ಹಿಮಾಲಯ ಪರ್ವತ ಶ್ರೇಣಿಗಳ ಮಧ್ಯೆ ಆಧುನಿಕ ನಾಗರಿಕತೆಯಿಂದ ಒಂದು ಹೆಜ್ಜೆ ದೂರವೇ ಉಳಿದಿರುವ ದಕ್ಷಿಣ ಏಷಿಯಾದ ಪುಟ್ಟ ದೇಶ ಭೂತಾನ್. ರಾಜಪ್ರಭುತ್ವ ಹೊಂದಿರುವ  ಇಲ್ಲಿ ಟಿಬೆಟನ್ ಬೌದ್ಧ ಧರ್ಮ (lamaistic Buddhism) ಅನುಸರಿಸುವ ಜನ ಹೆಚ್ಚು. ಅಂದರೆ ಇಲ್ಲಿನ ಬೌದ್ಧದರ್ಮ, ಸ್ಥಳೀಯ ಬುಡಕಟ್ಟು ಸಂಪ್ರದಾಯಗಳನ್ನೂ ಅಳವಡಿಸಿಕೊಂಡಿದೆ. ಹಿಂದುಗಳೂ ಸಹ ಶೇ,25ರಷ್ಟು ಸಂಖ್ಯೆಯಲ್ಲಿದ್ದಾರೆ.ಜಗತ್ತಿನಲ್ಲಿಯೇ ಅತಿ ಹೆಚ್ಚು ಜನ ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುತ್ತಿರುವ ದೇಶ ಎನ್ನುವುದು ಭೂತಾನ್ ವಿಶೇಷತೆ. ಕೇವಲ ಶೇ.6ರಷ್ಟು ಮಾತ್ರ ನಗರ ಪ್ರದೇಶದಲ್ಲಿದ್ದು, ಉಳಿದವರೆಲ್ಲರೂ ಗ್ರಾಮೀಣ ಪ್ರದೇಶದಲ್ಲಿದ್ದಾರೆ. ಅದರಲ್ಲೂ ಕೃಷಿಯನ್ನೇ ಅವಲಂಬಿಸಿರುವ  ಈ ದೇಶಕ್ಕೆ ಪ್ರಕೃತಿಯೂ ಸಮೃದ್ಧವಾಗಿ ಒಲಿದಿದ್ದಾಳೆ.ಇಲ್ಲಿನ ಅಧಿಕೃತ ಭಾಷೆ ಡಿಝೊಂಕ, ಕರೆನ್ಸಿ ಎನ್ಗುಲ್ಟ್ರಮ್ (ಬಿಟಿಎನ್).
ಇಲ್ಲಿ ಭೋಟೆ(ಟಿಬೆಟನ್) ಜನಾಂಗದವರು ಶೇ.50ರಷ್ಟಿದ್ದರೆ, ನೇಪಾಳಿಯರು ಶೇ.35ರಷ್ಟಿದ್ದಾರೆ. ಇತರೆ ಜನಾಂಗದವರೂ ಶೇ.15ರಷ್ಟು ಪ್ರಮಾಣದಲ್ಲಿದ್ದಾರೆ.ಏಳನೇ ಶತಮಾನದಲ್ಲಿ ಟಿಬೆಟ್ ನಲ್ಲಿ ಉಂಟಾದ ಅಶಾಂತಿಯಿಂದಾಗಿ ಅವರು ಭೂತಾನಿಗೆ ಬಂದರು ಎನ್ನಲಾಗುತ್ತದೆ.ಚರಿತ್ರೆಯುದ್ದಕ್ಕೂ ದಾಸ್ಯಕ್ಕೆ ಸಿಗದೆ, ಸ್ವತಂತ್ರ ದೇಶವಾಗಿ ಉಳಿದ ಕೆಲವೇ ದೇಶಗಳ ಪೈಕಿ ಭೂತಾನ್ ಕೂಡ ಒಂದು.ಅಲ್ಲಿ ಅಧಿಕಾರಕ್ಕಾಗಿ ಜಮೀನ್ದಾರರಲ್ಲಿಯೇ ಪರಸ್ಪರ ಕಿತ್ತಾಟಗಳು ನಡೆಯುತ್ತಿದ್ದವು. ಕ್ರಿ.ಶ.1885ರಲ್ಲಿ ಉಗ್ಯೆನ್ ವಾಂಗ್ ಚುಕ್ ಅಧಿಕಾರದ ಚುಕ್ಕಾಣಿಯನ್ನು ಕೈಗೆ ತೆಗೆದುಕೊಂಡು, ಬ್ರಿಟಿಷರ ಜೊತೆಗೂ ಉತ್ತಮ ಬಾಂಧವ್ಯ ಬೆಳೆಸಿಕೊಂಡರು. ಕ್ರಿ.ಶ.1907ರಲ್ಲಿ ಅಧಿಕೃತವಾಗಿ ಪಟ್ಟಾಭಿಷೇಕವಾಯಿತು. ಕ್ರಿ.ಶ.1910ರಲ್ಲಿ ಭೂತಾನ್ ರಾಜ ಮತ್ತು ಬ್ರಿಟಿಷರ ನಡುವೆ ನಡೆದ ಒಪ್ಪಂದದಲ್ಲಿ (ಪುನಖ ಒಪ್ಪಂದ), ವಿದೇಶಾಂಗ ವ್ಯವಹಾರಗಳಲ್ಲಿ ಬ್ರಿಟಿಷರ ಸಲಹೆಗಳನ್ನು ಒಪ್ಪುವುದಾದಲ್ಲಿ,  ಭೂತಾನಿನ ಆಂತರಿಕ ವ್ಯವಹಾರಗಳಲ್ಲಿ ತಲೆ ಹಾಕದಿರಲು ಬ್ರಿಟಿಷರು ಸಮ್ಮತಿಸಿದರು.  ಹೀಗಾಗಿ ಭೂತಾನ್ ಸ್ವತಂತ್ರವಾಗಿಯೇ ಉಳಿಯಿತು. ಈಗಿನವರೆಗೂ ರಾಜಸತ್ತೆ ಮುಂದುವರಿಯುತ್ತಿದೆ.
ಉಗ್ಯೇನ್ ಮಗ ಜಿಗ್ಮೆ, ಜಿಗ್ಮೆ ಮಗ ಜಿಗ್ಮೆ ಡೊರ್ಲಿ, ಜಿಗ್ಮೆ ಡೊರ್ಲಿ ಮಗ ಜಿಗ್ಮೆ ಸಿಂಗ್ಯೆ ಆಡಳಿತದ ನಂತರ ಪ್ರಸ್ತುತ, ಜಿಗ್ಮೆ ಸಿಂಗ್ಯೆ ಮಗ ಜಿಗ್ಮೆ ಖೇಸರ್ ನಮ್ಗೇಲ್ ವಾಂಗ್ ಚುಕ್ ಭೂತಾನಿನ ರಾಜರಾಗಿದ್ದಾರೆ. ಜಿಗ್ಮೆ ಸಿಂಗ್ಯೆ ಮೂವತ್ತು ವರ್ಷಗಳ ಕಾಲ ಅಧಿಕಾರ ನಡೆಸಿದ್ದು, ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ. ರಾಜಪ್ರಭುತ್ವದ ಜೊತೆಗೆ ಆ ಕಾಲದಲ್ಲಿಯೇ ಪ್ರಜಾಪ್ರಭುತ್ವವನ್ನೂ ಅಳವಡಿಸಿಕೊಂಡು, ಅಧಿಕಾರ ವಿಕೇಂದ್ರಿಕರಣದತ್ತ ದೇಶ ಕ್ರಮೇಣ ಸಾಗಿದೆ.ಈ ದೇಶವನ್ನು ಭೌಗೋಳಿಕವಾಗಿ ಮೂರು ಭಾಗಗಳನ್ನಾಗಿ ಮಾಡಬಹುದು. ಒಂದು ಟಿಬೆಟ್ ಗಡಿಯಲ್ಲಿನ ಪರ್ವತ ಶ್ರೇಣಿಗಳ ಪ್ರದೇಶ. ಎರಡು, ಮಧ್ಯದ ಎತ್ತರ ಪ್ರದೇಶ ಮತ್ತು ಮೂರನೆಯದಾಗಿ ಅದರ ಕೆಳಗಿನ ಅರೆಉಷ್ಣವಲಯದ ಕಾಡು ಪ್ರದೇಶ.
ಮಧ್ಯದ ಎತ್ತರ ಪ್ರದೇಶವನ್ನು ಡ್ಯೂರಸ್ ಪ್ಲೈನ್ ಎಂತಲೂ ಕರೆಯಲಾಗುತ್ತದೆ. ಇದು ಅತ್ಯಂತ ಫಲವತ್ತಾಗಿದ್ದು, ಜೋಳ, ಗೋಧಿ, ಬಾರ್ಲಿ, ಆಲೂಗಡ್ಡೆಯನ್ನು ಬೆಳೆಯಲಾಗುತ್ತದೆ. ಈ ದೇಶದ ಮುಖ್ಯ ರಫ್ತು ವಹಿವಾಟು ಇರುವುದು ಭಾರತದ ಜೊತೆಗೆ. ಭೂತಾನ್ ನಿಂದ ಭಾರತಕ್ಕೆ ಟಿಂಬರ್ ರಫ್ತಾಗುತ್ತದೆ. ಇದನ್ನು ಹೊರತುಪಡಿಸಿದಂತೆ ಅಲ್ಲಿನ ಆರ್ಥಿಕತೆಯ ಪ್ರಮುಖ ಆಧಾರ ಪ್ರವಾಸೋದ್ಯಮ. ಅನೇಕ ಜಲಪಾತಗಳಿರುವುದರಿಂದ ಜಲ ವಿದ್ಯುತ್ ಉತ್ಪಾದಿಸುವ ಅಪಾರ ಸಾಮರ್ಥ್ಯ ಆ ದೇಶಕ್ಕಿದೆ.ರಿಪಬ್ಲಿಕ್ ಆಫ್ ಕೊರಿಯ ಮತ್ತು ಚೈನಾ ಜೊತೆ ವ್ಯಾಪಾರ ವ್ಯವಹಾರಗಳನ್ನು ಇಟ್ಟುಕೊಂಡಿರುವ ಭೂತಾನ್, ಬಾಂಗ್ಲಾದೇಶ ಮತ್ತು ಇಟಲಿ ದೇಶಗಳ ಜೊತೆಗೂ ರಫ್ತು ವಹಿವಾಟು ನಡೆಸುತ್ತದೆ.
ಭೂತಾನಿನ ಜನಸಂಖ್ಯೆ 2016ರ ಅಂದಾಜಿನಂತೆ 7.84 ಲಕ್ಷ. 38,394 ಚ,ಕಿ, ವಿಸ್ತೀರ್ಣವನ್ನು ಹೊಂದಿದ್ದು, ಜನಸಾಂದ್ರತೆ ಒಂದು ಚ.ಕಿ.ನಲ್ಲಿ ಕೇವಲ 20 ಜನ. ಅಂದರೆ ಎಷ್ಟೊಂದು ಅಲ್ಲಿ ಜನಸಂಖ್ಯೆಯ ಭಾರವಿಲ್ಲ ಎನ್ನುವುದನ್ನು ಗಮನಿಸಬಹುದು.2014ರಲ್ಲಿ ಈ ದೇಶದ ನಿವ್ವಳ ದೇಶೀಯ ಉತ್ಪನ್ನ (ಜಿಡಿಪಿ) 1965 ದಶಲಕ್ಷ ಅಮೇರಿಕನ್ ಡಾಲರ್. ನಿವ್ವಳ ಮೌಲ್ಯವರ್ಧನೆಯಲ್ಲಿ ಕೃಷಿಯ ಪಾಲು ಶೇ.17.1ರಷ್ಟಿದ್ದರೆ, ಕೈಗಾರಿಕೆ ಪಾಲು ಶೇ.44 ಮತ್ತು ಸೇವಾವಲಯದ ಪಾಲು ಶೇ.39. ಕೃಷಿಯಲ್ಲಿ ಶೇ.56ರಷ್ಟು ಕಾರ್ಮಿಕರು ತೊಡಗಿಕೊಂಡಿದ್ದು, ಅದರಿಂದ ಜಿಡಿಪಿಗೆ ಕೊಡುಗೆ ತೀರಾ ಕಡಿಮೆ ಎನ್ನುವುದನ್ನು ಗಮನಿಸಬಹುದು. ಆದರೆ ನಿರುದ್ಯೋಗದ ಪ್ರಮಾಣ ಇಲ್ಲಿ ಕೇವಲ ಶೇ.2.6ರಷ್ಟು ಮಾತ್ರ.


ಮಹಿಳೆಯರು ಪುರುಷರ ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ದೇಶ ಭೂತಾನ್. ಶೇ.65.2ರಷ್ಟು ಮಹಿಳೆಯರು ದುಡಿಯುವ ಕೈಗಳಾಗಿದ್ದರೆ, ಶೇ.77.7ರಷ್ಟು ಪುರುಷರು ಕಾರ್ಮಿಕ ಬಲವಾಗಿದ್ದಾರೆ.ಅವಲಂಬಿತರ ಅನುಪಾತ ಅಂದರೆ 15 ರಿಂದ 64 ವರ್ಷ ವಯಸ್ಸಿನ ಪ್ರತಿ ನೂರು ಜನಕ್ಕೆ, 14ಕ್ಕಿಂತ ಕಡಿಮೆ ಮತ್ತು 65ಕ್ಕಿಂತ ಹೆಚ್ಚು ವಯಸ್ಸಿನ 47 ಜನ ಇದ್ದಾರೆ. ಒಟ್ಟು ಜಿಡಿಪಿಯ ಶೇ.5.9ರಷ್ಟು ಶಿಕ್ಷಣಕ್ಕೆ, ಶೇ.3.6ರಷ್ಟು ಆರೋಗ್ಯಕ್ಕೆ ವೆಚ್ಚ ಮಾಡಲಾಗುತ್ತಿದೆ. ಶೇ.71.8ರಷ್ಟು ಭೂಪ್ರದೇಶದಲ್ಲಿ ಅರಣ್ಯವಿದೆ. ಶೇ.ನೂರರಷ್ಟು ಜನ ಶುದ್ಧ ಕುಡಿಯುವ ನೀರನ್ನು ಉಪಯೋಗಿಸುವ ಈ ದೇಶಕ್ಕೆ, ಸಾಂಪ್ರದಾಯಿಕತೆಯನ್ನು ಉಳಿಸಿಕೊಂಡು, ಕೈಗಾರಿಕೆಯನ್ನು ಬೆಳೆಸಬೇಕಾದ ಅನಿವಾರ್ಯತೆ ಇದೆ. ಪ್ರಾಕೃತಿಕ ಸಂಪನ್ಮೂಲಗಳನ್ನು ಇನ್ನಷ್ಟು ಹೆಚ್ಚು ಲಾಭದಾಯಕವಾಗಿ ಬಳಸಿಕೊಳ್ಳಬೇಕಾಗಿದೆ. ವೃಥಾ ಹರಿದುಹೋಗುತ್ತಿರುವ ನೀರಿನಿಂದ ಭಾರಿ ಪ್ರಮಾಣದ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಇದ್ದು, ಆ ದಿಕ್ಕಿನಲ್ಲಿ ಹೆಚ್ಚಿನ ಗಮನ ಕೊಡಬೇಕಾಗಿದೆ.