್ನು ಬಾಯಿಗೆ ಹಾಕಿಕೊಳ್ಳುತ್ತಾ ಹೇಳಿದರು ಅಜ್ಜಿ. ಮಮ್ಮೂಟಿ ಅಡಿಗೆ ಮನೆಯಿಂದ ಚೊಂಬಿನಲ್ಲಿ ಬಿಸಿ ನೀರು ತಂದು ಬಚ್ಚಲು ಮನೆಯಲ್ಲಿಟ್ಟು ಬಂದು “ಅಜ್ಜೀ, ಬಿಸಿ ನೀರಿಟ್ಟಿದ್ದೇನೆ.'' ಎಂದನು. ಮರದ ಮೆಟ್ಟುಗಳನ್ನೂ ತಂದು ಅಜ್ಜಿಯ ಕಾಲಬುಡದಲ್ಲಿಟ್ಟನು.ಅಜ್ಜಿ ಅವುಗಳನ್ನು ಹಾಕಿಕೊಂಡು ಕಟ ಕಟಿ ಶಬ್ದ ಮಾಡುತ್ತಾ ಬಚ್ಚಲು ಮನೆಗೆ ನಡೆದರು. ಅಜ್ಜಿ ಅತ್ತಹೋದೊಡನೆ ಮಮ್ಮೂಟಿ ಕೋಣೆಯ ಬಾಗಿಲಿಗೆ ಬಂದು ಅತ್ತಿತ್ತ ನೋಡಿದನು. ಯಾರೂ ಕಾಣಿಸಲಿಲ್ಲ. ಆತನು ಕೂಡಲೇ ಒಳ ಬಂದು ಮಂಚದಡಿಯ ಬುಟ್ಟಿಯಿಂದ ಒಂದು ಹಣ್ಣನ್ನೆತ್ತಿಕೊಂಡು ಬೇಗ ಬೇಗ ಸುಲಿಯತೊಡಗಿದನು. ಅಜ್ಜಿ ಕೋಣೆಗೆ ಹಿಂತಿರುಗುವಷ್ಟರಲ್ಲಿ ತಿಂದು ಮುಗಿಸುವ ಆತುರದಲ್ಲಿ ಬಾಗಿಲಿಗೆ ಬೆನ್ನು ಹಾಕಿಕೊಂಡು ಕಿಟಕಿಯ ಬಳಿ ನಿಂತು ಸುಲಿದ ಸಿಪ್ಪೆಯನ್ನು ಹೊರಗೆಸೆದನು. ಒಂದು ತೊಳೆ ತೆಗೆದು ಇನ್ನೇನು ಬಾಯಿಗೆ ಹಾಕಿಲೊಳ್ಳಬೇಕೆನ್ನುವಷ್ಟರಲ್ಲಿ, “ಹಾಂ... ಮಮ್ಮೂಟೀ, ಇಲ್ಲೇನು ಮಾಡುತ್ತಿದ್ದೀಯಾ?'' ಎಂಬ ಹನೀಫನ ಧ್ವನಿ ಕೇಳಿ ಹಿಂತಿರುಗಿ ನೋಡಿದನು. ಆತನ ಮುಖ ಬಿಳಿಚಿಕೊಂಡು ಕೈಗಳು ನಡುಗತೊಡಗಿದವು. ಸಮೀಪ ಬಂದ ಹನೀಫ್, “ಏನೋ? ಕಳ್ಳತನ ಮಾಡಿದ್ದೀಯಾ? ಎನ್ನುತ್ತಾ ಆತನ ಕೈಯಲ್ಲಿದ್ದ ಹಣ್ಣನ್ನು ಕಿತ್ತುಕೊಂಡು, ``ನಿಲ್ಲು, ನಿನಗೆ ಬುದ್ಧಿ ಕಲಿಸುತ್ತೇನೆ!'' ಎನ್ನುತ್ತಾ ಆತನ ಕೈ ಹಿಡಿದು ದರದರನೆ ಎಳೆದುಕೊಂಡು ಅಡಿಗೆ ಮನೆಗೆ ನಡೆದನು. ಅಲ್ಲಿ ಬಿದ್ದಿದ್ದ ಬಟ್ಟೆ ಚೂರೊಂದನ್ನೆತ್ತಿಕೊಂಡು ಮಮ್ಮೂಟಿಯ ಬಲಗೈಯ ಎರಡು ಇಳಿತ 15 ಬೆರಳುಗಳಿಗೆ ಸುತ್ತಿದನು. ಅಲ್ಲೆ ಬಾಟ್ಲಿಯಲ್ಲಿಟ್ಟಿದ್ದ ಸೀಮೆ ಎಣ್ಣೆಯನ್ನು ಅದರ ಮೇಲೆ ಸುರಿದು ಬೆಂಕಿ ಕಡ್ಡಿ ಗೀರಿ ಬೆಂಕಿ ಹಚ್ಚಿಯೇ ಬಿಟ್ಟನು ಹನೀಫ್. ಮಮ್ಮೂಟೀ, “ಅಯ್ಯೋ, ಬೇಡಣ್ಣಾ, ಬೇಡಾ, ಇನ್ನು ಮುಂದೆ ಹಾಗೆ ಮಾಡುವುದಿಲ್ಲಣ್ಣಾ!'' ಎನ್ನುತ್ತಾ ಬೊಬ್ಬಿಡುತ್ತಾ ಹೊರಗೋಡಿದನು. ಮಮ್ಮೂಟಿಯ ಬೊಬ್ಬೆ ಕೇಳಿದ ಜೊಹರಾ ಓಡಿ ಬಂದಳು. ಉರಿಯುತ್ತಿದ್ದ ಆತನ ಬೆರಳುಗಳನ್ನು ನೋಡಿದವಳೇ ಓಡಿ ಬಂದು ನೀರು ಹಾಕಿದ್ದಳು. ಕರ್ರಗಾಗಿ ಚಿಂದಿ ಚಿಂದಿಯಾದ ಬಟ್ಟೆಯನ್ನು ಬೇಗ ಬೇಗನೆ ಬಿಡಿಸಿ ತೆಗೆದಳು. ಎರಡು ಬೆರಳುಗಳಲ್ಲೂ ಬೊಕ್ಕೆಗಳೆದ್ದಿದ್ದುವು. ಉರಿ ತಾಕಿದ ಇತರ ಬೆರಳುಗಳು ಕೆಂಪಗಾಗಿದ್ದುವು. ಉರಿ ತಾಳಲಾರದೆ ಹುಡುಗನು ಬೊಬ್ಬಿಟ್ಟನು. ಹನೀಫ್ ಗಹಗಹಿಸಿ ನಕ್ಕನು. “ಅಣ್ಣಾ, ನೀನು ಮನುಷ್ಯನಲ್ಲ!'' ಜೊಹರಾ ಕೋಪದಿಂದ ನುಡಿದಳು. ಹುಡುಗನ ಕೈಗೆ ಮುಲಾಮು ಹಚ್ಚಿ ಆರೈಕೆ ಮಾಡುತ್ತಾ, “ಯಾಕೆ ಹುಡುಗಾ ಹೀಗೆ ಮಾಡಿದೆ? ನನ್ಹತ್ರ ಕೇಳಿದ್ದರೆ ನಾನು ಒಂದು ಹಣ್ಣು ಕೊಡುತ್ತಿರಲಿಲ್ಲವಾ?'' ಎಂದು ಕೇಳಿದಳು ಮರುಕದಿಂದ. ಕೇಳುವ ಹಕ್ಕನ್ನು ಕಳೆದುಕೊಂಡವರಿವರು ಎಂಬುದು ಆ ಹುಡುಗಿಗೆ ಇನ್ನೂ ಅರ್ಥವಾಗಿರಲಿಲ್ಲ. ಮಮ್ಮೂಟಿಯ ಬೆರಳಿನ ವ್ರಣ ವಾಸಿಯಾಗಲು ತಿಂಗಳೇ ಹಿಡಿಯಿತು. ವ್ರಣವೇನೋ ವಾಸಿಯಾಯಿತು. ಕಲೆ ಮಾತ್ರ ಎಂದೂ ಮಾಯವಾಗದ ಕಲೆಯಾಗಿ ಉಳಿಯಿತು. * * * * * ಆಚುಮ್ಮ ಇತ್ತೀಚೆಗೆ ಮತ್ತೂ ಒಂದೆರಡು ಗಿರಾಕಿಗಳನ್ನು ಕಂಡು ಹಿಡಿದಿದ್ದಳು. ತೋಟದ ತೆಂಗಿನ ಮರಗಳಿಗೆ ನೀರು ಹಾಕಲು ಬರುತ್ತಿದ್ದ ಚೋಮಾರು ಮತ್ತು ಆಕೆಯ ಮೂಲಕವೇ ಪರಿಚಯವಾಗಿ ಎಂದಾದರೊಮ್ಮೆ ಮನೆಗೆ ಬರುತ್ತಿದ್ದ ಕಂಜಮ್ಮ. ಕಂಜಮ್ಮನ ಪರಿಚಯವಾದದ್ದೂ ಆಕಸ್ಮಿಕವೇ. ಮಳೆಗಾಲದಲ್ಲಿ ಅಂಗಳದಲ್ಲೆಲ್ಲ ಪಾಚಿ ಹಿಡಿದು ಕಾಲಿಟ್ಟೆಡೆಯಲ್ಲಿ ಜಾರುತ್ತಿದ್ದು, ಅಂತಹ ಇಂದು ದಿನ ಆಚುಮ್ಮ ಬಾವಿಯಿಂದ ನೀರನ್ನೆತ್ತಿಕಂಡು ಬರುತ್ತಿದ್ದಾಗ ಕೊಡಪಾನದ ಸಹಿತ ಜಾರಿ ಬಿದ್ದಳು. ಬಾಗಿಲಲ್ಲಿ ನಿಂತಿದ್ದ ಮಮ್ಮೂಟಿ ನಗು ತಡೆಯಲಾರದೆ ಜೋರಾಗಿ ನಕ್ಕು ಬಿಟ್ಟನು. ಆಚುಮ್ಮ ಬಿದ್ದ ನೋವಿನೆಡೆಯಲ್ಲೂ ಹುಡುಗನ ನಗು ಕೇಳಿ ಎದ್ದು ನಿಲ್ಲುತ್ತಾ ಕೋಪದಿಂದ, 16 ಸುಳಿ “ಏ ಹರಾಮ ಖೋರ, ಯಾಕೋ ನಗ್ತಿದ್ದೀಯಾ?'' ಎನ್ನುತ್ತಾ ಆತನನ್ನು ಹೊಡೆಯಲು ಕೈ ಎತ್ತಿಕೊಂಡು ಮುಂದೆ ಬಂದವಳು ಮತ್ತೊಮ್ಮೆ ಜಾರಿ ಬಿದ್ದಳು. ಉಟ್ಟ ಬಟ್ಟೆ ಪೂರ್ತಿ ಕೆಸರು ಮೆತ್ತಿಕೊಂಡಿತು. ಮಮ್ಮೂಟಿ ಮತ್ತೊಮ್ಮೆ ಕೈ ತಟ್ಟಿಕೊಂಡು ನಕ್ಕನು. ಮರುದಿನ ಆಚುಮ್ಮ ಒಂದು ಕೈ ಅಲುಗಿಸಲಾರದೆ ಮೈ ಕೈ ನೋವು ಜ್ವರದಿಂದ ಮಲಗಿದಾಗ ಚೋಮಾರು ಬಂದವಳು, “ಅಲ್ಲಿ ಕಂಜಮ್ಮ ಅಂತ ಒಬ್ಬರಿದ್ದಾರೆ. ಅವರು ನೀರು ಮಂತ್ರಿಸಿ ಕೊಡ್ತಾರೆ. ಅದನ್ನು ಹಾಕಿದರೆ ಇವರಿಗೆ ವಾಸಿಯಾಗುತ್ತದೆ'' ಎಂದು ಆಮಿನಾಬಿಯೊಡನಂದಳು. ಆಮಿನಾಬಿ ಕೂಡಲೇ ಕಂಜಮ್ಮನನ್ನು ಕರೆಸಿದಳು. ಕಂಜಮ್ಮ ಆಚುಮ್ಮನನ್ನು ಪರೀಕ್ಷಿಸಿ “ಇದು ಸಂಜೆಯ ಹೊತ್ತಿಗೆ ಅಂಗಳದಲ್ಲಿ ಬಿದ್ದಾಗ ಗುಳಿಗ ಹೊಯ್ಗೆ ಬಿಸಾಡಿದ್ದು.'' ಎನ್ನುತ್ತಾ ಏನೇನೋ ಸೊಪ್ಪುಗಳನ್ನು ತಂದು ನೀರಿನಲ್ಲಿ ಹಾಕಿ ಆ ಸೊಪ್ಪಿನಿಂದ ಆಚುಮ್ಮನ ಮೈ ಒರೆಸುತ್ತಾ ಹೊಯ್ಗೆ ತೆಗೆದಳು. ಅಕ್ಕಿ ಕಾಳನ್ನು ಮಂತ್ರಿಸಿ ನೀರಿನಲ್ಲಿ ಹಾಕಿ ಕುಡಿಯಲು ಕೊಟ್ಟಳು. ಆಚುಮ್ಮನ ಮೈಗೆ ಗುಳಿಗ ಎಸೆದ ಮರಳಿನ ಕಣಗಳನ್ನು ತೆಗೆದುದಕ್ಕಾಗಿ ಆಮಿನಾಬಿ ಕಂಜಮ್ಮನಿಗೆ ಅಕ್ಕಿ ಮತ್ತು ತೆಂಗಿನ ಕಾಯಿಯನ್ನು ನೀಡಿದಳು. ಮರುದಿನವೂ ಆಚುಮ್ಮನ ಎಡಗೈ ಅಲುಗಾಡಿಸಲು ಸಾಧ್ಯವಾಗದಾಗ ದೊಡ್ಡಾಸ್ಪತ್ರೆಗೆ ಕಳಿಸಿ ಮೂಳೆಮುರಿತಕ್ಕಾಗಿ ಬ್ಯಾಂಡೇಜ್ ಕಟ್ಟಿಸಿಕೊಂಡು ಬಂದು ಮೂರು ವಾರಗಳವರೆಗೆ ಗೋಳಾಡುತ್ತಾ ತೊಂದರೆಯನುಭವಿಸಿದಳು. ಆದರೆ ಈ ಘಟನೆಯಿಂದ ಕಂಜಮ್ಮ ಆ ಮನೆಗೆ ಆಗಾಗ ಬಂದು ಹೋಗುವಂತಾಯಿತು. ಮತ್ತು ಆಕೆ ಆಚುಮ್ಮಳ ಹೊಸ ಗಿರಾಕಿಯೂ ಆದಳು. ಮನೆಯಲ್ಲಿ ಯಜಮಾನಿ ಇಲ್ಲದ ಒಂದು ದಿನ ಮುಸ್ಸಂಜೆಯ ಹೊತ್ತಿನಲ್ಲಿ ಆಚುಮ್ಮ ಮಮ್ಮೂಟಿಯನ್ನು ಕರೆದು ಪಿಸುಗುಟ್ಟಿದಳು. “ಹಟ್ಟಿಯಲ್ಲಿ ಎರಡು ಸೇರಕ್ಕಿ ಮತ್ತು ಎರಡುಕಾಯಿಗಳನ್ನಿಟ್ಟಿದ್ದೇನೆ. ಫಾತಿಮಾಬಿಗೆ ಕೊಟ್ಟು ಬಾ.'' “ನನಗೆಷ್ಟು ಕೊಡ್ತೀರಿ?'' ಪಿಸುಗುಟ್ಟಿದನು ಹುಡುಗ. “ಯಾಕೆ, ಯಾವಾಗಲೂ ಎಂಟಾಣೆ ಕೊಡುವುದಿಲ್ಲವಾ?'' “ಉಹುಂ. ಅದು ಸಾಲದು. ಎರಡಾಣೆ ಜಾಸ್ತಿ ಕೊಡಬೇಕು.'' ಉರಿಯುವ ಮನೆಯಿಂದ ಹಿರಿದದ್ದೇ ಲಾಭ! ಅಲ್ಲದೆ ಆತನೂ ಈಗ ಖರ್ಚಿಗೆ ಹೊಸ ಹಾದಿಯೊಂದನ್ನು ಕಂಡುಕೊಂಡಿದ್ದನು. “ಹುಂ ಬಹಳ ಕಲ್ತು ಬಿಟ್ಟಿದ್ದಿ. ಬೀಡಿ ಸೇದಲು ಕಲ್ತಿದ್ದೀಯಲ್ಲಾ? ಹೇಳ್ತೇನೆ ಆಮಿನಕ್ಕನಿಗೆ.'' ಗುರಿ ನೋಡಿ ಒಂದೇಟು ಹೊಡೆದಳು. ಆಚುಮ್ಮ. ಇಳಿತ 17 ಆದರೆ ಗುರಿ ತಪ್ಪಿ ತನ್ನ ಬಳಿಗೇ ಹಿಂತಿರುಗಿತು. “ಅಕ್ಕನಿಗೆ ಹೇಳ್ತೀರಾ? ಹೇಳಿ, ಹೇಳಿ. ನಾನೂ ಹೇಳ್ತೇನೆ ಅಕ್ಕಿ ಮತ್ತು ತೆಂಗಿನ ಕಾಯಿ ಎಲ್ಲಿಗೆ ಹೋಗ್ತದೆ ಎಂದು.'' ಆಚುಮ್ಮಳ ಮುಖ ಕಪ್ಪಿಟ್ಟಿತು. ಆಕೆ ಪಿಸುಗುಟ್ಟಿದಳು. “ಆಯ್ತು ಮಾರಾಯ. ನೀನಂದಂತೆಯೇ ಆಗಲಿ. ಬಾಯ್ಮುಚ್ಚಿ ಬೇಗ ಇದನ್ನು ಕೊಟ್ಟು ಬಾ.'' ಮಮ್ಮೂಟಿ ಗಂಟನ್ನು ಹಿಡಿದುಕೊಂಡು ಹಿತ್ತಿಲ ಕಡೆಯ ಕಾಂಪೌಂಡು ಗೋಡೆ ಹತ್ತಿ ಓಣಿಗೆ ಧುಮುಕಿದನು. ನಾಲ್ಕು ಹೆಜ್ಜೆ ನಡೆಯುವಷ್ಟರಲ್ಲಿ ಉಂಬಾಯಿ ಎದುರಾದನು. “ಏನೋ ಅದು?'' ಹುಡುಗನ ಕೈಯ ಗಂಟು ನೋಡುತ್ತಾ ಕೇಳಿದನು. “ಅದು...ಅದೂ...'' ತೊದಲಿದನು ಹುಡುಗ. “ಅದೂ ಅದೂ ಅಂದರೇನೊ? ನೋಡುವಾ, ಇಲ್ಲಿ ತಾ.'' ಗದರಿದನು ಉಂಬಾಯಿ. ಮಮ್ಮೂಟಿಯ ನಾಲಗೆಯ ದ್ರವವಾಯಿತು. ಭಯದಿಂದ ಮುಖ ಬಿಳಿಚಿಕೊಂಡಿತು. ಗಟ್ಟಿ ಮುಟ್ಟಾಗಿ ದೃಢಕಾಯನಾಗಿದ್ದ ಉಂಬಾಯಿ ಆತನ ಕಣ್ಣಿಗೆ ರಾಕ್ಷಸನಂತೆ ಕಂಡನು. ಮಮ್ಮೂಟಿ ಬಾಯಿ ತೆರೆಯುವ ಮುನ್ನವೇ ಆತನು ಹುಡುಗನ ಕೈಯಿಂದ ಗಂಟನ್ನು ಕಿತ್ತುಕೊಂಡನು. ಮುಟ್ಟಿ ನೋಡುತ್ತಲೂ ಒಳಗಿನ ಸಾಮಾನುಗಳ ಪರಿಚಯವಾಯಿತು ಆತನಿಗೆ. “ಸತ್ಯ ಹೇಳು. ಇದನ್ನು ನಿನಗೆ ಕೊಟ್ಟವರಾರು? ಅಥವಾ ನೀನೇ ತೆಗೆದುಕೊಂಡೆಯಾ?'' ಗರ್ಜಿಸಿದನಾತ. “ಇಲ್ಲ ಕಾಕಾ... ನಾನು ತೆಗೆದುಕೊಂಡಿಲ್ಲ. ಆ... ಆಚುಮ್ಮಕ್ಕ ಕೊಟ್ಟರು.'' ಎನ್ನುತ್ತಾ ಕಣ್ಣೊರೆಸಿಕೊಳ್ಳತೊಡಗಿದನು. “ಅಳೋದ್ಯಾಕೆ? ಎಲ್ಲಿಗೆ ಕೊಂಡೊಯ್ಯುತ್ತಿದ್ದೀಯೊ?'' “ಅದೂ... ಫಾತಿಬಿಯ ಮನೆಗೆ.'' “ಓಹೋ, ಹೀಗೋ ಸಮಾಚಾರ?'' ಎನ್ನುತ್ತಾ ಕೊಂಚ ಹೊತ್ತು ಮೌನವಾಗಿದ್ದ ಆತ, “ಆಯಿತು, ತೆಗೆದುಕೊಂಡು ಹೋಗು.'' ಎಂದನು. ಧ್ವನಿಯಲ್ಲೀಗ ಗರ್ಜನೆ ಇರಲಿಲ್ಲ. ಹುಡುಗ ಅತ್ತ ಹೋಗುತ್ತಲೂ ಉಂಬಾಯಿ ಕಾಂಪೌಂಡು ಗೋಡೆಯ ಅದೇ ಮುರಿದು ಬಿದ್ದ ಭಾಗದಿಂದ ಹಿತ್ತಲೊಳಗೆ ಬಂದು ಮನೆಯ ಹಿಂಭಾಗದ ಅಂಗಳಕ್ಕೆ ಕಾಲಿಟ್ಟನು. ಬಾಯಲ್ಲಿದ್ದ ತಾಂಬೂಲದ ರಸವನ್ನು ತೆಂಗಿನ ಬುಡಕ್ಕೆ ಉಗುಳುತ್ತಾ “ಯಾರೂ ಇಲ್ಲವಾ ಇಲ್ಲಿ?'' ಎಂದು ಜೋರಾಗಿ ಕೇಳಿದನು. 18 ಸುಳಿ “ಯಾರಪ್ಪಾ ಅದೂ...'' ಎನ್ನುತ್ತಾ ಹೊರಬಂದ ಆಚುಮ್ಮ “ಹೋ ಉಂಬಾಯಿ ಕಾಕಾ, ಏನು ಈ ಕಡೆ ಬಂದಿರಿ?'' ಎಂದು ಬಾಯಲ್ಲಿದ್ದ ತಾಂಬೂಲ ಅಗಿಯುತ್ತಾ ಕೇಳಿದಳು. ಉಂಬಾಯಿ ಆಚುಮ್ಮಳನ್ನು ದಿಟ್ಟಿಸಿದನು. ಆಕೆ ಅದೇ ತಾನೇ ಸ್ನಾನ ಮಾಡಿ ಉದ್ದನೆಯ ತಲೆಗೂದಲನ್ನು ಹಾಗೆಯೇ ಬಿಟ್ಟಿದ್ದಳು. ತಾಂಬೂಲದಿಂದ ಕೆಂಪಗಾದ ತುಟಿಗಳು, ಕಾಡಿಗೆ ಹಚ್ಚಿದ ಬಟ್ಟಲುಗಣ್ಣುಗಳು. ತಿಳಿಯಾದ ಮೈಬಣ್ಣದ, ಮೂವತ್ತರ ಹರೆಯದ ಆಕೆಯಲ್ಲಿ ಯೌವನದ ಆಕರ್ಷಣೆ ಏನೇನೂ ಕಮ್ಮಿಯಾಗಿರಲಿಲ್ಲ. ಉಂಬಾಯಿಯನ್ನು ಕಂಡೊಡನೆ ಆಕೆ ತಲೆಯ ಮೇಲೆ ಸೆರಗೆಳೆದುಕೊಂಡಳು. “ಕುಡಿಯಲು ಸ್ವಲ್ಪ ನೀರು ಕೊಡು.'' ಎಂದನಾತ. ಆಕೆ ಒಳಹೋಗಿ ಚೊಂಬಿನಲ್ಲಿ ನೀರಿ ತಂದಿತ್ತು. “ಚಾ ಬೇಕಾ?'' ಎಂದು ಕೇಳಿದಳು. “ಏನೂ ಬೇಡ. ಹಾಂ... ಅದಿರಲಿ...'' ಎನ್ನುತ್ತಾ ಆಕೆಯನ್ನೇ ದಿಟ್ಟಿಸುತ್ತಾ “ಕೊಂಚ ಬಾ ಇಲ್ಲಿ. ನಿನ್ನೊಡನೆ ಒಂದು ವಿಷಯ ಕೇಳಬೇಕಾಗಿದೆ.'' ಎಂದು ಅಧಿಕಾರವಾಣಿಯಿಂದ ನುಡಿದು ಅಂಗಳದ ಮೂಲೆಗೆ ನಡೆದನು. ಕ್ಷಣಕಾಲ ತಬ್ಬಿಬ್ಬಾದ ಆಚುಮ್ಮ ಆತನನ್ನು ಹಿಂಬಾಲಿಸಿದಳು. ಉಂಬಾಯಿ ಸುತ್ತಲೂ ನೋಡುತ್ತಾ ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡು, “ಎಷ್ಟು ದಿನಗಳಿಂದ ನಡೆಯುತ್ತಿದೆ ಈ ಕಾರುಬಾರು?'' ಎಂದು ಯಾವ ಪೀಠಿಕೆಯೂ ಇಲ್ಲದೆ ಧ್ವನಿ ಎತ್ತರಿಸಿ ಕೇಳಿದನು. ಆಚುಮ್ಮ ಅವಾಕ್ಕಾದಳು. ಮೈಯಲ್ಲಿ ನಡುಕ ಹುಟ್ಟಿದರೂ ತೋರಿಸಿಕೊಳ್ಳದೆ, “ಯಾವ ವಿಷಯ ಕೇಳುತ್ತೀರಿ ನೀವು? ಎಂತಹ ಕಾರುಬಾರು?'' ಎಂದು ಅಮಾಯಕಳಂತೆ ಕೇಳಿದಳು. “ನೋಡು ಆಚುಮ್ಮ, ನನ್ನೆದುರಿಗೆ ಈ ನಟನೆಯಲ್ಲ ಬೇಡ. ಇಂತಹವನ್ನೆಲ್ಲ ನಾನೆಷ್ಟೋ ನೋಡಿದ್ದೇನೆ. ಮಮ್ಮೂಟಿಯ ಕೈಯಲ್ಲಿ ಅಕ್ಕಿ ಮತ್ತು ತೆಂಗಿನ ಕಾಯಿಗಳನ್ನು ಮಾರಲು ಕಳುಹಿಸಿದ್ದು ನೀನೇ ಅಲ್ಲವಾ?'' ಎಂದು ಒಳದನಿಯಲ್ಲಿ ಕೇಳಿದನು. ಆಚುಮ್ಮ ಬೆಚ್ಚಿಬಿದ್ದಳು. ಆದರೂ ಸಾವರಿಸಿಕೊಂಡು, “ಹಾಂ... ಅಕ್ಕಿ ಮತ್ತು ಕಾಯಿಯೇ? ನನಗೆ ಗೊತ್ತೇ ಇಲ್ಲ. ಆ ಹುಡುಗನೇ ಕದ್ದೊಯ್ದಿರಬೇಕು. ಈಗ ನನ್ನ ತಲೆಗೆ ಕಟ್ಟಲು ನೋಡ್ತಾನಾ ಕಳ್ಳ ಸೂಳೇಮಗ?'' ಎಂದು ದ್ವೇಷದಿಂದ ನುಡಿದಳು. “ನೀನು ಕಳ್ಳತನ ಮಾಡಿ ಆ ಹುಡುಗನ ತಲೆಗೆ ಕಟ್ಟಲು ನೋಡ್ತೀಯಾ? ನಾನು ಎಷ್ಟೋ ಬಾವಿಯ ನೀರು ಕುಡಿದವನು. ಈ ಆಟವೆಲ್ಲ ನನ್ನ ಬಳಿ ಇಳಿತ 19 ನಡೆಯದು. ನಾನೀಗಲೇ ಹೋಗಿ ಈ ವಿಷಯವನ್ನು ಯಜಮಾನಿಯ ಮುಂದಿಡುವೆ...'' ಎನ್ನುತ್ತಿದ್ದಂತೆಯೇ ಅವನ ಮಾತನ್ನು ನಡುವೆಯೇ ತಡೆಯುತ್ತಾ, “ಅಯ್ಯೋ, ಹಾಗೆ ಮಾತ್ರ ಮಾಡಬೇಡಿ. ನಿಮ್ಮ ಕಾಲು ಹಿಡಿಯುವೆ.'' ಎನ್ನುತ್ತಾ ಕುಸಿದು ಕುಳಿತು ತಲೆಯ ಮೇಲಿನ ಸೆರಗಿನಿಂದ ಕಣ್ಣೊರೆಸಿಕೊಳ್ಳತೊಡಗಿದಳು. ಉಂಬಾಯಿ, “ಹಾಗೆ ಬಾ ದಾರಿಗೆ'' ಎಂದು ಮನದಲ್ಲಂದುಕೊಳ್ಳುತ್ತಾ, “ಮತ್ತೆ ಇನ್ನೇನು ಮಾಡಬೇಕು? ನೀನು ಮನೆಗೆ ಕನ್ನ ಹಾಕುವುದನ್ನು ನೋಡುತ್ತಾ ನಿಲ್ಲಬೇಕೇನು? ಈ ಮನೆಯ ಉಪ್ಪುಂಡವನು ನಾನು.'' ಎಂದು ಗದರಿದನು. “ಇಲ್ಲ ಕಾಕಾ, ಇನ್ನೆಂದಿಗೂ ಈ ಕೆಲಸಕ್ಕೆ ಕೈ ಹಾಕಲಾರೆ'' ಎಂದು ಆಕೆ ಗೋಗರೆಯತೊಡಗಿದಳು. ಹಾಗೆಯೇ ಸಿಕ್ಕಿಬಿದ್ದ ಈ ಬಲೆಯಿಂದ ಪಾರಾಗುವ ಹಾದಿಯನ್ನೂ ಹುಡುಕತೊಡಗಿದಳು. “ಕಾಕಾ, ಕಳೆದ ತಿಂಗಳು ನೀವು ಇಪ್ಪತ್ತೈದು ರೂಪಾಯಿ ಸಾಲ ಕೇಳಿದಿರಲ್ಲಾ? ಅದನ್ನು ಕೊಡಲಾ?'' ಎಂದು ಮೆತ್ತಗೆ ಕೇಳಿದಳು. “ಇಪ್ಪತ್ತೈದು ಸಾಲದು; ಐವತ್ತು ಕೊಡು.'' ಮುಲಾಜಿಲ್ಲದೆ ಕೇಳಿದನಾತ. “ನೀನು ಸತ್ತು ಮಣ್ಣು ತಿಂದು ಹೋಗು'' ಎಂದು ಮನದಲ್ಲೇ ಆತನನ್ನು ಶಪಿಸುತ್ತಾ, ಮರುಮಾತನಾಡದೆ ಆತನ ಕೈಗೆ ಹಣವನ್ನು ತಂದಿತ್ತಳು. ಹಲ್ಲು ಕಿರಿಯುತ್ತಾ ಆಕೆಯ ಕೈಯಿಂದ ಹಣ ತೆಗೆದುಕೊಂಡ ಬಳಿಕ, “ಹಾಗೆ ಕೊಂಚ ಆಚೀಚೆ ಮಾಡಿ ನಾಲ್ಕು ಪುಡಿಗಾಸು ಸಂಪಾದಿಸಿಕೊಳ್ಳುವುದು ದೊಡ್ಡ ತಪ್ಪೇನೂ ಅಲ್ಲ ಬಿಡು! ಎಂದು ಪಿಸುಗುಟ್ಟಿ ಉಂಬಾಯಿ ಹೊರಟು ಹೋದನು. ರಾತ್ರಿ ಎಲ್ಲರೂ ಮಲಗಿದ ಬಳಿಕ ಆಚುಮ್ಮ ಮಮ್ಮೂಟಿಯ ತನಿಖೆಗೆ ಪ್ರಾರಂಭಿಸಿದಳು. “ಹರಾಂಖೋರ, ನೀನೇಕೆ ಉಂಬಾಯಿಗೆ ಅದನ್ನು ತೋರಿಸಿದೆ? ಇವತ್ತು ನಿನಗೆ ಒಂದು ಪೈಸಾ ಕೂಡ ಕೊಡುವುದಿಲ್ಲ?'' ಎನ್ನುತ್ತಾ ಆತನ ಕೆನ್ನೆಗೆ ಒಂದೇಟು ಬಾರಿಸಿದಳು. ಹುಡುಗ ಅಳುಮುಖ ಮಾಡಿಕೊಂಡು “ಪೈಸಾ ಕೊಡದಿದ್ದರೆ ಎಲ್ಲವನ್ನೂ ಯಜಮಾನಿಗೆ ತಿಳಿಸುವೆ'' ಎಂದು ಗೊಣಗಿಕೊಳ್ಳುತ್ತಾ ಚಾಪೆ ಹಾಸತೊಡಗಿದನು. ಆ ರಾತ್ರಿ ಆಚುಮ್ಮ ನಿದ್ರೆಯಿಲ್ಲದೆ ಚಾಪೆಯಲ್ಲಿ ಹೊರಳಾಡಿದಳು. ತನ್ನ ಕಿವಿಗೆ ಹತ್ತು ಅಲಿಕತ್ತು ಮಾಡಿಸಬೇಕೆಂಬ ಮಹದಾಸೆಯಿಂದ ತಾನು ಈ ಕೆಲಸಕ್ಕೆ 20 ಸುಳಿ ಕೈ ಹಾಕಿದೆ. ಈಗ ಇದು ಈ ಸೈತಾನನಿಗೆ ಗೊತ್ತಾಗಿ ಇನ್ನು ಏನೇನು ಅನಾಹುತವಾಗುತ್ತದೊ ಎಂದಾಕೆ ಬೆದರಿದಳು. ಉಂಬಾಯಿ ತನ್ನ ವ್ಯವಹಾರವನ್ನು ಅಲ್ಲಿಗೆ ನಿಲ್ಲಿಸಲಿಲ್ಲ. ಅವನು ಆಗಾಗ ಬಂದು ಆಚುಮ್ಮಳೊಡನೆ ಐದು, ಹತ್ತು, ಇಪ್ಪತ್ತು ಎಂದು ಹಣ ಸುಲಿಯತೊಡಗಿದನು. ಆಚುಮ್ಮ ಬಿಸಿ ತುಪ್ಪ ಬಾಯಲ್ಲಿಟ್ಟು ಕೊಂಡವಳಂತಾದಳು. ಆಕೆಯ ಖಜಾನೆ ಬರಿದಾಗತೊಡಗಿತು. ಇತ್ತೀಚೆಗೆ ಉಂಬಾಯಿಯ ಸ್ವಭಾವದಲ್ಲಿ ಇನ್ನೊಂದು ಬದಲಾವಣೆಯೂ ಕಾಣಿಸಿಕೊಳ್ಳತೊಡಗಿತ್ತು. ಅನಾವಶ್ಯಕವಾಗಿ ಆಕೆಯೊಡನೆ ಸಂಭಾಷಣೆಗೆ ನಿಲ್ಲುವುದು, ಆಕೆಯನ್ನು ಆಸೆಗಣ್ಣಿನಿಂದ ನೋಡುವುದು, ಆಕೆಯ ಕೈಯಿಂದ ನೀರು ತೆಗೆದುಕೊಳ್ಳುವಾಗ ಬೇಕೆಂದೇ ಆಕೆಯ ಬೆರಳುಗಳನ್ನು ಸವರುವುದು. ಎಲ್ಲವನ್ನೂ ಮೌನವಾಗಿ ನುಂಗಿಕೊಳ್ಳುತ್ತಿದ್ದಳು. ಆತ ಹೋದ ಬಳಿಕ ನೆಲಕ್ಕೆ ಕೈ ಬಡಿದು ಆತನಿಗೆ ಹಿಡಿಶಾಪ ಹಾಕುತ್ತಿದ್ದಳು. ಆ ದಿನ ಮುಸ್ಸಂಜೆಯ ಹೊತ್ತಿಗೆ ಉಂಬಾಯಿ ಹಿತ್ತಿಲ ಬಾಗಿಲ ಬಳಿ ಬಂದು ಆಚುಮ್ಮನನ್ನು ಕರೆದನು. “ಮುದುಕನಿಗೆ ಬೇರೆ ಕೆಲಸವಿಲ್ಲ.'' ಎಂದು ಗೊಣಗುತ್ತಾ ಆಕೆ ಹೊರಬಂದು “ಏನು? ಈಗ ನನ್ನ ಬಳಿ ಏನೇನೂ ಇಲ್ಲ'' ಎಂದು ಅಸಹನೆಯಿಂದ ನುಡಿದಳು. “ಈಗ ನಾನು ನಿನ್ನೊಡನೆ ಹಣ ಕೇಳಿದೆನೇ? ಹೀಗೇ... ಈ ದಾರಿಯಾಗಿ ಹೋಗುವಾಗ ನಿನ್ನ ನೆನಪಾಗಿ ಈ ಕಡೆ ಬಂದೆ...ಹಿ...ಹಿ...ಹಿ...''ಎನ್ನುತ್ತಾ ಹಲ್ಲು ಕಿರಿದನು. ಆಚುಮ್ಮ ಹಲ್ಲು ಕಡಿದು ಉಕ್ಕಿ ಬಂದ ಕೋಪವನ್ನು ನಿಯಂತ್ರಿಸಲೆತ್ನಿಸುತ್ತಿದ್ದಳು. ಒಮ್ಮೆ ಆತನು ಇಲ್ಲಿಂದ ಹೊರಟು ಹೋದರೆ ಸಾಕೆಂದುಕೊಳ್ಳುತ್ತಾ, “ಈಗೇನು ಬೇಕು ನಿಮಗೆ?'' ಎಂದು ಕೇಳಿದಳು. “ನಾನು ಕೇಳಿದ್ದನ್ನು ಕೊಡುವೆಯಾ?“ ಮೃದುವಾಗಿ ಕೇಳಿದನಾತ. “ಒಂದು ಗಂಡು ಒಂದು ಹೆಣ್ಣಿನಿಂದ ಬಯಸುವುದೇನೆಂದು ತಿಳಿಯದವಳೇನೂ ಅಲ್ಲವಲ್ಲ ನೀನು?'' ಸಮೀಪ ಬಂದು ಪಿಸುಗುಟ್ಟಿದನಾತ. ಆಕೆ ಆಶ್ಚರ್ಯಘಾತದಿಂದ ಆತನನ್ನೇ ದಿಟ್ಟಿಸಿದಳು. ಆತ ಇಷ್ಟು ಧೈರ್ಯದಿಂದ ಮುಂದುವರಿಯಬಹುದೆಂದು ಆಕೆ ಕನಸಿನಲ್ಲೂ ಊಹಿಸಿರಲಿಲ್ಲ. “ನಾನು ಕೇಳಿದ್ದು ಅರ್ಥವಾಗಲಿಲ್ಲವಾ? ರಾತ್ರಿ ಎಲ್ಲರೂ ಮಲಗಿದ ಬಳಿಕ ನಾನು ಬಂದು ಬಾಗಿಲು ಶಬ್ದ ಮಾಡುವೆ. ಆಗ ಎದ್ದು ಹೊರಗೆ ಬಾ.“ ಇಳಿತ 21 ಆಕೆಯ ದೇಹವನ್ನು ಕಣ್ಣುಗಳಿಂದಲೇ ಸವರುತ್ತಾ ನುಡಿದನಾತ. ಆತನಂದ ಮಾತುಗಳ ಭಾವಾರ್ಥ ಹೊಳೆದಾಗ ಕೋಪೋದ್ರಿಕ್ತಳಾದ ಆಕೆ ಕಣ್ಣುಗಳಲ್ಲೇ ಆತನನ್ನು ಸುಟ್ಟು ಬಿಡುವಂತೆ ನೋಡಿ, “ಥೂ ನಿನ್ನ ಮುಖಕ್ಕೆ ಹರಾಂಖೋರ! ನಿನ್ನ ತಾಯಿಯೊಡನೆ ಕೇಳು!'' ಎಂದು ಸ್ಫೋಟಿಸಿದಳು. “ಹಾಂ...ಹಾಂ... ಹಾಗೆ ಸಿಡಿಯುವುದು ಬೇಡ. “ನಗುತ್ತಾ ನುಡಿದನಾತ. “ನಿನಗಿಷ್ಟವಿಲ್ಲವಾದರೆ ನಾನು ಬಲವಂತ ಮಾಡುವುದಿಲ್ಲ. ಯಜಮಾನರಿಗೆ ಅಟ್ಟದಲ್ಲಿರುವ ಅಕ್ಕಿಮುಡಿ ಮತ್ತು ಕಾಯಿಗಳ ಲೆಕ್ಕ ಒಪ್ಪಿಸಿ ಬಿಡುತ್ತೇನೆ. ಆಮೇಲೆ ನೀನುಂಟು; ಅವರುಂಟು'' ಎಂದು ನುಡಿದನು. ಹಲ್ಲು ಕಿತ್ತ ಹಾವಾದಳು ಆಕೆ ಈಗ. ಬಾಲವಂತೂ ಆತನ ಕೈಯೊಳಗೆ. ಹೋರಾಡಲು ತನ್ನ ಕೈಯೊಳಗೆ ಅಸ್ತ್ರಗಳೇ ಇಲ್ಲ. ಆಚುಮ್ಮಳ ಕೋಪ ಜರ್ರನೆ ಇಳಿಯಿತು. ಯಜಮಾನರಿಗೆ ತನ್ನ ಕಳ್ಳತನ ತಿಳಿದರೆ ತಾನೀ ಮನೆಯಲ್ಲಿ ಬದುಕಲುಂಟೆ? ಆಕೆ ದೃಷ್ಟಿ ಕೆಳಗಿಳಿಸಿ ಮೆತ್ತಗೆ, “ಹಾಗೆ ಮಾತ್ರ ಮಾಡಬೇಡಿ. ನಿಮ್ಮ ದಮ್ಮಯ್ಯ!'' ಎಂದಳು. “ಬಹಳ ಪರಿಶುದ್ಧಳಂತಾಡಬೇಡ. ಇವತ್ತು ರಾತ್ರಿ ನಾನು ಬರುವೆ'' ಎನ್ನುತ್ತಾ ಹೊರಟು ಹೋದನು. ಆಚುಮ್ಮ ಬಹಳ ಹೊತ್ತು ಮರಗಟ್ಟಿ ನಿಂತೇ ಇದ್ದಳು. ಒಳ ಬಂದ ಆಕೆಗೆ ಕಣ್ಣು ಕತ್ತಲಿಟ್ಟಂತೆ ಭಾಸವಾಗಿ ಒಂದೆಡೆ ಕುಳಿತುಕೊಂಡಳು. ನಾಲ್ಕು ಕಾಸು ಸಂಪಾದಿಸಿಕೊಳ್ಳಬೇಕೆಂಬ ತನ್ನಾಸೆಗೆ ಈಗ ತಾನು ತನ್ನನ್ನೇ ಈ ರೀತಿ ಬಲಿಯರ್ಪಿಸಿಕೊಳ್ಳಬೇಕಾಯಿತೇ? ಹಿಂತಿರುಗುವ ಹಾದಿಗಳಂತೂ ಇಲ್ಲವೇ ಇಲ್ಲ. ಈಗ ಉಳಿದಿರುವುದು ಮುಂದುವರಿಯುವ ಹಾದಿಯೊಂದೇ. ತಾನೇ ನೇಯ್ದ ಬಲೆಯಾದರೂ ಕೋಪ ತಿರುಗಿದ್ದು ಮಮ್ಮೂಟಿಯ ಮೇಲೆ. “ಈ ಹುಡುಗನಿಂದಾಗಿ ನಾನು ಕೆಟ್ಟೆ.'' ಎನ್ನುತ್ತಾ ಕುಳಿತಲ್ಲಿಂದ ಎದ್ದು ರಾತ್ರಿಯ ಅಡುಗೆಗೆ ತೊಡಗಿದಳು. ಅನ್ಯಮನಸ್ಕಳಾಗಿ ಹೇಗೊ ಅಡಿಗೆ ಮುಗಿಸಿದಳು. ರಾತ್ರಿ ಊಟಕ್ಕೆ ಕುಳಿತ ಹನೀಫ್‍ನಿಂದ ಚೆನ್ನಾಗಿ ಬೈಗಳೂ ದೊರೆತವು. “ಇದೇನು ರೊಟ್ಟಿಯೋ, ಮಣ್ಣಿನ ಹೆಂಟೆಯೋ? ಸಾರಿಗೆ ಉಪ್ಪು ಎರಡು ಬಾರಿ ಹಾಕಿದ್ದಾಳಾ? ಸಮನಾಗಿ ಅಡಿಗೆ ಮಾಡುವುದಾದರೆ ಇಲ್ಲಿರಲಿ. ಇಲ್ಲವಾದರೆ ಹೊರಟು ಹೋಗಲು ಹೇಳು ಆಕೆಯೊಡನೆ.!'' ಆಚುಮ್ಮ ಒಲೆಯ ಮುಂದೆ ಕುಳಿತು ಕಣ್ಣೊರೆಸಿಕೊಂಡಳು. “ಹೋಗು'' ಎಂದೊಡನೆ ಹೋಗುವುದಾದರೂ ಎಲ್ಲಿಗೆ? ರಾತ್ರಿ ಊಟ ನೀಡಲು ಬಂದ 22 ಸುಳಿ ಆಮಿನಾಬಿಯೊಡನೆ “ಉಮ್ಮಾ ನನಗೆ ವಿಪರೀತ ತಲೆನೋವು. ಊಟ ಬೇಡ.'' ಎಂದಳು. “ಬರೀ ಹೊಟ್ಟೆಯಲ್ಲಿ ಮಲಗಬಾರದು. ಒಂದು ತುತ್ತು ಉಣ್ಣು'' ಎಂದು ಯಜಮಾನಿ ಬಲವಂತಪಡಿಸಿದಾಗ ಊಟಕ್ಕೆ ಕುಳಿತಳು. ಆದರೆ ತುತ್ತು ಗಂಟಲಲ್ಲಿಳಿಯಬೇಕಲ್ಲ? ಉಂಬಾಯಿಯ ಕೈಗಳು ಗಂಟಲನ್ನು ಅಮುಕುತ್ತಿರುವಂತೆ ಭಾಸವಾಗಿ ಕಷ್ಟದಿಂದ ಊಟ ಮುಗಿಸಿದಳು. ರಾತ್ರಿ ದೀಪವಾರಿಸಿ ಎಲ್ಲರೂ ಮಲಗಿದ ಬಳಿಕ ಬಾಗಿಲ ಚಿಲಕದ ಶಬ್ದಕ್ಕಾಗಿ ಕಾಯುತ್ತಾ ನೇಣುಗಂಬವನ್ನೇರ ಹೊರಟ ಕೈದಿಯಂತೆ ಕುಳಿತುಕೊಂಡಳು. ಕೊಂಚ ದೂರದಲ್ಲಿ ಮಲಗಿದ್ದ ಮಮ್ಮೂಟಿಯಾಗಲೇ ಗೊರಕೆ ಹೊಡೆಯತೊಡಗಿದ್ದನು. ತಾನು ಯಾಕಾದರೂ ಈ ಕಳ್ಳತನ ಪ್ರಾರಂಭಿಸಿದೆನೆಂದು ನೂರು ಬಾರಿ ತನ್ನನ್ನೇ ಶಪಿಸಿಕೊಂಡಳು. ಜಾರು ಬಂಡೆಯಲ್ಲಿ ಕುಳಿತಾಯಿತು. ಇನ್ನು ಜಾರುತ್ತಾ ಹೋಗುವುದೇ ತನ್ನ ಹಣೆಬರಹ ತಾನೇ? ಈ ಮುದುಕ ಸತ್ತಾದರೂ ಹೋಗಿದ್ದರೆ ತಾನು ಮೊಹಿಯುದ್ದೀನ್ ದರ್ಗಾಕ್ಕೆ ಐದು ರೂಪಾಯಿ ಹಾಕುತ್ತಿದ್ದೆ ಎಂದೆಲ್ಲಾ ಚಿಂತಿಸುತ್ತಿದ್ದಂತೆಯೇ ಬಾಗಿಲ ಚಿಲಕದ ಸದ್ದಾಯಿತು. ಆಚುಮ್ಮ ಕಂಪಿಸತೊಡಗಿದಳು. ತೊಡೆಯ ನಡುಕದಿಂದ ಸಮನಾಗಿ ಎದ್ದು ನಿಲ್ಲಲೂ ಸಾಧ್ಯವಾಗಲಿಲ್ಲ. ಕಳ್ಳತನ ಮಾಡಿದ್ದರೂ ಆಕೆಯೆಂದೂ ಹಾದರಕ್ಕಿಳಿದಿರಲಿಲ್ಲ. ಈಗ ಈ ಹುಡುಗ ಮತ್ತು ಮುದುಕನಿಂದಾಗಿ ತಾನು ಈ ರೀತಿ ಕೆಸರು ತುಳಿಯಬೇಕಾಯಿತಲ್ಲ? ಎಂದಾಕೆ ಪರಿತಪಿಸಿದಳು. ಮತ್ತೊಮ್ಮೆ ಬಾಗಿಲ ಚಿಲಕದ ಸದ್ದಾದಾಗ ಆಕೆ ಭಾರವಾದ ಹೆಜ್ಜೆಗಳನ್ನೆತ್ತಿಕೊಳ್ಳುತ್ತಾ ಹೋಗಿ ಬಾಗಿಲು ತೆರೆದಳು. ಹೊರನಿಂತಿದ್ದಾತ ಕೈಚಾಚಿ ಆಕೆಯನ್ನೆಳೆದುಕೊಂಡು ಹಟ್ಟಿಯ ಕಡೆಗೆ ನಡೆದನು. “ಅಲ್ಲ ಕಾಕಾ, ಏನಾದರೂ ಹೆಚ್ಚು ಕಮ್ಮಿಯಾದರೇ?'' ಪ್ರಶ್ನಿಸಿದಳು ಆಚುಮ್ಮ, ಎಲ್ಲೋ ಆಳದಿಂದ ಹೊರಟಿದ್ದಂತಹ ಶಬ್ದ. ``ಹೆಚ್ಚು ಕಮ್ಮಿ? ಹಾಗಂದರೆ?... ಓ... ಅರ್ಥವಾಯಿತು. ನೀನು ಗರ್ಭಿಣಿಯಾದರೆ ಎಂದಲ್ಲವಾ? ನಿನಗೆಷ್ಟು ವರ್ಷ?'' ಕೇಳಿದನಾತ. “ಮೂವತ್ತು ದಾಟಿತು.'' ಮೆಲ್ಲಗೆ ಉತ್ತರಿಸಿದಳು. ಉಂಬಾಯಿ ನಕ್ಕುಬಿಟ್ಟನು. “ನೀನೊಂದು ಮಂಕುದಿಣ್ಣೆ. ಇಷ್ಟು ವರ್ಷ ಗರ್ಭಿಣಿಯಾಗದ ಮೇಲೆ ಈಗ ಮೂವತ್ತು ವರ್ಷ ದಾಟಿದ ಬಳಿಕ ಗರ್ಭಿಣಿಯಾಗುವುದಾ? ಇನ್ನು ನಿನಗೆ ಅದೆಲ್ಲ ಇರಲಿಕ್ಕಿಲ್ಲ. ಇಂತಹ ಭಯವೆಲ್ಲ ಬೇಡವೇ ಬೇಡ.'' ಎಂದನು. ಈ ಕುರಿತು ಹೆಚ್ಚಿನ ಜ್ಞಾನವೇನೂ ಇಲ್ಲದ ಆಚುಮ್ಮ ಮೌನಿಯಾದಳು. ಇಳಿತ 23 ಉಂಬಾಯಿಯೇ ಮಾತು ಮುಂದುವರಿಸಿದನು. “ಒಂದು ವೇಳೆ ಹಾಗೇನಾದರೂ ಆದರೆ ನಾನಿಲ್ಲವಾ?'' “ಏನೂ, ನೀವು ನನ್ನನ್ನು ಮದುವೆಯಾಗುವಿರಾ?'' ಚಕಿತಳಾಗಿ ಕೇಳಿದಳಾಕೆ. “ಮದುವೆ? ಅದು ಹೇಗೆ ಸಾಧ್ಯ? ಮದುವೆಯಾದರೆ ನನ್ನ ಹೆಂಡತಿ ಜುಲೇಕ ನನ್ನನ್ನು ಒದ್ದು ಹೊರ ಹಾಕಿಯಾಳು! ಈಗ ಆ ವಿಷಯವೆಲ್ಲ ಯಾಕೆ? ಅಂತಹ ಸಮಯ ಬಂದಾಗ ನೋಡಿಕೊಳ್ಳುವಾ!'' ಎನ್ನುತ್ತಾ ಉಂಬಾಯಿ ಆಕೆಯನ್ನು ಬಿಗಿದಪ್ಪಿಕೊಂಡು ಮುನ್ನಡೆದನು. ಆಕೆ ಕುರಿಯಂತೆ ಆತನನ್ನು ಹಿಂಬಾಲಿಸಿದಳು. ಆತನ ಹಿಂದೆ ಸಾಗುತ್ತಾ ಇಳಿಜಾರಿನ ಕೊನೆಯ ಹಂತವನ್ನೂ ತಲುಪಿದಳು. ಎರಡು ಮೂರು ದಿನಗಳಿಗೊಮ್ಮೆ ಉಂಬಾಯಿ ಭೇಟಿ ಖಾಯಂ ಆಯಿತು. ಮೊದಲ ದಿನದ ಅಳುಕಾಗಲಿ, ಭಯವಾಗಲಿ ಈಗ ಆಚುಮ್ಮನನ್ನೂ ಕಾಡುತ್ತಿರಲಿಲ್ಲ. ಆಕೆಯ ವ್ಯಾಪಾರವೂ ಈಗ ತಡೆ ಇಲ್ಲದೆ ಸಾಗುತ್ತಿತ್ತು. ಮಮ್ಮೂಟಿ ತನ್ನ ವ್ಯವಹಾರದಲ್ಲಿ ಪಳಗಿದ್ದನು. ಅಷ್ಟಿಷ್ಟು ಹಣವನ್ನೂ ಶೇಖರಿಸಿದ್ದನು. ಆದರೆ ಆಚುಮ್ಮ ಶೇಖರಿಸಿದ್ದೆಲ್ಲವೂ ಉಂಬಾಯಿಯ ಪಾಲಾಯಿತು. ಮಾತ್ರವಲ್ಲ ಆಕೆ ದೇಹವನ್ನೂ ಆತನಿಗೆ ಒತ್ತೆಯಿಡಬೇಕಾಯಿತು. ತಲೆಸತ್ತು, ವಾಂತಿಯ ಪ್ರಾರಂಭವೂ ಆಯಿತು. ಈಗ ಆಚುಮ್ಮ ಬೆಚ್ಚಿದಳು. “ಮೈ ಮುರಿಯೆ ದುಡಿದರೂ ಹಾಯಾಗಿ ಹೊಟ್ಟೆ ತುಂಬ ಉಂಡು ನಿರಾಳವಾಗಿರುವುದು ಬಿಟ್ಟು ಏನೇನೊ ಮಹದಾಸೆ ಇಟ್ಟುಕೊಂಡು ಏನೇನೊ ಮಾಡಹೋಗಿ ಆಳವಾದ ಕೆಸರಿನ ಹೊಂಡಕ್ಕೆ ಬಿದ್ದಂತಾಯಿತು. ಆ ಮುದುಕ ಹೇಳಿದ್ದನಲ್ಲ ಮೂವತ್ತು ವರ್ಷ ಕಳೆದ ಬಳಿಕ ಏನೂ ಆಗುವುದಿಲ್ಲ ಎಂದು? ಆತನ ಮಾತು ನಂಬಿ ನಾನು ಕೆಟ್ಟೆ. ಇನ್ನು ಈ ಪರಿಸ್ಥಿತಿಯಿಂದ ಪಾರಾಗುವ ಬಗೆ ಹೇಗೆ?'' ಎಂದೆಲ್ಲ ಚಿಂತಿಸುತ್ತಾ ಅನ್ಯಮನಸ್ಕಳಾಗಿ ದಿನ ತಳ್ಳಿದಳು. ಮರುದಿನ ರಾತ್ರಿ ಉಂಬಾಯಿ ಬಂದಾಗ ಆಕೆ ಅಳುತ್ತಾ ಆತನೊಡನೆ ಪಿಸುಗುಟ್ಟಿದಳು. “ನನಗೆ ತಲೆಸುತ್ತು, ವಾಂತಿ ಪ್ರಾರಂಭವಾಗಿದೆ.“ “ಹಾಂ... ಅದು ಹೇಗೆ?'' ಆಶ್ಚರ್ಯದಿಂದ ಕೇಳಿದನಾತ. “ಯಾಕೆ ಆಶ್ಚರ್ಯ ಪಡುತ್ತೀರಿ? ಈ ವಿಷಯದಲ್ಲಿ ನಿಮ್ಮ ತಿಳುವಳಿಕೆ ಕಮ್ಮಿಯಾಯಿತು. ಪಾಪದ ಪಿಂಡ ಐವತ್ತು ವರ್ಷಗಳಲ್ಲಿಯೂ ಹುಟ್ಟುತ್ತದೊ ಏನೊ.'' 24 ಸುಳಿ “ಹುಂ'' ಉಂಬಾಯಿ ಅನ್ಯಮನಸ್ಕನಾದನು. ಆತನ ಹುರುಪು ಜರ್ರನೆ ಇಳಿಯಿತು. “ಈಗೇನು ಮಾಡುವುದು?'' ಆತಂಕದಿಂದ ಕೇಳಿದಳಾಕೆ. “ನನ್ನೊಡನೇಕೆ ಹೇಳುತ್ತೀ? ಆ ಕಂಜಮ್ಮನ ಬಳಿ ಹೋಗು. ಅವಳೇನಾದರೂ ಮದ್ದು ಕೊಡ್ತಾಳೆ.'' ಧ್ವನಿಯಲ್ಲಿ ಅಸಹನೆ ಇಣುಕುತ್ತಿತ್ತು. “ನಾನಾಕೆಗೆ ಏನೆಂದು ಹೇಳಲಿ? ಮದ್ದನ್ನು ನೀವೇ ತಂದುಕೊಡಿ.'' ಒತ್ತಾಯಿಸಿದಳಾಕೆ. “ಆಗಲಿ. ನಾಳೆ ನೋಡುವಾ. ಈಗ ಬಾ.'' ಮರುದಿನ ಆಚುಮ್ಮ ಬಾಗಿಲ ಚಿಲಕದ ಸದ್ದಿಗಾಗಿ ಕಾಯತೊಡಗಿದಳು. ಯಾವ ಶಬ್ದವನ್ನು ಈವರೆಗೆ ದ್ವೇಷಿಸುತ್ತಿದ್ದಳೋ, ಆ ಶಬ್ದಕ್ಕಾಗಿ ಈ ದಿನ ಕಾತರದಿಂದ ಕಾಯತೊಡಗಿದಳು. ಮಲಗಿದ್ದಲ್ಲಿಂದ ಹಲವು ಬಾರಿ ಎದ್ದು ಕಿಟಕಿಯಲ್ಲಿ ಮುಖವಿಟ್ಟು ಹೊರಗೆ ದೃಷ್ಟಿ ನೆಟ್ಟಳು. ತನ್ನ ಭವಿಷ್ಯದಂತೆಯೇ ಹೊರಗೂ ಗಾಢಾಂಧಕಾರ. ಪೂರ್ವದ ಬಾನು ತಿಳಿಯಾಗತೊಡಗಿದರೂ ಉಂಬಾಯಿ ಬರಲೇ ಇಲ್ಲ. ಅಂದು ಮಾತ್ರವಲ್ಲ. ಮುಂದೆ ಎಂದಿಗೂ ಆತ ಆ ಮನೆಯ ಹಿಂಭಾಗದ ಬಾಗಿಲ ಬಳಿ ಸುಳಿಯಲೇ ಇಲ್ಲ! ಆಚುಮ್ಮಳಿಗೆ ಹಗಲಿಡೀ ಸುಸ್ತು, ಸಂಕಟ, ದೈಹಿಕ ಹಿಂಸೆಗಿಂತಲೂ ಮಾನಸಿಕ ಚಿತ್ರಹಿಂಸೆಯಿಂದ ಆಕೆ ಬಳಲಿದಳು. ಸಾರಿಗೆ ಉಪ್ಪು ಹಾಕಿದ ನೆನಪಿಲ್ಲ. ಅನ್ನ ಬೆಂದು ಮುದ್ದೆಯಾದದ್ದೂ ತಿಳಿಯದು. ಹಾಲು ಉಕ್ಕಿ ಹರಿಯುತ್ತಿದ್ದರೂ ಅದರ ಪರಿವೆಯೇ ಇಲ್ಲದಂತೆ ಮರಗಟ್ಟಿ ನಿಲ್ಲುವಳು. ಅನ್ನ ಕಂಡರೇನೇ ವಾಂತಿಯಾಗುತ್ತಿತ್ತು. “ಏನು ಆಚುಮ್ಮ, ನಿನಗೇನಾಗಿದೆ? ಊಟ ಸೇರುವುದಿಲ್ಲವೇ?'' ಆಮಿನಾಬಿ ಕೇಳಿದಳು ಒಂದು ದಿನ. ``ಇಲ್ಲ ಉಮ್ಮಾ, ನನ್ನ ಮೈಯಲ್ಲಿ ಯಾವುದೋ ಪೀಡೆ ಸೇರಿಕೊಂಡಿದೆಯೋ ಏನೊ. ನಾನೊಮ್ಮೆ ಕಂಜಮ್ಮನನ್ನು ಕಂಡು ಬರುತ್ತೇನೆ.'' ಎಂದಳು ಆಚುಮ್ಮ. “ರಾತ್ರಿ ಹೊತ್ತಲ್ಲದ ಹೊತ್ತಿನಲ್ಲಿ ಹೊರಗೆ ಹೋಗುತ್ತೀ ನೋಡು. ಯಾವುದೋ ಸೈತಾನನೊ, ಜಿನ್ನೊ, ನಿನ್ನ ಮೇಲೆ ಕಣ್ಣಿಟ್ಟಿದೆಯೊ ಏನೊ.'' ಎಂದಳಾಕೆ. ಒಂದು ಕ್ಷಣ ಆಚುಮ್ಮನ ಮೈ ಜುಮ್ಮೆಂದಿತು. ತನ್ನ ಗುಟ್ಟು ಯಜಮಾನಿಗೆ ತಿಳಿದಿದೆಯೇ? ಆಕೆ ಓರೆಗಣ್ಣಿನಲ್ಲಿ ಉಜಮಾನಿಯ ಮುಖ ದೃಷ್ಟಿಸಿದಳು. ಇಲ್ಲ, ಅಲ್ಲಿ ಎಂದಿನದೇ ಅಮಾಯಕತೆ ಮನೆ ಮಾಡಿತ್ತು. ಇಳಿತ 25 “ಹೂಂ... ಹೇಗೂ ನೀನೊಮ್ಮೆ ಕಂಜಮ್ಮನಲ್ಲಿಗೆ ಹೋಗಿ ಬಾ.'' ಆಮಿನಾಬಿಯ ಅನುಮತಿ ದೊರೆತದ್ದೇ ತಡ, ಆಚುಮ್ಮ ಕಂಜಮ್ಮನಲ್ಲಿಗೆ ಓಡಿದಳು. ಆದರೆ ಈ ವಿಷಯವನ್ನು ಆಕೆಯ ಮುಂದೆ ಎತ್ತುವುದು ಹೇಗೆ? ``ಏನು ಆಚುಮ್ಮ, ಸೌಖ್ಯವೇ? ಎಲ್ಲಿಗೆ ಹೊರಟಿದೆ ಸವಾರಿ?'' ನಗುತ್ತಾ ಕೇಳಿದಳು ಕಂಜಮ್ಮ. “ನಿನಗೆ ತಮಾಷೆ. ನನಗಿಲ್ಲಿ ಪ್ರಾಣ ಹೋಗುತ್ತಿದೆ.'' ತಲೆ ತಗ್ಗಿಸಿ ನುಡಿದಳು ಆಚುಮ್ಮ. “ಏನು? ಏನಾಯಿತೀಗ? ಸಿಕ್ಕಿಬಿದ್ದೆಯಾ?'' ಆತಂಕದಿಂದ ಕೇಳಿದಳಾಕೆ. “ಹೂಂ. ಒಂದು ರೀತಿಯಲ್ಲಿ ಹಾಗೇ ಅಂದುಕೊ.'' ಉಗುಳು ನುಂಗುತ್ತಾ ನಿಧಾನವಾಗಿ ನುಡಿದಳು ಆಚುಮ್ಮ. “ಅಂದರೆ?'' ಮತ್ತಷ್ಟು ಆಶ್ಚರ್ಯದಿಂದ ಕೇಳಿದಳಾಕೆ. ಈಗ ಆಚುಮ್ಮ ಅಳತೊಡಗಿದಳು. ಕಣ್ಣೊರೆಸಿಕೊಳ್ಳುತ್ತಾ, ನಡುವೆ ಬಿಕ್ಕುತ್ತಾ ತನ್ನ ದುರವಸ್ಥೆಯೆಲ್ಲವನ್ನೂ ಕೆಂಜಮ್ಮನಿಗೆ ತಿಳಿಸಿದಳು. “ಕಿವಿಗೆ ನಾಲ್ಕು ಚಿನ್ನದ ಸರಿಗೆ ಮಾಡಿಸಿಕೊಳ್ಳೋಣವೆಂದು ಇಂತಹ ಸಾಹಸಕ್ಕಿಳಿದೆ. ನಾಳೆ ಮುದುಕಿಯಾದ ಮೇಲೆ ನನಗೆ ಅನ್ನ ಹಾಕುವವರಾರು? ಆದರೆ ನನ್ನಾಸೆ ನೆಲಕ್ಕೆಬಿದ್ದ ಗಾಜಿನ ಬಟ್ಟಲಾಯಿತು. ಆ ಸೂಳೆ ಮಗನ ಕೈಗೆ ಸಿಕ್ಕಿಬಿದ್ದು ಫಜೀತಿಯಾಯಿತು. ಈಗ ನೀನೇ ಹೇಗಾದರೂ ನನ್ನನ್ನು ಕಾಪಾಡಬೇಕು.'' “ಈಗ ಎಷ್ಟನೇ ತಿಂಗಳು?'' ಕಂಜಮ್ಮ ಕೇಳಿದಳು. “ಮೂರು ತಿಂಗಳು ತುಂಬಿತು. “ಈಗ ಬಹಳ ತಡವೇ ಆಯಿತಲ್ಲ? ಈಗ ಏನಾದರೂ ಮಾಡುವುದು ಕೊಂಚ ಅಪಾಯವೇ. ನೀನು ಮೊದಲೇ ಬಂದಿದ್ದರೆ ಏನಾದರೂ ಮಾಡಬಹುದಿತ್ತು“ ಎಂದಳು ಕಂಜಮ್ಮ. ಆಚುಮ್ಮಳ ಮುಖ ಕಪ್ಪಿಟ್ಟಿತು. “ಅಯ್ಯೋ, ಹಾಗಾದರೆ ನಾನೇನು ಮಾಡಲಿ? ಯಜಮಾನಿಗೆ ತಿಳಿದರೆ ಮನೆಯಿಂದ ಹೊರಹಾಕುತ್ತಾರೆ.'' ಎಂದು ಆಚುಮ್ಮ ಮುಖ ಮುಚ್ಚಿಕೊಂಡು ಅಳತೊಡಗಿದಳು. ಕಂಜಮ್ಮ ಯೋಚನಾಮಗ್ನಳಾದಳು. ಕೊಂಚ ಹೊತ್ತಿನ ಬಳಿಕ, “ಆಚುಮ್ಮ, ನಾನೊಂದು ಮಾತು ಹೇಳುವೆ. ಕೇಳುವೆಯಾ?'' ಎಂದು ಕೇಳಿದಳು. ಆಚುಮ್ಮ, ಸೆರಗಿನಿಂದ ಮುಖ ಒರೆಸಿಕೊಳ್ಳುತ್ತಾ, “ನೀನು ಏನಾದರೂ 26 ಸುಳಿ ಹೇಳು. ಈ ಬಿಕ್ಕಟ್ಟಿನಿಂದ ನನ್ನನ್ನೊಮ್ಮೆ ಪಾರು ಮಾಡು.'' ಎಂದು ಅಂಗಲಾಚಿದಳು. “ಅನಾಥ ಹೆಣ್ಣು ಕೈಗೆ ದೊರೆತಾಗ ಗಂಡಸರು ಮಾಡುವುದೇ ಹೀಗೆ. ನಿನ್ನ ಕೈಯನ್ನೂ ಬರಿದು ಮಾಡಿ ಹೊಟ್ಟೆಯನ್ನೂ ತುಂಬಿಸಿ ಕಳಿಸಿದನಲ್ಲ ಆತ? ನಿನಗಾದರೂ ಕೊಂಚ ಬುದ್ಧಿ ಇರಬೇಕಾಗಿತ್ತು ಆಚುಮ್ಮ. ಅವನು ಕರೆದ ಕೂಡಲೇ ನೀನು ಹೋದೆಯೇಕೆ? ಅವನೇನಾದರೂ ಯಜಮಾನರಿಗೆ ತಿಳಿಸಿದ್ದರೆ ಅರ್ಧ ಪಾಲು ಅವನಿಗೂ ಕೊಟ್ಟಿದ್ದೆ ಎನ್ನಬಹುದಾಗಿತ್ತು. ಯಾವ ಮುಂದಾಲೋಚನೆಯೂ ಇಲ್ಲದೆ ನೀನು ನಿನ್ನನ್ನೇ ಅವನಿಗೊಪ್ಪಿಸಿಕೊಂಡೆ. ಅವನಿಷ್ಟು ನೀಚ ಅಂತ ನನಗೂ ಗೊತ್ತಿರಲಿಲ್ಲ. ಈಗ ಹೇಗೂ ಆದದ್ದಾಯಿತಲ್ಲ? ಈಗ ನಾನೊಂದು ಸಲಹೆ ಕೊಡಲಾ?'' ಮೃದುವಾಗಿ ಹೇಳಿದಳಾಕೆ. “ಏನದು?'' ಎನ್ನುವಂತೆ ತಲೆ ಎತ್ತಿ ನೋಡಿದಳು ಆಚುಮ್ಮ. “ಈಗ ನಾನೇನಾದರೂ ಪ್ರಯತ್ನಿಸಿ ಒಂದಕ್ಕೊಂದಾಗುವುದಕ್ಕಿಂತ ಅದನ್ನು ಹಾಗೇ ಉಳಿಸಿಕೊಳ್ಳುವುದೊಳ್ಳೆಯದು. ಹೇಗೂ ನಿನಗೆ ಬೇರೆ ಮಕ್ಕಳಿಲ್ಲವಲ್ಲ? ಅದು ಹಾಗೇ ಇರಲಿ.'' ಆಚುಮ್ಮ ಅವಾಕ್ಕಾಗಿ ಕಂಜಮ್ಮನ ಮುಖವನ್ನು ಮಿಕಿ ಮಿಕಿ ನೋಡಿದಳು. “ಹಾಗೇಕೆ ನೋಡುತ್ತೀ? ನೀನೆ ಪ್ರಾಣ ಕಳೆದುಕೊಳ್ಳುವುದಕ್ಕಿಂತ ಅದು ಒಳ್ಳೆಯದಲ್ಲವಾ? ನಿನ್ನ ಯಜಮಾನಿ ಅಂತಹ ಕ್ರೂರಿಯೇನೂ ಅಲ್ಲ. ಅವರು ನಿನ್ನನ್ನು ಕ್ಷಮಿಸಿಯಾರು. ಒಂದು ವೇಳೆ ಅವರು ಮನೆಯಿಂದ ಹೊರ ಹಾಕಿದರೆ ಬೇರೆ ಮನೆ ಸಿಗುತ್ತದೆಯೇ ಎಂದು ನೋಡುವಾ. ಈಗ ಯಾರಲ್ಲೂ ಏನೂ ಹೇಳುವುದು ಬೇಡ. ಸಮಯ ಬಂದಾಗ ನಿನ್ನೊಡನೆ ನಾನಿದ್ದೇನೆ. ಈಗ ನಿಶ್ಚಿಂತಳಾಗಿರು.'' “ಅಲ್ಲ ಕಂಜಮ್ಮ, ಹೊಟ್ಟೆಯಲ್ಲಿ ಬೆಂಕಿ ಇಟ್ಟುಕೊಂಡು ಹೇಗೆ ನಿಶ್ಚಿಂತವಾಗಿರಲಿ? ಆ ಹರಾಮಖೋರನ ಪಿಂಡವನ್ನು ಹೊಟ್ಟೆಯಲ್ಲಿಟ್ಟುಕೊಳ್ಳುವುದಕ್ಕಿಂತ ಸಾಯುವುದೇ ಲೇಸೆಂದನಿಸುತ್ತದೆ. ದಯವಿಟ್ಟು ನನಗೇನಾದರೂ ಮದ್ದು ಕೊಡು.'' “ಮದ್ದು ಕುಡಿದು ಮೂರು ತಿಂಗಳ ಭ್ರೂಣವನ್ನು ಹೊರ ಹಾಕುವುದು ನೀನು ಎಣಿಸಿದಷ್ಟು ಸುಲಭವಲ್ಲ. ಈಗ ಅದು ಹಾಗೇ ಇರಲಿ. ಮಗು ಹುಟ್ಟಿದ ಬಳಿಕ ಅದು ನಿನಗೆ ಬೇಡವಾದರೆ ನನಗೆ ಕೊಡು. ಒಬ್ಬಳೇ ಇದ್ದು ನನಗೂ ಬೇಸರವಾಗಿದೆ. ಒಂದು ಮಗು ಸಿಕ್ಕಿದರೆ ನಾನು ಸಾಕಿಕೊಳ್ಳುತ್ತೇನೆ.'' ಕಾರ್ಮೋಡವೊಂದು ದಟಿಸಿಕೊಂಡು ಬರುವುದನ್ನು ಕಂಡು ಆಚುಮ್ಮ, ಇಳಿತ 27 “ಬಹಳ ಹೊತ್ತಾಯಿತು ಕಂಜಮ್ಮ, ಮಳೆಯೂ ಬರುವ ಹಾಗಿದೆ. ನಾನಿನ್ನು ಹೋಗ್ತೇನೆ.'' ಎಂದು ಭಾರವಾದ ದನಿಯಿಂದ ನುಡಿದು ನಿಟ್ಟುಸಿರಿಡುತ್ತಾ ಎದ್ದಳು. “ಏನೂ ಹೆದರಬೇಡ ಆಚುಮ್ಮ, ನಿನಗೆ ಎಲ್ಲೂ ಆಸರೆ ದೊರೆಯದಿದ್ದರೆ ನನ್ನ ಮನೆ ಇದೆ.'' ಎಂದು ಹೇಳುತ್ತಿದ್ದಂತೆ ಆಚುಮ್ಮ ಮರುಮಾತನಾಡದೆ ಕಾರ್ಮೋಡದಲ್ಲಿ ಬೆಳ್ಳಿರೇಖೆಯನ್ನರಸುತ್ತಾ ಮುಂದಡಿ ಇಟ್ಟಳು. ಇನ್ನೊಬ್ಬಳೊಡನೆ ಹಂಚಿಕೊಂಡಿದ್ದರಿಂದ ಮನದ ನೋವು ಕೊಂಚ ಕಮ್ಮಿಯಾಗಿತ್ತು. “ಏನಾಯಿತು ಆಚುಮ್ಮ? ಕಂಜಮ್ಮ ನೀರೇನಾದರೂ ಮಂತ್ರಿಸಿ ಕೊಟ್ಟಳೇ?'' ಮುರುದಿನ ಆಮಿನಾಬಿ ಕೇಳಿದಳು. “ಹೂಂ...'' “ಆದರೂ ನೀನು ಚೇತರಿಸಿಕೊಂಡಂತೆ ಕಾಣುತ್ತಿಲ್ಲವಲ್ಲ?'' “ನಾಲ್ಕು ದಿನ ನೋಡುವಾ. ಆಮೇಲೆ ಇನ್ನೊಮ್ಮೆ ಕಂಜಮ್ಮನ ಬಳಿಗೆ ಹೋಗುವೆ.'' “ಹೂಂ... ಹಾಗೇ ಮಾಡು.'' ಎನ್ನುತ್ತಾ ಮಮ್ಮೂಟಿಯನ್ನು ಕರೆದು, “ಮಮ್ಮೂಟೀ, ಬೆಳಿಗ್ಗೆ ಖುರ್‍ಆನ್ ಪಾರಾಯಣ ಮಾಡಲು ಮೊಯ್ಲಿಯಾರ್ ಬರುತ್ತಾರಲ್ಲ? ಅವರ ಕೈಯಿಂದ ಒಂದು ನೂಲು ಮಂತ್ರಿಸಿ ತೆಗೆದುಕೊಂಡು ಬಾ. ಆಚುಮ್ಮನಿಗೇನೊ ಸೈತಾನನ ದೃಷ್ಟಿ ತಾಗಿದೆಯೆಂದು ಹೇಳು.'' ಎಂದಳು. ಮರುದಿನ ಮಮ್ಮೂಟಿ ತಂದುಕೊಟ್ಟ ನೂಲನ್ನು ಆಚುಮ್ಮ ಕತ್ತಿಗೆ ಕಟ್ಟಿಕೊಂಡಳು. ಆದರೂ ಆಕೆಯ ಸುಸ್ತು, ಸಂಕಟ, ಅನ್ಯಮನಸ್ಕತೆ ಕಮ್ಮಿಯಾಗಿಲ್ಲವಲ್ಲ ಎಂದು ಆಮಿನಾಬಿ ಆತಂಕಪಟ್ಟಳು. ಮಳೆಗಾಲ ಮುಗಿದು ಹೊಸ ಬೆಳೆ ಅಂಗಳಕ್ಕೆ ಬಂದು ಬೀಳುವಷ್ಟರಲ್ಲಿ ಆಚುಮ್ಮನ ಹೊಟ್ಟೆ ಮುಂದೆ ಬಂದಿತ್ತು. ಆಕೆ ತಾನೇ ಒಂದೆರಡು ಬಾರಿ ಯಜಮಾನಿಯೊಡನೆ, “ಉಮ್ಮಾ, ನನಗೆ ವಾಯುವಿನ ಉಪದ್ರವವೋ ಏನೋ, ಗುಲ್ಮವಾಯು. ಅದಕ್ಕೇ ಹೊಟ್ಟೆ ಉಬ್ಬಿದೆ.'' ಎಂದು ವಿವರಣೆ ನೀಡಿದಳು. “ಹಾಗಾದರೆ ನೀನೊಮ್ಮೆ ಧರ್ಮಾಸ್ಪತ್ರೆಗೆ ಹೋಗಿ ಬರಬಹುದಿತ್ತಲ್ಲ?'' ಎಂದಾಗ “ಅದೇನೂ ಬೇಡಮ್ಮಾ, ನಾನೊಮ್ಮೆ ಕಂಜಮ್ಮನನ್ನೇ ಕಂಡು ಬರ್ತೇನೆ.'' ಎಂದಳು. ಕಂಜಮ್ಮನ ಬಳಿ ಹೋದಾಗ “ಏಳು ತಿಂಗಳಾಯಿತಲ್ಲ? ಆ ಹರಾಂಖೋರ ಏನಾದರೂ ವಿಚಾರಿಸಿದನೇ?'' ಎಂದು ವಿಚಾರಿಸಿದಳು ಆಕೆ. “ಅಷ್ಟು ಒಳ್ಳೆಯತನ 28 ಸುಳಿ ಆತನಲ್ಲಿದೆಯೇ? ಈಗ ಆತನ ವಹಿವಾಟೆಲ್ಲ ಮನೆಯ ಚಾವಡಿಯಲ್ಲೆ. ಅಪ್ಪಿ ತಪ್ಪಿಯೂ ಮನೆಯ ಹಿಂಭಾಗಕ್ಕೆ ಕಾಲಿಡುವುದಿಲ್ಲ. ಒಂದು ದಿನ ಅವನು ಫಾತಿಬಿಯ ಮನೆಗೂ ಹೋಗಿದ್ದನಂತೆ. ಅವಳು ಕೈಯಲ್ಲಿ ಪೊರಕೆ ಎತ್ತಿಕೊಂಡು ಅವನನ್ನು ಓಡಿಸಿದಳಂತೆ. “ನನ್ನ ಅಂಗಳಕ್ಕೇನಾದರೂ ಕಾಲಿಟ್ಟರೆ ನಿನ್ನ ಕಾಲು ಮುರಿದು ಕೈಗೆ ಕೊಡ್ತೇನೆ'' ಎನ್ನುತ್ತಿದ್ದಳೆಂದು ಮಮ್ಮೂಟಿ ಹೇಳಿದ. ಹುಡುಗ ನನ್ನೊಡನೆ ಹೇಳಿದ, “ಉಂಬಾಯಿ ಕಾಕಾ ಅಲ್ಲಿಗೆ ಹೋದದ್ದೇಕೆ? ಫಾತಿಬಿ ಹಾಗೆ ಹೇಳಿದ್ದೇಕೆ?'' ಎಂದು. ಬಹುಶ ನನ್ನನ್ನು ಕೆಸರಿಗೆ ತಳ್ಳಿದಂತೆ ಅವಳನ್ನೂ ತಳ್ಳಲು ಹೋದನೆಂದು ಕಾಣುತ್ತದೆ. ಅವಳಿಂದ ಸರಿಯಾದ ಮರ್ಯಾದೆ ಸಿಕ್ಕಿತು.'' “ಫಾತಿಬಿ ಸುಮ್ಮನಿರುವಳಲ್ಲ. ಪೊರಕೆಯಲ್ಲಿ ಒಂದೆರಡು ಏಟು ಕೊಟ್ಟೇ ಕೊಡ್ತಾಳೆ.'' ನಗುತ್ತಾ ನುಡಿದಳು ಕಂಜಮ್ಮ. ``ಅದೆಲ್ಲ ಇರಲಿ. ಈಗ ನಾನೇನು ಮಾಡಬೇಕು.?'' “ನೀನೇನೂ ಮಾಡುವುದು ಬೇಡ. ಯಜಮಾನಿ ಕೇಳಿದರೆ ಗುಲ್ಮನ ಉಪದ್ರವವೆಂದೇ ಹೇಳು. ನೋವು ಸುರುವಾಗುವಾಗ ನನ್ನ ಬಳಿಗೆ ಬಂದು ಬಿಡು. ಈ ತಾಯಿತವನ್ನು ಯಜಮಾನಿಗೆ ತೋರಿಸಿ ನಿನ್ನ ಕತ್ತಿಗೆ ಕಟ್ಟಿಕೊ.'' ಎನ್ನುತ್ತಾ ತಾಯಿತವೊಂದನ್ನು ಕೊಟ್ಟಳು. ಅದನ್ನೆತ್ತಿಕೊಂಡು ಆಚುಮ್ಮ ಹಿಂತಿರುಗಿದಳು. “ನಮ್ಮ ಆಚುಮ್ಮಕ್ಕ ತುಂಬಾ ಊಟ ಮಾಡ್ತಾರೇನೊ. ಅದಕ್ಕೇ ಅವರ ಹೊಟ್ಟೆ ಅಷ್ಟು ದೊಡ್ಡದಾಗಿದೆ.! ಅಲ್ಲವಾ ಅಜ್ಜೀ?'' ಜೊಹರಾ ಒಂದು ದಿನ ಅಜ್ಜಿಯೊಡನೆ ಕೇಳಿದಳು. ಅಜ್ಜಿ ಯೋಚನಾ ಮಗ್ನರಾದರು. “ಆಮಿನಾಬಿ,'' ಸಂಜೆ ನಮಾಜಿನ ಬಳಿಕ ಅವರು ಸೊಸೆಯನ್ನು ಕರೆದರು. “ಏನುಮ್ಮಾ?'' “ಆಚುಮ್ಮ ಕೆಲಸವನ್ನೆಲ್ಲ ಚೆನ್ನಾಗಿ ಮಾಡ್ತಾಳಾ?'' ವಿಚಾರಿಸಿದರು ಅಜ್ಜಿ. “ಯಾಕೆ ಉಮ್ಮಾ? ಕೆಲಸ ಮಾಡ್ತಾಳೆ. ಆದರೆ ಇತ್ತೀಚೆಗೇಕೊ ತುಂಬಾ ನಿಧಾನ. ಅಡಿಗೆ ಮನೆಯ ಮೂಲೆಯಲ್ಲಿ ಕುಳಿತುಕೊಂಡೇ ಹೆಚ್ಚಿನ ಕೆಲಸ ಮಾಡ್ತಾಳೆ. ಅದೇನೊ ಗುಲ್ಮನ ಉಪದ್ರವವಂತೆ. ಹೊಟ್ಟೆ ತುಂಬಾ ದಪ್ಪವಾಗಿ ಬಿಟ್ಟಿದೆ.'' “ಯಾಕೆ? ಆ ಕಂಜಮ್ಮನಿಗೆ ತೋರಿಸಲಿಲ್ಲವಾ? “ಕಂಜಮ್ಮನ ಬಳಿಗೆ ಅವಳೇ ಒಂದೆರಡು ಬಾರಿ ಹೋಗಿ ಬಂದಳು ಸೈತಾನನ ದೃಷ್ಟಿ ಎಂದು ತಾಯಿತವನ್ನೂ ಕೊಟ್ಟಿದ್ದಾಳೆ.'' ಇಳಿತ 29 “ಹೂಂ... ಆದರೂ ಒಂದು ಬಾರಿ ಆ ದಾಕ್ತಾರಿಣಿಗೆ ಅವಳನ್ನು ತೋರಿಸಬಹುದಾಗಿತ್ತು. ಹೊಟ್ಟೆ ದಪ್ಪವಾಗಿದೆ ಎಂದರೆ...'' “ಛೆ, ಆಚುಮ್ಮ ಅಂಥಹವಳಲ್ಲ! ನಿಮಗೆ ಏನೇನೊ ಸಂದೇಹ. ಗುಲ್ಮನ ಉಪದ್ರವಕ್ಕೆ ಡಾಕ್ಟರೇಕೆ? ಅದೂ ಅಲ್ಲದೆ ಅವಳಿಗೆ ಬೇರೆ ತೊಂದರೆಯೇನೂ ಇಲ್ಲವಲ್ಲ?'' “ಹೂಂ... ಸರಿ'' ಅಜ್ಜಿಯೂ ಅಲ್ಲಿಗೆ ಸುಮ್ಮನಾದರು. ಆಚುಮ್ಮಳಿಗೆ ನೋವು ಪ್ರಾರಂಭವಾದುದು ಅರ್ಧ ರಾತ್ರಿಯಲ್ಲಿ. ಆಕೆ ಬೆಳಗ್ಗಿನ ಜಾವದಲ್ಲಿ ಮಮ್ಮೂಟಿಯನ್ನೆಬ್ಬಿಸಿ ಕಂಜಮ್ಮನ ಮನೆಗೆ ಹೊರಟಳು. “ಬೆಳಿಗ್ಗೆ ಹೋಗುವ ಆಚುಮ್ಮಕ್ಕ, ಈಗೇನು ಅವಸರ? ನಾನು ಬರುವುದಿಲ್ಲ.'' ಎನ್ನುತ್ತಾ ಹುಡುಗನು ಪುನಃ ಮುಸುಕೆಳೆದುಕೊಂಡಾಗ ಆತನಿಗೆ ಒಂದು ರೂಪಾಯಿಯ ಆಸೆ ತೋರಿಸಿ ಆತನನ್ನು ಕರೆದೊಯ್ದಳು. “ಯಾಕೆ ಆಚುಮ್ಮಕ್ಕಾ, ಹುಷಾರಿಲ್ಲವಾ?'' ಎಂದು ಹುಡುಗ ಕೇಳಿದಾಗ, “ನನಗೆ ಗುಲ್ಮ ಎದ್ದು ಹೊಟ್ಟೆ ನೋವು ಪ್ರಾರಂಭವಾಗಿದೆ. ಬೇಗ ಹೋಗುವಾ.'' ಎಂದು ಮುಂದಡಿ ಇಟ್ಟಳು. ಅರ್ಧದಾರಿಯಲ್ಲಿ ಹೆರಿಗೆಯಾದರೆ ಎಂದಾಕೆ ಭಯಪಟ್ಟು ಬೇಗ ಬೇಗನೆ ನಡೆದಳು. ನೋವು ಬಂದಾಗಲೆಲ್ಲ ಅಲ್ಲೆ ಒಂದು ತೆಂಗಿನ ಮರವನ್ನೊರಗಿ ನಿಂತಳು. ಸೊಂಟದ ಹಿಂಭಾಗದಿಂದ ನೋವು ಸೀಳಿಕೊಂಡು ಬಂದಾಗ ಉಂಬಾಯಿಯ ರೂಪ ಕಣ್ಣಿಗೆ ಕಟ್ಟಿ ಮತ್ತಷ್ಟು ಚಿತ್ರಹಿಂಸೆಯನ್ನನುಭವಿಸಿದಳು. ಕಂಜಮ್ಮನ ಮನೆ ತಲುಪಿದ ಅರ್ಧ ಗಂಟೆಯಲ್ಲಿ ಆಕೆಗೆ ಹೆರಿಗೆಯಾಯಿತು. ಉಂಬಾಯಿಯ ರೂಪವನ್ನು ಹೊತ್ತ ಗಂಡು ಮಗು. ಮರುದಿನ ಕಂಜಮ್ಮ ಬಂದು ಆಮಿನಾಬಿಯೊಡನೆ ಬಹಳ ಹೊತ್ತು ಗುಸು ಗುಸು ಮಾತನಾಡಿದಳು. ಕಳ್ಳತನದ ವಿಷಯವನ್ನು ಮರೆಮಾಚಿ ಉಂಬಾಯಿ ಆಚುಮ್ಮಳಿಗೆ ಮೋಸ ಮಾಡಿದ್ದನ್ನು ಮಾತ್ರ ಕಥೆ ಕಟ್ಟಿ ಬಣ್ಣಿಸಿದಳು. ಆಘಾತಗೊಂಡ ಆಮಿನಾಬಿ, “ಉಂಬಾಯಿ ಹೀಗೆ ಮಾಡಿದ್ದಾನೇಂತ ನನಗೊಂದು ಮಾತು ತಿಳಿಸಬಾರದಾಗಿತ್ತೇ? ಎಂದು ಕೋಪದಿಂದ ಕೇಳಿದಳು. “ಈ ಹೆಂಗಸಿಗೆ ಅಷ್ಟೆಲ್ಲಾ ಬುದ್ಧಿ ಇದೆ ಎಂದುಕೊಂಡಿರಾ ಉಮ್ಮಾ? ಒಂದು ವೇಳೆ ಮೊದಲೇ ಹೇಳಿದ್ದರೂ ಏನು ಮಾಡುವ ಹಾಗಿತ್ತು.? ಈ ವಿಷಯವನ್ನೆಲ್ಲ ಯಜಮಾನರ ಕಿವಿಗೆ ಹಾಕಲಿಕ್ಕಾದೀತಾ?'' ಎಂದು ಕೇಳಿ ಆಮಿನಾಬಿಯನ್ನು ಸಂತೈಸಿದಳು. ಕ್ರಮೇಣ ಹೃದಯ ಕರಗಿದ ಆಕೆ, “ಆಗಲಿ. ಒಂದೆರಡು ವಾರಗಳ ಬಳಿಕ ಇಲ್ಲಿಗೇ ಕರೆದುಕೊಂಡು ಬಾ.'' ಎಂದಳು. 30 ಸುಳಿ ಆಮಿನಾಬಿಯ ಒಲೆ ಉರಿಯಬೇಕಾದರೆ ಆಚುಮ್ಮ ಇರಲೇ ಬೇಕಾದಂತಹ ಪರಿಸ್ಥಿತಿಯೂ ಇತ್ತು. ಹಾಗಾಗಿ ಆಚುಮ್ಮಳ ಬಾಣಂತನಕ್ಕೆಂದು ಆಕೆ ಧಾರಾಳ ಅಕ್ಕಿ ಮತ್ತು ತೆಂಗಿನ ಕಾಯಿಗಳನ್ನು ಕಂಜಮ್ಮನಿಗೆ ನೀಡಿದಳು. ಎರಡು ವಾರಗಳ ಬಳಿಕ ಆಚುಮ್ಮ ಮುಖದ ತುಂಬಾ ಮುಸುಕು ಹಾಕಿಕೊಂಡು ಮಗುವನ್ನೆತ್ತಿಕೊಂಡು ಕಂಜಮ್ಮಳೊಡನೆ ಜಗಲಿಯ ಮೂಲೆಯಲ್ಲಿ ನಿಂತಾಗ ಆಮಿನಾಬಿ ಬಾಗಿಲ ಬಳಿ ಬಂದು ಇಣುಕಿ ನೋಡಿದಳು. ಒಂದು ಕ್ಷಣ ಆಕೆಯೆದೆ ಕೋಪದಿಂದ ಕುದಿಯಿತು. ಕೊಂಚ ಹೊತ್ತು ಮೌನ ತಾಳಿದ ಬಳಿಕ ಆಕೆ, “ನನ್ನ ಮನೆಯಲ್ಲಿ ಈ ರೀತಿ ಮಾಡಿ ಮನೆತನದ ಮರ್ಯಾದೆ ತೆಗೆದು ಬಿಟ್ಟೆಯಲ್ಲ? ಹೂಂ... ಎಲ್ಲ ಆಯಿತಲ್ಲ? ಇನ್ನು ಒಳಗೆ ಬಾ.'' ಎಂದು ಭರ್ತ್ಸನೆಯ ದನಿಯಲ್ಲಿ ನುಡಿದಳು. “ಏನು ಮಾಡುವುದಮ್ಮಾ? ಈ ಗಂಡಸರ ಹಣೆಬರಹ ನಿಮಗ ಗೊತ್ತಿಲ್ಲವಾ...? ಈ ಹೆಂಗಸರಿಗಾದರೂ ಎಂದಿಗೆ ಬುದ್ಧಿ ಬರುತ್ತದೊ. ಆದರೂ... ನಮ್ಮ ಆಚುಮ್ಮ ಒಂದು ಪಾಪದ ಹೆಂಗ್ಸು. ತಿಳಿಯದೆ ಜಾರಿ ಬಿಟ್ಟಳು. ಇನ್ನು ಮುಂದೆ ಹೀಗೆ ಮಾಡಲಿಕ್ಕಿಲ್ಲ.'' ಎನ್ನುತ್ತಾ ಆಮಿನಾಬಿಯ ಬಳಿ ಬಂದು ಆಕೆಯ ಕಿವಿಯಲ್ಲಿ ಪಿಸುಗುಟ್ಟಿದಳು ಕಂಜಮ್ಮ. “ತಾಯಿ, ಮಗನನ್ನು ನೀವೆ ಸಾಕಿಕೊಳ್ಳಿ. ಮಗು ದೊಡ್ಡದಾದ ಮೇಲೆ ನಿಮ್ಮ ಊಳಿಗಕ್ಕೇ ಇಟ್ಟುಕೊಳ್ಳಬಹುದು. ಗಂಡು ಹುಡುಗ. ಯಾವ ಕೆಲಸಕ್ಕೂ ಆದೀತು. ನಿಮ್ಮಲ್ಲಿ ಬಿಸಾಡುವ ಅನ್ನ ತಿಂದು ಬದುಕೀತು.'' ಆಚುಮ್ಮ ಕಣ್ಣೊರೆಸಿಕೊಳ್ಳುತ್ತಾ ಮಗುವಿನೊಡನೆ ಮನೆಯೊಳ ಹೊಕ್ಕಳು. ಒಂದು ಕತ್ತಲಾದ ಮೂಲೆಯಲ್ಲಿ ಚಾಪೆ ಹಾಸಿ ಮಗುವನ್ನು ಮಲಗಿಸಿದಳು. ಮಮ್ಮೂಟಿ, ಜೊಹರಾ ಎಲ್ಲರೂ ಮಗುವನ್ನು ಕಣ್ಣರಳಿಸಿ ನೋಡಿದರು. ಜೊಹರಾ ಅಜ್ಜಿಯ ಬಳಿಗೋಡಿ, “ಅಜ್ಜೀ, ಆಚುಮ್ಮಕ್ಕ ಒಂದು ಪುಟ್ಟ ಮಗುವನ್ನು ತಂದಿದ್ದಾಳೆ!'' ಎಂದು ಆಶ್ಚರ್ಯದಿಂದ ನುಡಿದಳು. “ಆಂ... ಏನು?...'' ಅಜ್ಜಿಯೂ ಕಣ್ಣರಳಿಸಿದರು. ಅವರ ಮುಖ ಗಂಭೀರವಾಯಿತು. ಕೊಂಚ ಹೊತ್ತಿನ ಬಳಿಕ ಸೊಸೆಯನ್ನು ಕರೆದು, “ಆಚುಮ್ಮಳಿಗೆ ಗುಲ್ಮದ ಉಪದ್ರವ ಎಂದೆಯಲ್ಲ? ಗುಲ್ಮ ಹೊಟ್ಟೆಯಿಂದ ಭೂಮಿಗಿಳಿಯಿತೇ?'' ಎಂದು ರಾಗವಾಗಿ ಕೇಳಿದರು. “ಗುಲ್ಮ ಹೀಗೂ ಇರುತ್ತದೆ ಎಂದು ನನಗೇನು ಗೊತ್ತು.''? ಸಿಡುಕಿದಳು ಇಳಿತ 31 ಆಮಿನಾಬಿ. “ಈಗೇನು ಪುನಹ ಅವಳನ್ನು ಮನೆಯೊಳಗೆ ಸೇರಿಸಿಕೊಂಡೆಯಾ?” “ಸೇರಿಸಿಕೊಳ್ಳದೇನು ಮಾಡಲಿ? ಅವಳಿಗೆ ತಾನೇ ಯಾರಿದ್ದಾರೆ? ಅವಳು ಮಾಡಿದ ಪಾಪವನ್ನು ಅವಳೇ ಅನುಭವಿಸುತ್ತಾಳೆ. ನಮಗಂತೂ ಕೆಲಸಕ್ಕೊಬ್ಬರು ಬೇಕೇ ಬೇಕಲ್ಲ?” ಎಂದಳು. ಅಜ್ಜಿ ಸೊಸೆಯನ್ನು ಹತ್ತಿರ ಕರೆದು ಪಿಸುಗುಟ್ಟಿದಳು. “ಯಾರದಂತೆ ಅದು? ಅದನ್ನಾದರೂ ವಿಚಾರಿಸಿದೆಯಾ?” “ಉಂಬಾಯಿಯದಂತೆ” “ಅವನಿಂದಲೇ ಆಕೆಯನ್ನು ನಿಕಾ ಮಾಡಿಸಬೇಕಿತ್ತು” ಕೋಪದಿಂದ ಹೇಳಿದರು ಅಜ್ಜಿ. “ಯಾ ತಂಬುರಾನೆ, ಅವನ ಹೆಂಡತಿ ಭೂಮಿ ಆಕಾಶ ಒಂದು ಮಾಡಿ ಬಿಡ್ತಾಳೆ.!” ಅಲ್ಲೇ ಇದ್ದ ಕಂಜಮ್ಮ ನುಡಿದಳು. ಎಲ್ಲವೂ ಹೆಂಗಸರ ಪಿಸುದನಿ, ಕಿರಿಚಾಟವಾಗಿ ಕೊನೆಗೆ ಎಲ್ಲವೂ ತಣ್ಣಗಾಯಿತು. ಮನೆಯ ಹಿಂಭಾಗದ ಕತೆ ಮುಂಭಾಗದ ಚಾವಡಿಗೆ ಹರಡಲೇ ಇಲ್ಲ. ಹಿಂಭಾಗಕ್ಕೂ ಮುಂಭಾಗಕ್ಕೂ ನಡುವೆ ದಪ್ಪವಾದ ಪರದೆ ಇತ್ತಲ್ಲವೇ.? ಮಮ್ಮೂಟಿಗಂತೂ ವೇಳೆ ಇದ್ದಾಗ ಆಡಲೊಂದು ಮಗು ದೊರೆತಿತ್ತು. “ನಿಮ್ಮ ಆಚುಮ್ಮಕ್ಕನಿಗೆ ಮಗು ಇದೆಯೇ?” ಫಾತಿಬಿ ಒಮ್ಮೆ ನಗುತ್ತಾ ಆತನೊಡನೆ ಕೇಳಿದ್ದಳು. “ಹೌದು ಬೆಳ್ಳಗೆ, ಚೆಂದ ಇದೆ. ಕಾದರ್ ಎಂದು ಅದರ ಹೆಸರು. ಉತ್ಸಾಹದಿಂದ ನುಡಿದಿದ್ದನಾತ. ಫಾತಿಬಿ ಜೋರಾಗಿ ನಗುತ್ತಾ “ಅವಳಿಗೆ ಮಗುವಾದದ್ದು ಹೇಗಂತೆ?” ಎಂದು ಕೇಳಿದಾಗ ಮಮ್ಮೂಟಿ ಕೂಡಲೇ ಅಮಾಯಕತೆಯಿಂದ “ಎಲ್ಲಾ ಹೆಂಗಸರಿಗೂ ಮಗುವಾಗುವುದಿಲ್ಲವಾ? ಹೆಂಗಸರಿಗೆ ಮಗುವಾಗದೆ ಗಂಡಸರಿಗೆ ಮಗುವಾಗುತ್ತದಾ?” ಎಂದು ಕೇಳಿದ್ದನು. ಫಾತಿಬಿ ಮತ್ತಷ್ಟು ಜೋರಾಗಿ ನಕ್ಕಳು. “ನೀನೊಬ್ಬ ಮೊದ್ದು” ಎಂದೂ ಸೇರಿಸಿದ್ದಳು. “ಕಾದರ್ ಎಂಬುದು ಉಂಬಾಯಿಯ ತಂದೆಯ ಹೆಸರಲ್ಲವಾ?” ಎಂದು ಕೇಳಿದ್ದಳು. ಆ ಮನೆಯಲ್ಲಿ ನಡೆಯುತ್ತಿದ್ದ ಇನ್ನೂ ಒಂದೆರಡು ಘಟನೆಗಳು ಮಮ್ಮೂಟಿಯ ಹೃದಯದಲ್ಲಿ ಎಂದೂ ಮಾಸದ ಚಿತ್ರವಾಗಿ ಅಚ್ಚೊತ್ತಿತ್ತು. ಅದು 32 ಸುಳಿ ಆ ಮನೆಯ ಯಜಮಾನರ ಬಳಿ ರಾಜಿ ಪಂಚಾಯತಿಗಾಗಿ ಬರುತ್ತಿದ್ದ ಗುಂಪುಗಳು. ಮಮ್ಮೂಟಿಗೆ ಏನೂ ಕೆಲಸವಿಲ್ಲದಿದ್ದರೆ ಈ ದೂರು ಮತ್ತು ರಾಜಿ ಪಂಚಾಯತಿಯನ್ನು ಬಾಗಿಲ ಬಳಿ ನಿಂತು ನೋಡುತ್ತಿದ್ದನು. ಯಜಮಾನರು ಚಾವಡಿಯ ಎತ್ತರದ ಮಣ್ಣಿನ ಜಗಲಿಯಲ್ಲಿ ಹಾಸಿದ ಹಾಸಿಗೆಯಲ್ಲಿ ದಿಂಬಿಗೊರಗಿ ಕುಳಿತುಕೊಳ್ಳುತ್ತಿದ್ದರು. ಪಕ್ಕದಲ್ಲಿ ಎಲೆಯಡಿಕೆ ತಟ್ಟೆ, ಕೆಳಗೆ ನೆಲದ ಮೇಲೊಂದು ಉಗುಳು ಪಾತ್ರೆ. ರಾತ್ರಿಯಲ್ಲಿ ಅವರು ಒಮ್ಮೊಮ್ಮೆ ಹುಕ್ಕಾ ಸೇದುವುದೂ ಇತ್ತು. ಆ ದಿನ ಯಜಮಾನರ ಬಳಿಗೆ ಗಂಡ ಹೆಂಡಿರ ಜಗಳದ ಒಂದು ದೂರು ಬಂದಿತ್ತು. ಹುಡುಗಿಯ ತಂದೆ ಹಾಜ್ಯಾರರೊಡನೆ, “ನನ್ನ ಮಗಳನ್ನು ಇವರ ಮಗನಿಗೆ ಮದುವೆ ಮಾಡಿ ಕೊಟ್ಟು ಮೂರು ವರ್ಷಗಳಾದುವು. ಒಂದು ಮಗುವೂ ಇದೆ. ಅವನ ಸ್ವಭಾವ ಏನೂ ಚೆನ್ನಾಗಿಲ್ಲ. ಅವಳನ್ನು ಹೊಡೆಯುವುದೂ ಬಡಿಯುವುದೂ ಅಲ್ಲದೆ ಅವಳಿಗೆ ಈವರೆಗೆ ಒಂದು ಹೊಸ ಬಟ್ಟೆಯನ್ನು ಅವನು ತಂದು ಕೊಟ್ಟಿಲ್ಲ. ಅವಳು ಅವನೊಡನೆ ಬಾಳುವುದಿಲ್ಲವೆನ್ನುತ್ತಿದ್ದಾಳೆ. ತಾವು ಅವನಿಂದ ನನ್ನ ಮಗಳ ತಲಾಖ್ ಕೊಡಿಸಬೇಕು.” ಎಂದನು. “ಗಂಡ ಹೊಡೆದಾಗ ತಂದೆ ತಾಯಿಗಳಲ್ಲಿ ದೂರು ಹೇಳುವವಳು ಎಂತಹ ಹೆಂಡತಿ? ಗಂಡ ಹೆಂಡತಿಗೆ ಬಟ್ಟೆ ಕೊಡದಿರುತ್ತಾನೆಯೇ? ಕೈಯಲ್ಲಿ ಹಣ ಇರುವಾಗ ತಂದು ಕೊಡುತ್ತಾನೆ. ನನ್ನ ಮಗ ಆಕೆಗೆ ತಲಾಖ್ ಕೊಡುವುದಿಲ್ಲ.” ಹುಡುಗನ ತಂದೆ ವಾದಿಸಿದನು. ಕೊನೆಗೆ ಹಾಜ್ಯಾರರು ತೀರ್ಪು ನೀಡಿದರು “ಗಂಡಂದಿರು ಹೆಂಡತಿಯರನ್ನು ಹೊಡೆಯುವುದು ಅಪರಾಧವೇನೂ ಅಲ್ಲ. ಹೆಂಗಸರು ತಪ್ಪು ಮಾಡಿದಾಗ ಹೊಡೆದು ಶಿಕ್ಷಿಸಬೇಕಾಗುತ್ತದೆ. ಇಂತಹ ಕಾರಣಗಳಿಗೆಲ್ಲ ತಲಾಖ್ ನೀಡುವುದು ಸಾಧ್ಯವಿಲ್ಲ. ಹಾಗೆಲ್ಲ ಹೆಂಗಸರ ಮಾತಿಗೆ ಬೆಲೆ ಕೊಟ್ಟರೆ ನಿಮ್ಮ ಗೌರವ ಉಳಿಯುತ್ತದೆಯೇ? ಹೆಂಡತಿ ಗಂಡನನ್ನು ಅನುಸರಿಸಿಕೊಂಡು ಹೋಗಬೇಕು. ಗಂಡ ಬೇಡ, ತಲಾಖ್ ಬೇಕು ಎನ್ನುವ ನಿನ್ನ ಮಗಳಿಗೆ ನೀನೇ ಬುದ್ಧಿ ಕಲಿಸು” ಎನ್ನುತ್ತಾ ಗಂಡಿನ ತಂದೆಯ ಕಡೆ ತಿರುಗಿ. “ನಿಮ್ಮ ಮಗ ಆಕೆಗೆ ತಲಾಖ್ ಕೊಡುವುದೇನೂ ಬೇಡ. ಆಕೆ ಬಂದು ನಿಮ್ಮ ಮನೆಯಲ್ಲಿರಲಿ. ಅವಳು ಬರುವುದಿಲ್ಲವಾದರೆ ನಿನ್ನ ಮಗನಿಗೆ ಇನ್ನೊಂದು ಮದುವೆ ಮಾಡು. ಹೆಣ್ಣಿಗೆ ಬರವಿದೆಯೇ? ತಲಾಖ್ ಕೇಳುತ್ತಾಳಂತೆ, ತಲಾಖ್! ಏನು ಕೊಬ್ಬು ಈಗಿನ ಹೆಂಗಸರಿಗೆ! ಹೂಂ...” ಎಂದು ಗಟ್ಟಿಯಾಗಿ ಹೊಂಕರಿಸಿ ಇಳಿತ 33 ಬಾಯಲ್ಲಿದ್ದ ತಾಂಬೂಲದ ರಸವನ್ನು ಉಗುಳು ಪಾತ್ರೆಯಲ್ಲಿ ಉಗುಳಿ ಮತ್ತೊಮ್ಮೆ ಹುಡುಗಿಯ ತಂದೆಯೊಡನೆ “ನಿನ್ನ ಮಗಳಿಗೆ ಬುದ್ಧಿ ಹೇಳಿ ಕರೆದುಕೊಂಡು ಬಂದು ಗಂಡನ ಮನೆಯಲ್ಲಿ ಬಿಡು. ಅದು ಹೇಗೆ ಗಂಡನೊಂದಿಗೆ ಬಾಳುವುದಿಲ್ಲವೊ ನಾವೂ ನೋಡ್ತೇವೆ...!” ಎಂದರು. “ಹೂಂ, ತಮ್ಮ ಅಪ್ಪಣೆಯಂತೆಯೆ ಆಗಲಿ.” ಎಂದು ಹೆಣ್ಣಿನ ತಂದೆ ತಲೆ ತಗ್ಗಿಸಿ ಸಣ್ಣಗೆ ನುಡಿದು ಹೊರ ನಡೆದರೆ, ಗಂಡಿನ ತಂದೆ ಮತ್ತು ಅತನ ಪರಿವಾರದವರು ತಲೆ ಎತ್ತಿ ಗತ್ತಿನಿಂದ ನಡೆದರು. ಮಮ್ಮೂಟಿಯ ಮನದಾಳದಲ್ಲಿ ಪುಟ್ಟ ಬೀಜವೊಂದು ಕುಡಿಯೊಡೆಯತೊಡಗಿತು. “ನಾನೂ ಯಜಮಾನರಂತಾಗಬೇಕು!” ಮಮ್ಮೂಟಿ ಒಳಬಂದು ಎಲ್ಲವನ್ನೂ ಆಚುಮ್ಮಳಿಗೆ ವಿವರಿಸಿದನು. ಆಚುಮ್ಮ ತನ್ನಷ್ಟಕ್ಕೆ ಗೊಣಗಿಕೊಂಡಳು. “ಹೂಂ. ಇದೊಳ್ಳೆ ನ್ಯಾಯ. ಗಂಡಿನ ತುಳಿತಕ್ಕೆ ಸಿಕ್ಕಿ ನರಳುವುದೇ ಆಯಿತು ಹೆಣ್ಣಿನ ಬಾಳು!” ಬಳಿಕ ಅಳುತ್ತಾ ಬಳಿ ಬಂದ ಮಗನನ್ನು ಕೈಯಿಂದ ಆಚೆಗೆ ತಳ್ಳಿದಳು. ಆ ಮನೆಯಲ್ಲಿ ನಡೆದ ಮಹತ್ವದ ಘಟನೆ ಜೊಹರಳ ಮದುವೆ. ಮಮ್ಮೂಟಿ ಎಂದೂ ಕಂಡೂ ಕೇಳರಿಯದ ಸಮಾರಂಭ ಅದಾಗಿತ್ತು. ವರನ ದಿಬ್ಬಣ ಬಂದದ್ದು ರಾತ್ರಿಯ ಹೊತ್ತಿನಲ್ಲಿ. ದಪ್ಪು ಹೊಡೆದು ಹಾಡುತ್ತಾ ಕುಣಿಯುವವರಲ್ಲದೆ ಕತ್ತಿವರಸೆಯವರೂ ಇದ್ದರು. ದಿಬ್ಬಣದ ಮುಂಭಾಗತದಲ್ಲಿ ಆನೆಯನ್ನು ಅಲಂಕರಿಸಿ ತರಲಾಗಿತ್ತು. ಬಿರುಸು ಬಾಣಗಳೂ, ಪಟಾಕಿಗಳೂ, ಬಣ್ಣ ಬಣ್ಣದ ದೀಪಾಲಂಕಾರಗಳೂ ಕಣ್ಣು ಕುಕ್ಕುವಂತಿದ್ದುವು. ಇಡೀ ಊರವರಿಗೆ ಮಾಂಸದೂಟ ಹಾಕಲಾಗಿತ್ತು. ಮದುಮಗ ತಂದ ಚಿನ್ನಾಭರಣ. ಬಟ್ಟೆ ಬರೆಗಳಿಗಂತೂ ಲೆಕ್ಕವೇ ಇರಲಿಲ್ಲ. ಮಮ್ಮೂಟಿ, ಆಚ್ಚುಮ್ಮ, ಕಾದರ್ ಎಲ್ಲರಿಗೂ ಬಟ್ಟೆಗಳನ್ನು ಹಂಚಲಾಗಿತ್ತು. ಮಮ್ಮೂಟಿಗೆ ಭಾವ ತಂದ ಬಟ್ಟೆ ಸಂತೋಷ ನೀಡಿತ್ತಾದರೂ ಭಾವ ಚೊಹರಕ್ಕನನ್ನು ಕರೆದೊಯ್ಯುವರಲ್ಲಾ ಎಂದು ದುಃಖವಾಗಿತ್ತು. ತನಗೆ ಹೊಟ್ಟೆ ತುಂಬಾ ಅನ್ನ, ಖಾದ್ಯ ಪದಾರ್ಥಗಳು ದೊರೆಯುವುದು ಜೋಹರಳ ಕೈಯಿಂದಲೇ, ಹನೀಫನ ಹೊಡೆತ, ಹಿಂಸೆಯಿಂದ ಮುಕ್ತಿ ದೊರೆಯುವುದೂ ಆಕೆಯಿಂದಲೇ, ಚೋಹರಾ ಆ ಮನೆಯ ಬೆಳಕು.ಆಕೆ ಹೊರಟು ಹೋದರೆ ಮನೆಯೆಲ್ಲಾ ಕತ್ತಲೆಯೇ. ಜೊಹರಾ ಹೊರಟು ಹೋದ ದಿನ ಮಮ್ಮೂಟಿ ಯಾರಿಗೂ ತಿಳಿಯದಂತೆ 34 ಸುಳಿ ಬಚ್ಚಲು ಮನೆಗೆ ಹೋಗಿ ಅತ್ತು ಮುಖ ತೊಳೆದು ಬಂದನು. ಆಚುಮ್ಮ ಕೂಡ ಆಗಾಗ ಕಣ್ಣೊರೆಸಿಕೊಂಡಳು. ರಾತ್ರಿ ಚಾಪೆಯಲ್ಲಿ ಮಲಗಿ ನಿದ್ದೆಯ ಆಳಕ್ಕಿಳಿಯುತ್ತಿದ್ದಂತೆ ಮಮ್ಮೂಟಿಯ ಮನದಲ್ಲಿ ಅಚ್ಚೊತ್ತಿದ್ದ ಚಿತ್ರ ಜೊಹರಳ ಮದುವೆ. ಹೌದು. ತಾನೂ ಯಜಮಾನರಂತಾಗಬೇಕು! ತುಂಬಾ ಹಣ ಸಂಪಾದಿಸಬೇಕು. ಹೇಗಾದರೂ ಸರಿ. ತನ್ನ ಮಕ್ಕಳ ಮದುವೆಯನ್ನು ಜೊಹರಕ್ಕಳ ಮದುವೆಯಂತೆ ಅದ್ದೂರಿಯಾಗಿ ನೆರವೇರಿಸಬೇಕು.! * * * * * ಮಮ್ಮೂಟಿ ಆ ಮನೆಯಲ್ಲಿ ಐದಾರು ವರ್ಷ ದುಡಿದ ಹಣದೊಡನೆ ಆಮಿನಾಬಿಯೂ ಗಂಡನಿಂದ ಒಂದಷ್ಟು ಹಣ ಪಡೆದು ಕೊಟ್ಟಾಗ ಜಮೀಲಳಿಗೆ ಒಂದಷ್ಟು ಬಂಗಾರದ ಒಡವೆಗಳನ್ನು ಮಾಡಿಸಿದಳು ಉಮ್ಮಾಲಿ. ಹೇಗೂ ಮಗಳಿಗೊಂದು ವರನನ್ನೂ ಗೊತ್ತು ಮಾಡಿ ಹಾಜ್ಯಾರರ ಮನೆಯಿಂದ ಮತ್ತೂ ಒಂದಷ್ಟು ಹಣ ಸಾಲ ಪಡೆದು ಹುಡುಗನಿಗೆ ವರದಕ್ಷಿಣೆ ನೀಡಿ ಮಗಳ ಮದುವೆ ಮುಗಿಸಿದಳು. ಮಮ್ಮೂಟಿ ಆ ಮನೆಯ ಜೀತದಿಂದ ಬಿಡಿಸಿಕೊಳ್ಳಲಾಗದಷ್ಟು ಸಾಲದಲ್ಲಿ ಮುಳುಗಿದನು. ವರ್ಷಗಳುರುಳಿದವು. ಮಮ್ಮೂಟಿ ಇಪ್ಪತ್ತೆರಡು ವರ್ಷದ ಯುವಕನಾದನು. ಈಗಾತ ಅಡಿಗೆ ಮನೆ ಚಾಕರಿಯಿಂದ ಕೊಂಚ ಮುಕ್ತನಾಗಿದ್ದನು. ಯಜಮಾನರ ತೆಂಗಿನ ತೋಟದಿಂದ ಕಾಯಿ ಕೀಳಿಸುವುದು, ಒಕ್ಕಲುಗಳ ಬಳಿ ಹೋಗಿ ಗೇಣಿ ವಸೂಲು ಮಾಡುವುದು ಇಂತಹ ಕೆಲಸಗಳೆಲ್ಲ ಈಗ ಆತನದು. ಮಾರುಕಟ್ಟೆಗೆ ಹೋಗಿ ಮೀನು ತರುವುದು ಮುಂತಾದ ಚಿಕ್ಕಪುಟ್ಟ ಕೆಲಸಗಳನ್ನು ಈಗ ಆಚುಮ್ಮನ ಮಗ ಕಾದರ್ ಮಾಡುತ್ತಿದ್ದನು. ಆಕೆಯ ಬರಡು ಬಾಳಿನಲ್ಲಿ ಮಗನೊಬ್ಬ ಬೆಳಕಾಗಿದ್ದನು. ಆಗಬಾರದ್ದು ಆಗಿದ್ದರೂ ಅದರಲ್ಲಿ ಆಕೆ ತೃಪ್ತಳಾಗಿದ್ದಳು. ಆ ಹುಡುಗನು ರಾತ್ರಿಯಲ್ಲಿ ಮದ್ರಸಾಗೆ ಹೋಗಿ ಖುರ್‍ಆನ್ ಕಲಿಯುತ್ತಿದ್ದನು. ಮಮ್ಮೂಟಿಯ ಓದು ಬರಹ ಎಂದೊ ನಿಂತು ಹೋಗಿತ್ತು. ಖುರ್‍ಅನ್ ಕೂಡಾ ಹೆಚ್ಚಿಗೆ ಓದಿಕೊಂಡಿರಲಿಲ್ಲ. ಅದರಲ್ಲೆಲ್ಲ ಆತನಿಗೆ ಆಸಕ್ತಿ ಇರಲೂ ಇಲ್ಲ. ಆಸಕ್ತಿ ಮೂಡಿಸುವವರೂ ಇರಲಿಲ್ಲ. ಬದುಕೇ ಹೊರೆಯಾದಾಗ ಆ ಹೊರೆಯನ್ನು ಹೊತ್ತುಕೊಳ್ಳುವುದಕ್ಕೇನೆ ಆತನ ವೇಳೆಯೆಲ್ಲ ಮೀಸಲಾಗಿತ್ತು. ಆತನು ಆಗಾಗ ಮಸೀದಿಗೆ ಹೋಗಿ ನಮಾಜ್ ಮಾಡಿ ಬರುತ್ತಿದ್ದನು. ಜೊಹರಳ ಮನೆಗೂ ಆತ ಆಗಾಗ ಹೋಗಿ ಬರಬೇಕಾಗುತ್ತಿತ್ತು. ತವರು ಇಳಿತ 35 ಮನೆಯಿಂದ ಎಳನೀರು, ತೆಂಗಿನಕಾಯಿ ಅಥವಾ ಇನ್ನೇನಾದರೂ ಸಾಮಾನುಗಳನ್ನು ಅತ ಆಗಾಗ ಜೊಹರಳ ಮನೆಗೆ ಮುಟ್ಟಿಸುತ್ತಿದ್ದನು. ಅವನ ಪ್ರೀತಿಯ ಜೊಹರಕ್ಕೆ ಅವನ ಹೊಟ್ಟೆ ತುಂಬಿಸಿಯೇ ಕಳುಹಿಸುತ್ತಿದ್ದಳು. ರಂಜಾನ್ ತಿಂಗಳಲ್ಲಿ ಆಕೆ ತನ್ನ ತವರಿನ ಕೆಲಸದಾಳುಗಳಿಗೆಲ್ಲರಿಗೂ ಹೊಸ ಬಟ್ಟೆ ಕಳುಹಿಸಿ ಕೊಡುತ್ತಿದ್ದಳು. ಆ ಬಾರಿ ಈದ್-ಉಲ್-ಫಿತರ್ (ರಂಜಾನ್ ಕೊನೆಯ ದಿನ) ಹಬ್ಬದ ದಿನ ಸಂಜೆಗೆ ಆತ ತನ್ನ ಮನೆಗೆ ಹೋದಾಗ ಜಮೀಲಾ ಕೂಡಾ ಮಕ್ಕಳೊಡನೆ ಬಂದಿದ್ದಳು. ತಾಯಿ ಮಕ್ಕಳು ಕುಳಿತು ಮಾತನಾಡುತ್ತಿದ್ದಾಗ ಜಮೀಲಾ, “ಅಲ್ಲ ಉಮ್ಮಾ, ನಮ್ಮ ಮಮ್ಮೂಟಿ ಇಷ್ಟು ದೊಡ್ಡವನಾಗಿದ್ದಾನಲ್ಲ? ಅವನಿಗೊಂದು ಮದುವೆ ಮಾಡುವುದು ಬೇಡವಾ?” ಎಂದಳು. “ಹೌದು ಮಗೂ, ನೀನು ಹೇಳುವುದು ಸರಿ. ಆದರೆ ನಿನ್ನ ಮದುವೆಯ ಸಾಲವೇ ಇನ್ನೂ ಬಾಕಿ ಇದೆಯೊ ಏನೊ. ಲೆಕ್ಕ ಹಾಕಿದವರಾರು? ಅವನು ಮದುವೆಯಾದರೆ ಅವನ ಹೆಂಡತಿಗೆ ಅನ್ನ ಹಾಕುವವರಾರು?” ಉಮ್ಮಾಲಿ ಬೇಸರದಿಂದ ನುಡಿದಳು. “ಹೋಗಕ್ಕಾ, ನನಗೆಂತಹ ಮದುವೆ?” ಮಮ್ಮೂಟಿಯೂ ನಗುತ್ತಾ ನುಡಿದನು. “ಯಾಕೆ? ನೀನೇನು ಗಂಡಸಲ್ಲವಾ? ಇನ್ನು ಮಮ್ಮೂಟಿಗೆ ಮದುವೆ ಮಾಡಬೇಕು ಉಮ್ಮಾ, ನಮ್ಮ ಮನೆಯ ಹತ್ತಿರ ಒಂದು ಹುಡುಗಿ ಇದೆ. ತೆಳ್ಳಗೆ, ಬೆಳ್ಳಗಿದ್ದಾಳೆ. ಹದಿಮೂರು ವರ್ಷವೇನೊ ಆಗಿರಬೇಕು...” “ತಂದೆ ತಾಯಿಗಳೆಲ್ಲ ಇದ್ದಾರಾ?” “ಹೂಂ. ತಂದೆ ಕೂಲಿ ಕೆಲಸ ಮಾಡುತ್ತಾರೆ. ತಾಯಿ ಮದುವೆ ಮನೆಗಳ ಕೆಲಸಕ್ಕೆ ಹೋಗುತ್ತಾಳೆ. ನಾಲ್ಕು ಜನ ಹೆಣ್ಣು ಮಕ್ಕಳು. ಇವಳೆ ಕೊನೆಯವಳು. ಇವಳಿಗೆ ಗಂಡು ಹುಡುಕುತ್ತಿದ್ದಾರೆ. ಕಿವಿ ತುಂಬಾ ಚಿನ್ನದ ಅಲಿಕತ್ತುಗಳನ್ನು ಈಗಾಗಲೆ ಮಾಡಿಸಿ ಇಟ್ಟುಕೊಂಡಿದ್ದಾರೆ. ಐನೂರು ರೂಪಾಯಿ ವರದಕ್ಷಿಣೆಯನ್ನೂ ಕೊಡುತ್ತಾರಂತೆ. ಮಮ್ಮೂಟಿಗೆ ಆಗಬಾರದಾ?” ಉಮ್ಮಾಲಿ ಯೋಚನಾ ಮಗ್ನಳಾದಳು. ಮಗನಿಗೆ ಇಪ್ಪತ್ತೆರಡು ವರ್ಷ ತುಂಬಿತು. ಅವನಿಗೊಂದು ಮದುವೆ ಮಾಡಿ ಸೊಸೆಯನ್ನು ಕರೆತಂದರೆ ತನಗೂ ಜೊತೆಯಾದಂತಾಗುತ್ತದೆ. ಕೊನೆಗೆ ಆಕೆ ಮಗಳೊಡನೆ, “ನನಗೇನೋ ಸುಮ್ಮತವೆ. ಆದರೆ ವರದಕ್ಷಿಣೆ ಒಂದು ಸಾವಿರವಾದರೂ ಸಿಗಬೇಕು. ನೀನು ಯಾರಿಂದಲಾದರೂ ಕೇಳಿಸಿ ನೋಡು...” ಎಂದಳು. “ನನಗೀಗಲೇ ಎಂತಹ ಮದುವೆ?” ಮಮ್ಮೂಟಿ ಕ್ಷೀಣವಾಗಿ ನುಡಿದದ್ದು 36 ಸುಳಿ ನಾಲಗೆ ತುದಿಯ ಮಾತಾಗಿತ್ತು. ಜಮೀಲಕ್ಕ ಹೇಳಿದಳಲ್ಲ. “ತೆಳ್ಳಗೆ ಬೆಳ್ಳಗಿದ್ದಾಳೆ” ಎಂದು. ತೆಳ್ಳಗಿನ, ಬೆಳ್ಳಗಿನ ಹೆಣ್ಣೊಂದು ತನಗೆ ದೊರೆಯುವುದಾದರೆ ಯಾಕೆ ಬೇಡ? ಯಜಮಾನರನ್ನುವಂತೆ ತಾನೂ ಒಂದು ಹೆಣ್ಣಿನ ಗಂಡನಾಗಿ ಅಧಿಕಾರ ಚಲಾಯಿಸಬಹುದು! ಆಚುಮ್ಮಳಿಗೆ ಮಗುವಾದಾಗ ಮಮ್ಮೂಟಿ ಹೆಂಗಸರಿಗೆ ಮಕ್ಕಳಾಗುವುದು ಸಹಜ ಎಂದುಕೊಂಡಿದ್ದನು. ಆದರೆ ಬರಬರುತ್ತಾ ಬುದ್ಧಿ ತಿಳಿದಂತೆ ಗಂಡು ಹೆಣ್ಣಿನ ಸಂಬಂಧದ ಕುರಿತು ಅಷ್ಟಿಷ್ಟು ಜ್ಞಾನವನ್ನು ಸಂಪಾದಿಸಿಕೊಂಡಿದ್ದನು. ಸುಂದರವಾದ ಹೆಣ್ಣೊಂದು ಆಗಾಗ ಕನಸಿನಲ್ಲಿ ಕಾಣಿಸಿಕೊಳ್ಳುತ್ತಿದ್ದಳು. ದೇಹದ ಅಂಗಾಂಗಗಳು ಸೆಟೆದು ನಿದ್ದೆಗೆಡಿಸುತ್ತಿದ್ದವು. ಜಮೀಲ ತೆಳ್ಳಗೆ, ಬೆಳ್ಳಗಿನ ಹೆಣ್ಣೊಂದಿದೆ ಎನ್ನುವಾಗ ಅವನ ಆಸೆಗಳು ಗರಿಗೆದರಿ ಕುಣಿದು ಕುಪ್ಪಳಿಸಿದುವು. ಉಮ್ಮಾಲಿ ಆ ಬಾರಿ ಹಾಜ್ಯಾರರ ಮನೆಗೆ ಬಂವಳು ಆಮೀನಾಬಿಯೊಡನೆ ಮಗನ ಮದುವೆಯ ಮಾತೆತ್ತಿದಳು. “ಇನ್ನೂ ಅವನು ಇಲ್ಲೇ ಇದ್ದರೆ ಹೇಗೆ? ಏನಾದರೂ ಕೂಲಿ ಕೆಲಸವನ್ನಾದರೂ ಮಾಡಲಿ. ಮದುವೆಯಾಗಿ ಹೆಂಡತಿಯನ್ನು ಸಾಕಬೇಡವೇ?” ಎಂದಳು. “ಅವನು ಇಲ್ಲೇ ಇರಲಿ. ಹಾಜ್ಯರರಿಗಂತೂ ಅವನು ಹಗಳಿರುಳೂ ಹತ್ತಿರವೇ ಇರಬೇಕು. ಉಂಬಾಯಿ ಹೋದ ಬಳಿಕ ಅವನ ಕೆಲಸವನ್ನೆಲ್ಲ ಇವನೇ ಮಾಡುತ್ತಿದ್ದಾನೆ. ಅವನಿಗೆ ಸಂಬಳ ಜಾಸ್ತಿ ಮಾಡುವುದಕ್ಕೆ ಹಾಜ್ಯಾರರ ಹತ್ತಿರ ಹೇಳ್ತೇನೆ. ನಿಮಗೆ ನಮ್ಮ ತೋಟದಲ್ಲೇ ಒಂದು ಮನೆಯನ್ನೂ ಕಟ್ಟಿಸಿಕೊಡಲು ಹೇಳ್ತೇನೆ.” ಎಂದಳು. ಉಮ್ಮಾಲಿ ಮುಂದೇನೂ ಹೇಳಲಿಲ್ಲ. ಆಮಿನಾಬಿ ಕೊಟ್ಟ ಸೀರೆ, ಅಕ್ಕಿ, ಕಾಯಿಗಳನ್ನೆತ್ತಿಕೊಂಡು ಮನೆಗೆ ಮರಳಿದಳು. ಮಮ್ಮೂಟಿಯ ಮದುವೆ ಸರಳವಾಗಿ ನೆರವೇರಿತು. ಸಣ್ಣಕ್ಕಿ ಅನ್ನ ಮತ್ತು ಕೋಣದ ಮಾಂಸದ ಪಲ್ಯವನ್ನು ಬಂದವರಿಗೆಲ್ಲ ಬಡಿಸಲಾಯಿತು. ಮಮ್ಮೂಟಿಯ ಮದುವೆಗೆ ಜೊಹರಾ ತನ್ನ ಮಕ್ಕಳನ್ನು ಕರೆದುಕೊಂಡು ಬಂದಿದ್ದೇ ಒಂದು ವಿಶೇಷ. ನೆರೆದ ಹೆಂಗಸರೆಲ್ಲರೂ ಆಕೆ ಮತ್ತು ಮಕ್ಕಳ ಸುತ್ತು ನೆರೆದರು. ಜೊಹರಾಳನ್ನು ಕಂಡದ್ದೇ ಮಮ್ಮೂಟಿಯ ಮುಖ ಊರಗಲವಾಯಿತು. ಜೊಹರಾ ಮತ್ತು ಮಕ್ಕಳಿಗಾಗಿ ಒಂದು ಕೋಳಿಯನ್ನು ಕೊಯ್ದು ಹುರಿಯಲಾಯಿತು. “ಜೊಹರಕ್ಕಾ, ನೀವು ಬಂದದ್ದು ತುಂಬಾ ಸಂತೋಷ” ಎಂದು ಮದುಮಗ ಇಳಿತ 37 ಬಂದು ಹೇಳಿದಾಗ ಜೊಹರಾ ಆತನ ಕೈಯಲ್ಲಿ ಒಂದು ಚಿನ್ನದುಂಗುರವನ್ನಿಟ್ಟಳು. ಮಮ್ಮೂಟಿ ಯಾರೂ ಕಾಣದಂತೆ ಕಣ್ಣೊರೆಸಿಕೊಂಡನು. ಮಮ್ಮೂಟಿ ದಿಬ್ಬಣದೊಡನೆ ವಧುವಿನ ಮನೆಗೆ ತೆರಳಿದನು. ಮಸೀದಿಯಲ್ಲಿ ನಿಕಾಹ್ ಆದ ಬಳಿಕ ಎಲ್ಲರೂ ವಧವಿನ ಮನೆಗೆ ತೆರಳಿದರು. ಊಟೋಪಚಾರದ ಬಳಿಕ ಬಂದವರೆಲ್ಲರೂ ಹಿಂತಿರುಗಿದರು. ವಿವಾಹದ ಪ್ರಥಮ ರಾತ್ರಿಯ ಅನುಭವ ಆತನ ಅಚ್ಚಳಿಯದ ನೆನಪು. ಆತನು ತನಗಾಗಿ ಅಲಂಕರಿಸಿದ್ದ ಕೋಣೆಯಲ್ಲಿ ತನ್ನ ನವ ವಧುವನ್ನು ಕಾಣಲು ಕಾತರನಾಗಿ ಕುಳಿತಿದ್ದನು. ಮದುಮಗಳ ಅಲಂಕಾರ, ಹೆಂಗಸರ, ಹಾಡು, ಊಟ ಮುಗಿದಾಗ ಮೂಡಣ ಬಾನು ಕೆಂಪಾಗಾಗತೊಡಗಿತ್ತು. ನವವಧುವೊಮ್ಮೆ ಮಿಂಚಿನಂತೆ ಕೋಣೆಗೆ ಬಂದು ಮಾಯವಾಗಿದ್ದಳು. ತನಗೆ ಸಮನಾಗಿ ಮುಖ ತೋರಿಸದೆ ಮಾಯವಾದ ಆಕೆಯ ಮೇಲೆ ಆತನಿಗೆ ಸಿಟ್ಟು ಬಂದಿತ್ತು. ಆಕೆಯ ಬರವಿಗಾಗಿ ಕಾಯುತ್ತಾ ಮಲಗಿದ್ದಾತನಿಗೆ ಅಲ್ಲೇ ಜೋಂಪು ಹತ್ತಿತ್ತು. ಬೆಳಿಗ್ಗೆ ಚಹಾ, ತಿಂಡಿಗಾಗಿ ಆತನ ಮಾವನೇ ಬಂದು ಎಚ್ಚರಿಸಿದಾಗ ಗಡಬಡಿಸಿ ಎದ್ದನು. ಚಹಾ, ತಿಂಡಿಯಾದ ಬಳಿಕ ನೇರವಾಗಿ ತನ್ನ ಮನೆಗೆ ನಡೆದನು. ಜಮೀಲಾ, “ಹೇಗಿದ್ದಾಳೆ ರುಖ್ಯಾಬಿ?” ಎಂದು ಕೇಳಿದಾಗ ಮಮ್ಮೂಟಿ ಮುಖ ಸಿಂಡರಿಸಿಕೊಂಡು, “ನೀನು ತಾನೇ ನೋಡಿದವಳು? ನಿನಗೆ ಗೊತ್ತಿಲ್ಲವಾ ಹೇಗಿದ್ದಾಳೇಂತ?” ಎಂದು ಒರಟಾಗಿ ಕೇಳಿದನು. “ಯಾಕೆ? ಏನಾಯಿತು.?” ಆತಂಕದಿಂದ ಕೇಳಿದಳು ಜಮೀಲಾ. “ಅವಳ ಮುಖವನ್ನು ನಾನು ನೋಡಿದ್ದರೆ ತಾನೇ?” ಜಮೀಲಾ ನಕ್ಕು ಬಿಟ್ಟರು. “ಓ... ಅಷ್ಟೆೀ ತಾನೇ? ಆ ಹುಡುಗಿಗೆ ತುಂಬಾ ನಾಚಿಕೆ. ಇನ್ನೂ ಹೊಸದಲ್ಲವಾ? ಅದಕ್ಕೆಲ್ಲ ಕೋಪ ಮಾಡಿಕೊಳ್ತಾರಾ? ಇವತ್ತು ರಾತ್ರಿ ಕೋಣೆಗೆ ಬರ್ತಾಳೆ ಬಿಡು.” ಎಂದು ಸಂತೈಸಿದಳು. ಆಮೀಲಾ ನುಡಿದಂತೆ ಆ ರಾತ್ರಿಯೂ ರುಖ್ಯಾಬಿ ಕೋಣೆಗೆ ಬರಲಿಲ್ಲ. ಅಸಹನೆಯಿಂದ ಕುದಿದ ಮಮ್ಮೂಟಿ ಅರ್ಧರಾತ್ರಿಯಲ್ಲಿ ಎದ್ದು ಯಾರಿಗೂ ತಿಳಿಯದಂತೆ ತನ್ನ ಮನೆಗೆ ನಡೆದನು. ಮರುದಿನ ಆತನ ಮಾವ ಬಂದು ಅತ್ತು ಗೋಗರೆದಾಗ “ಮೊದಲು ನಿಮ್ಮ ಮಗಳಿಗೆ ಬುದ್ಧಿ ಕಲಿಸಿ!” ಎಂದು ಒರಟಾಗಿ ನುಡಿದರೂ ತನ್ನ ಅಕ್ಕ ಮತ್ತು ತಾಯಿಯ ಹಿತವಚನಗಳನ್ನು ಅಲ್ಲಗಳೆಯಲಾಗದೆ ಮಾವನ ಮನೆಗೆ ಹೋಗಲೊಪ್ಪಿದನು. ತನ್ನೊಡನೆ ಹರಿತವಾದ ಪುಟ್ಟದೊಂದು 38 ಸುಳಿ ಚೂರಿಯನ್ನೂ ಕೊಂಡೊಯ್ದನು. ರಾತ್ರಿ ಎಲ್ಲರ ಊಟವಾದ ಬಳಿಕ ಮಾವನು ಹೆಂಡತಿಯನ್ನು ಕರೆದು “ನಾನು ಇವತ್ತು ಮಸೀದಿಯಲ್ಲಿ ಮಲಗುತ್ತೇನೆ” ಎನ್ನುತ್ತಾ ಹೊರ ನಡೆದನು. ಕೊಂಚ ಹೊತ್ತಾದ ಬಳಿಕ ಆತನ ಅತ್ತೆ ಕೋಣೆಗೆ ಬಂದು ಆತನೊಡನೆ. “ಅವಳು ಅಡಿಗೆ ಮನೆಯಲ್ಲಿ ಒಲೆಯ ಬಳಿ ಚಾಪೆ ಹಾಸಿ ಮಲಗಿದ್ದಾಳೆ. ನೀನೇ ಹೋಗಿ ಅವಳನ್ನು ಕರೆದುಕೊಂಡು ಬಾ. ಅವಳಿಗೆ ಹಟ ಕೊಂಚ ಜಾಸ್ತಿ.” ಎಂದು ಪಿಸುಗುಟ್ಟಿ ಮನೆಯ ಮುಂಭಾಗದ ಚಾವಡಿಗೆ ನಡೆದಳು. ಮೂರು ಕೋಣೆಯ ಆ ಮನೆಯಲ್ಲಿ ರುಖ್ಯಾಬಿ ಅಡಗಿಕೊಳ್ಳಲು ಬೇರ್ಯಾವ ತಾಣವೂ ಇರಲಿಲ್ಲ. ಮಮ್ಮೂಟಿ ಅಡಿಗೆ ಮನೆಗೆ ನಡೆದನು. ಮುದುಡಿ ಮಲಗಿದ್ದ ಹುಡುಗಿಯನ್ನು ಎರಡೂ ಕೈಗಳಿಂದ ಎತ್ತಿ ನಿಲ್ಲಿಸಿದನು. ಅನಿರೀಕ್ಷಿತವಾದ ಈ ಆಕ್ರಮಣದಿಂದ ಗಡಬಡಿಸಿ ಎದ್ದು ನಿಂತ ಆಕೆ ತಲೆ ತುಂಬಾ ಮುಸುಕೆಳೆದುಕೊಂಡು ತಲೆ ತಗ್ಗಿಸಿ ನಿಂತುಕೊಂಡಳು. ಆತನು ತನ್ನ ಸೊಂಟದಿಂದ ಚೂರಿಯನ್ನೆತ್ತಿಕೊಂಡು, ಆಕೆಯ ಮುಖದ ಸಮೀಪ ತಂದು, “ನಡಿ ಕೋಣೆಗೆ, ಇದು ಏನೂಂತ ಗೊತ್ತಿದೆ ತಾನೇ? ನಾನು ಹೇಳಿದಂತೆ ಕೇಳದಿದ್ದರೇ...” ಎಂದು ಕೆಳದನಿಯಲ್ಲಿ ಕ್ರೂರವಾಗಿ ನುಡಿದನು. ರುಖ್ಯಾಬಿ ಮುಸುಕಿನೊಳಗಿನಿಂದಲೇ ಕಣ್ಣರಳಿಸಿ ಚೂರಿಯನ್ನು ನೋಡಿದಳು. ಆಕೆಯ ದೇಹ ಭಯದಿಂದ ಕಂಪಿಸತೊಡಗಿತು. ಆತನ ಮುಖ ನೋಡುವ ಸಾಹಸವಾಗದೆ ಕುರಿಯಂತೆ ತಲೆ ತಗ್ಗಿಸಿ ಕೋಣೆಗೆ ನಡೆದಳು. ಆತನು ಚೂರಿಯನ್ನು ಮಡಚಿ ಸೊಂಟಕ್ಕೆ ಸೇರಿಸುತ್ತಾ ಆಕೆಯನ್ನು ಹಿಂಬಾಲಿಸಿದನು. ಕೋಣೆಯ ಕದವನ್ನು ಮುಚ್ಚಿ ಅಗಳಿ ಹಾಕಿದ ಬಳಿಕ ಒರಟಾಗಿ ಆಕೆಯ ತಲೆಯ ಮೇಲಿನ ಮುಸುಕು ತೆಗೆದೆಸೆದನು. ಬಳಿಕ, “ನಿನ್ನ ಹಟಮಾರಿತನ, ಕೊಂಡಾಟವೆಲ್ಲಾ ನನ್ನ ಬಳಿ ನಡೆಯದು. ಬಾಯ್ಮುಚ್ಚಿಕೊಂಡು ಹಾಸಿಗೆಯಲ್ಲಿ ಬಿದ್ದುಕೊ!'' ಎಂದು ಮತ್ತಷ್ಟು ಒರಟಾಗಿ ನುಡಿದನು. ಆಕೆ ನೀರಲ್ಲಿ ನೆನೆದ ಕೋಳಿಯಂತೆ ಮುದುಡಿ ಹಾಸಿಗೆಯಲ್ಲುರುಳಿ ಮೌನವಾಗಿ ಕಣ್ಣೀರು ಸುರಿಸಿದಳು. ಗಂಡಸಿನ ದುಡುಕು ಮತ್ತು ಕ್ರೌರ್ಯದ ಎದುರು ಆಕೆಯ ಪ್ರತಿಭಟನಾ ಶಕ್ತಿ ಇಂಗಿ ಹೋಗಿತ್ತು. ಆ ರಾತ್ರಿ ಆತನಂತೂ ಸ್ವರ್ಗ ಕಂಡನು. ಆಕೆ ಸ್ವರ್ಗ ಕಂಡಳೇ ನರಕ ಕಂಡಳೇ ಎಂದು ಕೇಳುವವರಾರು? ಹೆಣ್ಣನ್ನು ಆಳಬೇಕು, ಆಕೆಯ ಮೇಲೆ ಇಳಿತ 39 ಅಧಿಕಾರ ಚಲಾಯಿಸಬೇಕು, ಆಕೆಯನ್ನು ಬೇಕಾದಂತೆ ಉಪಯೋಗಿಸಿಕೊಳ್ಳಬೇಕು ಎಂಬುದು ಆತ ಕಲಿತ ಪಾಠ. ಬೇರೆ ಪಾಠಗಳು ಆತನಿಗೆ ದೊರೆತಿದ್ದರೆ ತಾನೇ? ಆ ಬಳಿಕ ಎಷ್ಟೋ ದಿನಗಳವರೆಗೆ ರುಖ್ಯಾಬಿ ಗಂಡನೆಂದರೆ ಭಯದಿಂದ ನಡುಗುತ್ತಿದ್ದಳು. ಮುಖವೆತ್ತಿ ಆತನ ದೃಷ್ಟಿಯನ್ನೆದುರಿಸುವ ಸಾಹಸ ಮಾಡುತ್ತಿರಲಿಲ್ಲ. ಆದರೆ ಕ್ರಮೇಣ ಆಕೆ ಆತನ ಒರಟು ಸ್ವಭಾವಕ್ಕೆ ಹೊಂದಿಕೊಂಡು ಅತ್ತೆಯ ಮನೆಯಲ್ಲಿರತೊಡಗಿದಳು. ಮಮ್ಮೂಟಿ ವಾರಕ್ಕೆ ಒಂದೆರಡು ಬಾರಿ ಯಜಮಾನರ ಅಪ್ಪಣೆ ಪಡೆದು ಊರಿಗೆ ಬಂದು ಬೆಳಗ್ಗೆನೇ ಹಿಂತಿರುಗುತ್ತಿದ್ದನು. ಇಂತಹ ಒಂದು ದಿನದಲ್ಲಿಯೆ ಉಮ್ಮಾಲಿ ಮಗನೊಡನಂದಿದ್ದು “ಇನ್ನೂ ಎಷ್ಟು ಕಾಲ ನೀನು ಹಾಜ್ಯಾರರ ಮನೆಯ ಕತ್ತೆ ಚಾಕರಿ ಮಾಡುತ್ತೀ? ನೀನೀಗ ಒಂದು ಮಗುವಿನ ತಂದೆಯಾಗುವವನಿದ್ದಿ. ಇನ್ನು ಮುಂದೆ ಬರೇ ಖರ್ಚಿನದೇ ದಾರಿ. ಗಳಿಕೆಗೆ ಬೇರೇನಾದರೂ ಹಾದಿ ಹುಡುಕು.” ಎಂದು. ಆ ದಿನ ಊರಿನಿಂದ ಹಿಂತಿರುಗುವಾಗ ಆತನ ತಲೆ ತುಂಬ ಈ ಯೋಚನೆಯೇ. ಆದಾಯಕ್ಕೆ ಯಾವ ಹಾದಿ ಹುಡುಕಬೇಕು? ಹತ್ತು ವರ್ಷದ ಹುಡುಗನಾಗಿ ಹಾಜ್ಯಾರರ ಮನೆ ಪ್ರವೇಶಿಸಿದಾತನಿಗೆ ದೊರೆತದ್ದು ಕತ್ತೆ ಚಾಕರಿಯ ಶಿಕ್ಷಣ ಮಾತ್ರ. ಸ್ವತಂತ್ರವಾಗಿ ಒಂದು ವ್ಯಾಪಾರವನ್ನಾದರೂ ಪ್ರಾರಂಭಿಸಬೇಕಾದರೆ ಹಣಕ್ಕೇನು ಮಾಡುವುದು? ಈವರೆಗೆ ದುಡಿದದ್ದೆಲ್ಲವೂ ಸಾಲ ಸಂದಾಯಕ್ಕಾಗಿಯೇ ಮೀಸಲಾಯಿತು. ಆದಾಯದ ಯಾವ ಹೊಸ ಹಾದಿಯನ್ನೂ ಈವರೆಗೆ ಯಾರೂ ತೋರಿಸಿರಲಿಲ್ಲ. ಒಂದೇ ಒಂದು ದಾರಿ ತೋರಿಸಿದ್ದು ಆಚುಮ್ಮ. ಈಗಿರುವ ಹಾದಿ ಅದೊಂದೆ. ಅದೇ ಹಾದಿಯಲ್ಲೇ ಮುನ್ನಡೆಯಬೇಕು. ಹೇಗಾದರೂ ಬದುಕಿದರೆ ಸೈ! ಆ ಬಾರಿ ಹಾಜ್ಯಾರರ ದೊಡ್ಡ ತೋಟದ ಕಾಯಿ ಕೀಳಿಸಿದಾಗ ಒಂದು ನೂರು ಕಾಯಿಗಳನ್ನು ಅಲ್ಲೇ ಮಾರಾಟ ಮಾಡಿದನು. ಒಕ್ಕಲುಗಳ ಬಳಿಯಿಂದ ಗೇಣಿ ವಸೂಲಿ ಮಾಡುವಾಗ ಒಂದೆರಡು ಮುಡಿ ಅಕ್ಕಿಯನ್ನೂ ತನ್ನದಾಗಿಸಿಕೊಂಡನು. ಆಚುಮ್ಮಳ ವ್ಯವಹಾರವಂತೂ ಇದ್ದೇ ಇತ್ತು. ಕೆಲವೊಮ್ಮೆ ಆಮಿನಾಬಿಯ ಬಳಿ ಕಷ್ಟ ತೋಡಿಕೊಂಡು ಅಷ್ಟೊ ಇಷ್ಟೊ ಗಿಟ್ಟಿಸುತ್ತಿದ್ದನು. ಅಂತೂ ಹೇಗೊ ದಿನ ಕಳೆಯುತ್ತಿತ್ತು. * * * * * ಈಗ ಮಮ್ಮೂಟಿ ಎರಡು ಮಕ್ಕಳ ತಂದೆಯಾಗಿದ್ದನು. ಎಂದಿನಂತೆಯೇ ಬದುಕಿನ ಬಂಡಿ ನಿಧಾನವಾಗಿ ಸಾಗುತ್ತಿತ್ತು. ಹೊಂಡ, ಗುಳಿಗಳು; ಏರು ತಗ್ಗುಗಳು, 40 ಸುಳಿ ಕಲ್ಲು, ಮುಳ್ಳುಗಳು; ಹಸಿರು ಮೈದಾನ ಮಾತ್ರ ಮರೀಚಿಕೆಯೇ. ಆದರೆ ಈ ಮರೀಚಿಕೆಯ ಬೆನ್ನಟ್ಟಿ ಓಡುವುದರಲ್ಲೇ ಆತನು ಒಂದು ರೀತಿಯ ಸಾರ್ಥಕತೆ ಪಡೆಯುತ್ತಿದ್ದನು. ಹೌದು. ಮರೀಚಿಕೆಯೇ. ತಾನು ಯಜಮಾನರಂತಾಗಬೇಕು. ತುಂಬಾ ಹಣ, ಸ್ವಂತ ಕಾರು, ತೆಂಗಿನ ತೋಟ, ಅಡಿಕೆ ತೋಟ, ಹೊಲಗದ್ದೆಗಳ ಒಡೆಯನಾಗಬೇಕು! ಒಂದಲ್ಲ ಒಂದು ದಿನ ತಾನೂ ಹಾಜ್ಯರರಂತೆ ನ್ಯಾಯ ತೀರ್ಮಾನ ಮಾಡಬೇಕು! ಹಾಜ್ಯಾರರಂತೆ ಆ ಇನ್ನೊಂದು ಕೆಲಸವನ್ನೂ ಮಾಡಬೇಕೇ? ಮಮ್ಮೂಟಿಯ ತುಟಿಯ ಕೊನೆಯಲ್ಲಿ ನಸುನಗುವೊಂದು ಸುಳಿದು ಮಾಯವಾಯಿತು. ಸುಂದರವಾದ ಗಂಡು ಹುಡುಗರ ಸಹವಾಸ ಹಾಜ್ಯಾರರ ಇನ್ನೊಂದು ಹವ್ಯಾಸವೆಂಬುದು ಮಮ್ಮೂಟಿಗೆ ಬಹಳ ಹಿಂದೆಯೇ ಗೊತ್ತಾಗಿತ್ತು. ಅದೊಂದು ಹವ್ಯಾಸ ತನಗೆ ಬೇಡ ಎಂದೇ ಮಮ್ಮೂಟಿ ತೀರ್ಮಾನಿಸಿದನು. “ಮಮ್ಮೂಟೀ.... ಏ... ಮಮ್ಮೂಟೀ...” ಆಮೀನಾಯಿಯ ಕರೆ ಕೇಳಿ ಮಮ್ಮೂಟಿಯ ಹಗಲುಗನಸಿಗೆ ತೆರೆ ಬಿತ್ತು. “ಮಮ್ಮೂಟೀ, ನೀನು ನಾಳೆ ಬೆಳಿಗ್ಗೆ ಜೊಹರಳ ಮನೆಗೆ ಹೋಗಿ ಬಾ. ಒಕ್ಕಲಿನವನು ತಂದು ಕೊಟ್ಟ ತರಕಾರಿಗಳಿವೆ. ಮುಳ್ಳು ಸೌತೆ ಎಂದರೆ ಜೊಹರಳಿಗೆ ಪ್ರಾಣ. ಅವುಗಳನ್ನು ಕೊಟ್ಟು ಬಾ.” ಎಂದು ಆಜ್ಞಾಪಿಸಿದಳು ಆಮಿನಾಬಿ. ಮರುದಿನ ತರಕಾರಿಯ ಚೀಲ ಹಿಡಿದು ಮಮ್ಮೂಟಿ ಜೊಹರಳ ಮನೆಗೆ ಹೋದಾಗ ಮಧ್ಯಾಹ್ನದ ಮೂರುಗಂಟೆ. ಮುಂಭಾಗದ ಬಾಗಿಲು ಹಾಕಿತ್ತಾದುದರಿಂದ ಆತನು ಹಿಂದುಗಡೆಯೇ ಹೋಗಿ, “ಜೊಹರಕ್ಕಾ, ಏ ಜೊಹರಕ್ಕಾ” ಎಂದು ಕರೆದನು. ಮನೆಯೊಳಗಿನ ಮೌನವೇ ಉತ್ತರವಾಯಿತು. ಇನ್ನೊಮ್ಮೆ ಜೋರಾಗಿ ಕರೆದಾಗ, “ಯಾರೂ?” ಎಂಬ ಅಸಹನೆಯ ಗಂಡು ದನಿ ತೇಲಿ ಬಂತು. “ನಾನು ಮಮ್ಮೂಟಿ. ಜೊಹರಕ್ಕನ ಊರಿನಿಂದ ಬಂದಿದ್ದೇನೆ.” ಎಂದು ಉತ್ತರಿಸಿದನಾತ. ನಿಧಾನವಾಗಿ ಹಿಂಭಾಗಿಲು ತೆರೆದುಕೊಂಡಿತು. ಜೊಹರಳ ಗಂಡ ಜಲೀಲ್ ಹೊರಬಂದನು. ಆತನ ಕೆದರಿದ ತಲೆ, ಕೆಂಗಣ್ಣು, ಅಸ್ತವ್ಯಸ್ತವಾಗಿ ಉಟ್ಟ ಮುಂಡು, ಬರಿ ಮೈ ಮಮ್ಮೂಟಿಗೆ ನೂರು ಕತೆಗಳನ್ನು ಹೇಳಿದುವು. ‘ಈ ಉಳ್ಳವರ ಮರ್ಜಿಯೇ ಇದು. ಹೊತ್ತಿಲ್ಲ. ಗೊತ್ತಿಲ್ಲ. ಮಾಡಲು ಇಳಿತ 41 ಬೇರೆ ಕೆಲಸವಿಲ್ಲ, ಎಲ್ಲ ರೀತಿಯಲ್ಲೂ ಖುಷಿ ಪಡುವುದಕ್ಕೇ ದೇವರು ಇವರನ್ನು ಸೃಷ್ಟಿಸಿದ್ದಾನೇನೊ’ ಮಮ್ಮೂಟಿ ಮನದಲ್ಲೇ ಗೊಣಗಿಕೊಳ್ಳುತ್ತಾ ಜಗಲಿಯ ಮೇಲೆ ತರಕಾರಿ ಚೀಲವನ್ನಿಟ್ಟು ಅಲ್ಲೇ ಕುಳಿತುಕೊಂಡನು. ಜೊಹರಕ್ಕ ಹೊರ ಬರಲು ಇನ್ನೆಷ್ಟು ಹೊತ್ತೊ! ಮಮ್ಮೂಟಿಯ ಮುಖ ಕಂಡವನೇ ಜಲೀಲ್ ಮಾತಿಲ್ಲದೆ ಒಳನಡೆದನು. ಕೊಂಚ ಹೊತ್ತು ಹೊರಗೆ ಕುಳಿತುಕೊಂಡು ಕಾದು ಸಾಕಾದ ಮಮ್ಮೂಟಿ “ಜೊಹರಕ್ಕಾ....” ಎಂದು ಕರೆಯುತ್ತಾ ಮನೆಯೊಳಗಡಿ ಇಟ್ಟನು. ಜೊಹರಳ ಮನೆಯಲ್ಲಿ ಮಮ್ಮೂಟಿ ಹೊರಗಿನವನಲ್ಲ. ಆತನು ಸೀದಾ ಹೋಗಿ ಅಡಿಗೆ ಕೋಣೆಗೆ ಕಾಲಿರಿಸಿದನು. “ಜೊಹರಕ್ಕ ಮನೆಯಲ್ಲಿಲ್ಲ” ಕೆಲಸದ ಹುಡುಗಿ ಜುಲೇಕ ಅಡಿಗೆ ಮನೆಯ ಮೂಲೆಯಿಂದ ಗೊಣಗಿದಳು. “ಆಂ...” ಅವಾಕ್ಕಾದನು ಮಮ್ಮೂಟಿ. ಜುಲೇಕಳ ತಲೆಯೂ ಕೆದರಿ ಬಟ್ಟೆ ಅಸ್ತವ್ಯಸ್ತವಾಗಿತ್ತು. ಜಲೀಲ್‍ನಲ್ಲಿ ಕಂಡ ಕಥೆಯ ಅರ್ಧ ಭಾಗ ಜುಲೇಕಳಲ್ಲೂ ಕಾಣಲಾರಂಭಿಸಿತ್ತು. ಆತನು ಮೌನವಾಗಿ ಹೊರ ನಡೆದು ಜಗಲಿಯಲ್ಲಿ ಕುಳಿತುಕೊಂಡನು. ತನ್ನ ಪ್ರೀತಿಯ ಜೊಹರಕ್ಕಳ ಗಂಡ ಎಂತಹವನು? ಹೆಂಡತಿ ಮನೆಯಲ್ಲಿಲ್ಲದ ವೇಳೆಯಲ್ಲಿ ಮನೆಯ ಕೆಲಸದ ಹುಡುಗಿಯ ಜೊತೆ... ಛಿ, ಛಿ, ಇವರೆಲ್ಲ ಎಂತಹವರು? ತನ್ನ ಪ್ರೀತಿಯ ಜೊಹರಕ್ಕಳ ಬದುಕು ಇಂತಹ ಕೆಸರು ನೀರೇ. ನಾಲ್ಕು ತಿಂಗಳ ಹಿಂದೆಯೊಮ್ಮೆ ಜೊಹರಾ ತವರಿಗೆ ಬಂದಿದ್ದಾಗ ತಾಯಿ, ಮಗಳು ಬಹಳ ಹೊತ್ತು ಕೋಣೆಯಲ್ಲಿ ಕುಳಿತುಕೊಂಡು ಗುಸು ಗುಸು ಮಾತನಾಡುತ್ತಾ ಆಗಾಗ ಕಣ್ಣೊರೆಸಿಕೊಳ್ಳುತ್ತಿದ್ದರು. ಜೊಹರಕ್ಕ ಕಣ್ಣೀರಿಡುತ್ತಿದ್ದುದು ಮಮ್ಮೂಟಿಗೆ ನೋವಿನ ವಿಚಾರ. ಹೀಗೆಂದೇ ಆತನು ಆ ಕೋಣೆಯ ಎದುರುಗಡೆ ಒಂದೆರಡು ಬಾರಿ ಸುಳಿದಾಡಿದ್ದನು. ಆಗ ಆಮಿನಾಬಿ ಮಗಳನ್ನು ಸಂತೈಸುತ್ತಿದ್ದಳು. “ಗಂಡಸರೆಂದರೆ ಹಾಗೆಯೇ ಮೋಳೇ. ಕೆಸರು ಕಂಡಲ್ಲಿ ತುಳಿಯುತ್ತಾರೆ. ನೀರು ಕಂಡಲ್ಲಿ ತೊಳೆಯುತ್ತಾರೆ. ನಿನ್ನಬ್ಬನೇ ನೋಡು. ಹಗಲಿರುಳೂ ಯಾವ್ಯಾವುದೋ ಹುಡುಗರ ಸಹವಾಸ. ನಾನೆಷ್ಟು ಕೋಪಿಸಿಕೊಂಡೆ, ಕಣ್ಣೀರು ಸುರಿಸಿದೆ; ಏನೇನೊ ಮಾಡಿದೆ. ಈಗ, ಮುದುಕರಾದ ಮೇಲೂ ಇಂತಹ ಚಟವನ್ನೆಲ್ಲ ಬಿಟ್ಟಿಲ್ಲವಲ್ಲ? ಸದ್ಯ, ನಿನಗೇನೂ ಉಟ್ಟು ಉಣ್ಣುವುದಕ್ಕೆ ಕಮ್ಮಿ ಮಾಡಿಲ್ಲವಲ್ಲ? ಹೆಂಗಸರು ಬದುಕಿನಿಂದ ಇನ್ನೂ ಹೆಚ್ಚಿನದೇನನ್ನೂ ಬಯಸಲೇಬಾರದು.” 42 ಸುಳಿ “ಹೂಂ.... ಹಾಗೆ ಹೇಳುವುದು ಎಷ್ಟೊಂದು ಸುಲಭ!” ಎನ್ನುತ್ತಾ ಜೊಹರಾ ನಿಟ್ಟುಸಿರು ಬಿಟ್ಟಿದ್ದಳು. ಹೌದು. ಜೊಹರಳ ಗಂಡ, ಅಡಿಕೆ ಮತ್ತು ತೆಂಗಿನ ತೋಟಗಳ ಒಡೆಯ. ಕೆಸರು ಕಂಡಲ್ಲಿ ತುಳಿಯುವುದನ್ನೇ ಹವ್ಯಾಸ ಮಾಡಿಕೊಂಡಿದ್ದನು! ನೀರಂತೂ ಮನೆಯಲ್ಲೇ ಇದೆಯಲ್ಲ? ಸ್ವಚ್ಛವಾದ, ತಿಳಿಯಾದ ಸಿಹಿ ನೀರು ತನ್ನ ಜೊಹರಕ್ಕ! “ಓ... ಮಮ್ಮೂಟೀ, ಯಾವಾಗ ಬಂದೆ?” ತೋಟದ ನಡುವಿನಿಂದ ಅಂಗಳಕ್ಕೆ ಕಾಲಿಡುತ್ತಾ ಕೇಳಿದಳು ಜೊಹರಾ. “ಇದೀಗ ತಾನೇ ಬಂದೆ ಜೊಹರಕ್ಕಾ. ಊರಿನಿಂದ ಮುಳ್ಳು ಸೌತೆ ತಂದಿದ್ದೇನೆ. ನೀವೆಲ್ಲಿಗೆ ಹೋಗಿದ್ದಿರಿ?” ಎಂದು ಕೇಳಿದನು. “ಅಡಿಕೆ ತೋಟಕ್ಕೆ ನೀರು ಬಿಡುವಲ್ಲಿಗೆ ಹೋಗಿದ್ದೆ. ನಾವ್ಯಾರಾದರೂ ನಿಂತುಕೊಳ್ಳದಿದ್ದರೆ ಸರಿಯಾಗಿ ನೀರು ಹಾಕುವುದಿಲ್ಲ ಈ ಕೆಲಸದಾಳುಗಳು. ಇವರಂತೂ ‘ತುಂಬಾ ಆಯಾಸ, ನೀನೇ ಹೋಗು’ ಅಂತ ಊಟವಾದೊಡನೆ ಮಲಗಿ ಬಿಟ್ಟರು. ಇನ್ನೂ ಎದ್ದಿಲ್ಲವೆಂದು ತೋರುತ್ತದೆ. ಒಳಗೆ ಬಾ” ಎನ್ನುತ್ತಾ ಒಳಗಡಿ ಇಟ್ಟು, “ಜುಲೇಕಾ, ಮಮ್ಮೂಟಿ ಬಂದಿದ್ದಾನೆ. ಚಹಾ ಮಾಡು.” ಎಂದು ಕೂಗಿ ಹೇಳಿದಳು. “ಚಹಾ ಬೇಡ ಜೋಹರಕ್ಕಾ. ಆಮೇಲೆ ಬಸ್ಸು ತಪ್ಪಿ ಹೋಗುತ್ತದೆ. ನಾನೀಗಲೆ ಹೊರಟು ಬಿಡುತ್ತೇನೆ.'' ಎನ್ನುತ್ತಾ ಮಮ್ಮೂಟಿ ಹೊರಟೇ ಬಿಟ್ಟನು. ಇನ್ನೂ ಬಹಳ ಹೊತ್ತು ಅಲ್ಲಿದ್ದರೆ ಜೊಹರಳ ಬದುಕಿನ ಒಂದು ಚಿತ್ತಾದ ಪುಟದಲ್ಲಿ ತಾನೂ ಕಣ್ಣಾಡಿಸಿದ್ದೇನೆ ಎಂಬ ಸತ್ಯ ತನ್ನ ಬಾಯಿಯಿಂದ ಹೊರಬರಬಹುದೆಂಬ ಭಯ ಆತನನ್ನೂ ಅಲ್ಲಿಂದ ಕೂಡಲೇ ಹೊರಡುವಂತೆ ಮಾಡಿತ್ತು. “ಮಮ್ಮೂಟೀ, ನಿಲ್ಲು” ಎಂದು ಜೊಹರಾ ಕೂಗುತ್ತಿದ್ದರೂ ಮಮ್ಮೂಟಿ ಆ ಕರೆಗೆ ಕಿವಿಗೊಡಲೇ ಇಲ್ಲ. ಜೊಹರಕ್ಕಳಿಗಾದ ಅನ್ಯಾಯ ಮಾತ್ರ ಆತನೆದೆಯನ್ನು ಕೊರೆಯುತ್ತಲೇ ಇತ್ತು. ಊರಿಗೆ ಹೊರಟ ಮಮ್ಮೂಟಿಯ ತಲೆ ಮಾತ್ರ ಗೊಬ್ಬರದ ಗುಂಡಿಯಾಯಿತು. ಜಲೀಲನ ಕೃತ್ಯವನ್ನು ಕಂಡು ಪ್ರಾರಂಭದಲ್ಲಿ ಆತನನ್ನು ದ್ವೇಷಿಸಿದಾತ ಊರು ತಲುಪುವಷ್ಟರಲ್ಲಿ ಆತನನ್ನು ಮೆಚ್ಚುವ ಮಟ್ಟ ತಲಪಿದ್ದ. “ಅವನೇ ನಿಜವಾದ ಗಂಡಸು!” ಎಂಬಲ್ಲಿಯವರೆಗೆ ಆತ ಬದಲಾದನು. ಆತನ ಈ ಬದಲಾವಣೆ ಬೇರೊಂದು ಯೋಚನೆಗೂ ದಾರಿ ಇಳಿತ 43 ಮಾಡಿಕೊಟ್ಟಿತು. ಜುಲೇಕಳನ್ನು ಈ ಹಿಂದೆಯೂ ಒಂದೆರಡು ಬಾರಿ ಆತನು ನೋಡಿದ್ದನು. ಬಣ್ಣ ಕೊಂಚ ಕಪ್ಪಾದರೂ ತುಂಬು ಪ್ರಾಯದ, ತುಂಬು ದೇಹದ ಹದಿಹರೆಯದ ಹೆಣ್ಣು ಆಕೆ. ಗಂಡಸರನ್ನು ಕಂಡೊಡನೆ ಹಲ್ಲು ಕಿರಿಯುವಂತಹ ಚೆಲ್ಲುತನವೂ ಇತ್ತು. ಎಲ್ಲಕ್ಕಿಂತ ಹೆಚ್ಚಾಗಿ ಬೇಲಿಯೇ ಇಲ್ಲದ ಹೊಲ! ಯಾರು ಬೇಕಾದರೂ ಮೇಯಬಹುದೇನೊ! ಈ ಯೋಚನೆ ಆತನ ತಲೆಯಲ್ಲಿ ಸುಳಿದ್ದೇ ತಡ, ಆತನ ಮನ ಲಂಗು ಲಗಾಮಿಲ್ಲದ ಕುದುರೆಯಂತೆ ಮುಂದೋಡತೊಡಗಿತು. ಯಾರು ಬೇಕಾದರೂ ಮೇಯಬಹುದಾದರೆ ತಾನೂ ಏಕೆ ಒಮ್ಮೆ ಮೇಯಬಾರದು? ಜಾಗ್ರತೆಯಿಂದಿರಬೇಕಾದವಳು ಹೆಣ್ಣು. ಗಂಡಿಗೇನು, ಎಲ್ಲೆಲ್ಲಿಯೋ ಅಲೆಯುತ್ತಾನೆ, ಕಾಲು ತೊಳೆದು ಮನೆಯೊಳಗಡಿ ಇಡುತ್ತಾನೆ. ತಾನೆಲ್ಲಿ ಹೋಗಿದ್ದೇನೆ, ಏನು ಮಾಡಿದ್ದೇನೆಂದು ರುಖಿಯಾಗೆ ತಿಳಿಯುವ ಸಂಭವವೇ ಇಲ್ಲ.! ಒಂದು ವೇಳೆ ತಿಳಿದರೂ ಏನಂತೆ? ಊರಿಗೆ ಬಂದ ನಾಲ್ಕೇ ದಿನಗಳಲ್ಲಿ ಮಮ್ಮೂಟಿ ಆಮಿನಾಬಿಯೊಡನೆ, “ಉಮ್ಮಾ, ಜೊಹರಕ್ಕನ ಮನೆಗೆ ಏನಾದರೂ ಕೊಂಡು ಹೋಗುವುದಕ್ಕುಂಟಾ? ಇವತ್ತು ನನಗೆ ಬಿಡುವಿದೆ. ಬೇಕಾದರೆ ಹೋಗಿ ಬರುತ್ತೇನೆ.” ಎಂದನು. “ಹೂಂ. ಮೊನ್ನೆ ಹಾಕಿದ ಉಪ್ಪಿನಕಾಯಿ ಇದೆ. ಒಂದು ಬಾಟ್ಲಿ ಕೊಟ್ಟು ಬಾ.” ಎಂದಳು ಆಕೆ. ಆ ದಿನ ಮಮ್ಮೂಟಿ ಜೊಹರಳ ಮನೆ ತಲುಪಿದಗ ಆಕೆ ಮನೆಯಲ್ಲೇ ಇದ್ದಳು. “ಜುಲೇಕಾ, ಮಮ್ಮೂಟಿಗೆ ಒಂದು ಗ್ಲಾಸು ಚಹಾ ಮಾಡಿ ಕೊಡು” ಎಂದು ಕುಳಿತಲ್ಲಿಂದಲೇ ಕೂಗಿ ಹೇಳಿದಳು. ಮಮ್ಮೂಟಿ ಅಡಿಗೆ ಮನೆಗೆ ಹೋಗಿ ಜುಲೇಕಳ ಕೈಯಿಂದ ಚಹಾ ತೆಗೆದುಕೊಂಡು ಕುಡಿಯುತ್ತಾ ಅವಳ ಮುಖ ನೋಡಿ ನಸುನಕ್ಕನು. ಆಕೆಯೂ ಹಲ್ಲು ಕಿರಿದಳು. ಮುಂದೆಯೂ ಮಮ್ಮೂಟಿ ಎರಡು ಮೂರು ಬಾರಿ ಜೊಹರಳ ಮನೆಗೆ ಹೋಗಿ ಬಂದನು. ಕೊನೆಯ ಬಾರಿ ಹೋದಾಗ ನಾಲ್ಕಾಣೆಯ ಎಳ್ಳುಂಡೆಯನ್ನು ತಂದು ಯಾರಿಗೂ ತಿಳಿಯದಂತೆ ಆಕೆಯ ಕೈಯಲ್ಲಿಟ್ಟು ಮರು ಮಾತಾಡದೇ ಹಿಂತಿರುಗಿದ್ದನು. ಹಾಗೂ ಹೀಗೂ ಮತ್ತೂ ಒಂದೆರಡು ತಿಂಗಳು ಕಳೆಯಿತು. ಕೊನೆಗೂ ಮಮ್ಮೂಟಿ ಬಯಸಿದ ಅವಕಾಶ ದೊರೆಯಿತು. ಆ ದಿನ ಜೊಹರಾ ಅದ್ಯಾವುದೊ ಮದುಮಕ್ಕಳಿಗೆ ಔತಣವೆಂದು ತವರಿಗೆ ಬಂದಿದ್ದಳು. ಆಕೆಯ ಗಂಡ ಮಾತ್ರ ಊಟದ ಹೊತ್ತಿಗೆ ಬರುವೆನೆಂದಿದ್ದವನು ಬಂದಿರಲಿಲ್ಲ. 44 ಸುಳಿ ಹೀಗಾಗಿ ಜೊಹರಾ ಮನೆಯಲ್ಲಿ ಮಾಡಿದ್ದ ಬಿರಿಯಾನಿ ಮತ್ತು ತಿಂಡಿಯನ್ನು ಗಂಡನಿಗೆಂದು ಮಮ್ಮೂಟಿಯ ಕೈಯಲ್ಲಿ ಕೊಟ್ಟು ಕಳುಹಿಸಿದಳು. ಮಮ್ಮೂಟಿ ಸಂತೋಷದಿಂದ ಹೊರಟನು. “ಏನು, ಇಷ್ಟೊಂದು ಸಂತೋಷದಿಂದ ಹೊರಟಿದ್ದೀಯಲ್ಲ? ಅಲ್ಲೇನು ನಿಧಿ ಹೂತಿಟ್ಟಿದ್ದೀಯಾ?” ಎಂದು ಆಚುಮ್ಮ ಕೇಳಿದಾಗ “ಹೂಂ” ದೊಡ್ಡ ನಿಧಿ ಇದೆ.!” ಎನ್ನುತ್ತಾ ಹಲ್ಲು ಕಿರಿದನು. ಮಮ್ಮೂಟಿ ಆ ಮನೆ ತಲುಪಿದಾಗ ಸಂಜೆಯ ಐದು ಗಂಟೆಯಾಗಿತ್ತು. ಮನೆಯಲ್ಲಿ ಯಾರೂ ಇಲ್ಲದೆ ಜುಲೇಕಾ ಒಬ್ಬಳೆ ಹಿಂಭಾಗದ ಜಗಲಿಯಲ್ಲಿ ಕುಳಿತು ಮಡಲಿನಿಂದ ಕಡ್ಡಿ ತೆಗೆಯುತ್ತಿದ್ದಳು. ಮಮ್ಮೂಟಿಯನ್ನು ಕಂಡವಳೇ ಎದ್ದು ಒಳನಡೆದಳು. “ಯಜಮಾನರಿಲ್ಲವೇ?” ಎಂದು ಕೇಳುತ್ತಾ ಮಮ್ಮೂಟಿ ಆಕೆಯನ್ನು ಹಿಂಬಾಲಿಸಿದನು. ಬಳಿಕ ಯಜಮಾನರಿಗೆಂದು ತಂದ ತಿಂಡಿಯಲ್ಲಿ ಸ್ವಲ್ಪವನ್ನು ಆಕೆಯ ಕೈಯಲ್ಲಿಟ್ಟು, “ತಿನ್ನು ಪಾಪ. ಒಬ್ಬಳೇ ಕುಳಿತು ಬೇಜಾರಾಯಿತೇನೊ.” ಎಂದು ಅನುಕಂಪ ಸೂಚಿಸಿದನು. ಅನುಕಂಪದ ಆ ಒಂದು ನುಡಿ ಆಕೆಯೆದೆಯನ್ನು ಮೀಟಿತು. ಆಕೆಯ ಕಣ್ಣುಗಳು ಒದ್ದೆಯಾದುವು. “ಛಿ, ಛಿ, ಯಾಕಳ್ತೀಯಾ?” ಎನ್ನುತ್ತಾ ಮಮ್ಮೂಟಿ ಅವಳನ್ನು ಸಮೀಪಸಿ ಆಕೆಯ ಬೆನ್ನ ಮೇಲೆ ಕೈಯಾಡಿಸಿದನು. ಆಕೆ ಬಿಕ್ಕಿ ಬಿಕ್ಕಿ ಅಳತೊಡಗಿದಾಗ ಆಕೆಯನ್ನು ಕೈಗಳಿಂದ ಬಳಸಿಕೊಂಡು ತನ್ನ ಎದೆಗೊರಗಿಸಿಕೊಂಡನು. ಜುಲೇಖಾ ಆ ಗಳಿಗೆಯಲ್ಲಂತೂ ಆತನ ಆಜ್ಞಾನುವರ್ತಿಯಾದಳು. ಮಮ್ಮೂಟಿ ಮುಂದುವರಿದಾಗ ಆಕೆ ಪ್ರತಿಭಟಿಸುವ ಗೋಜಿಗೇ ಹೋಗಲಿಲ್ಲ. ನಡು ವಯಸ್ಸಿನ ಜಲೀಲನಿಗಿಂತ ತೀರಾ ಚಿಕ್ಕ ವಯಸ್ಸಿನ, ದೃಢಕಾಯನಾದ ಸುಂದರನದ ಮಮ್ಮೂಟಿಯೆ ಆಕೆಗೆ ಹೆಚ್ಚು ಆಕರ್ಷಕವಾಗಿ ಕಂಡನೇನೊ, ಅಥವಾ ಪ್ರತಿಭಟಿಸಬೇಕೆಂದು ಆಕೆಗೆ ಹೊಳೆಯಲೇ ಇಲ್ಲವೇನೊ. ರಾತ್ರಿಯಾಗುತ್ತಲೇ ಜೊಹರ ಮಕ್ಕಳೊಡನೆ ಹಿಂತಿರುಗಿದಳು., “ನಾಳೆ ಹೋಗುವೆಯಂತೆ.” ಎಂದು ಅಜ್ಜಿ ಹೇಳಿದಾಗ, “ಆ ಹುಡುಗಿ ಜುಲೇಕ ಒಬ್ಬಳೇ ಇದ್ದಾಳೆ. ನಾನು ಹೋಗಲೇ ಬೇಕು.” ಎಂದಳು. “ಇನ್ನು ಮುಂದೆ ನೀನು ಬರುವಾಗ ಯಾರಾದರೊಬ್ಬ ಮುದುಕಿಯನ್ನು ಆಕೆಯ ಜೊತೆ ಬಿಟ್ಟು ಬಾ. ಹರೆಯದ ಹುಡುಗಿಯ ಮನಸ್ಸು ಹೀಗೇ ಎಂದು ಹೇಳುವಂತಿಲ್ಲ.” ಎಂದು ಮೊಮ್ಮಗಳನ್ನು ಎಚ್ಚರಿಸಿದರು ಅಜ್ಜಿ. ಇಳಿತ 45 ಮಮ್ಮೂಟಿ ರಾತ್ರಿಯ ಕೊನೆ ಬಸ್ಸಿಗೆ ಊರಿಗೆ ಹಿಂತಿರುಗಿದನು., ಆತನಿಗೀಗ ಒಂದು ವಿಷಯ ಅರ್ಥವಾಗಿತ್ತು. ಜುಲೇಖಾ ಈಗಾಗಲೇ ಗರ್ಭಿಣಿಯಾಗಿದ್ದಾಳೆ! ಹೆಚ್ಚೆಂದರೆ ಇನ್ನೂ ಮೂರೊ ನಾಲ್ಕೊ ತಿಂಗಳುಗಳಲ್ಲಿ ಎಲ್ಲವೂ ಸ್ಫೋಟಗೊಳ್ಳಲಿದೆ! ಆಗಲೂ ಆತ ಒಂದು ಬಾರಿ ಅಂದುಕೊಂಡನು. “ಛೆ, ಪಾಪ ಜೊಹರಕ್ಕ!” ಒಂದು ವಾರದ ಬಳಿಕ ಮಮ್ಮೂಟಿ ತನ್ನೂರಿಗೆ ಹೊರಟನು. ಒಂದಷ್ಟು ಒಳ್ಳೆಯ ಹಸಿ ಮೀನನ್ನೂ ಮಾರುಕಟ್ಟೆಯಿಂದ ಕೊಂಡುಕೊಂಡನು. ಉಮ್ಮಾಲಿ ಹಸಿ ಮೀನಿಗಾಗಿ ಏನು ಬೇಕಾದರೂ ಮಾಡುವವಳೇ. ಬಸ್ಸಿನಿಂದ ಇಳಿದವನೇ ಆತನು ನೇರವಾಗಿ ಮನೆಯ ಕಡೆ ನಡೆದನು. ಎರಡು ವರ್ಷದ ಜಾಫರ್ ಮೈ ಮೇಲೆ ತುಂಡು ಬಟ್ಟೆಯೂ ಇಲ್ಲದೆ ಮನೆ ಮುಂದಿನ ಜಗಲಿಯಲ್ಲಿ ಕುಳಿತು ಬೆರಳು ಚೀಪುತ್ತಿದ್ದನು. ಮೂರು ವರ್ಷದ ಹಾಜಿರಾ ಆತನ ಪಕ್ಕದಲ್ಲಿ ಕುಳಿತು ಅಳುತ್ತಿದ್ದಳು. ಆಕೆಯ ಮೈ ಮೇಲೆ ಕೊಳೆಯಾದ ಒಂದು ಅಂಗಿ ಇತ್ತು. ಮನೆಯೊಳಗಾಗಲೇ “ಬದರ್ ಯುದ್ಧ” ಪ್ರಾರಂಭವಾಗಿತ್ತು! “ಅಲ್ಲಾ, ಅಷ್ಟು ಒಳ್ಳೆಯ ಮಡಿಕೆಯನ್ನು ಆ ಆಡು ಬಂದು ಒಡೆದೆ ಬಿಟ್ಟತಲ್ಲ? ಅಡಿಗೆ ಮನೆಯ ಬಾಗಿಲು ಹಾಕದೆ ಯಾಕೆ ಮುಂಬಾಗಿಲಿಗೆ ಬಂದು ನಿಂತೆ? ನಿನ್ನ ಮಿಂಡನಿದ್ದಾನೆಯೇ ಅಲ್ಲಿ?” ಉಮ್ಮಾಲಿ ಕಿರುಚುತ್ತಿದ್ದಳು. “ಅಂತಹ ಅಭ್ಯಾಸವೆಲ್ಲ ನಿಮ್ಮ ಮನೆಯವರಿಗೆ ಇರಬೇಕು.” ಸೇರಿಗೆ ಸವಾಸೇರಾದ ಸೊಸೆ ದನಿ ಎತ್ತಿದ್ದಳು. “ಆಡನ್ನು ಕಟ್ಟಿ ಹಾಕುವಾ ಎಂದರೂ ಕೇಳುವವರಲ್ಲ ನೀವು. ಈಗ ಆಡು ಬಂದು ಮಡಿಕೆ ಒಡೆದದ್ದಕ್ಕೆ ನನ್ನ ಮೇಲೇಕೆ ಹರಿಹಾಯುತ್ತೀರಿ?” ಅತ್ತೆಯ ಸ್ವರವನ್ನೂ ಮೀರಿಸಿ ಕಿರುಚಿದಳು ಆಕೆ. “ಏ, ಏನೇ ಅದು ನಿನ್ನ ಕಿರಿಚಾಟ? ಬೀದಿಯಲ್ಲಿ ಹೋಗುವವರೆಲ್ಲ ನಿಂತು ನೋಡ್ಬೇಕಾ ನಿಮ್ಮ ಬದರ್ ಯುದ್ಧವನ್ನು?” ಗರ್ಜಿಸುತ್ತಾ ಒಳ ಪ್ರವೇಶಿಸಿದನು ಮಮ್ಮೂಟಿ. “ಎಂಟು ದಿನಗಳಿಗೊಮ್ಮೆ ಬಂದು ಮಕ್ಕಳ ಮುಖ ನೋಡಿ ಕೊಂಚ ಸಂತೋಷ ಪಡೋಣವೆಂದರೆ ಇಲ್ಲಿ ಈ ಗಲಾಟೆ. ನಾನು ಇನ್ನೊಬ್ಬಳನ್ನು ಕಟ್ಟಿಕೊಂಡು ಎಲ್ಲಾದರೂ ಇರುತ್ತೇನೆ.” ರುಖ್ಯಾಬಿಯ ಪಿತ್ತ ನೆತ್ತಿಗೇರಿತು. “ಹೂಂ.... ಇನ್ನೊಬ್ಬಳನ್ನು ಕಟ್ಟಿಕೊಂಡು ಹೋಗ್ತಾರಂತೆ! ಇನ್ನೊಬ್ಬಳು ನಿಮ್ಮನ್ನು ಮದುವೆಯಾಗೋದು ಯಾವ ಸುಖಕ್ಕಾಗಿ? ಯಜಮಾನಿಯ ಹಳೆ ಸೀರೆ ಉಟ್ಕೊಂಡು ದಿನ ತಳ್ಳುವುದಕ್ಕಾಗಿಯೇ? ಇರೋ ಮಕ್ಕಳಿಗೇ ಸಮನಾಗಿ ಎರಡು ಹೊತ್ತು ಊಟ ಹಾಕ್ತೀರಾ? ಹೋಗಲಿ, ಪಟ್ಟಣದಿಂದ ಬರುವಾಗ ನಾಲ್ಕು ಬಿಸ್ಕತ್ತನ್ನಾದರೂ ತಂದು ಮಕ್ಕಳ 46 ಸುಳಿ ಕೈಯಲ್ಲಿಟ್ಟಿದ್ದಿದೆಯೇ? ಮಣ್ಣಿನ ಮಡಿಕೆಗೆ ಬದಲು ಒಂದು ಅಲೂಮಿನಿಯಂ ಮಡಕೆಯನ್ನಾದರೂ ತಂದಿದ್ದರೆ ಈ ದಿನ ಇಷ್ಟು ಹಗರಣ ನಡೆಯುತ್ತಲೇ ಇರಲಿಲ್ಲ. ಹೂಂ, ಹೋಗಿ, ಒಬ್ಬಳನ್ನಲ್ಲ, ನಾಲ್ಕು ಜನರನ್ನು ಕಟ್ಟಿಕೊಳ್ಳಿ!” ಎಂದು ಧುಮುಗುಟ್ಟುತ್ತಾ ಹೋಗಿ ಹಿಂಭಾಗದ ಜಗಲಿಯಲ್ಲಿ ಕುಳಿತುಕೊಂಡಳು ರುಖ್ಯಾಬಿ. ಮಣ್ಣಿನಲ್ಲಿ ಆಡಿ ಮೈ ತುಂಬಾ ಕೊಳೆ ಮೆತ್ತಿಸಿಕೊಂಡು ಸಿಂಬಳ ಸುರಿಸುತ್ತಾ ಬೆರಳು ಚೀಪುತ್ತಿದ್ದ ಮಗನನ್ನೂ, ಕೆದರಿದ ತಲೆ, ಕೊಳೆಯಾದ ಹರಿದ ಅಂಗಿ ತೊಟ್ಟು ಅಳುತ್ತಾ ಕುಳಿತಿದ್ದ ಮಗಳನ್ನೂ ಮಮ್ಮೂಟಿ ದೃಷ್ಟಿಸಿದನು. ಆತನ ಮುಖದಲ್ಲಿ ಮಾರ್ದವತೆ ಮೂಡಿತು. ನೋವಿನ ಉರಿ ಹೃದಯದ ಹಿಂಭಾಗದಲ್ಲಿ ವ್ಯಾಪಿಸಿತು. ಅಪರಾಧಿ ಮನೋಭಾವದಿಂದ ದೃಷ್ಟಿ ಕೆಳಗಿಳಿಯಿತು. ಕ್ಷಣಕಾಲದ ಮೌನದ ಬಳಿಕ ಮಗಳೊಡನೆ, “ಮುಂದಿನ ವಾರ ಬರುವಾಗ ನಿಮಗೆ ಬಿಸ್ಕತ್ತು ತರುವೆ. ಈಗ ಉಮ್ಮನ ಬಳಿ ಹೋಗಿ ನಿಮಗಿಬ್ಬರಿಗೂ ಸ್ನಾನ ಮಾಡಿಸಲು ಹೇಳು.” ಎಂದನು. ಜೊಹರಕ್ಕನ ಮಕ್ಕಳು ಚಿಕ್ಕವರಾಗಿದ್ದಾಗ ಮೈ ತುಂಬಿಕೊಂಡು ಮುದ್ದು ಮುದ್ದಾಗಿ ಎಷ್ಟು ಚೆನ್ನಾಗಿದ್ದರು! ಅವುಗಳು ತೊಡುತ್ತಿದ್ದ ಬಟ್ಟೆಗಳು ಎಷ್ಟು ಚೆಂದ! ಅಂತಹ ಮಕ್ಕಳನ್ನು ಕಂಡೊಡನೆ ಎತ್ತಿಕೊಳ್ಳುವ ಮನಸ್ಸಾಗುತ್ತಿತ್ತು. ಮಮ್ಮೂಟಿಯ ಮೂಗಿನಿಂದ ನಿಟ್ಟುಸಿರೊಂದು ಹೊರಬಿತ್ತು. ತನ್ನ ಮಕ್ಕಳೂ ಅಂತಹ ಬಟ್ಟೆ ಧರಿಸುವಂತಾಗಬೇಕು. ಹಾಗೆಯೇ ಮೈ ಕೈ ತುಂಬಿಕೊಳ್ಳಬೇಕು. ಆದರೆ ಹೇಗೆ.? “ಹೂಂ. ಇವಳು ಹೋಗಿ ಕುಳಿತಳಲ್ಲ ರಾಣಿಯ ಹಾಗೆ? ಇನ್ನು ಮೀನಿನ ಸಾರಿಗೆ ನಾನು ಕಡೆಯಬೇಕೇ?” ಉಮ್ಮಾಲಿ ಮೀನು ತುಂಡು ಮಾಡುತ್ತಾ ಮತ್ತೊಮ್ಮೆ ಪ್ರಾರಂಭಿಸಿದಳು. “ಹೌದು ಈ ಮನೆಯಲ್ಲಿ ನಾನು ರಾಣಿಯ ಹಾಗೆ ತಿಂದು ತಿಂದು ಕೊಬ್ಬಿದ್ದೇನೆ. ಕಾಣಿಸುತ್ತಿಲ್ಲವ ನಿಮಗೆ?” “ರುಖ್ಯಾಬಿ...” ಮಮ್ಮೂಟಿ ಗರ್ಜಿಸುತ್ತಾ ಮನೆಯ ಹಿಂಭಾಗಕ್ಕೆ ಬಂದನು. “ಬಾಯ್ಮುಚ್ಚಿತ್ತೀಯೊ ಇಲ್ಲಾ ಒಂದೆರಡು ಒದೆ ಬೀಳಬೇಕೊ. ಸ್ವಲ್ಪ ಬಿಸಿ ನೀರು ತಂದು ಮಕ್ಕಳಿಗೆ ಸ್ನಾನ ಮಾಡಿಸಿ ಒಗೆದ ಬಟ್ಟೆ ಹಾಕು. ನೀನೆಂತಹ ತಾಯಿ?” “ಸ್ನಾನ ಮಾಡಿಸಲಿಕ್ಕೆ ಸಾಬೂನು ಇಲ್ಲ.” ಕುಳಿತಲ್ಲಿಂದಲೆ ಮುಖ ಊದಿಸಿಕೊಂಡು ಉತ್ತರಿಸಿದಳು ಆಕೆ. “ಆಗಲಿ ನೀನು ನೀರು ತಂದಿಡು. ನಾನೀಗಲೇ ಸೋಪು ತರುವೆ.” ಎನ್ನುತ್ತಾ ಮಮ್ಮೂಟಿ ಹೊರ ನಡೆದನು. ಇಳಿತ 47 ತನ್ನ ಬದುಕಿನ ಈ ದಟ್ಟ ದಾರಿದ್ರ್ಯ ನೀಗುವುದಾದರೂ ಹೇಗೆ? ಹಣ್ಣು ಹಂಪಲು, ಸಿಹಿ ತಿಂಡಿ ಹೋಗಲಿ, ತನ್ನ ಮಕ್ಕಳಿಗೆ ಎರಡು ಹೊತ್ತು ಹೊಟ್ಟೆ ತುಂಬಾ ಅನ್ನ ನೀಡಲು ಸಾಧ್ಯವಾಗುತ್ತಿಲ್ಲವಲ್ಲಾ? ಯಜಮಾನರು ತಮ್ಮ ದೊಡ್ಡ ತೆಂಗಿನ ತೋಟವನ್ನು ಮಾರುತ್ತಾರೆಂಬ ವದಂತಿಯೂ ಇದೆ. ಹಾಗೇನಾದರೂ ಆದರೆ ತನ್ನ ಗತಿಯೇನು? ಆದರೂ. ಒಂದಲ್ಲ ಒಂದು ದಿನ ತಾನೂ ಹಾಜ್ಯಾರರಂತೆ ಐಶ್ವರ್ಯವಂತನಾಗಿ ದಿಂಬಿಗೊರಗಿ ಕುಳಿತು ನ್ಯಾಯ ತೀರ್ಮಾನ ಮಾಡುವಂತಾಗಬೇಕು! ಈ ಹೆಂಗಸರು ಧ್ವನಿ ಎತ್ತದಂತಹ ನ್ಯಾಯ ತೀರ್ಮಾನ ಮಾಡಬೇಕು! ತಿರುಕನ ಕನಸು ಮುಂದುವರಿಯುತ್ತಲೇ ಇತ್ತು. “ಏನು ಮಮ್ಮೂಟೀ, ಯಾವಗ್ಬಂದೆ? ಏನು ಬೇಕು?” ಅಂಗಡಿಯಾತ ಕೇಳಿದಾಗ ಮಮ್ಮೂಟಿ ಎಚ್ಚರಗೊಂಡನು. “ಒಂದು ಸಾಬೂನು ಕೊಡಿ.” “ಒಳ್ಳೆ ಪರಿಮಳಯುಕ್ತವಾದ ಸೋಪು ಬಂದಿದೆ. ಕೊಡಲೇ?'' ಕೇಳಿದ ಅಂಗಡಿಯಾತ. “ಬೇಡ ಬಟ್ಟೆಗೆ ಹಾಕುವ ಸೋಪು ಕೊಡಿ” ಮಮ್ಮೂಟಿ ಮನೆಗೆ ಹಿಂತಿರುಗಿದಾಗ ರುಖ್ಯಾಬಿ ಕೊಂಚ ತಣ್ಣಗಾಗಿ ಗಂಡನಿಗಾಗಿ ಕಾಯುತ್ತಿದ್ದಳು. ಗಂಡನ ಕೈಯಿಂದ ಸೋಪನ್ನೆತ್ತಿಕೊಂಡು ಹೋಗಿ ಮಕ್ಕಳಿಗೆ ಸ್ನಾನ ಮಾಡಿಸಿ ಇಬ್ಬರಿಗೂ ಒಗೆದ ಬಟ್ಟೆ ತೊಡಿಸಿದಳು. ಜಾಫರ್ ಅಳತೊಡಗಿದಾಗ ಅವನ ಬೆನ್ನಿಗೆ ಒಂದೇಟು ಕೊಟ್ಟು, “ಸುಮ್ಮನಿರು” ಎಂದು ಕಿರುಚಿದಳು. ಮಗುವಿನ ಅಳು ಮತ್ತಷ್ಟು ಜೋರಾಯಿತು. ಮಮ್ಮೂಟಿ ಬಂದು ಮಗನನ್ನೆತ್ತಿಕೊಂಡು ಮಗಳ ಕೈ ಹಿಡಿದು ಹೊರ ಜಗಲಿಗೆ ಬಂದನು. ಹಾಜಿರಾ ತಂದೆಯೊಡನೆ ತನ್ನದೊಂದು ಬೇಡಿಕೆ ಮುಂದಿಟ್ಟಳು. “ಅಬ್ಬಾ, ನನಗೊಂದು ಬೊಂಬೆ ಬೇಕು.” “ಹೂಂ. ಆಗಲಿ ತರ್ತೇನೆ.” “ಯಾವಾಗ” “ಮುಂದಿನವಾರ ತರ್ತೇನೆ” ಎನ್ನುತ್ತಿದ್ದಂತೆಯೇ ಮನೆಯ ಹಿಂಭಾಗದಿಂದ ಯಾರೊ ವಾಂತಿ ಮಾಡುವ ಶಬ್ದ ಕೇಳಿ ಗಡಬಡಿಸಿ ಎದ್ದು ಅಡಿಗೆ ಕೋಣೆಗೆ ಹೋದನು. ಹಿಂಭಾಗದ ಜಗಲಿಯ ಮೇಲೆ ಕುಳಿತು ರುಖ್ಯಾಬಿ ವಾಂತಿ ಮಾಡುತ್ತಿದ್ದಳು. “ಹೂಂ. ಇದೊಂದು ಕಾಟ ಬೇರೆ. ಇನ್ನು ನಾಲ್ಕು ತಿಂಗಳವರೆಗೆ ಈಕೆ ಅಡಿಗೆ ಮನೆಗೆ ಕಾಲಿಟ್ಟರೆ ಕೇಳು. ಅಡಿಗೆ ಮನೆಗೆ ಬಂದೊಡನೆ ವಾಂತಿ 48 ಸುಳಿ ಸುರುವಾಗುತ್ತದಂತೆ. ನಾವೆಲ್ಲ ಹೊತ್ತಿಲ್ಲವಾ, ಹೆತ್ತಿಲ್ಲವಾ? ಇಂತಹ ಬಯಕೆ ಸಂಕಟ ನಾನು ನೋಡಿಲ್ಲ. ಕೆಲಸಕ್ಕೆ ಕಳ್ಳ ಬೀಳಲು ಈ ರೀತಿ ಆಟ ಕಟ್ತಾಳೇನೊ, ಯಾರಿಗೆ ಗೊತ್ತು?” ಉಮ್ಮಾಲಿ ಗೊಣಗುತ್ತಾ ಮೀನಿನ ಸಾರಿಗೆ ಕಾಯಿ ಕಡೆಯುತ್ತಿದ್ದಳು. “ಉಮ್ಮಾ, ನೀವಾದರೂ ಸ್ವಲ್ಪ ಸುಮ್ಮನಿರಿ.” ಮಮ್ಮೂಟಿ ತಾಯಿಯನ್ನು ಗದರುತ್ತಾ ರುಖ್ಯಾಬಿಯ ಬಳಿ ಬಂದು, “ನೀರು ಬೇಕೇ” ಎಂದು ಕೇಳಿದನು. “ನೀರಲ್ಲ. ಪಾಷಾಣ ತಂದು ಕೊಡಿ!” ಎಂದು ಸಿಡುಕುತ್ತಾ ಒಳ ನಡೆದ ಆಕೆ ಕೋಣೆಯ ಮಂಚದ ಮೇಲೆ ಬಿದ್ದುಕೊಂಡಳು. “ಇದು ಒಂದು ನರಕ. ಈ ನರಕಕ್ಕೆ ಬರುವ ಬದಲು ಎಲ್ಲಾದರೂ ಹೋಗಿ ಸಾಯುವುದೊಳ್ಳೆಯದು.” ಎಂದು ಮಮ್ಮೂಟಿಯೂ ಸಿಡುಕುತ್ತಾ ಬಂದು ಮಗನ ಬಳಿ ಕುಳಿತನು. ಇರುವವರಿಗೇ ಅರೆ ಹೊಟ್ಟೆ. ಇನ್ನು ವರ್ಷಕ್ಕೊಂದು ಮಗು ಹುಟ್ಟತೊಡಗಿದರೆ ಗತಿಯೇನು? ಯಜಮಾನರ ತೋಟದಲ್ಲೂ ಮನೆಯಲ್ಲೂ ಕಳ್ಳದಂಧೆ ನಡೆಸಿಯೇ ಎಲ್ಲಿಯವರೆಗೆ ಬದುಕು ಸಾಗಿಸುವುದು? ಸಂಬಳ ಕೊಂಚ ಜಾಸ್ತಿ ಮಾಡಿ ಎಂದು ಯಜಮಾನರೊಡನೆಂದರೆ ಅವರು ಮೈಮೇಲೆ ಬೀಳುತ್ತಾರೆ. “ಇಷ್ಟೊಂದು ಸಂಬಳ ಕೊಡ್ತಾ ಇದ್ದೇನೆ. ಇದು ಸಾಲದೇ? ಇಲ್ಲೇನು. ನಿನಗೆ ಗುಡ್ಡೆ ಕಡಿಯುವ ಕೆಲಸವಿದೆಯೇ?” ಎನ್ನುತ್ತಾರೆ. ಹಾಜ್ಯಾರರು ತಮ್ಮ ದಪ್ಪ ಗಂಟಲಲ್ಲಿ ಅಷ್ಟೆಂದರೇ ಸಾಕು. ಮಮ್ಮೂಟಿಯ ಬಾಯಿಗೆ ಬೀಗ ಬೀಳುತ್ತದೆ. ಕಳೆದ ಹಬ್ಬಕ್ಕೆ ಮಕ್ಕಳಿಗೆ ಬಟ್ಟೆಗಾಗಿ ಹಣ ಕೊಟ್ಟವಳು ಜೊಹರ. ಹಬ್ಬದ ಖರ್ಚಿಗೆಂದು ಅಮಿನಾಬಿಯ ಬಳಿ ಕೈ ಚಾಚಿದಾಗ, “ನನ್ನಲ್ಲಿ ಹಣ ಎಲ್ಲಿಂದ ಮಮ್ಮೂಟೀ? ನಮ್ಮ ಗಂಡಸರು ನಮ್ಮ ಕೈಗೆ ಹಣ ಕೊಡ್ತಾರಾ? ನಿನಗೆ ಐವತ್ತು ಕಾಯಿ ಕೊಡ್ತೇನೆ. ಯಜಮಾನರಿಗೆ ಹೇಳ್ಬೇಡ. ಅದನು ಮಾರಿ ಹಣ ತೆಗೆದುಕೊಂಡು ಖರ್ಚು ಮಾಡು.” ಎಂದಿದ್ದಳು. ಆ ಮನೆ ಹಾಗೆಯೇ. ತಮ್ಮ ಮನೆಗೆ ತಾವೇ ಕನ್ನ ಹಾಕುವುದು. ಹಾಜ್ಯಾರರ ಹಿರಿಯ ಮಗ ಹನೀಫ್ ತನಗೆ ಹಣ ಬೇಕಾದಾಗಲೆಲ್ಲ ತೋಟದಿಂದ ಕಾಯಿಗಳನ್ನೊ, ಎಳನೀರನ್ನೊ ತೆಗೆಸಿ ಮಾರುತ್ತಿದ್ದನು. ತಂದೆಗೆ ತಿಳಿಯದಂತೆ ಅಕ್ಕಿ ಮುಡಿಯನ್ನೂ ಹೊರಗೆ ಸಾಗಿಸುತ್ತಿದ್ದನು. ಬಂದ ಹಣವೆಲ್ಲ ಅವನ ಯಾವ್ಯಾವುದೊ ಖಯಾಲಿಗೆ ಮೀಸಲು. ಶರೀಫ್ ಮಾತ್ರ ಒಳ್ಳೆಯ ಗುಣ ನಡತೆಯವನಾಗಿದ್ದು ದೂರದೂರಿನ ಕಾಲೇಜಿನಲ್ಲಿ ಓದುತ್ತಿದ್ದು ಈಗ ತಾನೇ ಇಳಿತ 49 ಯಾವುದೊ ಕೆಲಸಕ್ಕೆ ಸೇರಿದ್ದನು. ಕೆಲಸ ದೊರೆತ ಸಂಭ್ರಮದಲ್ಲಿ ಮಮ್ಮೂಟಿಗೆ ಕೈ ತುಂಬಾ ಹಣವನ್ನೂ ಕೊಟ್ಟು, “ನನಗಾಗಿ ದುವಾ ಮಾಡು” ಎಂದಿದ್ದನು. ತಾವಿಬ್ಬರೂ ಜೊತೆಗೂಡಿ ಲಗೋರಿ, ಚಿನ್ನಿದಾಂಡು ಆಡಿದ್ದು ನೆನಪಾಗಿ ಮಮ್ಮೂಟಿಯ ಕಣ್ಣು ಹನಿಗೂಡಿತ್ತು. ಮನೆಯ ಹಿಂಭಾಗದ ಸುದ್ದಿಯೊಂದೂ ಯಜಮಾನರ ಕಿವಿಗೆ ಬಿದ್ದದ್ದೇ ಇಲ್ಲ. ಆಚುಮ್ಮಳ ಮಗನನ್ನು ಅವರು ಕಂಡದ್ದೇ ಹುಡುಗ ಮದ್ರಸಾಗೆ ಹೋಗಲಾರಂಭಿಸಿದಾಗ. ಊರನ್ನೇ ಆಳುತ್ತಿದ್ದ ಅರಸನಿಗೆ ಅಂತಃಪುರದ ಆಗುಹೋಗುಗಳೊಂದೊ ತಿಳಿಯುತ್ತಿರಲಿಲ್ಲ. ಅಥವಾ ಅದನ್ನು ತಿಳಿದುಕೊಳ್ಳಲು ವೇಳೆಯೂ ಇಲ್ಲವೇನೊ, ಕನ್ನ ಕೊರೆತವೂ ಅರಿವಿಗೇ ಬರುವುದಿಲ್ಲ. ಅರಿವಿಗೆ ಬಂದರೂ ಅದರಲ್ಲಿಯೂ ಪಾಲು ಪಡೆದು ಸುಮ್ಮನಾಗುವ ವ್ಯವಸ್ಥೆಯಲ್ಲವೇ? “ಮಮ್ಮೂಟೀ, ಅಡಿಗೆ ಆಗಿದೆ. ಬಾ, ಊಟ ಮಾಡು.” ಉಮ್ಮಾಲಿ ಕರೆದಾಗ ಮಮ್ಮೂಟಿ ಭಾವನಾ ಲೋಕದಿಂದ ಹೊರಬಂದನು. ಜಾಫರ್ ಬೆರಳು ಚೀಪುತ್ತಾ ನಿದ್ದೆ ಹೋಗಿದ್ದನು. ಹಾಜಿರಾ ಹಸಿವೂ ಎಂದು ಜೋರಾಗಿ ಅಳುತ್ತಿದ್ದಳು. ಚಿಮಿಣಿ ದೀಪದ ಮಂದ ಬೆಳಕು ಕೋಣೆಯಲ್ಲಿ ಪಸರಿಸಿತ್ತು. ರುಖ್ಯಾಬಿ ಎದ್ದು ಬಂದು ಮಕ್ಕಳಿಗೆ ಬಡಿಸಿದಳು. ಮಗನನ್ನು ಎಬ್ಬಿಸಿ ನಿದ್ದೆಗಣ್ಣಿನಲ್ಲಿಯೇ ಊಟ ಮಾಡಿಸಿದಳು. ಮಗು ಕಣ್ಣು ಮುಚ್ಚಿಕೊಂಡೇ ಬಾಯಿಗೆ ಹಾಕಿದ್ದನ್ನು ನುಂಗುತ್ತಿದ್ದನು. ಹಾಜಿರಾ ಒಂದು ತುಂಡು ಮೀನು ಮುಗಿದೊಡನೆ ಇನ್ನೊಂದು ತುಂಡು ಬೇಕೆಂದು ಹಟ ಮಾಡಿ ತಾಯಿಯಿಂದ ಗುದ್ದಿಸಿಕೊಂಡು ಇನ್ನಷ್ಟು ಆಲಾಪನೆ ಗೈದಳು. ಎಲ್ಲರೂ ಊಟ ಮಡಿ ಒಂಭತ್ತು ಗಂಟೆಗೆಲ್ಲಾ ದೀಪವಾರಿಸಿ ಮಲಗಿದರು. ಮಮ್ಮೂಟಿಯ ಕನಸಿನಲ್ಲಿ ಜುಲೇಕಾ ತೇಲಿ ಬಂದಳು. * * * * * ಮತ್ತೂ ಕೆಲವು ತಿಂಗಳುಗಳುರುಳಿದುವು. ಮಮ್ಮೂಟಿಯ ಕೆಲಸ, ಕಾರ್ಯಗಳು ಎಂದಿನಂತೆಯೇ ಸಾಗುತ್ತಿದ್ದವು. ತನ್ನ ಬದುಕಿನ ತೀವ್ರ ಬಡತನ, ಮನೆಯೊಳಗಿನ ಅತ್ತೆ, ಸೊಸೆಯರ ಜಗಳದಿಂದಾಗಿ ಊರಿಗೆ ಹೋಗುವ ದಿನವನ್ನು ಮತ್ತಷ್ಟು ಮುಂದೂಡಿ ರುಖ್ಯಾಬಿಗೆ ಮತ್ತಷ್ಟು, ಕೋಪ ಬರಿಸುತ್ತಿದ್ದನು. ಜುಲೇಕಳ ಆಕರ್ಷಣೆ ಇದ್ದರೂ ಆಕೆ ಗರ್ಭಿಣಿ ಎಂದು ತಿಳಿದು ಆ ಆಕರ್ಷಣೆಗೂ ಕಡಿವಾಣ ಹಾಕಿದ್ದನು. ಏನೂ ಕೆಲಸವಿಲ್ಲದಾಗ ಒಂದೆಡೆ ಮಲಗಿಕೊಂಡು ತಾನೇ ಯಜಮಾನನಾಗುವ ತಿರುಕನ ಕನಸಿನಲ್ಲಿ ಮುಳುಗುತ್ತಿದ್ದನು. ಆತ ಆ ದಿನ ತಾನೇ ಊರಿನಿಂದ ಹಿಂತಿರುಗಿದ್ದನು. ಇನ್ನೊಂದೆರಡು 50 ಸುಳಿ ತಿಂಗಳಲ್ಲಿ ರುಖ್ಯಾಬಿಯ ಹೆರಿಗೆಯಾಗುವುದಿತ್ತು. ಹೆಂಡತಿಯ ಬಾಣಂತನ ಹೇಗೆಂಬ ಚಿಂತೆಯಲ್ಲೇ ಆತ ಮನೆ ತಲುಪಿದ್ದನು. ಮಧ್ಯಾಹ್ನ ಎಲ್ಲರೂ ಅದೇ ತಾನೇ ಊಟ ಮಾಡಿ ಎದ್ದಿದ್ದರು. ಅಜ್ಜಿ ಮಧ್ಯಾಹ್ನದ ನಮಾಜಿಗೆ ಸಿದ್ಧತೆ ನಡೆಸಿದ್ದರು. ಆಮಿನಾಬಿ ಎಲೆಯಡಿಕೆ ಹಾಕಿಕೊಳ್ಳುತ್ತಾ, “ಜೊಹರಳನ್ನು ನೋಡದೆ ತುಂಬಾ ದಿವಸವಾಯಿತು. ಮಕ್ಕಳ ಶಾಲೆ ಅಂತ ಈಗ ಅವಳು ಎರಡು ತಿಂಗಳಿಗೊಮ್ಮೆ ಕೂಡ ಬರುವುದಿಲ್ಲ” ಎಂದು ಅತ್ತೆಯೊಡನನ್ನುತ್ತಿದ್ದಂತೆಯೆ ಹೊರಗೆ ಕಾರಿನ ಶಬ್ದವಾಯಿತು. “ಜೊಹರಕ್ಕಾ ಬಂದರು” ಮಮ್ಮೂಟಿ ಸುದ್ದಿ ಮುಟ್ಟಿಸಿದನು. ಜೊಹರಾ ಬಂದವಳೇ ತಾಯಿಯ ಬಳಿ ಕುಳಿತು ಅಳತೊಡಗಿದಳು. “ಯಾಕೆ ಮಗೂ, ಏನಾಯಿತು.?” ಆಮಿನಾಬಿ ಗಾಬರಿಯಿಂದ ಕೇಳಿದಳು. ಜೊಹರಾ ಕಣ್ಣೊರೆಸಿಕೊಳ್ಳುತ್ತಾ ಬಾಗಿಲಿನ ಎರಡೂ ಕಡೆ ಇಣುಕಿ ನೋಡಿ ಕೋಣೆಗೆ ಬಂದು ತಾಯಿಯೊಡನೆ, “ನನ್ನ ಕೆಲಸದ ಹೆಂಗಸು ಜುಲೇಕಾ ಇದ್ದಾಳಲ್ಲ? ಅವಳು ಗರ್ಭಿಣಿ!” ಎಂದು ಪಿಸುಗುಟ್ಟಿದಳು. “ಆಂ...” ಆಶ್ಚರ್ಯದ ಉದ್ಗಾರವೆತ್ತಿದಳು. ಆಮಿನಾಬಿ. “ಇರಲಾರದು. ಅದು ಬರೇ ಪಾಪದ ಹುಡುಗಿ.” “ನಾನೂ ಒಬ್ಬ ಹೆಂಗಸಲ್ಲವಾ ಉಮ್ಮಾ? ನನಗಷ್ಟೂ ತಿಳಿಯದೆ” ಎಂದಳು ಅಜ್ಜಿ ನಮಾಜ್ ಮುಗಿಸಿದವರೇ ಮೊಮ್ಮಗಳೆಡೆಗೆ ತಿರುಗಿ, “ನಾನಾವತ್ತೇ ನಿನ್ನೊಡನನ್ನಲಿಲ್ಲವಾ, ಪ್ರಾಯದ ಹೆಂಗಸನ್ನು ಮನೆಯಲ್ಲಿ ಒಬ್ಬಳೇ ಬಿಟ್ಟು ನೀನು ಅಲ್ಲಿ ಇಲ್ಲಿ ತಿರುಗಾಡಬೇಡಾಂತ? ಈಗ ಅವಳ ಹೊಟ್ಟೆಯಲ್ಲೂ ಬಂತ ಎರಡು ಕಾಲಿನ ಗುಲ್ಮ? ಅವಳನ್ನು ಮನೆಯಿಂದ ಒದ್ದು ಹೊರಹಾಕು!” ಎಂದರು ತಿರಸ್ಕಾರದಿಂದ. “ಮನೆಯಿಂದ ಹೊರಹಾಕಿದರೆ ನಮ್ಮ ಮನೆತನದ ಮರ್ಯಾದೆ ಏನಾಗಬೇಕು?” ಗೊಣಗಿದಳು ಜೊಹರಾ. “ಯಾರೂಂತ ಅವಳೇನಾದರೂ ಬಾಯಿ ಬಿಟ್ಟಳೇ?” ಅಜ್ಜಿ ಮೊಮ್ಮಗಳ ಮಾತನ್ನು ನಡುವೆಯೇ ತಡೆದು ಕೇಳಿದರು. ಆಮಿನಾಬಿ ಮಗಳ ಮುಖ ನೋಡಿದರು. ತಾಯಿ, ಮಗಳ ಕಣ್ಣುಗಳು ಪರಸ್ಪರ ಸಂದೇಶ ನೀಡಿದುವು. ಆಮಿನಾಬಿ ಮುಖ ತಿರುಗಿಸಿ ಕಿಟಕಿಯಿಂದ ಹೊರಗಡೆ ಶೂನ್ಯ ದೃಷ್ಟಿಯನ್ನು ನೆಟ್ಟಳು. ಜೊಹರಾ ತಲೆ ತಗ್ಗಿಸಿ ಅಜ್ಜಿಯ ಪಕ್ಕದಲ್ಲಿ ಕುಳಿತಳು. ಕೋಣೆಯಲಿ ಸ್ಮಶಾನ ಮೌನವಾವರಿಸಿತು. ಇಳಿತ 51 “ಯಾಕೆ ಯಾರೂ ಮಾತನಾಡುತ್ತಿಲ್ಲ? ಚೆನ್ನಾಗಿ ದಬಾಯಿಸಿ ಬಾಯಿ ಬಿಡಿಸಬೇಕಾಗಿತ್ತು.!” ಕೈಯಲ್ಲಿ ಜಪಸರ ತಿರುಗಿಸುತ್ತಾ ``ಸುಬಾನಲ್ಲ” ಎನ್ನುತ್ತಾ ಅಜ್ಜಿ ಮತ್ತೊಮ್ಮೆ ಕೇಳಿದರು. “ಯಾರೂಂತ ತಿಳಿದರೂ ಆತನ ಕೊರಳಿಗೆ ಕಟ್ಟುವ ಹಾಗಿಲ್ಲ! ಈಗ ಬೇರೇನಾದರೂ ದಾರಿ ಹುಡುಕಬೇಕು.” ಆಮಿನಾಬಿ ದಿಕ್ಕುಗಾಣದವಳಂತೆ ನುಡಿದಳು. “ಅಂದರೆ...” ದಿಗ್ಭ್ರಾಂತಳಾಗಿ ನುಡಿದು ಸೊಸೆಯ ಮುಖ ನೋಡಿದರು ಅಜ್ಜಿ. “ಹೂಂ ಹೌದು!” ಅಮಿನಾಬಿ ತಲೆಯಲ್ಲಾಡಿಸಿದಳು. ಅಜ್ಜಿ, ತಾಯಿ, ಮೊಮ್ಮಗಳು ಚರ್ಚಿಸಿ ಒಂದು ತೀರ್ಮಾನಕ್ಕೆ ಬಂದರು. ಜೊಹರಾ, “ಬೇಡ ಉಮ್ಮಾ, ಮಮ್ಮೂಟಿಗೆ ಹೆಂಡತಿ, ಮಕ್ಕಳಿದ್ದಾರಲ್ಲ? ಬೇರೆ ಯಾರನ್ನಾದರೂ ನೋಡುವಾ.” ಎಂದಾಗ, “ತಿಂಗಳು ತುಂಬಿದ ಗರ್ಭಿಣಿಯನ್ನು ಇನ್ಯಾರ ಕೊರಳಿಗೆ ಕಟ್ಟುವುದು? ಮಮ್ಮೂಟಿ ನಿನ್ನ ಮನೆಗೆ ಆಗಾಗ ಬರುತ್ತಿದ್ದನಲ್ಲ? ಅವನ ತಲೆಗೇ ಕಟ್ಟಿ ಬಿಡುವಾ! ಒಂದು ನಿಕಾ ಅಂತೂ ಆಗಿ ಹೋಗಲಿ. ಆಮೇಲೆ ಹೇಗಾದರೂ ಸುಧಾರಿಸಬಹುದು. ಅವನೊಡನೆ ನಾನೇ ಮಾತನಾಡುವೆ. ನೀನು ಮಧ್ಯೆ ಬಾಯಿ ಹಾಕಬೇಡ” ಎಂದಳು ಆಮಿನಾಬಿ. ಸದ್ಯಕ್ಕೆ ಮನೆತನದ ಮಾನ ಉಳಿಸಿಕೊಳ್ಳುವುದು ಹೇಗೆಂಬುದೇ ಎಲ್ಲರ ಚಿಂತೆಯಾಗಿತ್ತು. ಅದಕ್ಕಾಗಿ ಯಾರೊ ಒಬ್ಬರನ್ನು ಬಲಿಯರ್ಪಿಸಲು ಮೂವರು ಮಹಿಳೆಯರೂ ಸಿದ್ಧರಾದರು. “ಮಮ್ಮೂಟೀ, ಏ ಮಮ್ಮೂಟೀ....” ಆಮಿನಾಬಿ ಜೋರಾಗಿ ಕರೆದಳು. ಹೊರಗೇನೋ ಕೆಲಸ ಮಾಡುತ್ತಿದ್ದ ಮಮ್ಮೂಟಿ ಓಡಿ ಬಂದು. “ಕರೆದಿರಾ ಉಮ್ಮಾ?” ಎಂದು ಕೇಳಿದನು. ಆಮಿನಾಬಿ ಮಮ್ಮೂಟಿಯನ್ನು ದುರುಗುಟ್ಟಿ ನೋಡಿದಳು. ಮಮ್ಮೂಟಿ ಎಲ್ಲರೆಡೆಗೆ ಒಮ್ಮೆ ದೃಷ್ಟಿ ಹರಿಸಿದನು. ಅಜ್ಜಿ ಜಪಸರ ತಿರುಗಿಸುತ್ತಾ “ಸುಬಾನಲ್ಲಾ, ಅಲ್ಹಂದುಲಿಲ್ಲಾ.” ಎನ್ನುತ್ತಿದ್ದರು. ಜೊಹರಾ ಕಿಟಿಕಿಯಲ್ಲಿ ಮುಖವಿಟ್ಟು ಹೊರಗಡೆ ದೃಷ್ಟಿ ನೆಟ್ಟಿದ್ದಳು. “ಹೂಂ....” ಆಮಿನಾಬಿ ಹೂಂಕರಿಸಿದಳು. “ಹೋಗಿ ಹೋಗಿ ಜೊಹರಳ ಕೆಲಸದವಳ ಸಹವಾಸ ಮಾಡಿದೆಯಾ? ಇಷ್ಟು ಚಿಕ್ಕ ವಯಸ್ಸಿಗೆ ಮದುವೆಯಾಗಿ ವರ್ಷಕ್ಕೊಂದು ಮಗುವೂ ಆಗುತ್ತಾ ಇದೆ! ಇಲ್ಲಿ ತಿಂದು ತಿಂದು ಮೈಯಲ್ಲಿ ಕೊಬ್ಬು ಜಾಸ್ತಿಯಾಗಿರಬೇಕು. ಅದನ್ನು ಇಳಿಸಲು ಇದೇ ಊರಿನಲ್ಲಿ ಯಾರೂ ಸಿಕ್ಕಲಿಲ್ಲವಾ?...” ಆಕೆಯ ನಾಲಗೆ ಕಡಿವಾಣವಿಲ್ಲದ ಕುದುರೆಯಂತೆ ಓಡುತ್ತಲೇ 52 ಸುಳಿ ಇತ್ತು. ಮಮ್ಮೂಟಿ ಪಿಳಿ ಪಿಳಿ ಕಣ್ಣು ಬಿಡುತ್ತಾ ಮೇಲೆ, ಕೆಳಗೆ ನೋಡಿದನು. ಕೊನೆಗೂ ರಹಸ್ಯ ಸ್ಫೋಟಗೊಂಡಿತ್ತು! ಆದರೆ ತನ್ನ ಮೇಲೆರಗಿದ ಆ ಆಪಾದನೆಯನ್ನು ಒಂದೇ ಬಾರಿಗೆ ಖಂಡತುಂಡವಾಗಿ ನಿರಾಕರಿಸಲು ಆತನಿಂದ ಸಾಧ್ಯವಾಗಲಿಲ್ಲ. ಕಳ್ಳತನದಲ್ಲಿ ಆತನೂ ಪಾಲ್ಗೊಂಡಿದ್ದನಲ್ಲ? ಆದರೂ ಆತನ ತಲೆಯೂ ಚುರುಕಾಗಿ ಓಡತೊಡಗಿತು. “ನಾನೇನು ಮಾಡಿದ್ದೇನೆ ಉಮ್ಮಾ? ಕೊಂಚ ಬಿಡಿಸಿಯಾದರೂ ಹೇಳಿರಲ್ಲ?” ಮುಖ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಅಮಾಯಕ ಮುಖವಾಡತೊಟ್ಟನು ಮಮ್ಮೂಟಿ. “ಹೂಂ... ಬಿಡಿಸಿ ಹೇಳಬೇಕಂತೆ, ಬಿಡಿಸಿ! ಜುಲೇಕಾ ಎಂಟು ತಿಂಗಳ ಗರ್ಭಿಣಿಯಂತೆ!” ಆಮಿನಾಬಿ ಧ್ವನಿ ತಗ್ಗಿಸಿ ಒರಟಾಗಿ ನುಡಿದಳು. ಮಮ್ಮೂಟಿಗೆ ಇದು ಹೊಸ ವಿಷಯವೇನೂ ಆಗಿರಲಿಲ್ಲ. ಈ ಸ್ಫೋಟ ಮತ್ತದರ ಪರಿಣಾಮವನ್ನು ಕಾಣಲು ಆತನೂ ಉತ್ಕಂಠಿತನಾಗಿದ್ದನು. ಆದರೆ ಅದು ತನ್ನ ಮೇಲೆ ಹೀಗೆ ಬಂದೆರಗಬಹುದೆಂದು ಆತನು ಕನಸಿನಲ್ಲೂ ಎಣಿಸಿರಲಿಲ್ಲ. “ಆದರೆ... ಅದಕ್ಕೆ ಕಾರಣ ನಾನೂಂತ.... ಆಕೆ ಹೇಳಿದಳೇ.....” ತಲೆ ತಗ್ಗಿಸಿ ಎಳೆದೆಳೆದು ಕೇಳಿದನು. “ಜೋಹರಳ ಮನೆಗೆ ನೀನಲ್ಲದೆ ಇನ್ಯಾರು ಹೋಗುತ್ತಾರೆ ಗಂಡಸರು? ಈ ಕೆಲಸ ನಿನ್ನದೇ ಎಂಬುದರಲ್ಲಿ ಸಂದೇಹವೇ ಇಲ್ಲ!” ಆಮಿನಾಬಿ ದಬಾಯಿಸಿದಳು. ಮುಳುಗುವ ಸಂದರ್ಭ ಬಂದಾಗ ಮಂಗನಾದರೂ ಮರಿಯನ್ನು ಕಾಲಡಿಗೆ ಹಾಕುತ್ತದಲ್ಲವೇ? ಮಮ್ಮೂಟಿ ಜಾಗೃತನಾದ. ಕಾಲಡಿಗೆ ನೀರು ಬಂದಾಯಿತು. ಮುಳುಗುವ ಮೊದಲು ಪಾರಾಗಬೇಕು. “ಜೊಹರಕ್ಕಾ. ನಾನು ಸತ್ಯ ಹೇಳಿದರೆ ನಿಮಗೆ ನೋವಾದೀತು. ಸತ್ಯವೇನೆಂದು ಬಹುಶಃ ನಿಮಗೂ ಗೊತ್ತಿರಬಹುದು.” ಎಂದನು. “ಇನ್ಯಾವ ಸತ್ಯವಿದೆ? ಎಲ್ಲವೂ ಸೂರ್ಯನ ಬೆಳಕಿನಷ್ಟು ನಿಚ್ಚಳವಾಗಿದೆಯಲ್ಲ?” ಅಜ್ಜಿ ಗುರುಗುಟ್ಟಿದರು. ಜೊಹರಾ ಮುಖ ತಿರುಗಿಸಿದಳು. “ಗಂಡಸರ ಹಣೆ ಬರಹವೇ ಇಷ್ಟು. ಮಾಡುವ ಕೆಲಸ ಮಾಡಿ ಬಿಟ್ಟು ಆ ಮೇಲೆ ನಮಗೆ ಗೊತ್ತೇ ಇಲ್ಲ. ಎನ್ನುವುದು; ಅಥವಾ ಇನ್ಯಾರದೊ ತಲೆಗೆ ಕಟ್ಟುವುದು. ಸಿಕ್ಕಿ ಬೀಳುವುದು ಹೆಂಗಸರೇ ಅಲ್ಲವಾ” ಎಂದಳು ಆಮಿನಾಬಿ. “ಉಮ್ಮಾ, ದೇವರಾಣೆಯಾಗಿ ನಾನಂತಹ ಕೆಲಸ ಮಾಡಲಿಲ್ಲ.!” ಮಮ್ಮೂಟಿ 53 ಆಣೆ ಇಟ್ಟನು. “ಸಾಕು. ಈಗ ಅದೆಲ್ಲ ಬೇಡ. ನೀನು ಆಕೆಯನ್ನು ನಿಖಾ ಮಾಡಿಕೊ” ಆಮಿನಾಬಿ ಆಜ್ಞೆ ಮಾಡಿದರು. ಮಮ್ಮೂಟಿ ದಿಗ್ಭ್ರಾಂತನಾದನು. ಆತನ ಮುಖ ಕಪ್ಪಿಟ್ಟಿತು. ಇದರ ಪರಿಣಾಮವೆಂದರೆ ತಾನು ಈ ರೀತಿ ಶಿಕ್ಷೆಯನುಭವಿಸುವುದೇ? ಇದ್ಯಾವ ನ್ಯಾಯ? ಯಾರದೊ ಪಾಪಕ್ಕೆ ತಾನೇಕೆ ಹೊಣೆಯಾಗಬೇಕು.? “ಉಮ್ಮಾ, ದಯವಿಟ್ಟು ಅಂತಹ ಮಾತು ಹೇಳಬೇಡಿ. ಆಕೆಯ ಮಗುವಿನ ತಂದೆ ನಾನಲ್ಲ!” ಗೋಗರೆದನು ಮಮ್ಮೂಟಿ. “ಕಳ್ಳತನವನ್ನು ಯಾರು ತಾನೇ ಒಪೊ್ಕಳ್ತಾರೆ? ಈಗ ನೀನು ಏನೂ ಹೇಳಬೇಡ. ಹೇಗೂ ಆದುದಾಯಿತಲ್ಲ? ನೀನು ಆಕೆಯನ್ನು ನಿಖಾಹ್ ಮಾಡಿಕೊ. ಮುಂದಿನದನ್ನು ನಾವು ನೋಡ್ಕೊಳ್ತೇವೆ.” ಸಮಸ್ಯೆಗೆ ಎಷ್ಟು ಸುಲಭದ ಪರಿಹಾರ? ಉಳ್ಳವರು ಏನು ಮಾಡಿದರೂ ದಕ್ಕುತ್ತದೆಂದೇ? “ಏನು ಹೇಳುತ್ತೀ ಮಮ್ಮೂಟೀ? ಉಮ್ಮಾ ಹೇಳಿದಂತೆ ಮಾಡುವುದೇ ಒಳ್ಳೆಯದು.” ಎನ್ನುತ್ತಾ ಜೊಹರಾ ಮಮ್ಮೂಟಿಯ ಸಮೀಪ ಬಂದು, “ಮಮ್ಮೂಟಿ, ನಮ್ಮ ಮನೆಯಲ್ಲಿ ಎಂತೆಂತಹ ನೋವನ್ನೇ ನುಂಗಿದವನು ನೀನು. ಇದೊಂದು ನೋವನ್ನೂ ನುಂಗಿ ಬಿಡು. ಆಕೆಯನ್ನು ನೀನೇನೂ ಸಾಕಬೇಕಾಗಿಲ್ಲ. ಆದರೆ ಊರವರ ಮುಂದೆ ನನ್ನ ಮನೆತನದ ಮಾನ ಕಾಪಾಡು.” ಎಂದು ಮೆತ್ತಗೆ ಕೊಂಚ ದೀನಳಾಗಿಯೇ ನುಡಿದಳು. “ಜೊಹರಕ್ಕಾ....” ಮಮ್ಮೂಟಿ ಏನನ್ನೊ ಹೇಳಲುಪಕ್ರಮಿಸಿ ಉಗುಳು ನುಂಗಿ ತಲೆ ತಗ್ಗಿಸಿದನು. ಬಳಿಕ, “ಅಕ್ಕಾ, ಇದೆಲ್ಲ ನನ್ನ ಹೆಂಡತಿಯ ಕಿವಿಗೆ ಬಿದ್ದರೆ ನನ್ನ ಬದುಕು ಏನಾಗಬೇಕು.?” ಎಂದು ದೈನ್ಯದಿಂದ ಕೇಳಿದನು. “ಈಗ ನಿನ್ನ ಬದುಕಿಗೇನಾಗುತ್ತದೆ? ಇಬ್ಬರು ಹೆಂಡತಿಯರು ಎಷ್ಟು ಜನರಿಗಿಲ್ಲ? `ನನಗೆ ಬೇಕಾಯಿತು, ಮಾಡ್ಕೊಂಡೆ’ ಅಂತ ಹೇಳು ನಿನ್ನ ಹೆಂಡತಿಗೆ. ನಾಲ್ಕು ದಿನ ಹಾರಾಡಿಯಾಳು. ಬಳಿಕ ಸುಮ್ಮನಾಗುತ್ತಾಳೆ. ಬಿಡು. ಸುಬಾನಲ್ಲಾ. ಸುಬಾನಲ್ಲ.” ಅಜ್ಜಿ ಜಪ ಸರ ತಿರುಗಿಸುತ್ತಾ ಸಲಹೆ ನೀಡಿದರು. ಮೂವರು ಹೆಂಗಸರ ಮಧ್ಯದಲ್ಲಿ ತನ್ನ ಧ್ವನಿಯಡಗಿ ಹೋಗುತ್ತಿರುವಂತೆ ಭಾಸವಾಯಿತವನಿಗೆ. ತಾನೆಲ್ಲೊ ಕಾಡು ಪ್ರಾಣಿಗಳ ಬಾಯಿಗೆ ಆಹಾರವಾಗುತ್ತಿದ್ದೇನೆಯೇ? ಈ ಬಲೆಯಿಂದ ಬಿಡಿಸಿಕೊಳ್ಳುವ ಬಗೆ ಹೇಗೆ? ಇಳಿತ 54 ಸುಳಿ “ಉಮ್ಮಾ, ನಾನು ನಾಳೆಯೇ ಜುಲೇಕಳನ್ನು ಕರೆದುಕೊಂಡು ಬರುವೆ. ನಾಡಿದ್ದು ರಾತ್ರಿಯೇ ನಿಖಾ ಮುಗಿಸಿ ಬಿಡುವಾ.” ಎನ್ನುತ್ತಾ ಜೊಹರಾ ಹೊರಟು ಹೋದಳು. ಮಮ್ಮೂಟಿಗೆ ತಲೆ ತಿರುಗತೊಡಗಿತು. ಮನೆಯಿಂದ ಹೊರಬಂದು ಬೀಡಿ ಸೇದತೊಡಗಿದನು. ನಾಲ್ಕೈದು ಬೀಡಿ ಸೇದಿ ಆಕಾಶವೇ ತಲೆ ಮೇಲೆ ಬಿದ್ದಂತೆ ಮುಖ ಮಾಡಿಕೊಂಡು ಹಿಂಭಾಗದ ಜಗಲಿಯಲ್ಲಿ ಕುಳಿತನು. “ಏನು ಮಮ್ಮೂಟೀ, ಏನು ವಿಷಯ?” ಆಚುಮ್ಮ ಹೊರಬರುತ್ತಾ ಕೇಳಿದಳು. ಮಮ್ಮೂಟಿ ಬಹಳ ಅನಿರೀಕ್ಷಿತವಾದ ಒಂದು ಪ್ರಶ್ನೆ ಕೇಳಿದನು. “ನಿಮ್ಮ ಕಾದರನ ತಂದೆ ಯಾರು?” ಆಚುಮ್ಮಳ ಮುಖ ಕೆಂಪಾಯಿತು. “ಹೋಗೊ... ಮುಠ್ಠಾಳ, ರಂಡೆ ಮಗನೆ!” ಎಂದು ಸಿಡುಕುತ್ತಾ ಒಳ ನಡೆದಳು ಆಕೆ. ಆಗ ಪಾಳು ಬಿದ್ದಹೊಲದಲ್ಲಿ ಕಾಡು ಮರದ ಬೀಜ ಬಿತ್ತು. ಮೊಳೆತು ಚಿಗುರಿತು. ಬೆಳೆಯಿತು. ಈಗ ಹಾಗಲ್ಲ. ಹೊಲ ಪಾಳು ಬಿದ್ದಿದ್ದಾದರೂ ಬೀಜ ಕಸಿ ಮಾವಿನದು! ಆದರೆ ಅದು ಕಸಿ ಮರದ ಬೀಜವಲ್ಲ ಎಂಬುದನ್ನು ಊರವರಿಗೆ ಮನದಟ್ಟು ಮಾಡಿಕೊಡಬೇಕಾಗಿದೆ. ಮಮ್ಮೂಟಿ ಕುಳಿತಲ್ಲಿಯೇ ಗಹಗಹಿಸಿ ನಕ್ಕನು. ಆತನ ತಲೆ ತುಂಬಾ ಹೊಗೆ ತುಂಬಿಕೊಂಡಂತಾಗಿತ್ತು. ಜೊಹರ ಆಗಲೆ ಊರಿಗೆ ಹೊರಟು ಹೋಗಿದ್ದಳು. ಮನೆಯವರೆಲ್ಲರೂ ಅವರವರ ಕೆಲಸದಲ್ಲಿ ಮುಳುಗಿದ್ದರು. “ಮಮ್ಮೂಟೀ, ಎಲ್ಲಿ ಸತ್ತೇ?” ಎಂಬ ಯಜಮಾನರ ಕರೆ ಕೇಳಿ ಆತ ಕುಳಿತಲ್ಲಿಂದ ಎದ್ದು ಚಾವಡಿಗೆ ನಡೆದನು. “ನಾಲ್ಕು ಬೊಂಡ ತೆಗೆದುಕೊಂಡು ಬಾ. ಇವರು ಹನೀಫನಿಗೆ ಹೆಣ್ಣು ಕೊಡುವವರು.” ಎನ್ನುತ್ತಾ “ಇವನು ಬಹಳ ವರ್ಷಗಳಿಂದ ನಮ್ಮ ಮನೆಯಲ್ಲಿದ್ದಾನೆ. ತುಂಬಾ ಪ್ರಾಮಾಣಿಕ. ಏನು ಕೆಲಸ ಹೇಳಿದರೂ ಮಾಡುತ್ತಾನೆ.!” ಎಂದು ಮಮ್ಮೂಟಿಯನ್ನು ಬಂದವರಿಗೆ ಪರಿಚಯಿಸಿದರು ಹಾಜ್ಯಾರರು. ಆ ರಾತ್ರಿ ಎಲ್ಲರೂ ಮಲಗಿದ ಬಳಿಕ ಮಮ್ಮೂಟಿ ಊಟದ ಕೋಣೆಗೆ ಹೋದನು. ಆಚುಮ್ಮ ಮಲಗಳು ಚಾಪೆ ಹಾಸುತ್ತಿದ್ದಳು. ಕಾದರ್ ಯಾವಾಗಲೊ ನಿದ್ರಿಸಿದ್ದನು. ಮಮ್ಮೂಟಿಯನ್ನು ಕೊಂಡೊಡನೆ ಆಚುಮ್ಮ, “ಏನೊ? ಪುನಃ ಬಂದೆಯಾ?” ಎಂದು ಒರಟಾಗಿ ಕೇಳಿದಳು. “ಅಲ್ಲ ಅಚುಮ್ಮಕ್ಕ, ಅದಲ್ಲ. ನಿಮ್ಮೊಡನೆ ಒಂದು ವಿಷಯ ಹೇಳಲು ಇಳಿತ 55 ಬಂದೆ. ಜೋಹರಕ್ಕನ ಮನೆಯ ಹುಡುಗಿ ಜುಲೇಖಾ ಗರ್ಭಿಣಿಯಂತೆ!” ಎಂದು ಪಿಸುಗುಟ್ಟಿದನು. “ಆಂ...” ಆಚುಮ್ಮಳಿಗೆ ತೆರೆದ ಬಾಯಿ ಮುಚ್ಚಲು ಬಹಳ ಹೊತ್ತೇ ಬೇಕಾಯಿತು. “ಸತ್ಯವಾ?” ಎನ್ನುತ್ತಿದ್ದಂತೆ ಆಕೆಯ ಮುಖದಲ್ಲಿ ಯಾವುದೊ ಭಾರವಿಳಿದ ತೃಪ್ತಿ ಮನೆ ಮಾಡಿತು. ಜಾರುವ ದಾರಿಯಲ್ಲಿ ಮುನ್ನಡೆದವಳು ತಾನೊಬ್ಬಳೇ ಅಲ್ಲ! ತನಗೆ ಸಹೋದ್ಯೋಗಿಗಳಿದ್ದಾರೆ! “ಸತ್ಯ ಅಷ್ಟೆ ಅಲ್ಲ ಆಚುಮ್ಮಕ್ಕ; ಇನ್ನೂ ಇದೆ. ಅದನ್ನು ಮಾಡಿದವರು ಯಾರೂಂತ ನನಗೆ ಗೊತ್ತು. ಆದರೆ ಅವರೀಗ ಅದನ್ನು ನನ್ನ ತಲೆಗೆ ಕಟ್ಟ ಹೊರಟಿದ್ದಾರೆ.!” ಆಚುಮ್ಮ ಸ್ತಂಭಿತಳಾಗಿ ಮಮ್ಮೂಟಿಯ ಮುಖವನ್ನೇ ಮಿಕಿ ಮಿಕಿ ನೋಡಿದಳು. ಬಳಿಕ, “ಓ... ಹೀಗೇನು? ಇದಕ್ಕೆ ತಾನೇ ನೀನು ಆಗಾಗ ಜೊಹರಳ ಮನೆಗೆ ಹೋಗುತ್ತಿದ್ದದ್ದು.?” ಎಂದು ನಗುತ್ತ ಕೇಳಿದಳು. “ನನ್ನನ್ನು ನಂಬು ಅಕ್ಕಾ. ಬೇಲಿ ಇಲ್ಲದ ಹೊಲ. ಯಾರೂ ಮೇಯಬಹುದೆಂದಾದಾಗ ನಾನೊಂದು ಬಾರಿ ಅವಳ ಬಳಿ ಹೋಗಿದ್ದೆ. ಅದಕ್ಕೂ ಮೊದಲೆ ಆಕೆ ಗರ್ಭಿಣಿಯಾಗಿದ್ದಳು. ಇದು ಸತ್ಯವಾದ ಮಾತು.” “ಹಾಗಾದರೆ ಇದು ಯಾರ ಕೆಲಸ?” “ಅದನ್ನು ನಾನು ಮುಂದೆ ಎಂದಾದರೂ ತಿಳಿಸುವೆ. ನಾನೀಗ ಬಂದದ್ದು ಅದಕ್ಕಲ್ಲ. ನನಗೆ ನೀವೊಂದು ಸಹಾಯ ಮಾಡುವಿರಾ?” “ನಾನು ನಿನಗಾವ ಸಹಾಯ ಮಾಡಬಲ್ಲೆ? ಆ ಗರ್ಭಕ್ಕೆ ನಾನು ಹೊಣೆ ಎನ್ನಬೇಕೆ?” ನಗುತ್ತಾ ಕೇಳಿದಳು ಆಚುಮ್ಮ. “ಅಕ್ಕಾ, ಹಾಗೆಲ್ಲ ತಮಾಷೆ ಮಾಡಬೇಡಿ. ನಾನು ಎಂತಹ ಸುಳಿಯಲ್ಲಿ ಸಿಕ್ಕಿ ಬಿದ್ದಿದ್ದೇನೆಂಬುದು ನಿಮಗೆ ತಿಳಿಯದು. ನೀವು ನನಗೆ ಒಂದಿಷ್ಟು ಹಣ ಕೊಡುವಿರಾ?” “ನೋಡಪ್ಪಾ, ಇನ್ನೇನು ಬೇಕಾದರೂ ಕೇಳು. ಆದರೆ ಹಣ ಮಾತ್ರ ಕೇಳ್ಬೇಡ.” “ಅಕ್ಕಾ, ದಯವಿಟ್ಟು ಹಾಗನ್ಬೇಡಿ. ಈಗ ನನಗೆ ಸಹಾಯ ಮಾಡಬಹುದಾದವರು ನೀವು ಮಾತ್ರ. ನನಗೆ ಒಂದು ನೂರು ರೂಪಾಯಿ ಕೊಡಿ. ನಾನು ಬದುಕಿದ್ದರೆ ನಿಮಗೆ ಈ ಹಣ ಹಿಂತಿರುಗಿಸುವೆ.” “ನೂರು ರೂಪಾಯಿ! ಅಷ್ಟು ಹಣ ನನ್ನಲ್ಲೆಲ್ಲಿದೆ? ಇಷ್ಟಕ್ಕೂ ನೂರು 56 ಸುಳಿ ರೂಪಾಯಿ ಯಾಕೆ? ವಧುವಿಗೆ ಬಟ್ಟೆ ತರಲಿಕ್ಕೇನು?” ವ್ಯಂಗ್ಯವಾಗಿ ಕೇಳಿದಳಾಕೆ. “ಹಾಗೇಂತ ಇಟ್ಕೊಳ್ಳಿ.” “ಅದಕ್ಕೆಲ್ಲ ಹಣ ಯಜಮಾನಿಯೇ ಕೊಡ್ತಾರೆ. ಅವರ ಹೊರೆಯನ್ನು ನೀನು ಹೊರುವುದಿಲ್ಲವಾ? ನೀನೇಕೆ ಖರ್ಚು ಮಾಡಬೇಕು.?” “ಅವರ ಹಣ ಬೇಡಕ್ಕಾ, ನೀವು ಕೊಡುವುದಾದರೆ ಕೊಡಿ. ಇಲ್ಲವಾದರೆ ನಾನು ಬಾವಿಗೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತೇನೆ.” ಎಂದನು ದೀನನಾಗಿ. “ಛೆ, ಛೆ, ಹಾಗೆಲ್ಲ ಮಾಡ್ಬೇಡಪ್ಪ, ನಾನು ಕೊಡ್ತೇನೆ. ಆದರೆ ನೀನದನ್ನು ಒಂದಾರು ತಿಂಗಳಲ್ಲಿ ನನಗೆ ಹಿಂತಿರುಗಿಸಬೇಕು.” “ಹೂಂ. ಆಗಲಿ.” ಮಮ್ಮೂಟಿ ತಲೆಯಾಡಿಸಿದನು. ಆಚುಮ್ಮ ಚಿಮಿಣಿ ದೀಪ ಹಿಡಿದುಕೊಂಡು ಅಡಿಗೆ ಕೋಣೆಯ ಅಟ್ಟ ಹತ್ತಿದಳು. ಮೂಲೆಯಲ್ಲಿದ್ದ ಕಬ್ಬಿಣದ ಪೆಟ್ಟಿಗೆ ತೆರೆದು ಹಳೆ ಬಟ್ಟೆಯ ಗಂಟು ಬಿಚ್ಚಿ ಆ ಮಂದ ಬೆಳಕಿನಲ್ಲಿ ಹಣ ಎಣಿಸಿ ಉಳಿದುದನ್ನು ಹಾಗೆಯೇ ಗಂಟು ಕಟ್ಟಿ ಬೀಗ ಹಾಕಿ ಕೆಳಗಿಳಿದು ಹಣವನ್ನು ಮಮ್ಮೂಟಿಯ ಕೈಯಲ್ಲಿಟ್ಟಳು. ಮರುದಿನ ಜೊಹರಾ ಮತ್ತು ಜುಲೇಕಾ ಬಂದಿಳಿದರು. ಜುಲೇಕಾ ಬಂದವಳೇ ಅಡಿಗೆ ಜೋಣೆಯ ಮೂಲೆ ಸೇರಿದಳು. ನಿಕಾಹ್ ಆಗುವವರೆಗೆ ಮಮ್ಮೂಟಿ ಹೆಂಗಸರ ಭಾಗಕ್ಕೆ ಬರಬಾರದೆಂದು ಜೊಹರಾ ತಾಕೀತು ಮಾಡಿದಳು. ಹುಡುಗಿಗೆ ಸೀರೆ, ಬಟ್ಟೆ, ಕಿವಿಗೆ ಚಿನ್ನದ ಬೆಂಡೋಲೆಯನ್ನೂ ಜೊಹರಾ ತಂದಿದ್ದಳು. ಮರುದಿನದ ಕಾರ್ಯಕ್ರಮವನ್ನು ಮಸೀದಿಯ ಮೌಲವಿಗಳಿಗೂ ತಿಳಿಸಿಯಾಯಿತು. ಯಜಮಾನರಿಗೆ ಯಜಮಾನಿಯೇ ತಿಳಿಸಿದ್ದಳು. “ಮಮ್ಮೂಟಿ ಆ ಹುಡುಗಿಯನ್ನು ನಿಖಾಹ್ ಮಾಡಿಕೊಳ್ಳುತ್ತಾನಂತೆ” ಎಂದು. ನೆರೆಕೆಯಲ್ಲೆಲ್ಲ ಸುದ್ದಿ ಹಬ್ಬಿತು. “ಮಮ್ಮೂಟಿ ಇನ್ನೊಂದು ಮದುವೆಯಾಗುತ್ತಾನಂತೆ!” “ಪಾಪ, ಅವನ ಹೆಂಡತಿ ತುಂಬಿದ ಗರ್ಭಿಣಿಯಂತೆ”; ಯಾರೊ ಉದ್ಗಾರವೆತ್ತಿದರು. “ಚೊಹರಳ ಹುಡುಗಿಗೆ ಬೇರೆ ಗಂಡು ಸಿಗುತ್ತಿರಲಿಲ್ಲವಾ?” “ಏನೊ ದೊಡ್ಡವರ ವಿಷಯ. ಏನಾಗಿದೆಯೊ ಯಾರಿಗೆ ಗೊತ್ತು?” ಬೇಕಾದಷ್ಟು ಮಾತುಗಳು ಗಾಳಿಯಲ್ಲಿ ತೇಲಿದುವು. ಮರುದಿನ ಬೆಳಿಗ್ಗೆ ಎಂದಿನಂತೆಯೇ ಆಚುಮ್ಮ ಗೊಣಗಿದಳು. “ಏಳು ಗಂಟೆಯಾಯಿತು. ಈ ಮಮ್ಮೂಟಿ ಅದೆಲ್ಲಿ ಸತ್ತನೊ. ಇನ್ನೂ ಹಾಲು ಕರೆದಿಲ್ಲ. ಜೊಹರಳ ಮಕ್ಕಳು ಈಗ ಎದ್ಬಿಡುತ್ತವೆ. ಜುಲೇಕಾ, ರೊಟ್ಟಿಗೆ ಬೇಗ ಅಕ್ಕಿ ರುಬ್ಬು.” ಇಳಿತ 57 “ಮಮ್ಮೂಟಿ ಇನ್ನು ಎದ್ದಿಲ್ಲವಾ?” ಎಂದು ಕೇಳುತ್ತಾ ಆಮಿನಾಬಿ ಹೊರ ಬಂದರು. “ನಿಖಾಹ್ ಆಗದೆ ಒಳ ಬರಬೇಡವೆಂದಿದ್ದೆನಲ್ಲ? ಅದಕ್ಕೆ ಚಾವಡಿಯಲ್ಲೇ ಕುಳಿತಿದ್ದಾನೇನೊ.” ಜೊಹರಾ ನುಡಿದಳು. “ಹೋಗಲಿ. ಈ ದಿನ ನೀನೇ ಹಾಲು ಕರೆದು ಬಿಡು” ಆಮಿನಾಬಿ ನುಡಿದಳು. “ಹೂಂ. ಬರಲಿ ಅವನು. ಚೆನ್ನಾಗಿ ಬುದ್ಧಿ ಕಲಿಸುತ್ತೇನೆ.” ಎಂದು ಸಿಟ್ಟಿನಿಂದ ನುಡಿದ ಆಚುಮ್ಮ ಕೊಟ್ಟಿಗೆಗೆ ನಡೆದಳು. ಎಲ್ಲರೂ ತಮ್ಮ ಕೆಲಸಗಳಲ್ಲಿ ಮಗ್ನರಾದರು. ಎಲ್ಲರ ಚಹಾ. ತಿಂಡಿಯದರೂ ಮಮ್ಮೂಟಿಯ ಸುಳಿವಿಲ್ಲ. “ಏ ಮಮ್ಮೂಟೀ, ಎಲ್ಲಿ ಸತ್ತೇ?” ಎಂಬ ಯಜಮಾನರ ದನಿ ಕೇಳಿ ಎಲ್ಲರೂ ಮಮ್ಮೂಟಿಯನ್ನು ಹುಡುಕತೊಡಗಿದರು. ಕಾದರ್ ಅಂಗಡಿ ಬೀದಿಯಲ್ಲೂ ನೋಡಿಕೊಂಡು ಬಂದನು. “ಬಹುಶಃ ಊರಿಗೆ ಹೋಗಿದ್ದಾನೊ ಏನೊ. ತಾಯಿಗೆ ಒಂದು ಮಾತು ತಿಳಿಸಬೇಡವೇ?” ಜೊಹರಾ ನುಡಿದಳು. “ಹೇಳದೆ ಕೇಳದೆ ಊರಿಗೆ ಹೋಗುವವನಲ್ಲವಲ್ಲ ಅವನು?” ಅಮಿನಾಬಿ ಆತಂಕದಿಂದ ನುಡಿದಳು. “ಮಧ್ಯಾಹ್ನದ ಹೊತ್ತಿಗೆ ಬಂದಾನು. ಆದರೂ ಅವನ ಊರಿಗೆ ಯಾರನ್ನಾದರೂ ಕಳುಹಿಸುವುದೊಳ್ಳೆಯದು.” ಜೊಹರಾ ಕೂಡಾ ಉತ್ಕಂಠೆಯಿಂದ ನುಡಿದಳು. ನೆರೆಮನೆಯ ಹುಡುಗನೊಬ್ಬನನ್ನು ಮಮ್ಮೂಟಿಯ ಊರಿಗೆ ಕಳುಹಿಸಿಲಾಯಿತು. ಜೊಹರಾ ಕಾತರದಿಂದ ಕಾಯತೊಡಗಿದಳು. ಮಮ್ಮೂಟಿಯ ತಾಯಿ ಮತ್ತು ಹೆಂಡತಿಗೆ ವಿಷಯ ತಿಳಿದು ಇನ್ನೇನು ಹಗರಣವಾಗುತ್ತದೊ ಎಂದು ಆಕೆಯ ಮನ ಗಲಿಬಿಲಿಗೊಂಡಿತ್ತು. ಮಧ್ಯಾಹ್ನ ಕಳೆದು ಸಂಜೆಯಾದರೂ ಮಮ್ಮೂಟಿಯ ಸುಳಿವಿಲ್ಲ. ಅವನ ಊರಿಗೆ ಹೋದ ಹುಡುಗನು ಹಿಂತಿರುಗಿದನು., ಮಗನನ್ನು ಹುಡುಕಿಕೊಂಡು ಬಂದವನ ಜೊತೆಯಲ್ಲಿ ಉಮ್ಮಾಲಿಯೂ ಓಡಿ ಬಂದಳು. ಬಂದವಳೇ, “ಏನಾಯಿತು ನನ್ನ ಮಗನಿಗೆ? ಎಲ್ಲಿ ಹೋದ ಅವನು?” ಎನ್ನುತ್ತಾ ಆಮಿನಾಬಿಯ ಬಳಿ ಕುಸಿದು ಕುಳಿತು ಅಳತೊಡಗಿದಳು. ಅಲ್ಲೇ ಇದ್ದ ಅಜ್ಜಿ ಧ್ವನಿ ಎತ್ತಿ, “ಏನಾಗುತ್ತದೆ ನಿನ್ನ ಮಗನಿಗೆ? ಊರಲ್ಲಿರೊ ಹೆಂಗಸರಿಗೆಲ್ಲ ಹೊಟ್ಟೆ ಉಬ್ಬಿಸಿ ಈಗ ಕುತ್ತಿಗೆಗೆ ಬಂದಾಗ ತಲೆ ತಪ್ಪಿಸಿಕೊಂಡ. ಜೊಹರಳ ಕೆಲಸದ ಹುಡುಗಿಯನ್ನು ಕೆಡಿಸಿದ. “ನೀನೇ ನಿಖಾಹ್ ಆಗು” ಎಂದಾಗ ಹೇಳದೆ ಕೇಳದೆ ಪರಾರಿಯಾಗಿದ್ದಾನೆ. ಹರಾಮ ಖೋರ! 58 ಸುಳಿ ನಿಮ್ಮಂತಹವರಿಗೆ ಇಷ್ಟು ದಿನ ಊಟ, ಬಟ್ಟೆ ಕೊಟ್ಟು ಸಹಕರಿಸಿದ್ದಕ್ಕೆ ಈಗ ಈ ರೀತಿ ಪ್ರತ್ಯುಪಕಾರ ಮಾಡಿದಿರಲ್ಲ? ನಾಳೇನೇ ನನ್ನ ಮಗನ ಮನೆಯಿಂದ ಹೊರನಡೆಯಿರಿ. ಇಲ್ಲವಾದರೆ ನಮ್ಮ ಜನ ಬಂದು ಮನೆ ಖಾಲಿ ಮಾಡಿಸ್ತಾರೆ!” ಎಂದು ಬಡಬಡಿಸಿದರು. “ಬೇಡ ಅಜ್ಜೀ, ಅವನು ಮಾಡಿದ ತಪ್ಪಿಗೆ ಹೆಂಡತಿ ಮತ್ತು ತಾಯಿ ಯಾಕೆ ಶಿಕ್ಷೆ ಅನುಭವಿಸಬೇಕು.?” ಜೊಹರಾ ಅಜ್ಜಿಯನ್ನು ಸಂತೈಸಲೆತ್ನಿಸಿದಳು. “ಉಹುಂ. ಇಲ್ಲ, ಅದಾಗದು, ಇನ್ನು ಆ ಮನೆಯಲ್ಲಿ ಅವರು ಇರಬಾರದು. ಎಂಟು ದಿವಸ ಸಮಯ ಕೊಡ್ತೇನೆ. ಅಷ್ಪರೊಳಗೆ ಮನೆ ಖಾಲಿ ಮಾಡಬೇಕು.” ಅಜ್ಜಿಯ ಆಜ್ಞೆ ಎಂದರೆ ಆಜ್ಞೆಯೇ. ಅದನ್ನು ಯಾರೂ ಮೀರುವಂತೆಯೇ ಇಲ್ಲ. ಉಮ್ಮಾಲಿ ಅಜ್ಜಿಯ ಕಾಲ ಬಳಿ ಕುಸಿದಳು. “ಉಮ್ಮಾ, ಹಾಗೆ ಮಾಡ್ಬೇಡಿ. ನನ್ನ ಸೊಸೆ ತುಂಬಿದ ಗರ್ಭಿಣಿ. ಅವಳ ಹೆರಿಗೆಯಾದ್ಮೆಲೆ ಎಲ್ಲಾದರೂ ಮನೆ ಹುಡುಕಿ ಹೊಗ್ತೇವೆ.” ಎಂದು ಕಣ್ಣೀರು ಸುರಿಸುತ್ತಾ, “ಈ ಮಗನಿಂದಾಗಿ ನನಗೆ ನೆಲೆ ಇಲ್ಲವಾಯಿತು. ಇವನ ಮನೆ ಹಾಳಾಗ! ಇವನು ಸತ್ತುಮಣ್ಣು ತಿಂದು ಹೋಗಲಿ.” ಎಂದು ಶಪಿಸುತ್ತಾ ನೆಲಕ್ಕೆ ಕೈ ಬಡಿದಳು. “ಇಲ್ಲಿಂದ ಹೊರಟು ಹೋಗ್ತೀಯೊ ಇಲ್ಲಾ ಒದೆ ಬೇಕೊ” ಅಜ್ಜಿ ಗರ್ಜಿಸಿದರು. ಉಮ್ಮಾಲಿ ಎದ್ದು ಕಣ್ಣೊರೆಸಿಕೊಂಡಳು. ಆಕೆಯ ಮುಖದ ದೈನ್ಯತೆ ಮಾಯವಾಗಿ ಕಠೋರತೆ ತಲೆ ಹಾಕಿತು. “ಮನುಷ್ಯರ ಹತ್ತಿರ ಬೇಡಬಹುದು. ರಾಕ್ಷಸರ ಹತ್ತಿರ ಬೇಡಿದರೆ ಬೀಳುವುದು ಒದೆಯೇ. ಇಷ್ಟು ವರ್ಷ ನನ್ನ ಮಗ ನಿಮ್ಮ ಸೇವೆ ಮಾಡಿದ್ದಕ್ಕೆ ಒಳ್ಳೆ ಕೂಲಿಯನ್ನೇ ಕೊಟ್ಟಿರಿ. ಹೂಂ. ಹೋಗ್ತೇನೆ” ಎನ್ನುತ್ತಾ ಹೊರಟವಳು ಅಂಗಳದಲ್ಲಿ ನಿಂತು ಎಲ್ಲರಿಗೂ ಕೇಳಿಸುವಂತೆ ಮತ್ತೂ ಒಂದು ಮಾತಂದಳು. “ನಿಮ್ಮಗಳ ಮನೆಯಲ್ಲಿ ಕೆಲಸದ ಹೆಂಗಸರು ಗರ್ಭಿಣಿಯರಾಗುವುದು ಹೊಸ ವಿಷಯವೇನೂ ಅಲ್ಲ. ಆದರೆ ಅದಕ್ಕೆ ಕಾರಣ ನಿಮ್ಮ ಮಗನೊ ಅಳಿಯನೊ ಆಗಿರಬಹುದಷ್ಟೆ ಹೊರತು ನನ್ನ ಮಗನಂತೂ ಖಂಡಿತ ಅಲ್ಲ!” ಎಂದು ತನ್ನ ದುಃಖ, ನೋವು, ಅಸಹಾಯಕತೆಯನ್ನೆಲ್ಲ ಈ ಒಂದು ವಾಕ್ಯದಲ್ಲಿ ಹೊರ ಹಾಕಿ ಮುಂದಡಿ ಇಟ್ಟಳು. ಎಲ್ಲರೂ ಒಂದು ಕ್ಷಣ ತಬ್ಬಿಬ್ಬಾದರು. ಬಳಿಕ ಎಲ್ಲರೂ ಒಂದೊಂದು ದಿಕ್ಕಿಗೆ ನಡೆದರು. ಅಜ್ಜಿ ನಮಾಜಿಗೆ, ಅಮಿನಾಬಿ ಅಡಿಗೆ ಮನೆಗೆ, ಜೊಹರಾ ಇಳಿತ 59 ಮಾಳಿಗೆಯ ತನ್ನ ಕೋಣೆಗೆ, ಉಮ್ಮಾಲಿ ಏನೇನೊ ಹೇಳಿಯೇ ಬಿಟ್ಟಳಲ್ಲ.? ಜೊಹರಳ ಕಣ್ಣೀರು ದಿಂಬನ್ನು ತೋಯಿಸಿತು. ಆಚುಮ್ಮ ಅಡಿಗೆ ಕೋಣೆಯಲ್ಲಿ ಚಿಂತಾಮಗ್ನಳಾಗಿ ಕುಳಿತಳು. ತಾನೇಕೆ ಈ ಗಂಡಸರ ಬಲೆಯಲ್ಲಿ ಪುನಃ ಪುನಃ ಬೀಳುತ್ತಿದ್ದೇನೆ? ಬಹಳ ಕಷ್ಟಪಟ್ಟು ಕಾಸಿಗೆ ಕಾಸು ಕೂಡಿ ಹಾಕಿದ ಹಣವನ್ನು ಈ ರಂಡೆ ಮಗ ಕೂಡಾ ಈ ರೀತಿ ಹಾರಿಸಿಕೊಂಡು ಹೋದನಲ್ಲ? ಇನ್ನೆಂದಾದರೂ ಅದು ತಿರುಗಿ ಬಂದೀತೆ? ಮಮ್ಮೂಟಿ ಕೂಡಾ ತನಗೆ ಈ ರೀತಿ ಟೋಪಿ ಹಾಕಿದನಲ್ಲ? ಛಿ...! ಆಚುಮ್ಮ ಹಿತ್ತಿಲ ಕಡೆಯ ಮೋಟು ಗೊಡೆಯವರೆಗೆ ಉಮ್ಮಾಲಿಯನ್ನು ಹಿಂಬಾಲಿಸಿದಳು. ಬಳಿಕ ಮೆಲ್ಲಗೆ, “ಅಕ್ಕಾ, ನಿಮ್ಮ ಮಗ ನನ್ನ ಕೈಯಿಂದ ನೂರು ರೂಪಾಯಿ ಸಾಲ ತೆಗೆದುಕೊಂಡಿದ್ದಾನೆ. ನೀವು ಆದಷ್ಟು ಬೇಗ ಅದನ್ನು ತಂದು ಕೊಟ್ಟು ಬಿಡಿ.” ಎಂದು ಪಿಸುಗುಟ್ಟಿದಳು. ಉಮ್ಮಾಲಿ ಸ್ಫೋಟಿಸಿದಳು. “ಏನು? ಏನಂದೆ? ನನ್ನನ್ನು ಕೇಳಿ ನನ್ನ ಮಗನಿಗೆ ಸಾಲ ಕೊಟ್ಟೆಯಾ? ನಿನ್ನದೂ ಪಾಲಿದೆಯಾ ಇದರಲ್ಲಿ? ಇನ್ನೊಮ್ಮೆ ಈ ಮಾತೆತ್ತಿದರೆ ನಿನ್ನ ಕಳ್ಳ ವ್ಯವಹಾರವನ್ನೆಲ್ಲ ಯಜಮಾನಿಗೆ ತಿಳಿಸುತ್ತೇನೆ.” ಎಂದು ಹಲ್ಲು ಕಚ್ಚಿ ನುಡಿದು ಉಕ್ಕಿ ಬಂದು ಕಣ್ಣೀರನ್ನು ಸೆರಗಿನಿಂದ ಒರೆಸಿಕೊಳ್ಳುತ್ತಾ ಮುಂದಡಿ ಇಟ್ಟು ಮೋಟು ಗೋಡೆ ದಾಟಿ ಓಣಿಯಲ್ಲಿ ಮರೆಯಾದಳು. ತನ್ನ ಕಳ್ಳ ವ್ಯವಹಾರದ ವಿಷಯ ಕಿವಿಗೆ ಬಿದ್ದೊಡನೆ ಆಚುಮ್ಮ ಪೆಟ್ಟು ತಿಂದ ನಾಯಿ ಬಾಲ ಮಡಚಿ ಓಡುವಂತೆ ತಲೆ ತಗ್ಗಿಸಿ ಅವಸರದಿಂದ ಮನೆ ಕಡೆ ಹೆಜ್ಜೆ ಹಕಿದಳು. ಒಲೆಯ ಮುಂದೆ ಕುಳಿತು ಕಳೆದ ಹೋದ ನೂರು ರೂಪಾಯಿಗಾಗಿ ಕಣ್ಣೀರು ಸುರಿಸುತ್ತಾ. “ಇವನ ಮನೆ ಹಾಳಾಗ. ಇವನನ್ನು ನಾಗರ ಹಾವು ಕಡಿಯಲಿ! ಇವನು ಅನ್ನ ನೀರಿಲ್ಲದೆ ನರಳಿ ಸತ್ತು ಮಣ್ಣು ತಿನ್ನಲಿ!” ಎಂದು ಶಪಿಸುತ್ತಾ ನೆಲಕ್ಕೆ ಕೈ ಬಡಿದು ಕಣ್ಣೊರೆಸಿಕೊಂಡಳು. ಜುಲೇಕಳ ಮುಖದಲ್ಲಿ ಮಾತ್ರ ನಿನ್ನೆಯ ಆತಂಕ ಮರೆಯಾಗಿ ಅಲ್ಲಿ ಕೊಂಚ ನೆಮ್ಮದಿ ಮೂಡಿದಂತೆ ಕಾಣುತ್ತಿತ್ತು. * * * * * ಉಮ್ಮಾಲಿ ಮನೆಗೆ ಹಿಂತಿರುಗಿದವಳೇ ಸೊಸೆಯ ಮೇಲೆ ಹಾರಾಡತೊಡಗಿದಳು. “ಗಂಡ ಮನೆಗೆ ಬಂದೊಡನೆ ಜಗಳ ಸುರು ಮಾಡಿ ಅವನಿಗೆ ಬೇಸರ ಬರಿಸಿದರೆ ಅವನು ತಾನೇ ಏನು ಮಾಡಬೇಕು? ಇನ್ನೆಲ್ಲಿಯೊ ಸುಖವನ್ನರಸಿದ. ಅವಳಿಗೆ ಹೊಟ್ಟೆ ಬಂದಾಗ ಊರು ಬಿಟ್ಟು, ಓಡಿದ ಅಂತ 60 ಸುಳಿ ಕಾಣ್ತದೆ. ನಿನಗೆ ಬುದ್ಧಿ ಕಲಿಸುವುದಕ್ಕಾಗಿಯೆ ಅವನು ಹೀಗೆ ಮಾಡಿದ್ದಾನೆ!” “ಆಂ... ಊರು ಬಿಟ್ಟು ಓಡಿದರೇ?” ಆಘಾತಗೊಂಡು ಕೇಳಿದಳು ರುಖ್ಯಾಬಿ. “ಹೂಂ. ಊರಲೆಲ್ಲಿಯೂ ಇಲ್ಲ. ಇನ್ನು ಹುಡುಕುವುದೆಲ್ಲಿ?” ಎನ್ನುತ್ತಾ ಎಲ್ಲ ಹಗರಣವನ್ನೂ ಸೊಸೆಯ ಮುಂದೆ ಬಿಚ್ಚಿಟ್ಟಳು. ಕೊನೆಗೆ, “ಇವನಿಂದಾಗಿ ತಲೆಯ ಮೇಲಿನ ಈ ಮಾಡೂ ಇಲ್ಲವಾಯಿತು. ಎಂಟು ದಿನಗಳೊಳಗೆ ಮನೆ ಬಿಡಬೇಕೆಂದು ಯಜಮಾನಿಯ ಅಪ್ಪಣೆಯಾಗಿದೆ.” ಎಂದು ನಿಟ್ಟುರಿಸಿಟ್ಟಳು. ರುಖ್ಯಾಬಿ ಕೋಣೆಗೆ ಹೋಗಿ ಅಳುತ್ತಾ ಮಂಚದ ಮೇಲೆ ಬಿದ್ದುಕೊಂಡಳು. ತನ್ನ ಮತ್ತು ಮಕ್ಕಳ ಭವಿಷ್ಯವೇನು? ತನ್ನನ್ನು ಈ ಸ್ಥಿತಿಯಲ್ಲಿ ಬಿಟ್ಟು ಪರಾರಿಯಾದ ಆ ಗಂಡನಾದರೂ ಎಂತಹ ಮನುಷ್ಯ? ತನ್ನ ಗಂಡ ಕಂಡ ಕಂಡ ಹೆಣ್ಣುಗಳ ಸಹವಾಸ ಮಾಡುತ್ತಿದ್ದರೇ? ಛಿ, ಗಂಡಸರ ಈ ನಾಯಿ ಬುದ್ಧಿಗೆ ಬೆಂಕಿ ಹಾಕ! ಹಾಗೂ ಹೀಗೂ ಮತ್ತೂ ಒಂದು ತಿಂಗಳು ಕಳೆಯಿತು. ಆಮಿನಾಬಿಯ ಕಡೆಯ ಆಳು ಎರಡು ಬಾರಿ ಬಂದು, “ಮನೆ ಬಿಡಿ.” ಎಂದು ಎಚ್ಚರಿಸಿ ಹೊಗಿದ್ದನು. ಉಮ್ಮಾಲಿ ಮನೆಗಾಗಿ ಅಲ್ಲಿ ಇಲ್ಲಿ ವಿಚಾರಿಸುತ್ತಿದ್ದಳು. ಸೊಸೆಯ ಹೆರಿಗೆಯ ದಿನ ಸಮೀಪಿಸುತ್ತಿತ್ತು. ಆ ದಿನ ಅಲ್ಲಿ ಇಲ್ಲಿ ತಿರುಗಿದ ಉಮ್ಮಾಲಿ ಸಾಯಂಕಾಲದ ಹೊತ್ತಿಗೆ ಮನೆಗೆ ಬಂದು “ಉಸ್ಸಪ್ಪಾ” ಎಂದು ಕುಳಿತಳು. ಪಶ್ಚಿಮ ಬಾನಿನಲ್ಲಾಗಲೇ ಕರಿ ಮೋಡಗಳು ದಟ್ಟೈಸತೊಡಗಿದ್ದುವು. ಒಂದೆರಡು ದಿನಗಳಲ್ಲಿಯೇ ಮುಂಗಾರು ಮಳೆ ಸುರಿಯಲಿತ್ತು. “ಒಂದು ಲೋಟ ಚಹ ಮಾಡಿ ಕೊಡು.” ಸೊಸೆಯೊಡನಂದಳು. “ಚಹಾ ಮಾಡಲು ಸಕ್ಕರೆ ಇಲ್ಲ. ಗಂಜಿಯ ತಿಳಿ ಇದೆ. ತಂದು ಕೊಡಲೇ?” ರುಖ್ಯಾಬಿ ಕೊಂಚ ಮೆತ್ತಗಾಗಿಯೇ ಕೇಳಿದಳು. ಉಮ್ಮಾಲಿ ಸೊಸೆಯ ಮುಖ ನೋಡಿ ನಿಟ್ಟುಸಿರು ಬಿಡುತ್ತಾ “ಹೂಂ” ಎಂದಳು. ಸಂಸಾರದ ಭಾರದಿಂದ ಜರ್ಜರಿತರಾದ ಅತ್ತೆ ಸೊಸೆಯರು ಸದ್ಯಕ್ಕಂತೂ ರಾಜಿ ಮಾಡಿಕೊಂಡಂತ್ತಿತ್ತು. “ಮನೆ ಸಿಕ್ಕಿತೇ?” ತಿಳಿಯ ಲೋಟವನ್ನು ಅತ್ತೆಯ ಕೈಯಲ್ಲಿಡುತ್ತಾ ಕೇಳಿದಳು ರುಖಿಯಾಬಿ. “ಮನೆಯೇನೊ ಸಿಕ್ಕಿದೆ. ಆದರೆ ಒಂದು ಶರ್ತವಿದೆ. ನಾವು ಆ ಧನಿಯವರ ಮನೆಗೆ ಆಗಾಗ ಹೋಗಿ ಏನಾದರೂ ಕೆಲಸ ಮಾಡಬೇಕಂತೆ.” “ಏನು ಕೆಲಸ?” ಇಳಿತ 61 “ಭತ್ತ ಕುಟ್ಟುವುದು, ರೊಟ್ಟಿ ಮಾಡುವುದು, ಬಟ್ಟೆ ಒಗೆಯುವುದು...” “ನಾನು ಈ ಚಿಕ್ಕ ಮಕ್ಕಳನ್ನೆತ್ತಿಕೊಂಡು ಹೇಗೆ ಕೆಲಸಕ್ಕೆ ಹೋಗುವುದು? ಅದೆಲ್ಲ ನನ್ನಿಂದಾಗದು” ರುಖ್ಯಾಬಿಯ ಧ್ವನಿಯಲ್ಲಿ ಕೋಪ ಇಣುಕಿತು. “ಹಾಗಾದರೆ ಇರು ಇಲ್ಲಿಯೇ. ಹಾಜ್ಯಾರರ ಆಳು ಬಂದು ಒದ್ದು ಹೊರ ಹಾಕಲಿ. ನಾನಂತೂ ಅಲ್ಲಿ ಒಪ್ಪಿಕೊಂಡೆ ಬಂದಿದ್ದೇನೆ.'' ಒರಟಾಗಿ ನುಡಿದಳು. ಉಮ್ಮಾಲಿ. “ನಿಮ್ಮ ಮಗ ನಮ್ಮನ್ನು ಈ ಸ್ಥಿತಿಗೆ ತಂದಿಟ್ಟರಲ್ಲಾ?” ಅಳುತ್ತಾ ಆಕೆ ಒಳನಡೆದಳು. ಹೊಟ್ಟೆ ಮತ್ತಷ್ಟು ಭಾರವಾದಂತೆ ತೋರಿತು. “ನೀನೇನನ್ನುತ್ತೀ? ಯಾರ್ಯಾರ ಎಂಜಲನ್ನು ನನ್ನ ಮಗನ ತಲೆಗೆ ಕಟ್ಟಲು ನೋಡಿದರೆ ಅವನಾದರೂ ಏನು ಮಾಡಬೇಕು.?” “ಯಾರ್ಯಾರ ಎಂಜಲೇಕೆ? ನಿಮ್ಮ ಮಗನೆ ಮಾಡಿರ್ಬೇಕು!” ಖಾರವಾಗಿ ನುಡಿದಳಾಕೆ. “ರುಖಿಯಾ, ಬಾಯ್ಮುಚ್ಚಿ ಕುಳಿತುಕೊ. ನಾನು ಹೇಳಿದಂತೆ ಕೇಳುವೆಯಾದರೆ ನನ್ನೊಡನಿರು. ಇಲ್ಲವಾದರೆ ನಿನ್ನಪ್ಪನ ಮನೆಗೆ ಹೋಗು” ಬಾಣಗಳು ಹಾರಡತೊಡಗಿದುವು. “ನನ್ನಪ್ಪನ ಮನೆಗೇಕೆ ಹೋಗ್ಬೇಕು? ನಿಮ್ಮ ಮಗ ಮಾಡಿದ್ದನ್ನು ನೀವೇ ಅನುಭವಿಸಿ!” “ನಿನ್ನ ಹಣೆ ಬರಹವೇ ಅಂತಹುದು. ಅದಕ್ಕೇ ನನ್ನ ಮಗ ಊರು ಬಿಟ್ಟು ಹೋಗುವ ಹಾಗಾಯಿತು! ಹುಂ. ಈಗ ಬದರ್ ಯುದ್ಧ ಸುರು ಮಾಡಬೇಡ. ಮಧ್ಯಾಹ್ನದ ಅನ್ನ ಉಂಟಾ ಹೇಗೆ? ಸಾರೇನಾದರೂ ಉಂಟಾ?” ಒಳಗಿನ ಕುದಿಯನ್ನು ತಣ್ಣಗಾಗಿಸುತ್ತಾ ಕೇಳಿದಳಾಕೆ. “ಸ್ವಲ್ಪ ಅನ್ನ ಇದೆ. ನಿನ್ನೆಯ ಸಾರೂ ಇದೆ.” ಸೊಸೆಯೂ ಪರಿಸ್ಥಿತಿಗೆ ಹೊಂದಿಕೊಂಡು ನುಡಿದಳು. ಹೆಚ್ಚೆಂದರೆ ಒಂದು ವಾರಕ್ಕಾಗುವಷ್ಟು ಅಕ್ಕಿ ಇನ್ನಿತರ ಪದಾರ್ಥಗಳಿದ್ದುವು. ಸಕ್ಕರೆ ಆಗಲೇ ಖಾಲಿಯಾಗಿತ್ತು. ನಾಳೆ ಅಂಗಡಿಯಿಂದ ಸಾಲವನ್ನಾದರೂ ತರಬೇಕು. ಸಾಲ ತೀರಿಸುವ ಬಗೆ ಹೇಗೆ? ಮರುದಿನ ಬೆಳಿಗ್ಗೆ ಎದ್ದವಳೇ ಉಮ್ಮಾಲಿ ಗಂಟು ಮೂಟೆ ಕಟ್ಟತೊಡಗಿದಳು. ಮನೆ ಎಂದ ಮೇಲೆ ಸಾಮಾನುಗಳು ಇಲ್ಲದಿರುತ್ತವೆಯೇ? ತುಂಬಿದ ಗರ್ಭಿಣಿ ರುಖ್ಯಾಬಿ ಏದುಸಿರು ಬಿಡುತ್ತಾ ಆಗಾಗ ಕುಳಿತುಕೊಳ್ಳುತ್ತಾ ತನ್ನ ಮತ್ತು ಮಕ್ಕಳ 62 ಸುಳಿ ಸಾಮಾನುಗಳನ್ನು ತನ್ನ ಪುಟ್ಟ ಪೆಟ್ಟಿಗೆಗೆ ತುಂಬಿಸತೊಡಗಿದಳು. ಗಂಡನ ಒಂದೆರಡು ಹಳೆಯ ಬಟ್ಟೆಗಳನ್ನು ಒಮ್ಮೆ ಕೋಪದಿಂದ ಅತ್ತ ಎಸೆದರೂ ಪುನಃ ಅವುಗಳನ್ನೆತ್ತಿಕೊಂಡು ಪೆಟ್ಟಿಗೆಯ ತಳಭಾಗದಲ್ಲಿ ಭದ್ರವಾಗಿರಿಸಿದಳು. ಉಮ್ಮಾಲಿ ಗುರುತಿನ ಹುಡುಗನೊಬ್ಬನನ್ನು ಕರೆದುಕೊಂಡು ಬಂದು ರುಖಿಯಾಬಿಯ ಪೆಟ್ಟಿಗೆ ಮತ್ತು ಒಂದೆರಡು ಗೋಣಿ ಚೀಲಗಳನ್ನೂ ಚಾಪೆಯ ಸುರುಳಿಯೊಂದನ್ನೂ ಆತನ ಮೇಲೆ ಹೊರಿಸಿದಳು. ದೊಡ್ಡದೊಂದು ಚೀಲ ಮತ್ತು ಬಟ್ಟೆಯ ಗಂಟನ್ನು ತಾನೇ ಎತ್ತಿಕೊಂಡಳು. ರುಖಿಯಾ ಜಾಫರನನ್ನೆತ್ತಿಕೊಂಡು ಸೊಂಟದ ಮೇಲಿಟ್ಟುಕೊಂಡು ಇನ್ನೊಂದು ಕೈಯಲ್ಲಿ ತನ್ನದೊಂದು ಹಳೆ ಬಟ್ಟೆಯ ಗಂಟನ್ನೂ ಎತ್ತಿಕೊಂಡು ಹೊರಟಳು. ಈಗಲೊ ಆಗಲೊ ಹೆರಿಗೆಯಾಗುವಂತಿದ್ದ ಸೊಸೆ ಈ ರೀತಿ ಹೊರಟದ್ದನ್ನು ಕಂಡ ಉಮ್ಮಾಲಿಯ ಕಣ್ಣಲ್ಲಿ ನೀರು ಚಿಮ್ಮಿತು. ಆಕೆ ಹಾಜಿರಾಳ ಕೈ ಹಿಡಿದುಕೊಂಡು, “ಬಾ, ಮಗೂ, ಹೋಗೋಣ.” ಎನ್ನುತ್ತಾ ಮುಂದಡಿ ಇಟ್ಟಳು. ಹಳೆಯದಾದ ಎರಡು ಮಂಚಗಳನ್ನು ಮನೆಯೊಳಗೇ ಬಿಟ್ಟಳು. ಆಡುಗಳನ್ನೂ, ಕೋಳಿಗಳನ್ನೂ ಕೊಂಡೊಯ್ಯಲು ಇನ್ನೊಮ್ಮೆ ಬಂದರಾಯಿತೆಂದುಕೊಂಡಳು. ಅರ್ಧ ದಾರಿ ನಡೆದಿರಬಹುದೇನೊ. ರುಖಿಯಾಗೆ ಸೊಂಟದ ಹಿಂಭಾಗದಿಂದ ಛಳಕು ಬಂದಂತಾಗಿ ಅಲ್ಲೇ ಕ್ಷಣ ಕಾಲ ನಿಂತಳು. ಮಗುವನ್ನು ಸೊಂಟದಿಂದ ಕೆಳಗಿಳಿಸಿ “ಬಾ, ಮಗೂ, ನನ್ನ ಕೈ ಹಿಡಿದು ನಡೆ.” ಎಂದಳು. ಎರಡು ವರ್ಷದ ಆ ಹುಡುಗ ಒಂದು ಹೆಜ್ಜೆಯನ್ನಾದರೂ ಎತ್ತಿಟ್ಟರೆ ತಾನೇ? ಅವನು ತಾಯಿಯ ಎರಡೂ ಕಾಲುಗಳನ್ನು ತನ್ನ ಕೈಗಳಿಂದ ಬಳಸಿಕೊಂಡು “ಊಂ. ಊಂ.” ಎಂದು ಅಳತೊಡಗಿದನು. ರುಖಿಯಾ ನೋವಿನಿಂದ ನಡುವನ್ನು ಕೊಂಚ ಬಗ್ಗಿಸಿಕೊಂಡು ಮುಖ ಕಿವಿಚಿಕೊಂಡಳು. ಉಮ್ಮಾಲಿ ಮಗುವಿನ ಅಳು ಕೇಳಿ ಹಿಂತಿರುಗಿ ನೋಡಿದಳು. ಸೊಸೆಯ ಮುಖ ಕಂಡವಳೇ ಗಾಬರಿಯಿಂದ, “ಏನಮ್ಮಾ, ನೋವು ಶುರವಾಗಿದೆಯೇ?” ಎಂದು ಕೇಳಿದಳು. “ಹೇಗಾದರೂ ಮನೆ ಸೇರಿದ್ದರೆ ಸಾಕಾಗಿತ್ತಲ್ಲ? ಇನ್ನು ಅರ್ಧ ಮೈಲಿಯದರೂ ಇದೆ. ಯಾ ಅಲ್ಲಾ, ನಾನೇನು ಮಾಡಲಿ?” ಎಂದು ದಿಗ್ಭ್ರಾಂತಳಾಗಿ ನಿಂತಲ್ಲೇ ನಿಂತು ಬಿಟ್ಟಳು. “ಏನೂ ಆಗಿಲ್ಲ ಉಮ್ಮಾ, ನಡೆಯಿರಿ ಹೋಗೋಣ.” ರುಖಿಯಾಬಿ ಮಗುವನ್ನೆತ್ತಿಕೊಂಡು ಸೊಂಟದಲ್ಲಿಟ್ಟು ನಡೆಯಲು ಪ್ರಯತ್ನಿಸಿದಳು. ಆದರೆ ಒಂದು ಹೆಜ್ಜೆ ಕೂಡಾ ಎತ್ತಿಡಲಾಗಲಿಲ್ಲ. ಸೊಂಟದಲ್ಲಿ ಮತ್ತೊಮ್ಮೆ ನೋವು ಇಳಿತ 63 ಕಾಣಿಸಿತು. “ಉಮ್ಮಾ” ನರಳಿದಳು ರುಖಿಯಾ. “ಇವನನ್ನು ನೀವು ಎತ್ತಿಕೊಳ್ಳಿ. ಬಟ್ಟೆಯ ಗಂಟು ಇಲ್ಲಿ ಕೊಡಿ.” ಎನ್ನುತ್ತಾ ಮಗನನ್ನು ಅತ್ತೆಯ ಕೈಗಿತ್ತು ತಾನು ಬಟ್ಟೆಯ ಗಂಟನ್ನೆತ್ತಿಕೊಂಡು ಮುಂದೆ ನಡೆದಳು. ಈ ನೋವಿನ ತೀವ್ರತೆ ಕೊಂಚ ತಗ್ಗಿದಂತಿತ್ತು. ನೋವು ಕಾಣಿಸಿದೊಡನೆ ನಿಂತಲ್ಲೇ ನಿಂತು ನೋವು ನಿಂತೊಡನೆ ನಡೆಯುತ್ತಿದ್ದಳು. ಹತ್ತಿಪ್ಪತ್ತು ನಿಮಿಷ ನಡೆದ ಬಳಿಕ ರುಖಿಯಾ ತೀರಾ ಸುಸ್ತಾದಳು. “ಉಮ್ಮಾ, ಇನ್ನೆಷ್ಟು ದೂರವಿದೆ.?” ನಡೆಯುತ್ತಾ ಕೇಳಿದಳಾಕೆ. ಹಿಂದಿದ್ದ ಉಮ್ಮಾಲಿ. “ಇನ್ನು ಹೆಚ್ಚು ದೂರವಿಲ್ಲ. ಓ ಅಲ್ಲಿ ಕಾಣುತ್ತಿದೆಯಲ್ಲಾ. ಅದು ಇಸ್ಮಾಲಿ ಹಾಜ್ಯರರ ಮನೆ. ಅವರ ಮನೆಯ ಹಿಂಭಾಗದ ಓಣಿಯಲ್ಲಿ ಹೊರಟರೆ ಅಲ್ಲಿ ಕೊಂಚ ದೂರದಲ್ಲಿ ನದೀ ತೀರದಲ್ಲಿದೆ ಅವರ ತೋಟ. ಬೇಗ ಹೆಜ್ಜೆ ಇಟ್ಟರೆ ಹೆಚ್ಚು ಹೊತ್ತು ಬೇಕಾಗದು.” “ಓ... ಇನ್ನೂ ಅಷ್ಟು ದೂರವಿದೆಯೇ? ಸೊಂಟದ ಮೇಲೆ ಕೈಯಿಡುತ್ತಾ ನರಳಿದಳಾಕೆ. ಉಮ್ಮಾಲಿ ದೇವರೊಡನೆ ಬೇಡುತ್ತಿದ್ದಳು. “ಯಾ ಅಲ್ಲಾ, ಹೇಗಾದರೂ ಮನೆ ತಲುಪಿಸು.” ನದೀ ತೀರದ ಆ ಪುಟ್ಟ ಗುಡಿಸಲು ಸೇರುವುದರೊಳಗೆ ಇನ್ನೂ ನಾಲ್ಕೈದು ಬಾರಿ ನೋವು ಕಾಣಿಸಿಕೊಂಡಿತ್ತು. ಆಗೆಲ್ಲಾ ಆಕೆ ಹಲ್ಲು ಕಚ್ಚಿ ನೋವು ಸಹಿಸಿ ಮುಂದಡಿ ಇಡುತ್ತಿದ್ದಳು. ಒಂದೆರಡು ಬಾರಿ ನಿಲ್ಲಲಾಗದೆ ನೆಲದ ಮೇಲೆ ಕುಳಿತಳು. ಉಮ್ಮಾಲಿ ಸೊಸೆಯ ಬಳಿ ಬಂದು ಕೈ ಹಿಡಿದು ಎಬ್ಬಿಸಿ ನಡೆಸಿದಳು. ಕೊನೆಗೂ ಮನೆಯೊಳಗಡಿ ಇಟ್ಟಾಗ ರುಖಿಯಾ ಬಾಗಿಲ ಬಳಿಯೆ ಕುಸಿದಳು. ಉಮ್ಮಾಲಿ ಬೇಗನೇ ಹುಡುಗನ ತಲೆಯ ಮೇಲಿನ ಹೊರೆ ಇಳಿಸಿ ಚಾಪೆಯ ಸುರುಳಿ ಬಿಚ್ಚಿದಳು. ಎರಡು ಕೋಣೆ, ಮತ್ತೊಂದು ಪುಟ್ಟ ಅಡಿಗೆ ಕೋಣೆ ಇದ್ದ ಆ ಮನೆಯಲ್ಲಿ ಒಂದು ಕೋಣೆಯನ್ನು ಹೆರಿಗೆಗೆ ಸಿದ್ಧಪಡಿಸತೊಡಗಿದಳು. ಪುಟ್ಟದೊಂದು ಇದ್ದೂ ಇಲ್ಲದಂತಹ ಕಿಟಕಿ. ಸಮನಾಗಿ ಬೆಳಕು ಬಿಡಿ, ಗಾಳಿಯೂ ಓಡಾಡದಂತಹ ಪುಟ್ಟ ಕೋಣೆ. ಅಲ್ಲೇ ಒಂದೆಡೆ ಸೊಸೆಗೆ ಚಾಪೆ ಹಾಸಿ, “ಬಾಮ್ಮ ಇಲ್ಲಿ ಮಲಗು.” ಎಂದು ಕರೆದಳು. ಆದರೆ ರುಖ್ಯಾಬಿ ಏಳುವ ಸ್ಥಿತಿಯಲ್ಲಿರಲಿಲ್ಲ. ಆಕೆ ಕುಳಿತಲ್ಲೆ ನೆಲ ಪೂರ್ತಿ ಒದ್ದೆಯಾಗಿತ್ತು. “ಓ ತಲೆ ನೀರು ಹೋಯಿತೇ” ಎಂದು ಉಮ್ಮಾಲಿ ಮತ್ತಷ್ಟು ಗಾಬರಿಗೊಂಡು ಹತ್ತಿರ ಬರುತ್ತಿದ್ದಂತೆ ರುಖಿಯಾ ನೆಲಕ್ಕೊರಗಿದಳು. “ಯಾ ಅಲ್ಲಾ, ನಾನೇನು ಮಾಡಲಿ? ಯಾರನ್ನು ಕರೆಯಲಿ? ಇಲ್ಲಿ ಯಾರ ಪರಿಚಯವೂ 64 ಸುಳಿ ಇಲ್ಲವಲ್ಲ?” ಎಂದು ಉಮ್ಮಾಲಿ ಹಲುಬುತ್ತಿದ್ದಂತೆ, “ಕ್ವಾ... ಕ್ವಾ...” ಎಂಬ ಪುಟ್ಟ ಮಗುವಿನ ಅಳು ಮನೆಯಲ್ಲೆಲ್ಲ ಪ್ರತಿಧ್ವನಿಸಿತು. ಜಾಫರ್ ಅಜ್ಜಿಯ ಸೊಂಟದಿಂದ ಕೆಳಗಿಳಿಸಿದ್ದಕ್ಕೆ ಅಳುತ್ತಿದ್ದವನು ಮಗುವಿನ ಅಳು ಕೇಳಿ ತನ್ನ ಅಳು ನಿಲ್ಲಿಸಿ ಬೆರಳು ಚೀಪತೊಡಗಿದನು. ಹಾಜಿರಾ ಸಂತೋಷದಿಂದ ಕುಣಿದಾಡಿದಳು. “ಇಲ್ಲೊಂದು ಬೆಕ್ಕಿನ ಮರಿ ಇದೆ.!” ಉಮ್ಮಾಲಿ ಕ್ಷಣಕಾಲ ಸ್ತಂಭಿತಳಾದಳು!” ಸದ್ಯ, ಬೀದಿಯಲ್ಲೆಲ್ಲೂ ಆಗದೆ ಮನೆಯೊಳಗಾಯಿತಲ್ಲ? ಯಾ ಅಲ್ಲಾ, ಅಲ್ ಹಂದುಲಿಲ್ಲಾ, ನಿನ್ನ ಕೃಪೆ.” ಎನ್ನುತ್ತಾ ಮುಂದಿನ ಕೆಲಸಗಳಿಗೆ ಅಣಿಮಾಡತೊಡಗಿದಳು. ಬಾಣಂತಿಗೆಂದು ಶೇಖರಿಸಿದ್ದ ಅಷ್ಟಿಷ್ಟಿ ಕಟ್ಟಿಗೆಯನ್ನು ಆ ಮನೆಯಲ್ಲೇ ಬಿಟ್ಟು ಬಂದಾಗಿತ್ತು. ಎಷ್ಟೊ ದಿನಗಳಿಂದ ಬೆಂಕಿ ಕಾಣದ ಒಲೆ ಉರಿಸಿ ಬಾಣಂತಿಗೆ ನೀರು ಕಾಯಿಸಿ ಗಂಜಿ ಮಾಡಬೇಡವೇ? ಮಗುವಿನ ಹೊಕ್ಕಳ ಬಳ್ಳಿಯನ್ನು ತನಗೆ ತಿಳಿದಂತೆ ಕತ್ತರಿಸಿ ಮಗುವನ್ನು ಕಂಗಿನ ಹಾಳೆಯಲ್ಲಿ ಮಲಗಿಸಿದಳು. ಬಳಿಕ ತೆಂಗಿನ ತೋಟದಲ್ಲಿ ಅಲ್ಲಲ್ಲಿ ಬಿದ್ದಿದ್ದ ಮಡಲುಗಳನ್ನು ಹೆಕ್ಕಿ ತಂದು ಬಹಳ ಕಷ್ಟದಿಂದ ಒಲೆ ಉರಿಸಿದಳು. ಬಾವಿಯಿಂದ ನೀರು ಸೇದಿ ತಂದು ಬಿಸಿ ಮಾಡಿ ಮಗುವಿನ ಸ್ನಾನ ಮಾಡಿಸಿ ಇನ್ನೊಂದು ಕಂಗಿನ ಹಾಳೆಯಲ್ಲಿ ಮಲಗಿಸಿದಳು. ಅಲ್ಲಿ ಬಚ್ಚಲು ಮನೆ ಎಂದೇನೂ ಇರಲಿಲ್ಲ. ಅಂಗಳದಲ್ಲಿಯೇ ತೆಂಗಿನ ಮಡಲಿನಿಂದ ಕಟ್ಟಿಕೊಳ್ಳಬೇಕಾಗಿತ್ತು. ಈಗ ಜಗಲಿಯಲ್ಲೇ ಒಂದು ಬಟ್ಟೆಯನ್ನು ಅಡ್ಡಕಟ್ಟಿ ಸೊಸೆಗೆ ಸ್ನಾನ ಮಾಡಿಸಿ ಕೋಣೆಗೆ ಕರೆದೊಯ್ದು ಮಲಗಿಸಿ ಮಗುವನ್ನೂ ತಂದು ಪಕ್ಕದಲ್ಲಿಟ್ಟಳು. ಒಂದು ಕೆಲಸವಂತೂ ಆಯಿತು. ಸೂಲಗಿತ್ತಿಗೆ ಕೊಡಬೇಕಾಗಿದ್ದ ಎರಡು ರೂಪಾಯಿ ಉಳಿಯಿತು. ಹುಟ್ಟಿದ ಮಗು ಗಂಡಾಗಿ ಆಕೆ ಇನ್ನಷ್ಟು ಖುಷಿಗೊಂಡಳು. ನಾಲ್ಕು ಜನರ ಹೊಟ್ಟೆ ಹೊರೆಯುವ ಚಿಂತೆಯಂತೂ ಆ ಗಳಿಗೆಯಲ್ಲಿ ಆಕೆಯನ್ನು ಕಾಡಲೇ ಇಲ್ಲ. “ಉಮ್ಮಾ, ಸ್ವಲ್ಪ ಗಂಜಿ ನೀರು ಕೊಡಿ.” ಎಂದು ಸೊಸೆ ಕೇಳಿದಾಗ ಉಮ್ಮಾಲಿ ಕುಳಿತಲ್ಲಿಂದ ಗಡಬಡಿಸಿ ಎದ್ದು ನಿಂತು. “ನನ್ನ ಮರವಿಗಿಷ್ಟು ಬೆಂಕಿ ಹಾಕ.” ಎನ್ನುತ್ತಾ ಒಲೆಯ ಬಳಿಗೆ ಹೋದಳು. ಕೊಂಚ ದೂರದಲ್ಲಿದ್ದ ಇನ್ನೊಂದು ಮನೆಯಾಕೆ ಬಂದು ಇಣುಕಿದಳು. ಉಮ್ಮಾಲಿ ಆಕೆಯನ್ನು ಒಳಗೆ ಕರೆದು ಕೂರಿಸಿ ಮಗುವನ್ನು ತೋರಿಸಿ ಸ್ವಲ್ಪದರಲ್ಲಿ ಎಲ್ಲವನ್ನೂ ವಿವರಿಸಿದಳು. ಮಮ್ಮೂಟಿ ಊರು ಬಿಟ್ಟು ಹೋದ ಕಾರಣವನ್ನು ಮಾತ್ರ ಹೇಳಲಿಲ್ಲ. ಇಳಿತ 65 “ಬಾಣಂತಿಗೆ ಏನಾದರೂ ಬೇಕಾದರೆ ನಮ್ಮ ಮನೆಯಿಂದ ತರಿಸಿಕೊಳ್ಳಿ, ನೆರೆಕರೆಯವರೆಂದ ಮೇಲೆ ಒಬ್ಬರಿಗೊಬ್ಬರು ಸಹಾಯ ಮಾಡಲೇ ಬೇಕಾಗುತ್ತದೆ.” ಎನ್ನುತ್ತಾ “ಬಾ ಮೋಳೆ, ನಮ್ಮ ಮನೆಗೆ ಹೋಗಿ ಊಟ ಮಾಡುವಾ.” ಎಂದು ಮಕ್ಕಳನ್ನು ಕರೆದಳು. ಹಾಜಿರಾ ಆಕೆಯನ್ನು ಹಿಂಬಾಲಿಸಿದಳು. ಜಾಫರ್ ಆಳುತ್ತಲೇ ಇದ್ದನು. ಆ ಬಳಿಕದ ಒಂದು ತಿಂಗಳು ಅವರಿಬ್ಬರ ಪಾಲಿಗೆ ಆಟಿ ತಿಂಗಳ ಅಮಾವಾಸ್ಯೆಯೇ ಆಗಿತ್ತು. ಮಳೆಗಾಲವೂ ಕಾಲಿಟ್ಟಿದ್ದರಿಂದ ಮತ್ತಷ್ಟು ತಾಪತ್ರಯ. ಹುಲ್ಲಿನ ಮಾಡಿನ ಮನೆ ಅಲ್ಲಲ್ಲಿ ಸೋರುತ್ತಿತ್ತು. ಉಮ್ಮಾಲಿ ಒಂದೊಂದಾಗಿ ಆಡು, ಕೋಳಿ, ತಮ್ಮ ಮಂಚ, ಸೌದೆ ಎಲ್ಲವನ್ನೂ ಕಷ್ಟಪಟ್ಟು ಸಾಗಿಸಿದಳು. ಕೋಳಿ ಮೊಟ್ಟೆ, ಆಡಿನ ಹಾಲಿನ ವ್ಯಾಪಾರವೂ ಪ್ರಾರಂಭವಾಗಿದ್ದರೂ ನೆರೆಕರೆಯಲ್ಲಿ, ಅಂಗಡಿಯಲ್ಲೆಲ್ಲವೂ ಸಾಲ ಮಾಡಿಯಾಗಿತ್ತು. ಮೊದಲಿನಂತೆ ಆಗಾಗ ಅತ್ತೆ ಸೊಸೆಯರ ಜಗಳವೂ ಪ್ರಾರಂಭವಾಗಿತ್ತು. ಹಾಗೂ ಹೀಗೂ ಕಷ್ಟಪಟ್ಟು ಒಂದು ತಿಂಗಳು ಕಳೆಯುವಷ್ಟರಲ್ಲಿ ಉಮ್ಮಾಲಿ ಮತ್ತು ರುಖಿಯಾ ಇಬ್ಬರೂ ಅರೆಜೀವವಾಗಿದ್ದರು. ಹೆರಿಗೆಯಾಗಿ ತಿಂಗಳು ತುಂಬುತ್ತಲೇ ರುಖಿಯಾ ಬಾಣಂತಿ ಸ್ನಾನ ಮಾಡಿದಳು. ಈ ಹಿಂದೆ ಎರಡು ಬಾರಿಯೂ ಮಮ್ಮೂಟಿ ಕಷ್ಟಪಟ್ಟು ಬಾಣಂತಿಗೆ ಖರ್ಚುಮಾಡಿದ್ದನು. ಪ್ರತಿ ಬಾರಿಯೂ ಒಂದೆರಡು ಹೊಸ ಬಟ್ಟೆಗಳನ್ನು ತಂದಿದ್ದನು. ಆದರೆ ಈ ಬಾರಿ ಏನೂ ಇಲ್ಲ. ಕಟ್ಟಿಕೊಂಡಾತನೇ ಇಲ್ಲವಾದ ಮೇಲೆ ಬೇರೇನಿರುತ್ತದೆ? ಮಳೆಗಾಲ ಮುಗಿದು ಬೆಳೆಗಳು ಕೊಯ್ಲಿಗೆ ಬಂದುವು. ಈವರೆಗೆ ಕೊಯ್ಲಿನ ಕೆಲಸ ಮಾಡಿರಲಿಲ್ಲವಾದರೂ ಈ ಬಾರಿ ಉಮ್ಮಾಲಿ ಹೊಸ ಧನಿಯವರ ಮನೆಗೆ ಹೋಗಿ ತಾನೂ ಕೊಯ್ಲಿಗೆ ಬರುವೆನೆಂದಳು. ಯಜಮಾನಿ ಆ ದಿನವೇ ಕೆಲಸ ನೀಡಿದ್ದಳು. “ಹಟ್ಟಿಯಿಂದ ಸೆಗಣಿ ತಂದು ಅಂಗಳದ ತುಂಬ ಸಾರಿಸು” ಮೈ ತುಂಬಾ ಕೆಲಸ ಮಾಡಿದಾಗ ಹೊಟ್ಟೆ ತುಂಬಿದ್ದೂ ಅಲ್ಲದೆ ಮನೆಗೆ ಕೊಂಡೊಯ್ಯಲು ಕೊಂಚ ಅಕ್ಕಿಯೂ ಸಿಕ್ಕಿತು. ಅದನ್ನು ಮನೆಗೆ ತಂದು ಗಂಜಿ ಮಾಡಿ ಒಣ ಮೀನು ಸುಟ್ಟು ಎಲ್ಲರೂ ಗಂಜಿ ಕುಡಿದರು. “ನನಗೆ ಬೇಡ ರುಖ್ಯಾ. ನಾನು ಮಧ್ಯಾಹ್ನ ಹೊಟ್ಟೆ ತುಂಬಾ ಊಟ ಮಾಡಿದ್ದೇನೆ. ನೀವೆಲ್ಲರೂ ಕುಡಿಯಿರಿ.” ಎಂದು ಉಮ್ಮಾಲಿ ಸೊಸೆಯೊಡನೆಂದಳು. ಮರುದಿನದಿಂದ ಉಮ್ಮಾಲಿ ಇಬ್ಬರು ಮೊಮ್ಮಕ್ಕಳನ್ನು ತನ್ನೊಡನೆ ಕರೆದೊಯ್ಯತೊಡಗಿದಳು. ಧನಿಯವರ ಮನೆಯಲ್ಲಿ ಬೆಳಿಗ್ಗೆ ಮಾಡಿದ 66 ಸುಳಿ ತಿಂಡಿಯೇನಾದರೂ ಇದ್ದರೆ ಮಕ್ಕಳಿಗೆ ದೊರೆಯುತ್ತಿತ್ತು. ಉಮ್ಮಾಲಿಗೂ ಹೊಟ್ಟೆ ತುಂಬಾ ಊಟವಲ್ಲದೆ ಅಷ್ಟಿಷ್ಟು ಕಾಸೊ ಅಕ್ಕಿಯೊ ದೊರೆಯುತ್ತಿತ್ತು. ಹಿಂದಿನ ದಿನದ ಸಾರೊ, ಅನ್ನವೊ ಮಿಕ್ಕಿದರೆ ತಂದು ಸೊಸೆಗೆ ನೀಡುವುದೂ ಇತ್ತು. ಬೆಳಿಗ್ಗಿನಿಂದ ಸಂಜೆಯವರೆಗಿನ ವಿಶ್ರಾಂತಿಯಿಲ್ಲದ ಈ ದುಡಿತದಿಂದ ಆಕೆ ದಣಿದು ಕಂಗಾಲಾದಳು. ಮಗನ ಸಂಸಾರ ತನಗೆ ಹೊರಲಾಗದ ಹೊರೆಯಾಗಬಹುದೆಂದು ಆಕೆ ಕನಸಿನಲ್ಲೂ ಎಣಿಸಿರಲಿಲ್ಲ. ಮಮ್ಮೂಟಿ ಎಲ್ಲಾದರೂ ಇದ್ದಲ್ಲಿಂದ ದುಡಿದು ಸಂಪಾದಿಸಿ ಏನಾನ್ನಾದರೂ ಊರಿಗೆ ಕಳುಹಿಸಬಹುದಾಗಿತ್ತಲ್ಲ? ಹೋಗಲಿ ತಾನು ಇಂತಹ ಕಡೆ ಇದ್ದೇನೆಂದು ಒಂದು ಪತ್ರವನ್ನಾದರೂ ಹಾಕಬಾರದಿತ್ತೇ? ಎಂದಾಕೆ ಹಲುಬಿದ್ದು ಎಷ್ಟು ಬಾರಿಯೊ. ತೀರಾ ಸುಸ್ತಾದ ಒಂದು ದಿನ ಆಕೆ ಸೊಸೆಯೊಡನೆ, “ಎಷ್ಟು ದಿನಾಂತ ನಾನೊಬ್ಬಳೇ ದುಡಿದು ನಿಮ್ಮನ್ನೆಲ್ಲ ಸಾಕುವುದು? ನನಗೇನು ಯೌವನವೇ? ನನಗೂ ಆಗಲೇ ಐವತ್ತು ದಾಟಿತೊ ಏನೊ. ನೀನು ಬಾ ಧನಿಯ ಮನೆಗೆ. ಒಬ್ಬರು ಭತ್ತ ಕುಟ್ಟುವಾಗ ಇನ್ನೊಬ್ಬರು ಕೇರಿದರೆ ಬೇಗ ಆಗುತ್ತದೆ. ಭತ್ತ ಕುಟ್ಟಿ ಕುಟ್ಟಿ ನನ್ನ ಕೈಯಲ್ಲಿ ದಡ್ಡೆದ್ದಿದೆ” ಎಂದಳು. “ಇವನಿಗಿನ್ನೂ ಮೂರು ತಿಂಗಳೂ ತುಂಬಿಲ್ಲವಲ್ಲಾ?” ಮಗುವಿಗೆ ಹಾಲೂಡಿಸುತ್ತಾ ನುಡಿದಳು ರುಖಿಯಾ. ಕೆಲಸ ಮಾಡಿ ಸುಸ್ತಾಗಿದ್ದೂ ಅಲ್ಲದೆ ಬಹಳಷ್ಟು ಸಾಲದಲ್ಲಿ ಮುಳುಗಿದ ಉಮ್ಮಾಲಿ ಸೊಸೆಯ ಮಾತಿನಿಂದ ಭದ್ರಕಾಳಿಯಾದಳು. “ಮೂರು ತಿಂಗಳವರೆಗೆ ಮಲಗಿ ಉಪಚರಿಸಿಕೊಳ್ಳುವುದಕ್ಕೆ ನಿನ್ನ ಗಂಡ ಹಣ ತಂದು ಸುರಿಯುತ್ತಿದ್ದಾನೆಯೇ ಇಲ್ಲಿ? ಇಲ್ಲ ನಿನ್ನ ತವರಿನವರು ಕಳಿಸುತ್ತಿದ್ದಾರೆಯೇ? ನಿನ್ನ ತವರಿನವರು ಒಮ್ಮೆ ಕಡೆಗಣ್ಣಿನಿಂದಲೂ ನೋಡಲಿಲ್ಲವಲ್ಲ? “ನಿಮ್ಮ ಮಗ ಮಾಡಿದ್ದನ್ನು ನನ್ನ ತವರಿನವರೇಕೆ ನೋಡ್ಬೇಕು? ನಿಮ್ಮ ಮೊಮ್ಮಕ್ಕಳನ್ನು ನೀವೇ ಸಾಕಿ.” ಅತ್ತೆಗಿಂತ ತಾನೇನೂ ಕಮ್ಮಿಯಲ್ಲವೆಂಬುದನ್ನು ಸೊಸೆಯೂ ಸಾಬೀತು ಪಡಿಸಿದಳು. “ಎಲ್ಲರಂತೆ ನಾನೂ ದೂರ ಇರ್ಬೇಕಾಗಿತ್ತು. ನನ್ನ ಸೊಸೆ, ನನ್ನ ಮೊಮ್ಮಕ್ಕಳೂಂತ ಇಷ್ಟು ಮಾಡಿದ್ದಕ್ಕೆ ಕೊಟ್ಟೆಯಲ್ಲ ಇನಾಮು? ನೀನೂ ನಿನ್ಮಕ್ಕಳೂ ಏನು ಬೇಕಾದರೂ ಮಾಡ್ಕೊಳ್ಳಿ. ನಾನಂತೂ ಮನೆ ಬಿಟ್ಟು ಹೊರಟೆ” ಎನ್ನುತ್ತಾ ಅಂಗಳಕ್ಕಿಳಿದಳು ಉಮ್ಮಾಲಿ. ಇಳಿತ 67 ರುಖಿಯಾಬಿ ಶೂನ್ಯದಲ್ಲಿ ದೃಷ್ಟಿ ನೆಟ್ಟು ಕುಳಿತಳು. ಅವಳ ಕಣ್ಣೀರ ಧಾರೆ ಮಗನ ತಲೆಯನ್ನು ತೋಯಿಸುತ್ತಿತ್ತು. ಹಾಜಿರಾ, “ನಾನೂ ಬರ್ತೇನೆ ಅಜ್ಜೀ.” ಎನ್ನುತ್ತ ಅಜ್ಜಿಯನ್ನು ಹಿಂಬಾಲಿಸಿದಳು. ಜಾಫರ್ ತಾನೂ ಬರುವೆನೆಂಬಂತೆ ಅಜ್ಜಿಯೆಡೆಗೆ ಕೈ ಮಾಡಿಕೊಂಡು ಅಳತೊಡಗಿದನು. ರುಖಿಯಾ ಮಗನ ಬೆನ್ನಿಗೊಂದು ಏಟು ಕೊಟ್ಟು, “ಎಲ್ಲಿಗೆ ಹೋಗುತ್ತೀ? ನಿನ್ನಪ್ಪನ ಮನೆಗೇನು? ಮುದುಕಿಗೆ ಈಗ ಮೊಮ್ಮಕ್ಕಳೂ ಬೇಡ. ತಾನೊಬ್ಬಳೆ ಹೊಟ್ಟೆ ಬಿರಿಯೆ ತಿಂದು ಬರಲಿ. ಹಾಜಿರಾ, ಬಾ ಇಲ್ಲಿ” ಎಂದು ಮಗಳನ್ನು ಕರೆದಳು. ಹಾಜಿರಾ, “ನಾ ಬರಲ್ಲ. ಅಜ್ಜಿ ಜೊತೆ ಹೋಗ್ತೇನೆ.” ಎನ್ನುತ್ತಾ ಹೊರಟೇ ಹೋದಳು. ಜಾಫರ್ ಕೊಂಚ ಹೊತ್ತು ಅತ್ತು ಬೆರಳು ಚೀಪುತ್ತಾ ಅಲ್ಲೇ ಮಲಗಿ ನಿದ್ರಿಸಿದನು. ರುಖಿಯಾ ಎದ್ದು ಒಲೆಯ ಬಳಿ ಹುಡುಕಾಡಿದಳು. ಅಕ್ಕಿಯ ಮಡಕೆ ಖಾಲಿಯಾಗಿತ್ತು. ರಾತ್ರಿಯ ಅನ್ನ ಮತ್ತು ನಿನ್ನೆ ಧನಿಯ ಮನೆಯಿಂದ ತಂದಿದ್ದ ಸಾರು ಕೊಂಚ ಮಿಕ್ಕಿತ್ತು. ಜಾಫರ್ ಎದ್ದು ಅತ್ತಾಗ ಆಕೆ ಅದನ್ನೇ ಮಗನಿಗೆ ತಿನ್ನಿಸಿದಳು. ತಾನು ಹೊಟ್ಟೆತುಂಬಾ ನೀರು ಕುಡಿದು ಮಕ್ಕಳ ಮಧ್ಯೆ ಮಲಗಿಬಿಟ್ಟಳು. ಸಾಯಂಕಾಲ ಉಮ್ಮಾಲಿ ಬಂದು ಕರೆದಾಗ ರುಖಿಯಾ ಎಚ್ಚೆತ್ತಳು. ಉಮ್ಮಾಲಿ ತಾನು ತಂದ ಅಕ್ಕಿಯನ್ನು ಮಡಕೆಗೆ ಸುರಿದು ಕೈಯಲ್ಲಿದ್ದ ಸಾರಿನ ಪಾತ್ರೆಯನ್ನು ಮುಚ್ಚಿಟ್ಟಳು. ಬಳಿಕ ಮಡಿಲಿನಿಂದ ಎರಡು ದೋಸೆ ತೆಗೆದು ತಟ್ಟೆಯಲ್ಲಿಟ್ಟು ಸೊಸೆಯ ಮುಂದಿಟ್ಟು “ತಿನ್ನು” ಎಂದಳು. “ನನಗೆ ಬೇಡ.” ಒರಟಾಗಿತ್ತು ಉತ್ತರ “ಯಾಕೆ ಬೇಡ? ಹಸಿವಾಗುವುದಿಲ್ಲವಾ? ಸುಮ್ಮನೆ ಹಟ ಮಾಡಬೇಡ. ನಾಳೆಯಿಂದ ನೀನೂ ಬಾ ಕೆಲಸಕ್ಕೆ.” ಎಂದು ನಯವಾಗಿಯೇ ನುಡಿದಳು ಉಮ್ಮಾಲಿ. ಮರುದಿನ ರುಖಿಯಾ ಹಟ ಮಾಡದೆ ಅತ್ತೆಯನ್ನು ಹಿಂಬಾಲಿಸಿದಳು. ಮನೆಗೆ ಬೀಗ ಹಾಕಿ ಎಲ್ಲರೂ ಧನಿಯ ಮನೆ ತಲಪಿದಾಗ ಅಂಗಳದಲ್ಲಾಗಲೇ ಹೊಂಬಿಸಿಲು ಹರಡಿತ್ತು. “ಏನು ಉಮ್ಮಾಲಿ ಇಷ್ಟು ತಡವಾಯಿತು?” ಎಂದು ಕೇಳಿದ ಯಜಮಾನಿ. “ಓ... ಸೊಸೆಯನ್ನೂ ಕರೆದುಕೊಂಡು ಬಂದೆಯಾ. ಒಳ್ಳೆದಾಯಿತು. ಮೊದಲು ಅಂಗಳದ ಒಲೆ ಉರಿಸಿ ಭತ್ತ ಬೇಯಲಿಡು. ಬಳಿಕ ಭತ್ತ ಕುಟ್ಟು” ಎಂದು ಆಜ್ಞಾಪಿಸಿದಳು. ರುಖಿಯಾ ಪುಟ್ಟ ಮಗುವನ್ನು ಒಂದೆಡೆ ಚಾಪೆ ಹಾಸಿ ಮಲಗಿಸಿದಳು. ಹಾಜಿರಾ ಮತ್ತು ಜಾಫರ್ ಅಂಗಳದಲ್ಲಿ ಆಡತೊಡಗಿದರು. ಉಮ್ಮಾಲಿ ಅಟ್ಟದಿಂದ 68 ಸುಳಿ ಗುಡಿಸಿ ತಂದು ನೆಲದಲ್ಲಿ ಸುರಿದ ಭತ್ತವನ್ನು ರುಖಿಯಾ ಕುಟ್ಟತೊಡಗಿದಳು. ಹೊರಗೆ ಭತ್ತ ಬೇಯಲಿಟ್ಟು ಅತ್ತೆಯೂ ಸೊಸೆಯನ್ನು ಕೂಡಿಕೊಂಡಳು. ಅಭ್ಯಾಸವಿಲ್ಲದ ರುಖಿಯಾ ಆಗಾಗ ನಿಂತು ನಿಂತು ಭತ್ತ ಕುಟ್ಟಿದಳು. ಎಲ್ಲ ಕೆಲಸ ಮುಗಿಸಿ ಮನೆಗೆ ಹಿಂತಿರುಗಿದಾಗ ಸೂರ್ಯನಾಗಲೇ ಕೆಳಗಿಳಿದು ಮರಗಳೆಡೆಯಲ್ಲಿ ಮಾಯವಾಗತೊಡಗಿದ್ದನು. ರುಖಿಯಾ ಬಂದವಳೇ ಚಾಪೆ ಹಾಸಿ ಮಲಗಿಬಿಟ್ಟಳು. ಆಕೆಯ ಕೈಯ ಹೆಬ್ಬೆರಳ ಬುಡದಲ್ಲಿ ಚರ್ಮ ಕಿತ್ತು ಆ ಭಾಗ ಉರಿಯುತ್ತಿತ್ತು. ಭತ್ತ ಕುಟ್ಟಿ ಅಭ್ಯಾಸವಿಲ್ಲದ್ದರಿಂದ ಮೈ ಕೈ ನೋವಿನಿಂದ ಅಲುಗಾಡಿಸಲಸಾಧ್ಯವಾಗಿತ್ತು. ಉಮ್ಮಾಲಿ ಬಂದು ಕರೆದಾಗ ಆಕೆ ಗಾಢ ನಿದ್ರೆಯಲ್ಲಿದ್ದಳು. ‘ರುಖಿಯಾ, ಏಳು ಒಂದಷ್ಟು ನೀರು ಬಿಸಿ ಮಾಡಿದ್ದೇನೆ. ತೆಗೆದುಕೊಂಡು ಹೋಗಿ ಮೈ ಮೇಲೆ ಹಾಕಿಕೊ. ಮೈ ಕೈ ನೋವು ಕಮ್ಮಿಯಾಗುತ್ತದೆ. ಒಂದು ನಾಕು ದಿನ. ಆಮೇಲೆ ಎಲ್ಲವೂ ಅಭ್ಯಾಸವಾಗುತ್ತದೆ.” ಎಂದಳು. ಆ ದಿನ ಅಡಿಗೆಯ ಕೆಲಸಕ್ಕೆ ಉಮ್ಮಾಲಿ ಸೊಸೆಯನ್ನು ಕರೆಯಲೇ ಇಲ್ಲ. ದಿನಪೂರ್ತಿ ದುಡಿದರೂ ಕೈ ತುಂಬಾ ಕೂಲಿಯೇನೂ ದೊರೆಯುತ್ತಿರಲಿಲ್ಲ. ಆದರೆ ಎರಡು ಹೊತ್ತು ನಾಲ್ಕೈದು ಜೀವಿಗಳ ಹೊಟ್ಟೆ ತುಂಬುವಷ್ಟು ಊಟ, ತಿಂಡಿ, ಅಕ್ಕಿ ಮುಂತಾದುವು ದೊರೆಯುತ್ತಿದ್ದುವು. ಧನಿಗಳ ಮನೆಯಲ್ಲಿ ಕೆಲಸವಿಲ್ಲದ ದಿನಗಳೂ ಇದ್ದುವು. ಅಂತಹ ದಿನಗಳಲ್ಲಿ ಅತ್ತೆ ಸೊಸೆಯರಿಗೆ ಅರೆ ಹೊಟ್ಟೆ. ಹಾಗೂ ಹೀಗೂ ಒಂದು ವರ್ಷ ಕಳೆಯಿತು. ಒಂದು ದಿನ ನೆರೆ ಮನೆಯ ಮರಿಯಮ್ಮ ಬಂದು ಉಮ್ಮಾಲಿಯೊಡನೆ, “ನನ್ನ ಗುರುತಿನವರೊಬ್ಬರ ಮಗಳಿಗೆ ಹೆರಿಗೆಯಾಗಿದೆ. ಬಾಣಂತಿ ಕೆಲಸಕ್ಕೆ ಇನ್ನೂ ಯಾರೂ ಸಿಕ್ಕಿಲ್ಲ. ಅವರು ತುಂಬಾ ಅನುಕೂಲಸ್ಥರು. ನೀನೇಕೆ ಬಾಣಂತಿ ಕೆಲಸ ಮಾಡಬಾರದು? ನಾಲ್ವತ್ತು ದಿನಗಳವರೆಗೆ ಕೆಲಸ ಮಾಡಿದರೆ ಹೊಸ ಬಟ್ಟೆ, ಹಳೆಬಟ್ಟೆ, ಅಕ್ಕಿ, ಕಾಯಿಗಳಲ್ಲದೆ ಕೈ ತುಂಬಾ ಹಣವೂ ದೊರೆಯುತ್ತದೆ. ಏನು ಹೇಳುತ್ತೀ?” ಎಂದು ಕೇಳಿದಳು. “ಬಾಣಂತಿ ಕೆಲಸ ನನಗೇನೂ ತಿಳಿಯದಲ್ಲ? ಬಾಣಂತಿ ಮದ್ದು ತಯಾರಿಸಲು ಗೊತ್ತಿರಬೇಡವಾ?” ಎಂದು ಕೇಳಿದಳು ಉಮ್ಮಾಲಿ. “ಅದೆಲ್ಲ ಆಕೆಯ ಅಜ್ಜಿ ಕಲಿಸುತ್ತಾರೆ. ನೀನು ಹೋಗಿ ನೋಡು.” ಎಂದಳು. ಉಮ್ಮಾಲಿಯ ಮನ ತೂಗುಯ್ಯಾಲೆಯಾಡತೊಡಗಿತು. ಕೈ ತುಂಬಾ ಹಣ ದೊರೆಯುವುದಾದರೆ ಯಾಕಾಗಬಾರದು...? ಧನಿಯ ಮನೆಯ ಕತ್ತೆ ಚಾಕರಿಗಿಂತ ಎಷ್ಟೋ ಮೇಲು. ಎಂದು ಮನದಲ್ಲೆ ಅಂದುಕೊಳ್ಳುತ್ತಿದ್ದಂತೆ. ಇಳಿತ 69 “ಇಸ್ಸಿ, ಬಾಣಂತಿ ಕೆಲಸವೇ? ಬೇಡಮ್ಮ, ಅದೆಲ್ಲ ನಮ್ಮಂತಹವರಿಗೆ ಹೇಳಿಸಿದ್ದಲ್ಲ” ಎಂದು ಸೊಸೆ ಅಪಸ್ವರವೆತ್ತಿದಳು. “ನಿನ್ನ ಗಂಡ ನಮ್ಮನ್ನು ನಡು ನೀರಿನಲ್ಲಿ ಕೈ ಬಿಟ್ಟನಲ್ಲ? ಇನ್ನು ಈ ಕೆಲಸ, ಆ ಕೆಲಸ ಎಂದು ದೂರವಿರುವುದಕ್ಕಾದೀತಾ? ಈ ಸಾಲಗಳಿಂದ ಒಮ್ಮೆ ಬಿಡುಗಡೆಗೊಂಡರೆ ಸಾಕಾಗಿದೆ ನನಗೆ” ಎಂದು ಸೊಸೆಯ ಬಾಯಿ ಮುಚ್ಚಿಸಿದಳು ಆಕೆ. ಮೊದಲ ದಿನ ಮೊಮ್ಮಗಳನ್ನು ಕರೆದೊಯ್ದ ಉಮ್ಮಾಲಿ ಮರುದಿನ ಹಾಜಿರಾಳನ್ನು ತಂದು ರುಖಿಯಾಳ ಬಳಿ ಬಿಟ್ಟು, “ಮಕ್ಕಳಿದ್ದರೆ ಅವರಿಗೆ ಸರಿ ಹೋಗುವುದಿಲ್ಲವಂತೆ. ಇವಳು ಇಲ್ಲೇ ಇರಲಿ.” ಎನ್ನುತ್ತಾ ಹೊರಟು ಹೋದಳು. ಈಗ ಧನಿಯ ಮನೆಗೆ ರುಖಿಯಾ ಒಬ್ಬಳೇ ಮಕ್ಕಳೆಲ್ಲರನ್ನೂ ಕರೆದುಕೊಂಡು ಹೋಗಿ ಬರತೊಡಗಿದ್ದಳು. ಇಬ್ಬರು ದುಡಿಯುತ್ತಿದ್ದಾಗ ಮೂರು ಮಕ್ಕಳು ಯಜಮಾನಿಗೆ ಭಾರವನ್ನಿಸಿರಲಿಲ್ಲ. ಆದರೆ ಈಗ ಒಬ್ಬಳೆ ದುಡಿಯುವಾಗ ಮೂರು ಮಕ್ಕಳೂ ಬರುವುದು ಯಜಮಾನಿಗೆ ಸಹಿಸಲಾಗಲಿಲ್ಲ. ಆಕೆ ರುಖಿಯಳನ್ನು ಕರೆದು, “ನೋಡು ರುಖ್ಯಾ, ಹೀಗನ್ನುತ್ತೇನೇಂತ ಬೇಸರಿಸಬೇಡ. ನೀನು ಮಕ್ಕಳೆಲ್ಲರನ್ನೂ ಕರೆದುಕೊಂಡು ಬಂದರೆ ಕೆಲಸ ಸಾಗುವುದೆ ಇಲ್ಲ. ಮಕ್ಕಳನ್ನು ಮನೆಯಲ್ಲೇ ಬಿಟ್ಟು ಬಾ. ನಿನ್ನ ದೊಡ್ಡ ಹುಡುಗಿಗೆ ಐದು ವರ್ಷ ತುಂಬಿತಲ್ಲವಾ? ಚಿಕ್ಕ ಮಕ್ಕಳನ್ನು ಅವಳು ನೋಡಿಕೊಳ್ತಾಳೆ. ನೀನು ಬೇಗ ಕೆಲಸ ಮುಗಿಸಿ ಮನೆಗೆ ಹೋಗಬಹುದು.” ಎಂದು ತಾಕೀತು ಮಾಡಿದಳು. ಅತ್ತೆಯನ್ನು ದಬಾಯಿಸದಂತೆ ಅನ್ನ ಕೊಡುವ ಧನಿಯನ್ನು ದಬಾಯಿಸಲಾಗುತ್ತದೆಯೇ? ಮರುಮಾತಾದೆ ಗೋಣಲುಗಿಸಿದಳಾಕೆ. ಆದರೆ ಮರುದಿನ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೊರಡುವುದು ಆಕೆಯಿಂದಾಗಲಿಲ್ಲ. ಹಾಜಿರಾ ತಾಯಿಗಿಂತ ಮುಂದಾಗಿ ಮನೆಯಿಂದ ಹೊರಗಡಿ ಇಟ್ಟಳು. ಜಾಫರ್ ಬೆರಳು ಚೀಪುತ್ತಲೆ ಅಕ್ಕನನ್ನು ಹಿಂಬಾಲಿಸಿದನು. ಚಿಕ್ಕ ಜಮಾಲು ಅಂಬೆಗಾಲಿಕ್ಕುತ್ತಾ ತಾಯಿಯ ಬಳಿ ಬಂದನು. ರುಖಿಯಾ ಮಕ್ಕಳನ್ನೆಲ್ಲ ಒಮ್ಮೆ ನೋಡಿದಳು. ಎಲ್ಲವೂ ಎಲುಬಿನ ಹಂದರಗಳು. ಜಮಾಲನಿಗೆ ಇತ್ತೀಚೆಗೆ ಯಾವಾಗಲೂ ಹೊಟ್ಟೆ ಸರಿಯಿಲ್ಲ. ಹೊಟ್ಟೆ ಕೊಂಚ ಊದಿಕೊಂಡಂತೆಯೂ ಕಾಣುತ್ತಿತ್ತು. ಈ ಮಕ್ಕಳನ್ನು ಇಲ್ಲಿ ಬಿಟ್ಟು ತಾನೊಬ್ಬಳೇ ಹೋಗುವುದು ಹೇಗೆ? 70 ಸುಳಿ ಆ ದಿನ ರುಖಿಯಾ ಮನೆಯಲ್ಲೆ ಉಳಿದಳು. ಹಾಳಾಗಲಿ ಕೆಲಸ! ಸದ್ಯ, ಅತ್ತೆಯೊಮ್ಮೆ ಬಂದರೆ ಸಾಕಾಗಿತ್ತು. ಎನ್ನುತ್ತಾ ಗಂಜಿ ಬೇಯಿಸಿದಳು. ಹಿಂದಿನ ದಿನ ಧನಿಯ ಮನೆಯಿಂದ ತಂದ ಸಾರಿನ ಪಾತ್ರೆ ಮುಂದಿಟ್ಟುಕೊಂಡು ತಾಯಿಮಕ್ಕಳು ಗಂಜಿ ಕುಡಿದರು. ಸಂಜೆಯಾಗುತ್ತಲೇ ಮಕ್ಕಳು ಮತ್ತೊಮ್ಮೆ ಹಸಿವು ಎಂದು ಅಳತೊಡಗಿದುವು. ಧನಿಯ ಮನೆಗೆ ಹೋಗಿದ್ದರೆ ಮಿಕ್ಕಿದ್ದ ತಿಂಡಿಯಾದರೂ ದೊರೆಯುತ್ತಿತ್ತು. ಈ ದಿನ ಅದೂ ಇಲ್ಲ. ಮರುದಿನ ರುಖಿಯಾ ದೊಡ್ಡವರಿಬ್ಬರನ್ನೂ ಮನೆಯೊಳಗೆ ಕೂಡಿ ಹಾಕಿ ಹೊರಬಾಗಿಲಿಗೆ ಚಿಲಕ ಹಾಕಿ ಚಿಕ್ಕವನನ್ನೆತ್ತಿಕೊಂಡು ನಡೆದಳು. ಅಲ್ಲಿ ಆಕೆಗೆ ಕೆಲಸದ ಹೊರೆಯೇ ಕಾದಿತ್ತು. “ಮಕ್ಕಳನ್ನು ತರಬೇಡವೆಂದರೆ ಕೆಲಸಕ್ಕೆ ಬರದೆ ತಪ್ಪಿಸಿಕೊಂಡೆ. ಹೀಗೆ ಮಾಡಿದರೆ ನಾವು ಬೇರೆಯವರನ್ನು ನೋಡಬೇಕಾದೀತು. ಪಾಪ, ಬಡವರು; ಸಹಾಯ ಮಾಡುವಾ ಎಂದು ನಾವಂದುಕೊಂಡರೆ ನೀವು ನೀಡುವ ಪ್ರತಿಫಲ ಹೀಗೆ. ಈ ಬಡವರಿಗೆ ಕೃತಜ್ಞತೆ ಎಂಬುದೇ ಇಲ್ಲ...!” ಯಜಮಾನಿಯ ಭರ್ತ್ಸನೆಯ ನುಡಿಗಳು ಮುಂದುವರಿಯುತ್ತಲೇ ಇದ್ದುವು. ಈ ಮಾತುಗಳು ರುಖಿಯಾಬಿಯ ತಲೆಯಲ್ಲಿ ಎಚ್ಚರಿಕೆಯ ಗಂಟೆ ಬಾರಿಸಿ ಆಕೆ ಬೆಚ್ಚಿದಳು. “ಇಲ್ಲಮ್ಮಾ, ಇನ್ನು ಮುಂದೆ ಇವನೊಬ್ಬನನ್ನು ಕರೆದುಕೊಂಡು ಬರುತ್ತೇನೆ.” ಎಂದು ದಯನೀಯವಾಗಿ ಯಜಮಾನಿಯ ಮುಖ ನೋಡಿದಳು. “ಹೂಂ... ಅವನು ಮನೆಯೊಳಗೆ ಗಲೀಜು ಮಾಡದ ಹಾಗೆ ನೋಡಿಕೊ.” ಎನ್ನುತ್ತಾ ಯಜಮಾನಿ ಒಳಗೆ ಹೋದಾಗ, “ಅಬ್ಬಾ, ಏನು ಮಕ್ಕಳನ್ನೇ ಕಾಣದವರಂತಾಡುತ್ತಾಲ್ಲ?” ಎಂದು ಗೊಣಗಿ ತನ್ನ ಕೆಲಸ ಮುಂದುವರಿಸಿದಳು. ಸಂಜೆಗೆ ಮನೆಗೆ ಹಿಂತಿರುಗುವಾಗ ಯಜಮಾನಿ ಕೊಟ್ಟದ್ದನ್ನೆಲ್ಲಾ ಮಕ್ಕಳಿಗಾಗಿ ಕಟ್ಟಿಕೊಂಡು ಬಂದಳು. ಮಕ್ಕಳು ಅದು ಹೇಗೊ ಬಾಗಿಲು ತೆರೆದು ಹೊರ ಹೋಗಿ ಆಡುತ್ತಿದ್ದನ್ನು ಕಂಡಾಕೆ ಬೇಗನೆ ಮನೆಯೊಳಗಡಿ ಇಟ್ಟಳು. ಒಳಗಿನ ದೃಶ್ಯ ಕಂಡು ಕೋಪದಿಂದ ಕುದಿದಳು. ಅದಾಗಲೇ ಒಳ ನುಗ್ಗಿದ್ದ ಆಡು ಒಂದೆರಡು ಮಡಕೆಗಳನ್ನು ಒಡೆದು ಹಾಕಿ ಅದರಲ್ಲಿದ್ದ ಅಕ್ಕಿಯನ್ನೆಲ್ಲ ತಿಂದು ಹಿಕ್ಕೆ ಹಾಕಿ ಹೋಗಿತ್ತು...! “ಹಾಜಿರಾ...” ಮಗಳನ್ನು ಕೂಗಿ ಕರೆದಳು. “ಮನೆ ಬಾಗಿಲು ತೆರೆದಿಟ್ಟು ಎಲ್ಲಿಗೆ ಹೋಗಿದ್ದೆ? ಐದು ವರ್ಷದ ಕೋಣ, ಇನ್ನೂ ಬುದ್ಧಿ ಬಂದಿಲ್ಲ ಅಲ್ಲವಾ? ಇವತ್ತು ರಾತ್ರಿ ಏನು, ಮಣ್ಣು ತಿನ್ನುತ್ತೀಯಾ?” ಎನ್ನುತ್ತಾ ಆಕೆಯ ಬೆನ್ನಿಗೆ ಇಳಿತ 71 ಒಂದೆರಡು ಗುದ್ದು ಕೊಟ್ಟಳು. ಇಡೀ ದಿನ ಮಣ್ಣಿನಲ್ಲಿ ಆಡಿ ತಮ್ಮನನ್ನು ನೋಡಿಕೊಳ್ಳುತ್ತಾ ಹಸಿವೆಯಿಂದ ದಣಿದಿದ್ದ ಹುಡುಗಿ ಜೋರಾಗಿ ಅಳತೊಡಗಿದಳು. ಮುಖದಲ್ಲಿ ಮೆತ್ತಿಕೊಂಡಿದ್ದ ಮಣ್ಣಿನ ಮಧ್ಯದಲ್ಲಿ ಕಣ್ಣೀರು ಕಾಲುವೆಯಂತೆ ದಾರಿ ಮಾಡಿಕೊಂಡು ಹರಿಯಿತು. “ಈ ಮುದುಕಿ ಯಾವಾಗ ಬರುತ್ತಾಳೊ!” ಎಂದು ರುಖಿಯಾ ಸಹನೆಯಿಂದ ಗೊಣಗಿದಳು. ಅದಾಗಲೆ ಕತ್ತಲಾವರಿಸತೊಡಗಿತ್ತು. ಆಕೆ ಕೊಂಚ ನೀರು ಬಿಸಿ ಮಾಡಿ ಹೊರಗೆ ಕೊಂಡೊಯ್ಯುವಾಗ ದೂರದಲ್ಲಿ ಅತ್ತೆ ಬರುತ್ತಿರುವುದು ಕಣ್ಣಿಗೆ ಬಿತ್ತು. “ಅಬ್ಬ ಸದ್ಯ” ಎಂದಾಕೆ ನಿಟ್ಟುಸಿರುಬಿಡುತ್ತಾ ಅತ್ತೆಯನ್ನೆದುರುಗೊಂಡು ಅತ್ತೆಯ ಕೈಯಲ್ಲಿದ್ದ ದೊಡ್ಡದಾದ ಗಂಟನ್ನೆತ್ತಿಕೊಂಡು ಒಳ ನಡೆದಳು. ಬಳಿಕ ಅತ್ತೆಗೆ ಎಲ್ಲವನ್ನೂ ಒಂದೇ ಉಸಿರಿನಲ್ಲಿ ವಿವರಿಸಿ, “ಇನ್ನು ಮುಂದೆ ನೀವೇ ಹೋಗಿ ಕೆಲಸಕ್ಕೆ, ನಾನು ಮಕ್ಕಳನ್ನು ನೋಡಿಕೊಂಡು ಇಲ್ಲೆ ಇರುತ್ತೇನೆ.” ಎಂದಳು. ಉಮ್ಮಾಲಿ ತಂದದ್ದು ಕೆಲವು ದಿನಗಳವರೆಗಾದರೂ ಸಾಕಾಗುತ್ತಿತ್ತು. “ಜಮಾಲನನ್ನು ಒಮ್ಮೆ ಡಾಕ್ಟರಿಗೆ ತೋರಿಸಬೇಕಾಗಿತ್ತು.” ಎಂದು ರುಖಿಯಾ ನುಡಿದಾಗ ಉಮ್ಮಾಲಿ ಬೇರೆಯೇ ಪ್ರಶ್ನೆ ಕೇಳಿದಳು “ಮಮ್ಮೂಟಿಯಿಂದ ಪತ್ರವೇನಾದರೂ ಬಂದಿದೆಯೇ?” “ಪತ್ರ ಬರೆಯುವವರು ಈ ರೀತಿ ಎಲ್ಲರನ್ನೂ ಬೀದಿಗೆಸೆದು ಹೋಗುತ್ತಾರೆಯೇ? ನಿಮ್ಮ ಮಗ ಇನ್ನು ಬರುತ್ತಾರೆಂದುಕೊಂಡಿರಾ? ನಿಮಗೇನೊ ಭ್ರಾಂತಿ” ಅಸಹನೆಯಿಂದ ನುಡಿದಳಾಕೆ. “ಹಾಗನ್ನಬೇಡ ರುಖಿಯಾ. ಅವನು ಒಂದಲ್ಲ ಒಂದು ದಿನ ಬಂದೇ ಬರುತ್ತಾನೆ.'' ಆಶಾವಾದಿಯಾಗಿ ನುಡಿದಳು ಉಮ್ಮಾಲಿ. ಮರುದಿನ ಅತ್ತೆ ಸೊಸೆಯರು ಮನೆಗೆ ಬೀಗ ಹಾಕಿ ಜಮಾಲನನ್ನು ಅಸ್ಪತ್ರೆಗೆ ಕರೆದೊಯ್ದರು. ಡಾಕ್ಟರು ಮಗುವನ್ನು ಪರೀಕ್ಷೆ ಮಾಡಿ ಅದಕ್ಕೆ ಕೊಡಬೇಕಾದ ಔಷಧದ ಚೀಟಿಯನ್ನು ಕೊಟ್ಟು, “ಮಗುವಿಗೆ ದಿನಾಲೂ ಹಾಲು, ಹಣ್ಣು ಕೊಡಿ. ದಿನಕ್ಕೊಂದು ಮೊಟ್ಟೆ ಕೊಡಿ.” ಎಂದು ಸಲಹೆ ನೀಡಿದರು. ಹಿಂತಿರುಗಿ ಬರುತ್ತಾ ಉಮ್ಮಾಲಿ ಸೊಸೆಯೊಡನೆ, “ನಮ್ಮ ಆ ಕಂದು ಕೋಳಿ ಮೊಟ್ಟೆ ಇಡಲು ಸುರು ಮಾಡಿದೆಯಲ್ಲಾ? ಆ ಮೊಟ್ಟೆ ಮಾರುವುದು ಬೇಡ; ಮಗುವಿಗೆ ಕೊಡು. ಗಂಡು ಮಗುವಲ್ಲವಾ? ಹಾಗಾದರೂ ಬದುಕಲಿ” ಎಂದಳು. ಮುಂದೆ ಧನಿಯ ಮನೆಗೆ ಯಾರಾದರೊಬ್ಬರು ಕೆಲಸಕ್ಕೆ ಹೋಗುವುದು, ಒಬ್ಬರು ಮನೆಯಲ್ಲೇ ಉಳಿಯುವುದೆಂದು ತೀರ್ಮಾನಿಸಲಾಯಿತು. ಆದರೆ 72 ಸುಳಿ ಒಬ್ಬರು ದುಡಿದು ಐದು ಜನರ ಹೊಟ್ಟೆ ತುಂಬುವುದು ಹೇಗೆ? ಆ ದಿನ ಉಮ್ಮಾಲಿ ಮನೆಗೆ ಬಂದವಳು. ಕತ್ತಲಾದ ಬಳಿಕ ಅದೆಲ್ಲಿಗೊ ಹೋಗಿ ಬಂದಳು. ಬರುವಾಗ ಕೈಯಲ್ಲೊಂದು ದೊಡ್ಡ ಹಲಸಿನ ಕಾಯಿಯನ್ನೆತ್ತಿಕೊಂಡು ಬಂದಳು. “ಒಂದೆರಡು ದಿನಗಳಲ್ಲಿ ಹಣ್ಣಾಗಬಹುದು. ಎಲ್ಲರೂ ಹೊಟ್ಟೆ ತುಂಬಾ ತಿನ್ನುವಾ” ಎಂದಾಗ ರುಖಿಯಾ, “ಇದು ಮರಿಯಮ್ಮನ ಮರದ ಕಾಯಿಯಲ್ಲವಾ? ಅವರು ಕೊಟ್ಟದ್ದಾ?” ಎಂದು ಕೇಳಿದಳು. “ಅದೆಲ್ಲ ನಿನಗೇಕೆ? ಸುಮ್ಮನಿರು” ಎಂದು ಗದರಿದಳು. ಬೆಳಿಗ್ಗೆ ಉಮ್ಮಾಲಿ ಮೊಣಗಂಟು ನೋವೆಂದು ಮಲಗಿದಳು. ರುಖಿಯಾ ಕೆಲಸಕ್ಕೆ ಸಿದ್ಧಳಾಗುತ್ತಿದ್ದಾಗ ಹೊರಗೆ ಅದೇನೋ ಗಲಾಟೆ ಕೇಳಿಸಿತು. ಮರಿಯಮ್ಮನ ದೊಡ್ಡ ಗಂಟಲು ಊರಿಗೆಲ್ಲ ಕೇಳಿಸುತ್ತಿತ್ತು. “ಅಲ್ಲಾ, ಅಷ್ಟು ದೊಡ್ಡ ಹಲಸಿನ ಕಾಯಿ ನಿನ್ನೆ ಸಾಯಂಕಾಲದವರೆಗೆ ಮರದಲ್ಲಿದ್ದದ್ದು ಇವತ್ತು ಬೆಳಗಾಗುವಷ್ಟರಲ್ಲಿ ಹೇಗೆ ಮಾಯವಾಯ್ತೂಂತ? ಇಲ್ಲೇನು ಜಿನ್ನು ಬಂದಿದೆಯೇ?” ರುಖಿಯಾ ಒಳ ಬಂದು ಅತ್ತೆಯೊಡನೆ, “ಮರಿಯಕ್ಕ ಗಲಾಟೆ ಮಾಡ್ತಾರೆ. ಅವರ ಮರದ ಹಲಸಿನ ಕಾಯಿ ಕಳವಾಗಿದೆಯಂತೆ!” ಎಂದಳು. “ನೀನು ಹೋಗಿ ನಿನ್ನ ಕೆಲಸ ಮುಗಿಸಿ ಬಾ.” ಎನ್ನುತ್ತಾ ಉಮ್ಮಾಲಿ ಗೋಡೆಯ ಕಡೆ ಮುಖ ಮಾಡಿ ಮಲಗಿದಳು. “ನನ್ನ ಹಣ್ಣು ಕದ್ದವರ ಹೊಟ್ಟೆಯಲಿ ಹುಳ ಬೀಳಲಿ! ಹೊಟ್ಟೆ ಊದಿಕೊಂಡು ಸಾಯಲಿ. ನಾನು ಮೊಯಿದ್ದೀನ್ ದರ್ಗಾಕ್ಕೆ ನಾಲ್ಕಾಣೆ ಹಾಕುವೆ!” ಮರಿಯಮ್ಮ ಕಿರುಚುತ್ತಲೇ ಇದ್ದಳು. ರುಖಿಯಾ ಆಕೆಯ ಮುಂದಿನಿಂದಲೇ ಮಗುವನ್ನೆತ್ತಿಕೊಂಡು ಹೋಗುತ್ತಾ “ಹೂಂ... ಹೌದು ಮರಿಯಕ್ಕಾ, ಅಷ್ಟು ಒಳ್ಳೆಯ ಕಾಯಿ. ಯಾರು ಕೊಂಡು ಹೋದರೊ” ಎನ್ನುತ್ತಾ ಮುಂದೆ ಹೋದಳು. ಮರಿಯಮ್ಮ ಸಾಕಷ್ಟು ಹೊತ್ತು ಬೈದು, ಶಾಪ ಹಾಕಿ ಮನೆಯೊಳಹೊಕ್ಕಳು. ಸಾಯಂಕಾಲ ರುಖಿಯಾ ಹಿಂತಿರುಗಿದಾಗ ಮನೆಯೊಳಗೆಲ್ಲ ಹಣ್ಣಿನ ಪರಿಮಳ ಹರಡಿತ್ತು. ತಾಯಿಯನ್ನು ಕಂಡವಳೇ ಹಾಜಿರಾ, “ಉಮ್ಮಾ, ಹಲಸಿನ ಹಣ್ಣು ಕೊಯ್ದು ಕೊಡು.” ಎಂದಳು. ರುಖಿಯಾ, ‘ಶ್’ ಎಂದು ಬಾಯಿಯ ಮೇಲೆ ಕೈಯಿಟ್ಟು ಮಗಳನ್ನು ಸುಮ್ಮನಾಗಿಸಿದಳು. ಜಾಫರ್ ಕೂಡಾ ಹಣ್ಣನ್ನು ತೋರಿಸಿ ಏನೇನೊ ಹೇಳುತ್ತಿದ್ದನು. ಉಮ್ಮಾಲಿ ಮಕ್ಕಳನ್ನು ಗದರಿ ಸುಮ್ಮನಾಗಿಸುತ್ತಿದ್ದಳು. ಇಳಿತ 73 ರುಖಿಯಾ ತಾನು ಕಟ್ಟಿಕೊಂಡು ಬಂದಿದ್ದ ಕೆಂಡದ ರೊಟ್ಟಿಯ ತುಂಡುಗಳನ್ನು ಮಕ್ಕಳಿಗೆ ತಿನ್ನಿಸಿದಳು. ಉಮ್ಮಾಲಿ ಸೊಸೆಯೊಡನೆ, “ರಾತ್ರಿಗೆ ಅನ್ನ ಮಾಡುವುದು ಬೇಡ. ರಾತ್ರಿ ಎಲ್ಲರೂ ಮಲಗಿದ ಮೇಲೆ ಹಲಸಿನ ಹಣ್ಣು ಕೊಯ್ಯುವಾ.” ಎಂದು ಪಿಸುಗುಟ್ಟಿದಳು. ಹಾಜಿರಾ ಹಣ್ಣಿಗಾಗಿ ಅಳುತ್ತಾ ಮಲಗಿದಲ್ಲಿಯೆ ನಿದ್ರೆ ಹೋದಳು. ಜಾಫರನೂ ಹಣ್ಣು ತೋರಿಸುತ್ತಾ ಬೆರಳು ಚೀಪುತ್ತಾ ನಿದ್ದೆ ಹೋದನು. ಅತ್ತೆ, ಸೊಸೆಯರು ಎಲ್ಲರ ಮನೆಯ ದೀಪವಾರುವುದನ್ನೆ ಕಾಯುತ್ತಾ ಕೂತರು. ಎಲ್ಲೆಡೆಯ ದೀಪವಾರಿದ ಬಳಿಕ ಹಲಸಿನ ಹಣ್ಣು ತುಂಡು ಮಾಡಿದರು. ನಿದ್ರಿಸುತ್ತಿದ್ದ ಮಕ್ಕಳನ್ನು ಎಬ್ಬಿಸಿ ಹೊಟ್ಟೆ ತುಂಬಾ ಹಣ್ಣು ತಿನ್ನಿಸಿದರು. ಅರ್ಧ ಹಣ್ಣನ್ನು ಮರುದಿನಕ್ಕೆಂದು ಒಳ ಕೋಣೆಯ ಮಂಚದಡಿಯಲ್ಲಿಟ್ಟು ಬೀಜವನ್ನು ಜೋಪಾನವಾಗಿ ಎತ್ತಿಟ್ಟರು. ಸಿಪ್ಪೆಯನ್ನು ರಾತ್ರಿಯೇ ಆಡುಗಳ ಬಳಿ ಹಾಕಿದಳು. ಅರ್ಧ ರಾತ್ರಿಯಲ್ಲಿ ಆಡುಗಳಿಗೂ ಹಬ್ಬವಾಯಿತು. ಮರುದಿನ ಹಾಜಿರಾ ಮರಿಯಮ್ಮನ ಮೊಮ್ಮಗಳೊಡನೆ ತಾವೆಲ್ಲರೂ ಹಲಸಿನ ಹಣ್ಣು ತಿಂದ ವಿಷಯ ತಿಳಿಸಿದಳು. ಅಲ್ಲೇ ಇದ್ದ ಮರಿಯಮ್ಮ ತನಿಖೆ ಪ್ರಾರಂಭಿಸಿಯೆ ಬಿಟ್ಟಳು. ಮುಂದಿನದು ಇನ್ನೊಂದು ಬದರ್ ಯುದ್ಧ. ಮರಿಯಮ್ಮ ಉಮ್ಮಾಲಿಯ ಅಂಗಳಕ್ಕೆ ಬಂದು, “ನನ್ನ ಹಲಸಿನ ಹಣ್ಣು ಕದ್ದ ಕಳ್ಳೀ...” ಎಂದು ಪ್ರಾರಂಭಿಸಿದಳು. “ಇಸ್ಸಿ! ನಿನ್ನ ಹಣ್ಣು ಯಾರಿಗೆ ಬೇಕಾಗಿದೆ? ಅದು ನಾನು ಯಜಮಾನರ ತೋಟದಿಂದ ಎತ್ತಿಕೊಂಡು ಬಂದದ್ದು. ಸುಮ್ಮನೆ ಹೊರಟು ಹೋಗು ಇಲ್ಲಿಂದ!” ಎಂದು ದಬಾಯಿಸಿದಳು ಉಮ್ಮಾಲಿ. ಇಬ್ಬರೂ ಪರಸ್ಪರರ ಚರಿತ್ರೆ ಬಿಚ್ಚಿ ಊರವರ ಮುಂದಿಟ್ಟರು. “ಯಾವ್ಯಾವುದೊ ಹೆಣ್ಣುಗಳ ಹೊಟ್ಟೆ ಉಬ್ಬಿಸಿದನಲ್ಲ ನಿನ್ನ ಮಗ? ಅದಕ್ಕೇ ಊರವರಿಗೆ ಮುಖ ತೋರಿಸಲಾರದೆ ಓಡಿ ಹೋದ.” ಉಮ್ಮಾಲಿಯ ಇತಿಹಾಸದೆಡೆ ಮರಿಯಮ್ಮ ಬೆಳಕು ಹಾಯಿಸಿದಳು. “ನಿನ್ನ ಮಗಳ ಬುದ್ಧಿ ನೆಟ್ಟಗಿಲ್ಲದ್ದಕ್ಕೇ ಅಲ್ಲವಾ ಅವಳ ಗಂಡ ತಲಾಖ್ ನೀಡಿದ್ದು?” ಮರಿಯಮ್ಮಳ ಕಪ್ಪು ಚುಕ್ಕೆಯತ್ತ ಉಮ್ಮಾಲಿ ಬೊಟ್ಟು ಮಾಡಿದಳು. “ತಮ್ಮ ಒಂದು ಮೊಳ ಬಿಟ್ಟು ಇನ್ನೊಬ್ಬರ ಅರ್ಧ ಮೊಳ ತೋರಿಸುವವರು!” ಎಂದು ಸೇರಿಸಿದಳು. ಇಬ್ಬರೂ ಗಂಟಲು ಹರಿದು ಸುಸ್ತಾದ ಬಳಿಕ ತಮ್ಮ ತಮ್ಮ ಮನೆಯೊಳಗೆ ಸೇರಿಕೊಂಡರು. ಸಂಜೆಗೆ ರುಖಿಯಾ ಮರಿಯಮ್ಮನ ಮನೆಯ ಮುಂಭಾಗದಿಂದ ತನ್ನ 74 ಸುಳಿ ಮನೆಯೆಡೆಗೆ ಹೆಜ್ಜೆ ಹಾಕುತ್ತಿದ್ದರೆ. ಒಳಗಿಂದ ಮಾತುಗಳು ಬಾಣದಂತೆ ಹಾರಿ ಬಂದುವು. “ಹುಂ. ಇವಳು ಧನಿಯ ಮನೆಯಿಂದ ಏನೇನು ಕದ್ದು ತರುತ್ತಾಳೊ ಯಾರಿಗೆ ಗೊತ್ತು!” ರುಖಿಯಾ ಹಿಂತಿರುಗಿ ನೋಡಿದಳು. ಮರಿಯಮ್ಮ ಅವಳನ್ನೇ ದುರುಗುಟ್ಟಿ ನೋಡುತ್ತಿದ್ದಳು. ರುಖಿಯಾ ಎಂದೂ ಬಾಯಿ ಮುಚ್ಚಿ ಕುಳಿತವಳೇ ಅಲ್ಲವಲ್ಲ? ಆಕೆ ಗುರಿಯಿಟ್ಟು ಬಾಣ ಬಿಟ್ಟಳು. “ಹೌದು ನಾವು ಕದ್ದು ತಿನ್ನುವವರು. ನಿಮ್ಮ ಮಗಳ ಹಾಗೆ ದೇಹಮಾರಿ ಜೀವಿಸುವವರಲ್ಲ!” ಮರಿಯಮ್ಮನ ಮಗಳು ಬಂದು ತಾಯಿಯನ್ನು ಒಳಗೆಳೆದುಕೊಂಡು ಬಾಗಿಲಿಕ್ಕಿಕೊಂಡಳು. ಉಮ್ಮಾಲಿ ಮತ್ತು ಮರಿಯಮ್ಮ ಪರಸ್ಪರ ಮುಖ ನೋಡಲಾರದಂತಹ ಶತ್ರುಗಳಾದರು. ರುಖಿಯಾ ಮಾತ್ರ ಒಂದು ಪಾಠ ಕಲಿತಳು. ಮರುದಿನ ಧನಿಯ ಮನೆಯಲ್ಲಿ ಭತ್ತ ಕುಟ್ಟಿದ ಬಳಿಕ ಯಜಮಾನಿಯೊಡನೆ, “ಉಮ್ಮ, ನಾನು ಸ್ವಲ್ಪ ಉಮಿ ತೆಗೆದುಕೊಳ್ಳುತ್ತೇನೆ. ಬೆಳಿಗ್ಗೆ ಒಲೆ ಹೊತ್ತಿಸುವುದೆ ಕಷ್ಟವಾಗಿದೆ.” ಎಂದು ಹೇಳಿ ಕುಕ್ಕೆಯ ತಳಭಾಗದಲ್ಲಿ ಸೇರಿನಷ್ಟು ಅಕ್ಕಿ ಹಾಕಿ ಮೇಲ್ಭಾಗದಲ್ಲಿ ಉಮಿ ತುಂಬಿಸಿದಳು. ಸಾಯಂಕಾಲ ಅದನ್ನು ಮನೆಗೆ ತಂದು ಗೆರಸೆಯಲ್ಲಿ ಹಾಕಿ ಕೇರಿ ಶುಚಿ ಮಾಡಿ ತೆಗೆದಿಟ್ಟು ಉಮಿಯನ್ನು ಒಲೆಯಲ್ಲಿ ಸುರಿದಳು. * * * * * ಮತ್ತೊಂದು ವರ್ಷ ಉರುಳಿತು. ಈಗ ಉಮ್ಮಾಲಿ ಆಗಾಗ ಬಾಣಂತಿ ಕೆಲಸಕ್ಕೆ ಹೋಗುತ್ತಿದ್ದಳು. ಇತರ ಎಲ್ಲಾ ಕೆಲಸಗಳಿಗಿಂತ ಈ ಕೆಲಸದಲ್ಲಿ ಹೆಚ್ಚಿನ ಸಂಪಾದನೆಯಿತ್ತು. ಕೈ ತುಂಬಾ ಹಣ, ಬಟ್ಟೆ, ಬರೆ, ಇನ್ನಿತರ ಸಾಮಾನುಗಳೆಲ್ಲವೂ ದೊರೆಯುತ್ತಿದ್ದವು. ರುಖಿಯಾ ಧನಿಗಳ ಮನೆಯಲ್ಲಿ ದುಡಿಯುವುದಂತೂ ಇದ್ದೇ ಇತ್ತು. ಹೀಗಾಗಿ ಮಕ್ಕಳ ಹೊಟ್ಟೆ ಎರಡು ಹೊತ್ತೂ ತುಂಬುತ್ತಿತ್ತು. ಉಮ್ಮಾಲಿ ಹಿಂತಿರುಗಿ ಬಂದಾಗ ಕೇಳುತ್ತಿದ್ದ ಮೊದಲ ಪ್ರಶ್ನೆ “ಮಮ್ಮೂಟಿಯಿಂದ ಪತ್ರವೇನಾದರೂ ಇದೆಯೇ ರುಖಿಯಾ?” ಎಂಬುದು. ಈ ಪ್ರಶ್ನೆ ಕೇಳಿದೊಡನೆ ರುಖಿಯಾ ಸಿಡಿದೇಳುತ್ತಿದ್ದಳು. “ನಿಮ್ಮ ಮಗ ಯಾವಳನ್ನು ಕಟ್ಟಿಕೊಂಡು ಓಡಿ ಹೋಗಿದ್ದಾರೊ ಯಾರಿಗೆ ಗೊತ್ತು! ಹೆಂಡತಿ ಮಕ್ಕಳ ನೆನಪಿರುತ್ತದೆಯೆ ಅಂತಹವರಿಗೆ? ಎಲ್ಲಿ ಸತ್ತರೊ!” ಎಂದು ಸಿಡಿಮಿಡಿಗೊಳ್ಳುತ್ತಿದ್ದಳು. ಇಳಿತ 75 “ಹಾಗೆ ಹೇಳಬೇಡ ಹೆಣ್ಣೆ. ನನ್ನ ಮಗ ಒಂದಿಲ್ಲ ಒಂದು ದಿನ ಬಂದೇ ಬರುತ್ತಾನೆ!” ತಾಳ್ಮೆಯಿಂದ ನುಡಿಯುತ್ತಿದ್ದಳು ಉಮ್ಮಾಲಿ. “ಹೂಂ. ಹೌದು ನನ್ನ ಹೆಣ ಹೊರಲಿಕ್ಕೆ ಬರುತ್ತಾರೆ, ಅಷ್ಟೆ!” “ನಿನ್ನ ಬಾಯಲ್ಲಿ ಎಂದಾದರೂ ಒಳ್ಳೆಯ ಮಾತು ಬಂದದ್ದಿದೆಯೇ?” ಎನ್ನುತ್ತಾ ಉಮ್ಮಾಲಿ ಮೌನ ತಾಳುತ್ತಿದ್ದಳು. ಅತ್ತೆ ಸೊಸೆಯರು ಈಗ ಮೊದಲಿನಂತೆ ಜಗಳಾಡುತ್ತಿರಲಿಲ್ಲ. ಈಗ ಆಕೆ ಮಗನ ದುಡಿಮೆಯಲ್ಲಿ ಪಾಲು ಕೇಳುವವಳಾಗಿರಲಿಲ್ಲ. ಬದಲಾಗಿ ಮನೆಯ ಆಧಾರಸ್ತಂಭವಾಗಿದ್ದಳು. ಸೊಸೆ ಮತ್ತು ಮೊಮ್ಮಕ್ಕಳಿಗಾಗಿ ಹಗಲಿರುಳೂ ದೇಹ ಸವೆಸುತ್ತಿದ್ದಳು... ಎಂಬ ವಾಸ್ತವ ಸ್ಥಿತಿ ರುಖಿಯಾಳ ಹೃದಯವನ್ನು ಮೆತ್ತಗೆ ಮಾಡಿತ್ತು. ಆದರೆ ತನ್ನ ಗಂಡನ ವಿಷಯದಲ್ಲಿ ಮಾತ್ರ ಆಕೆಯೆದೆ ಕಲ್ಲಾಗಿತ್ತು. ಎಲ್ಲಿಗೆ ಹೋಗುವುದಾದರೂ ತನ್ನೊಡನೆ ಒಂದು ಮಾತು ತಿಳಿಸಿ ಹೋಗಬಹುದಾಗಿತ್ತಲ್ಲ? ತುಂಬಿದ ಗರ್ಭಿಣಿಯಾದ ತನ್ನನ್ನೂ ಮಕ್ಕಳನ್ನೂ ಈ ರೀತಿ ನಡು ಹಾದಿಯಲ್ಲಿ ಬಿಟ್ಟು ಹೋಗುವವನೆಂತಹ ಗಂಡ? ಯಾರೊ ಒಬ್ಬ ತರುಣಿಯನ್ನು ಕಂಡೊಡನೆ ಎಲ್ಲರನ್ನೂ ಮರೆತು ಬಿಡುವುದೇ? ಆದರೂ ಎಂದಾದರೊಮ್ಮೆ ಆ ಕಲ್ಲು ಹೃದಯದ ಅಡಿಭಾಗದಿಂದ ಪ್ರೇಮದೊರತೆ ಒಸರುವುದುಂಟು. ತಾರುಣ್ಯದ ದೇಹ ಗಂಡನ ಬಿಸಿಯಪ್ಪುಗೆಗಾಗಿ, ಮಧುರ ಚುಂಬನಕ್ಕಾಗಿ ಕಾತರಿಸುವುದುಂಟು. ಸುಂದರನಾದ, ದೃಢಕಾಯನಾದ ಮಮ್ಮೂಟಿಯನ್ನು ಹೃದಯದಾಳದಿಂದ ದ್ವೇಷಿಸಲು ಆಕೆಗೆ ಸಾಧ್ಯವಾಗುತ್ತಿರಲಿಲ್ಲ. ಆತನೆದೆಯಲ್ಲಿ ಮುಖವಿಟ್ಟು ತನ್ನ ನೋವನ್ನು ತೋಡಿಕೊಂಡಾಗ ಆತನ ಬಿಸಿಯಪ್ಪುಗೆ, ನೇವರಿಕೆಯಲ್ಲೇ ಸ್ವರ್ಗಸುಖ ಕಂಡಿಲ್ಲವೇ? ಪ್ರಥಮ ರಾತ್ರಿಯ ಅನುಭವ ಭಯಾನಕವಾಗಿದ್ದರೂ ಆ ಬಳಿಕ ಆ ಕುರಿತು ಮಮ್ಮೂಟಿ ಆಕೆಯನ್ನು ಹಾಸ್ಯ ಮಾಡಿದ್ದು ಎಷ್ಟು ಬಾರಿಯೊ. ರುಖಿಯಾ ಆಗೆಲ್ಲ ತುಟಿ ಕೊಂಕಿಸಿ ಹುಸಿಗೋಪ ನಟಿಸುತ್ತಿದ್ದಳು. ಎಲ್ಲ ಅನುಭವಗಳೂ ಕೇವಲ ಕನಸಾಗಿ ಹೋಯಿತೇ? ಮಮ್ಮೂಟಿ ಇನ್ನೆಂದಿಗೂ ತಿರುಗಿ ಬರಲಾರನೇ? ಸುಂದರವಾದ ಆತನ ತಲೆಗೂದಲಲ್ಲಿ ಒಂದು ಬಾರಿ ಬೆರಳಾಡಿಸಲು ಸಾಧ್ಯವಾಗಿದ್ದರೆ...! ರುಖಿಯಾ ನಿಟ್ಟುಸಿರಿಡುತ್ತಾ ಮಗ್ಗುಲು ಬದಲಿಸುತ್ತಿದ್ದಳು. ಈ ಯೋಚನೆಗಳೆಲ್ಲ ಕಾಡಿದ ದಿನ ಬೆಳಗಿನ ಜಾವದವರೆಗೆ ನಿದ್ದೆ ಆಕೆಯ ಸಮೀಪ ಸುಳಿಯುತ್ತಿರಲಿಲ್ಲ. ಕರಗತೊಡಗಿದ ಹೃದಯವನ್ನು ಕಲ್ಲು ಮಾಡಿಕೊಳ್ಳಲು ಆಕೆಗಿದ್ದ ಹಾದಿ ಒಂದೆ. ಆತನನ್ನು 76 ಸುಳಿ ಮನಸಾರ ದ್ವೇಷಿಸುತ್ತೇನೆಂದು ತನ್ನನ್ನು ತಾನೇ ನಂಬಿಸುವುದು ‘ಥತ್, ಈ ಗಂಡಸರ ನಾಯಿ ಬುದ್ಧಿಗಿಷ್ಟು ಬೆಂಕಿ ಹಾಕ!’ ಎನ್ನುತ್ತಾ ಮತ್ತೊಮ್ಮೆ ಮಗ್ಗುಲು ಬದಲಿಸುತ್ತಿದ್ದಳು. * * * * * ಈಗ ಹಾಜಿರಾಗೆ ಆರು ವರ್ಷ ತುಂಬಿತ್ತು. ರುಖಿಯಾ ಕಳೆದೊಂದು ವರ್ಷದಿಂದ ಮಗಳನ್ನು ಶಾಲೆಗೆ ಕಳಿಸುತ್ತಿದ್ದಳು. ಒಮ್ಮೆ ಧನಿಯ ಮನೆಯಲ್ಲಿ ಭತ್ತ ಕುಟ್ಟುತ್ತಿದ್ದಾಗ ಅಲ್ಲಿಗೆ ಬಂದ ಯಜಮಾನಿ, “ನಿನ್ನ ಮಗಳೆಲ್ಲಿ? ಇತ್ತೀಚೆಗೆ ಈ ಕಡೆ ಬರುತ್ತಿಲ್ಲವಲ್ಲಾ?” ಎಂದು ಕೇಳಿದಳು. ಮಗಳು ಶಾಲೆಗೆ ಹೋಗುವ ವಿಷಯವನ್ನು ಯಜಮಾನಿಗೆ ತಿಳಿಸಿದಾಗ ಆಕೆ, “ನಿಮ್ಮ ಮಕ್ಕಳಿಗೆಲ್ಲ ವಿದ್ಯೆ ಯಾವ ಕರ್ಮಕ್ಕೆ? ಅದೂ ಹೆಣ್ಣು ಮಕ್ಕಳಿಗೆ? ಅವಳನ್ನು ಇಲ್ಲಿ ತಂದು ಬಿಡು. ನನ್ನ ಮೊಮ್ಮಗಳನ್ನು ಆಟ ಆಡಿಸುತ್ತಿರಲಿ. ಹಾಗೇ ಏನಾದರೂ ಚಿಕ್ಕ ಪುಟ್ಟ ಕೆಲಸವನ್ನೂ ಕಲಿಯಲಿ.” ಎಂದಳು. “ಇಷ್ಟು ಚಿಕ್ಕ ಹುಡುಗಿ ಏನು ಕೆಲಸ ಮಾಡುತ್ತಾಳೆ? ಒಂದೆರಡು ವರ್ಷ ಕಳೆಯಲಿ. ನಾಲ್ಕಕ್ಷರವನ್ನಾದರೂ ಕಲಿಯಲಿ.” ಎಂದು ನಯವಾಗಿಯೆ ಯಜಮಾನಿಯ ಸಲಹೆಯನ್ನು ತಿರಸ್ಕರಿಸಿದ್ದಳು ರುಖಿಯಾ. “ರುಖಿಯಾ, ನಾನು ಮೊನ್ನೆ ಇದ್ದ ಮನೆಯಲ್ಲಿ ಮಗುವನ್ನು ನೋಡಿಕೊಳ್ಳಲು ಚಿಕ್ಕ ಹುಡುಗಿ ಬೇಕಂತೆ. ನಮ್ಮ ಹಾಜಿರಾಳನ್ನು ಬಿಡುವನಾ?” ಎಂದು ಉಮ್ಮಾಲಿ ಕೂಡಾ ಒಮ್ಮೆ ಕೇಳಿದ್ದಳು. “ನಾವಿಬ್ಬರು ಕತ್ತೆ ಚಾಕರಿ ಮಾಡುತ್ತಿರುವುದು ಸಾಲದೇ?” ಎಂದು ರುಖಿಯಾ ಒರಟಾಗಿಯೆ ಕೇಳಿ ಅತ್ತೆಯ ಬಾಯಿ ಮುಚ್ಚಿಸಿದ್ದಳು. * * * * * ಹಾಜಿರಾಗೆ ಏಳು ವರ್ಷ ತುಂಬಿತು. ಜಾಫರನಿಗೀಗ ಐದು ವರ್ಷ. “ಈ ಜಡಿ ಮಳೆ ಮುಗಿದೊಡನೆ ಜಾಫರನ್ನೂ ಶಾಲೆಗೆ ಸೇರಿಸಬೇಕು.” ಎಂದು ರುಖಿಯಾ ಒಂದು ದಿನ ಅತ್ತೆಯೊಡನಂದಳು. ಮಳೆಗಾಲ ಕಾಲಿಟ್ಟು ಆಗಲೇ ಒಂದು ತಿಂಗಳು ಕಳೆದಿತ್ತು. ಎಂದಿನಂತೆಯೇ ಅತ್ತೆಸೊಸೆಯರ ವಿಶ್ರಾಂತಿ ಇಲ್ಲದ ದುಡಿಮೆ, ತೀವ್ರ ಬಡತನ. ಬೆಳೆಯುತ್ತಿರುವ ಮಕ್ಕಳಿಗೆ ತಿಂದಷ್ಟೂ ತೀರದ ಹಸಿವು. ಮಳೆಗಾಲವಾದುದರಿಂದ ಒಲೆ ಉರಿಸುವ ಕಟ್ಟಿಗೆಗೂ ಅಭಾವ. ಹಿಂದಿನ ದಿನದಿಂದಲೇ ಸುರಿಯುತ್ತಿದ್ದ ಮಳೆ ಇನ್ನೂ ನಿಂತಿರಲಿಲ್ಲ. ಆಕಾಶದಲ್ಲಿ ಸೂರ್ಯನ ಮುಖ ಕಾಣದೆ ಮೂರು ದಿನಗಳಾಗಿತ್ತು. ಕಪ್ಪು ಇಳಿತ 77 ಮೋಡಗಳು ಒಂದರ ಹಿಂದೊಂದು ದಟ್ಟೈಸಿ ಬಂದು ಮಳೆ ಸುರಿಸುತ್ತಿತ್ತು. “ನಾವು ಈ ಮನೆಗೆ ಬಂದ ಮೇಲೆ ನದಿಯಲ್ಲಿ ದೊಡ್ಡ ಪ್ರವಾಹ ಬಂದಿಲ್ಲವಲ್ಲ? ಈ ಬಾರಿ ಇಂತಹ ಮಳೆಗೆ ಪ್ರವಾಹ ಬಂದೆ ಬರುತ್ತದೆ ನೋಡುತ್ತಿರು.” ಉಮ್ಮಾಲಿ ಜಗಲಿಯಲ್ಲಿ ಕುಳಿತು ನದಿಯೆಡೆಗೆ ನೋಡುತ್ತಾ ನುಡಿದಳು. “ಪ್ರವಾಹ ಬಂದರೆ ಒಂದಷ್ಟು ಕಸ, ಕಡ್ಡಿ, ಕಟ್ಟಿಗೆಗಳೂ ತೇಲಿ ಬರುತ್ತವಲ್ಲ? ಅವನ್ನೆಲ್ಲ ಶೇಖರಿಸಿ ಒಣಗಿಸಿದರೆ ಸ್ವಲ್ಪ ದಿನ ಒಲೆ ಉರಿಸಬಹುದು.” ಎಂದು ಸೊಸೆಯೂ ಉತ್ತರಿಸಿದಳು. ಮರುದಿನ ಬೆಳಿಗ್ಗೆ ನೋಡಿದರೆ ನದಿಯಲ್ಲಿ ದೊಡ್ಡ ಪ್ರವಾಹವೇ ಬಂದಿತ್ತು. ಮನೆಯ ಹಿಂಭಾಗದ ಗೋಡೆಗೆ ನೀರು ಬಡಿಯುವ ಸದ್ದಿನಿಂದ ಉಮ್ಮಾಲಿ ಎಚ್ಚೆತ್ತಳು. “ಯಾ ಅಲ್ಲಾ, ಮನೆಯೊಳಗೆ ನೀರು ನುಗ್ಗದಿದ್ದರೆ ಸಾಕಾಗಿತ್ತು.” ಎಂದು ಆತಂಕದಿಂದ ನುಡಿದಳು ರುಖಿಯಾ. ಬೆಳಿಗ್ಗೆ ಎಲ್ಲರೂ ಎದ್ದು ಹೊರಬಂದು ನೆರೆ ನೀರನ್ನು ನೋಡುತ್ತಾ ನಿಂತರು. ಉಮ್ಮಾಲಿ ಮತ್ತು ರುಖಿಯಾ ಬಟ್ಟೆಯನ್ನು ಕೊಂಚ ಮೇಲೆತ್ತಿ ಕಟ್ಟಿ ನೀರಿಗಿಳಿದು ಸ್ವಲ್ಪದೂರ ನಡೆದರು. ನೀರಿನಲ್ಲಿ ತೇಲಿ ಬರುತ್ತಿದ್ದ ತೆಂಗಿನ ಮಡಲುಗಳು, ಮರದ ಗೆಲ್ಲುಗಳು, ಆಗೀಗ ಕಾಣಿಸುತ್ತಿದ್ದ ತೆಂಗಿನ ಕಾಯಿಗಳು, ಇತರ ಕಸಕಡ್ಡಿಗಳನ್ನೆಲ್ಲ ಶೇಖರಿಸತೊಡಗಿದರು. ಒಮ್ಮೆ ಜೋರಾಗಿ ಹೊಡೆದ ಮಳೆ ಈಗ ಕೊಂಚ ಕಮ್ಮಿಯಾಗಿತ್ತು. ಇನ್ನೊಂದು ಮಳೆ ಹೊಡೆಯುವಷ್ಟರಲ್ಲಿ ನೀರಿನಲ್ಲಿ ತೇಲಿ ಬಂದವುಗಳನ್ನು ದಡಕ್ಕೆ ತಂದು ಹಾಕಲು ಅತ್ತೆಸೊಸೆಯರು ತವಕಿಸುತ್ತಿದ್ದರು. ಇಬ್ಬರೂ ಕೈಗೆ ದೊರೆತದ್ದನ್ನೆಲ್ಲ ತಂದು ತಂದು ದಡಕ್ಕೆ ಹಾಕಿ ಪುನಃ ನೀರಿಗಿಳಿಯುತ್ತಿದ್ದರು. ಜಾಫರ್ ಮತ್ತು ಹಾಜಿರಾ ಬಾಗಿಲವರೆಗೆ ಬಂದ ನೀರಿನಲ್ಲಿ ಆಟವಾಡುತ್ತಿದ್ದರು. ಪುಟ್ಟ ಜಮಾಲನು ಜ್ವರದಿಂದಾಗಿ ಒಳಗೆ ಮಲಗಿದ್ದನು. ಆಕಾಶದಲ್ಲಿ ಮೋಡಗಳು ಮತ್ತೊಮ್ಮೆ ದಟ್ಟೈಸಿ ಜೋರಾಗಿ ಗಾಳಿ ಬೀಸತೊಡಗಿತು. ಮಳೆ ಹನಿಗಳೂ ಬೀಳತೊಡಗಿದುವು. “ಮಕ್ಕಳೆಲ್ಲಿ? ಅವುಗಳನ್ನು ಕರೆದುಕೊಂಡು ಹೋಗಿ ಅವುಗಳ ತಲೆ ಒರೆಸು. ಇಬ್ಬರಿಗೂ ಮೂಗಿನಿಂದ ಸುರಿಯುತ್ತಾ ಇದೆ.” ಎಂದು ಉಮ್ಮಾಲಿ ಸೊಸೆಯೊಡನಂದಳು. ಅಷ್ಟರಲ್ಲಿ ಮಳೆ ಜೋರಾಗಿ ಹೊಡೆದೇ ಬಿಟ್ಟಿತ್ತು. ಪ್ರವಾಹದ ಅಬ್ಬರ ಗಾಳಿ ಮಳೆಯ ಅಬ್ಬರವನ್ನೂ ಮೀರಿಸಿತ್ತು. “ಹಾಜಿರಾ, ಜಾಫರ್ ಎಲ್ಲಿದ್ದೀರಿ? 78 ಸುಳಿ ಒಳಗೆ ಬನ್ನಿ” ಎಂದು ರುಖಿಯಾ ಜೋರಾಗಿ ಕರೆದಳು. ಕೊಂಚ ಹೊತ್ತಿಗೆಲ್ಲಾ ಹಾಜಿರಾ ಓಡಿ ಬಂದಳು. “ಜಾಫರ್ ಎಲ್ಲಿ?” ಎಂದು ಕೇಳಿದಾಗ “ನನಗೊತ್ತಿಲ್ಲ” ಎಂದು ಪಿಳಿ ಪಿಳಿ ಕಣ್ಣು ಬಿಟ್ಟಳು. ರುಖಿಯಾ ಹೊರಗೋಡಿದಳು. “ಉಮ್ಮಾ, ಜಾಫರ್ ಎಲ್ಲಿ?” ಎಂದು ಆತಂಕದಿಂದ ಕೇಳಿದಳು. “ಅಲ್ಲೇ ಹಾಜಿರಾಳ ಜೊತೆಯಲ್ಲೇ ಇದ್ದನಲ್ಲ?” ಉಮ್ಮಾಲಿ ಕುಳಿತಲ್ಲಿಂದ ಎದ್ದು ಹೊರಗೋಡಿದಳು. “ಜಾಫರ್, ಜಾಫರೂ...” ರುಖಿಯಾ ಮತ್ತಷ್ಟು ಗಾಬರಿಯಿಂದ ಕೂಗಿ ಕರೆದಳು. ಕೆಂಪು ನೀರನ್ನು ಒಡಲಲ್ಲಿ ತುಂಬಿಕೊಂಡು ಭೋರೆಂದು ಗರ್ಜಿಸುತ್ತಾ ದಡ ಮೀರಿ ಹರಿಯುತ್ತಿದ್ದಳು ಪಯಸ್ವಿನಿ. ತನ್ನೊಡಲಲ್ಲಿ ತುಂಬಿದ್ದನ್ನೆಲ್ಲ ಕೊಂಡೊಯ್ದು ಸಾಗರ ಸೇರಿಸುವ ತವಕ ಆಕೆಯದು. ತೆಂಗಿನ ಮರಗಳೆಡೆಯಿಂದ, ಹೊನ್ನೆ ಮರಗಳಡಿಯಿಂದ ಮದವೇರಿದ ಆನೆಯಂತೆ ಮುನ್ನುಗುತ್ತಿದ್ದಳು ಆಕೆ. “ಜಾಫರ್... ಜಾಫರೂ...” ಅತ್ತೆ ಸೊಸೆಯರಿಬ್ಬರೂ ಕೂಗಿ ಕರೆಯತೊಡಗಿದರು. “ಜಾಫರ್ ಎಲ್ಲಿ? ನನ್ನ ಕಂದನೆಲ್ಲಿ?” ರುಖಿಯಾ ಎದೆ ಬಡಿದು ಅಳತೊಡಗಿದಳು. ಐದು ವರ್ಷದ ಪುಟ್ಟ ಹುಡುಗ ಜಾಫರ್‍ನನ್ನು ಅದ್ಯಾವ ಮಾಯದಲ್ಲೊ ಪಯಸ್ವಿನಿ ಸೆಳೆದುಕೊಂಡು ಹೋಗಿದ್ದಳು. ಕ್ಷಣ ಮಾತ್ರದಲ್ಲಿ ಮನೆ ರೋದನದಲ್ಲಿ ಮುಳುಗಿತು. ನೆರೆಮನೆಯ ಮರಿಯಮ್ಮ ಮತ್ತು ಮಗಳು ಓಡಿ ಬಂದರು. ಹಲಸಿನ ಹಣ್ಣಿಗಾಗಿ ಮಾತು ಬಿಟ್ಟು ಈವರೆಗೂ ರಾಜಿಯಾಗದಿದ್ದವರು ಈಗ ಮಾತ್ರ “ಏನು ರುಖಿಯಾ ಏನಾಯಿತು?” ಎಂದು ಕೇಳುತ್ತಾ ಜಡಿ ಮಳೆಯಲ್ಲೇ ಓಡಿ ಬಂದರು. ಒಣಗಿ ಬತ್ತಿದ್ದ ಕೆರೆ, ಕೊಳಗಳೂ ಒಮ್ಮೊಮ್ಮೆ ತುಂಬಿ ಹರಿಯುತ್ತದಲ್ಲವೇ? “ಏನು ಹೇಳಲಿ ಮರಿಯಮ್ಮಾ? ನನ್ನ ಬಂಗಾರದಂತಹ ಕೂಸು ಜಾಫರ್..... ನೆರೆಯಲ್ಲಿ....” ಎನ್ನುತ್ತಾ ಎದೆ ಬಡಿದು ಅಳತೊಡಗಿದಳು ಉಮ್ಮಾಲಿ. ಸುತ್ತಮುತ್ತಲ ಜನ ಸೇರಿದರು. ಒಂದಿಬ್ಬರು ಗಂಡಸರು ನದಿಯಲ್ಲಿ ಒಂದಷ್ಟು ದೂರ ಈಜಿಕೊಂಡು ಹೋದರು. ಕೊಂಚ ಹೊತ್ತಿನ ಬಳಿಕ ಬರಿಗೈಯಿಂದ ಹಿಂತಿರುಗಿದರು. “ನಾನಿನ್ನು ಹೇಗೆ ಬದುಕಿರಲಿ? ನನ್ನ ಕಂದ ನಮ್ಮೆಲ್ಲರ ಕಣ್ಣು ತಪ್ಪಿಸಿ ಹೋಗಿ ಬಿಟ್ಟನಲ್ಲ? ನನ್ನ ಮಗುವಿಗೆ ಒಂದು ದಿನವಾದರೂ ಹೊಟ್ಟೆ ತುಂಬಾ ಅನ್ನ ಹಾಕಲಿಲ್ಲವಲ್ಲ? ಒಂದು ಲೋಟ ಹಾಲನ್ನಾದರೂ ಕುಡಿಸಲಿಲ್ಲ. ನನ್ನ ಮಗುವನ್ನು ನಾನಿನ್ನೆಲ್ಲಿ ನೋಡಲಿ? ಯಾ ಅಲ್ಲಾ, ನನಗೇಕೆ ಇಂತಹ ಶಿಕ್ಷೆ ಇಳಿತ 79 ಕೊಟ್ಟೆ?” ಎಂದು ರುಖಿಯಾ ತಲೆಯನ್ನು ಗೋಡೆಗೆ ಗಟ್ಟಿಸಿಕೊಂಡು ಅಳತೊಡಗಿದಳು. “ಸಮಾಧಾನ ಮಾಡ್ಕೊಳ್ಳಿ. ಈ ರೀತಿ ಅತ್ತರೆ ಹೋದ ಮಗು ಬರುತ್ತದೆಯೇ?” ಎಂದು ಮರಿಯಮ್ಮ ಇಬ್ಬರನ್ನೂ ಸಂತೈಸತೊಡಗಿದಳು. ಕಣ್ಮರೆಯಾದ ಮಗುವಿಗಾಗಿ ಅತ್ತೆ ಸೊಸೆಯರು ಬಹಳ ಹೊತ್ತು ಗೋಳಾಡಿದರು. “ನಿನ್ನ ಜೊತೆ ಆಡುತ್ತಿದ್ದವನನ್ನು ನೀನು ನೋಡಲಿಲ್ಲವಾ?” ಎಂದು ಹಾಜಿರಾಳನ್ನು ತರಾಟೆಗೆ ತೆಗೆದುಕೊಂಡು ಅವಳು ಇನ್ನಷ್ಟು ಅಳತೊಡಗಿದಾಗ ಸುಮ್ಮನಾದರು. ಮರಣವನ್ನೇ ನೆನೆದು ಅಳುತ್ತಾ ಕೂತರೆ ಬದುಕಿರುವವರ ಹೊಟ್ಟೆ ತುಂಬುತ್ತದೆಯೇ? ಒಂದೆರಡು ದಿನ ಮನೆಯಲ್ಲಿ ಕುಳಿತವರು ಮೂರನೆ ದಿನದಿಂದ ಎಂದಿನ ದುಡಿಮೆಗೆ ಪ್ರಾರಂಭಿಸಿದರು. “ಹೆತ್ತ ಮಕ್ಕಳೆಲ್ಲವೂ ನಮ್ಮದಾಗುವುದಿಲ್ಲ” ಎಂದು ಉಮ್ಮಾಲಿ ಸೊಸೆಗೆ ಸಾಂತ್ವನ ಹೇಳಿದಳು. * * * * * ಇದಾಗಿ ಮತ್ತೂ ಐದಾರು ವರ್ಷಗಳು ಕಳೆದಿವೆ. ಈಗ ಹಾಜಿರಾ ಹದಿಮೂರು ವರ್ಷದ ಹುಡುಗಿ. ಆಕೆ ಶಾಲೆ ಬಿಟ್ಟು ಆಗಲೇ ಮೂರು ವರ್ಷಗಳಾಗಿವೆ. ಅಜ್ಜಿಗೆ ಆಗಲೆ ಮೊಮ್ಮಗಳ ಮದುವೆಯ ಚಿಂತೆ ಪ್ರಾರಂಭವಾಗಿದೆ. ಚಿಕ್ಕಂದಿನಲ್ಲಿ ಕಿವಿಯ ಮೇಲ್ಬಾಗದಲ್ಲಿ ಮಾಡಿದ ಹತ್ತು ತೂತುಗಳಲ್ಲಿ ಈಗಲೂ ಕೆಂಪು ನೂಲುಗಳಷ್ಟೆ ಇವೆ. “ಬೆಳ್ಳಿಯ ಸರಿಗೆಯನ್ನಾದರೂ ಮಾಡಿ ಹಾಕಲು ನಮ್ಮಿಂದ ಸಾಧ್ಯವಿಲ್ಲದಿರುವಾಗ ಈ ತೂತುಗಳನ್ನಾದರೂ ಯಾಕೆ ಮಾಡಿಸ್ಬೇಕು?” ಎಂದು ರುಖಿಯಾ ಕೇಳಿದಾಗ ಉಮ್ಮಾಲಿ, “ಕಿವಿಯ ಮೇಲ್ಭಾಗ ತೂತು ಮಾಡದಿದ್ದರೆ ಅವಳನ್ನು ಮದುವೆಯಾಗುವವರಾರು?” ಎಂದು ಸೊಸೆಯೊಡನಂದು ನಾಲ್ಕು ವರ್ಷದ ಮಗುವಿನ ಒಂದೊಂದು ಕಿವಿಯ ಮೇಲ್ಭಾಗದಲ್ಲೂ ಸೂಜಿಯಿಂದ ಐದೈದು ತೂತು ಮಾಡಿದ್ದರು. ಎರಡು ತಿಂಗಳುಗಳವರೆಗೆ ಕಿವಿ ಹುಣ್ಣಿನ ನೋವಿನಿಂದಾಗಿ ಆಕೆ ಸಮನಾಗಿ ನಿದ್ರಿಸಿರಲಿಲ್ಲ. ಈಗ ಈ ತೂತುಗಳಿಗೆ ಚಿನ್ನದ ಅಲಿಕತ್ತು ಮಾಡಿಸುವ ತವಕ ಅತ್ತೆ ಸೊಸೆಯರಿಗೆ. ಮೊಟ್ಟೆಯಿಡುವ ಕೋಳಿಗಳು ಮನೆಯಲ್ಲಿದ್ದರೂ ಒಂದೇ ಒಂದು ಮೊಟ್ಟೆಯನ್ನು ಮಕ್ಕಳಿಗೆ ನೀಡಲಾರರು. ಕೋಳಿ ಮತ್ತು ಮೊಟ್ಟೆ ಮಾರಿದ ಹಣವೆಲ್ಲವನ್ನೂ ಮೊಮ್ಮಗಳ ಕಿವಿಯ ಆಭರಣಕ್ಕಾಗಿ ಮೀಸಲಿಡಲಾಗುತ್ತಿತ್ತು. ಜಮಾಲು ಈಗ ಒಂಭತ್ತು ವರ್ಷದ ಹುಡುಗ. ಆತನು ಶಾಲೆಗೆ ಹೋಗುತ್ತಿದ್ದಾನೆ. ಯಜಮಾನಿ ರುಖಿಯಾಳೊಡನೆ ಒಂದೆರಡು ಬಾರಿ 80 ಸುಳಿ ಸೂಚಿಸಿಯಾಗಿತ್ತು. “ನಿನ್ನ ಹುಡುಗನನ್ನು ನಮ್ಮಲ್ಲಿ ಬಿಡು. ತಿಂಗಳು ತಿಂಗಳು ಸಂಬಳ ಕೊಡ್ತೇವೆ.” “ಅವನಿಗಿನ್ನೂ ಒಂಭತ್ತು ವರ್ಷ. ಅವನೆಂತ ಕೆಲಸ ಮಾಡ್ತಾನೆ.? ಇನ್ನೂ ಸ್ವಲ್ಪ ದೊಡ್ಡವನಾಗಲಿ” ಎಂದಿದ್ದಳು ಆಕೆ. ಆ ದಿನ ಜಮಾಲು ಶಾಲೆಯಿಂದ ಬಂದವನೆ ಗಂಟಲು ನೋವೆಂದು ಮಲಗಿಬಿಟ್ಟನು. ಉಮ್ಮಾಲಿ ಬಾಣಂತಿ ಕೆಲಸಕ್ಕೆ ತೆರಳಿದ್ದಳು. ರುಖಿಯಾ ದಣಿಯ ಮನೆಯಿಂದ ಬಂದವಳು ಮಗನ ಹಣೆಯಮೇಲೆ ಕೈಯಿಟ್ಟಳು. ಹಣೆ ಕೆಂಡದಂತೆ ಸುಡುತ್ತಿತ್ತು. ರುಖಿಯಾ ಬೇಗನೆ ಗಂಜಿ ಮಾಡಿ ಮಗನಿಗೆ ಕುಡಿಸಲು ಪ್ರಯತ್ನಿಸಿದಳು. ಹುಡುಗನು ನೀರು ಕೂಡಾ ಕುಡಿಯಲಾಗದೆ ಕಷ್ಟಪಡುತ್ತಿದ್ದನು. ಮಗನ ಅವಸ್ಥೆ ಕಂಡ ರುಖಿಯಾಗೆ ಅನ್ನ ಗಂಟಲಲ್ಲಿಳಿಯಲಿಲ್ಲ. ರಾತ್ರಿಯ ಈ ಹೊತ್ತಲ್ಲದ ಹೊತ್ತಿನಲ್ಲಿ ಆಕೆ ಮಾಡುವುದಾದರೂ ಏನು? ಆಕೆ ಮಲಗಲಣಿಯಾಗುತ್ತಾ ಮಗಳೊಡನೆ “ನೀನು ಬೆಳಿಗ್ಗೆ ಎದ್ದು ಅಜ್ಜಿಯನ್ನು ಕರೆದುಕೊಂಡು ಬಾ ಜಮಾಲುಗೆ ಜ್ವರವೆಂದು ಹೇಳು.” ಎಂದಳು. ಬೆಳಿಗ್ಗೆ ಆಕೆ ನಸುಕಿನಲ್ಲೇ ಮಗಳನ್ನೆಬ್ಬಿಸಿ ಅತ್ತೆಯ ಬಳಿಗೆ ಕಳುಹಿಸಿದಳು. ಜಮಾಲನಿಗೆ ಜ್ವರದಿಂದ ಜ್ಞಾನ ತಪ್ಪಿತ್ತು. ರುಖಿಯಾ ಮಗನ ಬಳಿ ಕುಳಿತು ಆಗಾಗ ಕಣ್ಣೀರೊರೆಸಿಕೊಳ್ಳುತ್ತಿದ್ದಳು. ಉಮ್ಮಾಲಿ ಮೊಮ್ಮಗಳೊಡನೆ ಹೊರಟು ನಿಂತಾಗ, “ಬಾಣಂತಿಗೆ ನೀರು ಹಾಕಿ ಹೋಗು. ಇಲ್ಲವಾದರೆ ನಾವು ಬೇರೆಯವರನ್ನು ಕರೆತರುತ್ತೇವೆ.” ಎಂದು ಆ ಮನೆ ಯಜಮಾನಿ ನುಡಿದದ್ದನ್ನು ಕಡೆಗಣಿಸಿದಳು. “ಬಾಣಂತಿಯ ನೀರಿಗಿಂತಲೂ ನನ್ನ ಮಗುವಿನ ಪ್ರಾಣ ಉಳಿಸುವುದು ಮುಖ್ಯ. ನನ್ನ ವಂಶದಲ್ಲಿ ಉಳಿದಿರುವ ಒಂದೇ ಒಂದು ಗಂಡು ಕುಡಿ ಅದು.” ಎಂದು ಗೊಣಗುತ್ತ ಮೊಮ್ಮಗಳೊಡನೆ ಹೊರಟು ಬಂದಳು. ಮಗುವನ್ನು ಮುಟ್ಟಿ ನೋಡಿದವಳೇ ಬೆಚ್ಚಿ ಕೈ ಹಿಂತೆಗೆದುಕೊಂಡಳು, “ ಯಾ ಬದರೀಙಳೇ, ನನ್ನ ಮಗುವಿನ ಪ್ರಾಣ ಉಳಿಸಿ. ದರ್ಗಾಕ್ಕೆ ಬಿಳಿ ಬಟ್ಟೆ ಹೊದಿಸುವೆ.” ಎಂದು ಹರಕೆ ಹೊತ್ತು ಮಗುವನ್ನು ಹೆಗಲ ಮೇಲೆ ಹಾಕಿಕೊಂಡು. “ಬಾ, ನಾವೀಗಲೇ ಧರ್ಮಾಸ್ಪತ್ರೆಗೆ ಹೋಗುವಾ” ಎಂದು ಸೊಸೆ ಹೊರಡುವುದಕ್ಕೂ ಕಾಯದೆ ಅಂಗಳಕ್ಕಿಳಿದಳು. ರುಖಿಯಾ ಮಗಳ ಬಂಗಾರದೊಡವೆಗೆ ಶೇಖರಿಸಿಟ್ಟಿದ್ದ ಹಣದ ಕೊಂಚ ಭಾಗವನ್ನೆತ್ತಿಕೊಂಡು ಅತ್ತೆಯನ್ನು ಹಿಂಬಾಲಿಸಿದಳು. ಆಸ್ಪತ್ರೆ ತಲುಪಿದಾಗ ಮಗುವನ್ನು ಪರೀಕ್ಷಿಸಿದ ವೈದ್ಯರು, “ಮಗುವನ್ನು ಇಳಿತ 81 ಕೂಡಲೆ ಅಡ್ಮಿಟ್ ಮಾಡಿ. ಇದು ತುಂಬಾ ಸೀರಿಯಸ್ ಕೇಸು. ನಮ್ಮ ಕೈಲಾದ ಪ್ರಯತ್ನ ನಾವು ಮಾಡ್ತೇವೆ.” ಎಂದರು. “ನನ್ನ ಮಗುವಿನ ಪ್ರಾಣ ಉಳಿಸಿ ಡಾಕ್ಟರೇ ನನ್ನ ಮಗನ ಹೆಸರು ಹೇಳಲು ಅದೊಂದೇ ಗಂಡು ಮಗು ಇರುವುದು.” ಎಂದು ಉಮ್ಮಾಲಿ ಕಣ್ಣೊರೆಸಿಕೊಂಡಳು. ಮಗುವನ್ನು ಮಕ್ಕಳ ವಾರ್ಡಿನಲ್ಲಿ ಮಲಗಿಸಿ ಗ್ಲುಕೋಸ್ ನೀಡಲಾಯಿತು. ದಾದಿಯೊಬ್ಬಳು ಔಷಧಿಗಳ ಪಟ್ಟಿಯನ್ನು ತಂದು ಉಮ್ಮಾಲಿಯ ಕೈಯಲ್ಲಿಟ್ಟಳು. ರುಖಿಯಾ ತನ್ನ ಸೆರಗಿನ ತುದಿಯಲ್ಲಿ ಕಟ್ಟಿಕೊಂಡಿದ್ದ ಹಣವನ್ನು ಅತ್ತೆಯ ಕೈಯಲ್ಲಿಟ್ಟು ಮಗನ ಬಳಿ ಕುಳಿತುಕೊಂಡಳು. ಜಮಾಲು ಉಸಿರಿಗಾಗಿ ಕಷ್ಟಪಡುತ್ತಿದ್ದನು. ಉಮ್ಮಾಲಿ ಔಷಧಿಗಳನ್ನು ತಂದು, `ಧರ್ಮಾಸ್ಪತ್ರೆ ಅಂತ ಯಾಕೆ ಹೇಳ್ತಾರೊ.’ ಎಂದು ಗೊಣಗುತ್ತಾ ದಾದಿಯ ಕೈಯಲ್ಲಿಟ್ಟಳು. ಅತ್ತೆಸೊಸೆಯರಿಬ್ಬರಿಗೂ ಸಾಕಷ್ಟು ಸುಸ್ತಾಗಿತ್ತು. ರುಖಿಯಾ ರಾತ್ರಿಯಿಂದಲೂ ಏನೂ ತಿಂದಿರಲಿಲ್ಲ. ಹೀಗಾಗಿ ಉಮ್ಮಾಲಿ ಹತ್ತಿರದ ಹೊಟೇಲಿನಿಂದ ಎರಡು ಇಡ್ಲಿ ತಂದು ಸೊಸೆಯ ಮುಂದಿಟ್ಟು, “ಮಗುವನ್ನು ನೋಡಿಕೊಳ್ಳಲಾದರೂ ಶಕ್ತಿ ಬೇಡವೇ? ತಿನ್ನು” ಎಂದು ಒತ್ತಾಯಿಸಿದಳು. ಸಂಜೆಯಾಗುತ್ತಿದ್ದಂತೆ ಜಮಾಲನ ಉಸಿರು ಕೊಂಚ ಸರಾಗವಾದಂತೆ ಕಂಡಿತು. ಜ್ವರ ಇನ್ನೂ ಹಾಗೆಯೆ ಇತ್ತು. ಆದರೆ ಇಬ್ಬರೂ ಆಸ್ಪತ್ರೆಯಲ್ಲಿ ಉಳಿಯುವಂತೆಯೂ ಇರಲಿಲ್ಲ. ಮನೆಯಲ್ಲಿ ಹಾಜಿರಾ ಒಬ್ಬಳೇ ಇದ್ದಾಳಲ್ಲಾ? ಉಮ್ಮಾಲಿ ಸೊಸೆಗೆ ಬ್ರೆಡ್ ಮತ್ತು ಚಹಾ ತಂದಿತ್ತು, “ಬೆಳಿಗ್ಗೆ ಗಂಜಿ ಮತ್ತು ಚಹಾ ತರ್ತೇನೆ” ಎಂದು ಸೊಸೆಯೊಡನಂದು ಮನೆಗೆ ಹೊರಟಳು. ಆಕೆಯ ಮನ ಲೆಕ್ಕ ಹಾಕುತ್ತಿತ್ತು. ‘ಅನಿರೀಕ್ಷಿತ ಖರ್ಚು. ಇಬ್ಬರ ದುಡಿಮೆಯೂ ಸೊನ್ನೆ. ಬದುಕಿನ ತಕ್ಕಡಿ ಸಮನಾಗಿ ತೂಗುವುದು ಹೇಗೆ?” ರಾತ್ರಿಯೆಲ್ಲ ರುಖಿಯಾ ಒಬ್ಬಳೇ ಮಗನ ಬಳಿ ಕುಳಿತುಕೊಂಡಳು. ಆಸ್ಪತ್ರೆಯ ಒಂದು ಕೋಣೆ ಕೂಡಾ ಇಷ್ಟೊಂದು ಭಯ ಹುಟ್ಟಿಸುತ್ತದೆ ಎಂದಾಕೆಗೆ ತಿಳಿದಿರಲಿಲ್ಲ. ಒಂದೊಂದು ಮಗುವಿಗೆ ಒಂದೊಂದು ಖಾಯಿಲೆ. ಮಕ್ಕಳ ಅಳು, ರೋದನ ರಾತ್ರಿಯ ನೀರವ ವಾತಾವರಣವನ್ನು ಕದಡುತ್ತಿತ್ತು. ಇನ್ನೂ ಜ್ಞಾನವಿಲ್ಲದೆ ಮಲಗಿದ್ದ ಮಗನನ್ನು ನೋಡುತ್ತಾ ಕುಳಿತಾಕೆಯ ಬಳಿ ನಿದ್ರೆಯಂತೂ ಸುಳಿಯಲೇ ಇಲ್ಲ. ಎಚ್ಚೆತ್ತ ಆಕೆಯ ಮೆದುಳು ತನ್ನ ಬದುಕಿನ ಕಡತಗಳನ್ನು ಬಿಚ್ಚಿ ಅದರಲ್ಲೆಲ್ಲಾದರೂ ಸುಂದರವಾದ ಪುಟಗಳಿವೆಯೇ ಎಂದು 82 ಸುಳಿ ಹುಡುಕತೊಡಗಿತು. ಹಾಜಿರಾ ಚಿಕ್ಕವಳಿರುವಾಗಲೂ ಹೀಗೆಯೇ ಏನೊ ಖಾಯಿಲೆಯಾಗಿತ್ತು. ಆ ದಿನ ಮಮ್ಮೂಟಿ ಊರಿಗೆ ಬಂದವನು ತಾನೇ ಮಗಳನ್ನು ಅಸ್ಪತ್ರೆಗೆ ಕರೆದೊಯ್ದು ಡಾಕ್ಟರಿಗೆ ತೋರಿಸಿ ಹಿಂತಿರುವಾಗ ಮಗುವಿನ ಕೈಯಲ್ಲಿ ಮೂಸುಂಬಿ ಹಣ್ಣು ಮತ್ತು ಬಿಸ್ಕತ್ತಿನ ಪೊಟ್ಟಣವನ್ನು ಕೊಟ್ಟಿದ್ದನು. ಆಗೆಲ್ಲ ಮಕ್ಕಳಿಗೆ ಖಾಯಿಲೆಯಾದರೆ ತನಗೆ ಇಷ್ಟೊಂದು ದಿಗಿಲಾಗುತ್ತಿರಲಿಲ್ಲ. ತನ್ನ ಕಷ್ಟ ತೊಂದರೆಗಳಲ್ಲಿ ಆತ ಪಾಲ್ಗೊಳ್ಳದೇ ಇದ್ದರೂ ತನಗೊಂದು ಗಂಡು ದಿಕ್ಕಿದೆ ಎಂಬ ಅನಿಸಿಕೆಯೇ ಬದುಕು ಹಗುರಾಗುವಂತೆ ಮಾಡುತ್ತಿತ್ತು. ಸುಂದರನಾದ ಮಮ್ಮೂಟಿಯೊಡನೆ ಆಸ್ಪತ್ರೆಗೆ ಹೋಗುವಾಗಲೂ ಆಕೆ ಹೆಮ್ಮೆಯಿಂದ ಬೀಗುತ್ತಿದ್ದಳು. ಆದರೆ ಆತ ಒಮ್ಮೆಲೇ ತನ್ನನ್ನೂ ಮಕ್ಕಳನ್ನೂ ನಡು ನೀರಿನಲ್ಲಿ ಕೈ ಬಿಟ್ಟು ತನಗೊಂದು ವಿದಾಯವನ್ನೂ ಹೇಳದೆ ಹೊರಟು ಹೋದಾಗ ಆಕೆ ಮುಂದಿನ ಬದುಕನ್ನು ನೆನೆದು ಭಯಭೀತಳಾಗಿದ್ದಳು. ತಮ್ಮೂರಿಗೆ ಹೋಗಿರಲೇ ಎಂದು ಒಂದೆರಡು ಬಾರಿ ಹೋಚಿಸಿದ್ದಳು ಕೂಡಾ. ಆದರೆ ಅಲ್ಲಿ ತನ್ನನ್ನು ಹೆತ್ತಾಕೆಯಾಗಲೇ ಪರಲೋಕ ಸೇರಿಯಾಗಿತ್ತು. ತಾಯಿಯ ನಾಲ್ವತ್ತರ ದುವಾ ಮುಗಿಯುವ ಮುನ್ನವೇ ತಂದೆ ಇನ್ನೊಬ್ಬಳನ್ನು ನಿಕಾಹ್ ಮಾಡಿಕೊಂಡಿದ್ದನು. ಆ ಬಳಿಕ ತವರಿಗೆ ಹೋಗಬೇಕೆಂದು ಅನ್ನಿಸಲೇ ಇಲ್ಲ. ಆ ತಂದೆಯಾದರೂ ಎಂತಹವನು? ಮಗಳ ಗಂಡ ಊರು ಬಿಟ್ಟು ಸುದ್ದಿ ತಿಳಿದರೂ ಒಮ್ಮೆಯೂ ಇತ್ತ ಇಣುಕಿಯೂ ನೋಡಲಿಲ್ಲ! ಮಗಳನ್ನು ನೋಡ ಬಂದರೆ ಎಲ್ಲಿ ಆಕೆ ಮತ್ತು ಮಕ್ಕಳು ತನಗೊಂದು ಹೊರೆಯಾಗಿ ತನ್ನೊಡನೆ ಹೊರಟು ಬಂದು ಬಿಡುತ್ತಾರೊ ಎಂಬ ಭಯ ಆತನನ್ನು ಕಾಡಿರಬಹುದು. ಅತ್ತೆ ಕೂಡಾ ಎಷ್ಟೊ ಬಾರಿ ಈ ವಿಷಯವನ್ನೆತ್ತಿಕೊಂಡು ತನ್ನನ್ನು ಚುಚ್ಚುತ್ತಿದ್ದರಲ್ಲ? “ಎಂತಹವನೇ ನಿನ್ನ ತಂದೆ? ಮಗಳು ಮತ್ತು ಮೊಮ್ಮಕ್ಕಳು ಅನಾಥರಾದಾಗ ಒಮ್ಮೆ ಬಂದು ದೂರದಿಂದ ಇಣುಕಿಯೂ ನೋಡದವರು?” ಎಂದು. ಜಾಫರ್ ನೆರೆಯಲ್ಲಿ ಕೊಚ್ಚಿ ಹೋದಾಗ ದೂರದಲ್ಲೆಲ್ಲೊ ಇದ್ದ ಅಕ್ಕ ಒಬ್ಬಳು ಬಂದು ನಾಲ್ಕು ಸಾಂತ್ವನದ ಮಾತನಾಡಿ ಹೋಗಿದ್ದಳು. ಹಾಗೆ ಬಂದಾಗ ಅವಳೂ ಕೇಳಿದ್ದು ಅದೇ ಮಾತನ್ನೆ. “ಮಮ್ಮೂಟಿ ಅದ್ಯಾವುದೋ ಒಂದು ಹೆಂಗಸನ್ನು ಮದುವೆಯಾಗಲು ಹೊರಟಿದ್ದನಂತೆ. ಹೌದಾ?” ಎಂದು. ಆಗ ಮಗು ಹೋದ ದುಃಖದೊಡನೆ ಗಂಡನ ವಂಚನೆಯ ನೋವೂ ಸೇರಿಕೊಂಡು ತಾನು ಹುಚ್ಚಿಯಂತಾಗಿದ್ದೆ. ಗಂಡನ ವಂಚನೆಯನ್ನು ಇನ್ನೊಬ್ಬರು ಇಳಿತ 83 ಎತ್ತಿ ಆಡಿದಾಗ ಸಹಿಸಲಸಾಧ್ಯವಾದ ವೇದನೆಯಾಗಿತ್ತು. ಮನದಾಳದ ನೋವು ನಾಲಗೆಯಲ್ಲಿ ಬೇರೆ ರೀತಿಯಗಿ ರೂಪ ಪಡೆಯಿತು. “ನನಗೇನು ಗೊತ್ತು? ಮೈಯಲ್ಲಿ ಚರ್ಬಿ ಜಾಸ್ತಿಯಾದಾಗ ಗಂಡಸರು ಹಾಗೆಲ್ಲ ಮಾಡ್ತಾರೇನೊ!” ತನ್ನ ಬದುಕಿನ ಒಂದೇ ಒಂದು ಸುಂದರವಾದ ಪುಟವೆಂದರೆ ಹಾಜಿರಾ ಚಿಕ್ಕವಳಿದ್ದಾಗ ತನ್ನನ್ನು ಮಮ್ಮೂಟಿ ಜೊಹರಕ್ಕಳ ಮನೆಗೆ ಕರೆದೊಯ್ದದ್ದು. ತನ್ನ ಬದುಕಿನಲ್ಲಿ ಒಂದೇ ಒಂದು ಬಾರಿ ಮಾಡಿದ ಬಸ್‍ಪ್ರಯಾಣ ಆದಾಗಿತ್ತು. ಜೊಹರಕ್ಕೆ ಕೂಡ ತನ್ನನ್ನು ಎಷ್ಟು ಚೆನ್ನಾಗಿ ಉಪಚಾರ ಮಾಡಿದರಲ್ಲ? ಸಣ್ಣಕ್ಕಿ ಅನ್ನ, ಕೋಳಿ ಸಾರು ಎಲ್ಲವನ್ನೂ ಮಾಡಿ ಬಡಿಸಿದ್ದರು. ಬದುಕಿನ ಒಂದೊಂದೇ ಪುಟದಲ್ಲಿ ಕಣ್ಣಾಡಿಸುತ್ತಾ ರುಖಿಯಾ ತೂಕಡಿಸತೊಡಗಿದಳು. * * * * * 84 ಸುಳಿ ಭರತ ಬೆಳಗಿನ ಜಾವದಲ್ಲಿ ಪ್ರಥಮ ಹಕ್ಕಿಯ ಚಿಲಿಪಿಲಿ ಕಿವಿಗೆ ಬಿದ್ದಾಗ ರುಖಿಯಾ ಕುಳಿತಲ್ಲಿಂದಲೇ ಬೆಚ್ಚಿ ಕಣ್ಣು ತೆರೆದು ಪೂರ್ವ ದಿಕ್ಕಿನೆಡೆಗೆ ನೋಟ ನೆಟ್ಟಳು. ಕಡು ಕಪ್ಪು ಕತ್ತಲೆ ಅದಾಗಲೇ ಕರಗತೊಡಗಿ ಪೂರ್ವ ದಿಗಂತ ನಿಧಾನವಾಗಿ ಕೆಂಪಡರತೊಡಗಿತ್ತು. ಇನ್ನೇನು, ಒಂದೆರಡು ಘಂಟೆಗಳೊಳಗೆ ಸೂರ್ಯನು ಭೂಮಂಡಲವನ್ನೆಲ್ಲ ಬೆಳಗಲಿದ್ದನು. ರುಖಿಯಾ ಮೂಡಲ ಕೆಂಬಣ್ಣವನ್ನು ನೋಡುತ್ತಾ, “ಯಾ ತಂಬುರಾನೇ, ನನ್ನ ಬದುಕಿನ ಕಡು ಕಪ್ಪು ಕತ್ತಲೆ ತೊಲಗಿಸಿ ಪೂರ್ತಿ ಬೆಳಕನ್ನು ನೀಡದಿದ್ದರೂ ಪರವಾಗಿಲ್ಲ. ಬದುಕಿನ ದಿಗಂತದಲ್ಲಿ ಆಗೊಮ್ಮೆ ಈಗೊಮ್ಮೆ ಕೊಂಚ ಕೆಂಪು ಬಣ್ಣವನ್ನಾದರೂ ಚೆಲ್ಲುವಷ್ಟು ನಿರ್ದಯಿಯಾಗಿ ಬಿಟ್ಟೆಯೇಕೆ ನೀನು?” ಎನ್ನುತ್ತಾ ಕಣ್ಣೊರೆಸಿಕೊಂಡಳು. “ಹೇಗಿದೆ ನಿಮ್ಮ ಮಗುವಿಗೆ?” ಪಕ್ಕದ ಹಾಸಿಗೆಯಾಕೆ ಎದ್ದು ಕುಳಿತುಕೊಳ್ಳುತ್ತಾ ಕೇಳಿದಳು. ರುಖಿಯಾ ದೀರ್ಘವಾದ ನಿಟ್ಟುಸಿರು ಬಿಟ್ಟು ಮಗನ ಹಣೆ ನೇವರಿಸಿದಾಗ, ಕೈ ಕೊಂಚ ಒದ್ದೆಯಾಯಿತು. ಆಕೆ ತನ್ನ ಸೀರೆಯೆ ಸೆರಗಿನಿಂದ ಮಗನ ಹಣೆ ಒರೆಸುತ್ತಾ, “ಜ್ವರ ಬಿಟ್ಟಂತೆ ಕಾಣಿಸುತ್ತಿದೆ ಅಮ್ಮಾ” ಎಂದಳು. ರಾತ್ರಿಯಿಡೀ ನಿದ್ದೆ ಗೆಟ್ಟು ಬಾಡಿ ಬಸವಳಿದಿದ್ದ ಆಕೆಯ ಮುಖದಲ್ಲಿ ಕವಿದಿದ್ದ ದುಃಖದ ದಟ್ಟ ಛಾಯೆ ಕೊಂಚ ತೆಳ್ಳಗಾದಂತೆ ಕಂಡಿತು. ಆಸ್ಪತ್ರೆಯಲ್ಲಿ ದಾದಿಯರ ಓಡಾಟವೂ ಪ್ರಾರಂಭವಾಯಿತು. ಮೂರು ದಿನಗಳಿಂದಲೂ ಕಣ್ಣು ತೆರೆಯದಿದ್ದ ಮಗು ಜಮಾಲು, “ಉ... ಮ್ಮಾ..... ನೀ... ರು...” ಎಂದು ತೊದಲಿದಾಗ ರುಖಿಯಾಳ ಕಣ್ಣಿನಿಂದ ನೀರು ಹರಿಯಿತು. ಬಿಡುಗಡೆಯ ಕಣ್ಣೀರು. ಬೆಳಿಗ್ಗೆ ಮಗುವನ್ನು ಪರೀಕ್ಷಿಸಿದ ಡಾಕ್ಟರು. “ಇನ್ನೇನೂ ಭಯವಿಲ್ಲಮ್ಮ, ನಾಳೆ ಬೆಳಿಗ್ಗೆ ನೀವು ಹೋಗಬಹುದು.” ಎಂದಾಗ ರುಖಿಯಾ ಮತ್ತೊಮ್ಮೆ ಕಣ್ಣೊರೆಸಿಕೊಂಡಳು. ಉಮ್ಮಾಲಿ ಸೊಸೆಗೆ ಗಂಜಿ ಮತ್ತು ಬಾಟ್ಲಿಯೊಂದರಲ್ಲಿ ಚಹಾ ತಂದುಕೊಟ್ಟು “ನಾನು ಹೋಗ್ತೇನೆ ರುಖ್ಯಾ. ನಿನ್ನೆಯೇ ಬಾಣಂತಿಗೆ ಭರತ 85 ನೀರುಹಾಕಿಲ್ಲವೆಂದು ಅವಳ ತಾಯಿಯ ಮುಖ ದಪ್ಪವಾಗಿತ್ತು. ಇನ್ನು ಅವರು ಬೇರೆ ಜನ ನೋಡಿ ಬಿಟ್ಟರೂ ಕಷ್ಟ. ರಾತ್ರಿ ನಾನು ಹಾಜಿರಾಳ ಬಳಿ ಇರ್ತೇನೆ. ನಾಳೆ ಬೆಳಿಗ್ಗೆ ಮಗನನ್ನು ಕರೆದುಕೊಂಡು ನೀನೇ ಬಂದು ಬಿಡು. ಅಷ್ಟು ದೂರ ನಡೆದೂ ನಡೆದೂ ನನಗೆ ಕಾಲು ನೋವು ಪ್ರಾರಂಭವಾಗಿದೆ” ಎಂದಳು. ರುಖಿಯಾ ತಲೆ ಆಡಿಸಿದಳು. ಮರುದಿನ ಬೆಳಗ್ಗೆ ನಸುಕಿನಲ್ಲಿಯೆ ಉಮ್ಮಾಲಿ ಎದ್ದು ತನ್ನ ಕೆಲಸದ ಮನೆಗೆ ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಕೊಂಚ ದೂರದ ಬೀದಿ ಬದಿಯಲ್ಲಿ ಬಿಳಿಯ ಹೊಸ ಕಾರೊಂದು ಬಂದು ನಿಂತಿತು. ಕಾರಿನ ಹಾರ್ನಿನ ಶಬ್ದ ಮಲಗಿ ನಿದ್ರಿಸುತ್ತಿದ್ದ ಊರನ್ನು ಎಚ್ಚರಗೊಳಿಸಿತು. “ಯಾರಪ್ಪಾ ಅದು, ಈ ಓಣಿಯಲ್ಲಿ ಇಂತಹ ಕಾರಿನಲ್ಲಿ ಬರುವವರು?” ಎಂದು ಉಮ್ಮಾಲಿ ನಿಂತಲ್ಲಿಯೇ ನಿಂತು ನೋಡಿದಳು. ಕಾರಿನಿಂದ ಸುಂದರವಾದ ದೃಢಕಾಯನಾದ ಪುರುಷನೊಬ್ಬನು ಇಳಿಯುತ್ತಿದ್ದನು. ಆತನು ಕಾರಿನ ಬಾಗಿಲು ಹಾಕಿ ಪಕ್ಕದ ಮನೆಯ ಕಡೆಗೆ ನಡೆದನು. ಪರಪುರುಷನನ್ನು ಕಂಡ ಉಮ್ಮಾಲಿ ತೆಂಗಿನ ಮರವೊಂದರ ಮರೆಯಲ್ಲಿ ನಿಂತು ಇದ್ಯಾರೊ ಮರಿಯಮ್ಮನ ಹೊಸ ಗಿರಾಕಿಯೇನೊ ಎಂದು ಕುತೂಹಲದಿಂದ ನೋಡ ತೊಡಗಿದಳು. “ಇಸ್ಸಿ, ರಾತ್ರಿ ಯಾರಿಗೂ ತಿಳಿಯದಂತೆ ಮಾಡುತ್ತಿದ್ದ ಕೆಲಸವನ್ನು ಹೀಗೆ ಹಗಲಲ್ಲೇ ಮಾಡಲಾರಂಭಿಸದಳೇ? ಥತ್, ಇವರ ಬುದ್ಧಿಗೆ!” ಎಂದು ಮನದಲ್ಲೇ ಅಂದುಕೊಂಡಳು. ಆದರೆ ಬಂದಾತನು ಹೊರಗಿನಿಂದಲೇ ಮರಿಯಮ್ಮನೊಡನೆ ಅದೇನೊ ಕೇಳಿದಾಗ ಆಕೆ ಉಮ್ಮಾಲಿಯ ಮನೆಯ ಕಡೆಗೆ ಕೈ ತೋರಿಸಿದಳು. ಆತನು ತನ್ನ ಮನೆ ಕಡೆಗೆ ಬರುತ್ತಿದ್ದುದನ್ನು ಕಂಡು ಉಮ್ಮಾಲಿ ಪುನಃ ಮನೆಯೊಳ ಹೊಕ್ಕು ಬಾಗಿಲ ಮರೆಯಿಂದ ಇಣುಕಿ ನೋಡತೊಡಗಿದಳು. “ಯಾರೂ ಇಲ್ಲವಾ ಇಲ್ಲಿ?” ಬಂದಾತ ಹೊರಗಿನಿಂದಲೇ ಕೇಳಿದನು. ಎಲ್ಲಿಯೋ ಕೇಳಿದ ಧ್ವನಿ. “ನೀವು ಯಾರು?” ಉಮ್ಮಾಲಿ ಬಾಗಿಲೆಡೆಯಿಂದಲೇ ಕೇಳಿದಳು. “ಯಾಕೆ ಉಮ್ಮಾ? ನನ್ನ ಗುರುತು ಸಿಗಲಿಲ್ಲವಾ? ನಾನು ಮಮ್ಮೂಟಿ” ಎನ್ನುತ್ತಾ ಮನೆಯೊಳಗಡಿ ಇಟ್ಟನು ಮಮ್ಮೂಟಿ. “ಆಂ...” ಅವಾಕ್ಕಾದಳು ಉಮ್ಮಾಲಿ. ಆಘಾತದಿಂದ ಚೇತರಿಸಿಕೊಳ್ಳಲು ಆಕೆ ಕೆಲವು ಕ್ಷಣಗಳೇ ಬೇಕಾದುವು. “ಬಂದಿಯಾ ಮಗಾ...” ಎನ್ನುತ್ತ ಅಳುತ್ತಾ ಹೋಗಿ ಮಗನಿಗೆ ಜೋತು ಬಿದ್ದಳು. 86 ಸುಳಿ “ಉಮ್ಮಾ, ರುಖಿಯಾ ಎಲ್ಲಿ? ಮಕ್ಕಳೆಲ್ಲಿ?” ಮನೆಯೊಳಗೆ ಕಣ್ಣಾಡಿಸುತ್ತಾ ಕೇಳಿದ ಮಮ್ಮೂಟಿ. “ಹಾಜಿರಾ, ಬಾ ಮೋಳೆ. ಇದು ನಿನ್ನ ಅಬ್ಬ” ಎಂದು ಉಮ್ಮಾಲಿ ಕರೆದಾಗ ಹಾಜಿರಾ ಇನ್ನಷ್ಟು ಮೂಲೆ ಸೇರಿದಳು. “ರುಖಿಯಾ ಪಟ್ಟಣದ ಧರ್ಮಾಸ್ಪತ್ರೆಯಲ್ಲಿದ್ದಾಳೆ. ಮಗುವಿಗೆ ಹುಷಾರಿಲ್ಲವಲ್ಲ...” ಎನ್ನುತ್ತಿದ್ದಂತೆಯೇ ಮಮ್ಮೂಟಿ, “ಓ... ಹಾಗಾದರೆ ನಾನೀಗಲೇ ಆಸ್ಪತ್ರೆಗೆ ಹೋಗ್ತೇನೆ” ಎಂದವನೆ ಮುಂದಿನ ಮಾತಿಗೆ ಕಿವಿಗೊಡದೆ ಕಾರಿನ ಬಳಿಗೆ ನಡೆದನು. ಆತನು ಕಾರಿನಲ್ಲಿ ಮರೆಯಾಗುತ್ತಿರುವುದನ್ನೆ ನೋಡುತ್ತಿದ್ದ ಉಮ್ಮಾಲಿಯ ಬಳಿಗೆ ಮರಿಯಮ್ಮ ಬಂದಾಗ ಆಕೆ ಊರಗಲ ಮುಖ ಮಾಡಿಕೊಂಡು “ಆ ಬಿಳಿ ಕಾರಿನಲ್ಲಿ ಬಂದನಲ್ಲ, ಅದು ನನ್ನ ಮಗ!’ ಎಂದು ಗತ್ತಿನಿಂದ ನುಡಿದಳು. ಮಮ್ಮೂಟಿ ಅಸ್ಪತ್ರೆ ತಲುಪಿದಾಗ ರುಖಿಯಾ ಹೊರಡಲು ಸಿದ್ಧಳಾಗಿದ್ದಳು. ಜಮಾಲು ಎದ್ದು ಕುಳಿತರೂ ಮುಖದಲ್ಲಿ ಆಯಾಸದ ಕಳೆ ಇತ್ತು. ಒಂದಷ್ಟು ಚಹಾನ್ನಾದರೂ ತರಿಸೋಣವೆಂದರೆ ಕಾಸು ಖರ್ಚಾದೀತೆಂಬ ಭಯ. “ನಿಮಗೆ ಚಾ ಬೇಡವೇ?” ಎಂದು ಪಕ್ಕದ ಮಂಚದಾಕೆ ಕೇಳಿದಾಗ, “ಅಯ್ಯೊ, ನನಗೆ ಹೊಟೇಲಿನ ಚಾ ಎಂದರೆ ಆಗದು. ಮನೆಗೆ ಹೋಗಿಯೇ ಕುಡಿಯುತ್ತೇನೆ.” ಎನ್ನುತ್ತಿದ್ದಂತೆ ಅದಾರೊ ಪುರುಷರು ವಾರ್ಡು ಪ್ರವೇಶಿಸಿದರು. ಬಂದಾತನು ಜಮಾಲನ ಮಂಚದ ಬಳಿಗೇ ಬರುತ್ತಿದ್ದನು. ಹೊಸ ಡಾಕ್ಟರರಿರಬಹುದೆಂದು ರುಖಿಯಾ ತಲೆ ತುಂಬಾ ಮುಸುಕು ಹಾಕಿ ಒಂದೆಡೆ ಮುದುಡಿ ನಿಂತಳು. “ಯಾಕೆ, ನನ್ನ ಗುರುತು ಸಿಗಲಿಲ್ಲವಾ? ನೀನು ನನ್ನನ್ನು ಮರೆತು ಬಿಟ್ಟೆಯಾ?” ಬಂದಾತನು ನಗುತ್ತಾ ಕೇಳಿದಾಗ ರುಖಿಯಾ ಚಕಿತಳಾಗಿ ತಲೆ ಎತ್ತಿದಳು. ಆ ಧ್ವನಿಯನ್ನು ಎಂದಾದರೂ ಮರೆಯಲು ಸಾಧ್ಯವೇ? ಮಮ್ಮೂಟಿ ಕಣ್ಣಿನಿಂದ ಕನ್ನಡಕವನ್ನು ತೆಗೆಯುತ್ತಾ “ನಾನು ಅಷ್ಟೊಂದು ಬದಲಾಗಿದ್ದೇನೆಯೇ?” ಎಂದು ಕೇಳುತ್ತಿದ್ದಂತೆ ವರ್ಷಗಳಿಂದಲೂ ಕಟ್ಟೆ ಕಟ್ಟಿ ನಿಲ್ಲಿಸಿದ್ದ ಕಣ್ಣೀರು ಒಂದೇ ಬಾರಿಗೆ ಧುಮ್ಮಿಕ್ಕಿ ಹರಿಯತೊಡಗಿತು. ಸೆರಗಿನಿಂದ ಒರೆಸಿದಷ್ಟೂ ಮತ್ತೂ ಮತ್ತೂ ಹರಿಯುತ್ತಲೇ ಇತ್ತು. ಮಮ್ಮೂಟಿಯ ಮುಖ ಗಂಭೀರವಾಯಿತು. “ನಾನು ಬಂದೆನಲ್ಲಾ? ಇನ್ಯಾಕೆ ಕಣ್ಣೀರು?” ಎಂದು ಕೇಳುವಾಗ ಆತನ ಧ್ವನಿ ನಡುಗಿತು. ಭರತ 87 ರುಖಿಯಾ ತನ್ನನ್ನು ನಿಯಂತ್ರಿಸಲೆತ್ನಿಸುತ್ತಾ ಕಣ್ಣುಗಳನ್ನು ಒರೆಸಿಕೊಂಡು “ನಿಮ್ಮಲ್ಲಿ ಹಣವಿದೆಯೇ?” ಎಂದು ಕೇಳಿದಳು. ಆತನ ತುಟಿಯಲ್ಲಿ ಮುಗುಳ್ನಗು ತೇಲಿತು. “ಯಾಕೆ?” ಎಂದನಾತ. “ಇವನನ್ನು ನೋಡಿಕೊಂಡಿದ್ದ ನರ್ಸಮ್ಮನಿಗೆ ಏನಾದರೂ ಕೊಡಬೇಕಾಗಿತ್ತು.” “ಆಗಲಿ ಕೊಡುವಾ. ಇನ್ನೂ ಒಂದು ದಿನ ಇಲ್ಲೇ ಇರುವುದೊಳ್ಳೆಯದು. ಸ್ಪೆಶಲ್ ರೂಮು ಸಿಗುತ್ತದೆಯೇ ನೋಡಿ ಬರುತ್ತೇನೆ. ನೀನು ಇಲ್ಲಿಯೇ ಇರು” ಎನ್ನುತ್ತಾ ಹೋದ ಮಮ್ಮೂಟಿ ಕೊಂಚ ಹೊತ್ತಿನಲ್ಲಿ ಒಳಬಂದು ಮಗುವನ್ನೆತ್ತಿಕೊಂಡು ಬೇರೊಂದು ಕೋಣೆಗೆ ಹೋದನು. ರುಖಿಯಾ ಕೈ ಚೀಲವನ್ನೆತ್ತಿಕೊಂಡು ಆತನನ್ನು ಹಿಂಬಾಲಿಸಿದಳು. ಮಮ್ಮೂಟಿ ಮಗನನ್ನು ಮಂಚದ ಮೇಲೆ ಮಲಗಿಸಿ ಅವನ ಪಕ್ಕದಲ್ಲಿ ಕುಳಿತುಕೊಂಡನು. “ನಾವು ಮನೆಗೇ ಹೋದರಾಗಿತ್ತು. ಇಲ್ಲಿದ್ದರೆ ಸುಮ್ಮನೆ ಖರ್ಚಿಗೆ ದಾರಿ. ನಾನಿನ್ನೂ ತೊಟ್ಟು ಚಾ ಕೂಡಾ ಕುಡಿದಿಲ್ಲ” ಎಂದಳು ರುಖ್ಯಾ. “ಖರ್ಚಿನ ಯೋಚನೆ ಇನ್ನು ನಿನಗೆ ಬೇಡ. ಇರು, ಚಾ ತರಿಸುತ್ತೇನೆ.” ಎನ್ನುತ್ತಾ ಹೊರ ಹೋಗಿ ಹುಡುಗನೊಬ್ಬನ ಕೈಯಲ್ಲಿ ಚಹಾ, ತಿಂಡಿಗಳನ್ನು ತೆಗೆಸಿಕೊಂಡು ಬಂದನು. ರುಖಿಯಾ ಎಂದೂ ನೋಡದ ತಿಂಡಿಗಳು! ಮಗನಿಗಾಗಿ ಅತ್ಯುತ್ತಮ ಬಿಸ್ಕತ್ತುಗಳು, ಹಣ್ಣುಗಳು. “ಕೈಯಲ್ಲಿರುವುದನ್ನೆಲ್ಲ ಒಂದೇ ಬಾರಿಗೆ ಖರ್ಚು ಮಾಡಬೇಕೆಂದಿದ್ದೀರಾ? ಆ ಮೇಲೆ ಪುನಃ ಮಾಯವಾಗುವ ಯೋಚನೆಯೇ?” ರುಖಿಯಾ ಕೇಳಿದಳು. ಮಮ್ಮೂಟಿ ಸುಮ್ಮನೆ ನಕ್ಕನು. ಬಳಿಕ, “ನಾನು ಹೋಗುವಾಗ ನೀನು ಗರ್ಭಿಣಿಯಾಗಿದ್ದೆಯಲ್ಲ? ಆ ಮಗು ಎಲ್ಲಿ?” ಎಂದು ಕೇಳಿದನು. ರುಖಿಯಾ ಗಂಡನ ಮುಖವನ್ನು ತದೇಕ ಚಿತ್ತದಿಂದ ನೋಡಿದಳು. ಯಾವುದನ್ನು ಹೇಳಬೇಕು, ಎಲ್ಲಿಂದ ಆರಂಭಿಸಬೇಕು. ಎನ್ನುವ ಗೊಂದಲ ಆಕೆಯದು. ಬಳಿಕ “ಇದೇ ಆ ಮಗು” ಎನ್ನುತ್ತಾ ದೊಡ್ಡದಾಗಿ ಅಳುತ್ತಾ “ನಮ್ಮ ಜಾಫರ್..... ಜಾಫರ್..... ನೆರೆ ನೀರಿನಲ್ಲಿ ಕೊಚ್ಚಿ ಹೋಗಿ ವರ್ಷಗಳೇ ಕಳೆದುವು. ಯಾವುದನ್ನೂ ನೀವು... ನೋಡಲೇ ಇಲ್ಲವಲ್ಲಾ?” ಎನ್ನುತ್ತಾ ಬಿಕ್ಕಿ ಬಿಕ್ಕಿ ಅತ್ತಳು. “ಹಾಂ...” ಎಂಬ ಉದ್ಗಾರ ಮಮ್ಮೂಟಿಯ ಬಾಯಿಂದ ಹೊರಬಿತ್ತು. ಆತನು ರುಖಿಯಳ ಬಳಿ ಬಂದು ಆಕೆಯ ಬೆನ್ನು 88 ಸುಳಿ ನೇವರಿಸುತ್ತಾ ಆಕೆಯ ಕಣ್ಣೀರನ್ನು ಒರೆಸಿ, ತುಟಿ ಮತ್ತು ಮುಖದ ಮೇಲೆಲ್ಲ ಚುಂಬನದ ಮಳೆಗೆರೆಯುತ್ತಾ, “ಒಂದರ ಬದಲಿಗೆ ದೇವರು ಇನ್ನೊಂದನ್ನು ನೀಡಿದ್ದಾನಲ್ಲ? ಇನ್ನು ಅಳಬೇಡ. ಎಲ್ಲವನ್ನೂ ನಾನು ನೋಡಿಕೊಳ್ಳುವೆ.... ಇವನಿಗೆ ಏನೆಂದು ಹೆಸರಿಟ್ಟಿರುವೆ?” ಎಂದು ಕೇಳಿದನು. “ಜಮಾಲುದ್ದೀನ್ ಎಂದಿಡಿ ಎಂದು ಮೈಲಿಯಾರ್ ಹೇಳಿದರು. ಹಾಗೇ ಇಟ್ಟು ಜಮಾಲೂ ಅಂತ ಕರೆಯುತ್ತೇವೆ” ಎಂದಳು. “ನಾನೀಗಲೇ ಬಂದೆ” ಎನ್ನುತ್ತಾ ಮಮ್ಮೂಟಿ ಹೊರ ಹೋದವನು ಒಂದು ಸೂಟ್ಕೇಸನ್ನೆತ್ತಿಕೊಂಡು ಒಳಬಂದನು. ಬಳಿಕ ಅದನ್ನು ತೆರೆದು ಕೆಲವು ಅಂಗಿಗಳನ್ನು ಹೊರ ತೆಗೆದು, “ಮಗುವಿಗೆ ತೊಡಿಸು” ಎಂದನು. ರುಖಿಯಾ ಎಲ್ಲವನ್ನೂ ಮುಟ್ಟಿ ಮುಟ್ಟಿ ನೋಡಿದಳು. ಎಂದೂ ಕಂಡೂ ಕೇಳರಿಯದ ಬಟ್ಟೆಗಳು! ತನಗಾಗಿ ತಂದ ಸೀರೆಗಳನ್ನೂ ನೇವರಿಸಿದಳು. ಬೆಣ್ಣೆಯಂತೆ ನಯವಾದ ಬಟ್ಟೆಯ ಉಡುಪುಗಳು. ಸೀರೆಗಳು! “ಏನೇ ಅಗಲಿ. ನೀವು ಕೊಂಚ ಹಣ ಸಂಪಾದಿಸಿದಿರಲ್ಲ? ಎಲ್ಲಿದ್ದಿರಿ ಈವರೆಗೆ? ನನಗೊಂದು ಮಾತೂ ತಿಳಿಸದೆ ಹೊರಟು ಹೋದಿರಿ? “ರುಖ್ಯಾ, ಅದೆಲ್ಲ ದೊಡ್ಡ ಕಥೆ. ಇನ್ನೆಂದಾದರೂ ಹೇಳುವೆ. ಆದರೆ ನೀವೆಲ್ಲ ತಿಳಿದುಕೊಂಡಂತೆ ನಾನ್ಯಾವ ತಪ್ಪನ್ನೂ ಮಾಡಿಲ್ಲ. ಈಗ ಹೇಳು, ನಿನಗೇನು ಬೇಕು?” “ನಮ್ಮ ಹಾಜಿರಾಳ ಕಿವಿಯ ಕೆಂಪು ನೂಲು ತೆಗೆದು ಒಂದಷ್ಟು ಬೆಳ್ಳಿಯ ಸರಿಗೆಗಳನ್ನು ಮಾಡಿಸಿ ಹಾಕಬೇಕು. ಮತ್ತೇ... ಅವಳಿಗೆ ಹದಿಮೂರು ವರ್ಷ ತುಂಬುತ್ತಾ ಬಂತಲ್ಲ? ಎಲ್ಲಾದರೂ ಒಂದು ಗಂಡು ಹುಡುಕಿ ಮದುವೆ ಮಾಡಬೇಕು. ಅವಳ ಮದುವೆಗಾಗಿ ಕೂಡಿಸಿಟ್ಟಿದ್ದ ಹಣದಲ್ಲಿ ಸ್ವಲ್ಪ ಭಾಗ ಈಗ ಇವನಿಗಾಗಿ ಖರ್ಚಾಯಿತು” ಸಂಸಾರದ ತಾಪತ್ರಯಗಳನ್ನು ಆತನ ಮುಂದೆ ಬಿಚ್ಚತೊಡಗಿದಳು. “ಅವಳ ಮದುವೆಗೂ ಮೊದಲು ನಮಗೊಂದು ಮನೆಯಾಗಬೇಕು” ಮಮ್ಮೂಟಿ ತನ್ನಷ್ಟಕ್ಕೆ ಎಂಬಂತೆ ಗೊಣಗಿಕೊಂಡನು. “ಹೌದು” ಉತ್ಸಾಹದಿಂದ ನುಡಿದಳಾಕೆ. “ಒಳಗೆ ಸೋರದ ಮತ್ತು ಒಂದು ಬಚ್ಚಲು ಮನೆ ಇರುವಂತಹ ಮನೆ ಹುಡುಕಿ. ಈ ಮನೆಯಲ್ಲಿ ಸ್ನಾನ ಮಾಡಬೇಕಾದರೂ ರಾತ್ರಿಯಾಗುವುದನ್ನೇ ಕಾಯಬೇಕು.” “ಅಷ್ಟೇ ತಾನೇ?” ಮಮ್ಮೂಟಿ ನಕ್ಕನು. ಭರತ 89 ಮರುದಿನ ಬೆಳಿಗ್ಗೆ ಮಮ್ಮೂಟಿ ಹೆಂಡತಿ ಮತ್ತು ಮಗನನ್ನು ಊರಿಗೆ ಕರೆದೊಯ್ದನು. ಕಾರನ್ನು ದೂರದಿಂದ ಮಾತ್ರ ನೋಡಿ ಅಭ್ಯಾಸವಿದ್ದ ರುಖಿಯಾ ಗಂಡ ಕಾರಿನ ಬಳಿಗೆ ಕರೆದೊಯ್ದು ‘ಅದರೊಳಗೆ ಹತ್ತು ಎಂದಾಗ ಆತನ ಮುಖವನ್ನೇ ಮಿಕಿ ಮಿಕಿ ನೋಡಿದಳು. ಬಳಿಕ ಕಾರಿನ ಹಿಂಭಾಗದ ಸೀಟಿನ ಮೂಲೆಯಲ್ಲಿ ಮುದುರಿ ಕುಳಿತಳು. ಗಂಡ ಕಾರು ಚಲಾಯಿಸುವುದನ್ನು ನಂಬಲಾಗದಂತೆ ನೋಡುತ್ತಾ, “ನಮ್ಮನ್ನೆಲ್ಲ ಹತ್ತಿಸಿದ್ದಕ್ಕೆ ಕಾರಿನ ಯಜಮಾನರು ಏನನ್ನುವರೊ” ಎಂದಳು. ಮಮ್ಮೂಟಿ ಹಿಂತಿರುಗಿ ಆಕೆಯೆಡೆಗೆ ನೋಡಿ ನಗುತ್ತಾ, “ಕಾರಿನ ಯಜಮಾನ ನಾನೇ!” ಎನ್ನುತ್ತಾ ವೇಗದಿಂದ ಕಾರು ಚಲಾಯಿಸಿದನು. ಮರಿಯಮ್ಮಳ ಮನೆಯಿಂದ ಕೊಂಚ ದೂರ ಕಾರು ನಿಂತಾಗ ಕೆಲವು ಹುಡುಗರು ಬಂದು ಕಾರನ್ನು ಸುತ್ತುವರಿದರು. ಅಕ್ಕಪಕ್ಕದ ಒಂದೆರಡು ಮನೆಗಳಿಂದ ಹೆಂಗಸರು ಇಣುಕಿ ನೊಡಿದರು. ಅಲ್ಲೇ ಇದ್ದ ಪುಟ್ಟ ಅಂಗಡಿಯ ಬಳಿಯಿದ್ದ ಗಂಡಸರೂ ಅಲ್ಲೇ ನಿಂತು ಕಾರನ್ನು ನೋಡಿದರು. ಮಮ್ಮೂಟಿ ಕಾರಿನಿಂದ ಇಳಿದು ಮಗನನ್ನು ಎತ್ತಿಕೊಂಡು ಮನೆಯೊಳ ಹೊಕ್ಕನು. ಒಳ ಬಂದವನೇ ಸೂಟ್‍ಕೇಸು ತೆರೆದು ಅದರೊಳಗಿಂದ ಕಪ್ಪು ಬಣ್ಣದ ಎರಡು ಬುರ್ಕಾಗಳನ್ನು ತೆಗೆದು ರುಖಿಯಾಳ ಕೈಯಲ್ಲಿಟ್ಟು, “ಇನ್ನು ಮುಂದೆ ನೀನೆಲ್ಲಾದರೂ ಹೊರಗೆ ಹೋಗಬೇಕಾದರೆ ಇದನ್ನು ಹಾಕಬೇಕು. ತಿಳಿಯಿತೇ? ಆ ಗಂಡಸರು ಹೇಗೆ ನಿನ್ನನ್ನು ನೋಡ್ತಿದ್ದಾರೆ?” ಎಂದು ಹೆಂಡತಿಯ ಮೇಲೆ ರೇಗಿದನು. “ಅವರು ನೋಡಿದ್ದಕ್ಕೆ ನಾನು ಹೊಣೆಯೇ?” ಎಂದು ಗೊಣಗಿದಾಕೆಯ ಮಾತುಗಳಿಗೆ ಪ್ರತಿಕ್ರಿಯಿಸದೆ, “ಇನ್ನೊಂದನ್ನು ಉಮ್ಮಾಗೆ ಕೊಡು” ಎಂದನು. ಉಮ್ಮಾಲಿ ಮತ್ತು ರುಖಿಯಾ ಇಬ್ಬರೂ ಅದನ್ನು ಬಿಡಿಸಿ ಉದ್ದ, ಅಗಲ ನೋಡಿದರು. ಬಾಗಿಲ ಬಳಿ ಬೆಳಕಿಗೆ ಹಿಡಿದು ಬಣ್ಣ ನೋಡಿದರು. ತಮ್ಮೂರಿನ ಜಮೀನ್ದಾರರು ಮತ್ತು ಒಂದೆರಡು ಅನುಕೂಲಸ್ಥ ಕುಟುಂಬಗಳಲ್ಲಿ ಈಗಾಗಲೇ ಚಾಲ್ತಿಗೆ ಬಂದಿದ್ದ ಈ ಬುರ್ಕಾ ತಮ್ಮ ಮನೆಗೂ ಬಂದದ್ದು ಅತ್ತೆಸೊಸೆಯರಿಗೆ ಹಿಡಿಸಲಾರದಷ್ಟು ಆನಂದವಾಗಿತ್ತು. ಎಲ್ಲವನ್ನೂ ಮರೆಮಾಡುವ ಶಕ್ತಿಯುಳ್ಳ ಒಂದು ವಸ್ತು! ಉಮ್ಮಾಲಿ ಮಗನೊಡನೆ, “ಹರಿದ ಸೀರೆ ಉಡುವಾಗಲೆಲ್ಲ ಇಂತಹದೊಂದು ಕವಚ ಬೇಕೂಂತ ನನಗೂ ಅನ್ನಿಸುತ್ತಿತ್ತು. ನೀನು ಇದನ್ನು ತಂದದ್ದು ಒಳ್ಳೆಯದಾಯಿತು!” ಎಂದು ನುಡಿದಳು. ಮಧ್ಯಾಹ್ನ ಮರಿಯಮ್ಮ ಮನೆಗೆ ಬಂದು ಮಮ್ಮೂಟಿಯ ಕುರಿತು 90 ಸುಳಿ ವಿಚಾರಿಸಿದಳು. ಮೊತ್ತ ಮೊದಲ ಬಾರಿಗೆ ಮರಿಯಮ್ಮಳಿಗೆ ಉಮ್ಮಾಲಿಯ ಮನೆಯಲ್ಲಿ ಚಹಾ ತಿಂಡಿಯ ಆತಿಥ್ಯ ದೊರೆಯಿತು. ಉಮ್ಮಾಲಿ ಸಂಭ್ರಮದಿಂದ ಮಗ ತಂದ ಸೀರೆಗಳನ್ನೂ ಬುರ್ಕಾವನ್ನೂ ತೋರಿಸಿದಳು. ಅದೂ ಇದೂ ಮಾತನಾಡುತ್ತಾ ಮರಿಯಮ್ಮ. “ನಿನ್ನ ಬಾಣಂತಿಗೆ ನೀರೆರೆಯದೆ ಮೂರು ದಿನವಾಯ್ತಲ್ಲ? ನೀನು ಹೋಗುವುದಿಲ್ಲವಾ? ಎಂದು ಕೇಳಿದಳು. “ಶ್, ಮೆಲ್ಲಗೆ ಹೇಳು. ನನ್ನ ಮಗ ಕೇಳಿಸಿಕೊಂಡಾನು!” ಎಂದು ಪಿಸುಗುಟ್ಟಿದಳು ಉಮ್ಮಾಲಿ. “ನಾನು ಅಂತಹ ಕೆಲಸಕ್ಕೆ ಹೋಗ್ತೇನೇಂತ ತಿಳಿದರೆ ಅವನು ನನ್ನನ್ನು ಕೊಂದೇ ಬಿಟ್ಟಾನು. ಅವರೊಡನೆ ಬೇರೆ ಜನರನ್ನು ನೋಡಿಕೊಳ್ಳಲು ಹೇಳು!” ಎಂದಳು. ಅವಳಾಗಲೇ ಹೊಸ ವ್ಯವಸ್ಥೆಗೆ ಹೊಂದಿಕೊಳ್ಳುವ ತುರಾತುರಿಯಲ್ಲಿದ್ದಳು. ಮನೆಯ ಕಡೆಗೆ ಹೆಜ್ಜೆ ಹಾಕುತ್ತಾ ಮರಿಯಮ್ಮ ಯೋಚಿಸಿದಳು. “ನನ್ನ ಅಬಸಳಿಗೂ ಅಂತಹದೊಂದು ಬುರುಕಾ ಇದ್ದಿದ್ದರೆ ಚೆನ್ನಾಗಿತ್ತು!” * * * * * ಊರಿಗೆ ಬಂದ ನಾಲ್ಕೇ ದಿನಗಳಲ್ಲಿ ಮಮ್ಮೂಟಿ ‘ಮಮ್ಮೂಟಿಯವರು’ ಆದನು. ತನಗೊಂದು ಮನೆಕೊಳ್ಳಬೇಕೆಂದು ಹೇಳಿದೊಡನೆ ಬಂದ ಮಧ್ಯಸ್ಥಗಾರನೊಡನೆ ಒಂದೆರಡು ಮನೆಗಳನ್ನೂ ನೋಡಿದನು. ಚಿಕ್ಕ ರೀತಿಯ ಸಾಧಾರಣವಾದ ಮನೆಗಳನ್ನು ನೋಡಿ, “ಉಹುಂ. ಇದಾಗದು, ಸ್ವಲ್ಪ ದೊಡ್ಡ ಮನೆಯೇ ಇರಲಿ.” ಎಂದು ಮಮ್ಮೂಟಿ ಅಂದಾಗಲೇ ಆತ ‘ಮಮ್ಮೂಟಿಯವರು’ ಆದದ್ದು. ಆತ ಊರಿಗೆ ಬಂದ ಮರುದಿನ ತನ್ನ ಲಂಗೋಟಿ ಗೆಳೆಯನಾದ ಬೆಸ್ತರ ವಾಸುವನ್ನು ಹುಡುಕಿಕೊಂಡು ಹೊರಟನು. ಸಮುದ್ರ ತೀರದ ಒಂದು ಪುಟ್ಟ ಗುಡಿಸಲಿನಲ್ಲಿ ವಾಸುವಿನ ವಾಸ. ನಾಲ್ಕೈದು ವರ್ಷ ಶಾಲೆಗೆ ಅಲೆದು ಬಳಿಕ ಸಮುದ್ರಕ್ಕೆ ಧುಮುಕಿದವನು ಆತ. ದೋಣಿ ಮತ್ತು ಬಲೆ ಎಲ್ಲವೂ ಯಜಮಾನರದು. ಮೀನು ಹಿಡಿಯುವ ಕೆಲಸವಷ್ಟೆ ಆತನದು. ಆತನ ತಾಯಿ ಮತ್ತು ಹೆಂಡತಿ ಕಲ್ಯಾಣಿ ಮೀನುಗಳನ್ನು ರಖಂ ಆಗಿ ಕೊಂಡುಕೊಂಡು ಮಾರುಕಟ್ಟೆಯಲ್ಲಿ ಚಿಲ್ಲರೆ ಮಾರಾಟ ಮಾಡುತ್ತಿದ್ದರು. ಏನೇ ಮಾಡಿದರೂ ಮಳೆಗಾಲದಲ್ಲಿ ಇವರ ಮನೆಯ ಒಲೆ ಉರಿಯುವುದು ಕಷ್ಟವೆ. ಸಮುದ್ರದಿಂದ ಹಿಂತಿರುಗಿ ಬಂದ ವಾಸು ಸ್ನಾನ ಮಾಡಿ ಒಗೆದ 91 ಬಟ್ಟೆಯುಟ್ಟು ಇನ್ನೇನು ಗಡಂಗಿಗೆ ನಡೆಯಬೇಕು ಎನ್ನುವಷ್ಟರಲ್ಲಿ ದೂರದಲ್ಲಿ ಬಿಳಿ ಕಾರೊಂದು ಬಂದು ನಿಂತದ್ದನ್ನು ಕಂಡನು. ಹಾಗೆ ಸಮುದ್ರ ತೀರಕ್ಕೆ ಕಾರು ಬರುವುದು ಅಪರೂಪವೇನೂ ಅಲ್ಲ. ದೊಡ್ಡ ಸಾಹುಕಾರು ಮೀನಿನ ರಖಂ ವ್ಯಾಪಾರಕ್ಕಾಗಿ, ಒಣ ಮೀನಿನ ವ್ಯಾಪಾರಕ್ಕಾಗಿ ಹಾಗೆ ಬರುವುದುಂಟು. ಕಾರಿನಿಂದ ಇಳಿದವರು ತಮ್ಮ ಮನೆಯೆಡೆಗೆ ಬರುತ್ತಿರುವುದನ್ನು ಕಂಡ ವಾಸು ಅಂಗಳದಲ್ಲೇ ನಿಂತನು. “ಏನು ವಾಸೂ, ನನ್ನ ಗುರುತು ಸಿಗಲಿಲ್ಲವಾ?” ನಗುತ್ತಾ ಕೇಳಿದನು ಮಮ್ಮೂಟಿ. “ಹಾಂ...” ಅವಾಕ್ಕಾದನು ವಾಸು. “ಅಲ್ಲಾ, ಇದ್ಯಾರು ನಮ್ಮ ಮಮ್ಮೂಟಿ ಬ್ಯಾರಿಯಾ? ನೀನು ಊರು ಬಿಟ್ಟು ಹೋಗಿದ್ದೆಯಂತೆ? ಈಗೇನು ಕಾರಿನ ಡ್ರೈವರ್ ಆಗಿದ್ದೀಯಾ? ಇದ್ಯಾರ ಕಾರು?” ಎಂದು ಕೇಳಿದನು. “ಕಾರು ನನ್ನದೇ, ಬಾ. ಸ್ವಲ್ಪ ದೂರ ನಡೆದು ಬರುವಾ ನಿನ್ನೊಡನೆ ಸ್ವಲ್ಪ ಮಾತಾಡುವುದಿದೆ” ಎಂದನು. ಮಮ್ಮೂಟಿ ಮತ್ತು ವಾಸು ಮರಳಿನಲ್ಲಿ ಸಮುದ್ರ ತೀರದ ಉದ್ದಕ್ಕೂ ನಡೆಯುತ್ತಾ ತಮ್ಮಿಬ್ಬರ ಸುಖದುಃಖಗಳನ್ನೂ, ವ್ಯಾಪಾರ ವ್ಯವಹಾರವನ್ನೂ ಪರಸ್ಪರ ಬಿಚ್ಚಿಕೊಂಡರು. ``ಬಂಗುಡೆ, ಭೂತಾಯಿ ಎಲ್ಲವೂ ಈ ಬಾರಿ ಕಮ್ಮಿ. ಹಾಗಾಗಿ ಈ ಬಾರಿ ಮಳೆಗಾಲಕ್ಕೇಂತ ಹೆಚ್ಚೇನೂ ಶೇಖರಿಸಲಾಗಲಿಲ್ಲ” ಎಂದನು ವಾಸು. ಮಮ್ಮೂಟಿ ಸಮುದ್ರ ತೀರದ ದೊಡ್ಡ ಬಂಡೆಗಳನ್ನು ಪರೀಕ್ಷಿಸುವಂತೆ ನೋಡುತ್ತಾ ವಾಸುವಿನೊಡನೆ, “ವಾಸೂ, ನಾನು ನಿನಗೊಂದು ಒಳ್ಳೆಯ ಕೆಲಸ ಕೊಡುವೆ. ಕೈ ತುಂಬ ಲಾಭ ತರುವ ವ್ಯಾಪಾರ. ಸೇರುವೆಯಾ ನನ್ನೊಡನೆ?” ಎಂದು ಕೇಳಿದನು. “ಲಾಭದ ವ್ಯಾಪಾರವೇ?” ವಾಸುವಿನ ಕಿವಿ ನೆಟ್ಟಗಾಯಿತು. ``ಏನಪ್ಪಾ ಅಂತದ್ದು?” “ನೋಡು, ಓ ಅಲ್ಲಿ ಕಾಣುತ್ತಾ ಇದೆಯಲ್ಲ ಚಿನ್ನದ ಗೋಲ?” ಮುಳುಗುತ್ತಿರುವ ಸೂರ್ಯನನ್ನು ತೋರಿಸುತ್ತಾ ಹೇಳಿದನು ಮಮ್ಮೂಟಿ. “ಅದನ್ನು ತೀರಕ್ಕೆ ತರುವುದು” ಎಂದು ನಕ್ಕನು. “ಛೆ, ಹೋಗಪ್ಪಾ, ನಾನೇನೊ ಸತ್ಯ ಅಂತ ಅಂದುಕೊಂಡರೆ ನೀನು ತಮಾಷೆ ಮಾಡ್ತಿದ್ದಿ” ನಿರಾಸೆಯಿಂದ ನುಡಿದನು ವಾಸು. 92 ಸುಳಿ “ಹೇ... ತಮಾಷೆಯಲ್ಲ” ಗಂಭೀರವಾಗಿ ಮಾತು ಮುಂದುವರಿಸಿದನು ಮಮ್ಮೂಟಿ. ವಾಸು ಕುತೂಹಲದಿಂದ ಕೇಳುತ್ತಾ ಕುಳಿತನು. ಕೊನೆಗೆ ಸಂದೇಹದಿಂದ, “ನೀನು ಹೇಳುವುದೇನೋ ಸರಿಯೇ. ಆದರೆ ಅದು ತುಂಬಾ ಅಪಾಯಕರವಾದ ಕೆಲಸವಲ್ಲವಾ?” ಎಂದು ಕೇಳಿದನು. “ಸಮುದ್ರದ ತೆರೆಗಳೊಡನೆ ಗುದ್ದಾಡಿ ಮೀನು ಹಿಡಿಯುವುದು ಅಪಾಯಕಾರಿಯಾದ ಕೆಲಸವಲ್ಲವೆನ್ನುತ್ತೀಯಾ?” ಪ್ರಶ್ನೆಗೆ ಮತ್ತೊಂದು ಪ್ರಶ್ನೆಯನ್ನೇ ಕೇಳಿದನು ಮಮ್ಮೂಟಿ. “ನಿನ್ನ ಬದುಕಿನಲ್ಲಿ ನೀನು ಈವರೆಗೆ ಮಾಡಿದ್ದು ಈ ಅಪಾಯಕರವಾದ ಕೆಲಸವನ್ನೇ ಅಲ್ಲವಾ? ಆದರೂ ಇನ್ನೂ ನಿನ್ನ ಗುಡಿಸಲಿನ ಮೇಲ್ಭಾಗದ ಹುಲ್ಲು ತೆಗೆದು ಹೆಂಚು ಹೊದಿಸಲು ಸಾಧ್ಯವಾಗಿಲ್ಲವಲ್ಲ? ಈಗ ನಾನು ಹೇಳಿದಂತೆ ಕೇಳು. ಒಂದೇ ವರ್ಷದಲ್ಲಿ ನೀನು ಯಾವ ಎತ್ತರಕ್ಕೆ ಏರುವೆಯೆಂಬುದನ್ನು ನಾನು ತೋರಿಸುವೆ” ಪುಸಲಾಯಿಸಿದನು ಮಮ್ಮೂಟಿ. ವಾಸು ಯೋಚನಾ ಮಗ್ನನಾದನು. ಸೂರ್ಯನು ಅದಾವಾಗಲೊ ಪಶ್ಚಿಮ ದಿಗಂತದಲ್ಲಿ ನೆತ್ತರು ಚೆಲ್ಲಿ ಕಣ್ಮರೆಯಾಗಿದ್ದನು. ನಿಧಾನವಾಗಿ ಕತ್ತಲಾವರಿಸತೊಡಗಿತ್ತು. ಪೂರ್ವ ದಿಗಂತದಲ್ಲಿ ಹುಣ್ಣಿಮೆಯ ಚಂದ್ರನು ತನ್ನೆಲ್ಲ ಭವ್ಯತೆಯೊಡನೆ ಮೇಲೇರತೊಡಗಿದ್ದನು. ವಾಸು ಸಮುದ್ರದ ಅಲೆಗಳನ್ನು ದಿಟ್ಟಿಸುತ್ತಾ, “ಆಗಲಿ ಮಮ್ಮೂಟಿ. ಆದರೆ ನನಗೆ ಸ್ವಂತವಾಗಿ ಒಂದು ದೋಣಿ ಮತ್ತು ಬಲೆ ಬೇಕು. ಅದನ್ನು ನೀನು ಕೊಂಡು ಕೊಟ್ಟರೆ ಮುಂದಿನ ಕೆಲಸ ನಾನು ನೋಡಿಕೊಳ್ಳುವೆ” ಎಂದನು. ಇಬ್ಬರೂ ಸಮುದ್ರ ತೀರದಿಂದ ಹಿಂತಿರುಗಿದರು. ಕಾರಿನವರೆಗೆ ವಾಸುವೂ ಮಮ್ಮೂಟಿಯ ಜೊತೆಯಲ್ಲೇ ನಡೆದನು. ಪಾರು ಮತ್ತು ಕಲ್ಯಾಣಿ ಮೀನಿನ ಖಾಲಿ ಬುಟ್ಟಿಗಳನ್ನು ತಲೆಯ ಮೇಲಿಟ್ಟುಕೊಂಡು ಬರುತ್ತಿದ್ದವರು ಕಾರಿನ ಬಳಿಯಲ್ಲಿ ನಿಂತು ಮಮ್ಮೂಟಿಯನ್ನೊಮ್ಮೆ ಕಾರನ್ನೊಮ್ಮೆ ದಿಟ್ಟಿಸಿದರು. “ಅಮ್ಮಾ ಇವರ ಗುರುತು ಸಿಗಲಿಲ್ಲವಾ? ಉಮ್ಮಾಲಿ ಉಮ್ಮನ ಮಗ ಮಮ್ಮೂಟಿ ಬ್ಯಾರಿಯಲ್ಲವಾ? ಎಂದು ಕೇಳಿದನು ವಾಸು. “ಹಾಂ..... ಮಮ್ಮೂಟಿಯಾ?” ಮೂಗಿನ ಮೇಲೆ ಬೆರಳಿಟ್ಟಳು ಪಾರು. “ಎಲ್ಲಿದ್ದೀಯಪ್ಪಾ? ಏನು ಮಾಡುತ್ತಿದ್ದಿ?” ಎಂದು ಕೇಳಿದಳು. “ಅದೆಲ್ಲ ಆಮೇಲೆ ಹೇಳ್ತೇನಮ್ಮಾ. ಈಗ ನಡೆಯಿರಿ ಮನೆಗೆ” ಎಂದನು ವಾಸು. ಕಲ್ಯಾಣಿ ಗೊಣಗುಟ್ಟಿದಳು. “ಸಂಪಾದನೆಗೆ ಬ್ಯಾರಿಗಳೇ ಸೈ!” ಮಮ್ಮೂಟಿ ವಾಸುವಿನೊಡನೆ ಪಿಸುಗುಟ್ಟಿದನು. “ಯಾರಲ್ಲೂ ಗುಟ್ಟು ಭರತ 93 ಹೊರ ಬಿಡಬೇಡ” * * * * * ಮಮ್ಮೂಟಿಯೊಡನೆ ಮನೆ ಬ್ರೋಕರ್ ಒಬ್ಬ ಬಂದು ಹೇಳಿದ, “ಹಜ್ಯಾರರ ಆ ದೊಡ್ಡ ಮನೆ ಮಾರಾಟಕ್ಕಿದೆಯಂತೆ!” ಮಮ್ಮೂಟಿ ರೋಮಾಂಚನಗೊಂಡನು. ತಾನು ಹುಡುಗನಾಗಿದ್ದಾಗ ಗುಡಿಸಿ ಸಾರಿಸಿದ ಮನೆ. ‘ಏ ಮಮ್ಮೂಟೀ, ಎಲ್ಲಿ ಸತ್ತೇ?” ಎಂದು ಯಜಮಾನರಿಂದ ದಿನಕ್ಕೊಮ್ಮೆಯಾದರೂ ಕರೆಸಿಕೊಳ್ಳುತ್ತಿದ್ದ ಆ ಮನೆ! ತನ್ನ ಬಾಳಿನ ಪುಟಗಳಿಗೆ ಹಲವಾರು ದಾಖಲೆಗಳನ್ನೊದಗಿಸಿದ ಮನೆ! “ಹಾಜ್ಯಾರರು ಎಲ್ಲಿಗೆ ಹೋಗ್ತಾರಂತೆ?” “ಹಾಜಾರರೆಲ್ಲಿ? ಅವರು ಸತ್ತು ಸ್ವರ್ಗಕ್ಕೊ ನರಕಕ್ಕೊ ಹೋದರು. ಅವರ ಹೆಂಡತಿ ಮಗಳ ಮನೆಯಲ್ಲಿದ್ದಾರಂತೆ. ಈಗೆಲ್ಲ ಹಿರಿಯ ಮಗನದೇ ಪಾರುಪತ್ಯ. ನಿಮಗೆ ಬೇಕಾದರೆ ಮಾತಾಡಿಸಿ ನೋಡುವಾ” ಎಂದನು. “ನಾಳೆಯೇ ಹೋಗುವಾ” ಎಂದನು ಮಮ್ಮೂಟಿ ಮರುದಿನ ಬೆಳಿಗ್ಗೆ ಮಮ್ಮೂಟಿ ಕಾರಿನಲ್ಲೇ ಹೊರಟು ಅರ್ಧ ಗಂಟೆಯಲ್ಲಿ ಮೂಸಾ ಹಾಜಿಯವರ ಮನೆ ತಲಪಿದನು. “ಯಾರದು?” ಕುಳಿತಲ್ಲಿಂದಲೇ ಕೇಳಿದನು ಹನೀಫ್. ಏಜೆಂಟ್ ಮಮ್ಮೂಟಿಯನ್ನು ಪರಿಚಯಿಸಿದನು. “ಯಾರೂ?” ಮಮ್ಮೂಟಿಯಾ?” ನಂಬಲಾಗದಂತೆ ಕೇಳಿದನಾತ. “ಹೌದು, ನಾನೇ” ನಮ್ರನಾಗಿ ನಿಂತುಕೊಂಡೇ ನುಡಿದನು ಮಮ್ಮೂಟಿ. “ಓಹೋ... ನೀನು ನಮ್ಮ ಮನೆ ಕೊಂಡುಕೊಳ್ಳುವಷ್ಟು ದೊಡ್ಡವನಾಗಿ ಬಿಟ್ಟೆಯಾ?” ಎಂದು ಮಮ್ಮೂಟಿಯನ್ನು ದುರುಗುಟ್ಟಿ ನೋಡಿದನು. “ಹುಂ. ಏನು ಮಾಡುವುದು? ನನಗೀಗ ಹಣದ ಅಗತ್ಯವಿದೆ. ಆದರೆ ಒಂದು ಮಾತು. ಈ ಆಸ್ತಿಗೆ ನಾನು ಹೇಳಿದ ಬೆಲೆ ಕೊಡಬೇಕು. ಮತ್ತು ಈ ಬೆಲೆ ಇತರರಿಗೆ ತಿಳಿಯಬಾರದು.” “ಅಂದರೆ?” ಹೊಲಬಾಗದೆ ಕೇಳಿದ ಮಮ್ಮೂಟಿ. “ಅಂದರೆ ಒಟ್ಟು ಮೊತ್ತ ಎಷ್ಟೆಂದು ನನ್ನ ತಾಯಿ, ತಂಗಿ, ತಮ್ಮಂದಿರಿಗೆ ತಿಳಿಯಬಾರದೂಂತ!” ತನ್ನ ಮನೆಗೇ ಕನ್ನ ಹಾಕುವ, ತನ್ನವರನ್ನೇ ವಂಚಿಸ ಹೊರಟ 94 ಸುಳಿ ಇಂತಹವರೊಡನೆ ಹೆಚ್ಚು ಮಾತೇಕೆ ಎಂದುಕೊಳ್ಳುತ್ತಾ, “ಹೂಂ ಆಗಲಿ” ಎನ್ನುತ್ತಾ ಅಲ್ಲಿಂದ ಹೊರಟನು ಮಮ್ಮೂಟಿ. ತಾನು ಹೇಳಿದ ಬೆಲೆಗೆ ಮಮ್ಮೂಟಿ ಒಪ್ಪಿಕೊಂಡದ್ದನ್ನು ಕಂಡ ಹನೀಫ್ ಆಶ್ಚರ್ಯಾಘಾತದಿಂದ ಮಮ್ಮೂಟಿ ಕಾರು ಚಲಾಯಿಸುವುದನ್ನು ನೋಡುತ್ತಾ ನಿಂತು ಬಿಟ್ಟನು. ಕಾರಿನಲ್ಲಿ ಕುಳಿತುಕೊಂಡ ಏಜೆಂಟ್, “ಏನು ಜನವಪ್ಪ ಇವರು? ನಿಮ್ಮೊಡನೆ, ‘ಕುಳಿತುಕೊಳ್ಳಿ’ ಎಂದೂ ಕೂಡಾ ಹೇಳಲಿಲ್ಲವಲ್ಲ ಅಂತ?” ಎಂದಾಗ ಮಮ್ಮೂಟಿ ನಸು ನಕ್ಕನು. ಆತನ ದೃಷ್ಟಿ ಕೈ ಬೆರಳಿನ ಸುಟ್ಟ ಗಾಯದೆಡೆಗೆ ಹರಿಯಿತು. ಮನೆಗೆ ಹಿಂತಿರುಗಿದವನೇ ಆತನು ತನ್ನ ತಾಯಿಯೊಡನೆ, “ಉಮ್ಮಾ, ಮೂಸಾ ಹಾಜಾರರ ಮನೆ ನಾನು ಕೊಂಡುಕೊಂಡೆ” ಎಂದನು. “ಆಂ...? ಏನೂ... ? ಉಮ್ಮಾಲಿ ತೆರೆದ ಬಾಯಿ ಮುಚ್ಚಿಕೊಳ್ಳಲು ಕೊಂಚ ಹೊತ್ತೇ ಹಿಡಿಯಿತು. “ಇನ್ನೆರಡು ತಿಂಗಳೊಳಗೆ ಮನೆ ಖಾಲಿ ಮಾಡಿ ಬಿಟ್ಟು ಕೊಡಬೇಕೆಂದು ಹೇಳಿ ಬಂದಿದ್ದೇನೆ. ಅಷ್ಟರೊಳಗೆ ನಾನೊಮ್ಮೆ ಬೊಂಬಾಯಿಗೆ ಹೋಗಿ ಬರುವೆ” ಎಂದನು. “ಇನ್ನು ಬೊಂಬಾಯಿಗೆ ಹೋದರೆ ನೀವು ಬರುವುದು ಹತ್ತು ವರ್ಷಗಳ ಮೇಲೊ ಏನೊ. ಈಗ ಬಂದಿದ್ದಕ್ಕೆ ಒಂದೆರಡು ತಿಂಗಳಾದರೂ ಊರಲ್ಲಿರಬಾರದೇ?” ಎಂದು ರುಖಿಯಾ ಗೊಣಗುಟ್ಟಿದಳು. “ಅಯ್ಯೊ ಹೆಣ್ಣೆ. ನಿನಗದೆಲ್ಲ ತಿಳಿಯದು. ಅದೂ ಅಲ್ಲದೆ ಈ ಮನೆಯಲ್ಲಿರಲು ನನ್ನಿಂದಾಗದು. ಅಂಗಡಿಯ ಇಸ್ಮಾಲಿಯೊಡನೆ ನಿಮಗೆ ಬೇಕಾದ ಸಾಮಾನುಗಳನ್ನು ಕಳಿಸಿಕೊಡಲು ಹೇಳಿದ್ದೇನೆ. ಇನ್ನು ಮುಂದೆ ನೀವ್ಯಾರು ಯಾರ ಮನೆಗೆಲಸಕ್ಕೂ ಹೋಗಬಾರದು. ನಿಮಗೆ ಮೀನು ಕಳಿಸಿಕೊಡಲು ವಾಸುವಿಗೆ ಹೇಳಿದ್ದೇನೆ” ಎನ್ನುತ್ತಾ ಮರುದಿನ ಹೊರಡುವ ಸಿದ್ಧತೆಗೆ ತೊಡಗಿದನು. * * * * * ಮಮ್ಮೂಟಿ ಈಗ ಹೊಸಮನೆ ಮೂಸಾ ಹಾಜಿಯವರ ಮನೆಯ ಹೊಸ ಯಜಮಾನ. ಮನೆಯ ಮುಂದೆ ಒಂದಲ್ಲ ಎರಡು ಕಾರುಗಳು; ಡ್ರೈವರುಗಳು. ಮನೆಯ ಒಳಗೂ ಬೇಕಾದಷ್ಟು ಆಳುಕಾಳುಗಳು. ಉಮ್ಮಾಲಿ ಮತ್ತು ರುಖಿಯಾ ಮನೆಯ ಯಜುಮಾನಿಯರು. ಹಿಂದೆ ಅಲ್ಲಿದ್ದ ಆಚುಮ್ಮ ಮತ್ತು ಆಕೆಯ ಮಗ ಕಾದರನನ್ನು ಮಮ್ಮೂಟಿ ಮನೆಯಲ್ಲೇ ತಂದಿಟ್ಟುಕೊಂಡನು. ಹಿಂದೆ ಆ ಮನೆಯಲ್ಲಿ ಮಮ್ಮೂಟಿ ಮಾಡುತ್ತಿದ್ದ ಕೆಲಸಗಳೆಲ್ಲ ಈಗ ಕಾದರನದು. ಅಡಿಗೆ ಮನೆಯ ಭರತ 95 ಜವಾಬ್ದಾರಿ ಆಚುಮ್ಮಳದ್ದು. ಆದರೆ ಆಚುಮ್ಮ ಮಮ್ಮೂಟಿಗೆ ಕೆಲಸದವಳಾಗಿರಲಿಲ್ಲ. ಆಕೆಯೂ ಮನೆಯ ಓರ್ವ ಸದಸ್ಯಳಂತಿದ್ದು ಆಕೆಯನ್ನು ಮಮ್ಮೂಟಿ ಆಚುಮ್ಮಕ್ಕ ಎಂದೇ ಕರೆಯುತ್ತಿದ್ದನು. ಉಮ್ಮಾಲಿ ಕಾಲಿಗೆ ಚಪ್ಪಲಿ ಹಾಕಿ ಒಡಾಡುವುದನ್ನು ಅಭ್ಯಾಸ ಮಾಡಿಕೊಳ್ಳಲು ತಿಂಗಳೇ ಹಿಡಿಯಿತು. ರುಖಿಯಾ ಕೂಡಾ ಈಗ ಮನೆಯೊಳಗೂ ಚಪ್ಪಲಿ ಹಾಕಿಕೊಂಡೇ ಓಡಾಡುತ್ತಾಳೆ. ಇಬ್ಬರ ಕೈಗಳಲ್ಲೂ ಎಂಟು ಜೊತೆ ಚಿನ್ನದ ಬಳೆಗಳು. ರುಖಿಯಾ ಕತ್ತಿನಲ್ಲಿ ನಿತ್ಯವೂ ಒಂದೆರಡು ಹಾರಗಳನ್ನು ಧರಿಸುತ್ತಿದ್ದಳು. ಹಾಜಿರಾಳ ಮೈಮೇಲೆ ಸಾಕಷ್ಟು ಚಿನ್ನದೊಡವೆಗಳು ಕಂಗೊಳಿಸಿದುವು. ಹಾಜಿರಾ ಈಗ ಮನೆಯ ರಾಜಕುವರಿ; ಮಮ್ಮೂಟಿ ಜಮಾಲನನ್ನು ಬೇರಾವುದೊ ಊರಿನ ಶಾಲೆಗೆ ಸೇರಿಸಿದ್ದನು. ಹಾಜಿರಾಗೆ ಇಂಗ್ಲಿಷ್‌ಕಲಿಸಲು ಉಪಾಧ್ಯಾಯಿನಿಯೊಬ್ಬಳನ್ನು ಗೊತ್ತುಪಡಿಸಿದನು. “ಈ ಇಂಗ್ಲಿಸು ಪಂಗ್ಲೀಸೆಲ್ಲ ಹೆಣ್ಣು ಮಕ್ಕಳಿಗೇಕೆ? ಖುರ್‍ಆನ್ ಇನ್ನಷ್ಟು ಓದಿಸು. ಸಾಕು.” ಎಂದು ಉಮ್ಮಾಲಿಯೆಂದಾಗ ಮಮ್ಮೂಟಿ, “ಉಮ್ಮಾ, ಈಗಿನ ವಿದ್ಯಾವಂತ ಹುಡುಗರು, ಹುಡುಗಿಗೆ ಇಂಗ್ಲಿಷ್‌ಬರುತ್ತದೆಯೇ ಎಂದು ಕೇಳಲಾರಂಭಿಸಿದ್ದಾರೆ. ಒಳ್ಳೆಯ ವಿದ್ಯಾವಂತ ಹುಡುಗನಿಗೆ ಅವಳನ್ನು ಮದುವೆ ಮಾಡಿ ಕೊಡುವೆ” ಎಂದನು. ಅತ್ತೆ ಸೊಸೆಯರಿಬ್ಬರೂ ಈಗ ಬುರುಕಾ ಧರಿಸದೆ ಮನೆಯಿಂದ ಹೊರಗೆ ಕಾಲಿಡುತ್ತಿರಲಿಲ್ಲ. ಬುರುಕಾ ಧರಿಸಿ ಕಾರಿನಲ್ಲಿ ಕುಳಿತು ಎಂದಾದರೊಮ್ಮೆ ತಮ್ಮ ಊರಿಗೆ ಹೋಗಿ ಬರುತ್ತಿದ್ದರು. ಜಮೀಲಳ ಗಂಡನಿಗೂ ಈಗ ಮಮ್ಮೂಟಿಯ ಜೊತೆಯಲ್ಲೇ ಕೆಲಸ. ಆತನಿಗೂ ಮಮ್ಮೂಟಿ ತನ್ನ ಮನೆಯ ಸಮೀಪದಲ್ಲೇ ಮನೆಯೊಂದನ್ನು ಕೊಂಡು ಕೊಟ್ಟಿದ್ದನು. ಆತನೂ ಕಾರೊಂದರ ಒಡೆಯನಾಗಿದ್ದನು. ಉಮ್ಮಾಲಿ ಈಗ ಐದು ಹೊತ್ತೂ ನಮಾಜು ಮಾಡುತ್ತಾಳೆ. ಮನೆಯವರೆಲ್ಲರೂ ತಪ್ಪದೆ ನಮಾಜು ಮಾಡಬೇಕೆಂಬುದು ಮಮ್ಮೂಟಿಯ ಆಜ್ಞೆಯಾಗಿತ್ತು. ಉಮ್ಮಾಲಿ ಕೆಲವೊಮ್ಮೆ ಸೊಸೆಯನ್ನು ಕರೆದು ಕೇಳುವುದಿತ್ತು. “ಅಸರ್ ನಮಾಜು ಮೂರು ‘ರಕಹತ್ತೇ’ ನಾಲ್ಕು ‘ರಕಹತ್ತೇ’ ಎಂದು. ಆಗ ರುಖ್ಯಾ, “ಮೂರೇ ಇರ್ಬೇಕು” ಎಂದದ್ದೂ ಇದೆ. ಹಾಜಿರಾ ಅಲ್ಲಿದ್ದರೆ, “ಅಸರ್ ನಮಾಜು ನಾಲ್ಕು ‘ರಕಹತ್ತು’ ಎನ್ನುತ್ತಿದ್ದಳು. ನಮಾಜಿನ ವಿಷಯದಲ್ಲಿ ಇಬ್ಬರಿಗೂ ಮಾರ್ಗದರ್ಶಕಿ ಹಾಜಿರಾ. ಆ ದಿನ ಮಮ್ಮೂಟಿ ಒಳ ಬಂದವನೇ ಉಮ್ಮಾಲಿಯೊಡನೆ, “ಉಮ್ಮಾ, 96 ಸುಳಿ ಅಬ್ಬ ತೀರಿದ್ದು ಯಾವ ತಿಂಗಳಲ್ಲಿ?” ಎಂದು ಕೇಳಿದನು. ‘ರಜಬೊ ಶಾಬಾನೊ ಇರಬೇಕು. ನನಗೆ ಸರಿಯಾಗಿ ನೆನಪಿಲ್ಲ. ಯಾಕೆ?” ಎಂದು ಕೇಳಿದಳು. “ಈ ಬಾರಿ ಅಬ್ಬಾನ ಆಂಡ್ (ವಾರ್ಷಿಕ)ನ್ನು ಚೆನ್ನಾಗಿ ಮಾಡಬೇಕೆಂದಿದ್ದೇನೆ. ಇಲ್ಲಿನ ನೆರೆಕರೆಯವರನ್ನೆಲ್ಲ ಕರೆದು ಗಡದ್ದಾಗಿ ಊಟ ಹಾಕುವಾ” “ಹೂಂ. ಆಗಲಿ. ಶಾಬಾನ್ ತಿಂಗಳ ಎರಡರಂದು ಮಾಡುವಾ” ತಂದೆಯ ವಾರ್ಷಿಕಕ್ಕೆ ಮಮ್ಮೂಟಿ ಮಸೀದಿಯಲ್ಲಿ ಶುಕ್ರವಾರದ ನಮಾಜಿನ ಬಳಿಕ ಊರವರಿಗೆ ಆಮಂತ್ರಣ ನೀಡಿದನು. “ಮಮ್ಮೂಟಿಯವರ ತಂದೆಯ ವಾರ್ಷಿಕವಂತೆ” ಊರಲೆಲ್ಲ ಸುದ್ದಿಯಾಯಿತು. ಮನೆಯ ಮುಂದೆ ಚಿಕ್ಕದೊಂದು ಚಪ್ಪರವೂ ಎದ್ದಿತು. ಊರವರಿಗೆಲ್ಲ ಗಡದ್ದಾಗಿ ಸಣ್ಣಕ್ಕಿ ಅನ್ನ ಮತ್ತು ಮಾಂಸದ ಸಾರಿನ ಊಟವನ್ನು ಬಡಿಸಲಾಯಿತು. ಉಳಿದ ಅನ್ನ ಮತ್ತು ಸಾರನ್ನು ನೆರೆಕರೆಯವರಿಗೆ ಕಳುಹಿಸಲಾಯಿತು. ರುಖಿಯಾ ಮತ್ತೊಮ್ಮೆ ಗರ್ಭಿಣಿಯಾದಳು. ಆಕೆಯನ್ನು ಪರೀಕ್ಷಿಸಲೂ ಮಹಿಳಾ ವೈದ್ಯಯೋರ್ವರನ್ನು ಮನೆಗೆ ಕರೆಸಿದನು ಮಮ್ಮೂಟಿ. ಆಕೆಯನ್ನು ಪರೀಕ್ಷಿಸಿದ ಬಳಿಕ ಆತನು ವೈದ್ಯೆಯ ಬಳಿ ಬಂದು ಸೊಂಟ ಬಗ್ಗಿಸಿ ಕೈ ಮುಗಿಯುತ್ತಾ, “ಅಮ್ಮಾ, ನನ್ನ ತಾಯಿಯನ್ನೊಮ್ಮೆ ಪರೀಕ್ಷಿಸಿ ಬಿಡಿ.'' ಎಂದನು. “ಏನಾಗಿದೆ ನಿಮ್ಮ ತಾಯಿಗೆ?” ವೈದ್ಯೆ ಕೇಳಿದಳು. “ಹಿ..... ಹಿ...” ನಕ್ಕನು ಆತ. ವಿಶೇಷವೇನಿಲ್ಲ. ಅವರಿಗೆ ವಯಸ್ಸಲ್ಲವಾ ಪ್ರೆಸರೊ, ಮೂತ್ರರೋಗವೋ ಏನಾದರೂ ಇದೆಯಾ ಅಂತ.....!” ಎಂದನು. ಪ್ರೆಸರು?” ವೈದ್ಯೆ ತಲೆ ಓಡಿಸಿದಳು. “ಬ್ಲಡ್ ಪ್ರೆಶ್ಯರಾ?” ನಗುತ್ತಾ ಕೇಳಿದಳಾಕೆ. “ಆಗಲಿ ಪರೀಕ್ಷಿಸುತ್ತೇನೆ.” ಉಮ್ಮಾಲಿಯನ್ನು ಪರೀಕ್ಷಿಸಿದಾಕೆ, “ನಿಮ್ಮಮ್ಮನಿಗೆ ಹೇಳಿಕೊಳ್ಳುವಂತಹ ಖಾಯಿಲೆಯೇನೂ ಇಲ್ಲ. ಆದರೂ ವಯಸ್ಸಲ್ಲವಾ? ಈ ಟಾನಿಕ್ ತಂದು ಕೊಡಿ” ಎನ್ನುತ್ತಾ ಆಕೆ ಚೀಟಿ ಬರೆದು ಕೊಟ್ಟಳು. “ಪಥ್ಯವೇನಾದರೂ ಬೇಕಾ ಅಮ್ಮಾ?” ಉಮ್ಮಾಲಿ ಕೇಳಿದಳು. “ಹಾಲೂ ಹಣ್ಣೂ ಚೆನ್ನಾಗಿ ತೆಗೆದುಕೊಳ್ಳಿ!” ತನ್ನ ಕರ್ತವ್ಯ ಮುಗಿಸಿದಳಾಕೆ. ಮರುದಿನದಿಂದಲೇ ಉಮ್ಮಾಲಿ ಟಾನಿಕ್ ಕುಡಿಯತೊಡಗಿದಳು. ಹಾಲು, ಹಣ್ಣುಗಳಿಗೆ ಈಗ ಕೊರತೆಯೇನೂ ಇಲ್ಲವಲ್ಲ? ಹಣ್ಣು ತಿಂದು ಹಾಲು ಕುಡಿದು ಭರತ 97 ಮಲಗುತ್ತಿದ್ದಳು. ಮನೆಯಲ್ಲಿದ್ದ ಕೆಲಸದವರೊಡನೆ, “ಡಾಕ್ಟರು ಸುಮ್ಮನೆ ಮದ್ದು ಕೊಡ್ತಾರಾ? ಪಥ್ಯ ಹೇಳ್ತಾರಾ? ನನಗೆ ಮೈ ಚೆನ್ನಾಗಿಲ್ಲ. ಒಳಗೇನು ಖಾಯಿಲೆ ಇತ್ತೊ ಯಾರಿಗೆ ಗೊತ್ತು? ಡಾಕ್ಟರರು ತಪಾಸಣೆ ಮಾಡದಿದ್ದರೆ ಇಷ್ಟು ಹೊತ್ತಿಗೆ ಹಾಸಿಗೆ ಹಿಡಿಯುತ್ತಿದ್ದೆನೊ ಏನೊ!” ಎನ್ನುತ್ತಿದ್ದಳು. ಊರಲೆಲ್ಲ ಸುದ್ದಿಯಾಯಿತು. “ಮಮ್ಮೂಟಿಯವರ ತಾಯಿಗೆ ಹುಷಾರಿಲ್ಲವಂತೆ. ಒಮ್ಮೆ ಹೋಗಿ ನೊಡ್ಕೊಂಡು ಬರಬೇಕು.” ನೆರೆಕರೆಯವರು ಮತ್ತು ಗುರುತಿನ ಹೆಂಗಸರು ಉಮ್ಮಾಲಿಯನ್ನು ನೋಡಿಕೊಂಡು ಹೋಗಲು ಬಂದರು. ಬಂದವರಿಗೆಲ್ಲರಿಗೂ ಚಹಾ, ತಿಂಡಿಯ ಅತಿಥ್ಯವಂತೂ ಇದ್ದೇ ಇತ್ತು. ಉಮ್ಮಾಲಿ ಹಾಸಿಗೆಯಲ್ಲಿ ಕುಳಿತು ಬಂದವರೊಡನೆ ತನ್ನ ಖಾಯಿಲೆಯ ವಿವರ ತಿಳಿಸುತ್ತಾ, “ಹುಟ್ಟಿದವರು ಸಾಯದೆ ಇರ್ತಾರಾ? ಆದರೆ ನನಗೆ ಒಂದೇ ಒಂದು ಆಸೆಯಿದೆ. ನನ್ನ ಹಾಜಿರಾಳ ಮದುವೆ ನೋಡ್ಬೇಕು. ಮತ್ತು ಹಜ್‍ಗೆ ಹೋಗಬೇಕು. ಇವೆರಡು ಆಸೆಗಳು ನೆರವೇರಿದ ಬಳಿಕ ದೇವರು ಕರೆಸಿಕೊಂಡಿದ್ದರೆ ಸಾಕಾಗಿತ್ತು” ಎನ್ನುತ್ತಿದ್ದಳು. ಬಂದವರು ಸಂತೈಸಿದರು. “ಸಾಯುವ ಮಾತೇಕೆ ಆಡ್ತೀರಿ ಉಮ್ಮಾ? ನಮಗೀಗ ಅಷ್ಟೊಂದು ವಯಸ್ಸಾಗಿದೆಯೇ? ದೇವರು ನಿಮ್ಮ ಖಾಯಿಲೆಯನ್ನು ಬೇಗ ವಾಸಿ ಮಾಡಲಿ”. ತಿಂಗಳಿಗೊಂದು ಬಾರಿ ಡಾಕ್ಟರು ಬಂದು ಮನೆಯವರೆಲ್ಲರನ್ನೂ ಪರೀಕ್ಷಿಸುವುದು ಆ ಮನೆಯ ಪದ್ಧತಿಯೇ ಆಯಿತು. ರುಖಿಯಾಗೆ ಹೆಣ್ಣು ಮಗು ಹುಟ್ಟಿತು. ನೋವು ಪ್ರರಂಭವಾದಾಗ ಸೂಲಗಿತ್ತಿಯೊಡನೆ ಮಹಿಳಾ ವೈದ್ಯೆಯನ್ನೂ ಕರೆಸಿದನು ಮಮ್ಮೂಟಿ. “ಅಮ್ಮಾ, ಎಷ್ಟು ಹೊತ್ತಾದರೂ ಸರಿ, ಹೆರಿಗೆಯಾದ ಬಳಿಕವೇ ನೀವಿಲ್ಲಿಂದ ಹೋಗಬೇಕು. ಬಹಳ ವರ್ಷಗಳ ಬಳಿಕ ಆಕೆಗೆ ಹೆರಿಗೆಯಾಗುತ್ತಿದೆ” ಎಂದು ನಮ್ರನಾಗಿ ಕೈ ಮುಗಿದು ನುಡಿದನು. ರುಖಿಯಾಗೆ ಜಮಾಲುವಿನ ಹೆರಿಗೆಯ ನೆನಪಾಯಿತು. ಆಗ ಸೂಲಗಿತ್ತಿಯೂ ಇಲ್ಲದೆ, ನೋವಿನಲ್ಲೇ ಒಂದು ಮೈಲು ನಡೆದು ಹೆರಿಗೆಯಾಗಿತ್ತು! ಈಗಲೂ ಸುಲಭದಲ್ಲೇ ಹೆರಿಗೆಯಾಯಿತು. ವೈದ್ಯೆ ಹೊರಟಾಗ ಆಕೆಗೆ ಉತ್ತಮವಾದ ಒಂದೆರಡು ವಿದೇಶಿ ಸೀರೆ, ಸುಗಂಧ ದ್ರವ್ಯ ಮತ್ತು ಕೈ ತುಂಬಾ ಹಣ ಕೊಟ್ಟು, 98 ಸುಳಿ ತಾನೇ ಕಾರಿನಲ್ಲಿ ಕರೆದೊಯ್ದು ಬಿಟ್ಟು ಬಂದನು ಮಮ್ಮೂಟಿ. ಊರಲೆಲ್ಲ ಸುದ್ದಿಯಾಯಿತು. “ಮಮ್ಮೂಟಿಯವರಿಗೆ ಮಗು ಹುಟ್ಟಿದೆಯಂತೆ” ನೆರೆಕರೆಯವರು, ಗುರುತಿನವರು ಮಗುವನ್ನು ನೋಡಲು ಬರತೊಡಗಿದರು. ಬಂದವರೆಲ್ಲರಿಗೂ ಸಿಹಿ, ಖಾರದ ನಾಲ್ಕೈದು ಬಗೆಯ ತಿಂಡಿ ಮತ್ತು ಚಹಾ ಸರಬರಾಜಾಯಿತು. ಬಾಣಂತಿಯ ಕೆಲಸಕ್ಕಾಗಿ ಉಮ್ಮಾಲಿ ತನ್ನ ಊರಿನಿಂದ ಹೆಂಗಸೊಬ್ಬಳನ್ನು ಕರೆಸಿ ಹಗಲಿರುಳೂ ದುಡಿಸಿದಳು. ಹಂಡೆ ಹಂಡೆ ನೀರು ಕಾಯಿಸಿ ಬಾಣಂತಿಗೆ ಎರೆಯಲು ಆಜ್ಞೆ ಮಾಡಿದಳು. ಊಟ, ತಿಂಡಿ, ಮೀನು ಸಾರು, ಕೋಳಿ ಸೂಪು ಎಂದು ಬಾಣಂತಿಗೆ ರುಚಿ ರುಚಿಯಾಗಿ ಅಡಿಗೆ ಮಾಡಿಸಿದಳು. ಇಂತಹ ಅವಿಶ್ರಾಂತ ದುಡಿಮೆಗಾಗಿ, ಆಕೆಗೆ ಇತರೆಡೆಗಳಲ್ಲಿ ದೊರೆಯುವ ಸಂಬಳದ ಎರಡರಷ್ಟು ಹಣವೂ ದೊರೆಯಿತು. ಮಮ್ಮೂಟಿಯವರ ಮನೆಯಲ್ಲಿ ಎಷ್ಟು ಸಿಕ್ಕಿತು ಎಂದು ಯಾರಾದರೂ ಕೇಳಿಯೇ ಕೇಳುತ್ತಾರಲ್ಲವೇ? ಮಗುವಿನ ಕೂದಲು ತೆಗೆದು ತೊಟ್ಟಿಲು ಕಟ್ಟುವ ಸಮಾರಂಭವೂ ಅದ್ದೂರಿಯಾಗಿ ನೆರವೇರಿತು. ಊರವರಿಗೆ ಮಾಂಸದ ಊಟ ಮತ್ತು ಸೇರಿದ ಹುಡುಗರೆಲ್ಲರಿಗೆ ಒಂದೊಂದು ರೂಪಾಯಿ ಮತ್ತು ಒಂದೊಂದು ಲಾಡು ನೀಡಲಾಯಿತು. ಮಿಠಾಯಿ ಮತ್ತು ರೂಪಾಯಿಯ ಸುದ್ದಿ ಕೇಳಿದ ಹುಡುಗರು ದೂರದ ಶಾಲೆಗಳಿಂದಲು ಓಡಿ ಬಂದು ಕೈಯೊಡ್ಡಿದರು. “ಮಮ್ಮೂಟಿಯವರ ಹೆಂಡತಿಗೆ ಪ್ರತಿ ವರ್ಷವೂ ಒಂದು ಮಗು ಹುಟ್ಟಲಿ!” ಎಂದು ಬಡ ಹೆಂಗಸರೂ ಮಕ್ಕಳೂ ‘ದುವಾ’ ಮಾಡಿದರು! ರಂಜಾನ್ ತಿಂಗಳಲ್ಲಿ ‘ಜಕಾತ್’ ಬೇಡಲು ಬಂದ ಹೆಂಗಸರಿಗೆಲ್ಲರಿಗೂ ಸೇರಕ್ಕಿ ಮತ್ತು ಅವರವರ ಅಂತಸ್ತಿಗನುಗುಣವಾಗಿ ಒಂದರಿಂದ ನೂರು ರೂಪಾಯಿಗಳ ವರೆಗೆ ದಾನ ಮಾಡಲು ಮಮ್ಮೂಟಿ ತಾಯಿಯ ಕೈಗೆ ಹಣ ನೀಡಿದನು. ಅಕ್ಕಿ ಮೂಟೆಗಳನ್ನೂ ತಂದಿತ್ತನು. ರಂಜಾನಿನ ಇಪ್ಪತ್ತೇಳನೇಯ ದಿನ ಬಂದ ಹೆಂಗಸರಿಗೆಲ್ಲರಿಗೂ ಸೀರೆಯನ್ನು ದಾನ ಮಾಡಿದರು. ರುಖಿಯಾ ಮಾತ್ರ ಉಮ್ಮಾಲಿಯೊಡನೆ ಸಿಟ್ಟಿಗೆದ್ದಳು. “ನನ್ನ ಗಂಡ ದುಡಿದ ಹಣ. ಬಡವರಿಗೆ ದಾನ ಮಾಡಬೇಕಾದವಳು ನಾನು!” ಎಂದಳು. “ನಾನು ಒಂಭತ್ತು ತಿಂಗಳು ಹೊಟ್ಟೆಯಲ್ಲಿಟ್ಟು ಹೆತ್ತ ಬಳಿಕವೇ ಅಲ್ಲವಾ ಅವನು ನಿನ್ನ ಗಂಡನಾದದ್ದು?” ಎಂದು ದಬಾಯಿಸಿದಳು ಉಮ್ಮಾಲಿ. ಮಮ್ಮೂಟಿಯೂ ಆಕೆಯನ್ನು ಗದರಿದನು. “ಉಮ್ಮಾ ಇರುವವರೆಗೆ ಅವರೇ ಜಕಾತ್ ನೀಡಲಿ. ನೀನು ಮಧ್ಯೆ ತಲೆ ಹಾಕಬೇಡ. ನಿನಗಿಷ್ಟವಿದ್ದವರಿಗೆ ನೀನು ಭರತ 99 ಬೇರೆಯೇ ಕೊಡು.” ಎಂದು ಆಕೆಯ ಕೈಯಲ್ಲೂ ನೋಟಿನ ಕಟ್ಟನ್ನಿಟ್ಟನು. ಜಕಾತ್‍ಗಾಗಿ ಬಂದವರೊಡನೆ ಉಮ್ಮಾಲಿ, ‘ನೋಡಿ, ನನ್ನ ಮಗ ನನ್ನ ಕೈಯಲ್ಲಿ ಹತ್ತು ಸಾವಿರ ರೂಪಾಯಿಗಳನ್ನಿಟ್ಟಿದ್ದ ಜಕಾತ್‍ಗಾಗಿ. ಅದೆಲ್ಲವೂ ಮುಗಿದೇ ಹೋಯಿತು.!” ಎಂದು ಜಂಭದಿಂದ ನುಡಿದಳು. ಮಮ್ಮೂಟಿ ಎಂದಾದರೊಮ್ಮೆ ಕಾರಿನಲ್ಲಿ ಮಾರುಕಟ್ಟೆಗೆ ಹೋಗುವುದಿತ್ತು. ಮೀನಿನ ಬೆಲೆ ಕೇಳಿ ಚರ್ಚಿಸುತ್ತಾ ನಿಂತವರು ನೋಡುತ್ತಿದ್ದಂತೆಯೇ ನೂರು ರೂಪಾಯಿಯ ನೋಟನ್ನು ಮರಕಾಲ ಹೆಂಗಸಿನ ಕೈಯಲ್ಲಿಟ್ಟು ಬುಟ್ಟಿಯ ಮೀನೆಲ್ಲವನ್ನೂ ತಂದು ಕಾರಿನ ಢಿಕ್ಕಿಯಲ್ಲಿಡಲು ಆಜ್ಞಾಪಿಸುತ್ತಿದ್ದನು. ಹಣ್ಣಿನ ಅಂಗಡಿಗಳಿಗೆ ಹೋದರೂ ಇದೇ ಪರಿಸ್ಥಿತಿ. ದೊಡ್ಡ ಬುಟ್ಟಿಗಳಲ್ಲಿಯೇ ವ್ಯಾಪಾರ. ಕಿಲೋ ಅಥವಾ ಡಜನ್ ಲೆಕ್ಕ ಇಲ್ಲವೇ ಇಲ್ಲ. ತಂದ ಸಾಮಾನುಗಳಲ್ಲಿ ಅರ್ಧವನ್ನು ಅಕ್ಕ ಜಮೀಲಳ ಮನೆಗೆ ಕಳುಹಿಸಲು ಮಮ್ಮೂಟಿ ಎಂದೋ ಆಜ್ಞೆ ನೀಡಿದ್ದನು. ಮಮ್ಮೂಟಿ ಮಾರುಕಟ್ಟೆಗೆ ಬಂದನೆಂದರೆ ಉಳಿದವರು ಗೌರವ ಭಾವದಿಂದ ದೂರ ಸರಿದು ನಿಲ್ಲುತ್ತಿದ್ದರು. ಅಂಗಡಿಗಳ ಮಾಲಕರು ಎದ್ದು ನಿಂತು ಗೌರವ ಸೂಚಿಸಿ ಮಮ್ಮೂಟಿಗೆ ಬೇಕಾದ ಸಾಮಾನುಗಳನ್ನು ತಾವೇ ತಂದೊಪ್ಪಿಸುತ್ತಿದ್ದರು. ಅವನ ಹಿಂದೆ ನಡೆಯಲು ಕೆಲವು ಜನರಂತೂ ಇದ್ದೇ ಇದ್ದರು. ಮಮ್ಮೂಟಿಯ ವ್ಯವಹಾರ ಈಗ ತುಂಬಾ ವಿಸ್ತರಿಸಿತ್ತು. ಬೆಸ್ತರ ವಾಸು ಆತನ ಬಲಗೈ ಬಂಟನಾಗಿದ್ದನು. ವಾಸು ತನ್ನ ವಾಸಸ್ಥಾನವನ್ನು ಉತ್ತಮವಾದ ಮನೆಯೊಂದಕ್ಕೆ ಬದಲಾಯಿಸಿದ್ದರೂ ಮೊದಲಿನ ಗುಡಿಸಲನ್ನು ಹಾಗೆಯೇ ಉಳಿಸಿಕೊಂಡಿದ್ದನು. ಮಮ್ಮೂಟಿ ಮತ್ತು ವಾಸು ಆಗಾಗ ಗುಡಿಸಲಿನಲ್ಲಿ ಸೇರಿ ಮಂತ್ರಾಲೋಚನೆ ನಡೆಸುವುದಿತ್ತು. ಮಮ್ಮೂಟಿ ಹತ್ತಿಪ್ಪತ್ತು ಕಾರುಗಳ ಒಡೆಯನಾಗಿದ್ದ ಅವೆಲ್ಲವನ್ನೂ ಒಬ್ಬೊಬ್ಬ ಡ್ರೈವರನ ಬಳಿ ಬಿಟ್ಟಿದ್ದನು. ಈ ಚಾಲಕರು ಮತ್ತವರ ಕುಟುಂಬದವರೆಲ್ಲರೂ ಮಮ್ಮೂಟಿಯ ಸಂಬಂಧಿಕರಂತೆ ಮನೆಯವರಂತೆಯೆ ಇದ್ದರು. ಮಮ್ಮೂಟಿ ಕೆಲವೊಮ್ಮೆ ಮನೆಯಿಂದ ರಾತ್ರಿಯಲ್ಲಿ ಹೊರಟು ಬೆಳಗ್ಗಿನ ಜಾವದಲ್ಲಿ ಹಿಂತಿರುಗುತ್ತಿದ್ದನು. ಆಗೆಲ್ಲ ರುಖಿಯಾ ಕೋಪದಿಂದ ಕುದಿಯುತ್ತಾ ಆತ ಹಿಂತಿರುಗುವವರೆಗೆ ನಿದ್ದೆ ಇಲ್ಲದೆ ಹಾಸಿಗೆಯಲ್ಲಿ ಹೊರಳಾಡುತ್ತಿದ್ದಳು. ಕೊನೆಗೊಂದು ದಿನ ಸಹಿಸಲಾರದೆ ಕೇಳಿಯೇ ಬಿಟ್ಟಳು. 100 ಸುಳಿ “ಯಾರೂ ಆ ಹೆಣ್ಣು?” ಎಂದು. ಮಮ್ಮೂಟಿ ಅವಾಕ್ಕಾದನು. ಬಳಿಕ ಗಟ್ಟಿಯಾಗಿ ನಗುತ್ತಾ, “ಹೆಂಗಸರ ತಲೆಯೊಳಗೆ ಬೇರೇನೂ ಇಲ್ಲವೆಂದು ಕಾಣುತ್ತದೆ. ಗಂಡ ಹೊರಗೆ ಕಾಲಿಟ್ಟೊಡನೆ ಅಥವಾ ಮನೆಗೆ ಬರಲು ಸ್ವಲ್ಪ ತಡವಾದೊಡನೆ ಬೇರೊಂದು ಹೆಂಗಸಿನ ಬಳಿಗೆ ಹೋದನೆಂದೇ ತಿಳಿದುಕೊಳ್ಳುವುದು” ಎಂದನು. “ಮನೆಯ ಗಂಡಸರು ರಾತ್ರಿಯೆಲ್ಲ ಹೊರಗಿರುವುದೆಂದರೆ ಏನರ್ಥ?” “ಅದನ್ನೆಲ್ಲ ಕೇಳಬೇಡ. ನಿನಗೇನು ಬೇಕು? ಅದನ್ನು ಕೇಳು. ಕಾರು, ಮನೆ, ಒಡವೆ, ಬಟ್ಟೆಬರೆ, ಹಣ ಯಾವುದು ಕಮ್ಮಿಯಾಗಿದೆ? ಹೇಳು”. ಎಂದು ಗದರಿಕೆಯ ಧ್ವನಿಯಲ್ಲಿ ಹೇಳುತ್ತಾ ಮತ್ತೂ ಒಂದು ಮಾತನ್ನು ಖಾರವಾಗಿಯೇ ಸೇರಿಸಿದನು. “ಇನ್ನು ಮುಂದೆ ಇಂತಹ ಪ್ರಶ್ನೆಗಳನ್ನು ಕೇಳುವುದಾದರೆ ಇಲ್ಲಿರಬೇಡ. ಹೊರಟು ಹೋಗು ನಿನ್ನ ತಾಯಿ ಮನೆಗೆ!” “ಏನಂದ್ರಿ?” ಹೆಡೆ ತುಳಿದ ಹಾವಾದಳು ಆಕೆ. “ಕಷ್ಟಪಟ್ಟು ನಿಮ್ಮ ಮಕ್ಕಳನ್ನು ಸಾಕಲು ನಾನು ಬೇಕಾಗಿತ್ತು. ಈಗ ಸುಖ ಬಂದಾಗ ನಾನು ಬೇಡ. ಅಲ್ಲವಾ?” ಗಂಟಲು ಕಟ್ಟಿ ಆಕೆಗೆ ಮುಂದೆ ಮಾತು ಹೊರಡಲಿಲ್ಲ. ಈಗ ಮಾತ್ರ ಮಮ್ಮೂಟಿ ಮೆತ್ತಗಾದನು. “ರುಖ್ಯಾ, ಈ ವಿಷಯವೆಲ್ಲ ನಿನಗೆ ತಿಳಿಯದು. ನಾನು ಹೊರಗೆ ಹೋಗುತ್ತಾ ಇರುವುದು ದುಡಿಮೆಗಾಗಿ. ಎಂತಹ ದುಡಿಮೆ ಎಂದು ಮಾತ್ರ ಕೇಳಬೇಡ. ತಿಂದುಂಡು ಸುಖವಾಗಿರು.” ಎಂದು ನಯವಾಗಿ ನುಡಿದನು. ಮಗಳ ಮದುವೆಗೆಂದೊ, ಮನೆ ಕಟ್ಟಲೆಂದೊ, ಮಕ್ಕಳ ವಿದ್ಯಾಭ್ಯಾಸಕ್ಕೆಂದೊ ಧನ ಸಹಾಯ ಕೇಳಲು ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ವೃದ್ಧಿಸುತ್ತಿತ್ತು. ಮಮ್ಮೂಟಿಯೆಂದರೆ ಊರವರಿಗೆ ಕರೆಯುವ ಹಸುವೇ ಆಗಿದ್ದನು. ಬಂದವರು ಕೈ ತುಂಬ ಹಣ ಪಡೆದುಕೊಂಡೇ ಹಿಂತಿರುಗುತ್ತಿದ್ದರು. ತಮ್ಮವರಿಗೆ ಕೆಲಸ ಕೇಳಿಕೊಂಡು ಬಂದಾಗ ಮಾತ್ರ ಆತ ತುಂಬಾ ನಂಬಿಕಸ್ತರೆಂದು ಕಂಡವರನ್ನು ಮಾತ್ರ ತನ್ನ ಬಳಿ ಕೆಲಸಕ್ಕಿಟ್ಟುಕೊಳ್ಳುತ್ತಿದ್ದನು. ಆ ದಿನ ಮಮ್ಮೂಟಿ ಉಮ್ಮಾಲಿಯೊಡನೆ, “ಉಮ್ಮಾ, ಈ ವರ್ಷ ನಾವು ಹಜ್‍ಗೆ ಹೋಗಿ ಬಿಡುವಾ.” ಎಂದನು. “ಹಾಜಿರಾಳ ಮದುವೆ ಮಾಡುವುದು ಬೇಡವಾ? ಅವಳಿಗೂ ಹದಿನಾಲ್ಕು ವರ್ಷ ತುಂಬುತ್ತಾ ಇದೆಯಲ್ಲ?” ಉಮ್ಮಾಲಿ ಎಂದಳು. “ಅವಳ ಮದುವೆಗೇನವಸರ? ಇನ್ನೂ ಒಂದೆರಡು ವರ್ಷ ಹೋಗಲಿ. ಭರತ 101 ಹಜ್ ಯಾತ್ರೆ ಈ ವರ್ಷವೇ ಆಗಲಿ.” ಎಂದನು. ಮಮ್ಮೂಟಿಯ ಹಜ್ ಯಾತ್ರೆ ಎಂದರೆ ಸಾಮಾನ್ಯ ಸಂಗತಿಯೇ? ಊರಲ್ಲಿ ಸುದ್ದಿ ಹರಡಿತು. “ಮಮ್ಮೂಟಿಯವರು ತಾಯಿಯನ್ನೂ ಕರೆದುಕೊಂಡು ಹಜ್‍ಗೆ ಹೋಗುತ್ತಾರಂತೆ!” ಹಜ್‍ಗೆ ಹೋಗುವವರಿಗೆ ‘ದಾವತ್’ ಆಗಬೇಡವೇ? ಊರವರೆಲ್ಲರಿಗೂ ಮಮ್ಮೂಟಿಯನ್ನು ಊಟಕ್ಕೆ ಆಮಂತ್ರಿಸುವ ತವಕ! ನಾ ಮುಂದು, ತಾ ಮುಂದು ಎಂದು ಎಲ್ಲರೂ ಆಮಂತ್ರಣ ನೀಡತೊಡಗಿದರು. ಒಂದು ತಿಂಗಳವರೆಗೆ ಮಮ್ಮೂಟಿಯ ಮನೆಯಲ್ಲಿ ಕೆಲಸದವರಿಗಾಗಿ ಮಾತ್ರ ಅಡಿಗೆ. ರಾತ್ರಿ ಮತ್ತು ಮಧ್ಯಾಹ್ನಗಳು ಆಗಲೇ ಕಾದಿರಿಸಲ್ಪಟ್ಟಿದ್ದರೆ ‘ಬೆಳಗ್ಗಿನ ತಿಂಡಿಗಾದರೂ ಬನ್ನಿ’ ಎಂಬ ಒತ್ತಾಯದ ಕರೆ. ಕೋಳಿ ಮತ್ತು ಕುರಿ ಮಾಂಸದ ವಿವಿಧ ಪಲ್ಯಗಳು, ಬಿರಿಯಾಣಿ, ಒಂದೆರಡು ಬಗೆಯ ಸಿಹಿ ತಿಂಡಿಗಳು, ಹಣ್ಣುಗಳು, ‘ಬಾಣಂತಿ ಸಾಕುವ ಉಮ್ಮಾಲಿ’ ಆಗಿದ್ದವಳು ಈಗ ‘ಮಮ್ಮೂಟಿಯವರ ತಾಯಿ ಉಮ್ಮಾಲಿಯಕ್ಕನವರು’ ಆಗಿದ್ದಳು., ಕೈ ತುಂಬ, ಕಿವಿ ತುಂಬ, ಕತ್ತಿನ ತುಂಬ ಚಿನ್ನದೊಡವೆಗಳನ್ನು ತೊಟ್ಟುಕೊಂಡು ರೇಶ್ಮೆ ಸೀರೆ ಉಟ್ಟು ಬುರುಕ ಹಾಕಿಕೊಂಡು ಉಮ್ಮಾಲಿ ಬಂದರೆ ಆಕೆಗೆ ಅದ್ಭುತ ಸ್ವಾಗತ ಕಾದಿರುತ್ತಿತ್ತು. ರುಖಿಯಾ ಮತ್ತು ಉಮ್ಮಾಲಿಯ ಕೈಗೆ ನೀರು ಹಾಕಿ ಕೈ ಒರೆಸಲು ಬಟ್ಟೆ ಹಿಡಿದು ಸಿದ್ಧರಾಗುತ್ತಿದ್ದರು ಅತಿಥೇಯರು. ತಟ್ಟೆಯಲ್ಲಿ ಬಡಿಸಿದ ಅನ್ನ ಖಾಲಿಯಾಗುವ ಮೊದಲೇ ಬೇಡ ಬೇಡವೆಂದರೂ ಇನ್ನಷ್ಟು ಮಾಂಸ ತಂದು ಸುರಿಯುತ್ತಿದ್ದರು. ಹೊಟ್ಟೆ ತುಂಬಾ ಊಟವಾದ ಬಳಿಕ ಉಮ್ಮಾಲಿ, “ಯಾಕೊ, ಇತ್ತೀಚೆಗೆ ನನಗೆ ಅನ್ನಾನೇ ಸೇರುವುದಿಲ್ಲ. ಡಾಕಟ್ಟರು ಕೊಟ್ಟ ಔಷಧಿ, ಮಾತ್ರೆ ಸೇವಿಸಿ ನಾಲಗೆಯ ರುಚಿಯೇ ಕೆಟ್ಟು ಹೋಗಿದೆ” ಎನ್ನುತ್ತಿದ್ದಳು. ಮಮ್ಮೂಟಿಯವರನ್ನು ಮತ್ತವರ ತಾಯಿಯವರನ್ನು ಮಕ್ಕಾಕ್ಕೆ ಬೀಳ್ಕೊಳ್ಳಲು ಊರಿನ ಕಾರುಗಳೆಲ್ಲವೂ ವಿಮಾನ ನಿಲ್ದಾಣಕ್ಕೆ ಧಾವಿಸಿದುವು! ಹಜ್ ಯಾತ್ರೆ ಮುಗಿಸಿ ಹಿಂತಿರುಗುವಾಗಲೂ ಅವರನ್ನೆದುರುಗೊಳ್ಳಲು ಮತ್ತೊಮ್ಮೆ ಕಾರುಗಳ ಮೆರವಣಿಗೆ ಸಾಗಿತು. ವಿಮಾನ ನಿಲ್ದಾಣಕ್ಕೆ ಹೋಗಲಾಗದವರು ಮನೆಗೇ ಬಂದು ಉಮ್ಮಾಲಿಯ ಯೋಗಕ್ಷೇಮ ವಿಚಾರಿಸಿದರು. ಬಂದವರಿಗೆಲ್ಲರಿಗೂ ಖರ್ಜೂರ ಮತ್ತು ಪವಿತ್ರ ನೀರಿನ ವಿತರಣೆಯಾಯಿತು. ಪವಿತ್ರ ಯಾತ್ರೆ ಮುಗಿಸಿ ಬಂದವರಿಗೆ ಮತ್ತೊಮ್ಮೆ ‘ದಾವತ್’ ನೀಡಲಾಯಿತು. 102 ಸುಳಿ ಮನೆಯಲ್ಲಿ ನಿತ್ಯೋತ್ಸವ. ಹಣದ ಹೊಳೆಯಲ್ಲ, ಸಮುದ್ರವೇ ಮನೆಯೊಳಗೆ ನುಗ್ಗಿತ್ತು. ಮಮ್ಮೂಟಿ ಈಗ ಮಮ್ಮೂಟಿ ಹಾಜಿಯವರಾಗಿ ಕೇವಲ ಹಾಜ್ಯಾರರಾದರು. ಉಮ್ಮಾಲಿ ಹಲೀಮಮ್ಮನವರಾಗಿ ಹಜ್ಜುಮ್ಮನವರಾದರು. * * * * * ಆಚುಮ್ಮನ ಮಗ ಕಾದರ್ ಈಗ ಹತ್ತಿಪ್ಪತ್ತು ವರ್ಷಗಳ ನವ ತರುಣ. ಮಮ್ಮೂಟಿ ಆತನಿಗೆ ಡ್ರೈವಿಂಗ್ ಕಲಿಸಿ ತನ್ನ ಬಳಿ ಡ್ರೈವರನಾಗಿ ಕೆಲಸ ಕೊಟ್ಟಿದ್ದನು. ಆದರೂ ಮನೆಯಲ್ಲಿರುವಾಗ ಮನೆಯ ಇತರ ಕೆಲಸಗಳನ್ನೂ ಮೊದಲಿನಂತೆಯೇ ಮಾಡುತ್ತಿದ್ದನು ಕಾದರ್. ಮಮ್ಮೂಟಿ ಒಮ್ಮೊಮ್ಮೆ ಆತನನ್ನು “ಏ... ಕಾದರೇ, ಎಲ್ಲಿ ಸತ್ತೇ?” ಎಂದು ಕರೆಯುವುದೂ ಇತ್ತು! ಹಾಜಿರಾ ಈಗ ಹದಿ ಹರೆಯದ ಹುಡುಗಿ; ರಾಜಕುವರಿ. ಇಚ್ಛೆ ಪಟ್ಟಿದ್ದು ಬಾಯಿಯಿಂದ ಹೊರ ಬೀಳುವ ಮೊದಲೇ ಕಾಲ ಬಳಿ ಬಂದು ಬೀಳುತ್ತಿತ್ತು. ಐಶ್ವರ್ಯದೊಂದಿಗೆ ವಿದ್ಯೆ ಮತ್ತು ಸಂಸ್ಕಾರದ ಅಭಾವವೂ ಮೈ ತಳೆದಿತ್ತು. ಬೆಳಗ್ಗೆ ಎದ್ದರೆ ಕನ್ನಡಿಯ ಮುಂದೆ ನಿಂತು ಅಲಂಕಾರ ಮಾಡಿಕೊಳ್ಳುವುದನ್ನು ಬಿಟ್ಟರೆ ಇನ್ನಾವ ಕೆಲಸವೂ ತಿಳಿಯದು. ತಂದೆ ಬೊಂಬಾಯಿಯಿಂದ ತಂದಿತ್ತ ಅಲಂಕಾರದ ವಸ್ತುಗಳನ್ನು ಹೇಗೆ ಉಪಯೋಗಿಸಬೇಕೆಂದು ತಿಳಿಯದೆ ಪಾಠ ಹೇಳಲು ಬಂದ ಉಪಾಧ್ಯಾಯಿನಿಯ ನೆರವು ಪಡೆಯುತ್ತಿದ್ದಳು. ಸದಾ ತುಟಿ ಬಣ್ಣ ಬಳಿಯುತ್ತಾ, ಹುಬ್ಬು ತೀಡುತ್ತಾ ಪೌಡರು ಬಳಿಯುತ್ತಾ ಕಾಲ ಕಳೆಯುತ್ತಿದ್ದಳು. ಕಿವಿಯ ಮೇಲ್ಭಾಗದ ತೂತಿನ ನೂಲು, ಸರಿಗೆ ಎಲ್ಲವನ್ನೂ ಎಂದೊ ಕಿತ್ತೆಸದಾಗಿತ್ತು. ಮಮ್ಮೂಟಿ ಮಗಳಿಗಾಗಿ ಕೆಲವು ಇಂಗ್ಲಿಷ್‌ಪತ್ರಿಕೆಗಳನ್ನು ತರಿಸುತ್ತಿದ್ದನು., ಅವುಗಳಲ್ಲಿರುವ ಅಲಂಕಾರದ ಜಾಹೀರಾತುಗಳಿಗಾಗಿ ಹಾಜಿರಾ ಅವುಗಳನ್ನು ಬಿಡಿಸುತ್ತಿದ್ದಳು. ಅವಳ ಕೆಲಸಕ್ಕಾಗಿಯೇ ಹುಡುಗಿಯೊಬ್ಬಳನ್ನು ನಿಯಮಿಸಲಾಗಿತ್ತು. ರುಖಿಯಾ ಒಮ್ಮೊಮ್ಮೆ ಮಗಳೊಡನನ್ನುವುದಿತ್ತು. “ಹೋಗು ಮೋಳೇ, ಒಂದು ರೊಟ್ಟಿ ಮಾಡುವುದನ್ನಾದರೂ ಕಲಿತುಕೊ” ಎಂದು. “ಹುಂ.... ಅವಳೇಕೆ ರೊಟ್ಟಿ ಮಾಡ್ಬೇಕು? ಅವಳು ಗಂಡನ ಮನೆಗೆ ಹೋಗುವಾಗ ಓರ್ವ ಕೆಲಸದ ಹೆಂಗಸನ್ನೂ ಅವಳೊಡನೆ ಕಳುಹಿಸಲು ನನ್ನ ಮಗನಿಗೆ ತಾಕತ್ತಿದೆ!” ಎಂದು ಉಮ್ಮಾಲಿ ಒಳಗಿನಿಂದ ಗಟ್ಟಿಯಾಗಿ ಹೇಳುತ್ತಿದ್ದಳು ``ಅಂತಹ ಗಂಡನಿಗೇ ಅವಳನ್ನು ಕೊಡ್ತೇವೆ!” ಭರತ 103 “ನಾನ್ಯಾರಿಗೂ ರೊಟ್ಟಿ ಮಾಡಿ ಕೊಡೋದಿಲ್ಲ.” ಎನ್ನುತ್ತಾ ಹಾಜಿರಾ ಉಯ್ಯಾಲೆಯಲ್ಲಿ ಕುಳಿತು ತೂಗುತ್ತಿದ್ದಾಗ ಮಮ್ಮೂಟಿ, “ಹಾಜಿರಾ...” ಎಂದು ಕೂಗುತ್ತಾ ಒಳಬಂದವನು “ಯಾರಿಗೆ ರೊಟ್ಟಿ?” ಎಂದು ಕೇಳಿದನು. “ಇವಳು ಗಂಡನ ಮನೆಗೆ ಹೋಗಿ ಇರುವುದು ಬೇಡವಾ? ಒಂದು ರೊಟ್ಟಿ ಮಾಡುವುದನ್ನಾದರೂ ಕಲಿತಕೊ ಎಂದೆ” ಎಂದಳು ರುಖಿಯಾ. “ಛೆ, ಛೆ, ನನ್ನ ಮಗಳೇನು ದಾಸಿ ಎಂದು ತಿಳಿದೆಯಾ? ಅವಳೊಡನೆ ಓರ್ವ ದಾಸಿಯನ್ನೂ ಕಳಿಸಿಕೊಡುವೆ. ಕುಡಿದ ನೀರು ಅಲುಗಾಡದಂತೆ ನೋಡಿಕೊಳ್ಳುವ ಗಂಡನಿಗೆ ಅವಳನ್ನು ಮದುವೆ ಮಾಡಿ ಕೊಡುವೆ. ಅವಳ ವಿಷಯದಲ್ಲಿ ನೀವ್ಯಾರೂ ತಲೆ ಕೆಡಿಸಿಕೊಳ್ಳಬೇಡಿ” ಎಂದನು. ಉಮ್ಮಾಲಿ ಕುಳಿತಲ್ಲೇ ಮೊಮ್ಮಗಳ ಮದುವೆಯ ಚಿತ್ರವನ್ನು ಕಲ್ಪಿಸಿಕೊಳ್ಳತೊಡಗಿದಳು. ಹಾಜಿರಾಳನ್ನು ಮದುವೆಯಾಗುವವನು ಲಕ್ಷಾಧಿಪತಿಯಾಗಿರಬೇಕು. ಲಕ್ಷವೆಂಬುದು ತನ್ನ ಕಲ್ಪನೆಗೂ ಮೀರಿದಾಗ ಮೊಮ್ಮಗಳೊಡನೆ, “ಹಾಜಿರಾ, ಒಂದು ಲಕ್ಷವೆಂದರೆ ಎಷ್ಟು ಸಾವಿರ ಮಗೂ?” ಎಂದು ಕೇಳಿದಳು ಆಕೆ, “ನೂರು ಸಾವಿರ” ಎಂದಾಗ ತನ್ನ ಕಲ್ಪನೆ ಮುಂದುವರೆಸಿದಳು. ಮದುಮಗನು ಹಾಜಿರಾಳ ನಿಕಾಗೆ ಬರುವಾಗ ನೂರು ಸೀರೆಗಳನ್ನಾದರೂ ತರಬೇಕು! ತನ್ನ ಹತ್ತಿರದ, ದೂರದ ಸಂಬಂಧಿಕರೆಲ್ಲರಿಗೂ ಒಂದೊಂದು ಸೀರೆ ಕೊಡಬೇಕು. ಮನೆಯಲ್ಲಿ ಮದುವೆಯ ಕೆಲಸಕ್ಕೆಂದೇ ಹತ್ತು ಜನ ಹೆಂಗಸರನ್ನಾದರೂ ನಿಯಮಿಸಿಕೊಳ್ಳಬೇಕು. ಎಲ್ಲರಿಗೂ ಸೀರೆ, ಸೋಪು, ಸೆಂಟು, ಸುಗಂಧದೆಣ್ಣೆಯ ಬಾಟ್ಲಿಯಲ್ಲದೆ ನೂರಿನ್ನೂರು ರೂಪಾಯಿಗಳನ್ನೂ ಕೊಡಿಸಬೇಕು. ಮುಖ್ಯ ಅಡಿಗೆಯವಳಿಗೆ ಒಂದು ಸಾವಿರ ರೂಪಾಯಿಗಳನ್ನಾದರೂ ಕೊಡಿಸಬೇಕು..... ಹೊಂಗನಸಿನ ಲೋಕದಲ್ಲಿ ಬಹಳ ಹೊತ್ತು ತೇಲಾಡಿದಳು ಉಮ್ಮಾಲಿ. * * * * * ಮಮ್ಮೂಟಿ ಮನೆಯ ಪಕ್ಕದ ಇನ್ನೊಂದು ಎಕ್ರೆ ಸ್ಥಳವನ್ನೂ ಖರೀದಿಸಿ ಅಲ್ಲೊಂದು ದೊಡ್ಡ ಬಂಗಲೆ ಕಟ್ಟಿಸತೊಡಗಿದನು. ರುಖಿಯಾ ಗಂಡನೊಂದಿಗೆ, “ಈಗ ಯಾಕೆ ನಮಗೆ ಇನ್ನೊಂದು ಮನೆ? ಇದೇ ಮನೆ ಸಾಕಷ್ಟು ದೊಡ್ಡದಾಗಿದೆಯಲ್ಲ?” ಎಂದಾಗ ಮಮ್ಮೂಟಿ, “ಮನೆಗೆ ದೊಡ್ಡ ದೊಡ್ಡ ಅತಿಥಿಗಳೆಲ್ಲ ಬರುವಾಗ ಅವರಿಗೆ ಊಟ ಹಾಕಲು ಇಲ್ಲೊಂದು ಸಮನಾದ ಊಟದ 104 ಸುಳಿ ಕೋಣೆಯಾದರೂ ಇದೆಯೇ? ಹಾಜಿರಾಳ ಮದುಮಗನಿಗೆ ಸಮನಾದ ಒಂದು ಕೋಣೆಯಾದರೂ ಮನೆಯಲ್ಲಿರಬೇಡವಾ? ನಿನಗವೆಲ್ಲ ತಿಳಿಯದು. ನೀನು ಸುಮ್ಮನಿರು” ಎಂದನು. ಆತನ ಸ್ನೇಹಿತರು ಯಾರಾದರೂ ಬಂದರೆ ಈ ಕಟ್ಟಡದ ಕೆಲಸ ನಡೆಯುವಲ್ಲಿಗೆ ಅವರನ್ನು ಕರೆದೊಯ್ದು ಮನೆಯ ನಕ್ಷೆಯನ್ನು ತೋರಿಸುತ್ತಿದ್ದನು. ಮಹಡಿಯ ಮೇಲಿನ ದೊಡ್ಡ ಹಾಲನ್ನು ತೋರಿಸುತ್ತಾ, “ನೋಡಿ ಕಾಕಾ, ಇಂತಹದೊಂದು ಹಾಲು ಮನೆಯಲ್ಲಿಲ್ಲದೆ ಬಹಳ ತೊಂದರೆಯಾಗಿತ್ತು. ನಮ್ಮೂರಿನ ಮಂತ್ರಿಗಳನ್ನು ಒಮ್ಮೆ ಊಟಕ್ಕೆ ಕರೆಯುವಾ ಎಂದರೆ ಮನೆಯಲ್ಲಿ ಸಮನಾದ ಒಂದು ಹಾಲು. ಅದಕ್ಕೆ ತಕ್ಕ ಕುರ್ಚಿ ಮೇಜುಗಳೆಲ್ಲ ಬೇಡವಾ? ಹಾಜಿರಾಳ ಮದುವೆಗೆ ಕಸ್ಟಮ್ಸ್ ಇಲಾಖೆಯ ದೊಡ್ಡ ಅಧಿಕಾರಿಗಳನ್ನು ಬೊಂಬಾಯಿಯಿಂದ ಕರೆಸಬೇಕೆಂದಿದ್ದೇನೆ. ಅವರೆಲ್ಲ ಮನೆಯಲ್ಲೇ ತಂಗುವಂತಹ ಕೆಲವು ರೂಮುಗಳೂ ಮನೆಯಲ್ಲಿರಬೇಕು. ಅಲ್ಲವಾ? ಏನು ಹೇಳ್ತೀರಿ?” ಎನ್ನುತ್ತಿದ್ದನು. “ಖಂಡಿತ. ಹಾಜಾರರ ಮನೆ ಎಂದ ಮೇಲೆ ಅವೆಲ್ಲ ಇರಬೆಕಾದದ್ದೇ ಅಲ್ಲವಾ?” ಹಲ್ಲು ಕಿರಿಯುತ್ತಾ ನುಡಿಯುತ್ತಿದ್ದ ಅವರು “ತುಂಬ ಚೆನ್ನಾಗಿದೆ, ತುಂಬ ಚೆನ್ನಾಗಿದೆ” ಎಂದು ಮೆಚ್ಚಿಕೊಳ್ಳುತ್ತಾ ಮನೆಯ ಅಂದಾಜು ವೆಚ್ಚ ಎಷ್ಟಾಗಬಹುದೆಂಬುದನ್ನು ಮನದೊಳಗೆ ಲೆಕ್ಕ ಹಾಕುತ್ತಿದ್ದರು. ಆ ಮನೆಗೆ ಸ್ವಲ್ಪ ದೂರದಲ್ಲಿ ಬೆಸ್ತರ ವಾಸುವಿನ ಬಂಗಲೆ ಸಿದ್ಧವಾಗಿ ಗೃಹ ಪ್ರವೇಶವೂ ನೆರವೇರಿತ್ತು. ವಾಸುವಿನ ಗೃಹ ಪ್ರವೇಶಕ್ಕೆ ಸ್ಥಳೀಯ ಲೋಕ ಸಭಾ ಸದಸ್ಯರೂ, ವಿಧಾನ ಸಭಾ ಸದಸ್ಯರೂ ಆಗಮಿಸಿದ್ದರು. ಮಮ್ಮೂಟಿ ಹಾಜ್ಯಾರರು ಅತಿಥೇಯರಾಗಿದ್ದು ಬಂದವರನ್ನು ಸ್ವಾಗತಿಸುತ್ತಿದ್ದರು. ಆತನ ಡ್ರೈವರ್ ಶಕ್ಕೂರ್, ಉಮ್ಮರ್, ಹಮೀದ್, ಕೃಷ್ಣ, ಅಪ್ಪುಕುಟ್ಟ, ಮಾಧವ ಮುಂತಾದವರೆಲ್ಲರೂ ಸಡಗರದಿಂದ ಓಡಾಡುತ್ತಾ ಸಮಾರಂಭದಲ್ಲಿ ಭಾಗಿಗಳಾಗಿದ್ದರು. ವಾಸುವನ್ನು ಎಲ್ಲರೂ ವಾಸಣ್ಣನೆಂದೇ ಕರೆಯುತ್ತಿದ್ದರು. ಊರಿನಲ್ಲೀಗ ಒಂದೆರಡು ಮುಖ್ಯ ಬದಲಾವಣೆಗಳಾಗಿದ್ದುವು. ಸಾಯಂಕಾಲದ ಬಳಿಕ ಯಾರೂ ಈಗ ವಾಯು ವಿಹಾರಕ್ಕೆಂದು ಸಮುದ್ರ ತೀರಕ್ಕೆ ಹೋಗುತ್ತಿರಲಿಲ್ಲ. ಅದಕ್ಕೆ ಕಾರಣವೂ ಇಲ್ಲದಿರಲಿಲ್ಲ. ಒಂದು ದಿನ ಎಂದಿನಂತೆ ಊರಿನ ಕೆಲವು ಪಡ್ಡೆ ಹುಡುಗರು ಸಮುದ್ರ ತೀರದಲ್ಲಿ ಕುಳಿತು ಹರಟುತ್ತಿದ್ದಾಗ ದೂರ ಸಾಗರದಲ್ಲಿ ಮೋಟಾರ ಬೋಟೊಂದು ಭರತ 105 ಅವರ ಗಮನ ಸೆಳೆಯಿತು. ಕಪ್ಪು ಚುಕ್ಕೆಯಂತೆ ಕಾಣುತ್ತಾ ಮರೆಯಾಗಿ ಕೊಂಚ ಹೊತ್ತಿನಲ್ಲಿ ಪುನಃ ಕಾಣಿಸಿಕೊಳ್ಳುತ್ತಿತ್ತು. ಹುಡುಗರು ಗಮನವಿಟ್ಟು ಅದನ್ನೇ ನೋಡತೊಡಗಿದರು. ಅಷ್ಟರಲ್ಲಿ ವಾಸು ಮತ್ತು ಮಮ್ಮೂಟಿಯ ಕೆಲವು ಡ್ರೈವರುಗಳು ಅಲ್ಲಿಗೆ ಬಂದರು. ವಾಸು ಹುಡುಗರೊಡನೆ, “ನೀವೆಲ್ಲ ಮನೆಗೆ ಹೋಗಿ” ಎಂದನು. ಆಗ ಅವರಲ್ಲಿ ಕೊಂಚ ಒರಟನಂತೆ ಕಾಣುತ್ತಿದ್ದವನೊಬ್ಬನು,. “ನಾವು ಸಮುದ್ರ ತೀರದಲ್ಲಿ ಕುಳಿತುಕೊಂಡರೆ ನಿಮಗೇನು?” ಎಂದು ಕೇಳಿದನು. “ಒಳ್ಳೆ ಮಾತಿನಲ್ಲಿ ಇಲ್ಲಿಂದ ಹೊರಟು ಹೋಗಿ” ಅಧಿಕಾರಯುಕ್ತ ವಾಣಿಯಿಂದ ನುಡಿದನು ವಾಸು. “ಇದು ಸರಕಾರದ ಜಾಗ. ಇಲ್ಲಿ ಕುಳಿತುಕೊಳ್ಳಲು ನಿಮ್ಮ ಅಪ್ಪಣೆಯೇನೂ ಬೇಕಾಗಿಲ್ಲ” ಧೈರ್ಯ ಪ್ರದರ್ಶಿಸಿದನು ಮತ್ತೊಬ್ಬ “ಓ... ಹಾಗೇನು?” ವ್ಯಂಗ್ಯವಾಗಿ ಕೇಳಿದನು ವಾಸು “ನೀವು ಹೋಗು ಎಂದೊಡನೆ ಹೋಗಲು ನಿಮ್ಮ ಆಳೂಂತ ತಿಳಿದುಕೊಂಡಿರಾ?” ಬಿಸಿ ರಕ್ತದ ತರುಣ ಧ್ವನಿ ಎತ್ತರಿಸಿ ನುಡಿದ. ವಾಸು ಡ್ರೈವರುಗಳ ಕಡೆಗೆ ತಿರುಗಿ, “ಏನು ನೋಡುತ್ತಿದ್ದೀರಿ? ನಾಲ್ಕು ಬಿಗಿಯಿರಿ!” ಎಂದದ್ದೇ ತಡ; ಅವರೆಲ್ಲರೂ ಹುಡುಗರ ಮೈ ಮೇಲೆ ಮುಗಿಬಿದ್ದರು. ಮೈಗೆ ಗುದ್ದು ಬೀಳುತ್ತಲೇ, “ಬೇಡೀಪ್ಪಾ, ಹೊಡೀಬೇಡಿ. ನಾವು ಹೋಗ್ತೇವೆ” ಎನ್ನುತ್ತಾ ಹುಡುಗರು ದಿಕ್ಕಾಪಾಲಾಗಿ ಓಡಿದರು. ಒಬ್ಬನ ಮೂಗಿನಿಂದ ಆಗಲೇ ರಕ್ತ ಸುರಿಯತೊಡಗಿತ್ತು. ಇನ್ನೊಬ್ಬನ ಕಿಬ್ಬೊಟ್ಟೆಗೆ ಬಿದ್ದ ಒದೆಯಿಂದ ಆತ ಹೊಟ್ಟೆ ಹಿಡಿದುಕೊಂಡು ಬಗ್ಗಿಕೊಂಡೇ ಓಡಿದನು. ಅವರು ಓಡುತ್ತಿದ್ದಂತೆ ವಾಸು, “ಇನ್ನು ಮುಂದೆ ಸಂಜೆ ಐದು ಗಂಟೆಯ ಬಳಿಕ ಯಾರನ್ನಾದರೂ ಇಲ್ಲಿ ಕಂಡರೆ ಎಲ್ಲರಿಗೂ ಇದೇ ಗತಿಯಾದೀತು. ಎಲ್ಲರೂ ನೆನಪಿಟ್ಟುಕೊಳ್ಳಿ” ಎಂದು ಜೋರಾಗಿ ಕೂಗಿ ಹೇಳಿದನು. ಮರುದಿನ ಊರಲ್ಲೆಲ್ಲ ಗುಸುಗುಸು ಸುದ್ದಿ ಹರಡಿತು. “ಸಮುದ್ರ ತೀರದಲ್ಲಿ ಯಾವುದೊ ಒಂದು ಭೂತವಿದೆಯಂತೆ. ಸಾಯಂಕಾಲದ ಬಳಿಕ ಅಲ್ಲಿಗೆ ಹೋದವರನ್ನು ಅದು ಮೆಟ್ಟಿಕೊಳ್ಳುತ್ತದೆಯಂತೆ! ಕೆಲವೊಮ್ಮೆ ಪ್ರಾಣವನ್ನೇ ಹೀರಿ ಬಿಡುತ್ತದಂತೆ!” ಎಂದು. ಆದರೂ ರಾತ್ರಿಗಳಲ್ಲಿ ಆ ಹಾದಿಯಲ್ಲಿ ಹಲವಾರು ಕಾರುಗಳು 106 ಸುಳಿ ಓಡಾಡುತ್ತಿರುವುದನ್ನು ಕಂಡವರಿದ್ದಾರೆ. ವಾಸುವಿನ ಹೆಂಡತಿ ಕಲ್ಯಾಣಿ ಈಗ ಕಲ್ಯಾಣಿಯಮ್ಮನವರು. ಅವನ ನಾಲ್ಕು ಮಕ್ಕಳೂ ದೂರದ ಊರಿನ ಹಾಸ್ಟೆಲಿನಲ್ಲಿ ಇದ್ದು ಅಲ್ಲಿನ ಶಾಲೆಯೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಕಲ್ಯಾಣಿಯಮ್ಮ ಈಗ ಊರಿನ ಮಹಿಳೆಯರೆಲ್ಲರಿಗೂ ಪರಿಚಿತಳಾಗಿದ್ದಳು. ಊರಿನ ಮಹಿಳಾ ಮಂಡಲ, ಜಾತಿ ಸಂಘ, ಶಾಲಾ ವಾರ್ಷಿಕೋತ್ಸವ ಮುಂತಾದುವುಗಳಿಗೆಲ್ಲ ಈಗ ಆಕೆಯೇ ಅಧ್ಯಕ್ಷೆ ಅಥವಾ ಮುಖ್ಯ ಅತಿಥಿ. ಮದುವೆ ಸಮಾರಂಭಗಳಿಗೆ ಕಲ್ಯಾಣಿಯಮ್ಮ ಬಂದರೇನೇ ಆ ಮದುವೆಗೊಂದು ಶೋಭೆ. ಮದುವೆ ಮನೆಯಲ್ಲಿ ಆಕೆಯನ್ನು ಕಾಣದಿದ್ದರೆ ಹೆಂಗಸರು ಪರಸ್ಪರ ವಿಚಾರಿಸಿಕೊಳ್ಳುತ್ತಿದ್ದರು, “ನಮ್ಮ ಕಲ್ಯಾಣಿಯಮ್ಮ ಬರಲಿಲ್ಲವಾ?” ಎಂದು ಮತ್ತೂ ಮಾತು ಮುಂದುವರಿಯುತ್ತಿತ್ತು. “ನಾನು ಕೂಡಾ ಬರಬೇಕೂಂತ ಅಂದುಕೊಂಡಿರಲಿಲ್ಲ. ಯಾಕೊ, ಇವರು ತುಂಬಾ ಒತ್ತಾಯ ಮಾಡಿ ಕರೆದರೂಂತ ಬಂದೆ!” ಎಂದು. ಮಮ್ಮೂಟಿ ಹಾಜ್ಯಾರರ ಹೆಂಡತಿ ರುಖಿಯಾ ಕೂಡಾ ಈಗ ರುಖಿಯಕ್ಕನವರು. ಅವಳಿಗೆ ಮಹಿಳಾ ಮಂಡಲ, ಜಾತಿ ಸಂಘ ಮುಂತಾದವುಗಳ ಅಧ್ಯಕ್ಷಳಾಗುವ ಅವಕಾಶವಿಲ್ಲದೆ ಹೋದರೂ ಊರಿನ ಶ್ರೀಮಂತರ ಮನೆಯ ಶುಭಕಾರ್ಯಗಳಲ್ಲಿ ಆಕೆಯ ಉಪಸ್ಥಿತಿ ಅತ್ಯವಶ್ಯಕವಾಗಿತ್ತು. ಮಮ್ಮೂಟಿ ಹಾಜ್ಯಾರರ ದೊಡ್ಡ ಕಾರು ಬಂದು ನಿಂತೊಡನೆ ಅಲ್ಲಿದ್ದ ಗಂಡಸರು ಗೌರವ ಭಾವದಿಂದ ದೂರ ಸರಿದು ವಿನೀತರಾಗಿ ನಿಲ್ಲುತ್ತಿದ್ದರು. ರುಖಿಯಾ ಈಗ ಎಲ್ಲಿಗೂ ಒಬ್ಬಳೇ ಹೋಗುವ ಪದ್ಧತಿಯಿಲ್ಲ. ಹಿಂದಿನ ಕಾಲದ ದೊಡ್ಡ ಮನೆತನದ ಹೆಂಗಸರಂತೆ ದಾಸಿಯೊಬ್ಬಳನ್ನು ಜೊತೆಗೆ ಕರೆದೊಯ್ಯುವುದು ವಾಡಿಕೆಯಾಗಿತ್ತು. ಬುರುಕಾ ಹಾಕಿದ ರುಕಿಯಾ ತನ್ನ ದಾಸಿಯೊಡನೆ ಕಾರಿನಿಂದಿಳಿದು ಗಂಭೀರವಾಗಿ ಮನೆಯೊಳಗಡಿ ಇಡುತ್ತಿದ್ದಳು. ಒಡನೆಯೇ ಮನೆಯ ಯಜಮಾನ ತನ್ನ ಪತ್ನಿಯನ್ನು ಕರೆದು, “ಹಾಜ್ಯಾರರ ಹೆಂಡತಿ ಬಂದಿದ್ದಾರೆ. ಸಮನಾಗಿ ವಿಚಾರಿಸಿಕೊ” ಎನ್ನುತ್ತಿದ್ದನು. ಮನೆಯ ಯಜಮಾನಿ ತಾನೇ ಬಂದು ರುಖಿಯಾಳ ಬುರುಖಾ ತೆಗೆಸಿ ಅದನ್ನು ಜೋಪಾನ ಮಾಡಿ ರುಖಿಯಾಳನ್ನು ಮಾಳಿಗೆಗೆ ಕರೆದೊಯ್ದು ಅಲ್ಲಿಗೇ ಊಟ, ತಿಂಡಿ ಸರಬರಾಜು ಮಾಡುತ್ತಿದ್ದಳು. “ಹಾಜಾರರ ಹೆಂಡತಿ ಬಂದಿದ್ದಾರಂತೆ” ಎನ್ನುತ್ತಾ ಇತರ ಹೆಂಗಸರೂ ಬಂದು ನಿಂತು ರುಖಿಯಾಳನ್ನೂ, ಆಕೆ ಧರಿಸಿದ ಆಭರಣಗಳನ್ನೂ, ಬೆಲೆ ಬಾಳುವ ಸೀರೆಯನ್ನೂ ನೊಡಿ ಕಣ್ಮನಗಳನ್ನು ಭರತ 107 ತಣಿಸಿಕೊಂಡು ತಮ್ಮ ಹೊಟ್ಟೆಯುರಿಸಿಕೊಂಡು ಹೋಗುತ್ತಿದ್ದರು. ರುಖಿಯಾ ತೊಡುತ್ತಿದ್ದಂತಹ ಬುರುಕಾವನ್ನು ಈಗ ಹಲವಾರು ಮನೆಯ ಹೆಂಗಸರು ತೊಡುತ್ತಿದ್ದರು. ಇನ್ನೊಂದು ಸ್ವಾರಸ್ಯಕರ ಘಟನೆಯೂ ನಡೆಯುತ್ತಿತ್ತು. ಆ ಮನೆಯಲ್ಲಿ ಮದುವೆಯ ವಯಸ್ಸಿಗೆ ಬಂದ ಹುಡುಗನಿದ್ದರೆ ಆತನು ಹಲವಾರು ಬಾರಿ ರುಖಿಯಾ ಮತ್ತು ಮಮ್ಮೂಟಿಯ ಕಣ್ಮುಂದೆ ಸುಳಿದಾಡುತ್ತಿದ್ದನು! ಆತನ ತಂದೆ ತಾಯಿಗಳೂ ಆತನನ್ನು ಪ್ರೋತ್ಸಾಹಿಸುತ್ತಿದ್ದರು! ಮಮ್ಮೂಟಿಗೆ ಇನ್ನೂ ಹೆಚ್ಚಿನ ಸ್ವಾಗತ ದೊರೆಯುತ್ತಿತ್ತು. ಆತ ಚಪ್ಪರವನ್ನು ಪ್ರವೇಶಿಸಿದೊಡನೆ ಅಲ್ಲಿದ್ದವೆಲ್ಲರೂ ಎದ್ದು ನಿಲ್ಲುತ್ತಿದ್ದರು. ಸ್ವಲ್ಪ ಪರಿಚಯವಿದ್ದವರು ಆತನ ಬಳಿ ಬಂದು ತುಂಬಾ ಆತ್ಮೀಯರಂತೆ ವರ್ತಿಸುತ್ತಿದ್ದರು. ಬಳಿಕ ಇತರರೊಡನೆ, “ಹಾಜ್ಯಾರರಿಗೆ ನಾನೆಂದರೆ ತುಂಬಾ ವಿಶ್ವಾಸ” ಎಂದು ಪ್ರತಿಷೆ್ಠ ಮೆರೆಯುತ್ತಿದ್ದರು. ಮಮ್ಮೂಟಿಯ ವೈಯಕ್ತಿಕ ಪರಿಚಯವಿಲ್ಲದವರು ಏನೊ ತಪ್ಪು ಮಾಡಿದವರಂತೆ ಒಂದು ರೀತಿಯ ಕೀಳರಿಮೆಯಿಂದ ಸಪ್ಪೆ ಮುಖ ಮಾಡಿಕೊಂಡು ದೂರ ನಿಲ್ಲುತ್ತಿದ್ದರು. ಕೆಲವರು ಮಾತ್ರ ಕಾಸು ಕೊಡದೆ ನೋಡಲು ದೊರೆಯುವ ಈ ನಾಟಕವನ್ನು ನೋಡಿ ಮನಸಾರ ರಂಜನೆ ಪಡೆಯುತ್ತಿದ್ದರು. ಮಮ್ಮೂಟಿ ಹಾಜ್ಯಾರರ ಬಳಿ ನೌಕರಿ ಕೇಳಿಕೊಂಡು ಬರುವವರಿಗೂ ಕೊರತೆ ಇರಲಿಲ್ಲ. ಕಾರು ಚಾಲಕನ ಕೆಲಸ ಕಲಿತ ಯುವಕರಿಗೆ ಆದ್ಯತೆ. ಕೆಲಸ ದೊರೆತ ಕೆಲಸಮಯದೊಳಗೆ ಆತನ ಉಪಯೋಗಕ್ಕೆ ಕಾರೂ ದೊರೆಯುತ್ತಿತ್ತು. ಕೆಲಸವೂ ಬಹಳ ಸುಲಭ. ಮಮ್ಮೂಟಿ ಹೇಳಿದೆಡೆಗೆ ಕಾರು ಕೊಂಡು ಹೋದರಾಯಿತು. ಇಡೀ ದೇಶದ ಎಲ್ಲ ಭಾಗಗಳಿಗೂ ಹೋಗಬೇಕಾಗುತ್ತಿತ್ತು. ಹಿಂತಿರುಗಿ ಬರಲು ಎಷ್ಟು ದಿನಗಳಾದೀತೆಂದು ಹೇಳುವ ಪದ್ಧತಿ ಇಲ್ಲ. ಹಾಗೆ ಹೋಗಿ ಬಂದೊಡನೆ ಕೈ ತುಂಬಾ ಹಣವೂ ದೊರೆಯುತ್ತಿತ್ತು. ಮತ್ತೊಮ್ಮೆ ಕರೆ ಬರುವವರೆಗೆ ಆತನು ಸ್ವತಂತ್ರವಾಗಿ ಹಾಯಾಗಿ ತಿಂದು ತೇಗಿ ಪೇಟೆಯ ಬೀದಿಗಳಲ್ಲಿ ಕಾರಿನಲ್ಲಿ ತಿರುಗುತ್ತಿದ್ದನು. ಮೊನ್ನೆ ಮೊನ್ನೆ ಭಿಕಾರಿಯಾಗಿದ್ದವರೂ ಇಂದು ಬಂಗಲೆ, ಕಾರುಗಳ ಒಡೆಯರಾಗುತ್ತಿದ್ದರು. ಇದರ ಪರಿಣಾಮವೆಂದರೆ ಊರಿನಲ್ಲಿ ಎಲ್ಲ ಸಾಮಾನುಗಳೂ ಬಹಳ ತುಟ್ಟಿಯಾದವು. ಕೆಲವೊಮ್ಮೆ ಮಕ್ಕಳ ಹಾಲಿನ ಹುಡಿ, ಬೇಳೆ, ಎಣ್ಣೆ, ವನಸ್ಪತಿ ಮುಂತಾದುವುಗಳು ಮಾರುಕಟ್ಟೆಯಿಂದಲೇ ಮಾಯವಾಗುತ್ತಿದ್ದವು. ಹಣ್ಣುಗಳು ಜನ ಸಾಮಾನ್ಯರ ಪಾಲಿಗೆ ಗಗನ ಕುಸುಮವೇ. ಹಾಲು, ಮಾಂಸ, ಮೊಟ್ಟೆಗಳಿಗೂ 108 ಸುಳಿ ಅಭಾವ, ಮೊದಲೆಲ್ಲ ಕಾಣೆ, ಮೊಡವು, ಮಾಂಜಿ ಮುಂತಾದ ರುಚಿಕರವಾದ ಮೀನುಗಳನ್ನೇ ತಿನ್ನುತ್ತಿದ್ದವರು ಈಗ ಬಂಗುಡೆ ಮತ್ತು ಭೂತಾಯಿಗಳಲ್ಲೇ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಜೊಹರಾ ಕೂಡಾ ಈಗ ಒಮ್ಮೊಮ್ಮೆ ತನ್ನ ಮಕ್ಕಳೊಡನೆ ಹೇಳುವುದುಂಟು. “ನೀವೆಲ್ಲ ಎಂತ ಕರ್ಮಕ್ಕೆ ಹುಟ್ಟಿದ್ದು? ನೋಡು ಆ ಮಮ್ಮೂಟಿ. ಗಂಡಸರೆಂದರೆ ಹಾಗಿರಬೇಕು! ನೀವೆಲ್ಲ ಸರಕಾರಿ ಕೆಲಸಾಂತ ಹೋಗಿ ಈಗ ಉಟ್ಟರೆ ಉಣ್ಣುವುದಕ್ಕಿಲ್ಲ. ಉಂಡರೆ ಉಡುವುದಕ್ಕಿಲ್ಲ ಎಂಬಂತಾಗಿದೆ. ಎಂತಹ ಕಾಲ ಬಂತು? ಕಾಣೆ ಮೀನನ್ನು ಕಣ್ಣಿಂದ ನೋಡುವುದಕ್ಕೂ ಆಸೆಯಾಗಿ ಬಿಟ್ಟಿತು” ಎಂದು. ಆಗ ಆಕೆಯ ಚಿಕ್ಕ ಮಗ ಆಗ ತಾನೇ ಇಂಜಿನಿಯರನಾದ ನಿಯಾಜ್ “ಉಮ್ಮಾ, ಅವರೆಲ್ಲ ಎಂತಹ ಕೆಲಸ ಮಾಡುತ್ತಾರೇಂತ ನಿಮಗೆ ಗೊತ್ತುಂಟಾ? ಅದೆಲ್ಲ ನಮ್ಮಂತಹವರಿಗೆ ಹೇಳಿಸಿದ ಕೆಲಸವಲ್ಲ” ಎನ್ನುತ್ತಾನೆ. “ಯಾಕೆ? ಅವನ ಕೆಲಸ ಏನಾಗಿದೆ? ಹಣವನ್ನು ಎರಡು ಕೈಗಳಲ್ಲೂ ಬಾಚುತ್ತಾನಂತೆ. ಹಣವಿಲ್ಲದವರನ್ನು ಯಾರಾದರೂ ಕಣ್ಣೆತ್ತಿಯಾದರೂ ನೋಡ್ತಾರಾ? ನಿನ್ನಪ್ಪ ಹೋಗುವಾಗ ಎಲ್ಲವನ್ನೂ ನಾಶ ಮಾಡಿಯೇ ಹೋದರು. ನಿನ್ನನ್ನು ಡಾಕ್ಟರ್ ಮಾಡಬೇಕೆಂದು ನನಗೆ ತುಂಬಾ ಆಸೆ ಇತ್ತು. ಅದೂ ಆಗಲಿಲ್ಲವಲ್ಲ ನನ್ನಿಂದ?” “ಒಬ್ಬ ಮನುಷ್ಯನಿಗೆ ಮರ್ಯಾದೆಯಿಂದ ಬದುಕಲು ಎಷ್ಟು ಹಣ ಬೇಕು?” ನಿಯಾಜ್ ಸವಾಲೆಸೆಯುತ್ತಾನೆ. “ಮರ್ಯಾದೆಯಿಂದ ಬದುಕುವುದೆಂದರೆ? ನಾನು ಚಿಕ್ಕಂದಿನಲ್ಲಿ ಹೇಗೆ ಬದುಕಿದ್ದೆನೆಂಬುದನ್ನು ನೀನು ನೋಡಿಲ್ಲವಲ್ಲ. ನನ್ನ ಮಟ್ಟಿಗೆ ಮರ್ಯಾದೆಯ ಬದುಕೆಂದರೆ ಅದೇ.'' ಬೇಸರದಿಂದ ನುಡಿಯುತ್ತಾಳೆ ಜೊಹರಾ. “ಮಮ್ಮೂಟಿ ನನ್ನನ್ನು ಮರೆತೇ ಬಿಟ್ಟನಲ್ಲ?” ಎಂಬ ನೋವೂ ಆಕೆಯನ್ನು ಕಾಡುತ್ತದೆ. ಒಡನೆಯೇ ಹೇಗೆ ನೆನಪಿದ್ದೀತು? ನಾವೆಲ್ಲ ಅವನಿಗೆ ಕಡಿಮೆ ಕಷ್ಟ ಕೊಟ್ಟೆವೇ?” ಎನ್ನುತ್ತಾ ಆತ ಊರು ಬಿಟ್ಟು ಹೋದ ಘಟನೆಯನ್ನು ನೆನಪಿಸಿಕೊಳ್ಳುತ್ತಾಳೆ. * * * * * ರುಖಿಯಾ ಈಗ ಇನ್ನೊಂದು ಗಂಡು ಮಗುವಿನ ತಾಯಿ. ಚಿಕ್ಕ ಮಗು ತಾಹಿರಾಗೆ ಎರಡೂವರೆ ವರ್ಷ. ಗಂಡು ಮಗು ಸಫರುಲ್ಲಾ. ಭರತ 109 ಹೊಸ ಬಂಗಲೆಯ ಕೆಲಸ ಮುಗಿಯುತ್ತಾ ಬಂದಿತ್ತು. ಈ ಬಂಗಲೆಯನ್ನು ನೋಡಲು ಪರ ಊರಿನಿಂದಲೂ ಜನರು ಬರುತ್ತಿದ್ದರು. ರುಖಿಯಾ ಹೊಸ ಬಂಗಲೆಯನ್ನು ಮಗಳ ಮದುವೆಗೆ ಯಾವ ರೀತಿ ಶೃಂಗರಿಸಬೇಕೆಂದು ಕನಸು ಕಾಣುತ್ತಿದ್ದಳು. “ಮಲಗುವ ಕೋಣೆಯಳಗೆ ಬಚ್ಚಲು ಕೋಣೆ ಯಾಕೆ?” ಎಂದು ಮೊದಲೆಲ್ಲ ಪ್ರಶ್ನಿಸುತ್ತಿದ್ದವಳು ಈಗೀಗ ಬಾತ್ ರೂಮಿನ ಅಂದ ಚೆಂದಕ್ಕೆ ಮಾರು ಹೋಗಿದ್ದಳು. “ಆ ದೋಣಿಯಂತಹುದು ಯಾಕೆ?” ಎಂದು ಉಮ್ಮಾಲಿ ಕೇಳಿದಾಗ ಹಾಜಿರಾ “ಅದು ಬಾತ್ ಟಬ್ಬು ಅಜ್ಜೀ. ಅದರಲ್ಲಿ ಮಲಗಿಕೊಂಡು ಸ್ನಾನ ಮಾಡಬಹುದು” ಎಂದಳು. “ಅವೆಲ್ಲ ಯಾಕಮ್ಮಾ? ಮಲಗಿಕೊಂಡು ಸ್ನಾನ ಮಾಡುವುದಕ್ಕೆ ನಮಗೆಲ್ಲ ವಾತರೋಗ ಬಂದಿದೆಯೇ?” ಎಂದು ಉಮ್ಮಾಲಿ ನುಡಿದಾಗ, “ಎಲ್ಲದರಲ್ಲೂ ಮುದುಕಿಗೊಂದು ಕೊಂಕು ಇದ್ದೇ ಇದೆ” ಎಂದು ರುಖಿಯಾ ತನ್ನಷ್ಟಕ್ಕೆ ಗೊಣಗಿಕೊಂಡಳು. ಉಮ್ಮಾಲಿ ತನ್ನ ಭೇಟಿಗೆ ಬಂದವರೊಡನೆ, “ಇದು ತುಂಬಾ ಹಳೆಯ ಮನೆಯಲ್ಲವಾ? ಹಾಜಿರಾಳ ಮದುವೆಯನ್ನು ಈ ಮನೆಯಲ್ಲಿ ಮಾಡುವುದು ಹೇಗೆ? ಮದುಮಗನಿಗೆ ಸಮನಾದ ಕೋಣೆ ಬೇಡವಾ? ಕೋಣೆಯೊಳಗೆಲ್ಲ ತಂಪಾಗುವ ಇಂಜಿನ್ ಕೂಡಾ ಇಡಬೇಕಂತಿದ್ದಾನೆ ನನ್ನ ಮಗ. ಈಗಿನ ಈ ಸೆಕೆಗೆ ರಾತ್ರಿ ನಿದ್ರೇನೇ ಬರುವುದಿಲ್ಲ!” ಎನ್ನುತ್ತಾಳೆ. ಮಮ್ಮೂಟಿ ಹಾಜಿಯವರ ಗೃಹ ಪ್ರವೇಶ ಬಹಳ ವಿಜೃಂಭಣೆಯಿಂದ ನೆರವೇರಿತು. ಅದಾದ ನಾಲ್ಕು ದಿನಗಳಲ್ಲಿ ಆತನು ಬೊಂಬಾಯಿಗೆ ಹೋದನು. ತಿಂಗಳಿಗೆರಡೊ ಮೂರೊ ಬಾರಿ ಆತನು ಬೊಂಬಾಯಿಗೆ ಹೋಗುವುದು ಹೊಸದೇನಾಗಿರಲಿಲ್ಲ. ಈ ಬಾರಿ ಮಾತ್ರ ನಾಲ್ಕೇ ದಿನಗಳಲ್ಲಿ ಹಿಂತಿರುಗಿದನು. ವಿಮಾನ ನಿಲ್ದಾಣಕ್ಕೆ ಕಾರು ಬರಲು ಹಿಂದಿನ ದಿನವೇ ದೂರವಾಣಿಯ ಮೂಲಕ ತಿಳಿಸಿದ್ದನು. ಕಾರು ಬಂದು ನಿಂತ ಶಬ್ದ ಕೇಳುತ್ತಲೇ ರುಖಿಯಾ ದೊಡ್ಡ ಹಾಲಿಗೆ ಬಂದು ಬಾಗಿಲ ಮರೆಯಿಂದ ಇಣುಕಿ ನೋಡಿದಳು. ಅಂಗಳದಲ್ಲಿ ಕಂಡ ದೃಶ್ಯದಿಂದ ವಿದ್ಯುದಾಘಾತಗೊಂಡಂತೆ ಮರಗಟ್ಟಿ ನಿಂತಳು. ಬುರುಕಾ ಧರಿಸಿದ ಹೆಂಗಸೊಬ್ಬಳು ಮತ್ತು ಸುಮಾರು ಹತ್ತು ವರ್ಷದ ಹುಡುಗನೂ ಎಂಟು ವರ್ಷದ ಹುಡುಗಿಯೂ ಕಾರಿನಿಂದ ಇಳಿದರು. ಮಮ್ಮೂಟಿ ಹುಡುಗನ ಕೈ ಹಿಡಿದುಕೊಂಡು ಒಳಬಂದನು. ಅವನ ಹಿಂದಿನಿಂದ ಉಳಿದವರೂ ಮನೆಯೊಳಗೆ ಪ್ರವೇಶಿಸಿದರು. ಕಲ್ಲಿನಂತೆ ನಿಂತಿದ್ದ ರುಖಿಯಾಳ ಕೈಯಿಂದ ಚಿಕ್ಕ 110 ಸುಳಿ ಮಗುವನ್ನೆತ್ತಿಕೊಂಡು, “ಉಮ್ಮಾ” ಎಂದು ಕರೆಯುತ್ತಾ ತಾಯಿಯ ಬಳಿ ಹೋದನು. “ಇವರು ನಿಮ್ಮ ಅಜ್ಜಿ” ಎಂದು ಉರ್ದುವಿನಲ್ಲಿ ಮಕ್ಕಳಿಗೆ ತನ್ನ ತಾಯಿಯನ್ನು ಪರಿಚಯಿಸಿದನು. “ಯಾರು ಮಗಾ ಇವರೆಲ್ಲ?” ಎಂದು ಆಕೆ ಆಶ್ಚರ್ಯದಿಂದ ಕಣ್ಣರಳಿಸಿದಾಗ, “ನಿಮ್ಮ ಇನ್ನೊಬ್ಬ ಸೊಸೆ ಮತ್ತು ಮೊಮ್ಮಕ್ಕಳು” ಎಂದನು. ರುಖಿಯಾ ಕೋಣೆಗೆ ಹೋಗಿ ಹಾಸಿಗೆಯಲ್ಲಿ ಬಿದ್ದುಕೊಂಡು ದಿಂಬಿನಲ್ಲಿ ಮುಖ ಮುಚ್ಚಿಕೊಂಡು ಅಳತೊಡಗಿದಳು. ಹವಾ ನಿಯಂತ್ರಿತ ಕೊಠಡಿಯೂ ಆಕೆಯ ಪಾಲಿಗೆ ಅಗ್ನಿಕುಂಡವೇ ಆಯಿತು. ಆಕೆಯ ಎಲ್ಲಾ ಸುಖ ಸಂತೋಷಗಳಲ್ಲಿ ಪಾಲು ಪಡೆಯಲು ಇನ್ನೋರ್ವ ಹೆಣ್ಣು ಬಂದಿದ್ದಳು! ತಾನು ಹಸಿವಿನಿಂದ ನರಳುತ್ತಿದ್ದಾಗ, ಜಾಫರನ ಕಣ್ಮರೆಯಿಂದ ದುಃಖಸಾಗರದಲ್ಲಿ ಮುಳುಗಿದ್ದಾಗ ಮಕ್ಕಳನ್ನು ಬೆಳೆಸಲು ತನ್ನ ದೇಹವನ್ನು ಹಗಲಿರುಳೂ ತೇಯುತ್ತಿದ್ದಾಗ, ಆಗೆಲ್ಲ ತನ್ನ ಗಂಡ ಇನ್ನೊಬ್ಬ ಹೆಣ್ಣಿನ ತೋಳ ತೆಕ್ಕೆಯಲ್ಲಿ ಸುಖವಾಗಿದ್ದನು! ಹೃದಯದ ಹಿಂಭಾಗದಲ್ಲೆಲ್ಲೊ ಬಚ್ಚಿಟ್ಟಿದ್ದ, ಇಂದಿನ ಐಶ್ವರ್ಯದಡಿಯಲ್ಲಿ ಹೂತು ಹೋಗಿದ್ದ ಈ ನೆನಪುಗಳೆಲ್ಲವೂ ಒಂದೇ ಬಾರಿಗೆ ಮರುಕಳಿಸಿ ಆಕೆ ನೋವಿನಿಂದ ನರಳುವಂತೆ, ಹೊರಳುವಂತೆ ಮಾಡಿತು. ಇಷ್ಟು ವರ್ಷವೂ ಆತನು ತನ್ನನ್ನು ವಂಚಿಸುತ್ತಲೇ ಬಂದಿದ್ದಾನೆ! ಉಮ್ಮಾಲಿ ರುಖಿಯಾಳ ಕೋಣೆಯ ಬಾಗಿಲ ಬಳಿ ಬಂದು, “ನೀನ್ಯಾಕೆ ಅಳುತ್ತೀ? ಅವನು ನಿನಗೇನಾದರೂ ಕಮ್ಮಿ ಮಾಡಿದ್ದಾನಾ? ಇಲ್ಲ, ನಿನ್ನನ್ನು ಹೊರ ಹಾಕಿದ್ದನಾ? ಗಂಡಸು ಒಂದಲ್ಲ ನಾಲ್ಕು ಮದುವೆ ಮಾಡಿಕೊಳ್ಳಬಹುದೂಂತ ಶಾಸ್ತ್ರವೇ ಹೇಳುವುದಿಲ್ಲವಾ? ಈ ಮನೆಗೆ ಬಂದ ಅತಿಥಿಗಳೊಡನೆ ಮಾತನಾಡಲು ಅಂತಹ ಹೆಂಗಸೊಬ್ಬಳು ಬೇಕು. ನಮ್ಮಂತ ಹಳ್ಳಿಮುಕ್ಕಗಳಿಗೇನು ತಿಳಿಯುತ್ತದೆ? ಅದಾದರೆ ಬೊಂಬಾಯಿಯ ಹೆಣ್ಣು; ಯಾರನ್ನು ಹೇಗೆ ಸ್ವಾಗತಿಸಬೇಕು, ಯಾರೊಡನೆ ಏನು ಮಾತಾಡಬೇಕೂಂತ ಅವಳಿಗೆ ಚೆನ್ನಾಗಿ ಗೊತ್ತಿರುತ್ತದೆ. ದೊಡ್ಡ ಅಫೀಸರುಗಳ ಹೆಂಡತಿಯರು ಬಂದರೆ ಅವರೊಡನೆ ಮಾತನಾಡುವುದು ಯಾರು? ನೀನಾ ಅಥವಾ ನಾನಾ? ಸುಮ್ಮನಿರು. ಈಗ ಏನೂ ಆಗಿಲ್ಲ” ಎನ್ನುತ್ತಾ ಅಡುಗೆಕೋಣೆಗೆ ಹೋಗಿ, “ಆಚುಮ್ಮಾ, ಐಸು ಪೆಟ್ಟಿಗೆಯಲ್ಲಿ ಕೋಳಿ ಉಂಟಾ?'' ಎಂದು ಕೇಳುತ್ತಾ ಬಂದವರ ಅಡಿಗೆಗೆ ಏರ್ಪಾಟು ಮಾಡತೊಡಗಿದಳು. ಭರತ 111 “ಹಾಜಾರರು ಬೊಂಬಾಯಿಯಲ್ಲಿದ್ದ ಹೆಂಡತಿ ಮಕ್ಕಳನ್ನು ಕರೆದುಕೊಂಡು ಬಂದಿದ್ದಾರಂತೆ!” ಎಂದು ಊರಲೆಲ್ಲ ಸುದ್ದಿ ಹರಡಿತು. ಜಮೀಲ ಹೊಸ ಅತ್ತಿಗೆಯನ್ನು ನೋಡಲು ಬಂದಳು. ಸುಂದರಿಯಾಗಿ, ಇನ್ನೂ ಚಿಕ್ಕ ಪ್ರಾಯದವಳಂತೆ ಕಾಣುತ್ತಿದ್ದ ಅತ್ತಿಗೆ; ಮಕ್ಕಳೂ ಕೂಡಾ ತುಂಬಾ ಮುದ್ದಾಗಿದ್ದವು. ಭಾಷೆ ಬರದ ಒಂದು ಕೊರತೆ ಬಿಟ್ಟರೆ ಬೇರಾದ ಕೊರತೆಯೂ ಇಲ್ಲ. ಉಮ್ಮಾಲಿ ಮಗಳೊಡನಂದಳು. “ಅವನಿಗೆ ಇಬ್ಬರಲ್ಲ ನಾಲ್ಕು ಜನ ಹೆಂಡಿರನ್ನು ಸಾಕುವ ಚೈತನ್ಯವನ್ನು ಅಲ್ಲಾಹು ಕೊಟ್ಟಿರುವಾಗ ಅವನು ಇನ್ನೊಬ್ಬಳನ್ನು ಕಟ್ಟಿಕೊಂಡದ್ದರಲ್ಲಿ ತಪ್ಪೇನು? ಹತ್ತು ವರ್ಷಗಳ ವರೆಗೆ ಹೆಣ್ಣಿನ ಸಂಪರ್ಕವಿಲ್ಲದೆ ಗಂಡಿಗೆ ಬದುಕಲಿಕ್ಕಾಗುತ್ತದಾ? ಅದೂ ಅಲ್ಲದೆ ಈ ಮನೆಗೆ ತಕ್ಕಂತಹ ಹೆಂಡತಿಯೂ ಇರಬೇಡವಾ?'' ಎಂದಳು. “ಅಲ್ಲವಾ ಮತ್ತೆ? ಈ ಅತ್ತಿಗೆಗೇನು ತಿಳಿಯುತ್ತದೆ? ಅಣ್ಣ ಒಳ್ಳೆಯ ಕೆಲಸವನ್ನೇ ಮಾಡಿದ” ಜಮೀಲ ಕೂಡಾ ತಾಯಿಯೊಡನೆ ದನಿಗೂಡಿಸಿದಳು. ಎಲ್ಲವನ್ನೂ ಕೇಳಿಸಿಕೊಂಡ ರುಖಿಯಾ ಸೆರಗಿನಿಂದ ಕಣ್ಣೊರೆಸಿಕೊಂಡು ಮುಖ ಊದಿಸಿಕೊಂಡು ಎದ್ದು ಬಂದಳು. “ಹತ್ತು ವರ್ಷಗಳವರೆಗೆ ಒಂದು ಗಂಡಿನ ಸಂಪರ್ಕ ಬಿಡಿ; ಬಿಡಿ ಕಾಸೂ ಇಲ್ಲದೆ ಮೂರು ಮಕ್ಕಳೂ ನಾನು ಬದುಕು ಸಾಗಿಸಿಲ್ಲವಾ? ಮಕ್ಕಳ ಯೋಗಕ್ಷೇಮಕ್ಕಾದರೂ ಒಂದು ಪತ್ರ ಬರೆಯಬೇಕೆಂದಾದರೂ ಆಗ ಅವರಿಗೆ ಅನ್ನಿಸಿತ್ತೇ? ಹೇಗೆ ಅನ್ನಿಸೀತು? ಇನ್ನೊಬ್ಬಳನ್ನು ಕಟ್ಟಿಕೊಂಡು ಮಕ್ಕಳನ್ನು ಹುಟ್ಟಿಸುವ ಕೆಲಸದಲ್ಲಿ ನಿರತರಾದವರಿಗೆ ಈ ಹೆಂಡತಿ ಮಕ್ಕಳ ನೆನಪಾದರೂ ಹೇಗಾದೀತು? ನಿಮ್ಮ ಮಗಳ ಗಂಡನೇ ಇನ್ನೊಬ್ಬಳನ್ನು ಕಟ್ಟಿಕೊಂಡು ಬರಲಿ. ಆಗ ಗೊತ್ತಾದೀತು” ಎಂದು ಈಷೆ್ರ್ಯಯಿಂದ ನುಡಿದಳು. “ನಿನ್ನ ಗಂಡ ಇನ್ನೊಬ್ಬಳನ್ನು ಕಟ್ಟಿಕೊಂಡು ಬಂದದ್ದಕ್ಕೆ ನನ್ನ ಮೇಲೆ ಯಾಕೆ ರೇಗ್ತೀಯಾ? ನಿನ್ನ ಈ ಬುದ್ಧಿ ಕಂಡೇ ಅವನು ಇನ್ನೊಬ್ಬಳನ್ನು ಕಟ್ಟಿಕೊಂಡದ್ದು!” ಜಮೀಲಾ ಮಾತಿಗೆ ಮಾತು ಜೋಡಿಸಿದಳು. “ಕ್ಯಾ? ಕ್ಯಾ” ಎಂದು ಹೊಸದಾಗಿ ಬಂದವಳು ಎಲ್ಲರ ಮುಖವನ್ನೂ ಮಿಕಿ ಮಿಕಿ ನೋಡಿದಳು. ಅವಳೂ ಕೂಡಾ ಅತ್ತು ಅತ್ತು ಕಣ್ಣೊರೆಸಿಕೊಂಡು ಬಂದಂತೆ ಕಣ್ಣುಗಳು ಕೆಂಪಗಾಗಿದ್ದುವು. ತನ್ನ ಗಂಡನಿಗೆ ಹೆಂಡತಿ ಮಕ್ಕಳಿದ್ದುದು ಅವಳಿಗೂ ತಿಳಿದಿರಲಿಲ್ಲ. “ನಾಂ ಕ್ಯಾ?” ಜಮೀಲಾ ಆಕೆಯೊಡನೆ ಕೇಳಿದಳು. 112 ಸುಳಿ “ಫರೀದಾಬಿ” “ಮಕ್ಕಳ ನಾಂ?” ಮಕ್ಕಳನ್ನು ತೋರಿಸಿ ಕೇಳಿದಳಾಕೆ. “ಬೇಟಾ ಮುನೀರ್, ಬೇಟಿ ಸಾಯಿರಾ” “ಯಾರೂ, ಜಮೀಲಕ್ಕನಾ? ಯಾವಾಗ್ಬಂದೆ?” ಎಂದು ಕೇಳುತ್ತಾ ಮಮ್ಮೂಟಿ ಒಳ ಬಂದನು. “ಈಗ ತಾನೇ ಬಂದೆ. ನೀನು ಹೊಸಬಳನ್ನು ಕರೆದುಕೊಂಡು ಬಂದಿದ್ದೀಯಂತ ರುಖಿಯಾಗೆ ನಮ್ಮ ಮೇಲೆಲ್ಲ ಕೋಪ” ಜಮೀಲಾ ನುಡಿದಳು. “ಕೋಪ ಯಾಕೆ? ಅವಳಿಗೆ ನಾನೇನಾದರೂ ಕಮ್ಮಿ ಮಾಡಿದ್ದೇನೆಯೇ? ಅವಳಿಗೆ ಇಲ್ಲಿರಲು ಮನಸ್ಸಿಲ್ಲವಾದರೆ ಹಳೇ ಮನೆಗೇ ಹೋಗಲಿ. ಫರೀದಾ ಮಾತ್ರ ಇನ್ನು ಇಲ್ಲಿಯೇ ಇರ್ತಾಳೆ” ಆಕೆ ಹಿಂದಿನ ಮಮ್ಮೂಟಿಯ ಹೆಂಡತಿ ರುಖಿಯಾ ಆಗಿದ್ದಿದ್ದರೆ ಬಹುಶಃ ಗಂಡನನ್ನು ಬಿಟ್ಟು ಹೋಗುವ ಯೋಚನೆ ಮಾಡುತ್ತಿದ್ದಳೇನೊ. ಆದರೆ ಈಗ ಅವಳು ಮನೆ ಬಿಟ್ಟು ಹೊರಡುವುದು ಸಾಧ್ಯವೆ ಇಲ್ಲ. ಈಗ ಅವಳೆಷ್ಟಾದರೂ ಮಮ್ಮೂಟಿ ಹಾಜಾರರ ಹೆಂಡತಿ ರುಖಿಯಕ್ಕನವರಲ್ಲವಾ? * * * * * ಮಮ್ಮೂಟಿ ಊರಲ್ಲಿರುವಾಗ ಐದು ಹೊತ್ತೂ ತಪ್ಪದೆ ಮಸೀದಿಗೆ ಹೋಗಿ ನಮಾಜು ಮಾಡುತ್ತಾನೆ. ಮದ್ರಸಾದಲ್ಲಿ ಮಕ್ಕಳಿಗೆ ಖುರ್‍ಅನ್ ಕಲಿಸುವ ಮೌಲವಿಗಳೂ ಸೇರಿ ಏಳೆಂಟು ಜನ ಮೌಲವಿಗಳಿಗೆ ಅವನ ಮನೆಯಲ್ಲೇ ಊಟ. ಒಂದು ದಿನ ಆತ ಮೌಲವಿಗಳ ಜೊತೆಗೆ ಕುಳಿತುಕೊಂಡು ಊಟ ಮಾಡುತ್ತಾ, “ಮೈಲಿಯಾರೇ, ನಮ್ಮ ಊರಿನ ಮಧ್ಯದಲ್ಲಿ ದೊಡ್ಡದಾದ ಒಂದು ಮಸೀದಿ ಇದ್ದರೆ ಒಳ್ಳೆಯದಲ್ಲವಾ? ಏನು ಹೇಳ್ತೀರಿ?” ಎಂದು ಕೇಳಿದನು. ಮೌಲವಿಗಳು ಸಂತೋಷದಿಂದ, “ಅಂತಹ ಮಸೀದಿಯೊಂದು ಎಂದೊ ಆಗಬೇಕಾಗಿತ್ತು. ಹಾಜ್ಯಾರರು ಮನಸ್ಸು ಮಾಡಿದರೆ ಆಗದ ಕೆಲಸ ಯಾವುದಿದೆ?” ಎಂದು ವಿನಯದಿಂದ ನುಡಿದರು. “ಹತ್ತಿರದ ಯಾವ ಊರಿನಲ್ಲೂ ಇಲ್ಲದಂತಹ ಮಸೀದಿಯಾಗಬೇಕು. ಒಮ್ಮೆ ನಮಾಜ್ ಮಾಡುವಾಗ ಒಂದು ಸಾವಿರ ಜನರಿಗಾದರೂ ನಮಾಜ್ ಮಾಡಲು ಸ್ಥಳವಕಾಶವಿರಬೇಕು. ಮಸೀದಿಗೆ ದೀಪಾಲಂಕಾರಗಳನ್ನು ದುಬಾಯಿಯಿಂದಲೇ ತರಿಸುವಾ. ಏನಂತೀರಿ?” ಭರತ 113 “ಇಂತಹ ಒಳ್ಳೆಯ ಕೆಲಸ ಮಾಡ ಹೊರಟ ತಮಗೆ ಅಲ್ಲಾಹನು ಇನ್ನಷ್ಟು ಐಶ್ವರ್ಯವನ್ನು ದಯಪಾಲಿಸಲಿ” ಎನ್ನುತ್ತಾ ಊಟವಾದ ಬಳಿಕ ಬಹಳ ಹೊತ್ತು ದುವಾ ಮಾಡಿದರು ಮೌಲವಿಗಳು. “ಮಸೀದಿಗೆ ಅಲಂಕಾರಗಳೆಲ್ಲ ಯಾಕೆ? ಹಾಗೆಲ್ಲ ಹಣ ಪೋಲು ಮಾಡುವುದನ್ನು ಪೈಗಂಬರರು ಇಷ್ಟಪಡಲಾರು” ಎಂದು ವೃದ್ಧ ಮೌಲವಿಗಳೊಬ್ಬರು ನುಡಿದಾಗ ಉಳಿದವರು, “ನೀವೊಮ್ಮೆ ಸುಮ್ಮನಿರಿ” ಎಂದು ಅವರ ಬಾಯಿ ಮುಚ್ಚಿಸಿದರು. ಮಮ್ಮೂಟಿಯ ಮನೆಯಲ್ಲಿ ಆಗಾಗ ಮೌಲೂದ್ ಪಾರಾಯಣವೂ ನಡೆಯುತ್ತಿತು. ಇದಕ್ಕೆಲ್ಲವೂ ಆತನು ಖರ್ಚು ಮಾಡುವ ಹಣಕ್ಕೆ ಲೆಕ್ಕವಿಟ್ಟವನೇ ಅಲ್ಲ. ಹೀಗಾಗಿ ಆತನ ದೈವ ಭಕ್ತಿಯನ್ನು ಊರವರು ಕೊಂಡಾಡುತ್ತಿದ್ದರು. ಈಗ ಉಮ್ಮಾಲಿ ಆಗಾಗ ಮಗನೊಡನೆ ಹಾಜಿರಾಳ ಮದುವೆಯ ಮಾತೆತ್ತುತ್ತಿದ್ದಳು. “ಅವಳಿಗೆ ಈಗಾಗಲೇ ಹದಿನೈದು ವರ್ಷ ತುಂಬಿತು. ಈಗ ಮದುವೆ ಮಾಡದೆ ಇನ್ನೇನು ಮುದುಕಿಯಾದ ಮೇಲೆ ಮದುವೆ ಮಾಡ್ತೀಯ? ನೀನು ಮನಸ್ಸು ಮಾಡಿದರೆ ಗಂಡು ಹುಡುಕುವುದು ಎಷ್ಟು ಹೊತ್ತು?” ರುಖಿಯಾ ಆಗಾಗ, “ನನ್ನ ಬದುಕು ಹೀಗಾಯಿತಲ್ಲ? ಮಗಳನ್ನಾದರೂ ಒಳ್ಳೆಯ ಕಡೆ ಮದುವೆ ಮಾಡಿ ಕೊಡಿ. ಅದನ್ನಾದರೂ ನೋಡಿ ಸಂತೋಷಪಡುತ್ತೇನೆ” ಎಂದು ಬೇಸರದಿಂದ ನುಡಿಯುತ್ತಿದ್ದಳು. “ಏನಾಗಿದೆ ಸೂಳೆ ನಿನ್ನ ಬದುಕು?” ಎಂದು ಮಮ್ಮೂಟಿ ರೌದ್ರಾವತಾರ ತಾಳುತ್ತಿದ್ದನು. ಫರೀದಳೇನಾದರೂ ನಕ್ಕಳಾದರೆ ರುಖಿಯಾ ಅವಳನ್ನು ದುರುಗುಟ್ಟಿ ನೋಡುತ್ತಾಳೆ. ಮಮ್ಮೂಟಿ ಅಲ್ಲಿಂದ ಮರೆಯಾದೊಡನೆ, “ನೀನೆಷ್ಟಾದರೂ ಬೊಂಬಾಯಿಯಿಂದ ಬಂದ ಸೂಳೆಯಲ್ಲವಾ? ನನ್ನ ಎಂಜಲು ತಿನ್ನಲಿಕ್ಕೆ ಬಂದವಳು!” ಎಂದು ಫರೀದಳನ್ನು ಮೂದಲಿಸುತ್ತಾಳೆ. ಫರೀದಳಿಗೂ ಈಗೀಗ ಭಾಷೆ ಸ್ವಲ್ಪ ಸ್ವಲ್ಪ ಅರ್ಥವಾಗುತ್ತದೆ ಅವಳು ಮಾಳಿಗೆಯ ಮೇಲಿನ ತನ್ನ ಹವಾ ನಿಯುಂತ್ರಿತ ಕೊಠಡಿಗೆ ಹೋಗಿ ಬಾಗಿಲಿಕ್ಕಿಕೊಳ್ಳುತ್ತಾಳೆ. ಒಂದು ದಿನ ಮಮ್ಮೂಟಿ ಉಮ್ಮಾಲಿಯೊಡನೆ, “ನಮ್ಮ ಜೊಹರಕ್ಕನ ಮಗನೊಬ್ಬನಿದ್ದಾನೆ. ಸರಕಾರಿ ಅಫೀಸರ್, ನಮ್ಮ ಹಾಜಿರಾಳನ್ನು ಅವನಿಗೆ ಕೇಳಿದರೆ ಹೇಗೆ!” ಎಂದನು. ಹಿಂದಿನ ಘಟನೆಗಳೆಲ್ಲವೂ ಉಮ್ಮಾಲಿಯ ಕಣ್ಮುಂದೆ ತೇಲಿ ಹೋದುವು. ಕೊಂಚ ಹೊತ್ತಿನ ಮೌನದ ಬಳಿಕ ಆಕೆ, 114 ಸುಳಿ “ಅವರಲ್ಲಿ ಈಗ ಆಸ್ತಿ, ಹಣ ಏನೇನೂ ಇಲ್ಲವಲ್ಲ? ಆಸ್ತಿಯನ್ನೆಲ್ಲ ಅಣ್ಣ ಮತ್ತು ಗಂಡ ಮುಗಿಸಿದ್ದಾರೆ. ಒಕ್ಕಲಿನವರ ಕೈಯಲ್ಲಿದ್ದುದು ಕಂಡವರ ಪಾಲಾಯಿತು. ಸಮನಾದ ಒಂದು ಮನೆಯಾದರೂ ಇಲ್ಲ. ಹಿಂದಿನ ಕಾಲದ ಹಳೆಯ ಮನೆ. ಹಾಜಿರಾ ಅಲ್ಲಿಗೆ ಹೋಗಿ ಇರ್ತಾಳಾ?” ಎಂದು ಅಪಸ್ವರ ಎತ್ತಿದಳು. “ಉಮ್ಮಾ, ಹಣ ಹೇಗೊ ಬರ್ತದೆ, ಹೇಗೊ ಹೋಗ್ತದೆ. ಆದರೆ ವಿದ್ಯೆ ಬರುವುದಿಲ್ಲ. ಜೋಹರಕ್ಕನ ಮಕ್ಕಳೆಲ್ಲರೂ ವಿದ್ಯಾವಂತರು. ಒಳ್ಳೆಯ ಸ್ವಭಾವವೆಂದೂ ಕೇಳಿದ್ದೇನೆ. ಯಾವುದಕ್ಕೂ ನಾನೊಮ್ಮೆ ಜೊಹರಕ್ಕನೊಡನೆ ಮಾತನಾಡಿ ಬರ್ತೇನೆ” ಎಂದನು. ಮರುದಿನ ಮಮ್ಮೂಟಿ ಒಬ್ಬನೇ ಕಾರಿನಲ್ಲಿ ಜೊಹರಳ ಮನೆಗೆ ಹೊರಟನು. ಒಂದೆರಡು ಬುಟ್ಟಿ ಹಣ್ಣುಗಳನ್ನೂ ದೊಡ್ಡದೊಂದು ಮೀನನ್ನೂ ಖರೀದಿಸಿ ಕಾರಿನ ಢಿಕ್ಕಿಯಲ್ಲಿಟ್ಟುಕೊಂಡನು. ಜೊಹರಳ ಮನೆ ಮತ್ತು ಅದರ ಹಿಂದಿನ ಅಡಿಕೆ ತೋಟ ಎಲ್ಲವೂ ಹಾಗೆಯೇ ಇದ್ದವು. ಆಕೆಯ ಗಂಡ ಸತ್ತು ಹಲವು ವರ್ಷಗಳಾಗಿವೆ. ಕೊನೆಯ ಮಗನನ್ನು ಬಿಟ್ಟು ಉಳಿದವರೆಲ್ಲರಿಗೂ ಮದುವೆಯಾಗಿದೆ. ತಾಯಿಯೂ ಆಕೆಯ ಬಳಿಯಲ್ಲಿದ್ದೇ ಕಣ್ಮುಚ್ಚಿದಳು. ಮಮ್ಮೂಟಿ ಅವರ ಮನೆಗೆ ಹೋದಾಗ ಜೊಹರಾ ಕೆಲಸದವರೊಡನೆ ತೋಟದಲ್ಲಿದ್ದಳು. ಕೆಲಸದ ಹುಡುಗನೊಬ್ಬನು ಓಡಿ ಬಂದು, “ಉಮ್ಮಾ, ನಮ್ಮ ಮನೆಗೆ ಯಾರೊ ಕಾರಿನಲ್ಲಿ ಬಂದಿದ್ದಾರೆ.’ ಎಂದನು. ಜೊಹರಾ ಕೂಡಲೇ ಓಡೋಡಿ ಮನೆ ಸೇರಿ ಮನೆಯ ಮುಂಭಾಗಕ್ಕೆ ನಡೆದಳು. ಬಾಗಿಲ ಬಳಿ ನಿಂತು ಹೊರಗೆ ಇಣುಕುತ್ತಾ, “ಯಾರದು? ಗುರುತು ಸಿಗಲಿಲ್ಲವಲ್ಲಾ? ಮಕ್ಕಳನ್ನು ಕಾಣಬೇಕಾದರೆ ಆದಿತ್ಯವಾರ ಬನ್ನಿ. ಆ ದಿನ ಎಲ್ಲರೂ ಮನೆಯಲ್ಲಿರುತ್ತಾರೆ” ಎಂದಳು. “ನನ್ನ ಗುರುತು ಸಿಗಲಿಲ್ಲವಾ ಜೊಹರಕ್ಕಾ? ನಾನು ಮಮ್ಮೂಟಿಯಲ್ಲವಾ?'' ಎಂದು ನಗುತ್ತಾ ನುಡಿದು, “ನಿಮ್ಮ ಆ ಹುಡುಗ ಎಲ್ಲಿ ಹೋದ? ಕಾರಿನಲ್ಲಿ ಸ್ವಲ್ಪ ಹಣ್ಣುಗಳಿವೆ” ಎಂದನು. ಜೊಹರಾ ಕೂಡಲೇ ಬಾಗಿಲ ಮರೆಯಿಂದ ಹೊರ ಬಂದು, “ಆಂ... ಮಮ್ಮೂಟಿಯಾ? ನಿನ್ನ ವಿಷಯ ತುಂಬಾ ಕೇಳಿದ್ದೇನಪ್ಪ. ಈಗಲಾದರೂ ನನ್ನ ನೆನಪಾಯಿತಲ್ಲ? ಒಳಗೆ ಬಾ, ಕುಳಿತುಕೊ.” ಎನ್ನುತ್ತಾ ಹುಡುಗನನ್ನು ಹೊರಗೆ ಕಳುಹಿಸಿ ತಾನೂ ಚಾವಡಿಯಲ್ಲಿ ಕುಳಿತುಕೊಂಡಳು. ಮಮ್ಮೂಟಿ ತಾನು ತಂದ ಭರತ 115 ಸಾಮಾನುಗಳನ್ನು ಹುಡುಗನ ಕೈಯಲ್ಲಿಟ್ಟು ಪುನಃ ಒಳ ಬಂದು ಕುಳಿತುಕೊಂಡನು. “ನಿಮ್ಮ ನೆನಪು ಯವಾಗಲೂ ಇತ್ತು ಜೊಹರಕ್ಕಾ. ಹಜ್‍ಗೆ ಹೋಗುವಾಗಲಾದರೂ ಬರಬೇಕೆಂದಿದ್ದೆ. ಆದರೆ ಯಾಕೊ ಈ ಕಡೆ ಬರಲಾಗಲಿಲ್ಲ... ನೀವೆಲ್ಲ ನನ್ನನ್ನು ತಪ್ಪು ತಿಳಿದಿದ್ದಿರಲ್ಲ? ಹಾಗಾಗಿ ನಾನು ಆ ರೀತಿ ಊರು ಬಿಡಬೇಕಾಯಿತು. ಆಮೇಲೆ ನೀವೇನನ್ನುತ್ತೀರೊ ಎಂದು ಈ ಕಡೆ ಬರಲು ಸಂಕೋಚವಾಯಿತು...” ಎಂದಾಗ ಜೊಹರಾ ನಡುವೆಯೇ ತಡೆದು, “ಸಂಕೋಚ ಯಾಕೆ? ಅದನ್ನೆಲ್ಲ ಮರೆತು ಬಿಡು. ಅಂತೂ ಈಗ ಬಹಳ ದೊಡ್ಡ ಮನುಷ್ಯನಾಗಿದ್ದೀಯಲ್ಲ? ತುಂಬಾ ಸಂತೋಷ.” ಎಂದು ನಿಷ್ಕಂಳಕತೆಯಿಂದ ನುಡಿದಳು. ಬಂದಾತನಿಗೆ ಚಹಾ, ತಿಂಡಿಯ ಸತ್ಕಾರವೂ ಆಯಿತು. ತಮ್ಮ ಸಂಸಾರದ ಸುಖದುಃಖಗಳ ವಿನಿಮಯವೂ ಆಯಿತು. ಕೊನೆಗೂ ಮಮ್ಮೂಟಿ ತಾನು ಬಂದ ಕಾರ್ಯಕ್ಕೆ ಪೀಠಿಕೆ ಹಾಕಿದನು. “ಜೊಹರಕ್ಕಾ, ನಿಮಗೆ ಮದುವೆಗೆ ಇನ್ನೂ ಒಬ್ಬ ಮಗನಿದ್ದಾನಲ್ಲ?” “ಹೌದು ಮಮ್ಮೂಟಿ, ಇನ್ನೂ ಒಬ್ಬನಿದ್ದಾನೆ. ಎಲ್ಲಾದರೂ ನಿನಗೆ ತಿಳಿದ ಕಡೆ ಒಂದು ಹುಡುಗಿ ಇದ್ದರೆ ಹೇಳು. ಸ್ವಲ್ಪ ‘ಗಟ್ಟಿಮುಟ್ಟಾದ’ ಜಾಗವಾಗಿರಬೇಕು. ಈ ಸರಕಾರಿ ಕೆಲಸದಿಂದೇನಾಗುತ್ತದೆ.?” ಎಂದಳು. ಜೊಹರಳನ್ನು ಮೆತ್ತಗೆ ಮಾಡಬಹುದೆಂದು ಯೋಚಿಸಿದ ಮಮ್ಮೂಟಿ, “ಜೊಹರಕ್ಕಾ, ‘ಗಟ್ಟಿಮುಟ್ಟಾದ’ ಜಾಗದಲ್ಲಿಯೇ ಒಂದು ಹುಡುಗಿ ಇದೆ. ನೀವು ಬೇಜಾರು ಮಾಡಿಕೊಳ್ಳದಿದ್ದರೆ ಹೇಳುವೆ.” ಎಂದನು. “ಬೇಜಾರೇಕೆ? ಹೇಳು. ಎಲ್ಲಿದೆ ಹುಡುಗಿ?” ಕುತೂಹಲದಿಂದ ಕೇಳಿದಳಾಕೆ. “ನನ್ನ ಹಾಜಿರಾಗೆ ಹದಿನೈದು ತುಂಬಿತು. ಅವಳ ತಾಯಿ, ಅಜ್ಜಿಯೆಲ್ಲ ಮದುವೆಗೆ ಒತ್ತಾಯ ಮಾಡುತ್ತಿದ್ದಾರೆ. ನನಗೆ ದೊಡ್ಡ ಶ್ರೀಮಂತ ಹುಡುಗ ಬೇಕೆಂದೇನಿಲ್ಲ. ವಿದ್ಯೆ ಇದ್ದು ಸರಕಾರಿ ಕೆಲಸದಲ್ಲಿರುವವನಾದರೆ ಆದೀತು. ಅದನ್ನೇ ಕೇಳೋಣಾಂತ...” ಮಾತು ನಿಲ್ಲಿಸಿ ಜೊಹರಳ ಮುಖ ನೋಡಿದನು., “ನೀನು ಏನು ಹೇಳ್ತಾ ಇದ್ದೀಯಾ?” ಗೊಂದಲಗೊಂಡು ಕೇಳಿದಳಾಕೆ. “ಇನ್ನೇನಿಲ್ಲ... ನನ್ನ ಹಾಜಿರಾಳನ್ನು ನಿಮ್ಮ ನಿಯಾಜ್‍ಗೆ 116 ಸುಳಿ ಮಾಡಿಕೊಳ್ತೀರಾ?” ನೇರವಾಗಿ ಬಂತು ಪ್ರಶ್ನೆ. ಜೊಹರಾ ಸ್ತಂಭಿತಳಾದಳು. ಹಾಳಾದ ಮೀನು ತಂದು ತಾಯಿಯಿಂದ ಏಟು ತಿಂದ ಮಮ್ಮೂಟಿ. “ಏ ಮಮ್ಮೂಟಿ... ಎಲ್ಲಿ ಸತ್ತೇ?” ಎಂಬ ಕರೆಗೆ ಓಗೊಡುತ್ತಾ ಓಡುತ್ತಿದ್ದ ಮಮ್ಮೂಟಿ. ಹನೀಫ್ ಬಟ್ಟೆ ಸುತ್ತಿ ಸೀಮೆ ಎಣ್ಣೆ ಹಾಕಿ ಬೆಂಕಿ ಕೊಟ್ಟ ಗಾಯದ ಕಲೆ ಬಹುಶಃ ಮಾಯವಾಗುವ ಕಲೆಯಂತೂ ಅಲ್ಲವೇ ಅಲ್ಲ! ಇಲ್ಲ. ಕಾಲ ಕ್ರಮೇಣ ಎಲ್ಲ ಕಲೆಗಳೂ ಮಾಯವಾಗುತ್ತವೆ! ಪ್ರವಾಹ ಬಂದಾಗ ಎಂತೆಂತಹ ಕಸ ಕಡ್ಡಿಗಳಲ್ಲದೆ ದೊಡ್ಡ ಮರಗಳೂ ಕೊಚ್ಚಿ ಹೋಗುತ್ತವಲ್ಲವೇ? ತನ್ನದಂತೂ ಬರಡು ನೆಲ. ಪ್ರವಾಹ ಮನೆ ಬಾಗಿಲಿಗೇ ಬಂದಿರುವಾಗ ದೂರ ತಳ್ಳುವವರು ಮೂರ್ಖರು! ಆದರೂ... ಮಮ್ಮೂಟಿಯ ಮಗಳು ತನ್ನ ಮಗನಿಗೆ ಸರಿ ಹೋದೀತೆ? ಯಾಕೆ ಸರಿ ಹೋಗದು? ಮಮ್ಮೂಟಿಯ ಮಗಳನ್ನು ಮದುವೆಯಾಗಲು ಊರಿನ ಹಲವಾರು ಶ್ರೀಮಂತ ಯುವಕರು ಕಾತರದಿಂದ ಕಾಯುತ್ತಿದ್ದಾರೆ. ಅದನ್ನೆಲ್ಲ ಬಿಟ್ಟು ಮಮ್ಮೂಟಿ ತನ್ನ ಮಗನನ್ನು ಹುಡುಕಿಕೊಂಡು ಬಂದಿದ್ದಾನಲ್ಲ? ಜೊಹರಳ ಮನ ಅಲ್ಲೋಲ ಕಲ್ಲೋಲವಾಯಿತು. ಉಯ್ಯಾಲೆಯಂತೆ ಹಿಂದೆ ಮುಂದೆ ತೂಗಾಡಿತು. ನಿರ್ಧಾರಕ್ಕೆ ಹೆಚ್ಚು ಹೊತ್ತೇನೂ ಬೇಕಾಗಲಿಲ್ಲ. ಮಮ್ಮೂಟಿಯ ಮಗಳನ್ನು ಮದುವೆಯಾಗುವುದಕ್ಕಿಂತ ಪ್ರತಿಷ್ಟೆಯ ವಿಷಯ ಬೇರೇನಿದೆ? “ಆಗಲಿ ಮಮ್ಮೂಟೀ, ನನಗಂತೂ ಸಂತೋಷವೇ. ಎಲ್ಲ ಮನುಷ್ಯರನ್ನೂ ಸೃಷ್ಟಿಸಿದವನು ಆ ದೇವನೊಬ್ಬನೆ. ನಮ್ಮ ವಿಷಯವೆಲ್ಲ ನಿನಗೆ ತಿಳಿದೇ ಇರಬೇಕು. ನನ್ನ ಮಗನೊಡನೆ ಕೂಡಾ ಒಂದು ಮಾತು ಕೇಳಿಕೊಂಡು ನಿನಗೆ ತಿಳಿಸುವೆ. ನಿನ್ನ ಮಗಳ ಫೋಟೋ ಇದ್ದರೆ ಕಳಿಸಿಕೊಡು.'' “ನೀವೇ ಒಮ್ಮೆ ನನ್ನ ಮನೆಗೆ ಬನ್ನಿ ಜೊಹರಕ್ಕಾ. ನನ್ನ ಹೊಸ ಮನೆಯನ್ನು ನೀವು ನೋಡಿಲ್ಲವಲ್ಲ?” ಎಂದು ಆಕೆಯನ್ನು ತನ್ನ ಮನೆಗೆ ಆಹ್ವಾನಿಸಿದನು. “ಆಗಲಿ” ಮಮ್ಮೂಟಿ ಸಂತಸದಿಂದಲೇ ಹೊರಟು ಹೋದನು. ವಾರದ ಕೊನೆಯಲ್ಲಿ ಗಂಡು ಮಕ್ಕಳೆಲ್ಲರೂ ಊರಿಗೆ ಬಂದಾಗ ಜೊಹರಾ ಸಂತೊಷದಿಂದ ಮಕ್ಕಳಿಗೆ ಈ ವಿಷಯ ತಿಳಿಸದಳು. “ಸದ್ಯ, ಅಲ್ಲಾಹು ಭರತ 117 ಕಣ್ಣು ತೆರೆದನು. ನಾವೂ ಈ ಊರಿನಲ್ಲೆ ತಲೆ ಎತ್ತಿಕೊಂಡು ಬಾಳಬಹುದು.” ಎಂದಳು. “ಏನಂದಿರಿ?” ನಿಯಾಜ್ ಕೇಳಿದನು. “ಈಗೇನು ನಾವು ತಲೆ ತಗ್ಗಿಸಿಕೊಂಡು ಬಾಳುತ್ತಿದ್ದೇವೆಯೇ?” “ಹಾಗಲ್ಲ ಮಗೂ, ನಿಮಗೆ ಅವೆಲ್ಲ ಅರ್ಥವಾಗುವುದಿಲ್ಲ.” “ಉಮ್ಮಾ, ನಮಗೆ ಎಲ್ಲವೂ ಅರ್ಥವಾಗುತ್ತವೆ. ಅಂತಹವರ ಸಹವಾಸ ನಮಗೆ ಬೇಡ. ಅವರು ಹಣ ಗಳಿಸುತ್ತಾ ಇರುವ ಹಾದಿ ತಪ್ಪು. ಈ ದೇಶದ ಕಾನೂನಿಗೆ ವಿರುದ್ಧವಾಗಿ ಅವರು ವರ್ತಿಸುತ್ತಿದ್ದಾರೆ. ಅವರ ಈ ಕಪ್ಪು ಹಣದಿಂದ ನಮ್ಮಂತಹವರಿಗೆ ಎಷ್ಟೊಂದು ತೊಂದರೆ ಎಂಬುದು ನಿಮಗೆ ಅರ್ಥವಾಗುವುದಿಲ್ಲವಾ?” “ಹಣ ಇದೆಯೇ ಇಲ್ಲವೇ ಎಂಬುದು ಪ್ರಶ್ನೆ. ಅದನ್ನು ಗಳಿಸಿದ ಹಾದಿಯನ್ನು ಯಾರು ಕೇಳ್ತಾರೆ ಈಗಿನ ಕಾಲದಲ್ಲಿ? ಇಷ್ಟಕ್ಕೂ ಅವರು ಹಣ ಗಳಿಸಿದರೆ ನಮಗೇನು ತೊಂದರೆ?” “ಇದೊಳ್ಳೆ ಪ್ರಶ್ನೆ. ಇಂದು ಸಾಮಾನುಗಳಿಗೆಲ್ಲ ಈ ರೀತಿ ಬೆಲೆ ಏರಲು ಅವರೇ ಕಾರಣ. ಹಣದುಬ್ಬರದಿಂದಾಗಿ ನಮ್ಮಂತಹ ಶ್ರೀ ಸಾಮಾನ್ಯರ ಪಾಡು ನಾಯಿ ಪಾಡಾಗುತ್ತದೆ. ಇದಕ್ಕಿಂತ ಹೆಚ್ಚು ಹೇಳಿದರೆ ನಿಮಗೆ ಅರ್ಥವಾಗದು.” ಎಂದು ಹಿರಿಯ ಮಗ ಅಬಿದ್ ನುಡಿದನು. “ಅಂತಹವರನ್ನೆಲ್ಲ ನಾವು ಪ್ರೋತ್ಸಾಹಿಸಿ ಸಮಾಜದಲ್ಲಿ ಸ್ಥಾನ ನೀಡಬಾರದು.” “ಮಮ್ಮೂಟಿಯ ಮಗಳನ್ನು ಮದುವೆಯಾಗಲು ಹುಡುಗರು ಸಾಲು ಗಟ್ಟಿ ನಿಂತಿದ್ದಾರೆ. ಅವರನ್ನೆಲ್ಲ ತಿರಸ್ಕರಿಸಿ ಆತ ನಮ್ಮ ಬಳಿಗೆ ಬಂದದ್ದೆ ನಮ್ಮ ಭಾಗ್ಯವೆಂದು ತಿಳಿದುಕೊಳ್ಳಬೇಕು” ಪಟ್ಟು ಬಿಡದೆ ಹೇಳಿದಳಾಕೆ. “ಹೋಗಲಿ, ಆ ಹುಡುಗಿಗೆ ವಿದ್ಯಾಭ್ಯಾಸವೇನಾದರೂ ಇದೆಯೇ? ಅಬೀದ್ ಕೇಳಿದನು. “ಹುಡುಗಿಯ ವಿದ್ಯೆ ಕಟ್ಟಿಕೊಂಡು ಏನು ಮಾಡಬೇಕಾಗಿದೆ?” ಅವಳೇನು ಸರಕಾರಿ ಕೆಲಸಕ್ಕೆ ಹೋಗಬೇಕಾಗಿಯೆ? ಏನು ಬೇಕಾದರೂ ಅವಳಪ್ಪನೇ ತಂದು ಸುರಿಯುತ್ತಾನೆ. ನಮ್ಮ ನಿಯಾಜ್ ರಾಜಕುಮಾರನಂತಿರಬಹುದು” ಮಮ್ಮೂಟಿಯ ಐಶ್ವರ್ಯದ ಹೊಳಪು ಜೊಹರಾಳ ಕಣ್ಣನ್ನು ಕುರುಡಾಗಿಸಿತ್ತು. “ಉಮ್ಮಾ, ಶ್ರೀಮಂತಳೂ ಆಗಿ ವಿದ್ಯೆಯೂ ಇಲ್ಲದ ಹುಡುಗಿಯನ್ನು ನಾನಂತೂ ಮದುವೆಯಾಗಲಾರೆ” ನಿಯಾಜ್ ದೃಢಚಿತ್ತದಿಂದ ನುಡಿದನು. 118 ಸುಳಿ “ನೋಡಪ್ಪಾ, ನಾನಾಗಲೇ ಮಾತು ಕೊಟ್ಟಾಗಿದೆ. ನೀನು ಹೀಗೆಲ್ಲ ಮಾತನಾಡಬಾರದು. ಮದುವೆಯಾದ ಬಳಿಕ ಎಂತಹ ಹೆಣ್ಣಾದರೂ ಗಂಡನಿಗೆ ಹೊಂದಿಕೊಂಡು ಹೋಗುತ್ತಾಳೆ. ನೀನು ಈಗ ಬೇಡವೆಂದರೆ ನನ್ನ ಮರ್ಯಾದೆ ಹೋಗುತ್ತದೆ.” “ನನ್ನನ್ನು ಕೇಳದೆ ಯಾಕೆ ಒಪ್ಪಿಗೆ ಕೊಟ್ಟಿರಿ? ನಾನೇನು ಆಟದ ಸಾಮಾನೆಂದು ತಿಳಿದಿರಾ?” ಸಿಡುಕಿದನು ಹುಡುಗ. “ಹತ್ತು ತಿಂಗಳು ಹೊಟ್ಟೆಯಲ್ಲಿಟ್ಟು ಹೆತ್ತು ಸಾಕಿದ ಮಗ ನನ್ನ ಮಾತು ಮೀರಲಾದ ಎಂಬ ಧೈರ್ಯದಿಂದ ಒಪ್ಪಿಗೆ ಕೊಟ್ಟೆ” ಕೊನೆಯ ಮಾತನ್ನುವಾಗ ಆಕೆಯ ಕಂಠ ಗದ್ಗದವಾಯಿತು. ತಾಯಿ ತನ್ನ ಹಕ್ಕು ಚಲಾಯಿಸ ಹೊರಟಾಗ ಮಗ ಮೆತ್ತಗಾದ. ತನಗಾಗಿ ಈವರೆಗೆ ಕಷ್ಟಪಟ್ಟದ್ದು ತಾಯಿಯೆ ಹೊರತು ತಂದೆಯಲ್ಲ. ತಂದೆ ಬದುಕಿದ್ದಾಗಲೂ ಮಕ್ಕಳ ವಿಷಯವನ್ನು ತಲೆಗೆ ಹಚ್ಚಿಕೊಂಡವರಲ್ಲ. ಅಂತಹ ತಾಯಿಗೆ ನೋವುಂಟು ಮಾಡುವುದು ಆತನಿಂದಾಗದ ಮಾತು. ಹೆತ್ತ ತಾಯಿಗೆ ಮಕ್ಕಳ ಏಳಿಗೆಯ ಚಿಂತೆ ಇಲ್ಲದಿರುತ್ತದೆಯೇ? ಮರುದಿನ ಆತನು ಮನೆ ಬಿಡುವಾಗ ತಾಯಿಯೊಡನೆ, “ನೀವೇ ಹೋಗಿ ಹುಡುಗಿಯನ್ನೊಮ್ಮೆ ನೋಡಿ ಬನ್ನಿ” ಎಂದನು. ಒಂದೆರಡು ದಿನಗಳಲ್ಲಿ ಮಮ್ಮೂಟಿ ಬಂದು ಜೋಹರಾಳನ್ನು ತನ್ನ ಮನೆಗೆ ಕರೆದೊಯ್ದನು. ಮನೆಯವರೆಲ್ಲರೂ ಸಡಗರದಿಂದ ಓಡಾಡಿದರು. ರುಖಿಯಾ ಮಗಳಿಗಾಗಿ ತಯಾರಿಸಿದ ಆಭರಣಗಳನ್ನೆಲ್ಲ ಜೊಹರಳ ಮುಂದೆ ಹರಡಿದಳು. ಹಾಜಿರಾಳ ಮೈ ಮೇಲೂ ಸಾಕಷ್ಟು ಒಡವೆಗಳನ್ನು ತೊಡಿಸಿದಳು. “ಈ ಬಳೆ ನೋಡಿ ಅಕ್ಕಾ, ಇದು ಪೇಪರಿನಲ್ಲಿ ಕಂಡದ್ದನ್ನು ತಂದೆಗೆ ತೋರಿಸಿ ತನಗೆ ಅಂತದ್ದೇ ಬೇಕೂಂತ ಅವಳೇ ಮಾಡಿಸಿಕೊಂಡದ್ದು. ಸೊಂಟದ ಆಭರಣದಲ್ಲಿ ಇಪ್ಪತ್ತೈದು ಪವನುಗಳಿವೆ. ಕಾಲಿನ ಚೈನಿನಲ್ಲಿ ಹನ್ನೆರಡು ಪವನುಗಳಿವೆ” ಎಂದು ಅತ್ತೆ ಸೊಸೆಯರು ವರ್ಣಿಸಿದ್ದೇ ವರ್ಣಿಸಿದ್ದು. ಮನೆ ನೋಡಲು ಆಕೆಯನ್ನು ಕರೆದೊಯ್ದು, ಬಾತ್ ರೂಮಿನ ಅಂದ ಚೆಂದವನ್ನೂ ವರ್ಣಿಸಿದರು. ಕೋಣೆ ತಂಪಾಗಿಸುವ ‘ಇಂಜಿನ್’ನನ್ನೂ ತೋರಿಸಿದರು. “ಹಾಜಿರಾಗೆ ಈಗ ಇದಿಲ್ಲದೆ ನಿದ್ದೆ ಬರುವುದೇ ಇಲ್ಲ” ಎಂದಳು ಉಮ್ಮಾಲಿ, “ಅವಳು ಶಾಲೆಗೆ ಹೋಗಿದ್ದಾಳಾ?’ ಜೊಹರಾ ಮೆತ್ತಗೆ ಕೇಳಿದಳು. ಭರತ 119 “ನಮ್ಮ ಹೆಣ್ಣು ಮಕ್ಕಳು ಹೆಚ್ಚು ಕಲಿಯುತ್ತಾರಾ? ಮೊದಲು ಮೂರನೇ ಕ್ಲಾಸಿನವರೆಗೆ ಓದಿದ್ದಳು. ಆ ಮೇಲೆ ಟೀಚರು ಮನೆಗೇ ಬಂದು ಇಂಗ್ಲಿಸು ಓದು, ಬರಹ ಎಲ್ಲ ಕಲಿಸಿದ್ದಾರೆ. ನಮ್ಮ ಹೆಣ್ಣು ಮಕ್ಕಳಿಗೆ ಅಷ್ಟು ಸಾಲದಾ?” ಉಮ್ಮಾಲಿ ವಿವರಣೆ ನೀಡಿದಳು. ಮನೆಯೊಳಗೆ ಹರಡಿಕೊಂಡಿದ್ದ ಸಮೃದ್ಧತೆಯನ್ನು ಕಂಡು ಜೊಹರಾ ಉಬ್ಬಿ ಹೋದಳು. ಹಾಜಿರಾಳ ಸೌಂದರ್ಯಕ್ಕೂ ಕೊರತೆ ಇರಲಿಲ್ಲ. ಕೆಲವು ದಿನಗಳಲ್ಲಿಯೇ ಮದುವೆ ನಿಶ್ಚಯವಾಯಿತು. ಕೆಲವರು ಮತ್ಸರದಿಂದ ಈ ಮದುವೆಯನ್ನು ತಪ್ಪಿಸಲು ಪ್ರಯತ್ನಿಸಿದ್ದೂ ಇದೆ. “ಅವರಿಗೇನಿದೆ? ನಿಮ್ಮ ಮಗಳನ್ನು ಆ ಹುಡುಗನಿಗೆ ಕೊಡುವುದೇ?” ಎಂದು ಮಮ್ಮೂಟಿಯೊಡನೆ ಹಿತೈಷಿಗಳಂತೆ ಗುಟ್ಟಾಗಿ ಕೇಳಿದವರೇ ಜೊಹರಾಳೊಡನೆ, “ಮಮ್ಮೂಟಿ ಹುಡುಗನಾಗಿದ್ದಾಗ ಅದ್ಯಾರದೊ ಮನೆಯಲ್ಲಿ ಊಳಿಗಕ್ಕಿದ್ದನಂತೆ! ಅಂತಹವನ ಮಗಳನ್ನು ಮೂಸಾ ಹಾಜಿಯವರ ಮೊಮ್ಮಗನಿಗೆ ತಂದು ಕೊಳ್ಳುವುದಾ?” ಎಂದು ಕೇಳಿ ಆಕೆಯನ್ನು ಅಲುಗಾಡಿಸಲು ಪ್ರಯತ್ನಿಸಿದ್ದರು. ಆದರೆ ಜೊಹರ ಮಾತ್ರ, “ನಮ್ಮ ತಾತ, ಮುತ್ತಾತಂದಿರ ಕಾಲದಲ್ಲಿ ಯಾರ್ಯಾರು ಹೇಗಿದ್ದರೊ ಯಾರಿಗೆ ಗೊತ್ತು? ಅದನ್ನೆಲ್ಲ ಕಟ್ಟಿಕೊಂಡು ಈಗೇನು ಮಾಡಲಿಕ್ಕಿದೆ” ಎಂದು ನಿಂತಲ್ಲೇ ಗಟ್ಟಿಯಾಗಿ ಕಾಲೂರಿದಳು. ಉಮ್ಮಾಲಿ ಮಾತ್ರ ಈ ಮದುವೆ ನಿಶ್ಚಯದಿಂದ ಏನೇನೂ ಸಂತಸಗೊಳ್ಳಲಿಲ್ಲ. “ನಮ್ಮ ಯೋಗ್ಯತೆಗೆ ತಕ್ಕ ಹುಡುಗ ಅದಲ್ಲವೇ ಅಲ್ಲ. ನನ್ನ ಮಗನಿಗೆ ಇದೊಂದು ಹುಚ್ಚು. ವಿದ್ಯಾವಂತ ಹುಡುಗ ಬೇಕೂಂತ. ನನ್ನ ಮೊಮ್ಮಗಳು ಅಲ್ಲಿಗೆ ಹೋಗಿ ಹೇಗಿರ್ತಾಳೊ” ಎಂದು ಹಾಜಿರಾಳ ಮುಂದೆಯೇ ಗೊಣಗಿಕೊಳ್ಳುತ್ತಿದ್ದಳು. ಮಮ್ಮೂಟಿ ಹಾಜ್ಯಾರರ ಮಗಳ ಮದುವೆ ಎಂದರೆ ಕೇಳಬೇಕೆ? ಚಪ್ಪರಕ್ಕೆ, ದೀಪಾಲಂಕಾರಗಳಿಗೆ ಎಂದೇ ಲಕ್ಷಗಟ್ಟಲೆ ಖರ್ಚು ಮಾಡಲಾಯಿತು. ಅಡಿಗೆಯವರನ್ನು ಕಣ್ಣಾನೂರಿನಿಂದ ಮತ್ತು ಹೂವಿನ ಅಲಂಕಾರ ಮಾಡುವವರನ್ನು ಬೆಂಗಳೂರಿನಿಂದಲೇ ಕರೆಸಲಾಯಿತು. ಬಟ್ಟೆ ಬರೆಗಳು ಮತ್ತು ಇನ್ನಿತರ ಅಲಂಕಾರದ ಸಾಮಾನುಗಳನ್ನು ದುಬಾಯಿಯಿಂದಲೇ ತರಿಸಲಾಯಿತು. ‘ಮಾಪ್ಪಿಳ ಪ್ಪಾಟು’ ಹಾಡುವ ಮಹಿಳೆಯರ ತಂಡವನ್ನು ಕಲ್ಲಿಕೋಟೆಯಿಂದ ಕರೆಸಲಾಯಿತು. ನಿಖಾಹ್ ಆದೊಡನೆ ಅಳಿಯನಿಗೆ ಮೊದಲ ಬಹುಮಾನ ಕಾರಿನ ಕೀ! 120 ಸುಳಿ ಈ ಎಲ್ಲ ಸಮಾರಂಭದ ಏರ್ಪಾಟಿನಲ್ಲಿ ಮುಖ್ಯ ಪಾತ್ರ ವಹಿಸಿ ಓಡಾಡಿದವನು ವಾಸು. ಮಮ್ಮೂಟಿಯ ತಮ್ಮನ ಸ್ಥಾನ ವಾಸುವಿನದು. ಹೆಂಗಸರ ಭಾಗದಲ್ಲಿ ಕಲ್ಯಾಣಿ ಮತ್ತು ಫರೀದಾ ಅತಿಥಿಗಳ ಉಸ್ತುವಾರಿ ನೊಡಿಕೊಳ್ಳುತ್ತಿದ್ದರು. ಫರೀದಾ ಅದು ತನ್ನ ಮಗಳ ಮದುವೆಯೆಂಬಷ್ಟು ಮುತುವರ್ಜಿಯಿಂದ ಓಡಾಡಿದಳು. ರುಖಿಯಾ ಮಾತ್ರ ಈಗಲೂ ಸವತಿಯನ್ನು ಸ್ವೀಕರಿಸಲು ಸಿದ್ದಳಾಗಲಿಲ್ಲ. ಆಕೆ, ಫರೀದಾಳಲ್ಲಿ ಗಂಡನ ಪ್ರೀತಿ ಕಡಿಮೆಯಾಗಲು ಕಂಜಮ್ಮನ ಬಳಿಯಿಂದ ತಾಯಿತ ತಂದು ಗಂಡನ ತಲೆದಿಂಬಿನಡಿಯಲ್ಲಿ ಇಡುತ್ತಿದ್ದಳು. ಮತ್ತು ಚಹಾ ಮತ್ತು ಇತರ ಪಾನೀಯಗಳಲ್ಲಿ ಕಂಜಮ್ಮ ಕಳಿಸಿದ ಪುಡಿ ಬೆರೆಸಿ ಮಮ್ಮೂಟಿಗೆ ಕುಡಿಸುತ್ತಿದ್ದಳು. ಆದರೆ ಅವನ ಒಲವು ಫರೀದಾಳೆಡೆಗೆ ಹರಿಯುವುದನ್ನು ಕಂಡು ಜೀರ್ಣಿಸಿಕೊಳ್ಳಲಾಗದೆ ಒದ್ದಾಡುತ್ತಿದ್ದಳು. ಮಗಳ ಮದುವೆಯ ದಿನ ಕೂಡಾ ಕಾಲು ಕೆದರಿ ಸವತಿಯೊಡನೆ ಜಗಳ ಮಾಡಿಯೇ ಮಾಡಿದಳು. ಹವಾ ನಿಯಂತ್ರಿತ ಕೊಠಡಿಯಲ್ಲಿ ಮಲ್ಲಿಗೆ ಹೂವಿನ ಹಾರಗಳಿಂದ ಅಲಂಕೃತವಾದ ಹೂ ಮಂಚದಲ್ಲಿ ತಲೆಯಿಂದ ಕಾಲಿನವರೆಗೆ ಬಂಗಾರದೊಡವೆ ಧರಿಸಿ ಒಡಲ ತುಂಬಾ ಜರಿಯ ಹೂವಿನ ಸೀರೆಯುಟ್ಟು ಕುಳಿತ ಹಾಜಿರಾಳನ್ನು ಮೊದಲ ಬಾರಿಗೆ ನಿಯಾಜ್ ನೋಡಿದನು. ಕೋಣೆಯಲ್ಲಿ ಹರಡಿದ್ದ ಸುಗಂಧ ದ್ರವ್ಯಗಳು ಮತ್ತು ಮಲ್ಲಿಗೆ ಹೂವಿನ ಮತ್ತು ಬರಿಸುವ ಪರಿಮಳ ಆತನನ್ನು ಉಸಿರುಗಟ್ಟಿಸುತ್ತಿತ್ತು. ಆತ ಹಾಜಿರಾಳ ಬಳಿ ಬಂದು ಆಕೆಯ ಮುಖವನ್ನು ಮೇಲೆತ್ತಿದನು. ಕಣ್ಣುಗಳು ಪರಸ್ಪರ ಸಂಭಾಷಣೆ ನಡೆಸಿದುವು. ಪ್ರಥಮ ನೋಟವಂತೂ ಹಿತಕರವಾಗಿಯೇ ಇತ್ತು. ಆ ಗಳಿಗೆಯಲ್ಲಂತೂ ಇಬ್ಬರಿಗೂ ಸ್ವರ್ಗಕ್ಕೆ ಮೂರೇ ಗೇಣು ಉಳಿದಂತಾಗಿತ್ತು. ಮರುದಿನ ಮದುಮಗ ತಂದ ಸೀರೆಗಳನ್ನು ನೋಡಿದ ಉಮ್ಮಾಲಿ ಮುಖ ಸಿಂಡರಿಸಿಕೊಂಡು ಕೋಣೆಯಿಂದ ಹೊರ ನಡೆದಳು. ಆತ ತಂದ ಚಿನ್ನದೊಡವೆಗಳೂ ತೀರಾ ಸಾಮಾನ್ಯವಾದುದಾಗಿದ್ದುವು. ಉಮ್ಮಾಲಿ ಮಮ್ಮೂಟಿಯನ್ನು ತನ್ನ ಕೋಣೆಗೆ ಕರೆಸಿ ತನ್ನ ಅತೃಪ್ತಿಯನ್ನು ಹೊರಗೆಡಹಿದಳು. “ನಾನಾದಿನವೇ ನಿನ್ನೊಡನಂದಿದ್ದೆ, ನಮ್ಮ ಅಂತಸ್ತಿಗೆ ತಕ್ಕ ವರ ಇದಲ್ಲವೆಂದು. ನನ್ನ ಮಾತು ನಿಮಗೆಲ್ಲ ಯಾವ ಲೆಕ್ಕ? ಅವನು ತಂದದ್ದು ಬರೇ ಹತ್ತು ಸೀರೆ, ಹಳೆಯ ಕಾಲದ ಒಂದೆರಡು ಒಡವೆಗಳು. ಈ ಭಾಗ್ಯಕ್ಕೆ ಆ ಹುಡುಗ ಬೇಕಾಗಿತ್ತೇ? ನಮ್ಮ ಹುಡುಗಿಯನ್ನು ಹೊಂಡಕ್ಕೆ ಹಾಕಿದೆಯಲ್ಲ?” ಭರತ 121 “ಉಮ್ಮಾ, ನಿಮಗೀಗ ಏನು ಬೇಕಾಗಿದೆ?” ಶಾಂತನಾಗಿಯೇ ಕೇಳಿದನು ಮಮ್ಮೂಟಿ. “ನಮ್ಮ ಕುಟುಂಬದವರಿಗೆಲ್ಲ ಸೀರೆಯಾಗಬೇಕು. ಹತ್ತಿಪ್ಪತ್ತು ಜನ ಕೆಲಸದವರಿಗೂ ಸೀರೆಗಳಾಗಬೇಕು” “ಏನೇನು ಬೇಕೆಂಬುದನ್ನು ನನಗೆ ತಿಳಿಸಿ, ಅವನ್ನೆಲ್ಲ ನಾನು ತರಿಸಿಕೊಡುತ್ತೇನೆ” ಎಂದು ತಾಯಿಯ ಮಾತನ್ನು ನಡುವೆಯೇ ತುಂಡರಿಸಿ ಹೊರ ನಡೆದನು. “ಎಲ್ಲವನ್ನೂ ನೀನೇ ತರುವಂತಿದ್ದರೆ ಮಗಳಿಗೆ ಮದುವೆಯನ್ನಾದರೂ ಯಾಕೆ ಮಾಡಬೇಕಾಗಿತ್ತೊ?” ಎಂದು ಗೊಣಗಿಕೊಂಡು ಹತಾಶಳಾಗಿ ಮಲಗಿಕೊಂಡಳು ಉಮ್ಮಾಲಿ. “ಮಗಳ ಮದುವೆ ನೋಡಿ ಸಂತೋಷ ಪಡುವಾ ಎಂದರೆ ಹೋಗಿ ಹೋಗಿ ಎಂತಹ ಭಿಕಾರಿ ಅಳಿಯನನ್ನು ಗಂಟು ಹಾಕಿಕೊಂಡರಲ್ಲಾ?” ಎಂದು ರುಖಿಯಾಳೂ ಅತ್ತೆಯೆದೆಯ ಉರಿಯುವ ಬೆಂಕಿಗೆ ಇನ್ನಷ್ಟು ತುಪ್ಪ ಹೊಯ್ದಳು. ನಿಯಾಜ್‍ನ ಪ್ರಥಮ ರಾತ್ರಿಯ ತೃಪ್ತಿ, ಸಂತೋಷ, ಮನಃಶ್ಯಾಂತಿ ಎಲ್ಲವೂ ಬಹುಬೇಗನೆ ಕದಡುವ ಪ್ರಸಂಗವೂ ಬಂತು. ಮೊದಲ ಬಾರಿಗೆ ಗಂಡನ ಮನೆ ಪ್ರವೇಶಿಸಿದ ಹಾಜಿರಾಗೆ ತೀವ್ರ ನಿರಾಶೆ ಕಾದಿತ್ತು. ತನ್ನ ಮನೆಯಲ್ಲಿದ್ದ ಯಾವ ಆಧುನಿಕ ಸೌಕರ್ಯಗಳೂ ಆ ಹಳೆಯ ಮನೆಯಲ್ಲಿರಲಿಲ್ಲ. ಸೀರೆಗಳನ್ನು ನೋಡಿ ಮೊದಲೇ ನಿರಾಸೆಗೊಂಡಿದ್ದ ಮನ ಗಂಡನ ಮನೆಯನ್ನು ನೋಡಿ ಪಾತಾಳಕ್ಕೆ ಕುಸಿಯಿತು. ಆ ರಾತ್ರಿ ಆಕೆ ಗಂಡನೊಡನೆ, “ಇದೆಂತಹ ಮನೆ? ಮಲಗುವ ಕೋಣೆಯೊಳಗೆ ಒಂದು ಬಾತ್ ರೂಂ ಕೂಡಾ ಇಲ್ಲವಲ್ಲ?'' ಎಂದು ಕೇಳಿದಳು. ``ನಮ್ಮದು ಹಿಂದಿನ ಕಾಲದ ಮನೆ. ಬೆಡ್‍ರೂಮಿಗೊಂದು ಬಾತ್ ರೂಮಿನ ಫ್ಯಾಶನ್ ಸುರುವಾದದ್ದು ಇತ್ತೀಚೆಗಲ್ಲವಾ?” ಎಂದು ಕೇಳಿದನು ನಿಯಾಜ್. “ಇಂತಹ ಸೆಕೆಯಲ್ಲಿ ಮಲಗಿ ನಿದ್ರಿಸುವುದು ಹೇಗೆ? ಏರ್ ಕಂಡಿಶನ್ ಇಲ್ಲದೆ ನನಗೆ ನಿದ್ದೆ ಬರುವುದಿಲ್ಲ” ಹಾವು ಬಾಲವಲ್ಲಾಡಿಸತೊಡಗಿತ್ತು! “ಅವೆಲ್ಲ ನಮ್ಮಂತಹವರಿಗಲ್ಲ. ನಿದ್ರೆ ಬಂದರೆ ಬೀದಿಯ ಬದಿಯಲ್ಲೂ ಮಲಗಿ ನಿದ್ರಿಸುತ್ತಾರೆ ಜನರು. ಸುಮ್ಮನೆ ಮಲಗು” ಕೊಂಚ ಒರಟಾಗಿಯೇ ನುಡಿದನು ನಿಯಾಜ್. ಆದರೆ ಆ ರಾತ್ರಿ ಬೆಳಗಾಗುವುದರೊಳಗೆ ನಿದ್ರೆಯಿಲ್ಲದೆ ಹೊರಳಾಡಿದ 122 ಸುಳಿ ಹಾಜಿರಾಳ ಕಣ್ಣುಗಳು ಕೆಂಪಗಾದುವು. “ಮನೆಗೊಮ್ಮೆ ಫೋನ್ ಮಾಡುವಾ ಎಂದರೆ ನಿಮ್ಮ ಮನೆಯಲ್ಲೊಂದು ಫೋನ್ ಕೂಡಾ ಇಲ್ಲವಲ್ಲ? ಗೊಣಗಿದಳಾಕೆ. “ನಮಗೆ ಫೋನಿನ ಅಗತ್ಯ ಕಾಣಲಿಲ್ಲಮ್ಮ. ಹಾಗಾಗಿ ಫೋನ್ ಇಡಲಿಲ್ಲ” ಚೋಹರಾ ಸೊಸೆಯೊಡನಂದಳು. ಆಕೆಯೊಡನೆ ಆಕೆಯ ಕೆಲಸಕ್ಕಾಗಿ ಬಂದ ಆಚುಮ್ಮ “ಪಾಪ, ನಮ್ಮ ಮಗು ರಾತ್ರಿಯೆಲ್ಲ ನಿದ್ದೆ ಮಾಡಲೇ ಇಲ್ಲವೇನೂ. ಕಣ್ಣೆಲ್ಲ ಕೆಂಪಗಿದೆ” ಎಂದಳು. “ಹಂಡೆಯಲ್ಲಿ ಬಿಸಿ ನೀರಿದೆ. ಹೋಗಿ ಚೆನ್ನಾಗಿ ಸ್ನಾನ ಮಾಡು. ತಲೆ ಭಾರವೆಲ್ಲ ಕಮ್ಮಿಯಾದೀತು” ಎಂದು ಜೋಹರಾಳೆಂದಾಗ ಆಚುಮ್ಮ, “ಅವಳು ಹಂಡೆಯ ನೀರಿನಲ್ಲಿ ಸ್ನಾನ ಮಾಡದೆ ಯಾವ ಕಾಲವಾಯಿತೊ. ಬಾತ್ ರೂಮಿನಲ್ಲಿ ಟಬ್ಬಿಗೆ ಬಿಸಿ ನೀರು ಬಿಟ್ಟು ಅದರಲ್ಲೇ ಸ್ನಾನ ಮಾಡುವ ಅಭ್ಯಾಸ ಅವಳಿಗೆ!” ಎಂದಳು. “ವಾತರೋಗಿಗಳನ್ನು ಅಂತಹ ದೋಣಿಯಲ್ಲಿ ಮಲಗಿಸಿ ‘ನವರಕ್ಕಿಳಿ' ಅಂತ ಯಾವುದೊ ವೈದ್ಯ ಮಾಡುತ್ತಾರೆಂದು ಕೇಳಿದ್ದೆ. ಅಂತಹ ಅಭ್ಯಾಸವೆಲ್ಲ ಒಳ್ಳೆಯದಲ್ಲ” ಎನ್ನುತ್ತಾ ಜೊಹರಾ ಸುಮ್ಮನಾದಳು. ಮರುದಿನ ನಿಯಾಜ್‍ನ ಅತ್ತೆ ಮಾವಂದಿರಿಗೆ ಔತಣ. ಮಮ್ಮೂಟಿ ತನ್ನ ಇಬ್ಬರು ಹೆಂಡತಿಯರನ್ನೂ ಕರೆದುಕೊಂಡು ಬಂದಿದ್ದನು. ಎಷ್ಟು ಒತ್ತಾಯ ಮಾಡಿದರೂ ಉಮ್ಮಾಲಿ ಹೊರಡಲೇ ಇಲ್ಲ. ಔತಣದ ಬಳಿಕ ಹಾಜಿರಾ ತಂದೆತಾಯಿಗಳೊಡನೆ ತವರಿಗೆ ತೆರಳಿದಳು. ಮತ್ತೂ ಒಂದೆರಡು ಬಾರಿ ಆಕೆ ಬಂದು ಕೆಲವು ದಿನಗಳ ಮಟ್ಟಿಗೆ ಗಂಡನ ಮನೆಯಲ್ಲಿದ್ದು ಹೋದಳು. ಆದರೆ ಆಗೆಲ್ಲ ಆಕೆ ಮಾಳಿಗೆಯಿಂದ ಕೆಳಗಿಳಿಯಲೇ ಇಲ್ಲ. ಜೊಹರಳ ಹಿರಿಯ ಸೊಸೆ ಮತ್ತು ಹೆಣ್ಣು ಮಕ್ಕಳೊಡನೆ ಬೆರೆಯಟಗ ಇಲ್ಲ. ಒಂದು ರೀತಿಯ ಮೇಲರಿಮೆಯಿಂದ ಎಲ್ಲರಿಂದಲೂ ದೂರವೇ ಉಳಿದಳು. ಗಂಡನ ಮನೆಯಲ್ಲಿರುವ ವರೆಗೆ ಬೆಂಕಿಯ ಮೇಲೆ ಕುಳಿತಂತೆ ಚಡಪಡಿಸಿದಳು. ಬಳಿಕ ತವರು ಮನೆಗೆ ಹೋದವಳು ಗಂಡನೊಡನೆ ಅಂದೇ ಬಿಟ್ಟಳು. “ದಯವಿಟ್ಟು ಇನ್ನು ಮುಂದೆ ನನ್ನನ್ನು ನಿಮ್ಮ ಮನೆಗೆ ಕರೆಯಬೇಡಿ. ರಾತ್ರಿಯೆಲ್ಲ ನಿದ್ದೆಯಿಲ್ಲದೆ ಹೊರಳಾಡಿ ಬೆಳಗಾಗಿಸಲು ನನ್ನಿಂದ ಸಾಧ್ಯವಿಲ್ಲ. ಹಂಡೆಯ ನೀರಿನಲ್ಲಿ ಸ್ನಾನ ಮಾಡಿಯೂ ನನಗೆ ಅಭ್ಯಾಸವಿಲ್ಲ. ನಾನಿನ್ನು ಮುಂದೆ ಇಲ್ಲಿಯೇ ಇರುತ್ತೇನೆ.!” ಭರತ 123 ನಿಯಾಜ್‍ನ ಹೃದಯದ ಹಿಂಭಾಗದಲ್ಲೆಲ್ಲೊ ಬೆಂಕಿಯ ಕಣವೊಂದು ತೆಳ್ಳಗೆ ಹೊಗೆಯಾಡತೊಡಗಿತು. “ನೋಡು ಹಾಜಿರ, ಮೊದಲೇ ಈ ಮದುವೆ ನನಗಿಷ್ಟವಿರಲಿಲ್ಲ. ಈಗಂತೂ ಮದುವೆಯಾಗಿದೆ. ನಾವು ಕೆಲವು ದಿನಗಳನ್ನು ಜೊತೆಯಾಗಿ ಸಂತೋಷದಿಂದ ಕಳೆದಿದ್ದೇವೆ. ನಾವು ಹೇಗೊ ಒಂದು ವಿಧದಿಂದ ಹೊಂದಿಕಂಡು ಹೋಗಬಹುದೂಂತ ಅಂದುಕೊಂಡಿದ್ದೇನೆ. ಅದಕ್ಕೆ ನಿನ್ನ ಸಹಕಾರ ಕೂಡಾ ಮುಖ್ಯ. ಆದರೆ ನೀನು ಹೀಗೆಲ್ಲಾ ಹಟ ಮಾಡಿದರೆ ಪರಿಣಾಮ ನೆಟ್ಟಗಾಗದು” ಎಂದನು. “ಏನ್ಮಾಡ್ತೀರಿ?” “ನನ್ನ ಸಹನೆ ಪರೀಕ್ಷಿಸಬೇಡ. ಈಗ ಕೆಲವು ದಿನ ಬೇಕಾದರೆ ಇಲ್ಲಿರು. ಆದರೆ ನಾನು ಕರೆದಾಗ ನೀನು ನನ್ನ ಮನೆಗೆ ಬರಲೇ ಬೇಕು!” ಎನ್ನುತ್ತಾ ಹೊರಟು ಹೋದನು. ಮುಂದಿನ ವಾರ ನಿಯಾಜ್ ಮಾವನ ಮನೆಗೆ ಹೋದನು. “ಮಕ್ಕಳಿರುವ ಮನೆ. ಹೊಸ ಅಳಿಯ ಬರಿಗೈಲಿ ಹೋಗುವುದು ಚೆನ್ನಾಗಿರುವುದಿಲ್ಲ” ಎಂದು ತಾಯಿ ಸೂಚನೆ ನೀಡಿದಾಗ ಮಾರುಕಟ್ಟೆಯಿಂದ ಹೂವು ಮತ್ತು ಸಿಹಿ ತಿಂಡಿಗಳನ್ನು ಕಟ್ಟಿಸಿಕೊಂಡು ಹೋದನು. ಅವನ್ನು ಒಳಗೆ ತಂದಾಗ ರುಖಿಯಾಳ ಮುಖ ಚಿಕ್ಕದಾಯಿತು. ಉಮ್ಮಾಲಿ ಬಾಯಿ ಬಿಟ್ಟು ಅಂದೇ ಬಿಟ್ಟಳು, “ದೊಡ್ಡ ಮನೆಯ ಅಳಿಯಂದಿರು ಸಾಮಾನು ತರುವುದು ಬುಟ್ಟಿಗಳಲ್ಲಿ. ಈ ಮೂರು ಕಾಸಿನ ಸಾಮಾನು ಯಾರಿಗೆ ಬೇಕಾಗಿದೆ? ಹೊಸ ಅಳಿಯ ತಂದದ್ದೂಂತ ನೆರೆಕರೆಯವರಿಗೆ ಹಂಚಬೇಡವಾ?” “ಹೋಗಿ ಹೋಗಿ ಒಳ್ಳೆಯ ಅಳಿಯನನ್ನೇ ಗಂಟು ಹಾಕಿಕೊಂಡರು ಇವರು!” ರುಖಿಯಾ ವ್ಯಂಗ್ಯವಾಗಿ ನುಡಿದಳು. ಒಳ ಬಂದ ಮಮ್ಮೂಟಿ ಅಳಿಯ ತಂದ ಸಾಮಾನುಗಳನ್ನು ನೋಡಿದನು. ಕೂಡಲೇ ತನ್ನ ಡ್ರೈವರನ್ನು ಕರೆದಕೊಂಡು ಬುಟ್ಟಿ ಹಣ್ಣುಗಳನ್ನೂ ಕಿಲೊಗಟ್ಟಲೆ ಸಿಹಿ ತಿಂಡಿಗಳನ್ನೂ ಪೇಟೆಯಿಂದ ತರಿಸಿ ತಾಯಿಯ ಮುಂದಿಟ್ಟು, “ಇದನ್ನು ಅಳಿಯ ತಂದದ್ದೂಂತ ಎಲ್ಲರಿಗೂ ಹಂಚಿಬಿಡಿ. ಇನ್ನು ಮುಂದೆ ಅಳಿಯನಿಂದ ಏನನ್ನೂ ನಿರೀಕ್ಷಿಸಬಾರದು. ಏನು ಬೇಕಾದರೂ ನನ್ನೊಡನೆ ಹೇಳಿ. ಎಷ್ಟು ತಂದು ಸುರಿದರೂ ನಿಮ್ಮ ಹುಟ್ಟು ಗುಣ ಬಿಡುವುದಿಲ್ಲ. ಅಲ್ಲವಾ?” ಎಂದು ತಾಯಿ ಮತ್ತು ಹೆಂಡತಿಯ ಬಾಯಿ ಮುಚ್ಚಿಸಿದನು. 124 ಸುಳಿ ತಾಯಿ ಮತ್ತು ಅಜ್ಜಿಯ ಮಾತುಗಳನ್ನೆಲ್ಲ ಕೇಳಿಸಿಕೊಂಡ ಹಾಜಿರಾ ಮುಖ ಊದಿಸಿಕೊಂಡೇ ಕೋಣೆಗೆ ಹೋದಳು. ಹಲವು ದಿನಗಳ ಅಗಲಿಕೆ ಮನದಲ್ಲಿ ಕಾತರದ ಅಲೆಗಳನ್ನೆಬ್ಬಿಸುತ್ತಿದ್ದರೂ ಸ್ವಪ್ರತಿಷ್ಟೆ ಮತ್ತು ಮೇಲರಿಮೆ ಆಕೆಯ ಕಣ್ಣ ಮುಂದಿನ ಪರದೆಯಾಗಿ ಬಿಟ್ಟಿತು. ಅದರಾಚೆಗಿನ ದೃಶ್ಯ, ತನ್ನ ಬದುಕಿನ ಭವಿಷ್ಯ ಆಕೆಗೆ ಕಾಣಿಸಲೇ ಇಲ್ಲ. “ನಾನು ಬಂದು ಬಹಳ ಹೊತ್ತಾಯಿತಲ್ಲ? ಯಾಕೆ ಈವರೆಗೆ ಕೋಣೆಗೆ ಬರಲಿಲ್ಲ?” ಎಂದು ನಗುತ್ತಾ ಆಕೆಯ ಬಳಿ ಬಂದ ನಿಯಾಜ್ ಆಕೆಯನ್ನು ಬಿಗದಪ್ಪಿ ಚುಂಬನದ ಮಳೆಗರೆಯತೊಡಗಿದನು. ಸ್ವಲ್ಪ ಹೊತ್ತು ಆಕೆಯೂ ಮೈ ಮರೆತಳು. ಬಳಿಕ ಎಚ್ಚರಗೊಂಡವಳಂತೆ ಮುಖ ಮುದುಡಿಸಿ ಆತನಿಂದ ದೂರ ಸರಿದು ನಿಂತಳು. ಆತನು ಉತ್ಕಂಠೆಯಿಂದ, “ಯಾಕೆ? ಏನಾಯಿತು?” ಎಂದು ಕೇಳಿದನು. “ಇನ್ನೇನು? ನಿಮಗೆ ಊರಿನ ಪದ್ಧತಿಗಳೊಂದೂ ಗೊತ್ತಿಲ್ಲ, ಏನಿಲ್ಲ! ನೀವು ತಂದ ಸಾಮಾನುಗಳನ್ನು ನೆರೆಕರೆಯವರಿಗೆ ಹಂಚುವುದು ಬೇಡವಾ?” ಎಂದು ಕೇಳಿಯೇ ಬಿಟ್ಟಳು. “ಅಂತಹ ಪದ್ಧತಿಗಳನ್ನೆಲ್ಲ ಬಿಡಬೇಕು ಹಾಜಿರಾ. ಇಷ್ಟಕ್ಕೂ ಹಾಗೆಲ್ಲ ಖರ್ಚು ಮಾಡಲು ನಾವೇನೂ ಅಂತಹ ಶ್ರೀಮಂತರೂ ಅಲ್ಲ. ನಿನ್ನಪ್ಪನಂತೆ ಸಂಪಾದಿಸುವುದನ್ನು ನಾನಿಷ್ಟ ಪಡುವುದೂ ಇಲ್ಲ” ಸಹನೆಯಿಂದಲೇ ನುಡಿದನು ನಿಯಾಜ್. “ನನ್ನಪ್ಪನ ವಿಷಯ ಎತ್ತಬೇಡಿ” ಕೋಪದಿಂದ ನುಡಿದಳಾಕೆ. “ನನ್ನಪ್ಪನ ಹಣವನ್ನು ನೋಡಿ ತಾನೇ ನೀವು ನನ್ನನ್ನು ಮದುವೆಯದದ್ದು?” ಅಜ್ಜಿಯ ಮಾತುಗಳು ಮೊಮ್ಮಗಳ ಬಾಯಲ್ಲಿ ಬಂದವು. “ಹಾಜಿರಾ, ಮುಚ್ಚು ಬಾಯಿ!” ಆತನ ಸಹನೆಯ ಕಟ್ಟೆಯೊಡೆಯಿತು. “ನಿನ್ನಪ್ಪನ ಹಣಕ್ಕೆ ಬಾಯಿ ಬಿಡುವವನು ನಾನೆಂದುಕೊಂಡೆಯಾ? ನಿನ್ನ ಅಬ್ಬಾನೇ ಕೇಳಿಕೊಂಡು ಬಂದದ್ದಕ್ಕೆ ಒಪ್ಪಿಕೊಂಡದ್ದು ತಿಳಿಯಿತೇ? ಆದೂ ನನ್ನ ಉಮ್ಮಾನ ಒತ್ತಾಯದಿಂದ. ಇಲ್ಲವಾದರೆ ಯಾರಿಗೆ ಬೇಕಾಗಿತ್ತು ನಿಮ್ಮ ಸಂಬಂಧ?” ತಿರಸ್ಕಾರದಿಂದ ನುಡಿದನಾತ. “ಹೌದು ನಿಮ್ಮ ಸಂಬಂಧ ಬೆಳೆಸಲು ನನ್ನ ತಾಯಿ ಮತ್ತು ಅಜ್ಜಿಯರಿಗೂ ಇಷ್ಟವಿರಲಿಲ್ಲ. ನಿಮ್ಮ ಮನೆ ನೋಡಿದರೇ ಸಾಕು, ವಾಂತಿ ಬರುತ್ತದೆ! ನನ್ನ ಅಬ್ಬಾಗೆ ನಿಮ್ಮ ಮನೆ ಹೇಗೆ ಇಷ್ಟವಾಯಿತೊ ನನಗೆ ಇವತ್ತಿಗೂ ಅರ್ಥವಾಗುತ್ತಿಲ್ಲ!” ಭರತ 125 ಮುಳ್ಳಿಗೆ ಮುಳ್ಳೇ ಉತ್ತರ. ಆತನ ಮುಖ ಕಳಹೀನವಾಗಿ ಕಪ್ಪಿಟ್ಟಿತು. ಹುಬ್ಬುಗಳು ಗಂಟಕ್ಕಿದುವು. ಈ ಮಾತುಗಳು ತನ್ನ ಹೆಂಡತಿಯ ಬಾಯಿಯಿಂದ ಬಂತೇ ಎಂಬ ಅಪನಂಬಿಕೆಯಿಂದ ಕ್ಷಣಕಾಲ ಆಕೆಯ ಮುಖವನ್ನೇ ದಿಟ್ಟಿಸಿ ಬಳಿಕ, “ಓ... ಹೀಗೇನು?” ಎನ್ನುತ್ತಾ ಮಂಚದ ಮೇಲೆ ದಿಂಬಿಗೊರಗಿ ಕುಳಿತು ಯೋಚನಾ ಮಗ್ನನಾದನು. ಹೆಂಡತಿಯ ಬಾಯಿಯಿಂದ ಬಂದ ಮಾತುಗಳಿಂದ ಆತನು ಅವಮಾನದಿಂದ ಕುಗ್ಗಿ ಹೋದನು. ತನ್ನ ತಾಯಿಯೊಡನೆ ತಾನಾದಿನವೇ ಹೇಳಿದ ಮಾತುಗಳೆಲ್ಲವೂ ನಿಜವಾಗುತ್ತಾ ಇವೆ. ಹಣದ ಕೊಳಚೆ ಗುಂಡಿಯಲ್ಲಿ ಬಿದ್ದ ಈ ಜನರ ಕಣ್ಣು, ಕಿವಿ, ಬಾಯಿ ಮೂಗುಗಳಲ್ಲೂ ಆ ಕೊಳಚೆ ಮೆತ್ತಿಕೊಂಡು ತೀರಾ ಉನ್ಮತ್ತರಾಗಿ ಕುರುಡರಾಗಿದ್ದಾರೆ! ಈ ಭರತ ಇಳಿಯದೆ ಏನೂ ಮಾಡುವ ಹಾಗಿಲ್ಲ. ತನ್ನ ತಾಯಿ ಮತ್ತು ಈಕೆಯ ತಂದೆ ತನ್ನ ಬದುಕಿಗೆ ಕೊಳ್ಳಿ ಇಟ್ಟರು. ವಿದ್ಯೆ ಮತ್ತು ಸಂಸ್ಕೃತಿ ಇಲ್ಲದೆ ಕೇವಲ ಹಣದ ದಾಸರಾದ ಮನುಷ್ಯರು ಹೇಗಾಡಬಹುದು ಎಂಬುದನ್ನು ಕಣ್ಣಾರೆ ಕಂಡಂತಾಯಿತು. ಈ ಕೊಳಚೆ ಗುಂಡಿಯಲ್ಲಿ ಬಿದ್ದು ತಾನೂ ಒದ್ದಾಡುವಂತಾಯಿತು. ಈ ಬಲೆಯಿಂದ ಹೊರ ಬರಲು ಸಾಧ್ಯವೇ? ಹಾಜಿರಾ ಯಾವಾಗಲೊ ಬಾಗಿಲು ತೆರೆದು ಹೊರಟು ಹೋಗಿದ್ದಳು. ಊಟಕ್ಕೆ ಕರೆ ಬಂದಾಗ ನಿಯಾಜ್ ಎದ್ದು ಮುಖ ತೊಳೆದು ಕೆಳಗಿಳಿದನು. ಎಂದಿನಂತೆಯೇ ಹೊಸ ಅಳಿಯನಿಗೆ ಕೋಳಿ ಬಿರಿಯಾಣಿ, ಕೋಳಿ ಮಸಾಲೆ, ಸಿಹಿ ತಿಂಡಿಗಳು, ಹಣ್ಣುಗಳು ಎಲ್ಲವೂ ಇದ್ದುವು. ಮಮ್ಮೂಟಿಗೆ ಅಳಿಯನೆಂದರೆ ಬಹಳ ಮೆಚ್ಚುಗೆ. ಆತನ ಪಾಲಿಗೆ ಈ ಅಳಿಯ ತನಗೆ ದೊರೆತ ಅಪೂರ್ವ ನಿಧಿ. ವಿದ್ಯಾವಂತ, ಬುದ್ಧಿವಂತ, ಸುಂದರನಾದ, ಸರಕಾರಿ ಅಧಿಕಾರಿಯಾದ, ದೊಡ್ಡ ಮನೆತನದ ಈ ಹುಡುಗ ತನ್ನ ಕಿರೀಟದ ಇನ್ನೊಂದು ವಜ್ರ ಎಂಬುದು ಆತನ ನಂಬಿಕೆ. “ಕೆಲಸವೆಲ್ಲ ಹೇಗಿದೆ? ಮನೆಯಲ್ಲಿ ಎಲ್ಲರೂ ಆರೋಗ್ಯವೇ?” ಎಂದು ಆತ್ಮೀಯತೆಯಿಂದ ಅಳಿಯನನ್ನು ಮಾತನಾಡಿಸಿದನು. ಅಳಿಯನ ಜೊತೆಯಲ್ಲಿ ಕುಳಿತು ಊಟ ಮಾಡಲು ನಾಲ್ಕೈದು ಮೌಲವಿಗಳೂ ಮಮ್ಮೂಟಿಯ ಕೆಲವು ಸ್ನೇಹಿತರೂ ಇದ್ದೇ ಇದ್ದರು. ನಿಯಾಜ್‍ಗೆ ಈ ಊಟ ಗಂಟಲಲ್ಲಿಳಿಯುವುದೆ ಕಷ್ಟವಾಯಿತು. ಈ ಚೌಕಟ್ಟಿಗೆ ಹೊಂದಿಕೆಯಾಗದಂತಹ ಚಿತ್ರ ತನ್ನದು. ಊಟವಾದ ಬಳಿಕ ಆತನು ಮಾಳಿಗೆ ಹತ್ತಿ ಕೋಣೆಗೆ ಹೋಗಿ 126 ಸುಳಿ ಮಲಗಿದನು. ಬಹಳ ಹೊತ್ತಿನ ಬಳಿಕ ಹಾಜಿರಾ ಕೂಡಾ ಕೋಣೆಗೆ ಹೋಗಿ ಮಂಚದ ಒಂದು ಬದಿಯಲ್ಲಿ ಮುದುಡಿ ಮಲಗಿದಳು. ನಿಯಜ್ ನಿದ್ದೆ ಬಂದಂತೆ ನಟಿಸಿದನು. ಆದರೆ ಪ್ರಕೃತಿಗೆ ತನ್ನದೇ ಆದ ಕೌಶಲವಿರುತ್ತದಲ್ಲ? ಹೆಣ್ಣಿನ ದೇಹಸುಖವನ್ನು ಸವಿದ ನಿಯಾಜ್‍ಗೆ ಅದನ್ನು ಸುಲಭದಲ್ಲಿ ಮರೆಯಲಾಗಲಿಲ್ಲ. ಹರೆಯದ ಹೆಣ್ಣು ಮೈತುಂಬಿ ಪಕ್ಕದಲ್ಲಿ ಮಲಗಿದ್ದಾಗ ಅದನ್ನು ಸವಿಯದೇ ಇರುವಂತಹ ಮೂರ್ಖನೂ ಅವನಾಗಿರಲಿಲ್ಲ. ಈವರೆಗೆ ಯಾವುದೆ ಅಡ್ಡ ಹಾದಿ ತುಳಿದಿರದಿದ್ದ ಆತನಿಗೆ ಈಗ ಆಕೆಯ ದೇಹದ ಮೇಲಿನ ತನ್ನ ಪ್ರಭುತ್ವವನ್ನು ಸಾಬೀತು ಪಡಿಸಬೇಕೆಂಬ ಆಕಾಂಕ್ಷೆ ಪ್ರಬಲವಾಯಿತು. ಆಕೆ ತನಗೆ ಮಾಡಿದ ಅವಮಾನದ ಪ್ರತೀಕಾರವೆಂಬಂತೆ ಆತನು ಆಕೆಯನ್ನು ಬಿಗಿದಪ್ಪಿಕೊಂಡನು. ಆಕೆ ಕೊಸರಾಡಿದಂತೆ ಆತನ ಹಿಡಿತ ಇನ್ನಷ್ಟು ಬಿಗಿಯಾಯಿತು. ಆಕೆಯ ಕಿವಿಯಲ್ಲಾತ ಪಿಸುಗುಟ್ಟಿದನು. “ನಿನ್ನ ತಂದೆ ನಿನ್ನನ್ನು ನನಗೆ ನೂರಾ ಐದು ರೂಪಾಯಿಗಳಿಗೆ ಬದಲಾಗಿ ನೀಡಿದ್ದಾರೆ! ನೀನು ನನ್ನವಳಾಗಿರುವವರೆಗೆ ನನ್ನನ್ನು ಸಹಿಸಿಕೊಳ್ಳಲೇ ಬೇಕು!” ಆತನ ಹಿಡಿತ ಸಡಿಲವಾದ ಎಷ್ಟೋ ಹೊತ್ತಿನವರೆಗೆ ಆಕೆ ಬಿಕ್ಕಳಿಸುತ್ತಲೇ ಇದ್ದಳು. ಮರುದಿನ ನಿಯಾಜ್ ಹೊರಡುವ ಮೊದಲು ತನ್ನ ಮಾವನೊಡನೆ, “ಮುಂದಿನ ಬಾರಿ ನಾನು ಬಂದು ಹಾಜಿರಾಳನ್ನು ನಮ್ಮ ಮನೆಗೆ ಕರೆದುಕೊಂಡು ಹೋಗುವೆ” ಎಂದನು. “ಆಗಲಿ. ನಿನ್ನ ಹೆಂಡತಿಯನ್ನು ನೀನು ಕರೆದೊಯ್ಯಲು ನನ್ನ ಅಪ್ಪಣೆ ಬೇಕಾ?” ಎಂದು ಮಮ್ಮೂಟಿ ನಕ್ಕನು. ಮುಂದಿನ ಬಾರಿ ನಿಯಾಜ್ ಮಾವನ ಮನೆಗೆ ಹೋಗುವಾಗ ಏನನ್ನೂ ಕೊಂಡೊಯ್ಯದೆ ಬರಿಗೈಯಲ್ಲೇ ಹೋದನು. ಕಳೆದ ಬಾರಿಯ ಕಹಿ ಅನುಭವ ಆತನ ಹೃದಯದಾಳದಲ್ಲಿ ಅಲೆಯೆಬ್ಬಿಸುತ್ತಲೆ ಇತ್ತು. ಹೀಗಾಗಿ ಯಾವುದೊ ಒಂದು ದೃಢ ನಿರ್ಧಾರದೊಡನೆಯೇ ಮಾವನ ಮನೆ ಪ್ರವೇಶಿಸಿದವನು ಸೀದಾ ತನ್ನ ಕೋಣೆಗೆ ಹೋದನು. ಅತ್ತೆ ಫರೀದಾ ಬಂದು ಅಳಿಯನನ್ನು ಆತ್ಮೀಯತೆಯಿಂದ ಮಾತನಾಡಿಸಿದಳು. ಚಿಕ್ಕ ಮಕ್ಕಳೂ ಬಂದು ಭಾವನ ಬಳಿ ಕೊಂಚ ಹೊತ್ತು ಆಟವಾಡಿ ಹೋದರು. ಭಾವ ಮೈದುನ ಜಮಾಲನೂ ಭರತ 127 ಕೂಡಾ ಹಾಸ್ಟೆಲಿನಿಂದ ಬಂದಿದ್ದವನು ಭಾವನನ್ನು ಮಾತನಾಡಿಸಿ ತನ್ನ ಹಾಸ್ಟೆಲಿನ ವಿಷಯಗಳನ್ನು ಹೇಳಿ ಭಾವನನ್ನು ರಂಜಿಸಿದನು. ಆದರೆ ಬಹಳ ಹೊತ್ತಿನವರೆಗೂ ಹಾಜಿರಾಳ ಮುಖದರ್ಶನವಾಗಲೇ ಇಲ್ಲ. ಮಮ್ಮೂಟಿ ಮನೆಯಲ್ಲಿರಲಿಲ್ಲವಾದ ಕಾರಣ ಊಟಕ್ಕೂ ಹೆಚ್ಚು ಜನರಿರಲಿಲ್ಲ. ಜಮಾಲ್ ಮತ್ತು ಒಂದಿಬ್ಬರು ಮೌಲವಿಗಳು ಮಾತ್ರ ನಿಯಾಜನೊಡನೆ ಕುಳಿತು ಉಟ ಮಾಡಿದರು. ಊಟವಾದೊಡನೆ ನಿಯಾಜ್ ಕೋಣೆಗೆ ನಡೆದನು. ಆತನು ಕೋಣೆಗೆ ಬಂದ ಬಹಳ ಹೊತ್ತಿನ ಬಳಿಕ ಹಾಜಿರಾ ಕೋಣೆ ಪ್ರವೇಶಿಸಿದಳು. ಕೆದರಿದ ತಲೆ, ಗಂಟಕ್ಕಿದ ಮುಖ, ಸುಕ್ಕು ಸುಕ್ಕಾದ ಮಾಸಿದ ಸೀರೆಯುಟ್ಟು ಕೋಣೆಯೊಳ ಬಂದ ಆಕೆ ಆತನೆಡೆಗೆ ನೋಡದೆ ಒಂದೆಡೆ ನಿಂತಳು. ಆತನು ಕೆಲವು ಕ್ಷಣಗಳವರೆಗೆ ಆಕೆಯನ್ನು ದಿಟ್ಟಿಸಿದನು. ಬಳಿಕ ಏನೂ ಆಗದವನಂತೆ ನಗುತ್ತಾ ಆಕೆಯ ಬಳಿ ಸಾರಿ, “ಹೊಸತಾಗಿ ಮದುವೆಯಾದ ಮದುಮಗಳು ಗಂಡನನ್ನು ಎದುರುಗೊಳ್ಳುವ ರೀತಿ ಇದೇ ಏನು? ಹೋಗಲಿ, ನನ್ನ ಕಣ್ಣಿಗಂತೂ ನೀನು ಇನ್ನೂ ಸುಂದರಿಯಾಗಿಯೇ ಕಾಣುತ್ತೀಯಾ? ಎಲ್ಲಿ, ಒಂದು ಮುತ್ತು...” ಎನ್ನುತ್ತಾ ಆಕೆಯ ಮೈ ಮುಟ್ಟಿದೊಡನೆ, “ಮುಟ್ಟಬೇಡಿ ನನ್ನನ್ನು!” ಎಂದು ಬುಸುಗುಟ್ಟಿದಳು. “ನೋಡು ಹಾಜಿರಾ, ನೀನು ಹೀಗೆಲ್ಲಾ ಮಾಡುವುದು ಚೆನ್ನಾಗಿರುವುದಿಲ್ಲ. ನಾವು ಇನ್ನೂ ಬಹಳ ಕಾಲ ಜೊತೆಯಲ್ಲಿ ಬದುಕಿ ಬಾಳಬೇಕಾದವರು. ನೀನಿನ್ನೂ ಚಿಕ್ಕವಳು. ಆದದ್ದೆಲ್ಲವನ್ನೂ ನಾವಿಬ್ಬರೂ ಮರೆತು ಬಿಡುವಾ. ನೀನು ನಾಳೆ ನನ್ನೊಡನೆ ಮನೆಗೆ ಬಾ. ಉಮ್ಮಾ ನಿನ್ನನ್ನು ಕರೆದೊಯ್ಯಲು ಹೇಳಿದ್ದಾರೆ.” ಎಂದು ನಯವಾಗಿ ನುಡಿದನು. “ಮನೆ?” ಹಾಜಿರಾಳ ಕಣ್ಣುಗಳು ಬೆಂಕಿಯುಗುಳತೊಡಗಿದುವು. “ಅದೂ ಒಂದು ಮನೆಯೇ? ಅದನ್ನು ಮನೆ ಎನ್ನುವುದಕ್ಕಿಂತ ದನದ ಹಟ್ಟಿ ಎನ್ನಬಹುದು!” ಎನ್ನುತ್ತಾ ಆತನಿಗೆ ಬೆನ್ನು ತಿರುಗಿಸಿ ನಿಂತಳು. ‘ಇಲ್ಲ; ಇದು ವಾಸಿಯಾಗದ ರೋಗ. ಹಣದ ಅಮಲು ತಲೆಗೆ ಹತ್ತಿ ಇವರ ಮೆದುಳನ್ನು ಕೊಳೆಸಿದೆ!’ ಆತನು ಆಕೆಯನ್ನು ಮತ್ತೊಮ್ಮೆ ಆಪಾದಮಸ್ತಕ ನೋಡಿದನು. ತಲೆ ಕೆದರಿ ಮುಖ ಗಂಟಿಕ್ಕಿದ್ದರೂ ಆಕೆಯ ಹರೆಯ ಎಲ್ಲವನ್ನೂ ಕೂಡಾ. ಕೊಂಚ ಜಾರಿದ ಸೀರೆಯ ಸೆರಗಿನ ಮರೆಯಿಂದ ಇಣುಕುತ್ತಿದ್ದ 128 ಸುಳಿ ಉಬ್ಬಿದೆದೆ ಆತನನ್ನು ಅಣಕಿಸುವಂತೆ ತೋರಿತು. ಬಡ ನಡು, ಉಬ್ಬಿದ ನಿತಂಬ, ಪ್ರತಿಯೊಂದೂ ಆತನ್ನು ಆಯಸ್ಕಾಂತದಂತೆ ಸೆಳೆಯಿತು. ಆತನು ಕೋಪ ಮತ್ತು ಅಸಹನೆಯಿಂದ ಆಕೆಯ ಬಳಿ ಸಾರಿದವನೇ ಆಕೆಯನ್ನು ಬಿಗಿಯಾಗಿ ಅಪ್ಪಿಕೊಂಡು, ಆಕೆಯ ಮುಖದ ಮೇಲೆಲ್ಲ ಚುಂಬನದ ಮಳೆಗರೆದನು. ಇದು ತೀರಾ ಅನಿರೀಕ್ಷಿತವಾಗಿದ್ದ ಆಕೆ ಕ್ಷಣಕಾಲ ತಬ್ಬಿಬ್ಬಾದಳು. ಬಳಿಕ ತನ್ನೆಲ್ಲ ಶಕ್ತಿಯನ್ನೂ ಕ್ರೋಡೀಕರಿಸಿ ಬಲವಾಗಿ ಆತನನ್ನು ದೂಡಿ ಬಿಟ್ಟಳು. ಆತನು ಆಯ ತಪ್ಪಿಬಿದ್ದು ಬಿಟ್ಟನು. ಅಲ್ಲೇ ಇದ್ದ ಡ್ರೆಸ್ಸಿಂಗ್ ಟೇಬಲಿಗೆ ಆತನ ಹಣೆ ಬಡಿದು ರಕ್ತ ಚಿಮ್ಮಿತು. ಆತನನ್ನು ದೂಡಿದವಳೇ ತಿರುಗಿಯೂ ನೋಡದೆ ಆಕೆ ಅಲ್ಲಿಂದ ಹೊರಟು ಹೋದಳು. ನಿಯಾಜ್ ಎದ್ದು ಬಚ್ಚಲಿಗೆ ಹೋಗಿ ತಣ್ಣೀರಿನಲ್ಲಿ ಮುಖ ತೊಳೆದು ಕನ್ನಡಿಯಲ್ಲಿ ಮುಖ ನೋಡಿಕೊಂಡನು. ಕೆದರಿದ ತಲೆಗೂದಲು, ಹಣೆಯ ಮೇಲಿನ ಗಾಯ, ಕ್ರೋಧತಪ್ತ ಕಣ್ಣುಗಳು, ಅವಮಾನದಿಂದ ಕುಗ್ಗಿ ಬಾಡಿದ ಮುಖಚರ್ಯೆ. ಇದು ತನ್ನ ಮುಖವೇ ಎಂದಾತನು ತನ್ನನ್ನು ತಾನೆ ಪ್ರಶ್ನಿಸಿಕೊಂಡನು. ರಾತ್ರಿ ಯಾವಾಗಲೊ ಮಮ್ಮೂಟಿ ಹಿಂತಿರುಗಿದ್ದನು. ಹೊಸ ಅಳಿಯನಿಗೆ ಎಂದಿನಂತೆಯೇ ಬೆಳಗ್ಗಿನ ಉಪಾಹಾರಕ್ಕಾಗಿ ಅಕ್ಕಿ ರೊಟ್ಟಿ, ಕೋಳಿ ಕೂರ್ಮ, ಸಿಹಿತಿಂಡಿ, ಹಣ್ಣುಗಳು ಎಲ್ಲವನ್ನೂ ತಂದಿಡಲಾಯಿತು. ಆದರೆ ನಿಯಾಜ್ ಎದ್ದವನೇ ಬೇಗನೆ ಸ್ನಾನ ಮುಗಿಸಿ ತನ್ನ ಸೂಟ್ ಕೇಸನ್ನೆತ್ತಿಕೊಂಡು ಮಾಳಿಗೆಯಿಂದ ಕೆಳಗಿಳಿದನು. ಊಟದ ಮೇಜನ್ನು ಕಣ್ಣೆತ್ತಿಯೂ ನೋಡದೆ ಸೀದಾ ಹೋಗಿ ಕಾರಿನಲ್ಲಿ ಕುಳಿತನು. “ನಿಯಾಜ್, ಚಾ ಕುಡಿಯದೆ ಎಲ್ಲಿಗೆ ಹೊರಟೆ?” ಎಂಬ ಮಾವನ ಕರೆ ಗಾಳಿಯಲ್ಲಿ ತೇಲಿ ಹೋಯಿತು. ಕಾರು ಚಲಿಸುತ್ತಾ ಗೇಟು ದಾಟುತ್ತಿದ್ದುದನ್ನು ಮಮ್ಮೂಟಿ ಮತ್ತು ಬೆಳಗಿನ ಚಹಾ ಸೇವನೆಗಾಗಿ ಆತನ ಮನೆಗೆ ಬರುತ್ತಿದ್ದ ಒಂದಿಬ್ಬರು ಮೌಲವಿಗಳು ಹಾಗೂ ಒಂದಿಬ್ಬರು ಕಾರು ಚಾಲಕರು ದಿಗ್ಭ್ರಮೆಗೊಂಡು ನೋಡುತ್ತಾ ನಿಂತರು. ಅವರೆಲ್ಲರನ್ನೂ ನೋಡಿದ ಮಮ್ಮೂಟಿ ತಲೆ ತಗ್ಗಿಸಿ ಮಾತಿಲ್ಲದೆ ಒಳನಡೆದನು. ಆತನು ಒಳ ಹೋದೊಡನೆ ಕಾರು ಚಾಲಕರೂ ಮೌಲವಿಗಳೂ ತಮ್ಮೊಳಗೆ ಮಾತನಾಡಿಕೊಂಡರು. “ಎಂತಹ ಅಳಿಯ? ಇಷ್ಟು ದೊಡ್ಡ ಮಾವ ಎಂಬ ಗೌರವವಾದರೂ ಬೇಡವಾ? ಹಾಜಾರರು ಕರೆದದ್ದು ಕೇಳಿಯೂ ಕೇಳಿಸದಂತೆ ಹೊರಟು ಹೋದನಲ್ಲ ಅಳಿಯ?” ಭರತ 129 ಮಮ್ಮೂಟಿ ಒಳ ಬಂದವನೇ ಮಗಳನ್ನು ಕರೆದನು. “ಏನಬ್ಬಾ?” ಎನ್ನುತ್ತಾ ಹಾಜಿರಾ ಮಾಳಿಗೆಯಿಂದ ಕೆಳಗಿಳಿದಳು. “ಏನಾಗಿದೆ ನಿನ್ನ ಪುದಿಯಾಪಳೆಗೆ? (ಮದುಮಗನಿಗೆ)” ಎಂದು ಗಂಭೀರವಾಗಿ ಕೇಳಿದನು. ಆಕೆ ಮೌನವಾಗಿ ಕಿಟಿಕಿಯಿಂದ ಹೊರ ನೋಡುತ್ತಾ ನಿಂತಳು. “ಹೇಳು... ಏನಾಗಿದೆ ಆತನಿಗೆ?” ಗದರಿಸುತ್ತಾ ಕೇಳಿದನು ಮಮ್ಮೂಟಿ. “ನನಗೇನು ಗೊತ್ತು?” ತಲೆ ತಗ್ಗಿಸಿ ಮೆಲ್ಲಗೆ ನುಡಿದಳಾಕೆ. “ನೀನು ಏನು ಹೇಳಿದೆ ಆತನೊಡನೆ?” ಗಳಿಗೆ ಗಳಿಗೆಗೂ ಆತನ ಧ್ವನಿ ಏರುತ್ತಿತ್ತು. “ಅವರ ಮನೆಗೆ ಬರುವುದಿಲ್ಲವೆಂದೆ” ತಲೆ ಎತ್ತದೆ ನುಡಿದಳಾಕೆ ``ಯಾಕೆ? ಯಾಕೆ ಹಾಗಂದೆ?'' “ಯಾಕೆ ಅಂದ್ರೆ? ನಿನ್ನ ಮಗಳು ಹೋಗಿರತಕ್ಕಂತಹ ಮನೆಯೇ ಅದೂ?” ಉಮ್ಮಾಲಿ ಮಧ್ಯೆ ಪ್ರವೇಶಿಸಿದಳು. “ಸರಿಯಾದ ಬಚ್ಚಲು ಕೋಣೆ ಇದೆಯೇ ಅಲ್ಲಿ? ಕೋಣೆ ತಂಪು ಮಾಡುವ ಇಂಜಿನ್ ಇದೆಯೇ? ಅಡಿಗೆ ಮನೆಯ ವಿಷಯವಂತೂ ಕೇಳುವುದೇ ಬೇಡ!” “ಸಮನಾದ ನಾಲ್ಕು ಸೀರೆಗಳನ್ನಾದರೂ ತಂದಿದ್ದಾನೆಯೆ ಆತ?” ಮದುಮಗ ತಂದದ್ದನ್ನು ನೋಡಲು ಬಂದವರಿಗೆ ಮುಖ ಕೊಟ್ಟು ಮಾತನಾಡಲು ನಾಚಿಕೆಯಾಗುತ್ತಿತ್ತು ನನಗೆ. ಇಷ್ಟೆಲ್ಲ ನಾವು ಕೊಡುವಾಗ ದೊಡ್ಡ ಕಡೆಯ ಹುಡುಗನೊಬ್ಬ ಸಿಕ್ಕುತ್ತಿರಲಿಲ್ಲವಾ?” ರುಖಿಯಾ ತನ್ನ ಪಾಲನ್ನೂ ಸೇರಿಸಿದಳು. “ಅಂದರೆ?” ತಲೆ ಬುಡವೊಂದು ಅರ್ಥವಾಗದವನಂತೆ ಕೇಳಿದನು ಮಮ್ಮೂಟಿ. “ನೀವೆಲ್ಲಾ ಏನು ಹೇಳ್ತಾ ಇದ್ದೀರಿ?” ಕೋಪದಿಂದ ಧ್ವನಿ ಕಂಪಿಸುತ್ತಿತ್ತು. “ನಾವು ಹೇಳುವುದೇನಿದೆ? ನಿನ್ನ ಮಗಳೇ ತೀರ್ಮಾನ ಮಾಡಿದ್ದಾಳೆ, ತಾನಿನ್ನು ಆ ಮನೆಗೆ ಕಾಲಿಡುವುದಿಲ್ಲಾಂತ!” “ಆಂ...! ಮಮ್ಮೂಟಿಗೆ ಆಘಾತವಾಯಿತು. “ಅವರಲ್ಲಿ ಹಣ ಕಮ್ಮಿ ಎಂದೇ? ನಿನಗೆ ಬೇಕಾದುದೆಲ್ಲವನ್ನೂ ನಾನು ಮಾಡಿ ಕೊಡುತ್ತಿರಲಿಲ್ಲವಾ ಅವನನ್ನೇಕೆ ಸಿಟ್ಟಿಗೆಬ್ಬಿಸಿದೆ?” ಮಗಳೊಡನೆ ಕೇಳಿದನಾತ. “ಆ ಮನೆಯಲ್ಲಿ ನಾನು ಹೇಗಿರಲಿ?” ಉರಿ ತಣ್ಣಗಾಗತೊಡಗಿತ್ತು. ಅಪರಾಧಿ ಮನೋಭಾವ ಆಕೆಯನ್ನಾಗಲೇ ಕಾಡತೊಡಗಿತ್ತು. ಎಚ್ಚರಿಕೆಯ ಸಣ್ಣ ಗಂಟೆಯೊಂದು ಹೃದಯದ ಮೂಲೆಯಲ್ಲೆಲ್ಲೋ ಸದ್ದು ಮಾಡತೊಡಗಿತ್ತು. * * * * * 130 ಸುಳಿ ಕಾರು ಬಂದು ನಿಂತ ಶಬ್ದ ಕೇಳಿ ಜೊಹರಾ ತಾನೇ ಹೋಗಿ ಬಾಗಿಲು ತೆರೆದಳು. ಮಗನೊಬ್ಬನೇ ಕಾರಿನಿಂದಿಳಿಯುತ್ತಿದ್ದುದನ್ನು ಕಂಡು ಕೊಂಚ ನಿರಾಶೆಯಾಯಿತು. ಮಗನ ಹಣೆಯ ಗಾಯವೂ ತಾಯಿಯ ಕಣ್ಣಿನಿಂದ ಮರೆಯಾಗಲಿಲ್ಲ. “ಎಲ್ಲಿ ನಿನ್ನ ಹೆಂಡತಿ ಬರಲಿಲ್ಲವಾ? ನಿನ್ನ ಹಣೆಗೇನಾಯಿತು?” ಮಗನೊಡನೆ ಕೇಳಿದಳಾಕೆ. “ಹಣೆಗೆ ಬಾಗಿಲು ತಾಗಿತು. ಬಾಗಿಲ ಚೌಕಟ್ಟು ತುಂಬಾ ಚಿಕ್ಕದು. ನನ್ನ ಆಕಾರಕ್ಕೆ ಹೊಂದಿಕೆಯಾಗುವಂತದ್ದಲ್ಲ” ಎಂದು ನಗುತ್ತಾ ನುಡಿದು ಒಳ ಹೋಗುತ್ತಾ, “ಚಾ ತಿಂಡಿ ಉಂಟಾ?” ಎಂದು ಕೇಳಿದನು. “ಯಾಕಪ್ಪಾ, ಮಾವನ ಮನೆಯವರು ತಿಂಡಿ ಕೊಡಲಿಲ್ಲವಾ?” ನಗುತ್ತಾ ಕೇಳಿದಳು ಜೊಹರಾ. “ಉಮ್ಮಾ” ಅಸಹನೆಯಿಂದ ಕರೆದನಾತ “ಇನ್ನು ಮುಂದೆ ಅದು ನನ್ನ ಮಾವನ ಮನೆ ಎನ್ನಬೇಡ. ನಾನು ಮೊದಲೆ ಹೇಳಿದೆ. ‘ವಿದ್ಯೆ ಇಲ್ಲದ ಹುಡುಗಿ ನನಗೆ ಬೇಡಾಂತ’ ಅವರ ಹಣ ನೋಡಿ ಮರುಳಾದೆಯಲ್ಲ? ಈಗ ಅನುಭವಿಸು. ಅವಳಿನ್ನು ಈ ಮನೆಗೆ ಬರುವುದಿಲ್ಲವಂತೆ” ಎಂದು ಪಟಪಟನೆ ನುಡಿದನು. “ಆಂ...” ಜೋಹರಾ ಬೆಚ್ಚಿದಳು. “ಯಾಕಪ್ಪಾ ಹಾಗೆಲ್ಲ ಹೇಳ್ತೀಯಾ? ಅವಳೇನು ಮಾಡಿದಳು? ಅವಳಿನ್ನೂ ಚಿಕ್ಕ ಹುಡುಗಿಯಲ್ಲವಾ? ನೀನು ಸ್ವಲ್ಪ ಸುಧಾರಿಸಿಕೊಳ್ಳಬೇಕು” ಎಂದು ನಯವಾಗಿ ನುಡಿದಳು. “ನಾನು ಸುಧಾರಿಸಿಕೊಳ್ತೇನೆ. ಆದರೆ ಅವಳು ಸುಧಾರಿಸಿಕೊಳ್ಳಲಾರಳು. ಈ ಮನೆ ಅವಳಿಗೆ ಹಟ್ಟಿಯಂತೆ ಕಾಣುತ್ತಿದೆ”! ಜೊಹರಾ ಸ್ತಂಭಿತಳಾದಳು. ತಾನು ವಿವಾಹವಾಗಿ ಬಂದ ಮನೆ ಇದು. ತನ್ನ ಗಂಡ ತನಗೆಷ್ಟು ಅನ್ಯಾಯ ಮಾಡಿದ್ದರೂ ತನಗೆಂದೂ ಈ ಮನೆ ಬಿಟ್ಟು ಹೋಗಬೇಕೆಂದಾಗಿರಲಿಲ್ಲ. ತನ್ನ ತವರಿನಲ್ಲಿದ್ದ ಸೌಕರ್ಯಗಳು ಈ ಮನೆಯಲ್ಲಿ ತನಗೂ ಇರಲಿಲ್ಲ. ಆದರೆ ಈ ಮನೆಗೆ ಬರುವುದಿಲ್ಲವೆಂದು ಒಮ್ಮೆಯಾದರೂ ತಾನಂದದ್ದಿದೆಯೇ? ಕಾಲ ಎಷ್ಟೊಂದು ಬದಲಾಗಿ ಹೋಯಿತು? ಮಮ್ಮೂಟಿಯ ಚರಿತ್ರೆ ತನಗೆ ಗೊತ್ತಿದ್ದೂ ಅವನ ಮಗಳನ್ನು ತನ್ನ ಮಗನಿಗೆ ತರುವ ವಿಶಾಲ ಹೃದಯವನ್ನು ತಾನು ತೋರಿರಲಿಲ್ಲವೇ? ಅದಕ್ಕೆ ತಮಗೆ ದೊರೆತ ಪ್ರತಿಫಲ ಇದೇ ಏನು? ಜೊಹರಾ ಚಿಂತಾಮಗ್ನಳಾದಳು. * * * * * ಭರತ ` 131 ಮುಂದಿನ ಭಾನುವಾರ ಮಮ್ಮೂಟಿ ಅಳಿಯನಿಗಾಗಿ ಕಾದು ಕುಳಿತನು. ಆದರೆ ಶನಿವಾರ ರಾತ್ರಿಯಾಗಿ ಭಾನುವಾರ ಬೆಳಗಾದರೂ ನಿಯಾಜ್ ಬರಲೇ ಇಲ್ಲ. ಮಮ್ಮೂಟಿ ಅಸಹನೆಯಿಂದ ಮನೆಯ ಒಳಗೂ ಹೊರಗೂ ನಡೆದಾಡತೊಡಗಿದನು. ಬಳಿಕ ಮಗಳನ್ನು ಕರೆದು, “ನಾನು ನಿನ್ನ ಗಂಡನ ಮನೆಗೆ ಹೋಗಿ ಹೇಗಾದರೂ ಅವನನ್ನು ಒಲಿಸಿ ಕರೆದುಕೊಂಡು ಬರುತ್ತೇನೆ. ನೀನಿನ್ನೇನಾದರೂ ಮೂರ್ಖತನ ಮಾಡಿದರೆ ನಿನ್ನ ಬೆನ್ನಿನ ಚರ್ಮ ಸುಲಿಯುವೆ” ಎನ್ನುತ್ತಾ ಅಳಿಯನ ಮನೆಗೆ ಹೊರಡತೊಡಗಿದನು. ಉಮ್ಮಾಲಿ ಮಗನೊಡನೆ, “ಹೇಗೂ ಅದದ್ದಾಯಿತು. ಅವಳು ಇಲ್ಲೇ ಇರಲಿ. ಅವನು ಇಲ್ಲಿಗೇ ಬಂದು ಹೋಗಿ ಮಾಡುತ್ತಿರಲಿ. ಅವನ ತಾಯಿಯೊಡನೆ ಹಾಗೆಯೆ ಮಾತನಾಡಿ ನೋಡು” ಎಂದಳು. ಮಮ್ಮೂಟಿ ತಾನೊಬ್ಬನೇ ಕಾರು ಚಲಾಯಿಸಿ ಹೊರಟನು. ನಿಯಾಜ್ ವೆರಾಂಡದಲ್ಲಿ ಕುಳಿತುಕೊಂಡು ಪತ್ರಿಕೆಯೋದುತ್ತಿದ್ದವನು ಕಾರು ನಿಂತ ಶಬ್ದ ಕೇಳಿ ಹಿಂತಿರುಗಿ ನೋಡಿದನು. ಮಾವನನ್ನು ಕಂಡಾಗ ಆತನ ಹುಬ್ಬುಗಳು ಗಂಟಿಕ್ಕಿದವು. ಮುಖ ಕಪ್ಪಿಟ್ಟಿತು. ಆದರೂ ಮಮ್ಮೂಟಿ ಒಳ ಬರುತ್ತಿದ್ದಂತೆ ಆತನು ಸೌಜನ್ಯದಿಂದ ಎದ್ದು ನಿಂತನು. ಜೊಹರಾ ಬಾಗಿಲ ಬಳಿ ಬಂದು ನಿಂತು ಬಂದವಾರರೆಂದು ಇಣುಕಿ ನೋಡಿದಳು. “ಯಾರು? ಮಮ್ಮೂಟಿಯಾ?” ಶಾಂತಳಾಗಿಯೇ ಕೇಳಿದಳಾಕೆ “ಹೌದು ಜೋಹರಕ್ಕಾ. ರಜಾದಿನವಾದರೂ ಅಳಿಯ ಬರಲಿಲ್ಲವಲ್ಲಾ? ಅದಕ್ಕೇ.... ನಾನೇ ಬಂದು ಕರೆದುಕೊಂಡು ಹೋಗುವಾ ಅಂತ ಬಂದೆ.” ಏನೂ ಆಗಿಯೇ ಇಲ್ಲವೆಂಬಂತೆ, ಸಹಜವಾಗಿಯೇ ಎಂಬಂತೆ ಮಮ್ಮೂಟಿ ನುಡಿದನು. ಬಳಿಕ, “ನಿಮ್ಮ ಮನೆಯ ಕೆಲಸದ ಹುಡುಗನನ್ನು ಕಳಿಸಿ. ಕಾರಿನಲ್ಲಿ ಒಳ್ಳೆ ಮೀನಿದೆ. ಒಂದಷ್ಟು ಹಣ್ಣುಗಳೂ ಇವೆ.” ಎಂದನು. ನಾಲಗೆಯ ಮೂಲಕ ಹೃದಯದೊಳಕ್ಕೆ ಪ್ರವೇಶ ಪಡೆಯಲೆತ್ನಿಸಿದನಾತ. ಆದರೆ ಮಗನನ್ನು ಜಯಿಸುವುದು ತಾಯಿಯನ್ನು ಜಯಿಸಿದಷ್ಟು ಸುಲಭವಲ್ಲವೆಂಬುದನ್ನು ತಿಳಿಯಲು ಮಮ್ಮೂಟಿಗೆ ಹೆಚ್ಚು ಹೊತ್ತೇನೂ ಬೇಕಾಗಲಿಲ್ಲ. ನಿಯಾಜ್ ಮಾವನ ಮುಖವನ್ನೂ ನೋಡದೆ ಒಳ ಹೋಗುತ್ತಾ ತಾಯಿಯನ್ನು ಕರೆದನು. “ನೀನು ಕೂತುಕೊ ಮಮ್ಮೂಟೀ, ನಾನೀಗಲೇ ಬಂದೆ.” ಎನ್ನುತ್ತಾ ಮಗನನ್ನು ಹಿಂಬಾಲಿಸಿದಳು ಜೊಹರಾ. ಒಳ ಬಂದವನೇ ನಿಯಾಜ್ ತಾಯಿಯೊಡನೆ, “ಉಮ್ಮಾ, ನಾನಿನ್ನು 132 ಸುಳಿ ಖಂಡಿತವಾಗಿಯೂ ಅವರ ಮನೆ ಮೆಟ್ಟಲು ತುಳಿಯುವುದಿಲ್ಲ. ಅವರೊಡನೆ ಕೂಡಲೆ ಹೊರಟು ಹೋಗಲು ಹೇಳು” ಎಂದು ಕೋಪದಿಂದ ನುಡಿದನು. “ಹಾಗೆಲ್ಲ ಹೇಳಬಾರದು ಮೋನೇ ಅವಳೇನೊ ಬುದ್ಧಿ ಇಲ್ಲದೆ ಏನಾದರೂ ಹೇಳಿರಬಹುದು. ಅದನ್ನೆಲ್ಲ ಮನಸ್ಸಿಗೆ ಹಚ್ಚಿಕೊಳ್ಳುವುದೇ? ಈಗ ನೋಡು, ಅವನೇ ಬಂದಿದ್ದಾನಲ್ಲ ನಿನ್ನನ್ನು ಕರೆದುಕೊಂಡು ಹೋಗುವುದಕ್ಕೆ? ಇಡೀ ನಾಡೇ ಅವನಿಗೆ ತಲೆ ಬಾಗುತ್ತಿದೆ. ಅವನು ನೊಡು, ನಮ್ಮೆದುರಿಗೆ ಹೇಗೆ ತಲೆ ತಗ್ಗಿಸಿ ನಿಂತಿದ್ದಾನೆ! ನಮ್ಮಲ್ಲಿ ಹಣವಿಲ್ಲದೆ ಹೋದರೂ ಅವನ ಕಣ್ಣಿನಲ್ಲಿ ನಾವಿನ್ನೂ ದೊಡ್ಡವರೇ.” ಎಂದು ಮಗನನ್ನು ಸಂತೈಸಲೆತ್ನಿಸಿದಳು. “ನೋಡಪ್ಪಾ, ಒಂದೇ ಮಳೆಗೆ ಒಂದು ಕೊಡೆ ಹರಿದು ಹೋದರೆ ಹೇಗೆ? ಅವಳಿಗೆ ನಿನ್ನಷ್ಟು ವಯಸ್ಸಾಗಿದೆಯೇ? ಹುಡುಗು ಬುದ್ಧಿಯಲ್ಲಿ ಏನಾದರೂ ಹೇಳಿರಬಹುದು. ಒಂದೆರಡು ಮಕ್ಕಳಾದ ಮೇಲೆ ಎಲ್ಲಾ ಸರಿ ಹೋಗುತ್ತದೆ. ಸುಮ್ಮನೆ ಹಟ ಮಾಡ್ಬೇಡ. ಈಗ ಹೇಗೂ ಅವ ಬಂದಿದ್ದಾನಲ್ಲ? ಅವನೊಡನೆ ಹೋಗು.” “ಉಮ್ಮಾ, ನನ್ನನ್ನು ಒತ್ತಾಯಿಸುವುದರಿಂದ ಏನೂ ಪ್ರಯೋಜನವಿಲ್ಲ. ಶುದ್ಧ ಚಿನ್ನವೇ ಬೆರಕೆ ಚಿನ್ನವೇ ಎಂದು ಪರೀಕ್ಷಿಸಲು ಅಕ್ಕಸಾಲಿಗನಿಗೆ ಎಷ್ಟು ಹೊತ್ತು ಬೇಕು.? ನನಗೆ ಬೇಡವೆಂದರೆ ಬೇಡ. ತಲಾಖ್ ಯಾವತ್ತು ಬೇಕೂಂತ ಕೇಳು ಅವರೊಡನೆ!” ಕ್ಷಣ ಕ್ಷಣಕ್ಕೂ ಅವನ ಧ್ವನಿ ಏರುತ್ತಿತ್ತು. “ಛಿ, ಎಂತಹ ಮಾತಾಡ್ತೀಯಾ? ನಮ್ಮ ಮನೆತನದಲ್ಲಿ ಈವರೆಗೆ ಯಾರೂ ಹೆಂಡತಿಗೆ ತಲಾಖ್ ಕೊಟ್ಟದ್ದಿಲ್ಲ. ಅದೆಲ್ಲ ಸುಸಂಸ್ಕೃತರಲ್ಲಿ ನಡೆಯುವಂತಹುದೂ ಅಲ್ಲ. ಒಮ್ಮೆ ಮದುವೆ ಅಂತ ಆದ ಮೇಲೆ ಹೇಗಾದರೂ ಹೊಂದಿಕೊಂಡು ಹೋಗಬೇಕು.” ಜೊಹರಾ ತನ್ನ ಪ್ರಯತ್ನ ಮುಂದುವರಿಸಿಯೇ ಇದ್ದಳು. “ನಿಮ್ಮೊಡನೆ ಹೇಳಿ ಏನೂ ಪ್ರಯೋಜನವಿಲ್ಲ....” ಎನ್ನುತ್ತಾ ಆತನು ವೆರಾಂಡಕ್ಕೆ ಬಂದನು. “ನಿಯಾಜ್..... ನಿಯಾಜ್..... ನನ್ನ ಮಾತು ಕೇಳು..... ಮನೆತನದ ಮರ್ಯಾದೆ ಕಳೆಯಬೇಡ...” ಎನ್ನುತ್ತಾ ಜೊಹರಾ ಆತನ ಹಿಂದೆಯೇ ಬಂದಳು. ಆ ಮಾತುಗಳೊಂದೂ ಆತನ ಕಿವಿಯ ಮೇಲೆ ಬೀಳಲೇ ಇಲ್ಲ. ಆತ ಹೊರ ಬಂದವನೇ ಮಮ್ಮೂಟಿಯೊಡನೆ, “ನಿಮ್ಮ ಮಗಳನ್ನು ನಿಮ್ಮಂತೆಯೇ ಹಣ ಸಂಪಾದಿಸುವವನೊಬ್ಬನೊಡನೆ ಮದುವೆ ಮಾಡಿ ಕೊಡಿ. ನಿಮ್ಮ ಹಣ ನೋಡಿ ಯಾರಾದರೂ ಬಂದೇ ಬರ್ತಾರೆ. ದಯವಿಟ್ಟು ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡಿ.” ಎಂದನು. ಭರತ 133 ಮಮ್ಮೂಟಿ ಕತ್ತು ಬಾಗಿಸಿ ವಿನಯದಿಂದ, “ನನ್ನ ಮಗಳಿನ್ನೂ ಚಿಕ್ಕವಳು ಮಗಾ. ಬುದ್ಧಿ ಕಲಿತಿಲ್ಲ. ಅವಳ ತಾಯಿ ಮತ್ತು ಅಜ್ಜಿಯರ ಮೂರ್ಖತನದಿಂದಾಗಿ ಹೀಗೆಲ್ಲ ಆಯಿತು. ಇನ್ನು ಮುಂದೆ ಹಾಗೇನೂ ಆಗದಂತೆ ನಾನು ನೋಡ್ಕೊಳ್ತೇನೆ. ನೀನು ಅವಳನ್ನು ಎಲ್ಲಿಗೆ ಕರೆದರೆ ಬರ್ತಾಳೆ. ಅವಳನ್ನು ನಾನು ಬಗ್ಗಿಸುತ್ತೇನೆ.” ಎಂದು ನುಡಿದನು. “ಉಮ್ಮಾ, ಅವರಿಗೆ ಚಹಾ ತಂದು ಕೊಡು” ಶಾಂತವಾಗಿ ನುಡಿದ ಮಗನ ಮಾತಿನಿಂದ ಜೊಹರಾಳ ಮನ ಕೊಂಚ ಹಗುರಾಯಿತು. ಆಕೆ ಕೂಡಲೇ ಒಳಹೋಗಿ ಹುಡುಗನ ಕೈಯಲ್ಲಿ ಚಹಾ, ತಿಂಡಿ ಕಳುಹಿಸಿ ಕೊಟ್ಟು ತಾನೂ ಹಿಂದಿನಿಂದ ಬಂದಳು. ಸದ್ಯ, ನಿಯಾಜ್ ಹಾದಿಗೆ ಬರುತ್ತಿದ್ದಾನೆ ಎಂದು ಮನ ತುಸು ನೆಮ್ಮದಿಗೊಂಡಿತು. ಮಮ್ಮೂಟಿಯೊಡನೆ ಕುಳಿತುಕೊಂಡು ಚಹಾ ಕುಡಿಯುತ್ತಾ ನಿಯಾಜ್ ಯೋಚನಾಮಗ್ನನಾದನು. ತನ್ನ ಹೃದಯದ ಮೇಲಾದ ಈ ಗಾಯಗಳು ಎಂದಾದರೂ ಮಾಗಲುಂಟೇ? ತನ್ನೆಲ್ಲ ಕಹಿ ಅನುಭವಗಳನ್ನೂ ಹೃದಯದ ಮೇಲ್ಭಾಗದಿಂದ ತರಗೆಲೆಗಳಂತೆ ಗುಡಿಸಿ ಹೃದಯದ ಹಿಂಭಾಗಕ್ಕೆ ತಳ್ಳಿ ಹೃದಯವನ್ನು ಸ್ವಚ್ಚಗೊಳಿಸಲು ಸಾಧ್ಯವಾಗಿದ್ದಿದ್ದರೆ ಎಷ್ಟೊ ಚೆನ್ನಾಗಿತ್ತು. ಆದರೆ ಅದೆಂದಿಗೂ ಸಾಧ್ಯವಿಲ್ಲ. ಕೆಸರಿನಲ್ಲಿ ಬಂಡೆ ಕಲ್ಲು ಹೂತು ಹೋದಂತೆ ಎದೆಯಾಳದಲ್ಲಿ ಹೂತು ಹೋಗಿವೆ ಆ ಅನುಭವಗಳು. ಬುದ್ಧಿ ಬಲಿಯದ ಹುಡುಗಿಯೆಂದು ಆಕೆಯನ್ನು ಕ್ಷಮಿಸಬಹುದೇನೊ. ಆದರೆ ತನ್ನ ಬಾಳ ಸಂಗಾತಿಯಾಗಿ ಆಕೆಯನ್ನು ಸ್ವೀಕರಿಸಲು ಸಾಧ್ಯವೇ ಇಲ್ಲ. ಆತನು ಕುಳಿತಲ್ಲಿಂದ ಎದ್ದು ಮಾಳಿಗೆಗೆ ಹೋಗಿ ಅದೇನನ್ನೊ ತಂದು ಮಾವನ ಕೈಯಲ್ಲಿಡುತ್ತಾ, “ನಿಮ್ಮ ಕಾರಿನ ಬೀಗದ ಕೈ ತೆಗೆದುಕೊಳ್ಳಿ, ಕಾರನ್ನು ತೆಗೆದುಕೊಂಡು ಹೋಗಿ. ನನಗದರ ಅಗತ್ಯವಿಲ್ಲ. ಇನ್ನು ಮುಂದೆ ನಿಮ್ಮ ಮಗಳಿಗೂ ನನಗೂ ಯಾವ ಸಂಬಂಧವೂ ಇಲ್ಲ.” ಎನ್ನುತ್ತಾ ಜೊಹರಳ ಕಡೆ ತಿರುಗಿ, “ನಾನಿನ್ನೊಂದು ತಿಂಗಳು ಊರಿಗೆ ಬರುವುದಿಲ್ಲ., ಯಾವತ್ತು ಬೇಕಾದರೂ ಇವರ ಮಗಳ ತಲಾಖ್ ಕೊಡಲು ಸಿದ್ಧನಿದ್ದೇನೆ.” ಎನ್ನುತ್ತಾ ತನ್ನ ಪುಟ್ಟ ಸೂಟ್ ಕೇಸನ್ನೆತ್ತಿಕೊಂಡು ಹೊರಟೇ ಹೋದನು. ಜೊಹರಾ ಮತ್ತು ಮಮ್ಮೂಟಿ ಬೆಪ್ಪರಂತೆ ಆತ ಹೋಗುವುದನ್ನು ನೊಡುತ್ತಾ ನಿಂತರು. ಬಳಿಕ ಮಮ್ಮೂಟಿ ಜೊಹರಳೆಡೆಗೆ ತಿರುಗಿ, 134 ಸುಳಿ “ನಮ್ಮ ಸಂಬಂಧ ಅಲ್ಲಾಹುವಿಗೆ ಇಷ್ಟವಾಗಲಿಲ್ಲವೇನೊ ಜೊಹರಕ್ಕಾ ಎಲ್ಲವೂ ಅವನಿಚ್ಛೆಯಲ್ಲವಾ? ನಿಮ್ಮ ಮಗನೊಡನೆ ಬಾಳುವುದು ನನ್ನ ಮಗಳ ಹಣೆಯಲ್ಲಿ ಬರೆದಿಲ್ಲ. ಅವಳು ಅಷ್ಟು ಪುಣ್ಯವಂತೆಯಲ್ಲ. ನಾನಿನ್ನು ಬರ್ತೇನೆ ಜೊಹರಕ್ಕಾ” ಎನ್ನುತ್ತಾ ಅಂಗಳಕ್ಕಿಳಿದು ಕಾರು ಚಲಾಯಿಸತೊಡಗಿದನು. ಮನೆಗೆ ಹೋದವನೇ ಮಮ್ಮೂಟಿ ತಾಯಿಯ ಬಳಿ ಬಂದು ಕುಳಿತನು. ಉಮ್ಮಾಲಿ ಬಾಯಿ ತುಂಬಾ ಎಲೆಯಡಿಕೆ ಹಾಕಿಕೊಂಡು “ಹೊಗೆ ಸೊಪ್ಪಿಗೆ ಖಾರವೇ ಇಲ್ಲ” ಎನ್ನುತ್ತಾ ನೆಲದ ಮೇಲಿದ್ದ ಪೀಕದಾನಿಯಲ್ಲಿ ಉಗುಳುತ್ತಿದ್ದಳು. ಹಾಜಿರಾ ಅಲಂಕರಿಸಿಕೊಂಡು ಅಜ್ಜಿಯ ಬಳಿ ಕುಳಿತಿದ್ದಳು. ಕಳೆದ ಬಾರಿ ಮಾಸಿದ ಸೀರೆಯುಟ್ಟದ್ದಕ್ಕೆ ನಿಯಾಜ್ ಕೇಳಿದ್ದನಲ್ಲ, ‘ನನ್ನನ್ನು ಎದುರುಗೊಳ್ಳುವುದ ಹೀಗೆಯೇ?” ಎಂದು? ಅಬ್ಬಾ ತಾನೇ ಹೋಗಿ ಕರೆದ ಮೇಲೆ ಅವರು ಬರದಿರುತ್ತಾರೆಯೇ? ಆತ ತುಂಬಾ ಒತ್ತಾಯ ಮಾಡಿದರೆ ಅಜ್ಜಿ ಹೇಳಿದಂತೆ ಒಂದೆರಡು ದಿನಗಳ ಮಟ್ಟಿಗೆ ಆತನ ಮನೆಗೆ ಹೋಗಿದ್ದು ಬಂದು ಬಿಡಬೇಕು ಎಂದೆಲ್ಲಾ ಯೋಚಿಸುತ್ತಿದ್ದಳಾಕೆ. ಅಡಿಗೆ ಮನೆಯಲ್ಲಿ ಮದುಮಗನಿಗಾಗಿ ಮಾಂಸದಡಿಗೆ ಸಿದ್ಧವಾಗುತ್ತಿತ್ತು. “ಏನಾಯಿತು? ಅಳಿಯ ಬಂದನೇ?” ಉಮ್ಮಾಲಿ ಮಲಗಿದ್ದಲ್ಲಿಂದ ಎದ್ದು ಕುಳಿತು ಉತ್ಸುಕಳಾಗಿ ಮಮ್ಮೂಟಿಯೊಡನೆ ಕೇಳಿದಳು. ಮಮ್ಮೂಟಿ ತಾಯಿಯನ್ನು ದುರುಗುಟ್ಟಿ ನೋಡುತ್ತಾ, “ಇನ್ನೆಲ್ಲಿ ಬರ್ತಾನೆ ಆ ಅಳಿಯ? ಅವರೇನು ನಮ್ಮಂತೆ ಮೂರನೇ ದರ್ಜೆಯವರೇ?” ಎಂದು ಕೋಪೋದ್ರಿಕ್ತನಾಗಿ ಕೇಳಿದನು. ಅದೇಕೊ ಹಾಜಿರಾಳ ಮುಖ ಕಳೆಗುಂದಿತು. ಅವಳು ಸದ್ದಿಲ್ಲದೆ ಅಲ್ಲಿಂದ ಹೊರಟು ಹೋದಳು. “ಈಗ ತೃಪ್ತಿಯಾಯಿತಲ್ಲ ನಿಮಗೆಲ್ಲ?” ರುಖಿಯಾಳನ್ನು ನೋಡುತ್ತಾ ಮಮ್ಮೂಟಿ ಕೇಳಿದನು. “ತಾಯಿ ಅಜ್ಜಿ ಸೇರಿಕೊಂಡು ಅವಳ ತಲೆಯೊಳಗೆ ಏನೆಲ್ಲಾ ತುರುಕಿದಿರಲ್ಲ? ಈಗ... ಅನುಭವಿಸಿ! ಹಾಜಿರಾಳೊಡನೆ ಬಾಳಲು ಅವನು ಸಿದ್ಧನಿಲ್ಲ. ಇನ್ಯಾವ ರಾಜಕುಮಾರನನ್ನು ತರಬೇಕೆಂದಿದ್ದೀರಿ ನೀವಿಬ್ಬರು?” ಎದೆಯಾಳದ ನೋವಿನೊಡನೆ ಕೋಪವೂ ಬೆರತಾಡಿದ ಮಾತುಗಳವು. “ಅವಳು ಅಲ್ಲಿಗೆ ಹೋಗದಿದ್ದರೇನಾಯಿತು? ಅವನು ಇಲ್ಲೇ ಬಂದು, ಹೋಗಿರಲಿ ಎನ್ನಬೇಕಾಗಿತ್ತು ಅವನೊಡನೆ!” ಉಮ್ಮಾಲಿ ನುಡಿದಳು. ಆಕೆಯ ದನಿಯಲ್ಲಿ ಎಂದಿನ ಕಾವಿರಲಿಲ್ಲ. “ಅವರು ನಮ್ಮ ಗುಲಾಮರೂಂತ ತಿಳ್ಕೊಂಡಿದ್ದಿರಾ? ನಮ್ಮ ಹಣಕ್ಕೆ ಭರತ 135 ಬಾಯ್ಬಿಟ್ಟು ನಮ್ಮ ಹಿಂದೆ ಓಡಿ ಬರ್ತಾರೇಂತ ಅಂದುಕೊಂಡಿದ್ದಿರಾ?” ಸ್ಫೋಟಿಸಿದನಾತ. “ಹೋಗಲಿ. ಅವನಲ್ಲದಿದ್ದರೆ ಇನ್ನೊಬ್ಬ! ಅನ್ನದ ಅಗಳು ಹಾಕಿ ಕೈ ತಟ್ಟಿದರೆ ಕಾಗೆಗಳಿಗೆ ಅಭಾವವೇ? ನಮಗೆ ಬೇಕಾದದ್ದು ಮನೆತನವಲ್ಲ. ದೊಡ್ಡ ಸಾಹುಕಾರರ ಮನೆ! ಅಂತಹ ಮನೆಯೊಂದನ್ನು ಹುಡುಕು!” ಉಮ್ಮಾಲಿ ವಿಚಲಿತಳಾಗದೆ ನುಡಿದಳು. “ಮೊದಲು ನಿಮ್ಮ ಮೊಮ್ಮಗಳಿಗೆ ಬುದ್ಧಿ ಕಲಿಸಿ. ಅನ್ನ ಚೆಲ್ಲಿ ಕೈ ತಟ್ಟುವಾಗ ಬರುವುದು ಕಾಗೆಗಳೇ. ಕೋಗಿಲೆಗಳಲ್ಲ!” ಎನ್ನುತ್ತಾ ಎದ್ದು ಹೊರ ಹೋದನು ಆತ. ರುಖಿಯಾ ಕುಳಿತಲ್ಲಿಂದಲೇ ಉಮ್ಮಾಲಿಯೊಡನೆ, “ನೀವೇ ಅವಳನ್ನು ಮುದ್ದು ಮಾಡಿ ಹಾಳು ಮಾಡಿದಿರಿ” ಎಂದು ಅತ್ತೆಯನ್ನು ಜರೆದಳು. “ನಾನು ಮುದ್ದು ಮಾಡಿ ಅವಳು ಕೆಡಲಿಲ್ಲ. ನೀನು ಗಯ್ಯಾಳಿಯಾಗಿದ್ದೆ ನೋಡು; ಯಾವಾಗಲೂ ನನ್ನೊಡನೆ ಜಗಳಾಡುತ್ತಿದ್ದೆಯಲ್ಲ? ಅದನ್ನೆಲ್ಲ ಅವಳು ಕಲಿತುಕೊಂಡದ್ದು ನಿನ್ನಿಂದಲೇ!” ಅತ್ತೆ ಅಪರಾಧವನ್ನು ಸೊಸೆಯ ಮೇಲೆ ಹೊರಿಸಿದಳು. ಆದರೆ ಈಗವರು ಹಿಂದಿನಂತೆ ಬೀದಿಗಿಳಿದು ಕೂದಲು ಗಂಟು ಹಿಡಿದೆಳೆದು ಜಗಳಾಡಲು ಸಾಧ್ಯವಿಲ್ಲವಲ್ಲ? ಮಮ್ಮೂಟಿ ಹಾಜ್ಯಾರರ ಹೆಂಡತಿ ಮತ್ತು ಉಮ್ಮಾಲಿ ಹಜ್ಜುಮ್ಮ ಧ್ವನಿಯನ್ನು ಆದಷ್ಟು ತಗ್ಗಿಸಿ ಪರಸ್ಪರರನ್ನು ತೆಗಳಿ ಸುಮ್ಮನಾದರು. ಒಂದೆರಡು ತಿಂಗಳಲ್ಲಿ ನಿಯಾಜ್ ಹಾಜಿರಾಳ ತಲಾಖ್ ಮತ್ತು ಮಾವ ಉಡುಗೊರೆ ಕೊಟ್ಟ ಕಾರನ್ನು ಮಾವನಿಗೆ ಕಳುಹಿಸಿಕೊಟ್ಟನು. ಆ ದಿನ ಮಾತ್ರ ಹಾಜಿರಾ ಮಂಕಾಗಿಯೇ ಇದ್ದಳು. ಉಮ್ಮಾಲಿ ಏನೂ ಆಗಿಯೇ ಇಲ್ಲವೆಂಬಂತೆ ಮೊಮ್ಮಗಳನ್ನು ಸಂತೈಸಿದಳು. “ಅವನೇನೂ ತಾನು ಬಹಳ ದೊಡ್ಡ ಜನ ಅಂತ ಅಂದುಕೊಂಡಿದ್ದಾನೆ. ಆ ಮೂರು ಕಾಸಿಗೂ ಗತಿ ಇಲ್ಲದವನು ಯಾರಿಗೆ ಬೇಕಾಗಿದೆ? ಒಂದು ಒಳ್ಳೆಯ ಸೀರೆಯೇ, ಒಡವೆಯೇ? ಮತ್ತೊಂದೇ? ನಿನ್ನ ಅಬ್ಬ ನಿನ್ನನ್ನು ಕೊಂಡು ಹೋಗಿ ನೀರಿಗೆ ಹಾಕಿದ್ದಲ್ಲವಾ? ಸದ್ಯ, ಹೇಗಾದರೂ ಬಿಡುಗಡೆಯಾಯಿತಲ್ಲ? ನಿನ್ನ ಪುಣ್ಯ, ಸುಮ್ಮನಿರು” ಮಮ್ಮೂಟಿ ಮಾತ್ರ ಆ ದಿನ ತೀರಾ ಮನಃಶಾಂತಿ ಇಲ್ಲದೆ ಕೆಲಸದವರ ಮೇಲೆ ಹರಿಹಾಯುತ್ತಿದ್ದನು. ರಾತ್ರಿ ವಾಸುವಿನೊಡನೆ ದೂರವಾಣಿಯ ಮೂಲಕ 136 ಸುಳಿ ಮಾತನಾಡಿ ಆತನನ್ನು ಕರೆಸಿದನು. ಇಬ್ಬರೂ ಮಹಡಿಯ ಮೇಲಿನ ಮೂಲೆಯ ಕೋಣೆಯಲ್ಲಿ ಕುಳಿತು ಕಂಠ ಪೂರ್ತಿ ಕುಡಿದರು. ವಾಸು ಹಾಡತೊಡಗಿದನು. “ಕಡಲಿಗೆ ಹೋದವರೇ, ಕಡಲಿಂದ ಬಂದವರೇ. ಕೈ ತುಂಬಾ ತಂದಿರೇನೊ? ಬಂಗುಡೆ, ಭೂತಾಯಿ, ಸಿಗಡಿ ಮೀನೂ....” ಮಮ್ಮೂಟಿಯೂ ಹಾಡತೊಡಗಿದನು. “ಮದುಮಗ ಬಂದಾನೊ... ಸಂಪಿಗೆ ಜಾಜಿಯ ತಂದಾನೂ... ಮಧುರ ಸ್ವಪ್ನದಾಳದಲ್ಲೇ... ಹಾವೊಂದ ಕಂಡಾನೂ....” ದೊಡ್ಡ ಮರದಲ್ಲಿ ಎಲೆ ಅಲುಗಾಡಿದರೂ ಊರೆಲ್ಲ ಸುದ್ದಿಯಾಗುತ್ತದೆ. ಮರುದಿನ ಊರೆಲ್ಲ ಗುಸುಗುಸು ಸುದ್ದಿ ಹರಡಿತು. “ಹಾಜಾರರ ಮಗಳಿಗೆ ಗಂಡ ತಲಾಖ್ ಕಳಿಸಿದನಂತೆ!” ವಿಷಯ ತಿಳಿದು ವಿಚಾರಿಸಲು ಬಂದವರೊಡನೆ ಉಮ್ಮಾಲಿ, “ನನ್ನ ಮೊಮ್ಮಗಳಿಗೆ ಯೋಗ್ಯನಾದ ವರನೇ ಅವನು? ಕಲಿತ ಹುಡುಗ ಬೇಕೂಂತ ಅವಳ ತಂದೆ ಹಿಂದೆ ಮುಂದೆ ಯೋಚಿಸದೆ ಅವಳನ್ನು ಕೊಟ್ಟು ಬಿಟ್ಟ. ಕೊಟ್ಟ ಮೇಲೆ ಗೊತ್ತಾಯಿತು. ನಮಗೆ ಸರಿ ಹೊಂದುವಂತಹ ಪುದಿಯಾಪ್ಪಳೆ ಅಲ್ಲಾಂತ! ಆದ್ದರಿಂದ ನಾವೇ ತಲಾಖ್ ತರಿಸಿಕೊಂಡೆವು!” “ಕೇಳಿದ ಕೂಡಲೇ ತಲಾಖ್ ಕೊಟ್ಟು ಬಿಟ್ಟನಾ?” “ಕೊಡದಿದ್ದರೆ ನಾವು ಬಿಡ್ತೇವಾ?” ಆದರೂ ಗುಟ್ಟು ಸೋರಿಯೇ ಹೋಯಿತು. “ಹಾಜಾರರ ಮಗಳ ವರ್ತನೆ ಗಂಡನಿಗೆ ಇಷ್ಟವಾಗಿಲ್ಲವಂತೆ. ಆತನೇ ತಲಾಖ್ ಕಳಿಸಿದನಂತೆ!” * * * * * ಮಮ್ಮೂಟಿ ತನ್ನ ಬಳಗದ ತನ್ನ ಬಂಧುವೊಬ್ಬನಿಗೇ ಹಾಜಿರಾಳನ್ನು ಕೊಟ್ಟು ಮದುವೆ ಮಾಡಿದನು. ತನ್ನ ಕೆಲಸದಲ್ಲಿ ತನಗೆ ಸಹಕಾರಿಯಾಗಿದ್ದು ಡ್ರೈವರನಾಗಿದ್ದ ಬಷೀರ್ ಎಂಬ ಯುವಕ. ತಾನೇ ಮೇಲಕ್ಕೆಳೆದವನು. ಮಮ್ಮೂಟಿ ಆತನೊಡನೆ ಮೊದಲೇ ಹೇಳಿಬಿಟ್ಟನು. “ನೋಡಪ್ಪಾ, ನೀನು ಮನೆಯಳಿಯನಾಗಿ ನನ್ನೊಡನೆಯೇ ಇದ್ದು ಬಿಡು. ಹಾಜಿರಾಳನ್ನು ನಾನು ಎಲ್ಲಿಗೂ ಕಳಿಸುವುದಿಲ್ಲ. ನಿಮಗೆ ಮನೆ ಬೇಕಾದಾಗ ನಾನೆ ಕಟ್ಟಿಸಿ ಕೊಡುವೆ” ಎಂದು. ಹಾಜಿರಾ ಈಗ ಪೂರ್ಣ ಸುಖಿಯೇ? ತಾಯಿ, ಅಜ್ಜಿಯರಿಗಂತೂ ಸಾಕಷ್ಟು ತೃಪ್ತಿ ಇದೆ. ಅಳಿಯನ ಕೈಯಲ್ಲಿ ಧಾರಾಳ ಹಣವಿದೆ ಎಂಬ ಕಾರಣಕ್ಕಾಗಿ. ಖರ್ಚು ಮಾಡಲು ಆತನೆಂದೂ ಹಿಂದೆ ಮುಂದೆ ನೋಡಿದವನಲ್ಲ. ಮಾವ ಭರತ 137 ಮತ್ತು ವಾಸುವಿನೊಡನೆ ಕುಡಿತದ ಪಾರ್ಟಿಗೂ ಸೇರಿಕೊಳ್ಳುತ್ತಾನೆ ಆತ. ಅರ್ಧ ರಾತ್ರಿಯಲ್ಲಿ ತೂರಾಡುತ್ತಾ ಕೋಣೆಗೆ ಬಂದ ಗಂಡನನ್ನು ಹಾಜಿರಾ ಸಮನಾಗಿ ಸ್ವಾಗತಿಸದಿದ್ದರೆ ತೊದಲುತ್ತಾ, “ನಿನ್ನಪ್ಪನ ಹಣದ ಮದವನ್ನು ನನಗೆ ತೋರಿಸಬೇಡ. ಹೆಚ್ಚು ಮಾತನಾಡಿದರೆ ಹಲ್ಲು ಉದುರಿಸಿಯೇನು ಹುಷಾರ್!” ಎನ್ನುತ್ತಾ ಹಾಸಿಗೆಯಲ್ಲಿ ಬಿದ್ದು ನಿದ್ರಾವಶನಾಗುತ್ತಿದ್ದನು. ಆಕೆ ಮಲಗಿದಲ್ಲಿಂದಲೇ ನಿಯಾಜ್‍ನ ನೆನಪನ್ನು ಅಳಿಸಿ ಹಾಕಲು ಸರ್ವ ಸಾಹಸ ಮಾಡುತ್ತಿದ್ದಳು. ತಾನು ಹಟಮಾರಿಯಾದಷ್ಟೂ ಆತನು ವಿನಯ ಸಂಪನ್ನನಾಗುತ್ತಿದ್ದ. ತಾನು ಮೂರ್ಖಳಾದಷ್ಟೂ ಆತನು ಬುದ್ಧಿವಂತನಾಗುತ್ತಿದ್ದನು. ಆತನು ಸಹನಾ ಮೂರ್ತಿಯಾಗಿದ್ದನಲ್ಲವಾ? ಕಪ್ಪಿನ ಬಳಿ ಬಿಳಿ ಇಟ್ಟಾಗ ತಾನೇ ಬಿಳಿಯ ಮಹತ್ವ ತಿಳಿಯುವುದು. ಮಗಳ ಬದುಕಿನ ಕುರಿತು ಮಮ್ಮೂಟಿಯಂತೂ ನಿಶ್ಚಿಂತನಾಗಿದ್ದನು. ಈಗಾತನಿಗೆ ಇಂತಹ ವಿಷಯಗಳ ಕುರಿತು ಚಿಂತಿಸಲು ವೇಳೆಯೂ ಇರಲಿಲ್ಲ., ಆತನ ಕಾರ್ಯಕ್ಷೇತ್ರ ಬಹಳ ವಿಸ್ತರಿಸಿತ್ತು. ಈಗಾತ ಹತ್ತೈವತ್ತು ಕಾರುಗಳ ಒಡೆಯನಾಗಿದ್ದನು. ಊರಿಗೇ ಅರಸನಾಗಿದ್ದನು. ಊರಿನಲ್ಲಿ ಕೆಲಸವಿಲ್ಲದೆ ನಿರುದ್ಯೋಗಿಗಳಾಗಿ ಅಲೆಯುತ್ತಿದ್ದ ಪಡ್ಡೆ ಹುಡುಗರಲ್ಲಿ ಹೆಚ್ಚಿನವರಿಗೆ ಆತನ ಬಳಿ ಕೆಲಸ ದೊರೆತಿದೆ. ದೃಢಕಾಯರಾದ, ಒರಟರಾದ ಮತ್ತು ಯಾವ ಕೆಲಸಕ್ಕೂ ಹೇಸದಂತಹ ಮತ್ತು ನಿಷೆ್ಠಯಿಂದ ದುಡಿಯುವಂತಹ ಹುಡುಗರೆಲ್ಲರೂ ಆತನ ಡ್ರೈವರುಗಳಾಗಿದ್ದರು. ಅವರೆಲ್ಲರಿಗೂ ಆತನ ಕೆಲವು ಕಟ್ಟು ನಿಟ್ಟಿನ ಆಜ್ಞೆಗಳಿವೆ. ನಿಷೆ್ಠ ಮತ್ತು ಪ್ರಾಮಾಣಿಕತೆಗೆ ಆದ್ಯತೆ. ತನ್ನ ನಿರ್ದೇಶವನ್ನು ಪಾಲಿಸುವುದು ಮಾತ್ರ ಈ ವಾಹನ ಚಾಲಕರ ಕರ್ತವ್ಯವಾಗಬೇಕು. ಯಾಕೆ, ಏನು ಎಂಬ ಪ್ರಶ್ನೆಗಳಿಲ್ಲವೇ ಇಲ್ಲ. ಕಾರಿನಲ್ಲಿಟ್ಟ ವಸ್ತುವನ್ನು ತಾನು ಹೇಳಿದಲ್ಲಿಗೆ ತಲುಪಿಸುವುದು ಇವರ ಕೆಲಸ. ಆಕಸ್ಮಾತ್ ಪೊಲೀಸರ ಕೈಗೆ ಸಿಕ್ಕಿ ಬಿದ್ದರೆ ಪ್ರಾಣ ಹೋದರೂ ಬಾಯಿ ಬಿಡಬಾರದು. ಒಂದು ವೇಳೆ ಆತ ಜೈಲು ಶಿಕ್ಷೆ ಅನುಭವಿಸಬೇಕಾಗಿ ಬಂದರೂ ಆತನ ಸಂಬಳ ಮುಂದುವರಿಯುತ್ತದೆ. ಆತನ ಕುಟುಂಬದ ಸಮಸ್ತ ಜವಾಬ್ದಾರಿಯನ್ನೂ ಮಮ್ಮೂಟಿ ನಿರ್ವಹಿಸುತ್ತಾನೆ. ಶಿಕ್ಷೆ ಮುಗಿಸಿ ಬಂದ ಬಳಿಕವೂ ಆತನ ಕೆಲಸ, ಸಂಬಳ ಎಲ್ಲವೂ ಮುಂದುವರಿಯುವುದು. ನಿರುದ್ಯೋಗಿಗಳಾಗಿ ಬದುಕಿನಲ್ಲಿ ಭವಿಷ್ಯವೇ ಇಲ್ಲದೆ ತೊಳಲಾಡುತ್ತಿದ್ದವರಿಗೆ ಕೆಲಸ, ಕೈತುಂಬ ಸಂಬಳ ಮತ್ತು ಈ ಭದ್ರತೆಗಳೆಲ್ಲವೂ ಇದ್ದ ಮೇಲೆ ಅವರಾದರೂ ಯಾಕೆ ಬಾಯಿ ಬಿಡಬೇಕು.? 138 ಸುಳಿ ವರದಕ್ಷಿಣೆಯ ಕಾಟದಿಂದ ಮದುವೆಯಿಲ್ಲದೆ ಮೂಲೆ ಸೇರಿದ್ದ ಊರಿನ ಎಷ್ಟೊ ಹೆಣ್ಣು ಮಕ್ಕಳಿಗೆ ವರದಕ್ಷಿಣೆ ಇಲ್ಲದೆ ಮದುವೆಯಾಯಿತು. ಮಮ್ಮೂಟಿಯ ಕೆಲಸದವನೆಂದರೆ ಹೆಣ್ಣು ಮಕ್ಕಳ ಹೆತ್ತವರು ಹಿಂದೆ ಮುಂದೆ ವಿಚಾರಿಸದೆ ತಮ್ಮ ಮಕ್ಕಳನ್ನು ಮದುವೆ ಮಾಡಿ ಕೊಡುತ್ತಿದ್ದರು. ಬಡವರ ಮನೆಗೆ ಇಂತಹ ಅಳಿಯ ಹೊಕ್ಕನೆಂದರೆ ಆ ಮನೆ ಉದ್ಧಾರವಾಯಿತೆಂದೇ ಲೆಕ್ಕ. ಸಾಮನ್ಯ ಹತ್ತಿಯ ಸೀರೆಗೂ ಪರದಾಡುತ್ತಿದ್ದವರು ಈಗ ವಿದೇಶಿ ಸೀರೆಗಳನ್ನೇ ಉಡಲಾರಂಭಿಸಿದ್ದರು. ಮಮ್ಮೂಟಿಯ ವಾಹನ ಚಾಲಕರೆಲ್ಲರಿಗೂ ಆತನೇ ನಿಂತು ಮದುವೆ ಮಾಡಿಸುತ್ತಾನೆ. ಮದುವೆಯ ಮಾತುಕತೆಗಳೆಲ್ಲವೂ ಆತನ ಮನೆಯಲ್ಲೇ ಆತನ ನಿರ್ದೇಶನದಂತೆ ನಡೆಯುತ್ತವೆ. ಎಂತಹ ಬಡವನ ಮನೆಯಾದರೂ ಆ ಮದುವೆ ಮನೆಗೆ ಮಮ್ಮೂಟಿ ಭೇಟಿ ನೀಡಿಯೇ ನೀಡುತ್ತಾನೆ. ವಧುವಿಗೆ ಚಿನ್ನದ ಸರವೊಂದರ ಉಡುಗೊರೆಯೂ ದೊರೆಯುತ್ತದೆ. ಮದುಮಕ್ಕಳನ್ನು ಕೆಲವು ದಿನಗಳವರೆಗೆ ಮಧುಚಂದ್ರಕ್ಕೂ ಕಳುಹಿಸುತ್ತಾನೆ ಮಮ್ಮೂಟಿ. ಊರು ಪ್ರವೇಶಿಸಿದ ಈ ಭರತ ಪ್ರವಾಹವಾಗಿ ಮುನ್ನುಗ್ಗತೊಡಗಿತ್ತು. * * * * * 139 ಪ್ರವಾಹ ಮಮ್ಮೂಟಿಯದು ಸುಖ ಸಂಸಾರ. ಮೊದಲ ಹೆಂಡತಿ ರುಖಿಯಾ ಮತ್ತು ಎರಡನೇ ಹೆಂಡತಿ ಫರೀದಾ. ರುಖಿಯಾಳ ಮಕ್ಕಳು ಹಾಜಿರಾ ಮತ್ತು ಜಮಾಲು; ಹತ್ತು ವರ್ಷಗಳ ಅಂತರದ ಬಳಿಕ ಹುಟ್ಟಿದ ಮಕ್ಕಳು ತಾಹಿರಾ ಮತ್ತು ಸಫರುಲ್ಲಾ, ಫರೀದಾಬಿಯ ಇಬ್ಬರು ಮಕ್ಕಳು ಸಾಯಿರಾ ಮತ್ತು ಮುನೀರ್. ತಾಯಿ ಉಮ್ಮಾಲಿ. ಎಲ್ಲರಿಂದೊಡಗೂಡಿದ ತುಂಬಿದ ಸಂಸಾರ. ಹಾಜಿರಾ ಗಂಡನ ಮನೆಗೂ ತವರು ಮನೆಗೂ ಓಡಾಡುತ್ತಾ ಕಾಲ ಕಳೆಯುತ್ತಿದ್ದಳು. ಹಾಜಿರಾಳ ಮೊದಲ ಮದುವೆಯ ಕಹಿ ಅನುಭವವನ್ನು ಎಲ್ಲರೂ ಮರೆತಿದ್ದರು. ಹಾಜಿರಾಗೆ ಮದುವೆಯಾದ ಒಂದೆರಡು ವರ್ಷಗಳಲ್ಲಿಯೇ ಮಮ್ಮೂಟಿ ಮಗಳಿಗೆ ದೊಡ್ಡ ಮನೆ ಕಟ್ಟಿಸಿಕೊಟ್ಟನು. ಅಳಿಯ ಬಷೀರ್ ವ್ಯವಹಾರದಲ್ಲಿ ಮಾವನಿಗಿಂತಲೂ ಒಂದು ಹೆಜ್ಜೆ ಮುಂದೆಯೇ ಇದ್ದಾನೆ. ಭೂಗತ ವ್ಯಾಪಾರವನ್ನು ಮುಚ್ಚಿಕೊಳ್ಳುವಂತೆ ಒಂದೆರಡು ವ್ಯಾಪಾರೀ ಮಳಿಗೆಗಳನ್ನು ತೆರೆದಿದ್ದನು. ಮಂಗಳೂರಿನಲ್ಲಿ ಹೊಟೇಲ್ ಉದ್ಯಮವನ್ನೂ ಪ್ರಾರಂಭಿಸಿ, “ಹಾಜಾರರ ಅಳಿಯ ಅವರನ್ನೂ ಮೀರಿಸುತ್ತಾನೆ!” ಎಂದು ಊರವರಿಂದ ಶಹಭಾಸ್‍ಗಿರಿಯನ್ನೂ ಪಡೆದಿದ್ದನು. ಹಾಜಿರಾ ಕೂಡಾ ಸುಖದ ಸುಪ್ಪತ್ತಿಗೆಯಲ್ಲಿ ಹಿಂದಿನದೆಲ್ಲವನ್ನೂ ಮರೆತಿದ್ದಳು. ಬಷೀರ್‍ನ ಒರಟು ಸ್ವಭಾವ ಮತ್ತು ಮುಂಗೋಪ ಮಾತ್ರ ಆಕೆಗೆ ಆಗಾಗ ನೋವು ನೀಡುತ್ತಿತ್ತು. ತನ್ನ ಅನುಮತಿ ಇಲ್ಲದೆ ಆಕೆ ಮನೆಯಿಂದ ಕಾಲು ಹೊರಗಿಡಬಾರದು; ಆಕೆಯ ತವರು ಮನೆಗೆ ಹೋಗಬೇಕಾದರೂ ಗಂಡನ ಅನುಮತಿಗಾಗಿ ಕಾಯಬೇಕು ಎಂಬಂತಹ ಕಟ್ಟುನಿಟ್ಟು. ಆತನು ಮನೆಯಲ್ಲಿರುವಾಗ ಅಡಿಗೆ ಕೊಂಚ ಹೆಚ್ಚು ಕಮ್ಮಿಯಾದರೂ ಕೋಪದಿಂದ ಪಾತ್ರೆಗಳನ್ನು ಎತ್ತಿ ಎಸೆಯುತ್ತಿದ್ದನು. ಕೋಪ ಬಂದಾಗ ಹೆಂಡತಿಯನ್ನು ಹೊಡೆಯುವುದೂ ಕೂಡಾ ನೀರು ಕುಡಿದಷ್ಟೆ ಸುಲಭ ಆತನಿಗೆ. ಮರುದಿನವೇ ಹೊಸ ಸೀರೆಗಳ ಕಟ್ಟನ್ನು ಹಿಡಿದು ನಗುಮುಖದಿಂದ ‘ಹಾಜಿರಾ’ ಎಂದು ಕರೆಯುತ್ತಾ ಒಳ ಬರುತ್ತಿದ್ದನು. ಮೊದಲೆಲ್ಲ ಹಾಜಿರಾ ಆತನ ಈ ಒರಟು ಸ್ವಭಾವ ತಾಳಲಾರದೆ ಒಬ್ಬಳೇ ಮಲಗಿ ಅಳುತ್ತಿದ್ದಳು. ಆಗೆಲ್ಲ ನಿಯಾಜ್‍ನ ಮುಖ ಕಣ್ಣೆದುರು ತೇಲುತ್ತಿತ್ತು. 140 ಸುಳಿ ಆತನ ನಗುಮುಖ ಆಕೆಯೆದೆಯಲ್ಲಿ ಸಹಿಸಲಾಗದ ನೊವಿನ ಬುಗ್ಗೆ ಚಿಮ್ಮಿಸುತ್ತಿತ್ತು. ಹಣದಿಂದ ಕೊಳ್ಳಲಾಗದುದೇನೊ ಆತನ ಬಳಿಯಿದೆಯೆಂದು ಆಕೆಗನಿಸಿದ್ದು ಎಷ್ಟು ಬಾರಿಯೊ. ತಾಯಿ ಮತ್ತು ಅಜ್ಜಿ ತನ್ನನ್ನು ಹಾದಿ ತಪ್ಪಿಸಿದಿದ್ದಿದ್ದರೆ ತಾನು ಆತನ ಬಳಿಯೇ ಇರುತ್ತಿದ್ದೆನಲ್ಲವೇ? ಎಲ್ಲಕ್ಕಿಂತಲೂ ಆ ಅತ್ತೆ. ತನ್ನ ತಾಯಿಗಿಂತಲೂ ಹೆಚ್ಚಾದ ವಾತ್ಸಲ್ಯ ತೋರಿದ ಆ ಅತ್ತೆಯನ್ನು ಮರೆಯುವುದಾದರೂ ಹೇಗೆ? ಈಗಲೂ ಆಕೆಗೆ ಅತ್ತೆಯೊಬ್ಬಳಿದ್ದಳು; ಮಗನ ಮನೆಗೆ ಆಗಾಗ ಬಂದು ಮಗನಿಗೆ ಬುದ್ಧಿ ಹೇಳುತ್ತಿದ್ದ ಅತ್ತೆ, “ನೋಡು ಬಷೀರ್, ದೊಡ್ಡವರ ಮಗಳೆಂದು ಸಲಿಗೆ ಕೊಡಬೇಡ. ಹೆಂಗಸರನ್ನು ಯಾವಾಗಲೂ ಅಂಕೆಯಲ್ಲಿಟ್ಟುಕೊಳ್ಳಬೇಕು. ಇಲ್ಲವಾದರೆ ತಲೆ ಮೇಲೆ ಹತ್ತಿ ಕುಳಿತುಕೊಳ್ಳುತ್ತಾರೆ ಈಗಿನ ಹೆಂಗಸರು!” ಎನ್ನುತ್ತಿದ್ದಳು. ಅತ್ತೆ ಬಂದಾಗ ಹಾಜಿರಾ ಒಳಗಿನಿಂದ ಬಂದು ಅತ್ತೆಯನ್ನು ಎದುರುಗೊಳ್ಳಲು ಸ್ವಲ್ಪ ತಡವಾದರೆ. “ನಿನ್ನ ಹೆಂಡತಿ ನನ್ನನ್ನು ಸರಿಯಾಗಿ ಆದರದಿಂದ ಬರ ಮಾಡಿಕೊಳ್ಳಲೇ ಇಲ್ಲ. ನಾನು ಬಂದದ್ದು ಅವಳಿಗೆ ಇಷ್ಟವಾಗಲೆ ಇಲ್ಲವೊ ಏನೊ” ಎಂದು ಚಿತ್ತಾದ ಗೋಡೆಗೆ ಇನ್ನಷ್ಟು ಮಸಿ ಬಳಿಯುತ್ತಿದ್ದಳು. ಮಾತೆಗೆ ಅತ್ಯುನ್ನತ ಸ್ಥಾನ ನೀಡಬೇಕು. ತಾಯಿಯ ಮನಸ್ಸನ್ನು ನೋಯಿಸಬಾರದೆಂದು ಮೌಲವಿಗಳು ಮತ ಪ್ರಸಂಗಗಳಲ್ಲಿ ಹೇಳುವುದನ್ನು ಬಷೀರ್ ಕುಡಾ ಕೇಳಿಸಿಕೊಂಡಿದ್ದನು. ಹಾಗಾಗಿಯೇ ತನ್ನ ತಾಯಿಯನ್ನು ನೋಯಿಸಿದವರನ್ನು ಆತನೆಂದೂ ಕ್ಷಮಿಸಲಾರ. ಅಲ್ಲಿ ನ್ಯಾಯಾನ್ಯಾಯಗಳ ವಿವೇಚನೆ ಇಲ್ಲವೇ ಇಲ್ಲ. ತಾಯಿಯ ಮಾತೇ ವೇದವಾಕ್ಯ. ಉಮ್ಮ ಹೇಳಿದರೆಂದರೆ ಮುಗಿಯಿತು. “ನಿನ್ನಪ್ಪನ ಮನೆಯ ಹಣದ ಮದವನ್ನು ನನ್ನ ಬಳಿ ತೋರಿಸಬೇಕೆಂದಿದ್ದೀಯಾ? ನನ್ನನ್ನು ಯಾರೂಂತ ತಿಳಿದೆ?” ಎಂದು ತಾಯಿಯ ಎದುರಿಗೇ ಹೆಂಡತಿಯನ್ನು ಹೊಡೆಯುತ್ತಿದ್ದನು. ಆಕೆ ಇನ್ನೂ ಗರ್ಭಿಣಿಯಾಗದಿದ್ದುದೂ ಅತ್ತೆಗೆ ದಬ್ಬಾಳಿಕೆ ನಡೆಸಲು ಅಸ್ತ್ರ ದೊರೆತಂತಾಗಿತ್ತು. “ಏನು ಕೊರತೆಯೊ ಯಾರಿಗೆ ಗೊತ್ತು? ಇವಳಿಗೆ ಮಗುವಾಗುವುದಿಲ್ಲಾಂತ ಅವನಿಗೆ ಗೊತ್ತಾಯ್ತೂಂತ ಕಾಣುತ್ತದೆ. ಅದಕ್ಕೇ ಬೇಗ ತಲಾಖ್ ಕೊಟ್ಟು ಕಳಿಸಿ ಬಿಟ್ಟನೇನೊ. ನನ್ನ ಮಗನೊಬ್ಬ ಪೆದ್ದ! ಹಾಜಾರರು ಮಗಳನ್ನು ಕೊಡುತ್ತೇವೆನ್ನುವಾಗ ಹಿಂದೆ ಮುಂದೆ ನೋಡದೆ ಕಟ್ಟಿಕೊಂಡ!” ಎಂದು ಹಾಜಿರಾಳ ಎದುರಿಗೆ ಜರಿಯುತ್ತಿದ್ದಳು. ಮತ್ತೂ ಮುಂದುವರಿಸುತ್ತಾ “ಇನ್ನೊಂದಾರು ತಿಂಗಳು ಕಾಯ್ತೇನೆ. ಆಗಲೂ ಏನೂ ಆಗದಿದ್ದರೆ ನನ್ನ ಪ್ರವಾಹ 141 ಮಗನಿಗೆ ಇನ್ನೊಂದು ಮದುವೆ ಮಾಡ್ತೇನೆ!” ಎಂದೂ ಸೇರಿಸುತ್ತಿದ್ದಳು. ಅತ್ತೆ ತನ್ನ ಮನೆಗೆ ಹಿಂತಿರುಗಿ ಹೋಗುವವರೆಗೆ ಆಕೆ ಮುಳ್ಳಿನ ಮೇಲೆ ಕುಳಿತಂತೆ ಚಡಪಡಿಸುತ್ತಿದ್ದಳು. ಒಮ್ಮೆ ಆಕೆ ತವರು ಮನೆಗೆ ಹೋದಾಗ ಅಜ್ಜಿಯೊಡನೆ, “ನೀವೆಲ್ಲ ಸೇರಿಕೊಂಡು ನನ್ನ ಬದುಕನ್ನು ಮಣ್ಣು ಗೂಡಿಸಿದಿರಿ. ಕೊನೆಗೂ ನನ್ನನ್ನು ಹಳ್ಳಕ್ಕೆ ನೂಕಿದಿರಿ” ಎಂದು ಅತ್ತು ಕಣ್ಣೊರೆಸಿಕೊಂಡಾಗ ಅಜ್ಜಿ ಒಂದೇ ಪ್ರಶ್ನೆ ಕೇಳಿದ್ದಳು. “ನೀನೇನೇ ಹೇಳು. ಮರುಭೂಮಿಗಿಂತ ದಟ್ಟವಾದ ಕಾಡೇ ವಾಸಿಯಲ್ಲವಾ? ಬಡತನವೆಂದರೇನೂಂತ ನಿನಗೂ ನೆನಪಿರಬಹುದು. ಆ ದರಿದ್ರ ಬದುಕಿಗಿಂತಲೂ ಇದು ಸಾವಿರ ಪಾಲು ಮೇಲು. ಗಂಡಂದಿರು ಹೆಂಡತಿಯರನ್ನು ಹೊಡೆಯುವುದೂ ಬೈಯುವುದೂ ಹೊಸ ವಿಷಯವೇನೂ ಅಲ್ಲ! ಅವನು ದುಡಿದದ್ದನ್ನೆಲ್ಲ ನಿನ್ನ ಬಳಿಯೇ ಸುರಿಯುತ್ತಾನಾ ಇಲ್ಲವಾ?” ಅಜ್ಜಿಯ ಬುದ್ಧಿವಾದ ಆಕೆಯನ್ನು ಮೂಕಿಯನ್ನಾಗಿಸಿತ್ತು. ಅದೂ ಅಲ್ಲದೆ ತನ್ನ ತಾಯಿ ಹೊರಟು ಹೋದ ಮೇಲೆ ಬಷೀರ್ ಕೊಂಚ ಬದಲಾಗುತ್ತಿದ್ದನು. ಕೊನೆಗೂ ಅತ್ತೆಯ ಆರ್ಭಟಕ್ಕೆ, ಹೆದರಿಯೊ ಎಂಬಂತೆ ಆಕೆ ಗರ್ಭಿಣಿಯಾಗಿ ಮಗುವನ್ನೂ ಹೆತ್ತಳು. ಆ ಬಳಿಕ ಬಷೀರ್ ಕೂಡಾ ಅನುನಯದಿಂದಲೇ ಹೆಂಡತಿಯೊಡನೆ ವರ್ತಿಸತೊಡಗಿದನು. ಹಾಗಾಗಿಯೇ ಇತ್ತೀಚೆಗೆ ಆಕೆಗೆ ಬದುಕು ಸಹನೀಯವಾಗತೊಡಗಿತ್ತು. * * * * * ಮಮ್ಮೂಟಿ ಕಟ್ಟಿಸಿದ ಮಸೀದಿ ಊರ ಮಧ್ಯದಲ್ಲಿ ತಲೆ ಎತ್ತಿ ನಿಂತಿತು. ಭವ್ಯವಾದ, ಅತ್ಯಂತ ಸುಂದರವಾದ ಕೆತ್ತನೆಗಳಿಂದ ಕೂಡಿದ ಮಸೀದಿ. ನೆಲಕ್ಕೆ ಪೂರ್ತಿಯಾಗಿ ಅಮೃತ ಶಿಲೆಯನ್ನು ಹಾಸಲಾಗಿತ್ತು. ದೀಪಾಲಂಕಾರಗಳನ್ನು ದುಬಾಯಿಯಿಂದಲೇ ತರಿಸಲಾಗಿತ್ತು. ಸುತ್ತುಮುತ್ತಲ ಊರುಗಳೆಲ್ಲೆಲ್ಲೂ ಇಂತಹ ಮಸೀದಿ ಇಲ್ಲ. ಸಮೀಪದ ಊರುಗಳಿಂದ ಈ ಮಸೀದಿಯನ್ನು ನೋಡಲೆಂದೇ ಜನರು ತಂಡೋಪತಂಡವಾಗಿ ಬರುತ್ತಿದ್ದರು. “ನಮ್ಮೂರಿಲ್ಲೂ ಮಮ್ಮೂಟಿ ಹಾಜಾರರಂತಹವರೊಬ್ಬರಿದ್ದಿದ್ದರೆ ಅಲ್ಲೂ ಇಂತಹೊಂದು ಮಸೀದಿಯನ್ನು ಕಟ್ಟಿಸಿಕೊಳ್ಳಬಹುದಾಗಿತ್ತು ಎಂದು ಬಂದವರು ತಮ್ಮ ದುರಾದೃಷ್ಟವನ್ನು ಹಳಿಯುತ್ತಿದ್ದರು. ಊರಿಗೊಂದು ಭವ್ಯವಾದ ಮಸೀದಿ ಮಸೀದಿಗೋರ್ವ ಮೌಲವಿ, ಇನ್ನಿತರ ಕೆಲಸದವರು ಹಾಗೂ ಇದರ ಖರ್ಚು ವೆಚ್ಚಕ್ಕಾಗಿ ಒಂದಷ್ಟು 142 ಸುಳಿ ಅಂಗಡಿ ಸಾಲುಗಳು ಎಲ್ಲವೂ ಮಮ್ಮೂಟಿಯ ಕೊಡುಗೆ. “ನಾಳೆ ಇದರ ಖರ್ಚು ವೆಚ್ಚಕ್ಕಾಗಿ ಊರವರ ವಂತಿಗೆಗಾಗಿ ಕೈಚಾಚುವುದೇನೂ ಬೇಡವೆಂದು ನಾನೇ ಎಲ್ಲ ಏರ್ಪಾಡು ಮಾಡಿದ್ದೇನೆ. ಅಲ್ಲವಾ ಕಾಕಾ?” ಎಂದು ಮಮ್ಮೂಟಿ ತನ್ನ ಹಿತೈಷಿಗಳೊಡನೆ ಹೇಳುತ್ತಿದ್ದನು. ಮಸೀದಿಯ ಉದ್ಘಾಟನೆಗಾಗಿ ದೆಹಲಿಯಿಂದ ಮುಸ್ಲಿಂ ಮಂತ್ರಿಗಳನ್ನು ಕರೆಸಲಾಗಿತ್ತು. ಅವರ ವಾಸ್ತವ್ಯವಂತೂ ಮಮ್ಮೂಟಿಯ ಬಂಗಲೆಯಲ್ಲೇ ಆಗಿತ್ತು. ಬಂದವರ ಆತಿಥ್ಯಕ್ಕಾಗಿ ಅಡಿಗೆಯವರನ್ನು ಪರ ಊರಿನಿಂದ ಕರೆಸಲಾಗಿತ್ತು. ಊರಿನಲ್ಲಿ ಹಿಂದೆಂದೂ ಕಂಡಿರದಂತಹ ಸಮಾರಂಭ “ಮಮ್ಮೂಟಿ ಹಾಜಾರರು ಮಗಳ ಮದುವೆಯನ್ನೂ ಇಷ್ಟೊಂದು ಅದ್ದೂರಿಯಿಂದ ಮಾಡಿರಲಿಲ್ಲ” ಎಂದು ಊರವರು ಆಡಿಕೊಂಡರು. “ರಾಜ್ಯದ ಮುಖ್ಯಮಂತ್ರಿಗಳನ್ನೂ ಕರೆಯಬಹುದಾಗಿತ್ತು” ಎಂದು ಆಳುವ ಪಕ್ಷದ ಕಾರ್ಯಕರ್ತರೊಬ್ಬರು ನುಡಿದಾಗ, “ಅದು ಹೇಗೆ ಸಾಧ್ಯ? ಅವರು ಕಾಫಿರ್ ಅಲ್ಲವಾ? ಕಾಫಿರರನ್ನು ಮಸೀದಿಗೆ ಕರೆಸಿದರೆ ಊರವರೇನೆಂದಾರು?” ಎಂದು ಇನ್ನೊಬ್ಬರು ಸಮಜಾಯಿಷಿ ನೀಡಿದರು. ಕೇಂದ್ರದ ಮಂತ್ರಿಗಳು ಮಸೀದಿಯ ಉದ್ಘಾಟನೆ ಮಾಡುತ್ತಾ, “ಮಮ್ಮೂಟಿ ಹಾಜಿಯವರಂತಹ ಕೊಡುಗೈ ದಾನಿಗಳನ್ನು ಪಡೆದ ಈ ಊರವರು ಪುಣ್ಯವಂತರು. ಪ್ರತಿಯೊಂದು ಊರಿನಲ್ಲೂ ಇಂತಹ ಒಬ್ಬೊಬ್ಬ ಮಮ್ಮೂಟಿ ಹಾಜಿಗಳು ಹುಟ್ಟಲಿ! ಮಸೀದಿ ಮಾತ್ರವಲ್ಲ. ಅನಾಥಾಲಯ, ಮದ್ರಸ, ಶಾಲೆ ಮುಂತಾದುವುಗಳ ಕುರಿತೂ ಮಮ್ಮೂಟಿಯವರ ಯೋಚನೆ ಹರಿಯಲಿ. ಅಲ್ಲಾಹ್ ಇವರಿಗೆ ಮತ್ತಷ್ಟು ಐಶ್ವರ್ಯವನ್ನು ನೀಡಲಿ ಹಾಗೂ ಇವರು ಇಂತಹ ಪುಣ್ಯ ಕಾರ್ಯಗಳಿಗೆ ಇನ್ನಷ್ಟು ನೆರವು ನೀಡುವಂತಾಗಲಿ...” ಎಂದು ಅರ್ಧಗಂಟೆ ಭಾಷಣ ಮಾಡಿದರು. ಜನರ ಕರತಾಡನ ಮುಗಿಲು ಮುಟ್ಟಿತು. ಮಮ್ಮೂಟಿಯೂ ಎದ್ದು ನಿಂತು ಭಾಷಣ ಮಾಡಿದನು. “ಈ ಊರಿನಲ್ಲಿ ಒಂದು ಅತ್ಯುತ್ತಮ ಮಸೀದಿ ಇಲ್ಲದ ಕೊರತೆ ಎಂದಿನಿಂದಲೂ ನನ್ನನ್ನು ಬಾಧಿಸುತ್ತಿತ್ತು. ನಾನು ಉತ್ತರ ಭಾರತದಲ್ಲಿ ಇಂತಹ ಒಂದು ಮಸೀದಿ ಕಂಡು ನಮ್ಮೂರಲ್ಲೂ ಇಂತಹ ಒಂದು ಮಸೀದಿ ಇರಬೇಕೆಂದು ಆಶಿಸಿದೆ. ಊರಿನಲ್ಲಿ ಎಲ್ಲಕ್ಕಿಂತ ಮುಖ್ಯವಾದುದು ಮಸೀದಿ. ಅಲ್ಲಾಹ್ ನನಗೆ ಇಷ್ಟೆಲ್ಲವನ್ನೂ ಕೊಟ್ಟಿರುವಾಗ ಊರಿಗೊಂದು ಮಸೀದಿ ಕಟ್ಟಿಸುವುದು ನನ್ನ ಕರ್ತವ್ಯವೆಂದು ತಿಳಿದೆ... ಕೇಂದ್ರ ಮಂತ್ರಿಗಳು ಯಾವಾಗಲೂ ನಮ್ಮ ಪ್ರವಾಹ 143 ಸಹಾಯಕ್ಕಿರಬೇಕು...” ನಿರರ್ಗಳವಾಗಿ ಮಮ್ಮೂಟಿಯೂ ಅರ್ಧ ಗಂಟೆ ಭಾಷಣ ಮಾಡಿದನು. ಈಗ ಮುಖ್ಯ ಮೌಲವಿಗಳ ಸರದಿ. “ಉತ್ತಮ ಮಸೀದಿ ಆದಂತೆಯೆ ಇಲ್ಲೊಂದು ಒಳ್ಳೆಯ ಮದ್ರಸಾ ಇರಬೇಕು. ಇತ್ತೀಚೆಗೆ ನಮ್ಮ ಹೆಣ್ಣು ಮಕ್ಕಳೂ ಶಾಲೆಗೆ ಹೋಗ ತೊಡಗಿದ್ದಾರೆ. ಆದರೆ ಹೆಣ್ಣು ಮಕ್ಕಳಿಗೆ ಈ ವಿದ್ಯಾಭ್ಯಾಸವೆಲ್ಲ ಬೇಕಾಗಿಲ್ಲ. ಇಂತಹ ವಿದ್ಯಾಭ್ಯಾಸದಿಂದ ಅವರು ಕೆಟ್ಟು ಹೋಗುತ್ತಾರೆ. ಅವರಿಗೆ ಖುರ್‍ಆನ್ ಮತ್ತು ಧಾರ್ಮಿಕ ಗ್ರಂಥಗಳನ್ನು ಓದಲು ತಿಳಿದರೆ ಧಾರಾಳ ಸಾಕು. ನಿಮ್ಮ ಹೆಂಗಸರನ್ನು ಬೀದಿಯಲ್ಲಿ ಸುತ್ತಿಸಬೇಡಿ. ನೀವು ಅವರನ್ನು ಮನೆಯಿಂದ ಹೊರಗೆ ಕಳುಹಿಸಿದರೆ ದೇವರ ಎದುರಿನಲ್ಲಿ ನೀವು ತಪ್ಪುಗಾರರಾಗುತ್ತೀರಿ. ನಿಮ್ಮ ಹೆಂಗಸರು ಮನೆಯೊಳಗಿದ್ದು ಖುರ್‍ಆನ್ ಓದುತ್ತಾ, ಮಕ್ಕಳನ್ನು ಸಾಕುತ್ತಾ, ಮನೆ ವಾರ್ತೆ ನೋಡಿಕೊಂಡಿದ್ದರೆ ನಿಮಗೇ ಕ್ಷೇಮ. ಈ ಪ್ರಪಂಚದಲ್ಲಿ ಯಾವುದಕ್ಕೂ ಆಸೆ ಪಡಬೇಡಿರೆಂದು ನಿಮ್ಮ ಹೆಂಗಸರಿಗೆ ತಿಳಿಸಿರಿ. ಅಲ್ಲಾಹ್ ಎಲ್ಲವನ್ನೂ ನಿಮಗಾಗಿ ಸ್ವರ್ಗದಲ್ಲಿ ಸೃಷ್ಟಿಸಿಟ್ಟಿದ್ದಾನೆ. ನೀವು ದೇವರ ಆಜ್ಞೆಯನ್ನು ಪಾಲಿಸಿದರೆ ಅಲ್ಲಾಹ್ ನಿಮಗೆ ಸ್ವರ್ಗದಲ್ಲಿ ಎಲ್ಲ ಸುಖವನ್ನೂ ನೀಡುವನು...” ಜನಸ್ತೋಮವನ್ನು ಕಂಡ ಮೌಲವಿಗಳಿಗೆ ಸಮಯದ ಪರಿವೆ ಇರಲಿಲ್ಲ. ಹೆಂಗಸರನ್ನು ಯಾವ ರೀತಿ ನಿಯಂತ್ರಿಸಿ ಮನೆಯೊಳಗಿಟ್ಟುಕೊಳ್ಳಬೇಕೆನ್ನುವುದೇ ಇವರ ಭಾಷಣದ ಮುಖ್ಯ ವಿಷಯವಾಗಿತ್ತು. ಜನರ ಕರತಾಡನವೂ ಮುಗಿಲು ಮುಟ್ಟಿತು. ಮಮ್ಮೂಟಿಯ ಮನೆಯಲ್ಲಿ ರಾಜಾತಿಥ್ಯ ಸ್ವೀಕರಿಸಿ ಮಂತ್ರಿಗಳು ಹೊರಟು ಹೋದರು. ಮರುದಿನ ಮಮ್ಮೂಟಿ ಫರೀದಳನ್ನು ಕರೆದು, “ಸಾಯಿರಾಳನ್ನು ಇನ್ನು ಶಾಲೆಗೆ ಕಳಿಸುವುದು ಬೇಡ” ಎಂದನು. “ಯಾಕೆ? ಮುಂದಿನ ವರ್ಷ ಕಾಲೇಜಿಗೆ ಹೋಗಬೇಕೆಂದು ಅವಳಿಗೆ ಬಹಳ ಆಸೆಯಿದೆ.” “ಕಾಲೇಜು?'' ಮಮ್ಮೂಟಿ ಕಣ್ಣರಳಿಸಿದನು. “ಅವಳೇನು ಗಂಡು ಹುಡುಗನೇ? ಇಷ್ಟು ವರ್ಷ ಶಾಲೆಗೆ ಹೋದದ್ದೇ ಸಾಕಷ್ಟಾಯಿತು. ಮೊನ್ನೆ ಮೌಲವಿಗಳು ಭಾಷಣದಲ್ಲಿ ಹೇಳಿದ್ದಾರೆ ಹೆಣ್ಣು ಮಕ್ಕಳಿಗೆ ಹೆಚ್ಚು ವಿದ್ಯೆ ಕಲಿಸಿದರೆ ಅವರು ಕೆಟ್ಟು ಹೋಗುತ್ತಾರೇಂತ...” “ಕೆಟ್ಟು ಹೋಗುವುದಕ್ಕೆ ಅವರೇನು, ಕುಂಬಳಕಾಯಿಯೇ? ಕೆಡುವವರು ಶಾಲೆಗೆ ಹೋಗದೆ ಮನೆಯೊಳಗಿದ್ದರೂ ಕೆಡುತ್ತಾರೆ. ಮೌಲವಿಗಳಿಗೇನು? ಅಂತಹ 144 ಸುಳಿ ನೂರು ಮಾತು ಹೇಳ್ತಾರೆ. ಹೆಣ್ಣು ಗಂಡುಗಳೆಲ್ಲರೂ ಅರೇಬಿಯಾದಿಂದ ಚೀನಾ ದೇಶದವರೆಗಾದರೂ ಪ್ರಯಣ ಮಾಡಿ ವಿದ್ಯಾಭ್ಯಾಸ ಪಡೆಯಬೇಕೆಂದು ಪೈಗಂಬರರು ಹೇಳಿದ್ದಾರೆ. ನನಗವೆಲ್ಲ ಚೆನ್ನಾಗಿ ಗೊತ್ತಿದೆ...” ಎಂದು ಕೊಂಚ ಧೈರ್ಯದಿಂದಲೇ ಹೇಳಿದಳು. “ನೀನು ಸುಮ್ಮನೆ ತಲೆ ಹರಟೆ ಮಾಡಬೇಡ. ಈ ಊರಿನಲ್ಲಿ ಮೌಲವಿಗಳು ಹೇಳಿದಂತೆ ನಾವೇ ಕೇಳದಿದ್ದರೆ ಹೇಗೆ? ಇಷ್ಟಕ್ಕೂ ಅವಳು ಇನ್ನೂ ಕಲಿತು ಏನಾಗಬೇಕಾಗಿದೆ? ಕೆಲಸಕ್ಕೆ ಹೋಗಿ ಹಣ ಸಂಪಾದಿಸಬೇಕಾಗಿದೆಯೇ? ಅವಳಿಗೆ ಉತ್ತಮ ವರನೊಬ್ಬನನ್ನು ನೋಡಿ ಮದುವೆ ಮಾಡಿ ನನ್ನ ಜವಾಬ್ದಾರಿ ಮುಗಿಸುತ್ತೇನೆ. ಅವಳಿಗೆ ಬೇಕಾದಂತಹ ಚಿನ್ನದೊಡವೆ ಮಾಡಿಸು. ಮುಂದಿನ ಬಾರಿ ನಾನು ಬೊಂಬಾಯಿಗೆ ಹೋಗುವಾಗ ನೀನೂ ಬಾ. ನಿಮಗೆ ಬೇಕಾದಂತಹ ಒಡವೆಗಳನ್ನು ಅಲ್ಲಿಂದಲೇ ತರಬಹುದು” ಎಂದನು. ‘ಬೊಂಬಾಯಿ’ ಎಂದೊಡನೆ ಫರೀದ ಮೆತ್ತಗಾದಳು. ತನ್ನವರನ್ನೆಲ್ಲ ಒಮ್ಮೆ ನೋಡುವ ಅವಕಾಶ ಒದಗಿ ಬಂದಾಗ ಬೇಡವೆನ್ನುವುದಾದರೂ ಏಕೆ? ಅದೂ ಅಲ್ಲದೆ ಇಂತಹ ವಿಷಯಗಳಲ್ಲಿ ಮಮ್ಮೂಟಿ ನಿಂತ ನೆಲದಿಂದ ಒಂದಿನಿತೂ ಹಿಂದೆ ಸರಿಯಲಾರ. ಹೆಂಗಸರನ್ನು ನಿಯಂತ್ರಿಸಬೇಕೆಂದು ಮೌಲವಿಗಳು ಹೇಳಿದರೆ ಅದೇ ಕಡೆಯ ಮಾತು! ಮುಂದಿನ ಬಾರಿ ಮಮ್ಮೂಟಿ ಬೊಂಬಾಯಿಗೆ ಹೊರಟಾಗ ಫರೀದಳೂ ಮಕ್ಕಳೊಡನೆ ಹೋಗಿ ಮಗಳಿಗೆ ಬೇಕುಬೇಕಾದಂತಹ ಚಿನ್ನದ ಆಭರಣಗಳನ್ನೂ ಇತರ ವಸ್ತುಗಳನ್ನೂ ಖರೀದಿಸಿ ಬಂದಳು. ಹೆಂಡತಿ ಮಕ್ಕಳಿಗಾಗಿ ಖರ್ಚು ಮಾಡುವುದರಲ್ಲಂತೂ ಮಮ್ಮೂಟಿ ಧಾರಾಳಿಯೇ. * * * * * ಮಮ್ಮೂಟಿಯ ಬಳಿಯಲ್ಲಿ ನೂರು ಜನ ಯುವಕರಾದರೂ ಕಾರು ಚಾಲಕನ ಕೆಲಸ ನಿರ್ವಹಿಸುತ್ತಿದ್ದರು. ಇವರು ಈ ಕಾರುಗಳನ್ನು ತಮ್ಮ ಬಳಿಯೇ ಇಟ್ಟುಕೊಳ್ಳಬಹುದಾಗಿತ್ತು. ಪರ ಊರ ಪ್ರಯಣವಿಲ್ಲದ ದಿನಗಳಲ್ಲಿ ಊರಿನ ಬೀದಿಗಳಲ್ಲಿ ಈ ಕಾರುಗಳ ಓಡಾಟ. ಜನ ಸಾಮಾನ್ಯರಿಗೆ ಬೀದಿಗಳಲ್ಲಿ ನಡೆದಾಡುವುದೇ ಕಷ್ಟಕರವಾದಂತಹ ಪರಿಸ್ಥಿತಿ. ಈ ವಾಹನ ಚಾಲಕರಲ್ಲಿ ಕೆಲವರು ಈಗಾಗಲೇ ಸ್ವಂತ ವ್ಯವಹಾರವನ್ನು ಪ್ರಾರಂಭಿಸಿದ್ದರು. ಮಮ್ಮೂಟಿಯ ಬಳಿಯಲ್ಲಿ ಕೆಲಸ ಮಾಡಿದ ಕೆಲವರೂ ಈ ವ್ಯವಹಾರದ ಮರ್ಮ ತಿಳಿದುಕೊಂಡು ಸ್ವಂತ ವ್ಯವಹಾರವನ್ನಾರಂಭಿಸಿದ್ದರು. ಪ್ರವಾಹ 145 ಮಮ್ಮೂಟಿಯೊಡನೆ ಪೈಪೋಟಿಯೂ ಪ್ರಾರಂಭವಾಗಿತ್ತು. ಭರತವಾಗಿ ಊರು ಪ್ರವೇಶಿಸಿದ್ದು ಈಗ ಪ್ರವಾಹವಾಗಿ ಮುನ್ನುಗ್ಗ ತೊಡಗಿತ್ತು. ಹುಚ್ಚು ಪ್ರವಾಹ! ಕಂಡ ಕಂಡದ್ದನ್ನು ಕಬಳಿಸುತ್ತಾ, ತಗ್ಗಾದೆಡೆಗಳಲ್ಲಿ, ಅವಕಾಶ ಸಿಕ್ಕಿದೆಡೆಗಳಲ್ಲೆಲ್ಲ ಮತ್ತಷ್ಟು ರಭಸದಿಂದ ಮುನ್ನುಗ್ಗುತ್ತಾ ಹುಚ್ಚು ಹುಚ್ಚಾಗಿ ಹರಿಯತೊಡಗಿತ್ತು. ಮಮ್ಮೂಟಿಯ ಸ್ನೇಹಿತ, ಬಲಗೈ ಬಂಟ ವಾಸು ಕೂಡಾ ದೊಡ್ಡ ಕುಳ. ಆತನೂ ಕೂಡಾ ಸ್ವಜಾತಿ ಬಾಂಧವರಿಗೆ ಹಲವು ರೀತಿಯಲ್ಲಿ ಸಹಕರಿಸುತ್ತಿದ್ದನು. ಮಮ್ಮೂಟಿಯಂತೆಯೇ ಆತನ ಬಳಿಯಲ್ಲೂ ಹಲವು ವಾಹನ ಚಾಲಕರಿದ್ದರು. ಅವರಿಗೆ ಮದುವೆ ಮಾಡಿಸುವ ಜವಾಬ್ದಾರಿಯನ್ನು ಆತನೇ ಹೊರುತ್ತಿದ್ದನು. ಆ ದಿನ ವಾಸು ಬೀದಿಯಲ್ಲಿ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಸುಂದರಿಯಾದ ಹದಿ ಹರೆಯದ ಹೆಣ್ಣು ಮಗಳೊಬ್ಬಳು ಪುಸ್ತಕಗಳನ್ನು ಎದೆಗಾನಿಸಿಕೊಂಡು ಎದುರಿನಿಂದ ಬರುತ್ತಿದ್ದಳು. ವಾಸುವಿನ ಕಾರು ಕೊಂಚ ದೂರದಲ್ಲಿ ನಿಂತಿತು. ಆತನು ಹಿಂತಿರುಗಿ ನೋಡುತ್ತಿದ್ದಂತೆ ಆಕೆ ಮುಂದೆ ನಡೆದು ಬೀದಿಯ ತಿರುವಿನಲ್ಲಿ ಮರೆಯಾದಳು. ಆದರೆ ಅದೇಕೊ ವಾಸುವಿಗೆ ಆ ರಾತ್ರಿ ಚೆನ್ನಾಗಿ ನಿದ್ರೆ ಬರಲಿಲ್ಲ. ಕ್ಷಣಕಾಲ ಕಂಡು ಮರೆಯಾದ ಮುಖ, ಕೊಂಚ ಹೆಚ್ಚು ಹೊತ್ತು ಕಂಡ ಹಿಂಭಾಗ, ನೀಳವಾದ ಅತ್ತಿಂದಿತ್ತ ತುಯ್ದಾಡುತ್ತಿದ್ದ ಜಡೆ ಆತನ ನಿದ್ದೆಗೆಡಿಸಿತು. ಎತ್ತರವಾದ ಸುಮುಖಳಾದ ಆ ಹೆಣ್ಣು ಯಾರು? ಯಾರ ಮಗಳು ಎಂಬ ಯೋಚನೆ ಆತನು ಹಾಸಿಗೆಯಲ್ಲಿ ಹೊರಳಾಡುವಂತೆ ಮಾಡಿತು. ಹಲವು ಸಿಗರೇಟುಗಳು ಬೂದಿಯಾದುವು. “ಯಾಕೆ? ನಿದ್ದೆ ಬಂದಿಲ್ಲವೇ?” ಕಲ್ಯಾಣಿ ನಿದ್ದೆಗಣ್ಣಿನಲ್ಲಿಯೇ ಕೇಳಿದಳು. “ಬೋಟೇನಾದರೂ ಬರುವುದಿತ್ತಾ?” “ಸುಮ್ಮನೆ ಮಲಗು!” ಅಸಹನೆಯಿಂದ ನುಡಿದಾತನ ಕಣ್ಣು ಮುಂದೆ ಬೋಟೊಂಡು ಉಯ್ಯಾಲೆಯಂತೆ ತೊನೆಯುತ್ತಾ ಮುಂದೆ ಹೋಗುವ ದೃಶ್ಯ ಮೂಡಿತು. ಆ ದೃಶ್ಯ ನೀಳ ಜಡೆ ನಿತಂಬದ ಮೇಲೆ ಅತ್ತಿತ್ತ ತೊನೆದಾಡುವ ದೃಶ್ಯದಲ್ಲಿ ಪರ್ಯವಸಾನಗೊಂಡಿತು. ಪಕ್ಕದಲ್ಲಿದ್ದ ಬರಿಮೈ ಕಲ್ಯಾಣಿಯನ್ನು ತನ್ನ ದೇಹಕ್ಕೆ ಮತ್ತಷ್ಟು ಒತ್ತಿಕೊಂಡು ದಾಹ ಶಮನಕ್ಕೆ ಪ್ರಯತ್ನಿಸಿದನು. ನಡು ವಯಸ್ಸಿನ ಕಲ್ಯಾಣಿಯಿಂದ ಆತ ಬಯಸಿದ ಕುಸುಮ ಕೋಮಲತೆ ದೊರೆಯದೆ, 146 ಸುಳಿ ‘ಥತ್, ಇದರಮ್ಮನ...’ ಎನ್ನುತ್ತಾ ಆಕೆಯನ್ನು ದೂರ ಸರಿಸಿ ಪಕ್ಕಕ್ಕೆ ಹೊರಳಿದಾಗ ಮತ್ತೊಮ್ಮೆ ಹದಿ ಹರೆಯದ ಅರೆ ಬಿರಿದ ಮೊಗ್ಗು ಕಣ್ಣೆದುರು ಮೂಡಿ ಮುಗುಳ್ನಕ್ಕಂತಾಯಿತು. ಮರುದಿನ ಮಧ್ಯಾಹ್ನ ಶಾಲೆ ಬಿಡುವ ವೇಳೆಯಲ್ಲಿ ವಾಸು ಹೈಸ್ಕೂಲಿನ ಗೇಟಿನ ಕೊಂಚ ದೂರದಲ್ಲಿ ಹಾಜರಾದನು. ನಿನ್ನೆಯಂತೆಯೇ ಲಂಗ, ದಾವಣಿಯಲ್ಲಿದ್ದ ಹುಡುಗಿ ತನ್ನ ಗೆಳತಿಯರೊಡನೆ ನಗು, ಹರಟೆಯಲ್ಲಿ ಮುಳುಗಿ ಮುಂದೆ ನಡೆದಳು. “ಏನು, ವಾಸಣ್ಣನವರು ಇಲ್ಲಿ?” ಧ್ವನಿ ಕೇಳಿ ವಾಸು ಪಕ್ಕಕ್ಕೆ ತಿರುಗಿ ನೋಡಿದನು. ತನ್ನ ಪರಿಚಯದ, ಸ್ಟಾರ್ ಹೊಟೇಲಿನ ದಾಮೋದರ. “ಓ.. ನೀನಾ? ಬಾ ಕುಳಿತುಕೊ, ಸ್ವಲ್ಪ ದೂರ ಹೋಗುವಾ” ಎಂದು ಕರೆದದ್ದೇ ತಡ ಆತನು ಕಾರು ಹತ್ತಿ ಕುಳಿತುಕೊಂಡನು. ಕಾರು ಸ್ವಲ್ಪ ಮುಂದೆ ಹೋದಾಗ ವಾಸು, “ನೋಡು, ಆ ಮಧ್ಯದಲ್ಲಿರುವ ಹುಡುಗಿ ಯಾರ ಮಗಳು? ಪರಿಚಯವಿದೆಯಾ?” ಎಂದು ತೀರಾ ಸಹಜವಾಗಿ ಎಂಬಂತೆ ಕೇಳಿದನು. “ಓ... ಅವಳಾ? ಅದು ನಮ್ಮ ರಾಮುಣ್ಣಿಯ ಮಗಳು ಕುಸುಮಾ ಅಲ್ಲವಾ? ಕಲಿಯುವುದಕ್ಕೆಲ್ಲಾ ಚುರುಕಿದ್ದಾಳಂತೆ. ಅದಕ್ಕೇ ಇನ್ನೂ ಶಾಲೆಗೆ ಕಳಿಸುತ್ತಿದ್ದಾನೆ” ಎಂದನು. “ಓ..” ಮುಂದೆ ವಾಸು ಮಾತನಾಡಲಿಲ್ಲ. ದಾಮೋದರನನ್ನು ಆತನ ಹೊಟೇಲಿನ ಬಳಿ ಇಳಿಸಿ ತನ್ನ ಮನೆಗೆ ತೆರಳಿದನು. ರಾಮುಣ್ಣಿಯ ಹೆಂಡದಂಗಡಿಗೆ ವಾಸು ಆಗಾಗ ಭೇಟಿ ನೀಡುವುದು ವಾಡಿಕೆಯಾಗಿತ್ತು. ಹಾಗೆಯೇ ಈ ದಿನವೂ ಸಂಜೆಗತ್ತಲಾವರಿಸಿದ ಬಳಿಕ ಆತನು ರಾಮುಣ್ಣಿಯ ಅಂಗಡಿಯ ಬಳಿಗೆ ಹೋದನು. ವಾಸುವಿನ ಕಾರನ್ನು ಕಂಡವನೇ ರಾಮುಣ್ಣಿ ತಾನೇ ಓಡಿ ಬಂದು, “ತೆಂಗಿನ ಮರದ ತಾಜಾ ಹೆಂಡವಿದೆ ಕಳಿಸಲಾ?” ಎಂದು ಕೇಳಿದನು. “ಅದಕ್ಕಲ್ಲ ರಾಮುಣ್ಣಿ ನಾನು ಈ ದಿನ ಬಂದದ್ದು. ಬಾ ಕಾರಿನೊಳಗೆ ಕುಳಿತುಕೊ. ನಿನ್ನೊಡನೆ ಸ್ವಲ್ಪ ಮಾತಾಡಬೇಕು” ಎಂದನು. ರಾಮುಣ್ಣಿಗೆ ಅಚ್ಚರಿಯಾಯಿತು. ತನ್ನ ಮತ್ತು ವಾಸುವಿನ ಸಂಬಂಧವೆಂದರೆ ಹೆಂಡದ ಸಂಬಂಧ ಮಾತ್ರ. ಇದೇನು ಈ ದಿನ ಹೊಸ ಬಗೆ? ಯೋಚಿಸುತ್ತಾ ಆತನು ಕಾರಿನೊಳಗೆ ಕುಳಿತನು. “ನಿನಗೆ ಮದುವೆಯ ವಯಸ್ಸಿಗೆ ಬಂದ ಮಗಳಿದ್ದಾಳಾ?” ಪೀಠಿಕೆ ಪ್ರವಾಹ 147 ಏನೂ ಇಲ್ಲದೆ ನೇರವಾಗಿ ಕೇಳಿದನು ವಾಸು. ರಾಮುಣ್ಣಿ ವಾಸುವಿನ ಮುಖಭಾವವನ್ನು ಪರೀಕ್ಷಿಸಲು ಪ್ರಯತ್ನಿಸಿದನು. ಮುಸ್ಸಂಜೆಯ ಮಬ್ಬು ಬೆಳಕಿನಲ್ಲಿ ಆತನ ಪ್ರಯತ್ನ ಸಫಲವಾಗಲಿಲ್ಲ. “ಹೌದು ಸಾರ್....'' ವಾಸುವಿನ ಇಂಗಿತ ತಿಳಿಯದೆ ತೊದಲಿದನಾತ. “ನಮ್ಮ ಬಳಿ ಕೆಲಸ ಮಾಡುವ ಒಂದಿಬ್ಬರು ಒಳ್ಳೆಯ ಹುಡುಗರಿದ್ದಾರೆ. ನಿನ್ನ ಮಗಳಿಗೆ ಆಗಬಹುದಾದರೆ ಯೋಚನೆ ಮಾಡಿ ತಿಳಿಸು” “ಅವಳು ಮುಂದಿನ ವರ್ಷ ಕಾಲೇಜಿಗೆ ಹೋಗಬೇಕೆಂದಿದ್ದಾಳಲ್ಲ?...” ಅರೆ ಮನಸ್ಸಿನಿಂದ ಗೊಣಗಿದಂತೆ ಹೇಳಿದನು ರಾಮುಣ್ಣಿ. “ಇನ್ನೂ ಮೂರು ನಾಲ್ಕು ವರ್ಷ ಕಾಲೇಜಿಗೆ ಹೋಗಿ ಕಲಿತು ಮತ್ತೆ ಏನಾದರೂ ಕೆಲಸಕ್ಕೆ ಸೇರಿದಳೆಂದಿಟ್ಟುಕೊ. ಆಗಲೂ ನೀನು ಅವಳಿಗೆ ಮದುವೆ ಮಾಡಲೇ ಬೇಕಲ್ಲ? ಈ ಖರ್ಚು ವೆಚ್ಚ, ಈ ತಾಪತ್ರಯಗಳೆಲ್ಲ ಯಾಕೆ? ಕೈ ತುಂಬಾ ಹಣ ಸಂಪಾದಿಸುವ ಹುಡುಗ ದೊರೆತರೆ ಸಾಲದೇ?” ರಾಮುಣ್ಣಿ ಯೋಚನಾ ಪರನಾಗುತ್ತಾ, “ಹೂಂ... ಅದೂ ಹೌದೂನ್ನಿ. ಮನೆಯಲ್ಲಿ ವಿಚಾರಿಸಿ ನಾಳೆ ತಿಳಿಸುತ್ತೇನೆ.... ಹುಡುಗ ಯಾರೆಂದಿರಿ?” ಎಂದು ಕೇಳಿದನು. “ಹುಡುಗರಿಗೇನು? ಬೇಕಾದಷ್ಟು ಜನರಿದ್ದಾರೆ. ಆದರೆ ನೀನು ನನಗೆ ಬೇಕಾದವನು. ನಿನ್ನ ಮಗಳನ್ನು ಅಂತಿಂತಹ ಕಡೆ ಕೊಡು ಎಂದು ಹೇಳುತ್ತೇನೆಯೇ? ಯಾವುದನ್ನೂ ಬೇಗನೆ ತಿಳಿಸು.” ಎನ್ನುತ್ತಾ ಕಾರು ಚಲಾಯಿಸಿದನು ವಾಸು. ರಾಮುಣ್ಣಿಗೆ ಸ್ವರ್ಗಕ್ಕೆ ಮೂರೇ ಗೇಣು ಎಂಬಂತಾಯಿತು. ಊರಿನ ಭಾರೀಕುಳ ವಾಸಣ್ಣನವರೇ ತನ್ನ ಮಗಳಿಗೆ ವರನನ್ನು ಹುಡುಕಿದ್ದಾರೆ! ಅವರೊಡನಿರುವವನೆಂದರೆ ಕೇಳುವುದೇ ಬೇಡ. ತನ್ನ ಮಗಳ ಪುಣ್ಯವೇ ಪುಣ್ಯ! ಇನ್ನು ಅವಳಿಗೆ ಕೆಲಸ ಬೇಕಾಗಿಲ್ಲ. ಕೆಲಸ ಬೇಡವೆಂದ ಮೇಲೆ ವಿದ್ಯೆ ಮುಂದುವರಿಸುವ ಅಗತ್ಯವಾದರೂ ಏನು? ರಾಮುಣ್ಣಿ ಎಂದಿಗಿಂತಲೂ ಬೇಗನೆ ಹೆಂಡದಂಗಡಿಯನ್ನು ಮುಚ್ಚಿ ಮನೆಗೆ ಹೋದವನೇ ಹೆಂಡತಿಯೊಡನೆ, ವಿವರ ತಿಳಿಸಿ ಮಗಳನ್ನು ಕರೆದನು. “ನೋಡು ಮಗಾ, ವಾಸಣ್ಣನೊಡನೆ ಕೆಲಸ ಮಾಡುವ ಹುಡುಗನೊಬ್ಬನಿದ್ದಾನಂತೆ. ನಿನ್ನ ಕುರಿತು ಅವರೇ ವಿಚಾರಿಸಿದರು. ನೀನು ಒಪ್ಪಿದರೆ ಅವರೇ ನಿಂತು ಮದುವೆ ಮಾಡಿಸುತ್ತಾರೆ. ವಾಸಣ್ಣನ ಜನವೆಂದರೆ ಗೊತ್ತೇ ಇದೆಯಲ್ಲ? ನೀನಿನ್ನು ಚಿನ್ನದ ತೇರಿನಲ್ಲೇ ಓಡಾಡಬಹುದು! ಬಂಗಲೆ, 148 ಸುಳಿ ಕಾರು, ಆಳು... ಏನು ಹೇಳುತ್ತೀ?” ಮಗಳ ಮುಂದೆ ಕನಸಿನ ಲೋಕವೊಂದನ್ನು ತೆರೆದಿಟ್ಟನು ರಾಮುಣ್ಣಿ. ಅದೇ ತಾನೇ ಅರಳುತ್ತಿರುವ ಮೊಗ್ಗು. ಪ್ರಪಂಚ ಜ್ಞಾನವಿಲ್ಲದ ಮುಗ್ಧ ಹುಡುಗಿ. ಆಕೆ ತಾನೇ ಏನಂದಾಳು? ಕಾರು, ಬಂಗಲೆಗಳನ್ನು ಕನಸಿನಲ್ಲೂ ಊಹಿಸಲಾರದ ಕುಟುಂಬ ತನ್ನದು. ಊರಿಗೆ ಬಂದ ಪ್ರವಾಹ ತನ್ನ ಮನೆಗೂ ನುಗ್ಗುವುದಾದರೆ ಯಾಕಾಗದು? ಗೆಳತಿ ವಸಂತಿಯ ರೇಶ್ಮೆ ಸೀರೆಯನ್ನು ಕೈಯಿಂದ ಮುಟ್ಟಿಯೇ ಮನದಾಸೆಯನ್ನು ಹಿಂಗಿಸಿ ಕೊಳ್ಳಲೆತ್ನಿಸಿದವಳು ಅವಳು. ವಾಸಣ್ಣನ ಬಳಿ ಕೆಲಸ ಮಾಡುವ ಕೆಲವರ ಪರಿಚಯ ತನ್ನ ಕುಟುಂಬಕ್ಕೂ ಇತ್ತು. ಮೊನ್ನೆ ಮೊನ್ನೆ ಬೀದಿ ಭಿಕಾರಿಗಳಾಗಿದ್ದವರು ಈಗ ಕಾರು, ಬಂಗಲೆಗಳ ಒಡೆಯರಾಗಿದ್ದರು. ಅವರ ಹೆಂಡತಿಯರ ಅಲಂಕಾರ ಎಲ್ಲರ ಕಣ್ಣು ಕುಕ್ಕುವಂತಿತ್ತು. ಅಂತಹ ಸೌಭಾಗ್ಯ ತನ್ನದಾಗುವುದಾದರೆ ಯಾಕೆ ಬೇಡ? ಒಂದೇ ತಿಂಗಳಲ್ಲಿ ಕುಸುಮಳ ಮದುವೆ ವಾಸುವಿನ ಬಳಿ ಕೆಲಸ ಮಾಡುತ್ತಿದ್ದ ಶ್ರೀಧರನೊಡನೆ ನೆರವೇರಿತು. ಅದ್ದೂರಿಯ ಮದುವೆ. ಖರ್ಚು ವೆಚ್ಚಗಳೆಲ್ಲಕ್ಕೂ ವಾಸುವಿನ ಸಹಕಾರ ಇದ್ದೇ ಇತ್ತು. ಮಮ್ಮೂಟಿಯೂ ಮದುವೆಗೆ ಬಂದು ಹುಡುಗಿಗೆ ಉಂಗುರವೊಂದನ್ನು ಉಡುಗೊರೆಯಿತ್ತನು. ವಾಸುವಿನ ಉಡುಗೊರೆ ಚಿನ್ನದ ಕಂಠಹಾರ. ಕುಸುಮಳ ಗೆಳತಿಯರು ಆಕೆಯನ್ನು ಸುತ್ತುವರಿದರು. “ಏನೇ ಸುಮಾ, ಇನ್ನು ನಮ್ಮ ನೆನಪಾದರೂ ನಿನಗಿರುತ್ತದಾ? ಇನ್ನು ಮುಂದೆ ನೀನು ಚಿನ್ನದ ತೇರಿನಲ್ಲೇ ಓಡಾಡುವವಳಲ್ಲವಾ? ತುಂಬಾ ಲಕ್ಕಿ ನೀನು. ಇನ್ನು ಮುಂದೆ ಪರೀಕ್ಷೆಯ ಗೋಳೂ ಇಲ್ಲ...” ಎಂದೆಲ್ಲಾ ಛೇಡಿಸಿದರು. ಒಬ್ಬಳು “ಒಳ್ಳೆ ಪರ್ಸನಾಲಿಟಿ” ಎಂದಾಗ ಇನ್ನೊಬ್ಬಳು, “ಒಳ್ಳೆ ಗೂಂಡಾ ತರ ಇದ್ದಾನೆ!” ಎಂದಾಗ ಎಲ್ಲರೂ ನಕ್ಕರು. ಗೆಳತಿಯರ ಹೊಗಳಿಕೆಯಂತೂ ಕುಸುಮಳಿಗೆ ತುಂಬಾ ಆಪ್ಯಾಯಮಾನವಾಗಿತ್ತು. ಶ್ರೀಧರನ ಮನೆಗೆ ಕಾಲಿಟ್ಟಾಕೆಗೆ ತುಂಬಾ ಸಂತೋಷವಾಗಿತ್ತು. ಸುಂದರವಾದ ಹೊಸ ಮನೆ. ಮನೆಯಲ್ಲಿ ಶ್ರೀಧರನ ತಾಯಿ ಮಾತ್ರ ಇದ್ದಳು. ಈ ಹಿಂದೆ ಬೇರೆಯವರ ಮನೆಯಲ್ಲಿ ದುಡಿಯುತ್ತಿದ್ದಾಕೆ ಈಗ ತನ್ನ ಮನೆಯಲ್ಲಿ ಕೆಲಸಕ್ಕೆ ಆಳನ್ನಿಟ್ಟುಕೊಂಡಿದ್ದಳು. ಶ್ರೀಧರನ ಹೆಂಡತಿಯನ್ನು ತುಂಬಾ ಪ್ರೀತಿಸುತ್ತಿದ್ದನು. ಊರಲ್ಲಿರುವಾಗ ಆಕೆಯ ಹಿಂದೆ ಮುಂದೆ ತಿರುಗುತ್ತಿದ್ದನು. ರಾತ್ರಿ ಗಂಡನ ತೋಳ ತೆಕ್ಕೆಯಲ್ಲಿ ಪ್ರವಾಹ 149 ಮಲಗಿದ ಸುಮಾ ಕೂಡಾ ತನ್ನನ್ನು ತಾನೇ ಮರೆಯುತ್ತಿದ್ದಳು. ಗೆಳತಿಯ ಹಾಸ್ಯ ನೆನಪಾಗಿ ತನ್ನೊಳಗೇ ನಗುತ್ತಿದ್ದಳು. ದಪ್ಪ ಮೀಸೆಯ, ಉತ್ತಮ ದೇಹದಾಢ್ರ್ಯ ಬೆಳೆಸಿಕೊಂಡ, ತಿಳಿಯಾದ ಮೈ ಬಣ್ಣದ ಈ ಯುವಕ ತನ್ನ ಗಂಡನಾದುದು ತನ್ನ ಜನ್ಮಾಂತರದ ಪುಣ್ಯವೆಂದೇ ತಿಳಿದಳು. ಅದಕ್ಕಾಗಿ ಅವಳು ವಾಸುವಿಗೆ ಮನದಲ್ಲೇ ನೂರಾರು ಬಾರಿ ನಮಸ್ಕರಿಸಿದ್ದಳು. ಶ್ರೀಧರನು ವಾಸುವನ್ನು ಊಟಕ್ಕೆ ಆಮಂತ್ರಿಸಿದಾಗ ಆಕೆ ಅತ್ಯುತ್ಸಾಹದಿಂದ ಓಡಾಡಿ ಎಲ್ಲವನ್ನೂ ಆಣಿಗೊಳಿಸಿದ್ದಳು. ಹಗಲಲ್ಲಿ ಆಕೆ ಒಬ್ಬಳೇ ಕುಳಿತುಕೊಂಡು ಹಗಲುಗನಸು ಕಾಣುತ್ತಾ ಕೆನ್ನೆಯನ್ನು ಕೆಂಪಾಗಿಸಿಕೊಳ್ಳುತ್ತಿದ್ದಳು. ಸವಿ ಮುತ್ತುಗಳು, ಬಿಗಿಯಾದ ಆಲಿಂಗನ, ಮೀಸೆಯ ಚುಚ್ಚುವಿಕೆ, ಆತನ ಕಪಿ ಚೇಷ್ಟೆ, ಎಲ್ಲವೂ ಆಕೆಗೆ ಪ್ರಿಯವೇ. ಸಂಜೆಯಾಗುತ್ತಿದ್ದಂತೆ ಇಬ್ಬರೂ ಕಾರಿನಲ್ಲಿ ಹೊರಟರೆಂದರೆ ಹಿಂತಿರುಗುವುದು ರಾತ್ರಿ ಹತ್ತು ಗಂಟೆ ಕಳೆದ ಮೇಲೆಯೇ. ಸಿನಿಮಾ, ಸಮುದ್ರ ತೀರ, ಹೊಟೇಲ್, ಏನೂ ಬೇಡವೆಂದರೆ ಕಾರಿನಲ್ಲಿ ಒಂದಷ್ಟು ದೂರ ಸುತ್ತಿ ಬರುವುದು. ಅಂತೂ ಕುಸುಮಳ ಪಾಲಿಗೆ ದಿನವೊಂದು ಗಳಿಗೆಯಾಗಿ ಕಳೆದು ಹೋಗುತ್ತಿತ್ತು. ಮದುವೆಯಾಗಿ ಒಂದೆರಡು ವಾರಗಳಾದುವು. ಆ ದಿನ ಇಬ್ಬರೂ ಸಮುದ್ರ ತೀರಕ್ಕೆ ಹೋಗಿದ್ದರು. ಹುಣ್ಣಿಮೆಯ ಬೆಳದಿಂಗಳೂ ಎಲ್ಲೆಡೆಯೂ ಹರಡಿತ್ತು. ಸಮುದ್ರದ ಅಬ್ಬರವೂ ಜೋರಾಗಿತ್ತು. ಬಿಳಿ ನೊರೆಯನ್ನುಗುಳುತ್ತಾ ತೀರಕ್ಕಪ್ಪಳಿಸುತ್ತಿದ್ದ ತೆರೆಗಳೊಡನೆ ಆಟವಾಡಿ ದಣಿದು ಇಬ್ಬರೂ ಮರಳಿನಲ್ಲಿ ಕುಳಿತರು. ಕುಸುಮಾ ಗಂಡನ ಎದೆಯಲ್ಲಿ ತಲೆ ಇಟ್ಟು ದೂರದಲ್ಲಿ ಕಾಣುತ್ತಿದ್ದ ಹಡಗಿನ ದೀಪವನ್ನು ನೋಡುತ್ತಾ ಗಂಡನೊಡನೆ. ``ಸದ್ಯಕ್ಕೆ ನೀವೆಲ್ಲೂ ಟೂರ್ ಹೋಗೋದಿಲ್ಲ ತಾನೇ? ನೀವೆಲ್ಲಾದರೂ ಹೋದರೆ ನಾನು ಹೇಗೆ ದಿನ ಕಳೆಯಲಿ ಎಂದು ನನಗೇ ಈಗಲೇ ಚಿಂತೆಯಾಗಿದೆ” ಎಂದಳು. “ನಾನೇನೂ ಈಗ ಹೊರಟಿಲ್ಲವಲ್ಲ?” ಎಂದರೂ ಆತನ ದನಿ ತೀರಾ ಸಪ್ಪೆಯಾದಂತಿತ್ತು. ದೂರದ ಸಾಗರದಂಚಿನಲ್ಲಿ ಕಂಡೂ ಕಾಣದಂತೆ ಮಿನುಗುತ್ತಿದ್ದ ದೀಪವನ್ನು ದಿಟ್ಟಿಸುತ್ತಾ ಆತನು ಕುಳಿತಲ್ಲಿಂದ ಎದ್ದು “ಬಾ, ಮನೆಗೆ ಹೋಗೋಣ. ಈಗಾಗಲೇ ತುಂಬಾ ತಡವಾಗಿದೆ.” ಎನ್ನುತ್ತಾ ಆಕೆಯ ಕೈ ಹಿಡಿದುಕೊಂಡು ಕಾರಿನೆಡೆಗೆ ನಡೆದನು. ಇಬ್ಬರೂ ಮನೆಗೆ ಬಂದಾಗ ಆತನ ತಾಯಿ, ಜಾನಮ್ಮ, “ಇಬ್ಬರೂ ರಾತ್ರಿ ಹೊತ್ತು ಯಾಕೆ ಅಲ್ಲಿ ಇಲ್ಲಿ ಅಲೆಯುತ್ತೀರಿ? ಬೇಗ 150 ಸುಳಿ ಮನೆಗೆ ಬಂದು ಊಟ ಮಾಡಬಾರದೇ? ಬಂಗುಡೆ ಹುರಿದಿಟ್ಟಿದ್ದೆ. ತಣ್ಣಗಾಯಿತೊ ಏನೊ.” ಎನ್ನುತ್ತಾ ಊಟಕ್ಕೆ ಬಡಿಸಿದಳು. “ಟೂರ್ ಹೋದರೆ ಬರುವುದು ಎಷ್ಟು ದಿನವಾಗುತ್ತದೊ” ಎಂದು ಗೊಣಗಿಕೊಂಡಳು. ಇಬ್ಬರೂ ಊಟ ಮುಗಿಸಿ ಕೋಣೆಗೆ ಬಂದರು. “ನಿಮ್ಮಮ್ಮನೂ ಟೂರ್ ವಿಷಯವನ್ನೇ ಹೇಳಿದರಲ್ಲಾ?” ಎನ್ನುತ್ತಿದ್ದಂತೆ ಆತನು ಆಕೆಯನ್ನು ಬರಸೆಳೆದು ಮುತ್ತಿನ ಮಳೆಗೆರೆಯತೊಡಗಿದನು. ಆತನ ಕೈಗಳು ಆಕೆಯ ಮೈಮೇಲೆ ಹರಿದಾಡುತ್ತಿದ್ದಂತೆ ಇಬ್ಬರೂ ಮೈ ಮರೆಯತೊಡಗಿದರು. ಇಬ್ಬರೂ ನಿದ್ದೆಯ ಆಳಕ್ಕಿಳಿಯುತ್ತಿದ್ದಂತೆ ಬಾಗಿಲು ಕರೆಗಂಟೆ ಬಾರಿಸಿತು. “ಯಾರಪ್ಪಾ, ಈ ಹೊತ್ತಿನಲ್ಲಿ ಬಂದವರು?” ಆಕಳಿಸುತ್ತಾ ಕುಸುಮಳೆಂದಳು. ಶ್ರೀಧರನ ಮುಖದ ಮೇಲಿನ ಮಂಪರು ಕಳೆ ಮಾತ್ರ ಸಂಪೂರ್ಣ ಹಾರಿಹೋಗಿತ್ತು. ಆತನು ಲಗುಬಗೆಯಿಂದ ಎದ್ದು ಕೋಣೆಯ ಬಾಗಿಲು ತೆರೆದು ಹೊರ ಹೋದವನು ಕೊಂಚ ಹೊತ್ತಿನಲ್ಲಿ ಹಿಂತಿರುಗಿ ಬಂದನು. ಒಳ ಬಂದವನೇ ಒಂದು ಸೂಟ್‍ಕೇಸನ್ನೆತ್ತಿಕೊಂಡು ತನ್ನ ಬಟ್ಟೆಬರೆಗಳನ್ನು ಜೋಡಿಸಿಕೊಳ್ಳತೊಡಗಿದನು. ಕುಸುಮಾ ಆಶ್ಚರ್ಯದಿಂದ, “ಈ ರಾತ್ರಿಯಲ್ಲಿ ಎಲ್ಲಿಗೆ ಹೊರಟಿರಿ?” ಎಂದು ಕೇಳಿದಳು. “ಡ್ಯೂಟಿಗೆ ಹಾಜರಾಗಲು?” ಮುಖದಲ್ಲಿ ಪ್ರಸನ್ನತೆಯನ್ನು ತಂದು ನುಡಿದನಾತ. “ಅಯ್ಯೊ, ಬೆಳಿಗ್ಗೆ ಹೋದರಾಗದೇ?” ಧೈರ್ಯದಿಂದ ಕೇಳಿದಳಾಕೆ. ವಿರಹ ವೇದನೆ ಆಕೆಯನ್ನಾಗಲೇ ಕಾಡತೊಡಗಿತ್ತು. “ಸುಮಾ, ದಯವಿಟ್ಟು ಏನೂ ಕೇಳಬೇಡ, ಚಿನ್ನದ ತೇರಿನಲ್ಲಿ ಓಡಾಡಬೇಕಾದರೆ ನಾವು ಪ್ರಶ್ನೆ ಕೇಳುವ ಹಕ್ಕನ್ನು ಕಳೆದುಕೊಳ್ಳುತ್ತೇವೆ. ನಾನು ಎಲ್ಲಿಗೆ ಹೋಗುತ್ತೇನೆಂದಾಗಲಿ ಯಾವಾಗ ಹಿಂತಿರುಗುವೆನೆಂದಾಗಲಿ ಕೇಳಬೇಡ. ಆ ಪ್ರಶ್ನೆಗಳ ಉತ್ತರ ನನಗೂ ತಿಳಿಯದು” ಎಂದು ಬೇಸರದಿಂದ ನುಡಿದನು. ಈಗ ಕುಸುಮಳ ನಿದ್ರೆ ಪೂರ್ತಿ ಹಾರಿ ಹೊಗಿತ್ತು. ಆಕೆ ಬೊಗಸೆಗಣ್ಣುಗಳನ್ನು ಇನ್ನಷ್ಟು ಅಗಲವಾಗಿ ತೆರೆದು ಆತನು ಸಿದ್ಧವಾಗುವುದನ್ನೇ ನೋಡುತ್ತಿದ್ದಳು. ಕಣ್ಣುಗಳಲ್ಲಿ ನಿಧಾನವಾಗಿ ನೀರು ತುಂಬುತ್ತಿತ್ತು. ಶ್ರೀಧರನು ಸೂಟ್‍ಕೇಸನ್ನೆತ್ತಿಕೊಂಡು ಮಂಚದ ಬಳಿಗೆ ಬಂದನು. ಆಕೆಯ ಗದ್ದವನ್ನೆತ್ತಿ ಕೈಯಲ್ಲಿದ್ದ ಕರ್ಚೀಫಿನಿಂದ ಆಕೆಯ ಕಣ್ಣುಗಳನ್ನು ಒರೆಸಿದನು. ಅರೆಬಿರದ ಗುಲಾಬಿಯಂತಿದ್ದ ತುಟಿಗಳಿಗೆ ಮುತ್ತಿಟ್ಟು, ಪ್ರವಾಹ 151 “ಆದಷ್ಟು ಬೇಗನೆ ಬರುವೆ ಚಿನ್ನಾ, ಬೇಜಾರು ಮಾಡಿಕೊಳ್ಳಬೇಡ” ಎನ್ನುತ್ತಾ ಕೋಣೆಯ ಬಾಗಿಲು ತೆರೆದು ಹೊರಟು ಹೋದನು. ಕಾರು ಹೊರಟ ಶಬ್ದದ ಹಿಂದೆಯೇ ಅತ್ತೆ ತಲೆ ಬಾಗಿಲು ಹಾಕಿದ ಸದ್ದೂ ಕೇಳಿಸಿತು. ಜಾನಮ್ಮ ಸೊಸೆಯ ಬಳಿ ಬಂದು, “ನಾನು ಇಲ್ಲಿ ಮಲಗಬೇಕೇನಮ್ಮಾ? ಭಯವಾಗುತ್ತದಾ?” ಎಂದು ಮೃದುವಾಗಿ ಕೇಳಿದಳು. ಕುಸುಮಾ ಬೇಗನೆ ಕಣ್ಣೊರೆಸಿಕೊಂಡು, “ಹೂಂ. ಅತ್ತೇ ನನಗೆ ಯಾವತ್ತೂ ಒಬ್ಬಳೇ ಮಲಗಿ ಅಭ್ಯಾಸವಿಲ್ಲ” ಎಂದಳು. ಅತ್ತೆ ಸೊಸೆಯರಿಬ್ಬರೂ ಆ ದೊಡ್ಡ ಮಂಚದ ಒಂದೊಂದು ಬದಿಗೆ ಮಲಗಿದರು. ಅತ್ತೆ ಕೂಡಲೇ ನಿದ್ದೆಯ ಆಳಕ್ಕಿಳಿದರೂ ಕುಸುಮಾ ಮಾತ್ರ ಇನ್ನೂ ಕಣ್ಣು ಬಿಟ್ಟುಕೊಂಡೇ ಮಲಗಿದ್ದಳು. ಆಕೆಯ ಮನಸ್ಸು ಗೆಳತಿಯರು ಆ ದಿನದ ಹೇಳಿದ ಹೊನ್ನಿನ ತೇರಿನ ಕುರಿತು ಯೋಚಿಸುತ್ತಿತ್ತು. ಬಂಗಲೆ, ಕಾರುಗಳ ಒಡತಿಯಾಗಬೇಕಾದರೆ ಅದಕ್ಕೂ ಕೆಲವೊಂದು ಬೆಲೆ ತೆರಬೇಕಾಗುತ್ತದಲ್ಲವೇ? ಶ್ರೀಧರನು ಹಿಂತಿರುಗಿ ಬರಲು ಐದಾರು ದಿನಗಳಾದವು. ಆತನು ಬರುವಾಗ ಆಕೆಗೆ ಒಂದೆರಡು ವಿದೇಶಿ ಸೀರೆ, ಸುಗಂಧ ದ್ರವ್ಯ ಹಾಗೂ ಕೈ ತುಂಬಾ ಇನ್ನಿತರ ಉಡುಗೊರೆಗಳನ್ನೂ ತಂದಿದ್ದನು. “ಈ ಸೀರೆಯನ್ನು ನಮ್ಮ ಬಾಸ್ ನಿನಗಾಗಿಯೇ ಕೊಟ್ಟಿದ್ದಾರೆ” ಎಂದು ಆತನೆಂದಾಗ ವಾಸುವಿನ ಕುರಿತ ಕೃತಜ್ಞತೆ ಆಕೆಯೆದೆಯಲ್ಲಿ ತುಂಬಿ ಹರಿಯಿತು. “ಓ... ನಿಮ್ಮ ಬಾಸ್ ಎಷ್ಟು ಒಳ್ಳೆಯವರು!” ಎನ್ನುತ್ತಾ ಮಾದಕವಾಗಿ ನಕ್ಕಳು. ಒಂದೆರಡು ದಿನಗಳಲ್ಲಿ ಆತನಿಗೆ ಮತ್ತೊಮ್ಮೆ ಕರೆ ಬಂತು. “ಮೊನ್ನೆ ತಾನೇ ಬಂದಿದ್ದೀರಾ? ಒಂದೆರಡು ದಿನ ಕಳೆದ ಮೇಲೆ ಹೋದರಾಗದೇ?” ಅಂಗಲಾಚುವಂತೆ ಕೇಳಿದಳಾಕೆ. “ನಾವು ಗಾಡಿಗೆ ಕಟ್ಟಿದ ಎತ್ತುಗಳೂ ಸುಮಾ ‘ಎಳೆ’ ಎಂದಾಗ ಎಳೆಯುವುದಷ್ಟೆ ನಮ್ಮ ಕೆಲಸ.” ಕೊಂಚ ಹೊತ್ತು ಪೆಚ್ಚಾಗಿ ಕುಳಿತ ಆಕೆ ಬಳಿಕ ದಿಗ್ಗನೆದ್ದು “ಹೇಗೂ ಕಾರಿನಲ್ಲಿ ನೀವೊಬ್ಬರೇ ಹೋಗುತ್ತೀರಾ. ನಾನೂ ನಿಮ್ಮೊಡನೆ ಬರಲಾ?” ಎಂದು ಉತ್ಕಂಠೆಯಿಂದ ಕೇಳಿದಳು. ಶ್ರೀಧರನು ಜೋರಾಗಿ ನಕ್ಕಬಿಟ್ಟನು. ಬಳಿಕ, “ನಾನು ಎಂತಹ ಕೆಲಸಕ್ಕೆ ಹೋಗುತ್ತಿದ್ದೇನೆಂದು ನಿನಗಿನ್ನೂ ಅರ್ಥವಾಗಿಲ್ಲವೇನೊ. ನಿನ್ನನ್ನು ಜೊತೆಯಲ್ಲಿ ಕರೆದೊಯ್ಯಲು ಸಾಧ್ಯವಿದ್ದಿದ್ದರೆ ನಿನ್ನನ್ನಿಲ್ಲಿ ಬಿಟ್ಟು ಹೋಗುತ್ತಿದ್ದೆನೇ?” ಎನ್ನುತ್ತಾ 152 ಸುಳಿ ಮೌನ ತಾಳಿ ಸಿದ್ಧನಾಗತೊಡಗಿದನು. ಬಳಿಕ ಏನನ್ನೊ ಯೋಚಿಸಿ ಆಕೆಯ ಬಳಿ ಬಂದು, “ಸುಮಾ ಬೇಸರ ಮಾಡಬೇಡ. ಈ ಬಾರಿ ಹೇಗಾದರೂ ಸಹಿಸಿಕೊ. ಈ ಬಾರಿ ನಾನು ಹಿಂದಿರುಗಿ ಬಂದ ಬಳಿಕ ನಾವೊಮ್ಮೆ ಬೆಂಗಳೂರಿಗೆ ಹೋಗಿ ಬರುವಾ” ಎಂದು ಆಕೆಯನ್ನು ಬಿಗಿದಪ್ಪಿ ಮುತ್ತಿಟ್ಟು ಬೀಳ್ಕೊಂಡನು. ಮುಂದೆ ತಿಂಗಳವರೆಗೂ ಆತನಿಗೆ ತನ್ನ ಮಾತನ್ನುಳಿಸಿಕೊಳ್ಳಲಾಗಲಿಲ್ಲ. ಬಂದ ಒಂದೆರಡು ದಿನಗಳಲ್ಲೇ ಪುನಃ ಕರೆಬರುತ್ತಿತ್ತು. ಬಹಳ ಅಪಾಯಕರವಾದ ಕೆಲಸಕ್ಕೆ ಆತನು ಹೊರಡುತ್ತಿದ್ದನೆಂಬುದು ಆತನ ಬಳಿಯಿದ್ದ ಪಿಸ್ತೂಲಿನಿಂದ ಆಕೆಗೆ ಮನವರಿಕೆಯಾಗಿತ್ತು. ಆಪಾಯದ ಜೊತೆಯಲ್ಲಿ ಅತ್ಯಧಿಕ ಲಾಭವೂ ಇದೆಯೆಂಬುದನ್ನಾಕೆ ಕಂಡುಕೊಂಡಿದ್ದಳು. ಮನೆಗೆ ಬೇಕಾದ ಮೂಟೆ ಮೂಟೆ ಅಕ್ಕಿ ಹಾಗೂ ಇನ್ನಿತರೆ ಸಾಮಾನುಗಳನ್ನು ವಾಸುವೇ ಕಳಿಸಿಕೊಡುತ್ತಿದ್ದನು. ಆಕೆ ಕನಸಿನಲ್ಲೂ ಊಹಿಸಿರಿದಂತಹ ಐಷಾರಾಮದ ಬದುಕು. ಆದರೂ ಒಂದು ಕೊರತೆ ಆಕೆಯನ್ನು ಬಾಧಿಸುತ್ತಲೇ ಇತ್ತು. ಅದು ಆತನ ಸಾಮಿಪ್ಯ. ಇತ್ತೀಚೆಗೆ ಊರಲ್ಲಿದ್ದಾಗಲೂ ರಾತ್ರಿ ಹತ್ತು ಗಂಟೆಯಲ್ಲದೆ ಆತನು ಮನೆಗೆ ಮರಳುತ್ತಿರಲಿಲ್ಲ. ಸ್ನೇಹಿತರಿಗಂತೂ ಲೆಕ್ಕವಿರಲಿಲ್ಲ. ಒಂದೆರಡು ದಿನಗಳಾದರೂ ಆತನೊಡನೆ ಹಾಯಾಗಿರೋಣವೆಂದರೆ ಈ ಸ್ನೇಹಿತರ ಕಾಟ. ಅಷ್ಟರಲ್ಲಾಗಲೀ ಮೇಲಿನಿಂದ ಕರೆಯೂ ಬರುತ್ತಿತ್ತು. ಹೀಗಾಗಿ ಮನ ಬಿಚ್ಚಿ ಆತನೊಡನೆ ನಾಲ್ಕು ಮಾತುಗಳನ್ನಾಡಲೂ ಆಕೆಗೆ ಅವಕಾಶ ದೊರೆಯುತ್ತಿರಲಿಲ್ಲ. ಒಮ್ಮೊಮ್ಮೆ ಆಕೆ ಚಿಂತಿಸುವುದಿತ್ತು, ‘ಇದೂ ಒಂದು ಬದುಕೇ?’ ಎಂದು ಇದಕ್ಕಿಂದಲೂ ಬೇರೇನಾದರೂ ಕೆಲಸವನ್ನೊ, ವ್ಯಾಪಾರವನ್ನೊ ಮಾಡಿ ಬದುಕಬಹುದಾಗಿತ್ತಲ್ಲ ಎಂದು ಚಿಂತಿಸಿದ್ದಳು. ಒಮ್ಮೆ ಬಾಯಿ ಬಿಟ್ಟು ಆತನೊಡನೆ ಕೇಳಿಯೂ ಇದ್ದಳು. “ಇಂತಹ ಸುತ್ತಾಟಕ್ಕಿಂತ ಊರಲ್ಲಿಯೇ ಇರುವಂತಹ ಯಾವುದಾದರೂ ಉದ್ಯೋಗ ಮಾಡಬಾರದೇ”? ಎಂದು. “ಇಷ್ಟು ಲಾಭದಾಯಕ ಉದ್ಯೋಗ ಬೇರೆ ಯಾವುದಾದರೂ ಇದ್ದರೆ ಹೇಳು. ಈಗಲೇ ಈ ಕೆಲಸವನ್ನು ಬಿಟ್ಟು ಬಿಡುತ್ತೇನೆ.” ಎಂದಿದ್ದನವನು. ಲಾಭದಾಯಕ ಮಾತ್ರವಲ್ಲ, ಬೇರೊಂದು ಉದ್ಯೋಗವೇ ಎಲ್ಲಿದೆ? ಆ ದಿನ ಪ್ರಯಾಣದಿಂದ ಹಿಂತಿರುಗಿದ ಶ್ರೀಧರನು ಬಹಳ ಸಂತೋಷದಿಂದಿದ್ದನು. ಕುಸುಮಳನ್ನು ತನ್ನ ಬಾಹುಗಳಲ್ಲಿ ಬಂಧಿಸಿದವನೇ, “ಸುಮಾ, ಮುಂದಿನ ಸಲ ನಿನ್ನನ್ನೂ ಕರೆದುಕೊಂಡು ಹೋಗುತ್ತೇನೆ. ನಮ್ಮ ಪ್ರವಾಹ 153 ಬಾಸ್‍ನ ಅಪ್ಪಣೆಯಾಗಿದೆ...” ಎಂದು ಆಕೆಯ ಕಿವಿಯಲ್ಲುಸುರಿದನು. ಆಕೆಯ ಮುಖ ಊರಗಲವಾಯಿತು. ಕಣ್ಣು, ತುಟಿಗಳಲ್ಲಿ ಸಂತಸವುಕ್ಕಿ ಹರಿಯಿತು. “ಯಾವತ್ತೂ ಹೋಗೋಣ?” ಅತ್ಯುತ್ಸಾಹದಿಂದ ಕೇಳಿದಳಾಕೆ. “ದಿನವನ್ನಂತೂ ನಾನು ನಿಶ್ಚಯಿಸುವಂತಿಲ್ಲವಲ್ಲ? ಅದೆಲ್ಲಾ ನಮ್ಮ ಬಾಸ್‍ಗೇ ಗೊತ್ತು.” ಈಗ ಆಕೆ ವಾಸ್ತವ ಪ್ರಪಂಚಕ್ಕಿಳಿದಳು. ತಮ್ಮೆಲ್ಲ ದಿನಚರಿಗಳನ್ನೂ ನಿಯಂತ್ರಿಸುವವರು ಬೇರೊಬ್ಬರು ತಾನೇ? ಅದೇಕೊ ಆ ಗಳಿಗೆಯಲ್ಲಿ ಆಕೆಯ ಉತ್ಸಾಹ ತಣ್ಣಗಾಯಿತು. ಈ ಗುಲಾಮತನಕ್ಕಿಂತಲೂ ತಾವು ಸ್ವತಂತ್ರರಾಗಿರುವುದು ಲೇಸು ಅನಿಸಿತು. ಆದರೆ ಆ ಸ್ವಾತಂತ್ರ್ಯಕ್ಕಾಗಿ ಕಾರು, ಬಂಗಲೆ ಮತ್ತು ಈ ಸುಖದ ಬದುಕನ್ನು ತ್ಯಾಗ ಮಾಡಬೇಕು. ಬಹುಶಃ ಒಂದು ಹೊತ್ತಿನ ಅನ್ನಕ್ಕೂ ಪರದಾಡಬೇಕೇನೊ. ಸ್ವಾತಂತ್ರ್ಯ ಹೋದರೂ ಪರವಾಗಿಲ್ಲ. ಸುಖವಾಗಿದ್ದರೆ ಸಾಕು! ತನ್ನ ಊರಿನಿಂದ ಎಂದೂ ಹೊರಗೆ ಕಾಲಿಡದ ಆಕೆ ಕಾರಿನಲ್ಲಿ ತನ್ನಿನಿಯನ ಪಕ್ಕದಲ್ಲಿ ಕುಳಿತು ಬಹಳ ದೂರ ಪ್ರಯಾಣ ಮಾಡುವುದನ್ನು ಮನದಲ್ಲೇ ಕಲ್ಪಿಸಿಕೊಳ್ಳತೊಡಗಿದಳು. ಆತನ ಪ್ರಯಾಣದ ದಿನವನ್ನು ಎಂದೂ ಬಹಳ ದುಃಖದಿಂದ, ನೋವಿನಿಂದ ಎದುರು ನೋಡುತ್ತಿದ್ದ ಆಕೆ. ಈ ಬಾರಿ ಆ ದಿನಕ್ಕಾಗಿ ಜಾತಕ ಪಕ್ಷಿಯಂತೆ ಕಾಯತೊಡಗಿದಳು. ಕೊನೆಗೂ ಅ ದಿನ ಬಂದೇ ಬಂತು. ಹೊರಗೆ ಹೋಗಿದ್ದ ಶ್ರೀಧರ ಮನೆಗೆ ಬಂದವನೇ ಹೆಂಡತಿಯೊಡನೆ, “ಬೇಗನೆ ರೆಡಿಯಾಗು. ನಾವು ಈಗಲೆ ಹೊರಡಬೇಕಾಗಿದೆ” ಎಂದನು. “ಈಗಲೇ? ನೀವು ಬೆಳಿಗ್ಗೇನೇ ಹೇಳಿದ್ದರೆ ನಾನೀಗಾಗಲೇ ಸಿದ್ಧಳಗಿರುತ್ತಿದ್ದೆನಲ್ಲಾ? ನಿಮ್ಮದು ಎಲ್ಲವೂ ಗುಟ್ಟು ಗುಟ್ಟು” ಆಕೆ ಆಕ್ಷೇಪವೆತ್ತಿದ್ದಳು. “ನನಗೂ ಈಗ ತಾನೇ ತಿಳಿಯಿತು ಸುಮಾ. ಅಂತೂ ನಮ್ಮ ಬಾಸ್ ತುಂಬಾ ಒಳ್ಳೆಯವರು. ಅವರ ಇಷ್ಟ ಪ್ರಕಾರ ನಡೆದರೆ ನಾವು ಕೇಳಿದ್ದೆಲ್ಲವೂ ದೊರೆಯುತ್ತವೆ. ಹೂಂ. ಬೇಗ ಸಿದ್ಧಳಾಗು” ಎಂದು ತಾನೂ ಬೇಗನೆ ಸೂಟ್‍ಕೇಸಿನೊಳಗೆ ಬಟ್ಟೆಗಳನ್ನು ತುಂಬತೊಡಗಿದನು. ಊಟ ಮುಗಿಸಿ ಇಬ್ಬರೂ ಸಿದ್ಧರಾಗಿ ಹೊರಟಾಗ ಸಂಜೆಯ ನಾಲ್ಕು ಗಂಟೆ ಹೊಡೆಯಿತು. ಕಾರು ಪೂರ್ವಾಭಿಮುಖವಾಗಿ ಹೊರಟಿತು. ಕುಸುಮಾ ತಡೆಯಲಾರದೆ, “ಈಗಲಾದರೂ ಹೇಳಿ ನಾವು ಯಾವ ಊರಿಗೆ 154 ಸುಳಿ ಹೋಗುತ್ತಿದ್ದೇವೆ?” ಎಂದು ಕೇಳಿದಳು. ಶ್ರೀಧರನ ಮುಖ ಇದಕ್ಕಿದ್ದಂತೆ ಗಂಭೀರವಾಯಿತು. ಆತನು ಸ್ವಲ್ಪ ಹೊತ್ತು ಮೌನವಾಗಿದ್ದು ಬಳಿಕ ಗಂಭೀರವಾಗಿ, “ಬೆಂಗಳೂರಿಗೆ” ಎಂದನು. “ಓ... ಮೊದಲೇ ಯಾಕ್ರಿ ಹೇಳಲಿಲ್ಲ? ನಾನು ಶಾಂತಾಳಿಗಾದರೂ ಫೋನಿನಲ್ಲಿ ತಿಳಿಸಿ ಬಿಡುತ್ತಿದ್ದೆ” ನಗುತ್ತಾ ಗಂಡನ ಇನ್ನಷ್ಟು ಪಕ್ಕಕ್ಕೆ ಸರಿದು ಆತನ ಹೆಗಲ ಮೆಲೆ ತಲೆ ಇರಿಸಿದಳು. ಬೆಂಗಳೂರು, ಮೈಸೂರುಗಳ ಕುರಿತು ಆಕೆ ಗೆಳತಿಯರ ಬಾಯಿಯಿಂದ ಕೇಳಿದ್ದಳು ಹಾಗೂ ಪುಸ್ತಕಗಳಲ್ಲಿ ಓದಿದ್ದಳು. ಈಗ ಆ ಸುಂದರವಾದ ಊರನ್ನು ನೋಡಲು ಅವಕಾಶ ದೊರೆತದ್ದಕ್ಕಾಗಿ ಆಕೆ ಮನದಲ್ಲೇ ಮತ್ತೊಮ್ಮೆ ವಾಸುವಿಗೆ ಕೃತಜ್ಞತೆ ಸಲ್ಲಿಸಿದಳು. “ನಾವು ಮೈಸೂರಿಗೂ ಹೋಗಬಹುದೇನ್ರಿ?” ಎಂದು ಕೇಳಿದಳು. “ಹೂಂ... ಆದರೆ ಒಂದು ಮಾತು. ನಾವು ನಮ್ಮ ಬಾಸ್‍ಗೆ ಬೇಸರ ಬರುವಂತೆ ವರ್ತಿಸಬಾರದು. ಅವರ ಸಂತೋಷವೇ ನಮ್ಮ ಸಂತೋಷ ಎಂಬುದು ನೆನಪಿರಲಿ” ಎಂದನು. ಬಳಿಕ ಮೌನ ತಾಳಿದನು. ಕಾರು ಚಲಾಯಿಸುವಾಗ ಹೆಚ್ಚು ಮಾತನಾಡಬಾರದೇನೊ ಎಂದು ಆಕೆಯೂ ಸುಮ್ಮನಾದಳು. ಆದರೂ ಆತನು ಆಳವಾಗಿ ಏನನ್ನೋ ಚಿಂತಿಸುತ್ತಿದ್ದಾನೆಂದು ತೋರಿತು ಆಕೆಗೆ. ರಾತ್ರಿ ಎಂಟು ಗಂಟೆಗೆಲ್ಲಾ ಯಾವುದೊ ಒಂದು ಊರಿನಲ್ಲಿ ಊಟ ಮುಗಿಸಿ ಪುನಃ ಹೊರಟರು. ಹಾಗೆಯೇ ಮತ್ತೂ ಒಂದೆರಡು ಗಂಟೆ ಪ್ರಯಾಣ ಮಾಡಿದಾಗ ಶ್ರೀಧರನು ಬಳಲಿದಂತೆ ಕಂಡಿತು. “ತುಂಬಾ ಸುಸ್ತಾದಂತೆ ಕಾಣುತ್ತೀರಲ್ಲ?” ಕುಸುಮಾ ಕೇಳಿದಳು. “ಹೌದು ಸುಮಾ. ತುಂಬಾ ಸುಸ್ತಾಗುತ್ತಿದೆ. ಇಲ್ಲಿ ದಾರಿಯೂ ಅಷ್ಟು ಚೆನ್ನಾಗಿಲ್ಲ. ಇಲ್ಲೇ ಹತ್ತಿರದಲ್ಲಿ ನಮ್ಮ ಹಾಜಾರರ ಬಂಗಲೆಯಿದೆ. ರಾತ್ರಿ ನಾವು ಅಲ್ಲಿದ್ದು ವಿಶ್ರಾಂತಿ ತೆಗೆದುಕೊಂಡು ನಾಳೆ ಬೆಳಿಗ್ಗೆ ಪ್ರಯಾಣ ಮುಂದುವರಿಸುವಾ” ಎಂದು ಹೇಳಿದನಾತ. ಆಕೆ ತಾನೇ ಏನಂದಾಳು? “ನಿಮಗೆ ಹೇಗೆ ಸೌಕರ್ಯವೊ ಹಾಗೆ ಮಾಡಿ, ನನಗಂತೂ ನೀವು ಜೊತೆಯಲ್ಲಿದ್ದರೆ ಎಲ್ಲಿರಲೂ ಯಾವ ಭಯವೂ ಇಲ್ಲ” ಎಂದಳು. ಆತನು ಮೌನವಾಗಿ ಕಾರು ಚಲಾಯಿಸುತ್ತಾ ಹೆದ್ದಾರಿಯಿಂದ ಎಡಕ್ಕೆ ತಿರುಗಿ ಸ್ವಲ್ಪ ಮುಂದೆ ಹೋಗಿ ದೊಡ್ಡದಾದ ಗೇಟಿನ ಮುಂದೆ ಕಾರು ನಿಲ್ಲಿಸಿ ಪ್ರವಾಹ 155 ಹಾರ್ನ್ ಮಾಡಿದನು. ಕಾವಲುಗಾರನೊಬ್ಬನು ಓಡಿ ಬಂದು ಗೇಟು ತೆರೆದನು. ಕಾರು ಒಳ ಹೋಗಿ ಪುಟ್ಟ ಬಂಗಲೆಯ ಪೊೀರ್ಟಿಕೋದಲ್ಲಿ ನಿಂತಿತು. ಆತನು ಕುಸುಮಳೊಡನೆ, “ನೀನು ಇಳಿ. ನಾನು ಕಾರನ್ನು ಮುಂದೆ ನಿಲ್ಲಿಸಿ ಬರುವೆ” ಎಂದನು. ಆಕೆ ಇಳಿದೊಡನೆ ಆತನು ಕಾರನ್ನು ಮುಂದೆ ನಿಲ್ಲಿಸಿ ಬಂದನು. ಬಳಿಕ ಇಬ್ಬರೂ ಬಂಗಲೆಯ ಒಳಗಡೆಗೆ ಹೋದರು. ಕಾವಲುಗಾರನು ಕಾರಿನಿಂದ ಇಬ್ಬರ ಸೂಟ್‍ಕೇಸುಗಳನ್ನೂ ಎತ್ತಿ ಒಳಗೆ ತಂದಿಟ್ಟನು. ಕುಸುಮಾ ರೂಮಿನ ಸುತ್ತಲೂ ಕಣ್ಣಾಡಿಸಿದಳು. ಸುಸಜ್ಜಿತವಾದ ಕೋಣೆ. ಮಧ್ಯದಲ್ಲಿ ಜೋಡಿ ಮಂಚ. ಒಂದು ಪಕ್ಕದಲ್ಲಿ ಡ್ರೆಸಿಂಗ್ ಟೇಬಲ್, ಸೋಫಾ ಸೆಟ್, ವಾರ್ಡ್‍ರೋಬ್ ಎಲ್ಲವೂ ಇದ್ದವು. ಬಹಳ ದೂರವಾಗಿ ತಮ್ಮ ಬಾಸ್‍ಗೆ ಇಂತಹದೊಂದು ಬಂಗಲೆ ಏಕೆಬೇಕು” ಅವಳ ಇಂಗಿತವನ್ನರಿತಂತೆ ಶ್ರೀಧರನು “ನಮ್ಮ ಬಾಸ್ ಮತ್ತು ಅವರ ಬಾಸ್ ಕೆಲವೊಮ್ಮೆ ಇಲ್ಲಿಗೆ ಬಂದು ಒಂದೆರಡು ರಾತ್ರಿ ವಿಶ್ರಾಂತಿ ತೆಗೆದುಕೊಳ್ಳುವರು. ಅದಕ್ಕಾಗಿ ಅವರು ಏನೂ ಗಲಾಟೆ ಇಲ್ಲದ ಈ ನಿರ್ಜನವಾದ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿದ್ದಾರೆ” ಎಂದನು. “ನಾವಿಲ್ಲಿ ಇದ್ದಿದ್ದು ತಿಳಿದರೆ ಅವರೇನೂ ಹೇಳಲಾರರೇ?” ಕುಸುಮಾ ಸಂದೇಹದಿಂದ ಕೇಳಿದಳು. “ನಮ್ಮ ಬಾಸ್ ತುಂಬಾ ಒಳ್ಳೆಯವರೆಂದು ನಾನಾಗಲೇ ಹೇಳಿಲ್ಲವಾ? ಅವರೇನಾದರೂ ಈಗ ಇಲ್ಲಿಗೆ ಬಂದು ನಮ್ಮನ್ನು ಕಂಡರೆ ಅವರಿಗೆ ಸಂತೋಷವಾದೀತು” ಎನ್ನುತ್ತಾ, “ನೀನು ಸುಸ್ತಾಗಿದ್ದೀಯಾ. ಸ್ನಾನ ಮಾಡಿ ಬೇರೆ ಸೀರೆ ಉಟ್ಟುಕೊ, ನೋಡುವಾ. ಆಗ ಫ್ರೆಶ್ಯಾಗಿ ಕಾಣುತ್ತೀ” ಎಂದನು. ಅವಳು ಸ್ನಾನ ಮುಗಿಸಿ ಹೊರ ಬಂದು ಒದ್ದೆ ಕೂದಲನ್ನು ಬಾಚಿ ಹಾಗೆಯೇ ಇಳಿಬಿಟ್ಟಳು. ಶ್ರೀಧರನು ಮಂಚಲ್ಲಿ ಮಲಗಿ ಆಳವಾದ ಚಿಂತೆಯಲ್ಲಿ ಮುಳುಗಿದ್ದಂತೆ ಕಂಡು ಕುಸುಮ ಆತನ ಬಳಿ ಬಂದು ವಯ್ಯಾರದಿಂದ “ಏನು ಯೋಚನೆ ಮಾಡುತ್ತಿದ್ದೀರಿ?” ಎಂದು ಕೇಳಿದಳು. ಅಷ್ಟರಲ್ಲಿ ಪೋರ್ಟಿಕೋದಲ್ಲಿ ಕಾರೊಂದು ಬಂದು ನಿಂತ ಶಬ್ದವಾಯಿತು. ಕೂಡಲೇ ಶ್ರೀಧರನು ಧಿಗ್ಗನೆದ್ದು ಹೊರಗೆ ಹೋದನು. ಕೊಂಚ ಹೊತ್ತಿನಲ್ಲಿ ಒಳ ಬಂದು, “ಸುಮಾ, ನಮ್ಮ ಬಾಸ್ ವಾಸಣ್ಣ ಬಂದಿದ್ದಾರೆ. ಅವರೂ ಅರ್ಜೆಂಟ್ ಕೆಲಸಕ್ಕೆಂದು ಬೆಂಗಳೂರಿಗೆ ಹೊರಟಿದ್ದರಂತೆ. ತುಂಬಾ ತಡವಾಯಿತೆಂದು ಅವರೂ ಇಲ್ಲಿಗೇ ಬಂದರು” ಎಂದನು. 156 ಸುಳಿ ಕುಸುಮಳ ಉತ್ಸಾಹ ಜರ್ರನೆ ಇಳಿಯಿತು. ಮುಖ ಮುದುಡಿತು. “ನಾವು ಸೀದಾ ಬೆಂಗಳೂರಿಗೇ ಹೋಗಿ ಬಿಡಬಹುದಾಗಿತ್ತು” ಎಂದು ಗಂಡನ ಬಳಿ ಬಂದು ಗೊಣಗಿಕೊಂಡಳು. “ಅಲ್ಲದೆ ನಾವಿಲ್ಲಿರುವುದು ಅವರಿಗೂ ತೊಂದರೆಯಾದೀತೇನೊ” ಎಂದೂ ಸೇರಿಸಿದಳು. “ತೊಂದರೆ ಏನಿಲ್ಲ. ಇಲ್ಲಿ ಇಂತಹುದೇ ಬೇರೆ ಕೋಣೆ ಇದೆ. ನೀನು ದೀಪವಾರಿಸಿ ಮಲಗು ನಾನು ಅವರೊಡನೆ ಮಾತನಾಡಿ ಬರುವೆ” ಎನ್ನುತ್ತಾ ಹೊರ ನಡೆದನು. ಕುಸುಮಾ ಹಾಸಿಗೆಯಲ್ಲಿ ಮಲಗಿದಳು. ಮೆತ್ತಗಿನ ದಿಂಬು ತಲೆಗೆ ಸೋಂಕುತ್ತಲೇ ಪ್ರಯಾಣದಿಂದ ದಣಿದಿದ್ದ ಆಕೆಗೆ ಹಾಯೆಸಿತು. ಆದರೂ ಕೂಡಲೇ ನಿದ್ದೆ ಹತ್ತಲಿಲ್ಲ. ಆಕೆ ಎದ್ದು ಗಂಡನಿಗೆ ಪ್ರಿಯವಾದ ಸುಗಂಧ ದ್ರವ್ಯವನ್ನು ಮೈ ಮೇಲೆ ಚಿಮುಕಿಸಿಕೊಂಡಳು. ಬಳಿಕ ದೀಪವಾರಿಸಿ ಮಲಗಿಕೊಂಡು ತಲೆಗೂದಲನ್ನು ದಿಂಬಿನ ಮೇಲೆ ಹರಡಿ ಪಕ್ಕಕ್ಕೆ ತಿರುಗಿ ಕಣ್ಣು ಮುಚ್ಚಿಕೊಂಡಳು. ಗಂಡನ ಬಿಸಿಯಪ್ಪುಗೆಗಾಗಿ, ಸವಿ ಮುತ್ತುಗಳಿಗಾಗಿ ಕಾಯುತ್ತಾ, ನಿಟ್ಟುಸಿರಿಡುತ್ತಾ, “ಎಷ್ಟು ಹೊತ್ತು ಮಾಡುತ್ತಾರಪ್ಪ ಇವರು?” ಎಂದುಕೊಳ್ಳುತ್ತಾ ಗಂಡನ ಬರವಿಗಾಗಿ ಕಾಯುತ್ತಾ ಸಹನೆ ಕಳೆದುಕೊಳ್ಳತೊಡಗಿದಳು. ಆಳದಲ್ಲೆಲ್ಲೊ ಕೊಂಚ ಭಯವೂ ಆದಂತೆನ್ನಿಸಿತು. ಕೋಣೆಯಲ್ಲಿ ಹೆಜ್ಜೆಯ ಸಪ್ಪಳ ಕೇಳಿಸಿತು. ತನ್ನನ್ನು ಇಷ್ಟು ಹೊತ್ತು ಕಾಯಿಸಿದರಲ್ಲಾ? ತಾನೂ ಆತನನ್ನು ಕೊಂಚ ಆಟ ಆಡಿಸಬೇಕೆಂದು ಕಣ್ಣು ಮುಚ್ಚಿ ನಿದ್ದೆ ಬಂದಂತೆ ನಟಿಸಿದಳು. ಕೋಣೆಯ ಬಾಗಿಲು ಹಾಕಿದ ಶಬ್ದ ಕೇಳಿಸಿತು. ಚಿಕ್ಕ ಬೆಡ್ ಲ್ಯಾಂಪನ್ನು ಹೊತ್ತಿಸಿದ ಶಬ್ದವೂ ಕೇಳಿಸಿತು. ಆತನು ಆಕೆಯ ಪಕ್ಕದಲ್ಲಿ ಮಲಗಿಕೊಂಡು ಆಕೆಯನ್ನು ಬಿಗಿಯಾಗಿ ಅಪ್ಪಿಕೊಂಡು ಚುಂಬಿಸಿತೊಡಗಿದಾಗ ಆಕೆ ಬೆಚ್ಚಿ ಬಿದ್ದಳು. ತಾನು ಬಹಳ ಹೊತ್ತಿನಿಂದ ಎದುರು ನೋಡುತ್ತಿದ್ದ ಬಾಹು ಬಂಧನ ಅದಾಗಿರಲಿಲ್ಲವಾದ ಕಾರಣ ಆಕೆ ದೊಡ್ಡದಾಗಿ ಕಣ್ಣು ಬಿಟ್ಟಳು. ಕೂಡಲೇ ಆಘಾತದಿಂದ ತತ್ತರಿಸಿ ಜೋರಾಗಿ ಕಿರಿಚಿಕೊಳ್ಳಲು ಬಾಯಿ ತೆರೆಯುವಷ್ಟರಲ್ಲಿ ಬಲಿಷ್ಠವಾದ ಕೈಯೊಂದು ಆಕೆಯ ಬಾಯಿಯನ್ನು ಬಲವಾಗಿ ಅಮುಕಿ ಹಿಡಿಯಿತು. “ಜೋರಾಗಿ ಅರಚಿಕೊಂಡರೆ ನಿನ್ನ ಸಹಾಯಕ್ಕೆ ಯಾರಾದರೂ ಬರುವರೆಂದುಕೊಂಡಿದ್ದೀಯಾ? ಇದು ನಮ್ಮ ಬಂಗಲೆ. ಇಲ್ಲಿರುವವರು ನಮ್ಮ ಸೇವಕರು. ನಿನ್ನ ಗಂಡನೂ ಕೂಡಾ ನನ್ನ ಗುಲಾಮನೇ ಎಂಬುದನ್ನು ಪ್ರವಾಹ 157 ಮರೆಯಬೇಡ.” ಆತನ ಧ್ವನಿಯು ಆದಷ್ಟು, ತಗ್ಗಿದ್ದರೂ ಅದರ ಕಠೋರತೆಯೇನೂ ತಗ್ಗಿರಲಿಲ್ಲ. ಗುಡುಗಿನಂತೆ ಆಕೆಯ ಕಿವಿಯ ಮೇಲಪ್ಪಳಿಸಿದ ಆ ಮಾತುಗಳಿಂದ ಆಕೆಯ ನಾಲಗೆಯ ದ್ರವವಾರಿತು. ಕೈಕಾಲುಗಳು ಪ್ರತಿಭಟಿಸುವ ಶಕ್ತಿಯನ್ನು ಕಳೆದುಕೊಂಡು ಕಟ್ಟಿಗೆಯ ತುಂಡಿನಂತೆ ಬಿದ್ದುಕೊಂಡವು. ರಕ್ಷಕನಾಗಿರಬೇಕಾಗಿದ್ದ ತನ್ನ ಗಂಡನೇ ಷಂಡನಂತೆ ಹೊರಗೆ ಕುಳಿತಿರುವನೆಂಬುದನ್ನು ನೆನೆದು ಆಕೆಯ ಎದೆಯಾಳದಲ್ಲಿ ಅಗ್ನಿಪರ್ವತವೊಂದು ಹೊಗೆಯಾಡತೊಡಗಿತು. ಯಾರನ್ನು ನಂಬಿ ಆಕೆ ಇಷ್ಟ ದೂರ ಬಂದಿದ್ದಳೊ, ಯಾರು ಜೊತೆಯಲ್ಲಿದ್ದರೆ ತಾನು ನಿರ್ಭಯವಾಗಿರಬಲ್ಲೆನೆಂದು, ತನಗೆ ಯಾವ ಅಪಾಯವೂ ಇರಲಾರದೆಂದು ತಿಳಿದಿದ್ದಳೊ, ಯಾವ ಮೂರ್ತಿಯನ್ನು ಹೃದಯ ಮಂದಿರದಲ್ಲಿಟ್ಟು ಪೂಜಿಸಿ ತನ್ನದೆಲ್ಲವನ್ನೂ ಅರ್ಪಿಸಿದ್ದಳೊ ಆ ಮೂರ್ತಿಯು ಹೃದಯ ಪೀಠದಿಂದ ಕೆಳಗುರುಳಿ ಬಿದ್ದು ಗುರುತೂ ಸಿಗದಂತೆ ಪುಡಿ ಪುಡಿಯಾಯಿತು. ಈಗ ಈ ಜಗಜಟ್ಟಿಯಂತಹ ಅಜಾನುಬಾಹುವಿನೊಡನೆ ಪ್ರತಿಭಟಿಸಿ ಹೋರಾಡುವ ಶಕ್ತಿಯಂತೂ ಆಕೆಗಿರಲಿಲ್ಲ. “ನಾನು ಹೇಳಿದಂತೆ ಕೇಳಿಕೊಂಡಿದ್ದರೆ ನಿನಗೆ ಬೇಕಾದುದೆಲ್ಲವನ್ನೂ ಕೊಡುವೆ” ಎಂಬ ಆತನ ಮಾತುಗಳು ಆಕೆಯ ಮನದಾಳಕ್ಕೆ ಇಳಿಯಲೇ ಇಲ್ಲ. ಗಂಟೆಗಳ ಬಳಿಕ ಆತನು ಕೋಣೆಯಿಂದ ಹೊರಟಾಗ ಸುಂದರವಾದ ಚಿನ್ನದ ಸರವೊಂದನ್ನು ಆಕೆಯ ಕೈಯಲ್ಲಿಟ್ಟನು. ಆಕೆ ಶೂನ್ಯ ದೃಷ್ಟಿಯಿಂದ ಎಲ್ಲೊ ನೋಟ ನೆಟ್ಟಿದ್ದಳು. ಆಕೆಗೆ ಯಾವುದೂ ಅರ್ಥವೇ ಆಗುತ್ತಿರಲಿಲ್ಲ. ತಾನು ಅತ್ಯಮೂಲ್ಯವಾದ ಏನನ್ನೊ ಕಳೆದುಕೊಂಡಿದ್ದೇನೆಂದು ಭಾಸವಾಗುತ್ತಿತ್ತು. ಅಷ್ಟರಲ್ಲಿ ಬಾಗಿಲು ಕಿರ್ರೆಂದಿತು. ಶ್ರೀಧರನು ತಲೆ ತಗ್ಗಿಸಿ ಬಹಳ ನಿಧಾನವಾಗಿ ಕೋಣೆಯೊಳಗೆ ಕಾಲಿಟ್ಟನು. ಅಸ್ತವ್ಯಸ್ತವಾದ ಬಟ್ಟೆಯನ್ನು ಸರಿಪಡಿಸುವ ಗೋಜಿಗೂ ಹೋಗದೆ ಆಕೆ ತನ್ನ ದೃಷ್ಟಿಯನ್ನು ಬಾಗಿಲೆಡೆಗೆ ನೆಟ್ಟಿದ್ದಳು. ಒಂದೇ ಒಂದು ಕ್ಷಣ. ಹೊಗೆಯಾಡುತ್ತಿದ್ದ ಅಗ್ನಿ ಪರ್ವತ ಸಿಡಿದು ಜ್ವಾಲಾಮುಖಿಯಾಯಿತು. ಆಕೆಯ ಕೈಯಲ್ಲಿದ್ದ ಚಿನ್ನದ ಸರ ಆತನ ಮುಖಕ್ಕೆ ಬಡಿದು ಆಳವಾದ ಗಾಯವನ್ನುಂಟು ಮಾಡಿ ನೆಲದಲ್ಲಿ ಬಿತ್ತು. “ಛಿ, ನಾಯಿ... ಈಗ ಬಂದೆಯಾ?... ನಿನ್ನನ್ನು ಗಂಡಸೂಂತ ಕರೆದವರು ಯಾರು? ನಿನ್ನ ತಾಯಿಯನ್ನೇ... ಆ ಮಿಂಡನ ಬಳಿಗೆ ಕಳುಹಿಸಬಹುದಾಗಿತ್ತಲ್ಲ? 158 ಸುಳಿ ಹೋಗು, ನೀನೂ ಹೋಗು ಆತನ ಹೆಂಡತಿಯ ಬಳಿಗೆ!...” ಕಣ್ಣೀರು ಕೋಡಿಯಾಗಿ ಹರಿಯುತ್ತಿದ್ದರೂ ಬಾಯಿಯಿಂದ ನಿರರ್ಗಳವಾಗಿ ಬೈಗಳೂ ಹೊರ ಬೀಳುತ್ತಿದ್ದುವು. ಅಳುವಿನ ಜೊತೆಯಲ್ಲಿ ನಗು, ಬಿಕ್ಕಳಿಗೆ, ಗಹಗಹಿಸುವಿಕೆ ಕೊನೆಗೆ ಕೊನೆ ಅರ್ಥವಿಲ್ಲದ ಮಾತುಗಳು. “ಯಾಕೆ... ಬಾಗಿಲು ಹಾಕಿದೆ? ಇನ್ನು ಬಾಗಿಲು... ಹಾಕಬೇಕಾದ ಅಗತ್ಯ... ಇಲ್ಲ. ನಾನು.... ಸೂಳೆ... ವಾಸು... ಮಮ್ಮೂಟಿ ಹಾಜಿ ಯಾರು ಬೇಕಾದರೂ.... ಬರಲಿ. ಅಗೋ... ಅಲ್ಲಿ ನೋಡು. ಚಿನ್ನದ ತೇರು ಬರ್ತಾ ಇದೆ! ಬಂತು... ಬಂತೂ... ಹೆಬ್ಬಾವು ಬಂತೂ! ಅಯ್ಯೊ, ಅಯ್ಯೊ, ಹಾವು ನನ್ನನ್ನು ನುಂಗುತ್ತಾ ಇದೆ. ರಕ್ಷಿಸಿ... ಯಾರಾದರೂ ರಕ್ಷಿಸಿ... ಹಾ’ ಹಾ...” ಎಂದು ಮಲಗಿದಲ್ಲಿಯೇ ಹೊರಳಾಡಿ ಚೀರಾಡಿ ಅತ್ತಳು. ಅವಳ ಚಿರಾಟವನ್ನು ಕೇಳಿದ ವಾಸು ಒಳ ಬಂದನು. “ಇದೆಲ್ಲ ಕೆಲವು ದಿನಗಳಲ್ಲಿ ಸರಿಹೋಗುತ್ತದೆ” ಎಂದು ಆತನನ್ನುತ್ತಿದ್ದಂತೆ ಆಕೆ ಮಲಗಿದಲ್ಲಿಂದ ಧಿಗ್ಗನೆ ಎದ್ದಳು. ಮೇಜಿನೆಡೆಗೆ ನುಗ್ಗಿ ಅಲ್ಲಿದ್ದ ಭಾರವಾದ ಹೂದಾನಿಯನ್ನೆತ್ತಿಕೊಂಡು ವಾಸುವಿನ ಮುಖದೆಡೆಗೆ ಬೀಸಿ ಒಗೆದಳು. ಆದರೆ ಚಾಣಾಕ್ಷನಾದ ಆತನು ನಿಂತಲ್ಲಿಂದ ಬಗ್ಗಿ ಏಟನ್ನು ತಪ್ಪಿಸಿಕೊಂಡನು. ಹೂದಾನಿ ನಿಲುವುಗನ್ನಡಿಗೆ ಬಡಿದು ಅದು ಫಳ ಫಳನೆ ಚೂರಾಗಿ ನೆಲದ ಮೇಲೆ ಚೆದರಿ ಬಿತ್ತು. ಆಕೆಯ ಹೃದಯದಂತೆಯೇ. ಆಕೆಗೀಗ ತನ್ನ ಸುತ್ತಮುತ್ತಲ ಅಥವಾ ತನ್ನ ಮೈ ಮೇಲಿನ ಪರಿವೆ ಇದ್ದಂತಿರಲಿಲ್ಲ. ಕಣ್ಣುಗಳಲ್ಲಿ ಮಂಕು ಕಳೆ ಕವಿದಿತ್ತು. ಅಳು, ನಗು, ಅಸಂಬದ್ಧವಾದ ಮಾತುಗಳು ಎಲ್ಲವೂ ಆಕೆ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾಳೆಂಬುದನ್ನು ಸಾರಿ ಹೇಳುತ್ತಿತ್ತು. “ಬಾ, ನಾವು ಈಕೆಯನ್ನು ಈಗಲೇ ಬೆಂಗಳೂರಿನ ಮಾನಸಿಕ ಚಿಕಿತ್ಸಾಲಯಕ್ಕೆ ಕರೆದೊಯ್ಯುವಾ...” ಎಂದನು ವಾಸು. ಅವರಿಬ್ಬರೂ ಸೇರಿ ಬಲವಂತವಾಗಿ ಆಕೆಯ ಉಡುಪುಗಳನ್ನು ಸರಿಪಡಿಸಿದರು. ಶ್ರೀಧರನ ಕೆನ್ನೆಗೆ ಹೊಡೆಯಲು ಆಕೆ ಎತ್ತಿದ ಕೈಯನ್ನು ವಾಸು ಬಲವಾಗಿ ಹಿಡಿದುಕೊಂಡನು. “ಸುಮ್ಮನಿರದಿದ್ದರೆ ನಾಲ್ಕೇಟು ಬೀಳುತ್ತದೆ!” ಎಂದೂ ಸೇರಿಸಿದನು. ಬಳಿಕ ಇಬ್ಬರೂ ಆಕೆಯನ್ನು ಬಲವಂತವಾಗಿ ಎಳೆದು ತಂದು ಕಾರಿನಲ್ಲಿ ಕೂರಿಸಿ ಬೆಂಗಳೂರಿನಡೆಗೆ ಧಾವಿಸಿದರು. ದಾರಿಯಲ್ಲಿ ವಾಸು ಶ್ರೀಧರನೊಡನೆ, “ಒಂದು ರೀತಿಯಲ್ಲಿ ಹೀಗಾದದ್ದೇ ಒಳಿತಾಯಿತೆನ್ನು. ನಾವೀಗ ಪ್ರವಾಹ 159 ಆಕೆಯನ್ನು ಹುಚ್ಚಾಸ್ಪತ್ರೆಗೆ ಸೇರಿಸಿಬಿಡುವಾ. ಅವಳಿಗೆ ಮೊದಲೆ ಹುಚ್ಚು ಇತ್ತೊ ಏನೊ. ನೀನೇನೂ ಯೋಚಿಸಬೇಡ. ಇದರ ಅಪ್ಪನಂತಹ ಇನ್ನೊಂದು ಹೆಣ್ಣನ್ನು ತಂದು ನಿನಗೆ ಮದುವೆ ಮಾಡಿಸುವೆ!” ಎಂದು ನಿರಾತಂಕವಾಗಿ ನುಡಿದನು. ಕೆಲವು ದಿನಗಳ ಬಳಿಕ ಶ್ರೀಧರನು ಊರಿಗೆ ಬಂದವನೇ ತನ್ನ ಮಾವನ ಬಳಿಗೆ ಹೋಗಿ, “ನಿಮ್ಮ ಮಗಳಿಗೆ ಹುಚ್ಚು ಇತ್ತು ಎಂಬುದನ್ನು ಮರೆಮಾಚಿ ನನಗೆ ಮದುವೆ ಮಾಡಿಕೊಟ್ಟಿರಿ. ಬೆಂಗಳೂರಿನಲ್ಲಿ ಅವಳ ಹುಚ್ಚು ಕೆರಳಿ ಅವಳನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕಾಯಿತು. ಮೊದಲೇ ತಿಳಿದಿದ್ದರೆ ನಾನು ನಿಮ್ಮ ಮಗಳನ್ನು ಮದುವೆಯಾಗುತ್ತಲೇ ಇರಲಿಲ್ಲ. ನೀವೆಲ್ಲರೂ ಸೇರಿ ನನಗೆ ಮೋಸ ಮಾಡದಿರಿ!” ಎಮದು ಮಾವನನ್ನು ಬೈದು ತೆಗಳಿ ಹೊರಟು ಹೋದನು. ರಾಮುಣ್ಣಿ ಅವಾಕ್ಕಾಗಿ, ಆಘಾತಗೊಂಡು ತಲೆಯಮೇಲೆ ಕೈ ಹೊತ್ತು ಕುಳಿತನು. * * * * * ಆ ಊರಿನ ಮುಸ್ಲಿಂ ಮಹಿಳೆಯರು ಈ ಹಿಂದೆ ಒಂದಲ್ಲ ಒಂದು ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಆಗ ಊರಿನ ಬಡ ಮಹಿಳೆಯರ ಮುಖ್ಯ ಉದ್ಯೋಗವೆಂದರೆ ಟೊಪ್ಪಿ ಹೊಲಿಯುವುದು. ಈ ಟೋಪಿಗಳನ್ನು ಹೆಂಗಸರಿಂದ ಹೊಲಿಸಿ ಆಫ್ರಿಕಾ ಖಂಡದ ಟಾಂಜಾನಿಯಾ ದೇಶಕ್ಕೆ ರಫ್ತು ಮಾಡಲಾಗುತ್ತಿತ್ತು. ಇದಲ್ಲದೆ ತೆಂಗಿನ ನಾರಿನಿಂದ ಹುರಿ ಹಗ್ಗ ತಯಾರಿಸುವುದು, ಮುಸ್ಲಿಂ ಮಹಿಳೆಯರು ಧರಿಸುವ ಕುಪ್ಪಸವನ್ನು ಕೈಯಲ್ಲೇ ಹೊಲಿಯುವುದು ಮತ್ತು ಅದರ ಮೇಲೆ ಜರಿಯ ಕುಸುರಿ ಕೆಲಸ ಮಾಡುವುದು, ಸಮುದ್ರ ತೀರದಲ್ಲಿ ವಾಸಿಸುವವರು ಮೀನಿನ ಬಲೆ ನೇಯುವುದು, ಇವೇ ಮುಂತಾದ ಕೈ ಕಸಬುಗಳನ್ನು ಮನೆಯಲ್ಲೆ ಕುಳಿತು ಮಾಡುತ್ತಿದ್ದರು. ಇಡೀ ದಿನ ದುಡಿದರೂ ನಾಲ್ಕಾಣೆ ಸಿಗುವುದೂ ದುಸ್ತರವಾಗಿದ್ದರೂ ಸುಮ್ಮನೆ ಕುಳಿತು ಕಾಲಹರಣ ಮಾಡದೆ ಇಂತಹ ಯಾವುದಾದರೊಂದು ವೃತ್ತಿಯನ್ನು ಕೈಗೊಳ್ಳುತ್ತಿದ್ದರು. ಹೀಗೆ ಗಳಿಸಿದ ಹಣವನ್ನು ಉಳಿತಾಯ ಮಾಡಿ ಚೂರು ಪಾರು ಒಡವೆಗಳನ್ನು ಮಾಡಿಸಿಕೊಳ್ಳುತ್ತಿದ್ದರು. ಯಾವಾಗ ಊರೊಳಗೆ ಈ ಹೊಸ ಪ್ರವಾಹ ನುಗ್ಗುತೊಡಗಿತೊ, ಅಂದಿನಿಂದ ಈ ಕೈ ಕೆಲಸಗಳು ಹಿಂದೆ ಸರಿಯತೊಡಗಿದವು. ಶ್ರಮವಿಲ್ಲದೆ ಸುಲಭದಲ್ಲಿ ದಿಢೀರ್ ಸಾಹುಕಾರನಾಗುವ ಕನಸಿನಲ್ಲೆ ಜನರು ಮುಳುಗತೊಡಗಿದರು. ಮಮ್ಮೂಟಿಯೊಡನಿರುವ ವರನನ್ನು ಆಯ್ಕೆ ಮಾಡುವುದೇ 160 ಸುಳಿ ಹೆಣ್ಣು ಹೆತ್ತವರ ಕನಸೂ ಕೂಡಾ ಆಗಿರುತ್ತಿತ್ತು. ಇಂತಹ ಹುಡುಗರು ವರದಕ್ಷಿಣೆ ಬೇಡದಿರುವುದು ಈ ಕನಸಿಗೆ ಒಂದು ಕಾರಣವಾಗಿತ್ತು. ಕೂಲಿ ಕೆಲಸ ಮಾಡುತ್ತಿದ್ದ ಅಂದಾಯಿಗೆ ಮುವರು ಹೆಣ್ಣು ಮಕ್ಕಳು. ದೊಡ್ಡವಳಿಗೆ ಮದುವೆಯಾಗಿತ್ತು. ಕಿರಿಯವರಿಬ್ಬರೂ ಮದುವೆಗೆ ಸಿದ್ಧರಾಗಿ ನಿಂತಿದ್ದರು. ದೊಡ್ಡವಳ ಮದುವೆಯ ವೇಳೆಯಲ್ಲಿ ಚಿನ್ನಕ್ಕೆ ಅಷ್ಟೊಂದು ಬೆಲೆ ಇರಲಿಲ್ಲವಾಗಿ ಅವಳಿಗೆ ಅಷ್ಟಿಷ್ಟು ಚಿನ್ನದೊಡನೆ ಹಾಕಿ ಮದುವೆ ಮಾಡಿಕೊಟ್ಟಿದ್ದರು. ಈಗ ಉಳಿದ ಸಾಮಾನುಗಳ ಜೊತೆಯಲ್ಲಿ ಚಿನ್ನದ ಬೆಲೆಯೂ ಗಗನಕ್ಕೇರಲಾರಂಭಿಸಿ ಹೆಣ್ಣು ಹೆತ್ತವರು ಕಂಗಲಾಗತೊಡಗಿದ್ದರು. ಹುಡುಗಿಯರು ಟೊಪ್ಪಿ ಹೊಲಿದು ಸಂಪಾದಿಸಿದ ನಾಲ್ಕು ಕಾಸು ಏತಕ್ಕೂ ಸಾಕಾಗುತ್ತಿರಲಿಲ್ಲ. ಅಂದಾಯಿ ಮತ್ತು ಆತನ ಹೆಂಡತಿ ಆಸ್ಯಮ್ಮ, “ನಮ್ಮಂತಹವರ ಹೆಣ್ಣು ಮಕ್ಕಳು ಇನ್ನು ಮದುವೆ ಇಲ್ಲದೆಯೇ ಇರಬೇಕೇನೊ” ಎಂದು ಹಗಲಿರುಳೂ ಕೊರಗುತ್ತಿದ್ದರು. ಅಂದಾಯಿಯ ಮಗಳು ಮರಿಯಮ್ಮ ಚೆಲುವೆ. ಹುಣ್ಣಿಮೆ ಚಂದ್ರನಂತೆ ಮುಖ, ದೊಡ್ಡ ಕಣ್ಣುಗಳು, ತೊಂಡೆ ತುಟಿ ಎಂದು ಕವಿಗಳು ವರ್ಣಿಸುವಂತಿತ್ತು ಆಕೆಯ ರೂಪ. ಮನೆ ಮುಂದಿನ ಭಾವಿಯಿಂದ ನೀರು ಸೇದುವಾಗ ಮನೆ ಮುಂದಿನ ಓಣಿಯಲ್ಲಿ ಎಂದಾದರೊಮ್ಮೆ ನಡೆದಾಡುವವರ ಕಣ್ಣಿಗೆ ಅಪರೂಪಕ್ಕೆಂಬಂತೆ ಬೀಳುತ್ತಿದ್ದಳು. ಮಮ್ಮೂಟಿಯ ಅಕ್ಕನ ಮಗ ಹಮೀದ್ ಸ್ನೇಹಿತರನ್ನು ಕಾಣಲು ಆ ಓಣಿಗೆ ಬಂದವನ ಕಣ್ಣಿಗೆ ಮರಿಯಮ್ಮ ಬಿದ್ದಳು. ಹದಿ ಹರೆಯದ ಆ ಚೆಲುವು ಆತನನ್ನು ಬೆಂಬಿಡದೆ ಹಿಂಬಾಲಿಸಿತು. ಮದುವೆಯಾಗುವುದಾದರೆ ಈ ಹುಡುಗಿಯನ್ನೇ ಎಂದು ನಿರ್ಧಾರ ತಳೆದು ತಂದೆ ತಾಯಿಗಳಿಗೆ ತಿಳಿಸಿದನು. ಆದರೆ ಅವನ ತಂದೆ ತಾಯಿಗಳು ಈಗ ಇಂತಹ ಬಡವರೊಡನೆ ಸಂಬಂಧ ಬೆಳೆಸಲಿಚ್ಛಿಸುವರೇ? “ಥತ್, ಆ ಕೂಲಿಯವನ ಮಗಳನ್ನು ಮದುವೆಯಾಗುವುದೇ? ನಾವೇನು? ನಮ್ಮ ಅಂತಸ್ತೇನು?” ಎಂದು ಆತನ ತಂದೆ ಇಸ್ಮಾಲಿ ಎಂದರೆ ಜಮೀಲ, “ನೀನು ಮಮ್ಮೂಟಿ ಹಾಜಾರರ ಸೋದರಳಿಯ ಎಂಬುದನ್ನು ಮರೆತೆಯಾ?” ಎಂದು ಕೇಳಿದಳು. ಆಕೆ ತನ್ನ ತಾಯಿಯಂತೆಯೇ ‘ಕಾಲಕ್ಕೆ ತಕ್ಕಂತೆ ಕೋಲ’ ಎಂಬ ಪರಿಸ್ಥಿತಿಗೆ ಹೊಂದಿಕೊಂಡವಳು. ಈಗ ತನ್ನ ಮಗನಿಗೆ ಇಂತಹ ಭಿಕಾರಿಗಳ ಮನೆಯಿಂದ ಹೆಣ್ಣು ತರುವುದೇ? ಆದರೆ ಹಮೀದ್‍ನದು ಒಂದೇ ಹಟ ‘ನಾನು ಮದುವೆಯಾಗುವುದಾದರೆ ಪ್ರವಾಹ 161 ಆ ಹುಡುಗಿಯನ್ನೇ ಇಲ್ಲವಾದರೆ ನಾನು ಮದುವೆಯಾಗುವುದೇ ಇಲ್ಲ!’ ಮಗನ ಹಟದ ಮುಂದೆ ತಂದೆ ತಾಯಿಗಳು ಮಣಿಯಲೇ ಬೇಕಾಯಿತು. ಜಮೀಲ ತಮ್ಮನ ಸಲಹೆ ಕೇಳಿ ಮಗನಿಗೆ ಬುದ್ಧಿ ಹೇಳಲು ಕೇಳಿಕೊಂಡಳು. ಅದಕ್ಕೆ ಮಮ್ಮೂಟಿ “ನೀನೂ ನಾನೂ ಅಂತಸ್ತು ನೋಡಿ ಮದುವೆಯಾಗಿದ್ದೇವೆಯೇ? ಅದೆಲ್ಲ ಬಿಟ್ಬಿಡಕ್ಕಾ. ಅವನಿಗೆ ಇಷ್ಟ ಇದ್ದಲ್ಲಿ ಮದುವೆಯಾಗಲಿ” ಎಂದು ಅಳಿಯನ ಪರ ವಹಿಸಿದನು. ಕೆಲವೇ ದಿನಗಳಲ್ಲಿ ಮದುವೆಯೂ ಜರುಗಿತು. ಮರಿಯಮ್ಮಳನ್ನು ಹಮಿದ್ ನಿಕಾಹ್ ಮಾಡಿ ಕರೆದುಕೊಂಡು ಬಂದರೂ ಅತ್ತೆ ಮಾವಂದಿರು ಸೊಸೆಯನ್ನು ಸ್ವಾಗತಿಸಿದ್ದು ಅರೆ ಮನಸ್ಸಿನಿಂದಲೇ. ಈಕೆಯ ತಂದೆತಾಯಿಗಳು ತನ್ನ ಮಗನಿಗೆ ಏನೊ ಮದ್ದು ಹಾಕಿ ಅವನ ಮನಸ್ಸನ್ನು ತಿರುಗಿಸಿದ್ದಾರೆ ಎಮಬ ಗುಮಾನಿಯೂ ಜಮೀಲಳಿಗಿತ್ತು. ಹಮೀದ್ ಮಾತ್ರ ತುಂಬಾ ಸಂತೊಷದಿಂದಿದ್ದನು. ಅಂದಾಯಿ ಮತ್ತು ಆಸ್ಯಮ್ಮ ನೆಲದಿಂದ ಕೊಂಚ ಎತ್ತರದಲ್ಲಿಯೇ ನಡೆದಾಡತೊಡಗಿದರು! ಮಮ್ಮೂಟಿ ಹಾಜಾರರ ಅಳಿಯ ತಮ್ಮ ಮನೆಗೆ ಮದುಮಗನಾಗಿ ಬರುವುದೆಂದರೆ ಸಾಮಾನ್ಯವೇ? ತಮ್ಮ ಬಡತನದ ಬಾಳು ಮುಗಿಯಿತೆಂದುಕೊಳ್ಳುತ್ತಾ ಅಳಿಯನು ತಮಗೊಂದು ಒಳ್ಳೆಯ ಮನೆ ಕಟ್ಟಿಸಿಕೊಡುವುದನ್ನು ಕಾಯತೊಡಗಿದರು. ತನ್ನ ಸೌಂದರ್ಯದಂತೆಯೇ ಒಳ್ಳೆಯ ಗುಣ ನಡತೆ, ನಯ ವಿನಯ ಎಲ್ಲವನ್ನೂ ಮೈಗೂಡಿಸಿಕೊಂಡ ಹೆಣ್ಣು ಮರಿಯಮ್ಮ. ಆದರೆ ಅತ್ತೆಯ ಗಂಟು ಮುಖ ಆಕೆಯ ಮುಂದೆ ಸಡಿಲಗೊಳ್ಳಲೇ ಇಲ್ಲ. ಒಂದೆರಡು ಬಾರಿ ಹಮೀದ್ ಹೆಂಡತಿಯನ್ನು ಕಾರಿನಲ್ಲಿ ತಿರುಗಾಡಲು ಕರೆದೊಯ್ದಾಗ, “ಹೆಂಗಸರನ್ನು ಹಾಗೆಲ್ಲ ಸುತ್ತಿಸಿದರೆ ಅವರ ಬುದ್ಧಿ ಹಾಳಾಗುತ್ತದೆ” ಎಂದು ಜಮೀಲ ಅದಕ್ಕೂ ತಡೆಯೊಡ್ಡಿದಳು. ಗಂಡ ಮನೆಯಲ್ಲಿರುವಷ್ಟು ಹೊತ್ತು ಮರಿಯಮ್ಮ ಸುಖವಾಗಿಯೇ ಇದ್ದಳೆನ್ನಬಹುದು. ಆದರೆ ಅವಳ ಸಂತೋಷ ಹೆಚ್ಚು ದಿನ ಬಾಳಲಿಲ್ಲ. ಮದುವೆಯಾದ ಹತ್ತೇ ದಿನಗಳಲ್ಲಿ ಆತನಿಗೆ ಮಮ್ಮೂಟಿಯಿಂದ ಕರೆ ಬಂತು. ನವವಧುವನ್ನು ಬಿಟ್ಟು ಹೋಗುವುದು ಆತನಿಗೆ ಕಷ್ಟವಾದರೂ ಆ ಕರೆ ಬಂದಾಗ ಹೋಗದಿರುವುದು ಸಾಧ್ಯವೇ ಇರಲಿಲ್ಲ. ಮಮ್ಮೂಟಿ ಅಳಿಯನೊಡನೆ. ಈ ಕೆಲಸಕ್ಕೆ ಈ ಬಾರಿ ನೀನೇ ಹೋಗಬೇಕು. ಬೇರೆ ಯಾರನ್ನೂ ಕಳುಹಿಸುವಂತಿಲ್ಲ” ಎಂದಾಗ ಹಮೀದ್, “ಆಗಲಿ ಮಾವಾ, ಅದಕ್ಕೇನಂತೆ” ಎಂದು ಒಪ್ಪಿಕೊಂಡರು ಖಿನ್ನ ಮನಸ್ಕನಾಗಿಯೇ ಮನೆಗೆ ಹಿಂತಿರುಗಿದನು. 162 ಸುಳಿ ಮಮ್ಮೂಟಿಯ ಬಳಿಯಿಂದ ಆಜ್ಞೆ ಪಡೆದು ಹಿಂತಿರುಗಿದವನು ಮರಿಯಮ್ಮಳೊಡನೆ, “ನಾನು ಹಿಂತಿರುಗಿ ಬರಲು ಹದಿನೈದು ದಿನಗಳಾದರೂ ಬೇಕಾಗಬಹುದು. ಅಲ್ಲಿಯವರೆಗೆ ಹೇಗಾದರೂ ಸಹಿಸಿಕೊ. ಉಮ್ಮ ಏನು ಹೇಳಿದರೂ ಆ ಕಿವಿಯಲ್ಲಿ ಕೇಳಿ ಈ ಕಿವಿಯಲ್ಲಿ ಬಿಟ್ಬಿಡು ಅದಕ್ಕೆ ಉತ್ತರಿಸಬೇಡ” ಎಂದು ನಗುತ್ತಾ ನುಡಿದನು. ಆಕೆಯ ಕಣ್ಣುಗಳು ತುಂಬತೊಡಗಿದೊಡನೆ, “ಅಯ್ಯೋ, ಚಿನ್ನಾ, ನಾನು ಸಾಧ್ಯವಾದಷ್ಟು ಬೇಗ ಬರುವೆ” ಎನ್ನುತ್ತಾ ಆಕೆಯನ್ನಪ್ಪಿಕೊಂಡು ಚುಂಬಿಸಿ, ಸೂಟ್‍ಕೇಸನ್ನೆತ್ತಿಕೊಂಡು ರಾತ್ರಿಯ ನೀರವತೆಯಲ್ಲಿ ಮರೆಯಾದನು. ಕಾರು ಹೊರಟುಹೋದ ಎಷ್ಟೋ ಹೊತ್ತಿನವರೆಗೆ ಆಕೆ ಕಿಟಿಕಿಗೆ ಮುಖವಾನಿಸಿ ಬಾನಂಗಳದ ನಕ್ಷತ್ರಗಳನ್ನು ದಿಟ್ಟಿಸುತ್ತಾ ನಿಂತಿದ್ದಳು. “ಇವಳನ್ನು ಊಟಕ್ಕೆ ಕರೆಯುವುದಕ್ಕೂ ಒಂದು ಆಳನ್ನಿಟ್ಟುಕೊಳ್ಳಬೇಕು?! ಅವನು ಹೋದ ಮೇಲೆ ಕೂಡಾ ರೂಮಿನಿಂದ ಹೊರಬರಲಾಗಿಲ್ಲವಾ?” ಎನ್ನುವ ಅತ್ತೆಯ ಬಿರುನುಡಿಗಳನ್ನು ಕೇಳಿ ಕಣ್ಣೊರೆಸಿಕೊಂಡು ಹೊರಬಂದಳು. ಅವನು ಅತ್ತ ಹೋದ ಏಳೆಂಟು ದಿನಗಳಲ್ಲಿ ಬೊಂಬಾಯಿ ಕಡೆಯಿಂದ ಒಂದು ಸುದ್ದಿ ಬಂತು. “ಹಮೀದ್‍ನನ್ನು ಪೊಲೀಸರು ಮಾಲು ಸಹಿತ ಬಂಧಿಸಿದ್ದಾರೆ” ಎಂದು ಕೂಡಲೇ ಮಮ್ಮೂಟಿಯೂ ಊರು ಬಿಟ್ಟನು. ಆದರೆ ಈ ಘಟನೆಯ ಪರಿಣಾಮ ಆತನ ಮನೆಯಲ್ಲಿ ಮಾತ್ರ ಬೇರೆಯೇ ಆಯಿತು. ಜಮೀಲಳಿಗೆ ಮೊದಲೇ ಒಲ್ಲದ ಸೊಸೆ. ಈಗ ಮಗ ಇಂತಹ ತೊಂದರೆಗೆ ಸಿಕ್ಕಿಕೊಂಡದ್ದನ್ನು ತಿಳಿದ ಆಕೆ ಆರ್ಭಟಿಸಿತೊಡಗಿದಳು. “ಕಳೆದ ಕೆಲವು ವರ್ಷಗಳಿಂದಲೂ ನನ್ನ ಮಗನು ಈ ಕೆಲಸ ಮಾಡುತ್ತಿಲ್ಲವಾ? ಈವರೆಗೆ ಎಂದಾದರೂ ಸಿಕ್ಕಿ ಬಿದ್ದಿದ್ದಾನೆಯೇ? ಇದೆಲ್ಲ ಈ ಲೆಕ್ಕಸಿರಿಯ ಕಾಲ್ಗುಣ! ಇನ್ನು ಇವಳನ್ನು ಈ ಮನೆಯಲ್ಲಿಟ್ಟರೆ ನನ್ನ ಮನೆ ತೊಳೆದು ಹೋದೀತು!” ಎನ್ನುತ್ತಾ, “ಅವನೊಮ್ಮೆ ಬದುಕಿ ಬಂದರೆ ಸಾಕು” ಎಂದು ಅಳತೊಡಗಿದಳು. ಅತ್ತೆಯೊಡನೆ ಮಾವನೂ ದನಿಗೂಡಿಸಿದನು. “ನಾನಾಗಲೇ ಈ ಸಂಬಂಧ ಬೇಡಾಂತ ಆತನೊಡನೆ ಗೋಗರೆದೆ. ನನ್ನ ಮಾತಿಗೆ ಈ ಮನೆಯಲ್ಲಿ ಬೆಲೆ ಇದ್ದರೆ ತಾನೇ? ಈಗ ಅವನಿಗೂ ಗೊತ್ತಾಗಿರಬೇಕು” ಎನ್ನುತ್ತಾ ತಲೆಗೆ ಮುಂಡಾಸು ಸುತ್ತಿಕೊಂಡು ಮಸೀದಿಗೆ ಹೊರಟನು. ಮರಿಯಮ್ಮನ ಪಾಡು ಯಾರಿಗೂ ಬೇಡ. ಗಂಡನ ಮನೆಯಲ್ಲಿ ಗಂಡನೆಂಬವನಿದ್ದರೆ ಅತ್ತೂ, ಕರೆದಾದರೂ ತನ್ನ ನಿರಪರಾಧಿತನವನ್ನು ಪ್ರವಾಹ 163 ವಾದಿಸಬಹುದಾಗಿತ್ತು. ಈ ಮನೆಗೆ ಮದುಮಗಳಾಗಿ ಬಂದು ಇನ್ನೂ ಇಪ್ಪತ್ತು ದಿನಗಳೂ ಕಳೆದಿಲ್ಲ. ಕೈಯ ಮದರಂಗಿಯ ಬಣ್ಣ ಇನ್ನೂ ಮಾಸಿಲ್ಲ. ಅತ್ತೆ ಮಾವಂದಿರ ಮುಂದೆ ನೆಟ್ಟಗೆ ನಿಲ್ಲಲು ಇನ್ನೂ ಅಭ್ಯಾಸವಾಗಬೇಕಷ್ಟೇ. ಅತ್ತೆಯೆಂದರಂತೂ ಭಯದಿಂದ ನಡುಗುತ್ತಿದ್ದಳು. ಇಂತಹ ಪರಿಸ್ಥಿತಿಯಲ್ಲಿ ಕೋಣೆಯೊಳಗೆ ಕುಳಿತು ಅಳುವುದೊಂದೆ ಆಕೆಗುಳಿದ ದಾರಿ. “ನೀನು ಅಳುತ್ತಾ ಕುಳಿತುಕೊಂಡರೇನಾಯಿತು? ಬಂದು ಅಡಿಗೆ ಮಾಡು.” ಅತ್ತೆ ಬುಸುಗುಟ್ಟಿದಳು. ಆಕೆ ಕೂಡಲೇ ಅಡಿಗೆ ಮನೆಗೆ ತೆರಳಿ ಅಡಿಗೆ ಕೆಲಸವನ್ನಾರಂಭಿಸಿದಳು. ಆಕೆ ಬೆಂಕಿಯಲ್ಲಿ ಬಿದ್ದಂತೆ ಒದ್ದಾಡುತ್ತಿದ್ದಳು. ಅಳಿಯನ ವಿಷಯ ತಿಳಿದು ವಿಚಾರಿಸಿಕೊಂಡು ಹೋಗಲು ಬಂದ ಆಕೆಯ ತಂದೆಯೊಡನೆ ಅತ್ತೆ ಮಾವಂದಿರು ಸಮನಾಗಿ ಮಾತನಾಡಿಸಲೇ ಇಲ್ಲ. “ಎಲ್ಲಾ ನಿಮ್ಮ ಮಗಳ ಕಾಲ್ಗುಣ” ಎಂದು ಅತ್ತೆ ಹಂಗಿಸಿದ್ದನ್ನು ಕೇಳಿಕೊಂಡು ಮುಖ ಚಿಕ್ಕದು ಮಾಡಿಕೊಂಡು ಹೋದನಾತ. ಹಮೀದ್‍ನ ಸುದ್ದಿಯೇ ಇಲ್ಲ. ಹೀಗೆಯೇ ಮತ್ತೂ ಕೆಲವು ದಿನಗಳು ಕಳೆದವು. ಮರಿಯಮ್ಮ ಆ ದಿನ ಅಡಿಗೆ ಮನೆಯಲ್ಲಿ ತಲೆ ಸುತ್ತಿ ಬವಳಿ ಬಂದು ಬಿದ್ದುಬಿಟ್ಟಳು. ಅಲ್ಲೇ ಇದ್ದ ಜಮೀಲ ಆಕೆಯ ಮುಖಕ್ಕೆ ನೀರು ಚಿಮುಕಿಸಿದಳು. ಬಳಿಕ ಕೆಲ ಹೊತ್ತು ಸೊಸೆಯನ್ನು ಹಾಗೆಯೇ ದಿಟ್ಟಿಸಿದಳು. “ಓ... ಹೀಗೋ ಸಮಾಚಾರಾ? ಅದಕ್ಕೇ ಬೇಗನೆ ನನ್ನ ಮಗನ ತಲೆಗೆ ಕಟ್ಟಿಬಿಟ್ಟರು! ಕೇಳಿದಿರಾ? ಕೇಳಿದಿರಾ?” ಎಂದು ಗಂಡನನ್ನು ಕರೆಯುತ್ತಾ ಚಾವಡಿಗೆ ಓಡಿದಳು. “ನಿಮ್ಮ ಸೊಸೆ ಗರ್ಭಿಣಿ! ನೋಡಿದಿರಾ, ಎಂತಹ ಜನರ ಸಹವಾಸವಾಯಿತು!” ಎಂದು ಗಂಡನೊಡನಂದಳು. “ಹಾಂ...” ಆತ ಆಘಾತಗೊಂಡಂತೆ ಎದ್ದು ನಿಂತನು. “ಹೀಗೇನು ವಿಷಯ? ಇನ್ನು ಅವಳನ್ನು ಈ ಮನೆಯಲ್ಲಿ ಒಂದು ನಿಮಿಷವೂ ಇರಗೊಡಬಾರದು. ಈಗಲೇ ಅವಳ ತಂದೆಯನ್ನು ಕರೆಸುವೆ. ಅವ ಬಂದು ಅವಳನ್ನು ಕರೆದುಕೊಂಡು ಹೋಗಲಿ” ಎಂದು ಗರ್ಜಿಸಿದನಾತ. ಎಲ್ಲವನ್ನು ಕೋಣೆಯಲ್ಲಿ ಮಲಗಿದಲ್ಲಿಂದಲೇ ಕೇಳಿಸಿಕೊಂಡ ಮರಿಯಮ್ಮಳಿಗೆ ತನ್ನಿಂದಾದ ತಪ್ಪಾದರೂ ಏನೆಂದು ಅರ್ಥವಾಗಲೇ ಇಲ್ಲ. ಆಕೆ ತಲೆ ಸುತ್ತು, ಸಂಕಟದಿಂದ ಹಾಗೆಯೇ ಕಣ್ಣು ಮುಚ್ಚಿ ಮಲಗಿದಳು. ಹೊರಗೆ 164 ಸುಳಿ ತಂದೆಯ ಧ್ವನಿ ಕೇಳಿಸಿದಾಗಲೇ ಆಕೆಗೆ ಎಚ್ಚರವಾಗಿದ್ದು. “ನನ್ನ ಮಗಳು ಅಂತಹವಳಲ್ಲ. ನಾವು ಬಡವರಾದರೂ ಮರ್ಯಾದಸ್ತರು. ಅವಳ ಮದುವೆಯಾಗಿ ಒಂದು ತಿಂಗಳ ಮೇಲಾಗಲಿಲ್ಲವಾ? ಈಗ ಅವಳ ಹೊಟ್ಟೆಯಲ್ಲಿರುವ ಮಗು ನಿಮ್ಮ ಮಗನದೇ ಅಲ್ಲವಾ?” ಮರಿಯಮ್ಮ ದೊಡ್ಡದಾಗಿ ಕಣ್ಣು ಬಿಟ್ಟಳು. ಇವರೇನು ಹೇಳುತ್ತಾ ಇದ್ದಾರೆ? ತನ್ನ ಶೀಲದ ಕುರಿತೇ ಇವರಿಗೆ ವಿಶ್ವಸವಿಲ್ಲವಾ? ಆಕೆ ಮಲಗಿದಲ್ಲೇ ಮರಗಟ್ಟಿದಂತಾದಳು. “ನಿಮ್ಮ ಮಗಳು ಎಂತಹವಳೂಂತ ನಿಮಗೆ ಗೊತ್ತಿರಲೇಬೇಕು! ಮದುವೆಯದ ಬಳಿಕ ನನ್ನ ಮಗ ಊರಲ್ಲಿದ್ದುದು ಹತ್ತೇ ದಿನ! ಆ ಮೇಲೆ ಅವಳು ಮುಟ್ಟಾಗಲೇ ಇಲ್ಲ. ಅಷ್ಟರಲ್ಲಾಗಲೇ ಅವಳು ವಾಂತಿ ಮಾಡಲಾರಂಭಿಸಿದಳೆಂದರೆ ಏನರ್ಥ?” ಎದೆಗೆ ಚೂರಿಯಿಂದ ತಿವಿಯುವಂತಹ ಮಾತುಗಳು ಅತ್ತೆಯಿಂದ ಬಾಣದಂತೆ ಬಂದು ಆಕೆಯ ಕಿವಿಯಲ್ಲಪ್ಪಳಿಸಿತು. “ಒಂದು ಹೆಣ್ಣು ಗರ್ಭ ಧರಿಸಲು ಎಷ್ಟು ದಿನ ಬೇಕೂಂತ ನಿಮ್ಮ ಅಭಿಪ್ರಾಯ?” ಅಂದಾಯಿ ಸುಲಭದಲ್ಲಿ ಸೋಲೊಪ್ಪಿಕೊಳ್ಳಲಿಲ್ಲ. “ಬೇಕಾದರೆ ಈಗಲೇ ಅವಳನ್ನು ಡಾಕ್ಟರರ ಬಳಿಗೆ ಕರೆದುಕೊಂಡು ಹೋಗಿ ಪರೀಕ್ಷಿಸುವಾ. ಎಷ್ಟು ತಿಂಗಳೂಂತ ಡಾಕ್ಟರು ಹೇಳುತ್ತಾರೆ.” “ಡಾಕ್ಟರಿಗೆ ಅದೆಲ್ಲ ಹೇಗೆ ಗೊತ್ತಾಗುತ್ತದೆ? ಡಾಕ್ಟರೇನು ಅವಳ ಪಕ್ಕದಲ್ಲಿದ್ದರಾ? ಅದೆಲ್ಲ ನಮ್ಮ ಹತ್ತಿರ ನಡೆಯುವುದಿಲ್ಲ. ನೀವು ನಿಮ್ಮ ಮಗಳನ್ನು ಈಗಲೇ ಕರೆದುಕೊಂಡು ಹೋಗಿ. ಅವಳು ಈ ಮನೆಗೆ ಕಾಲಿಟ್ಟಂದೇ ನಮಗೆ ತೊಂದರೆ ಪ್ರಾರಂಭವಾಯಿತು.” ಜಮೀಲ ಹೆಜ್ಜೆಯೂರಿನಿಂತಳೆಂದರೆ ಅವಳನ್ನಲ್ಲಿಂದ ಕದಲಿಸಲು ಯಾರಿಂದಲೂ ಸಾಧ್ಯವಿಲ್ಲ. ತಾನು ಎಂತಹ ಮೂರ್ಖರ ಮನೆಗೆ ತನ್ನ ಮಗಳನ್ನು ಕೊಟ್ಟೆ ಎಂದು ಅಂದಾಯಿಗೆ ಅರ್ಥವಾದದ್ದು ಆಗಲೇ. ಆತನು “ಆಗಲಿ, ಬಳ್ಳಿಗೆ ಎಂದೂ ಕಾಯಿ ಭಾರವಲ್ಲ. ಇಷ್ಟು ವರ್ಷ ನಾನವಳನ್ನು ಸಾಕಿಲ್ಲವಾ? ಬಾಮ್ಮ, ಮಗೂ... ಮರಿಯಾ... ಬಾ. ನಾವು ಮನೆಗೆ ಹೋಗುವಾ” ಎಂದು ಮಗಳನ್ನು ಕರೆದನು., ಮರಿಯಮ್ಮ ಎದ್ದು ನಿಂತಾಗ ಮತ್ತೊಮ್ಮೆ ಕಣ್ಣು ಕತ್ತಲಿಟ್ಟಂತಾಯಿತು. ತುಟಿ, ಮುಖವೆಲ್ಲ ಬಿಳಿಚಿಕೊಂಡು ನಿಶ್ಯಕ್ತಿಯಿಂದ ಹೆಜ್ಜೆ ಎತ್ತಿಡುವುದೇ ಕಷ್ಟವಾಯಿತು. ಅಕೆ ನಿಧಾನವಾಗಿ ಬಾಗಿಲ ಬಳಿ ಬಂದು ಮೆಲ್ಲಗೆ, ಆದರೂ ಎಲ್ಲರಿಗೂ ಕೇಳಿಸುವಂತೆ. ಪ್ರವಾಹ 165 “ಬೇಡ ಬಾಪ್ಪಾ, ನಾನು ಬರುವುದಿಲ್ಲ. ಇದು ಅವರ ಮನೆಯದೇ ಬಾಪ್ಪಾ” ಎಂದು ಕಣ್ಣೊರೆಸಿಕೊಳ್ಳುತ್ತಾ ನುಡಿದಳು. “ಅದು ನನಗೆ ಗೊತ್ತು ಮಗೂ. ಈಗ ನೀನು ಬಾ. ನಿನ್ನನ್ನು ಕಟ್ಟಿಕೊಂಡವನೊಬ್ಬನಿದ್ದಾನಲ್ಲ? ಅವನು ಬಂದ ಮೇಲೆ ಎಲ್ಲರಿಗೂ ಸತ್ಯ ಗೊತ್ತಾಗಿಯೇ ಆಗುತ್ತದೆ” ಎನ್ನುತ್ತಾ ಹೋಗಿ ಅಂಗಳದಲ್ಲಿ ನಿಂತನು. “ನೀನು ಹೊರಡದಿದ್ದರೆ ಕತ್ತು ಹಿಡಿದು ಆಚೆಗೆ ತಳ್ಳುತ್ತೇನೆ” ಎನ್ನುತ್ತಾ ಜಮೀಲ ಸೊಸೆಯ ಬಳಿ ಬಂದಳು. ಅತ್ತೆಯ ಈ ರಾಕ್ಷಸ ರೂಪವನ್ನು ಕಂಡ ಮರಿಯಮ್ಮ ಕೂಡಲೇ ತಲೆ ತಗ್ಗಿಸಿ ಬುರುಕಾ ಹಾಕಿಕೊಂಡು ಆಗಾಗ ಕಣ್ಣೊರೆಸಿಕೊಳ್ಳುತ್ತಾ ತಂದೆಯನ್ನು ಹಿಂಬಾಲಿಸಿದಳು. ಮನೆಗೆ ಬಂದವಳೇ ತಾಯಿಯನ್ನಪ್ಪಿಕೊಂಡು ಗೊಳೊ ಎಂದು ಅತ್ತಳು. ಅಂದಾಯಿ ಒಳ ಬಂದು, “ಹೋಗಿ ಹೋಗಿ ಎಂತಹ ಮನೆಯವನ್ನಾರಿಸಿಕೊಂಡೆವು ನಾವು! ಒಬ್ಬ ಕೂಲಿಯವನಿಗೆ ಕೊಟ್ಟಿದ್ದರೂ ನನ್ನ ಮಗಳು ಸುಖವಾಗಿರುತ್ತಿದ್ದಳು. ಇವಳಿಗೆ ತಲೆ ಸುತ್ತು, ವಾಂತಿ ಎಲ್ಲ ಪ್ರಾರಂಭವಾಗಿದೆ. ಆದರೆ ಅದು ಅವರ ಮಗನದಲ್ಲವಂತೆ...” ಎನ್ನುತ್ತಿದ್ದಂತೆ “ಹಾಂ...” ಎಂದು ಆಸ್ಯಮ್ಮ ಕೂಡಾ ಆಘಾತಗೊಂಡಳು. “ಹಾಗೆಂದರೇ ಆ ರಾಕ್ಷಸರು? ಮದುವೆಯ ನಾಲ್ಕು ದಿನಗಳ ಹಿಂದೆಯಷ್ಟೆ ಅವಳ ಸ್ನಾನವಾಗಿತ್ತು. ಮದುವೆಯಾದ ಹತ್ತನೇ ತಿಂಗಳಲ್ಲಿ ಹೆರಿಗೆಯಾಗುವುದಿಲ್ಲವಾ? ನನ್ನ ಮಗುವಿನ ಮೇಲೆ ಇಂತಹ ಅಪವಾದವನ್ನು ಹೊರಿಸಿದರಾ ಆ ನೀಚರು? ಇವರೇನು ಮನುಷ್ಯರೊ ಮೃಗಗಳೊ?...” ಆಕೆಯ ಗಂಟಲು ಕಟ್ಟಿ ಮುಂದೆ ಮಾತು ಹೊರಡಲಿಲ್ಲ. “ನಾವೇನು ಗಂಡು ಹುಡುಕಿಕೊಂಡು ಅವರ ಮನೆಗೆ ಹೋಗಿದ್ದೆವಾ? ಅವರೇ ನಮ್ಮ ಬಳಿಗೆ ಬಂದದ್ದಲ್ಲವಾ? ಅಷ್ಟು ದೊಡ್ಡವರ ಸಹವಾಸ ಮಾಡುವಾಗಲೇ ನಾವು ಚೆನ್ನಾಗಿ ಯೋಚಿಸಬೇಕಿತ್ತು. ಮಮ್ಮೂಟಿ ಹಾಜಾರರ ಸೋದರಳಿಯ; ಮನೆಯಲ್ಲೆಲ್ಲ ‘ತಂಪಾಗಿರಬಹುದು’ ಎಂದೆಲ್ಲ ಹೇಳಿದೆಯಲ್ಲ? ಈಗ ಅನುಭವಿಸು...” ಎಂದು ಅಂದಾಯಿ ತಪ್ಪನ್ನು ಹೆಂಡತಿಯ ಮೇಲೆ ಹೊರಿಸಿದರೂ ಬಳಿಕ ಸಾವರಿಸಿಕೊಂಡು. “ನೊಡುವಾ, ಈ ಊರು ಅವರದೇ ರಾಜ್ಯ ಅಲ್ಲವಲ್ಲ? ಹೇಗೂ ಅವನೊಮ್ಮೆ ಊರಿಗೆ ಬರಲಿ. ಆ ಮೇಲೆ ಏನು ಮಾಡುತ್ತಾರೊ ನೋಡುವಾ” ಎಂದು ಹೆಂಡತಿಯನ್ನು ಸಂತೈಸಿದನು. 166 ಸುಳಿ ಮಮ್ಮೂಟಿ ಒಂದೆರಡು ತಿಂಗಳು ಬೊಂಬಾಯಿ, ದೆಹಲಿ ಎಂದು ಎಲ್ಲ ಕಡೆಯೂ ಓಡಾಡಿ, ಕಾಣಬೇಕಾದವರನ್ನೆಲ್ಲ ಕಂಡು, ಕೊಡಬೇಕಾದವರಿಗೆ ಕೊಡಬೇಕಾದುದನ್ನು ಕೊಟ್ಟು, ಹಮೀದ್‍ನನ್ನು ಬಿಡಿಸಿಕೊಂಡು ಹಿಂತಿರುಗಿದನು. ಹಮೀದ್ ಮನೆಗೆ ಬಂದವನೇ ತಾಯಿಯೊಡನೆ, “ಮರಿಯಾ ಎಲ್ಲಿ?” ಎಂದು ಕೇಳಿದನು. “ಓ..... ಆ ವಿಷಯವನ್ನೇನು ಕೇಳುತ್ತೀ?” ಜಮೀಲ ಮಗನ ಬಳಿ ಕುಳಿತು ಆತನ ಬೆನ್ನು ಸವರುತ್ತಾ ನಯವಾಗಿ ನುಡಿದಳು. “ನೀನೇನೋ ಮೆಚ್ಚಿಕೊಂಡು ಅವಳನ್ನು ಮದುವೆಯಾದೆ. ನಿನ್ನ ಸಂತೋಷಕ್ಕೆ ನಾವೇಕೆ ಅಡ್ಡ ಬರಬೇಕೆಂದು ನಾವೂ ಒಪ್ಪಿಕೊಂಡೆವು. ಈ ನೋಡಿದರೆ ನಮ್ಮೆಲ್ಲರ ಸಂತೋಷಕ್ಕೂ ಕೊಳ್ಳಿ ಇಕ್ಕಿದಳು ಆಕೆ...” ಜಮೀಲ ಮತು ನಿಲ್ಲಿಸಿದಳು. “ಏನಾಯಿತು ಹೇಳುಮ್ಮಾ?” ಕಾತರದಿಂದ ಕೇಳಿದನು ಹಮೀದ್. “ನೀನು ಹೋದ ಕೂಡಲೇ ಅವಳಿಗೆ ತಲೆ ಸುತ್ತು, ವಾಂತಿ ಎಲ್ಲ ಪ್ರಾರಂಭವಾಯಿತು” ಇಸ್ಮಾಲಿ ಮಾತು ಮುಂದುವರಿಸಿದನು. ‘ಮದುವೆಯಾಗಿ ನೀನು ಊರಿನಲ್ಲಿದ್ದದ್ದು ಹತ್ತೇ ದಿನ. ತಿಂಗಳಾಗುವ ಮೊದಲು ಅದೆಲ್ಲ ಹೇಗಾಗುತ್ತದೆ? ಅವಳು ಮೊದಲೇ ಎಡವಿದ್ದಳೂಂತ ಕಾಣುತ್ತದೆ. ಅದಕ್ಕೇ ನೀನು ಕೇಳಿದೊಡನೆ ನಿನ್ನ ತಲೆಗೆ ಕಟ್ಟಿ ಬಿಟ್ಟರು” ಎಂದನು. “ತುಂಬಾ ಚೆಂದದ ಹೆಣ್ಣನ್ನು ಎಂದೂ ನಂಬಬಾರದು!” ಎಂದೂ ಸೇರಿಸಿದನು. “ಅವಳ ಕಾಲ್ಗುಣವೇ ಚೆನ್ನಾಗಿಲ್ಲ. ಇಲ್ಲವಾದರೆ ನಿನಗೆ ಹೀಗೆಲ್ಲ ಆಗುತ್ತಿತ್ತೆ? ನೀನೇನು ಮೊದಲ ಬಾರಿಗೆ ಹೋದದ್ದಾ?” ಜಮೀಲ ಮತ್ತಷ್ಟು ವಿಷ ಚುಚ್ಚಿದಳು. ತಾಯಿಯ ಈ ಕೊನೆಯ ಮಾತನ್ನು ಒಂದೇ ಬಾರಿಗೆ ನಿರಾಕರಿಸಲು ಅವನಿಂದಾಗಲಿಲ್ಲ. ಈ ಹಿಂದೆಂದೂ ತನಗೆ ಇಂತಹ ಅನುಭವವಾಗಿರಲಿಲ್ಲ. ಈ ಬಾರಿಯ ಅನುಭವವನ್ನು ನೆನೆದು ಆತನ ಮೈ ಜುಮ್ಮೆಂದಿತು. ಜೈಲಿನಲ್ಲಿ ಎರಡು ತಿಂಗಳು ತಾನನುಭವಿಸಿದ ಶಿಕ್ಷೆಯಾದರೂ ಎಂತಹುದು? ಬದುಕಿರುವವರೆಗೂ ಇನ್ನು ಇಂತಹ ಕೆಲಸ ಮಾಡಬಾರದೆಂದು ತೋರಿತ್ತು ಆಗ. ಕೈಕಾಲಿನ ಗಾಯ ಇನ್ನೂ ಸಂಪೂರ್ಣ ವಾಸಿಯಾಗಿರಲಿಲ್ಲ. ಹಿಮಗಡ್ಡೆಯಲ್ಲಿ ಮಲಗಿಸುವುದೇನು? ವಿದ್ಯುತ್ತಿನ ಆಘಾತ ನೀಡುವುದೇನು? ಆದರೂ ಕೊನೆಯವರೆಗೆ ತಾನು ಗುಟ್ಟು ಬಿಡದೆ ಹೇಗಿದ್ದೆ ಎಂಬುದು ಅವನಿಗೇನೇ ಆಶ್ಚರ್ಯದ ವಿಷಯವಾಗಿತ್ತು. “ನನಗೇನೂ ತಿಳಿಯದು. ಬೊಂಬಾಯಿಯಲ್ಲಿ ನನ್ನೊಡನೆ ಒಬ್ಬರು ‘ಆ ಕಾರನ್ನು ಬೀಚಿನಲ್ಲಿ ನಿಲ್ಲಿಸಿ ನೀನು ಹೊರಟು ಹೋಗು” ಎಂದಿದ್ದರು. ಪ್ರವಾಹ 167 ಅದರಲ್ಲಿ ಏನಿದೆಯೆಂದು ನನಗೆ ಗೊತ್ತಿರಲಿಲ್ಲ. ಆ ಕಾರು ಯಾರದೆಂದೂ ನನಗೆ ತಿಳಿಯದು. ಹಾಗೆ ಕೊಂಡೊಯ್ದು ನಿಲ್ಲಿಸಲು ನನಗೆ ಸ್ವಲ್ಪ ಹಣ ಕೊಟ್ಟಿದ್ದರು...” ಪೊಲೀಸರು ಏನೇ ಮಾಡಿದರೂ ಇದಕ್ಕಿಂತ ಹೆಚ್ಚಿನ ವಿಷಯ ಆತನ ಬಾಯಿಯಿಂದ ಹೊರಡಲಿಲ್ಲ. ಕೊನೆಗೂ ಮಮ್ಮೂಟಿ ಆತನನ್ನು ಜಾಮೀನಿನಲ್ಲಿ ಬಿಡಿಸಿಕೊಂಡು ಬಂದನು. ಮಾವನ ಗುಟ್ಟು ಕಾಪಾಡಿದ್ದಕ್ಕಾಗಿ ಆತನಿಗೆ ಸಮನಾದ ಬಹುಮಾನವೂ ದೊರಕಿತು. ದೇಹ ಪೋಲೀಸರ ಶಿಕ್ಷೆಯಿಂದ ಹಣ್ಣಾಗಿದ್ದರೂ ಮನಸ್ಸು ಉಲ್ಲಸಿತವಾಗಿಯೇ ಇತ್ತು. ಅದೂ ಅಲ್ಲದೆ ನವ ವಧು ಮರಿಯಮ್ಮಳ ಮಧುರ ನೆನಪು ಹಗಲಿರುಳೂ ಕಾಡುತ್ತಿತ್ತು. ಆ ಸಿಹಿ ನೋವನ್ನು ಮನದಾಳದಲ್ಲಿ ಅದುಮಿಟ್ಟು, ಆಕೆಯ ಮುಖವನ್ನೊಮ್ಮೆ ಕಂಡೇನೇ ಎಂದು ತವಕದಿಂದ ಓಡಿ ಬಂದವನಿಗೆ ಮನೆಯಲಿ ್ಲದೊರೆತದ್ದು ಮಾತ್ರ ಇಂತಹ ಆಘಾತಕರ ಸುದ್ದಿ. ತಂದೆ ತಾಯಿಗಳೆಂದ ಈ ಮಾತುಗಳನ್ನು ನಂಬಬೇಕೇ ಬೇಡವೇ ಎಂದು ಕ್ಷಣಕಾಲ ಚಿಂತಿಸಿದನು. ಹೆಣ್ಣಿನ ಮುಟ್ಟು, ಗರ್ಭ ಮುಂತಾದ ವಿಷಯಗಳಲ್ಲಿ ಸಮನಾದ ತಿಳುವಳಿಕೆ ಇಲ್ಲದ ಆತನು ಬಹು ಬೇಗನೆ ತಾಯಿಯ ಮಾತನ್ನು ನಂಬಿದನು. ಮದುವೆಯಾಗಿ ತಾನು ಊರಲ್ಲಿದ್ದುದು ಬರೇ ಹತ್ತು ದಿನ. ಅಷ್ಟು ಬೇಗನೆ ಹೆಂಗಸರು ಗರ್ಭಿಣಿಯರಾಗುತ್ತಾರೆಯೇ? ಬಹುಶಃ ಅವಳು ಮೊದಲೆ ಜಾರಿರಬೇಕು. ಜಾರಿರಬೇಕು ಏನು ಜಾರಿಯೇ ಇದ್ದಾಳೆ! ಇನ್ನು ತನಗೆ ಅವಳ ಅಗತ್ಯವಿಲ್ಲ! ಆದರೆ ಅಂದಾಯಿ ಅಷ್ಟು ಸುಲಭದಲ್ಲಿ ಬಿಟ್ಟು ಕೊಡಲು ಸಿದ್ಧನಿರಲಿಲ್ಲ. ಹಮೀದ್ ತಾನೇ ಮೆಚ್ಚಿಕೊಂಡು ಕಟ್ಟಿಕೊಂಡ ಹೆಂಡತಿಯನ್ನು ತಂದೆ ತಾಯಿಗಳ ಮಾತನ್ನು ನಂಬಿಕೊಂಡು ಬಿಟ್ಟು ಬಿಡಲಾರನೆಂದೇ ಆತನು ತಿಳಿದಿದ್ದನು. ಅಳಿಯನು ಊರಿಗೆ ಬಂದ ಸುದ್ದಿ ತಿಳಿದೊಡನೆ ಆತನ ಬರವಿಗಾಗಿ ಮನೆಯವರೆಲ್ಲರೂ ತುದಿಗಾಲಲ್ಲಿ ಕಾಯ ತೊಡಗಿದರು. ಮರಿಯಮ್ಮಳಂತೂ ಉತ್ಸಾಹದ ಚೆಲುಮೆಯಾಗಿ ಓಡಾಡಿದಳು. ನಾಲ್ಕು ದಿನ ಕಳೆದರೂ ಅಳಿಯನ ಸುಳಿವಿಲ್ಲ. ಮರಿಯಮ್ಮ ತಂದೆಯನ್ನು ಅಂಗಲಾಚಿದಳು, “ಬಾಪ್ಪಾ, ನೀವೇ ಹೋಗಿ ಅವರನ್ನೊಮ್ಮೆ ಕಂಡುಬನ್ನಿ” ಎಂದು. ಅಳಿಯನ ಮನೆಗೆ ಹೋಗಿ ಏನೂ ಪ್ರಯೋಜನವಿಲ್ಲವೆಂದು ಆತನಿಗೆ ಗೊತ್ತು. ಹೀಗಾಗಿಯೆ ಆತ ಮಸೀದಿಯ ಬಳಿಯಲ್ಲಿ ಅಳಿಯನನ್ನು ಸಂಧಿಸಿದನು. “ಏನಪ್ಪಾ, ಊರಿಗೆ ಬಂದವನು ಮನೆಗೆ ಬರಲೇ ಇಲ್ಲ? ಮರಿಯಮ್ಮನ 168 ಸುಳಿ ಕತ್ತು ಉದ್ದವಾಗಿ ಬಿಟ್ಟಿತಲ್ಲ?” ಎಂದು ಏನೂ ಆಗಿಲ್ಲವೆಂಬಂತೆ ಕೇಳಿದನು. “ನಿಮ್ಮ ಮಗಳು ಇಂತಹವಳೂಂತ ಗೊತ್ತಿದ್ದಿದ್ರೆ ನಾನು ಅವಳನ್ನು ಮದುವೆಯಾಗುತ್ತಿದ್ದೆನಾ? ಇನ್ನು ಅವಳು ನನಗೆ ಬೇಡ” ಕಠಿಣವಾಗಿ ನುಡಿದನಾತ. “ನೀನು ಏನು ಹೇಳುತ್ತಾ ಇದ್ದಿ? ನನ್ನ ಮಗಳು ಈ ವರೆಗೆ ಮನೆಯ ಮುಂದಿನ ಚಾವಡಿಯಲ್ಲಿ ಕೂಡಾ ಕಾಲಿಟ್ಟವಳಲ್ಲ. ಅಂತಹವಳ ಮೇಲೆ ಇಂತಹ ಅಪವಾದ ಹೊರಿಸಿದರೆ ದೇವರು ಸುಮ್ಮನೆ ಬಿಡುತ್ತಾನಾ? ನಿನ್ನ ಹೆಂಡತಿಯಲ್ಲಿ ನಿನಗೆ ವಿಶ್ವಾಸವಿಲ್ಲವಾ?” ಎಂದು ತನ್ನ ಭಾವನೆಗಳನ್ನು ಆದಷ್ಟೂ ನಿಯಂತ್ರಿಸಿಕೊಂಡು ಕೇಳಿದನು. “ನನಗವೆಲ್ಲ ಗೊತ್ತಿಲ್ಲ. ನನ್ನ ತಂದೆ ತಾಯಿಗಳು ಹೇಳಿದಂತೆ ಕೇಳುವವನು ನಾನು. ಮದುವೆಯಾದ ಬಳಿಕ ನಾನು ಉರಲ್ಲಿದ್ದದ್ದು ಹತ್ತೇ ದಿನವೆಂದು ನಿಮಗೆಲ್ಲರಿಗೂ ಚೆನ್ನಾಗಿ ಗೊತ್ತು. ಅಷ್ಟರಲ್ಲಿ ಅವಳು ಗರ್ಭಿಣಿಯಾದಳೂಂದರೆ ನೀವು ಯಾವ ಮುಖ ಹೊತ್ತುಕೊಂಡು ನನ್ನ ಬಳಿಬಂದಿರಿ?” ಎನ್ನುತ್ತಾ ಈ ವಿಷಯದಲ್ಲಿ ಆತನು ತನ್ನ ಮೂರ್ಖತನವನ್ನು ಪ್ರದರ್ಶಿಸಿದನು. ಮಗಳ ಭವಿಷ್ಯದ ಪ್ರಶ್ನೆಯಲ್ಲವಾಗಿದ್ದರೆ ಅಂದಾಯಿ ಅಳಿಯನ ಹಲ್ಲುದುರಿಸುತ್ತಿದ್ದನು. ಆದರೆ ಈಗ ಕೈ ಮುಷ್ಟಿ ಬಿಗಿ ಹಿಡಿದರೂ ಆದಷ್ಟು ಶಾಂತವಾಗಿಯೇ, ``ಒಂದು ಹೆಣ್ಣು ಗರ್ಭಿಣಿಯಾಗಲು ಹತ್ತು ದಿನ ಬಿಡು, ಅರ್ಧ ಗಂಟೆಯೂ ಬೇಕಾಗಿಲ್ಲ ಎಂಬ ತಿಳುವಳಿಕೆಯೂ ನಿನಗಿಲ್ಲವಾ?” ಎಂದು ಕೇಳಿದನು. “ನನಗೆ ನೀವೇನೂ ತಿಳುವಳಿಕೆ ಹೇಳಿ ಕೊಡಬೇಕಾಗಿಲ್ಲ. ನನ್ನ ತಂದೆ ತಾಯಿಗಳಿಗೆ ಬೇಡವೆಂದ ಮೇಲೆ ನನಗೂ ಬೇಕಾಗಿಲ್ಲ!” ಎನ್ನುತ್ತಾ ಧಡಧಡನೆ ಹೊರಟೇ ಹೋದನು. “ಆಗಲಿ, ಅಲ್ಲಾಹ್ ಎಲ್ಲವನ್ನೂ ನೋಡಿಕೊಳ್ತಾನೆ” ಎನ್ನುತ್ತಾ ಅಂದಾಯಿ ಅಲ್ಲಿಂದ ಹೊರಟು ಸೀದಾ ಮಸೀದಿಯ ಖತೀಬರ ಬಳಿ ಬಂದು ತನ್ನ ಮಗಳು ಮತ್ತು ಅಳಿಯನ ವಿಷಯ ತಿಳಿಸಿ ಅಳಿಯನನ್ನು ರಾಜಿ ಮಾಡಿಸಬೇಕೆಂದು ಕೇಳಿಕೊಂಡನು. ಖತೀಬರು ಕೊಂಚ ಹೊತ್ತು ಯೋಚಿಸಿ. “ನೋಡಪ್ಪಾ, ಅವನು ಹಾಜಾರರ ಅಳಿಯನೂ ಹೌದು; ಅವರ ನೆರಳಲ್ಲಿರುವವನೂ ಹೌದು. ನಾವು ಏನಾದರೂ ರಾಜಿ ಪಂಚಾತಿಕೆ ಮಾಡುವುದಾದರೆ ಹಾಜಾರರನ್ನು ಸೇರಿಸಿಕೊಂಡೇ ಮಾಡುವಾ. ಅವರೇನು ಪ್ರವಾಹ 169 ಹೇಳ್ತಾರೆ, ಕೇಳಿಕೊಳ್ಳುವಾ” ಎಂದರು. ಮರುದಿನ ಅಂದಾಯಿ ಮಮ್ಮೂಟಿಯ ಮನೆಗೆ ಹೋದನು. ಗೇಟಿನ ಬಳಿಯ ಕಾವಲುಗಾರನು ಆತನನ್ನು ಅಡ್ಡಗಟ್ಟಿ, “ಹಾಜಾರರು ಮಲಗಿದ್ದಾರೆ. ಈಗ ಯಾರನ್ನೂ ನೋಡುವುದಿಲ್ಲ. ನಾಳೆ ಬೆಳಿಗ್ಗೆ ಬಾ” ಎಂದು ಹಿಂದಕ್ಕಟ್ಟಿದನು. ಮರುದಿನ ಅಂದಾಯಿ ಮಸೀದಿಯಲ್ಲೇ ಮಮ್ಮೂಟಿಯನ್ನು ಸಂಧಿಸಿದನು. ಮಸೀದಿಯಲ್ಲಿ ಒಬ್ಬರನ್ನೊಬ್ಬರು ಭೇಟಿ ಮಾಡಲು ಅಂತಸ್ತು ಅಡ್ಡ ಬರುವುದಿಲ್ಲವಲ್ಲ? ಮಮ್ಮೂಟಿ ಮಸೀದಿಯಲ್ಲಿ ನಮಾಜ್ ಮಾಡಿ ಹೊರಟಾಗ ಅಂದಾಯಿ ಕೊಂಚ ದೂರ ನಿಂತು ನಡು ಬಗ್ಗಿಸಿ, “ಅಸ್ಸಲಾಂ ಅಲೈಕುಂ ಹಾಜಾರರ ಹತ್ತಿರ ಸ್ವಲ್ಪ ಮಾತಾಡಬೇಕಾಗಿತ್ತು.” ಎಂದನು. “ಹೂಂ...?” ಎನ್ನುತ್ತಾ ಮಮ್ಮೂಟಿ ತಲೆಯಲ್ಲಾಡಿಸಿದನು. “ಖತೀಬರ ಬಳಿ ಮಾತಾಡಬೇಕಾಗಿತ್ತು...” ಎನ್ನುತ್ತಿದ್ದಂತೆ ಖತೀಬರೂ ಅಲ್ಲಿಗೆ ಬಂದರು. ಬಳಿಕ ಅಂದಾಯಿ ಮಗಳ ವಿಷಯವನ್ನು ಇನ್ನೊಮ್ಮೆ ಕೂಲಂಕುಷವಾಗಿ ವಿವರಿಸಿದನು. “ಕಟ್ಟಿಕೊಂಡಾತನಿಗೆ ಬೇಡವಾದರೆ ನಾವೇನು ಮಾಡಲಿಕ್ಕಾಗುತ್ತದೆ?” ಎಂದನು ಮಮ್ಮೂಟಿ. ಬೊಂಬಾಯಿಯಲ್ಲಿ ಎರಡು ತಿಂಗಳು ಹಮೀದ್ ಜೈಲಿನಲ್ಲಿ ಅನುಭವಿಸಿದ್ದನ್ನು ಕಂಡ ಮಮ್ಮೂಟಿಯ ಮನದಾಳದಲ್ಲೂ, “ಹುಡುಗಿಯ ಕಾಲ್ಗುಣ ಚೆನ್ನಾಗಿಲ್ಲ” ಎಂಬ ಭಾವನೆ ತಲೆ ಎತ್ತಿತ್ತು. ಈಗ ಊರಿಗೆ ಬಂದು ಅಕ್ಕನ ವಾದವನ್ನು ಕೇಳಿದಾತನಿಗೆ ಅಕ್ಕ ಹೇಳಿದ್ದೇ ಸರಿ ಎನ್ನಿಸಿತ್ತು. “ನನ್ನ ಮಗಳು ಯಾವ ತಪ್ಪನ್ನೂ ಮಾಡಿಲ್ಲ...” ಎಂದು ಅಂದಾಯಿ ಅನ್ನುತ್ತಿದ್ದಂತೆ, “ಆದರೆ ಅವರ್ಯಾರಿಗೂ ನಿನ್ನ ಮಗಳಲ್ಲಿ ವಿಶ್ವಾಸವಿಲ್ಲವಲ್ಲ? ಖತೀಬರೇ, ಇದಕ್ಕೆ ನೀವೇ ಏನಾದರೊಂದು ಪರಿಹಾರ ಸೂಚಿಸಿ” ಎಂದನು. “ಒಬ್ಬ ಗಂಡನಿಗೆ ತನ್ನ ಹೆಂಡತಿಯಲ್ಲಿ ವಿಶ್ವಾಸವಿಲ್ಲವಾದರೆ ನಾವ್ಯಾರೂ ಏನೂ ಹೇಳುವ ಹಾಗಿಲ್ಲ. ಇನ್ನು ಅವಳ ಹೆರಿಗೆಯಾದ ಮೇಲೆ ಮಗುವಿನ ರಕ್ತ ಪರೀಕ್ಷೆ ಮಾಡಿ ಮಗು ಆತನದೇ, ಅಲ್ಲವೇ ಎಂಬುದನ್ನು ತಿಳಿದುಕೊಳ್ಳಬಹುದು. ಮಗು ಆತನದೇ ಹೌದಾದರೆ ಹೆರಿಗೆಯ ಖರ್ಚು ನೀಡಲಿ. ಗಂಡು ಮಗುವಾದರೆ ಎರಡೂವರೆ ವರ್ಷ ಅದಕ್ಕೆ ಹಾಲೂಡಿ ಅದನ್ನು ಸಾಕಿ ಆತನಿಗೆ ಕೊಡಲಿ. ಹೆಣ್ಣು ಮಗುವಾದರೆ ಎರಡು ವರ್ಷ ಹಾಲೂಡಿದರೆ ಸಾಕು. ಅಷ್ಟು ಸಮಯ ಮಗುವಿನ ಖರ್ಚಿಗೆ ಹಣ ಕೊಡಲಿ. ಮಗು ಅವನದಲ್ಲವಾದರೆ ಯಾರೂ ಏನೂ 170 ಸುಳಿ ಮಾಡುವಂತಿಲ್ಲ.! ಖತೀಬರ ನ್ಯಾಯ ಕೇಳಿದ ಅಂದಾಯಿ ತಲೆ ಮೇಲೆ ಕೈ ಹೊತ್ತು ಮನೆಗೆ ಮರಳಿ ಹೆಂಡತಿ ಮತ್ತು ಮಗಳಿಗೆ ವಿಷಯ ತಿಳಿಸಿದನು. ಆಸ್ಯಮ್ಮ ಒಂದಷ್ಟು ಅತ್ತು ನೆಲಕ್ಕೆ ಕೈ ಬಡಿಯುತ್ತಾ ಅಳಿಯನಿಗೆ ಹಿಡಿ ಶಾಪ ಹಾಕಿದಳು. ಮರಿಯಮ್ಮ ಮಾತ್ರ ಭದ್ರಕಾಳಿಯಾದಳು. “ಏನು? ನಾನು ಒಂಭತ್ತು ತಿಂಗಳು ಹೊಟ್ಟೆಯಲ್ಲಿಟ್ಟು ಅದನ್ನು ಹೆತ್ತು ಎರಡು ವರ್ಷ ಸಾಕಿ ಆ ಮೇಲೆ ಅವರಿಗೆ ಕೊಡಬೇಕಾ? ಅದರ ಕತ್ತು ಹಿಸುಕಿ ಕೊಲ್ಲುತ್ತೇನೆಯೇ ಹೊರತು ಅವರಿಗೆ ಕೊಡುವುದಿಲ್ಲ. ನಾನು ಹೆತ್ತ ಮಗು ನನ್ನದೆ. ನಾನೇ ಅದನ್ನು ಸಾಕುತ್ತೇನೆ. ತಂದೆ ಎನ್ನುವವ ಎಂದೊ ಸತ್ತು ಹೋದ ಎನ್ನುತ್ತೇನೆ. ಇದೆಂತಹ ಅರ್ಥವಿಲ್ಲದ ನ್ಯಾಯ?” ಎನ್ನುತ್ತಾ ಅಳು ಉಕ್ಕುತ್ತಿದ್ದಂತೆ ಮತ್ತೂ ಒಂದು ಮಾತು ಸೇರಿಸಿದಳು. “ನಿಮ್ಮ ಖತೀಬರು, ನನ್ನನ್ನು ಕಲ್ಲಿನಿಂದ ಹೊಡೆದು ಸಾಯಿಸಬೇಕೆಂದೇನೂ ಹೇಳಿಲ್ಲವಲ್ಲ? ಸದ್ಯ..” ಎಂದು ವ್ಯಂಗ್ಯವಾಗಿ ನುಡಿದು ಕೋಣೆಗೆ ಹೋಗಿ ಮಂಚದಲ್ಲಿ ಬಿದ್ದುಕೊಂಡು ಅಳ ತೊಡಗಿದಳು. ಮಗಳ ಅಳುವನ್ನು ಕಂಡ ತಂದೆಯ ಎದೆಯೂ ಬಿರಿಯಿತು. ಆತನು ಮಗಳನ್ನು ಸಂತೈಸಲು ಪ್ರಯತ್ನಿಸಿದನು. “ಅಳಬೇಡ ಮಗೂ. ಇದು ಊರಿಗೆ ಬಂದ ಹುಚ್ಚು ಪ್ರವಾಹ. ಈ ಪ್ರವಾಹದಲ್ಲಿ ನಾವೆಲ್ಲರೂ ಕೊಚ್ಚಿ ಹೋಗುತ್ತಿದ್ದೇವೆ. ಏನು ಮಾಡುವುದು? ನಿನ್ನ ಹಣೆಯಲ್ಲಿ ಹೀಗಾಗಬೇಕೆಂದು ಬರೆದಿದ್ದರೆ ಅದನ್ನು ತಪ್ಪಿಸಲು ಯಾರಿಂದ ಸಾಧ್ಯ?” * * * * * ಮಮ್ಮೂಟಿಯ ಹಳೆಯ ಮನೆಯ ಹಿಂಭಾಗದಲ್ಲಿ ಹಿಂದೆ ಮೂಸಾ ಹಾಜಿಯವರಿದ್ದಾಗ ತೆಂಗಿನ ಕಾಯಿ ಮತ್ತು ಒಣ ಮಡಲುಗಳನ್ನು ಒಟ್ಟುತ್ತಿದ್ದ ಹಳೆಯ ಕೋಣೆಯ ಹಿಂದೆ ಸುಸಜ್ಜಿತವಾದ ಕೊಠಡಿಯೊಂದನ್ನು ನಿರ್ಮಿಸಲಾಗಿತ್ತು. ಮುಂಭಾಗದಿಂದ ನೊಡಿದರೆ ಇದು ಸೌದೆ ಒಟ್ಟುವ ಹಾಳು ಕೋಣೆಯಂತೆಯೇ ಕಾಣುತ್ತಿತ್ತು. ಈ ಕೋಣೆಯ ಮೂಲೆಯೊಂದರಲ್ಲಿ ಟ್ರಾನ್ಸ್‍ಮೀಟರ್ ಸೆಟ್ ಒಂದು ಕುಳಿತಿತ್ತು. ವಿದೇಶದಿಂದ ಅಥವಾ ದೂರದ ಹಡಗಿನಿಂದ ಸುದ್ದಿ ಏನಾದರೂ ಬರಬೇಕಾದ ದಿನ ಮಮ್ಮೂಟಿ ಮತ್ತು ವಾಸು ಇಲ್ಲಿ ಬಂದು ಕುಳಿತುಕೊಂಡು ಹರಟುತ್ತಲೊ ಇನ್ಯಾವುದಾದರೂ ಮಂತ್ರಾಲೋಚನೆಯಲ್ಲಿ ತಲ್ಲೀನರಾಗುತ್ತಲೊ ಇದ್ದರು. ಆ ದಿನ ವಾಸು ಮತ್ತು ಮಮ್ಮೂಟಿ ಈ ಕೋಣೆಯಲ್ಲಿ ಸೇರಿದರು. ಪ್ರವಾಹ 171 “ಇನ್ನು ನಾವು ಹೊಸ ಉಪಾಯವನ್ನೇನಾದರೂ ಹುಡುಕಬೇಕು. ಈ ಹುಡುಗನೇನಾದರೂ ಬಾಯಿ ಬಿಟ್ಟಿದ್ದರೆ ನಮ್ಮ ಪಾಡು ನಾಯಿ ಪಾಡಾಗುತ್ತಿತ್ತು!” ಎಂದು ಮಾತಿಗೆ ಮೊದಲಿಟ್ಟನು ಮಮ್ಮೂಟಿ ``ಈ ಸುಂಕದವರ ತೊಂದರೆ ಅಧಿಕಗೊಳ್ಳುತ್ತಾ ಹೋಗುತ್ತಿದೆ.” “ಕಸ್ಟಂಸ್‍ನ ಆ ಮೇಲಧಿಕಾರಿ ಮಿಶ್ರಾಂತ ಇದ್ದಾನಲ್ಲ? ಆತನಿಗೆ ಆತನ ಊರಿನಲ್ಲಿ ಒಂದು ಬಂಗಲೆ ಕಟ್ಟಿಸಿಕೊಡಬೇಕಂತೆ” ವಾಸುವೆಂದನು. “ಅಷ್ಟೇ ತಾನೆ? ಅದನ್ನೆಲ್ಲ ಮಾಡಬಹುದಪ್ಪ, ಆದರೆ ಆತನ ಬದಲಿಗೆ ಬೇರೆ ಯಾರಾದರೂ ಬಂದರೆ ಕಷ್ಟ. ಒಮ್ಮೆ ನಮ್ಮ ಹಿಂದೆ ಬಿದ್ದವರು ಇನ್ನು ಮುಂದೆ ನಮಗೆ ತೊಂದರೆ ಕೊಡುತ್ತಲೇ ಇರಬಹುದು. ನಮ್ಮ ಈ ಸಾಗಾಟಕ್ಕೆ ಬೇರೇನಾದರೂ ಹೊಸ ಹಾದಿ ಹುಡುಕಬೇಕು.” ವಾಸು ಕೊಂಚ ಹೊತ್ತು ಯೋಚಿಸಿದ ಬಳಿಕ, “ನನಗೊಂದು ಯೋಚನೆ ಇದೆ. ಆ ಒಣ ಮೀನಿನ ವ್ಯಾಪಾರಿ ಕರಾಚಿ ಆಮದೆ ಇದ್ದಾನಲ್ಲ? ಅವನ ಬಳಿ ಒಂದು ಲಾರಿಯೂ ಇದೆ. ಅವನನ್ನೇ ನಮ್ಮೊಳಗೆ ಎಳೆದುಕೊಂಡರೆ ಹೇಗೆ?” ಎಂದನು. “ಅವನು ಲಾರಿ ನಮಗೇಕೆ? ನಮ್ಮ ಸರಕು ಲಾರಿಯಲ್ಲಿ ಸಾಗಿಸುವಂತಹುದೇನೂ ಅಲ್ಲವಲ್ಲ?” “ಹಾಗಲ್ಲ ಹಾಜಾರರೇ, ಈ ಅಧಿಕಾರಿಗಳಲ್ಲಿ ಹೆಚ್ಚಿನವರೂ ಬ್ರಾಹ್ಮಣರಾಗಿರುತ್ತಾರೆ. ಮೀನಿನ ವಾಸನೆಯೆಂದರೆ ಅವರು ಮೈಲು ದೂರ ಓಡುತ್ತಾರೆ. ಕರಾಚಿ ಆಮದೆ ನಮ್ಮೊಡನಿದ್ದರೆ ಅವನ ಮೀನಿನ ಲಾರಿಯೇ ನಮಗೂ ಉಪಯೋಗವಾಗುತ್ತದಲ್ಲ? ಅವನಿಗೆ ಇನ್ನೂ ಒಂದೆರಡು ಲಾರಿಗಳನ್ನು ತೆಗೆಸಿಕೊಟ್ಟರಾಯಿತು.” “ಹಾಂ... ಹಾಂ.. ಗೊತ್ತಾಯಿತು. ಒಣ ಮೀನು ಯಾಕೆ? ಹಸಿ ಮೀನನ್ನೇ ಘಟ್ಟದ ಮೇಲಕ್ಕೆ ಕಳಿಸುವ ಏರ್ಪಾಟು ಮಾಡುವಾ. ನೀನು ಆಮದೆಯನ್ನು ಸ್ವಲ್ಪ ತಟ್ಟಿ ನೋಡು” ಎಂದನು ಮಮ್ಮೂಟಿ. ಕರಾಚಿ ಆಮದೆಯ ಒಣ ಮೀನಿನ ವ್ಯಾಪಾರ ಚೆನ್ನಾಗಿಯೇ ನಡೆಯುತ್ತಿತ್ತು. ಅವನ ತಂದೆ ಹಿಂದೆಂದೊ ಕರಾಚಿಗೆ ಹೋಗಿ ಕೋಮು ಗಲಭೆಯಲ್ಲಿ ಸಿಕ್ಕಿಕೊಂಡು ಹಿಂತಿರುಗಿದ್ದನು. ಆ ಬಳಿಕ ಅವನು ಕರಾಚಿ ಆಮದು ಎಂದು ಹೆಸರು ಪಡೆದು ಅವನ ಮಕ್ಕಳಿಗೂ ಕರಾಚಿ ಎಂಬ ಹೆಸರು ಅಂಟಿಕೊಂಡಿತ್ತು. ದೊಡ್ಡ ಕುಟುಂಬದ ಆತನಿಗೆ ಎಷ್ಟೇ ದುಡಿದರೂ ಶ್ರೀಮಂತನೆಂದು 172 ಸುಳಿ ಹೆಸರು ಪಡೆಯಲು ಸಾಧ್ಯವಾಗಿರಲಿಲ್ಲ. ಈಗ ಊರಿನಲ್ಲಿ ಈ ಹುಚ್ಚು ಹೊಳೆ ಹರಿಯ ತೊಡಗಿದ ಬಳಿಕ ಅವನಿಗೂ ತೊಂದರೆಗಳೆದುರಾಗಿದ್ದುವು. ಮಮ್ಮೂಟಿಯನ್ನು ಮೊದಲಿನಿಂದಲೂ ಬಲ್ಲ ಆತನಿಗೆ ಈಗ ಮಮ್ಮೂಟಿಯ ಅಂತಸ್ತು ಕಣ್ಣು ಕುಕ್ಕ ತೊಡಗಿತ್ತು. ತಾನೂ ಕೂಡಾ ಮಮ್ಮೂಟಿಯಂತಾಗಲು ಏನು ಮಾಡಬೇಕೆಂಬ ಚಿಂತೆ ಹತ್ತಿಸಿಕೊಂಡಿದ್ದನು. ಮೀನು ವ್ಯಾಪಾರಿಗಳೊಡನೆ ಮೊದಲೇ ಸಂಪರ್ಕವಿದ್ದ ವಾಸುವಿಗೆ ಕರಾಚಿ ಆಮದೆಯ ಪರಿಚಯವೂ ಚೆನ್ನಾಗಿತ್ತು. ಆಮದೆ ಕಡಲ ತೀರಕ್ಕೆ ಬರುವ ಸಮಯದಲ್ಲಿ ವಾಸು ಅವನನ್ನು ಕೊಂಚ ದೂರ ಕರೆದೊಯ್ದು “ಏನು ಮಾಪಳೆ, ಹೇಗಿದೆ ನಿಮ್ಮ ವ್ಯಾಪಾರ?” ಎಂದು ಕೇಳಿದನು. “ವ್ಯಾಪಾರವೇನೊ ಇದೆ. ಆದರೆ ಈಗ ಎಷ್ಟು ದುಡಿದರೂ ಮನೆ ಖರ್ಚಿಗೇ ಸಾಕಾಗುತ್ತಿಲ್ಲ. ಸಾಮಾನುಗಳಿಗೆಲ್ಲ ಒಂದಕ್ಕೆರಡು ಬೆಲೆ. ಅಂತೂ ತುಂಬಾ ಕಷ್ಟವೇ” ಎಂದು ತನ್ನ ಅಹವಾಲು ಮುಂದಿಟ್ಟನು. “ಯಾಕೆ ಬೇರೇನಾದರೂ ವ್ಯಾಪಾರ ಪ್ರಾರಂಭಿಸಬಹುದಲ್ಲ?” “ನಾನು ಮೊದಲಿನಿಂದಲೂ ಇದಕ್ಕೇ ಕೈ ಹಾಕಿದವನು. ಈಗ ಹೊಸದಾಗಿ ಯಾವ ವ್ಯಾಪಾರ ಸುರು ಮಾಡಲಿ?” “ನಿಮಗೆ ಇಷ್ಟವಿದ್ದರೆ ನಾನೊಂದು ದಾರಿ ತೋರಿಸಬಲ್ಲೆ. ಆದರೆ ನೀತಿ, ನಿಯತ್ತಿರಬೇಕು. ನಮ್ಮ ಮಮ್ಮೂಟಿ ಹಾಜಾರರಿದ್ದಾರಲ್ಲ? ಅವರು ಈ ವರೆಗೂ ಯಾರನ್ನೂ ವ್ಯಾಪಾರಕ್ಕೆ ಸೇರಿಸಿಕೊಂಡಿಲ್ಲ. ನೀವು ಎಲ್ಲೂ ಬಾಯಿ ಬಿಡದೆ ಹೋದರೆ ನಿಮಗೆ ಮುಂದೆ ಬರುವ ಅವಕಾಶವಿದೆ” ಎಂದನು. ಮುಂದೆ ಬರುವ ಅವಕಾಶವಿದ್ದರೆ ಅವನಾದರೂ ಏಕೆ ಬೇಡವೆಂದಾನು? ಮಮ್ಮೂಟಿ ಮತ್ತು ವಾಸು ತೋರಿಸುವ ಹಾದಿಯಲ್ಲಿ ಹೋಗಲು ಊರಿನ ಯುವಕರೆಲ್ಲರೂ ಹಾತೊರೆಯುತ್ತಿರುವಾಗ ಆತ ತನಗದು ಬೇಡ ಎನ್ನುತ್ತಾನೆಯೇ? ಹಾದಿ ಯಾವುದಾದರೇನು? ಕಲ್ಲೊ, ಮುಳ್ಳೊ ಇರಲಿ. ಕೊನೆ ಮಾತ್ರ ಸುಖಾಂತವಾಗಿದ್ದರೆ ಸರಿ. “ನನ್ನನ್ನು ನಿಯತ್ತಿಲ್ಲದ ಮನುಷ್ಯ ಅಂತ ತಿಳಿಯಬೇಡಿ. ನಾನು ಒಂದು ಹೊತ್ತಿನ ನಮಾಜ್ ಕೂಡಾ ತಪ್ಪಿಸುವವನಲ್ಲ” ಎಂದನು ಆಮದೆ. ಕರಾಚಿ ಆಮದೆಯ ಜೊತೆಯಲ್ಲಿ ಮಮ್ಮೂಟಿ ಮೀನಿನ ವ್ಯಾಪಾರವನ್ನಾರಂಭಿಸಿದನು. * * * * * 173 ಮಮ್ಮೂಟಿ ಬೊಂಬಾಯಿಗೆ ಹೋಗಿ ಅಳಿಯನನ್ನು ಜೈಲಿನಿಂದ ಬಿಡಿಸಿಕೊಂಡು ಬಂದ ಬಳಿಕ ಆತನ ತಲೆ ಚುರುಕಾಗಿ ಓಡ ತೊಡಗಿತ್ತು. ಹಮೀದನನ್ನು ಬಿಡಿಸಬೇಕಾದರೆ ಆತನು ಸಾಕಷ್ಟು ರಾಜಕಾರಣಿಗಳಿಗೆ ಸಲಾಂ ಹೊಡೆದಿದ್ದನು. ಚುನಾವಣೆಯ ಸಮಯದಲ್ಲಿ ಆತನು ಈ ರಾಜಕೀಯ ಪಕ್ಷಗಳಿಗೆ ಲಕ್ಷಗಟ್ಟಲೆ ಹಣ ನೀಡಿದ್ದರಿಂದ ಸ್ಥಳೀಯ ಲೋಕಸಭಾ ಸದಸ್ಯರು ಆತನಿಗೆ ಸಾಕಷ್ಟು ಸಹಾಯ ಮಾಡಿದ್ದರು. ಆದರೂ ಉನ್ನತ ಅಧಿಕಾರ ಸ್ಥಾನದಲ್ಲಿರುವವರನ್ನು ಕಾಣಲು ಕೆಲವು ದಿನಗಳೇ ಹಿಡಿದಿದ್ದುವು. ಅವರ ಅಧಿಕಾರವನ್ನು ಕಂಡಾಗ ಆತನಿಗೆ ತನ್ನಲ್ಲಿರುವ ಹಣ ಏನೇನೂ ಅಲ್ಲವೆಂದು ತೋರಿತ್ತು. ಒಂದೆರಡು ಲಕ್ಷಗಳು ಅಲ್ಲಿ ಕೈ ಬದಲಾದ ಬಳಿಕವಷ್ಟೇ ಹಮೀದ್‍ಗೆ ಜಾಮೀನು ಪಡೆಯಲು ಸಾಧ್ಯವಾಗಿತ್ತು. ಊರಿಗೆ ಹಿಂತಿರುಗಿದ ಬಳಿಕ ಅವನ ತಲೆ ಓಡಿದ್ದು ಈ ದಿಕ್ಕಿನಲ್ಲಿಯೇ ಎಂದಾದರೂ ತಾನೂ ಇಂತಹ ಒಂದು ಅಧಿಕಾರ ಪಡೆಯಬೇಕು. ಲೋಕಸಭೆಗಲ್ಲವಾದರೆ ವಿಧಾನಸಭೆಗಾದರೂ ಕಾಲಿಡಬೇಕು. ಸದ್ಯಕ್ಕಂತೂ ಇದು ಆಗದ ಹೋಗದ ಮಾತು. ಆದರೆ ಮುಂದೆ ಎಂದಾದರೊಂದು ದಿನ ತನ್ನಿಚ್ಛೆ ನೆರವೇರಲೇಬೇಕು! ಅದಾಗಬೇಕಾದರೆ ಊರಿನ ಜನರೆಲ್ಲರೂ ತನ್ನನ್ನು ಗುರುತಿಸುವಂತಾಗಬೇಕು. ಆದರೆ ಹೇಗೆ? ಈಗಿನ ಈ ರೀತಿಯಲ್ಲಂತೂ ಅಲ್ಲ. ಆ ದಿನ ವಿದೇಶದಿಂದ ಸಂದೇಶ ಬರುವುದಿದ್ದುರಿಂದ ರಾತ್ರಿ ವಾಸು ಮಮ್ಮೂಟಿಯ ಮನೆಗೆ ಹೋಗಿ ಬಳಿಕ ಇಬ್ಬರೂ ಟ್ರಾನ್ಸ್‍ಮಿಟ್ಟರ್ ಕೋಣೆಗೆ ನಡೆದರು. ಈ ಸಂದೇಶಕ್ಕೆ ಕಾಯುತ್ತಿರುವಾಗಲೇ ಇವರ ಕೆಲವೊಂದು ಯೋಜನೆಗಳು ಸಿದ್ದವಾಗುತ್ತಿದ್ದವು. ಕೋಣೆಯಲ್ಲಿ ಕುಳಿತುಕೊಳ್ಳುತ್ತಾ ವಾಸು, “ಇಲ್ಲ ಸಾರ್, ಇನ್ನೂ ಅರ್ಧ ಗಂಟೆಯಾದರೂ ಕಳೆಯಬೇಕು” ಎಂದನು. “ಹೂಂ...” ಎನ್ನುತ್ತಾ ಮಮ್ಮೂಟಿ ಎರಡು ಲೋಟಗಳಿಗೆ ವಿಸ್ಕಿಯನ್ನು ಬಗ್ಗಿಸಿ ಒಂದನ್ನು ವಾಸುವಿನ ಮುಂದೆ ಸರಿಸುತ್ತಾ, ಮತ್ತೊಂದು ಗ್ಲಾಸನ್ನು ಕೈಗೆತ್ತಿಕೊಳ್ಳುತ್ತಾ, “ವಾಸೂ, ಈ ವರೆಗೆ ನನಗೆ ಹೇಳಿಕೊಳ್ಳುವಂತಹ ತೊಂದರೆಯೇನೂ ಆಗಿಲ್ಲ. ಆದರೆ ಇನ್ನು ಮುಂದೆ ಕೂಡಾ ಹೀಗೆಯೇ ಇರಬಹುದೆಂಬ ಭರವಸೆ ಇಲ್ಲ. ಹಮೀದ್‍ನ ಹಿಂದೆ ನಾನಿದ್ದೇನೆಂಬ ವಿಷಯ ಅವರೆಲ್ಲರಿಗೂ ಚೆನ್ನಾಗಿ ಗೊತ್ತಿದೆ...” ಎಂದನು. ``ಇಂತಹವುಗಳಲ್ಲೆಲ್ಲ ಇದೆಲ್ಲ ಸಹಜ ತಾನೇ? ಇನ್ನು ಮುಂದೆ ನಾವೂ 174 ಸುಳಿ ಕೂಡಾ ಮತ್ತಷ್ಟು ಜಾಗ್ರತೆ ವಹಿಸಬೇಕು. ಈ ಹೊಸಬರನ್ನೆಲ್ಲ ನಂಬುವ ಹಾಗಿಲ್ಲ. ಹಮೀದ್ ಏನೊ ನಿಮ್ಮಳಿಯ; ಬಾಯಿ ಬಿಟ್ಟಿಲ್ಲ, ಅದರೆ ಎಲ್ಲರೂ ಹಾಗಿರುತ್ತಾರಾ?” “ಅದೂ ಅಲ್ಲದೆ ಈ ಎಮ್ಮೆಲ್ಲೆ, ಎಂಪಿಗಳ ಹಾರಾಟ ನೋಡುವಾಗ ನನ್ನ ಬಳಿ ಇಷ್ಟೆಲ್ಲ ಇದ್ದೂ ವ್ಯರ್ಥಾಂತ ಅನ್ನಿಸುತ್ತಿದೆ. ನಾನೇ ಎಮ್ಮೆಲ್ಲೆ ಆಗುವುದು ಸಾಧ್ಯವಾಗದ ಮಾತು. ಆದರೆ ಒಬ್ಬ ಎಮ್ಮೆಲ್ಲೆಯನ್ನು ಗೆಲ್ಲಿಸುವ ಶಕ್ತಿಯಾದರೂ ನನಗಿರಬೇಕು ಏನಂತೀಯಾ?” ಮಮ್ಮೂಟಿ ವಿಸ್ಕಿ ಹೀರುತ್ತಾ ಕೇಳಿದನು. “ಅದೇನೋ ಹೌದು. ಅಂದರೆ ನೀವು ಹೇಳಿದವರಿಗೆ ಜನರು ಓಟು ಹಾಕುವಂತಿರಬೇಕು.” “ಹೂಂ...ಹೌದು. ನಾನು ಜನರ ಬೆಂಬಲ ಪಡೆಯಬೇಕು.” “ವಾಸು ಕೊಂಚ ಹೊತ್ತು ಯೋಚನಾ ಮಗ್ನನಾದನು. ಬಳಿಕ “ಅದಕ್ಕೆ ನಾನೊಂದು ಉಪಾಯ ಹೇಳಲಾ?” ಎಂದು ಕೇಳಿ ಹೊಸ ಯೋಜನೆಯೊಂದನ್ನು ಮಮ್ಮೂಟಿಯ ಮುಂದಿಟ್ಟನು. ಮಮ್ಮೂಟಿಯ ಮುಖವರಳಿತು. “ಭೇಷ್‌, ಗೆಳೆಯ ಎಂದರೆ ನೀನೇ!” ಎನ್ನುವಷ್ಟರಲ್ಲಿ ಟ್ರಾನ್ಸ್‍ಮಿಟರ್ ಶಬ್ದ ಮಾಡಿತು. ಅದರಲ್ಲಿ ಗುಪ್ತ ಸಂದೇಶಗಳು ಕೇಳಿ ಬಂದವು. ಇಬ್ಬರೂ ಪರಸ್ಪರ ಮುಖ ನೋಡಿಕೊಂಡರು. ಬಳಿಕ ಮಮ್ಮೂಟಿ, “ಇನ್ನೂ ನಾಲ್ಕು ದಿನ ನಮಗೇನೂ ಕೆಲಸವಿಲ್ಲ. ನೀನು ನಾಳೇನೇ ನಿನ್ನೆ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಪ್ರಾರಂಭಿಸು” ಎಂದನು. “ಹೆಚ್ಚೆಂದರೆ ಒಂದು ವಾರ” ಎನ್ನುತ್ತಾ ವಾಸು ತನ್ನ ಕಾರಿನ ಬಳಿಗೆ ಹೋದನು. ಮಮ್ಮೂಟಿ ಮನೆಯೊಳ ಹೊಕ್ಕನು. * * * * * ಅದು ಎಂದಿನಿಂದಲೂ ಕೋಮು ಸೌಹಾರ್ದಕ್ಕೆ ಮಾದರಿಯಾದ ಊರಾಗಿತ್ತು. ಈಗ ಮಮ್ಮೂಟಿ ಮತ್ತು ವಾಸು ಒಂದಾದ ಬಳಿಕ ಈ ಜನರೆಲ್ಲರೂ ಇನ್ನಷ್ಟು ಹತ್ತಿರ ಬಂದಿದ್ದರು. ಯಾರ ಮನೆಯಲ್ಲಿ ಯಾವ ಹಬ್ಬವಿದ್ದರೂ ಅಲ್ಲಿ ಹಿಂದು ಮುಸ್ಲಿಮರೆಂಬ ಭೇದವಿಲ್ಲದೆ ಎಲ್ಲರೂ ಒಂದಾಗುತ್ತಿದ್ದರು. ಮಮ್ಮೂಟಿಯ ವಾಹನ ಚಾಲಕರಲ್ಲಿ ಬಹಳಷ್ಟು ಜನರು ಹಿಂದೂಗಳೂ ಇದ್ದರು. ವಾಸುವಿನ ಹೆಂಡತಿ ಕಲ್ಯಾಣಿಯಮ್ಮನೆಂದರೆ ಮುಸ್ಲಿಂ ಮಹಿಳೆಯರಿಗೆ ಅಚ್ಚು ಮೆಚ್ಚು. ಮಮ್ಮೂಟಿಯ ಮನೆಯಲ್ಲಿ ಸಣ್ಣಕ್ಕಿ ಅನ್ನ ಮಾಡಿದರೆ ಕಲ್ಯಾಣಿ ಮತ್ತು ಮಕ್ಕಳಿಗೆ ಆಮಂತ್ರಣ ಇದ್ದೇ ಇದೆ. ಒಂದು ವೇಳೆ ಆಕೆಗೆ ಬರಲು ಸಾಧ್ಯವಾಗದಿದ್ದರೆ ಅವರ ಮನೆಗೇ ಊಟ ಕಳಿಸುವ ಪರಿಪಾಠ ಮಮ್ಮೂಟಿಯದು. 175 ಮಮ್ಮೂಟಿಯ ಮನೆಯಿಂದ ಸ್ವಲ್ಪ ದೂರದಲ್ಲಿ ಒಂದು ಹಳೆಯ ಮಸೀದಿ ಇತ್ತು. ಅಲ್ಲಿ ಒಂದು ದರ್ಗಾ ಇದ್ದು ಮೂರು ವರ್ಷಗಳಿಗೊಮ್ಮೆ ಉರೂಸ್ ಕೂಡಾ ನಡೆಯುತ್ತಿತ್ತು. ಅದರ ಸಮೀಪದಲ್ಲೇ ಒಂದು ಗುಡಿಯೂ ಇತ್ತು. ಗುಡಿ ಮತ್ತು ಮಸೀದಿಯ ನಡುವಿನಲ್ಲಿ ಸಾಕಷ್ಟು ಖಾಲಿ ಜಾಗವೂ ಇತ್ತು. ಗುಡಿಯ ಜಾತ್ರೆಗಾಗಲಿ, ಮಸೀದಿಯ ಉರೂಸ್‍ಗಾಗಲಿ, ಈ ಖಾಲಿ ಜಾಗದಲ್ಲಿ ಹಿಂದೂ ಮುಸ್ಲಿಮರೆಲ್ಲರೂ ಅಂಗಡಿಗಳನ್ನು ಹಾಕುತ್ತಿದ್ದರು. ಸಿಹಿ ತಿಂಡಿ ಮತ್ತು ಹೆಣ್ಣು, ಮಕ್ಕಳ ಅಲಂಕಾರದ ಸಾಮಾನುಗಳ ಅಂಗಡಿ, ಹಿಂದುಗಳದ್ದಾದರೆ ಮಕ್ಕಳ ಆಟದ ಸಾಮಾನು, ಹೂ, ಹಣ್ಣುಗಳ ವ್ಯಾಪಾರ ಮುಸ್ಲಿಮರದ್ದು. ತೊಟ್ಟಿಲು ಹಾಕುವವರೂ ಮುಸ್ಲಿಮರು. ಗುಡಿಯ ಜಾತ್ರೆಯ ಕಾಲದಲ್ಲಷ್ಟೆ. ಧಾರಾಳವಾಗಿ ಮಂಗಳೂರು ಮಲ್ಲಿಗೆ ದೊರೆಯುತ್ತಿದ್ದವು. ಈ ಜಾತ್ರೆಯ ಸಮಯದಲ್ಲಿ, ಹೊಸದಾಗಿ ಮದುವೆಯಾದ ಮುಸ್ಲಿಂ ಯುವಕರು ತಮ್ಮ ಹೆಂಡತಿಯರ ಮನೆಗೆ ಈ ಮಂಗಳೂರು ಮಲ್ಲಿಗೆ ಮತ್ತು ಸಿಹಿ ತಿಂಡಿಗಳನ್ನು ಕಳುಹಿಸುವ ಒಂದು ಪದ್ಧತಿಯೇ ಆ ಊರಿನಲ್ಲಿತ್ತು. ಜಾತ್ರೆಯ ಸಮಯದಲ್ಲಿ ಅಳಿಯ ಕಳುಹಿಸಿದ ಈ ಉಡುಗೊರೆಗಳನ್ನು ಸಂಬಂಧಿಕರ ಮನೆಗಳಿಗೂ ಕಳುಹಿಸಿ ಕೊಡಲಾಗುತ್ತಿತ್ತು. ಗುಡಿಯೊಳಗಿನ ಪೂಜೆಗೆ ಯಾವ ಅರ್ಥವಾದರೂ ಇರಲಿ. ಆದರೆ ಹೊರ ಭಾಗದ ಈ ಜಾತ್ರೆ ಮಾತ್ರ ಇಡೀ ಊರಿಗೆ, ಊರವರಿಗೆ ಸೇರಿದ್ದು. * * * * * ಮರುದಿನ ವಾಸು ತನ್ನ ಪರಿಚಯದ ಕೆಲವು ಹುಡುಗರನ್ನು ಸೇರಿಸಿ ಹೊಸ ವಿಷಯವೊಂದನ್ನು ಅವರಿಗೆ ತಿಳಿಸಿದನು. “ನಮ್ಮ ಗುಡಿಯ ಸುತ್ತಲಿನ ಸ್ಥಳ ನಮ್ಮ ಗುಡಿಗೆ ಸೇರಿದ ಜಾಗ. ಅದನ್ನು ಮುಸ್ಲಿಮರು ತಮ್ಮ ಮಸೀದಿಗೆಂದು ಕಬಳಿಸ ಹೊರಟಿದ್ದಾರೆ. ಎಷ್ಟು ಮಾತ್ರಕ್ಕೂ ಇದನ್ನು ನಾವು ಬಿಟ್ಟು ಕೊಡಬಾರದು. ಏನು ಹೇಳ್ತೀರಿ?” “ಅದು ಹೇಗಾದೀತು? ಗುಡಿಯ ಸುತ್ತಲಿನ ಸ್ಥಳ ನಮ್ಮದೇ. ಅದಕ್ಕೇಕೆ ಸಂದೇಹ? ಅದನ್ನು ಯಾರಿಗೂ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ.'’ ಸೇರಿದವರೆಲ್ಲರೂ ಒಕ್ಕೊರಲಿನಿಂದೆಂಬಂತೆ ನುಡಿದರು. “ಅವರೇನಾದರೂ ಅಲ್ಲಿ ಬೇಲಿ ಹಾಕ ಹೊರಟರೆ ನೀವೆಲ್ಲರೂ ಸಿದ್ಧರಾಗಿರಬೇಕು” ಎಂದನು ವಾಸು. ಮಮ್ಮೂಟಿಯೂ ಮರುದಿನ ಖತೀಬರೊಡನೆಯೇ ಮಸೀದಿಯಲ್ಲಿ 176 ಸುಳಿ ವಿಷಯವೆತ್ತಿದನು. “ಈ ಮಸೀದಿಯ ಒತ್ತಿಗಿರುವ ಸ್ಥಳ ಮಸೀದಿಯದಲ್ಲವಾ”? “ಯಾಕೆ ಹಾಜಾರರೇ? ಅದು ನಮ್ಮದೇ ಅಲ್ಲವಾ? ಅದರಲ್ಲೇನು ಸಂದೇಹ?” “ಸಂದೇಹದ ಪ್ರಶ್ನೆ ಅಲ್ಲ ತಙಳೇ. ಅದು ನಮ್ಮದೇ ಅದರೆ ಅಲ್ಲಿಗೊಂದು ಬೇಲಿಯಾದರೂ ಇಲ್ಲದೆ ಬಿಡುವುದು ಸರಿಯಲ್ಲ. ಮುಂದೆ ಏನಾಗುತ್ತದೊ ಯಾರಿಗೆ ಗೊತ್ತು?” “ಹಾಜಾರರು ಹೇಳುವುದೂ ಸರಿಯೇ. ನಮ್ಮ ಸ್ಥಳವನ್ನು ನಾವು ಜಾಗ್ರತೆ ಮಾಡಿಕೊಳ್ಳಬೇಕು. ಅದನ್ನು ಹಾಗೆಯೇ ಬಿಟ್ಟರೆ ನಾಳೆ ಸರಕಾರವೇ ಸೆಳೆದುಕೊಂಡರೂ ಆಯಿತು.” ಯಾರೊ ಒಬ್ಬರು ಸಲಹೆ ನೀಡಿದರು. “ಹೌದು. ಅದೇ ಸರಿ. ನಾವು ನಾಳೆಯೇ ಬೇಲಿ ಹಾಕಿ ಬಿಡುವಾ” ಎಂದು ಎಲ್ಲರೂ ಒಮ್ಮತದ ತೀರ್ಪಿತ್ತರು. ಆದರೆ ಮೌಲವಿಗಳೊಬ್ಬರು ಮಾತ್ರ. “ನೊಡೀಪ್ಪಾ, ಜಾಗವೇನೊ ನಮ್ಮದೇ. ಈಗ ಬೇಲಿ ಹಾಕಿದರೆ ಸುಮ್ಮನೆ ಗಲಾಟೆಯಾದೀತೊ ಏನೊ. ಇಷ್ಟು ವರ್ಷ ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ನಡೆದುಕೊಂಡು ಬಂದಿಲ್ಲವಾ? ಈಗ್ಯಾಕೆ ಒಂದು ಅಡ್ಡ ಗೆರೆ ಎಳೆಯಬೇಕು?” ಎಮದರು. “ಈ ಮೊಯಿಲಿಯಾರ್ ಯಾವಾಗಲೂ ಹೀಗೆಯೇ; ಏನಾದರೊಂದು ಕೊಂಕು ಇದ್ದೇ ಇರುತ್ತದೆ. ಹಾಜಾರರು ಹೇಳಿದ ಮೇಲೆ ಮುಗಿಯಿತು. ಸುಮ್ಮನೆ ಯಾಕೆ ನಡುವೆ ಬಾಯಿ ಹಾಕುತ್ತೀರಿ?” ಚಿಕ್ಕ ಪ್ರಾಯದ ಗಡ್ಡದವನೊಬ್ಬನು ಅವರನ್ನು ದಬಾಯಿಸಿ ಬಾಯಿ ಮುಚ್ಚಿಸಿದನು. ಮರುದಿನ ರಾತ್ರಿ ಬೆಳಗಾಗುವ ಹೊತ್ತಿಗೆ ಮಸೀದಿ ಮತ್ತು ಗುಡಿಯ ನಡುವಿನ ಸ್ಥಳದಲ್ಲಿ ಕಂಪೌಂಡು ಗೋಡೆ ಕಟ್ಟಲು ಕಲ್ಲುಗಳು ಬಂದು ಬೀಳ ತೊಡಗಿದುವು. ಅದು ಹಿಂದುಗಳ ಕಡೆಯಿಂದ ಬಂದಿತೇ, ಮುಸ್ಲಿಮರ ಕಡೆಯಿಂದ ಬಂದಿತೇ ಎಂಬುದು ಯಾರಿಗೂ ಸಮನಾಗಿ ತಿಳಿಯದು. ‘ಗುಡಿಯ ಸ್ಥಳವನ್ನು ಹಿಂದೂಗಳು ಒಳಹಾಕಿಕೊಳ್ಳುತ್ತಿದ್ದಾರೆ’ ಎಂಬ ಸುದ್ದಿ ಮುಸ್ಲಿಮರೊಳಗೆ ಗುಸುಗುಟ್ಟಿತು. ಸಂಜೆಯ ಹೊತ್ತಿಗೆ ಊರಿನಲ್ಲಿ ಉದ್ವಿಗ್ನ ವಾತಾವರಣ ತಲೆದೋರಿತು. ಸಂಜೆಯವರೆಗೆ ಹೊಗೆಯಾಡುತ್ತಿದ್ದ ಬೆಂಕಿ ರಾತ್ರಿಯಲ್ಲಿ ಸ್ಫೋಟಗೊಂಡಿತು ಎಂದೂ ಇಲ್ಲದ್ದು ಅಂದು ಗುಡಿಯ ಬಳಿ ಊರಿನ ಕೆಲವು ಜನರು ಸೇರಿದರು. ರಾತ್ರಿ ಇಶಾ ನಮಾಜಿಗೆಂದು ಮಸೀದಿಗೆ ಬಂದವರು ಇದನ್ನು ನೊಡಿ ನಮಾಜಾದೊಡನೆ ಆ ಕಡೆಗೆ ನಡೆದರು. ಬಿಸಿ ರಕ್ತದ ಕೆಲವು ಪ್ರವಾಹ 177 ಹುಡುಗರು ಮುಂದೆ ಹೋಗಿ, “ಮಸೀದಿಯ ಸ್ಥಳವನ್ನು ಒಳಹಾಕಿಕೊಳ್ಳುವ ಯೋಜನೆಯೇ?” ಎಂದು ಜೋರಾಗಿ ಕೇಳಿದರು. “ಮಸೀದಿಗೆ ಸೇರಿದ ಸ್ಥಳವಾ? ಇದು ನಮ್ಮ ಗುಡಿಯ ಜಾಗ. ಬಾಯ್ಮುಚ್ಚಿಕೊಂಡು ಹೋಗು!” ಎಂದು ಆ ಕಡೆಯವನೊಬ್ಬನು ಗುರುಗುಟ್ಟಿದನು. “ಆಂ... ಏನಂದೆ? ಗುಡಿಯ ಜಾಗವೇ? ಯಾರಂದರು ಹಾಗೆ? ಎಲ್ಲಿದೆ ರೆಕಾರ್ಡು?” ಎಂದು ಕೇಳುತ್ತಾ ಇನ್ನೊಬ್ಬನು ಮುಂದುವರಿಯುತ್ತಿದ್ದಂತೆ ಹಿಂದಿನಿಂದ ಕಲ್ಲುಗಳು ಬೀಳತೊಡಗಿದವು. ಕಣ್ಣು ಮುಚ್ಚಿ ತೆರೆಯುವುದರೊಳಗೆ ಅದೊಂದು ರಣರಂಗವಾಗಿ ಮಾರ್ಪಾಡಾಗಿತ್ತು. ದಾಖಲೆ ನೋಡುವ ತಾಳ್ಮೆಯಾಗಲಿ, ವಿವೇಚನಾ ಶಕ್ತಿಯಾಗಲಿ ಯಾರಿಗೂ ಇದ್ದಂತಿರಲಿಲ್ಲ. ಚಪ್ಪಲಿ ಕೈಯಲ್ಲೆತ್ತಿಕೊಂಡು ಸ್ಥಳದಿಂದ ಓಡಿದವರೂ ಇದ್ದರು. ಬೆಂಕಿ ಹೊತ್ತಿಸುವುದೇನೊ ಸುಲಭ. ಆದರೆ ಅರಿಸುವುದು ಅಷ್ಟು ಸುಲಭವಲ್ಲ ತಾನೇ? ಅದ್ಯಾರೊ ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಪೊಲೀಸರು ಬಂದು ಅಲ್ಲಿನ ಗಲಭೆಕೋರರನ್ನು ಚದುರಿಸಿದರು. ಆದರೆ ಮರುದಿನ ಮತ್ತು ಕೆಲವೆಡೆಗಳಲ್ಲಿ ಗಲಭೆ ಹಬ್ಬಿತು. ಅಲ್ಲಲ್ಲಿ ಬೆಂಕಿಯೂ ಕಾಣಿಸಿಕೊಂಡಿತು. ಊರಿನಲ್ಲಿ ಕಫ್ರ್ಯೂ ಜಾರಿಯಾಯಿತು. ಜನಜೀವನ ಅಸ್ತವ್ಯಸ್ತಗೊಂಡಿತು. ಈ ಹಂತದಲ್ಲಿ ಹಿರಿಯ ಅಧಿಕಾರಿಗಳು ಮಮ್ಮೂಟಿ ಮತ್ತು ವಾಸುವನ್ನು ಜಿಲ್ಲಾಧಿಕಾರಿಗಳ ಕಛೇರಿಗೆ ಕರೆಸಿಕೊಂಡು ಶಾಂತಿ ಸಮಿತಿಯನ್ನು ರಚಿಸಿ ಶಾಂತಿಯ ಮಾತಾಡತೊಡಗಿದರು. “ನೀವೇನೂ ಯೋಚನೆ ಮಾಡಬೇಡಿ ಸಾಹೇಬರೇ. ನಾವೆಲ್ಲ ಸರಿಪಡಿಸುತ್ತೇವೆ” ಎಂದು ಮಮ್ಮೂಟಿ ಜಿಲ್ಲಾಧಿಕಾರಿಗಳಿಗೆ ಭರವಸೆ ಇತ್ತನು. “ಸದ್ಯ ಅಷ್ಟು ಮಾಡಿ” ಎಂದರು ಅವರು. “ನೀವೊಂದು ಸಾರ್ವಜನಿಕ ಸಭೆ ಏರ್ಪಡಿಸಿ ಸಾಹೇಬರೇ. ನಾವು ಬಂದು ಮಾತನಾಡುವೆವು” ಎಂದನು ಮಮ್ಮೂಟಿ. “ಸರಿ” ಎಂದು ಜಿಲ್ಲಾಧಿಕಾರಿಗಳು ತಲೆಯಲ್ಲಾಡಿಸಿದರು. ಗಲಭೆ ಕೊಂಚ ತಣ್ಣಗಾಗಿ ಊರು ಯಥಾಸ್ಥಿತಿಗೆ ಮರಳಿದ ಬಳಿಕ ಸಾರ್ವಜನಿಕ ಸಭೆಯೊಂದು ಏರ್ಪಾಡಾಯಿತು. ವೇದಿಕೆಯ ಮೇಲೆ ಸ್ಥಳೀಯ ಶಾಸಕರ ಜೊತೆಯಲ್ಲಿ ವಾಸು ಮತ್ತು ಮಮ್ಮೂಟಿ ರಾರಾಜಿಸಿದರು. ಜನ ಸಮೂಹವನ್ನು ಕಂಡದ್ದೇ ಮಮ್ಮೂಟಿಯ ಉತ್ಸಾಹ ಉಕ್ಕಿ ಹರಿಯಿತು. “ಮಸೀದಿ ಮತ್ತು ಗುಡಿ ಅಕ್ಕ ಪಕ್ಕದಲ್ಲಿದೆಯೆಂದ ಮಾತ್ರಕ್ಕೆ ನಾವು 178 ಸುಳಿ ಪರಸ್ಪರ ಹೊಡೆದಾಡಬೇಕೇ? ನೆಲವನ್ನು ಯಾರಾದರೂ ಕದ್ದುಕೊಂಡು ಹೋಗಲು ಸಾಧ್ಯವಾ? ಈ ವರೆಗೂ ಯಾವುದೇ ಭೇದ ಭಾವವಿಲ್ಲದೆ ಸೋದರರಂತೆ ಬಾಳಿದ ನಾವು ಈಗ ಒಬ್ಬರೊನ್ನೊಬ್ಬರು ದ್ವೇಷಿಸಲು ಕಲಿತದ್ದಾದರೂ ಹೇಗೆ? ಹಾಲ್ಜೇನಿನಂತೆ ಬೆರೆತು ಬದುಕುತ್ತಿದ್ದ ನಮ್ಮ ನಡುವೆ ಈ ಹುಳಿ ಹಿಂಡಿದವರಿಗೆ ಶಿಕ್ಷೆಯಾಗಬೇಕು. ನಾವೆಲ್ಲರೂ ಪುನಃ ಒಂದಾಗಿ ಈ ಹಿಂದಿನಂತೆಯೇ ಸ್ನೇಹದಿಂದ ಬದುಕಿ ಬಾಳಬೇಕು...” ಮಮ್ಮೂಟಿಯ ಭಾಷಣ ತಡೆಯಿಲ್ಲದೆ ಭೋರ್ಗರೆಯಿತು! ಮರುದಿನ ಸ್ಥಳೀಯ ಪತ್ರಿಕೆಗಳ ಮುಖಪುಟದಲ್ಲಿ ಮಮ್ಮೂಟಿ ವೇದಿಕೆಯಲ್ಲಿ ಭಾಷಣ ಮಾಡುತ್ತಿರುವ ಭಾವಚಿತ್ರ ಪ್ರಕಟವಾಯಿತು. ಸುದ್ದಿಯೂ ದಪ್ಪಕ್ಷರಗಳಲ್ಲಿ ಪ್ರಕಟವಾದವು. “ಮಮ್ಮೂಟಿ ಹಾಜಿಯವರ ಸಂಧಾನದಿಂದಾಗಿ ಊರಿನಲ್ಲಿ ಎದ್ದ ಕೋಮು ಗಲಭೆ ತಣ್ಣಗಾಯಿತು. ಹಿಂದೂ ಮುಸ್ಲಿಮರ ಐಕ್ಯತೆಗಾಗಿ ನಿರಂತರ ಶ್ರಮಿಸುವೆನೆಂದು ಇವರು ಪಣತೊಟ್ಟರು. ಗುಡಿಯ ಸುತ್ತಲಿನ ಸ್ಥಳವನ್ನು ಗುಡಿಗೇ ಬಿಟ್ಟು ಕೊಡಲು ಮುಸ್ಲಿಮರ ಮನ ಒಲಿಸುವಲ್ಲಿ ಇವರು ಯಶಸ್ವಿಯಾದರು. ಮಸೀದಿಯ ಇನ್ನೊಂದು ಪಕ್ಕದ ಖಾಲಿ ಸ್ಥಳವನ್ನು ಇವರು ಸ್ವತಃ ಖರೀದಿಸಿ ಮಸೀದಿಗಾಗಿ ಬಿಟ್ಟುಕೊಟ್ಟರು!” “ಹಾಜಾರರಿಂದಾಗಿ ನಮ್ಮ ಊರಿನ ಮಾನ ಉಳಿಯಿತು” ಎಂದು ಊರವರು ಮಮ್ಮೂಟಿಯನ್ನು ಕೊಂಡಾಡಿದರು. ಮಮ್ಮೂಟಿ ಮತ್ತು ವಾಸು ಪರಸ್ಪರ ಬೆನ್ನುತಟ್ಟಿಕೊಂಡರು! ಎದ್ದ ಬೆಂಕಿ ನಿಧಾನವಾಗಿ ಅರಿತು. ಕೆಂಡ ಮಾತ್ರ ಬೂದಿ ಮುಚ್ಚಿಕೊಂಡು ಕುಳಿತಿತು. ಮುಂದೆ ಕೆಲವು ದಿನಗಳಲ್ಲಿ ಗುಡಿಯ ಸುತ್ತಲೂ ಕಾಂಪೌಂಡು ಗೋಡೆ ಎದ್ದಿತು. ಗೋಡೆಗೊಂದು ಗೇಟೂ ಬಂದಿತು. ಮುಂದಿನ ವರ್ಷದ ಜಾತ್ರೆಯ ದಿನಗಳಲ್ಲಿ ಗೋಡೆಯ ಮೇಲೆ ಒಂದು ಬರಹವೂ ಕಾಣಿಸಿಕೊಂಡಿತು. ‘ಅಹಿಂದುಗಳಿಗೆ ಪ್ರವೇಶವಿಲ್ಲ’ ಮಮ್ಮೂಟಿ ಮಸೀದಿಗಾಗಿ ಬಿಟ್ಟುಕೊಟ್ಟ ಸ್ಥಳದಲ್ಲಿ ಮಸೀದಿಯ ವತಿಯಿಂದಲೇ ಕೆಲವು ಅಂಗಡಿಗಳನ್ನು ಕಟ್ಟಿಸಲಾಯಿತು. ಜಾತ್ರೆಯ ದಿನಗಳಲ್ಲಿ ತಾತ್ಕಾಲಿಕ ವ್ಯಾಪಾರ ಮಾಡುತ್ತಿದ್ದ ಮುಸ್ಲಿಮರು ಈ ಅಂಗಡಿಗಳಲ್ಲಿ ಖಾಯಂ ವ್ಯಾಪಾರವನ್ನಾರಂಭಿಸಿದರು. ಜಾತ್ರೆಯ ದಿನಗಳಲ್ಲಿ ಹೊಸ ಅಳಿಯನು ತನ್ನ ಹೆಂಡತಿಯ ಮನೆಗೆ ಮಲ್ಲಿಗೆ ಚೆಂಡು ಮತ್ತು ಮಿಠಾಯಿಗಳನ್ನು ಕಳುಹಿಸುವ ಪದ್ಧತಿಯೂ ಊರಿನ ಪ್ರವಾಹ 179 ಮುಸ್ಲಿಂ ಸಮುದಾಯದಲ್ಲಿ ಮಾಯವಾಯಿತು! * * * * * ಈಗ ಮಮ್ಮೂಟಿ ಮತ್ತಷ್ಟು ಪ್ರಖ್ಯಾತನಾದನು. ಸ್ಥಳೀಯ ಲೋಕಸಭಾ ಸದಸ್ಯರೂ ವಿಧಾನಸಭಾ ಸದಸ್ಯರೂ ಮಮ್ಮೂಟಿಯ ಸ್ನೇಹಿತರೇ ಆದರು. ಮಂತ್ರಿಗಳು ಊರಿಗೆ ಬಂದಾಗ ಮಮ್ಮೂಟಿಯ ಮನೆಯಲ್ಲೇ ಮಂತ್ರಿಗಳಿಗೂ ಪಕ್ಷದ ಕಾರ್ಯಕರ್ತರಿಗೂ ಊಟದ ಏರ್ಪಾಟಾಗುತ್ತಿತ್ತು. ಸರಕಾರಿ ಕಛೇರಿಯಲ್ಲಿ ಏನಾದರೂ ಕೆಲಸವಾಗಬೇಕಾದರೂ, ‘ಹಾಜಾರರಿಗೆ ಒಂದು ಮಾತು ಹೇಳಿದರೆ ಸಾಕು’ ಎಂಬಲ್ಲಿಯವರೆಗೆ ಮಮ್ಮೂಟಿಯ ಪ್ರಭಾವ ಬೆಳೆದಿತ್ತು. ಆದರೆ ಇತ್ತೀಚೆಗೆ ಊರಿನ ಈ ಹಣದುಬ್ಬರವನ್ನು ದುಂದು ವೆಚ್ಚವನ್ನು ಕಂಡ ಕೆಲವರು ಎಚ್ಚರವಾಗತೊಡಗಿದ್ದರು. ಜನ ಸಾಮಾನ್ಯರ ಬದುಕು ದುರ್ಭರವಾಗತೊಡಗಿತ್ತು. ನಿನ್ನೆ ಭಿಕಾರಿಯಾಗಿದ್ದವನು ಇಂದು ಮನೆ. ಕಾರುಗಳ ಒಡೆಯನಾಗುತ್ತಿದ್ದುದು ಜನರ ಕಣ್ಣ ಕುಕ್ಕಲಾರಂಭಿಸಿತ್ತು. ಹಲವು ವಿಧದ ವರದಿಗಳು ಪತ್ರಿಕೆಗಳಲ್ಲಿ ಪ್ರಕಟವಾಗತೊಡಗಿದ್ದುವು. ಕಪ್ಪು ಹಣದ ಪ್ರಸರಣವನ್ನು ತಡೆಯಲಾರದ ಸರಕಾರದ ನಿಷ್ಕ್ರಿಯತೆಗಳನ್ನು ಪತ್ರಿಕೆಗಳೂ ವಿರೋಧ ಪಕ್ಷಗಳೂ ಟೀಕಿಸತೊಡಗಿದುವು. ಆಡಳಿತ ಪಕ್ಷದ ಕುರ್ಚಿಗಳು. ಅಲುಗಾಡುವಂತೆ ಕಂಡಾಗ ಈವರೆಗೂ ಜಾಣ ಕುರುಡು ನಟಿಸುತ್ತಿದ್ದ ಸರಕಾರ ಕಣ್ಣು ತೆರೆದಂತೆ ನಟಿಸಿತು. ಕಳ್ಳ ಸಾಗಣಿಯ ಬೋಟುಗಳನ್ನು ಬೆನ್ನಟ್ಟಲು ಸರಕಾರ ಕೆಲವು ಸ್ವೀಡ್ ಬೋಟುಗಳನ್ನು ಖರೀದಿಸಿ ಸುಂಕದ ಇಲಾಖೆಗೆ ನೀಡಿತು. ಆದರೆ ಅವು ಕೆಲವೇ ದಿನಗಳಲ್ಲಿ ಕೆಟ್ಟು ಕೂತವು! ಕಳ್ಳ ಸಾಗಣಿದಾರರು ಸ್ಪೀಡ್ ಬೋಟುಗಳ ಇಂಜಿನ್ನಿನ ಒಳಗಡೆ ಸಕ್ಕರೆ ಸುರಿದು ಅದು ಚಲಿಸದಂತೆ ಮಾಡಿದರೆಂಬ ಗುಸುಗುಸು ಸುದ್ದಿಯೂ ಗಾಳಿಯಲ್ಲಿ ತೇಲಿತು. ಸರಕಾರ ಎಂದಿನಂತೆ ಉದಾಸೀನ ತಾಳಿತು. ಈಗ ಊರಿನಲ್ಲಿ ಅನೇಕ ಬಾರ್‍ಗಳೂ ತಲೆ ಎತ್ತಿದ್ದುವು. ಹೊಟೇಲುಗಳಲ್ಲಿ ಬಡ ಹೆಣ್ಣು ಮಕ್ಕಳ ಮೈ ಮಾರಾಟವೂ ಪ್ರಾರಂಭವಾಗಿತ್ತು. ಹಣದುಬ್ಬರದಿಂದ ಬೆಲೆಗಳು ಗಗನಕ್ಕೇರಿದಾಗ ತೀರಾ ಬಡತನದ ಕುಟುಂಬಗಳಲ್ಲಿ ಈ ದಂಧೆ ಕಾಣಿಸಿಕೊಂಡಿತು. ಇಂತಹ ಕರೆವೆಣ್ಣುಗಳನ್ನು ಅವರ ತಾಯಂದಿರೇ ಹೊಟೇಲುಗಳಿಗೆ ಕರೆದುಕೊಂಡು ಬರುತ್ತಿದ್ದರು. ಬರುಕಾ ಹಾಕಿಕೊಂಡ ಹುಡುಗಿಯರು ಹೊಟೇಲಿನ ಒಳಗೆ ನಡೆದು ಹಾಡು ಹಗಲಲ್ಲೇ ಈ ವೃತ್ತಿಯನ್ನಾರಂಭಿಸಿದರು. ಊರು ಕೆಟ್ಟು ಹೊಲಗೇರಿಯಾಯಿತು. ಈ ಹಂತದಲ್ಲಿ ಜೊಹರಳ ಹಿರಿಯ ಮಗ ನವಾಜ್ ಎಂಬಾತನು 180 ಸುಳಿ ಊರಿನ ಹೊಸ ಪೊಲೀಸ್ ಅಧಿಕಾರಿಯಾಗಿ ಬಂದು ಅಧಿಕಾರ ವಹಿಸಿಕೊಂಡನು. ಬಹಳ ಶಿಸ್ತಿನಿಂದ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದ ಈತನನ್ನು ಉದ್ದೇಶಪೂರ್ವಕವಾಗಿಯೇ ಸರಕಾರ ಈ ಊರಿಗೆ ವರ್ಗ ಮಾಡಿರಬಹುದೆಂಬ ಗುಮಾನಿಯೂ ಕೆಲವರಿಗಿತ್ತು. ಈತ ಬಂದವನೇ, ರಾತ್ರಿ ಹತ್ತು ಗಂಟೆಗೆ ಎಲ್ಲ ಹೊಟೇಲ್ ಮತ್ತು ಬಾರ್‍ಗಳನ್ನು ಬಂದ್ ಮಾಡಬೇಕೆಂದು ಆಜ್ಞೆ ಹೊರಡಿಸಿದನು. ಹತ್ತು ಗಂಟೆಯ ಬಳಿಕ ಯಾರೊಬ್ಬರೂ ಬೀದಿಗಿಳಿಯದಂತೆ ಬಂದೋಬಸ್ತು ಮಾಡಿಸಲಾರಂಭಿಸಿದನು. ‘ಇದೆಲ್ಲವೂ ಹೊಸದರಲ್ಲಿ ಅಗಸ ಗೋಣಿ ಎತ್ತಿ ಎತ್ತಿ ಒಗೆದಂತೆ ಎನ್ನುತ್ತಾರಲ್ಲ? ಹಾಗೇ!’ ಎಂದು ಕೆಲವರು ವ್ಯಂಗ್ಯವಾಗಿ ಆಡಿಕೊಂಡರು. ಈ ವ್ಯವಹಾರಕ್ಕಿಳಿಯದವರು ಇದರಿಂದ ಕೊಂಚ ಸಮಾಧಾನಗೊಂಡರು. ಸದ್ಯ ಇನ್ನಾದರೂ ಈ ವ್ಯವಹಾರ ನಿಲುಗಡೆಗೆ ಬಂದೀತು ಎಂದು ಆಶಿಸಿದವರೂ ಇದ್ದರು. ನವಾಜ್ ಪಂಚೆ ಸುತ್ತಿಕೊಂಡು ತಲೆಗೊಂದು ಮುಂಡಾಸು ಸುತ್ತಿಕೊಂಡು ಮಧ್ಯ ರಾತ್ರಿಯಲ್ಲಿ ತಾನೂ ಗಸ್ತು ತಿರುಗುತ್ತಿದ್ದನು. ಒಂದು ದಿನ ರಾತ್ರಿ ಎರಡನೇ ಆಟ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ದಂಪತಿಗಳನ್ನು ಪೊಲೀಸ್ ಠಾಣೆಗೆ ಕರೆಸಿ ಪ್ರಶ್ನಿಸತೊಡಗಿದನು. “ಹೇಳಿ, ಎಲ್ಲಿಗೆ ಹೋಗಿದ್ದಿರಿ?” “ಸಾರ್, ನಾವು ದಂಪತಿಗಳು ಸಾರ್. ಎರಡನೇ ಆಟ ನೋಡಿ ಮನೆಗೆ ಮರಳುತ್ತಿದ್ದೇವೆ. ಸಾರ್,'' ಅಳು ಮುಖ ಮಾಡಿ ನುಡಿದನು ಗಂಡ. “ಮೊದಲನೇ ಆಟಕ್ಕೆ ಯಾಕೆ ಹೋಗಲಿಲ್ಲ?” “ಕೆಲಸ ಇತ್ತು ಸಾರ್” “ಎಂತಹ ಕೆಲಸ?” “ವ್ಯಾಪಾರ ಸಾರ್?” “ಎಂತಹ ವ್ಯಾಪಾರ? ಕಪ್ಪು ವ್ಯಾಪಾರವಾ ಬಿಳಿ ವ್ಯಾಪಾರವಾ?” ಗರ್ಜಿಸಿದರು ಸಾಹೇಬರು. “ಕಪ್ಪು, ಬಿಳಿ ಎಂದೆಲ್ಲಾ ನೋಡಿದರಾಗುತ್ತದಾ ಸಾರ್? ಬಟ್ಟೆ ವ್ಯಾಪಾರವೆಂದ ಮೇಲೆ ಎಲ್ಲ ಬಣ್ಣಗಳೂ ಇರಬೇಕಲ್ಲ ಸಾರ್!....” ನವಾಜ್‍ನ ತುಟಿಗಳಲ್ಲಿ ನಗು ಮೂಡಿತು. ಸಾಹೇಬರ ಮುಖದ ಗಂಟು ಸಡಲಿದ್ದನ್ನು ಕಂಡ ಇತರ ಪೊಲೀಸರೂ ನಕ್ಕರು. ನವಾಜ್ ಗಾಂಭೀರ್ಯ ತಂದುಕೊಂಡು, ಪ್ರವಾಹ 181 “ಇನ್ನು ಮುಂದೆ ರಾತ್ರಿ ಹತ್ತು ಗಂಟೆಯ ಬಳಿಕ ಬೀದಿಯಲ್ಲಿ ಕಂಡರೆ ಹಿಡಿದು ಒಳಗೆ ಹಾಕ್ತೇನೆ. ಗೊತ್ತಾಯ್ತೊ?” ಎಂದು ಗರ್ಜಿಸಿ ಅವರನ್ನು ಬಿಟ್ಟನು. ಮರುದಿನ ಮಮ್ಮೂಟಿಗೆ ಯಾರೊ ವರದಿಯೊಪ್ಪಿಸಿದರು. “ದೊಡ್ಡ ಕಷ್ಟ ಆಯಿತಲ್ಲ. ಹಾಜಾರೇ? ರಾತ್ರಿಯಲ್ಲಿ ಬೀದಿಯಲ್ಲಿ ಯಾರನ್ನೂ ನಡೆದಾಡಲು ಬಿಡ್ತಾ ಇಲ್ಲವಂತಲ್ಲ ಆ ಆಫೀಸರ್ ? ಎಲ್ಲ ಕಾರುಗಳನ್ನೂ ತನಿಖೆ ಮಾಡಿಯೇ ಊರಿನಿಂದ ಹೊರಗೆ ಬಿಡುವ ವ್ಯವಸ್ಥೆ ಮಾಡುತ್ತಿದ್ದಾನಂತೆ! ಇನ್ನು ನಾವು ವ್ಯವಹಾರ ಮಾಡಿದ ಹಾಗೆಯೇ!” “ನೊಡುವಾ ಎಷ್ಟು ದಿನ ಹಾರಾಡ್ತಾನೇಂತ. ಅಂದ ಹಾಗೆ....ಅವನು ಎಲ್ಲಿಯವನೂಂತ ಗೊತ್ತಿದೆಯಾ?” ಎಂದು ಕೇಳಿದನು ಮಮ್ಮೂಟಿ. “ಅವನು ನಮ್ಮೂರಿನವನೇ. ನಮ್ಮ ಮೂಸಾ ಹಾಜಿಯ ಮೊಮ್ಮಗನಂತೆ..” ಎನ್ನುತ್ತಿದ್ದಂತೆ ಮಮ್ಮೂಟಿ ಕುಳಿತಲ್ಲಿಂದ ನೆಟ್ಟಗಾದನು. “ಓ.... ಆ ಹುಡುಗರೆಲ್ಲ ಹಾಗೆಯೇ. ಬದುಕಲು ತಿಳಿಯದವರು! ಆಗಲಿ ನೊಡುವಾ” ಎಂದು ತಲೆ ಓಡಿಸತೊಡಗಿದನು. ಹೌದು, ನವಾಜ್ ಎಂದರೆ ಜೊಹರಕ್ಕನ ಮಗ. ಅವರೆಲ್ಲ ಹಣದಾಸೆಗೆ ಬಗ್ಗುವವರಲ್ಲ. ಈತ ಇದೇ ರೀತಿ ಹಟ ತೊಟ್ಟರೆ ತಾನು ತನ್ನ ವ್ಯವಹಾರವನ್ನೇ ನಿಲ್ಲಿಸಬೇಕಾದೀತು. ಅಥವಾ ತನ್ನ ದಂಧೆಯ ಜಾಗವನ್ನು ಬದಲಿಸಬೇಕಾದೀತು. ಅದೆಲ್ಲ ಸ್ವಲ್ಪ ಕಷ್ಟವೇ. ಯಾವುದಕ್ಕೂ ಒಮ್ಮೆ ಜೊಹರಕ್ಕನನ್ನು ಕಂಡು ಬರಬೇಕು. ಹಾಜಿರಾ ಮತ್ತು ನಿಯಾಜ್‍ನ ಮದುವೆ ಮುರಿದ ಬಳಿಕ ಮಮ್ಮೂಟಿ ಜೊಹರಳ ಮನೆಗೆ ಹೋಗಿರಲಿಲ್ಲ. ಅವನು ಆಕೆಯ ಮನೆಗೆ ಹೋದಾಗ ಸಂಜೆಯ ನಾಲ್ಕು ಗಂಟೆ. ಮನೆಯ ಮುಂದೆ ಕೆಲವು ಮಕ್ಕಳು ಆಡುತ್ತಿದ್ದುವು. ಮಮ್ಮೂಟಿ ಗೇಟಿನ ಬಳಿಯಲ್ಲಿ ಕಾರು ನಿಲ್ಲಿಸಿ ಒಳ ಬರುತ್ತಾ, “ನಿಮ್ಮಜ್ಜಿ ಇದ್ದಾರಾ?” ಎಂದು ಮಕ್ಕಳೊಡನೆ ಕೇಳಿದನು. ಹುಡುಗಿಯೊಬ್ಬಳು “ಅಜ್ಜೀ” ಎಂದು ಕರೆಯುತ್ತಾ ಒಳಗೋಡಿ ಅಜ್ಜಿಯ ಕೈ ಹಿಡಿದೆಳೆಯುತ್ತಾ ಹೊರ ಬಂದಳು. “ಯಾರೂ?...” ಜೊಹರಾ ಬಾಗಿಲ ಮರೆಯಿಂದ ಕೇಳಿದಳು. “ನಾನು ಜೊಹರಾಕ್ಕಾ, ಮಮ್ಮೂಟಿ. ಹೀಗೇ ಈ ಕಡೆ ಹೋಗ್ತಾ ಇದ್ದೆ. ನಿಮ್ಮನ್ನು ನೋಡಿ ಹೋಗೋಣವೆಂದು ಬಂದೆ.” “ಆಗಲಿ, ಒಳಗೆ ಬಾ. ಕುಳಿತುಕೊ” ಎನ್ನುತ್ತಾ ಜೊಹರ ಬಾಗಿಲ ಮರೆಯಿಂದ ಹೊರ ಬಂದು ಅಲ್ಲೇ ಇದ್ದ ಸೋಫಾದಲ್ಲಿ ಕುಳಿತುಕೊಳ್ಳುತ್ತಾ, ‘ಬಹಳ ದಿನವಾಯಿತು ನೋಡಿ. ಹೇಗಿದ್ದೀ?” ಎಂದು ಕೇಳಿದಳು. 182 ಸುಳಿ “ನಾನು ಚೆನ್ನಾಗಿದ್ದೇನೆ. ನಿಮ್ಮ ಮಕ್ಕಳೆಲ್ಲ ಹೇಗಿದ್ದಾರೆ?” ಎಂದು ಕೇಳಿದನು. “ಹೂಂ, ಹೇಗೋ ಇದ್ದಾರೆ, ಒಂದೊಂದು ಕೆಲಸದಲ್ಲಿ, ಈ ಸಂಬಳದಲ್ಲೆಲ್ಲ ಎಂತಹ ಬದುಕೊ ಏನೊ”. ನಿಟ್ಟುಸಿರಿಟ್ಟಳು ಆಕೆ. ಮಮ್ಮೂಟಿಗೆ ಎಳೆ ಸಿಕ್ಕಂತಾಯಿತು. “ಹೂಂ. ಹೌದಕ್ಕಾ. ಸರಕಾರೀ ಸಂಬಳವೆಲ್ಲ ಯಾವ ಮೂಲೆಗೆ? ನಿಮ್ಮ ಮಕ್ಕಳು ಮನಸ್ಸು ಮಾಡಿದರೆ ಲಕ್ಷಾಧೀಶರಾಗಬಹುದು. ಈಗಿನ ಕಾಲದಲ್ಲಿ ಹಣವಿಲ್ಲದಿದ್ದರೆ ಯಾರಾದರೂ ಮೂಸಿ ನೋಡ್ತಾರಾ?” “ಹೌದು ಮಮ್ಮೂಟಿ. ಏನು ಮಾಡುವುದು? ಹಾಸಿದಲ್ಲಿ ಮಲಗಬೇಕಲ್ಲ ನನ್ನ ಮಕ್ಕಳು? ದೇಶ, ಧರ್ಮ, ಅರ್ಥ ವ್ಯವಸ್ಥೆ, ಹಣದುಬ್ಬರ ಅಂತ ಏನೇನೊ ಹೇಳ್ತವೆ ಅವು. ನನಗವೊಂದೂ ಅರ್ಥವಾಗುವುದಿಲ್ಲ. ಅಂತೂ ಈ ವರೆಗೂ ಯಾರೂ ಒಂದು ಸ್ವಂತ ಮನೆ ಕೂಡಾ ಮಾಡ್ಕೊಂಡಿಲ್ಲ” ಎನ್ನುತ್ತಾ ಒಳಹೋಗಿ ಚಹಾದ ಕಪ್ಪನೆತ್ತಿಕೊಂಡು ಬಂದಳು. “ನನ್ನ ಮಗ ನವಾಜ್ ಈಗ ಪಟ್ಟಣದಲ್ಲಿದ್ದಾನೆ. ಗೊತ್ತ ನಿನಗೆ?” ಎಂದು ಕೇಳಿದಳು. “ಗೊತ್ತು ಜೊಹರಕ್ಕ. ಅವರಿಲ್ಲಿದ್ದಿದ್ರೆ ಮಾತನಾಡಿಸಿಕೊಂಡು ಹೋಗುತ್ತಿದ್ದೆ” ಎನ್ನುತ್ತಿದ್ದಂತೆ ಜೊಹರಾ, “ಅಯ್ಯೊ, ನೀನು ಎತ್ತಿ ಆಡಿಸಿದ ಹುಡುಗನಲ್ಲವಾ? “ಅವರು ಇವರು” ಎಂದೆಲ್ಲಾ ಹೇಳಿ ಅವನ ಆಯುಷ್ಯ ಕಮ್ಮಿ ಮಾಡಬೇಡ ಮಹಾರಾಯ!” ಎಂದು ನಗುತ್ತಾ ನುಡಿದಳು. “ಈಗ ದೊಡ್ಡ ಅಪ್ಪೀಸರಲ್ಲವಾ ಅಕ್ಕಾ, ನಾವು ಮರ್ಯಾದೆ ಕೊಡಬೇಕಲ್ಲವಾ?” ಎನ್ನುತ್ತಾ ಚಹಾದ ಕಪ್ಪನ್ನೆತ್ತಿಕೊಂಡು ಚಹಾ ಕುಡಿಯುತ್ತ, “ನವಾಜ್ ಇನ್ನೂ ಮನೆ ಕಟ್ಟಿಸಿಕೊಂಡಿಲ್ಲ ಎಂದಿರಲ್ಲ? ನಾನು ಒಳ್ಳೆಯ ಒಂದು ಸ್ಥಳವನ್ನು ಖರೀದಿಸಿದ್ದೇನೆ. ಅವನಿಗೆ ಮನೆ ಬೇಕಾದರೆ ಆ ಸ್ಥಳದಲ್ಲಿ ನಾನು ಕಟ್ಟಿಸಿ ಕೊಡುತ್ತೇನೆ.” ಬಲೆ ಬೀಸತೊಡಗಿದನು ಮಮ್ಮೂಟಿ. “ಛೆ ಛೆ ನೀನು ಯಾಕೆ ಅವನಿಗೆ ಮನೆ ಕಟ್ಟಿಸಿಕೊಡ್ತಿ? ನನ್ನ ಮಗ ಅದಕ್ಕೆಲ್ಲ ಒಪ್ತಾನಾ?” “ನನ್ನ ತಾಯಿ ಮತ್ತು ಮಗಳ ದುಡುಕು ಬುದ್ಧಿಯಿಂದ ನಾವು ದೂರವಾಗಬೇಕಾಯಿತು. ನವಾಜಂತೂ ನಾನು ಎತ್ತಿ ಆಡಿಸಿದ ಹುಡುಗ. ನನ್ನದಂತೂ ಯಾರು ಯಾರೊ ತಿಂದು ಹೋಗ್ತಾರೆ. ಯಾರು ಯಾರಿಗೋ ಹೋಗುವುದು ನಿಮ್ಮ ಮಗನಿಗೂ ಒಂದಷ್ಟು ಹೋಗಲಿ” ಎಂದು ಪ್ರವಾಹ 183 ಪುಸಲಾಯಿಸಿದನು. “ನೀನು ನಮ್ಮಲ್ಲಿಟ್ಟ ವಿಶ್ವಾಸಕ್ಕೆ ಹೇಗೆ ಕೃತಜ್ಞತೆ ಸಲ್ಲಿಸಬೇಕೊ ತಿಳಿಯದು. ಆಗಲಿ. ಅವನೊಡನೆ ಹೇಳಿ ನೋಡ್ತೇನೆ” ಎಂದಳು ಜೊಹರಾ. ಆಕೆ ಬಾಗಿಲಲ್ಲಿ ನಿಂತು ಅವನು ಹೋಗುವುದನ್ನು ನೋಡುತ್ತಾ ‘ವಿಧಿಯ ಆಟ ಎಷ್ಟು ವಿಚಿತ್ರ!’ ಎಂದು ತನ್ನಷ್ಟಕ್ಕೆ ಅಂದು ಕೊಂಡಳು. ನಿಯಾಜ್ ಇಂದಿಗೂ ಅವನ ಅಳಿಯನೇ ಆಗಿದ್ದಿದ್ದರೆ ಎಂಬ ಯೋಚನೆಯೂ ಕ್ಷಣಕಾಲ ಕಾಡಿತು. ಅಕೆ ಒಳ ಬಂದು ಕುಳಿತುಕೊಳ್ಳುತ್ತಿದ್ದಂತೆ ಹೊರಗೆ ಜೀಪ್ ಬಂದು ನಿಂತ ಸದ್ದಾಯಿತು. “ಉಮ್ಮಾ...” ಎನ್ನುತ್ತಾ ನವಾಜ್ ಒಳ ಬಂದಾಗ, “ಬಾಪ್ಪ, ಕುಳಿತುಕೊ” ಎಂದು ಮಗನನ್ನು ಹತ್ತಿರ ಕರೆದಳು. “ಏನುಮ್ಮಾ, ಏನು ವಿಶೇಷ?” ಎಂದು ಆತನು ತಾಯಿಯ ಪಕ್ಕದಲ್ಲಿ ಬಂದು ಕುಳಿತನು. ಜೊಹರಾ ಪೀಠಿಕೆ ಇಲ್ಲದೆ, “ಈಗ ತಾನೇ ಮಮ್ಮೂಟಿ ಬಂದು ಹೋದನು” ಎಂದಳು. “ಈ ಬಾರಿ ಯಾರಿಗೆ ಮಗಳನ್ನು ಗಂಟು ಹಾಕುವ ಯೋಜನೆ? ನಮ್ಮಲ್ಲಿನ್ನು ಮದುವೆ ವಯಸ್ಸಿನ ಹುಡುಗರಿಲ್ಲವಲ್ಲ? ನನಗಂತೂ ಹೆಂಡತಿ ಮಕ್ಕಳೆಲ್ಲರೂ ಇದ್ದಾರೆ!” ನಗುತ್ತಾ ನುಡಿದನಾತ. “ನಿನ್ನ ತಮಾಷೆ ಸಾಕು. ಅವನೂ.. ನಿನಗೊಂದು ಮನೆ ಕಟ್ಟಿಸಿಕೊಡ್ತಾನಂತೆ” ಎಂದಳು ನಿಧಾನವಾಗಿ. “ಏನೂ...?” ಆಶ್ಚರ್ಯಚಕಿತನಾಗಿ ಕೇಳಿದನಾತ. “ಮಮ್ಮೂಟಿ ನನಗೆ ಮನೆ ಕಟ್ಟಿಸಿ ಕೊಡ್ತಾನಾ? ಯಾಕಂತೆ?” “ಅದೇ ನನಗೂ ಅರ್ಥವಾಗಿಲ್ಲ. ‘ಚಿಕ್ಕಂದಿನಲ್ಲಿ ನಾನು ಎತ್ತಿ ಆಡಿಸಿದ ಮಗುವಲ್ಲಾ?’ ಎಂದ.” “ಚಿಕ್ಕಂದಿನಲ್ಲಿ ಎತ್ತಿ ಆಡಿಸಿದವನೆಂದು ಯಾರಾದರೂ ಮನೆ ಕಟ್ಟಿಸಿಕೊಡ್ತಾರಾ? ನೀವೇನಂದಿರಿ? “ನಾನೇನನ್ನಲಿ? ನಿನ್ನೊಡನೆ ವಿಚಾರಿಸಿ ತಿಳಿಸುವೆನೆಂದೆ.” ನವಾಜ್ ಗಹಗಹಿಸಿ ನಗತೊಡಗಿದನು. ಬಳಿಕ, “ನನ್ನ ಬಳಿಗೆ ನೇರವಾಗಿ ಬರುವ ಧೈರ್ಯವಿಲ್ಲದೆ ನಿಮ್ಮ ಬಳಿಗೆ ಬಂದಿದ್ದಾನೆ. ಬಹಳ ದೊಡ್ಡ ಬಲೆಯನ್ನೇ ಬೀಸಿದ್ದಾನೆ!'' ಎಂದನು. “ಏನಪ್ಪಾ, ಯಾವುದಕ್ಕೆ ಬಲೆ ಬೀಸಿದ್ದಾನೆ?” ಗೊಂದಲಗೊಂಡು ಕೇಳಿದಳು ಜೊಹರಾ. 184 ಸುಳಿ “ಇನ್ನೇನು, ಅವನ ಕಳ್ಳ ದಂಧೆಗಳು ನಿರಾತಂಕವಾಗಿ ಸಾಗಬೇಕಲ್ಲವಾ? ಎಲ್ಲರನ್ನೂ ಕೊಂಡುಕೊಂಡಂತೆ ನನ್ನನ್ನೂ ಕೊಂಡುಕೊಳ್ಳಬಹುದೆಂಬ ಭ್ರಮೆ ಅವನಿಗಿದ್ದರೆ ಅದನ್ನು ಬಿಟ್ಟು ಬಿಡಲು ಹೇಳಿ. ಇನ್ನೊಮ್ಮೆ ಇಂತಹ ಪ್ರಸ್ತಾಪವನ್ನೆತ್ತಿಕೊಂಡು ಬಂದರೆ ಅವನನ್ನು ಒದ್ದು ಹೊರ ಹಾಕಿ... ಮನೆಯಂತೆ, ಮನೆ!” ಎನ್ನುತ್ತಾ ಕೋಪೋದ್ರಿಕ್ತನಾದನು. “ಆಗಲಿ, ಅದಕ್ಕೆ ಕೋಪವೇಕೆ? ಬೇಡವೆಂದರೆ ಬೇಡಾಂತ ಹೇಳಿದರಾಯಿತು” ಎನ್ನುತ್ತಾ ಚಿಂತಾಮಗ್ನಳಾದಳು. ತನ್ನ ಮಕ್ಕಳಿಗೆ ಬುದ್ಧಿ ಬರುವುದು ಯಾವಾಗ? ತಾವು ಎಲ್ಲರಂತೆ ಬಾಳಬೇಕೆಂದು ಇವರಿಗೆ ಅನ್ನಿಸುವುದಿಲ್ಲವೇಕೆ? “ಉಮ್ಮಾ, ನಾನು ಹೋಗ್ತೇನೆ. ಸುಲಿದ ತೆಂಗಿನ ಕಾಯಿ ಇದ್ದರೆ ಜೀಪಿನಲ್ಲಿಡಲಿಕ್ಕೆ ಹೇಳಿ. ಅಕ್ಕಿ ಕೂಡಾ ಬೇಕೂಂತ ಹೇಳಿದ್ದಳು.” “ಮುಂದಿನವಾರ ಅವಳನ್ನೂ ಮಕ್ಕಳನ್ನೂ ಕರೆದುಕೊಂಡು ಬಾ. ಅವರು ಬಂದು ಹೋಗಿ ತಿಂಗಳಾಯಿತೊ ಏನೊ.” ಅಕ್ಕಿ ಮತ್ತು ತೆಂಗಿನ ಕಾಯಿಗಳನ್ನು ಜೀಪಿನಲ್ಲಿ ಹಾಕಿಸಿಕೊಂಡು ಅವನು ಹೊರಟಾಗ ಜೊಹರಾಳ ಯೋಚನೆ ಹರಿದದ್ದು ಅದೇ ದಿಕ್ಕಿನಲ್ಲಿಯೇ. ‘ಅಕ್ಕಿ, ತೆಂಗಿನಕಾಯಿ, ತರಕಾರಿಗಳನ್ನು ಇಲ್ಲಿಂದಲೇ ಕೊಂಡೊಯ್ಯುವುದಾದರೆ ಇವನು ಈ ಸರಕಾರೀ ಕೆಲಸಕ್ಕಾಗಿ ದೇಹ ಸವೆಸುವುದಾದರೂ ಯಾಕೆ?’ ಜೊಹರಾಳೊಡನೆ ಮಾತನಾಡಿ ಬಂದ ಬಳಿಕ ಮಮ್ಮೂಟಿ ಕೊಂಚ ಧೈರ್ಯದಿಂದಲೇ ಓಡಾಡುತ್ತಿದ್ದನು. ಆದರೂ ನವಾಜ್‍ನ ಬಂದೋ ಬಸ್ತಿನಿಂದಾಗಿ ಮೊದಲಿನಂತೆ ಸಲೀಸಾಗಿ ದಂಧೆ ಮಾಡಲಾಗುತ್ತಿರಲಿಲ್ಲ. ಅದೂ ಅಲ್ಲದೆ ದಿನ ಬೆಳಗಾದರೆ ಪತ್ರಿಕೆಗಳಲ್ಲಿ ‘ಕರಾವಳಿಯಲ್ಲಿ ಐದು ಲಕ್ಷದ ಚಿನ್ನದ ಗಟ್ಟಿಗಳನ್ನು ಸುಂಕಾಧಿಕಾರಿಗಳು ವಶಪಡಿಸಿಕೊಂಡರೆಂದೊ, ಬೊಂಬಾಯಿಯಲ್ಲಿ ಹತ್ತು ಲಕ್ಷದ ಬೆಳ್ಳಿಯ ಗಟ್ಟಿಗಳನ್ನು ಕಾರು ಸಮೇತ ಹಿಡಿದರೆಂದೊ ವರದಿಯಾಗುತ್ತಿದ್ದವು. ಮಮ್ಮೂಟಿಯ ಬಳಿ ಪಳಗಿದ ಕೆಲವರೂ ಕೂಡಾ ಈ ದಂಧೆಯನ್ನಾರಂಭಿಸಿದ್ದರಿಂದ ಈ ಮಾಲುಗಳು ಯಾರಿಗೆ ಸೇರಿದವೆಂದು ಊರವರಿಗೆ ತಿಳಿಯುತ್ತಿರಲಿಲ್ಲ. ಒಬ್ಬರ ಗುಟ್ಟನ್ನು ಇನ್ನೊಬ್ಬರು ಬಯಲು ಮಾಡುತ್ತಿದ್ದಾರೆಯೇ ಎಂಬ ಸಂದೇಹ, ವೃತ್ತಿ ಮಾತ್ಸರ್ಯ ಎಲ್ಲವೂ ಒಳಗೊಳಗೇ ಹೊಗೆಯಾಡತೊಡಗಿದ್ದುವು. ಮಮ್ಮೂಟಿ ಧೈರ್ಯದಿಂದಿದ್ದರೂ ವಾಸುವಿಗೆ ಆತನಂತೆ ನೆಮ್ಮದಿಯಿಂದಿರಲು ಸಾಧ್ಯವಾಗಿಲಿಲ್ಲ. ಆ ರಾತ್ರಿ ಇಬ್ಬರೂ ಮಮ್ಮೂಟಿಯ ವಯರ್‍ಲೆಸ್ ಸೆಟ್ಟಿನ ಬಳಿ ಕಡಲಿನಿಂದ ಬರುವ ಸಂದೇಶಕ್ಕಾಗಿ ಕಾಯುತ್ತಾ ಪ್ರವಾಹ 185 ಕುಳಿತಿದ್ದಾಗ ವಾಸುವೇ ಮಾತಿಗಾರಂಭಿಸಿದನು. “ಅಲ್ಲ ಹಾಜಾರೆ, ನಾವು ಇನ್ನೂ ಎಷ್ಟು ದಿನ ಈ ಅಧಿಕಾರಿಯ ಉಪಟಳ ಸಹಿಸುವುದು?” “ಹಾಗೆಲ್ಲ ಅವಸರ ಮಾಡಿದರೆ ಆಗುತ್ತದಾ? ನಾನು ಮೊನ್ನೆ ರಾಜಧಾನಿಗೆ ಹೋದಾಗ ಗೃಹ ಮಂತ್ರಿಗಳನ್ನು ಕಂಡು ಬಂದಿದ್ದೇನೆ. ಆದಷ್ಟು ಬೇಗನೆ ಏನನ್ನಾದರೂ ಮಾಡುವಾ ಎಂದು ಭರವಸೆ ನೀಡಿದ್ದಾರೆ ಅವರು.” ನಿರಾತಂಕವಾಗಿ ನುಡಿದನು ಮಮ್ಮೂಟಿ. “ನೀವೇನೊ ಹಾಗೆ ಹೇಳ್ತೀರಿ. ಆದರೆ ನನಗ್ಯಾಕೊ ಈ ರಾಜಕಾರಣಿಗಳ ಭಾಷೆಗಳಲ್ಲೆಲ್ಲ ನಂಬಿಕೆ ಇಲ್ಲ. ಅವರು ಇವತ್ತು ಒಂದು ಮಾತು ಹೇಳಿದರೆ ನಾಳೆ ಬೇರೆಯೇ ಹೇಳ್ತಾರೆ. ಈಗ ನಾನೊಂದು ಉಪಾಯ ಹೇಳಲಾ?” ಎಂದು ಕೇಳಿದನು. “ಏನು ಉಪಾಯ?” “ಅದೇ, ನಾವು ಕಳೆದ ವರ್ಷ ಆ ಲತೀಫನನ್ನು ಮಾಡಿದೆವಲ್ಲ? ಹಾಗೇನಾದರೂ ಮಾಡಿದರೆ...” ಎನ್ನುತ್ತಾ ಅರ್ಥಗರ್ಭಿತವಾಗಿ ಮಮ್ಮೂಟಿಯ ಮುಖ ನೋಡಿದನು. ಮಮ್ಮೂಟಿ ಬೆಚ್ಚಿದನು. “ನಿನಗೇನಾದರು ತಲೆ ಸರಿ ಇದೆಯಾ ವಾಸು? ನೀನು ಓರ್ವ ಸರಕಾರಿ ಅಧಿಕಾರಿಯ ಕುರಿತು ಮಾತನಾಡುತ್ತಿದ್ದಿ ಎಂಬುದನ್ನು ಮರೆತೆಯಾ?” ಎಂದ ಭಯಮಿಶ್ರಿತ ಧ್ವನಿಯಲ್ಲಿ ಕೇಳಿದನು. “ನೋಡಿ ಹಾಜಾರೇ, ನೆರೆ ನೀರು ಕತ್ತಿನ ತನಕ ಬರುವವರೆಗೆ ಮಂಗ ಮರಿಯನ್ನು ತಲೆಯ ಮೇಲೆ ಹೊತ್ತುಕೊಳ್ಳುತ್ತದೆ. ಆ ಮೇಲೆ ಅದಕ್ಕೆ ತನ್ನ ಪ್ರಾಣವೇ ಮುಖ್ಯವಾಗುವುದಲ್ಲವಾ? ಹಾಗೆಯೇ ನಮಗೂ ಕತ್ತಿನವರೆಗೆ ನೀರು ಬಂದಾಗಿದೆ. ಈಗ ನಮ್ಮ ರಕ್ಷಣೆಗೆ ನಾವು ಆದ್ಯತೆ ನೀಡಬೇಕಷ್ಟೇ” ಮಮ್ಮೂಟಿ ಚಿಂತಾಮಗ್ನನಾದನು. ಒಂದೆರಡು ವರ್ಷಗಳ ಹಿಂದಿನ ಆ ಘಟನೆ ಆತನ ಮನಃಪಟಲದಲ್ಲಿ ಮೂಡತೊಡಗಿತು. ಲತೀಫ್ ಎಂಬ ವಾಹನ ಚಾಲಕ ಉತ್ತರ ಭಾರತಕ್ಕೆ ಹೋದವನು ಬಹಳ ಸಮಯ ಊರಿಗೆ ಬರಲೇ ಇಲ್ಲ. ಕಾರು ಮಾತ್ರ ಬೊಂಬಾಯಿಯ ಎಲ್ಲೊ ಒಂದೆಡೆ ದೊರೆತಿತ್ತು. ಕಾರಿನಲ್ಲಿದ್ದ ವಸ್ತುಗಳೂ ಕಳಿಸಿದ ವಿಳಾಸಕ್ಕೆ ತಲುಪಿರಲಿಲ್ಲ. ಒಂದು ವರ್ಷದ ಬಳಿಕ ಆತನು ಊರಿನಲ್ಲಿ ಅಲ್ಲೊಮ್ಮೆ ಇಲ್ಲೊಮ್ಮೆ ಕಾಣಿಸಿಕೊಂಡು ಮಮ್ಮೂಟಿ ಮತ್ತು ವಾಸುವಿನ ಕಣ್ಣು ತಪ್ಪಿಸಿ ಓಡಾಡತೊಡಗಿದ್ದನು. 186 ಸುಳಿ ಆದರೆ ವಾಸು ಅಷ್ಟು ಸುಲಭದಲ್ಲಿ ಅವನನ್ನು ಮರೆಯುವವನಾಗಿರಲಿಲ್ಲ. ಆತನು ಮಮ್ಮೂಟಿಯೊಡನೆ ಸಮಾಲೋಚಿಸಿದನು. “ಹೋಗಲಿ, ಅದಕ್ಕೇನು ಮಾಡುವುದು?” ಎಂದನು ಮಮ್ಮೂಟಿ. “ಹಾಗೆಂದರೆ ಹೇಗೆ? ಇವತ್ತು ನಾವು ಸುಮ್ಮನಿದ್ದರೆ ನಾಳೆ ಇನ್ನೊಬ್ಬ, ಆ ಮೇಲೆ ಮತ್ತೊಬ್ಬ ಇದೇ ವಂಚನೆ ಪ್ರಾರಂಭಿಸುತ್ತಾರೆ. ಇದರಲ್ಲೆಲ್ಲ ಪ್ರಾಮಾಣಿಕತೆ, ನಂಬಿಕೆ ಮುಖ್ಯ. ಒಬ್ಬ ತಪ್ಪು ಮಾಡಿದರೆ ಅವನಿಗೆ ಶಿಕ್ಷೆಯಾಗಲೇಬೇಕು. ಅದು ಉಳಿದವರಿಗೂ ಪಾಠವಾಗಬೇಕು. ಅದೂ ಅಲ್ಲದೆ ಅವನೀಗ ನಮ್ಮೊಡನೆ ಕೆಲಸ ಮಾಡುತ್ತಿಲ್ಲ. ಆದರೆ ನಮ್ಮ ಗುಟ್ಟುಗಳೆಲ್ಲ ಅವನಿಗೆ ಗೊತ್ತಿದೆ. ಅವನೇನಾದರೂ ಪೊಲೀಸರೆದುರಿಗೆ ಬಾಯಿ ಬಿಟ್ಟರೆ?...” “ನೀನು ಹೇಳುವುದೆನೊ ಸರಿಯೇ. ಆದರೆ ಪಾಠ ಕಲಿಸುವುದು ಹೇಗೆ? ಪೊಲೀಸ್ ಠಾಣೆಯಲ್ಲಿ ನಾವು ದೂರು ಕೊಡುವಂತಿಲ್ಲವಲ್ಲ?” “ಪೊಲೀಸರೆಲ್ಲ ಯಾಕೆ ಹಾಜಾರೇ, ನೀವು ‘ಹೂಂ’ ಅನ್ನಿ ಆತನನ್ನು ಇಲ್ಲವಾಗಿಸುವ ಕೆಲಸ ನನ್ನದು!” “ಆಂ...” ಮಮ್ಮೂಟಿ ಸ್ತಂಭಿತನಾದನು. ಸರಕಾರವನ್ನೇನೊ ಆತನು ತಿಳಿದೊ ತಿಳಿಯದೆಯೊ ವಂಚಿಸುತ್ತಿದ್ದನು. ಆದರೆ ಕೊಲೆಯಂತಹ ಹೀನ ಕೃತ್ಯಕ್ಕೆ ಆತನೆಂದೂ ಮುಂದಾಗಿರಲಿಲ್ಲ. ಈಗ ವಾಸು ಎಷ್ಟೊಂದು ಸಲೀಸಾಗಿ ಈ ಮಾತು ಹೇಳುತ್ತಿದ್ದಾನಲ್ಲ? “ಅದೆಲ್ಲ ಬೇಡ ವಾಸು. ಆ ಮೇಲೆ ನಾವು ಕೋರ್ಟು, ಕಛೇರಿ ಎಂದು ಅಲೆಯಬೇಕಾಗುತ್ತದೆ. ಇನ್ನು ಮುಂದೆ ಯಾರಾದರೂ ಅಂತಹ ಮೋಸ ಮಾಡಿದಾಗ ನೋಡುವಾ.” ಔದಾಸೀನ್ಯದಿಂದ ನುಡಿದನಾತ. ಕೊಲೆಯಂತಹ ಹೀನ ಕೃತ್ಯಕ್ಕೆ ಒಪ್ಪಿಗೆ ನೀಡುವಂತಹ ಮನೋಬಲ ಆತನಿಗಿರಲಿಲ್ಲ. “ನಿಮಗೆ ಭಯವಾಗುವುದಾದರೆ ಈ ದೃಶ್ಯದಲ್ಲಿ ನೀವು ಕಾಣಿಸಿಕೊಳ್ಳುವುದೇ ಬೇಡ. ನೀವು ‘ಹೂಂ’ ಅಂದರೆ ಸಾಕು ಮುಂದಿನದು ನನಗೆ ಬಿಡಿ” ಪಟ್ಟು ಬಿಡದೆ ನುಡಿದನು ವಾಸು. ಮಮ್ಮೂಟಿ ಯೋಚನಾ ಮಗ್ನನಾದನು. ತಾನು ಈ ಚಾಲಕರಿಗೆ ಎಷ್ಟೆಲ್ಲಾ ನೀಡಿದೆ? ಬೀದಿ ಭಿಕಾರಿಗಳಾಗಿದ್ದವರು ಕಾರು, ಮನೆಗಳ ಒಡೆಯರಾದರು. ಸುಂದರಿಯರಾದ ಹುಡುಗಿಯರನ್ನು ಮದುವೆಯಾದರು. ಎಂದೂ ಕಂಡೂ ಕೇಳರಿಯದ ಸಾಮಾನುಗಳು ಮನೆ ತುಂಬಿದುವು. ಆದರೂ ಇಂತಹ ಕೆಲವರು ತನ್ನನ್ನು ವಂಚಿಸಲು ಮುಂದಾಗುತ್ತಾರಲ್ಲ? ವಾಸು ಹೇಳುವುದೇ ಸರಿ. ಪ್ರವಾಹ 187 ಇಂತಹವರಿಗೆ ಸಮನಾದ ಶಿಕ್ಷೆಯಾಗಲೇ ಬೇಕು! ಆದರೂ... ಒಬ್ಬ ಮನುಷ್ಯನನ್ನು ಇಲ್ಲವಾಗಿಸುವುದೆಂದರೆ... “ಬೇಡ ವಾಸು. ಹೇಗಾದರೂ ಬದುಕಿಕೊಳ್ಳಲಿ ಬಿಡು” ಮಮ್ಮೂಟಿ ಅರೆ ಮನಸ್ಸಿನಿಂದ ನುಡಿದನು. “ನೀವು ಯಾವುದಕ್ಕೂ ಬರಬೇಡಿ ಹಾಜಾರರೆ ನಿಮಗೆ ಯಾವುದೂ ತಿಳಿಯದಿದ್ದರೆ ಸಾಕಲ್ಲವಾ?” ಒಡೆಯನ ಮನದ ತುಮುಲ ಸೇವಕನಿಗೆ ಅರ್ಥವಾಗಿತ್ತು. ಒಂದೆರಡು ದಿನ ಕಳೆದಿದ್ದುವು. ಆ ದಿನ ಮಧ್ಯರಾತ್ರಿ ಲತೀಫನ ಮನೆ ಬಾಗಿಲನ್ನು ಆದಾರೊ ಬಡಿದರು. ಆತನು ನಿದ್ದೆ ಗಣ್ಣಿನಲ್ಲಿ ಎದ್ದು ಬಾಗಿಲು ತೆರೆದನು. ಯಾರು, ಏನು ಎಂದು ಕೇಳುವಷ್ಟರಲ್ಲಿ ಕೆಲವರು ಆತನನ್ನು ಬಲಾತ್ಕಾರದಿಂದ ಎಳೆದುಕೊಂಡು ಹೋಗಿ ಕಾರಿನೊಳಗೆ ತಳ್ಳಿಯಾಗಿತ್ತು. ಕಾರು ಹೊರಟ ಸದ್ದೊಂದೇ ಆತನ ತಾಯಿಗೆ ಕೇಳಿಸಿದ್ದು. ಅರ್ಧ ರಾತ್ರಿಯಲ್ಲಿ ಒಂದು ಕಾರು ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಿತು. ಅದರೊಳಗಿಂದ “ನನ್ನನ್ನು ಕೊಲ್ಲ ಬೇಡಿ, ನನ್ನನ್ನು ರಕ್ಷಿಸಿ” ಎಂದು ಗಂಡಸೊಬ್ಬನು ಕರುಣಾಜನಕವಾಗಿ ಕೂಗಿಕೊಂಡದ್ದನ್ನು ರಾತ್ರಿಯ ನೀರವತೆಯಲ್ಲಿ, ನಿದ್ರೆಯ ಮಂಪರಿನಲ್ಲಿ ಕೇಳಿದವರಿದ್ದಾರೆ. ಆದರೆ, ಈ ಕಾರು ಯಾರದು, ಅದರಲ್ಲಿ ಯಾರಿದ್ದಾರೆ, ಅದು ಎಲ್ಲಿಗೆ ಹೋಗುತ್ತಿದೆ ಎಂದು ವಿಚಾರಿಸಬೇಕೆಂದು ಯಾರಿಗೂ ಅನ್ನಿಸಲಿಲ್ಲ. ಒಂದು ವೇಳೆ ಅನ್ನಿಸಿದ್ದರೂ ಆ ಅರ್ಧ ರಾತ್ರಿಯಲ್ಲಿ ಹೊರ ಬಂದು ಹಾಗೆ ವಿಚಾರಿಸುವ ಎದೆಗಾರಿಕೆ ಇದ್ದವರಾರೂ ಬಹುಶಃ ಅಲ್ಲಿರಲಿಲ್ಲ. ಲತೀಫ್ ಎಂಬ ಯುವಕನೊಬ್ಬನು ಮರುದಿನದಿಂದ ಊರಲ್ಲಿ ಕಾಣೆಯಾದದ್ದು ಮಾತ್ರ ಎಲ್ಲರಿಗೂ ಗೊತ್ತಿತ್ತು. ಮತ್ತು ಯಾವುದೊ ಒಂದೆಡೆ ಸಮುದ್ರ ತೀರದಲ್ಲಿ ಯುವಕನೊಬ್ಬನ ಗುರುತು ಹಿಡಿಯಲಾಗದ ಮೃತದೇಹವೊಂದು ಬಿದ್ದಿತ್ತೆಂದು ಸ್ಥಳೀಯ ಪತ್ರಿಕೆಯೊಂದರೆ ಒಳಪುಟದ ಮೂಲೆಯೊಂದರಲ್ಲಿ ಪ್ರಕಟವಾಗಿತ್ತು. ಮುಖಪುಟದಲ್ಲಿ ಭಾವಚಿತ್ರದೊಡನೆ ಅಚ್ಚಾಗಲು ಆತನೇನು ಮಂತ್ರಿಗಳ ಮೊಮ್ಮಗನೇ? ಆತನಿಗಾಗಿ ಹುಡುಕಾಟ ನಡೆಸುವಂತಹ ಬಂಧುಗಳೂ ಇರಲಿಲ್ಲ. ಆತನ ತಾಯಿ ಮಾತ್ರ ಆ ಮೇಲೆ ಗುರುತಿನವರನ್ನು ಕಂಡೊಡನೆ ಅಳುತ್ತ ಕೇಳುತ್ತಿದ್ದಳು, “ನನ್ನ ಮಗನನ್ನು ಕಂಡಿದ್ದಿರಾ? ನನ್ನ ಲತೀಫನನ್ನು?” ಮಮ್ಮೂಟಿ ಮಾತ್ರ ಎಲ್ಲರಿಗೂ ಅಕ್ಕಿ, ಬೇಳೆ, ಚಾಹುಡಿ, ಸಕ್ಕರೆ ಪಡೆಯಲು ತನ್ನ ಹೆಸರಿನ ಕಾರ್ಡು ನೀಡಿದಂತೆ ಆ ತಾಯಿಗೂ ಒಂದು ಕಾರ್ಡು ಕಳಿಸಿದ್ದನು. 188 ಸುಳಿ “ಏನು ಹಾಜಾರೇ, ಏನು ಯೋಚಿಸುತ್ತಿದ್ದೀರಿ?” ವಾಸು ಮಮ್ಮೂಟಿಯನ್ನು ಎಚ್ಚರಿಸಿದನು. “ನೀನು ಏನು ಹೇಳ್ತಾ ಇದ್ದಿ ಎಂದೇ ನನಗರ್ಥವಾಗುತ್ತಿಲ್ಲ. ಓರ್ವ ಡಿ.ಎಸ್.ಪಿ. ಸಾಹೇಬರನ್ನು ಇಲ್ಲವಾಗಿಸುವುದು ಲತೀಫನನ್ನು ಮಾಯವಾಗಿಸಿದಷ್ಟು ಸುಲಭವೆಂದುಕೊಂಡೆಯಾ?” “ಸುಲಭವೊ ಕಷ್ಟವೊ ಅದೆಲ್ಲ ನಾನು ನೋಡಿಕೊಳ್ತೇನೆ ನೀವು ‘ಹೂಂ’ ಅನ್ನಿ” ಮಮ್ಮೂಟಿ ಯೋಚನಾಪರನಾದನು. ಲತೀಫ್ ತನ್ನ ಬಳಿ ಕೆಲಸ ಮಾಡಿ ತನಗೆ ಮೋಸ ಮಾಡಿದವನು. ಅವನ ವಿಷಯವನ್ನು ವಾಸುವಿಗೇ ಬಿಟ್ಟಿದ್ದೆ. ತನಗೂ ಅದಕ್ಕೂ ಏನೂ ಸಂಬಂಧವಿಲ್ಲದಂತೆ ನಡೆದುಕೊಂಡಿದ್ದೆ. ಆದರೆ ಈಗ ಈತ ಹೇಳುತ್ತಿರುವುದು ತನ್ನ ಕರ್ತವ್ಯ ನಿರ್ವಹಿಸುತ್ತಿರುವ ಓರ್ವ ಪೊಲೀಸ್ ಅಧಿಕಾರಿಯ ಕುರಿತು. ಅಷ್ಟು ಮಾತ್ರವಲ್ಲ ಮಮ್ಮೂಟಿಯ ಸ್ಮೃತಿ ಪಟಲದಲ್ಲಿ ಬಹಳ ಹಿಂದಿನ ಕೆಲವು ಚಿತ್ರಗಳೂ ಕೂಡಾ ಮೂಡತೊಡಗಿದುವು. ಬಹಳ ಹಿಂದೆ ತಾನು ಜೊಹರಕ್ಕನ ಮನೆಗೆ ತರಕಾರಿ, ತಿಂಡಿ ತಿನಿಸು ಹೊತ್ತು ಕೊಂಡೊಯ್ಯುತ್ತಿದ್ದ ದಿನಗಳವು. ಪುಟ್ಟ ಏಳೆಂಟು ವರ್ಷದ ನವಾಜ್ ಬ್ಯಾಟು, ಬಾಲು ಹಿಡಿದು ತನ್ನೊಡನೆ ಚೆಂಡು ಹಾಕಲು ಹೇಳುತ್ತಿದ್ದನು. ತನ್ನನ್ನು ತೋಟದ ಕೊಳದ ಬಳಿಗೆ ಕರೆದೊಯ್ದು “ನನಗೆ ಈಜು ಕಲಿಸು” ಎಂದು ಗೋಗರೆದು ತನ್ನಿಂದ ಈಜು ಕಲಿತುಕೊಂಡಿದ್ದನು. ಒಮ್ಮೆ ತನ್ನ ಹರಿದ ಅಂಗಿಯನ್ನು ಕಂಡು ತನ್ನ ತಾಯಿಯೊಡನೆ, “ಉಮ್ಮಾ, ಮಮ್ಮೂಟಿಯ ಬಳಿ ಒಳ್ಳೆಯ ಅಂಗಿ ಇಲ್ಲವಾ? ನೀವ್ಯಾಕೆ ಅವನಿಗೆ ಅಂಗಿ ಹೊಲಿಸಿಕೊಡುವುದಿಲ್ಲ?” ಎಂದು ಜೊಹರಕ್ಕಳೊಡನೆ ಹೇಳಿ ತನಗೊಂದು ಶರ್ಟುಕೊಳ್ಳಲು ಹಣ ಕೊಡಿಸಿದ್ದನು. ಇನ್ನೂ ಚಿಕ್ಕವನಿದ್ದಾಗ ತನ್ನ ಬಳಿಯಲ್ಲಿ ಕುಳಿತು ತನ್ನ ತಟ್ಟೆಯಲ್ಲಿ ತನ್ನೊಡನೆ ಊಟ ಮಾಡಿದ್ದನು! ಅಂತಹ ಮಗುವನ್ನು, ಇನ್ನೂ ಈ ಲೋಕದಲ್ಲಿ ಪ್ರೀತಿ, ವಾತ್ಸವಲ್ಯವನ್ನು ಧಾರಾಳವಾಗಿ ಸುರಿಯಬಲ್ಲವರಿದ್ದಾರೆ. ತನ್ನ ಎಲ್ಲ ತಪ್ಪುಗಳನ್ನೂ ವಿಶಾಲ ಹೃದಯದಿಂದ ಕ್ಷಮಿಸಬಲ್ಲವರಿದ್ದಾರೆ ಎಂದು ತೋರಿಸಿಕೊಟ್ಟ ಆ ಮಹಾತಾಯಿ ಜೊಹರಕ್ಕನ ಮಗನನ್ನು ತಾನು ಏನಾದರೂ ಮಾಡುವುದೇ? ಮೊನ್ನೆಕೂಡಾ ಜೊಹರಕ್ಕ ತನ್ನೊಡನೆ ಹಿಂದಿನ ಯಾವ ಕಹಿಯನ್ನೂ ಇಟ್ಟುಕೊಳ್ಳದೆ ಓರ್ವ ಹಿರಿಯಕ್ಕನಂತೆ ಎಷ್ಟೊಂದು ಆತ್ಮೀಯತೆಯಿಂದ ಮಾತನಾಡಿಸಿದಳು! ಪ್ರವಾಹ 189 “ಅದಾಗದು ವಾಸು” ಮಮ್ಮೂಟಿ ಸಿಟ್ಟಿನಿಂದ ನುಡಿದನು. “ಈ ಒಂದು ವಿಷಯದಲ್ಲಿ ನೀನು ತಲೆ ಹಾಕಬಾರದು. ನವಾಜ್‍ನ ವಿಷಯ ನನಗೆ ಬಿಡು. ನೀನು ಅವನಿಗೇನಾದರೂ ಹಾನಿ ಮಾಡಿದರೆ ನಮ್ಮ ಸಂಬಂಧ ಮುರಿಯಿತೆಂದೇ ತಿಳಿದುಕೊ.” ಮಮ್ಮೂಟಿ ದೃಢ ಸಂಕಲ್ಪದಿಂದ ಆಜ್ಞೆ ಮಾಡಿದರೆ ಅದನ್ನು ಮೀರುವುದು, ವಾಸುವಿನಿಂದಲೂ ಸಾಧ್ಯವಿಲ್ಲ. ಮಮ್ಮೂಟಿ ಮತ್ತು ನವಾಜ್‍ನ ಸಂಬಂಧದ ಆಳವಾದ ಪರಿಚಯವಿಲ್ಲದ ವಾಸು ಗೊಣಗಿಕೊಂಡನು, “ಇಂತಹ ವ್ಯವಹಾರಗಳಲಿ ಭಾವನಾತ್ಮಕ ಸಂಬಂಧಗಳಿಗೆ ಬೆಲೆ ಕೊಡಬಾರದು!” “ಆತ ಇಲ್ಲಿಂದ ವರ್ಗವಾಗಿ ಹೋಗಲಿ ಅಷ್ಟು ಸಾಕು.” “ಆಗಲಿ ನನಗೇನಂತೆ? ನಮ್ಮ ವ್ಯವಹಾರಕ್ಕೆ ಧಕ್ಕೆಯಾಗದಿದ್ದರೆ ಸರಿ.” ಅಷ್ಟರಲ್ಲಿ ವಯರ್‍ಲೆಸ್ ಸೆಟ್ಟು ಶಬ್ದ ಮಾಡಿತು. ಮಮ್ಮೂಟಿ ಗುಪ್ತ ಸಂದೇಶವನ್ನು ಮನನ ಮಾಡಿಕೊಂಡು ವಾಸುವಿನೊಡನೆ “ಹೂಂ. ನಾಳೆ ರಾತ್ರಿಗೆ ಎಲ್ಲ ಏರ್ಪಾಡು ಮಾಡು. ಪೇಟೆಯಲ್ಲಿ ಒಳ್ಳೆಯ ಹಣ್ಣುಗಳಿರಬಹುದಲ್ಲವಾ? ಬೇಳೆ, ಎಣ್ಣೆ, ಹಾಲಿನ ಡಬ್ಬಗಳೂ ಸಾಕಷ್ಟಿರಲಿ” ಎಂದು ತಿಳಿಸಿದ ಬಳಿಕ ಎಬ್ಬರೂ ತಮ್ಮ ತಮ್ಮ ಮನೆಗಳಿಗೆ ತೆರಳಿದರು. ಮಮ್ಮೂಟಿಗೆ ಹೊಸ ಚಿಂತೆಯೊಂದು ಹತ್ತಿಕೊಂಡಿತು. ನವಾಜ್‍ಗೆ ಏನಾದರೂ ಅಪಾಯವಾದೀತೇ? ಅವನನ್ನು ಆದಷ್ಟು ಬೇಗನೆ ಇಲ್ಲಿಂದ ಕಳುಹಿಸಿ ಬಿಡಬೇಕು! ಮರುದಿನ ಮಮ್ಮೂಟಿ ತನ್ನಳಿಯ ಹಮೀದ್‍ನನ್ನು ಪೇಟೆಗೆ ಕಳುಹಿಸಿ, ತಾನೂ ಸಾಕಷ್ಟು ಹಣ್ಣು ಹಂಪಲು ಮತ್ತಿತರ ಸಾಮಾನುಗಳನ್ನು ಶೇಖರಿಸಿದನು. ಈ ವ್ಯಾಪಾರವನ್ನು ದೂರದಲ್ಲಿ ಸಾಮಾನ್ಯ ಉಡುಪಿನಲ್ಲಿದ್ದ ಪೊಲೀಸ್ ಪೇದೆಯೊಬ್ಬನು ಗಮನಿಸುತ್ತಿದ್ದುದು ಯಾರ ಗಮನಕ್ಕೂ ಬರಲಿಲ್ಲ. ಮಮ್ಮೂಟಿ ಕೆಲವು ಕಾರು ಚಾಲಕರಿಗೂ ಸೂಚನೆಯಿತ್ತನು. ಊರು ಮಲಗಿದ ಬಳಿಕವಷ್ಟೆ ಈ ಸಾಮಾನುಗಳ ವಿಲೆವಾರಿ. ರಾತ್ರಿ ಹನ್ನೆರಡು ಗಂಟೆಗೆ ವಯರ್‍ಲೆಸ್ ಸೆಟ್‍ನಲ್ಲಿ ‘ನಾವು ಇಲ್ಲಿದ್ದೇವೆ. ಆದಷ್ಟು ಬೇಗ ಕಳಿಸಿ’ ಎಂದ ಸಂದೇಶ ದೊರೆತೊಡನೆ ಅಲ್ಲಿಂದ ಹೊರಬಂದು ಕಾರು ಹತ್ತಿ ಸಮುದ್ರ ತೀರಕ್ಕೆ ಹೋದನು ಮಮ್ಮೂಟಿ. ದೂರದ ಸಮುದ್ರ ಮಧ್ಯದಲ್ಲಿ ದೀಪವೊಂದು ಆಗಾಗ ಹೊತ್ತಿಕೊಂಡು ಆರುತ್ತಿತ್ತು. ಮಮ್ಮೂಟಿ ಮತ್ತೊಮ್ಮೆ ಸುತ್ತಲೂ ನೋಡಿ ಯಾರೂ ಇಲ್ಲವೆಂದು ಖಾತ್ರಿ ಮಾಡಿಕೊಂಡು 190 ಸುಳಿ ಸೀದಾ ನದಿ ತೀರಕ್ಕೆ ಹೋದನು. ವಾಸು, ಹಮೀದ್ ಮತ್ತು ಇನ್ನೂ ಒಂದಿಬ್ಬರು ಕಾರುಗಳೊಡನೆ ಆಗಲೇ ನದೀ ತೀರದಲ್ಲಿದ್ದರು. ಮಮ್ಮೂಟಿ ಕಾರಿನಿಂದಿಳಿದೊಡನೆ ಎಲ್ಲರೂ ಒಟ್ಟುಗೂಡಿ ಕಾರಿನಲ್ಲಿದ್ದ ಹಣ್ಣು ಮತ್ತಿತರ ಸಾಮಾನುಗಳನ್ನು ದೋಣಿಯಲ್ಲಿ ತುಂಬಿಸಿದರು. ಮಮ್ಮೂಟಿ ವಾಸು ಮತ್ತು ಹಮೀದ್‍ನೊಡನೆ ದೋಣಿ ಹತ್ತಿದನು. ದೋಣಿ ಇನ್ನೇನು ದಡ ಬಿಡಬೇಕು ಎನ್ನುವಷ್ಟರಲ್ಲಿ, “ನಿಲ್ಲಲ್ಲಿ!” ಎಂಬ ಗರ್ಜನೆ ದಡದಿಂದ ಕಿವಿಗಪ್ಪಳಿಸಿತು. “ಯಾರದು?...” ಮಮ್ಮೂಟಿ ಕೂಡಾ ಗರ್ಜಿಸಿದನು. “ನಾನು..... ನಿನ್ನ ಅಪ್ಪ!” ಮತ್ತೊಮ್ಮೆ ತೀರದಿಂದ ಗರ್ಜನೆ ದೋಣಿಗಪ್ಪಳಿಸಿತು. ದೋಣಿಯಲ್ಲಿದ್ದವರಿಗೆ ಧ್ವನಿಯ ಗುರುತು ಹತ್ತಿತ್ತು. “ಡಿ.ಎಸ್.ಪಿ. ಸಾಹೇಬರು!” ವಾಸು ಪಿಸುಗುಟ್ಟುವುದೂ, “ಹಾರಿ ಬಿಡಿ” ಎನ್ನುತ್ತಾ ಮಮ್ಮೂಟಿ ನೀರಿಗೆ ಹಾರುವುದೂ ಟಾರ್ಚ್ ಬೆಳಕು ಎಲ್ಲರ ಮೇಲೆ ಹಾಯುವುದೂ ಏಕಕಾಲದಲ್ಲಾಯಿತು. ಗರ್ಜನೆ ಕೇಳಿದೊಡನೆ ಮಮ್ಮೂಟಿಯ ಕಾರನ್ನು ಬಿಟ್ಟು ಉಳಿದ ಕಾರುಗಳೆಲ್ಲವೂ ಪರಾರಿಯಾದವು. ನವಾಜ್ ತನ್ನೊಡನಿದ್ದ ಪೇದೆಯ ಕೈಗೆ ಟಾರ್ಚನ್ನಿತ್ತು ತಾನು ದೋಣಿಯಲ್ಲಿಳಿದನು. ನೀರಿಗೆ ಹಾರಿದವರು ಜೀವದ ಹಂಗು ತೊರೆದು ಶಕ್ತಿ ಮೀರಿ ಈಜುತ್ತಾ ದೂರ ದೂರ ಸರಿದು ಹೋದರು. ಕೊಂಚ ಕಾಲ ದೋಣಿಯಲ್ಲಿ ನಿಂತು ಟಾರ್ಚಿನ ಬೆಳಕಿನಲ್ಲಿ ಎಲ್ಲವನ್ನೂ ನೋಡಿದ ನವಾಜ್ ಬಳಿಕ ದೋಣಿಯ ಹಗ್ಗವನ್ನು ತಂದು ಅಲ್ಲೇ ಇದ್ದ ಕಂಬಕ್ಕೆ ಕಟ್ಟಿದನು. ಬಳಿಕ ಪೇದೆಯೊಡನೆ, “ಬೆಳಿಗ್ಗೆ ನಾನು ಬರುವವರೆಗೆ ಇಲ್ಲೇ ಇರಬೇಕು” ಎಂದು ಆಜ್ಞೆ ಮಾಡಿ ಮಮ್ಮೂಟಿಯ ಕಾರಿನ ನಂಬರನ್ನು ಬರೆದುಕೊಂಡು ದೂರದಲ್ಲಿ ನಿಲ್ಲಿಸಿದ್ದ ತನ್ನ ಜೀಪು ಹತ್ತಿ ಮನೆಗೆ ಧಾವಿಸಿದನು. ಆತ ಮಲಗಿದರೂ ಕೂಡಲೇ ನಿದ್ದೆ ಹತ್ತಲಿಲ್ಲ. ಛೆ, ಎಂತಹ ಅವಕಾಶ ತಪ್ಪಿ ಹೋಯಿತಲ್ಲ! ಮಾಲು ಸಹಿತ ಮಮ್ಮೂಟಿಯನ್ನು ಬಂಧಿಸುವ ಅವಕಾಶ ತಪ್ಪಿತು. ಹಣ್ಣುಗಳನ್ನು ಕೊಂಡೊಯ್ದು ಅಲ್ಲಿಂದ ಚಿನ್ನದ ಗಟ್ಟಿಗಳನ್ನು ತರುವವರೆಗೂ ತಾನು ಸಹನೆಯಿಂದ ಕಾಯಬೇಕಾಗಿತ್ತು. ದೋಣಿಯಲ್ಲಿ ಬೆಳ್ಳಿಯ ಗಟ್ಟಿಗಳಿರಬಹುದೆಂಬ ತನ್ನ ಊಹೆ ಕೂಡಾ ತಲೆ ಕೆಳಗಾಯಿತು! ಆದರೂ ಮಮ್ಮೂಟಿಯ ಕಾರಿನ ಒಂದು ಸಾಕ್ಷ್ಯವಾದರೂ ಇದೆಯಲ್ಲ ಎಂದೆಲ್ಲ ಯೋಚಿಸುತ್ತಾ ಮಲಗಿದ್ದಂತೆ ಕೊನೆಗೂ ಪ್ರವಾಹ 191 ಜೊಂಪು ಹತ್ತಿತ್ತು. ಬೆಳಿಗ್ಗೆ ಆರು ಗಂಟೆಗೆಲ್ಲಾ ಎದ್ದು ಸಿದ್ಧನಾಗಿ ಪುನಃ ನದೀ ತೀರಕ್ಕೆ ಹೋದನು. ಅಲ್ಲಾಗಲೇ ಜನ ಸೇರಿ ದೋಣಿಯೊಳಗಿನ ಸಾಮಾನುಗಳನ್ನು ನೋಡುತ್ತಾ ತಮ್ಮ ತಮ್ಮೊಳಗೆ ಗೊಣಗುತ್ತಿದ್ದರು. ಮಮ್ಮೂಟಿಯ ಕಾರಿನ ಪರಿಚಯವಿದ್ದರು ಅರ್ಥಗರ್ಭಿತವಾಗಿ ಮುಗುಳ್ನಗುತ್ತಿದ್ದರು. “ಈ ಬಾರಿ ಹಾಜಾರರು ಸಿಕ್ಕಿ ಬಿದ್ದಂತೆಯೇ. ಹಾಜಾರರ ಕಾರು ಇಲ್ಲೇ ಇದೆಯಲ್ಲ?” ಎಂದೂ ಕೆಲವರಂದುಕೊಂಡರು. ನವಾಜ್ ಬಂದವನೇ ಪೇದೆಯನ್ನು ಪೇಟೆಗೆ ಕಳುಹಿಸಿ ಟೆಂಪೊ ಒಂದನ್ನು ತರಿಸಿ ದೋಣಿಯಲ್ಲಿನ ಸಾಮಾನುಗಳನ್ನು ಟೆಂಪೊದಲ್ಲಿ ತುಂಬಿಸಿ ಪೊಲೀಸ್ ಠಾಣೆಗೆ ಕೊಂಡೊಯ್ದು ವಿವರಗಳನ್ನು ಬರೆಯತೊಡಗಿದನು. ಅಷ್ಟರಲ್ಲಿ ಅಲ್ಲಿ ಮಮ್ಮೂಟಿ ಪ್ರತ್ಯಕ್ಷನಾದನು. ‘ಎಲಾ ಇವನ ಧೈರ್ಯವೇ!’ ಎಂದು ನವಾಜ್ ಮನದಲ್ಲಂದು ಕೊಂಡರೂ ತೋರ್ಪಡಿಸಿಕೊಳ್ಳದೆ, “ಏನು ಬಂದೆ?” ಎಂದು ಕೇಳಿದನು. “ನನ್ನ ಕಾರು ಕಳವಾಗಿದೆ! ದೂರು ಕೊಡುವಾ ಎಂದು ಬಂದೆ ಸಾರ್!” ಎಂದು ಮುಗುಳ್ನಗುತ್ತಾ ನುಡಿದನು ಮಮ್ಮೂಟಿ. “ಒಂದು ಕಾರು ತಾನೇ ಕಳವಾಗಿರುವುದು? ಆಗಲೇ ಪ್ರತಿವ್ಯೂಹ ಕೂಡಾ ರಚಿಸಿ ಬಿಟ್ಟೆ! ಅಲ್ಲವಾ? ರಾತ್ರಿಯೇನಾದರೂ ನನ್ನ ಕೈಗೆ ಸಿಕ್ಕಬೇಕಾಗಿತ್ತು!” ಕೋಪದಿಂದ ಹಲ್ಲು ಕಡಿಯುತ್ತಾ ನುಡಿದನಾತ. “ನೀವು ಏನು ಹೇಳ್ತಾ ಇದ್ದೀರಿ ಸಾರ್? ನನಗೊಂದೂ ತಿಳಿಯದು!” “ನಿನ್ನ ಈ ನಟನೆಯಲ್ಲಾ ನನ್ನ ಬಳಿ ಬೇಡ ಮಮ್ಮೂಟಿ. ಈ ಬಾರಿ ನೀನು ಬದುಕಿಕೊಂಡೆ. ಆದರೆ ಯಾವಾಗಲೂ ಹೀಗೆಯೇ ತಪ್ಪಿಸಿಕೊಳ್ಳಬಹುದೆಂದು ತಿಳಿಯಬೇಡ” ಎನ್ನುತ್ತಾ “ಕಾರಿನ ವಿಷಯ ಎಸ್. ಐ.ಗೆ ತಿಳಿಸು” ಎಂದು ತನ್ನ ಕೆಲಸದಲ್ಲಿ ಮಗ್ನನಾದನು. ಅಲ್ಲಿಗೆ ಈ ಪ್ರಕರಣ ಕೊನೆಗೊಂಡಿತು. ಆದರೆ ವಾಸು ಮಮ್ಮೂಟಿಯನ್ನು ಚುಚ್ಚಿಸಿದನು, “ನಮ್ಮ ಹಾದಿಯಲ್ಲಿ ಈ ಮುಳ್ಳುಬೇಡಾಂತ ನಾನಾವತ್ತೇ ಹೇಳಿದೆ. ಕೇಳಿದಿರಾ? ಇಲ್ಲೆಲ್ಲ ಹೃದಯ ಮೃದುವಾದರೆ ಬಹಳ ದೊಡ್ಡ ಬೆಲೆಯನ್ನೇ ತೆರಬೇಕಾಗುತ್ತದೆ!” “ಇನ್ನು ಕೆಲವು ದಿನ ತಾಳು. ಗೃಹ ಮಂತ್ರಿಗಳೊಮ್ಮೆ ಊರಿಗೆ ಬರಲಿ” ಎಂದನು ಮಮ್ಮೂಟಿ. 192 ಸುಳಿ ಮುಂದಿನ ಬಾರಿ ಗೃಹ ಮಂತ್ರಿಗಳು ಬಂದಾಗ ಸರ್ಕಾರೀ ಅತಿಥಿ ಗೃಹದಲ್ಲಿ ದೊಡ್ಡದೊಂದು ಔತಣ ಕೂಟದ ಏರ್ಪಾಟಾಗಿತ್ತು. ಔತಣ ನೀಡುವವರು ಮೇಲ್ನೋಟಕ್ಕೆ ಶಾಸಕರಾದರೂ ಖರ್ಚು ವೆಚ್ಚಗಳೆಲ್ಲವೂ ಮಮ್ಮೂಟಿಯದು. ಸುಂಕಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಜಿಲ್ಲಾಧಿಕಾರಿಗಳೆಲ್ಲರೂ ಆಮಂತ್ರಿಸಲ್ಪಟ್ಟಿದ್ದರು. ನವಾಜ್‍ನನ್ನು ಆಮಂತ್ರಿಸಲು ಮಮ್ಮೂಟಿ ಆತನ ಮನೆಗೆ ಹೋದನು. ನವಾಜ್ ಆಗ ತಾನೇ ಊಟ ಮುಗಿಸಿ ಹೊರಗೆ ಕುಳಿತಿದ್ದನು. ಕಾರು ಬಂದು ನಿಂತ ಶಬ್ದ ಕೇಳಿ ಕುಳಿತಲ್ಲಿಂದಲೇ ತಲೆ ಎತ್ತಿದನು. ಮಮ್ಮೂಟಿ ಕಾರಿನಿಂದಿಳಿದು ನವಾಜ್‍ನ ಬಳಿಗೆ ಬಂದನು. “ಓ... ಹಾಜಾರರು? ಏನಿಷ್ಟು ದೂರ ಬಂದಿರಿ?” ನವಾಜ್ ಕುಳಿತಲ್ಲಿಂದಲೇ ಪ್ರಶ್ನಿಸಿದನು. ಬಂದಾತನನ್ನು ಕುಳಿತುಕೊಳ್ಳಲೂ ಹೇಳಲಿಲ್ಲ. ಮಮ್ಮೂಟಿ ತಾನಾಗಿಯೇ ಇನ್ನೊಂದು ಕುರ್ಚಿಯಲ್ಲಿ ಕುಳಿತುಕೊಂಡು, “ಇನ್ನೇನಿಲ್ಲ. ಗೃಹ ಮಂತ್ರಿಗಳು ಊರಿಗೆ ಬರ್ತಿದ್ದಾರೆ. ಎಮ್ಮೆಲ್ಲೆಗಳು ಅವರಿಗೊಂದು ಔತಣ ಕೊಡುವಾಂತ ಇದ್ದಾರೆ. ನೀವೂ ಬರಬೇಕು ಎಂದು ಹೇಳಿ ಹೋಗಲು ಬಂದೆ” ಎಂದನು. “ಮಂತ್ರಿಗಳ ಊಟಕ್ಕೆ ನಾನೇಕೆ? ಅತಿಥಿ ಗೃಹದಲ್ಲಿ ಎಲ್ಲ ಬಂದೋಬಸ್ತುಮಾಡಿಸ್ತೇನೆ. ನನ್ನನ್ನು ನನ್ನಷ್ಟಕ್ಕೆ ಬಿಡು ಮಮ್ಮೂಟಿ” ಎಂದು ಕೊಂಚ ಅಸಹನೆಯಿಂದಲೇ ನುಡಿನು. “ಗೃಹ ಮಂತ್ರಿಗಳು ಊರಿಗೆ ಬರುವಾಗ ಊರಿನ ಪೊಲೀಸ್ ಅಧಿಕಾರಿಗಳು ಇಲ್ಲದಿದ್ದರೆ ಹೇಗೆ? ದಯವಿಟ್ಟು ಪಾರ್ಟಿಗೆ ನೀವು ಬರಲೇಬೇಕು.” “ನಿನ್ನ ಪಾರ್ಟಿಗೆ ಬರಲು ಬೇಕಾದಷ್ಟು ಜನರು ತುದಿಗಾಲಲ್ಲಿ ನಿಂತಿರುತ್ತಾರೆ. ನನ್ನನ್ನು ಮಾತ್ರ ಅವರಲ್ಲೊಬ್ಬನೆಂದುಕೊಳ್ಳಬೇಡ. ಅಂತಹ ಜನರೊಡನೆ ಓಡಾಡಿ ಪ್ರತಿಷೆ್ಠ ಮೆರೆಯುವ ಇಚ್ಛೆಯೂ ನನಗಿಲ್ಲ. ನನ್ನನ್ನು ಬಲವಂತ ಮಾಡಬೇಡ” ಎಂದು ಮುಂದೆ ಮಾತಿಗವಕಾಶ ಕೊಡದಂತೆ ಆತನು ಕುಳಿತಲ್ಲಿಂದ ಎದ್ದು ಒಳ ಹೋಗಲಣಿಯಾಗುತ್ತಾ, “ನೋಡು, ಮಮ್ಮೂಟೀ, ನಿನ್ನನ್ನೀ ಹೊತ್ತಿನಲ್ಲಿ ನನ್ನ ಮನೆಯಂಗಳದಲ್ಲಿ ನೋಡಿದವರು ಏನೇನೊ ಕತೆ ಕಟ್ಟುತ್ತಾರೆ. ನಿನ್ನೊಡನೆ ಈ ರೀತಿ ಕಾಣಿಸಿಕೊಳ್ಳುವ ಇರಾದೆಯೂ ನನಗಿಲ್ಲ” ಎನ್ನುತ್ತಾ ಒಳಗೆ ಹೋದನು. ಮಮ್ಮೂಟಿಗೆ ಕುದಿನೀರು ಮೈ ಮೇಲೆ ಬಿದ್ದಂತಾಯಿತು. “ಒಂದು ಅಧಿಕಾರ ಪ್ರವಾಹ 193 ಕೈಯಲ್ಲಿದೆಯೆಂದು ಇಷ್ಟೊಂದು ಧಿಮಾಕೇ? ಆಗಲಿ, ನೋಡುವಾ” ಎಂದು ಕೊಳ್ಳುತ್ತಾ ಎದ್ದು ಹೊರಟನಾತ. ಗೃಹ ಮಂತ್ರಿಗಳ ಪಾರ್ಟಿಯಲ್ಲಿ ಸ್ಥಳೀಯ ಲೋಕಸಭಾ ಸದಸ್ಯರೂ ವಿಧಾನ ಸಭಾ ಸದಸ್ಯರೂ ಆಡಳಿತ ಪಕ್ಷದ ಹಲವಾರು ಕಾರ್ಯಕರ್ತರೂ ಹಾಗೂ ಹಲವು ಸರಕಾರಿ ಅಧಿಕಾರಿಗಳೂ ಹಾಜರಿದ್ದರು. ಬಿರಿಯಾಣಿ, ಹುರಿದ ಕೋಳಿ, ಮಟ್ಟನ್ ಮಸಾಲ, ಚಿಕನ್ ಚಾಪ್ಸ್ ಎಂದು ಮೇಜಿನ ತುಂಬಾ ಇದ್ದ ಹಲವಾರು ಬಗೆಯ ಖಾದ್ಯ ಪದಾರ್ಥಗಳನ್ನು ಎಲ್ಲರೂ ಹೊಗಳಿ ಹೊಗಳಿ ಹೊಟ್ಟೆ ಬಿರಿಯುವಂತೆ ತಿಂದರು. ಊಟವಾದ ಬಳಿಕ ಮಮ್ಮೂಟಿ ಮಂತ್ರಿಗಳ ಬಳಿ ಬಂದು, “ತಮ್ಮೊಡನೆ ಖಾಸಗಿಯಾಗಿ ಸ್ವಲ್ಪ ಮಾತಾಡಬೇಕಿತ್ತು” ಎಂದನು. ಮಂತ್ರಿಗಳು ಆತನನ್ನು ತಮ್ಮ ಕೋಣೆಗೆ ಕರೆದೊಯ್ದು ಬಾಗಿಲು ಹಾಕಿ, “ಏನಾಗಬೇಕಿತ್ತು?” ಎಂದು ಕೇಳಿದರು. “ಸಾಹೇಬರೇ, ನಮಗೊಂದು ತೊಂದರೆ ಎದುರಾಗಿದೆಯಲ್ಲಾ?” “ಹೂಂ?...” ಪ್ರಶ್ನಾರ್ಥಕವಾಗಿ ನೋಡಿದರು ಮಂತ್ರಿಗಳು. “ಇನ್ನೇನಿಲ್ಲ... ಇಲ್ಲಿಗೆ ಹೊಸದಾಗಿ ಓರ್ವ ಪೊಲೀಸ್ ಅಧಿಕಾರಿ ಬಂದಿದ್ದಾನೆ. ಬಹಳ ಒಳ್ಳೆಯವನು! ಆದುದರಿಂದ ದಯವಿಟ್ಟು ಆದಷ್ಟು ಬೇಗ ಅವನನ್ನು ಇಲ್ಲಿಂದ ವರ್ಗ ಮಾಡಿಸಬೇಕು”. “ಓ... ಅಷ್ಟೇ ತಾನೇ? ಅದಿರಲಿ, ಈ ಬಾರಿ ಪಾರ್ಟಿ ಫಂಡಿಗೆ ಎಷ್ಟು ಕೊಡ್ತಿ?” “ಅದಕ್ಕೇನು? ನಾನು ಎಂದಾದರೂ ಇಲ್ಲ ಎಂದಿದ್ದೇನೆಯೇ?” ಎನ್ನುತ್ತಾ ಇಬ್ಬರೂ ನಗುತ್ತಾ ಕೋಣೆಯಿಂದ ಹೊರಬಂದರು. ಮಂತ್ರಿಗಳನ್ನು ಬೀಳ್ಕೊಡುವ ಮೊದಲು ಮಮ್ಮೂಟಿ ಮತ್ತೊಮ್ಮೆ, “ನಾನು ಹೇಳಿದ ಇನ್ನೊಂದು ವಿಷಯ ಜ್ಞಾಪಕವಿರಲಿ” ಎಂದು ಪಿಸುಗುಟ್ಟಿದನು. ಮಂತ್ರಿಗಳು ತಲೆಯಲ್ಲಾಡಿಸಿದರು. ಮತ್ತೂ ಐದಾರು ತಿಂಗಳೂ ಕಳೆದುವು. ಮಮ್ಮೂಟಿಯಿಂದ ನವಾಜ್‍ನನ್ನು ಅಲುಗಾಡಿಸಲಾಗಲಿಲ್ಲ. ಈಗ ಊರು ವಾಹನಗಳ ಅಡ್ಡಾದಿಡ್ಡಿ ಓಡಾಟವಿಲ್ಲದೆ ಬಹು ಮಟ್ಟಿಗೆ ಶಾಂತವಾಗಿತ್ತು. ಹೊಟೇಲುಗಳಿಗೆ ಕರೆವೆಣ್ಣಗಳ ಭೇಟಿಯೂ ನಿಂತು ಹೋಗಿತ್ತು. ಜನಸಾಮಾನ್ಯರು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಮಮ್ಮೂಟಿ ಮತ್ತೊಮ್ಮೆ ಗೃಹ ಮಂತ್ರಿಗಳನ್ನು ಕಾಣಲು ರಾಜಧಾನಿಗೆ ಪ್ರಯಾಣ ಬೆಳೆಸಿದನು. “ಅವನು ನಿಮ್ಮೂರಿಗೆ ಬಂದು ಇನ್ನೂ ಒಂದು ವರ್ಷವೂ ಆಗಿಲ್ಲ. ಅದು 194 ಸುಳಿ ಅಲ್ಲದೆ ಅವನನ್ನು ನಿಮ್ಮೂರಿಗೆ ವರ್ಗ ಮಾಡಲು ಕೆಂದ್ರ ಸರಕಾರದಿಂದಲೇ ಆಜ್ಞೆ ಬಂದಿತ್ತು. ಅವನನ್ನು ಅಷ್ಟು ಸುಲಭದಲ್ಲಿ ಅಲುಗಾಡಿಸಲು ಸಾಧ್ಯವಿಲ್ಲ!” ಎಂದರು ಮಂತ್ರಿಗಳು. ‘ಎಲಾ ಮಗನೇ, ನಿನಗೆ ಕೊಟ್ಟ ಸೂಟ್‍ಕೇಸುಗಳೆಲ್ಲ ಏನಾದುವು?’ ಎಂದು ಮಮ್ಮೂಟಿ ಮನದಲ್ಲಂದುಕೊಳ್ಳುತ್ತಾ, ಕೋಪವನ್ನು ಹತ್ತಿಕ್ಕಿಕೊಂಡು “ತಾವೇ ಹಾಗೆಂದರೆ ಹೇಗೆ ಸಾಹೇಬರೇ? ಆತನನ್ನು ಇಲ್ಲಿಂದ ಹೊರಡಿಸದೆ ನಮ್ಮ ವ್ಯವಹಾರ ಮುಂದುವರಿಸುವುದು ಸಾಧ್ಯವೇ ಇಲ್ಲ. ಚುನಾವಣಾ ನಿಧಿಗೆ ಎಲ್ಲಿಂದ ಸುರಿಯಲಿ?” ಎಂದು ಕೊಂಚ ಅಸಹನೆಯಿಂದಲೇ ಕೇಳಿದನು. ಚುನಾವಣಾ ನಿಧಿಯ ವಿಷಯ ಕೇಳಿದಾಗ ಮಂತ್ರಿಗಳ ಕಿವಿ ನೆಟ್ಟಗಾಯಿತು. “ಹೌದು ಮಮ್ಮೂಟಿಯವರೇ, ನೀವು ಹೇಳುವುದೇನೊ ಸರಿಯೇ. ಆದರೆ ಈ ಸಂದರ್ಭದಲ್ಲಿ ಓರ್ವ ಜನಪ್ರಿಯ ಅಧಿಕಾರಿಯನ್ನು ವರ್ಗ ಮಾಡಿದರೆ ಪತ್ರಿಕೆಗಳು ಸುಮ್ಮನಿರುತ್ತವೆಯೇ? ಅದನ್ನೇ ಎತ್ತಿಕೊಂಡು ವಿರೋಧ ಪಕ್ಷಗಳೂ ಪ್ರಚಾರ ಮಾಡುತ್ತವೆ. ಚುನಾವಣೆಯನ್ನು ಎದುರಿಟ್ಟುಕೊಂಡು ನಾವು ಇಂತಹ ವಿವಾದಗಳಲ್ಲಿ ಸಿಕ್ಕಿ ಹಾಕಿಕೊಂಡರೆ ಹೇಗೆ? ಬೇರೇನಾದರೂ ಉಪಾಯವಿದ್ದರೆ ಯೋಚಿಸೋಣ” ಎಂದರು. ಇಬ್ಬರು ಕೊಂಚ ಹೊತ್ತು ಮೌನ ತಾಳಿದರು. ಬಳಿಕ ಮಂತ್ರಿಗಳು ಅದೇನೊ ಯೋಜನೆ ಹೊಳೆದಂತೆ, “ನನಗೊಂದು ಯೋಚನೆ ಇದೆ. ಆತನಿಗೆ ಎಸ್.ಪಿ.ಯಾಗಿ ಭಡ್ತಿ ನೀಡಿ ಬೇರೆಡೆಗೆ ವರ್ಗಾವಣೆ ಮಾಡಬಹುದು. ಎಸ್.ಪಿ. ಪೋಸ್ಟ್ ನಿಮ್ಮೂರಿನಲ್ಲಿಲ್ಲವಲ್ಲ?” ಎಂದರು. ಮಮ್ಮೂಟಿಯ ಮುಖವೂ ಅರಳಿತು. “ದಯವಿಟ್ಟು ಅಷ್ಟು ಮಾಡಿ ಸಾಹೇಬರೇ, ನಾವು ಬದುಕಿಕೊಳ್ತೇವೆ” ಎನ್ನುತ್ತಾ ಮಂತ್ರಿಗಳಿಗೆ ಬಗ್ಗಿ ಸಲಾಂ ಮಾಡುತ್ತಾ ಅಲ್ಲಿಂದ ಹೊರಬಿದ್ದನು. ಕೆಲವು ದಿನಗಳಲ್ಲಿ ಊರಲ್ಲಿ ಸುದ್ದಿ ಹರಡಿತು. `ನವಾಜ್ ಸಾಹೇಬರಿಗೆ ವರ್ಗವಾಗಿದೆಯಂತೆ! ‘ಅವರು ಬಂದು ಇನ್ನೂ ವರ್ಷವೂ ಆಗಿಲ್ಲವಲ್ಲ? ಅಷ್ಟು ಬೇಗ ಹೇಗೆ ವರ್ಗವಾಯಿತು?’ ಎಂದು ಕೆಲವರು ಗೊಣಗಿಕೊಂಡರು. “ಅವರು ಅತ್ಯುತ್ತಮ ಅಧಿಕಾರಿಯಲ್ಲವಾ? ಅವರ ಸೇವೆಯನ್ನು ಮೆಚ್ಚಿ ಸರಕಾರ ಅವರಿಗೆ ಪದೋನ್ನತಿ ನೀಡಿ ಗೌರವಿಸಿದೆ!” ವಾಸು ತನ್ನ ಪರಿಚಯದವರೊಡನಂದನು; ‘ಸದ್ಯ ಶನಿ ತೊಲಗಿತಲ್ಲಾ!’ ಎಂದು ಪ್ರವಾಹ 195 ಮನದಲ್ಲಂದುಕೊಳ್ಳುತ್ತಾ. ಊರು ಮತ್ತೆ ಮೊದಲಿನಂತಾಯಿತು. ಬಿಸಿ ರಕ್ತದ ನವ ಯುವಕರ ಹೊಸ ಕಾರುಗಳು ಲಂಗು ಲಗಾಮಿಲ್ಲದೆ ಬೀದಿಯಲ್ಲಿ ಓಡಾಡತೊಡಗಿದುವು. ಕರೆವೆಣ್ಣುಗಳ ಹೊಟೇಲ್ ಭೇಟಿಯೂ ತಡೆಯಿಲ್ಲದೆ ಸಾಗತೊಡಗಿತು. ಮಾರುಕಟ್ಟೆಗಳಲ್ಲಿ ವ್ಯಾಪಾರಿಗಳು ಹೇಳಿದ್ದೇ ಬೆಲೆ. ಮಮ್ಮೂಟಿಯ ಎರಡನೇ ಮಗಳು, ಫರೀದಾಬಿಯ ಮಗಳು ಸಾಯಿರಾಳ ಮದುವೆಯೂ ಅದ್ದೂರಿಯಿಂದ ನೆರವೇರಿತು. ತನ್ನ ಮಗಳನ್ನು ವಿದ್ಯಾವಂತ ಹುಡುಗನಿಗೆ ಕೊಡಬೇಕೆಂಬುದು ಆಕೆಯ ಬಯಕೆಯಾಗಿತ್ತು. ಮೌಲವಿಗಳ ಭಾಷಣದಿಂದಾಗಿ ಆಕೆಯ ವಿದ್ಯಾಭ್ಯಾಸ ಕೊನೆಗೊಂಡಿತ್ತು. ಅಲ್ಲದೆ ಉಮ್ಮಾಲಿಯೂ ಹಟ ಹಿಡಿದಳು “ಇನ್ನೂ ನೀನವಳನ್ನು ಶಾಲೆಗೆ ಕಳಿಸಿದರೆ ನಾನು ಈ ಮನೆಯಲ್ಲಿರುವುದಿಲ್ಲ! ಅವಳ ಮದುವೆಗೆ ಏರ್ಪಾಟು ಮಾಡು” ಎಂದು. ಮಮ್ಮೂಟಿ ಈ ಬಾರಿ ಮಗಳಿಗೆ ಓರ್ವ ಡಾಕ್ಟರ್ ವರನನ್ನೇ ಆರಿಸಿದನು. ಆತನ ಮನೆಯವರೂ ಬೊಂಬಾಯಿಯಲ್ಲಿದ್ದು ಸಾಕಷ್ಟು ಸಂಪಾದಿಸಿ ಶ್ರೀಮಂತರಾಗಿಯೇ ಇದ್ದ ಕಾರಣ ಅಂತಹ ಘರ್ಷಣೆ ಏನೂ ನಡೆಯಲಿಲ್ಲ. ಹಾಜಿರಾಳ ಮುರಿದ ಮದುವೆ ಉಮ್ಮಾಲಿಗೂ ಪಾಠ ಕಲಿಸಿತ್ತು. ಫರೀದಾ ಕೂಡಾ ಅಳಿಯನ ಮನೆಯಿಂದ ಏನನ್ನೂ ನಿರೀಕ್ಷಿಸಲಿಲ್ಲವಾಗಿ ಎಲ್ಲವೂ ಸುಖಾಂತವೇ ಆಯಿತು. ಸಾಯಿರಾ ಕೂಡಾ ಹಾಜಿರಾಳಂತೆ ತಕರಾರು ಮಾಡದೆ ಗಂಡನ ಮನೆಯಲ್ಲಿ ಹೊಂದಿಕೊಂಡಿದ್ದಳು. ಆದರೆ ಆಕೆಯ ಗಂಡ ಅಜೀಜ್ ವೈದ್ಯಕೀಯ ವಿದ್ಯಾಭ್ಯಾಸ ಮುಗಿಸಿ ಪದವಿ ಪಡೆದರೂ ವೃತ್ತಿ ಪ್ರಾರಂಭಿಸಲೇ ಇಲ್ಲ. ಮಮ್ಮೂಟಿ ಒಂದೆರಡು ಬಾರಿ ಮಗಳೊಡನೆ ಸೂಚ್ಯವಾಗಿ “ಸಾಯಿರಾ, ನಿನ್ನ ಗಂಡನ ವಿದ್ಯಾಭ್ಯಾಸ ಮುಗಿದಿದೆಯಲ್ಲ? ಮುಂದೇನು ಮಾಡುತ್ತಾನಂತೆ?” ಎಂದು ಕೇಳಿ ಕೊನೆಗೆ ತಾನೇ ಸಲಹೆ ನೀಡಿದನು ``ಎಲ್ಲಾದರೊಂದೆಡೆ ತನ್ನ ಸ್ವಂತ ಆಸ್ಪತ್ರೆಯನ್ನಾದರೂ ಪ್ರಾರಂಭಿಸಲಿ” ಎಂದು “ನೀನೇ ಅವನೊಡನೆ ಹೇಳು” ಎಂದೂ ಸೇರಿಸಿದನು. ರಾತ್ರಿ ಗಂಡ ಮನೆಗೆ ಬಂದಾಗ ಸಾಯಿರಾ ತಂದೆಯ ಮಾತುಗಳನ್ನು ಆತನಿಗೆ ಮುಟ್ಟಿಸಿದಳು. “ನೀವು ಎಲ್ಲಾದರೊಂದೆಡೆ ಕ್ಲಿನಿಕ್ ತೆರೆದರೆ ಒಳ್ಳೆಯದು ಸುಮ್ಮನೆ ಅಲ್ಲಿ ಇಲ್ಲಿ ತಿರುಗುವುದು ಯಾಕೆ?” “ಅದೆಲ್ಲ ನಿನಗೆ ಅರ್ಥವಾಗುವುದಿಲ್ಲ. ಗಂಡಸರ ವಿಷಯದಲ್ಲಿ ತಲೆ ಹಾಕಬೇಡ. ನೀನು ಸುಮ್ಮನಿರು” ಎಂದು ಆಕೆಯ ಬಾಯಿ ಮುಚ್ಚಿಸಿದನು ಆತ. 196 ಸುಳಿ ಮಮ್ಮೂಟಿ ಮತ್ತೂ ಒಂದೆರಡು ಬಾರಿ ಮಗಳಿಂದ ಅಳಿಯನಿಗೆ ಹೇಳಿಸಿ ನೋಡಿದನು. ಹೆಂಡತಿಯ ಒತ್ತಾಯ ತಡೆಯದಾದಾಗ ಆತನು ಮುಖ ಸಿಂಡರಿಸಿಕೊಂಡು, “ನಿಮಗದೆಲ್ಲ ಯಾಕೆ? ಈಗ ಇಲ್ಲಿ ಎಷ್ಟೊಂದು ಡಾಕ್ಟರುಗಳಿದ್ದಾರೆ? ಅವರಿಗೆಲ್ಲ ಪ್ರಾಕ್ಟೀಸ್ ಇದೆಯೆಂದುಕೊಂಡೆಯಾ? ನಾನು ಕ್ಲಿನಿಕ್ ತೆರೆದು ನುಸಿ ಓಡಿಸ್ಬೇಕಷ್ಟೇ! ಅದೂ ಅಲ್ಲದೆ ಈಗ ನಾನು ದುಡಿದು ಆಗಬೇಕಾದದ್ದೇನು? ಹಣ ಇಡಲು ಜಾಗವಾದರೂ ಬೇಕಲ್ಲ?” ಎನ್ನುತ್ತಾ ಹೆಂಡತಿಯ ಮುಖ ನೋಡಿ ನಕ್ಕನು. ಸಾಯಿರಾ ತಂದೆಯೊಡನೆ ಅದೇ ಮಾತುಗಳನ್ನೇ ಹೇಳಿದಳು. “ದುಡಿದು ಸಂಪಾದಿಸಿದ್ದನ್ನು ಇಡುವುದೆಲ್ಲೀಂತ ಕೇಳ್ತಾರೆ ಅವರು!” “ಹೂಂ. ಅದೇನೊ ನಿಜವೇ. ಅವನು ದುಡಿದು ಆಗಬೇಕಾದದ್ದೇನೂ ಇಲ್ಲ. ಆದರೂ ಅಷ್ಟು ವರ್ಷ ಕಷ್ಟಪಟ್ಟು ಕಲಿತಿದ್ದಾನಲ್ಲ? ಕಲಿತ ವಿದ್ಯೆಯನ್ನು ಉಪಯೋಗಿಸುವುದು ಬೇಡವಾ? ಅಥವಾ ಇನ್ನೂ ಮುಂದಕ್ಕೆ ಕಲಿಯುತ್ತಾನೇನು? ಅದನ್ನಾದರೂ ಕೇಳು” ಎಂದನು ಮಮ್ಮೂಟಿ. ಅಳಿಯ ನಿರುದ್ಯೋಗಿಯಾಗಿ ಅಲೆಯುವುದು ಮಮ್ಮೂಟಿಗೆ ಇಷ್ಟವಿರಲಿಲ್ಲ. ಸಾಯಿರಾ ಗಂಡನೊಡನೆ ವಿದ್ಯಾಭ್ಯಾಸ ಮುಂದುವರಿಸುವ ಮಾತೆತ್ತಿದೊಡನೆ, “ಆಂ... ಇನ್ನು ಕಲಿಯುವುದಾ? ಈಗಾಗಲೇ ಒಂದು ಮಗುವಿನ ತಂದೆಯಾದೆ. ಇನ್ನೆಂತದು ಕಲಿಯುವುದು? ಅದೆಲ್ಲ ನನ್ನಿಂದಾಗದು. ನಾನು ಹೀಗೆಯೇ ಇರುತ್ತೇನೆ” ಎನ್ನುತ್ತಾ ಕೊನೆಗೆ ಮತ್ತೂ ಒಂದು ಮಾತು ಸೇರಿಸಿದನು. “ಬೇಕಾದರೆ ನಿನ್ನ ತಂದೆಯ ವ್ಯವಹಾರದಲ್ಲಿ ಸೇರಿಕೊಳ್ತೇನೆ. ಆದಾದರೆ ಗಂಡಸರ ಕೆಲಸ!” ಮಮ್ಮೂಟಿ ಹೌ ಹಾರಿದನು. ಈ ದಂಧೆ ತನಗೊಬ್ಬನಿಗೇ ಸಾಕು ಎಂದಿದ್ದರೆ ಇಂತಹ ಒಳ್ಳೆಯ ವಿದ್ಯೆ ಪಡೆದ ಅಳಿಯನನ್ನು ಈ ದಂಧೆ ಆಕರ್ಷಿಸುತ್ತಿದೆಯೇ? ಛೇ, ಅಳಿಯಂದಿರ ವಿಷಯದಲ್ಲಿ ತನ್ನ ಆಯ್ಕೆ ಸಮನಾಗಲೇ ಇಲ್ಲ. ಕೊನೆಗೂ ಮಮ್ಮೂಟಿ ಆತನನ್ನೂ ತನ್ನ ವ್ಯವಹಾರದಲ್ಲಿ ಸೇರಿಸಿಕೊಳ್ಳಲಿಲ್ಲ. ಆತನು ಸುಮ್ಮನೆ ಕಾರಿನಲ್ಲಿ ಕುಳಿತು ತನ್ನ ಮನೆಗೂ ಮಾವನ ಮನೆಗೂ ಓಡಾಡುವ ಕೆಲಸವನ್ನಷ್ಟೆ ಮಾಡತೊಡಗಿದನು. ಆಗಾಗ ಹೆಂಡತಿ, ಮಗುವಿನೊಡನೆ ಮಂಗಳೂರಿಗೆ ಹೋಗಿ ತಿರುಗಾಡಿ ಬರುವುದೇ ಈಗ ಆತನ ಕೆಲಸ. ಹಾಜ್ಯಾರರ ಅಳಿಯನೆಂದು ದೊಡ್ಡ ಕಾರಿನಲ್ಲಿ ಕುಳಿತು ತಿರುಗುವ ಮಜ ಕ್ಲಿನಿಕ್ಕಿನಲ್ಲಿ ಕುಳಿತು ರೋಗಿಗಳ ಪರೀಕ್ಷೆ ಮಾಡುವುದರಲ್ಲಿಲ್ಲವಲ್ಲ? ಆತನ ಊರು ಹಳ್ಳಿಯಾದುದರಿಂದ ಪ್ರವಾಹ 197 ಮಾವನ ಮನೆಯ ವಾಸ್ತವ್ಯ ಖಾಯಂ ಆಯಿತು. * * * * * ಅಳಿಯನಂತೂ ಹೆಸರಿಗಷ್ಟೆ ಡಾಕ್ಟರ್ ಆದನು. ಈಗ ಮಗನನ್ನಾದರೂ ಓರ್ವ ವೈದ್ಯನಾಗಿಸಬೇಕೆಂಬ ಹಂಬಲ ಮಮ್ಮೂಟಿಯದು. ಹೀಗಾಗಿ ಸಾಕಷ್ಟು ದಾನ ಶುಲ್ಕ ನೀಡಿ ಮಗ ಜಮಾಲನನ್ನು ವೈದ್ಯಕೀಯ ಕಾಲೇಜಿಗೆ ಸೇರಿಸಿದನು. ವಾಸುವಿನ ಮಗ ಸತೀಶ ಮತ್ತು ಜಮಾಲ್ ಒಂದೇ ಕಾಲೇಜಿನ ಒಂದೇ ತರಗತಿಯಲ್ಲಿ ವ್ಯಾಸಂಗ ಮಾಡ ತೊಡಗಿದರು. ತನ್ನ ಮಗನು ವೈದ್ಯಕೀಯ ಕಾಲೇಜಿನಲ್ಲಿ ಕಲಿಯುತ್ತಿರುವುದೇ ಮಮ್ಮೂಟಿಗೆ ಹೆಮ್ಮೆಯ ವಿಷಯ. “ನನ್ನ ಮಗ ಡಾಕ್ಟರಾಗಿ ಸಂಪಾದಿಸಬೇಕಾದದ್ದೇನೂ ಇಲ್ಲ. ಆದರೆ ನಮ್ಮೂರಿನ ಬಡ ಜನರ ಸೇವೆ ಮಾಡಬೇಕೆಂಬಾಸೆ ನನ್ನದು” ಎಂದು ತನಗೆ ತೀರಾ ಬೇಕಾದವರಲ್ಲಿ ಹೇಳಿಕೊಂಡನು. ಮಮ್ಮೂಟಿಯ ಮಗನೆಂದ ಮೇಲೆ ಕೇಳಬೇಕೇ? ಮಗನು ಕೇಳಿದಾಗ ಕೇಳಿದಷ್ಟು ಹಣ ನೀಡಲು ಮಮ್ಮೂಟಿ ಸಿದ್ಧನಾಗಿಯೇ ಇದ್ದನು. ವಾಸು ಮತ್ತು ಮಮ್ಮೂಟಿ ಇಬ್ಬರೂ ಮಕ್ಕಳಿಗೆ ಕಾರುಗಳನ್ನೂ ಖರೀದಿಸಿ ಕೊಟ್ಟಿದ್ದರು. ಕಾಲೇಜಿನಲ್ಲಿ ವಿದ್ಯಾರ್ಥಿ ಮುಖಂಡರಾಗಲು ಇದಕ್ಕಿಂತ ಉತ್ತಮ ಅರ್ಹತೆಯೇನೂ ಬೇಕಾಗಿಲ್ಲವಲ್ಲ? ಅತ್ಯಾಧುನಿಕ ಬಟ್ಟೆ ಧರಿಸಿಕೊಂಡು ಕಾರಿನಲ್ಲಿ ಒಂದಿಬ್ಬರು ಹುಡುಗಿಯರನ್ನು ಕೂರಿಸಿಕೊಂಡು ಓಡಾಡುತ್ತಾ ಬಾರ್ ಮತ್ತು ಹೊಟೇಲುಗಳಿಗೆ ಭೇಟಿ ನೀಡುತ್ತಾ ಮಜವಾಗಿರುವುದೇ ಕಾಲೇಜು ಬದುಕು ಎಂದು ತಿಳಿದಂತಹ ಹುಡುಗರಾಗಿದ್ದರು ಇಬ್ಬರೂ. ಇವರಿಗೆ ಹಿಂಬಾಲಕರಿಗೂ ಕೊರತೆ ಇರಲಿಲ್ಲ. ಅದೇ ತಾನೇ ಇಬ್ಬರೂ ಎರಡನೇ ವರ್ಷಕ್ಕೆ ಕಾಲಿಟ್ಟಿದ್ದರು. ಮೊದಲ ವರ್ಷದ ವಿದ್ಯಾರ್ಥಿಗಳು ಕಾಲೇಜು ಮತ್ತು ಹಾಸ್ಟೆಲುಗಳಲ್ಲಿ ಸೇರ್ಪಡೆಯಾಗಿದ್ದರು. ಎರಡನೇ ವರ್ಷದ ವಿದ್ಯಾರ್ಥಿಗಳು ಮೊದಲ ವರ್ಷದ ವಿದ್ಯಾರ್ಥಿಗಳನ್ನು ರ‍್ಯಾಗಿಂಗ್ ಎಂಬ ಹೆಸರಿನಲ್ಲಿ ಗುಲಾಮರಂತೆ ನಡೆಸಿಕೊಂಡು ಹಿಂಸಿಸುವ ಒಂದು ಪರಂಪರೆಯೇ ಇದೆಯಲ್ಲ? ಇಂತಹ ವ್ಯವಸ್ಥೆ ಕೆಲವು ಶ್ರೀಮಂತ ಹುಡುಗರಿಗೆ ವರದಾನವಾಗುತ್ತದೆ. ಒಂದು ತಿಂಗಳವರೆಗೂ ಕಾಲೇಜು ಮತ್ತು ಹಾಸ್ಟೆಲುಗಳಲ್ಲಿ ಈ ಹಿಂಸೆ ತಾಂಡವವಾಡಿತು. ಜಮಾಲ್ ಮತ್ತು ಸತೀಶನನ್ನು ಕಂಡೊಡನೆ ಹುಡುಗರು ಬೆದರಿ ಮೂಲೆ ಸೇರುತ್ತಿದ್ದರು. ಅವರನ್ನು ಒಂಟಿ ಕಾಲಲ್ಲಿ ಗಂಟೆಗಟ್ಟಲೆ ನಿಲ್ಲಿಸುವುದು, ಏತ ಹಾಕಿಸುವುದು, ತಮ್ಮ ಮೂತ್ರ ಕುಡಿಯಲು ಒತ್ತಾಯಿಸುವುದು, ಹಲವಾರು ಹುಡುಗರ ನಡುವೆ ನಗ್ನರಾಗಿ ನಿಂತು ನೃತ್ಯ 198 ಸುಳಿ ಮಾಡಿಸುವುದು, ಮತ್ತು ಅಶ್ಲೀಲವಾಗಿ ಇನ್ನೂ ಏನೇನೋ ಮಾಡಿಸುವುದು, ಎಲ್ಲವೂ ನಡೆಯುತ್ತಿತ್ತು. ಅಕಸ್ಮಾತ್ ಯಾರಾದರೊಬ್ಬರು ವಾರ್ಡನ್‍ಗೆ ದೂರು ನೀಡಿದರೆ ಮರುದಿನ ಅವನಿಗೆ ಮತ್ತಷ್ಟು ಕಿರುಕುಳ ನೀಡಲಾಗುತ್ತಿತ್ತು. ವಾರ್ಡನರೂ ಇವರ ಮೇಲೆ ಏನೂ ಕ್ರಮ ಕೈಗೊಳ್ಳುತ್ತಿರಲಿಲ್ಲ. ಹೀಗಾಗಿ ಈ ಹುಡುಗರು ಯಾರು ದೂರು ನೀಡದೆ ಎಲ್ಲವನ್ನೂ ಮೌನವಾಗಿ ಸಹಿಸಿಕೊಳ್ಳುತ್ತಿದ್ದರು. ಕೊನೆಗೂ ಹುಡುಗನೊಬ್ಬನು ಈ ಚಿತ್ರಹಿಂಸೆ ಮತ್ತು ಅವಮಾನ ತಾಳಲಾರದೆ ಹಾಸ್ಟೆಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡನು. ಪತ್ರಿಕೆಗಳು ಈ ಘಟನೆಯೆಡೆಗೆ ಜನರು ಮತ್ತು ಸರಕಾರದ ಗಮನ ಸೆಳೆಯಲು ಸಾಕಷ್ಟು ವರದಿ ಪ್ರಕಟಿಸಿದುವು. ಶೈಕ್ಷಣಿಕ ಸಂಸ್ಥೆಗಳಲ್ಲಿನ ಈ ದುಷ್ಟ ಪದ್ಧತಿಯ ಮೇಲೆ ನಿಷೇಧ ಹೇರಲು ಜನತೆ ಸರಕಾರವನ್ನು ಒತ್ತಾಯಿಸಿತು. ಆದರೆ ಈ ಒತ್ತಾಯದ ಧ್ವನಿ ಸಾಕಷ್ಟು ಶಕ್ತಿಯುತವಾಗಿರಲಿಲ್ಲವೆಂದೊ ಏನೊ ಈ ಘಟನೆ, ಕೂಡಾ ಕಾಲಗರ್ಭದ ಮೂಲೆಗೆ ತಳ್ಳಲ್ಪಟ್ಟಿತು. ಕ್ರಮೇಣ ಜನರು ಈ ಘಟನೆಯನ್ನು ಮರೆತರು. ಅದೇ ಕಾಲೇಜಿನ ಓರ್ವ ವಿದ್ಯಾರ್ಥಿನಿ ಶೋಭನಾ. ಪ್ರತಿಭೆಯಿಂದಲೆ ಸೀಟು ದೊರಕಿಸಿಕೊಂಡವಳು ಆಕೆ. ನೋಡಲು ವಿಶೇಷ ಸುಂದರಿಯಲ್ಲದಿದ್ದರೂ ಮುಖ ಮತ್ತು ಮೈಕಟ್ಟು ಆಕರ್ಷಕವಾಗಿತ್ತು. ಆಕೆ ಜಮಾಲನ ತರಗತಿಯವಳಾಗಿದ್ದರೂ ಆತನ ಶ್ರೀಮಂತಿಕೆಯ ಪ್ರದರ್ಶನ ಆಕೆಯ ಮೇಲೆ ಯಾವ ಪ್ರಭಾವವನ್ನೂ ಬೀರಲಿಲ್ಲ. ಆಕೆ ಸೆಳೆಯಲ್ಪಟ್ಟುದು ಅದೇ ಕಾಲೇಜಿನ ಕೊನೆಯ ವರ್ಷದ ವಿದ್ಯಾರ್ಥಿ ಚಂದ್ರಹಾಸನೆಡೆಗೆ. ಪ್ರತಿಭಾವಂತನಾಗಿ ಸದಾ ಓದಿನಲ್ಲಿ ತಲ್ಲೀನನಾಗಿರುತ್ತಿದ್ದ ಆತನೆಡೆಗೆ ಆಕೆಗೆ ಅದೇನೊ ಆಕರ್ಷಣೆ. ಅವನ ಮುಖ ಕಂಡೊಡನೆ ಆಕೆಯ ಕೆನ್ನೆಗಳು ರಂಗೇರುತ್ತಿದ್ದುವು. ಗ್ರಂಥ ಭಂಡಾರದಲ್ಲಿ ಆತನಿರುವ ವೇಳೆಯಲ್ಲಿ ಆಕೆಯೂ ಅಲ್ಲಿಗೆ ಬರುತ್ತಿದ್ದಳು. ಕೊನೆಗೊಮ್ಮೆ ಆತನು ತಾನಾಗಿಯೇ ಆಕೆಯನ್ನು ಮಾತನಾಡಿಸಿದನು. “ನಿಮ್ಮೂರು ಯಾವುದು?” “ಮೈಸೂರಿನ ಬಳಿಯ ಒಂದು ಹಳ್ಳಿ” “ಓ.... ಕನ್ನಡಿಗರೂನ್ನಿ” ಮುಗುಳ್ನಗುತ್ತಾ ಆತನೆಂದನು. “ನೀವೂ ಕನ್ನಡಿಗರೇ ಎಂದಾಯಿತು.'' “ಭಾಷೆ ಯವುದಾದರೇನು? ಮುಖ್ಯ ನಾವು ಮನುಷ್ಯರಾಗಿರಬೇಕು.” “ಈಗ ನಾವು ಮನುಷ್ಯರಾಗಿಲ್ಲವಾ?” ಮುಗುಳ್ನಗುತ್ತಾ ಕೇಳಿದಳಾಕೆ. “ಈ ಕಾಲೇಜಿನಲ್ಲಿ ರ‍್ಯಾಗಿಂಗ್ ಹೆಸರಿನಲ್ಲಿ ನಡೆದ ಚಿತ್ರಹಿಂಸೆ ನೋಡಿದರೆ 199 ನಾವು ಮನುಷ್ಯರಾಗಿದ್ದೇವೆ ಎಂದೆನ್ನಿಸುತ್ತದೆಯೇ?” “ಅದೇನೊ ಹೌದು. ಹೆಣ್ಣು ಮಕ್ಕಳ ಹಾಸ್ಟೆಲ್ ಕೂಡಾ ಇದಕ್ಕಿಂತ ಭಿನ್ನವಾಗಿಲ್ಲ.” ಮಾತನಾಡುತ್ತಾ ಇಬ್ಬರೂ ಮುಂದೆ ಸಾಗುತ್ತಿದ್ದರು. ಅವರ ಹಿಂದಿನಿಂದಲೇ ಜಮಾಲ್ ಮತ್ತು ಸತೀಶ್ ಕೂಡಾ ಬರುತ್ತಿದ್ದರು. “ಕ್ಯಾಂಟೀನಿಗೆ ಬರ್ತೀರಾ?” ಚಂದ್ರಹಾಸ ಕೇಳಿದನು. “ಹೂಂ. ಹೋಗೋಣ.” ಆಕೆ ಹಿಂಬಾಲಿಸಿದಳು. ಇಬ್ಬರೂ ಮಾತನಾಡುತ್ತಾ ಚಹಾ ಕುಡಿದರು. ಪರಸ್ಪರ ವಿಚಾರ ವಿನಿಯಮಯದ ಬಳಿಕ ಇಬ್ಬರ ಅಭಿರುಚಿಯೂ ಒಂದೇ ಒಂದು ತಿಳಿದು ಶೋಭನಾಗೆ ಸಂತೋಷವಾಯಿತು. ಹೀಗೆ ಮೊದಲಾದ ಪರಿಚಯ ಸ್ನೇಹವಾಗಿ ಮಾರ್ಪಡತೊಡಗಿತ್ತು. ಒಂದು ದಿನ ಆಕೆ ಕಾಲೇಜಿನ ಜಗಲಿಯಲ್ಲಿ ನಡೆದು ಹೋಗುತ್ತಿದ್ದಾಗ ಜಮಾಲ್ ಎದುರಾದನು. ಆಕೆ ತಲೆ ತಗ್ಗಿಸಿಕೊಂಡು ಆತನನ್ನು ದಾಟಿ ಹೋಗುವ ಸನ್ನಾಹದಲ್ಲಿದ್ದಳು. ಆತ ಆಕೆಗೆ ದಾರಿ ಬಿಡದೆ, “ಹಲೋ” ಎಂದನು. ಮುಖ ಮೇಲೆತ್ತಿ ಪರಿಚಯ ಸೂಚಿಸಿದ ಆಕೆ ತಾನೂ ‘ಹಲೊ’ ಎಂದಳು. ‘ಬನ್ನಿ, ಕ್ಯಾಂಟೀನಿಗೆ ಹೋಗುವಾ” ಆತನು ಆಹ್ವಾನಿಸಿದನು. “ಬೇಡ, ನಾನು ಬರುವುದಿಲ್ಲ.” “ಯಾಕೆ?” “ಆಗಾಗ ಚಹಾ ಕುಡಿಯುವ ಅಭ್ಯಾಸ ನನಗಿಲ್ಲ.” ಎತ್ತಲೊ ನೋಡುತ್ತಾ ಆಕೆಯೆಂದಳು. “ಚಂದ್ರಹಾಸ ಕರೆದರೆ ಮಾತ್ರ ಹೋಗುವ ಅಭ್ಯಾಸವೇ?” ಶೋಭನಾ ಚಕಿತಳಾಗಿ ತಲೆ ಎತ್ತಿ ಆತನ ವೇಷ ಭೂಷಣದ ಕಡೆಗೆ ದೃಷ್ಟಿ ಹರಿಸಿದಳು. ಜೀನ್ಸ್ ಪ್ಯಾಂಟು, ಹುಲಿ, ಕರಡಿಗಳ ಚಿತ್ರದ ಶರ್ಟು, ಕ್ರಾಪಿಗಿಂತಲೂ ಕೊಂಚ ಉದ್ದವಾಗಿಯೇ ಇರುವ ತಲೆಕೂದಲು, ಕೈಯಲ್ಲಿ ಬೆಲೆ ಬಾಳುವ ಕೈಗಡಿಯಾರ. ಆಕೆಗೆ ಒಂದು ಕ್ಷಣ ದಸರಾ ವೇಷದ ನೆನಪಾಗಿ ತುಟಿಯಂಚಿನಲ್ಲಿ ನಗು ಮೂಡಿತು. ಆದರೆ ತನ್ನ ಖಾಸಗಿ ಬದುಕಿನಲ್ಲಿ ಮೂಗು ತೂರಿಸಲೆತ್ನಿಸಿದ ಆತನ ಮೇಲೆ ಕೋಪವುಕ್ಕಿತು. ಆದರೂ ಸಂಯಮ ತಂದುಕೊಂಡು. “ನನಗೀಗ ಕೆಲಸವಿದೆ. ದಾರಿಬಿಡಿ” ಎಂದಳು. “ನಾನು ಕೇಳಿದ್ದಕ್ಕೆ ಉತ್ತರ ಕೊಡಿ” ಈಗ ಆಕೆಯ ಸಹನೆ ಸಡಿಲಗೊಂಡಿತು. “ನನ್ನಿಷ್ಟದಂತೆ ನಡೆಯಲು ನಾನು ಸ್ವತಂತ್ರಳಿದ್ದೇನೆ. ಅದನ್ನು ಕೇಳಲು ನಿಮಗಾವ ಹಕ್ಕೂ ಇಲ್ಲ” ಎನ್ನುತ್ತಾ 200 ಸುಳಿ ಮುಖ ಧುಮ್ಮಿಸಿಕೊಂಡು ಹೊರಟು ಹೋದಳು. “ಓ... ಹಾಗೇನು?” ಎಂದು ಕೇಳುತ್ತಾ ಜಮಾಲ್ ನಿಂತಲ್ಲಿಯೇ ಹಲ್ಲು ಕಡಿದು, “ಆಗಲಿ, ನಾನೂ ನೋಡಿಕೊಳ್ಳುತ್ತೇನೆ” ಎನ್ನುತ್ತಾ ಹಿಂತಿರುಗಿದನು. ಕೆಲವು ದಿನಗಳ ಬಳಿಕ ಒಂದು ದಿನ ಸಂಜೆಗೆ ಶೋಭನಾ ಗ್ರಂಥಾಲಯದಲ್ಲಿ ಕುಳಿತು ಪುಸ್ತಕವೊಂದನ್ನು ಓದುತ್ತಿದ್ದಳು. ಚಂದ್ರಹಾಸ ಸಿಕ್ಕಿದರೆ ಭೇಟಿಯಾಗಿ ಮಾತನಾಡೋಣವೆಂದು ಯೋಚಿಸಿಯೇ ಗ್ರಂಥಾಲಯಕ್ಕೆ ಕಾಲಿಟ್ಟಿದ್ದಳು. ಕೊಂಚ ಹೊತ್ತಿನ ಬಳಿಕ ಗ್ರಂಥಾಲಯದ ಪೇದೆ ಅವಳ ಬಳಿ ಬಂದು “ಚಂದ್ರಹಾಸರು ಮೇಲೆ ಕ್ಲಾಸ್ ರೂಮಿನಲ್ಲಿದ್ದಾರಂತೆ. ನೀವು ಹೋಗಬೇಕಂತೆ. ಏನೊ ಮಾತನಾಡಲಿಕ್ಕಿದೆಯಂತೆ” ಎಂದನು. ಶೋಭನಾ ಕೂಡಲೇ ಎದ್ದಳು. ಆಗಲೇ ಹೊತ್ತು ಮಿರುತ್ತಿತ್ತು. ಚಂದ್ರಹಾಸನನ್ನು ಭೇಟಿಯಾಗುವ ಆತುರದಲ್ಲಿ ಆಕೆ ಕೂಡಲೇ ಅಲ್ಲಿಂದ ಹೊರಟು ಮೇಲ್ಭಾಗದ ಕೊಠಡಿಗೆ ನಡೆದಳು. ಅಲ್ಲೆಲ್ಲ ಆಗಲೇ ನಿರ್ಜನವಾಗಿತ್ತು. ‘ಇವರೆಲ್ಲಿದ್ದಾರೆ?’ ಎಂದು ಹುಡುಕುತ್ತಾ ಬಂದವಳು ತೀರಾ ಹಿಂಭಾಗದ ಕೊಠಡಿಗೆ ಹೋದಳು. ಅಲ್ಲಿ ಆ ಕೊಠಡಿಯ ಬಾಗಿಲು ತೆರೆದಿತ್ತು. ಆಕೆ ನಿಧಾನವಾಗಿ ಒಳಗೆ ಯಾರಾದರೂ ಇದ್ದಾರೆಯೇ ಎಂದು ಇಣುಕಿದಳು. ಕೂಡಲೇ ಬಾಗಿಲು ಹಿಂಬದಿಯಿಂದ ಇಬ್ಬರು ಯುವಕರು ಆಕೆಯ ಮೇಲೆ ಆಕ್ರಮಣ ಮಾಡಿದರು. ಕೂಗಿಕೊಳ್ಳಲು ತೆರೆದ ಆಕೆಯ ಬಾಯಿಯನ್ನು ಒಬ್ಬನು ಬಲವಾಗಿ ಮುಚ್ಚಿದನು. ಆಕೆ ಎಷ್ಟೇ ಹೊರಳಾಡಿದರೂ ಆ ಈರ್ವರು ಬಲಿಷ್ಠರಾದ ಯುವಕರ ವಿರುದ್ಧ ಸೆಣಸಾಡುವುದು ಆಕೆಯಿಂದಾಗಲಿಲ್ಲ. ಆಕೆ ಸ್ಮೃತಿ ತಪ್ಪಿ ಬಿದ್ದಳು. “ಶೋಭನಾ, ಶೋಭನಾ...” ಅದಾರೊ ಕಿವಿಯಲ್ಲುಸುರಿದಂತೆ ಕೇಳಿ ಆಕೆ ಕಣ್ಣು ತೆರೆದಳು. ಚಂದ್ರಹಾಸನ ಮುಖ ಕಣ್ಣಿಗೆ ಬಿತ್ತು. ಬಳಿಕ ನಿಧಾನವಾಗಿ ನಡೆದದ್ದೆಲ್ಲವೂ ಕಣ್ಣಿಗೆ ಕಟ್ಟಿತು. ಆಕೆಯ ಅಸ್ತವಸ್ತ್ಯಗೊಂಡ ಬಟ್ಟೆ, ಗುಂಡಿ ಕಿತ್ತ ರವಿಕೆ, ತುಟಿಯ ಮೇಲಿನ ಗಾಯ ಆತನಿಗೆ ನೂರು ಕತೆಗಳನ್ನು ಹೇಳಿದುವು. ಆಕೆ ಮುಖ ತಿರುಗಿಸಿ ಎರಡೂ ಕೈಗಳಲ್ಲಿ ಮುಖ ಮುಚ್ಚಿಕೊಂಡು ಅಳತೊಡಗಿದಳು. “ಶ್..... ಅಳಬೇಡ ಏಳು... ಬಾ...” ಆತನು ಸಂತೈಸತೊಡಗಿದನು. “ನಾನಿನ್ನು ಹೇಗೆ ಬದುಕಿರಲಿ?” ಬಿಕ್ಕುತ್ತಾ ನುಡಿದಳಾಕೆ. “ನಿಮ್ಮ ಬದುಕಿಗೇನೂ ಆಗಿಲ್ಲ. ಯಾರೊ ಗೂಂಡಾಗಳು ಆಕ್ರಮಣ ಮಾಡಿದ ತಕ್ಷಣ ನಿಮ್ಮ ಬದುಕು ಮುಗಿಯಬೇಕೆ? ತಪ್ಪು ಮಾಡಿದವನಿಗೆ ಶಿಕ್ಷೆಯಾಗಬೇಕು. ನೀವೆದ್ದು ಮುಖ ತೊಳೆದು ಹಾಸ್ಟೆಲಿಗೆ ಹೋಗಿ” ಎಂದನು. ಪ್ರವಾಹ 201 ಆಕೆ ಎದ್ದು ಬಟ್ಟೆ ಸರಿಪಡಿಸಿಕೊಂಡು ಮುಖ ತೊಳೆದು ಹಾಸ್ಟೆಲಿಗೆ ಹೋದಳು. ಕೋಣೆಗೆ ಹೋದೊಡನೆ ಸೋಪು, ಟವೆಲ್ಲು, ಬಟ್ಟೆ ತೆಗೆದುಕೊಂಡು ಹೋಗಿ ಚೆನ್ನಾಗಿ ಸ್ನಾನ ಮಾಡಿ ಬಂದಳು. ಯಾರೊಡನೆಯೂ ಮಾತನಾಡದೆ ‘ತಲೆನೋವು, ಜ್ವರ’ವೆಂದು ಹೇಳಿ ಮುಸುಕೆಳೆದು ಮಲಗಿದಳು. ಕೆಲವು ದಿನಗಳ ಬಳಿಕ ಆಕೆ ಚಂದ್ರಹಾಸನನ್ನು ಭೇಟಿಯಾದಾಗ ಆತನು, “ಇದೊಂದು ಕೆಲವು ದುಷ್ಟ ಜನರಿಂದಾದ ದೈಹಿಕ ಆಕ್ರಮಣವೆಂದು ಮಾತ್ರ ತಿಳಿದರೆ ಸಾಕು. ನಿಮ್ಮ ದೇಹ ಅಪವಿತ್ರವಾಯಿತೆಂದೊ, ಮಲಿನವಾಯಿತೆಂದೊ ಅಂದುಕೊಂಡು ಕೊರಗಬೇಕಾದ ಅಗತ್ಯವೇ ಇಲ್ಲ. ನೀವು ಮೊದಲಿನಂತೆ ನಗುನಗುತ್ತಾ ಇರಬೇಕು” ಎಂದು ಆಕೆಯಲ್ಲಿ ಧೈರ್ಯ ತುಂಬಿದನು. ಆತನ ನಿರಂತರ ಸಾಂತ್ವನದಲ್ಲಿ ಆಕೆ ಮೊದಲಿನಂತಾದಳು. ಜಮಾಲ್ ಮತ್ತು ಸತೀಶನನ್ನು ಕಂಡಾಗ ಮಾತ್ರ ಕೆಂಡ ತುಳಿದವರಂತಾಡುತ್ತಿದ್ದಳು. ಈಗ ಜಮಾಲ್ ಮತ್ತು ಸತೀಶರು ಮತ್ತಷ್ಟು ಸಾಹಸಿಗಳಾದರು. ಹುಡುಗಿಯರನ್ನು ಚುಡಾಯಿಸುವುದೇ ದಿನಚರಿ ಎಂಬಂತಾಯಿತು. ಒಂದು ಘಟನೆ ಯಾರ ಗಮನಕ್ಕೂ ಬಂದಿಲ್ಲವೆಂದ ಬಳಿಕ ಮತ್ತೊಮ್ಮೆ ಅಂತಹ ಸಾಹಸಕ್ಕೆ ಮುಂದಾದರು. “ಇಂತಹ ಘಟನೆಗಳನ್ನೆಲ್ಲ ಹುಡುಗಿಯರು ಯಾರ ಮುಂದೆಯೂ ಹೇಳಲಿಚ್ಛಿಸುವುದಿಲ್ಲ. ಹೇಳಿದರೆ ಅವರ ಮರ್ಯಾದೆಯೇ ಹೋಗುವುದಲ್ಲವಾ? ಮರ್ಯಾದೆಯಾಗಿ ಬದುಕಬೇಕೆಂದರೆ ಬಾಯಿ ಮುಚ್ಚಿಕೊಂಡಿರಬೇಕಾಗುತ್ತದೆ. ಇರುತ್ತಾರೆ” ಎಂದು ಸತೀಶನು ಜಮಾಲನಿಗೆ ಧೈರ್ಯ ಹೇಳಿದನು. ಚಂದ್ರಹಾಸನು ಇವರಿಬ್ಬರ ನಡವಳಿಕೆಯನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯತೊಡಗಿದನು. ಇವರೇನಾದರೂ ಕುಕೃತ್ಯ ಮಾಡುವಾಗಲೇ ಹಿಡಿಯಬೇಕೆಂಬುದು ಅವನ ಯೋಜನೆ. ಈ ಬಾರಿ ಅವರ ಬಲೆಗೆ ಬಿದ್ದವಳು ಮೀನು ಎಂಬ ಪ್ರಥಮ ವರ್ಷದ ಹುಡುಗಿ. ಗ್ರಂಥಾಲಯದಲ್ಲಿದ್ದ ಹುಡುಗಿಯೊಡನೆ ಪೇದೆ ಬಂದು “ಮೇಲಿನ ಕೋಣೆಯಲ್ಲಿ ಪ್ರೋಫೆಸರ್ ಬರ ಹೇಳಿದ್ದಾರೆ” ಎಂದೊಡನೆ ಆಕೆ ಗಡಬಡಿಸಿ ಎದ್ದಳು. ಅಲ್ಲೇ ಇದ್ದ ಚಂದ್ರಹಾಸನೂ ಇದನ್ನು ಕೇಳಿಸಿಕೊಂಡು ಸ್ವಲ್ಪ ಹೊತ್ತಿನ ಬಳಿಕ ಆತನೂ ಮೇಲ್ಭಾಗದ ಕೊಠಡಿಯ ಕಡೆಗೆ ಹೆಜ್ಜೆ ಹಾಕಿದನು. ಮೇಲ್ಭಾಗದ ತರಗತಿ ಕೋಣೆಯೊಳಗೆ ಆಕೆ ಕಾಲಿಟ್ಟೊಡನೆ ಜಮಾಲ್ ಮತ್ತು ಸತೀಶನು ಆಕೆಯ ಮೇಲೆ ಆಕ್ರಮಣ ಮಾಡಲುದ್ಯುಕ್ತರಾದರು. ಆದರೆ 202 ಸುಳಿ ಆಕೆ ಕೂಡಲೇ ತಪ್ಪಿಸಿಕೊಂಡು ವರಾಂಡಾದಲ್ಲಿ ಓಡತೊಡಗಿದಳು. ಅವರಿಬ್ಬರೂ ಅವಳನ್ನು ಹಿಂಬಾಲಿಸಿದರು. ಜಗಲಿಯ ಕೊನೆ ಬಂದಾಗ ಆಕೆ ಬೇರೆ ದಾರಿ ಕಾಣದೆ ಅದರ ರೈಲಿಂಗಿನ ಮೇಲೆ ಹತ್ತಿ ಕೆಳಗೆ ಧುಮುಕಿದಳು. ಚಂದ್ರಹಾಸನು ಜಗಲಿಗೆ ಬರುವುದೂ ಅವಳು ಕೆಳಗೆ ಹಾರುವುದೂ ಒಂದೇ ಹೊತ್ತಿನಲ್ಲಾಯಿತು. ಆತ ಕೂಡಲೇ ಹಿಂತಿರುಗಿ ಕೆಳಗೆ ಓಡಿ ಬೊಬ್ಬೆ ಹೊಡೆದನು. “ಬೇಗನೆ ಯಾರಾದರೂ ಬನ್ನಿ; ಒಂದು ಅಪಘಾತವಾಗಿದೆ” ಎಂದು. ಆಕೆಯ ತಲೆಯೊಡೆದು ರಕ್ತ ಸೋರುತ್ತಿತ್ತು. ಜೀವವಿರುವ ಕುರುಹೇನೂ ಇರಲಿಲ್ಲ. ಚಂದ್ರಹಾಸನು ಕೂಡಲೇ ಪ್ರಿನ್ಸಿಪಾಲ್ ಮತ್ತು ಹಾಸ್ಟೆಲ್ ವಾರ್ಡನ್‍ಗೆ ವಿಷಯ ತಿಳಿಸಿ ಪೊಲೀಸ್ ಠಾಣೆಗೂ ದೂರವಾಣಿ ಮುಖಾಂತರ ತಿಳಿಸಿದನು. ಎಲ್ಲರೂ ಕೂಡಲೇ ಓಡಿ ಬಂದರು. ಪೊಲೀಸರು ಚಂದ್ರಹಾಸನಿಂದ ಹೇಳಿಕೆ ತೆಗೆದುಕೊಂಡು ಜಮಾಲ್ ಮತ್ತು ಸತೀಶನನ್ನು ಬಂಧಿಸಿ ಮೊಕದ್ದಮೆ ದಾಖಲಿಸಿದರು. ಚಂದ್ರಹಾಸನು ಪತ್ರಕರ್ತ ಗೆಳೆಯನಿಗೆ ವಿಷಯ ತಿಳಿಸಿದನು. ಪತ್ರಿಕೆಗಳು ಕೂಡಲೇ ವಿವರವಾಗಿ ತನಿಖಾ ವರದಿಗಳನ್ನು ಪ್ರಕಟಿಸಿದವು. ಜಮಾಲ್ ಮತ್ತು ಸತೀಶನನ್ನು ಕಾಲೇಜಿನಿಂದ ಹೊರ ಹಾಕಬೇಕೆಂದು ವಿದ್ಯಾರ್ಥಿಗಳಿಂದ ಮುಷ್ಕರ ಹೂಡಿಸುವಲ್ಲಿಯೂ ಚಂದ್ರಹಾಸನು ಯಶಸ್ವಿಯಾದನು. ರಾಜ್ಯ ವಿಧಾನ ಸಭೆಯಲ್ಲೂ ಈ ಘಟನೆಯ ಪ್ರತಿಧ್ವನಿ ಮೊಳಗಿದ ಬಳಿಕ ಅವರಿಬ್ಬರನ್ನು ಕಾಲೇಜಿನಿಂದ ಹೊರಹಾಕಲಾಯಿತು. ಆ ಪೇದೆಯನ್ನೂ ಕೆಲಸದಿಂದ ಹೊರದೂಡಲಾಯಿತು. ವಿಷಯ ತಿಳಿದ ಮಮ್ಮೂಟಿ ಮತ್ತು ವಾಸು ಕೂಡಲೇ ಓಡಿ ಬಂದು ಹೆಸರುವಾಸಿಯದ ವಕೀಲರೊಬ್ಬರನ್ನು ಹಿಡಿದು ಮಕ್ಕಳನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದರು. ಆದರೆ ಅವರನ್ನು ಪುನಃ ಕಾಲೇಜಿಗೆ ಸೇರ್ಪಡೆಗೊಳಿಸಬೇಕೆಂಬ ಅವರ ಪ್ರಯತ್ನ ಸಫಲವಾಗಲಿಲ್ಲ. “ಕೇಸು ಮುಗಿಯಲಿ. ಆ ಮೇಲೆ ನೋಡೋಣ” ಎಂಬುದಷ್ಟೆ ಪ್ರಿನ್ಸಿಪಾಲರ ಉತ್ತರವಾಗಿತ್ತು. “ಒಬ್ಬ ಮೂರ್ಖ ಹುಡುಗಿ ಬಾಲ್ಕನಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡದ್ದಕ್ಕೆ ನಮ್ಮ ಮಕ್ಕಳು ಹೊಣೆಯೇ?” ವಾಸು ಕೇಳಿದನು. “ನಿಮ್ಮ ಮಕ್ಕಳಿಂದಾಗಿಯೇ ಆಕೆ ಹಾರಬೇಕಾಯಿತು ಎಂಬುದು ನಿಮಗೆ ತಿಳಿಯದೇ?” ಪ್ರವಾಹ 203 “ಅದು ಹೇಗೆ ಹೇಳಲಿಕ್ಕಾಗುತ್ತದೆ? ಹೇಳಿ ಕೇಳಿ ಹೆಣ್ಣು ಹುಡುಗಿ; ಡಾಕ್ಟರ್ ಕೆಲಸ ಕಲಿಯುತ್ತಿದ್ದವಳು. ಅವಳಿಗೆ ಯಾರ್ಯಾರ ಸಂಬಂಧ ಹೇಗೆ ಹೇಗೆ ಇತ್ತೊ ಯಾರಿಗೆ ಗೊತ್ತು? ಎಷ್ಟು ತಿಂಗಳಾಗಿತ್ತೊ!” “ರೀ ಮಿಸ್ಟರ್” ಪ್ರಾಂಶುಪಾಲರು ಆದಷ್ಟು ಸಂಯಮ ತಂದುಕೊಂಡು ಗಂಭೀರವಾಗಿ ನುಡಿದರು, “ನಿಮ್ಮ ಹಣದ ಮದ ನಿಮ್ಮನ್ನು ಕುರುಡರನ್ನಾಗಿಸಿದೆ. ಹೆಣ್ಣು ಮಕ್ಕಳ ವಿಷಯದಲ್ಲಿ ಇಂತಹ ಕೀಳುಮಾತುಗಳನ್ನಾಡಲು ನಿಮಗೆ ನಾಚಿಕೆಯಾಗಬೇಕಿತ್ತು! ನಿಮಗೆ ಹೆಣ್ಣು ಮಕ್ಕಳಿಲ್ಲವಾ?” “ಇಂತಹ ವಿಷಯಗಳಲ್ಲೆಲ್ಲ ಗಂಡು ಹುಡುಗರದೇ ತಪ್ಪೂಂತ ಹೇಗೆ ಹೇಳ್ತೀರಿ?” ಪಟ್ಟು ಬಿಡದೆ ಕೇಳಿದನು ವಾಸು. “ಹುಡುಗಿಯರೇ ಪ್ರಚೋದನೆ ನೀಡಿರಬಹುದು!” ಪ್ರಾಂಶುಪಾಲರ ಸಹನೆ ಸಡಿಲಗೊಂಡಿತು. ಅವರು ಗರ್ಜಿಸಿದರು, “ದಯವಿಟ್ಟು ಹೊರಟು ಹೋಗಿ ಇಲ್ಲಿಂದ! ನನ್ನ ಸಹನೆಯನ್ನು ಪರೀಕ್ಷಿಸಬೇಡಿ. ಇನ್ನು ಈ ಕಾಲೇಜಿನಲ್ಲಿ ನಿಮ್ಮ ಮಕ್ಕಳಿಗೆ ಸೀಟು ದೊರೆಯಲಾರದು. ನೆನಪಿರಲಿ! ಮೊದಲು ನಾಗರಿಕರಂತೆ ವರ್ತಿಸಲು ಕಲಿಯಿರಿ” ಎನ್ನುತ್ತಾ ಎದ್ದು ಒಳ ಹೋದರು. ಇನ್ನು ಕುಳಿತುಕೊಂಡು ಪ್ರಯೋಜನವಿಲ್ಲವೆಂದು ಮಮ್ಮೂಟಿ ಮತ್ತು ವಾಸು ಕೂಡಾ ಪೆಚ್ಚು ಮೋರೆ ಮಾಡಿಕೊಂಡು ಹಿಂತಿರುಗಿದರು. ಮನೆಗೆ ಹೋದವನೇ ಮಮ್ಮೂಟಿ ಜಮಾಲನನ್ನು ತರಾಟೆಗೆ ತೆಗೆದುಕೊಂಡನು, “ನನಗಂತೂ ವಿದ್ಯೆ ಕಲಿಸುವವರೂ ಯಾರೂ ಇರಲಿಲ್ಲ. ಹಣವೂ ಇರಲಿಲ್ಲ. ಹೇಗೊ ಹಣ ಸಂಪಾದಿಸಿದೆ. ಈಗ ನೀನಾದರೂ ವಿದ್ಯಾವಂತನಾಗಿ ಡಾಕ್ಟರ್ ಆಗಿ ಬರಲಿ ಅಂತ ಎಷ್ಟು ಆಸೆಯಿಂದ ಕಾಯುತ್ತಿದ್ದೆ? ಈಗ ಹೆಣ್ಣನ್ನು ಕಂಡ ಕೂಡಲೇ ಬಾಯಿ ಬಿಟ್ಟು ನಾಯಿಯಂತೆ ಹಿಂದೆ ಹೋದೆಯಲ್ಲ? ನಿನಗೇನಾದರೂ ಬುದ್ಧಿಗಿದ್ದಿ ಇದೆಯಾ? ಇಷ್ಟು ವರ್ಷ ನೀನು ಕಲಿತದ್ದೆಂತದ್ದು? ಇನ್ನೂ ಸಮನಾಗಿ ಮೀಸೆ ಚಿಗುರಿಲ್ಲ. ಆಗಲೇ ಹೆಣ್ಣಿನ ಹುಚ್ಚು ಹತ್ತಿತೇ? ಹೆಣ್ಣು ಬೇಕು, ಮದುವೆ ಬೇಕೂಂತ ಅಂದಿದ್ದರೆ ನಾನೇ ಮದುವೆ ಮಾಡಿಸುತ್ತಿರಲಿಲ್ಲವಾ?” ಪಟಾಕಿ ಸಿಡಿದಂತೆ ಸಿಡಿಯಿತು ಮಮ್ಮೂಟಿಯ ಮಾತುಗಳು. “ನಾವೇನೂ ಮಾಡಿಲ್ಲ ಬಾಪ್ಪಾ. ನಮ್ಮನ್ನು ಕಂಡವಳು ಆಕೆ ತಾನೇ ಓಡಿ ಹೋಗಿ ಕೆಳಗೆ ಹಾರಿದಳು. ಅದಕ್ಕೆ ನಾವೇನು ಮಾಡಲಿ? ಆ ಚಂದ್ರಹಾಸ ಕೂಡಾ ಅಲ್ಲೇ ಇದ್ದನು. ಆವರಣದಲ್ಲಿ ಏನು ಮಾತಾಗಿತ್ತೊ ಯಾರಿಗೆ ಗೊತ್ತು?” 204 ಸುಳಿ ಜಮಾಲ್ ತಂದೆಯ ಮುಂದೆ ನಿಷ್ಕಳಂಕ ಮುಖವಾಡ ಧರಿಸಲು ಪ್ರಯತ್ನಿಸಿದನು. “ನಿನ್ನ ಬುದ್ಧಿ ನನ್ನ ಮುಂದೆ ತೋರಿಸ್ತೀಯಾ?” ಗರ್ಜಿಸಿದನು ಮಮ್ಮೂಟಿ. “ನೀನು ಕಾಲೇಜಿಗೆ ಹೋದದ್ದೂ ಸಾಕು. ವಿದ್ಯೆ ಕಲಿತದ್ದೂ ಸಾಕು! ನಾನು ದುಡಿದದ್ದೂ ಸಾಕಷ್ಟಿದೆ. ತಿಂದುಕೊಂಡು ತೆಪ್ಪಗೆ ಬಿದ್ದಿರು” ಎಂದು ಒದರಿದನು. “ಏನಪ್ಪಾ, ಏನಾಯಿತು?” ಎಂದು ಕೇಳುತ್ತಾ ಉಮ್ಮಾಲಿ ಒಳಗಿನಿಂದ ಬಂದು ಬಾಗಿಲು ಬಳಿ ನಿಂತಳು. “ಇನ್ನೇನಾಗುತ್ತದೆ? ಪ್ರಾಯ ಬಂತು; ಮೈಯಲ್ಲಿ ಬಿಸಿ ರಕ್ತ ಉಕ್ಕಿ ಹರಿಯಿತು. ಅದ್ಯಾವಳದೊ ಬೆನ್ನು ಹತ್ತಿ ಏನೇನೊ ಮಾಡ್ಕೊಂಡಿದ್ದಾನೆ!” ಕೋಪದಿಂದ ನುಡಿದನು ಮಮ್ಮೂಟಿ. “ಇಷ್ಟೇನೇ? ಅವನೇನೊ ಮಾಡಿದ್ದಾನೇಂತ ಅಂದುಕೊಂಡಿದ್ದೆ ನಾನು! ಹೆಣ್ಣು ಮಕ್ಕಳನ್ನು ಕಂಡಾಗ ಪ್ರಾಯ ಬಂದ ಹುಡುಗರು ಕೊಂಚ ಹುಚ್ಚಾಟ ಆಡಿದರೆ ಅದೊಂದು ದೊಡ್ಡ ವಿಷಯವಾ? ಹೆಂಡತಿ ಮಕ್ಕಳಿರುವ ನೀವೇ ಸುಮ್ಮನಿದ್ದಿರಾ?” ರುಖ್ಯಾ ಗಂಡನಿಗೆ ಒಂದು ಬಾಣ ಬಿಟ್ಟಳು. “ನಿನ್ನ ಕೊಂಡಾಟದಿಂದಲೇ ಅವನು ಹೀಗಾಗಿರುವುದು! ನೀನು ಬಾಯ್ಮುಚ್ಚಿಕೊಂಡು ಬಿದ್ದಿರು” “ನಿಮಗೆ ಗೊತ್ತಿರುವುದು ಅಷ್ಟೇ ತಾನೇ? ನನ್ನ ಬಾಯ್ಮುಚ್ಚಿಸುವುದು! ಆ ಮಾಟಗಾತಿ ಬಂದ ಮೇಲೆ ನನ್ನನ್ನು ಸಮನಾಗಿ ಮಾತನಾಡಿಸಿದ್ದಾದರೂ ಇದೆಯೇ?” ರುಖ್ಯಾ ಸಿರೆಯ ಸೆರಗಿನಿಂದ ಕಣ್ಣು ಮೂಗು ಒರೆಸಿಕೊಳ್ಳತೊಡಗಿದಳು. “ಈಗ ತಾನೆ ಮನೆಗೆ ಬಂದಿದ್ದಾರೆ; ಅವರಿಗೆ ಊಟ, ತಿಂಡಿ ಏನಾದರೂ ಬೇಕೇ ಎಂದು ಕೇಳುವುದುನ್ನು ಬಿಟ್ಟು ತೆಗೆದೆಯಲ್ಲ ನಿನ್ನ ಪುರಾಣ? ನೀನೂ ಒಂದು ಹೆಣ್ಣೆ?” ಉಮ್ಮಾಲಿ ಸೊಸೆಯನ್ನು ಜರೆದಳು. “ನೀವೇ ಇದ್ದಿರಲ್ಲಾ ಬೇಕಾದುದನ್ನು ಮಾಡಿ ಕೊಡಲಿಕ್ಕೆ? ಮಾಡಿ ಕೊಡಿ” ಎನ್ನುತ್ತಾ ಆಕೆ ಒಳಸರಿದಳು. ಉಮ್ಮಾಲಿ ಮಗನ ಹಿಂದೆಯೇ ಆತನ ಕೋಣೆಗೆ ನಡೆದಳು. “ಆದದ್ದಾದರೂ ಏನಪ್ಪಾ?” ಎಂದು ನಯವಾಗಿ ಕೇಳಿದಳು. ಮೊಮ್ಮಗ ಡಾಕ್ಟರಾಗಿ ಬರುವ ಕನಸು ಕಾಣುತ್ತಾ ಆ ದಿನವನ್ನು ಎದುರು ನೋಡುತ್ತಿದ್ದವಳು ಆಕೆ. ಮಮ್ಮೂಟಿ ಮಗನ ‘ಸಾಹಸ ಗಾಥೆ’ಯನ್ನು ತಾಯಿಗೆ ವಿವರಿಸಿ, “ಹೇಗಾದರೂ ಇವನು ವಿದ್ಯೆ ಮುಂದುವರಿಸಲೀಂತ ಕೇಳ್ಕೊಂಡೆ. ಆದರೆ ಆ ಪ್ರವಾಹ 205 ಪ್ರಿನ್ಸಿಪಾಲರು ಒಪ್ಪಲೇ ಇಲ್ಲ” ಎಂದು ಬೇಸರದಿಂದ ನುಡಿದನು. ಉಮ್ಮಾಲಿಯ ಕನಸೆಲ್ಲವೂ ಭಗ್ನವಾಯಿತು. ಆದರೂ ಮಗನನ್ನು ಸಂತಯಿಸಲೆಂದು, “ಹೋಗಲಿ ಬಿಡು, ಈಗೇನು ಅವನು ದುಡಿದು ಯಾರನ್ನೂ ಸಾಕಬೇಕಾಗಿಲ್ಲವಲ್ಲ? ಅವನಿಗೊಂದು ಮದುವೆ ಮಾಡು. ನಮ್ಮ ಕಣ್ಣ ಮುಂದೆ ಹಾಯಾಗಿರಲಿ” ಎಂದಳು. “ಹೂಂ. ಹೌದು. ಇನ್ನು ಅದೇ ಒಳ್ಳೆಯದೇನೊ” ಎನ್ನುತ್ತಾ ಮಮ್ಮೂಟಿ ಸ್ನಾನಕ್ಕೆ ಹೋದನು. ಮರುದಿನ ಆತನು ತನ್ನ ಪರಿಚಯದವರೊಡನೆ, “ಅವನಿಗೆ ಹಾಸ್ಟೆಲ್‍ನಲ್ಲಿ ಊಟ ತಿಂಡಿ ಸರಿ ಹೋಗುವುದಿಲ್ಲ. ಕಲಿಯಲಿಕ್ಕೆ ಮನಸ್ಸೂ ಇಲ್ಲ. ಒತ್ತಾಯ ಮಾಡಿ ಕಲಿಸುವುದೇಕೆ? ಇಲ್ಲೇ ನಮ್ಮ ಜೊತೆಯಲ್ಲಿ ನಮ್ಮ ಕಣ್ಣ ಮುಂದೆಯೇ ಇರಲಿ ಎಂದು ಕರೆದುಕೊಂಡು ಬಂದೆ” ಎಂದನು. “ಅವನ ಅಜ್ಜಿಗೆ ಅವನ ಮದುವೆ ನೋಡಬೇಕೆಂಬಾಸೆ” ಎಂದು ಸೇರಿಸಿದನು. ಮಮ್ಮೂಟಿಯ ಮಗ ಮದುವೆಯಾಗುತ್ತಾನೆಂದರೆ ಊರಲ್ಲಿ ಹೆಣ್ಣಿಗೆ ಬರಗಾಲವೇ? ದೊಡ್ಡ ಅಣೆಕಟ್ಟೊಂದರ ಗುತ್ತಿಗೆ ಹಿಡಿದು ದಿಢೀರ್ ಸಾಹುಕಾರನಾದ ಗುತ್ತಿಗೆದಾರ ರಹೀಂ ಹಾಜಿಯವರ ಕಡೆಯಿಂದಲೇ ಮದುವೆಯ ಪ್ರಸ್ತಾಪ ಬಂದಿತು. ಆತ ಕಟ್ಟಿಸಿದ ಅಣೆಕಟ್ಟಿನಲ್ಲಿ ಹಲವೆಡೆ ಬಿರುಕು ಬಿಟ್ಟು ನೀರು ಸೋರಿ ಹೋಗುತ್ತಿದ್ದರೂ ಆತ ಮಾತ್ರ ಊರಲ್ಲಿ ‘ಗಟ್ಟಿ ಕುಳ’ ಎನ್ನಿಸಿಕೊಂಡನು. ಸಂಬಂಧಪಟ್ಟ ಮಂತ್ರಿಗಳೂ ಇಂಜಿನಿಯರುಗಳೆಲ್ಲರೂ ಈತನ ತಾಳಕ್ಕೆ ತಕ್ಕಂತೆ ಕುಣಿಯುವವರೇ ಆಗಿದ್ದರು. ಈತನ ಹಿರಿಯ ಮಗಳು ಮೈಮೂನಾ ಎಂಬ ಹುಡುಗಿಯೊಡನೆ ಜಮಾಲನ ಮದುವೆ ನಿಶ್ಚಯವಾಯಿತು. ರುಖ್ಯಾ, ಫರೀದಾ, ಉಮ್ಮಾಲಿ ಮತ್ತು ಹಾಜಿರಾ ಹೋಗಿ ಹುಡುಗಿಯನ್ನು ನೋಡಿ ಬಂದರು. ರುಖ್ಯಾಗೆ ಸೊಸೆಯಾಗುವವಳ ಮನೆ ನೋಡಿ ಬಹಳ ಸಂತೋಷವಾಯಿತು. ತಮ್ಮ ಮನೆಗಿಂತಲೂ ಭವ್ಯವಾದ ಹೊಸ ಮಾದರಿಯ ಕಟ್ಟಡ. ತಮ್ಮನ್ನೂ ಮೀರಿಸಿದ ಶ್ರೀಮಂತರೇನೊ ಎಂದು ಮನ ಕ್ಷಣ ಕಾಲ ಅಳುಕಿತು. ಇಲ್ಲ. ಹಾಗಾಗಲು ಸಾಧ್ಯವಿಲ್ಲ. ಮಮ್ಮೂಟಿ ಹಾಜಿಗಿಂತಲೂ ಮೇಲಿರುವವರು ಈ ಊರಿನಲ್ಲಿರಲು ಸಾಧ್ಯವೇ ಇಲ್ಲ! ಇನ್ನೂ ಹದಿನೈದು ವರ್ಷವೂ ತುಂಬದ ಹುಡುಗಿ ಮೈಮೂನಾ ವಿಶೇಷ ಸುಂದರಿಯೇನೂ ಅಲ್ಲವಾದರೂ ತೆಳ್ಳಗೆ ಎತ್ತರವಾಗಿದ್ದಳು. ವಿದ್ಯೆಯೂ ಅಷ್ಟಕಷ್ಟೆ. ಹೆಣ್ಣು ಮಕ್ಕಳಿಗಂತೂ ವಿದ್ಯೆಯ ಅಗತ್ಯವೇ ಇಲ್ಲವೆಂದು ತಿಳಿದವಳು ರುಖ್ಯಾ. 206 ಸುಳಿ ಆಕೆ ಎಂತಹ ಮನೆಯಿಂದ ಬರ್ತಾಳೆ ಎಂಬುದಷ್ಟೆ ಮುಖ್ಯ. ಆ ಕೋನದಲ್ಲಿ ನೋಡಿದಾಗ ರುಖ್ಯಾಗೆ ಆ ಹುಡುಗಿ ತಮ್ಮ ಮನೆಗೆ ತಕ್ಕವಳಾಗಿಯೇ ಕಂಡಳು. “ಮೆಡಿಕಲ್ ಕಾಲೇಜಿನಲ್ಲಿ ಅದೇನೊ ಗಲಾಟೆಯಾಗಿ ಊರಿಗೆ ಬಂದಿದ್ದಂತೆ ಆ ಹುಡುಗ, ಇನ್ನು ಕಾಲೇಜಿಗೆ ಹೋಗುವುದಿಲ್ಲವಂತೆ” ಎಂದು ರಹೀಂ ಹಾಜಿಯೊಡನೆ ಅದಾರೊ ಹೇಳಿದಾಗ, “ನನ್ನ ಮಗಳಿಗೆ ಮಮ್ಮೂಟಿ ಹಾಜಾರರ ಮನೆಯ ಸಂಬಂಧ ದೊರೆತರೆ ಸಾಕು. ಆತ ಹೇಗಾದರೂ ಇರಲಿ. ಯೌವನದಲ್ಲಿ ಅದೆಲ್ಲ ಸಹಜ. ಮದುವೆಯಾದ ಮೇಲೆ ಹುಡುಗರ ಬುದ್ಧಿ ಸರಿ ಹೋಗುತ್ತದೆ” ಎಂದಾರಾತ. ಊರಿನಲ್ಲಿ ಇನ್ನೊಂದು ಮದುವೆಯ ಸಂಭ್ರಮ. ಎರಡೂ ಮನೆಯವರು ಆಗರ್ಭ ಶ್ರೀಮಂತರೆಂದ ಮೇಲೆ ಕೇಳಬೇಕಾದದ್ದೆ ಇಲ್ಲ ತಾನೇ? ವಧುವಿಗೆ ಉಡುಗೊರೆ ಕೊಡಲು ತಂದೆ, ತಾಯಿ, ಅಜ್ಜಿ, ಚಿಕ್ಕಮ್ಮ, ನಾದಿನಿಯರೆಂದು ಎಲ್ಲರ ಕೈಗಳಲ್ಲೂ ಹತ್ತು ಹತ್ತು ಪವನುಗಳ ಸೆಟ್ಟುಗಳು ಸಿದ್ಧವಾದುದು. ಮಾವನ ಮನೆಯ ಕೆಲಸದ ಹೆಂಗಸರೆಲ್ಲರಿಗೂ ಜಮಾಲನು ವಿದೇಶಿ ಸೀರೆ, ಸುಗಂಧ ದ್ರವ್ಯ, ಸೋಪುಗಳ ಉಡುಗೊರೆಯೊಡನೆ ಹಣವನ್ನೂ ನೀಡಿದನು. ದೊಡ್ಡದೊಂದು ಕಾರಿನ ಬೀಗದ ಕೈಯನ್ನು ರಹೀಂ ಹಾಜಿ ಅಳಿಯನಿಗೆ ಉಡುಗೊರೆ ಕೊಟ್ಟನು. ಜಮಾಲನಿಗೆ ಹೆಂಡತಿಯ ಮನೆಯಲ್ಲಿ ಯಾವಾಗಲೂ ರಾಜಾತಿಥ್ಯ. ಮೈಮೂನಾ ಕೂಡಾ ಗಂಡನ ಮನೆಯಲ್ಲಿ ರಾಜಕುಮಾರಿಯಂತೆಯೇ ಉಪಚರಿಸಲ್ಪಡುತ್ತಿದ್ದಳು. ಬದುಕಿನ ಕುರಿತೊ, ಭವಿಷ್ಯದ ಕುರಿತೊ ಯಾವ ಚಿಂತೆಯೂ ಇಲ್ಲದೆ, ತಿಂದು, ಉಟ್ಟು ಸುಖಪಡುವ ಬದುಕು. ಜಮಾಲನಂತೂ ಬಹಳ ಖುಷಿಯಿಂದಿದ್ದನು. * * * * * ಊರಿನ ಮಧ್ಯಭಾಗದಲ್ಲಿ ಹಲವು ಅಂಗಡಿ ಸಾಲುಗಳೂ ಹೊಸ ಹೊಸ ಕಟ್ಟಡಗಳೂ ಮಮ್ಮೂಟಿಯವಾದುವು. ಆತನ ಕಾರ್ಯಕ್ಷೇತ್ರವೂ ಬಹಳಷ್ಟು ವಿಸ್ತಾರಗೊಂಡಿತ್ತು. ಆದರೆ ಈಗ ಮೊದಲಿನಷ್ಟು ನಿರ್ಭಯವಾಗಿ ದಂಧೆ ನಡೆಸಲಾಗುತ್ತಿರಲಿಲ್ಲ. ಈ ಬಾರಿಯ ಚುನಾವಣಾ ಫಲಿತಾಂಶ ಆಡಳಿತ ಪಕ್ಷವನ್ನು ಚಿಂತೆಗೀಡು ಮಾಡಿತ್ತು. ಬ್ಯಾಂಕು ರಾಷ್ಟ್ರೀಕರಣ ಮತ್ತು ಬಡತನ ನಿವಾರಣೆಯ ಘೋಷಣೆಯಿಂದಾಗಿ ಬಡ ಜನರೇನೊ ಅಡಳಿತ ಪಕ್ಷಕ್ಕೆ ಮತ ನೀಡಿದ್ದರು. ಹಾಗೂ ಸರಕಾರ ರಚಿಸಲು ಬೇಕಾದಷ್ಟು ಬಹುಮತವೂ ದೊರೆತಿತ್ತು. ಆದರೆ ಪ್ರವಾಹ 207 ಅಭ್ಯರ್ಥಿಗಳ ನಡುವಿನ ಮತಗಳ ಅಂತರ ಬಹಳ ಕಮ್ಮಿಯಾಗಿತ್ತು. ಬಿದ್ದ ಮತಗಳ ಎಣಿಕೆಯಿಂದ ಆಡಳಿತ ಪಕ್ಷಕ್ಕೆ ದೊರೆತ ಮತಗಳು ಬಹಳ ಕಮ್ಮಿ ಎಂಬುದು ಸ್ಪಷ್ಟವಾಯಿತು. ಜನ ಸಾಮಾನ್ಯರ ಬದುಕು ದಿನೇ ದಿನೇ ದುರ್ಭರವಾಗುತ್ತಿತ್ತು. ಪ್ರಧಾನ ಮಂತ್ರಿಗಳು ಇದರಿಂದ ಚಿಂತಾಕ್ರಾಂತರಾದರು. ಜನರ ಮತ ಪಡೆಯಲು ಹೊಸ ಹಾದಿಯೇನಾದರೂ ಇದೆಯೇ ಎಂದು ಹುಡುಕುತ್ತಿದ್ದರು. ಇತ್ತೀಚೆಗೆ ಪ್ರತಿದಿನವೆಂಬಂತೆ ಪತ್ರಿಕೆಗಳಲ್ಲಿ ಕಡಲ ತೀರದಲ್ಲಿ ವಶಪಡಿಸಿಕೊಂಡ ಚಿನ್ನದ ಬಿಸ್ಕಟುಗಳ ವಿವರ ಹೊರ ಬೀಳತೊಡಗಿತ್ತು. ಸುಂಕದ ಅಧಿಕಾರಿಗಳು ವಶಪಡಿಸಿಕೊಂಡ ಚಿನ್ನದ ಬಿಸ್ಕಟುಗಳ ಫೋಟೋಗಳು ಆಗಾಗ ಪತ್ರಿಕೆಗಳಲ್ಲಿ ಪ್ರಕಟವಾಗ ತೊಡಗಿದ್ದುವು. ಇವುಗಳ ಬೆಲೆಯ ಮೊತ್ತ ಲಕ್ಷಗಟ್ಟಲೆಯಲ್ಲ ಕೋಟಿಗಟ್ಟಲೆ! ಆ ದಿನ ರಾತ್ರಿ ಸರಕನ್ನು ದೋಣಿಯಿಂದ ಇಳಿಸಿ ಕಾರುಗಳ ಢಿಕ್ಕಿಗಳಲ್ಲಿಡಲಾಗುತ್ತಿತ್ತು. ಒಂದೊಂದು ಕಟ್ಟನ್ನಿಟ್ಟೊಡನೆ ಕಾರು ಮುಂದಕ್ಕೆ ಚಲಿಸುತ್ತಿದ್ದುವು. ಕೊನೆಯ ಒಂದು ಕಾರಿನಲ್ಲಿ ಒಂದು ಕಟ್ಟನ್ನಿಟ್ಟು ಹೊರಡಲಣಿಯಾಗುತ್ತಿದ್ದಂತೆ ದೂರದಲ್ಲಿ ಜೀಪೊಂದು ಬರುತ್ತಿರುವುದನ್ನು ಕಂಡ ಚಾಲಕನು ಕಾರಿನಲ್ಲಿದ್ದ ಕಟ್ಟನ್ನು ಕೂಡಲೇ ಕೆಳಗಿಳಿಸಿ ಮರಳಿನಲ್ಲಿ ಹೂತಿಟ್ಟು ಏನೂ ತಿಳಿಯದಂತೆ ಕಾರನ್ನು ಚಲಾಯಿಸತೊಡಗಿದನು. ಅಷ್ಟರಲ್ಲಿ ಅಲ್ಲಿಗೆ ಬಂದ ಸುಂಕಾಧಿಕಾರಿಗಳು ಕಾರನ್ನು ಪೂರ್ತಿ ಶೋಧಿಸಿ ಏನೂ ದೊರೆಯದೆ ಪೆಚ್ಚು ಮೋರೆ ಹಾಕಿಕೊಂಡರು. ಆ ಕಾರೂ ಹೊರಟು ಹೋಯಿತು. ದೂರದಲ್ಲಿ ಬೋಟೊಂದು ದೀಪವನ್ನಾರಿಸಿ ಕತ್ತಲಲ್ಲಿ ಮರೆಯಾಯಿತು. ಬಹಳ ಹೊತ್ತಿನವರೆಗೂ ಅಲ್ಲೇ ಇದ್ದ ಪೊಲೀಸರು ಬೆಳಗಾಗುತ್ತಿದ್ದಂತೆ ಅಲ್ಲಿಂದ ಹೊರಟು ಹೋದರು. ಮರುದಿನ ಬೆಳಿಗ್ಗೆ ದೋಣಿಯಲ್ಲಿ ಮೀನು ಹಿಡಿಯಲು ಹೋದ ಉಮ್ಮರೂಟ್ಟಿ ಎಂಬಾತ ಹಿಂತಿರುಗಿ ಬರುವಾಗ ಮರಳಿನಲ್ಲಿ ಕಾಲಿಗೆ ಏನೊ ತಾಗಿದಂತಾಗಿ ಕಾಲಿನ ಬೆರಳಿನಿಂದಲೇ ಮರಳನ್ನು ಕೆದಕಿದನು. ಕೆದಕುತ್ತಿದ್ದಂತೆ ಗಟ್ಟಿ ಪದಾರ್ಥವೇನೊ ಅಲ್ಲಿದ್ದಂತೆ ತೋರಿ ಮನೆಗೆ ಕೊಂಡೊಯ್ಯುತ್ತಿದ್ದ ಮೀನಿನ ಚೀಲವನ್ನು ಕೆಳಗಿಟ್ಟು ಅಲ್ಲೇ ಕುಳಿತು ನೆಲವನ್ನು ಮತ್ತಷ್ಟು ಆಳ ಮಾಡಿದನು. ಅಗೆದವನೇ ತನ್ನ ಕಣ್ಣುಗಳನ್ನು ತಾನೇ ನಂಬದಾದನು. ಚಿನ್ನದ ಬಿಸ್ಕಟುಗಳ ರಾಶಿ ಮರಳಿನಲ್ಲಿ ಹೂತು ಹೋಗಿದ್ದುವು! 208 ಸುಳಿ ಆತನು ಸುತ್ತಲೂ ನೋಡಿದನು. ಸಮುದ್ರ ತೀರದಲ್ಲಿ ಅಲ್ಲಲ್ಲಿ ಜನಗಳ ಓಡಾಟವಿತ್ತು. ಈಗ ಈ ನಿಧಿಯನ್ನು ಏನೂ ಮಾಡುವಂತಿರಲಿಲ್ಲ. ಆತನು ಕೂಡಲೇ ಮರಳಿನಲ್ಲಿ ಅವುಗಳನ್ನು ಮುಚ್ಚಿ ಅದರ ಮೇಲೆಯೇ ಕುಳಿತುಕೊಂಡನು. “ಏನು ಕಾಕಾ, ಇಲ್ಲಿ ಕುಳಿತಿದ್ದೀರಿ?” ದಾರಿ ಹೋಕರೊಬ್ಬರು ಕೇಳಿದರು. “ಯಾಕೊ ಸೊಂಟದಲ್ಲಿ ಒಂದು ಛಳಕು ಕಾಣಿಸಿಕೊಂಡಿತು. ಹೆಜ್ಜೆ ಎತ್ತಿ ಇಡಲಿಕ್ಕೆ ಆಗಲಿಲ್ಲ. ಸ್ವಲ್ಪ ಹೊತ್ತು ಕುಳಿತರೆ ಸರಿ ಹೋದೀತೇನೊ ಅಂತ ಕುಳಿತುಕೊಂಡೆ” ನೋವಿನಿಂದ ಮುಖ ಕಿವಿಚಿದಂತೆ ಮಾಡಿ ನುಡಿದನು ಉಮ್ಮರೊಟ್ಟಿ. “ಮನೆಯಲ್ಲಿ ತಿಳಿಸಬೇಕಾ?” ಕೇಳಿದನಾತ. “ಏನೂ ಬೇಡಪ್ಪಾ; ನೋಡುವಾ, ನೀವು ನಡೆಯಿರಿ.” ಬಂದಾತನು ಹೊರಟು ಹೋದನು. ಉಮ್ಮರೂಟ್ಟಿಗೆ ಯೋಚನೆಗಿಟ್ಟುಕೊಂಡಿತು. ಕತ್ತಲಾಗದೆ ಏನೂ ಮಾಡುವಂತಿಲ್ಲ. ನಿಧಿಯನ್ನು ಇಲ್ಲಿ ಬಿಟ್ಟು ಹೋಗುವಂತೆಯೂ ಇಲ್ಲ. ಕೈಯಲ್ಲಿದ್ದ ಮೀನಿನ ಗತಿ ಏನು? ಆತನು ಅತ್ತಿತ್ತ ನೊಡಿದನು. ಮಧ್ಯಾಹ್ನವಾಗುತ್ತಾ ಬಂದಿದ್ದು ಜನಸಂಚಾರ ಕಮ್ಮಿಯಾಗಿತ್ತು. ಆತನು ಎದ್ದು ದೂರದಿಂದ ದೊಡ್ಡದೊಂದು ಕಲ್ಲನ್ನು ಎತ್ತಿ ತಂದು ಆ ಸ್ಥಳದಲ್ಲಿಟ್ಟನು. ಬಳಿಕ ಬೇಗನೆ ಮನೆಗೆ ಹೋಗಿ ಮೀನನ್ನು ಹೆಂಡತಿಯ ಕೈಯಲ್ಲಿಟ್ಟು ಪುನಃ ಅದೇ ಸ್ಥಳಕ್ಕೆ ಹಿಂತಿರುಗಿ ಆ ಕಲ್ಲಿನ ಮೇಲೆ ಕುಳಿತನು. ರಾತ್ರಿ ದಟ್ಟ ಕತ್ತಲೆ ಹಬ್ಬಿದ ಬಳಿಕ ಆ ಕಲ್ಲನ್ನೆತ್ತಿಟ್ಟು ಚಿನ್ನದ ಗಟ್ಟಿಗಳನ್ನು ತನ್ನ ಮುಂಡಾಸಿನಲ್ಲಿ ಸುತ್ತಿಕೊಂಡು ಮನೆಗೆ ನಡೆದನು. ಕೆಲವೇ ತಿಂಗಳುಗಳಲ್ಲಿ ಬಲೆಗಾರ ಉಮ್ಮರೂಟ್ಟಿ ‘ಉಮ್ಮರೂಟ್ಟಿ’ಯವರು ಆದನು. ಸ್ವಂತಕ್ಕಾಗಿ ಚೆಂದದ ಮನೆಯೊಂದನ್ನು ಕಟ್ಟಿಸಿಕೊಂಡು ಇಬ್ಬರು ಹೆಣ್ಣು ಮಕ್ಕಳ ಮದುವೆಯನ್ನೂ ವಿಜೃಂಭಣೆಯಿಂದ ನೆರವೇರಿಸಿದನು. ಪಟ್ಟಣದಲ್ಲಿ ಹೊಸ ವ್ಯಾಪಾರವನ್ನೂ ಪ್ರಾರಂಭಿಸಿದನು. ಕೆಲವೊಮ್ಮೆ ಚಿನ್ನದ ಗಟ್ಟಿಗಳ ಸಮೇತ ಕಾರನ್ನೇ ಬಿಟ್ಟು ಓಡಬೇಕಾದಂತಹ ಪರಿಸ್ಥಿತಿಯೂ ಮಮ್ಮೂಟಿಯ ವಾಹನ ಚಾಲಕರಿಗೆ ಎದುರಾಗುತ್ತಿತ್ತು. ಕಾರಿಗೆ ನೋಂದಣಿ ಸಂಖ್ಯೆಯೇನೋ ಇರುತ್ತಿತ್ತು. ಆದರೆ ನೋಂದಣಿಯಾದ ಹೆಸರಿನ ವ್ಯಕ್ತಿಗಳೇ ಇರುತ್ತಿರಲಿಲ್ಲ. ಡ್ರೈವರುಗಳು ಸಿಕ್ಕಿಬಿದ್ದಾಗ ತಿಂಗಳುಗಟ್ಟಲೆ ಓಡಾಡಿ ಅವರನ್ನು ಬಿಡಿಸಿಕೊಳ್ಳುವ ಜವಾಬ್ದಾರಿಯೂ ಮಮ್ಮೂಟಿಯದು. ಹೀಗೆ ಆಗಾಗ ಆತನಿಗೆ ಇಂತಹ ತೊಂದರೆಗಳೂ ಎದುರಾಗುತ್ತಿದ್ದವು. ಕೆಳಮಟ್ಟದ ಸುಂಕಾಧಿಕಾರಿಗಳನ್ನು ಎಷ್ಟೇ ಕೈಯೊಳಗಿಟ್ಟುಕೊಂಡರೂ ಕೆಲವೊಮ್ಮೆ ಪ್ರವಾಹ 209 ಗುರುತು ಪರಿಚಯವಿಲ್ಲದ ಯಾರೊ ಮೇಲಧಿಕಾರಿಗಳು ಬಂದಾಗ ಎಲ್ಲ ಯೋಜನೆಗಳೂ ತಲೆಕೆಳಗಾಗುತ್ತಿದ್ದುವು. ಎಲ್ಲಕ್ಕಿಂತ ದೊಡ್ಡ ತಲೆಬೇನೆಯೊಂದೂ ಪ್ರಾರಂಭವಾಗಿತ್ತು. ಮಮ್ಮೂಟಿಯ ವಾಹನ ಚಾಲಕರಾಗಿ ಕೆಲಸ ಪ್ರಾರಂಭಿಸಿದ ಕೆಲವರು ಈಗ ಸ್ವಂತ ವ್ಯವಹಾರ ಪ್ರಾರಂಭಿಸಿದ್ದರು. ಹಸೈನಾರ್ ಎಂಬಾತ ಕೂಡಾ ಈಗ ಊರಿನಲ್ಲಿ ಭಾರಿ ಕುಳವೇ ಆಗಿದ್ದನು. ಈಗ ಇಂತಹ ‘ಭಾರಿ ಕುಳ’ಗಳ ಮಧ್ಯೆ ಸ್ಪರ್ಧೆಯೂ ಪ್ರಾರಂಭವಾಗಿತ್ತು. ಈ ಸ್ಪರ್ಧೆಯಿಂದಾಗಿ ಕೆಲವೊಮ್ಮೆ ಸುಂಕಾಧಿಕಾರಿಗಳಿಗೆ ಮಾಲುಗಳ ಆಗಮನದ ಅನಿರೀಕ್ಷಿತ ಸುಳಿವೂ ದೊರೆಯುತ್ತಿತ್ತು. ಅಂತಹ ಸುಳಿವು ದೊರೆತ ಒಂದು ಸಂದರ್ಭದಲ್ಲಿ ಮಮ್ಮೂಟಿಯ ಲಕ್ಷಗಟ್ಟಲೆ ಬೆಲೆಯ ಮಾಲು ಸುಂಕಾಧಿಕಾರಿಗಳ ವಶವಾಗಿತ್ತು. ಚಾಲಕರೆಲ್ಲರೂ ತಪ್ಪಿಸಿಕೊಂಡಿದ್ದರು. ಮಮ್ಮೂಟಿ ಮತ್ತು ವಾಸು ಗೂಢಾಲೋಚನೆಗಾರಂಭಿಸಿದರು. “ಅಲ್ಲ ಹಾಜಾರರೇ, ಸುಂಕಾಧಿಕಾರಿಗಳು ಕಷ್ಟಪಟ್ಟು ನಮ್ಮ ಪತ್ತೆ ಹಚ್ಚಿದರೆಂದುಕೊಂಡಿರಾ? ಇದರ ಹಿಂದೆ ಇನ್ಯಾರೊ ಇದ್ದಾರೆ. ಆ ಹಸೈನಾರ್ ನೋಡಿ, ನಿಮ್ಮ ಮಗನಿಗೆ ಅವನ ಮಗಳನ್ನು ಕೊಡಬೇಕಂತಿದ್ದನಂತಲ್ಲಾ? ನೀವು ಅದನ್ನು ನಿರಾಕರಿಸಿದಿರಿ- ತಾನೇ? ಅಂದಿನಿಂದಲೂ ಅವನು ನಿಮ್ಮ ಮೇಲೆ ಹಗೆ ಸಾಧಿಸಲು ಪ್ರಯತ್ನಿಸುತ್ತಿದ್ದಾನಂತೆ. ಈಗ ಈ ಸುಳಿವು ನೀಡಿದ ಕೆಲಸ ಅವನದೇ.” ವಾಸು ನುಡಿದನು. “ಹೌದು, ಈಗ ನಾವು ಮುಳ್ಳಿನಿಂದಲೇ ಮುಳ್ಳನ್ನು ತೆಗೆಯಬೇಕು.” ಮಮ್ಮೂಟಿ ಯೋಜನೆ ತಯಾರಿಸಿದನು. “ಅವನ ಮಾಲು ಎಲ್ಲಿ, ಯಾವಾಗ ಇಳಿಯುತ್ತದೆಂಬುದನ್ನು ಪತ್ತೆ ಹಚ್ಚಬೇಕು.” ಮಮ್ಮೂಟಿ ಮತ್ತು ವಾಸು ಈ ದಿಕ್ಕಿನಲ್ಲಿ ಕಾರ್ಯೋನ್ಮುಖರಾದರೂ. ಟ್ರಾನ್ಸ್‌ಮಿಟ್ಟರ್ ಬಳಿಯಲ್ಲಿ ಕುಳಿತು ಬೋಟಿನ ಸಿಗ್ನಲಿಗಾಗಿ ಕಾದು ಕುಳಿತು ಅದು ದೊರೆತೊಡನೆ ಸುಂಕಾಧಿಕಾರಿಗಳಿಗೆ ಸುಳಿವು ನೀಡಿದರು. ಸ್ಪೀಡ್ ಬೋಟುಗಳು ಸಮುದ್ರ ತೀರದಲ್ಲಿ ಮರೆಯಾಗಿ ನಿಂತು ಕಾಯ ತೊಡಗಿದುವು. ಮರುದಿನ ಪತ್ರಿಕೆಗಳಲ್ಲಿ ಸುಂಕದ ಇಲಾಖೆಯವರ ಸಾಹಸವನ್ನು ಕೊಂಡಾಡಲಾಯಿತು. ವಿದೇಶಿ ಬೋಟನ್ನು ಬೆನ್ನು ಹತ್ತಿ ಅದರಿಂದ ಇಪ್ಪತ್ತೈದು ಲಕ್ಷದ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಳ್ಳಲಾದ ವಿವರವನ್ನು ವರ್ಣಿಸಲಾಗಿತ್ತು. ಬೋಟಿನಲ್ಲಿದ್ದವರು ಸಮುದ್ರಕ್ಕೆ ಹಾರಿ ತಪ್ಪಿಸಿಕೊಂಡರು. ವಶಪಡಿಸಿಕೊಳ್ಳಲಾದ 210 ಸುಳಿ ಗಟ್ಟಿಗಳ ಸಂಖ್ಯೆ ಎಷ್ಟೆಂಬುದು ಯಾರಿಗೂ ತಿಳಿಯದೆ ನಿಗೂಢವಾಗಿ ಉಳಿಯಿತು! ಮರುದಿನ ಹಸೈನಾರ್ ತನ್ನ ಗೆಳೆಯರಲ್ಲಿ ಹೇಳಿಕೊಂಡನು. “ಐವತ್ತು ಲಕ್ಷದ ಮಾಲು. ಈ ಸುಂಕಾಧಿಕಾರಿಗಳು ಇಪ್ಪತ್ತೈದು ಲಕ್ಷಾಂತ ಕೊಟ್ಟಿದ್ದಾರಲ್ಲ? ಉಳಿದ ಇಪ್ಪತ್ತೈದು ಲಕ್ಷ ಏನಾಯಿತು?” ವಾಸ ಮತ್ತು ಮಮ್ಮೂಟಿಗೆ ಮುಯ್ಯಿ ತೀರಿಸಿದ ಆನಂದ ಮುಗಿಲು ಮುಟ್ಟಿತು. * * * * * ಅಲ್ಪರಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದರು ಎಂಬಂತಾಗಿತ್ತು ದೇಶದ ಪರಿಸ್ಥಿತಿ. ಕಪ್ಪು ಹಣ ವಹಿವಾಟುದಾರರು ದೇಶದ ತುಂಬ ತುಂಬಿಕೊಂಡರು. ಕಪ್ಪು ಹಣದ ಮಾಫಿಯಾ ದೊರೆಗಳು ಮತ್ತವರ ಸಮಾಜ ವಿರೋಧಿ ಶಕ್ತಿ ಗುಂಪುಗಳು ಸಮಾನಾಂತರ ಸರಕಾರಗಳನ್ನೇ ನಡೆಸುವಂತಾಗಿತ್ತು. ಸರಕಾರದ ಸಾರ್ವಜನಿಕ ವಿತರಣಾ ವ್ಯವಸ್ಥೆಗಿಂತಲೂ ಸಮರ್ಪಕವಾಗಿ ಇವರ ವಿತರಣಾ ವ್ಯವಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದವು. ಬೆಲೆಯೇರಿಕೆ, ಹಿಂಸೆ, ಕೊಲೆ ಪಾತಕಗಳಿಂದಾಗಿ ದೇಶ ಅವ್ಯವಸ್ಥೆಯ ತವರಾಗಿತ್ತು. ಸರಕಾರಕ್ಕೆ ಈ ಸಮಾಜ ವಿರೋಧಿ ಶಕ್ತಿಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಇನ್ನೂ ಒಂದು ತೊಡಕನ್ನೂ ಕೇಂದ್ರ ಸರಕಾರ ಎದುರಿಸತೊಡಗಿತ್ತು. ಪ್ರಧಾನ ಮಂತ್ರಿಗಳು ಚುನಾವಣೆಯ ಸಮಯದಲ್ಲಿ ವಾಹನಗಳು ಹಾಗೂ ಸರಕಾರೀ ಯಂತ್ರಗಳನ್ನು ಖಾಸಗಿ ಕೆಲಸಕ್ಕಾಗಿ ಯದ್ವಾ ತದ್ವಾ ಬಳಸಿಕೊಂಡಿದ್ದಾರೆ; ಆದ ಕಾರಣ ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕೆಂದು ಅವರ ವಿರುದ್ಧ ಚುನಾವಣೆಯಲ್ಲಿ ಸೋತ ಅಭ್ಯರ್ಥಿಯೊಬ್ಬರು ಮುಖ್ಯ ನ್ಯಾಯಾಲಯದಲ್ಲಿ ದೂರು ನೀಡಿದ್ದರು. ಪ್ರಾರಂಭದಲ್ಲಿ ಇದು ಯಾರ ಗಮನವನ್ನೂ ಸೆಳೆಯದೇ ಹೋದರೂ ಮೊಕದ್ದಮೆಯ ವಿಚಾರಣೆ ಪ್ರಾರಂಭವಾಗಿ ಪತ್ರಿಕೆಗಳು ಸಾಕಷ್ಟು ಪ್ರಚಾರ ನೀಡಿದಾಗ ಎಲ್ಲರ ಗಮನ ಸೆಳೆಯ ತೊಡಗಿತು. ಚುನಾವಣೆಯಲ್ಲಿ ಪ್ರಧಾನಿಗಳು ಅಪರಾಧಿಗಳಾಗಿದ್ದು ಅವರ ಆಯ್ಕೆ ಅಸಿಂಧು ಎಂದು ಮುಖ್ಯ ನ್ಯಾಯಾಲಯ ತೀರ್ಪಿತ್ತಿತ್ತು! ವಿರೋಧ ಪಕ್ಷಗಳು ಕೂಡಲೇ ಪ್ರಧಾನ ಮಂತ್ರಿಗಳು ರಾಜೀನಾಮೆ ನೀಡಬೇಕೆಂದು ಒತ್ತಾಯಿಸತೊಡಗಿದುವು. ಆದರೆ ಪ್ರಧಾನಿಗಳು ರಾಜೀನಾಮೆ ನೀಡಲಿಲ್ಲ. ಅವರ ಸರಕಾರ ದೇಶಾದ್ಯಂತ ತುರ್ತು ಪರಿಸ್ಥಿತಿಯನ್ನು ಘೋಷಿಸಿತು. ತಮ್ಮ ಮತ್ತು ತಮ್ಮ ಸರಕಾರದ ವಿರುದ್ಧ ಧ್ವನಿ ಎತ್ತಿದವರ ವಿರುದ್ಧ ಬಂಧನದ ವಾರಂಟ್ ಹೊರಡಿಸಿ ಸೆರೆಮನೆಗೆ ಪ್ರವಾಹ 211 ಕಳುಹಿಸಿದರು. ತುರ್ತು ಪರಿಸ್ಥಿತಿಯ ವಿರುದ್ಧ ಧ್ವನಿ ಎತ್ತಿದ ಹಲವಾರು ಪತ್ರಕರ್ತರು, ಸಾಹಿತಿಗಳು ಹಾಗೂ ಇತರ ರಾಜಕೀಯ ಪಕ್ಷಗಳ ಮುಖಂಡರು ಬಂಧಿಸಲ್ಪಟ್ಟರು; ಇನ್ನು ಕೆಲವರು ಭೂಗತರಾದರು. ಪೊಲೀಸ್ ರಾಜ್ಯ ಎಲ್ಲೆಲ್ಲೂ ರಾರಾಜಿಸತೊಡಗಿತು. ತುರ್ತು ಪರಿಸ್ಥಿತಿಯಿಂದಾದ ಒಂದು ಪ್ರಯೋಜನವೆಂದರೆ ಹಲವಾರು ಕಳ್ಳ ಸಾಗಣೆದಾರರು ಬಂಧಿಸಲ್ಪಟ್ಟದ್ದು. ಈ ವೇಳೆಯಲ್ಲಿ ಮಮ್ಮೂಟಿಯ ಊರಿನಲ್ಲೂ ಕೆಲವು ಬದಲಾವಣೆಗಳಾದವು. ನವಾಜ್ ಕಳುಹಿಸಿದ್ದ ವರದಿಯ ಆಧಾರದ ಮೇಲೆ ಮಮ್ಮೂಟಿ, ವಾಸು, ಹಸೈನಾರ್ ಮುಂತಾದವರ ಮೇಲೆ ಕೂಡಾ ಬಂಧನದ ವಾರಂಟ್ ಹೊರಟಿತು. ಒಂದಿಬ್ಬರು ರಾತ್ರೋರಾತ್ರಿ ತಲೆಮರೆಸಿಕೊಂಡು ಕೊಲ್ಲಿ ರಾಷ್ಟ್ರಗಳಿಗೆ ಪಲಾಯನ ಮಾಡಿದರು. ‘ಮಮ್ಮೂಟಿಹಾಜಾರರನ್ನು ಬಂಧಿಸುತ್ತಾರಂತೆ!’ ಎಂಬ ಸುದ್ದಿ ಕ್ಷಣ ಮಾತ್ರದಲ್ಲಿ ಊರಲ್ಲಿ ಹರಡಿತು. “ಹಾಜಾರರನ್ನು ಬಂಧಿಸುವವರು ಇನ್ನೂ ಹುಟ್ಟಿಲ್ಲ. ಹಾಜಾರರೆಂದರೆ ಯಾರೆಂದು ತಿಳಿದಿರಿ?” ಎಂದು ಮಮ್ಮೂಟಿಯ ಪರವಾದ ಕೆಲವು ಯುವಕರು ಶರ್ಟಿನ ಕಾಲರು ಸರಿಪಡಿಸಿಕೊಡು ಸೆಟೆದು ನಿಂತರು. ಆದರೆ ಮಮ್ಮೂಟಿಯ ಮನೆಯ ಮುಂದೆ ಪೊಲೀಸ್ ಅಧಿಕಾರಿಗಳಿಂದ ತುಂಬಿದ ಜೀಪ್ ಬಂದು ನಿಂತಾಗ ಅವರ ಗೇಟಿನ ಬಳಿ ಜನ ಸೇರಿ ತಮಾಷೆ ನೋಡತೊಡಗಿದರು. ಕೆಲವು ನಿಮಿಷಗಳಲ್ಲಿಯೇ ಪೊಲೀಸರು ಮಮ್ಮೂಟಿಯನ್ನು ಕರೆ ತಂದು ಜೀಪಿನಲ್ಲಿ ಹತ್ತಿಸಿಕೊಂಡು ಹೊರಟು ಹೋದಾಗ ಸೇರಿದ ಜನರೆಲ್ಲರೂ ಗರ ಬಡಿದವರಂತೆ ಸ್ತಂಭಿತವಾಗಿ ನಿಂತರು. “ಇದೆಲ್ಲ ಪೊಲೀಸರ ಸ್ಟಂಟ್. ಹಾಜಾರರನ್ನು ಬಂಧಿಸುವುದೆಂದರೇನು? ಲಕ್ಷಗಟ್ಟಲೆ ಬಿಸಾಡಿ ಅವರು ಹಿಂತಿರುಗುವುದು ಎಷ್ಟು ಹೊತ್ತು?” ಎನ್ನುತ್ತಾ ಅವನ ನಿಕಟವರ್ತಿಗಳು ಪೊಲೀಸ್ ಠಾಣೆಗೆ ಧಾವಿಸಿದರು. ಎಂಜಲಿಗೆ ಕೈಯೊಡ್ಡುತ್ತಿದ್ದ ಪೊಲೀಸ್ ಅಧಿಕಾರಿಗಳು ಅಷ್ಟು ಸುಲಭದಲ್ಲಿ ಮಮ್ಮೂಟಿಯ ವಿರೋಧಿಗಳಾಗುತ್ತಾರಾ? ಠಾಣೆಯ ಮುಖ್ಯಾಧಿಕಾರಿ ಮಮ್ಮೂಟಿಯೊಡನೆ, “ನಮಗೆ ಮೇಲಿನಿಂದ ಬಂದ ಆಜ್ಞೆ. ನಾವೇನೂ ಮಾಡುವಂತಿಲ್ಲ. ನೀವು ಡಾಕ್ಟರರಿಂದ ಸರ್ಟಿಫಿಕೇಟ್ ಮಾಡಿಸಿಕೊಂಡು ಆಸ್ಪತ್ರೆಗೆ ದಾಖಲಾಗಿ ಬಿಡಿ. ಕೆಲವು ದಿನಗಳಲ್ಲಿ ಜಾಮೀನಿನಲ್ಲಿ ಬಿಡುಗಡೆ ಮಾಡಿಸಿಕೊಳ್ಳಬಹುದು” ಎಂದು ಸಲಹೆ ನೀಡಿದನು. “ಮಮ್ಮೂಟಿ ಹಾಜಾರರಿಗೆ ಹಾರ್ಟ್ ಅಟ್ಯಾಕ್ ಆಗಿದೆಯಂತೆ. ಅವರನ್ನು 212 ಸುಳಿ ಆಸ್ಪತ್ರೆಗೆ ಸೇರಿಸಲಾಗಿದೆ!” ಎಂದು ಊರಲ್ಲಿ ಸುದ್ದಿ ಹರಡಿತು. ಆಸ್ಪತ್ರೆಗೆ ದಾಖಲಾಗಿದ್ದರೂ ಎಲ್ಲ ಸೌಕರ್ಯಗಳನ್ನೂ ನೀಡಲಾಯಿತು. ಕಾರಿನಲ್ಲಿ ಕುಳಿತು ತನ್ನ ಮನೆಗೆ ಹೋಗಿ ಬರುವ ಸೌಲಭ್ಯವನ್ನೂ ಆತನಿಗೆ ಕಲ್ಪಿಸಲಾಯಿತು! ತನ್ನ ಪ್ರತಿಷ್ಟೆ, ಹಣದ ಶಕ್ತಿ ಏನೇನೂ ಕುಗ್ಗಿಲ್ಲವೆಂದು ಊರವರಿಗೆ ತೋರಿಸಿಕೊಳ್ಳಲು ಆಗಾಗ ತನ್ನ ಮನೆಗೆ ಹೋಗಿ ಬರತೊಡಗಿದನು. “ಈ ಬಂಧನವೆಲ್ಲ ಈ ಆಧಿಕಾರಿಗಳ ನಾಟಕ!” ಎಂದು ಜನರಾಡಿಕೊಂಡರು. ಅದೇ ಸಮಯದಲ್ಲಿ ಯಾರ ಗಮನಕ್ಕೂ ಬಾರದ ಒಂದು ವಿಷಯವೂ ಜರಗಿತು. ಊರಿನ ಪ್ರವಾಸಿ ಮಂದಿರದಲ್ಲಿ ಈಗ ಸಿ.ಐ.ಡಿ ಅಧಿಕಾರಿಯಾಗಿರುವ ನವಾಜ್ ಬಂದಿಳಿದಿದ್ದನು. ಊರಿನ ಎಲ್ಲ ವಿದ್ಯಮಾನಗಳನ್ನೂ ಗಮನಿಸುತ್ತಿದ್ದಾತನು ಮೇಲಧಿಕಾರಿಗಳಿಗೆ ಸಂದೇಶ ರವಾನಿಸಿದನು. “ಮಮ್ಮೂಟಿಯನ್ನು ಬಂಧಿಸಲಾಗಿಲ್ಲ. ಆತನು ಸ್ವತಂತ್ರವಾಗಿ ಓಡಾಡಿಕೊಂಡಿದ್ದಾನೆ!” ಎಂದು. ಒಂದೆರಡು ದಿನಗಳಲ್ಲಿ ಪೋಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಬಂದಿಳಿದರು. ಎಲ್ಲವನ್ನೂ ಪರಿಶೀಲಿಸಿದ ಬಳಿಕ ಮಮ್ಮೂಟಿ, ವಾಸು, ಹಸೈನಾರ್, ಬಷೀರ್ ಮುಂತಾದ ದೊಡ್ಡ ಕುಳಗಳನ್ನೆಲ್ಲರನ್ನೂ ಬಂಧಿಸಿ ಕೇಂದ್ರ ಬಂದೀಖಾನೆಗೆ ಕೊಂಡೊಯ್ದರು. ಎಲ್ಲರ ಮೇಲೂ ಮೊಕದ್ದಮೆಗಳನ್ನು ಹೂಡಲಾಯಿತು. ಹಗಲಿರುಳೂ ಹವಾ ನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಫ್ರಿಜ್‍ನಿಂದ ಹಣ್ಣು ಹಂಪಲುಗಳನ್ನು ತೆಗೆದು ತಿನ್ನುತ್ತಾ, ಕೋಳಿ ಬಿರಿಯಾಣಿ, ಕೋಳಿ ಮಸಾಲೆ ಎಂದು ಬೇಕು ಬೇಕಾದಂತಹ ಖಾದ್ಯ ಪದಾರ್ಥಗಳನ್ನು ಬೇಕಾ ಬಿಟ್ಟಿಯಾಗಿ ತಿನ್ನುತ್ತಾ, ವಿದೇಶಿ ಮದ್ಯ ಕುಡಿಯುತ್ತಾ ರಾಜನಂತೆ ಕಾಲ ಕಳೆದ ಮಮ್ಮೂಟಿ ಈಗ ಬಂದೀಖಾನೆಯಲ್ಲಿ ಗಂಜಿಗಾಗಿ ಅಲ್ಯುಮಿನಿಯಂ ತಟ್ಟೆ ಹಿಡಿದು ಕ್ಯೂನಲ್ಲಿ ಕಾಯಬೇಕಾದ ಪರಿಸ್ಥಿತಿಯೊದಗಿತು! “ಛೆ, ಈ ಕಳ್ಳ ಪ್ರಧಾನಿಗೆ ಮತ್ತವರ ಪಾರ್ಟಿಗೆ ಅಷ್ಟೊಂದು ಹಣ ಸುರಿದೂ ಏನೂ ಪ್ರಯೋಜನವಾಗಲಿಲ್ಲವಲ್ಲ? ಕೊನೆಗೂ ಈ ಗತಿ ತಂದಿಟ್ಟರಲ್ಲ? ಇವರ ಮನೆ ಹಾಳಾಗ?” ಎಂದು ಮನದಲ್ಲೇ ಪ್ರಧಾನ ಮಂತ್ರಿಗಳಿಗೆ ಹಿಡಿ ಶಾಪ ಹಾಕಿದನು. ಬಂದೀಖಾನೆಯ ನೆಲದಲ್ಲಿ ಚಾಪೆಯೊಂದರಲ್ಲಿ ನುಸಿಗಳ ಕಡಿತವನ್ನು ಸಹಿಸಿಕೊಂಡು ಮಲಗಿದಾತನಿಗೆ ಬಹಳ ಹೊತ್ತಿನವರೆಗೆ ನಿದ್ರೆ ಸಮೀಪ ಸುಳಿಯುತ್ತಿರಲಿಲ್ಲ. ದೇಹ ಬಂಧನಕ್ಕೊಳಗಾಗಿದ್ದರೂ ಮನಸ್ಸು ಮಾತ್ರ ತನ್ನ ಮನೆ, ಹೆಂಡತಿಯರು, ಮಕ್ಕಳ ಬಳಿಗೆ ಹಾರಿ ಹೋಗುತ್ತಿತ್ತು. ಮಗನ ಯೋಚನೆಯಿಂದ ಮನ ಮತ್ತಷ್ಟು ಮುದುಡುತ್ತಿತ್ತು. ಪ್ರವಾಹ 213 ಚಿಕ್ಕ ಮಕ್ಕಳ ಮುಖಗಳೂ ಕಣ್ಮುಂದೆ ತೇಲುತ್ತಿದ್ದವು. ತಾನು ಮರಳಿ ಊರಿಗೆ ಬಂದ ಬಳಿಕ ಹುಟ್ಟಿದ ಮಗಳು ತಾಹಿರಾ. ಅವಳ ಬೆನ್ನ ಹಿಂದೆಯೇ ಬಂದವನು ಸಫರುಲ್ಲಾ. ತಾಹಿರಾಳಿಗೆ ಈಗ ಹನ್ನೆರಡು ವರ್ಷ. ಅಂದರೆ ತಾನು ಊರಿಗೆ ಬಂದು ಹದಿಮೂರು ವರ್ಷಗಳಾಗಿವೆ! ಸಫರುಲ್ಲಾಗೆ ಏಳೆಂಟು ತಿಂಗಳಿರುವಾಗ ಫರೀದಾಳನ್ನು ಕರೆದುಕೊಂಡು ಬಂದಿದ್ದೆ. ಫರೀದಾ ಬಂದ ಬಳಿಕ ರುಖ್ಯಾಬಿ ತನ್ನ ಬಳಿಗೆ ಬರಲೇ ಇಲ್ಲ! ಬಂದಿದ್ದರೆ ಇನ್ನೂ ಒಂದೆರಡು ಮಕ್ಕಳು ಹುಟ್ಟುತ್ತಿದ್ದರೊ ಏನೊ. ಫರೀದಾಳಂತೂ ಇಬ್ಬರು ಮಕ್ಕಳಾದೊಡನೆ ಬೊಂಬಾಯಿಯಲ್ಲೆ ಏನೊ ಮಾಡಿಸಿಕೊಂಡಳು. ಸಫರುಲ್ಲಾ ಚೆನ್ನಾಗಿ ಕಲಿಯುತ್ತಿದ್ದಾನೆ. ಅವನಾದರೂ ಓರ್ವ ಪೊಲೀಸ್ ಅಧಿಕಾರಿಯಾಗಿದ್ದರೆ ಚೆನ್ನಾಗಿತ್ತು! ಹಿಂದೆಂದೂ ಕುಟುಂಬದ ವಿಷಯ ಯೋಚಿಸಲು ಪುರುಸೊತ್ತಿಲ್ಲದ ಮಮ್ಮೂಟಿಗೆ ಈಗ ಚಿಂತಿಸಲು ಬೇಕಾದಷ್ಟು ಸಮಯವಿತ್ತು. ಆತನ ಮನಃ ಪಟಲದಲ್ಲಿ ಬಹಳ ಹಿಂದಿನ ಚಿತ್ರಗಳೂ ಮೂಡಿದುವು. ರುಖ್ಯಾ ಗರ್ಭಿಣಿಯಾಗಿದ್ದಾಗ ತಾನಾಕೆಯನ್ನು ಬಿಟ್ಟು ಹೋದದ್ದು ತಪ್ಪು. ಆದರೆ ತಾನಾದರೂ ಏನು ಮಾಡಬಹುದಾಗಿತ್ತು? ಆ ಹುಡುಗಿಯನ್ನು ಕಟ್ಟಿಕೊಂಡು ಇಲ್ಲೇ ಉಳಿದಿದ್ದರೆ ತನ್ನ ಪಾಡು ನಾಯಿ ಪಾಡಾಗುತ್ತಿತ್ತು. ಫರೀದಾಳನ್ನು ಮದುವೆಯಾದದ್ದು ರುಖ್ಯಾಗೆ ಸಹನೆಯಾಗಲಿಲ್ಲ. ತನ್ನ ಇಂದಿನ ಈ ಬದುಕಿಗೆ ಹಾದಿ ತೋರಿಕೊಟ್ಟವರೇ ಅವಳ ತಂದೆಯೆಂಬುದು ಇವರ್ಯಾರಿಗಾದರೂ ಗೊತ್ತಿದ್ದರೆ ತಾನೇ? ತಾಹಿರಾ ಏನು ಮಾಡುತ್ತಿದ್ದಾಳೊ. ಅವಳ ದೇಹ ಬಲಿತಂತೆ ಬುದ್ಧಿ ಬಲಿಯಲಿಲ್ಲ. ಚಿಕ್ಕಂದಿನಿಂದಲೇ ಕೊಂಚ ಪೆದ್ದು ಹುಡುಗಿ ಎಂದು ಹೆಸರು ಪಡೆದಿದ್ದಳು. ಮೊದಲೆಲ್ಲ ತರಗತಿಗಳಲ್ಲಿ ಎರಡೆರಡು ವರ್ಷ ಕುಳಿತುಕೊಳ್ಳುತ್ತಿದ್ದಳು. ಆದರೆ ಮಮ್ಮೂಟಿಯ ಪ್ರತಿಷ್ಠೆ ಬೆಳೆದಂತೆ, ‘ಹಾಜಾರರ ಮಗಳನ್ನು ಹೇಗೆ ಫೈಲ್ ಮಾಡುವುದು?’ ಎಂಬ ಮುಜುಗರದಿಂದ ಉಪಾಧ್ಯಾಯರು ಅವಳನ್ನು ಮುಂದಿನ ತರಗತಿಗೆ ದೂಡುತ್ತಿದ್ದರು. ಆರನೇ ತರಗತಿಯಲ್ಲಿದ್ದರೂ ಕೂಡಿಸಿ ಕಳೆಯುವ ಲೆಕ್ಕವೂ ಗೊತ್ತಿಲ್ಲದೆ ಉಪಾಧ್ಯಾಯರಿಗೆ ದೊಡ್ಡ ತಲೆನೋವಾಗಿದ್ದಳು. ಮನೆಯಲ್ಲಿ ಯಾರಿಗಾದರೂ ಈ ವಿಷಯ ತಿಳಿಸುವಾ ಎಂದರೆ ಮನೆಯವರಾದರೂ ಹುಡುಗಿಯ ಶಾಲೆಯ ಕಡೆಗೆ ಸುಳಿಯುವ ಪದ್ಧತಿಯೇ ಇಲ್ಲ. ಸರ್ಟಿಫಿಕೇಟಿಗೆ ಅಣ್ಣ ಜಮಾಲನು ಸಹಿ ಹಾಕಿ ಕಳುಹಿಸುತ್ತಿದ್ದನು. ಕೊನೆಗೊಂದು ದಿನ ತರಗತಿಯ ಉಪಾಧ್ಯಾಯರೇ ಮಮ್ಮೂಟಿಯ ಬಳಿ ಬಂದು ಮಗಳ ವಿಷಯ ತಿಳಿಸಿದ್ದರು. “ನಿಮ್ಮ ಮಗಳು ಇತರ 214 ಸುಳಿ ಹುಡುಗಿಯರಂತಿಲ್ಲ. ವಿದ್ಯೆ ತಲೆಗೆ ಹತ್ತುವುದೇ ಇಲ್ಲ. ಕೆಲವೊಮ್ಮೆ ತೀರಾ ಪೆದ್ದು ಪೆದ್ದಾಗಿ ವರ್ತಿಸುತ್ತಾಳೆ.” ಎಂದೆಲ್ಲ ದೂರು ನೀಡಿದ್ದರು. ಆಗ ಮಮ್ಮೂಟಿಗೆ ಈ ಕುರಿತು ಚಿಂತಿಸಲು ವೇಳೆಯೇ ಇರಲಿಲ್ಲ. ಅವನು ಆ ಉಪಾಧ್ಯಾಯರೊಡನೆ, “ಅವಳಿನ್ನೂ ಚಿಕ್ಕವಳಲ್ಲವಾ? ಇಷ್ಟಕ್ಕೂ ಅವಳು ಚುರುಕಿನಿಂದ ಕಲಿತು ಏನಾಗಬೇಕಾಗಿದೆ? ಸುಮ್ಮನೆ ಮನೆಯಲ್ಲಿ ಕುಳಿತು ವೇಳೆ ಕಳೆಯುವುದಕ್ಕಿಂತ ಶಾಲೆಗೆ ಹೋಗಲಿ ಎಂದು ಕಳುಹಿಸುತ್ತಿದ್ದೇನೆ. ನಿಮಗೆ ಶಾಲಾ ವಾರ್ಷಿಕಕ್ಕೆ ಹಣವೇನಾದರೂ ಬೇಕಾದರೆ ಕೇಳಿ. ಈಗ ನನಗೆ ಅರ್ಜೆಂಟ್ ಹೊರ ಹೋಗಬೇಕಾಗಿದೆ” ಎನ್ನುತ್ತಾ ಕೆಲಸದ ಹುಡುಗನನ್ನು ಕರೆದು, “ಮಾಸ್ತರಿಗೆ ಚಹಾ ತಿಂಡಿ ತಂದು ಕೊಡು” ಎಂದು ಹೇಳಿ ಕಾರಿನಲ್ಲಿ ಕಾಯುತ್ತಿದ್ದ ವಾಸುವಿನೊಡನೆ ಹೊರಟು ಹೋಗಿದ್ದನು. ಆ ಮೇಲೆ ಒಂದೆರಡು ಬಾರಿ ಫರೀದಾಬಿ ಕೂಡಾ ಮಮ್ಮೂಟಿಯೊಡನೆ ಸೂಕ್ಷ್ಮವಾಗಿ ಈ ವಿಷಯ ತಿಳಿಸಿದ್ದಳು. “ತಾಹಿರಾ ಎಲ್ಲರಂತಿಲ್ಲ. ಕೆಲವೊಮ್ಮೆ ಪೆದ್ದು ಪೆದ್ದಾಗಿ ಆಡ್ತಾಳೆ. ಅವಳನ್ನು ಬೆಂಗಳೂರಿಗೆ ಕರೆದೊಯ್ದು ಯಾರಾದರೂ ಒಳ್ಳೆಯ ಡಾಕ್ಟರಿಗೆ ತೋರಿಸಿದರೆ ಆಗಬಹುದೇನೊ” ಎಂದು. ಫರೀದಳ ಸಲಹೆ ಕೇಳಿದ ರುಖ್ಯಾಬಿ ಸಿಡಿದೆದ್ದಳು. “ನನ್ನ ಮಗಳ ವಿಷಯದಲ್ಲಿ ಏನೇನೋ ಅಪಪ್ರಚಾರ ಮಾಡಿ ಮದುವೆಯಾಗದಂತೆ ಮಾಡುವ ಉದ್ದೇಶವೇನೊ. ಮಕ್ಕಳು ಕೆಲವೊಮ್ಮೆ ಹಾಗೆಲ್ಲ ಆಡ್ತಾರೆ. ಅದೆಲ್ಲ ಇವಳ ಕಣ್ಣಿಗೆ ವಿಚಿತ್ರವಾಗಿ ಕಾಣುತ್ತದೆ! ನನ್ನ ಮಕ್ಕಳ ವಿಷಯದಲ್ಲಿ ನೀನು ಮೂಗು ತೂರಿಸುವುದು ಬೇಡ” ಎಂದು ಜೋರಾಗಿ ಒದರಿದ್ದಳು. ಆಗ ಮಮ್ಮೂಟಿಯೆ ಫರೀದಾಳೊಡನೆ, “ಎಷ್ಟಾದರೂ ಇವಳ ಮಗಳಲ್ಲವಾ? ಅದಕ್ಕೆ ಇನ್ನೆಷ್ಟು ಬುದ್ಧಿ ಇದ್ದೀತು? ನೀನು ಸುಮ್ಮನಿರು” ಎಂದು ಆಕೆಯ ಬಾಯಿ ಮುಚ್ಚಿಸಿದ್ದನು. ಮುಂದೆಂದೂ ಫರೀದಾ ಈ ವಿಷಯವನ್ನೆತ್ತಲಿಲ್ಲ. ಮಮ್ಮೂಟಿಗೆ ಈಗ ಈ ಮಗಳ ಮೇಲೆ ಸಮನಾಗಿ ನಿಗಾ ಇಡಬೇಕೆಂದು ತೋರಿತು. ಅವಳಿಗೆ ಆಗಲೇ ಹನ್ನೆರಡು ವರ್ಷ ಆಗಿ ಹೋಯ್ತೇ? ಇನ್ನು ಒಂದೆರಡು ವರ್ಷಗಳಲ್ಲಿ ಅವಳ ಮದುವೆಯ ಸಿದ್ಧತೆಗೆ ತೊಡಗಬೇಕು. ಅವಳ ಮದುವೆ ಸುಲಭದಲ್ಲಿ ನೆರವೇರೀತೇ? ಅಥವಾ ಜೈಲಿಗೆ ಹೋಗಿ ಬಂದವನ ಮಗಳೆಂದು ಗಂಡು ದೊರೆಯಲು ಕಷ್ಟವಾದೀತೇ? ಜೈಲಿಗೆ ಹೋಗಿ ಬಂದವನೆಂದು ಸಮಾಜ ತನ್ನನ್ನು ಹೇಗೆ ಬರಮಾಡಿಕೊಳ್ಳಬಹುದು? ಸಮಾಜದಿಂದ ತನಗೆ ಮೊದಲಿನಂತೆಯೇ ಗೌರವ ದೊರೆತೀತೇ? ಇಂತಹ ಯೋಚನೆಗಳಲ್ಲೇ ಪ್ರವಾಹ 215 ರಾತ್ರಿಯನ್ನು ಬೆಳಗಾಗಿಸುತ್ತಿದ್ದನು. ಈ ಬಂಧನವಲ್ಲದಿದ್ದರೆ ಮುಂದಿನ ಬಾರಿಯ ಚುನಾವಣೆಯಲ್ಲಿ ಒಂದು ಕೈ ನೋಡಬಹುದಾಗಿತ್ತು. ಈ ಆಡಳಿತ ಪಕ್ಷಕ್ಕೆ ತಾನು ಚುನಾವಣಾ ನಿಧಿಗೆಂದು ನೀಡಿದ ಹಣಕ್ಕೆ ಲೆಕ್ಕವಿಟ್ಟವರಾರು? ಸುಂಕಾಧಿಕಾರಿಗಳು ಹಾಗೂ ಇನ್ನಿತರ ಕೆಲವು ಅಧಿಕಾರಿಗಳಿಗೆ ಅವರ ಊರುಗಳಲ್ಲಿ ಕಟ್ಟಿಸಿಕೊಟ್ಟ ಬಂಗಲೆಗಳೆಷ್ಟು? ಈ ಅಧಿಕಾರಿಗಳ ಮಕ್ಕಳು ಡಾಕ್ಟರರೂ ಇಂಜಿನಿಯರರೂ ಆಗಲು ಕೂಡಾ ತಾನು ಹಣ ನೀಡಿದ್ದಿದೆ! ತನ್ನ ಸಂಪಾದನೆಯಲ್ಲಿ ಎಲ್ಲರೂ ಪಾಲು ಪಡೆದಿದ್ದಾರೆ! ಆದರೆ ಜೈಲು ಶಿಕ್ಷೆ ಮಾತ್ರ ತನ್ನದಾಯಿತು! ಇನ್ನು ಇಲ್ಲಿಂದ ಎಂದಿಗೆ ಬಿಡುಗಡೆಯೊ. ಜೈಲಿನ ಈ ಒದ್ದೆ ನೆಲದಲ್ಲಿ ಮಲಗುವ ಕಷ್ಟ ಇನ್ನೆಂದಿಗೂ ಬೇಡ. ಒಮ್ಮೆ ಇಲ್ಲಿಂದ ಪಾರಾದರೆ ಸಾಕು. ಇನ್ನು ಮುಂದೆ ಈ ದಂಧೆ ಬೇಡವೇ ಬೇಡ! ಆದರೆ ಹಾಗೆ ಬೇಡವೆನ್ನಲು ಸಾಧ್ಯವಾದೀತೇ? * * * * * ಅತ್ತ ಊರಿನಲ್ಲಿ ಎಲ್ಲರೂ ಲಗಾಮಿಲ್ಲದೆ ಕುದುರೆಗಳಂತಾಡುತ್ತಿದ್ದರು. ರುಖ್ಯಾ ನಿತ್ಯವೂ ಫರೀದಾಬಿಯೊಡನೆ ಕಾಲು ಕೆರೆದು ಜಗಳವಾಡುತ್ತಿದ್ದಳು. ಜಮಾಲ್ ರಾತ್ರಿ ಹನ್ನೆರಡು ಗಂಟೆಯ ಬಳಿಕ ಕುಡಿದು ತೂರಾಡುತ್ತಾ ಮನೆಗೆ ಬಂದು ಹೆಂಡತಿಯೊಡನೆ ಜಗಳಾಡುತ್ತಿದ್ದನು. ಆತನಿಗೆ ಆರ್ಥಿಕ ಸಮಸ್ಯೆಗಳೇನೂ ಬಾಧಿಸುತ್ತಿರಲಿಲ್ಲವಾಗಿ ಮನ ಬಂದಂತೆ ಖರ್ಚು ಮಾಡುತ್ತಾ ತಿಂದು, ಕುಡಿದು ಅರಾಮವಾಗಿ ಬದುಕುತ್ತಿದ್ದನು. ಬದುಕಿನಲ್ಲಿ ಯಾವ ಗುರಿಯೂ ಆತನಿಗಿರಲಿಲ್ಲ. ಚಿಕ್ಕ ಸಫರುಲ್ಲಾ ಶಾಲೆಗೆ ಹೋಗುವುದನ್ನೇ ನಿಲ್ಲಿಸಿಬಿಟ್ಟಿದ್ದನು. ‘ಶಾಲೆಗೆ ಹೋಗುವುದಿಲ್ಲವೇ?’ ಎಂದು ಯಾರಾದರೂ ಕೇಳಿದರೆ ‘ಆ ಮಾಸ್ತರ ಹೊಡೆತ, ಬಡಿತವೆಲ್ಲ ಯಾರಿಗೆ ಬೇಕು? ನಾನು ಹೋಗುವುದಿಲ್ಲ’ ಎನ್ನುತ್ತಿದ್ದನು. ಇದನ್ನು ಕೇಳಿಸಿಕೊಂಡ ಉಮ್ಮಾಲಿ, “ಏನು, ಮಾಸ್ತರು ನಿನಗೆ ಹೊಡೆದರಾ? ಮಮ್ಮೂಟಿ ಹಾಜಿಯವರ ಮಗನ ಮೇಲೆ ಕೈಯೆತ್ತುವ ಧೈರ್ಯ ಕೂಡಾ ಬಂತಾ ಮಾಸ್ತರಿಗೆ? ಹೂಂ.... ಅವನೊಮ್ಮೆ ಊರಿಗೆ ಬರಲಿ. ಎಲ್ಲರಿಗೂ ಬುದ್ಧಿ ಕಲಿಸಬೇಕು.” ಎಂದು ರೇಗಿದಳು. ಮೊಮ್ಮಗನು ಗೆಳೆಯರನ್ನು ಹುಡುಕಿಕೊಂಡು ಹೊರಟನು. ಆಚುಮ್ಮ ಮತ್ತು ಕಾದರ್ ಈಗಲೂ ಮಮ್ಮೂಟಿಯ ಮನೆಯಲ್ಲೇ ಇದ್ದರು. ಕಾದರ್ ಮಮ್ಮೂಟಿಯ ಮನೆಯವನೇ ಆಗಿದ್ದು ಕಾರಿನ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದನು. ಅವರಿಗೆ ಮಮ್ಮೂಟಿ ಮನೆ ಕಟ್ಟಿಸಿಕೊಟ್ಟಿದ್ದರೂ ಅವರು ಅಲ್ಲಿಗೆ ಹೋಗುತ್ತಿದ್ದುದು ಎಂದಾದರೊಮ್ಮೆ ಮಾತ್ರ. ಕಾದರನೀಗ 216 ಸುಳಿ ಸುಮಾರು ಇಪ್ಪತ್ತೆಂಟು ವರ್ಷಗಳ ಯುವಕ. ಆತನು ಮೂಸಾ ಹಾಜಿಯವರ ಮನೆಯಲ್ಲಿದ್ದಾಗ ಒಂದೆರಡು ವರ್ಷ ಶಾಲೆಗೆ ಹೋಗಿದ್ದನು. ಹೇಗೊ ಜೋಡಿಸಿ ಓದುವಷ್ಟಕ್ಕೆ ಅವನ ವಿದ್ಯೆ ಪೂರ್ಣಗೊಂಡಿತ್ತು. ಬರಹವನ್ನು ಎಂದೊ ಮರೆತಾಗಿತ್ತು. ಮಮ್ಮೂಟಿ ಮನೆ ಯಜಮಾನನಾದ ಬಳಿಕ ಕಾದರ್ ಕೂಡಾ ಮನೆಯವನೇ ಆಗಿ ಬಿಟ್ಟಿದ್ದನು. ಮಮ್ಮೂಟಿಯ ಮನೆಯಲ್ಲಿ ಉಣ್ಣಲು, ತಿನ್ನಲು ಕೊರತೆ ಇಲ್ಲವಾದ ಕಾರಣ ದಷ್ಟಪುಷ್ಟವಾಗಿ ಬೆಳೆದಿದ್ದನು. ಎತ್ತರವಾಗಿ, ಸುಂದರನಾಗಿ ದೃಢಕಾಯನಾಗಿದ್ದು ಮಮ್ಮೂಟಿಯ ಕಾರು ಚಾಲಕನಾಗಿದ್ದು ಆತನ ಎಲ್ಲ ಕೆಲಸಗಳಲ್ಲೂ ಪಾಲುದಾರನಾದನು. ಹಾಗಾಗಿಯೇ ಈಗ ಆಚುಮ್ಮಳ ಕಿವಿ, ಕತ್ತು, ಕೈಗಳಲ್ಲೂ ಬಂಗಾರದ ಆಭರಣಗಳು ಸಾಕಷ್ಟಿದ್ದುವು. ಅವುಗಳನ್ನು ಧರಿಸಿ ತನ್ನ ಸ್ವಂತ ಮನೆಯಲ್ಲಿ ಒಂಟಿಯಾಗಿ ಮಲಗಲು ಭಯವಾಗಿ ಮಮ್ಮೂಟಿಯ ಮನೆಯಲ್ಲೇ ಭದ್ರವಾಗಿ ತಾಯಿ ಮಗ ತಳವೂರಿದ್ದರು. ಮಗನಿಗೊಂದು ಮದುವೆ ಮಾಡಿಸಬೇಕೆಂದು ಆಚುಮ್ಮ ಉಮ್ಮಾಲಿ ಮತ್ತು ರುಖಿಯಳೊಡನೆ ಹೇಳುತ್ತಲೇ ಇದ್ದಳು. ಒಂದೆರಡು ಹುಡುಗಿಯರನ್ನು ನೋಡಿಯೂ ಇದ್ದಳು. ಆ ಕುರಿತು ಆಲೋಚಿಸಲು ಮಮ್ಮೂಟಿಗೆ ವೇಳೆ ಇರಲಿಲ್ಲವಾದ ಕಾರಣ ಕಾದರ್‌ನ ಮದುವೆ ಮುಂದಕ್ಕೆ ಹೋಗಿತ್ತು. ಮಮ್ಮೂಟಿ ಊರಲ್ಲಿದ್ದಾಗ ರುಖ್ಯಾ ಒಳಗಿಂದೊಳಗೆ ಫರೀದಾಬಿಗೆ ಕಿರುಕುಳ ನೀಡುತ್ತಿದ್ದವಳು ಈಗ ಬಹಿರಂಗವಾಗಿಯೇ ಕಿರುಕುಳ ನೀಡತೊಡಗಿದಳು. ಮೊದಲೆಲ್ಲ ಸವತಿಯರ ಕದನದಲ್ಲಿ ಆಚುಮ್ಮ ಫರೀದಾಬಿಯ ಪಕ್ಷ ವಹಿಸುತ್ತಿದ್ದಳು. ಮಮ್ಮೂಟಿಯ ಮೆಚ್ಚುಗೆ ಗಳಿಸಲು ಇದು ಅಗತ್ಯವೆಂಬುದು ಆಕೆಯ ಅನಿಸಿಕೆ. ಅದಕ್ಕಾಗಿ ಆಕೆ ರುಖ್ಯಾಳ ಕೋಪಕ್ಕೆ ಗುರಿಯಾದುದೂ ಇತ್ತು. ಆದರೆ ಮಮ್ಮೂಟಿ ಊರಲ್ಲಿದ್ದಾಗ ರುಖ್ಯಾಳ ಬೇಳೆ ಬೇಯುತ್ತಿರಲಿಲ್ಲವಾದ ಕಾರಣ ಆಕೆಗೆ ತೊಂದರೆಯೇನೂ ಆಗಿರಲಿಲ್ಲ. ಆದರೆ ಮಮ್ಮೂಟಿ ಜೈಲಿಗೆ ಹೋದ ಬಳಿಕ ಆಚುಮ್ಮ ಕೂಡಾ ಪಕ್ಷ ಬದಲಾಯಿಸಿದ್ದಳು. ಈಗ ರುಖ್ಯಾಬಿಯನ್ನು ಎದುರು ಹಾಕಿಕೊಂಡರೆ ತನಗೆ ಆ ಮನೆಯಲ್ಲಿ ಉಳಿಗಾಲವಿಲ್ಲವೆಂಬುದು ಆಕೆಗೆ ಮನದಟ್ಟಾಗಿತ್ತು. ಫರೀದಾಬಿ ಮನದಲ್ಲೇ ಕೊರಗುತ್ತಿದ್ದಳು. ತನ್ನವರೆಂದು ಆಕೆಗಿರುವುದು ಆಕೆಯ ಮಕ್ಕಳು ಮಾತ್ರ. ಆದರೆ ಮಗ ಮುನೀರ್ ಕೂಡಾ ಈ ವರ್ಷ ದೂರ ಹಾಸ್ಟೆಲಿನಲ್ಲಿದ್ದು ಇಂಜಿನಿಯರಿಂಗ್ ಕಾಲೇಜಿಗೆ ಸೇರಿದ್ದನು. ಈಗ ಆಕೆಯ ಬಳಿ ಪ್ರವಾಹ 217 ಇರುವವರು ಮಗಳು ಮತ್ತು ಡಾಕ್ಟರಾಗಿಯೂ ಡಾಕ್ಟರಾಗದ ಅಳಿಯ ಮತ್ತು ಅವರ ಮಗು. ತಿಂದುಂಡು ಸುಖವಾಗಿರಲು ಬೇಕಾದಷ್ಟಿದ್ದರೂ ರುಖ್ಯಾಳ ಸಣ್ಣತನದಿಂದಾಗಿ ಒಮ್ಮೊಮ್ಮೆ ಫರೀದಾ ಉಪವಾಸ ಮಲಗುತ್ತಿದ್ದಳು. ತನ್ನ ಮಗಳು ಮತ್ತು ಅಳಿಯನಿಗಾಗಿ ವಿಶೇಷ ಅಡುಗೆ ಮಾಡಿಸಿದರೆ ರುಖ್ಯಾ ತಕರಾರು ತೆಗೆಯುತ್ತಿದ್ದಳು. “ಯಾರು ತಂದು ಹಾಕ್ತಾರೇಂತ ಈ ರೀತಿ ಖರ್ಚು ಮಾಡ್ತಾಳೊ. ಇವಳ ಅಳಿಯನೇನು ರಾಜಕುಮಾರನೇ? ಎಲ್ಲರಿಗೂ ಮಾಡಿದ್ದು ಅವನಿಗಾಗುವುದಿಲ್ಲವಾ?” ಎಂದು ಚುಚ್ಚಿ ನುಡಿಯುತ್ತಿದ್ದಳು. ಸವತಿಯ ಮೂದಲಿಕೆಯನ್ನು ಕೇಳಿ ಮನಸ್ಸು ನೊಂದ ಫರೀದಾಬಿ ತನ್ನ ಕುಟುಂಬಕ್ಕಾಗಿ ಅಡುಗೆ ಮಾಡಲು ಬೇರೆಯೇ ಒಲೆ ಹೂಡಿದಳು. ಸದಾ ಸವತಿಯ ತಪ್ಪು ಹುಡುಕುವುದರಲ್ಲೇ ಮಗ್ನಳಾದ ರುಖ್ಯಾಬಿಗೆ ಮನೆಯ ಇತರ ಆಗು ಹೋಗುಗಳೊಂದೂ ಗಮನಕ್ಕೆ ಬರುತ್ತಿರಲಿಲ್ಲ. ತಾಹಿರಾ ಬೆಳೆದು ದೊಡ್ಡವಳಾಗಿದ್ದಳು. ಅವಳನ್ನು ಕಾರಿನಲ್ಲಿ ಶಾಲೆಗೆ ಕರೆದುಕೊಂಡು ಹೋಗಿ ಹಿಂದಕ್ಕೆ ಕರೆದೊಯ್ಯುವ ಕೆಲಸ ಕಾದರ್‌ನದು. ಶಾಲೆ ಬಿಟ್ಟ ಬಳಿಕ ಒಮ್ಮೊಮ್ಮೆ ಆತನು ತಾಹಿರಾಳನ್ನು ಸಮುದ್ರ ತೀರಕ್ಕೊ ಇನ್ನೆಲ್ಲಿಗೂ ಸುತ್ತಾಡಲು ಕರೆದೊಯ್ಯುತ್ತಿದ್ದನು. ದಿನಕ್ಕೊಂದು ಬಾರಿಯಾದರೂ ಐಸ್‍ಕ್ರೀಂ ತಿನ್ನುವುದು ಆಕೆಗೆ ಎಂದೊ ರೂಢಿಯಾಗಿತ್ತು. ಮನೆಗೆ ಹಿಂತಿರುಗಿದಾಗ ತಾಯಿಯೇನಾದರೂ “ಎಲ್ಲಿಗೆ ಹೋಗಿದ್ದೆ?” ಎಂದು ಕೇಳಿದರೆ, “ಐಸ್‍ಕ್ರೀಂ ತಿನ್ನುವುದಕ್ಕೆ” ಎಂದು ಹೇಳಿ ಪೆದ್ದು ಪೆದ್ದಾಗಿ ನಗುತ್ತಿದ್ದಳು. ಮಮ್ಮೂಟಿ ಜೈಲಿಗೆ ಹೋದ ಬಳಿಕ ಆತನ ವಾಹನ ಚಾಲಕರು ನಿರುದ್ಯೋಗಿಗಳಾಗಿ ಅಲೆಯತೊಡಗಿದರು. ಹಣದ ಹುಚ್ಚು ಹೊಳೆಯಲ್ಲಿ ತೇಲುತ್ತಾ ಪ್ರತಿಷ್ಠೆ ಮೆರೆಯುತ್ತಾ ಓಡಾಡುತ್ತಿದ್ದ ಈ ಹುಡುಗರು ಮೈ ಬಗ್ಗಿಸಿ ದುಡಿಯುವುದನ್ನು ಎಂದೊ ಮರೆತಿದ್ದರು. ಬೇರೆ ಕೆಲಸ ಮಾಡುವುದೇ ತಮ್ಮ ಗೌರವಕ್ಕೆ ಕುಂದೆಂದುಕೊಂಡು ಕುಡಿತ ಮತ್ತು ಜೂಜುಗಳಲ್ಲಿ ಮೈ ಮರೆತರು. ಕೈಯಲ್ಲಿ ಕಾಸಿಲ್ಲದಾಗ ಹೆಂಡತಿಯರ ಚಿನ್ನಾಭರಣಗಳನ್ನು ಮಾರತೊಡಗಿದರು. ಹಲವರು ಉದ್ಯೋಗವನ್ನರಸಿಕೊಂಡು ಕೊಲ್ಲಿಗೆ ಪ್ರಯಾಣ ಬೆಳೆಸಿದರು. * * * * * 218 ಸುಳಿ ಸುಳಿ ದೇಶದಲ್ಲಿ ಮತ್ತೊಮ್ಮೆ ಚುನಾವಣೆಯ ಗಾಳಿ ಬೀಸಿತು. ಕಳ್ಳ ಸಾಗಣೆದಾರರು. ಕಪ್ಪು ಹಣದ ಖದೀಮರೆಂದು ಬಹಳಷ್ಟು ಜನರನ್ನು ಸೆರೆಮನೆಗೆ ತುರುಕಲಾಗಿತ್ತು. ಇದೇನೊ ಒಳ್ಳೆದಾಯಿತೆಂದು ಜನರಾಡಿಕೊಳ್ಳುತ್ತಿದ್ದಂತೆ ತುರ್ತು ಪರಿಸ್ಥಿತಿಯ ಹೆಸರಿನಲ್ಲಿ ಜನರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಯಿತು. ಇದನ್ನು ವಿರೋಧಿಸಿದ ಬುದ್ಧಿ ಜೀವಿಗಳು ಹಾಗೂ ಮತ್ತಿತರರನ್ನು ಸೆರೆಮನೆಗೆ ತಳ್ಳಲಾಯಿತು. ಆದರೆ ಕೋಟಿಗಟ್ಟಲೆ ಜನರ ಮೇಲೆ ಈ ರೀತಿ ಸರ್ವಾಧಿಕಾರವನ್ನು ಚಲಾಯಿಸಿ ಬಾಯಿ ಮುಚ್ಚಿಸಿ ಆಡಳಿತ ನಡೆಸುವುದು ಸುಲಭದ ಮಾತಾಗಿರಲಿಲ್ಲ. ಹೊಸ ಚುನಾವಣೆ ನಡೆಯಬೇಕೆಂದು ಹಲವು ಮೂಲಗಳಿಂದ ಸರಕಾರದ ಮೇಲೆ ಒತ್ತಡ ಹಾಕಿಸಲಾರಂಭವಾಯಿತು. ಈ ಹಂತದಲ್ಲಿ, ತುರ್ತು ಪರಿಸ್ಥಿತಿ ಘೋಷಣೆಯಾದ ಎರಡು ವರ್ಷಗಳ ಬಳಿಕ ಚುನಾವಣೆ ಘೋಷಿಸಲ್ಪಟ್ಟಿತು. ತುರ್ತು ಪರಿಸ್ಥಿತಿಯನ್ನು ದೇಶದ ಮೇಲೆ ಬಲವಂತವಾಗಿ ಹೇರಿದ ರಾಜಕೀಯ ಪಕ್ಷ ಮತ್ತು ಸರಕಾರವನ್ನು ಜನರು ಮತದಾನದ ಮೂಲಕ ತಿರಸ್ಕರಿಸಿದರು. ಅಷ್ಟರ ಮಟ್ಟಿಗೆ ದೇಶದ ಜನರು ಪ್ರಜ್ಞಾವಂತರಾಗಿದ್ದರು. ಪ್ರಧಾನ ಮಂತ್ರಿಗಳು ಮತ್ತವರ ಆಳುವ ಪಕ್ಷ ಚುನಾವಣೆಯಲ್ಲಿ ಸೋತು ಬಹುಮತ ಕಳೆದುಕೊಂಡಿತು. ಈ ವರೆಗೂ ಅಧಿಕಾರಕ್ಕಂಟಿ ಕುಳಿತ ಪ್ರಧಾನ ಮಂತ್ರಿಗಳು ಈಗ ರಾಜೀನಾಮೆ ನೀಡಲೇಬೇಕಾಯಿತು. ಅವರು ರಾಜೀನಾಮೆ ನೀಡುವ ಮೊದಲು ಎಲ್ಲ ಬಂದಿಖಾನೆಗಳ ಬಾಗಿಲು ತೆರೆಸಿ ತುರ್ತು ಪರಿಸ್ಥಿತಿಯ ಹೆಸರಿನಲ್ಲಿ ಒಳ ಹಾಕಿದವರನ್ನು ಬಿಡುಗಡೆಗೊಳಿಸುವ ಆಜ್ಞೆಯನ್ನು ಹೊರಡಿಸಿದರು. ಈ ಚುನಾವಣೆಯಲ್ಲಿ ವಾಸುವಿನ ಹೆಂಡತಿ ಕಲ್ಯಾಣಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದದ್ದೊಂದು ವಿಶೇಷವಾಗಿತ್ತು. ಮಮ್ಮೂಟಿಯೂ ಬಿಡುಗಡೆಗೊಂಡು ಊರಿಗೆ ಬಂದನು. ‘ಹಾಜಾರರು ಜೈಲಿನಿಂದ ಬಿಡುಗಡೆಗೊಂಡು ಬಂದರಂತೆ!’ ಎಂಬ ಸುದ್ದಿ ಊರೆಲ್ಲ ಹರಡಿತು. ಒಬ್ಬೊಬ್ಬರಾಗಿ ಮಮ್ಮೂಟಿಯನ್ನು ಭೇಟಿಯಾಗಲು ಬಂದರು. ಅವರೊಡನೆ ಆತನು, “ಅಲ್ಲಿ ನಾನು ಸುಖವಾಗಿಯೇ ಇದ್ದೆ. ನನಗೆ ಬೇಕಾದ ಎಲ್ಲಾ ಸುಳಿ 219 ಸೌಕರ್ಯಗಳೂ ದೊರಕುತ್ತಿದ್ದುವು. ನಮ್ಮನ್ನು ಜೈಲಿಗೆ ಹಾಕಿದ್ದೆಲ್ಲ ನಾಟಕ!” ಎನ್ನುತ್ತಿದ್ದನು. ತನ್ನನ್ನು ಊರವರು ಹೇಗೆ ಸ್ವಾಗತಿಸಬಹುದೆಂಬ ಸಂದೇಹದಿಂದಲೇ ಊರಿಗೆ ಬಂದವನಿಗೆ, ಮರುದಿನದಿಂದಲೇ ತನ್ನ ಮನೆಯಲ್ಲಿ ಜನರು ಗಿಜಿಗುಟ್ಟಿ ನೆರೆಯತೊಡಗಿದಾಗ ಆತನ ಆತಂಕ ಮಾಯವಾಯಿತು. ಆರ್ಥಿಕ ಒಲವೊಂದಿದ್ದರೆ ಜನರು ಎಂತಹವನನ್ನೂ ಮೇಲೆತ್ತಿ ಹಿಡಿಯುತ್ತಾರೆಂಬ ಆತನ ಈ ಹಿಂದಿನ ನಂಬಿಕೆ ಮತ್ತಷ್ಟು ದೃಢಪಟ್ಟಿತು. ಆತನು ಊರಿಗೆ ಹಿಂತಿರುಗಿದ ಕೆಲವು ದಿನಗಳ ಬಳಿಕ ವಾಸು ಮತ್ತು ಆತನ ಗೂಢಾಲೋಚನೆಯೂ ಆರಂಭವಾಯಿತು. ಆದರೆ ತಮ್ಮ ವ್ಯವಹಾರದ ಕುರಿತು ಮಮ್ಮೂಟಿ ಈಗ ಮೊದಲಿನಷ್ಟು ಉತ್ಸಾಹಿಯಾಗಿರಲಿಲ್ಲ. “ಇನ್ನೊಮ್ಮೆ ಆ ನರಕಕ್ಕೆ ಹೋಗಲು ನನ್ನಿಂದ ಸಾಧ್ಯವಿಲ್ಲ. ಈ ದಂಧೆಯನ್ನು ನಾವು ಬಿಟ್ಟು ಬಿಡುವಾ” ಎಂದನು ಮಮ್ಮೂಟಿ. “ಹಾಯಾಗಿ ದಿನಗಳೆಯಲು ಬೇಕಾದಷ್ಟನ್ನು ಕೂಡಿ ಹಾಕಿದ್ದೇನೆ” ಎಂದು ಸೇರಿಸಿದನು. “ಅದು ಸಾಧ್ಯವಿಲ್ಲ ಹಾಜಾರೇ, ಬೊಂಬಾಯಿಯಿಂದ ನನಗೆ ಮೊನ್ನೆಯೇ ಕರೆ ಬಂದಿದೆ. ನಾವು ನಿಲ್ಲಸಬೇಕೆಂದರೂ ನಮ್ಮನ್ನು ನಿಲ್ಲಗೊಡಲಾರರು” ಎಂದನು ವಾಸು. ಮಮ್ಮೂಟಿಯ ಮುಖ ಕಳೆಗುಂದಿತು. “ಹುಂ... ಆಗಲಿ” ಎಂದಾತ ನಿರುತ್ಸಾಹದಿಂದಲೇ ನುಡಿದನು. ಆತನ ಹಿಂದಿನ ವಾಹನ ಚಾಲಕರೂ ಒಬ್ಬೊಬ್ಬರಾಗಿ ಬರ ತೊಡಗಿದರು. ಮಮ್ಮೂಟಿ ಊರಲಿಲ್ಲದ ವೇಳೆಯಲ್ಲಿ ತಾವು ನಿರುದ್ಯೋಗಿಗಲಾಗಿ ಕಷ್ಟಪಟ್ಟದ್ದನ್ನು ಇನ್ನಿಲ್ಲದಂತೆ ಬಣ್ಣಿಸಿ ತಮಗೆ ಉದ್ಯೋಗ ನೀಡಬೇಕೆಂದು ಬೇಡಿಕೊಂಡರು. ಹೀಗೆ ಆತನ ಮೊದಲಿನ ದಂಧೆಗೆ ಮೆಲ್ಲ ಮೆಲ್ಲನೆ ಚಾಲನೆ ದೊರೆಯತೊಡಗಿತು. ಈ ಮಧ್ಯೆ ಆತನು ಒಂದೆರಡು ಬಾರಿ ಬೊಂಬಾಯಿಗೆ ಹೋಗಿ ಬಂದವನು ಪೋನ್ ಮಾಡಿ ವಾಸುವನ್ನು ಕರೆಸಿಕೊಂಡನು. ಇಬ್ಬರೂ ಮೂಲೆಯ ಕೊಠಡಿಯಲ್ಲಿ ಕುಳಿತು ಮಂತ್ರಾಲೋಚನೆಯನ್ನಾರಂಭಿಸಿದರು. “ನೋಡು ವಾಸು, ಈ ಹೊಸ ಸರಕಾರ ನಮ್ಮ ಮೇಲೆ ಕಣ್ಣಿಡಲಾರದೆಂಬ ಭರವಸೆಯೇನೂ ನಮಗಿಲ್ಲ. ನಮಗೆ ಸಾಕಷ್ಟು ಜನ ವಿರೋಧಿಗಳೂ ಇದ್ದಾರೆ. ಸುಂಕಾಧಿಕಾರಿಗಳು ಕರಾವಳಿಯಲ್ಲಿ ಕಾವಲನ್ನು ಇನ್ನಷ್ಟು ಬಿಗಿಗೊಳಿಸಿದ್ದಾರೆಂದು ಕೇಳಿದೆ. ಅದಕ್ಕಾಗಿ ನಮ್ಮ ಸೇಟರು ಈಗ ಬೇರೊಂದು ಉಪಾಯ ಸೂಚಿಸಿದ್ದಾರೆ” 220 ಸುಳಿ ಎಂದನು ಮಮ್ಮೂಟಿ. ವಾಸುವಿನ ಕಿವಿ ನಿಮಿರಿತು. “ಏನದು?” ಎಂದನು ಉತ್ಸುಕವಾಗಿ. “ಅದೇನೊ ಔಷಧವಂತೆ. ಹಳದಿ ಸಕ್ಕರೆಯಂತೆ. ಅದನ್ನು ತಂದು ಮಾರಾಟ ಮಾಡಿದರೆ ಬಿಸ್ಕಿಟ್ಟಿಗಿಂತಲೂ ಲಾಭ ದೊರೆಯುತ್ತದೆನ್ನುತ್ತಾರೆ.” “ಅದೆಲ್ಲಿಂದ ಬರ್ತದಂತೆ?” “ಸಮುದ್ರದಿಂದ ಅಲ್ಲವಂತೆ, ಅದೆಲ್ಲೊ ಉತ್ತರ ಭಾಗದಿಂದ ಬರುತ್ತದಂತೆ. ಚಿಕ್ಕ ಪ್ಯಾಕೆಟ್ಟುಗಳಲ್ಲಿರುತ್ತವೆ. ಚಿನ್ನದಷ್ಟು ಭಾರವೂ ಇಲ್ಲ.” “ಆಗಲಿ ನೋಡುವಾ. ವ್ಯಾಪಾರ ಯಾವುದಾದರೇನು?” ಎನ್ನುತ್ತಾ ಪ್ರಸನ್ನವದನನಾದನು ವಾಸು. * * * * * ಮಾದಕ ದ್ರವ್ಯದ ಸಾಗಾಟ ಮತ್ತು ವ್ಯಾಪಾರದಲ್ಲಿ ಜಮಾಲನೂ ಭಾಗವಹಿಸತೊಡಗಿದನು. ವೈದ್ಯಕೀಯ ಮತ್ತಿತರ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಆತನ ಗಿರಾಕಿಗಳಾಗಿದ್ದರು. ಊರಿನಲ್ಲೂ ಕೆಲವು ಹುಡುಗರು ಇದರ ಚಟ ಹತ್ತಿಸಿಕೊಂಡರು. ಜಮಾಲನು ಇದರ ಕೇಂದ್ರವನ್ನು ಬೆಂಗಳೂರಿಗೆ ಸ್ಥಳಾಂತರಿಸಿ ತನ್ನ ಹೆಂಡತಿ, ಮಕ್ಕಳೊಡನೆ ಬೆಂಗಳೂರಿನಲ್ಲಿರ ತೊಡಗಿದನು. ಬೆಂಗಳೂರು ಮತ್ತು ತಮ್ಮೂರುಗಳ ನಡುವೆ ಕಾರುಗಳು ಸರಾಗವಾಗಿ ಓಡಾಡತೊಡಗಿದುವು. ಮಾದಕ ದ್ರವ್ಯದ ಕುರಿತು ಮಮ್ಮೂಟಿಗೆ ವಿಶೇಷ ತಿಳುವಳಿಕೆಯೇನೂ ಇರಲಿಲ್ಲ. ಅದು ‘ಅಫೀಮಿನಂತೆ ಅಮಲಾಗುವ’ ಪದಾರ್ಥ ಎಂಬುದು ಮಾತ್ರ ಆತನಿಗೆ ತಿಳಿದಿತ್ತು. ಅವನು ಸ್ವತಃ ಅದನ್ನು ಪರೀಕ್ಷಿಸಲೂ ಇಲ್ಲ. ‘ವ್ಯಾಪಾರ ಯಾವುದಾದರೇನು? ಕೈ ತುಂಬಾ ಹಣ ಬಂದರಾಯಿತು. ಹೆಂಡವೂ ಕೂಡಾ ಅಮಲು ಪದಾರ್ಥವೇ. ಅದರ ಮಾರಾಟವಾಗುವುದಿಲ್ಲವಾ?’ ಎಂಬುದು ಆತನ ತತ್ವ. ಬಿಸ್ಕಟ್ಟಿನ ವ್ಯಾಪಾರ ಕಮ್ಮಿಯಾಗಿ ಸಕ್ಕರೆ ವ್ಯಾಪಾರ ಚೆನ್ನಾಗಿ ನಡೆಯ ತೊಡಗಿತು! ಒಂದೆಡೆ ಹಣದ ಹುಚ್ಚು ಹೊಳೆ ಹರಿಯುತ್ತಿದ್ದರೆ ಇನ್ನೊಂದೆಡೆಯಲ್ಲಿ ಒಂದು ಹೊತ್ತಿನ ಗಂಜಿಗೂ ಗತಿಯಿಲ್ಲದ ಕುಟುಂಬಗಳೂ ಊರಲ್ಲಿದ್ದುವು. ಹೊಸ ಹೊಸ ಹೊಟೇಲುಗಳೂ ಬಹು ಮಹಡಿ ಕಟ್ಟಡಗಳೂ ಹುಟ್ಟಿಕೊಂಡಂತೆ ಹೊಟೇಲುಗಳಿಗೆ ಕರೆವೆಣ್ಣುಗಳ ಭೇಟಿಯೂ ಸರಾಗವಾಗಿ ನಡೆಯತೊಡಗಿತು. ಮುಸ್ಲಿಂ ಮಹಿಳೆಯರಂತೆ ಮುಸ್ಲಿಮೇತರ ಮಹಿಳೆಯರೂ ಬುರ್ಕಾ ತೊಟ್ಟುಕೊಂಡು ಹೊಟೇಲುಗಳಿಗೆ ಭೇಟಿ ನೀಡುತ್ತಿದ್ದರು. ಕಪ್ಪು ಹಣದಿಂದ ಸುಳಿ 221 ಕೊಬ್ಬಿದ ಯುವಕರಿಗೆ ಇಲ್ಲಿ ಬೇಕಾದ ಮಾಲುಗಳು ದೊರೆಯುತ್ತಿದ್ದವು. ಹಗಲಿರುಳೂ ತಮ್ಮ ಹೆಂಡತಿಯರಿಗೆ ಧರ್ಮ ಬೋಧೆ ಮಾಡಿ ಕಟ್ಟುನಿಟ್ಟಿನ ಘೋಷಾ ಅಭ್ಯಾಸ ಮಾಡಿಸುವವರು ಈ ಹೊಟೇಲುಗಳಿಗೆ ನಿರಾತಂಕವಾಗಿ ಭೇಟಿ ನೀಡಿ ತಮ್ಮ ತೃಷೆ ನೀಗಿಸಿಕೊಳ್ಳುತ್ತಿದ್ದರು. * * * * * ಮಮ್ಮೂಟಿ ಈಗ ತೀರಾ ವಿರಾಮವಿಲ್ಲದ ಮನುಷ್ಯ. ಮನೆಯ ಆಗು ಹೋಗುಗಳ ಕುರಿತು ತಲೆ ಹಾಕಲು ವೇಳೆಯೇ ಇರಲಿಲ್ಲ. ತಾಹಿರಾಳನ್ನು ಎದುರು ಕಂಡಾಗಲೊಮ್ಮೆ ಆಕೆಯ ಮದುವೆಯ ನೆನಪಾಗುತ್ತಿತ್ತು. ಬಳಿಕ, “ಇನ್ನೂ ಒಂದೆರಡು ವರ್ಷ ಹೋಗಲಿ. ಅವಳ ಬುದ್ಧಿ ಸರಿಯಾಗಲ್ಲಿ. ಏನವಸರ?” ಎಂದು ಆ ಯೋಚನೆಯನ್ನು ದೂರ ತಳ್ಳಿ ತನ್ನ ವ್ಯವಹಾರದಲ್ಲಿ ಮಗ್ನನಾಗುತ್ತಿದ್ದನು. ಎಲ್ಲವೂ ಹಿಂದಿನಂತೆಯೇ. ಮಮ್ಮೂಟಿ ಊರಲ್ಲಿರುವಾಗ ಮನೆ ಮದುವೆ ಮನೆಯಂತೆ ಜನರಿಂದ ಗಿಜಿಗುಟ್ಟುತ್ತಿತ್ತು. ಸಂಘ, ಸಂಸ್ಥೆಗಳ ವಾರ್ಷಿಕೋತ್ಸವ, ಮಸೀದಿಯ ಉರೂಸ್, ಮಗಳ ಮದುವೆ, ಮನೆ ಕಟ್ಟಿಸಲು ಧನ ಸಹಾಯ ಎಲ್ಲಕ್ಕೂ ಮಮ್ಮೂಟಿ ಕೊಡುಗೈದಾನಿ. ಊರಿಗೆ ಅರಸನಾಗಿದ್ದ ಮಮ್ಮೂಟಿಗೆ ತನ್ನ ಮನೆಯೊಳಗೆ ನಡೆಯುತ್ತಿದ್ದ ವಿದ್ಯಾಮಾನವೊಂದೂ ತಿಳಿಯುತ್ತಿರಲಿಲ್ಲ. ಅಥವಾ ಆ ಕಡೆಗೆ ಗಮನ ನೀಡಲು ಸಾಧ್ಯವೇ ಆಗದಂತಹ ಕೆಲಸ ಕಾರ್ಯಗಳಲ್ಲಿ ಸದಾ ಮುಳುಗಿರುತ್ತಿದ್ದನು. ಹೀಗಿರುವಾಗ ಒಂದು ರಾತ್ರಿ ಫರೀದಾ ಗಂಡನೊಡನೆ, “ನೀವೇನೂ ತಪ್ಪು ತಿಳಿಯದಿದ್ದರೆ ನಿಮ್ಮೊಡನೆ ಒಂದು ವಿಷಯ ತಿಳಿಸುವೆ” ಎಂದಳು. “ಏನದು?” ಗಡುಸಾಗಿಯೇ ಕೇಳಿದನು ಮಮ್ಮೂಟಿ. ಮೂರು ದಿನಗಳ ಹಿಂದೆ ಕಳುಹಿಸಿದ ಮಾಲು ತಲುಪಬೇಕಾದೆಡೆಗೆ ತಲುಪಿದ ಸಂದೇಶ ಬರದೆ ಆತನು ಕೊಂಚ ಉದ್ವಿಗ್ನನಾಗಿಯೇ ಇದ್ದನು. “ಹುಂ..... ಹೇಳು.” “ತಾಹಿರಾಳನ್ನು ಒಮ್ಮೆ ಯಾರಾದರೂ ಡಾಕ್ಟರಿಗೆ ತೋರಿಸಬೇಕು.” “ಅವಳ ವಿಷಯ ನಿನಗ್ಯಾಕೆ? ಅವಳ ತಾಯಿ, ಅಜ್ಜಿ ಎಲ್ಲರೂ ಇದ್ದಾರಲ್ಲ?” “ತಾಯಿ, ಅಜ್ಜಿಯರೆಲ್ಲ ಪೂರ್ತಿ ಕುರುಡರಂತಿದ್ದಾರೆ. ಹೆಣ್ಣು ಮಕ್ಕಳನ್ನು ಈ ರೀತಿ ನಿಯಂತ್ರಣವಿಲ್ಲದೆ ಬಿಟ್ಟರೆ ಒಂದಕ್ಕೊಂದಾಗಿಯೇ ಆಗುತ್ತದೆ ನನಗೇನೊ ಸಂದೇಹವಿದೆ...” ಮೆಲ್ಲಗೆ ನುಡಿದಳಾಕೆ. “ಏನಿದೆ ನಿನ್ನ ಮನಸ್ಸಿನಲ್ಲಿ? ಬೇಗ ಹೇಳು. ನನಗೆ ನಿದ್ದೆ ಬರ್ತಿದೆ..” 222 ಸುಳಿ “ನಾನು ಹೇಗೆ ಹೇಳಲಿ? ಅವಳು ಬೆಳಿಗ್ಗೆ ವಾಂತಿ ಮಾಡುತ್ತಿದ್ದಳು. ತಲೆ ತಿರುಗುತ್ತಿದೆ ಎಂದಳು...” ಎನ್ನುತ್ತಿದ್ದಂತೆ ಮಮ್ಮೂಟಿ ಫರೀದಾಬಿಯ ಕೆನ್ನೆಗೆ ಛಟೀರನೆ ಒಂದೇಟು ಕೊಟ್ಟನು. “ಏನು? ನನ್ನ ಮಗಳ ಮೇಲೆ ಇಂತಹ ಅಪವಾದ ಹೊರಿಸಲು ನಿನಗೆಷ್ಟು ಧೈರ್ಯ? ಇನ್ನೊಂದು ಮಾತಾಡಿದರೆ ನಿನ್ನನ್ನು ಒದ್ದು ಹೊರ ಹಾಕ್ತೇನೆ...” ಎನ್ನುತ್ತಾ ಮಲಗಿ ಮುಸುಕೆಳೆದನು. “ಹುಂ..... ನನಗೇನು? ಸಮಯ ಬಂದಾಗ ನಿಮಗೇ ಗೊತ್ತಾಗುತ್ತದೆ” ಎನ್ನುತ್ತಾ ಇನ್ನೊಂದೆಡೆಗೆ ಮುಖ ಮಾಡಿಕೊಂಡು ಮಲಗಿದಳಾಕೆ. ಆದರೆ ಮಮ್ಮೂಟಿಯ ನಿದ್ರೆ ಹಾರಿ ಹೋಯಿತು. ತಾಹಿರಾಳ ಪೆದ್ದುತನವನ್ನು ಯಾರಾದರೂ ದುರುಪಯೋಗ ಪಡಿಸಿಕೊಂಡರೇ? ಕಾದರ್‍ನೊಡನೆ ತಿರುಗುತ್ತಿದ್ದಾಳೆಂದಳಲ್ಲ? ಛೆ, ಕಾದರ್ ಅಂತಹ ಕೆಲಸ ಎಂದೂ ಮಾಡಲಾರ. ತನ್ನ ಕಣ್ಣ ಮುಂದೆಯೇ ಹುಟ್ಟಿದ ಹುಡುಗ. ಅಂದಿನದೆಲ್ಲವೂ ಮಮ್ಮೂಟಿಯ ಸ್ಮೃತಿ ಪಟಲದಲ್ಲಿ ತೇಲಿ ಹೋಯಿತು. ಹೌದು. ಅದು ಎಷ್ಟಾದರೂ ಹಾದಿನ ಬದಿಯಲ್ಲಿ ಮೊಳೆತ ಕಳೆ ಗಿಡ. ಅದಕ್ಕೆಷ್ಟು ಬುದ್ಧಿ ಇದ್ದೀತು? ಏರು ಪ್ರಾಯದ ಯೌವನದ ದೇಹ. ತಾಹಿರಾಳ ರೂಪವಂತೂ ಆಕರ್ಷಣೆಯಲ್ಲಿ ಏನೇನೂ ಕಮ್ಮಿ ಇಲ್ಲದ್ದು. ಏನಾದರೂ ಎಡವಟ್ಟು ಆಗಿಯೆ ಹೋಯಿತೇ? ಈ ರುಖ್ಯಾಳಿಗಂತೂ ಏನೇನೂ ಬುದ್ಧಿ ಇಲ್ಲ. ಹೆಣ್ಣು ಮಕ್ಕಳ ಮೇಲೆ ಹೇಗೆ ನಿಗಾ ಇಡಬೇಕೆಂಬುದೂ ತಿಳಿಯದು. ತನಗಾದರೂ ಇಂತಹ ಸೂಕ್ಷ್ಮಗಳೆಲ್ಲ ಅರ್ಥವಾಗಲೇ ಇಲ್ಲ. ಇನ್ನು ಮುಂದೆ ಜಾಗ್ರತೆಯಿಂದಿರಬೇಕು. ಈಗ ಅಂತಹ ಅನಾಹುತವೇನೂ ಆಗಿರಲಾರದು. ಇನ್ನು ಒಂದು ಗಂಡು ಹುಡುಕಿ ಆದಷ್ಟು ಬೇಗನೆ ಅವಳ ಮದುವೆಯನ್ನು ಮುಗಿಸಿ ಬಿಡಬೇಕು. ಆದರೂ... ಆದರೂ... ಫರೀದಾ ಹೇಳಿದಂತೆ ಏನಾದರೂ ಆಗಿಯೇ ಹೋಗಿದ್ದರೆ ಏನು ಮಾಡುವುದು? ಛೆ... ಏನೂ ಆಗಿರಲಾರದು! ಸವತಿಯ ಮಗಳೂಂತ ಇವಳು ಅವಳ ಮೇಲೆ ಏನೊ ಚಾಡಿ ಹೇಳುತ್ತಿದ್ದಾಳೆ... ಆದರೂ... “ಫರೀದಾ...” ಮೆತ್ತಗೆ ಕರೆದನು ಮಮ್ಮೂಟಿ. ಗುಸು ಗುಸು ಆಳುವ ಶಬ್ದ ಮಾತ್ರ ಕಿವಿಗೆ ಬಿತ್ತು. “ಶ್... ಅಳಬೇಡ. ಅವಳೆಷ್ಟಾದರೂ ನನ್ನ ಮಗಳಲ್ಲವಾ? ನೀನು ಹಾಗೆಲ್ಲಾ ಹೇಳಿದರೆ ನನಗೆ ಕೋಪ ಬರದಿರುತ್ತದಾ?” ಅನುನಯದಿಂದ ಕೇಳಿದನಾತ. “ನಾನು ಸುಮ್ಮ ಸುಮ್ಮನೆ ಕತೆ ಕಟ್ಟಿ ಹೇಳುತ್ತೇನೆಂದುಕೊಂಡಿರಾ? ನಿಮ್ಮ ಸುಳಿ 223 ಮಗಳ ಮೇಲೆ ನನಗೇನೂ ದ್ವೇಷವಿಲ್ಲ. ಯಾವುದನ್ನಾದರೂ ಪರಾಮರ್ಶಿಸಿ ನೋಡಿ ಎಂದಷ್ಟೆ ಹೇಳಿದೆ.” “ಹುಂ... ಹಾಗೆಯೇ ಮಾಡುವಾ...” ಎನ್ನುತ್ತಾ ಮಮ್ಮೂಟಿ ನಿದ್ರಿಸಲು ಪ್ರಯತ್ನಿಸಿದನು. ಆದರೆ ಆ ರಾತ್ರಿ ನಿದ್ರೆ ಆತನ ಬಳಿ ಸುಳಿಯಲೇ ಇಲ್ಲ. ಬೆಳಗಿನ ಜಾವದಲ್ಲಿ ದೂರವಾಣಿಯ ಗಂಟೆ ಟ್ರಿಣ್ ಗುಟ್ಟಿತು. ಆಗಷ್ಟೆ ಕೊಂಚ ಕಣ್ಣು ಬಾಡಿದಂತಿದ್ದ ಮಮ್ಮೂಟಿ ದೂರವಾಣಿಯ ರಿಸೀವರನ್ನು ಕೈಗೆತ್ತಿಕೊಂಡನು. “ಹಲೊ.... ಹಲೊ.....” ಎಂದನು ಬೊಂಬಾಯಿಯ ಕರೆ. ಬೊಂಬಾಯಿಗೆ ಕೂಡಲೇ ಹೊರಡಲು ಕರೆ ಬಂದಿತ್ತು. ಅದನ್ನು ಉಪೇಕ್ಷಿಸುವ ಮಾತೇ ಇಲ್ಲ. ಮಮ್ಮೂಟಿ ಕೂಡಲೇ ವಾಸುವನ್ನೂ ಕರೆದುಕೊಂಡು ಬೊಂಬಾಯಿಗೆ ಹೊರಡುವ ಸಿದ್ಧತೆಯಲ್ಲಿ ತೊಡಗಿದನು. ಫರೀದಾ ರಾತ್ರಿ ತಿಳಿಸಿದ ಮಾತುಗಳು ಮನದ ಮೂಲೆಗೆ ತಳ್ಳಲ್ಪಟ್ಟವು. ಹೋಗುವ ಮೊದಲು, “ತಾಹಿರಾ....” ಎಂದು ಮಗಳನ್ನು ಕರೆದನು. ತಾಹಿರಾ ಆಗಲೇ ಶಾಲೆಗೆ ತೆರಳಿ ಆಗಿತ್ತು. ಆತ ರುಖ್ಯಾಳನ್ನು ಕರೆದು, “ತಾಹಿರಾ ಹೇಗಿದ್ದಾಳೆ?” ಎಂದು ಕೇಳಿದನು. ರುಖ್ಯಾಬಿ ಗಂಡನ ಮುಖವನ್ನು ಮಿಕಿ ಮಿಕಿ ನೊಡುತ್ತಾ, “ಹೇಗಿದ್ದಾಳೆಂದರೆ?” ಎಂದು ಬೆಪ್ಪಾಗಿ ಕೇಳಿದಳು. “ಹೇಗಿದ್ದಾಳೆಂದರೆ,...,. ದೊಡ್ಡವಳಾದ ಹುಡುಗಿ, ಅವಳ ಪೆದ್ದುತನದಿಂದ ಏನಾದರೂ ಅಚಾತುರ್ಯವಾಗದ ಹಾಗೆ ನೋಡಿಕೊ..” ಎನ್ನುತ್ತಿದ್ದಂತೆಯೇ ವಾಸುವಿನ ಕಾರು ಹೊರಗೆ ಬಂದು ನಿಂತಿತು. ಇಬ್ಬರೂ ವಿಮಾನ ನಿಲ್ದಾಣಕ್ಕೆ ಧಾವಿಸಿದರು. ಹಾಗೆ ಹೋದವನು ಹಿಂತಿರುಗಿ ಬಂದ್ದು ಸುಮಾರು ಒಂದು ತಿಂಗಳ ಬಳಿಕವೇ. ಕಾರು ಬಂದು ನಿಂತು ಸದ್ದಾದೊಡನೆ ಎದುರಿಗೆ ಬರುತ್ತಿದ್ದ ಫರೀದಾಬಿ ಕಾಣಲಿಲ್ಲ. ಮನೆಯೊಳಗೆಲ್ಲ ನಿಶ್ಯಬ್ದ ಎಲ್ಲೊ ಅಪಾಯದ ಕಿರು ಗಂಟೆಯೊಂದು ಮೊಳಗುತ್ತಿದೆಯೇ? “ಉಮ್ಮಾ...” ಎಂದು ಕರೆಯುತ್ತಾ ಮಮ್ಮೂಟಿ ಉಮ್ಮಾಲಿಯ ಕೋಣೆಗೆ ಕಾಲಿಟ್ಟನು. ಉಮ್ಮಾಲಿ ಮಂಚದ ಮೇಲೆ ಮಲಗಿದ್ದಳು. ರುಖ್ಯಾ ಅಲ್ಲೇ ಒಂದೆಡೆ ತಲೆ ತಗ್ಗಿಸಿ ಕುಳಿತಿದ್ದಳು. ತಾಹಿರಾ ಕೋಣೆಯ ಮೂಲೆಯಲ್ಲಿ ಮುದುರಿ ಕುಳಿತಿದ್ದಳು. 224 ಸುಳಿ ಮಮ್ಮೂಟಿಯನ್ನು ನೋಡಿದವಳೇ ಉಮ್ಮಾಲಿ, “ಅಯ್ಯೋ ಮೋನೇ..... ನಮ್ಮ ಮನೆಯ ಮಾನ ಹರಾಜಾಗಿ ಹೋಯ್ತಲ್ಲ ಮೋನೇ.....” ಎಂದು ಅಳ ತೊಡಗಿದಳು. ರುಖ್ಯಾಬಿ, “ನೀವೊಮ್ಮೆ ಸುಮ್ಮನಿರಿ. ಊರಿಡೀ ಡಂಗುರ ಸಾರಬೇಡಿ...” ಎಂದು ಅತ್ತೆಯನ್ನು ಮೆಲ್ಲನೆ ಗದರಿ ಹೋಗಿ ಕೋಣೆಯ ಬಾಗಿಲು ಮುಚ್ಚಿ ಅಗುಳಿ ಹಾಕಿದಳು. ಮಮ್ಮೂಟಿ ತಾಯಿಯ ಪಕ್ಕದಲ್ಲಿ ಕುಳಿತುಕೊಂಡನು. ರುಖ್ಯಾಬಿ ಸೆರಗಿನಿಂದ ಕಣ್ಣು ಮೂಗು ಒರೆಸಿಕೊಳ್ಳುತ್ತಾ, “ತಾಹಿರಾ ಎಂತಹ ಕೆಲಸ ಮಾಡಿ ಬಿಟ್ಟಿದ್ದಾಳೆ..” ಎಂದು ಕುಸಿದು ಕುಳಿತು ಅಳ ತೊಡಗಿದಳು. ಅಳು ಹೊರಗೆ ಕೇಳಿಸದಂತೆ ಬಾಯಿಗೆ ಸೆರಗನ್ನು ಒತ್ತಿಕೊಂಡಳು. ಮಮ್ಮೂಟಿ ಮನದ ಮೂಲೆಗೆ ತಳ್ಳಿದ್ದ ವಿಷಯ ಹೃದಯದ ಮಧ್ಯ ಭಾಗದಲ್ಲಿ ಅಚ್ಚೊತ್ತಿತ್ತು. “ಅಂದರೆ...” ಅತನು ತಾಯಿ ಮತ್ತು ಹೆಂಡತಿಯ ಮುಖವನ್ನು ತಿರುಗಿ ತಿರುಗಿ ನೋಡುತ್ತಾ “ಫರೀದಾಳ ಸಂದೇಹ ಸಂದೇಹ ಮಾತ್ರವಾಗಿರಲಿಲ್ಲ!...” ಎಂದನು. “ಏನು?” ರುಖ್ಯಾ ಮೆಟ್ಟಿ ಬಿದ್ದಳು. “ಅವಳಿಗೆ ಆಗಲೇ ಈ ವಿಷಯ ತಿಳಿದು ಹೋಯಿತೇ?” ಆಘಾತಗೊಂಡವಳಂತೆ ಕೇಳಿದಳು. ಮಮ್ಮೂಟಿ ಸಿಡಿದೆದ್ದನು, “ನೀನೆಂತಹ ತಾಯಿ? ಹೆಣ್ಣು ಮಕ್ಕಳಿಗೆ ಪ್ರಾಯ ಬಂದಾಗ ಅವರನ್ನು ಹೇಗೆ ಜೋಪಾನ ಮಾಡಬೇಕೆಂದೂ ತಿಳಿಯದವಳು. ನಿನಗೆ ತಿಳಿಯದೇ ಇದ್ದದ್ದು ಅವಳಿಗೆ ತಿಳಿದಿದೆ! ಈಗ ಅವಳಿಗೆ ತಿಳಿದದ್ದು ಮಹಾಪರಾಧದಂತೆ ಕಾಣುತ್ತಿದೆ; ಅಲ್ಲವಾ? ಈ ಹುಡುಗಿಗೆ ಇಷ್ಟೂ ತಿಳಿಯದಾಯಿತೇ?” ಎನ್ನುತ್ತಾ ಕೋಪೋದ್ರಿಕ್ತನಾಗಿ ಮಗಳೆಡೆಗೆ ತಿರುಗಿ, “ಯಾರು? ಯಾರಾತ? ಹೇಳು?” ಎನ್ನುತ್ತಾ ತಾಹಿರಾಳನ್ನು ಕೈ ಹಿಡಿದೆಳೆದು ಪಟಪಟನೆ ಹೊಡೆಯ ತೊಡಗಿದನು. ಉಮ್ಮಾಲಿ ಮತ್ತು ರುಖ್ಯಾ ಇಬ್ಬರೂ ಅಡ್ಡ ನಿಂತು ತಡೆಯದೇ ಹೋಗಿದ್ದರೆ ಬಹುಶಃ ಆತನು ಅವಳನ್ನು ಕೊಂದೇ ಬಿಡುತ್ತಿದ್ದನೇನೊ. ಹೊರಗಿನಿಂದ ಬಾಗಿಲು ಬಡಿಯುವ ಶಬ್ದ ಕೇಳಿ ಎಲ್ಲರೂ ಮೌನವಾಗಿ ಉಸಿರು ಬಿಗಿ ಹಿಡಿದು ಬಾಗಿಲಿನತ್ತ ಕಣ್ಣು ಹೊರಳಿಸಿದರು. “ಯಾರದು...” ಗಡುಸಾಗಿ ಕೇಳಿದನು ಮಮ್ಮೂಟಿ. “ನಾನು” ಫರೀದಾಬಿಯ ಧ್ವನಿ ಕೇಳಿ ಎಲ್ಲರೂ ನಿರಾಳವಾಗಿ ಉಸಿರು ಬಿಟ್ಟರು. ಮಮ್ಮೂಟಿ ಬಾಗಿಲ ಕಡೆಗೆ ಹೆಜ್ಜೆ ಇಟ್ಟಾಗ, “ಅವಳಿಗೆ ಇಲ್ಲೇನು ಕೆಲಸ?” ಎಂದು ಗಂಡನನ್ನು ತಡೆಯಲೆತ್ನಿಸಿದಳು. ಮಮ್ಮೂಟಿ ಕೆಂಗಣ್ಣು ಬಿಟ್ಟು ಹೆಂಡತಿಯನ್ನು ದೂರ ತಳ್ಳಿ ಬಾಗಿಲು ತೆರೆದನು. ಫರೀದಾ ಒಳಗೆ ಇಣುಕಿ, ಸುಳಿ 225 “ಒಳಗೆ ಬರಬಹುದೇ ಹೇಗೆ?” ಎಂಬಂತೆ ಗಂಡನ ಮುಖ ನೋಡಿದಳು. “ಒಳಗೆ ಬಾ” ಎನ್ನುತ್ತಾ ಆಕೆ ಒಳ ಬಂದೊಡನೆ ಪುನಃ ಬಾಗಿಲು ಭದ್ರಪಡಿಸಿದನು. ತಾಹಿರಾ ಗೋಡೆ ಬದಿಯಲ್ಲಿ ನಿಂತುಕೊಂಡು ಬಿಕ್ಕುತ್ತಿದ್ದಳು. ಉಮ್ಮಾಲಿ ಮಂಚದ ಮೇಲೆ ಕುಸಿದು ಕುಳಿತಿದ್ದಳು. ಸವತಿಯ ಮುಖ ಕಂಡೊಡನೆ ರುಖ್ಯಾ ಮುಖ ಗಂಟಿಕ್ಕಿಕೊಂಡಳು. ಕೋಣೆಯಲ್ಲಿ ಸ್ಮಶಾನ ಮೌನ ಕವಿಯಿತು. “ನೀನೂ ಕೂಡಾ ಈ ಮನೆಯಲ್ಲಿದ್ದೆಯಲ್ಲ? ನೀನು ಕೊಂಚ ನಿಗಾವಹಿಸಿದ್ದರೆ ಹೀಗಾಗುತ್ತಿರಲಿಲ್ಲ.” ಮಮ್ಮೂಟಿ ತನ್ನ ಕೋಪವನ್ನು ಫರೀದಾಳೆಡೆಗೆ ತಿರುಗಿಸಿದನು. “ನೀವಿಲ್ಲದಾಗ ನನಗಾದರೂ ಈ ಮನೆಯಲ್ಲಿ ಯಾವ ಸ್ಥಾನವಿತ್ತು? ನನ್ನ ಮಾತಿಗೆ ಇಲ್ಲೇನಾದರೂ ಬೆಲೆ ಇತ್ತೇ?” ಫರೀದಾ ಕೊಂಚ ಜೋರಾಗಿಯೇ ಗೊಣಗಿದಳು. ಸ್ವಲ್ಪ ಸಮಯದ ಬಳಿಕ, “ಯಾಕಾಯಿತು, ಏನಾಯಿತು ಎಂದು ಅಗೆದು ನೋಡುವುದರಿಂದ ಉಪಯೋಗವೇನೂ ಇಲ್ಲ. ಆದದ್ದನ್ನೇನು ಮಾಡುವುದು ಎಂದು ಯೋಚಿಸುವಾ. ಹುಡುಗಿಯನ್ನು ಹೊಡೆದೂ ಬಡಿದೂ ಗಲಾಟೆ ಮಾಡಿದರೆ ಕೆಲಸದವರಿಗೆಲ್ಲ ತಿಳಿದು ಊರಿಡೀ ಹಾಡಾಗಿ ಹೋಗುತ್ತದೆ” ಎಂದು ಸಲಹೆ ನೀಡಿದಳು. “ಏನು ಮಾಡಬೇಕೆನ್ನುತ್ತೀ?” ಮಮ್ಮೂಟಿ ಫರೀದಾಳೊಡನೆ ಕೇಳಿದನು. “ಮೊತ್ತ ಮೊದಲು ಯಾರಿಗೂ ತಿಳಿಯದಂತೆ ಡಾಕ್ಟರರಿಂದ ಪರೀಕ್ಷೆ ಮಾಡಿಸುವಾ. ಆ ಮೇಲೆ ಎಲ್ಲವನ್ನೂ ತೀರ್ಮಾನಿಸಬಹುದು” ಎಂದಳಾಕೆ. ತನ್ನ ವ್ಯವಹಾರದ ಕುರಿತು ಹಲವಾರು ಯೋಜನೆಗಳನ್ನು ಸಿದ್ಧಪಡಿಸಿಕೊಂಡು ಬಂದಾತನಿಗೆ ಈಗ ಅವುಗಳೆಲ್ಲ ಮರೆತು ಹೋದಂತಾಗಿ ಮಗಳ ಸಮಸ್ಯೆಯೇ ಬೃಹದಾಕಾರವಾಗಿ ಕಣ್ಮುಂದೆ ಸುಳಿಯಿತು. ಇದು ಊರವರಿಗೆಲ್ಲ ತಿಳಿದರೆ ತಾನು ಈ ಊರಿನಲ್ಲಿ ತಲೆ ಎತ್ತಿ ನಡೆಯುವುದಾದರೂ ಹೇಗೆ? ತಾನು ಜೈಲಿಗೆ ಹೋಗಿ ಬಂದವನೆಂದು ಊರವರು ತನ್ನನ್ನು ತಿರಸ್ಕರಿಸಲಿಲ್ಲ. ಆದರೆ ಈ ವಿಷಯ ತಿಳಿದರೆ ಊರವರು ಸುಮ್ಮನಿರುವರೇ? ಇಷ್ಟಕ್ಕೂ ಇದಕ್ಕೆ ಕಾರಣನಾದವನು ಯಾರು? ಯೋಚಿಸಿದಂತೆ ತಲೆಯೆಲ್ಲ ಬಿಸಿಯಾದಂತಾಗಿ ತನ್ನ ಕೋಣೆಗೆ ಹೊಂದಿಕೊಂಡ ಸ್ನಾನಗೃಹಕ್ಕೆ ಹೋಗಿ ತಲೆಯ ಮೇಲೆ ತಣ್ಣಿರು ಸುರಿದುಕೊಂಡು ಸ್ನಾನ ಮಾಡಿದನು. ತಾನು ಜೈಲಿಗೆ ಹೋಗದಿದ್ದಿದ್ದರೆ ಇಂತಹುದು ತನ್ನ ಮನೆಯಲ್ಲಿ ಸಂಭವಿಸುತ್ತಿರಲಿಲ್ಲ. ‘ಛೆ, ಎಂತಹ ಕೆಲಸವಾಯಿತು!” ಎಂದು ಹಲವಾರು ಬಾರಿ 226 ಸುಳಿ ತನ್ನಷ್ಟಕ್ಕೆ ಅಂದುಕೊಂಡನು. ಫರೀದಾ ಕೋಣೆಯಲ್ಲಿ ಎಲ್ಲರಿಗೂ ಬುದ್ಧಿ ಹೇಳತೊಡಗಿದಳು. “ಈಗ ನೀವೆಲ್ಲರೂ ಏನೂ ಆಗಿಲ್ಲವೆಂಬಂತೆ ಆದಷ್ಟೂ ಸಹಜವಾಗಿರಿ. ಈ ಕೆಲಸದ ಹೆಂಗಸರಿಗೆ ಒಂದು ಚಿಕ್ಕ ಎಳೆ ಸಿಕ್ಕಿದರೂ ಸಾಕು. ಊರಿಡೀ ಗುಲ್ಲಾಗುತ್ತದೆ. ತಾಹಿರಾ, ಏಳು, ಬಾ, ಊಟ ಮಾಡು” ಎನ್ನುತ್ತಾ ತಾಹಿರಾಳ ಕೈ ಹಿಡಿದೆಬ್ಬಿಸಿ, “ಮುಖ ತೊಳೆದು ಬಾ” ಎಂದು ಕಳುಹಿಸಿದಳು. ರಾತ್ರಿ ಎಲ್ಲರೂ ಮಲಗಿದ ಬಳಿಕ ಮತ್ತೊಮ್ಮೆ ಮಂತ್ರಾಲೋಚನೆ ಪ್ರಾರಂಭವಾಯಿತು. ಮಮ್ಮೂಟಿ ಫರೀದಾಳೊಡನೆ, “ಯಾರವನು? ಅದನ್ನಾದರೂ ಹೇಳು. ನಮಗೆ ತಕ್ಕವನಾದರೆ ಅವನಿಗೇ ಮದುವೆ ಮಾಡಿ ಕೊಡುವಾ” ಎಂದನು. “ಇನ್ಯಾರು? ಮನೆಯೊಳಗೆ ಹೊರಗೆ ಓಡಾಡಿಕೊಂಡು ಅವಳ ಹಿಂದೆ ಮುಂದೆ ತಿರುಗುತ್ತಿದ್ದನಲ್ಲ? ಶಾಲೆ ಬಿಟ್ಟೊಡನೆ ಎಲ್ಲೆಲ್ಲೊ ಸುತ್ತಿಸುತ್ತಿದ್ದ. ನೀವಿಲ್ಲದಾಗ ಲಗಾಮಿಲ್ಲದ ಕುದುರೆಯಂತಾದ” ಎಂದಳು ಆಕೆ. “ಹಾಂ... ಏನು? ಕಾದರನೇ?'' ಆಘಾತಗೊಂಡು ನಂಬಲಾಗದಂತೆ ಕೇಳಿದನು. ಮಮ್ಮೂಟಿ, ಕೋಪವನ್ನು ನಿಯಂತ್ರಿಸಲಾಗದೆ, “ನೀವೆಲ್ಲರೂ ಏನು ಮಾಡುತ್ತಿದ್ದೀರಿ?” ಎಂದು ಮುನ್ನುಗ್ಗಿ ರುಖ್ಯಾಬಿಯ ಕೆನ್ನೆ ಮತ್ತು ಬೆನ್ನಿನ ಮೇಲೂ ಏಟು ಹಾಕಿದನು. ಉಮ್ಮಾಲಿ ಮಗನನ್ನು ತಡೆಯುತ್ತಾ, “ಈಗ ಸಹನೆ ಕಳೆದುಕೊಂಡು ಏನೂ ಪ್ರಯೋಜನವಿಲ್ಲ. ಮುಂದಕ್ಕೆ ಏನು ಮಾಡುವಾ?” ಎಂದು ಕೇಳಿದಳು. “ಆ ಹರಾಂ ಖೋರನಿಗೆ ಅವಳನ್ನು ಮದುವೆ ಮಾಡಿ ಕೊಡುವುದು ಸಾಧ್ಯವೇ ಇಲ್ಲ. ಹಾದಿ ಬದಿಯಲ್ಲಿ ಮೊಳೆತ ಕಳೆ ಗಿಡ ಅದು. ಬೆಳಗಾಗಲಿ ಅವನಿಗೆ ಬುದ್ಧಿ ಕಲಿಸುತ್ತೇನೆ.” ಬುಸುಗುಟ್ಟಿದನು ಮಮ್ಮೂಟಿ. “ಯಾರಿಗೆ ಬುದ್ಧಿ ಕಲಿಸುತ್ತೀರಿ? ಊರಿಡೀ ಡಂಗುರ ಸಾರಬೇಕೆಂದಿದ್ದೀರಾ?” ಎಂದ ಫರೀದಾಳ ಮಾತಿನಿಂದ ಮಮ್ಮೂಟಿ ತಣ್ಣಗಾದನು. “ಯಾರಿಗೂ ಸಂದೇಹ ಬರದ ರೀತಿಯಲ್ಲಿ ನಾಳೆ ಅವಳನ್ನು ಕರೆದುಕೊಂಡು ಬೆಂಗಳೂರಿಗೆ ಹೋಗುವಾ. ಅಲ್ಲಿ ಡಾಕ್ಟರರಿಂದ ಪರೀಕ್ಷೆ ಮಾಡಿಸಬಹುದು” ಎಂದಳು ಫರೀದಾ. ಮರುದಿನ ಬೆಳಗ್ಗೆ ಮಮ್ಮೂಟಿ ಫರೀದಾ, ರುಖ್ಯಾ ಮತ್ತು ತಾಹಿರಾಳನ್ನು ಕರೆದುಕೊಂಡು ಬೆಂಗಳೂರಿಗೆ ಹೊರಟನು. ಜಮಾಲನಿಗೆ ಬೇರೆ ಕೆಲಸ ವಹಿಸಿ ಆತನನ್ನು ಹೆಂಡತಿ ಮಕ್ಕಳೊಡನೆ ಊರಿಗೆ ಕಳುಹಿಸಿದನು. ಬಳಿಕ ತಾಹಿರಾಳನ್ನು ಸುಳಿ 227 ವೈದ್ಯರ ಬಳಿಗೆ ಕರೆದೊಯ್ದರು. ಫರೀದಾ ವೈದ್ಯೆಗೆ ಸೂಕ್ಷ್ಮವಾಗಿ ವಿಷಯ ತಿಳಿಸಿದಳು. ತಾಹಿರಾಳನ್ನು ಪರೀಕ್ಷಿಸಿದ ವೈದ್ಯೆ ಫರೀದಾಳೊಡನೆ, “ನೋಡೀಮ್ಮಾ ನೀವಂದದ್ದು ನನಗೆ ಅರ್ಥವಾಯಿತು. ಆದರೆ ಈಗ ತುಂಬಾ ತಡವಾಗಿದೆ. ನಾಲ್ಕು ತಿಂಗಳು ತುಂಬಿದೆ. ಇನ್ನು ಗರ್ಭಪಾತ ಮಾಡಿಸಲು ಸಾಧ್ಯವಿಲ್ಲ” ಎಂದಳು. ಹೇಗೊ ಇದನ್ನು ಯಾರಿಗೂ ತಿಳಿಯದಂತೆ ನಿವಾರಿಸಿ ಕೊಳ್ಳಬಹುದೆಂದುಕೊಂಡಿದ್ದವರಿಗೆ ಈಗ ಸಮಸ್ಯೆ ಮತ್ತಷ್ಟು ಜಟಿಲವಾಯಿತು. ಎಲ್ಲರೂ ಮನೆಗೆ ಬಂದು ತಲೆ ಮೇಲೆ ಕೈ ಹೊತ್ತು ಕುಳಿತರು. “ಇನ್ನು ನಾವ್ಯಾರು ಏನೂ ಮಾಡುವ ಹಾಗಿಲ್ಲ. ನಾಲ್ಕೈದು ತಿಂಗಳು ಇವಳು ಇಲ್ಲೆ ಇರಲಿ. ಎಲ್ಲವೂ ಆದ ಮೇಲೇನೇ ಅವಳನ್ನು ಊರಿಗೆ ಕರೆದೊಯ್ಯಬಹುದು” ಎಂದು ಪುನಃ ಸಲಹೆ ನೀಡಿದವಳು ಫರೀದಾ. ಮಮ್ಮೂಟಿ ಮತ್ತು ರುಖ್ಯಾ ಯೋಚನಾಶಕ್ತಿಯನ್ನು ಕಳೆದುಕೊಂಡಂತೆ ದಿಗ್ಮೂಢರಾಗಿ ಕುಳಿತಿದ್ದರು. “ಯಾರಾದರೂ ಕೇಳಿದರೆ ಬೆಂಗಳೂರಿನಲ್ಲಿ ಒಳ್ಳೆಯ ಶಾಲೆಗೆ ಸೇರಿಸಿದ್ದೇವೆಂದರಾಯಿತು” ಎಂದೂ ಸೇರಿಸಿದಳು. ಜಮಾಲನು ಹಿಂತಿರುಗಿದ ಬಳಿಕ ಮಮ್ಮೂಟಿ ಮಗನಿಗೆ ಸೂಕ್ಷ್ಮವಾಗಿ ವಿಷಯ ತಿಳಿಸಿ ಆತನ ಹೆಂಡತಿಗೆ ಈ ವಿಷಯ ತಿಳಿಯದಂತೆ ಆಕೆ ಮತ್ತು ಮಕ್ಕಳನ್ನು ಹಾಗೂ ಫರೀದಾಳನ್ನು ಊರಿಗೆ ಕರೆದೊಯ್ದನು. ರುಖ್ಯಾ ಮಗಳ ಬಳಿ ಉಳಿದಳು. ಊರಿಗೆ ಬಂದೊಡನೆ ಮಮ್ಮೂಟಿ ಕಾದರ್‌ಗಾಗಿ ಕರೆ ಕಳುಹಿಸಿದನು. ಅವನು ಊರಲ್ಲಿಲ್ಲವೆಂದು ತಿಳಿದೊಡನೆ ಮಮ್ಮೂಟಿ ಒಳ ಬಂದು ಆಚುಮ್ಮಳೊಡನೆ ವಿಚಾರಿಸಿದನು. ಆಚುಮ್ಮ ಅವಾಕ್ಕಾದಳು. “ನೀನು ಬೊಂಬಾಯಿಯಿಂದ ಬಂದ ಮರುದಿನವೇ ಅವನು ಅದೆಲ್ಲಿಗೊ ಹೊರಟು ಹೋದನಲ್ಲ? ನೀನೆ ಕಳುಹಿಸಿರಬಹುದೆಂದು ನಾನಂದುಕೊಂಡಿದ್ದೆ. ಈವರೆಗೂ ಹಿಂತಿರುಗಿ ಬಂದಿಲ್ಲ....” ಎನ್ನುತ್ತಿದ್ದಂತೆ ಕಂಠ ಗದ್ಗದವಾಯಿತು. ಕಣ್ಣುಗಳು ಹನಿಗೂಡಿದುವು. ಮಮ್ಮೂಟಿ ಉಸಿರೆತ್ತದೆ ಒಳ ಬಂದನು. ಆಚುಮ್ಮಳಿಗೆ ಈಗಂತೂ ಮಗನ ಮೇಲೆ ಅಪಾರ ಮಮತೆ. ಆತನ ಹುಟ್ಟು ಹೇಗೇ ಇರಲಿ; ತನ್ನ ಬರಡು ಬಾಳಿನಲ್ಲೊಂದು ಬೆಳಕಿನ ಕಿರಣವಾಗಿ ಮೂಡಿ ಬಂದವನು ಆತ. ಈಗಂತೂ ಬಾಳಿನ ಸಂಧ್ಯೆಯಲ್ಲಿ ಊರುಗೋಲಾಗಲಿದ್ದಾನೆಂಬ ನಂಬಿಕೆ. ಮಮ್ಮೂಟಿ ತಮಗೆ ಕಟ್ಟಿಸಿಕೊಟ್ಟ 228 ಸುಳಿ ಮನೆಯಲ್ಲಿ ಈ ವರೆಗೆ ತಾವು ವಾಸ ಮಾಡಿರದಿದ್ದರೂ ಕಳೆದ ಒಂದೆರರಡು ವರ್ಷಗಳಿಂದ ಮನದಾಳದಲ್ಲಿ ಆಸೆಯ ಬಳ್ಳಿಯೊಂದು ಚಿಗುರಿತ್ತು. ಮಗನಿಗೊಂದು ಮದುವೆ ಮಾಡಿ ಸೊಸೆಯನ್ನು ಆ ಮನೆಗೆ ಕರೆ ತರಬೇಕು. ಮಗನ ಮದುವೆಯ ವಿಷಯ ರುಖ್ಯಾಳೊಡನೆ ಪ್ರಸ್ತಾಪಿಸಬೇಕೆಂದಿದ್ದಾಗಲೇ ಮಮ್ಮೂಟಿ ಜೈಲು ಸೇರಿದ್ದನು. ಮಮ್ಮೂಟಿ ಊರಿಗೆ ಬಂದವನೇ ತನ್ನ ವ್ಯವಹಾರದಲ್ಲಿ ತಲ್ಲೀನನಾದನು. ಇಂದು, ನಾಳೆ ಎಂದು ದಿನ ತಳ್ಳುವುದರಲ್ಲಿ ಆತನು ಬೊಂಬಾಯಿಗೂ ಹೋಗಿ ಬಂದು ಬೆಂಗಳೂರಿಗೂ ಹೋದನು. ಇದೀಗ ತಾನೇ ಬೆಂಗಳೂರಿನಿಂದ ಬಂದಿದ್ದಾನೆ; ಇನ್ನಾದರೂ ಮಗನ ಮದುವೆಯನ್ನು ತೀರ್ಮಾನಿಸಬೇಕೆಂದು ಕೊಂಡಿದ್ದವಳಿಗೆ ಈಗ ಮಮ್ಮೂಟಿಯ ಮಾತು ಕೇಳಿ ಸಿಡಿಲೆರಗಿದಂತಾಯಿತು. ಆಕೆ ಮಮ್ಮೂಟಿಯ ಹಿಂದೆಯೇ ಮನೆಯೊಳಗೆ ಬಂದು ಅವನೊಡನೆ, “ನಿನಗೆ ತಿಳಿಯದೆಂದ ಮೇಲೆ ಅವನಿರುವುದಾದರೂ ಎಲ್ಲಿ? ನನ್ನ ಮಗನನ್ನು ಯಾರಾದರೂ ಕೊಂದು ಬಿಟ್ಟರೇ?” ಎಂದು ಕೇಳಿ ಅಳತೊಡಗಿದಳು. “ನೀವು ಸುಮ್ಮನಿರಿ. ಅವನು ಬೊಂಬಾಯಿಗೆ ಹೋಗಿರಬಹುದು. ಅವನು ಗಂಡಸಲ್ಲವಾ? ಎಲ್ಲ ಕಡೆಯಲ್ಲಿ ತಿರುಗಿ ಅಭ್ಯಾಸವೂ ಇದೆ. ಇಂದಲ್ಲ ನಾಳೆ ಬಂದಾನು. ಅದಕ್ಕೆ ಇಷ್ಟು ಗಾಬರಿ ಯಾಕೆ?” ಎಂದು ಮಮ್ಮೂಟಿ ಆಚುಮ್ಮಳನ್ನು ಗದರಿ ಹೊರ ನಡೆದನು. ‘ಮಾಡಬಾರದ್ದನ್ನು ಮಾಡಿ ಈಗ ತಲೆ ಮರೆಸಿಕೊಂಡಿದ್ದಾನೆ. ಹರಾಮ ಖೋರ!’ ಎಂದು ಮಮ್ಮೂಟಿ ಹಲ್ಲು ಕಡಿದನು. ಈಗ ಆತನಿಗೆ ತನ್ನ ವ್ಯವಹಾರದಲ್ಲಿ ಮೊದಲಿನಂತೆ ತಲ್ಲೀನನಾಗುವುದು ಸಾಧ್ಯವಿರಲಿಲ್ಲ. ಸದಾ ಮಗಳ ಚಿಂತೆ. ಇಷ್ಟೆಲ್ಲ ಸಂಪಾದಿಸಿಯೂ, ಊರಿಗೆ ಅರಸನಾಗಿಯೂ ತನ್ನ ಮಗಳನ್ನು ಚೆನ್ನಾಗಿ ಕಾಪಾಡಿಕೊಳ್ಳಲಾಗಲಿಲ್ಲವಲ್ಲಾ? ತಾನು ಸೆರೆಮನೆ ವಾಸವನ್ನೂ ಅನುಭವಿಸಬೇಕಾಯಿತು. ಮಕ್ಕಳೂ ಸಮನಾಗಿ ವಿದ್ಯೆ ಕಲಿಯಲಿಲ್ಲ. ಹಣದ ಅಮಲೇ ಎಲ್ಲರ ತಲೆಗೆ ಹತ್ತಿತ್ತು. ಮುನೀರ್ ಮಾತ್ರ ಸಮನಾಗಿ ವಿದ್ಯಾಭ್ಯಾಸ ಮಾಡುತ್ತಾ ಇಂಜಿನಿಯರಿಂಗ್ ಮೂರನೇ ವರ್ಷದಲ್ಲಿದ್ದಾನೆ. ಅವನೊಬ್ಬನಾದರೂ ಸಮನಾದ ಹಾದಿಯಲ್ಲಿ ಮುನ್ನಡೆಯುತ್ತಿದ್ದಾನೆಂಬುದು ನೆಮ್ಮದಿಯ ವಿಷಯವಾಗಿತ್ತು. ಇನ್ನು ಈ ವ್ಯವಹಾರವನ್ನು ನಿಲ್ಲಿಸಿ ಬಿಡಬೇಕೆಂದು ಒಮ್ಮೊಮ್ಮೆ ಆತನಿಗನಿಸುತ್ತಿತ್ತು. ಜೀವವನ್ನೇ ಪಣಕ್ಕೊಡ್ಡಿದಂತಹ ವ್ಯವಹಾರ. ಯಾವಾಗ ಸುಳಿ 229 ಯಾವ ಕಡೆಯಿಂದ ತೊಂದರೆ ಬರುತ್ತದೆಂದೂ ಹೇಳಲಾಗುವುದಿಲ್ಲ. ಆದರೆ ಈ ವ್ಯವಹಾರವನ್ನು ನಿಲ್ಲಿಸುವ ಹಾದಿ ಯಾವುದು? ಇಲ್ಲ. ನಿಲ್ಲಿಸುವುದಂತೂ ಸಾಧ್ಯವೇ ಇಲ್ಲ. ಹಳದಿ ಸಕ್ಕರೆಯ ಈ ವ್ಯವಹಾರದಿಂದ ಕೋಟಿಗಟ್ಟಲೆ ಲಾಭವಾಗುವಾಗ ಇದನ್ನು ಯಾಕೆ ಕೊನೆಗೊಳಿಸಬೇಕು? ತಾಹಿರಾ ಸುಖವಾಗಿ ಬಂದಳೆಂದರೆ ಅವಳ ಮದುವೆಯನ್ನು ರಾಜರೂ ನಾಚುವ ರೀತಿಯಲ್ಲಿ ನೆರವೇರಿಸಬೇಕು! ಇನ್ನೂ ಒಂದು ಮಹತ್ವಾಕಾಂಕ್ಷೆ ಆತನ ಮನದಾಳದಲ್ಲಿ ಬೇರು ಬಿಟ್ಟಿತ್ತು. ಮುಂದಿನ ಚುನಾವಣೆಯಲ್ಲಾದರೂ ತಾನು ಸ್ಪರ್ಧಿಸಿ ಗೆದ್ದು ಒಮ್ಮೆಯಾದರೂ ತಾನು ವಿಧಾನ ಸಭಾ ಸದಸ್ಯನಾಗಬೇಕು! ಈ ಹಂಬಲಕ್ಕೆ ಇನ್ನೊಂದು ಕಾರಣವೂ ಇತ್ತು. ಈ ಬಾರಿಯು ಚುನಾವಣೆಯಲ್ಲಿ ವಾಸುವಿನ ಹೆಂಡತಿ ಕಲ್ಯಾಣಿ ಸ್ಪರ್ಧಿಸಿ ಗೆದ್ದಿದ್ದಳು! “ನಾವು ಕಷ್ಟಪಟ್ಟು ದುಡಿದು ಹಣ ಸಂಪಾದಿಸುತ್ತೇವೆ. ನಾವೂ ಕೂಡಾ ಅವರಂತೆ ಮೇಲ್ಮಟ್ಟದಲ್ಲಿ ಬದುಕುವುದನ್ನು ಈ ಜನರು ಸಹಿಸುವುದಿಲ್ಲ. ಅದಕ್ಕಾಗಿ ಅವರು ನನ್ನ ಗಂಡನನ್ನು ಜೈಲಿಗೆ ಹಾಕಿದ್ದಾರೆ. ನನ್ನ ಗಂಡ ಮತ್ತು ಮಮ್ಮೂಟಿ ಹಾಜಾರರು ಈ ಊರವರಿಗೆ ಎಷ್ಟೊಂದು ಉಪಕಾರ ಮಾಡಿದ್ದಾರೆ? ಈ ಊರಿನಿಂದ ಬಡತನವನ್ನು ಒದ್ದೋಡಿಸಿಲ್ಲವಾ? ನಾನು ಗೆದ್ದರೆ ನಾನು ಕೂಡಾ ನಿಮ್ಮೆಲ್ಲರ ಸೇವೆ ಮಾಡುತ್ತೇನೆ. ನನಗೆ ಓಟು ಕೊಡಿ!” ಎಂದು ಆಕೆ ಭಾಷಣ ಮಾಡುತ್ತಿದ್ದಳು, ಆಗಲೇ ಭಾಷಣ ಕಲೆಯಲ್ಲಿ ಪಳಗಿದ್ದ ಆಕೆ. ಆಕೆಯ ಭಾಷಣದ ಮೋಡಿಗೆ ಮರುಳಾಗಿಯೊ, ಆಡಳಿತ ಪಕ್ಷದ ಭ್ರಷ್ಠತೆಯಿಂದ ರೋಸಿಯೊ ಅಥವಾ ಹಣ ಮತ್ತು ಹೆಂಡ ನೀರಿನಂತೆ ಹರಿದದ್ದರಿಂದಲೊ, ಅಂತೂ ಸಮನಾಗಿ ತನ್ನ ಸಹಿ ಕೂಡಾ ಹಾಕಲು ಬಾರದ ಆಕೆ ವಿಧಾನಸಭಾ ಸದಸ್ಯೆಯಾಗಿದ್ದಳು! ಆಕೆಯ ಈ ಗೆಲವೇ ಮಮ್ಮೂಟಿಯ ಎದೆಯಾಳದಲ್ಲೂ ಮಹದಾಶೆ ಚಿಗುರಿಸಿತ್ತು! ತನ್ನ ಈಯೊಂದು ಹಂಬಲ ಕೈಗೂಡುವವರೆಗಾದರೂ ತಾನು ತನ್ನ ವ್ಯವಹಾರವನ್ನು ಮುಂದುವರಿಸಬೇಕೆಂದು ಆತನು ತೀರ್ಮಾನಿಸಿದನು. * * * * * ಮಮ್ಮೂಟಿ ಆಗಾಗ ಬೆಂಗಳೂರಿಗೆ ಹೋಗಿ ತಾಹಿರಾಳನ್ನು ನೋಡಿಕೊಂಡು ಬರುತ್ತಿದ್ದನು. ಮಗಳನ್ನು ಕಂಡೊಡನೆ ಎದೆಯಲ್ಲಿ ಮುಳ್ಳು ಚುಚ್ಚಿದ ಅನುಭವವಾಗುತ್ತಿತ್ತು. ಈ ವಿಷಯ ಯಾರಿಗೂ ತಿಳಿಯಬಾರದೆಂಬ ಆತನ ಯೋಜನೆ ಮಾತ್ರ 230 ಸುಳಿ ಹೆಚ್ಚು ಫಲಕಾರಿಯಾಗಲಿಲ್ಲ. ದೂರದ ಊರಿನಲ್ಲಿ ತಾಯಿ ಮತ್ತು ಮಗಳು ಪದ್ಧತಿ ಇಲ್ಲದೆ ತಿಂಗಳುಗಟ್ಟಲೆ ಉಳಿದಾಗ ನೆರೆಕೆರೆಯವರಿಗೆ ಮತ್ತು ಮನೆಯ ಕೆಲಸದವರಿಗೆ ಅದು ಅಸಹಜವೆನ್ನಿಸಿತು. ಮಗನ ಕುರಿತು ಹಗಲಿರುಳೂ ಚಿಂತಿಸುತ್ತಿದ್ದ ಆಚುಮ್ಮನ ತಲೆಯಲ್ಲೂ ಏನೇನೊ ಆಲೋಚನೆಗಳು ಸುತ್ತಿ ಸುಳಿಯತೊಡಗಿದುವು. ತಾಹಿರಾ ಕೆಲವು ಬಾರಿ ತಲೆ ತಿರುಗುತ್ತಿದೆ ಎಂದದ್ದು, ಒಂದೆರಡು ಬಾರಿ ಬೆಳಿಗ್ಗೆ ತಿಂಡಿ ತಿಂದೊಡನೆ ವಾಂತಿ ಮಾಡಿದ್ದು, ಈಗ ತಿಂಗಳುಗಟ್ಟಲೆ ಬೆಂಗಳೂರಿನಲ್ಲಿ ಉಳಿದದ್ದು ಎಲ್ಲಕ್ಕೂ ಆಕೆ ಹೊಸ ಅರ್ಥ ಕಲ್ಪಿಸತೊಡಗಿದಳು. ಎಲ್ಲಕ್ಕಿಂತ ಹೆಚ್ಚಾಗಿ ತಾಹಿರಾಳನ್ನು ಬೆಂಗಳೂರಿಗೆ ಕರೆದೊಯ್ದ ಸಂದರ್ಭಕ್ಕೂ ತನ್ನ ಮಗ ಕಾಣೆಯಾದ ಸಂದರ್ಭಕ್ಕೂ ಆಕೆ ತಾಳೆ ಹಾಕಿ ಈ ವಿಷಯವನ್ನು ಯಾರಲ್ಲೂ ಬಾಯಿ ಬಿಡಲಿಲ್ಲ. ಹಾಗೆ ಬಾಯಿ ಬಿಟ್ಟು ಮಮ್ಮೂಟಿ ತನ್ನನ್ನು ಹೊರ ಹಾಕಿದರೆ ತಾನು ನಿರ್ಗತಿಕಳಾಗಿ ಬೀದಿಯಲ್ಲಿ ಬೀಳಬೇಕಾದೀತೆಂಬ ಭಯ ಆಕೆಯ ಬಾಯಿಗೆ ಬೀಗಮುದ್ರೆ ಜಡಿದಿತ್ತು. ಆದರೂ ‘ರಾಜ ಸಮುದ್ರ ಮಧ್ಯದಲ್ಲಿ ಹೆಂಡ ಕುಡಿದು ತೀರ ತಲುಪುವ ಮೊದಲೆ ಊರೆಲ್ಲ ಸುದ್ದಿ ಹಬ್ಬಿತು’ ಎಂಬ ಗಾದೆಯಂತೆ ಊರಿನಲ್ಲಿ ಗುಸುಗುಸು ಸುದ್ದಿ ಹರಡಿತು. ಆದರೆ ಮಮ್ಮೂಟಿ ಹಾಜಾರರ ಮನೆಯ ಸುದ್ದಿಯಾದುದರಿಂದ ಕೇವಲ ಗುಸುಗುಸು ಸುದ್ದಿಯಾಯಿತೇ ಹೊರತು ಢಾಣಾ ಡಂಗುರವಾಗಲಿಲ್ಲ. ತಾಹಿರಾಳ ಹೆರಿಗೆ ಸಮೀಪಿಸಿದಂತೆ ಫರೀದಾ ಕೂಡಾ ಬೆಂಗಳೂರಿಗೆ ಹೋದಳು. ವೈದ್ಯರು ಖಚಿತವಾದ ದಿನ ತಿಳಿಸಿದಾಗ ಮಮ್ಮೂಟಿಯೂ ಅಲ್ಲೇ ತಂಗಿದನು. ತಾಹಿರಾಗೆ ಅರ್ಧ ರಾತ್ರಿಯಲ್ಲಿ ನೋವು ಪ್ರಾರಂಭವಾಯಿತು. ಕೂಡಲೇ ಎಲ್ಲರೂ ಅಸ್ಪತ್ರೆಗೆ ಹೋಗಲು ಸಿದ್ಧರಾದರು. ತಾಹಿರಾ “ನಾನು ಅಸ್ಪತ್ರೆಗೆ ಹೋಗುವುದಿಲ್ಲ. ನನಗೆ ಆಪರೇಷನ್ ಬೇಡಾ” ಎಂದು ಅಳತೊಡಗಿದಳು. ನೋವು ಬಂದಾಗ ಜೋರಾಗಿ ಕಿರಿಚಿಕೊಂಡು ಓಡಾಡತೊಡಗಿದಳು. ಫರೀದಾ ಅನುನಯದಿಂದ “ನಿನಗೆ ಏನೂ ಆಗುವುದಿಲ್ಲ ಮಗೂ. ನಾವು ಬೇಗನೆ ಹೋಗಿ ಬಂದು ಬಿಡುವಾ” ಎಂದು ಪರಿಪರಿಯಲ್ಲಿ ಹೇಳಿದ ಬಳಿಕ ಅವರೊಡನೆ ಹೊರಟಳು. ಹೆಸರುವಾಸಿಯಾದ ಚಿಕಿತ್ಸಾಲಯವೊಂದರಲ್ಲಿ ಆಕೆಯನ್ನು ಸೇರಿಸಲಾಯಿತು. ದಿನವಿಡೀ ನೋವನುಭವಿಸಿದ ಬಳಿಕ ಮರುದಿನ ರಾತ್ರಿ ಹನ್ನೆರಡು ಗಂಟೆಗೆ ಹೆರಿಗೆಯಾಯಿತು. ರುಖ್ಯಾ ಮತ್ತು ಮಮ್ಮೂಟಿ ನಿಟ್ಟುಸಿರಿಟ್ಟರು. ಸುಳಿ 231 ಮರುದಿನ ಬೆಳಿಗ್ಗೆ ತಾಹಿರಾ, “ಮಗುವೆಲ್ಲಿ?” ಎಂದು ಕೇಳಿದಾಗ ರುಖ್ಯಾ, “ಏನು? ಮಗುವನ್ನೆತ್ತಿಕೊಂಡು ಊರಿಗೆ ಹೋಗುವ ಯೋಚನೆಯೇ? ನಾಚಿಕೆಯಾಗುವುದಿಲ್ಲವಾ ನಿನಗೆ? ನೀನು ಯಾಕಾದರೂ ನನ್ನ ಹೊಟ್ಟೆಯಲ್ಲಿ ಹುಟ್ಟಿದೆಯೊ?” ಎಂದು ಬೈದಳು. ಎಲ್ಲರೂ ಹೊಟ್ಟೆಯಲ್ಲೇ ಹುಟ್ಟುವುದಲ್ಲವಾ? ತಾಹಿರಾಗೆ ಎಳೆ ಸಿಕ್ಕಿತು. “ಅದು ನನ್ನ ಹೊಟ್ಟೆಯಲ್ಲಿ ಹುಟ್ಟಿದ್ದಲ್ಲವಾ?” ಎಂದು ಮಂಕುತನದಿಂದ ಗೊಣಗಿದಳು. ರುಖ್ಯಾ ಕೆರಳಿ ಕೆಂಡವಾದಳು. “ಏನೂ? ಏನಂದೆ? ನಮ್ಮ ಮರ್ಯಾದೆ ಪೂರ್ತಿ ತೆಗೆಯಬೇಕೆಂದಿದ್ದೀಯಾ? ನಿನ್ನನ್ನು ಈಗಲೇ ಕೊಂದು ಬಿಡುತ್ತೇನೆ!” ಎಂದು ಕೈಯೆತ್ತಿಕೊಂಡು ಮುನ್ನುಗ್ಗಿದಳು. “ಅಕ್ಕಾ, ಇದು ಅಸ್ಪತ್ರೆ!” ಎಂದು ಫರೀದಾ ತಡೆದದ್ದರಿಂದ ಆಗುತ್ತಿದ್ದ ಅನಾಹುತ ತಪ್ಪಿತು. “ಅಕ್ಕಾ, ಅವಳಿಗೆ ಅಷ್ಟು ಬುದ್ಧಿ ಇದ್ದಿದ್ದರೆ ಹೀಗೆಲ್ಲಾ ಆಗುತ್ತಿತ್ತೇ?” ಎನ್ನುತ್ತಾ ತಾಹಿರಳೆಡೆಗೆ ತಿರುಗಿ. “ನೀನು ಇನ್ನೆಂದೂ ಮಗುವಿನ ಸುದ್ದಿ ಎತ್ತಬಾರದು. ಮದುವೆಯಾದವರಿಗೆ ಮಕ್ಕಳಾಗಬಹುದು. ನಿನಗೆ ಮದುವೆಯಾದ ಮೇಲೆ ಮಗು ಆಗುತ್ತದೆ” ಎಂದಳು. ತಹಿರಾ ಪಿಳಿ ಪಿಳಿ ಕಣ್ಣು ಬಿಟ್ಟು ತಾಯಿ ಮತ್ತು ಚಿಕ್ಕಮ್ಮನನ್ನು ನೋಡಿ ಪೆದ್ದು ಪೆದ್ದಾಗಿ ನಗುತ್ತಾ, “ಮದುವೆಯಾದ ಮೇಲೆ ಎಲ್ಲರಿಗೂ ಮಕ್ಕಳಾಗುತ್ತವೆ. ಅಲ್ಲವಾ?” ಎಂದು ಕೇಳಿದಳು. “ಬಾಯ್ಮುಚ್ಚು” ಎಂದು ರುಖ್ಯಾಬಿ ಮತ್ತೊಮ್ಮೆ ಸಿಡಿದೆದ್ದಳು. ಹಲವು ದಿನಗಳ ಬಳಿಕ ಎಲ್ಲರೂ ಊರಿಗೆ ಹೊರಟರು. ಊರಿಗೆ ಬಂದೊಡನೆ ಏನೂ ಆಗಿಯೇ ಇಲ್ಲವೆಂಬಂತೆ ಎಲ್ಲರೂ ತೀರಾ ಸಹಜವಾಗಿರಲೆತ್ನಿಸಿದರು. ತಾಹಿರಾಳ ವಿದ್ಯಾಭ್ಯಾಸ ಎಂದೊ ಕೊನೆಗೊಂಡಿತ್ತು. ತಾಹಿರಾಳ ಸಮಸ್ಯೆ ಒಂದು ವಿಧದಲ್ಲಿ ಬಗೆ ಹರಿಯಿತೆಂದುಕೊಂಡು ಈ ಬಾರಿ ಹೆಂಡತಿಯರನ್ನು ಕರೆದುಕೊಂಡು ಮಕ್ಕಾಕ್ಕೆ ಹೋಗ ಬೇಕೆಂದುಕೊಂಡಿದ್ದನು ಮಮ್ಮೂಟಿ. ಆತ ಸೆರೆಮನೆ ಸೇರಿದಾಗ ಹೊತ್ತುಕೊಂಡಿದ್ದ ಹರಕೆ ಅದು. ಆತನ ಯೋಜನೆ ತಿಳಿದ ಉಮ್ಮಾಲಿ “ತಾಹಿರಾಳ ಮದುವೆ ಮುಗಿಸದೆ ಅವಳ ತಾಯಿಯನ್ನು ಎಲ್ಲಿಗೂ ಕರೆದೊಯ್ಯಬೇಡ” ಎಂದು ತಾಕೀತು ಮಾಡಿದ್ದರಿಂದ ಸದ್ಯಕ್ಕಂತೂ ಆ ಯೋಜನೆಯನ್ನು ಕೈ ಬಿಟ್ಟನು. ಆತನ ನೆಮ್ಮದಿ ಕೆಡಿಸುವ ಒಂದು ಘಟನೆಯೂ ನಡೆಯಿತು. ಮುನೀರ್‌ನ 232 ಸುಳಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿ ಆತನು ಅನುತ್ತೀರ್ಣನಾಗಿದ್ದ ಸುದ್ದಿ ಅದಾಗಿತ್ತು. ಪ್ರತಿ ಬಾರಿ ಉತ್ತಮ ಅಂಕಗಳೊಡನೆ ತೇರ್ಗಡೆಯಾಗುತ್ತಿದ್ದವನಿಗೆ ಈ ಬಾರಿ ಏನಾಯಿತೆಂದು ಕಳವಳಪಟ್ಟನು ಮಮ್ಮೂಟಿ. ಅವನು ಮಗನನ್ನು ಕರೆದು, “ಯಾಕಪ್ಪಾ ಹೀಗಾಯಿತು?” ಎಂದು ಕೇಳಿದನು. “ಇಂಜಿನಿಯರಿಂಗ್ ಪಾಸಾಗುವುದು ಅಷ್ಟು ಸುಲಭವಲ್ಲ ಅಪ್ಪಾ, ನಾನು ನಾಳೆ ಕಾಲೇಜಿಗೆ ಹೋಗ್ತೇನೆ. ನನಗೆ ಸ್ವಲ್ಪ ಹಣಬೇಕು” ಎಂದನು. ಮರುದಿನ ತಂದೆಯಿಂದ ಹಣ ದೊರೆತೊಡನೆ ಆತನು ಕಾಲೇಜಿಗೆ ಹೊರಟು ಹೋದನು. ಮುಂದಿನ ವರ್ಷವೂ ಆತ ಪರೀಕ್ಷೆಯಲ್ಲಿ ತೇರ್ಗಡೆಯಾಗಲಿಲ್ಲ. ವರ್ಷವಿಡೀ ಆಗಾಗ ಊರಿಗೆ ಬಂದು ತಂದೆಯಿಂದ ಹಣ ಕೊಂಡೊಯ್ಯುತ್ತಿದ್ದನು. ಮಗ ಕೇಳಿದಾಗಲೆಲ್ಲಾ ಹಣ ಕೊಡುವುದು ತನ್ನ ಕರ್ತವ್ಯವೆಂದುಕೊಂಡಿದ್ದ ಮಮ್ಮೂಟಿಗೆ ಈ ಬಾರಿಯೂ ಆತ ತೇರ್ಗಡೆಯಾಗದಿದ್ದಾಗ ಯೋಚನೆಗಿಟ್ಟುಕೊಂಡಿತು. ಯಾಕೊ ಇತ್ತೀಚೆಗೆ ಮುನೀರ್‌‌ನ ನಡವಳಿಕೆಯೂ ಕೊಂಚ ವಿಚಿತ್ರವಾಗಿ ಕಾಣುತ್ತಿತ್ತು. ಕಾಲೇಜಿಗೆ ಒಂದು ವಾರ ರಜೆ ಇದೆ ಎಂದು ಊರಿಗೆ ಬಂದವನು ಒಂದೆರಡು ದಿನ ಚೆನ್ನಾಗಿಯೆ ಇರುತ್ತಿದ್ದನು. ಬಳಿಕ ಮಂಕಾಗಿದ್ದು ಮತ್ತು ಒಂದೆರಡು ದಿನಗಳಲ್ಲಿ ಹೊರಟೇ ಬಿಡುತ್ತಿದ್ದನು. ಇತ್ತೀಚೆಗೆ ಹಣವನ್ನೂ ನೀರಿನಂತೆ ಖರ್ಚು ಮಾಡುತ್ತಾನೆಂಬುದು ಮಮ್ಮೂಟಿಯ ಅನಿಸಿಕೆ. ಯಾವುದನ್ನೂ ನಿಧಾನವಾಗಿ ಕುಳಿತು ಯೋಚನೆ ಮಾಡಿ ಪರಿಹಾರ ಕಂಡುಕೊಳ್ಳಲು ಆತನಿಗಂತೂ ವೇಳೆ ಇರಲಿಲ್ಲ. ಮಾದಕ ದ್ರವ್ಯದ ವ್ಯಾಪಾರವನ್ನು ತುಂಬಾ ಜಾಗರೂಕತೆಯಿಂದ ನಿರ್ವಹಿಸಿಬೇಕಾಗುತ್ತಿತ್ತು. ಜಮಾಲನು ಅದರಲ್ಲಿ ಸಾಕಷ್ಟು ಪಳಗಿದ್ದರೂ ಅವನಲ್ಲೇ ಜವಾಬ್ದಾರಿ ಪೂರ್ತಿ ಬಿಡುವ ಧೈರ್ಯವಿರಲಿಲ್ಲ. ಹೀಗಾಗಿ ಮಮ್ಮೂಟಿಯೂ ಹಗಲಿರುಳೂ ಓಡಾಡಬೇಕಾಗುತ್ತಿತ್ತು. ಆದರೆ ಮುನೀರ್‌ನ ಚಿಂತೆ ಮನದಾಳದಿಂದ ಪೂರ್ತಿ ಮರೆಯಾಗಲಿಲ್ಲ. ಮುನೀರ್ ಬಹಳ ಖರ್ಚು ಮಾಡುತ್ತಾನೆಂಬ ಅನಿಸಿಕೆಯುಂಟಾದೊಡನೆ, ಅವನನ್ನು ಹತೋಟಿಯಲ್ಲಿಡಬೇಕಾದರೆ ತಾನು ಕೈಬಿಗಿ ಹಿಡಿಯಬೇಕೆಂಬ ಯೋಚನೆಯುಂಟಾಯಿತು. ಹಾಗೆಯೇ ಮುಂದಿನ ಬಾರಿ ಮುನೀರ್ ಊರಿಗೆ ಬಂದಾಗ, “ಇಷ್ಟೊಂದು ಹಣವನ್ನೇನು ಮಾಡುತ್ತೀ? ನೀನಲ್ಲಿ ಕಲಿಯುತ್ತೀಯಾ ಇಲ್ಲ ಬೇರೇನಾದರೂ ಮಾಡ್ತೀಯಾ?” ಎಂದು ಗಡುಸಾಗಿಯೇ ಕೇಳಿದನು. “ಬೇರೇನು ಮಾಡುವುದು?” ತಲೆ ತಗ್ಗಿಸಿಕೊಂಡು ಗೊಣಗಿದನಾತ. “ಮೊದಲೆಲ್ಲ ನೀನು ಹೀಗೆ ಹಣ ಖರ್ಚು ಮಾಡುತ್ತಿರಲಿಲ್ಲವಲ್ಲ? ಕಳೆದ 233 ಒಂದೆರಡು ತಿಂಗಳಲ್ಲಿ ನೀನು ಕೊಂಡು ಹೋದ ಹಣ ಎಷ್ಟೆಂದು ಲೆಕ್ಕ ಹಾಕಿದ್ದಿಯಾ?” ಮುನೀರ್ ತಲೆ ತಗ್ಗಿಸಿದನು. ಫರೀದಾಬಿ ಕೂಡಾ, “ಇತ್ತೀಚೆಗೆ ಇವನೇಕೊ ವಿಚಿತ್ರವಾಗಿ ಆಡುತ್ತಿದ್ದಾನೆ. ಏನಾಗಿದೆ ಇವನಿಗೆ?” ಎಂದು ನೋವಿನಿಂದ ನುಡಿದಳು. “ನನಗೇನೂ ಆಗಿಲ್ಲ” ಎನ್ನುತ್ತಾ ಹೊರಟು ಹೋದನಾತ. ಮತ್ತೂ ಕೆಲವು ತಿಂಗಳುಗಳು ಕಳೆದುವು. ಮುನೀರ್‌ನ ನಡವಳಿಕೆಯಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ. ತಂದೆಯಿಂದ ಹಣ ದೊರೆಯುವುದು ಕಮ್ಮಿಯಾದಾಗ ತಾಯಿಯನ್ನು ಕಾಡಿಸಿ ಪೀಡಿಸಿ ಹಣ ಕೊಂಡೊಯ್ಯುತ್ತಿದ್ದನು. ಮಗನಿಗೆ ಕುಡಿತದ ಚಟವೇನಾದರೂ ಇದೆಯೇ ಎಂದು ಮಮ್ಮೂಟಿ ಕಣ್ಣಲ್ಲಿ ಕಣ್ಣಿಟ್ಟು ಪರೀಕ್ಷಿಸಿದನು. ಅಂತಹುದೇನೂ ಕಾಣಲಿಲ್ಲ. “ಹುಡುಗು ಪ್ರಾಯ. ಶೋಕಿ ಕೊಂಚ ಜಾಸ್ತಿ ಇರಬಹುದು. ಮುನೀರ್ ಅಂತಹ ಕೆಟ್ಟ ಕೆಲಸಕ್ಕೆಲ್ಲ ಹೋಗುವವನಲ್ಲ” ಎಂದು ಆತನು ತನ್ನಷ್ಟಕ್ಕೆ ಸಮಾಧಾನ ಮಾಡಿಕೊಂಡು ತನ್ನ ಕೆಲಸ ಕಾರ್ಯಗಳಲ್ಲಿ ಮುಳುಗಿದನು. ಆದರೆ ಫರೀದಾಬಿಯ ನೆಮ್ಮದಿ ಹಾರಿ ಹೋಯಿತು. ಅಷ್ಟೊಂದು ಲವಲವಿಕೆಯಿಂದ, ಉತ್ಸಾಹದಿಂದ ಓಡಾಡುತ್ತಿದ್ದ ಹುಡುಗ ಇತ್ತೀಚೆಗೆ ಯಾವಾಗಲೂ ಮಂಕು ಕವಿದವನಂತಿರುತ್ತಿದ್ದನು. ಕೈಯಲ್ಲಿ ಹಣ ದೊರೆತೊಡನೆ ಕಾಲೇಜಿಗೆ ಹಿಂತಿರುಗುತ್ತಿದ್ದನು. ಆಹಾರದಲ್ಲೂ ಮೊದಲಿನಂತೆ ಆಸಕ್ತಿ ಇಲ್ಲ. ಸಿಗರೇಟಿನ ಚಟವನ್ನು ಮಾತ್ರ ಚೆನ್ನಾಗಿ ಅಂಟಿಸಿಕೊಂಡಿದ್ದನು. ಅದೊಂದು ದುರ್ಗುಣ ಬಿಟ್ಟರೆ ಇನ್ಯಾವ ದುರ್ಗುಣವೂ ಇಲ್ಲ. ಫರೀದಾ ಹಗಲಿರುಳೂ ಚಿಂತಿಸಿ ತಲೆ ಕೆಡಿಸಿಕೊಂಡಳು. ಕೊನೆಗೊಂದು ದಿನ ಗಂಡನೊಡನೆ ದುಃಖ ತೋಡಿಕೊಂಡಳು. “ಮುನೀರ್‌ನನ್ನು ಹೀಗೆಯೇ ಬಿಟ್ಟು ಬಿಡ್ತೀರಾ? ಕಳೆದ ಎರಡು ವರ್ಷಗಳಿಂದಲೂ ಫೈಲಾಗುತ್ತಿದ್ದಾನೆ. ಈ ವರ್ಷವಾದರೂ ಪಾಸಾದಾನೆಂದು ನನಗನಿಸುವುದಿಲ್ಲ. ಅವನನ್ನು ಕಂಡೊಡನೆ ನನ್ನ ಕರುಳು ಕಿತ್ತು ಬರುತ್ತದೆ. ನಿಮಗೆ ಅವನ ಕುರಿತು ಏನೇನೂ ಚಿಂತೆ ಇಲ್ಲವೇ? ನನಗಿರುವ ಮಗ ಅವನೊಬ್ಬನೇ...” ಎನ್ನುತ್ತಾ ಕಂಠ ಗದ್ಗದವಾಗಿ ಗಳಗಳನೆ ಅತ್ತು ಬಿಟ್ಟಳು. “ನಾನೇನು ಮಾಡಲಿ? ಅವನೇನು ಚಿಕ್ಕ ಮಗುವೇ? ಇನ್ನು ಮುಂದೆ ಅವನ ಕೈಗೆ ಚಿಕ್ಕಾಸೂ ಕೊಡಬೇಡ” ಎಂದು ವ್ಯಥೆಯಿಂದ ನುಡಿದನು. “ಕಾಸಿನ ವಿಷಯ ಬಿಡಿ. ನೀವೊಮ್ಮೆ ಅವನ ಕಾಲೇಜಿಗೆ ಹೋಗಿ ಕೆಟ್ಟ 234 ಸುಳಿ ಹುಡುಗರ ಸಹವಾಸ ಮಾಡಿದ್ದಾನೆಯೇ ಹೇಗೇಂತ ವಿಚಾರಿಸಿ ಬನ್ನಿ” ಎಂದಳು. “ನಾನು ಅರ್ಜೆಂಟಾಗಿ ಬೊಂಬಾಯಿಗೆ ಹೋಗಬೇಕಾಗಿದೆ.” “ಬೆಂಕಿ ಬಿತ್ತು ನಿಮ್ಮ ಕೆಲಸಕ್ಕೆ” ಮೊತ್ತ ಮೊದಲ ಬಾರಿ ಫರೀದಾ ಸಹನೆ ಕಳೆದುಕೊಂಡು ಸಿಡಿದೆದ್ದಳು. “ಮಕ್ಕಳ ಕುರಿತು ಗಮನ ಹರಿಸದ ನೀವೆಂತಹ ತಂದೆ?” ಎನ್ನುತ್ತಿದ್ದಂತೆ ಮತ್ತೊಮ್ಮೆ ಅಳು ಉಕ್ಕಿತು. ಮಮ್ಮೂಟಿ ಫರೀದಾಳ ಬಳಿ ಬಂದು ಆಕೆಯನ್ನಪ್ಪಿಕೊಂಡು ಸಂತೈಸುತ್ತಾ, “ನಾನು ಬೊಂಬಾಯಿಯಿಂದ ಹಿಂತಿರುಗುವಾಗ ಅವನ ಕಾಲೇಜಿಗೆ ಹೋಗಿ ಬರುವೆ” ಎಂದು ಭರವಸೆಯಿತ್ತನು. * * * * * ಬೊಂಬಾಯಿಯಿಂದ ಹಿಂತಿರುಗುತ್ತಾ ಆತನು ಮುನೀರ್‌ನ ಕಾಲೇಜಿನ ಕಡೆಗೆ ಕಾರನ್ನು ತಿರುಗಿಸಿದನು. ಆತನು ಈ ವರೆಗೂ ಕಾಲೇಜಿನ ಮೆಟ್ಟಲು ತುಳಿದಿರಲಿಲ್ಲ. ಮುನೀರ್ ತನ್ನ ಇತರ ಸಹಪಾಠಿಗಳೊಡನೆ ತಾನೇ ಕಾಲೇಜಿಗೆ ಹೋಗಿ ಸೇರಿದ್ದನು. ಈಗ ಮಗನನ್ನು ಎಲ್ಲಿ ಹುಡುಕುವುದೆಂದುಕೊಳ್ಳುತ್ತಾ ಕಾರನ್ನು ಒಂದೆಡೆ ನಿಲ್ಲಿಸಿ ಕೊಂಚ ದೂರದಲ್ಲಿ ನಡೆದು ಹೋಗುತ್ತಿದ್ದ ಹುಡುಗನೊಬ್ಬನನ್ನು ಕರೆದು “ಪ್ರಿನ್ಸಿಪಾಲರ ಕೋಣೆ ಎಲ್ಲಿ?” ಎಂದು ಕೇಳಿ ಆತನು ಕೈ ತೋರಿಸಿದೆಡೆಗೆ ನಡೆದನು. ಅಲ್ಲೇ ನಿಂತಿದ್ದ ಪೇದೆಯ ಕೈಗೆ ಐದು ರೂಪಾಯಿಯ ನೋಟೊಂದನ್ನು ತುರುಕಿ ಒಳ ನಡೆದು ಪ್ರಿನ್ಸಿಪಾಲರಿಗೆ ನಮಸ್ಕರಿಸಿದನು. “ಯಾರು ನೀವು? ಏನಾಗಬೇಕಾಗಿತ್ತು?” ಅವರು ಕೇಳಿದರು. “ನಾನು ಮುನೀರ್‌ನ ತಂದೆ...” ಎಂದೊಡನೆ ಪ್ರಾಂಶುಪಾಲರ ಮುಖ ಗಂಭೀರವಾಯಿತು. “ಓ..... ನೀವೇ? ಬಹಳ ತಡವಾಗಿ ಬಂದಿರಿ” ಎಂದರವರು. “ಆಂ...” ಮಮ್ಮೂಟಿ ಅವಾಕ್ಕಾದನು. “ನಿಮ್ಮ ಮಗ ಕಾಲೇಜಿಗೆ ಬರದೆ ಐದಾರು ತಿಂಗಳಾದರೂ ಆಗಿರಬಹುದು. ಈಗಲಾದರೂ ಮಗನ ಕುರಿತು ವಿಚಾರಿಸಲು ನಿಮಗೆ ಸಮಯ ಸಿಕ್ಕಿತಲ್ಲಾ? ಮಮ್ಮೂಟಿಗೆ ಆಘಾತವಾಯಿತು. “ಆದರೆ... ಅವನು ಕಾಲೇಜಿಗೆಂದು ಬಂದು ಇಲ್ಲೇ ಇದ್ದಾನಲ್ಲವಾ?” ಎಂದು ಕೇಳಿದನಾತ. “ಇಲ್ಲಿ ಕಾಲೇಜಿನಲ್ಲಂತೂ ಇಲ್ಲ. ಬೇರೆ ಹುಡುಗರೊಡನೆ ವಿಚಾರಿಸಿ” ಎನ್ನುತ್ತಾ ತಮ್ಮ ಫೈಲಿನಲ್ಲಿ ಮುಳುಗಿದರು. ಮಮ್ಮೂಟಿ ಇನ್ನು ಅಲ್ಲಿ ಕುಳಿತು ಏನೂ ಮಾಡುವಂತಿರಲಿಲ್ಲ. ಆತನು ಸುಳಿ 235 ಎದ್ದು ಹೊರನಡೆದನು. ತರಗತಿಗಳಿಂದ ಹೊರ ಬಂದ ಹುಡುಗರೊಡನೆ ಮುನೀರ್‌ನ ಕುರಿತು ವಿಚಾರಿಸಿದನು. ಹುಡುಗರು ಪರಸ್ಪರ ಮುಖ ನೋಡಿಕೊಂಡರು. ಆಗ ನಾಲ್ಕನೇ ವರ್ಷದ ವಿದ್ಯಾರ್ಥಿಯೊಬ್ಬನು, “ಬನ್ನಿ ಸಾರ್, ನಾನು ತೋರಿಸುತ್ತೇನೆ. ಅವನು ಹಾಸ್ಟೆಲಿನಲ್ಲಿಲ್ಲ. ಬೇರೆ ರೂಮಿನಲ್ಲಿದ್ದಾನೆ. ನಿಮ್ಮ ಕಾರಿದೆಯಲ್ಲ? ಅದರಲ್ಲೇ ಹೋಗೋಣ” ಎನ್ನುತ್ತಾ ತಾನೇ ಮುಂದಾಗಿ ಕಾರಿನೆಡೆಗೆ ನಡೆದನು. ಮಮ್ಮೂಟಿ ಚಾಲಕನೊಡನೆ ಆತನು ಹೇಳಿದಲ್ಲಿಗೆ ಕೊಂಡೊಯ್ಯಲು ತಿಳಿಸಿ ಕಾರಿನಲ್ಲಿ ಕುಳಿತನು. ನಗರದಿಂದ ಕೊಂಚ ದೂರದ ಗಲ್ಲಿಯೊಂದರ ಬಳಿ ಕಾರನ್ನು ನಿಲ್ಲಿಸಿ ಆತನು ಮಮ್ಮೂಟಿಯನ್ನು ಒಂದು ಅಂಗಡಿ ಕೋಣೆಯ ಮಾಳಿಗೆಗೆ ಕರೆದೊಯ್ದನು. ಕೋಣೆಯ ಬಾಗಿಲು ಮುಚ್ಚಿತ್ತು. ಆತನು ಬಾಗಿಲು ತಟ್ಟಿ “ಮುನೀರ್, ಯಾರು ಬಂದಿದಾರೆ ನೋಡು...” ಎಂದನು. ಬಾಗಿಲು ತೆರೆಯಿತು. ಮಮ್ಮೂಟಿ ಒಳಗಿಣುಕಿದನು. ಕೂಡಲೇ ವಿದ್ಯುದಾಘಾತಗೊಂಡವನಂತೆ ಸ್ತಂಭಿತನಾಗಿ ನಿಂತನು. ಮುನೀರ್ ಮಂಚದ ಮೇಲೆ ಮಲಗಿ ಸಿಗರೇಟ್ ಸೇದುತ್ತಿದ್ದನು. ಅವನಂತೆಯೇ ಇನ್ನೂ ಕೆಲವು ಹುಡುಗರು ಮಂಚದ ಮೇಲೆ ಸಿಗರೇಟ್ ಸೇದುತ್ತಿದ್ದರು. ಅಲ್ಲಲ್ಲಿ ಬಿದ್ದುಕೊಂಡು ಸಿಗರೇಟು ಸೇದುತ್ತಿದ್ದರು. ಅವರಾರಿಗೂ ಈ ಲೋಕದ ಪರಿವೆ ಇದ್ದಂತಿರಲಿಲ್ಲ. ಎಲ್ಲರೂ ನಶೆಯಲ್ಲಿದ್ದು ಸಿಗರೇಟಿನ ಹೊಗೆ ಬಿಡುತ್ತಾ ಭೂಲೋಕದ ತುತ್ತ ತುದಿಯಲ್ಲಿದ್ದಂತೆ ಆನಂದ ತುಂದಿಲರಾಗಿ ಪ್ರಪಂಚವನ್ನೇ ಮರೆತಂತಿದ್ದರು. ಉಟ್ಟ ಬಟ್ಟೆಯ ಪರಿವೆಯೂ ಇದ್ದಂತಿರಲಿಲ್ಲ. ಮಮ್ಮೂಟಿ, “ಮುನೀರ್” ಎಂದು ಕರೆದನು. ಈಗ ಮುನೀರ್ ನಿಧಾನವಾಗಿ ಕಣ್ಣು ತೆರೆದನು. ತಂದೆಯ ಗುರುತು ಹತ್ತಿದೊಡನೆ ಅತ್ತಿತ್ತ ವಾಲುತ್ತಾ ಎದ್ದು ನಿಂತನು. “ಇಲ್ಲಿಗೇಕೆ ಬಂದಿರಿ? ಪತ್ರ ಬರೆದಿದ್ದರೆ... ನಾನೇ... ಬರುತ್ತಿದ್ದೆನಲ್ಲ?” ಎಂದು ತೊದಲಿದನು. ಮಮ್ಮೂಟಿಯ ಮುಖದಲ್ಲಿ ವರ್ಣಿಸಲಸದಳವಾದ ವೇದನೆಯೊಂದು ಮನೆ ಮಾಡಿಕೊಂಡಿತು. ಆತನು ತನ್ನೊಡನೆ ಬಂದ ಹುಡುಗನೊಡನೆ, “ಇದೇನಿದು?” ಎಂದು ಕೇಳಿದನು?” “ಹಳದಿ ಸಕ್ಕರೆ” ಎಂದೊಡನೆ, “ಯಾ ಅಲ್ಲಾ, ನಾನಿದೇನು ಮಾಡಿದೆ?” ಎಂಬ ಉದ್ಗಾರವೊಂದು ಆತನ ಬಾಯಿಯಿಂದ ಹೊರಬಿತ್ತು. ಬಳಿಕ ಆತನೊಡನೆ, “ಇವರಿಗೆ ಇದೆಲ್ಲಿ 236 ಸುಳಿ ದೊರೆಯುತ್ತಿದೆ?” ಎಂದು ಕೇಳಿದನು. “ಹಣವಿದ್ದರೆ ದೊರಕದ ವಸ್ತು ಯಾವುದಿದೆ ಸಾರ್? ಈ ಮಾದಕ ಪದಾರ್ಥದಿಂದಾಗಿ ಕೆಲವು ಹುಡುಗರು ಈಗಾಗಲೇ ಕಾಲೇಜು ಬಿಟ್ಟಿದ್ದಾರೆ” ಎಂದನಾತ. ಕೊಂಚ ಹೊತ್ತು ದಿಗ್ಮೂಢವಾಗಿ, ಯೋಚನಾಶಕ್ತಿಯನ್ನು ಕಳೆದುಕೊಂಡಂತೆ ನಿಂತುಕೊಂಡು ಬಳಿಕ ನಿಧಾನವಾಗಿ ವಾಸ್ತವ ಪ್ರಪಂಚಕ್ಕಿಳಿದನು ಮಮ್ಮೂಟಿ. ಬಳಿಕ “ಬಾ ಮಗಾ, ಮನೆಗೆ ಹೋಗೋಣ” ಎಂದು ನಯವಾಗಿ ಮಗನನ್ನು ಕರೆದನು. “ಬೇಡಪ್ಪಾ, ನಾನು ಈಗ ಬರುವುದಿಲ್ಲ” ತಲೆ ತಗ್ಗಿಸಿ ಗೊಣಗಿದನಾತ. ಈಗ ಮಮ್ಮೂಟಿಯ ಹುಬ್ಬು ಗಂಟಕ್ಕಿತು. “ಹೂಂ. ಹೊರಡು....” ಎಂದು ಗಡುಸಾಗಿ ನುಡಿದನು. “ಎಲ್ಲಿ ನಿನ್ನ ಬಟ್ಟೆ ಬರೆ?” ತಂದೆ ತನ್ನನ್ನು ಬಿಟ್ಟು ಹೋಗಲಾರನೆಂದು ಖಾತ್ರಿಯಾದ ಬಳಿಕ ಮುನೀರ್ ಒಲ್ಲದ ಮನದಿಂದ ತಂದೆಯನ್ನು ಹಿಂಬಾಲಿಸಿದನು. ಮಮ್ಮೂಟಿ ಆ ಹುಡುಗನನ್ನು ಹಾಸ್ಟೆಲಿನಲ್ಲಿ ಬಿಟ್ಟು ಕಾರನ್ನು ತಾನೇ ಚಲಾಯಿಸುತ್ತಾ ಊರೆಡೆಗೆ ತಿರುಗಿಸಿದನು. ಆತನ ತಲೆ ಜೇನುಗೂಡಾಗಿತ್ತು. ಜಮಾಲ್ ಕೂಡಾ ವಿದ್ಯೆಯನ್ನು ಆರ್ಧದಲ್ಲಿ ಬಿಟ್ಟು ಬಂದನು. ಇವನೊಬ್ಬ ಚೆನ್ನಾಗಿ ಕಲಿತು ಟುಸ್ ಪುಸ್ ಎಂದು ಇಂಗ್ಲೀಷ್‌ ಮಾತನಾಡುತ್ತಾ ದೊಡ್ಡ ಆಫೀಸರ್ ಆಗುವುದನ್ನು ಕನಸು ಕಂಡದ್ದು ಅದೆಷ್ಟು ಬಾರಿಯೊ. ಕನಸು ಕೇವಲ ಕನಸೇ ಆಯಿತು. ಯಾಕೆ ಹೀಗಾಯಿತು? ತಲೆ ತುಂಬಾ ಹೊಗೆ ತುಂಬಿಕೊಂಡಂತಾಗಿ ಕಾರನ್ನು ಒಂದೆಡೆ ನಿಲ್ಲಿಸಿದನು. “ಯಾ ಅಲ್ಲಾಹ್, ನಾನಿದೇನು ಮಾಡಿದೆ!” ಎಂಬ ಉದ್ಗಾರ ಮತ್ತೊಮ್ಮೆ ಅವನ ಬಾಯಿಯಿಂದ ಹೊರಟಿತು...! ಮಾದಕ ದ್ರವ್ಯ! ಕಳೆದ ಒಂದೆರಡು ವರ್ಷಗಳಲ್ಲಿ ತನ್ನಲ್ಲಿಗೆ ಹರಿದು ಬಂದ ಹಣದ ಮೂಲ! ಅಂದರೆ ತಾನೇ ತನ್ನ ಕೈಯಾರೆ ಮಗನಿಗೆ ವಿಷವಿಕ್ಕಿದಂತಾಯಿತೇ? ಇದರ ಪರಿಣಾಮ ಹೀಗಾಗುತ್ತಿದೆಯೇ? ಎಲ್ಲ ಯುವಕರೂ ಈ ಹವ್ಯಾಸಕ್ಕೆ ತುತ್ತಾಗುತ್ತಿದ್ದರೆಯೇ? ಚಿಕ್ಕ ಪ್ರಾಯದ ಎಳೆನೀರಿನಂತಹ ಯುವಕರು ಈ ಹವ್ಯಾಸಕ್ಕೆ ತುತ್ತಾಗಿ ನಿಷ್ಕ್ರಿಯರಾಗುತ್ತಿದ್ದಾರೆಯೇ? ತಾನಿದೇನು ಮಾಡಿದೆ? ತಾನೇ ಅಗೆದ ಹೊಂಡದಲ್ಲಿ ತನ್ನ ಮಗನೇ ಬಿದ್ದನೇ? ಕಾರನ್ನು ನಿಲ್ಲಿಸಿ ಚಿಂತಿಸುವುದಾದರೂ ಎಷ್ಟು ಹೊತ್ತು? ಆತನು ಸುಳಿ 237 ಮಗನೊಡನೆ, “ನಿನಗೆ ಇದನ್ನು ಕಲಿಸಿದವರಾರು?” ಎಂದು ಕೇಳಿದನು. ಮುನೀರ್ ಉತ್ತರ ನೀಡಲಿಲ್ಲ. ಅರ್ಧ ರಾತ್ರಿಯಲ್ಲಿ ಊರು ಸೇರಿದಾಗ ಬಾಗಿಲು ತೆರೆದವಳು ಫರೀದಾಬಿ. ಗಂಡನ ಹಿಂದೆ ಮಗನೂ ನಿಂತದ್ದು ಕಂಡು ಕ್ಷಣಕಾಲ ಸಂತೋಷವಾಯಿತು. ಮಮ್ಮೂಟಿ ಒಳ ಬಂದು ಮೌನವಾಗಿ ತನ್ನ ಕೋಣೆಗೆ ನಡೆದನು. ಮುನೀರ್ ಕೂಡಾ ತಾಯಿಗೆ ಮುಖ ಕೊಟ್ಟು ಮಾತನಾಡಲಾಗದೆ ಮಾಳಿಗೆಯ ಮೆಟ್ಟಲು ಹತ್ತಿದನು. ಕೃಶವಾದ ದೇಹ, ಮಂಕು ಕವಿದಂತಿದ್ದ ಕಣ್ಣುಗಳು. ನಿಸ್ತೇಜ ಮುಖ. ಮಗನ ರೂಪ ಕಂಡೆ ಆಕೆಯ ಎದೆಯೊಡೆದಿತ್ತು. ಈಗ ಮಾತಿಲ್ಲದೆ ತಂದೆ ಮಗ ಒಂದೊಂದು ದಿಕ್ಕಿಗೆ ನಡೆದಾಗ ಏನೊ ಅನಾಹುತವಾಗಿದೆಯೆಂದು ಆಕೆಗೆ ಹೊಳೆಯಿತು. ಗಂಡನನ್ನು ಹಿಂಬಾಲಿಸಿದವಳೇ, “ಏನಾಗಿದೆ ಮುನೀರ್‍ಗೆ?” ಎಂದು ಕೇಳಿದಳು. ಮಮ್ಮೂಟಿ ಮಾತನಾಡದೆ ಹೆಂಡತಿಯ ಮುಖ ನೋಡಿದನು. ಬಳಿಕ ಫರೀದಾಳ ಹೆಗಲ ಮೇಲೆ ಕೈಯಿಟ್ಟು, “ಫರೀದಾ, ನಾನು ಒಳ್ಳೆಯ ತಂದೆಯಾಗಲಿಲ್ಲ” ಎಂದು ಅತ್ಯಂತ ವೇದನೆಯಿಂದ ನುಡಿದನು. “ಏನಾಯಿತು?” ಮತ್ತೊಮ್ಮೆ ಆತಂಕದಿಂದ ಉದ್ವಿಗ್ನಳಾಗಿ ಕೇಳಿದಳಾಕೆ. “ಮುನೀರ್‌ಗೆ ಮಾದಕ ದ್ರವ್ಯದ ಚಟ ಹತ್ತಿಕೊಂಡಿದೆ.” “ಆಂ.....” ಆಕೆ ಅಳತೊಡಗಿದಳು. “ನಾನು... ಕಳೆದ ಆರು ತಿಂಗಳಿನಿಂದಲೂ... ಹೇಳುತ್ತಲೇ ಇದ್ದೆ. ಅವನಿಗೇನೊ ಆಗಿದೇಂತ. ನೀವು.. ಆ ಕಡೆ ಗಮನ ಹರಿಸಿದಿರಾ?” “ಶ್... ಅಳಬೇಡ. ಎಲ್ಲಕ್ಕೂ ಏನಾದರೊಂದು ಹಾದಿ ಇದ್ದೇ ಇರುತ್ತದೆ.” ಸಮಾಧಾನ ಮಾಡಿಕೊ.” “ಇನ್ನೆಂತಹ ಸಮಾಧಾನ?” * * * * * ಮರುದಿನ ವಾಸು ಬಂದಾಗ ಮಮ್ಮೂಟಿ ಮಗನ ವಿಷಯವನ್ನು ಆತನಿಗೆ ತಿಳಿಸಿದನು. “ಇದು ಇಂತಹ ಅಪಾಯಕಾರಿ ಎಂದು ನನಗೆ ತಿಳಿದಿರಲಿಲ್ಲ ವಾಸು. ನನ್ನ ಮಗನೇ ಈ ಸಿಕ್ಕಿನಲ್ಲಿ ಸಿಕ್ಕಿಕೊಂಡನಲ್ಲಾ? ಈಗೇನು ಮಾಡಲಿ?” ಎಂದು ದುಃಖಿತಪ್ತನಾಗಿ ಕೇಳಿದನು. “ನೋಡುವಾ, ಯಾವುದಕ್ಕೂ ಏನಾದರೊಂದು ಪರಿಹಾರ ಮಾರ್ಗ ಇರಬಹುದು. ನೀವೇನೂ ಯೋಚನೆ ಮಾಡಬೇಡಿ?'' ಎಂದು ಸಂತೈಸಿದನು 238 ಸುಳಿ ವಾಸು. ಕೆಲವು ದಿನ ಮನೆಯಲ್ಲಿದ್ದ ಮುನೀರ್ ಮತ್ತೊಮ್ಮೆ ತಾಯಿಯನ್ನು ಕಾಡಿ ಬೇಡಿ ಹಣ ಪಡೆದುಕೊಂಡು ತಂದೆಗೆ ತಿಳಿಯದಂತೆ ಊರು ಬಿಟ್ಟನು. ಅದನ್ನು ತಿಳಿದ ಮಮ್ಮೂಟಿ ಮರುದಿನವೇ ಅಲ್ಲಿಗೆ ಹೋಗಿ ಮಗನನ್ನು ಕರೆದುಕೊಂಡು ಬಂದನು. ಮರುದಿನ ವಾಸು ಬಂದು, “ಮುನೀರ್‍ನನ್ನು ಓರ್ವ ವೈದ್ಯರಿಗೆ ತೋರಿಸಬೇಕು. ಈ ಚಟವನ್ನು ಒಂದೇ ಬಾರಿಗೆ ನಿಲ್ಲಸುವುದು ಸಾಧ್ಯವಿಲ್ಲವಂತೆ. ನಿಧಾನವಾಗಿ ಅದರಿಂದ ದೂರ ಮಾಡಬೇಕು” ಎಂದು ಸಲಹೆ ನೀಡಿದನು. ಉಮ್ಮಾಲಿ ಮತ್ತೂ ಒಂದು ಸಲಹೆ ನೀಡಿದಳು. “ಪ್ರಾಯಕ್ಕೆ ಬಂದ ಹುಡುಗ. ಮದುವೆ ಮಾಡಿದರೆ ಎಂತಹ ಚಟವೂ ಬಿಟ್ಟು ಹೋದೀತು!” ತಾಯಿಯ ಸಲಹೆ ಮಮ್ಮೂಟಿಗೂ ಒಪ್ಪಿಗೆಯಾಯಿತು. ಹೌದು. ಉಮ್ಮ ಹೇಳಿದಂತೆ ಒಂದು ಮದುವೆ ಮಾಡಿದರೆ ಎಲ್ಲವೂ ನೆಟ್ಟಗಾದೀತೇನೊ. ವಿದ್ಯೆಯಂತೂ ಹೋಯಿತು ಹೋಗಲಿ. ಅವನು ದುಡಿಯಬೇಕಾದ ಅವಶ್ಯಕತೆಯಂತೂ ಇಲ್ಲ. ಮದುವೆಯಾಗಿ ಬಂದಾಕೆಯ ಕಾಲ್ಗುಣದಿಂದಲಾದರೂ ಮಗ ನೆಟ್ಟಗಾದರೆ ಸಾಕು! ಮಮ್ಮೂಟಿಯ ಮಗನಿಗೆ ಮದುವೆಯೆಂದರೆ ಹೆಣ್ಣು ಹೆತ್ತ ತಂದೆತಾಯಿಗಳು ದಲ್ಲಾಳಿಗಳನ್ನು ಆತನ ಬಳಿಗೆ ಕಳುಹಿಸಿ ತುದಿಗಾಲಲ್ಲಿ ಕಾಯುತ್ತಿದ್ದರು. ಹೀಗೆ ಬಂದ ಒಂದು ಪ್ರಸ್ತಾಪ ಹೂವಂಗಳ ಮನೆತನದ್ದು. ಹೂವಂಗಳ ಮನೆತನವೆಂದರೆ ಒಂದು ಕಾಲದಲ್ಲಿ ಪ್ರಸಿದ್ಧರಾದ ಜಮಿನ್ದಾರರ ಮನೆತನ. ಹೂವಂಗಳ ಮನೆಯ ಅಬ್ಬಾಸ್ ಎಂಬವನು ಮೂಸಾ ಹಾಜಿಗೂ ಸಂಬಂಧವೇ. ಹಳೆಯ ಮನೆತನಗಳೆಲ್ಲವೂ ಈ ಹೊಸ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಸಂದರ್ಭದಲ್ಲಿ ಆತನು ದೂರದ ಪಟ್ಟಣವೊಂದರಲ್ಲಿ ನೆಲೆಸಿ ಹೊಸದಾಗಿ ವ್ಯಾಪಾರವನ್ನಾರಂಭಿಸಿದ್ದನು. ವ್ಯಾಪಾರದಲ್ಲಿ ಅನುಭವಿಲ್ಲದ ಕಾರಣ ಪ್ರಗತಿ ಸಾಧಿಸಲಾಗದೆ ಆರ್ಥಿಕವಾಗಿ ಕೊಂಚ ಕಷ್ಟದಲ್ಲಿದ್ದನು. ಈಗ ಮಮ್ಮೂಟಿ ಹಾಜಾರರ ಮಗ ತನ್ನ ಮಗಳನ್ನು ಮದುವೆಯಾದರೆ ಹಾಜಾರರ ಸಹಕಾರದಿಂದ ತನ್ನ ಸ್ಥಿತಿಯೂ ಸುಧಾರಿಸಬಹುದೆಂಬ ದೂರದ ಆಸೆ ಆತನದು. ಆತನ ಮಗಳು ರಫೀನಾ ಕಾಲೇಜಿಗೆ ಹೋಗುತ್ತಿದ್ದ ಸುಂದರಿಯಾದ ಹುಡುಗಿ. ಮಮ್ಮೂಟಿಗೆ ಈ ಸಂಬಂಧ ಒಪ್ಪಿಗೆ ಎಂದು ತಿಳಿದೊಡನೆ ಅಬ್ಬಾಸ್ ಪ್ರಪಂಚದ ತುತ್ತ ತುದಿಯಲ್ಲಿದ್ದನು. ಹುಡುಗನ ವಿಷಯವನ್ನು ಕೆದಕಿ ನೋಡುವ ಗೋಜಿಗೆ ಸುಳಿ 239 ಹೋಗಲಿಲ್ಲ. ‘ಇಂಜಿನಿಯರಿಂಗ್ ಕಾಲೇಜಿನ ಕೊನೆಯ ವರ್ಷದ ವಿದ್ಯಾರ್ಥಿ’ ಎಂಬುದಷ್ಟೆ ಹುಡುಗನ ಕುರಿತು ಆತನಿಗೆ ದೊರೆತ ಮಾಹಿತಿ. ಮಮ್ಮೂಟಿ ಸೆರಮನೆಯಿಂದ ಬಂದ ಬಳಿಕ ನಡೆಯುತ್ತಿರುವ ಮೊದಲ ಮದುವೆ. ಜೈಲಿಗೆ ಹೋಗಿಯೂ ತನ್ನ ಪ್ರತಿಷ್ಠೆ, ಗೌರವಗಳಿಗೆ ಏನೂ ಕುಂದುಂಟಾಗಿಲ್ಲವೆಂದು ಊರವರಿಗೆ ತೋರಿಸಿಕೊಡಲು ಮದುವೆಯೊಂದು ಉತ್ತಮ ಅವಕಾಶ. ಸಾವಿರಗಟ್ಟಲೆಯಲ್ಲಿ ಆಮಂತ್ರಣ ಪತ್ರಿಕೆಯ ವಿತರಣೆ. ಬಡ ಬಗ್ಗರಿಗೆ ಗೇಟಿನ ಬಳಿಯಲ್ಲೇ ಬಿರಿಯಾಣಿ ಮತ್ತು ಇನ್ನಿತರ ಸಿಹಿ ತಿಂಡಿಗಳ ವಿತರಣೆಗೆ ವ್ಯವಸ್ಥೆ. ದೊಡ್ಡ ಹಿತ್ತಲಿನ ಕೊನೆಯಿಂದ ಕೊನೆಯವರಿಗೆ ಚಪ್ಪರ. ಮಮ್ಮೂಟಿ ಹಾಜಾರರ ಮಗ ಮದುಮಗನಾಗಿ ಬರುತ್ತಿರುವುದರಿಂದ ಅಬ್ಬಾಸ್ ಕೂಡಾ ಶಕ್ತಿ ಮೀರಿ ಸಾಲ ಮಾಡಿ ಎಲ್ಲವನ್ನೂ ಚೆನ್ನಾಗಿ ವ್ಯವಸ್ಥೆ ಮಾಡಿದ್ದನು. ಮಗಳಿಗೆ ಮೈ ತುಂಬಾ ಚಿನ್ನಾಭರಣಗಳನ್ನು ಕೊಟ್ಟನು. ಮಮ್ಮೂಟಿಯ ಪ್ರತಿಷ್ಠೆಗೆ ಧಕ್ಕೆ ಬಾರದ ರೀತಿಯಲ್ಲಿ ಆತನೂ ಮದುವೆಯನ್ನು ನೆರವೇರಿಸಿದನು. * * * * * ಹೊಸ ಸೊಸೆ ರಫೀನಾ ಕಾಲೇಜಿಗೆ ಹೋದ ಹುಡುಗಿಯಾದರೂ ಚೂರು ಜಂಭವಿಲ್ಲದವಳೆಂದು ಎಲ್ಲರ ಮೆಚ್ಚುಗೆ ಗಳಿಸಿದಳು. ಮಾವನಿಗೂ ಸೊಸೆಯ ಮೇಲೆ ಬಹಳ ಅಭಿಮಾನ. ಮುನೀರ್ ಕೂಡಾ ಹೆಂಡತಿಯ ಹಿಂದೆ ಮುಂದೆ ತಿರುಗುತ್ತಿದ್ದನು. ಆದರೆ ಮದುವೆಯಾದ ಬಳಿಕವಾದರೂ ಮಗ ಸರಿ ಹೋಗುತ್ತಾನೆಂದು ಕೊಂಡಿದ್ದ ತಂದೆ ತಾಯಿಗಳ ಕನಸು ಅಲ್ಲೇ ಕಮರಿತು. ಮದುವೆಯಾದ ಕೆಲವು ದಿನಗಳ ಬಳಿಕ ಮುನೀರ್ ಹೆಂಡತಿಯೊಡನೆ, “ನಾನು ಕಾಲೇಜಿಗೆ ಹೋಗಬೇಕು. ಆದಷ್ಟು ಬೇಗನೆ ಹೋಗಿ ಬರ್ತೇನೆ” ಎನ್ನುತ್ತಾ ಹೊರಟು ಹೋದನು. ಫರೀದಾ ರಾತ್ರಿ ಸೊಸೆಯೊಡನೆ, “ಮುನೀರ್‍ಎಲ್ಲಿ?” ಎಂದು ಕೇಳಿದಾಗ “ಕಾಲೇಜಿಗೆ ಹೋಗ್ತೇನೇಂತ ಹೇಳಿ ಹೋದರು. ನಿಮಗೆ ತಿಳಿಸಿಲ್ಲವಾ?” ಎಂದು ಕೇಳಿದಳು. ಫರೀದಳ ಮುಖ ಕಳೆಗುಂದಿತು. ಆಕೆ ಸೊಸೆಯೊಡನೆ ಏನೂ ಹೇಳದೆ ಮಮ್ಮೂಟಿ ಬಂದೊಡನೆ ಆತನಿಗೆ ವಿಷಯ ತಿಳಿಸಿದಳು. “ನೀನು ಹಣ ಕೊಟ್ಟೆಯಾ?” ಮಮ್ಮೂಟಿ ಕೇಳಿದನು. “ನಾನ್ಯಾಕೆ ಕೊಡಲಿ? ನಿಮ್ಮಲ್ಲಿ ಕೇಳಿ ತೆಗೆದುಕೊಂಡನೇನೊ ಅಂತ ನಾನಂದುಕೊಂಡೆ” ಎಂದಳು. ಅವನಿಗೆ ಹಣ ಎಲ್ಲಿಂದ ದೊರೆಯಿತೆಂಬುದು ತಂದೆ ತಾಯಿಗಳಿಬ್ಬರ ತಲೆ ತಿನ್ನುವ ವಿಷಯವಾಯಿತು. 240 ಸುಳಿ ಮರುದಿನ ರಫೀನಾ ತವರಿಗೆ ಹೊರಟಳು. ಮಮ್ಮೂಟಿ ಫರೀದಾಳೊಡನೆ, “ಅವಳ ಒಡವೆಗಳನ್ನು ನೀನು ತೆಗೆದಿಟ್ಟುಕೊ. ಯಾರೂ ಇಲ್ಲದ ಕೋಣೆಯಲ್ಲಿ ಅವುಗಳನ್ನಿಡುವುದು ಬೇಡ” ಎಂದನು. ರಫೀನಾ ಹೊರಡಲು ಸಿದ್ಧಳಾಗಿ ಚಿನ್ನಾಭರಣಗಳ ಪೆಟ್ಟಿಗೆಯೊಡನೆ ಅತ್ತೆಯ ಬಳಿ ಬಂದಳು. ಅವಳ ಮುಖ ಕಳೆಗುಂದಿತ್ತು. ಅವಳು ಫರೀದಾಳೊಡನೆ, ಮೆಲ್ಲನೆ, “ನನ್ನ ಒಂದು ನೆಕ್ಲೇಸ್ ಕಾಣುವುದಿಲ್ಲ” ಎಂದಳು. ಫರೀದಾ ಬೆಚ್ಚಿದಳು. “ಈ ಮನೆಗೆ ಯಾವ ಕಳ್ಳರು ಬರ್ತಾರೆ? ಸರಿಯಾಗಿ ಹುಡುಕು, ನೋಡುವಾ” ಎನ್ನುತ್ತಾ ತಾನೇ ಸೊಸೆಯ ಕೋಣೆಗೆ ಹೋಗಿ ಕಪಾಟಿನಲ್ಲೆಲ್ಲ ತಡಕಾಡಿದಳು. “ಐದಾರು ಪವನಿನ ಸರ ಹೇಗೆ ಕಳವಾಯಿತು?” ಎನ್ನುತ್ತಾ ಕೆಳಗಿಳಿದು ಬಂದು ಸೊಸೆಯೊಡನೆ, “ಹೇಗೂ ನೀನು ಹೊರಟಿದ್ದೀಯಲ್ಲ? ನೀನು ಹೋಗಿ ಬಾ. ನಾನು ನಿನ್ನ ಮಾವನಿಗೆ ತಿಳಿಸ್ತೇನೆ” ಎಂದು ಸೊಸೆಯನ್ನು ಕಳುಹಿಸಿ ಗಂಡನಿಗಾಗಿ ಕಾದಳು. ಮಮ್ಮೂಟಿ ಬಂದೊಡನೆ ಸರದ ಕಳವಿನ ವಿಷಯವನ್ನು ಗಂಡನಿಗೆ ತಿಳಿಸಿದಳು. “ಮಹಡಿಯ ಮೇಲಿನ ಆಕೆಯ ಕೋಣೆಗೆ ಯಾರು ಹೋಗಿದ್ದಾರೆ?” ಮಮ್ಮೂಟಿ ಕೇಳಿದನು. ಫಕ್ಕನೆ ಆತನ ತಲೆಯೊಳಗೆ ಮಿಂಚು ಸುಳಿದಂತಾಯಿತು. “ಮುನೀರ್‌ಗೆ ನೀನು ಹಣ ಕೊಟ್ಟಿಲ್ಲವೆಂದೆಯಲ್ಲ? ಅವನಿಗೆ ಹಣ ಎಲ್ಲಿಂದ ಬಂತೆಂದು ಗೊತ್ತಾಯಿತಲ್ಲ? ಇವನಿಂದಾಗಿ ಇನ್ನೂ ಏನೇನು ಅನುಭವಿಸಬೇಕಾಗಿದೆಯೊ” ಎಂದು ತಲೆ ಮೇಲೆ ಕೈ ಹೊತ್ತು ಕುಳಿತು ಚಿಂತಾಮಗ್ನನಾದನು. “ಛಿ, ಮುನೀರ್ ಮೊನ್ನೆ ಬಂದ ಹೆಂಡತಿಯ ಸರ ಕದಿಯುವ ಕೆಲಸ ಮಾಡಲಾರ” ಎಂದು ಫರೀದಾ ಮಗನ ರಕ್ಷಣೆಗೆ ಮುಂದಾದಾಗ, “ಈ ಚಟಕ್ಕೆ ಬಿದ್ದವರು ಅಂತಹದಲ್ಲ, ಅದರಾಚೆಯ ಕೆಲಸವನ್ನೂ ಮಾಡುತ್ತಾರೆ. ಮದುವೆಯಾದರೆ ಸರಿಯಾಗುತ್ತಾನೆಂದುಕೊಂಡದ್ದು ಸುಳ್ಳಾಯಿತು. ಹೊಸ ಸಮಸ್ಯೆಯನ್ನು ಮೈ ಮೇಲೆ ಹಾಕಿಕೊಂಡಂತಾಯಿತು” ಎಂದನು. ಕೊಂಚ ಹೊತ್ತು ಚಿಂತಿಸಿದ ಬಳಿಕ, “ಇನ್ನು ಮುಂದೆ ಅವಳ ಒಡವೆಗಳ ನಿನ್ನ ಬಳಿ ಇರಲಿ. ಅವಳಿಗೆ ಬೇಕಾದಾಗ ನೀನೇ ತೆಗೆದು ಕೊಡು” ಎಂದು ತಾಕೀತು ಮಾಡಿದನು. ಒಂದು ತಿಂಗಳು ಕಳೆದ ಬಳಿಕ ಮುನೀರ್ ಬಂದನು. ಆತನನ್ನು ಸುಳಿ 241 ನೋಡಿದವಳೇ ಫರೀದಾ ಗೊಳೊ ಎಂದು ಅಳುತ್ತಾ, “ನೀನು ನನ್ನ ಮಗನಾಗಿ ಇಂತಹ ನೀಚ ಕೆಲಸ ಮಾಡಿದೆಯಲ್ಲ? ಅವಳ ನಕ್ಲೇಸ್‍ಗೆ ಯಾಕೆ ಕೈ ಹಾಕಿದೆ?” ಎಂದು ಕೇಳಿದಳು. “ನೀವು ಹಣ ಕೊಡದಿದ್ದರೆ ನಾನೇನು ಮಾಡಲಿ.” ನಿರ್ವಿಕಾರ ಭಾವದಿಂದ ಕೇಳಿದನಾತ. “ನಿನಗೆ ಇದೊಂದು ವ್ಯಾಧಿ ಅಂಟಿಕೊಂಡಿತಲ್ಲ? ನಾನೇನು ಮಾಡಲಿ? ಆ ಹುಡುಗಿಯ ಮುಖ ನೋಡಿಯಾದರೂ ನೀನು ಈ ಚಟವನ್ನು ನಿಲ್ಲಿಸಬಾರದೆ?” ಎಂದು ಹಣೆ ಬಡಿದುಕೊಂಡು ಅತ್ತಳು. ಮರುದಿನ ರಫೀನಾ ಬಂದೊಡನೆ ಅವಳ ಮೈ ಮೇಲಿನ ಆಭರಣಗಳನ್ನು ಒಂದೊಂದಾಗಿ ಕಳಚಿ ತನ್ನ ಪೆಟ್ಟಿಗೆಯಲ್ಲಿ ಭದ್ರವಾಗಿಟ್ಟಳು. ಬಳೆಗಳು ಮಾತ್ರ ಆಕೆಯ ಕೈಯಲ್ಲುಳಿದುವು. ಫರೀದಾ ಸೊಸೆಯೊಡನೆ, “ಬಳೆಗಳನ್ನು ಅಲ್ಲಿ ಇಲ್ಲಿ ತೆಗೆದಿಡಬೇಡ. ಕೈಲ್ಲೇ ಇರಲಿ” ಎಂದೂ ಹೇಳಿದಳು. ಕೆಲವು ದಿನಗಳ ಬಳಿಕ ಆಕೆಯ ಕೈಯ ನಾಲ್ಕು ಬಲೆಗಳು ಮಾಯವಾದುವು. ರಾತ್ರಿ ನಿದ್ದೆಯ ಅಮಲಿನಲ್ಲಿ ಕೈಯ ಬಳೆಗಳು ಜಾರಿದ್ದು ಆಕೆಗೆ ಗೊತ್ತಾಗಲೇ ಇಲ್ಲ. ಬೆಳಿಗ್ಗೆ ಆಕೆ ಮುನೀರ್‍ರೊಡನೆ, “ನನ್ನ ಕೈಯ ಬಳೆಗಳೇನಾದುವು? ರಾತ್ರಿ ಮಲಗುವಾಗ ಒಂದೊಂದು ಕೈಯಲ್ಲೂ ಎಂಟೆಂಟು ಬಳೆಗಳಿದ್ದುವು. ಈಗ ಆರಾರೇ ಬಳೆಗಳಿವೆಯಲ್ಲಾ?” ಎಂದು ಭಯಭೀತಳಾಗಿ ಕೇಳಿದಳು. “ರಾತ್ರಿ ಕೋಣೆಗೆ ಕಳ್ಳರು ಬಂದಿದ್ದರೇ?” “ನನಗೇನು ಗೊತ್ತು? ರಾತ್ರಿ ನೀನೇ ಎಲ್ಲಾದರೂ ತೆಗೆದಿಟ್ಟಿರಬಹುದು. ಸರಿಯಾಗಿ ಹುಡುಕು. ನಾನು ಈ ದಿನ ಬೆಂಗಳೂರಿಗೆ ಹೋಗಿ ಬರ್ತೇನೆ” ಎಂದನು. “ಬೆಂಗಳೂರು. ಅಲ್ಲಿ ಇಲ್ಲಿ ಯಾಕೆ ತಿರುಗುತ್ತೀರಿ? ಕಾಲೇಜಿಗೆ ಹೋಗಿ ಬೇಗನೆ ವಿದ್ಯಾಭ್ಯಾಸ ಮುಗಿಸಿ ಬಿಡಿ” ಎಂದು ಗೊಣಗಿದರೂ ಮನದ ಆತಂಕ ಮರೆಯಾಗಲಿಲ್ಲ. ಬಳೆಗಳಿಗಾಗಿ ಕಪಾಟಿನೊಳಗೆ ತಡಕಾಡತೊಡಗಿದಳು. “ಕಾಲೇಜಿಗೆ ಇನ್ನು ಪರೀಕ್ಷೆ ಸಮಯಕ್ಕೆ ಹೋದರಾಯಿತು. ಈಗ ಬೆಂಗಳೂರಿನಲ್ಲಿ ಸ್ವಲ್ಪ ಕೆಲಸವಿದೆ” ಎನ್ನುತ್ತಾ ಹೊರಟೇ ಬಿಟ್ಟನು. ರಾತ್ರಿ ಮುನೀರ್ ಹೋದ ವಿಷಯ ತಿಳಿದ ಮಮ್ಮೂಟಿ ಫರೀದಾಳನ್ನೇ ತರಾಟೆಗೆ ತೆಗೆದುಕೊಂಡನು. “ಅವಳ ಒಡವೆಗಳೆಲ್ಲಿವೆ?” “ಒಡವೆಗಳು ನನ್ನ ಬಳಿಯೇ ಇವೆ” ಎಂದಳು ಆಕೆ. “ಸರಿ, ಹಾಗಾದರೆ, 242 ಸುಳಿ ಹೋದ ಹಾಗೆ ಹಿಂದೆ ಬಂದಾನು. ಆದರೆ ಅವನ ಈ ಚಟದ ವಿಷಯ ಅವಳ ಕಿವಿಯ ಮೇಲೆ ಹಾಕಬೇಡ” ಎಂದನು. ಅತ್ತೆಗೆ ತನ್ನ ಮೇಲೆಯೇ ಕೋಪ ಬಂದೀತೆಂದು ಬಗೆದು ಆಕೆ ಬಳೆಯ ವಿಷಯವನ್ನು ಅತ್ತೆಗೆ ತಿಳಿಸಲೇ ಇಲ್ಲ. ತಿಂಗಳ ಬಳಿಕ ಮುನೀರ್ ಹಿಂತಿರುಗಿದನು. ರಫೀನಾ ಗಂಡನೊಡನೆ, “ನನ್ನ ತವರು ಮನೆಗೊಮ್ಮೆ ಹೋಗಿ ಬರುವಾ” ಎಂದು ಗಂಡನನ್ನು ಹೊರಡಿಸಿದಳು. ಅಲ್ಲಿಗೆ ಹೋದಾಗ ಮುನೀರ್ ಹೆಂಡತಿಯೊಡನೆ, “ನಿನ್ನ ತಂದೆಯ ಬಳಿ ಸ್ವಲ್ಪ ಹಣ ತೆಗೆದುಕೊ. ನಿನಗೆ ಯಾತಕ್ಕಾದರೂ ಬೇಕಾದೀತು. ಯಾವಾಗಲೂ ನನ್ನ ಅಬ್ಬಾನ ಬಳಿ ಕೈ ಚಾಚುವುದು ಅಷ್ಟು ಚೆನ್ನಾಗಿರುವುದಿಲ್ಲ.” ಎಂದನು. ಮಗಳು ಕೇಳಿದಾಗ ಇಲ್ಲವೆನ್ನುವ ತಂದೆ ಅದಾಗಿರಲಿಲ್ಲ. ಆತನು ಸ್ವಲ್ಪ ಹಣ ತಂದು ಮಗಳ ಕೈಯಲ್ಲಿಟ್ಟನು. ಆದರೂ ಆತನಿಗೆ ಬಹಳ ಆಶ್ಚರ್ಯವಾಯಿತು. ಕೋಟ್ಯಾಧೀಶನ ಮಗ, ಸೊಸೆ ತನ್ನ ಬಳಿ ಹಣ ಕೇಳಬೇಕಾದ ಅಗತ್ಯವೇನು? ಇದೆಂತಹ ಕೋಟ್ಯಾಧೀಶರು? ಮದುವೆಯಾದ ಮಗನ ಕೈಯಲ್ಲಿ ಸ್ವಂತ ಖರ್ಚಿಗೆ ಸಾಕಷ್ಟು ಹಣ ನೀಡದೆ ಸತಾಯಿಸುವ ಇವರೆಂತಹ ತಂದೆ? ಯಾಕೊ ಎಲ್ಲವೂ ನಿಗೂಢವಾಗಿದೆಯಲ್ಲಾ ಎಂದು ಅಬ್ಬಾಸ್ ಮನದಲ್ಲಂದುಕೊಂಡರೂ ಯಾವುದನ್ನೂ ಬಾಯಿ ಬಿಟ್ಟು ಕೇಳಲಿಲ್ಲ. ಕೈಗೆ ಹಣ ದೊರೆತೊಡನೆ ಮುನೀರ್ ರಫೀನಾಳೊಡನೆ, “ನನಗೆ ಅರ್ಜೆಂಟಾಗಿ ಬೆಂಗಳೂರಿಗೆ ಹೋಗಲಿಕ್ಕಿದೆ. ನಾನು ಬರುವವರೆಗೆ ನೀನು ಇಲ್ಲಿರು. ನಾನು ಬಂದ ಬಳಿಕ ಊರಿಗೆ ಕರೆದೊಯ್ಯುವೆ” ಎನ್ನುತ್ತಾ ಹೊರಟನು. ಒಂದೆರಡು ದಿನಗಳಲ್ಲಿ ಹಿಂತಿರುಗುವೆನೆಂದು ಬೀಗರ ಮನೆಗೆ ಹೋದ ಮಗ, ಸೊಸೆಯರ ಸುಳಿವು ನಾಲ್ಕೈದು ದಿನಗಳಾದರೂ ಇಲ್ಲವಾದಾಗ ಮಮ್ಮೂಟಿ ಮತ್ತು ಫರೀದಾ ಇಬ್ಬರೂ ಆತಂಕಗೊಂಡರು. ತನ್ನ ಮಗ ವಾರಗಟ್ಟಲೆ ಕೆಲಸವಿಲ್ಲದೆ ಹೆಂಡತಿಯ ಮನೆಯಲ್ಲಿ ತಳವೂರುವುದೆಂದರೆ ತಮ್ಮ ಪ್ರತಿಷ್ಠೆಗೆ ಕುಂದಲ್ಲವಾ?” ಹೋದವರು ಒಂದು ದೂರವಾಣಿ ಕರೆಯನ್ನಾದರೂ ಮಾಡಬೇಕೊ ಬೇಡವೊ?” ಎಂದು ಮಮ್ಮೂಟಿ ಫರೀದಾಳನ್ನೇ ಚುಚ್ಚಿದನು. ಕೊನೆಗೆ ತಾನೇ ದೂರವಾಣಿಯಲ್ಲಿ ಬೀಗರೊಡನೆ ಮಾತನಾಡಿ ರಫೀನಾಳನ್ನು ಕರೆದು, “ಅವನೆಲ್ಲಿ?” ಎಂದು ಕೇಳಿದನು. “ಅರ್ಜೆಂಟ್ ಕೆಲಸವಿದೆಯೆಂದು ಬೆಂಗಳೂರಿಗೆ ಹೋಗಿದ್ದಾರೆ” ಎಂದಳಾಕೆ. ``ಅವನು ಬಂದೊಡನೆ ಮನೆಗೆ ಬನ್ನಿ” ಎನ್ನುತ್ತಾ ರಿಸೀವರನ್ನು ಕುಕ್ಕಿ ಸುಳಿ 243 ಹಲ್ಲು ಕಡಿಯುತ್ತಾ, “ಅರ್ಜೆಂಟ್ ಕೆಲಸವಂತೆ,... ಅರ್ಜೆಂಟ್ ಕೆಲಸ! ಇವನಮ್ಮನ...” ಎನ್ನುತ್ತಾ ಅಲ್ಲೇ ನಿಂತಿದ್ದ ಫರೀದಾಳೊಡನೆ, “ಎಂತಹ ಮಗನನ್ನು ಹೆತ್ತಿದ್ದೀಯಾ?” ಎಂದು ಒದರಾಡಿದನು. ಸೊಸೆಯ ಆಭರಣವೇನಾದರೂ ಹೋಗಿವೆಯೇನೊ ಎಂದು ಗಂಡ ಹೆಂಡತಿ ಅನುಮಾನಪಟ್ಟರು. ಇದೆಲ್ಲ ಬೀಗರಿಗೆ ತಿಳಿದರೆ ಏನಾದೀತೆಂಬ ಚಿಂತೆ ಇಬ್ಬರನ್ನೂ ಕಾಡತೊಡಗಿತು. ಇವನಿಗೆ ಮದುವೆ ಮಾಡಿ ಬಹಳ ದೊಡ್ಡ ತಪ್ಪು ಮಾಡಿದೆವೆಂದು ಮಮ್ಮೂಟಿಗನಿಸಿತು. ಒಂದು ಹುಡುಗಿಯ ಬದುಕೇ ಇವನಿಂದಾಗಿ ನಲುಗಿ ಹೋಗುತ್ತಿದೆಯಲ್ಲಾ ಎಂದೂ ಅವನಿಗನ್ನಿಸತೊಡಗಿತು. “ಸದ್ಯ, ಕಾರನ್ನಾದರೂ ಮಾರಾಟ ಮಾಡದೆ ಹಿಂತಿರುಗಿ ಬಂದರೆ ಸಾಕಾಗಿತ್ತು” ಎಂದಳು ಫರೀದಾ. ಕೆಲವು ದಿನಗಳ ಬಳಿಕ ಮುನೀರ್ ರಫೀನಾಳನ್ನು ಕರೆದುಕೊಂಡು ಹಿಂತಿರುಗಿದನು. ಮಮ್ಮೂಟಿ ಮನೆಯಲ್ಲೇ ಇದ್ದನು. ರಫೀನಾ ಒಳ ಹೋದ ಬಳಿಕ ಮಮ್ಮೂಟಿ ಮಗನನ್ನು ತನ್ನ ಕೋಣೆಗೆ ಕರೆದೊಯ್ದು ಕೋಣೆಯ ಬಾಗಿಲಿಕ್ಕಿಕೊಂಡು ಮಗನ ಮೈಮುಖ ನೋಡದೆ ಬೆಲ್ಟಿನಿಂದ ಹೊಡೆದನು. “ಏನೂಂತ ತಿಳಿದೆ? ಬೀಗರಿಗೂ ನಿನ್ನ ಬುದ್ಧಿ ತಿಳಿಸಿ ನಮ್ಮ ಮರ್ಯಾದೆ ತೆಗೆಯಬೇಕೆಂದಿದ್ದೀಯಾ? ಅಲ್ಲಾಹು ನಿನಗೆ ಇಂತಹ ಬುದ್ಧಿ ಕೊಟ್ಟನಲ್ಲ? ಇನ್ನು ನಾನೇನು ಮಾಡಲಿ?” ಎಂದು ನೋವಿನಿಂದ ಪರಿತಪಿಸುತ್ತಾ ಕೋಣೆಯಿಂದ ಹೊರಬಂದನು. ಮುನೀರ್ ನೇರವಾಗಿ ಮಾಳಿಗೆಯ ಮೆಟ್ಟಲು ಹತ್ತಿದನು. ಮನೆಯ ಒಳಭಾಗಕ್ಕೆ ಈ ಘಟನೆ ತಿಳಿಯಲೇ ಇಲ್ಲ. ಅಂದಿನಿಂದ ಮನೆಯೊಳಗೆ ತಂದೆ ಮಗನ ಭೇಟಿಯೆ ಇಲ್ಲದಂತಾಯಿತು. ಇದಾಗಿ ಕೆಲವು ದಿನಗಳ ಬಳಿಕ ಮುನೀರ್ ಮತ್ತೊಮ್ಮೆ ಮನೆಯಿಂದ ಮಾಯವಾದನು. ಮತ್ತು ಆತನು ಈ ರೀತಿ ಖುಷಿ ಬಂದಾಗ ಮನೆಯಿಂದ ಹೋಗುವುದೂ ಬರುವುದೂ ಸಾಮಾನ್ಯವಾಯಿತು. ರಫೀನಾಳ ಕೈ ಬಳೆಗಳೆಲ್ಲವೂ ಖಾಲಿಯದುವು. ಮಗನನ್ನು ಯಾವ ರೀತಿಯಿಂದಲೂ ನಿಯಂತ್ರಿಸುವುದು ಮಮ್ಮೂಟಿಯಿಂದ ಸಾಧ್ಯವಾಗಲೇ ಇಲ್ಲ. ರಫೀನಾ ಯಾರೊಡನೆಯೂ ದೂರು ಹೇಳಲಿಲ್ಲವಾದರೂ ಮನದೊಳಗೆ ಕೊರಗತೊಡಗಿದ್ದಳು. ಮದುವೆಯಾದ ಐದಾರು ತಿಂಗಳುಗಳವರೆಗೆ ಅವಳಿಗೆ ಯಾವುದೂ ಅರ್ಥವಾಗಿರಲಿಲ್ಲ. ಮುನೀರ್ ಹೆಂಡತಿಯನ್ನು ತುಂಬಾ ಪ್ರೀತಿಸುತ್ತಿದ್ದನು. ಪಟ್ಟಣಕ್ಕೆ ಹೋಗಿ ಬರುವಾಗಲೆಲ್ಲ ಮಲ್ಲಿಗೆಯ ಚೆಂಡು ಕೈಲ್ಲಿರುತ್ತಿತ್ತು. 244 ಸುಳಿ ಊರಲ್ಲಿರುವಾಗ ಸಂಜೆಗೆ ಆಕೆಯನ್ನು ಕಾರಿನಲ್ಲಿ ಸಮುದ್ರ ತೀರಕ್ಕೆ ಕರೆದೊಯ್ಯುತ್ತಿದ್ದನು. ಮರಳಿನಲ್ಲಿ ಒಬ್ಬರನ್ನೊಬ್ಬರು ಒರಗಿಕೊಂಡು ಮುಳುಗುತ್ತಿದ್ದ ಸೂರ್ಯನ ಸೌಂದರ್ಯದಲ್ಲಿ ತನ್ಮಯರಾಗುತ್ತಿದ್ದರು. ಆಗೊಮ್ಮೆ ಆತನು, “ನಾವೊಮ್ಮೆ ಮೈಸೂರಿನ ಬೃಂದಾವನಕ್ಕೆ ಹೋಗಿ ಬರಬೇಕು” ಎಂದಿದ್ದನು. ಆ ಮೇಲೆ ಅದನ್ನು ಮರೆತೂ ಬಿಟ್ಟಿದ್ದನು. ಆದರೂ ಆತನ ಸಾನ್ನಿಧ್ಯದಲ್ಲಿ ಆಕೆ ಸಂಪೂರ್ಣ ತೃಪ್ತಳಾಗಿಯೇ ಇದ್ದಳು. ಇನ್ನುಳಿದಂತೆ ಆಕೆಗೆ ಗಂಡನ ಮನೆಯಲ್ಲಿ ಯಾವ ಕೊರತೆಯೂ ಇರಲಿಲ್ಲ. ದಿನವಿಡೀ ಮಹಡಿಯ ಮೇಲಿನ ತನ್ನ ಕೋಣೆಯಲ್ಲಿ ಟೇಪ್ ರೆಕಾರ್ಡರಿನಲ್ಲಿ ಮಾಫಿಳ ಪಾಟ್ಟುಗಳನ್ನು ಕೇಳುತ್ತಾ ಮೈ ಮರೆತು ಮಲಗಿರುತ್ತಿದ್ದಳು. ಓದು, ಬರಹ ಚೆನ್ನಾಗಿ ಬಲ್ಲ, ಕಾಲೇಜಿಗೆ ಹೋದ ಹುಡುಗಿಯೆಂದು ಮಮ್ಮೂಟಿ ಸೊಸೆಗೆ ಬೇಕು ಬೇಕಾದ ಪತ್ರಿಕೆಗಳನ್ನು ಮನೆಗೆ ತಂದು ಹಾಕುತ್ತಿದ್ದನು. ಆಗಾಗ ಸೊಸೆಯನ್ನೂ ಮಕ್ಕಳನ್ನೂ ಕರೆದುಕೊಂಡು ಮಂಗಳೂರಿನ ಹೊಟೇಲಿಗೆ ಹೋಗಿ ಐಸ್‍ಕ್ರೀಂ ಮತ್ತು ಬೇಕು ಬೇಕಾದ ತಿಂಡಿಗಳನ್ನೂ ಕೊಡಿಸುತ್ತಿದ್ದನು. ಬಟ್ಟೆ ಬರೆ, ಚಿನ್ನದೊಡವೆ ಎಲ್ಲವೂ ಇಚ್ಛಿಸುವ ಮೊದಲೇ ಮಡಿಲಿಗೆ ಬಂದು ಬೀಳುತ್ತಿದ್ದುವು. ಇಬ್ಬರು ಅತ್ತೆಯರು, ಅಜ್ಜಿ, ನಾದಿನಿಯರು ಎಲ್ಲರೂ ಪ್ರೀತಿಯ ಮಹಾಪೂರವನ್ನೇ ಹರಿಸುತ್ತಿದ್ದರು. ಮಮ್ಮೂಟಿಗಂತೂ ಕಾಲೇಜಿಗೆ ಹೋದ ಹುಡುಗಿಯೆಂದು, ದೊಡ್ಡ ಮನೆತನದವಳೆಂದು ಸೊಸೆಯ ಮೇಲೆ ಬಹಳ ಗೌರವ. ಅದು ಇತ್ತೀಚೆಗೆ ಇನ್ನೂ ವರ್ಧಿಸುತ್ತಿತ್ತು. ತನ್ನ ಚಿನ್ನದೊಡವೆಗಳೂ ಮಾಯವಾಗಲು ತನ್ನ ಗಂಡನೇ ಕಾರಣವೆಂದು ತಿಳಿದ ಬಳಿಕವೂ ಅವಳು ಯಾವುದೇ ರೀತಿಯ ಕೋಪ ಅಥವಾ ಬೇಸರವನ್ನು ಪ್ರಕಟ ಪಡಿಸಲಿಲ್ಲ. ಫರೀದಾ ಒಮ್ಮೆ, “ನಿನ್ನ ಬಳೆಗಳನ್ನು ನೀನೇ ಕೊಟ್ಟೆಯಾ?” ಎಂದು ಕೇಳಿದಾಗ, “ಹೂಂ...” ಎಂದಿದ್ದಳು ತಲೆ ತಗ್ಗಿಸಿ. ಬಳಿಕ “ಬಳೆ ಇಲ್ಲದಿದ್ದರೆ ಏನೀವಾಗ? ಮುಂದೆ ಎಂದಾದರೂ ಮಾಡಿಸಿಕೊಂಡರಾಯಿತು” ಎಂದೂ ಸೇರಿಸಿದ್ದಳು. ಅವನು ಯಾಕೆ ಈ ರೀತಿ ತನ್ನ ಒಡವೆಗಳನ್ನು ಕೊಂಡೊಯ್ಯುತ್ತಾನೆ; ಮನೆಯಲ್ಲಿ ಹಣ ನೀರಿನಂತೆ ಹರಿಯುತ್ತಿದ್ದರೂ ಮಗನಿಗೆ ಯಾಕೆ ಕೊಡುತ್ತಿಲ್ಲ ಎಂಬುದೊಂದೂ ಆಕೆಗೆ ಅರ್ಥವಾಗಿರಲಿಲ್ಲ. ಮೊದಲೆರಡು ಬಾರಿ ಮುನೀರ್ ಆಕೆಗೆ ತಿಳಿಯದಂತೆ ಒಡವೆಗಳನ್ನು ಅಪಹರಿಸಿದ್ದರೂ ಮತ್ತೊಮ್ಮೆ ಆಕೆಯೊಡನೆ ಕೇಳಿಯೇ ಬಳೆ ಕೊಡೊಯ್ದಿದ್ದನು. “ಅಬ್ಬಾಗೆ ನನ್ನಲ್ಲಿ ವಿಶ್ವಾಸವಿಲ್ಲ. ಇಷ್ಟು ಸಂಪತ್ತಿದ್ದರೂ ಆಸೆ ಸುಳಿ 245 ಬುರುಕನಂತಾಡುತ್ತಾರೆ. ನನ್ನ ಕೈಗೆ ಚಿಕ್ಕಾಸೂ ಕೊಡುವುದಿಲ್ಲ. ಅದಕ್ಕಾಗಿ ನಾನೇ ಬೆಂಗಳೂರಿನಲ್ಲಿ ಹೊಸ ವ್ಯಾಪಾರವೊಂದನ್ನಾರಂಭಿಸುತ್ತಿದ್ದೇನೆ. ಲಾಭ ಬಂದೊಡನೆ ಇನ್ನೂ ಚೆನ್ನಾದ ಒಡವೆಗಳನ್ನು ನಿನಗೆ ಮಾಡಿಸಿ ಕೊಡುವೆ” ಎಂದು ಪುಸಲಾಯಿಸಿದಾಗ ಮರು ಮಾತಾಡದೇ ತೆಗೆದು ಕೊಟ್ಟಿದ್ದಳು. ಆದರೂ ಅದೇಕೊ ಆಕೆಗೆ ಕೈಯ ಚಿನ್ನದ ಬಳೆಗಳು ಖಾಲಿಯಾದಾಗ ಒಂದು ರೀತಿ ಮುಜುಗರವಾಗತೊಡಗಿತು. ಮಮ್ಮೂಟಿ ಹಾಜಾರರ ಮನೆಗೆ ಮದುವೆ ಆಮಂತ್ರಣಕ್ಕೆಂದೊ, ಇನ್ನಿತರ ಕೆಲಸ ಕಾರ್ಯಗಳಿಗೆಂದೊ ಆಗಾಗ ಅತಿಥಿಗಳು ಬರುತ್ತಿದ್ದರು. ಈ ದೊಡ್ಡ ಮನೆಯ ಸೊಸೆಯ ಬಳಿಯಲ್ಲಿ ಚಿನ್ನಾಭರಣಗಳೇ ಇಲ್ಲವೆಂದು ಜನರಾಡಿಕೊಳ್ಳಲಾರರೇ? ಫರೀದಾ ಕೂಡಾ ಸೊಸೆಯ ಖಾಲಿ ಕೈ ಕಂಡು ಮುಜುಗರಪಟ್ಟು ಮಮ್ಮೂಟಿಯೊಡನೆ ಹೇಳಿ ಸೊಸೆಗೆ ಕೈ ತುಂಬಾ ಚಿನ್ನದ ಬಳೆಗಳನ್ನು ಮಾಡಿಸಿದಳು. ಅವುಗಳನ್ನು ಸೊಸೆಯ ಕೈಗೆ ತೊಡಿಸುತ್ತಾ. “ಎಷ್ಟು ಮಾತ್ರಕ್ಕೂ ಇವುಗಳನ್ನು ಕೈಯಿಂದ ತೆಗೆಯಬಾರದು. ಮುನೀರ್ ಏನಾದರೂ ಇವುಗಳಿಗೆ ಕೈ ಹಾಕಿದರೆ ನನಗೆ ತಿಳಿಸಬೇಕು” ಎಂದು ತಾಕೀತು ಮಾಡಿದಳು. ರಫೀನಾ ರಾತ್ರಿ ಮಲಗುವ ಮುನ್ನ ಬಳೆಗಳನ್ನು ಅತ್ತೆಯ ಕೈಯಲ್ಲಿಡುವ ಪರಿಪಾಠ ಬೆಳೆಸಿಕೊಂಡಳು. ಕೆಲವು ದಿನಗಳ ಬಳಿಕ ಮುನೀರ್ ಬಂದವನು ಪುನಃ ಹೆಂಡತಿಯನ್ನು ಒಡವೆಗಾಗಿ ಪೀಡಿಸ ತೊಡಗಿದನು. ಊಟ, ತಿಂಡಿ ಬಿಟ್ಟು ಸದಾ ಮಂಕಾಗಿರುತ್ತಿದ್ದನು. ಏನನ್ನೋ ಕಳೆದುಕೊಂಡಂತೆ ತೀವ್ರ ನಿರಾಸೆಯಿಂದ ಪರಿತಪಿಸುತ್ತಿದ್ದನು. ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ಹಾಸಿಗೆಯಲ್ಲಿ ಮಲಗಿ ಹೊರಳಾಡುತ್ತಾ ನರಳ ತೊಡಗಿದನು. ಗಂಡನ ಸ್ಥಿತಿ ಕಂಡ ರಫೀನಾ ಕೂಡಾ ಮಂಕಾದಳು. ತನ್ನ ಗಂಡನಿಗೇನಾಗಿದೆ ಎಂಬ ಕುರಿತು ಆಕೆ ಇನ್ನೂ ಅಜ್ಞಾನಿಯಾಗಿಯೇ ಇದ್ದಳು. ಮಗನ ಸ್ಥಿತಿ ಕಂಡ ಮಮ್ಮೂಟಿ ಆತನನ್ನು ಬೆಂಗಳೂರಿನ ವೈದ್ಯರ ಬಳಿಗೆ ಕರೆದೊಯ್ದನು. ವೈದ್ಯರ ಮುಂದೆ ಕೈ ಜೋಡಿಸುತ್ತಾ, “ಹೇಗಾದರೂ ನನ್ನ ಮಗನ ಈ ಖಾಯಿಲೆಯನ್ನು ವಾಸಿ ಮಾಡಿ ಡಾಕ್ಟ್ರೆ'' ಎಂದು ಗೋಗರೆದನು. ವೈದ್ಯರು ಮುನೀರ್‍ನನ್ನು ಕೆಲವು ದಿನ ಆಸ್ಪತ್ರೆಯಲ್ಲಿರಿಸಲು ಸಲಹೆ ನೀಡಿದರು. ಮಮ್ಮೂಟಿ ಮಗನನ್ನಲ್ಲಿ ಬಿಟ್ಟು ಭಾರವಾದ ಹೃದಯದಿಂದ ಊರಿಗೆ ಹಿಂತಿರುಗಿದನು. ಕೋಟಿಗಟ್ಟಲೆ ಸಂಪಾದಿಸಿಯೂ ನೆಮ್ಮದಿಯ ಸಂಸಾರ 246 ಸುಳಿ ತನ್ನದಾಗಲಿಲ್ಲವಲ್ಲ ಎಂಬ ಕೊರಗು ಎದೆಯಾಳದಲ್ಲಿ ಬೇರೂರಿ ನಿಂತಿತು. ಊರಿಗೆ ಬಂದವನೇ ಸೊಸೆಯ ಬೇಸರ ನೀಗಲೆಂದು, “ನೀನು ಕೆಲವು ದಿನ ನಿನ್ನ ತವರಿನಲ್ಲಿದ್ದು ಬಾ” ಎಂದು ಕಳುಹಿಸಿದನು. ಮಮ್ಮೂಟಿಯ ಬಂದ ಕೆಲವು ದಿನಗಳಲ್ಲಿ ಆಸ್ಪತ್ರೆಯಿಂದ ತಂತಿ ಬಂದಿತ್ತು. “ನಿಮ್ಮ ಮಗ ಇಲ್ಲಿಂದ ಹೊರಟು ಹೋಗಿದ್ದಾನೆ” ಎಂದು. ಆತನು ದೂರವಾಣಿಯಲ್ಲಿ ಜಮಾಲನನ್ನು ಸಂಪರ್ಕಿಸಿದಾಗ, ``ಅವನು ಇಲ್ಲಿಗೆ ಬಂದಿದ್ದ. ಮಗುವಿನ ಕತ್ತಿನಲ್ಲಿದ್ದ ಚಿನ್ನದ ಚೈನನ್ನು ತೆಗೆದುಕೊಂಡು ಹೋಗಿದ್ದಾನೆ” ಎಂಬ ಮತ್ತಷ್ಟು ನೋವಿನ ಸುದ್ದಿಯನ್ನು ನೀಡಿದನು. ಆ ಹಣ ಖರ್ಚಾದ ಮೇಲಾದರೂ ಮಗ ಊರಿಗೆ ಬಂದಾನೆಂದು ಮಮ್ಮುಟಿ ಕಾದನು. ಒಂದೆರಡು ತಿಂಗಳಾದರೂ ಮಗನ ಸುಳಿವಿಲ್ಲದಾದಾಗ ತಾನೇ ಬೆಂಗಳೂರಿಗೆ ಓಡಿ ಪರಿಚಯವಿದ್ದಲ್ಲೆಲ್ಲ ಹುಡುಕಿಸಿದನು. ಅವನ ಕಾಲೇಜಿನ ಬಳಿಯ ಕೋಣೆಗೂ ಭೇಟಿ ನೀಡ ಬರಿಗೈಯಿಂದ ಪೆಚ್ಚು ಮೋರೆ ಮಾಡಿಕೊಂಡು ಹಿಂತಿರುಗಿದನು. ಫರೀದಾ ಅತ್ತು ಕರೆದು ಗೋಳಾಡದಿದ್ದರೂ ಎದೆಯ ನೋವನ್ನು ಎದೆಯೊಳಗೇ ಅದುಮಿಡುತ್ತಾ ಬಳಲಿದಳು. ತವರಿನಿಂದ ಹಿಂತಿರುಗಿದ ರಫೀನಾಳೆದುರು ಧೈರ್ಯದ ಮುಖವಾಡ ತೊಟ್ಟು ಮುನೀರ್ ನಾಲ್ಕು ದಿನ ಕಳೆದು ಬಂದಾನೆಂದು ಸಂತೈಸಿದಳು. ವರ್ಷ ಕಳೆದರೂ ಗಂಡನ ಸುಳಿವಿಲ್ಲದಾದಾಗ ರಫೀನಾ ಚಿಂತಿಸಿ ಸೋತು ಸುಣ್ಣವಾದಳು. ಅಳಿಯ ಕಾಣೆಯಾದ ಸುದ್ದಿ ತಡವಾಗಿಯಾದರೂ ಅವಳ ತಂದೆಗೆ ತಲಪಿ ಅವರು ಓಡಿ ಬಂದರು. ಮಮ್ಮೂಟಿ ಬೀಗರನ್ನು ಆದರದಿಂದ ಬರ ಮಾಡಿಕೊಂಡನು. ಮಗಳ ಕೃಶವಾದ ದೇಹವನ್ನು ಕಂಡ ಅಬ್ಬಾಸನ ಮುಖ ಕಳೆಗುಂದಿತು. ಅತನು ಮಮ್ಮೂಟಿಯೊಡನೆ, “ಮುನೀರ್ ಊರಲಿಲ್ಲವಾ” ಎಂದು ಕೆಳಿದನು. ಇನ್ನೂ ಗುಟ್ಟನ್ನು ಬಚ್ಚಿಟ್ಟುಕೊಂಡು ಏನೂ ಪ್ರಯೋಜನವಿಲ್ಲವೆಂದುಕೊಂಡ ಮಮ್ಮೂಟಿ ಮಗನ ವಿಷಯವನ್ನು ಬೀಗನ ಮುಂದಿಟ್ಟನು. “ಹೀಗಾದೀತೆಂದು ನನಗೆ ಗೊತ್ತಿರಲಿಲ್ಲ. ಮದುವೆಯಾದರೆ ಸರಿ ಹೋಗುತ್ತಾನೇಂತ ನಾವೆಲ್ಲರೂ ಅಂದುಕೊಂಡೆವು. ಕಲಿಯುವುದನ್ನೆಲ್ಲ ನಿಲ್ಲಿಸಿ ಇಂತಹ ಚಟ ಹತ್ತಿಸಿಕೊಂಡು ತನ್ನ ಬದುಕನ್ನೇ ಹಾಳು ಮಾಡಿಕೊಂಡು ನನ್ನ ಮತ್ತು ನಿಮ್ಮ ಮಗಳ ಬದುಕಿಗೂ ಕೊಳ್ಳಿ ಇಟ್ಟ. ಹೇಳಿ. ಈಗ ನಾನೇನು ಸುಳಿ 247 ಮಾಡಲಿ?” ಎಂದು ಕಡು ದುಃಖದಿಂದ ನೊಂದು ನುಡಿದನು. ಅಬ್ಬಾಸ್ ಚಿಂತಾಮಗ್ನನಾದನು. ಮಗಳನ್ನು ಕೊಡುವ ಮೊದಲು ಒಂದು ಬಾರಿಯಾದರೂ ತಾನು ಹುಡುಗನ ಕುರಿತು ಯೋಚಿಸಲಿಲ್ಲ. ತಾನು ಈ ಕಾಂಚಾಣದ ಬೆನ್ನು ಹತ್ತಿ ಮಗಳ ಬದುಕನ್ನು ಬರಡಾಗಿಸಿದೆನೇ? ಈಗೇನು ಮಾಡಲಿ? ರಫೀನಾ ತುಂಬು ಪ್ರಾಯದ ಹೆಣ್ಣು ಮಗಳು. ಗಂಡ ಸರಿಯಾಗಿದ್ದಿದ್ದರೆ ಗಂಡನ ಮನೆಯಲ್ಲಿರಬಹುದಾಗಿತ್ತು. ವರ್ಷ ಕಳೆದ ಬಳಿಕವೂ ಗಂಡನ ಸುಳಿವೇ ಇಲ್ಲವಾದರೆ ಇನ್ನೂ ಇವಳನ್ನು ಇಲ್ಲಿ ಬಿಡುವುದ ಹೇಗೆ? “ಈಗ ಅವನೆಲ್ಲಿದ್ದಾನೆಂಬ ಸುಳಿವೇನಾದರೂ ಇದೆಯೇ?” ಮಮ್ಮೂಟಿ ಮೌನವಾಗಿ ಇಲ್ಲವೆಂಬಂತೆ ತಲೆಯಾಡಿಸಿದನು. “ಇವಳಾದರೂ ನನಗೆ ಗಂಡನ ನಡೆತೆಯ ಕುರಿತು ಒಂದು ಮಾತು ತಿಳಿಸಬಹುದಾಗಿತ್ತಲ್ಲ?” ಎಂದು ನಿಟ್ಟುಸಿರಿಡುತ್ತಾ, ``ಈಗ ಸದ್ಯಕ್ಕೆ ಇವಳು ನನ್ನೊಡನೆ ಬಂದಿರಲಿ. ಅವನು ಉರಿಗೆ ಬಂದರೆ ತಿಳಿಸಿ. ನಾನೇ ಅವಳನ್ನು ಕರೆದುಕೊಂಡು ಬರುವೆ” ಎಂದನು. “ಏನಮ್ಮಾ, ಊರಿಗೆ ಹೋಗ್ತೀಯಾ?” ಮಮ್ಮೂಟಿ ಸೊಸೆಯೊಡೆನೆ ಕೇಳಿದನು. ತನ್ನನ್ನು ಪ್ರೀತಿಸುವ ಜೀವವೊಂದು ಬಳಿಯಲ್ಲಿದ್ದಿದ್ದರೆ ಎಂತಹ ಮರುಭೂಮಿಯಲ್ಲಾದರೂ ಬದುಕಬಹುದಾಗಿತ್ತು. ಆದರೆ ಕೆಲವೇ ದಿನಗಳ ಮಧುರ ನೆನಪಿನೊಡನೆ ಆ ದೊಡ್ಡ ಹಾಸಿಗೆಯಲ್ಲಿ ಮಲಗಿ ಹೊರಳಾಡುತ್ತಾ ದಿನ ನೂಕುವುದು ಇತ್ತೀಚೆಗಂತೂ ಆಕೆಗೆ ಯಮಯಾತನೆಯೆಂದೇ ಅನ್ನಿಸತೊಡಗಿತ್ತು. ತನ್ನವರ ನಡುವಿನಲ್ಲಾದರೂ ತನ್ನ ಈ ನೋವು ಕೊಂಚ ಕಮ್ಮಿಯಾಗಬಹುದೇನೋ ಎಂಬಾಸೆಯಿಂದಲೇ ಆಕೆ ತಲೆ ತಗ್ಗಿಸಿ ನೆಲ ನೊಡುತ್ತಾ “ ಹೂಂ....” ಎಂದಳು. ಸೊಸೆ ಹೊರಟಾಗ ಫರೀದಾ ಮಾತ್ರ ಗೊಳೊ ಎಂದು ಅತ್ತಳು. ಇಷ್ಟು ದಿನಗಳಿಂದಲೂ ಬಲವಂತದಿಂದ ಎದೆಯಾಳದಲ್ಲಿ ಹುದುಗಿಸಿದ ದುಃಖದ ಕಟ್ಟೆಯೊಡೆದು ಕಣ್ಣೀರಾಗಿ ಹೊರಗೆ ಹರಿಯಿತು. ರಫೀನಾ ಎಲ್ಲರ ಕಣ್ಮಣಿಯಾಗಿದ್ದಳು. ಐದು ಹೊತ್ತಿನ ನಮಾಜು, ಉಪವಾಸ ಎಲ್ಲವನ್ನೂ ತಪ್ಪದೆ ಮಾಡುತ್ತಿದ್ದಳು. ಗಂಡನ ಕುರಿತು ಒಂದು ದಿನವೂ ಅತ್ತೆ ಮಾವಂದಿರಲ್ಲಿ ದೂರಿರಲಿಲ್ಲ. ಎಲ್ಲರೊಡನೆ ಹೊಂದಿಕೊಂಡು ನಗುನಗುತ್ತಾ ಓಡಾಡುತ್ತಿದ್ದಳು. ಗಂಡನ ಈ ಚಟ ತಿಳಿದ ಬಳಿಕ, ಆತ ನಾಪತ್ತೆಯಾದ ಬಳಿಕ ಆಕೆಯ ಮುಖದಿಂದ ನಗು ಮಾಸಿತು. ಅಲಂಕಾರದಲ್ಲಿ ಆಸಕ್ತಿಯೂ ಹೊರಟು 248 ಸುಳಿ ಹೋಯಿತು. ಹಬ್ಬದ ದಿನ ಅತ್ತೆಯ ಒತ್ತಾಯದಿಂದಲಷ್ಟೆ ಹೊಸ ಸೀರೆ ಉಟ್ಟಿದ್ದಳು. ಎಲ್ಲರ ಕಣ್ಮಣಿಯಾಗಿದ್ದ ಆಕೆ ಈಯೊಂದು ವರ್ಷದಿಂದ ಎಲ್ಲರ ಎದೆಯ ಮೇಲೆ ನೆಟ್ಟ ಮುಳ್ಳೂ ಆಗಿದ್ದಳು. ಯೌವನದ ಹೊಸ್ತಿಲಲ್ಲಿದ್ದು ಗಂಡನೊಡನೆ ನಗು ನಗುತ್ತಾ ಬಾಳಬೇಕಾಗಿದ್ದ ಈ ಹೆಣ್ಣು ಮಗಳು ಈ ರೀತಿ ಒಂಟಿಯಾಗಿ ದಿನ ನೂಕುವಂತಾಯಿತಲ್ಲ ಎಂಬ ಕೊರಗು ಎಲ್ಲರದು. ಸೊಸೆ ಬಂದ ಮೇಲಾದರೂ ಮಗನ ಬುದ್ಧಿ ನೆಟ್ಟಗಾಗಬಹುದೆಂದುಕೊಂಡಿದ್ದ ದೂರದ ಆಸೆಯೂ ಮಣ್ಣುಗೂಡಿತು. ಇನ್ನೆಂದಾದರೂ ಅವನು ಬಂದು ಈ ಮಗುವನ್ನು ಚೆನ್ನಾಗಿ ಬಾಳಿಸುತ್ತಾನೆಯೇ? ರಫೀನಾ ಹೊರಟು ನಿಂತಾಗ ಫರೀದಾ ಆಕೆಯ ತಲೆಯ ಮೇಲೆ ಕೈಯಿಟ್ಟು, “ಅಲ್ಲಾಹ್ ನಿನ್ನನ್ನು ಚೆನ್ನಾಗಿಟ್ಟಿರಲಿ” ಎಂದಷ್ಟೆ ಹೇಳಿದಳು. ಆಕೆ ಹೊರಟು ಹೋದ ಬಳಿಕ ಫರೀದಾ ದಿನವಿಡೀ ಮಲಗಿಕೊಂಡು ಕಣ್ಣೀರು ಸುರಿಸಿದಳು. ಚಿನ್ನದಂತಹ ಹುಡುಗಿ ಕಣ್ಣೀರು ಸುರಿಸುತ್ತಾ ಮನೆ ಹೊಸ್ತಿಲು ದಾಟುವಂತಾಯಿತಲ್ಲ? ಇನ್ನೊಮ್ಮೆ ಅವಳು ಈ ಮನೆಯಲ್ಲಿ ನಕ್ಕು ನಲಿದಾಡುವ ದಿನ ಬಂದೀತೇ? ಚಿನ್ನದೊಡವೆ ಕೊಂಡೊಯ್ದಾಗಲೂ ಗಂಡನೊಡನೆ ಕೋಪ ಮಾಡಿಕೊಳ್ಳಲಿಲ್ಲ. ಇನ್ಯಾರಾದರೂ ಆಗಿದ್ದರೆ ಏನೇನೊ ಆಗಿ ಹೋಗುತ್ತಿತ್ತು. ಸೊಸೆ ಮತ್ತು ಮಗನ ನೆನಪಿನೊಡನೆ ಆಕೆಗೆ ದುಃಖ ಉಕ್ಕುಕ್ಕಿ ಬರುತ್ತಿತ್ತು. * * * * * ರಫೀನಾ ತವರಿಗೆ ಹೋಗಿ ಒಂದು ವರ್ಷವಾಗುತ್ತಾ ಬಂದಿತ್ತು. ಒಂದೆರಡು ಬಾರಿ ಆಕೆಯ ತಂದೆ ಬಂದು ಅಳಿಯನ ಕುರಿತು ವಿಚಾರಿಸಿ ಹೋಗಿದ್ದನು. ಆಗಾಗ ದೂರವಾಣಿಯ ಮೂಲಕ ವಿಚಾರಿಸುತ್ತಲೂ ಇದ್ದನು. ಆತನಿಗೆ ಮಗಳ ಭವಿಷ್ಯದ ಚಿಂತೆ ಹಗಲಿರುಳೂ ಕಾಡ ತೊಡಗಿತು. ಮಮ್ಮೂಟಿ ಹಾಜಿಯ ಹಣ ತನ್ನನ್ನು ಈ ರೀತಿ ಕುರುಡು ಮಾಡಿತ್ತಲ್ಲ? ಈಗ ಏನು ಮಾಡಲಿ ಎಂದು ಚಿಂತಿಸುತ್ತಾ ಕೊನೆಗೆ ಒಂದು ನಿರ್ಧಾರಕ್ಕೆ ಬಂದನು. ಒಂದು ದಿನ ಆತನು ಮಗಳನ್ನು ಕರೆದು, “ಮಗೂ, ನೀನಿನ್ನು ಅವನನ್ನು ಮರೆತು ಬಿಡು. ನಾನು ಹೇಗಾದರೂ ಅವನಿಂದ ತಲಾಖ್ ದೊರೆಯುತ್ತದೊ ನೋಡುತ್ತೇನೆ. ಇಲ್ಲವಾದರೆ ಮುಂದೇನು ಯೋಚಿಸುವಾ” ಎಂದನು. ರಫೀನಾ ಏನು ತಾನೇ ಹೇಳುತ್ತಾಳೆ? ಮುನೀರ್ ಎಲ್ಲಿದ್ದಾನೆಂಬ ಸುಳಿವೂ ಈವರೆಗೆ ದೊರೆತಿಲ್ಲ. ಆತ ಬಂದರೂ ತನ್ನ ಕೆಟ್ಟ ಚಟ ಬಿಟ್ಟಿಲ್ಲವಾದರೆ ಏನು ಸುಳಿ 249 ಮಾಡುವುದು? ಆದರೂ..... ಅವನಿಂದ ತಲಾಖ್ ಪಡೆಯಬೇಕೆಂದಾದಾಗ ಆಕೆಯ ಎದೆಯಾಳದಲ್ಲಿ ನೋವಿನ ಬುಗ್ಗೆಯೊಂದು ಚಿಮ್ಮಿತು. ಬದುಕಿನ ಕೆಲವು ಸುಂದರ ಕ್ಷಣಗಳ ಪರಿಚಯವನ್ನಾತನು ಮಾಡಿಸಿದ್ದನು. ಈಯೊಂದು ಚಟವಿಲ್ಲದೆ ಹೋಗಿದ್ದರೆ ಆತನೊಡನೆಯ ಬಾಳು ಸ್ವರ್ಗ ಸಮಾನ. ಆದರೂ ತಲಾಖ್ ತೆಗೆದುಕೊಳ್ಳುವುದು ಉಚಿತವೇ? “ಬೇಡ ಅಬ್ಬಾ, ನನಗೆ ತಲಾಖ್ ಬೇಡ. ನಾನು ಹೀಗೆಯೇ ಇರುತ್ತೇನೆ. ಅವರು ಎಂದಾದರೊಂದು ದಿನ ಬಂದಾರು.” ಕಣ್ಣೀರೊರೆಸಿಕೊಳ್ಳುತ್ತಾ ಆಕೆಯೆಂದಳು. “ಹಾಗೆಂದರೆ ಹೇಗೆ?” ತಾಯಿಯೂ ಧ್ವನಿಗೂಡಿಸಿದಳು. “ನಿನ್ನ ಬದುಕಿಗೊಂದು ಹಾದಿಯಾಗಬೇಡವಾ? ಅವನು ಬಂದರೂ ಬುದ್ಧಿ ಬದಲಾಗಿಲ್ಲದಿದ್ದರೆ ಏನು ಮಾಡುವುದು? ಅವನಿಗಾಗಿ ಕಾಯುತ್ತಾ ಕೂರುವುದರಲ್ಲಿ ಅರ್ಥವಿಲ್ಲ” ಎನ್ನುತ್ತಾ ಗಂಡನೊಡನೆ, “ನೀವು ಹೋಗಿ ತಲಾಖ್‍ಗೆ ಏನಾದರೂ ಏರ್ಪಾಟು ಮಾಡಿ ಬನ್ನಿ. ಬೇರೆಲ್ಲಾದರೂ ಒಂದು ಸಂಬಂಧ ಕುದುರಿಸುವಾ” ಎಂದಳು. ಅಬ್ಬಾಸ್ ಮಗಳೊಡನೆ, “ನೋಡು ಮಗೂ, ನೀನು ಹಟ ಮಾಡಬೇಡ. ಗಂಡ ಎಷ್ಟು ಕೆಟ್ಟವನಾದರೂ ಅವನನ್ನೇ ನಂಬಿಕೊಂಡು ಬಾಳಬೇಕಾದ ಅಗತ್ಯ ನಮಗಿಲ್ಲ. ಅಂತಹ ಗಂಡನಿಂದ ಬಿಡಿಸಿಕೊಂಡು ಇನ್ನೊಬ್ಬನನ್ನು ಮದುವೆಯಾಗುವ ಸೌಲಭ್ಯವನ್ನು ಪೈಗಂಬರರು ನಮಗೆ ಎಂದೊ ಕಲ್ಪಿಸಿಕೊಟ್ಟಿದ್ದಾರೆ. ಅವನು ನಿನ್ನನ್ನು ಚೆನ್ನಾಗಿ ಬಾಳಿಸಿದ್ದರೆ ನಾವು ಅಡ್ಡ ಬರುತ್ತಿದ್ದೆವೇ? ಒಂದು ತಪ್ಪು ಆಗಿ ಹೋಯಿತು. ಆದರೆ ಅದಕ್ಕಾಗಿ ಆಜೀವ ಪರ್ಯಂತ ಕೊರಗಬೇಕಾಗಿಲ್ಲ. ನೀನೇನೂ ಚಿಂತಿಸಬೇಡ. ಎಲ್ಲವನ್ನೂ ನನಗೆ ಬಿಡು” ಎನ್ನುತ್ತಾ ಮಮ್ಮೂಟಿಯ ಬಳಿಗೆ ಹೋದನು. “ನೋಡಿ ಹಾಜಾರೇ, ಈವರೆಗೂ ನಿಮ್ಮ ಮಗನ ಸುಳಿವಿಲ್ಲ. ಆದರೆ ನನ್ನ ಮಗಳು ಚಿಕ್ಕ ಪ್ರಾಯದ ತರುಣಿ, ಕಳೆದೆರಡು ವರ್ಷಗಳಿಂದಲೂ ಗಂಡನ ಸಾಮೀಪ್ಯವಿಲ್ಲದೆ ಕಳೆದಿದ್ದಾಳೆ. ಇನ್ನು ಇದೇ ದುಃಖದಲ್ಲಿ ಏನಾದರೂ ಮಾಡಿಕೊಂಡಾಳೆಂಬ ಚಿಂತೆ ನಮ್ಮದು. ನೀವು ನಿಮ್ಮ ಮಗನನ್ನು ಎಲ್ಲಿದ್ದರೂ ಕರೆಸಿ ನನ್ನ ಮಗಳ ತಲಾಖ್ ಕೊಡಿಸಬೇಕು” ಎಂದು ಕಡ್ಡಿ ತುಂಡು ಮಾಡಿದಂತೆ ಮಾತಾಡಿದನು. ಬೀಗನ ಈ ಮಾತುಗಳಿಂದ ಮಮ್ಮೂಟಿ ಮತ್ತು ಫರೀದಾ ತೀರಾ ಕುಗ್ಗಿ ಹೋದರು. ಹೃದಯದ ಹಿಂಭಾಗಕ್ಕೆಲ್ಲೊ ಸರಿಸಿದ್ದ ಹಲವಾರು 250 ಸುಳಿ ಚಿತ್ರಗಳು ಹೃದಯದ ಮಧ್ಯ ಭಾಗದಲ್ಲಿ ಬಂದು ನರ್ತಿಸತೊಡಗಿದುವು. “ನಿನ್ನ ಮಗ ಎಲ್ಲಿದ್ದಾನೆಂದು ಗೊತ್ತಿದ್ದಿದ್ದರೆ ನಾನೇ ಆತನನ್ನು ಕರೆದುಕೊಂಡು ಬರುತ್ತಿರಲಿಲ್ಲವಾ? ನಮ್ಮ ಮಗನ ಚಿಂತೆ ನಮಗಿಲ್ಲವಾ? ಸ್ವಲ್ಪ ದಿನ ನೋಡುವಾ.” ಆದಷ್ಟೂ ಶಾಂತವಾಗಿ ಹೇಳಿದನು ಮಮ್ಮೂಟಿ. “ಹಾಜಾರೇ, ನನ್ನ ಹೊಟ್ಟೆಯಲ್ಲಿ ಬೆಂಕಿ ಬಿದ್ದಂತಾಗಿದೆ. ನನ್ನ ಇನ್ನೊಬ್ಬ ಮಗಳಿಗೆ ಗಂಡು ಗೊತ್ತಾಗಿದೆ. ಆದರೆ ಇವಳನ್ನು ಹೀಗೆ ಬಿಟ್ಟು ಅವಳಿಗೆ ಮದುವೆ ಮಾಡಲು ಸಾಧ್ಯವಿಲ್ಲ. ಅದಕ್ಕೆಲ್ಲ ನಮ್ಮ ಮನ ಒಪ್ಪುತ್ತದೆಯೇ? ಹೇಗಾದರೂ ನನ್ನ ಮಗಳ ತಲಾಖ್ ಕೊಡಿಸಿ. ಇವಳಿಗೂ ಎಲ್ಲಾದರೊಂದೆಡೆ ಸೆಟ್ಲ್ ಮಾಡುತ್ತೇನೆ” ಎಂದು ಮುಲಾಜಿಲ್ಲದೆ ನುಡಿದನು. “ನೀವು ಏನು ಬೇಕಾದರೂ ಮಾಡ್ಕೊಳ್ಳಿ.” ಎನ್ನಲು ಬಾಯಿ ತೆರೆದ ಮಮ್ಮೂಟಿಯ ಮನಃ ಪಟಲದಲ್ಲಿ ಮೂಡಿದ್ದು ಮುಗ್ಧಳಾದ ‘ಪಾಪದ ಹುಡುಗಿ’ ಎಂದೇ ಹೆಸರು ಪಡೆದ ರಫೀನಳ ಚಿತ್ರ. ತನ್ನ ಮಗಳ ಬದುಕೇ ಹೀಗಾಗಿದ್ದಿದ್ದರೆ ತಾನೇನು ಮಾಡುತ್ತಿದ್ದೆ? ‘ಆ ಪಾಪದ ಹುಡುಗಿ ಎಲ್ಲಾದರೂ ಸುಖವಾಗಿರಲಿ’ ಎಂದುಕೊಳ್ಳುತ್ತಾ “ಆಗಲಿ, ನಾನು ಆದಷ್ಟೂ ಪ್ರಯತ್ನ ಪಟ್ಟು ಆತನನ್ನು ಹುಡುಕಿಸುತ್ತೇನೆ. ನೀವೇನೂ ಯೋಚನೆ ಮಾಡಬೇಡಿ. ನಿಮ್ಮ ಮಗಳು ನನ್ನ ಮಗಳೇ ಎಂಬುದನ್ನು ನೆನಪಿಟ್ಟುಕೊಳ್ಳಿ” ಎಂದನು. ಅಬ್ಬಾಸ್ ಮುಖಭಾವ ಬದಲಾಯಿತು. ಆತನು ಎದ್ದು ನಿಂತು ತನ್ನೆರಡೂ ಕೈಗಳಿಂದ ಮಮ್ಮೂಟಿಯ ಕೈಗಳನ್ನು ಹಿಡಿದುಕೊಂಡು, ‘ಹಾಜಾರೇ, ನಮಗಿಂತಹ ದುರ್ಗತಿ ಬರಬಾರದಾಗಿತ್ತು” ಎಂದಷ್ಟೇ ನುಡಿದು ಹೊರಟು ಹೋದನು. * * * * * ಇದಾದ ಕೆಲವು ದಿನಗಳ ಬಳಿಕ ಒಂದು ದಿನ ಜಮಾಲ್ ಬೆಂಗಳೂರಿಂದ ದೂರವಾಣಿಯ ಮೂಲಕ, ಮಮ್ಮೂಟಿಯನ್ನು ಸಂಪರ್ಕಿಸಿ “ಮುನೀರ್ ನನ್ನ ಬಳಿ ಇದ್ದಾನೆ” ಎಂದು ತಿಳಿಸಿದನು. ಕೂಡಲೇ ಮಮ್ಮೂಟಿ ಮತ್ತು ಫರೀದಾ ಹೊರಟು ಜಮಾಲನ ಮನೆ ಸೇರಿದರು. ಮುನೀರ್‍ನನ್ನು ಕಂಡೋಡನೆ ಫರೀದಾ ಆತನನ್ನಪ್ಪಿಕೊಂಡು ಅಳ ತೊಡಗಿದಳು. ತೀರಾ ಕೃಶವಾದ ದೇಹ, ಗುಳಿ ಬಿದ್ದ ಕಣ್ಣುಗಳು, ಬೆಳೆದ ಗಡ್ಡ ಮೀಸೆಗಳು. ಮುನೀರ್ ಗುರುತು ಸಿಗದಂತೆ ಬದಲಾಗಿದ್ದನು. ಕೊನೆಗೂ ಆತ ಬದುಕಿದ್ದಾನೆಂಬುದೇ ತಂದೆ ತಾಯಿಗಳಿಗೆ ಸಮಾಧಾನಕರವಾದ ವಿಷಯವಾಗಿತ್ತು. ಮರುದಿನವೇ ತಂದೆ ತಾಯಿಗಳು ಬಲವಂತದಿಂದ ಮಗನನ್ನು ಕಾರಿಗೆ ಸುಳಿ 251 ಹತ್ತಿಸಿಕೊಂಡು ಊರಿಗೆ ಹೊರಟರು. ಊರು ತಲಪಿದ ಬಳಿಕ ಮಗನನ್ನು ಕರೆದು “ನಿನ್ನ ಹೆಂಡತಿಯ ತಲಾಖ್ ಕೊಡು” ಎಂದನು. ಮುನೀರ್ ತಂದೆ ಮುಖವನ್ನು ಮಿಕಿ ಮಿಕಿ ನೋಡಿದನು. “ಏನು, ನಾನು ಹೇಳಿದ್ದು ಅರ್ಥವಾಗಲಿಲ್ಲವೇ?” ಎಂದು ಮಮ್ಮೂಟಿ ಧ್ವನಿ ಎತ್ತರಿಸಿ ಕೇಳಿದನು. ಆತನು ತಲೆ ತಗ್ಗಿಸಿ, “ನಾನು ಕೊಡುವುದಿಲ್ಲ” ಎಂದನು. ಮಮ್ಮೂಟಿ ತಡ ಮಾಡದೆ ಒಂದಿಬ್ಬರು ಮೌಲವಿಗಳನ್ನು ಮನೆಗೆ ಕರೆಸಿ ಮುನೀರ್‌ನ ಕೈಯಲ್ಲಿ ಕಾಗದವೊಂದನ್ನು ಕೊಟ್ಟು, “ಮೌಲವಿಗಳು ಹೇಳಿದಂತೆ ಬರೆದು ಸಹಿ ಹಾಕಿ ಕೊಡು. ಹೂಂ... ಬೇಗ” ಎಂದು ಗಂಭೀರವಾಗಿ ನುಡಿದನು. ಮುನೀರ್ ಸುಮ್ಮನೆ ನಿಂತದ್ದನ್ನು ಕಂಡು ಮಮ್ಮೂಟಿ ಸಮೀಪ ಬಂದನು. “ಏನು ಬರೆಯುತ್ತೀಯಾ ಇಲ್ಲವಾ? ನೀನು ಈ ವರೆಗೆ ಆ ಹುಡುಗಿಗೆ ಕೊಟ್ಟ ಸುಖ ಸಾಕು. ಅವಳು ಎಲ್ಲಾದರೂ ಸುಖವಾಗಿರಲಿ. ಹೂಂ... ಬರಿ” ಎಂದು ಅಸಹನೆಯಿಂದ ನುಡಿದನು. ಈಗ ಮುನೀರ್ ಹತಾಶನಾದನು. ತಂದೆಯ ಕೈಯಿಂದ ಬಿಡಿಸಿಕೊಳ್ಳುವ ಹಾದಿಯೇನಾದರೂ ಇದೆಯೇ ಎಂದು ಅತ್ತಿತ್ತ ನೋಡಿ ದಾರಿ ಕಾಣದೆ ಕೊನೆಗೆ ಮೌಲವಿಗಳು ಹೇಳಿದಂತೆ ಬರೆದು ಸಹಿ ಹಾಕಿ ಅವರ ಕೈಯಲ್ಲಿಟ್ಟು ಕಣ್ಣೊರೆಸಿಕೊಳ್ಳುತ್ತಾ ಮಾಳಿಗೆಯ ಮೆಟ್ಟಲು ಹತ್ತಿದನು. ಮುನೀರ್ ಅತ್ತ ಹೋದ ಬಳಿಕ ಮೌಲವಿಗಳು ಮಮ್ಮೂಟಿಯೊಡನೆ, “ನಿಮ್ಮ ಮಗನಿಗೆ ತಲಾಖ್ ಕೊಡುವುದು ಇಷ್ಟವಿರಲಿಲ್ಲವೆಂದು ಕಾಣುತ್ತದೆ. ನೀವ್ಯಾಕೆ ಆ ರೀತಿ ಒತ್ತಾಯ ಮಾಡಿದಿರಿ?” ಎಂದು ಕೇಳಿದರು. “ನನ್ನ ಮಗನು ಆ ಹುಡುಗಿಯನ್ನು ಚೆನ್ನಾಗಿ ಬಾಳಿಸಲಿಲ್ಲವಲ್ಲಾ?” “ಇಂದಲ್ಲ ನಾಳೆ ಆತ ಸರಿ ಹೋಗಬಹುದು. ಒಂದೆರಡು ಮಕ್ಕಳಾದ ಮೇಲೆ ಎಲ್ಲ ಸರಿ ಹೋಗುತ್ತಿತ್ತು. ತಲಾಖ್ ಕೊಟ್ಟು ತಪ್ಪು ಮಾಡಿದಿರಿ ಹಾಜಾರರೇ. ಆ ಹುಡುಗಿಗೆ ಇಲ್ಲೇನು ಕಮ್ಮಿಯಾಗಿತ್ತು? ಒಮ್ಮೆ ಮದುವೆಯಾದ ಮೇಲೆ ಹೆಂಗಸರು ಗಂಡನನ್ನನುಸರಿಸಿಕೊಂಡು ಹೋಗಬೇಕಪ್ಪ!” ಎಂದು ತಮ್ಮ ತೀರ್ಪು ನೀಡಿದರು. “ಮೌಲ್ಯಾರೇ, ನಿಮ್ಮ ಮಗಳ ಸ್ಥಾನದಲ್ಲಿ ಆ ಹುಡುಗಿಯನ್ನಿಟ್ಟು ನೋಡಿ.” ಎಂದಷ್ಟೆ ನುಡಿದು ಮಮ್ಮೂಟಿ ಒಳ ಹೋದನು. ಮರುದಿನ ತಲಾಖನ್ನು ಬೀಗರ ಮನೆಗೆ ಕಳುಹಿಸಿಸಿದನು. ಮರುದಿನವೇ ಮುನೀರ್ ಊರು ಬಿಟ್ಟನು. * * * * * 252 ಸುಳಿ ಮಗನ ಮುರಿದ ಮದುವೆ, ಮುರಿದ ಬದುಕು ತಂದೆ ತಾಯಿಗಳ ಮನೋವೇದನೆಯನ್ನು ಇಮ್ಮಡಿಸಿತು. ಆದರೆ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಮಮ್ಮೂಟಿ ಕೂರುವಂತಿರಲಿಲ್ಲ. ತಾಹಿರಾಳ ಮದುವೆ ಮಾಡಬೇಕಾಗಿತ್ತು. ಆದರೆ ಇಡೀ ಕುಟುಂಬ ತಾಹಿರಾಳ ವಿಷಯವನ್ನು ಎಷ್ಟೇ ಗೌಪ್ಯವಾಗಿರಿಸಿದ್ದರೂ ಊರಲ್ಲಿ ಗುಸುಗುಸು ಸುದ್ದಿ ಹರಡಿತ್ತು. ಹೀಗಾಗಿಯೇ ಊರಲ್ಲಿ ಒಂದೆರಡು ಕಡೆ ಪ್ರಯತ್ನಿಸಿ ಮಮ್ಮೂಟಿ ಸೋತಿದ್ದನು. ಹಾಜಿರಾ, ಸಾಹಿರಾ, ಜಮಾಲ್, ಮುನೀರ್ ಎಲ್ಲರ ಮದುವೆಗೂ ಜನ ನಾನು. ತಾನೆಂದು ಮುಂದಾಗಿದ್ದರೂ ತಾಹಿರಾಳಿಗೆ ಎಲ್ಲಿಂದಲೂ ವಿವಾಹಾಲೋಚನೆ ಬರಲಿಲ್ಲ. ಆಚುಮ್ಮಳಂತೂ ಮಗನ ಯೋಚನೆಯಿಂದಲೇ ನಲುಗಿದ್ದಳು. ಆಗಾಗ ಫರಿದಾ ಮತ್ತು ರುಖ್ಯಾಳೊಡನೆ, “ನನ್ನ ಕಾದರ್ ಹೋದವನು ಬರಲೇ ಇಲ್ಲವಲ್ಲ? ಅವನೆಲ್ಲಿದ್ದಾನೆಂದು ಪತ್ತೆ ಹಚ್ಚುವವರೂ ನನಗಾರೂ ಇಲ್ಲ. ಇಷ್ಟು ವರ್ಷ ನಿಮ್ಮ ಚಾಕರಿ ಮಾಡಿದ್ದಕ್ಕಾದರೂ ನನಗೊಂದು ಉಪಕಾರ ಮಾಡಿ. ನನ್ನ ಮಗನನ್ನು ಹುಡುಕಿಸಿ ಕೊಡಿ” ಎಂದು ಗೋಗರೆಯುತ್ತಿದ್ದಳು. “ನಿನ್ನ ಮಗ ಮಾಡಿದ ಕೆಲಸಕ್ಕೆ ಅವನನ್ನು ಕತ್ತಿಯಲ್ಲಿ ಕೊಚ್ಚಿ, ತುಂಡು ತುಂಡು ಮಾಡಿ ಸಮುದ್ರಕ್ಕೆಸೆಯಬೇಕು! ಏನೊ, ನಿನ್ನ ಮಗನಾದುದರಿಂದ ಸುಮ್ಮನಿದ್ದೇವೆ” ಎಂದು ಉಮ್ಮಾಲಿ ಅನ್ನುತ್ತಿದ್ದಂತೆ ರುಖ್ಯಾಬಿ “ನೀವೊಮ್ಮೆ ಸುಮ್ಮನಿರಿ” ಎಂದು ಅತ್ತೆಯನ್ನು ಗದರುತ್ತಿದ್ದಳು. ಆಚುಮ್ಮಳನ್ನು ಮನೆಯಿಂದ ಹೊರ ಹಾಕುವ ಯೋಚನೆ ಅತ್ತೆ ಸೊಸೆಯರಿಗೆ ಬಂದಿಲ್ಲವೆಂದಲ್ಲ. ಅದನ್ನು ತಿಳಿದ ಫರೀದಾ, “ಅವರನ್ನು ಹೊರ ಹಾಕುವುದು ಸುಲಭ. ಆದರೆ ಆಕೆ ಊರಿಡೀ ಏನಾದರೂ ಕತೆ ಹರಡಿದರೇನು ಮಾಡುತ್ತೀರಿ?” ಎಂದು ಕೇಳಿದ್ದಳು. ಹೀಗಾಗಿ ಆಚುಮ್ಮ ಆ ಮನೆಯಲ್ಲಿ ಯಾರಿಗೂ ಬೇಡವಾದರೂ ಹೊರ ದೂಡಲ್ಪಡದೆ ಎಲ್ಲರ ಕಣ್ಣಿನ ಕಸವಾಗಿ ಉಳಿದಿದ್ದಳು. ಕೊನೆಗೂ ಮಮ್ಮೂಟಿ ತಾಹಿರಾಳಿಗೆ ದೂರದ ಊರಿನ ಹುಡುಗನೊಬ್ಬನನ್ನು ಮದುವೆ ದಲ್ಲಾಳಿಯ ಮೂಲಕ ಗೊತ್ತು ಪಡಿಸಿದನು. ಮನೆಗೆ ಬಂದವನೇ ತಾಯಿಯೊಡನೆ, “ನಾನು ತಾಹಿರಾಗೆ ಒಂದು ವರನನ್ನು ನೋಡಿ ಒಪ್ಪಿಗೆ ಕೊಟ್ಟು ಬಂದಿದ್ದೇನೆ. ಅವರು ಅಂತಹ ಐಶ್ವರ್ಯವಂತರೇನೂ ಅಲ್ಲ. ಆ ಹುಡುಗನಿಂದ ನೀವು ಏನನ್ನೂ ನಿರೀಕ್ಷಿಸಬಾರದು. ಹಾಜಿರಾಳ ವಿಷಯದಲ್ಲಾದಂತೆ ನೀವು ಅತ್ತೆ ಸೊಸೆಯರು ಏನಾದರೂ ನಾಲಿಗೆ ಉದ್ದ ಮಾಡಿದಿರೊ, ತಾಹಿರಾ ಸುಳಿ 253 ಸಾಯುವವರೆಗೆ ಇಲ್ಲೆ ಬಿದ್ದಿರಬೇಕಾಗುತ್ತದೆ. ಅವಳನ್ನು ಹೇಗಾದರೂ ತಿದ್ದಲು ಸಾಧ್ಯವಿದ್ದರೆ ತಿದ್ದಿ ಸ್ವಲ್ಪ ಮನೆ ಕೆಲಸ ಕಲಿಸಿಕೊಡಿ” ಎನ್ನುತ್ತಾ ಹೊರ ನಡೆದನು. ಉಮ್ಮಾಲಿ ಮತ್ತು ರುಖ್ಯಾ ತೆಪ್ಪನೆ ಕೂತರು. ಮಮ್ಮೂಟಿ ಹಾಜಾರರ ಮನೆಯ ಮದುವೆಯೆಂದರೆ ನಾಡ ಹಬ್ಬವೇ. ಊರಿಗೆ ಊರೇ ಮದುವೆಗೆ ಬಂದು ಉಂಡು ಹೋಯಿತು. ‘ಹಣವೊಂದಿದ್ದರೆ ಸಾಕು. ಹುಡುಗಿ ಪೆದ್ದಿಯಾದರೇನು, ಜಾರಿದ್ದರೇನು? ಗಂಡು ಸಿಕ್ಕೇ ಸಿಕ್ಕುತ್ತಾನೆ. ನಮಗೇನಾದರೂ ಇಂತಹ ಮಗಳಿದ್ದಿದ್ದರೆ ಕಡಲಿಗೆಸೆಯಬೇಕಾಗಿತ್ತು! ಹಣಕ್ಕೆ ಎಲ್ಲವನ್ನು ಮರೆ ಮಾಡುವ ಶಕ್ತಿ ಇದೆಯಲ್ಲವಾ?’ ಎಂದು ಕೆಲವರು ಗೊಣಗಿಕೊಂಡರು. ಮದುವೆಯಾದ ಕೆಲವು ದಿನಗಳಲ್ಲಿ ಮಮ್ಮೂಟಿ ಮತ್ತು ವಾಸುವಿನ ಮನೆಗೆ ಆದಾಯ ತೆರಿಗೆ ಅಧಿಕಾರಿಗಳು ಧಾಳಿ ಮಾಡಿದರು. ಮನೆಯ ಮೂಲೆ ಮೂಲೆಯನ್ನು ಶೋಧಿಸಿದ ಇವರು ಸಾಕಷ್ಟು ದಾಖಲೆ ಪತ್ರಗಳನ್ನು ನಗ, ನಗದನ್ನೂ ವಶಪಡಿಸಿಕೊಂಡು ಹೋದರು. ಲಕ್ಷಗಟ್ಟಲೆ ತೆರಿಗೆ ಬಾಕಿಯೆಂಬ ಕಾರಣಕ್ಕಾಗಿ ಅವರಿಬ್ಬರ ಮೇಲೆ ಮೊಕದ್ದಮೆ ಹೂಡಲಾಯಿತು. “ಹಣವನ್ನು ಹೇಗೆ ಸಂಪಾದಿಸಿದರೂ ಆದೀತು. ತೆರಿಗೆ ಕಟ್ಟಿದರೆ ಸೈ!” ಎಂದು ಮಮ್ಮೂಟಿ ವಾಸುವಿನೊಡನಂದನು. * * * * * ಮಮ್ಮೂಟಿ ಸಮುದ್ರ ತೀರದ ಬಂಡೆಯೊಂದರ ಮೇಲೆ ಕುಳಿತು ಮುಳುಗುತ್ತಿರುವ ಸೂರ್ಯನನ್ನು ನೋಡುತ್ತಾ ಚಿಂತಾಮಗ್ನನಾಗಿದ್ದನು. ಕೆಂಪಗೆ ಕಾದು ಕೆಂಡದುಂಡೆಯಾಗುತ್ತಾ ಕೊನೆಗೂ ಮುಳುಗಿದ ಸೂರ್ಯನಂತೆಯೇ ತನ್ನ ಬದುಕೂ ಮುಳುಗಲಿದೆಯೇ? ಹಾಜಿರಾ ಮತ್ತು ಜಮಾಲ್ ಹೇಗೊ ಒಂದು ರೀತಿ ನೆಮ್ಮದಿಯಿಂದ ಬದುಕು ಸಾಗಿಸುತ್ತಿದ್ದಾರೆಂದು ತೃಪ್ತಿ ಪಡುವಷ್ಟರಲ್ಲಿ ತಾಹಿರಾ ಏನೇನೊ ಮಾಡಿಕೊಂಡಳು. ಮುನೀರ್ ಬುದ್ಧಿವಂತನಾಗಿ, ವಿದ್ಯಾವಂತನಾಗಿ ಸರಕಾರಿ ಅಧಿಕಾರಿಯಾಗುವ ಕನಸು ಕಾಣುತ್ತಿದ್ದಂತೆಯೇ ಅವನು ಈ ಚಟಕ್ಕೆ ಬಿದ್ದು ಬದುಕನ್ನೇ ಹಾಳು ಮಾಡಿಕೊಂಡು ತಮ್ಮ ಬದುಕಿಗೂ ನಿರಂತರ ನೋವಿನ ಕಿಡಿ ಹೊತ್ತಿಸಿದನು. ತಾಹಿರಾಳ ಮದುವೆ ಮುಗಿಸಿ ಗೆದ್ದೆನೆನ್ನುವ ಹೊತ್ತಿಗೆ ಆದಾಯ ತೆರಿಗೆಯವರ ಧಾಳಿ ಆರಂಭವಾಗಿತ್ತು. ತೀರಾ ಇತ್ತೀಚೆಗಂತೂ ಒಂದೆರಡು ಕೋಟಿಗಳ ಸೊತ್ತು ಸುಂಕಾಧಿಕಾರಿಗಳ ವಶವಾಗಿತ್ತು. ಪ್ರತೀ ವರ್ಷವೂ ಆದಾಯ ತೆರಿಗೆ ಪಾವತಿಗಾಗಿಯೇ ದೊಡ್ಡ ಮೊತ್ತದ ಹಣವನ್ನು 254 ಸುಳಿ ಮೀಸಲಿಡಬೇಕಾದಂತಹ ಪರಿಸ್ಥಿತಿಯೊದಗಿತು. ವಾಸುವಿಗೆ ಹೆಂಡತಿ ಕಲ್ಯಾಣಿ ಶಾಸಕಿಯದ ಕಾರಣ ಆದಾಯ ತೆರಿಗೆ ಆಧಿಕಾರಿಗಳಿಂದ ವಿಶೇಷ ತೊಂದರೆಯಾಗಲಿಲ್ಲವೆಂದೇ ಹೇಳಬಹುದು. ಇತ್ತೀಚೆಗೆ ಸುಂಕದ ಅಧಿಕಾರಿಗಳು ವಶಪಡಿಸಿಕೊಂಡ ಮಾಲಿನ ಸುಳಿವು ಅವರಿಗೆ ದೊರೆತುದಾದರೂ ಹೇಗೆ? ತನ್ನವರೇ ಯಾರಾದರೂ ಈ ಸುಳಿವನ್ನು ನೀಡಿದರೇ? ಮಮ್ಮೂಟಿಗೆ ಎಲ್ಲಕ್ಕಿಂತ ಹೆಚ್ಚಾಗಿ ತಲೆ ತಿನ್ನುತ್ತಿದ್ದ ವಿಷಯ ಇದೇ ಆಗಿತ್ತು. ಸುಂಕಾಧಿಕಾರಿಗಳ ಎರಡು, ಮೂರು ಧಾಳಿಗಳಲ್ಲೂ ಚಾಲಕರು ಕತ್ತಲೆಯಲ್ಲಿ ತಪ್ಪಿಸಿಕೊಂಡಿದ್ದರು. ಆದ ನಷ್ಟ ಮಾತ್ರ ಲಕ್ಷಗಟ್ಟಲೆಯಲ್ಲ; ಕೋಟಿಗಟ್ಟಲೆ. ಈ ನಷ್ಟದ ಬೆನ್ನಲ್ಲೆ ಆತನಿಗೆ ಬೊಂಬಾಯಿಯಿಂದ ಕರೆ ಬಂದಿತ್ತು. ಆತನ ಬಾಸ್ ಆತನನ್ನೇ ತರಾಟೆಗೆ ತೆಗೆದುಕೊಂಡನು. “ಮೂರು ಬಾರಿ ಹೀಗೆ ದೊಡ್ಡ ಮೊತ್ತದ ಮಾಲುಗಳನ್ನು ಸುಂಕಾಧಿಕಾರಿಗಳು ಹಿಡಿಯುವುದೆಂದರೇನು? ನಿನ್ನ ಜನರೇನು ನಿದ್ದೆ ಮಾಡುತ್ತಿದ್ದಾರಾ? ಅಥವಾ ಅವರೇ ಸುಂಕದವರಿಗೆ ಸುಳಿವು ನಿಡಿದ್ದರಾ?” ಉದ್ವಿಗ್ನನಾಗಿ ಕೇಳಿದನಾತ. “ಇಲ್ಲ ಸಾರ್, ನನ್ನ ಜನರೆಲ್ಲ ನಂಬಿಕಸ್ತರು. ಇದು ಸುಂಕಾಧಿಕಾರಿಗಳದ್ದೇ ಕೆಲಸ...” ಎನ್ನುತ್ತಿದ್ದಂತ ಆತ ನಡುವೆಯೇ ನಡೆದು, “ನಮ್ಮ ಸರಕಾರಿ ಅಧಿಕಾರಿಗಳು ಅಷ್ಟೊಂದು ಚುರುಕಿನಿಂದ ಕೆಲಸ ಮಾಡುವರೆಂದುಕೊಂಡೆಯಾ? ಅವರಿಗೆ ಬುದ್ಧಿ ಇದ್ದರೂ ಅದನ್ನು ಉಪಯೋಗಿಸದಿರುವ, ಅವರ ಬಾಯಿ ಮುಚ್ಚಿಸುವ ಕೆಲಸವನ್ನೇಕೆ ಮಾಡಲಿಲ್ಲ? ಎಲ್ಲರಿಗೂ ಒಂದು ಬೆಲೆ ಇದ್ದೇ ಇದೆ. ಲಕ್ಷಕ್ಕೊಲಿಯದವರೂ ಕೋಟಿಗೆ ಒಲಿದೇ ಒಲಿಯುತ್ತಾರೆ ಎಂಬುದನ್ನು ಮರೆಯಬೇಡ. ಮುಂದಿನ ಬಾರಿ ಜಾಗರೂಕನಾಗಿರು” ಎನ್ನುತ್ತಾ ಮಮ್ಮೂಟಿಯನ್ನು ಹಿಂದಕ್ಕಟ್ಟಿದನು. ಊರಿಗೆ ಹಿಂತಿರುಗಿದ ಮಮ್ಮೂಟಿ ಚಿಂತಾಕ್ರಾಂತನಾಗಿಯೇ ಇದ್ದನು. ಇತ್ತೀಚೆಗಿನ ಈ ಎಲ್ಲ ಬೆಳವಣಿಗೆಗಳಿಂದ ಆತನ ನೆಮ್ಮದಿ ಹಾರಿ ಹೋಗಿತ್ತು. ಮುನೀರ್‍ನ ಬಿಡಿಸಲಾರದ ಈ ಚಟ ಆತನನ್ನು ಇನ್ನೊಂದು ರೀತಿಯಲ್ಲೂ ದುಃಖಿತನನ್ನಾಗಿ ಮಾಡಿತ್ತು. ‘ಹಳದಿ ಸಕ್ಕರೆ’ಯ ವ್ಯವಹಾರ ಎಂದು ಬಾಸ್ ಹೇಳಿದ್ದಾಗ ಆತನಿಗೆ ಅದರ ಕುರಿತು ಹೆಚ್ಚಿನ ತಿಳುವಳಿಕೆಯೇನೂ ಇರಲಿಲ್ಲ. ಆದು ಹೆಂಡದಂತೆಯೇ ಒಂದು ವಿಧದ ಮಾದಕ ಪದಾರ್ಥ ಎಂಬುದಷ್ಟೆ ಆತನಿಗೆ ಗೊತ್ತಿದ್ದ ವಿಷಯ. ಸೆರೆಮನೆಯಿಂದ ಬಂದೊಡನೆ ಹಲವು ವಿಧದ ಒತ್ತಡದಿಂದಾಗಿ ಆತನು ಈ ಕೆಲಸವನ್ನು ಒಪ್ಪಿಕೊಂಡಿದ್ದನು. ‘ಏನಾದರೇನು? ಸುಳಿ 255 ಹಣ ದೊರೆಯುವ ಯಾವ ಹಾದಿಯಾದರೂ ಸರಿ’ ಎಂಬುದಷ್ಟೆ ಆತನ ಮನೋಭಾವವಾಗಿತ್ತು. ಆದರೆ ಅಂತಹ ಒಂದು ಪದಾರ್ಥ ತನ್ನ ಮಗನ ಬದುಕನ್ನೇ ಬಾಯಿ ತೆರೆದು ನುಂಗಬಹುದು ಎಂದಾತ ಕನಸಿನಲ್ಲೂ ಎಣಿಸಿರಲಿಲ್ಲ. ತನ್ನ ಮಗನಂತೆಯೇ ಇನ್ನೂ ಎಷ್ಟೊ ಜನ ಯುವಕರು ಈ ಚಟಕ್ಕೆ ಬಲಿಯಾಗಿ ಭವಿಷ್ಯವನ್ನೆ ಕಳೆದುಕೊಂಡಿರಬಹುದಲ್ಲಾವಾ? ಎಷ್ಟೊ ಜನ ತಂದೆ ತಾಯಿಗಳು ತನ್ನಂತೆಯೇ ಈ ಮನೋವೇದನೆಯನ್ನು ಸಹಿಸಿಕೊಳ್ಳಲಾರದೆ ಬೆಂಕಿಯಲ್ಲಿ ಬಿದ್ದಂತೆ ಒದ್ದಾಡುತ್ತಿರಬಹುದಲ್ಲವಾ? ಈ ಹಾದಿಯಲ್ಲಿ ಬಹಳ ದೂರ ಬಂದೆ. ಇನ್ನು ಇಲ್ಲಿಂದ ಹಿಂತಿರುಗುವುದು ಹೇಗೆ? ಇಂತಹ ಪಶ್ಚಾತ್ತಾಪದಿಂದಲೂ ಆತನು ನರಳುತ್ತಿದ್ದನು. ಇತ್ತೀಚೆಗೆ ಆರ್ಥಿಕವಾಗಿಯೂ ಒಳಗಿಂದೊಳಗೆ ಕುಸಿಯುತ್ತಿದ್ದನು. ಪ್ರವಾಹದೋಪಾದಿಯಲ್ಲಿ ಬಂದದ್ದನ್ನು ಸಮನಾದ ಕಟ್ಟೆ ಕಟ್ಟಿ ಶೇಖರಿಸಿಡುವಂತಹ ಜಾಣತನವನ್ನಾತ ತೋರಲಿಲ್ಲ; ಆ ರೀತಿ ಸಲಹೆ ನೀಡುವ ಹಿತೈಷಿಗಳೂ ಆತನಿಗರಿಲಿಲ್ಲ. ಬಂದದ್ದೆಷ್ಟೊ ಹೋದದ್ದೆಷ್ಟೊ ಯಾವುದಕ್ಕೂ ಲೆಕ್ಕವಿರಲಿಲ್ಲ. ಬಹಳ ದೊಡ್ಡ ಶ್ರೀಮಂತನಾಗಿ ಊರಿನಲ್ಲಿ ಮರೆಯಬೇಕೆಂಬ ಹಂಬಲ ಮಾತ್ರ ಈಡೇರಿತ್ತು. ಸುಂಕಾಧಿಕಾರಿಗಳು ಮತ್ತು ಆದಾಯ ತೆರಿಗೆ ಅಧಿಕಾರಿಗಳು ಧಾಳಿಯಿಂದ ಆರ್ಥಿಕ ತೊಂದರೆಗೆ ಸಿಲುಕಿಕೊಂಡಾತ ಕೆಲವು ವರ್ಷಗಳ ಹಿಂದೆ ಕೊಂಡಿದ್ದ ತೆಂಗಿನ ತೋಟವೊಂದರನ್ನು ಮಾರಬೇಕಾದ ಪರಿಸ್ಥಿತಿಯೊದಗಿತು. ಆ ತೋಟ ಮಾರುವಾಗಲೂ ಆತನಿಗೆ ದುಃಖವಾಗಿತ್ತು. ಬಹಳ ಫಲವತ್ತಾದ ಹತ್ತು ಎಕರೆ ತೆಂಗಿನ ತೋಟ. ಸೆರೆಮನೆಗೆ ಹೋಗುವ ಮೊದಲು ಆಸ್ತಿಯ ದಲ್ಲಾಳಿಯೊಬ್ಬರು ಬಂದು ಹೇಳಿದೊಡನೆ ಮಮ್ಮೂಟಿ ಅದನ್ನು ನೋಡಲು ಹೋಗಿದ್ದನು. ತಾನು ಹುಟ್ಟಿ ಬೆಳೆದಂತಹ ಒಂದು ಹಳ್ಳಿಯ ಒಂದು ನದೀ ತೀರ. ಅಲ್ಲಿ ಪುಟ್ಟದೊಂದು ಬಂಗಲೆ ಕಟ್ಟಿಸಿಕೊಂಡು ಪಟ್ಟಣದ ಗಡಿಬಿಡಿಯಿಂದ ದೂರವಾಗಿ ವರ್ಷದ ಕೆಲವು ದಿನಗಳನ್ನು ಕಳೆಯಬೇಕೆಂಬಾಸೆಯಿಂದ ಕೊಂಡುಕೊಂಡ ಸ್ಥಳ. ಬಳಿಕ ಸೆರೆಮನೆ, ಅಲ್ಲಿಂದ ಬಂದ ಬಳಿಕ ಹೊಸ ವ್ಯವಹಾರ, ಮಕ್ಕಳ ಬದುಕಿನ ಸಮಸ್ಯೆ ಎಂದು ಈ ತೋಟದ ಕಡೆಗೆ ಗಮನ ಹರಿಸಲಾಗಿರಲಿಲ್ಲ. ಅಲ್ಲಿದ್ದ ಒಂದಿಬ್ಬರು ಒಕ್ಕಲುಗಳು ಅದನ್ನು ನೋಡಿಕೊಳ್ಳುತ್ತಿದ್ದರು. ಕಳೆದ ವರ್ಷ ಆತನೊಮ್ಮೆ ಬೊಂಬಾಯಿಗೆ ಹೋಗಿ ಬಂದ ಬಳಿಕ ಕೊಂಚ ಬಿಡುವಾಗಿದ್ದ ವೇಳೆಯಲ್ಲಿ ಆ ತೋಟದ ಕಡೆಗೆ ಹೋದನು. ಅಲ್ಲಿನ 256 ಸುಳಿ ವಿದ್ಯಮಾನಗಳನ್ನು ನೋಡಿ ತನ್ನ ಕಣ್ಣುಗಳನ್ನು ನಂಬದಾದನು. ಅಲ್ಲಿ ಹತ್ತಾರು ಗುಡಿಸಲುಗಳೆದ್ದಿದ್ದುವು. ಒಂದೆರಡು ಅಂಗಡಿಗಳೂ ಇದ್ದುವು. ಮಮ್ಮೂಟಿ ಕಾರಿನಿಂದಿಳಿದೊಡನೆ ಹಲವಾರು ಜನರು ಬಂದು ಆತನನ್ನು ಸುತ್ತುಗಟ್ಟಿದರು. ಧಡೂತಿಯಾದ ಕೊಂಬು ಮೀಸೆಯ ಅಸಾಮಿಯೊಬ್ಬನು ಮಮ್ಮೂಟಿಯ ಬಳಿ ಬಂದು, “ಹಾಜಾರರೇ, ಇದು ನಮ್ಮ ಜಾಗ, ನಾವು ಬಹಳ ವರ್ಷಗಳಿಂದಲೂ ಇಲ್ಲಿದ್ದೇವೆ. ನಮ್ಮನ್ನು ಹೊರದೂಡುವ ಆಲೋಚನೆಯೇನಾದರೂ ಇದ್ದರೆ ಬಿಟ್ಬಿಡಿ” ಎಂದನು. ಮಮ್ಮೂಟಿ ಕಾರಿನ ಚಾಲಕನನ್ನೂ ಕರೆದೊಯ್ಯದೆ ಒಬ್ಬನೇ ಹೋಗಿದ್ದನು. ಆತನು ಕೊಂಚ ಹೊತ್ತು ಅಲ್ಲಿ ನಿಂತು ಮೌನವಾಗಿ ಎಲ್ಲರನ್ನೂ ನೋಡಿದನು. ಆತನ ಬುದ್ಧಿ ಜಾಗೃತಗೊಂಡಿತು. ಆತನು ಈ ಧಡೂತಿಯವನನ್ನು ಹತ್ತಿರ ಕರೆದು ನಗುತ್ತಾ, “ನಿಮ್ಮ ಹೆಸರೇನು?” ಎಂದು ಕೇಳಿದನು. “ದೂಮಪ್ಪ” ಮುಖ ಬಿಗಿದುಕೊಂಡೇ ಹೇಳಿದನಾತ. “ಆಗಲಿ, ನೀನು ನಾಳೆ ನಮ್ಮ ಮನೆಗೆ ಬಾ. ನಾವು ಅಲ್ಲಿ ಮಾತಾಡುವಾ” ಎನ್ನುತ್ತಾ ಮಾತು ಬೆಳೆಸದೆ ಕಾರು ಹತ್ತಿದನು. ಮರುದಿನ ದೂಮಪ್ಪನು ಮಮ್ಮೂಟಿಯ ಮನೆಗೆ ಬಂದನು. ಮಮ್ಮೂಟಿ ಆತನನ್ನು ಆದರದಿಂದಲೇ ಬರಮಾಡಿಕೊಂಡನು. ಚಹಾ ತಿಂಡಿಗಳ ಸರಬರಾಜಾದ ಬಳಿಕ ಮಮ್ಮೂಟಿ ಮಾತಿಗಾರಂಭಿಸಿದನು. “ನೋಡು ದೂಮಪ್ಪಾ, ಎರಡು ವರ್ಷಗಳ ಹಿಂದಿನವರೆಗೂ ಅಲ್ಲಿ ಯಾವ ಒಕ್ಕಲೂ ಇರಲಿಲ್ಲವೆಂದು ನನಗೆ ಗೊತ್ತು. ಎಲ್ಲರನ್ನು ಎಳೆದು ಹೊರಹಾಕಿಸುವುದು ನನಗೆ ಅಷ್ಟು ಕಷ್ಟದ ಕೆಲಸವೇನೂ ಅಲ್ಲ. ಆದರೆ ಅದೆಲ್ಲ ಬೇಡ. ನಿನ್ನೊಡನೆ ನಾನೊಂದು ಮಾತು ಹೇಳುವೆ. ಕೇಳುವೆಯಾ?” ಎಂದನು. “ಏನು ಹೇಳಿ” ಎಂದನಾತ. “ನಿನಗೆ ಎಷ್ಟು ಸ್ಥಳ ಬೇಕು?” ಮಮ್ಮೂಟಿ ನೇರವಾಗಿ ಕೇಳಿದನು. ಆತನು ತಬ್ಬಿಬ್ಬಾಗಿ ಗೊಂದಲಗೊಂಡು ಮೌನವಾಗಿ ನಿಂತನು. “ನಿನಗೆ ಅರ್ಧ ಎಕರೆ ಸ್ಥಳ ಬಿಟ್ಟುಕೊಡುವೆ. ನಿನ್ನೆ ಮನೆಯೂ ಅಲ್ಲೆ ಇರಲಿ. ಸ್ವಲ್ಪ ಹಣವನ್ನೂ ಕೊಡುವೆ. ಆದರೆ ಉಳಿದವರನ್ನು ಅಲ್ಲಿಂದ ಹೊರಡಿಸುವ ಕೆಲಸ ನಿನ್ನದು” ಎಂದನು. ದೂಮಪ್ಪನಿಗೆ ಮಮ್ಮೂಟಿಯ ಮಾತಿನ ಅರ್ಥ ಹೊಳೆಯತೊಡಗಿತು. ಆತನ ತುಟಿಗಳಲ್ಲಿ ಮಂದಹಾಸ ಅರಳಿತು. ಅರ್ಧ ಎಕರೆ ಸ್ಥಳ ತನ್ನ ಸುಳಿ 257 ಸ್ವಂತದ್ದಾಗುವುದಾದರೆ ಯಾಕಾಗಬಾರದು? ಅವರನ್ನೆಲ್ಲ ಅಲ್ಲಿ ತಂದಿಟ್ಟವನು ತಾನೇ. ತನ್ನ ಮಾತು ಮೀರಿ ನಡೆಯುವ ಧೈರ್ಯ ಅಲ್ಲಿ ಯಾರಿಗಿದೆ? “ಆಗಲಿ ಸಾಹುಕಾರರೇ, ನಿಮ್ಮಿಷ್ಟದಂತೆಯೇ ಆಗಲಿ.” ಪ್ರಸನ್ನ ಚಿತ್ತನಾಗಿ ನುಡಿದನಾತ. “ನಿನ್ನ ಕೆಲಸ ಆದ ಮೇಲೆ ನನಗೆ ತಿಳಿಸು. ಅಲ್ಲಿಯವರೆಗೆ ನಾನು ಆ ಕಡೆ ಕಾಲಿಡುವುದಿಲ್ಲ” ಎಂದನು. ಆತ ಒಪ್ಪಿಕೊಂಡಂತೆಯೇ ಒಂದು ವಾರದೊಳಗೆ ಅಲ್ಲಿದ್ದ ಎಲ್ಲರನ್ನೂ ಬಲಾತ್ಕಾರದಿಂದ ಎಬ್ಬಿಸಿದನು. “ಅವರು ಪೊಲೀಸರನ್ನು ಕರೆದುಕೊಂಡು ಬಂದರೆ ನಾವು ಜೈಲು ಸೇರಬೇಕಾಗುತ್ತದೆ. ನಮ್ಮ ಯಾರ ಬಳಿಯೂ ಯಾವುದೇ ಕಾಗದ ಪತ್ರಗಳಿಲ್ಲ. ನಮ್ಮದು ಭೂ ಅತಿಕ್ರಮಣ. ಈಗಲೇ ಹಾಜಾರರು ನಮ್ಮನ್ನು ಜೈಲಿಗೆ ಹಾಕಿಸಬಹುದಾಗಿತ್ತು. ಆದರೆ ಅವರೇನೊ ಒಳ್ಳೆ ಬುದ್ಧಿಯಿಂದ ಹಾಗೆ ಮಾಡಲಿಲ್ಲ. ಒಂದು ವಾರದಲ್ಲಿ ನಾವೆಲ್ಲರೂ ಇಲ್ಲಿ ಜಾಗ ಖಾಲಿ ಮಾಡಬೇಕು. ನಮಗೆಲ್ಲರಿಗೂ ಹಾಜಾರರು ಸ್ವಲ್ಪ ಹಣವನ್ನು ಕೊಡುತ್ತಾರೆ” ಎಂದು ಎಲ್ಲರನ್ನೂ ಒಪ್ಪಿಸಿದನು. ಮರುದಿನದಿಂದ ಒಬ್ಬೊಬ್ಬರಾಗಿ ಜಾಗ ಖಾಲಿ ಮಾಡಿದರು. ತಮ್ಮ ಗುಡಿಸಲುಗಳನ್ನು ಬಿಚ್ಚಿ ಬೇರೆಡೆಗೆ ಸಾಗಿಸಿದರು. ದೂಮಪ್ಪ ಕೂಡಾ ತಮ್ಮೊಡನೆ ಹೊರಡುವನೆಂದೇ ಎಲ್ಲರೂ ನಿರೀಕ್ಷಿಸಿದ್ದರು. ದೂಮಪ್ಪ ತನಗೆ ಸಾಹುಕಾರರು ಒಂದು ತಿಂಗಳ ಅವಧಿ ಕೊಟ್ಟಿದ್ದಾರೆಂದು ತಿಳಿಸಿ ಎಲ್ಲರನ್ನೂ ಸಾಗಹಾಕಿದನು. ವಾರದೊಳಗೆ ತೋಟ ಮಮ್ಮೂಟಿಯ ಕೈ ಸೇರಿತ್ತು. ದೂಮಪ್ಪನು ಮಮ್ಮೂಟಿಯ ಗುಂಪಿನವನೇ ಆದನು. ಅಲ್ಲಿ ಬಂಗಲೆ ಕಟ್ಟಿಸುವ ಮಮ್ಮೂಟಿಯ ಕನಸು ಮಾತ್ರ ಕನಸಾಗಿಯೇ ಉಳಿಯಿತು. ಪಟ್ಟಣದಲ್ಲಿದ್ದ ಕಟ್ಟಡಗಳನ್ನು ಮಾರಿದರೆ ಊರಿನಲ್ಲಿ ಸುದ್ದಿಯಾಗುತ್ತದೆ. ಹಾಗಾಗಿಯೇ ದೂರದ ಈ ತೋಟವನ್ನೇ ಮಾರಿದನು. ತನ್ನ ಬದುಕಿನಲ್ಲಿ ಇನ್ನು ಒಂದೇ ಒಂದು ಮಹತ್ವಾಕಾಂಕ್ಷೆ ಇದೆ. ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದು. ಕಲ್ಯಾಣಿ ವಿಧಾನಸಭಾ ಸದಸ್ಯೆಯಾಗಬಹುದಾದರೆ ತಾನೇಕೆ ಆಗಬಾರದು? ತಾನೂ ಓರ್ವ ಎಮ್ಮೆಲ್ಲೆ ಆದ ಬಳಿಕ ಈ ಎಲ್ಲಾ ದಂಧೆಗಳಿಗೆ ವಿದಾಯ ಹೇಳಬೇಕು. ಮಮ್ಮೂಟಿ ಜೈಲಿಗೆ ಹೋಗಿ ಬಂದದ್ದನ್ನು ಊರವರು ಎಂದೊ ಮೆರೆತಾಗಿತ್ತು. ಈಗ ಮೊದಲಿನಂತೆಯೇ ಊರಿನ ಬಡವರಿಗಾಗಿ ಆತನ ಸ್ವಂತ 258 ಸುಳಿ ಪಡಿತರ ವ್ಯವಸ್ಥೆ ಇದೆ. ಮಸೀದಿ, ಶಾಲೆ ನಿರ್ಮಿಸಿದ ಹೆಸರಿದೆ. ಹೊಳೆಯಂತೆ ಹರಿಸಲು ಹಣ ಸಂಪಾದನೆಯ ಹಾದಿಯಂತೂ ಇದ್ದೇ ಇದೆ. ಎಲ್ಲವನ್ನೂ ಪಕ್ಷಾಧ್ಯಕ್ಷರ ಗಮನಕ್ಕೆ ತಂದವನು ವಾಸು. “ವಿಧಾನ ಸಭೆಯಲ್ಲಿ ನಿಮಗೆ ಒಂದು ಸೀಟು ಗ್ಯಾರಂಟಿ ಎಂದೇ ತಿಳಿಯಿರಿ” ಎಂದು ಪಕ್ಷಾಧ್ಯಕ್ಷರನ್ನು ಹುರಿದುಂಬಿಸಿದನಾತ. ಮಮ್ಮೂಟಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೇಟು ದೊರೆತಾಗ ಮಮ್ಮೂಟಿಯ ಬಳಿ ಬಂದು, “ಹಾಜಾರೇ, ನಮ್ಮ ಪಕ್ಷಕ್ಕೇನಾದರೂ ಬಹುಮತ ದೊರೆತರೆ ನೀವು ಮಂತ್ರಿಯಾಗುವುದು ಗ್ಯಾರಂಟಿ!” ಎಂದನು. ಚುನಾವಣೆಯ ಉಸ್ತುವಾರಿ ಮತ್ತು ಪೊಲೀಸ್ ಬಂದೋಬಸ್ತಿಗಾಗಿ ಜಿಲ್ಲೆಗಾಗಮಿಸಿದವರು ಜಿಲ್ಲಾ ಪೊಲೀಸ್ ಅಧಿಕಾರಿ ನವಾಜ್. ಎಷ್ಟೇ ಪ್ರಯತ್ನಪಟ್ಟರೂ ಕಳ್ಳಸಾಗಣಿಯ ಹುಟ್ಟಡಗಿಸಲಾಗದ ಅಸಹಾಯಕಸ್ಥಿತಿ ಈತನದು. ಒಮ್ಮೆ ಎಲ್ಲರೂ ಬಂದೀಖಾನೆಯ ಒಳ ಸೇರಿದರೂ ಯಾವ ಮೊಕದ್ದಮೆಯೂ ಇಲ್ಲದೆ ಎಲ್ಲರನ್ನೂ ಹೊರಗೆ ಬಿಟ್ಟು ಬಿಡಲಾಗಿತ್ತು. ಈ ರೀತಿ ಅವರು ಹೊರಬಂದ ಬಳಿಕ ನವಾಜ್ ತನ್ನ ಕರ್ತವ್ಯ ನಿರ್ವಹಣೆಯಲ್ಲಿ ಉತ್ಸಾಹವನ್ನೇ ಕಳೆದುಕೊಂಡಿದ್ದನು. ತಾನು ಎಷ್ಟೆಲ್ಲ ಕಷ್ಟಪಟ್ಟು ಈ ಕಳ್ಳಸಾಗಣೆದಾರರನ್ನು ಹಿಡಿಯಲು ಪ್ರಯತ್ನಿಸಿದೆ? ಕೊನೆಗೂ ಆದದ್ದೇನು? ಎಲ್ಲರೂ ಎರಡು ವರ್ಷಗಳ ವರೆಗೆ ಸೆರಮನೆಯುಲ್ಲಿದ್ದದ್ದು ಬಿಟ್ಟರೆ ಬೇರೇನೂ ಆಗಲಿಲ್ಲ! ಹೊರಬಂದವರು ಪುನಃ ತಮ್ಮ ದಂಧೆ ಪ್ರಾರಂಭಿಸಿ ಮೊದಲಿನಂತೆಯೇ ವಿಜೃಂಭಿಸತೊಡಗಿದ್ದರು. ಮಾತ್ರವಲ್ಲ ಈಗ ಹೊಸ ಬೆಳವಣಿಗೆಯೂ ಪ್ರಾರಂಭವಾಗಿತ್ತು. ರಾಜಕಾರಣಿಗಳೂ ಕ್ರಿಮಿನಲ್‍ಗಳೂ ಒಂದಾಗತೊಡಗಿದ್ದರು. ಮೊದಲೆಲ್ಲ ಚುನಾವಣಾ ನಿಧಿಗೆ ಹಿಂದಿನಿಂದ ಧನ ಸಹಾಯ ಮಾಡುತ್ತಿದ್ದರು. ಈಗ ತಾವೇ ಚುನಾವಣಾ ಅಭ್ಯರ್ಥಿಗಳಾಗಿದ್ದರು. ಯಾರಿಗೆ ಗೊತ್ತು? ನಾಳೆ ಇವರೇ ಮಂತ್ರಿಗಳಾಗಿ ತಮ್ಮನ್ನಾಳುವ ಮಟ್ಟಕ್ಕೂ ಬರಬಹುದು! ಆಗ ತನ್ನಂತಹವನ ಪಾಡೇನು? ಆಗ ಇವರ ಹಿಡಿತದಿಂದ ತಪ್ಪಿಸಿಕೊಳ್ಳಲು ತಾನೇ ಹಾದಿ ಹುಡುಕಬೇಕಾದ ಪರಿಸ್ಥಿತಿ! ಊರಲ್ಲಿ ಹರಡಿದ ಮಾದಕ ದ್ರವ್ಯಗಳ ಹಾವಳಿ ನವಾಜ್‍ನನ್ನು ಮತ್ತಷ್ಟು ಕಂಗೆಡಿಸಿತ್ತು. ಇಡೀ ಯುವ ಜನಾಂಗವನ್ನು ನಿಷ್ಕ್ರಿಯಗೊಳಿಸುವ ಈ ಮಾದಕ ದ್ರವ್ಯಗಳ ಮಾರಾಟವನ್ನು ತಡೆಗಟ್ಟುವುದೂ ದುಸ್ತರವಾಗುತ್ತಿದೆ. ಅಪರಾಧಿಗಳನ್ನು ಬಂಧಿಸಿ ಹೊರಟರೆ ಮೇಲಿನಿಂದ ದೂರವಾಣಿ ಕರೆ ಬರುತ್ತದೆ. “ಆತನನ್ನು ಬಂಧಿಸಬೇಡಿ!” ಅಥವಾ “ಆ ಸಂಬಂಧ ಪಟ್ಟ ಫೈಲನ್ನು ಮೇಲಾಧಿಕಾರಿಗೆ ಸುಳಿ 259 ಕಳುಹಿಸಿಕೊಡಿ!” ಅಲ್ಲಿಗೆ ಆ ತನಿಖೆ ಮುಗಿದಂತೆಯೇ. ಹೀಗಾಗಿಯೇ ಇತ್ತೀಚೆಗೆ ಆತನಿಗೆ ಈ ನೌಕರಿಯೇ ಬೇಡವೆನ್ನಿಸಿತ್ತು. ಅದಕ್ಕೊಂದು ಕಾರಣವೂ ಇತ್ತು. ಕೊಲೆ ಮೊಕದ್ದಮೆಯೊಂದರ ತನಿಖೆ ಮಾಡಿ ಆತನು ಕೊಲೆ ಮಾಡಿದ ಅಪರಾಧಿಯನ್ನು ಬಂಧಿಸಿದ್ದನು. ಆದರೆ ಕೆಲವೇ ದಿನಗಳಲ್ಲಿ ಆತನು ಜಾಮೀನು ಪಡೆದು ಹೊರಬಂದು ರಾಜಾರೋಷವಾಗಿ ಕಾರಿನಲ್ಲಿ ತಿರುಗತೊಡಗಿದನು. ಸಾಕ್ಷಿ ಹೇಳಲು ಒಪ್ಪಿಕೊಂಡಿದ್ದ ಕೆಲವರು ಹಿಂಜರಿದರು. ಮೊಕದ್ದಮೆಯ ವಿಚಾರಣೆ ಪ್ರಾರಂಭವಾಗುವ ಹೊತ್ತಿಗೆ ಇನ್ನೂ ಕೆಲವರು ಕೊಲ್ಲಿ ರಾಷ್ಟ್ರಕ್ಕೆ ಹೊರಟು ಹೋಗಿದ್ದರು. ಕೇಸು ದುರ್ಬಲವಾಗತೊಡಗಿತು. ಆದರೆ ಪತ್ರಿಕೆಗಳು ಪೊಲೀಸರನ್ನು ಟೀಕಿಸತೊಡಗಿದುವು. ಕೊನೆಗೂ ಊರವರ ಅವಹೇಳನ ಮತ್ತು ತಿರಸ್ಕಾರಕ್ಕೆ ಗುರಿಯಾದವರು ಪೊಲೀಸರು! ಇಂತಹ ಕ್ರಿಮಿನಲ್‍ಗಳ ರಕ್ಷಣೆಗಾಗಿ ಧಾವಿಸುವ ಕೆಲವು ನ್ಯಾಯವಾದಿಗಳನ್ನು ಕಂಡರೆ ನವಾಜ್‍ನ ರಕ್ತ ಕುದಿಯುತ್ತಿತ್ತು. ನಿಜವಾದ ಅಪರಾಧಿ ಎಂದು ತಿಳಿದಿದ್ದರೂ ಕೂಡಾ ಕೊಲೆಗಾರನೋರ್ವನನ್ನು ನಿರಪರಾಧಿ ಎಂದು ಸಾಬೀತು ಪಡಿಸಿ ಪುನಃ ಸಮಾಜದಲ್ಲಿ ಅಪರಾಧವೆಸಗಲು, ಸಮಾಜದ ಸ್ವಾಸ್ಥ್ಯ ಕೆಡಿಸಲು ಹೆಣಗಾಡುವ ಈ ನ್ಯಾಯವಾದಿಗಳ ಕುರಿತು ಅವನಲ್ಲಿ ಯಾವ ಗೌರವವೂ ಉಳಿಯಲಿಲ್ಲ. ಟೇಪ್ ರೆಕಾರ್ಡರ್ ಕದ್ದ ಮೂರನೇ ದರ್ಜೆಯ ಕಳ್ಳನೋರ್ವನನ್ನು ರಕ್ಷಿಸಲು ಹಿರಿಯ ನ್ಯಾಯವಾದಿಯೊಬ್ಬರು ನ್ಯಾಯಾಲಯಕ್ಕೆ ಬಂದು ಆತನ ಪರವಾಗಿ ವಾದಿಸಿ ಆತನನ್ನು ಬಿಡುಗಡೆಗೊಳಿಸಿದ್ದನ್ನು ಕಂಡು ನವಾಜ್ ಆಶ್ಚರ್ಯ ಚಕಿತನಾಗಿದ್ದನು. ಆತನ ವಾದ ವೈಖರಿಗೆ ನವಾಜ್ ಬೆರಗಾಗಿದ್ದನು. ನಡು ಹಗಲಲ್ಲಿ ಮನೆಯೊಂದರಿಂದ ಟೇಪ್ ರೆಕಾರ್ಡರ್ ಕಳವಾಗಿತ್ತು. ಮನೆಯಾತ ನವಾಜ್‍ನ ಸ್ನೇಹಿತನೂ ಆಗಿದ್ದುದರಿಂದ ತುಂಬಾ ಮುತುವರ್ಜಿಯಿಂದಲೇ ತನಿಖೆ ಪ್ರಾರಂಭವಾಯಿತು. ಆತನ ಇಲಾಖೆಯ ಸಬ್‍ಇನ್ಸ್‌ಪೆಕ್ಟರ್ ಪರ ಊರಿಗೆ ಹೋಗಿ ಕಳ್ಳ ಮತ್ತು ಆತ ಬೇರೊಬ್ಬರಿಗೆ ಮಾರಿದ್ದ ಟೇಪ್ ರೇಕಾರ್ಡರನ್ನು ಊರಿಗೆ ತಂದನು. ಕಳ್ಳ, ತಾನು ಆ ಮನೆಯ ಹಿಂಭಾಗದ ಬಾಗಿಲಿನ ಮೂಲಕ ಹೇಗೆ ಆ ವಸ್ತುವನ್ನು ಕದ್ದೆನೆಂದು ತಾನೇ ಪೊಲೀಸರೊಡನೆ ಆ ಮನೆಗೆ ಹೋಗಿ ಎಲ್ಲರಿಗೂ ವಿವರಿಸಿದನು. ಅದನ್ನು ಕೊಂಡು ಕೊಂಡಾತನೇ ಮೊಕದ್ದಮೆಯಲ್ಲಿ ಪ್ರಮುಖ ಸಾಕ್ಷಿಯಾಗಿದ್ದನು. ಈ ಖರೀದಿದಾರನು ಎಂದೂ ನ್ಯಾಯಾಲಯದ ಕಟ್ಟೆ ಹತ್ತಿದವನಲ್ಲ. 260 ಸುಳಿ ಪೊಲೀಸರೆಂದರೇನೇ ಭಯದಿಂದ ನಡುಗುತ್ತಿದ್ದನು. ಒಳ್ಳೆಯ ವಸ್ತು ಮೂರು ಕಾಸಿಗೆ ದೊರೆಯಿತಲ್ಲಾ ಎಂಬ ಸಂತೋಷದಿಂದ ಅದನ್ನು ಕೊಂಡುಕೊಂಡಿದ್ದನು. ಕದ್ದ ಮಾಲೆಂದು ತಿಳಿದಿದ್ದರೆ ತಾನದನ್ನು ಖಂಡಿತವಾಗಿಯೂ ಕೊಳ್ಳುತ್ತಿರಲಿಲ್ಲ ಎಂದು ಬಾರಿ ಬಾರಿಗೂ ಪೊಲೀಸರೊಡನಂದನು. ಪೊಲೀಸರು ಕೊನೆಗೂ ಇವನನ್ನು ಒಪ್ಪಿಸಿ ಸಾಕ್ಷಿ ಹೇಳಲು ನ್ಯಾಯಾಲಯಕ್ಕೆ ಕರೆದೊಯ್ದಿದ್ದರು. ಮೊದಲೇ ಪುಕ್ಕ. ಕುಡಿತದ ಚಟವಿದ್ದ ಆತ ನ್ಯಾಯಾಲಯದಲ್ಲಿ ಕೊಂಚ ಧೈರ್ಯ ಪ್ರದರ್ಶಿಸಲು ಕೊಂಚ ಹೆಂಡ ಕುಡಿದೇ ನ್ಯಾಯಾಲಯಕ್ಕೆ ಹೋದನು. ಕಳ್ಳನ ಪರವಾದ ನ್ಯಾಯವಾದಿಗಳ ಅಡ್ಡ ವಿಚಾರಣೆ ಪ್ರಾರಂಭವಾಯಿತು. ಏನೇನೊ ಪ್ರಶ್ನೆಗಳನ್ನು ಕೇಳಿ ಅವನನ್ನು ಗೊಂದಲದಲ್ಲಿ ಕೆಡವಿದ ನ್ಯಾಯವಾದಿಗಳು ಕೊನೆಗೆ, “ನೀನು ಕೊಂಡಕೊಂಡ ಟೇಪ್ ರೆಕಾರ್ಡ್‍ರಿನ ನಂಬರ್ ಗೊತ್ತೇ?” ಎಂದು ಪ್ರಶ್ನಿಸಿದನು. “ಇಲ್ಲ...”ಪಿಳಿ ಪಿಳಿ ಕಣ್ಣು ಬಿಟ್ಟು ಹೇಳಿದನಾತ. “ಇದೇ ಮಾದರಿಯ ಬೇರೆ ಟೇಪ್ ರೆಕಾರ್ಡರನ್ನು ನೀನು ನೋಡಿಲ್ಲವಾ?” “ನೋಡಿದ್ದೇನೆ.” “ಆತನು ನಿನಗೆ ಮಾರಿದ ವಸ್ತು ಇದೇ ಎಂದು ಹೇಗೆ ಹೇಳುವೆ?” “ಅವನು ನನಗೆ ಮಾರಿದ್ದು ಇದನ್ನೇ.” ಕೊಂಚ ಧೈರ್ಯದಿಂದಲೇ ಒತ್ತಿ ಹೇಳಿದನಾತ. “ನೀನು ಅದರ ನಂಬರ್ ನೋಡಿಲ್ಲವೆಂದ ಮೇಲೆ ಇದೇ ಎಂದು ಹೇಗೆ ಹೇಳುವೆ? ಆತ ನಿನಗೆ ಮಾರಿದ ಟೇಪ್ ರೆಕಾರ್ಡರ್ ಇದಲ್ಲವೆಂದು ನಾನು ಹೇಳುತ್ತೇನೆ.” ತೀಕ್ಷ್ಣವಾಗಿ ನುಡಿದರು ನ್ಯಾಯವಾದಿಗಳು. “ಇಲ್ಲ ಸಾರ್. ಇದೇ...” ತೊದಲುತ್ತಾ ನುಡಿದನಾತ. “ಅವನು ನಿನಗೆ ಮಾರಿದ ಟೇಪ್ ರೆಕಾರ್ಡರ್ ಇದೇ ಮಾದರಿಯ ಬೇರೊಂದಾಗಿರಬಹುದಲ್ಲವಾ?” ಕೊಂಚ ಜೋರಾಗಿಯೆ ಕೇಳಿದರು ನ್ಯಾಯವಾದಿಗಳು. ಸಾಕ್ಷಿ ಈಗ ಪೂರ್ತಿ ಗೊಂದಲಕ್ಕೊಳಗಾದನು. ತಲೆ ರೋಸಿ ಹೋಗುವ ಈ ಪ್ರಶ್ನೆಗಳಿಂದ ಒಮ್ಮೆ ಬಿಡುಗಡೆ ದೊರೆತರೆ ಸಾಕೆಂದೊ ಏನೊ ಆತ ದೃಷ್ಟಿ ಕೆಳಗಿಳಿಸುತ್ತಾ, “ಆಗಿರಬಹುದು” ಎಂದು ಅಸಹಾಯಕನಾಗಿ ನುಡಿದನು. “ಅವನು ನಿನಗೆ ತಂದುಕೊಟ್ಟ ಟೇಪ್ ರೆಕಾರ್ಡರ್ ಇದಲ್ಲ, ಅಲ್ಲವಾ?” ನ್ಯಾಯವಾದಿಗಳು ಮತ್ತೊಮ್ಮೆ ಕೇಳಿದರು. ಸುಳಿ 261 ಆತ ತಲೆಯಲ್ಲಾಡಿಸುತ್ತಾ, “ಅಲ್ಲ!” ಎಂದನು. ಪೊಲೀಸರು ಸುಮ್ಮನೆ ಯಾರನ್ನೊ ಹಿಡಿದು ತಂದು ಕಳ್ಳನೆಂಬ ಹಣೆಪಟ್ಟಿ ಕಟ್ಟಿದ್ದಾರೆ ಎಂಬಂತ ನ್ಯಾಯವಾದಿಗಳು ಕೇಸನ್ನು ತಿರುಗಿಸಿದ್ದರು. ಕಳ್ಳ ಸಭ್ಯನಾಗಿ ಪೊಲೀಸರು ಕಳ್ಳರೆಂಬಂತಾಗಿತ್ತು. ಕಳ್ಳ ನಿರಪರಾಧಿ ಎಂದು ನ್ಯಾಯಾಲಯ ತೀರ್ಪಿತ್ತಿತ್ತು! ಸಣ್ಣ, ತೀರಾ ಸಾಮಾನ್ಯನಾದ ಓರ್ವ ಪೆಟ್ಟಿ ಕಳ್ಳ ಕೂಡಾ ಈ ರೀತಿ ಕಳ್ಳತನವನ್ನು ದಕ್ಕಿಸಿಕೊಳ್ಳಬಹುದಾದರೆ ಇನ್ನು ಹಣವನ್ನು ಹೊಳೆಯುಂತೆ ಹರಿಸಬಲ್ಲ ಕಳ್ಳ ಸಾಗಣೆದಾರರಿಗೆ ನ್ಯಾಯಾಲಯದಿಂದ ಬಿಡುಗಡೆಗೊಳ್ಳಲು ಎಷ್ಟು ಹೊತ್ತು ಬೇಕು? ನಿರಪರಾಧಿಗಳಿಗೆ ಅಥವಾ ಸಂದೇಹಕ್ಕೊಳಗಾದವರಿಗೆ ನ್ಯಾಯವಾದಿಗಳು ರಕ್ಷಣೆ ನೀಡಲಿ. ಆದರೆ ನಡು ಹಗಲಲ್ಲಿ ಹಲವರ ಕಣ್ಣೆದುರಿಗೆ ನಡೆದ ಕೊಲೆಗಾರನಿಗೆ ಕೂಡಾ ನ್ಯಾಯಾಲಯದಿಂದ ಬಿಡುಗಡೆ ದೊರೆಯುವುದಾದರೆ ಈ ವ್ಯವಸ್ಥೆಯಲ್ಲಿ ಯಾರಿಗಾದರೂ ವಿಶ್ವಾಸ ಉಳಿದೀತೇ? ಈ ಎಲ್ಲಾ ಘಟನೆಗಳಿಂದಾಗಿ ನವಾಜ್ ತನ್ನ ನೌಕರಿಯಲ್ಲಿ ಉತ್ಸಾಹ ಕಳೆದುಕೊಂಡಿದ್ದನು. ತಲೆ ಕೆಟ್ಟು ಹೋಗುವಂತಹ ಈ ನೌಕರಿಗೆ ರಾಜೀನಾಮೆಯಿತ್ತು ಎಲ್ಲಾದರೂ ಹೊರಟು ಹೋಗಬೇಕೆಂಬ ಆತನ ಯೋಚನೆ ಚಿಗುರಲು ಅವಕಾಶವೇ ಇರಲಿಲ್ಲ. ಮಕ್ಕಳ ಬದುಕಿಗೆ ಒಂದು ನೆಲೆ ಕಾಣಿಸುವವರೆಗಂತೂ ಈ ಕೆಲಸಕ್ಕೆ ಅಂಟಿಕೊಳ್ಳಲೇ ಬೇಕಾಗಿತ್ತು. ಹಾಗಾಗಿ ನಿರುತ್ಸಾಹದಿಂದಲೇ ತನ್ನೂರಿಗೆ ವರ್ಗಾವಣೆಗೊಂಡು ಬಂದಿದ್ದನು. ಮಮ್ಮೂಟಿಯ ಪರವಾದ ಚುನಾವಣಾ ಪ್ರಚಾರ ಭರದಿಂದ ಸಾಗುತ್ತಿತ್ತು. ಕೋಮುವಾದಿಗಳು ಕೋಮು ಘರ್ಷಣೆ ಸೃಷ್ಟಿಸಿ ಜನರ ಮತ ಪಡೆಯಲು ವಿಫಲ ಯತ್ನ ನಡೆಸಿದ್ದರು. ಮಸೀದಿಯ ಮುಂದುಗಡೆಯಿಂದ ಬ್ಯಾಂಡ್ ಬಾರಿಸಿಕೊಂಡು ಹೋಗುವ ಹಟ ಹಿಂದೂ ಕೋಮುವಾದಿಗಳದ್ದು. ಮಸೀದಿಯ ಮುಂದುಗಡೆ ಬ್ಯಾಂಡ್ ಬಾರಿಸಿದರೆ ನೆತ್ತರ ಹೊಳೆ ಹರಿದೀತೆಂದು ಮುಸ್ಲಿಮರು ಬೆದರಿಕೆಯೊಡ್ಡಿದರು. ಈ ರಕ್ತಪಾತ ತಪ್ಪಿಸಲು ಎಸ್ಪಿ ಸಾಹೇಬರು ಮೆರವಣಿಗೆಯ ದಿಕ್ಕನ್ನೇ ಬದಲಾಯಿಸಿ ಮಸೀದಿಗಳಿಲ್ಲದ ಬೀದಿಯಲ್ಲಿ ಮೆರವಣಿಗೆ ಕೊಂಡೊಯ್ಯಲು ಆದೇಶ ನೀಡಿದರು. ಎಸ್.ಪಿ. ಸಾಹೇಬರು ಮುಸ್ಲಿಮರಾದುದರಿಂದ ತಮ್ಮ ಯೋಜನೆ ಫಲಿಸಲಿಲ್ಲವೆಂದು ಉದ್ರಿಕ್ತರಾದ ಕೊಮುವಾದಿಗಳು ನವಾಜ್‍ನ ಮೇಲೆ ಹಲವು ಆಪಾದನೆಗಳನ್ನು ಸೃಷ್ಟಿಸಿ ಅವರನ್ನು ವರ್ಗಾವಣೆ ಮಾಡಿಸಬೇಕೆಂದು ಸರಕಾರವನ್ನು ಒತ್ತಾಯಿಸತೊಡಗಿದರು. 262 ಸುಳಿ ತಮ್ಮ ಯೋಜನೆ ವಿಫಲವಾದುದರಿಂದ ಕೆರಳಿದ ಕೋಮುವಾದಿಗಳು ಕೆಲವೇ ದಿನಗಳಲ್ಲಿ ಮತ್ತೊಂದು ಮೆರವಣಿಗೆ ಹೊರಡಿಸಿ ಮಸೀದಿ ಇರುವ ಬೀದಿಯ ಮೂಲಕವೇ ಮೆರವಣಿಗೆ ಹೋಗುವಂತೆ ಕಾರ್ಯಕ್ರಮ ರೂಪಿಸಿದರು. ಈ ಬಾರಿ ನವಾಜ್ ಮಮ್ಮೂಟಿಯನ್ನು ಕರೆಸಿದನು. ನವಾಜ್‍ನಿಂದ ತನಗೆಷ್ಟೇ ತೊಂದರೆಯಾಗಿದ್ದರೂ, ತನ್ನನ್ನಾತ ಎಷ್ಟೇ ದ್ವೇಷಿಸಿದ್ದರೂ ಮಮ್ಮೂಟಿಗೆ ಆತನನ್ನು ದ್ವೇಷಿಸಲು ಸಾಧ್ಯವಾಗುತ್ತಿರಲಿಲ್ಲ. ನವಾಜ್ ಆತನಿಗೆ ಸ್ವಂತ ರಕ್ತ ಸಂಬಂಧಿಗಿಂತಲೂ ಹೆಚ್ಚಿನವನೇ ಆಗಿದ್ದನು. ಆತನ ಪ್ರಾಮಾಣಿಕತೆ ಮತ್ತು ಕರ್ತವ್ಯ ನಿಷ್ಠೆಗೂ ಮಮ್ಮೂಟಿ ಬೆರಗಾಗಿದ್ದನು. ಇಂತಹವರು ಈಗಲೂ ಪ್ರಪಂಚದಲ್ಲಿ ಇದ್ದಾರಲ್ಲ ಎಂದು ಅಚ್ಚರಿ ಪಡುತ್ತಿದ್ದನು. ಹೀಗಾಗಿಯೇ ನವಾಜ್‍ನ ಕರೆ ಬಂದೊಡನೆ ಮಮ್ಮೂಟಿ ಆತನ ಬಳಿಗೆ ಧಾವಿಸಿದನು. ಪರಸ್ಪರ ಸುಖ ದುಃಖಗಳ ವಿನಿಯಮಯವಾದ ಬಳಿಕ ನವಾಜ್, “ನೊಡು ಮಮ್ಮೂಟೀ, ನಾವು ಸರಕಾರೀ ಅಧಿಕಾರಿಗಳು. ಕಾನೂನು ವ್ಯವಸ್ಥೆ ಕಾಪಾಡಬೇಕಾದುದು ನಮ್ಮ ಕರ್ತವ್ಯ. ಕೋಮುವಾದಿಗಳು ಏನೇನೊ ಮಸಲತ್ತು ನಡೆಸುತ್ತಿದ್ದಾರೆ. ಈಗ ನಿನ್ನ ಸಹಕಾರ ನನಗೆ ಬೇಕು” ಎಂದನು. “ಹೇಳಿ ಸಾಹೇಬರೇ, ನಾನೇನು ಮಾಡಬೇಕು?” “ನನ್ನನ್ನು ನೀನು ಸಾಹೇಬರೇಂತ ಕರೀಬೇಡಾಂತ ಈ ಹಿಂದೆಯೇ ಹೇಳಿದ್ದೆ. ಅದಿರಲಿ. ಈ ನೆಲದಲ್ಲಿ ನೆತ್ತರು ಹರಸಿಯೇ ಸಿದ್ದ ಎಂಬಂತೆ ಈ ಕೋಮುವಾದಿಗಳು ತಂತ್ರ ರೂಪಿಸಿದ್ದಾರೆ. ಹೇಳಿ ಕೇಳಿ ನಮ್ಮ ಮುಸ್ಲಿಮರು ಅವಿದ್ಯಾವಂತರು. ಒಂದು ಕಿಡಿ ಹಾರಿದರೂ ಸಾಕು; ಬೆಂಕಿ ಹೊತ್ತಿಸಿ ಬಿಡುತ್ತಾರೆ ಈ ಜನರು. ಮಸೀದಿಯ ಮುಂದೆ ಅವರು ಬ್ಯಾಂಡು ಬಾರಿಸಿಕೊಂಡು ಹೋದರೆ ಮಸೀದಿಗೆ ಯಾವ ಕಳಂಕವೂ ತಟ್ಟುವುದಿಲ್ಲ. ಮಸೀದಿಯಲ್ಲಿ ಮಾಡಿದ ಪ್ರಾರ್ಥನೆ ಮತ್ತು ದೇವಸ್ಥಾನದಲ್ಲಿ ಮಾಡಿದ ಪೂಜೆ ಹೋಗಿ ಸೇರುವುದು ಏಕ ದೇವನೊಬ್ಬನಿಗೇ ಅಲ್ಲವಾ? ಹಿಂದೂ ಮುಸ್ಲಿಂ ಘರ್ಷಣೆಯಾದರೆ ನನಗೂ ನಿನಗೂ ಏನೂ ಆಗುವುದಿಲ್ಲ. ಆದರೆ ಬಡಜನರ ನೆತ್ತರು ಹರಿಯುತ್ತದೆ. ಆದುದರಿಂದ ಅವರು ಮಸೀದಿಯ ಮುಂದೆ ಬ್ಯಾಂಡ್ ಬಾರಿಸಿಕೊಂಡು ಮೆರವಣಿಗೆ ಹೊರಟರೆ ಮುಸ್ಲಿಮರು ಯಾವ ರೀತಿಯಲ್ಲೂ ಅಸಹನೆ ಪ್ರದರ್ಶಿಸಬಾರದು. ನೀನು ಮನಸ್ಸು ಮಾಡಿದರೆ ಇದು ಸಾಧ್ಯ” ಎಂದನು. ನವಾಜ್‍ನ ಹೊಗಳಿಕೆಯಿಂದ ಮಮ್ಮೂಟಿ ಉಬ್ಬಿ ಹೋದನು. ನವಾಜ್‍ನಂತಹ ಅಧಿಕಾರಿ ಕೂಡಾ ತನ್ನ ನೆರವನ್ನು ಬಯಸಿದವನಲ್ಲ? ಆತನ ಸುಳಿ 263 ಮುಖದಲ್ಲಿ ಮಂದಹಾಸ ಅರಳಿತು. “ಅಷ್ಟರ ಮಟ್ಟಿಗೆ ನನ್ನಲ್ಲಿ ನಿನಗೆ ವಿಶ್ವಾಸವಿದೆಯಲ್ಲಾ? ಆಗಲಿ ಮಗಾ, ನಾನಿದನ್ನು ಮಾಡುತ್ತೇನೆ, ಆದರೆ ನನ್ನ ಆಂಕೆಗೂ ಮೀರಿದ ಕೆಲವರಿದ್ದಾರೆ. ಅವರನ್ನು ಒಂದೆರಡು ದಿನಗಳ ಮಟ್ಟಿಗೆ ನಿನ್ನ ಅತಿಥಿಗಳಾಗಿಟ್ಟುಕೊ!” ಎಂದನು. ಮೆರವಣಿಗೆಯ ಮುನ್ನಾ ದಿನವೇ ನವಾಜ್ ಕೆಲವು ರೌಡಿಗಳನ್ನು ಬಂಧಿಸಿದನು. ಮಮ್ಮೂಟಿ ವಾಸುವನ್ನು ಮೊದಲು ಸಂಪರ್ಕಿಸಿದನು. ಬಳಿಕ ಊರವರನ್ನು ಕರೆದು ಮಸೀದಿಯಲ್ಲಿ ಸಭೆ ನಡೆಸಿ ಎಸ್. ಪಿ. ಸಾಹೇಬರ ಕೋರಿಕೆಯನ್ನು ಅವರಿಗೆ ತಿಳಿಸಿದನು. “ಅದೆಲ್ಲ ಸಾಧ್ಯವಿಲ್ಲ. ಮಸೀದಿಯ ಮುಂದೆ ಬ್ಯಾಂಡ್ ಬಾರಿಸಿಕೊಂಡು ಹೋಗಲು ನಾವು ಬಿಡುವುದಿಲ್ಲ” ಎಂದು ಒಂದಿಬ್ಬರು ಧ್ವನಿ ಎತ್ತಿರಿಸಿ ನುಡಿದರು. “ಹಾಗೇನಾದರೂ ಆದರೆ ಊರಿನಲ್ಲಿ ರಕ್ತಪಾತವಾಗುತ್ತದೆ. ಈ ರಕ್ತಪಾತವನ್ನು ತಡೆಯಲು ಎಸ್.ಪಿ. ಸಾಹೇಬರು ಕೇಳಿಕೊಂಡಿದ್ದಾರೆ. ಅವರು ನಮ್ಮೂರಿನವರು. ಅವರು ಇಲ್ಲಿರಲಿ. ಈ ಜನರು ಮೆರವಣಿಗೆ ಹೊರಟಾಗ ನಾವೆಲ್ಲರೂ ಕಂಡು ಕಾಣದಂತಿರಬೇಕು. ಅಹಂಕಾರಕ್ಕೆ ಉದಾಸೀನ ಮದ್ದು. ಏನು ಹೇಳ್ತೀರಿ?” ಎಂದು ಮಮ್ಮೂಟಿ ಕೇಳಿದನು. ಮಮ್ಮೂಟಿ ಹಾಜಾರರ ಮಾತಿಗೆ ವಿರೋಧ ಸೂಚಿಸುವವರು ಅಲ್ಲಿ ಯಾರೂ ಇರಲಿಲ್ಲ. “ಹಾಜಾರರು ಹೇಳುವುದೇ ಸರಿ. ಹಾಗೆಯೇ ಮಾಡುವಾ” ಎಂದರು ಎಲ್ಲರೂ. ಮರುದಿನ ಊರಿನ ಮಧ್ಯಭಾಗದ ಮುಖ್ಯ ಬೀದಿಯಲ್ಲಿ ಮೆರವಣಿಗೆ ಸಾಗಿತು. ಮಸೀದಿಯ ಮುಂದುಗಡೆ ಜನ ಸಮೂಹವಿಲ್ಲದೆ ನಿರ್ಜನವಾಗಿತ್ತು. ಅಕ್ಕಪಕ್ಕದ ಅಂಗಡಿಗಳ ವ್ಯಾಪಾರಸ್ಥರು ತಮ್ಮ ತಮ್ಮ ವ್ಯವಹಾರದಲ್ಲಿ ಮುಳುಗಿದ್ದರು. ಅಂದು ಯಾವ ರೀತಿಯ ಅಹಿತಕರ ಘಟನೆಯೂ ನಡೆಯದೆ ಊರವರು ಸಮಾಧಾನದ ನಿಟ್ಟುಸಿರು ಬಿಟ್ಟರು. ಎರಡು ದಿನಗಳಿಂದ ನಿದ್ದೆಗೆಟ್ಟಿದ್ದ ನವಾಜ್ ಆ ರಾತ್ರಿ ಕಣ್ತುಂಬ ನಿದ್ರೆ ಮಾಡಿದನು. ಮರುದಿನದಿಂದ ಊರಿನ ಕೋಮುವಾದಿಗಳಲ್ಲದ ಹಿಂದೂ ಮುಸ್ಲಿಮರೆಲ್ಲರೂ ಎಂದಿನಂತೆಯೇ ಸೌಹಾರ್ದದಿಂದಲೇ ಬದುಕತೊಡಗಿದರು. ಮುಸ್ಲಿಮರ ಸಹನೆಯ ಕುರಿತು ಹಿಂದುಗಳಿಂದ ಹೊಗಳಿಕೆಯೂ ಕೇಳಿ ಬಂತು. “ಮುಸ್ಲಿಮರ ಸಹನೆಯನ್ನು ಮೆಚ್ಚಬೇಕಾದದ್ದೆ. ಅವರೇನಾದರೂ ಸಹನೆ ಕಳೆದುಕೊಂಡಿದ್ದರೆ ಇಂದು ಇಡೀ ಊರು ಹೊತ್ತಿಕೊಂಡು ಉರಿಯುತ್ತಿತ್ತು! ಈ 264 ಸುಳಿ ಕೋಮುವಾದಿಗಳ ತಂತ್ರ ಫಲಿಸಲಿಲ್ಲ. ಅದೇ ಸಂತೋಷದ ವಿಷಯ” ಎಂದು. * * * * * ಮಮ್ಮೂಟಿ ಚುನಾವಣೆಯಲ್ಲಿ ಗೆದ್ದು ಶಾಸಕನಾದನು. ಬಹು ದಿನಗಳ ಆತನ ಕನಸು ನನಸಾಯಿತು. ಆದರೆ ಅವನ ಪಕ್ಷಕ್ಕೆ ಬಹುಮತ ದೊರೆಯದ ಕಾರಣ ಮಂತ್ರಿಯಾಗುವ ಅವಕಾಶ ಅವನಿಗೆ ದೊರೆಯಲಿಲ್ಲ. ಮೊತ್ತ ಮೊದಲ ಅಧಿವೇಶನಕ್ಕೆ ಆತನು ರಾಜಧಾನಿಗೆ ತೆರಳುವ ಮೊದಲೊಮ್ಮೆ ನವಾಜ್‍ನನ್ನು ಭೇಟಿ ಮಾಡಿ ಚುನಾವಣೆ ಸಮರ್ಪಕವಾಗಿ ನಡೆದದ್ದಕ್ಕೆ ಕೃತಜ್ಞತೆಯರ್ಪಿಸಿದನು. ಚುನಾವಣೆಯಲ್ಲಿ ಜಯ ಗಳಿಸಿದ್ದಕ್ಕೆ ನವಾಜ್ ಆತನನ್ನು ಅಭಿನಂದಿಸಿದನು. ಬಳಿಕ ನಗುತ್ತಾ ಮಮ್ಮೂಟಿಯೊಡನೆ, “ವಿಧಾನಸಭಾ ಸದಸ್ಯನಾದೆಯಲ್ಲ ಮಮ್ಮೂಟೀ? ಇನ್ನೂ ಮುಂದಿನ ನಿನ್ನ ಗುರಿಯೇನು? ಅಲ್ಲಿಗೆ ಹೋಗಿ ಏನು ಮಾಡಬೇಕೂಂತಿದ್ದೀಯಾ?” ಎಂದು ತಮಾಷೆಗೆಂಬಂತೆ ಕೇಳಿದನು. “ಅಲ್ಲಿ ಚರ್ಚಿಸುವುದಕ್ಕೆ ಬೇಕಾದಷ್ಟು ವಿಷಯಗಳಿವೆ. ಮುಖ್ಯವಾದ ವಿಷಯವೆಂದರೆ ನಮ್ಮ ಶರಿಯತ್ ಮತ್ತು ವ್ಯಕ್ತಿ ನಿಯಮದ ರಕ್ಷಣೆ!” ಎಂದನು ಮಮ್ಮೂಟಿ. ನವಾಜ್ ಅವಾಕ್ಕಾದನು. ಬಳಿಕ ಸಾವರಿಸಿಕೊಂಡು ನಿಧಾನವಾಗಿ, “ಅಲ್ಲ ಮಮ್ಮೂಟೀ, ಶರಿಯತ್ ಎಂದರೇನು?” ಎಂದು ಏನೂ ತಿಳಿಯದಂತೆ ಕೇಳಿದನು. ಮಮ್ಮೂಟಿ ತಬ್ಬಿಬ್ಬಾದನು. ಬಳಿಕ ತಲೆ ತಗ್ಗಿಸಿಕೊಂಡು, “ನಮ್ಮ ಧರ್ಮ” ಎಂದನು. “ಧರ್ಮ ಎಂದರೆ?” “ನಮ್ಮ ಇಸ್ಲಾಂ ಧರ್ಮದ ರಕ್ಷಣೆ. ನಮ್ಮ ನಾಲ್ಕು ಮದುವೆ, ತಲಾಖ್ ಪದ್ಧತಿ ಎಲ್ಲವನ್ನೂ ನಿಲ್ಲಿಸಿ ಬಿಟ್ಟು ನಾವೆಲ್ಲರೂ ಹಿಂದೂಗಳ ನಿಯಮ ಪಾಲಿಸಬೇಕಂತೆ. ಇದನ್ನೆಲ್ಲ ಒಪ್ಪಿಕೊಳ್ಳುವುದು ಸಾಧ್ಯವಾ?” ಕ್ಷಣ ಕ್ಷಣಕ್ಕೂ ಮಮ್ಮೂಟಿಯ ಧ್ವನಿ ಏರುತ್ತಿತ್ತು. “ನಿಲ್ಲು, ಹಾಗೆ ಬಿಸಿಯಾಗಬೇಡ. ಇದೆಲ್ಲ ಸುಳ್ಳು ಸುದ್ದಿಗಳು. ನಮ್ಮ ನಿಯಮಗಳನ್ನು ನಮ್ಮ ಒಪ್ಪಿಗೆ ಇಲ್ಲದೆ ಯಾರೂ ಬದಲಾಯಿಸಲಾರರು. ಅದಿರಲಿ. ಧರ್ಮ ಎಂದರೆ ಇಷ್ಟೇ ಏನು? ಒಂದು ಹೆಣ್ಣಿಗೆ ವಿನಾ ಕಾರಣ ತಲಾಖ್ ನೀಡಿ ಆಕೆ ಮತ್ತು ಮಕ್ಕಳನ್ನು ನಿರ್ಗತಿಕರಾಗಿಸಿ ಬೀದಿಗಟ್ಟಿ ಆತನು ಇನ್ನೊಬ್ಬ ಚಿಕ್ಕ ಹುಡುಗಿಯನ್ನು ಮದುವೆಯಾಗುವುದು ಧರ್ಮವೇ? ನನ್ನ ಅಧಿಕಾರಾವಧಿಯಲ್ಲಿ ಸುಳಿ 265 ಇಂತಹ ಎಷ್ಟೋ ಹೆಣ್ಣು ಮಕ್ಕಳು ಬದುಕಲು ಬೇರೆ ದಾರಿ ಇಲ್ಲದೆ ಸೂಳೆಯರಾದುದನ್ನು ನಾನು ಸ್ವತಃ ಕಂಡಿದ್ದೇನೆ. ಧರ್ಮ ರಕ್ಷಣೆ ಎಂದರೆ ಇಂತಹ ನಿಯಮವನ್ನು ರಕ್ಷಿಸುವುದು ಎಂದರ್ಥವೇ?” “ಅಂತಹ ಹೆಣ್ಣು ಮಕ್ಕಳಿಗಾಗಿ ಅನಾಥಾಶ್ರಮ ಸ್ಥಾಪಿಸುವಾ.” ಸುಲಭದ ಪರಿಹಾರವನ್ನು ಸೂಚಿಸಿದನು ಮಮ್ಮೂಟಿ. “ಆಗ ನಮ್ಮ ಇಂತಹ ಗಂಡಸರಿಗೆ, ತೂಕಡಿಸುವವನಿಗೆ ಹಾಸಿಗೆ ಹಾಸಿಕೊಟ್ಟಂತಾಗುತ್ತದೆ. ಅನಾಥಾಶ್ರಮ ತುಂಬುತ್ತದಷ್ಟೆ.” “ಹಾಗಾದರೆ ಏನು ಮಾಡಬೇಕೆನ್ನುತ್ತೀ?” ನಿರುಪಾಯನಾಗಿ ಕೇಳಿದನಾತ. “ಏನೂ ಮಾಡುವುದು ಬೇಡ. ಅತ್ಯುತ್ತಮ ನಿಯಮಗಳು ಇಸ್ಲಾಂ ಧರ್ಮದ್ದಾಗಿದ್ದರೂ ಈ ನಿಯಮಗಳ ದುರ್ಬಳಕೆಯಾಗುತ್ತಿದೆ. ಈ ದುರ್ಬಳಕೆಯನ್ನು ತಡೆಗಟ್ಟುವಂತೆ ನಮ್ಮ ನಿಯಮಗಳಲ್ಲಿ ಬದಲಾವಣೆ ತರಬೇಕು. ನಮ್ಮ ಶರಿಯತ್ ಎಂದರೆ ನಾವು ಮಾನವೀಯ ಅನುಕಂಪವುಳ್ಳ ಒಳ್ಳೆಯ ಮನುಷ್ಯರಾಗಿ, ಪ್ರಾಮಾಣಿಕರಾಗಿ, ಸತ್ಯಸಂಧರಾಗಿ ಬದುಕಬೇಕೆಂದು, ಆ ರೀತಿ ಬದುಕಲು ಪೈಗಂಬರರು ಹಾಕಿ ಕೊಟ್ಟ ಮಾರ್ಗ ಸೂಚಿ ಎನ್ನಬಹುದು. ಅದೆಲ್ಲ ಇರಲಿ, ನಾನು ಒಂದೇ ಒಂದು ಪ್ರಶ್ನೆ ಕೇಳುತ್ತೇನೆ. ಉತ್ತರ ಹೇಳುವೆಯಾ?” “ಏನು?” “ಎಲ್ಲ ವಿಧದ ಸಾಮಾಜಿಕ ಅನಿಷ್ಟಗಳನ್ನೂ ಪೈಗಂಬರರು ಕಟುವಾಗಿ ವಿರೋಧಿಸಿದ್ದಾರೆ. ಕುಡಿತ, ಜೂಜು, ವ್ಯಭಿಚಾರ ಮುಂತಾದುವುಗಳು. ಇಂತಹವುಗಳನ್ನು ಮಹಾಪಾಪವೆಂದೇ ಇಸ್ಲಾಂ ಧರ್ಮ ಪರಿಗಣಿಸುತ್ತದೆ. ಈಗ ಹೇಳು, ಧರ್ಮ ರಕ್ಷಣೆಯ ಮಾತುಗಳನ್ನಾಡುವ ಅಧಿಕಾರ ನಿನಗಿದೆಯೇ?” ಮಮ್ಮೂಟಿ ತಲೆ ತಗ್ಗಿಸಿ ಕುಳಿತನು. “ವ್ಯಕ್ತಿ ನಿಯಮ, ಮಂದಿರ ಮಸೀದಿ ಇವು ಯಾವುವೂ ನಮ್ಮ ಇಂದಿನ ಸಮಸ್ಯೆ ಅಲ್ಲವೇ ಅಲ್ಲವೆಂಬುದನ್ನು ನೆನಪಿಟ್ಟುಕೊ. ನಮ್ಮ ಜನರ ಅನಕ್ಷರತೆ ಮತ್ತು ಬಡತನ ಇಂದಿನ ನಮ್ಮ ದುರವಸ್ಥೆಗೆ ಕಾರಣ. ಜನಸಂಖ್ಯಾ ಸ್ಫೋಟ ಕೂಡಾ ನಮ್ಮ ದೊಡ್ಡ ಸಮಸ್ಯೆಯೇ. ನಮ್ಮ ಎಲ್ಲ ಜನರೂ ವಿದ್ಯಾವಂತರಾಗಿ ಎಲ್ಲರಿಗೂ ಬದುಕಲು ಒಂದು ಉದ್ಯೋಗವಿದ್ದರೆ ಈ ಬಡತನ ನಿವಾರಣೆಯಾಗುವುದಿಲ್ಲವೇ? ಒಂದೆರಡು ಮಕ್ಕಳ ಚಿಕ್ಕ ಕುಟುಂಬವಾದರೆ ನೆಮ್ಮದಿಯಿಂದ ಬದುಕಬಹುದಲ್ಲವಾ? ನೀನು ಶಾಸಕನಾಗಿ ಹೋಗುತ್ತಿರುವುದರಿಂದ ನಾನಿದನ್ನು ಹೇಳುತ್ತಿದ್ದೇನೆ. ಅಲ್ಲಿ ನೀನು ಯಾವ ಧರ್ಮವನ್ನೂ ರಕ್ಷಿಸುವುದು 266 ಸುಳಿ ಬೇಡ. ಎಲ್ಲ ಹಳ್ಳಿಗಳ ಎಲ್ಲ ಮಕ್ಕಳಿಗೂ ವಿದ್ಯೆ ದೊರೆಯುವಂತೆ, ಗೌರವಯುತವಾಗಿ ಬಾಳುವಂತಹ ಉದ್ಯೋಗ ಎಲ್ಲರಿಗೂ ದೊರಕುವಂತೆ ಪ್ರಯತ್ನಿಸು. ನಮಗಿಂದು ಬೇಕಾದ ಧರ್ಮ ಇದೇ ಎಂದು ನೆನಪಿಟ್ಟುಕೊಂಡರೆ ಸಾಕು.” ಎಂದನು. * * * * * ಮಮ್ಮೂಟಿ ಶಾಸಕನೇನೊ ಅದನು. ಆದರೆ ತನ್ನ ಮಗನಿನ್ನು ಮೊದಲಿನಂತಾಗುತ್ತಾನೆಯೇ ಎಂಬ ಚಿಂತೆ ಆತನನ್ನು ಹಗಲಿರುಳೂ ಕಾಡುತ್ತಿತ್ತು. ಇತ್ತೀಚೆಗೆ ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮದ ಕುರಿತು ಒಂದೆರಡು ಚಲನಚಿತ್ರಗಳನ್ನು ನೋಡಿದ ಬಳಿಕ ಆತನಿಗೆ ಬಹಳ ಪಶ್ಚಾತ್ತಾಪವಾಗತೊಡಗಿತ್ತು. ಮಗನ ದುರವಸ್ಥೆ ಕಂಡು ಈಗಾಗಲೇ ಕುಗ್ಗಿ ಹೋಗಿದ್ದ ಆತನಿಗೆ ಈ ಚಿತ್ರಗಳನ್ನು ನೋಡಿ ಕೈ ಕೈ ಹಿಸುಕಿಕೊಳ್ಳುವಂತಾಯಿತು. ಹೋದ ಹಾದಿಯಲ್ಲಿ ಹಿಂತಿರುಗಿ ಬರುವುದು ಅಸಾಧ್ಯ. ಆದರೆ ಇಲ್ಲಿಗೇ ಇದನ್ನು ನಿಲ್ಲಿಸಲು ಸಾಧ್ಯವೇ ಎಂಬ ಕುರಿತ ಆತನ ಚಿಂತೆ ಬಲವಾಯಿತು. ಶಾಸಕನಾದೊಡನೆ ಆತನು ರಾಜಧಾನಿಗೆ ಹೋಗಿ ಮಂತ್ರಿಗಳ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡು ಊರಿಗೆ ಮರಳಿದ್ದನು. ಈಗಂತೂ ಆತನಿಗೆ ಆಗಾಗ ನವಾಜ್‍ನ ಬಳಿ ಕುಳಿತು ಕೊಂಚ ಹೊತ್ತು ಮಾತನಾಡಿ ಬರುವುದು ಒಂದು ಹವ್ಯಾಸವೇ ಆದಂತಾಗಿತ್ತು. ಇಂತº ಒಂದು ಸಂದರ್ಭದಲ್ಲಿ ಆತನು ಮುನೀರ್‍ನ ವಿಷಯವನ್ನು ನವಾಜ್‍ಗೆ ತಿಳಿಸುತ್ತಾ. “ಈ ಮಾದಕ ದ್ರವ್ಯ ನನ್ನ ಮಗನನ್ನೇ ಬಲಿ ತೆಗೆದುಕೊಳ್ಳಬಹುದೆಂದು ನಾನು ಕನಸಿನಲ್ಲೂ ಎಣಿಸಿರಲಿಲ್ಲ. ಈಗ ನಾನೇನು ಮಾಡಲಿ? ಅವನನ್ನು ಈ ಚಟದಿಂದ ಬಿಡಿಸುವ ಹಾದಿಯೇನಾದರೂ ಇದೆಯೇ?” ಎಂದು ಕೇಳಿದನು. “ಯಾರಾದರೂ ಡಾಕ್ಟರಿಗೆ ತೋರಿಸಿದೆಯಾ?'' ``ಒಮ್ಮೆ ಡಾಕ್ಟರಿಗೆ ತೋರಿಸಿ ಅವರ ಬಳಿಯೇ ಬಿಟ್ಟು ಬಂದೆ. ನಾಲ್ಕೇ ದಿನಗಳಲ್ಲಿ ಅಲ್ಲಿಂದ ಓಡಿ ಹೋದ. ಆಮೇಲೆ ಆ ಪ್ರಯತ್ನ ಮಾಡಲು ಅವನು ಕೈಗೆ ಸಿಕ್ಕಿದರೆ ತಾನೇ?” “ಹಾಗೆಂದರೆ ಹೇಗೆ? ಅವನನ್ನು ಹುಡುಕಿಸಿ ತಜ್ಞ ವೈದ್ಯರ ಬಳಿ ಚಿಕಿತ್ಸೆ ಮಾಡಿಸು. ನಾನೊಂದು ವಿಳಾಸ ಕೊಡುವೆ. ನೀನು ಮುನೀರ್‍ನನ್ನು ಅವರಲ್ಲಿಗೆ ಕರೆದುಕೊಂಡು ಹೋಗು” ಎನ್ನುತ್ತಾ ವೈದ್ಯರೊಬ್ಬರ ವಿಳಾಸವನ್ನು ನೀಡಿದನು ಬಳಿಕ ನಿಧಾನವಾಗಿ. “ಮಮ್ಮೂಟೀ, ನಾನೊಂದು ಮಾತು ಹೇಳಲಾ?” ಎಂದು ಕೇಳಿದನು. ಸುಳಿ 267 ‘ಏನು’ ಎಂಬಂತೆ ಮಮ್ಮೂಟಿ ಆತನ ಮುಖ ನೋಡಿದನು. “ನೀನು ಈವರೆಗೆ ಬಹಳಷ್ಟು ಸಂಪಾದಿಸಿದೆ. ಸಂಪಾದನೆ ಮಾತ್ರ ಮುಖ್ಯವಲ್ಲ ಎಂಬುದನ್ನು ನಿನ್ನ ಮಕ್ಕಳು ತೋರಿಸಿಕೊಟ್ಟರು. ಐಶ್ವರ್ಯದಿಂದ ಬದುಕಿನಲ್ಲಿ ನೀನು ಕೆಲವನ್ನು ಪಡೆದುಕೊಂಡಂತೆ ಕೆಲವನ್ನು ಕಳೆದುಕೊಂಡೆ. ಇರಲಿ. ಈಗ ನಾನೊಂದು ಸಲಹೆ ನೀಡಲಾ?” “ಹೇಳು ಮಗಾ. ಎಲ್ಲರೂ ನನ್ನ ಬಳಿ ಉಂಡು ತೇಗಿದರು. ಹಿಂದಿನಿಂದ ಆಡಿಕೊಂಡು ನಕ್ಕವರೂ ಇದ್ದರು. ಆದರೆ ಈವರೆಗೆ ಹಿತೈಷಿಯಾಗಿ ಸಲಹೆ ನೀಡಿದವರು ಮಾತ್ರ ಯಾರೂ ಇಲ್ಲ. ನಿಮ್ಮ ಹಾಗೆ ನನ್ನ ಮಕ್ಕಳಾದರೂ ವಿದ್ಯಾವಂತರಾಗಬೇಕೆಂದು ಹಂಬಲಿಸಿದೆ. ಅದೂ ಈಡೇರಲಿಲ್ಲ. ಹೇಳು. ನಾನೇನು ಮಾಡಲಿ?” ನವಾಜ್ ಕ್ಷಣಕಾಲ ಹೇಳಲೊ ಬೇಡವೊ ಎಂಬಂತೆ ಆತನ ಮುಖವನ್ನು ದಿಟ್ಟಿಸಿ ಬಳಿಕ, “ಈ ವರೆಗೆ ನೀನು ಹುಲಿ ಸವಾರಿ ಮಾಡಿದೆ. ಈಗ ಅದರಿಂದ ಕೆಳಗೆ ಧುಮುಕುವುದು ಸುಲಭದ ಮಾತೇನೂ ಅಲ್ಲ. ಆದರೂ... ಅದರಿಂದ ಕೆಳಗಿಳಿ” ಎಂದನು. “ಕೆಳಗಿಳಿದೊಡನೆ ಹುಲಿ ಅಟ್ಟಿಸಿಕೊಂಡು ಬರಲಾರದೇ?” “ಆಗ ನಾವೆಲ್ಲ ಇಲ್ಲವಾ? ನೀನು ಇನ್ನೂ ಸಂಪಾದಿಸಬೇಕಾದ ಅಗತ್ಯವೇನೂ ಇರಲಾರದು. ಈಗ ಶಾಸಕ ಬೇರೆ ಆಗಿದ್ದೀಯಾ. ನಿನ್ನ ಕೊನೆಯ ಮಗನಿಗೆ ಬಟ್ಟೆಯಂಗಡಿ ಕೂಡಾ ಪ್ರಾರಂಭಿಸಿದ್ದೀಯಂತಲ್ಲಾ? ಗೌರವದ ಸಂಪಾದನೆಗೊಂದು ಹಾದಿಯೂ ಆಯಿತು. ಈಗ ನೀನೊಂದು ಒಳ್ಳೆಯ ಕೆಲಸವನ್ನು ಮಾಡಬಹುದು. ನಿನಗೆ ಹಣವೂ ದೊರೆಯುತ್ತದೆ.” “ಏನುದು?” “ಬಹಳ ದೊಡ್ಡ ಮೊತ್ತದ ಮಾಲು ಬಂದಾಗ ನಮಗೆ ಮಾಹಿತಿ ಕೊಟ್ಟು ಬಿಡು. ಅದರ ಒಂದು ಭಾಗವನ್ನು ಈಗ ಸುಳಿವು ನೀಡಿದವರಿಗೆ ಕೊಡಲಾಗುತ್ತದೆ. ಆ ಹಣವನ್ನು ಪಡೆದುಕೊಂಡು ಮುಂದೆ ಈ ವ್ಯವಹಾರವನ್ನು ನಿಲ್ಲಿಸಿ ಬಿಡು” ಎಂದನು. ಮಮ್ಮೂಟಿ ಮೌನ ವಹಿಸಿದನು. ಕೊನೆಗೆ ಎದ್ದು ಹೊರಡಲನುವಾದಾಗ ‘ನೋಡುವಾ, ನೀನು ಹೇಳಿದ್ದನ್ನು ನಾನು ಯೋಚಿಸುತ್ತೇನೆ” ಎಂದನು. ಕೆಲವು ದಿನಗಳವರೆಗೆ ಮಮ್ಮೂಟಿಯ ಮನ ತೂಗುಯ್ಯಾಲೆಯಾಡಿತು. ಈ ರೀತಿ ಸುಳಿವು ನೀಡಿ ದಕ್ಕಿಸಿಕೊಳ್ಳುವುದು ಸುಲಭದ ಮಾತೇನೂ ಅಲ್ಲ. 268 ಸುಳಿ ಆದರೂ ತಾನು ಇನ್ನೂ ಎಷ್ಟು ದಿನ ಈ ಸುಳಿಯಲ್ಲಿ ಸುತ್ತುವುದು? ಶಾಸಕನಾದ ಮೇಲೆ ಸಿಕ್ಕಿ ಬಿದ್ದರಂತೂ ದೇಶಾದ್ಯಂತ ಸುದ್ದಿಯಾದೀತು. ಈಗ ಇದರಿಂದ ಹೊರ ಬರಲು ನವಾಜ್ ಹಾದಿ ತೋರಿಸುತ್ತಿದ್ದಾನೆ. ತನ್ನ ಹಿಂದೆ ನವಾಜ್ ಇದ್ದೇ ಇರುತ್ತಾನೆ.. ಕೆಲವು ದಿನಗಳವರೆಗೆ ಅನಿಶ್ಚಿತತೆಯಲ್ಲಿ ತೊಳಲಾಡಿದ ಮನಸ್ಸು ಕೊನೆಗೂ ಒಂದು ನಿರ್ಧಾರ ತಳೆಯಿತು. * * * * * ಇದಾಗಿ ಒಂದೆರಡು ವಾರಗಳ ಬಳಿಕ ಒಂದು ರಾತ್ರಿ ಮಮ್ಮೂಟಿ ನವಾಜ್‍ನ ನಿವಾಸಕ್ಕೆ ದೂರವಾಣಿ ಕರೆ ಮಾಡಿ, “ನಿನ್ನೊಡನೆ ಅಗತ್ಯವಾಗಿ ಮಾತನಾಡಬೇಕು. ಈಗ ಬರಲಾ?” ಎಂದು ಕೇಳಿದನು. “ಬೆಳಿಗ್ಗೆ ಆಫೀಸಿಗೆ ಬಂದರೆ ಒಳ್ಳೆಯದಲ್ಲವಾ?” ನವಾಜ್ ಕೇಳಿದನು. “ಮಗಾ, ಈಗ ನಿನ್ನ ಮನೆಯಲ್ಲಿ ನನ್ನನ್ನು ನೋಡಿದವರಾರೂ ಅನುಮಾನ ಪಡಲಾರರು. ನಾನೀಗ ಓರ್ವ ಶಾಸಕ!” ಎಂದು ನಗುತ್ತಾ ನುಡಿದು, “ಇದು ತುಂಬಾ ಅರ್ಜೆಂಟ್” ಎಂದನು. “ಆಗಲಿ, ಬಾ.” ನವಾಜ್ ರಿಸೀವರ್ ಕೆಳಗಿಟ್ಟನು. ಮಮ್ಮೂಟಿ ಬಂದೊಡನೆ ಆತನನ್ನು ಒಳ ಕೋಣೆಗೆ ಕರೆದೊಯ್ಯುತ್ತಾ “ಹೇಗಿದ್ದಾನೆ ನಿನ್ನ ಮಗ” ಎಂದು ಕೇಳಿದನು. “ಅವನನ್ನು ಹುಡುಕಿ ತಂದು ನೀನು ಹೇಳಿದ ವೈದ್ಯರ ಬಳಿ ಬಿಟ್ಟಿದ್ದೇನೆ. ಈಗ ಪರವಾಗಿಲ್ಲ. ಅಲ್ಲಿಂದ ಓಡಿ ಹೋಗಿಲ್ಲ. ಅದೇ ಸಮಾಧಾನ” ಎನ್ನುತ್ತಾ ಧ್ವನಿ ತಗ್ಗಿಸಿ ಮಾತಿಗಾರಂಭಿಸಿದನು. “ನೀನು ಒಂದು ವಿಷಯ ಹೇಳಿದ್ದೆಯಲ್ಲ ಮಗಾ? ನಾನು ಅದೇ ತೀರ್ಮಾನ ಕೈಗೊಂಡಿದ್ದೇನೆ. ನೀನು ಹೇಳಿದೆಯಲ್ಲ ಸುಳಿವು ನೀಡಬೇಕೆಂದು? ನಾಳೆ ರಾತ್ರಿ ಐದು ಕೋಟಿಯ ಬಿಸ್ಕಟ್ ಬರಲಿದೆ....” ನವಾಜ್‍ನ ಕಿವಿ ನೆಟ್ಟಗಾಯಿತು. ಆತ ಉದ್ವೇಗದಿಂದ, “ಹಾಂ... ಎಲ್ಲಿ? ಎಲ್ಲಿ ಇಳಿಯಲಿದ್ದಾರೆ?”ಎಂದು ಕೇಳಿದನು. “ಚಂದ್ರಗಿರಿಯಿಂದ ಶರಾವತಿಯ ನಡುವೆ ಎಲ್ಲೂ ಆಗಬಹುದು. ಇದರ ರಹಸ್ಯ ಕಾಪಾಡುವ ಹೊಣೆ ನಿನ್ನದು. ಈ ಮಾಹಿತಿ ನನ್ನಿಂದ ದೊರೆಯಿತೆಂಬ ರಹಸ್ಯ ಎಲ್ಲೂ ಹೊರ ಬೀಳಬಾರದು. ಹಾಗೇನಾದರೂ ಆದರೆ ನನ್ನ ಪ್ರಾಣಕ್ಕೆ ಸಂಚಕಾರ...” ಎನುತ್ತಿದ್ದಂತೆ ನವಾಜ್ ನಡುವೆಯೇ ತಡೆದು, ಸುಳಿ 269 “ನನ್ನ ಪ್ರಾಣ ಕೊಟ್ಟಾದರೂ ನಿನ್ನ ಪ್ರಾಣ ಕಾಪಾಡುವೆ. ಏನೂ ಹೆದರಬೇಡ” ಎಂದು ಭರವಸೆ ನೀಡಿದನು. “ನಾಳೆ ಸಂಜೆಯೊಳಗೆ ನಿಶ್ಚಿತ ಸ್ಥಳ ತಿಳಿಸುವೆ” ಎನ್ನುತ್ತಾ ಮಮ್ಮೂಟಿ ಹೊರಟು ಹೋದನು. ಇದಾದ ನಾಲ್ಕನೇಯ ದಿನ ಪತ್ರಿಕೆಗಳ ಮುಖಪುಟದಲ್ಲಿ ಒಂದು ಸುದ್ದಿ ಪ್ರಕಟವಾಯಿತು. “ಐದು ಕೋಟಿ ರೂಪಾಯಿ ಬೆಲೆ ಬಾಳುವ ಚಿನ್ನದ ಬಿಸ್ಕಟ್ಟುಗಳು ಪೊಲೀಸರ ವಶಕ್ಕೆ! ಕಾರನ್ನು ಅಲ್ಲಿಯೇ ಬಿಟ್ಟು ಡ್ರೈವರ್ ಪರಾರಿ!” * * * * * ನಿರಾಯಾಸವಾಗಿ ಕೈಗೆ ಹಣ ದೊರೆತರೂ ಮಮ್ಮೂಟಿಯ ಎದೆಯಾಳದಲ್ಲಿ ಯಾವುದೊ ಒಂದು ಭಯ ಕಾಡುತ್ತಲೇ ಇತ್ತು. ನವಾಜ್ ಮಾತ್ರ ಆತನನ್ನು ಕರೆಸಿ ಆತನಿಗೆ ಧೈರ್ಯ ತುಂಬಿ ಕೆಲವು ಸಲಹೆಗಳನ್ನು ನೀಡಿದನು. “ಸಂಜೆಯಾದ ಬಳಿಕ ಮನೆಯಿಂದ ಹೊರಗಿಳಿಯಬೇಡ. ಕಾವಲುಗಾರನನ್ನು ತುಂಬಾ ಎಚ್ಚರದಿಂದಿರಲು ಹೇಳು. ಒಬ್ಬನೇ ಕಾರು ಡ್ರೈವ್ ಮಾಡಿಕೊಂಡು ಎಲ್ಲಿಗೂ ಹೋಗಬೇಡ. ನಿನ್ನ ಡ್ರೈವರ್ ಸದಾ ನಿನ್ನ ಜೊತೆಯಲ್ಲಿರಲಿ. ಪಿಸ್ತೂಲನ್ನು ಯಾವಾಗಲೂ ಪಕ್ಕದಲ್ಲಿಟ್ಟುಕೊಂಡಿರು. ಅಪರಿಚಿತ ಜನರೊ ಅಪರಿಚಿತ ಕಾರೊ ಮನೆಯ ಬಳಿ ಕಂಡರೆ ಕೂಡಲೇ ನನಗೆ ಫೋನ್ ಮಾಡು” ಎಂದನು. ಕೊನೆಗೆ, “ಹೇಗೂ ಶಾಸಕನಾಗಿದ್ದಿಯಾ, ಸರಕಾರದಿಂದ ಓರ್ವ ಅಂಗರಕ್ಷಕನನ್ನೂ ಮಂಜೂರು ಮಾಡಿಸಿಕೊ” ಎಂದೂ ಸೇರಿಸಿದನು. ನವಾಜ್ ಮಮ್ಮೂಟಿಯ ಮನೆಯ ದೂರವಾಣಿಯನ್ನು ಟ್ಯಾಪ್ ಮಾಡಿ ಆತನಿಗೆ ಎಲ್ಲೆಲ್ಲಿಂದ ಎಂತೆಂತಹ ಕರೆಗಳು ಬರುತ್ತವೆ ಎಂಬ ಕುರಿತೂ ಮಾಹಿತಿ ಸಂಗ್ರಹಿಸ ತೊಡಗಿದನು. ಇನ್ನು ಕೆಲವೇ ದಿನಗಳಲ್ಲಿ ವಿಧಾನ ಸಭೆಯ ಅಧಿವೇಶನ ನಡೆಯಲಿರುವುದರಿಂದ ಮಮ್ಮೂಟಿ ರಾಜಧಾನಿಗೆ ತೆರಳುವ ಸಿದ್ಧತೆ ನಡೆಸ ತೊಡಗಿದನು. ಆ ದಿನ ಮಮ್ಮೂಟಿಯ ಮನೆಯ ದೂರವಾಣಿ ಟ್ರಿಣ್ ಗುಟ್ಟಿದಾಗ ಮಮ್ಮೂಟಿ ರಿಸೀವರ್ ಕೈಗೆತ್ತಿಕೊಂಡನು. ಅತ್ತ ಕಡೆಯಿಂದ ವಾಸುವಿನ ಧ್ವನಿ ತೇಲಿ ಬಂತು. “ಹಾಜಾರೇ, ಜಾಗ್ರತೆ ಮಾಡಿಕೊಳ್ಳಿ. ಈ ಸುಳಿವು ನೀಡಿದವರು ನೀವೇ ಇರಬಹುದೆಂದು ಅವರಿಗೆ ಸಂದೇಹ ಬಂದಿದೆ.” ಮಮ್ಮೂಟಿ ಬೆಚ್ಚಿದನು. ಭಯದಿಂದ ಕೈ ಕಂಪಿಸಿತು. “ಅದು ಹೇಗೆ 270 ಸುಳಿ ಹೇಳ್ತಾರೆ?” ಭಯವನ್ನು ಮರೆಮಾಚುತ್ತಾ ಆದಷ್ಟು ಧೈರ್ಯ ತಂದುಕೊಂಡು ಕೇಳಿದನು. “ಅವರಿಗೆ ಅವರದೇ ಆದ ಮೂಲಗಳಿರುತ್ತವೆ. ಪೊಲೀಸ್ ಸ್ಟೇಶನ್ನಿನಲ್ಲೇ ಅವರ ಗುಲಾಮರಿರಬಹುದು! ನೀವು ಆದಷ್ಟು ಬೇಗನೆ ರಾಜಧಾನಿಗೆ ಹೊರಟು ಬಿಡಿ.” ವಾಸು ಸಲಹೆ ನೀಡಿದನು. “ಹೂಂ... ಆಗಲಿ. ನಾಳೇನೇ ಹೊರಟು ಬಿಡ್ತೇನೆ” ಎನ್ನುತ್ತಾ ಲೈನನ್ನು ಕಡಿತಗೊಳಿಸಿ ನವಾಜ್‍ನ ಕಛೇರಿಯ ನಂಬರ್ ತಿರುಗಿಸಿದನು. ಪೊಲೀಸ್ ಪೇದೆಯೊಬ್ಬನು ರಿಸೀವರ್ ಎತ್ತಿಕೊಂಡು “ಹಲೊ” ಎಂದನು. “ಎಸ್‍ಪಿ. ಸಾಹೇಬರಿದ್ದಾರಾ?” “ಇನ್ನೂ ಆಫೀಸಿಗೆ ಬಂದಿಲ್ಲ. ತಾವು ಯಾರು?” “ಅವರು ಬಂದರೆ ಮಮ್ಮೂಟಿ ಹಾಜಿ ಫೋನ್ ಮಾಡಿದ್ದರೆಂದು ತಿಳಿಸಿ” ಎನ್ನುತ್ತಾ ನವಾಜ್‍ನ ಮನೆಯ ನಂಬರ್ ತಿರುಗಿಸಿದನು. ನವಾಜ್‍ನ ಹೆಂಡತಿ ರಿಸೀವರ್ ಎತ್ತಿಕೊಂಡಳು. “ನವಾಜ್ ಇಲ್ಲವಾ?” “ಇಲ್ಲ. ಈಗ ತಾನೇ ಹೋದರು.” ಮಮ್ಮೂಟಿ ರಿಸೀವರ್ ಕೆಳಗಿಡುತ್ತಿದ್ದಂತೆ ಗೇಟಿನ ಹೊರಗೆ ಪರಿಚಿತವಲ್ಲದ ಕಾರಿನ ಹಾರ್ನ್ ಕೇಳಿಸಿತು. ಮಹಡಿಯ ಕಿಟಕಿಯ ಪರದೆಯೆಡೆಯಿಂದಲೇ ಮಮ್ಮೂಟಿ ಇಣುಕಿ ನೋಡಿದನು. ಪರಿಚಿತವಲ್ಲದ ಕಾರು. ಅಪರಿಚಿತನೊಬ್ಬನು ಕಾರಿನಿಂದಿಳಿದು ಕಾವಲುಗಾರನೊಡನೆ ಏನೊ ಕೇಳುತ್ತಿದ್ದನು. ಕಾವಲುಗಾರನು ಆತನೊಡನೆ ಮಾತನಾಡುತ್ತಿದ್ದನು. ಕೊಂಚ ಹೊತ್ತಿನಲ್ಲಿ ಆತನು ಕಾರು ಹತ್ತಿ ಕುಳಿತನು. ಕಾರು ಹೊರಟು ಹೋಯಿತು. ಮಮ್ಮೂಟಿ ಕಾವಲುಗಾರನನ್ನು ಕರೆದು ವಿಚಾರಿಸಿದನು. “ಯಾರಾದೊ ಮನೆ ಹುಡುಕಿಕೊಂಡು ಬಂದಿದ್ದರು ಸಾರ್. ನನಗೆ ಗೊತ್ತಿಲ್ಲವೆಂದೆ. ಕಾರು ಹಿಂದಕ್ಕೆ ಹೊರಟು ಹೋಯಿತು. “ಕಾರಿನಲ್ಲಿ ಬೇರೆ ಯಾರಾದರೂ ಇದ್ದರೇ?” “ಬೇರೆ ಒಬ್ಬರಿದ್ದರು....” ಮಮ್ಮೂಟಿ ಮೈ ಬೆವರ ತೊಡಗಿತು. ``ಕಾರಿನ ನಂಬರ್ ಗುರುತಿಸಿಕೊಂಡಿದ್ದಿಯಾ?” “ಹೌದು ಸಾರ್” ಎನ್ನುತ್ತಾ ಚೀಟಿಯೊಂದನ್ನು ಮಮ್ಮೂಟಿಯ ಸುಳಿ 271 ಕೈಯಲ್ಲಿಟ್ಟನು. ಮಮ್ಮೂಟಿ ಮಾತನಾಡದೆ ಒಳ ನಡೆದನು. ಈ ವಿಷಯವನ್ನು ಕೂಡಲೇ ನವಾಜ್‍ಗೆ ತಿಳಿಸಬೇಕೆಂದು ದೂರವಾಣಿಯ ರಿಸೀವರ್ ಎತ್ತಿಕೊಂಡು ನಂಬರ್ ತಿರುಗಿಸಿದನು. “ಸಾಹೇಬರಿದ್ದಾರಾ?” “ಇಲ್ಲ ಸಾರ್, ಕಲ್ಪನೆಯಲ್ಲಿ ಒಂದು ಕೊಲೆಯಾಗಿದೆಯಂತೆ. ಅಲ್ಲಿಗೆ ಹೋಗಿದ್ದಾರೆ.” “ಬರುವಾಗ ಎಷ್ಟು ಹೊತ್ತಾದೀತು?” ಕೊಂಚ ಆತಂಕದಿಂದಲೇ ಕೇಳಿದನಾತ. “ಮಧ್ಯಾಹ್ನ ಕಳೆಯಬಹುದು ಸಾರ್. ನಾಯಿಗಳೂ ಹೋಗಿವೆ.” “ಸರಿ. ನಾನು ಒಂದು ಕಾರಿನ ನಂಬರ್ ಕೊಡ್ತೇನೆ. ಬರೆದಿಟ್ಟುಕೊ. ಅವರು ಬಂದೊಡನೆ ಅದನ್ನವರಿಗೆ ಕೊಟ್ಟು ನಾನು ಕೊಟ್ಟೆ ಅಂತ ಹೇಳು” ಎನ್ನುತ್ತಾ ತನ್ನ ಕೈಯಲ್ಲಿದ್ದ ಸಂಖ್ಯೆಯನ್ನು ಹೇಳಿ ರಿಸೀವರ್ ಕೆಳಗಿಟ್ಟನು. ಆ ಕಾರು ಬಂದು ಹೋದಾಗಿನಿಂದ ಮಮ್ಮೂಟಿಯ ನೆಮ್ಮದಿ ಹಾರಿ ಹೋಗಿತ್ತು. ``ಅವರು ನಿಜವಾಗಿಯೂ ಯಾರ ಮನೆಯನ್ನೊ ಹುಡುಕಿಕೊಂಡು ಬಂದವರೇ ಇರಬಹುದು. ನಾನೇಕೆ ದಿಗಿಲು ಪಡಬೇಕು” ಎಂದು ಆತನು ಮನದಲ್ಲಂದುಕೊಂಡರೂ ಆತನಿಂದ ನಿಶ್ಚಿಂತೆಯಿಂದಿರಲು ಸಾಧ್ಯವಾಗಲಿಲ್ಲ. ಅಸ್ಥಿರನಾಗಿ ಕೊಂಚ ಹೊತ್ತು ಅತ್ತಿತ್ತ ನಡೆದಾಡಿ ಮನವನ್ನು ಸ್ಥಿಮಿತಕ್ಕೆ ತರಲೆತ್ನಿಸಿದನು. ಮನದ ದುಗುಡ ನೀಗಲು ಫರೀದಾ ಮತ್ತು ರುಖ್ಯಾ ಇಬ್ಬರನ್ನೂ ಕರೆದು ಹಾಲಿನಲ್ಲಿ ಕುಳ್ಳಿರಿಸಿಕೊಂಡು ಮಾತಿಗಾರಂಭಿಸಿದನು. ತಾಹಿರಳ ಬೆಂಗಳೂರು ಯಾತ್ರೆಯ ಬಳಿಕ ರುಖ್ಯಾ ಫರೀದಾಳನ್ನು ದ್ವೇಷಿಸುವುದನ್ನು ನಿಲ್ಲಿಸಿದ್ದಳು. ಹೀಗಾಗಿ ಆ ಬಳಿಕ ಮಮ್ಮೂಟಿಗೂ ಸವತಿಯರ ವಿಷಯದಲ್ಲಿ ಕೊಂಚ ನೆಮ್ಮದಿ ದೊರಕಿತ್ತು. ಮಮ್ಮೂಟಿಯೇ ಮಾತಿಗಾರಂಭಿಸಿದನು. “ಜಮಾಲನ ಫೋನ್ ಇಲ್ಲದೆ ಐದಾರು ದಿನಗಳಾದುವು. ಈ ಹುಡುಗರು ಹೀಗೆಯೇ. ತಮಗೆ ಅಗತ್ಯವಿದ್ದರೆ ಮಾತ್ರ ಫೋನ್ ಮಾಡುತ್ತಾರೆ. ಕ್ಷೇಮ ಸಮಾಚಾರ ತಿಳಿಸುವ ಪರಿಪಾಠವೇ ಇಲ್ಲ” “ಅವನಾದರೂ ಅಲ್ಲಿ ಸುಖವಾಗಿಯೇ ಇದ್ದಾನಲ್ಲ? ಮುನೀರ್ ಎಲ್ಲಿದ್ದಾನೆಂಬ ವಿಷಯವೇನಾದರೂ ಇದೆಯೇ?” ಮಗನ ಸುದ್ದಿ ಎತ್ತುತ್ತಲೇ 272 ಸುಳಿ ಫರೀದಾಳ ಕಣ್ಣುಗಳು ತುಂಬುತ್ತಿದ್ದವು. “ಡಾಕ್ಟರು ಹೇಳಿದ್ದಾರಲ್ಲ, ಹೇಗಾದರೂ ಅವನ ಖಾಯಿಲೆ ವಾಸಿ ಮಾಡಬಹುದೂಂತ? ಇನ್ನು ಅವನ ಚಿಂತೆ ಮಾಡಬೇಡ” ಎಂದನು. “ಆದರೂ ನಾನೊಮ್ಮೆ ಅವನನ್ನು ನೋಡಿ ಬರುತ್ತಿದ್ದೆ.” “ಈಗ ನಿನ್ನನ್ನು ಕರೆದುಕೊಂಡು ಹೋಗಲು ನನಗೆ ಸಮಯವಿಲ್ಲ. ವಿಧಾನಸಭೆಯ ಅಧಿವೇಶನ ಮುಗಿದ ಮೇಲಷ್ಟೆ ನಾನು ಬರುವೆ. ನೀನು ಬೇಕಾದರೆ ಸಾಯಿರಾ ಮತ್ತು ಗಂಡನನ್ನು ಕರೆದುಕೊಂಡು ಹೋಗು.” “ಸಾಯಿರಾಗೆ ಏಳು ತಿಂಗಳು. ಈಗ ಅಷ್ಟು ದೂರ ಪ್ರಯಾಣ ಮಾಡಲಿಕ್ಕಾಗುತ್ತದಾ? ನಾನು ಸಫರುಲ್ಲನನ್ನು ಕರೆದುಕೊಂಡು ಹೋಗಿ ಒಂದೆರಡು ದಿನಗಳಲ್ಲಿ ಹಿಂದೆ ಬರುವೆ” ಎಂದಳು. “ಆಗಲಿ. ಅವನ ಅಂಗಡಿಯನ್ನು ಒಂದೆರಡು ದಿನಗಳವರೆಗೆ ಬಷೀರ್ ನೋಡಿಕೊಂಡಿರಲಿ” ಎನ್ನುತ್ತಿದ್ದಂತೆ ದೂರವಾಣಿ ಟ್ರೀಣ್‍ಗುಟ್ಟಿತು. ಮಮ್ಮೂಟಿ ರಿಸೀವರ್ ಕೈಗೆತ್ತಿಕೊಂಡನು. “ಹಲೊ, ಯಾರು? ಹಾಜಾರರಿಲ್ಲವಾ?” ಅತ್ತ ಕಡೆಯಿಂದ ಅಪರಿಚಿತ ಧ್ವನಿ ಕೇಳಿಸಿತು. “ಹೌದು. ನಾನೇ ಮಾತನಾಡುತ್ತಿದ್ದೇನೆ.” “ನಿಮ್ಮ ಮಗ ಜಮಾಲನಿಗೆ ಅಪಘಾತವಾಗಿದೆ. ಕೂಡಲೆ ಹೊರಟು ಬನ್ನಿ.” “ಹಾಂ...” ಮಮ್ಮೂಟಿ ತತ್ತರಿಸಿದನು. “ಎಲ್ಲಿದ್ದಾನೆ? ಯಾರು ನೀವು? ಎಂದು, ಗಲಿಬಿಲಿಗೊಂಡು ಕೇಳಿದನು. “ಆಸ್ಪತ್ರೆಯಲ್ಲಿದ್ದಾನೆ” ಎನ್ನುತ್ತಿದ್ದಂತೆ ದೂರವಾಣಿಯ ಸಂಪರ್ಕ ಕಡಿಯಿತು. ಮಮ್ಮೂಟಿಯ ಮುಖ ಬಿಳಿಚಿಕೊಂಡು ಕೈ ಅದುರಿತು. “ಏನು? ಏನಾಯಿತು?” ರುಖ್ಯಾ ಮತ್ತು ಫರೀದಾ ಒಟ್ಟಿಗೆ ಕೇಳಿದರು. ಮಮ್ಮೂಟಿ ಆದ ಆಘಾತದಿಂದ ಚೇತರಿಸಿಕೊಂಡು, “ಜಮಾಲನಿಗೆ ಅಪಘಾತವಾಗಿದೆಯಂತೆ!” ಎಂದನು. ರುಖ್ಯಾ, “ಯಾ ಅಲ್ಲಾಹ್ ನನ್ನ ಮಗನೇ...” ಎಂದು ಅಳಲಾರಂಭಿಸಿದಳು. ಫರೀದಾ ಧೈರ್ಯ ತಂದುಕೊಂಡು, “ಶ್... ಸುಮ್ಮನಿರಿ, ಅಪಘಾತವಾಗಿ ಆಸ್ಪತ್ರೆಯಲ್ಲಿದ್ದಾನೆಂದು ಹೇಳಿದರಲ್ಲ? ಹೆಚ್ಚೇನೂ ಆಗಿರಲಾರದು. ಸಹನೆ ತಂದುಕೊಳ್ಳಿ” ಎಂದು ಸಂತೈಸಲು ಪ್ರಯತ್ನಿಸಿದಳು. ಸುಳಿ 273 ಮಮ್ಮೂಟಿ ತನ್ನ ಡ್ರೈವರನ್ನು ಕರೆದು ಕಾರನ್ನು ಸಿದ್ಧಪಡಿಸಿಲು ಹೇಳಿದನು. ಬಳಿಕ ಫರೀದಾಳೊಡನೆ, “ನಾನೀಗಲೇ ಹೊರಡುವೆ. ರುಖ್ಯಾ ಸಫರುಲ್ಲನನ್ನು ಕರೆದುಕೊಂಡು ಇನ್ನೊಂದು ಕಾರಿನಲ್ಲಿ ಬರಲಿ” ಎಂದು ಹೇಳಿದಾಗ ಮತ್ತೊಮ್ಮೆ ನವಾಜ್‍ನ ನೆನಪಾಯಿತು. ಆತನ ಕಚೇರಿಯ ದೂರವಾಣಿಯ ನಂಬರ್ ತಿರುಗಿಸಿದನು. “ಸಾಹೇಬರು ಬಂದರಾ?” “ಇನ್ನೂ ಬಂದಿಲ್ಲ ಸಾರ್...” “ಸರಿಯಪ್ಪ. ಅವರು ಬಂದರೆ, ನನ್ನ ಮಗನಿಗೆ ಅಪಘಾತವಾಗಿದೆ; ನಾನು ಬೆಂಗಳೂರಿಗೆ ಹೊರಟಿದ್ದೇನೆಂದು ತಿಳಿಸಿಬಿಡಿ” ಎಂದನು. ಮಮ್ಮೂಟಿಗೆ ಯೋಚನಾ ಶಕ್ತಿ ಕುಂಠಿತವಾದಂತಾಗಿತ್ತು. ಜಮಾಲನು ಬದುಕಿದ್ದಾನೆಯೇ ಅಥವಾ... ಕೂಡಲೇ ಹೊರಟು ಬನ್ನಿ ಎಂದರಲ್ಲ? ತೀವ್ರವಾದ ಅಪಘಾತವೇ ಆಗಿರಬೇಕು. ‘ಯಾ ಅಲ್ಲಾಹ್ ನನ್ನ ಮಗನಿಗೆ ಏನೂ ಆಗದಿರಲಿ. ದರ್ಗಾಕ್ಕೆ ಒಂದು ಹೋರಿ ಕೊಡುವೆ’ ಎಂದು ಮನದಲ್ಲೇ ಹರಕೆ ಹೊತ್ತನು. ಬೆಂಗಳೂರಿಗೆ ಒಂದೆರಡು ಬಾರಿ ದೂರವಾಣಿಯಲ್ಲಿ ಸಂಪರ್ಕಿಸಲೆತ್ನಿಸಿದನು. ಆದರೆ ಸಂಪರ್ಕ ದೊರೆಯಲೇ ಇಲ್ಲ. ಹೆಚ್ಚು ಹೊತ್ತು ಕಳೆಯುವಂತಿರಲಿಲ್ಲ. ಸಫರುಲ್ಲನನ್ನು ಅಂಗಡಿಯಿಂದ ಕರೆಸಿ ತಾಯಿಯನ್ನು ಕರೆದುಕೊಂಡು ಬರುವ ಜವಾಬ್ದಾರಿಯನ್ನು ಅವನಿಗೆ ವಹಿಸಿ ಮಮ್ಮೂಟಿ ಗಡಿಬಿಡಿಯಿಂದಲೇ ಕಾರು ಹತ್ತಿದನು. ಚಾಲಕನನ್ನು ಮಗನೊಡನೆ ಬರಲು ತಿಳಿಸಿದನು. ಊರನ್ನು ದಾಟಿ ಕಾರು ಮುಂದುವರಿಯುತ್ತಿತ್ತು. ಮಳೆಗಾಲದ ದಿನವಾದುದರಿಂದ ಬೀದಿಯಲ್ಲಿ ಅಲ್ಲಲ್ಲಿ ನೀರು ನಿಂತಿತ್ತು. ದಟ್ಟ ಮೋಡವೊಂದು ಅಟ್ಟಿಸಿಕೊಂಡು ಬಂದು ಧಾರಾಕಾರವಾಗಿ ಮಳೆ ಸುರಿಯತೊಡಗಿತು. ಕೊಂಚ ಹೊತ್ತಿನಲ್ಲಿ ಮಳೆ ನಿಂತರೂ ತೋಡುಗಳಲ್ಲಿ ಕೆನ್ನೀರು ಹರಿಯುತ್ತಲೇ ಇತ್ತು. ಗೊರಬೆಯನ್ನು ಹೊದ್ದುಕೊಂಡ ಹೆಂಗಸರು ಗದ್ದೆಗಳಲ್ಲಿ ಭತ್ತದ ಸಸಿ ನೆಡುತ್ತಿದ್ದರು. ತುಂಬಿ ಹರಿಯುತ್ತಿರುವ ಕೆರೆ ತೊರೆಗಳು, ಅಡಿಕೆ, ತೆಂಗುಗಳ ಗೊನೆಗಳು ಮರದ ತುಂಬ ತುಂಬಿಕೊಂಡು ಕಣ್ಮನ ತಣಿಸುತ್ತಿತ್ತು. ಒಂದು ಕ್ಷಣ ತನ್ನ ತೋಟದ ನೆನಪಾದರೂ ಮಗನ ಅಪಘಾತದ ಸುದ್ದಿ ತೋಟದ ನೆನಪಿಗೆ ತೆರೆಯೆಳೆಯಿತು. ದೂರದಲ್ಲಿ ಘಟ್ಟ ಮತ್ತು ಮೋಡಗಳ ಮಿಲನ ಧಾರಾಕಾರದ ಮಳೆಯಲ್ಲಿ ಪರ್ಯವಸಾನವಾಗುತ್ತಿತ್ತು. ಬೆಟ್ಟ ಗುಡ್ಡಗಳೆಡೆಯಿಂದ ಬಿಳಿ 274 ಸುಳಿ ನೊರೆಯುಕ್ಕಿಸಿ ಧುಮ್ಮಿಕ್ಕಿ ಹರಿಯುವ ಜಲಪಾತ ಎಂತಹವರನ್ನೂ ಮೈ ಮರೆಸುವ ಸೃಷ್ಟಿ ವೈಚಿತ್ರ್ಯ. ಆದರೆ ಇಂದು ಮಮ್ಮೂಟಿಗೆ ಈ ದೃಶ್ಯಗಳಾವುವೂ ಗೋಚರಿಸುತ್ತಿರಲಿಲ್ಲ. ಮಗನ ಅಪಘಾತದ ಸುದ್ದಿ ಕೇಳಿಯೇ ಆತ ಅರ್ಧ ಸತ್ತಂತಾಗಿದ್ದನು. ಮಗನ ಜೀವಂತ ಮುಖವನ್ನೊಮ್ಮೆ ಕಂಡರೆ ಸಾಕು ಎಂದು ಹಂಬಲಿಸುತ್ತಾ ಸಾಗಿದನು. ಮಳೆಯ ರಭಸ ಕಮ್ಮಿಯಾದಾಗೊಮ್ಮೆ ಹಿಂತಿರುಗಿ ನುಡಿದನು. ತನ್ನ ಹಿಂದೆ ಕೊಂಚ ದೂರದಲ್ಲಿ ಇನ್ನೊಂದು ಕಾರು ಬರುತ್ತಿತ್ತು. ಅದು ಹಾದಿಬಿಡಲು ಕೇಳದೆ ತನ್ನ ಹಿಂದಿನಿಂದಲೆ ಬರುತ್ತಿತ್ತು. ಮತ್ತೂ ಕೆಲವು ಕಿಲೋಮೀಟರುಗಳಷ್ಟು ದೂರ ಹೋದಾಗಲೂ ಆ ಕಾರು ತನ್ನ ಹಿಂದಿನಿಂದಲೇ ಬರುತ್ತಿತ್ತು. ಈಗ್ಯಾಕೊ ಮಮ್ಮೂಟಿಗೆ ಕೊಂಚ ಸಂದೇಹವಾಯಿತು. ಇವರು ತನ್ನನ್ನು ಹಿಂಬಾಲಿಸುತ್ತಿದ್ದಾರೆಯೇ? ಮಮ್ಮೂಟಿ ಸೂಕ್ಷ್ಮವಾಗಿ ಮತ್ತೊಮ್ಮೆ ಹಿಂತಿರುಗಿ ನೊಡಿದನು. ಬೆಳಿಗ್ಗೆ ತನ್ನ ಮನೆಯ ಬಳಿ ಕಂಡ ಕಾರು! ಈಗಾತನು ಬೆಚ್ಚಿದನು. ಆದರೂ ಧೈರ್ಯತಂದುಕೊಂಡು ಕಾರಿನ ವೇಗವನ್ನು ಕಮ್ಮಿ ಮಾಡಿ ಆ ಕಾರು ಮುಂದೆ ಹೋಗುವಂತೆ ಸಂಜ್ಞೆ ನೀಡಿದನು. ಆ ಕಾರು ಮುಂದೆ ಹೋಗಲಿಲ್ಲ. ಅದೂ ಕೂಡಾ ವೇಗವನ್ನು ಕಮ್ಮಿ ಮಾಡಿತು. ಅಷ್ಟರಲ್ಲಿ ಪುಟ್ಟದೊಂದು ಹಳ್ಳಿ ಬಂದಿತು. ಮಮ್ಮೂಟಿ ಕಾರು ನಿಲ್ಲಿಸಿದನು. ಹಿಂದಿನಿಂದ ಬಂದ ಕಾರು ಮಮ್ಮೂಟಿಯ ಕಾರನ್ನು ದಾಟಿ ಮುಂದೆ ಹೋಗಿ ಮರೆಯಾಯಿತು. ಮಳೆ ಇನ್ನೂ ಸುರಿಯುತ್ತಲೇ ಇತ್ತು. ಸ್ವಲ್ಪ ಹೊತ್ತಾದ ಬಳಿಕ ಮಮ್ಮೂಟಿ ಕಾರು ಚಲಾಯಿಸತೊಡಗಿದನು. ಕೆಲವು ಕಿಲೊ ಮೀಟರುಗಳಷ್ಟು ದೂರ ಹೋಗುವಷ್ಟರಲ್ಲಿ, ನಿರ್ಜನದಟ್ಟ ಕಾಡಿನ ನಡುವಿನ ಹಾದಿಯಿಂದ ಕಾರೊಂದು ಬಂದು ಮಮ್ಮೂಟಿಯ ಕಾರನ್ನು ತಡೆಗಟ್ಟುವಂತೆ ಅಡ್ಡ ನಿಂತಿತು. ಮಮ್ಮೂಟಿ ಬ್ರೇಕ್ ಒತ್ತಿದನು. ಆ ಕಾರಿನಿಂದ ವ್ಯಕ್ತಿಯೊಬ್ಬನು ಇಳಿದು ಕೊಡೆ ಬಿಡಿಸಿಕೊಂಡು ಮಮ್ಮೂಟಿಯ ಕಾರಿನ ಬಳಿಗೆ ಬಂದನು. ಮಮ್ಮೂಟಿ ಸ್ತಂಭಿತನಾದನು. ಬೆಳಿಗ್ಗೆ ತನ್ನ ಕಾವಲುಗಾರನ ಬಳಿ ಮಾತನಾಡಿದ ಅದೇ ಅಪರಿಚಿತ ವ್ಯಕ್ತಿ! “ನಮ್ಮ ಬಾಸ್ ಕಾರಿನಲ್ಲಿದ್ದಾರೆ. ಬರಬೇಕಂತೆ.” ಬಂದಾತನು ಮಮ್ಮೂಟಿಯನ್ನು ಕರೆದನು. “ನಾನು ಆರ್ಜೆಂಟಾಗಿ ಬೆಂಗಳೂರಿಗೆ ಹೋಗುತ್ತಿದ್ದೇನೆ.” ಉಗುಳು ಸುಳಿ 275 ನುಂಗುತ್ತಾ ಮಮ್ಮೂಟಿ ನುಡಿದನು. ಆತನ ನಾಲಗೆಯ ದ್ರವವಾರಿತು. “ಆಗಲಿ, ಹೋಗೊರಂತೆ, ಒಂದು ಗಳಿಗೆ ಬಂದು ಹೋಗಿ.” ಬಂದಾತನು ಒತ್ತಾಯಿಸಿದನು. ಮಮ್ಮೂಟಿ ಬೇರೆ ದಾರಿ ಕಾಣದೆ ಆ ಕಾರಿನ ಬಳಿಗೆ ಹೋಗಿ ಅದರೊಳಗೆ ಇಣುಕಿದನು. ಆತನೆದೆ ನಡುಗಿತು. ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯಲ್ಲೂ ಮಮ್ಮೂಟಿಯ ಮೈ ಬೆವರಿತು. “ಏನು, ಮಮ್ಮೂಟಿ, ನನ್ನ ಪರಿಚಯವಿಲ್ಲವಾ?” ಕಾರಿನ ಹಿಂಭಾಗದ ಸಿಟಿನಲ್ಲಿ ಕುಳಿತಿದ್ದ ಧಾಂಡಿಗನು ಕೇಳಿದನು. ಬಳಿಕ “ಕಾರು ಹತ್ತು, ನಿನ್ನೊಡನೆ ಸ್ವಲ್ಪ ಮಾತನಾಡಬೇಕಾಗಿದೆ” ಎಂದನು. “ಸಾ... ರ್...” ಮಮ್ಮೂಟಿ ತೊದಲಿದನು. “ನನ್ನ ಮಗನಿಗೆ ಅಪಘಾತವಾಗಿದೆ. ನಾನು ಬೆಂಗಳೂರಿಗೆ ಹೊರಟಿದ್ದೇನೆ. ಹಿಂತಿರುಗಿದ ಬಳಿಕ ತಮ್ಮ ಬಳಿಗೆ ಬರುತ್ತೇನೆ....” ಅಂಗಲಾಚುವಂತೆ ಕೈ ಜೋಡಿಸಿ ಹೇಳಿದನು. “ನಿನ್ನ ಮಗನಿಗೇನೂ ಆಗಿಲ್ಲ. ಕಾರು ಹತ್ತು.” ಆತನು ಅಧಿಕಾರವಾಣಿಯಿಂದ ನುಡಿದನು. ಮಮ್ಮೂಟಿಯ ಹಿಂಭಾಗದಲ್ಲಿ ಆ ಅಪರಿಚಿತನು ನಿಂತಿದ್ದನು. ಬಸ್ಸೊಂದು ಈ ಕಾರುಗಳನ್ನು ದಾಟಿ ಮುಂದೆ ಹೋಯಿತು. ನಿರ್ವಾಹವಿಲ್ಲದೆ ಮಮ್ಮೂಟಿ ಕಾರು ಹತ್ತಿದ್ದನು. ಕಾರು ಸ್ವಲ್ಪ ಮುಂದೆ ಹೋಗಿ ಇನ್ನೊಂದು ತಿರುವಿನಲ್ಲಿ ತಿರುಗಿ ಕಾಡಿನ ದಾರಿಯಲ್ಲಿ ಮುಂದುವರಿಯಿತು. * * * * * ಮಮ್ಮೂಟಿ ಹೊರಟ ಅರ್ಧ ಗಂಟೆಯ ಬಳಿಕ ಸಫರುಲ್ಲ ತಾಯಿಯನ್ನು ಕರೆದುಕೊಂಡು ಇನ್ನೊಂದು ಕಾರಿನಲ್ಲಿ ಹೊರಟನು. ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯಿಂದಾಗಿ ಕಾರಿನ ವೇಗವನ್ನು ತಗ್ಗಿಸಿಕೊಂಡೇ ಮುಂದುವರಿಯಬೇಕಾಯಿತು. ಸಫರುಲ್ಲ ಅಗಾಗ ತಾಯಿಯೊಡನೆ, “ಅಣ್ಣ ಯಾವ ಆಸ್ಪತ್ರೆಯಲ್ಲಿದ್ದಾನೆಂದು ಹೇಳಿದ್ದಾರಾ? ಎಷ್ಟು ಹೊತ್ತಿಗೆ ಅಪಘಾತವಾಯಿತು? ನಿನ್ನೆ ರಾತ್ರಿಯಾ ಇವತ್ತು ಬೆಳಿಗ್ಯೆಯಾ?” ಎಂದೆಲ್ಲ ಕೇಳುತ್ತಿದ್ದನು. ದಾರಿ ಸಾಗುತ್ತಿದ್ದಂತೆ ಹಾದಿಯಲ್ಲಿ ಒಂದೆಡೆ ತಂದೆಯ ಕಾರು ನಿಲ್ಲಿಸಿದ್ದನ್ನು ಕಂಡು ತಾನು ಕಾರು ನಿಲ್ಲಿಸಿ ಕಾರಿನಿಂದಿಳಿದು ‘ಅಬ್ಬ ಇಲ್ಯಾಕೆ ಕಾರು ನಿಲ್ಲಿಸಿದ್ದಾರೆ’ ಎಂದುಕೊಳ್ಳುತ್ತಾ ಆ ಕಾರಿನ ಬಳಿಗೆ ಹೋಗಿ ಒಳಗಿಣುಕಿದನು. ಕಾರಿನೊಳಗೆ ಯಾರೂ ಇಲ್ಲ. ಕಾರಿನ ಕೀ ಗೊಂಚಲು ಸ್ವಿಚ್‍ನಲ್ಲಿ ನೇತಾಡುತ್ತಿತ್ತು. ಆತನಿಗೆ ಮತ್ತಷ್ಟು ಆಶ್ಚರ್ಯವಾಯಿತು. “ಕಾರಿಗೆ ಬೀಗ ಕೂಡಾ ಹಾಕದೆ ಅಬ್ಬಾ 276 ಸುಳಿ ಎಲ್ಲಿ ಹೊಗಿದ್ದಾರೆ?” ಸಫರುಲ್ಲ ಏನು ಮಾಡುವುದೆಂದು ತಿಳಿಯದೆ ಕ್ಷಣಕಾಲ ಸ್ತಂಭಿತನಾಗಿ ನಿಂತನು. ಬಳಿಕ ತನ್ನೊಡನಿದ್ದ ಚಾಲಕನನ್ನು ಕರೆದುಕೊಂಡು ಅತ್ತಿತ್ತ ಹುಡುಕಿದನು. ನರಪಿಳ್ಳೆಯೂ ಇಲ್ಲದ ಆ ನಿರ್ಜನ ಪ್ರದೇಶದಲ್ಲಿ ಯಾರನ್ನು ಕೇಳುವುದು? ತನ್ನಪ್ಪನಿಗೇನಾಯಿತು? ರುಖ್ಯಾ ಬುರುಕಾದೊಳಗೆ ನಡುಗಿದಳು. ಇತ್ತೀಚೆಗೆ ಮಮ್ಮೂಟಿ ಅನ್ಯಮನಸ್ಕನಾಗಿ ಚಿಂತಾಮಗ್ನನಾಗಿರುವುದನ್ನಾಕೆ ಕಂಡಿದ್ದಳು. ಈ ಹಿಂದೆಯೂ ಎಷ್ಟೊ ಬಾರಿ ಅನ್ಯಮನಸ್ಕನಾಗಿರುವುದು, ಚಿಂತಾಮಗ್ನನಾಗಿರುವುದನ್ನಾಕೆ ಕಂಡಿದ್ದಳು. ಬೊಂಬಾಯಿಗೆಂದು ಹೋದವನು ವಾರಗಟ್ಟಲೆ, ಕೆಲವೊಮ್ಮೆ ತಿಂಗಳು ಗಟ್ಟಲೆ ಬರದೇ ಇದ್ದದ್ದೂ ಇತ್ತು. ಬಹಳ ಹಿಂದೆ ಎಂಟು ವರ್ಷಗಳವರೆಗೆ ಆತನ ಯಾವೊಂದು ಸುದ್ದಿಯೂ ಇಲ್ಲದೆ ತಾನು ದಿನಗಳೆದ ಆ ನೆನಪು ಹೃದಯದ ಹಿಂಭಾಗದ ಮೂಲೆಯೊಂದರಲ್ಲಿ ಇದ್ದೇ ಇದೆ. ಹೀಗಾಗಿ ಮಮ್ಮೂಟಿಯ ಈ ಚಿಂತಾಮಗ್ನತೆಗೆ ಆಕೆ ವಿಶೇಷ ಅರ್ಥವನ್ನೇನೂ ಕಲ್ಪಿಸಿರಲಿಲ್ಲ. ಆದರೆ ಕಾರಿಗೆ ಬೀಗ ಹಾಕದೆ ಅದನ್ನು ನಡು ಬೀದಿಯಲ್ಲಿ ನಿಲ್ಲಿಸಿ ಬೇಜವಾಬ್ದಾರಿಯಿಂದ ಹೊರಟು ಬಿಡುವಾತ ಮಮ್ಮೂಟಿಯಲ್ಲವೆಂಬುದು ಆಕೆಗೆ ಚೆನ್ನಾಗಿ ಗೊತ್ತು. ಹಾಗೆಂದೇ ಸಫರುಲ್ಲ ಬಂದು ತಂದೆ ಕಾರಿನಲ್ಲಿಲ್ಲವೆಂದಾಗ ಆಕೆಯೆದೆ ಧಸಕ್ಕೆಂದಿತು. ಆಕೆ ಬುರ್ಕಾದೊಳಗೆ ನಡುಗಿದಳು. “ಯಾ ಅಲ್ಲಾಹು... ಇವರಿಗೇನಾಯಿತು? ಇವರೆಲ್ಲಿ?” ಎಂದು ಹಲುಬತೊಡಗಿದಳು. ಸಫರುಲ್ಲ ಏನು ಮಾಡುವುದೆಂದು ತಿಳಿಯದೆ ನಿಂತಲ್ಲಿ ಮರಗಟ್ಟಿದಂತಾದನು. ಊರು, ಮನೆ, ಯಾವುದೂ ಇಲ್ಲದ ದಟ್ಟಡವಿ. ಇಲ್ಲಿ ತನ್ನಪ್ಪ ಹೀಗೇಕೆ ಮಾಡಿದರೆಂಬುದನ್ನು ಊಹಿಸಲು ಆತನಿಂದ ಸಾಧ್ಯವೇ ಆಗಲಿಲ್ಲ. ಆಳುತ್ತಿರುವ ತಾಯಿಯನ್ನು ಹೇಗೆ ಸಂತೈಸಬೇಕೆಂದೂ ಆತನಿಗೆ ಹೊಳೆಯಲಿಲ್ಲ. ನಿಧಾನವಾಗಿ ಆತನ ಕಣ್ಣುಗಳೂ ತುಂಬತೊಡಗಿದುವು. ಈ ಹಂತದಲ್ಲಿ ಆತನಿಗೆ ನೆನಪಾದುದು ಎಸ್.ಪಿ. ಸಾಹೇಬರು. ಆದರೆ ಇಲ್ಲಿ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸುವುದು ಹೇಗೆ? ಹಾಗೆ ಅವರನ್ನು ಸಂಪರ್ಕಿಸಬೇಕಾದರೆ ಒಂದು ಗಂಟೆ ಪೂರ್ವಕ್ಕೆ ಅಥವಾ ಒಂದು ಗಂಟೆ ಪಶ್ಚಿಮಕ್ಕೆ ಪ್ರಯಾಣಿಸಬೇಕು. ತಂದೆ ಕಾರನ್ನು ಇಲ್ಲಿ ಈ ಸ್ಥಿತಿಯಲ್ಲಿ ಬಿಟ್ಟು ಎಲ್ಲಿಗೂ ಹೋಗಿರಲಾರರು. ಅವರಿಗೇನೊ ಅಪಾಯವಾಗಿದೆ ಎಂಬ ತೀರ್ಮಾನಕ್ಕೆ ಆತನು ಬಂದನು. ಸುಳಿ 277 ಆತನು ಚಾಲಕನನ್ನು ಕರೆದು, “ನೀನು ಆ ಕಾರಿನಲ್ಲಿರು. ನಾವು ಮುಂದೆ ಹೋಗಿ ಎಸ್.ಪಿ.ಯವರಿಗೆ ಫೋನ್ ಮಾಡುವೆ” ಎನ್ನುತ್ತಾ ಕಾರನ್ನು ಚಲಾಯಿಸಿದನು. * * * * * ಮಧ್ಯಾಹ್ನದ ಹೊತ್ತಿಗೆ ಮನೆಗೆ ಬಂದ ನವಾಜ್‍ನೊಡನೆ ಆತನ ಹೆಂಡತಿ, “ಮಮ್ಮೂಟಿ ಹಾಜಾರರು ಎರಡು ಬಾರಿ ಫೋನ್ ಮಾಡಿದ್ದರು” ಎಂದಳು. ಆತನು ಬಟ್ಟೆ ಬದಲಾಯಿಸುತ್ತಾ, “ಯಾಕಂತೆ?” ಎಂದು ಕೇಳಿದನು. “ಬೆಂಗಳೂರಿನಲ್ಲಿ ಅವರ ಮಗನಿಗೆ ಅಪಘಾತವಾಗಿದೆಯಂತೆ. ‘ಅದಕ್ಕಾಗಿ ನಾನು ಬೆಂಗಳೂರಿಗೆ ಹೊರಟಿದ್ದೇನೆ. ಅವರಿಗೆ ತಿಳಿಸಿ ಬಿಡಿ ಎಂದಿದ್ದಾರೆ” ಎಂದಳು. “ಮಗನಿಗೆ ಅಪಘಾತವೇ?” ನವಾಜ್ ಆತಂಕದಿಂದ ಕೇಳಿದಳು. ಬಳಿಕ ತಡ ಮಾಡದೆ ತನ್ನ ಆಫೀಸಿಗೆ ದೂರವಾಣಿ ಕರೆ ಮಾಡಿದನು. “ಹಲೊ, ಮಮ್ಮೂಟಿ ಫೋನ್ ಮಾಡಿದ್ದರಾ?” “ಹೌದು ಸಾರ್. ಅವರ ಮನೆಯ ಬಳಿ ಒಂದು ಅಪರಿಚಿತ ಕಾರು ಬಂದಿತ್ತೆಂದು ಬೆಳಿಗ್ಗೆ ಫೋನ್ ಮಾಡಿದ್ದರು. ಕಾರಿನ ನಂಬರ್ ಕೊಟ್ಟಿದ್ದಾರೆ. ಬಳಿಕ ಮಗನ ಅಪಘಾತದ ಸುದ್ದಿ ತಿಳಿದು ಬೆಂಗಳೂರಿಗೆ ಹೊರಟರು” ಎಂದನು. ನವಾಜ್ ಚಿಂತಾಮಗ್ನನಾದನು. ಆತನ ಮನದಾಳದಲ್ಲಿ ಸಂದೇಹದ ಸುಳಿಯೊಂದು ಸುತ್ತ ತೊಡಗಿತು. “ಮೋಸವಾಯಿತೇ?” ಎಂದು ತನ್ನಷ್ಟಕ್ಕೆ ತಾನೇ ನುಡಿದು ಕೂಡಲೇ, “ನಾನೀಗಲೇ ಬರ್ತೇನೆ, ಜೀಪ್ ಸಿದ್ಧವಾಗಿರಲಿ” ಎನ್ನುತ್ತಾ ಬೆಂಗಳೂರಿನ ಹಾದಿಯಲ್ಲಿರುವ ಕೆಲವು ಪೊಲೀಸ್ ಠಾಣೆಗಳಿಗೆ ಸುದ್ದಿ ತಿಳಿಸಿ ಮಮ್ಮೂಟಿ ತಿಳಿಸಿದ ಕಾರಿನ ನಂಬರ್ ಕೊಟ್ಟು ಆ ಕಾರು ಆ ಕಡೆ ಬಂದರೆ ನಿಲ್ಲಿಸಬೇಕೆಂದು ಕೇಳಿಕೊಂಡನು. “ಊಟ ಮಾಡುವುದಿಲ್ಲವಾ?” ಎಂದು ಕೇಳಿದ ಹೆಂಡತಿಯೊಡನೆ, “ಟಿಫಿನ್ ಕ್ಯಾರಿಯರಿನಲ್ಲಿ ಹಾಕಿ ಜೀಪಿನಲ್ಲಿಡು. ಹೋಗುತ್ತಾ ಊಟ ಮಾಡುವೆ. ಮಮ್ಮೂಟಿಯ ಜೀವ ಅಪಾಯದಲ್ಲಿದೆ” ಎಂದು ಹೊರಟನು. ತನ್ನ ಕಛೇರಿಗೆ ಹೋಗಿ ಜೀಪನ್ನು ಬದಲಾಯಿಸಿ ಕೆಲವು ಜನ ಸಿಬ್ಬಂದಿಗಳನ್ನು ಕರೆದುಕೊಂಡು ಹೊರಡುವುದಕ್ಕೂ ಸಫರುಲ್ಲನ ದೂರವಾಣಿ ಕರೆ ಆಫೀಸಿಗೆ ಬರುವುದಕ್ಕೂ ತಾಳೆಯಾಯಿತು. “ಅಬ್ಬಾನ ಕಾರು ಮಾತ್ರ ಇದೆ. ಅವರಿಲ್ಲ” ಎಂದದ್ದನ್ನು ಕೇಳಿ. “ಜಮಾಲನ 278 ಸುಳಿ ಅಪಘಾತದ ಸುದ್ದಿ ಸತ್ಯವಾ?” ಎಂದು ಕೇಳಿದನು ನವಾಜ್. “ಅದನ್ನು ತಿಳಿದುಕೊಳ್ಳಲು ಬೆಂಗಳೂರಿಗೆ ಫೋನ್ ಮಾಡಲು ಪ್ರಯತ್ನಿಸಿದೆವು. ಆದರೆ ಸಂಪರ್ಕ ದೊರೆಯಲೇ ಇಲ್ಲ” ಎಂದನು. “ಸರಿ. ನೀನಲ್ಲಿರು. ನಾನೀಗಲೇ ಬಂದೆ” ಎನ್ನುತ್ತಾ ನಾಯಿಯನ್ನು ಜೀಪಿಗೆ ಹತ್ತಿಸಿಕೊಂಡು ಹೊರಟನು. ಸಫರುಲ್ಲ ಪುನಃ ತಂದೆಯ ಕಾರಿನ ಬಳಿಗೆ ಬಂದನು. ತಂದೆ ಈಗಾಗಲೇ ಅಲ್ಲಿಗೆ ಬಂದಿರಬಹುದೆಂಬ ಆಶಾವಾದದಿಂದಲೇ ಬಂದಾತನು ತಂದೆಯನ್ನು ಕಾಣದೆ ಕಂಗಾಲಾದನು. ನವಾಜ್ ಅಲ್ಲಿಗೆ ತಲುಪಿದಾಗ ಮತ್ತೂ ಒಂದು ಗಂಟೆ ಕಳೆಯಿತು. ಈಗ ಹುಡುಕಾಟ ಆರಂಭವಾಯಿತು. ಪೊಲೀಸರು ನಾಯಿಯನ್ನು ಕೆಳಗೆ ಬಿಟ್ಟು ಮಮ್ಮೂಟಿಯ ಕಾರಿನ ಬಳಿಗೆ ಕರೆ ತಂದರು. ಅದು ಕಾರಿನ ಒಳಗಡೆ ಮೂಸಿ ನೋಡಿ ಕಾರಿಗೆ ಒಂದೆರಡು ಸುತ್ತು ಹಾಕಿ ಮುಂದಕ್ಕೆ ನೆಗೆದು ಬೀದಿಯಲ್ಲಿ ಓಡಿತು. ಪೊಲೀಸರು ಅದರ ಚೈನ್ ಹಿಡಿದುಕೊಂಡು ಅದರ ಬೆನ್ನಟ್ಟಿದರು. ನಾಯಿ ರಾಜಮಾರ್ಗವನ್ನು ಬಿಟ್ಟು ಕಾಡಿನ ದಾರಿಯಲ್ಲಿ ತಿರುಗಿತು. ಜೀಪಿನಲ್ಲಿ ಅವರನ್ನು ಹಿಂಬಾಲಿಸುತ್ತಿದ್ದ ನವಾಜ್ ಚಕಿತನಾದನು. ನಾಯಿ ಯಾಕೆ ಕಾಡಿನ ಕಡೆಗೆ ಹೊರಟಿದೆ? ಅವರು ಹೆಚ್ಚು ದೂರ ಹೋಗಬೇಕಾಗಿರಲಿಲ್ಲ. ಒಂದೆರಡು ಕಿಲೋ ಮೀಟರ್ ಹೋಗುವಷ್ಟರಲ್ಲಿ ಮಮ್ಮೂಟಿಯ ತಲೆಯೊಡೆದು ರಕ್ತ ಹೆಪ್ಪುಗಟ್ಟಿದ ದೇಹ ಬೀದಿ ಬದಿಯ ಮರದಡಿಯಲ್ಲಿ ಅನಾಥವಾಗಿ ಬಿದ್ದಿತ್ತು. ಸಫರುಲ್ಲ ಓಡಿ ಹೋಗಿ, “ಅಬ್ಬಾ.....” ಎನ್ನುತ್ತಾ ಮಮ್ಮೂಟಿಯ ದೇಹದ ಮೇಲೆ ಬಿದ್ದನು. ನವಾಜ್ ನಿಂತಲ್ಲಿಯೇ ಕಾಲುಗಳು ನೆಲದಲ್ಲಿ ಹೂತು ಹೋದಂತೆ ಮರಗಟ್ಟಿ ನಿಂತನು. ಮೆದುಳು ಜಡ್ಡುಗಟ್ಟಿ ಯೋಚನಾಶಕ್ತಿಯೇ ನಷ್ಟವಾದಂತೆ ದೃಷ್ಟಿ ಕದಲಿಸದೆ ಮಮ್ಮೂಟಿಯ ದೇಹವನ್ನೇ ನೋಡಿದನು. ಎಷ್ಟು ಹೊತ್ತು ಹಾಗೆ ನಿಂತನೊ, ಪೊಲೀಸ್ ಪೇದೆಯೊಬ್ಬನು, “ಸರ್, ಮುಂದೇನು?” ಎನ್ನುವಂತೆ ಆತನ ಮುಖ ನೋಡಿದಾಗ ಆತನು ಎಚ್ಚರಗೊಂಡು ಸಫರುಲ್ಲನ ಬಳಿಗೆ ಹೋಗಿ, “ಏಳಪ್ಪಾ ಮನೆಗೆ ಹೋಗೋಣ. ನಿನ್ನ ಉಮ್ಮಾ ಕಾರಿನಲ್ಲಿ ಒಬ್ಬಳೇ ಇದ್ದಾಳೆ” ಎಂದು ಆತನ ಕೈ ಹಿಡಿದೆಬ್ಬಿಸಿ ಜೀಪಿನ ಬಳಿಗೆ ಕರೆದೊಯ್ದು ಜೀಪಿನಲ್ಲಿ ಕುಳ್ಳಿರಿಸಿದನು. ವಿಷಯ ತಿಳಿದ ರುಖ್ಯಾ ಎದೆ ಬಡಿದುಕೊಂಡು ಅಳ ತೊಡಗಿದಳು. ನವಾಜ್ ಆಕೆಯ ಬಳಿಗೆ ಬಂದು, “ಸಮಾಧಾನ ಮಾಡ್ಕೊಳ್ಳಿ. ನಾನವನಿಗೆ ಸುಳಿ 279 ಅಂದಿದ್ದೇ. ನನಗೆ ತಿಳಿಸದೆ ಎಲ್ಲಿಗೂ ಹೋಗಬೇಡ ಎಂದು. ಇನ್ನು ಅತ್ತೇನು ಪ್ರಯೋಜನ? ಜಮಾಲನಿಗೆ ಏನೂ ಆಗಿಲ್ಲ. ಸದ್ಯ. ಅಷ್ಟಾದರೂ ಸಮಾಧಾನವಾಯಿತು” ಎಂದನು. ಮೃತ ದೇಹದ ಮಹಜರು ನಡೆಸಿ ದೇಹವನ್ನು ಕಾರಿನ ಹಿಂಭಾಗದಲ್ಲಿ ಮಲಗಿಸಿದರು. ಬಳಿಕ ಜೀಪುಗಳೂ ಕಾರುಗಳೂ ಊರಿಗಭಿಮುಖವಾಗಿ ಹೊರಟವು. ನವಾಜ್‍ನ ಮನಃ ಪಟಲದಲ್ಲಿ ಹಲವಾರು ಚಿತ್ರಗಳು ಮೂಡಿ ಮರೆಯಾಗುತ್ತಿದ್ದುವು. ತನ್ನ ತಮ್ಮನ ಮದುವೆಯ ಪ್ರಕರಣ, ನದೀ ತೀರದ ಘಟನೆ, ಮಮ್ಮೂಟಿ ಜೈಲಿಗೆ ಹೋದದ್ದು, ಚುನಾವಣೆ, ಕೊನೆಯದಾಗಿ ಶಾಸಕನಾದದ್ದು, ಮಕ್ಕಳಿಂದಾಗಿ ಆತನನುಭವಿಸಿದ ನೋವು ಎಲ್ಲವೂ. ಇಳಿತದಿಂದ ಭರತಕ್ಕೆ ಬಂದವನು ಮಮ್ಮೂಟಿ. ಭರತ ಪ್ರವಾಹಕ್ಕೂ ಎಡೆ ಮಾಡಿ ಕೊಟ್ಟಿತು. ಪ್ರವಾಹದ ಸುಳಿಯಲ್ಲಿ ಸಿಕ್ಕ ಮಮ್ಮೂಟಿ ಆ ಸುಳಿಯಲ್ಲೇ ಒದ್ದಾಡಿ ಪ್ರಾಣ ಬಿಡಬೇಕಾಯಿತು. ಮರುದಿನ ನವಾಜ್ ತಾಯಿಯ ಬಳಿ ಹೋಗಿ ಮಮ್ಮೂಟಿಯ ಮರಣ ವಾರ್ತೆ ತಿಳಿಸಿದನು. ಕೊನೆಗೆ, “ನಾನು ಆತನೊಡನೆ, ನನ್ನ ಪ್ರಾಣ ಕೊಟ್ಟಾದರೂ ನಿನ್ನ ಪ್ರಾಣ ಉಳಿಸುವೆನೆಂದು ಭರವಸೆ ನೀಡಿದ್ದೆ. ಆದರೆ ಆತನನ್ನು ಉಳಿಸಲು ಸಾಧ್ಯವಾಗಲಿಲ್ಲ” ಎಂದು ದುಃಖದಿಂದಲೇ ನುಡಿದನು. “ಆತನ ಹಣೆಯಲ್ಲಿ ಹೀಗಾಗಬೇಕೆಂದು ಬರೆದಿದ್ದರೆ ಯಾರಿಂದಲಾದರೂ ತಪ್ಪಿಸಲು ಸಾಧ್ಯವಾ? ಆ ಕೊಲೆಗಡುಕರನ್ನು ನೀನು ಹಿಡಿದೆಯಲ್ಲಾ? ಅದೂ ಕೂಡಾ ಒಂದು ಸಾಧನೆ ತಾನೇ?” ಎಂದು ಜೊಹರಾ ಮಗನಲ್ಲಿ ಉತ್ಸಾಹ ತುಂಬಿದಳು. “ಮಮ್ಮೂಟಿಗೆ ನಮ್ಮೆಲ್ಲರಂತೆ ವಿದ್ಯಾವಂತನಾಗುವ, ಗೌರವಯುತವಾಗಿ ಬದುಕಿ ಬಾಳುವ ಅವಕಾಶ ದೊರೆತಿದ್ದರೆ ಬಹುಶಃ ಆತನು ಹೀಗಾಗುತ್ತಿರಲಿಲ್ಲವೊ ಏನೊ. ಆತನು ಹೀಗಾಗಲು ನಾವೆಲ್ಲರೂ ಕಾರಣರಲ್ಲವಾ?” ಎನ್ನುತ್ತಾ ಮಮ್ಮೂಟಿಯ ಅಂತಿಮ ಯಾತ್ರೆಯಲ್ಲಿ ಪಾಲ್ಗೊಳ್ಳಲು ಹೊರಟು ಹೋದನು. * * * * *