ವಿಶಾಲ ಭೂ ಪ್ರದೇಶ ಮತ್ತು ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿ, ತ್ವರಿತವಾಗಿ ಅಭಿವೃದ್ಧಿ ಹೊಂದುತ್ತಿರುವ ಚೈನಾ ದೇಶಕ್ಕೆ ವರ್ತಮಾನದಷ್ಟೇ ಉಜ್ವಲ ಇತಿಹಾಸವೂ ಇದೆ. ವಿವಿಧ ಭಾಷೆ, ಜನಾಂಗಗಳಿಂದ ಕೂಡಿದೆ.ಚೈನಾದ ವಿಸ್ತೀರ್ಣ 95,96,961 ಚ.ಕಿ.ಮೀ. ಜನಸಂಖ್ಯೆ 2016ರ ಅಂದಾಜಿನಂತೆ 138,23,23,000. ಜನಸಾಂದ್ರತೆ 2016ರಲ್ಲಿ ಪ್ರತಿ ಚ.ಕಿ ಗೆ 147.2, ಈ ದೇಶದ ಕರೆನ್ಸಿ ರೆಮಿನ್ಬಿ (ಸಿಎನ್ ವೈ). ರಾಜಧಾನಿ ಬೀಜಿಂಗ್.ಮ್ಯಾಂಡರಿನ್ ಚೈನೀಸ್ ಅಧಿಕೃತ ಭಾಷೆಯಾಗಿರುವ ಈ ದೇಶದಲ್ಲಿ ಯೂ(ಕಾಂಟೋನೀಸ್), ವು (ಶಾಂಘೈ), ಮಿನ್ಮ್ಯಾನ್, ಟಿಬೇಟಿಯನ್ ಸೇರಿದಂತೆ ಅನೇಕ ಭಾಷೆಗಳನ್ನು ಮಾತನಾಡುವ ಜನ ಇದ್ದಾರೆ.ಕಮ್ಯುನಿಸ್ಟ್ ಆಡಳಿತ ಹೊಂದಿರುವ ಚೈನಾದ ಅಧಿಕೃತ ಧಾರ್ಮಿಕ ನಿಲುವು ನಾಸ್ತಿಕತೆಯಾದರೂ, ಜನ ಸಾಂಪ್ರದಾಯಿಕವಾಗಿ ಕನ್ಫೂಸಿಯನ್, ತಾವೋ, ಬೌದ್ಧ, ಮುಸ್ಲಿಂ, ಕ್ರಿಶ್ಚಿಯನ್ ಇತ್ಯಾದಿ ಧರ್ಮಗಳನ್ನು ನಂಬಿದ್ದಾರೆ.ಪ್ರಮುಖವಾದ ಹ್ಯಾನ್ ಚೈನೀಸ್ ಜನಾಂಗದ ಪ್ರಮಾಣ  ಶೇ.92 ರಷ್ಟಿದೆ.

ಕ್ರಿ.ಪೂ.1700ರ ಹೊತ್ತಿಗೆ ಹುವಾಂಗ್ ಕಣಿವೆಯಲ್ಲಿ ಶಾಂಗ್ ಅರಸು ಮನೆತನ ಆಡಳಿತ ನಡೆಸುತ್ತಿತ್ತು. ಆ ಕಾಲಕ್ಕೆ ಚಕ್ರ, ಕ್ಯಾಲೆಂಡರ್ ಗಳ ತಯಾರಿಕೆಗೆ ಚೈನಾ ಹೆಸರುವಾಸಿಯಾಗಿತ್ತು. ಕ್ರಿ.ಪೂ 1122ರ ಹೊತ್ತಿಗೆ ಶಾಂಗ್ ಆಡಳಿತ ಕೊನೆಗೊಂಡು, ನಂತರ ಬಂದ ಝಾವ್ ಮನೆತನ ಹಲವು ಶತಮಾನಗಳ ಆಡಳಿತ ನಡೆಸಿತು. ಇದೇ ಅವಧಿಯಲ್ಲಿ ಖ್ಯಾತ ತತ್ವಜ್ಞಾನಿ ಕನ್ಫ್ಯೂಸಿಯಸ್  (ಕ್ರಿ.ಪೂ.551-449) ಬದುಕಿದ್ದು. ಕಬ್ಬಿಣ ಎರಕ ಹುಯ್ಯುವ ತಂತ್ರ, ಲೋಹದ ನಾಣ್ಯಗಳು, ರೇಷ್ಮೆ ಕಂಡುಹಿಡಿದಿದ್ದು ಇದೇ ಕಾಲದಲ್ಲಿ. ನಂತರ ಬಂದ ಕ್ವಿನ್ ಮನೆತನಕ್ಕೆ ಚೀನವನ್ನು ಒಗ್ಗೂಡಿಸಿದ ಕೀರ್ತಿ ಇದೆ. ಆ ಅವಧಿಯಲ್ಲಿ, ಇಂದು ವಿಶ್ವದ ಏಳು ಅದ್ಭುತಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿರುವ ಚೀನಾದ ಮಹಾಗೋಡೆಯನ್ನು ಉತ್ತರದ ಗಡಿಯುದ್ದಕ್ಕೂ ನಿರ್ಮಿಸಲಾಯಿತು.ಆನಂತರ ನಾಲ್ಕು ಶತಮಾನ ಆಳಿದ ಹ್ಯಾನ್ ವಂಶದವರ ಕಾಲದಲ್ಲಿ ಪೇಪರ್ ಸಂಶೋಧನೆ ಆಯಿತು. ಭೂಕಂಪ ಮಾಪಕವನ್ನೂ ಕಂಡುಹಿಡಿಯಲಾಯಿತು. ಪೇಪರ್ ಹಣವನ್ನೂ ಆಗಲೇ ಬಳಕೆಗೆ ತರಲಾಗಿತ್ತು.
ಸಂಗ್ ಮನೆತನ ಆಳಿದ ಕ್ರಿ.ಶ.960-1269ರವರೆಗಿನ ಕಾಲವನ್ನು ಚೀನಾದ ಸ್ವರ್ಣ ಯುಗ ಎಂದು ಬಣ್ಣಿಸಲಾಗುತ್ತದೆ. ಆ ಕಾಲದಲ್ಲಿ ಪೋರ್ಸಲಿನ್, ರೇಷ್ಮೆಯನ್ನು ಹಡಗುಗಳ ಮೂಲಕ ಈಸ್ಟ್ ಇಂಡಿಯಾ, ಆಫ್ರಿಕಾ, ಭಾರತಕ್ಕೆ ರಫ್ತು ಮಾಡಲಾಗುತ್ತಿತ್ತು.ನಂತರ ಚೀನಾ ಪರಕೀಯರ ಆಡಳಿತಕ್ಕೆ ಸಿಕ್ಕಿಹಾಕಿಕೊಂಡಿತು. ವಿಶಾಲ ಸಾಮ್ರಾಜ್ಯ ನಿರ್ಮಿಸಿಕೊಂಡಿದ್ದ ಮಂಗೋಲಿಯದ ಝೆಂಗಿಸ್ ಖಾನ್ ಚೈನಾವನ್ನೂ ಬಿಟ್ಟಿರಲಿಲ್ಲ. ಕ್ರಿ.ಶ.1223ರಲ್ಲಿ ಆತ ದಾಳಿ ನಡೆಸಿ, ಚೈನಾ ಉತ್ತರ ಭಾಗದ ಬಹುತೇಕ ಪ್ರದೇಶವನ್ನು ವಶಪಡಿಸಿಕೊಂಡ. 1260ರಲ್ಲಿ ಕಬುಲಾಯ್ ಖಾನ್ ಈ ಪ್ರದೇಶವನ್ನು ಗೆದ್ದು, ಬೀಜಿಂಗನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಡಳಿತ ನಡೆಸಿದ. ಅದೇ ಸಮಯದಲ್ಲಿ ಅಲ್ಲಿಗೆ ಆರ್ಮೇನಿಯನ್ನರು, ಮುಸ್ಲಿಂ ಮತ್ತು ಕ್ರಿಶ್ಚಿಯನ್ನರ ಪ್ರವೇಶವಾಯಿತು.ವಿವಿಧ ಮನೆತನಗಳು ಚೀನಾ ಗೋಡೆಯನ್ನು ಬಲಪಡಿಸುತ್ತಾ ಬಂದವು. ಅದರಲ್ಲೂ ಪ್ರಮುಖವಾಗಿ ಕ್ರಿ.ಶ.1368ರಲ್ಲಿ ಮಂಗೋಲಿಯನ್ನರನ್ನು ಕೆಳಗಿಳಿಸಿ ಮಿಂಗ್ ಮನೆತನದವರು ಆಡಳಿತ ಪ್ರಾರಂಭಿಸಿದಾಗ ಉತ್ತರದ ಗಡಿಯ ಗೋಡೆಯನ್ನು ಇನ್ನಷ್ಟು ಉದ್ದಗೊಳಿಸಿದರು (ಈಗಿನ ಉದ್ದ 6400 ಕಿ.ಮೀ),
ಪ್ರಾಚೀನ ಚೀನ ಮತ್ತು ಭಾರತದ ಜೊತೆ ಉತ್ತಮ ಸಂಬಂಧ ಇತ್ತು. ಮೌರ್ಯ ಮತ್ತು ಗುಪ್ತರ ಕಾಲದಲ್ಲಿ ಚೈನಾದ ಪ್ರವಾಸಿಗರಾದ ಫಾಹಿಯಾನ್ ಮತ್ತು ಹ್ಯುಎನ್ ತ್ಸಾಂಗ್ ಭಾರತಕ್ಕೆ ಪ್ರವಾಸಿಗರಾಗಿ ಬಂದಿದ್ದು, ಇಲ್ಲಿನ ಆಗಿನ ಪರಿಸ್ಥಿತಿಯ ಬಗ್ಗೆ ತಮ್ಮ ಪ್ರವಾಸ ಕಥನಗಳಲ್ಲಿ ವರ್ಣಿಸಿದ್ದಾರೆ. ಚಾಣಕ್ಯ ತನ್ನ ಅರ್ಥಶಾಸ್ತ್ರ ಗ್ರಂಥದಲ್ಲಿ, ಚೈನಾದಿಂದ ವಿವಿಧ ದೇಶಗಳಿಗಿದ್ದ, ಮಾರ್ಗಗಳ ಬಗ್ಗೆ ಉಲ್ಲೇಖಿಸಿದ್ದಾನೆ. ಚೈನಾದಲ್ಲಿ ಮೊದಲ ಶಾವೊಲಿನ್ ದೇವಸ್ಥಾನ ನಿರ್ಮಿಸಿದ ಬೋಧಿಧರ್ಮ ಭಾರತದಿಂದ ಅಲ್ಲಿಗೆ ಪ್ರವಾಸ ಮಾಡಿದ್ದು, ಆತನೇ ಅಲ್ಲಿ ಜೆನ್ ಬೌದ್ಧಮತ ಸ್ಥಾಪಕ ಎಂದು ಹೇಳಲಾಗುತ್ತದೆ. ಆರ್ಯಭಟೀಯ ಸಿದ್ಧಾಂತವನ್ನು ಚೀನಿ ಭಾಷೆಗೆ ತುಂಬ ಹಿಂದೆಯೇ ಭಾಷಾಂತರಿಸಲಾಗಿತ್ತು.ದಕ್ಷಿಣ ಭಾರತದ ತಮಿಳು ರಾಜ್ಯಗಳ ಜೊತೆಗೂ ಚೈನಾದವರು ವ್ಯಾಪಾರ ಸಂಬಂಧ ಇಟ್ಟುಕೊಂಡಿದ್ದರು. ತಂಜಾವೂರು, ತಿರುವೂರು ಮತ್ತು ಪುದುಕ್ಕೊಟ್ಟಲ್ ಜಿಲ್ಲೆಗಳಲ್ಲಿ ಪ್ರಾಚೀನ ಚೈನಾದ ನಾಣ್ಯಗಳು ದೊರೆತಿರುವುದು ಇದಕ್ಕೆ ಸಾಕ್ಷಿ.ಹದಿನೆಂಟನೇ ಶತಮಾನದಲ್ಲಿ ಸಿಖ್ ದೊರೆ ಝೋರಾವರ್ ಸಿಂಗ್ ಟಿಬೆಟ್ ನ್ನು ಆಕ್ರಮಿಸಿಕೊಂಡಿದ್ದ. 1842ರಲ್ಲಿ, ಸಿಖ್ ಮತ್ತು ಚೀನಿಯರ ನಡುವೆ ಪರಸ್ಪರರ ಪ್ರದೇಶದ ಮೇಲೆ ದಾಳಿ ನಡೆಸದಂತೆ ಚುಷೂಲ್ ಒಪ್ಪಂದ ನಡೆಯಿತು.

ಚೈನ ಸಿಲ್ಕ್‌ ರೋಡ್‌

1912ರಲ್ಲಿ ರಿಪಬ್ಲಿಕ್ ಆಫ್ ಚೈನಾ ಘೋಷಣೆ ಮಾಡಲಾಯಿತು.ಇಂಥ ಅದ್ಭುತ ಇತಿಹಾಸ ಹೊಂದಿರುವ ಚೈನಾದ ವರ್ತಮಾನವೂ ಅಷ್ಟೇ ಸೊಗಸಾಗಿದೆ. ಕಳೆದ ಎರಡು ದಶಕಗಳಲ್ಲಿ ಚೈನಾ ವಿಶ್ವದ ಇತರ ಯಾವುದೇ ದೇಶಕ್ಕೆ ತಾನು ಕಡಿಮೆ ಇಲ್ಲ ಎನ್ನುವಂತೆ ಬೆಳೆದುನಿಂತಿದೆ. ಈ ದೇಶದ ನಿವ್ವಳ ದೇಶೀಯ ಉತ್ಪಾದನೆ  2010ರಲ್ಲಿ 60,05,388 ದಶಲಕ್ಷ ಅಮೇರಿಕನ್ ಡಾಲರ್ ಇದ್ದಿದ್ದು, 2014 ರಲ್ಲಿ 104,30,590 ದಶಲಕ್ಷ ಅಮೇರಿಕನ್ ಡಾಲರ್ ಗೇರಿದೆ. ಆದರೆ ಜಾಗತಿಕ ಆರ್ಥಿಕ ಹಿಂಜರಿತದ ಹಿನ್ನೆಲೆಯಲ್ಲಿ ಜಿಡಿಪಿ ವಾರ್ಷಿಕ ಬೆಳವಣಿಗೆ ದರ ಈಗ ಸ್ವಲ್ಪ ಮಟ್ಟಿನ ಕುಸಿತ ಕಂಡಿದೆ ಎನ್ನುವುದೂ ಕೂಡ ನಿಜ.
ನಿವ್ವಳ ಮೌಲ್ಯವರ್ಧನೆ(ಜಿವಿಎ) 2014ರಲ್ಲಿ ಕೃಷಿಯ ಪಾಲು ಶೇ.9.5, ಕೈಗಾರಿಕೆ ಶೇ.42.9 ಹಾಗೂ ಸೇವೆಗಳು ಮತ್ತು ಇತರೆ ಪಾಲು ಶೇ.47ರಷ್ಟಿತ್ತು. ನಿರುದ್ಯೋಗದ ಪ್ರಮಾಣ 2014ರಲ್ಲಿ ಕೇವಲ ಶೇ.4.6ರಷ್ಟು ಮಾತ್ರ ಎನ್ನುವುದು ಗಮನಾರ್ಹ ಸಂಗತಿ.ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎನ್ನುವ ಹಣೆಪಟ್ಟಿ ಹೊಂದಿದ್ದು,  ಜನಸಂಖ್ಯಾ ನಿಯಂತ್ರಣಕ್ಕೆ ವಿಶೇಷ ಕ್ರಮಗಳನ್ನು ಕೈಗೊಂಡಿದೆ. ಇದರ ಪರಿಣಾಮ 2010-2015ರ ಅವಧಿಯಲ್ಲಿ ವಾರ್ಷಿಕ ಜನಸಂಖ್ಯೆ ಹೆಚ್ಚಳ ವಾರ್ಷಿಕ ಶೇ.0.5ರಷ್ಟಕ್ಕೆ ನಿಯಂತ್ರಿಸಲು ಸಾಧ್ಯವಾಗಿದೆ.ನಗರದಲ್ಲಿ ವಾಸಿಸುವವರ ಜನಸಂಖ್ಯೆ ಹೆಚ್ಚಾಗುತ್ತಿದ್ದು, 2015ರಲ್ಲಿ ನಗರ ಜನಸಂಖ್ಯೆ ಶೇ.55.6ಕ್ಕೆ ತಲುಪಿದೆ.
2015ರಲ್ಲಿ ಒಟ್ಟು ರಫ್ತಿನ ಮೌಲ್ಯ 22,81,856 ದಶಲಕ್ಷ ಅಮೇರಿಕನ್ ಡಾಲರ್ ಹಾಗೂ ಆಮದು ಪ್ರಮಾಣ 16,81,670.8 ದಶಲಕ್ಷ ಅಮೇರಿಕನ್ ಡಾಲರ್. ಆಮದಿಗಿಂತ ರಫ್ತಿನ ಪ್ರಮಾಣ ಹೆಚ್ಚಾಗಿದ್ದು, ದೇಶ ಆರ್ಥಿಕವಾಗಿ ಸಬಲವಾಗುವ ದಿಕ್ಕಿನಲ್ಲಿ ಬದಿಟ್ಟ ನಡೆ ಇಟ್ಟಿದೆ ಎನ್ನುವುದನ್ನು ಇದು ಸೂಚಿಸುತ್ತದೆ. ಇದು ವಿಶ್ವದ ಬಲಿಷ್ಠ ದೇಶಗಳನ್ನು ತಬ್ಬಿಬ್ಬಾಗಿಸಿದೆ.ದೇಶ ಆರ್ಥಿಕವಾಗಿ ಬಲಿಷ್ಠವಾಗಲು ಇನ್ನೂ ಒಂದು ಪ್ರಮುಖ ಕಾರಣವೆಂದರೆ, ಅವಲಂಬಿತರ ಸಂಖ್ಯೆ ಕಡಿಮೆ ಇರುವುದು. ಒಟ್ಟು ಅವಲಂಬಿತರ ಅನುಪಾತ  ಅಂದರೆ 15ರಿಂದ 64 ವರ್ಷ ವಯಸ್ಸಿನ ಪ್ರತಿ 100 ಜನಕ್ಕೆ, 14ವರ್ಷಕ್ಕಿಂತ ಕಡಿಮೆ ಮತ್ತು 65 ವರ್ಷಕ್ಕಿಂತ ಹೆಚ್ಚಿನವರ ಸಂಖ್ಯೆ ಕೇವಲ 37 ಮಾತ್ರ. ಚೈನಾದ ನಿಜವಾದ ಶಕ್ತಿ ಇಲ್ಲಿದೆ. ಅಂದರೆ ದುಡಿಯುವ ಜನ ಹೆಚ್ಚು. ಮಾನವ ಸಂಪನ್ಮೂಲವನ್ನು ಚೆನ್ನಾಗಿ ಬಳಸಿಕೊಂಡಿರುವುದೇ ಚೈನಾದ ಅಭಿವೃದ್ಧಿಯ ಗುಟ್ಟು.
ಮಹಿಳೆಯರ ಸ್ಥಿತಿಗತಿಯೂ ಉತ್ತಮವಾಗಿದ್ದು, ರಾಷ್ಟ್ರೀಯ ಸಂಸತ್ತಿನಲ್ಲಿ ಮಹಿಳೆಯರು ಶೇ.23.6ರಷ್ಟು ಸ್ಥಾನಗಳನ್ನು ಅಲಂಕರಿಸಿದ್ದಾರೆ.2014ರ ಅಂದಾಜಿನಂತೆ ಶೇ.49.3ರಷ್ಟು ಜನ ಇಂಟರ್ ನೆಟ್ ಬಳಕೆ ಮಾಡುತ್ತಿದ್ದು, ಅಲ್ಲಿನ್ನೂ ಬೆಳೆಯಲು ಸಾಕಷ್ಟು ಅವಕಾಶಗಳಿವೆ.ಜಾಗತಿಕ ಆರ್ಥಿಕ ಹಿನ್ನಡೆಯನ್ನು ಮೀರಿ, ಬೆಳೆಯಬೇಕಾಗಿರುವುದು ಚೈನಾದ ಮುಂದಿರುವ ಸವಾಲು. ಅವಲಂಬಿತರ ಸಂಖ್ಯೆ ಕ್ರಮೇಣ ಹೆಚ್ಚುತ್ತಿದ್ದು, ಚೈನಾ ಈ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದೆ. ಇದರ ಮಧ್ಯೆ ಚೈನಾಗೆ ಅದರದೇ ಆದ ಕೆಲವು ಸಮಸ್ಯೆಗಳಿವೆ. ತೈವಾನ್, ಹಾಂಗ್ ಕಾಂಗ್, ಟಿಬೆಟ್ ಸಮಸ್ಯೆಗಳಿವೆ. ತೈವಾನ್ ನಲ್ಲಿ ಪ್ರಜಾಪ್ರಭುತ್ವ ಇದ್ದು, ಅದು ತನ್ನದೇ ಪ್ರಾಂತ್ಯ ಎಂದು ಚೈನಾ ವಾದಿಸುತ್ತಿದೆ. ಬ್ರಿಟಿಷ್ ವಸಾಹತು ಆಗಿದ್ದ ಹಾಂಗ್ ಕಾಂಗ್ ನ ಸಾರ್ವಭೌಮತ್ವವನ್ನು ಚೈನಾಗೆ 1997ರಲ್ಲಿ ನೀಡಲಾಯಿತು. ಇದರಿಂದಲೂ ಅನೇಕ ಸಮಸ್ಯೆಗಳು ಹುಟ್ಟಿಕೊಂಡಿವೆ. ಜೊತೆಗೆ ಸ್ವತಂತ್ರ ಟಿಬೆಟ್  ಗಾಗಿ ನಿರಂತರ ಹೋರಾಟ ನಡೆದೇ ಇದೆ. ಇವೆಲ್ಲ ಸಮಸ್ಯೆಗಳನ್ನು ಎದುರಿಸಿ ಚೈನಾ ಮುಂದೆ ಸಾಗಬೇಕಾಗಿದೆ. ಇದೆಲ್ಲದರ ನಡುವೆ ದೇಶ ಸ್ಪಷ್ಟ ನಡೆಯೊಂದಿಗೆ ದಿಟ್ಟ ಹೆಜ್ಜೆ ಇಟ್ಟಿದೆ.