ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ವಿಸ್ತೀರ್ಣದ ಭೂಪ್ರದೇಶ ಹೊಂದಿದ್ದು, ಅದಕ್ಕೆ ಹೋಲಿಸಿದಲ್ಲಿ ಕಡಿಮೆ ಜನಸಂಖ್ಯೆ ಹೊಂದಿರುವ, ಜೊತೆಗೆ ವೈಜ್ಞಾನಿಕ ಆವಿಷ್ಕಾರಗಳಲ್ಲಿ ಅಗ್ರಣಿಯಾಗಿದ್ದು, ಸಾಟಿಯಿಲ್ಲದ ತಾಂತ್ರಿಕತೆ ಮತ್ತು ಅಪಾರ ಮಿಲಿಟರಿ ಶಕ್ತಿಯಿಂದ ಬಲಾಢ್ಯ ಎನ್ನಿಸಿಕೊಂಡಿರುವ ದೇಶ ರಷ್ಯನ್ ಫೆಡರೇಷನ್ (Russian Federation).

ಎರಡು ಶಕ್ತಿಕೇಂದ್ರಗಳನ್ನು ಹೊಂದಿರುವ ಈ ಜಗತ್ತಿನಲ್ಲಿ ಅಮೇರಿಕ ಒಂದು ಕೇಂದ್ರವಾಗಿದ್ದರೆ, ಮತ್ತೊಂದು ಕೇಂದ್ರ ರಷ್ಯಾ.ಪೂರ್ವ ಯೂರೋಪಿನ ಈ ದೇಶದ ವಿಸ್ತೀರ್ಣ 1,70,98,246 ಚ.ಕಿ.ಮೀ. ಇಷ್ಟೊಂದು ವಿಶಾಲ ಭೂಪ್ರದೇಶಕ್ಕೆ ಹೋಲಿಸಿದಲ್ಲಿ ಜನಸಂಖ್ಯೆ ತೀರಾ ಕಡಿಮೆ. 2016ರಲ್ಲಿ ರಷ್ಯಾದ ಅಂದಾಜು ಜನಸಂಖ್ಯೆ 14.34 ಕೋಟಿ ಮಾತ್ರ.ಜನಸಾಂದ್ರತೆ ಎಷ್ಟು ವಿರಳ ಎಂದರೆ, ಒಂದು ಚದರ ಕಿ.ಮೀ ಗೆ ಕೇವಲ 8.8 ಮಾತ್ರ. ಅಂದಾಜು 1.22 ಕೋಟಿ ಜನಸಂಖ್ಯೆ ಹೊಂದಿರುವ ಮಾಸ್ಕೋ ನಗರ ಇದರ ರಾಜಧಾನಿ. ರಷ್ಯನ್ ರೂಬಲ್ -ಆರ್ ಯು ಬಿ (Ruble) ಈ ದೇಶದ ಕರೆನ್ಸಿ.


ನಲವತ್ತಾರು ಒಬ್ಲಾಸ್ಟ್ (Oblast), 22 ರಿಪಬ್ಲಿಕ್ (Republic), 9 ಕ್ರಾಯ್ (Krai) , 4 ಸ್ವಾಯುತ್ತ ಒಕ್ರುಗ್ (Autonomous okrug), 3 ಒಕ್ಕೂಟ ನಗರಗಳು (Federal city) ಮತ್ತು ಒಂದು ಸ್ವಾಯುತ್ತ ಒಬ್ಲಾಸ್ಟ್ ಸೇರಿ ರಷ್ಯಾ ಒಕ್ಕೂಟವಾಗಿದ್ದು, ಎಲ್ಲವಕ್ಕೂ ಸಮಾನ ಹಕ್ಕುಗಳಿವೆ.ಒಬ್ಲಾಸ್ಟ್ ಎಂದರೆ ಪ್ರಾಂತ್ಯ.ಅದು ಪ್ರತ್ಯೇಕ ಗವರ್ನರ್ ಮತ್ತು ಚುನಾಯಿತ ಶಾಸನಸಭೆಯನ್ನು ಹೊಂದಿರುತ್ತದೆ. ರಿಪಬ್ಲಿಕ್ ಗಳು ಜನಾಂಗೀಯ ಅಲ್ಪಸಂಖ್ಯಾತರ ಮೂಲಸ್ಥಳವಾಗಿದ್ದು, ಸ್ವಾಯುತ್ತವಾಗಿರುತ್ತವೆ. ಅವೂ ಕೂಡ ಪ್ರತ್ಯೇಕ ಶಾಸನಸಭೆಯನ್ನೂ ಹೊಂದಿರುತ್ತದೆ. ಕ್ರಾಯ್ ಗಳೂ ಸಹ ಒಬ್ಲಾಸ್ಟ್ ಗಳಂತೆ ಪ್ರಾಂತ್ಯವಾಗಿದ್ದು, ವಿಶೇಷ ಪ್ರಾದೇಶಿಕ ಐತಿಹಾಸಿಕ ಹಿನ್ನೆಲೆ ಹೊಂದಿವೆ. ಜನಾಂಗೀಯ ಅಲ್ಪಸಂಖ್ಯಾತರು ಬಹುಸಂಖ್ಯೆಯಲ್ಲಿರುವ ಪ್ರದೇಶವನ್ನು ಗುರುತಿಸಿ 4 ಸ್ವಾಯುತ್ತ ಒಕ್ರುಗ್ ಗಳನ್ನು ರಚಿಸಲಾಗಿದೆ. 3 ಫೆಡರಲ್ ನಗರಗಳು ಪ್ರತ್ಯೇಕ ಪ್ರದೇಶಗಳಾಗಿ ಕಾರ್ಯ ನಿರ್ವಹಿಸುತ್ತವೆ.

ರಷ್ಯಾ ದೇಶದ ಇನ್ನೊಂದು ಆಸಕ್ತಿಕರ ಸಂಗತಿಯೆಂದರೆ, 9 ಸಮಯ ವಲಯಗಳನ್ನು ಅದು ಹೊಂದಿದೆ. ಪೂರ್ವದಿಂದ ಪಶ್ಚಿಮ ದಿಕ್ಕಿಗೆ ಅಷ್ಟೊಂದು ವಿಶಾಲ ಭೂಪ್ರದೇಶದಲ್ಲಿ ಹರಡಿನಿಂತಿದೆ.1992ರಕ್ಕೂ ಮೊದಲು ಅಸ್ತಿತ್ವದಲ್ಲಿದ್ದ ಯುನೈಟೆಡ್ ಸೋವಿಯತ್ ಸೋಷಿಯಲಿಸ್ಟ್ಸ್ ರಿಪಬ್ಲಿಕ್ (USSR) ವಿಲೀನಗೊಂಡಾಗ ಅದು ವಿಭಜನೆಗೊಂಡು, 15 ಸ್ವತಂತ್ರ ದೇಶಗಳಾದವು. ಆ ಪೈಕಿ ಫೆಡರೇಷನ್ ಆಫ್ ರಷ್ಯಾ ಕೂಡ ಒಂದು. ಯುಎಸ್ಎಸ್ಆರ್ ವಿಲೀನದ ನಂತರವೂ ರಷ್ಯಾ ದೇಶವೇ ಜಗತ್ತಿನಲ್ಲಿ ಹೆಚ್ಚು ವಿಸ್ತಾರವಾದ ದೇಶವಾಗಿ ಉಳಿಯಿತು.

ಸೋವಿಯತ್ ಪತನದಿಂದ ಸ್ವತಂತ್ರಗೊಂಡ ದೇಶಗಳನ್ನು, ಐದು ಗುಂಪುಗಳಲ್ಲಿ ವಿಂಗಡಿಸಲಾಗುತ್ತದೆ. ಎಸ್ಟೋನಿಯ, ಲ್ಯಾಟ್ವಿಯಾ ಮತ್ತು ಲಿಥುವಾನಿಯ ದೇಶಗಳು ಬಾಲ್ಟಿಕ್ ರಾಷ್ಟಗಳಾದರೆ, ಕಜಕ್ ಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್, ತುರ್ಕ್ ಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಮಧ್ಯ ಏಷಿಯಾಗೆ ಸೇರುತ್ತವೆ. ಬೆಲಾರಸ್, ಮಾಲ್ಡೋವಾ ಮತ್ತು ಉಕ್ರೇನ್ ಪೂರ್ವ ಪ್ರಾಚ್ಯ ದೇಶಗಳಾಗಿದ್ದು, ಆರ್ಮೇನಿಯ,ಅಜರ್ ಬೈಜಾನ್ ಮತ್ತು ಜಾರ್ಜಿಯಾ ದಕ್ಷಿಣ ಕ್ಯಾಕಸಸ್ ದೇಶಗಳಾಗಿವೆ. ರಷ್ಯನ್ ಒಕ್ಕೂಟ ಯುರೇಶಿಯ ಭಾಗಕ್ಕೆ ಸೇರಿದೆ.

ಆದರೆ 1989ರಲ್ಲಿ ಅಂದಿನ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಮಿಖಾಯಿಲ್ ಗೊರ್ಬಚೇವ್, ಪೆರಸ್ತ್ರೋಯ್ಕ (Perastroika)- ಆರ್ಥಿಕ ಮರುರಚನೆ ಮತ್ತು ಗ್ಲಾಸ್ ನಾಸ್ಟ್ (Glasnost)- ಮುಕ್ತತೆ ನೀತಿಗಳನ್ನು ಜಾರಿಗೊಳಿಸಿದರು. ಇದಕ್ಕೆ ಸಿದ್ಧವಿಲ್ಲದ ದೇಶ, ಆರ್ಥಿಕ ಹಿನ್ನಡೆಯನ್ನು ಅನುಭವಿಸಬೇಕಾಗಿ ಬಂದಿತು. ಅದರ ಪರಿಣಾಮವಾಗಿಯೇ ಯುಎಸ್ಎಸ್ಆರ್ ವಿಲೀನಗೊಂಡಿದ್ದು.

ಪ್ರಾಚೀನ ರಷ್ಯನ್ನರು ಸ್ಲೇವಿಕ್ ಭಾಷಿಕ ಜನಾಂಗದವರಾಗಿದ್ದರು. ಒಂಬತ್ತನೇ ಶತಮಾನದಲ್ಲಿ ಸ್ಕ್ಯಾಂಡಿನೋವಿಯಾದ ರಾಜರು ಅಲ್ಲಿಗೆ ಬಂದಿಳಿದು, ಆ ಭೂಪ್ರದೇಶವನ್ನು ಆಕ್ರಮಿಸಿಕೊಂಡರು. ಸ್ಲೇವಿಕ್ ಜನ ಸ್ಕ್ಯಾಂಡಿನೋವಿಯದ ಜನರೊಂದಿಗೆ ಬೆರೆತುಹೋದರು.ಜೊತೆಗೆ ಅವರ ಮೇಲೆ ಗ್ರೀಕ್ ಕ್ರಿಶ್ಚಿಯನ್ನರ ಪ್ರಭಾವವೂ ಆಯಿತು.

12ನೇ ಶತಮಾನದಲ್ಲಿ ರಷ್ಯದ ಮೇಲೆ ಆಕ್ರಮಣ ಮಾಡಿದ್ದು ಮಂಗೋಲಿಯನ್ನರು. ಆ ಸಮಯದಲ್ಲಿ ನಾಶವಾದ ಹಳೇ ನಗರಗಳು ಮತ್ತೆ ಪುನರುತ್ಥಾನಗೊಳ್ಳಲಿಲ್ಲ, ಆದರೆ ಆಗ ಮಾಸ್ಕೋದಂತಹ ಹೊಸ ನಗರಗಳು ತಲೆ ಎತ್ತಿ ನಿಂತವು. 15ನೇ ಶತಮಾನದಲ್ಲಿ ಮೂರನೇ ಐವಾನ್ (ಐವಾನ್ ದಿ ಗ್ರೇಟ್) ನೇತೃತ್ವದಲ್ಲಿ ರಷ್ಯಾ ಒಂದು ಸಂಘಟಿತ ದೇಶವಾಯಿತು. 1547ರಲ್ಲಿ ನಾಲ್ಕನೇ ಐವಾನ್ ನಿರಂಕುಶ ಆಡಳಿತಗಾರನಾಗಿ ಹೊರಹೊಮ್ಮಿ, ತನ್ನನ್ನು ‘ಜಾರ್’ (czar) ಎಂದು ಘೋಷಿಸಿಕೊಂಡ. ನಾಲ್ಕನೇ ಐವಾನ್ ನಂತರ ರೊಮೊನೊವ್ ಸಂತತಿಯ (Romonov dynasty) ಜಾರ್ ಚಕ್ರವರ್ತಿಗಳ ಆಡಳಿತ ಪ್ರಾರಂಭವಾಯಿತು. 1917ರವರೆಗೂ ಇದೇ ಸಂತತಿಯ ಜಾರ್ ಚಕ್ರವರ್ತಿಗಳು ರಾಜ್ಯಭಾರ ನಡೆಸಿದರು. ನೆಪೋಲಿಯನ್ ಪಡೆಗಳು ರಷ್ಯದ ಮೇಲೆ ದಾಳಿ ನಡೆಸಿದಾಗ, ಅದನ್ನು ಸಂಪೂರ್ಣವಾಗಿ ಸೋಲಿಸಿದ ರಷ್ಯಾ ಬಲಾಢ್ಯ ಮಿಲಿಟರಿ ಶಕ್ತಿ ಹೊಂದಿದ ದೇಶವಾಗಿ ಹೊರಹೊಮ್ಮಿತು.ಕೈಗಾರಿಕಾ ಕ್ರಾಂತಿ (Industrial Revolution) ರಷ್ಯಾದ ಮೇಲೆ ತುಂಬ ಪ್ರಭಾವ ಬೀರಿದ ಘಟನೆ. ಆಗ ದೇಶ ಕೃಷಿಯಿಂದ ಕೈಗಾರಿಕೆಯೆಡೆಗೆ ತಿರುಗಿತು. ಕಾರ್ಮಿಕ ಬಲವೂ ಹೆಚ್ಚಿತು. 1903ರಲ್ಲಿ ಬೊಲ್ಶೆವಿಕ್ಸ್ ಎನ್ನುವ ಕಾರ್ಮಿಕರ ಸಂಘಟನೆಯನ್ನು ವ್ಲದಿಮೀರ್ ಲೆನಿನ್ (vladimir Lenin) ಮತ್ತು ಅಲೆಕ್ಸಾಂಡರ್ ಬೊಗ್ಡೊನೊವ್ (alexander Bogdonov) ಪ್ರಾರಂಭಿಸಿದರು.

ಈ ಘಟನೆಗಳೆಲ್ಲ ನಡೆಯುತ್ತಿದ್ದಾಗಲೇ ಜಗತ್ತಿನ ಮೊದಲ ಮಹಾಸಮರದಲ್ಲಿ ರಷ್ಯಾ ಪಾಲ್ಗೊಂಡಿತು. ಸಾಕಷ್ಟು ನಷ್ಟವನ್ನೂ ಅನುಭವಿಸಿತು. ಒಂದೆಡೆ ಕೃಷಿ ತೊರೆದು ಕೈಗಾರಿಕೆಗಳಲ್ಲಿ ದುಡಿಯಲು ಜನತೆ ಪ್ರಾರಂಭಿಸಿದ್ದರು. ಇನ್ನೊಂದು ಕಡೆ ಮೊದಲ ಮಹಾ ಸಮರದ ಪರಿಣಾಮ ನಿರುದ್ಯೋಗದ ಸಮಸ್ಯೆ ತಲೆದೋರಿತು. ಹೀಗಾಗಿ ಭಾರಿ ಪ್ರಮಾಣದ ಆಹಾರ ಕೊರತೆ, ಹಣದುಬ್ಬರ ಭಾಧಿಸತೊಡಗಿದವು. ಆಗ ಕಾರ್ಮಿಕರ ಕ್ರಾಂತಿ ಬಲಗೊಂಡು, 1917ರಲ್ಲಿ ಜಾರ್ ಚಕ್ರವರ್ತಿ ಯಾಗಿದ್ದ ಎರಡನೇ ನಿಕೋಲಸ್ (Nicolas 2) ಅಧಿಕಾರ ತ್ಯಜಿಸಬೇಕಾಯಿತು. ನಂತರ ಮಾರ್ಕ್ಸ್ ವಾದದ ಆಧಾರದ ಮೇಲೆ ಅಸ್ತಿತ್ವಕ್ಕೆ ಬಂದ ಸೋವಿಯತ್ ಒಕ್ಕೂಟದ ಕಮ್ಯುನಿಸ್ಟ್ ಸರ್ಕಾರ, ನಾಸ್ತಿಕವಾದ ಮತ್ತು ಭೌತಿಕವಾದಗಳನ್ನು ಉತ್ತೇಜಿಸಿತು.

ಎರಡನೇ ಮಹಾಯುದ್ಧದಲ್ಲಿ ಬರ್ಲಿನ್ ನ್ನು ವಶಪಡಿಸಿಕೊಳ್ಳುವಲ್ಲಿ ರಷ್ಯಾ ಯಶಸ್ವಿಯಾದರೂ, ಅಪಾರ ಪ್ರಮಾಣದ ರಷ್ಯನ್ನರು ಪ್ರಾಣ ಕಳೆದುಕೊಂಡಿದ್ದರು. ಅನೇಕ ನಗರಗಳು ಧ್ವಂಸಗೊಂಡಿದ್ದವು. ಭಾರಿ ನಷ್ಟವನ್ನು ಎದುರಿಸಿತು. ಆದರೆ ಅದು ಮರುಚೇತರಿಸಿಕೊಂಡಿತು.ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ರಷ್ಯಾದ ಸಾಧನೆ ಅನನ್ಯ. ಬಾಹ್ಯಾಕಾಶಕ್ಕೆ ಮೊದಲ ಕೃತಕ ಉಪಗ್ರಹ ಸ್ಪೂತ್ನಿಕ್ 1 ಕಳುಹಿಸಿದ ಕೀರ್ತಿ ರಷ್ಯಾ ದೇಶಕ್ಕಿದೆ. ಬಾಹ್ಯಾಕಾಶಕ್ಕೆ 1961ರಲ್ಲಿ ಮೊದಲ ಮಾನವನನ್ನು ಕಳುಹಿಸಿದ್ದೂ ಕೂಡ ಇದೇ ದೇಶ. ಯೂರಿ ಗಗಾರಿನ್ (Yuri Gagarin) ಬಾಹ್ಯಾಕಾಶ ತಲುಪಿದ ಮೊದಲ ಮಾನವ.

ಅಪಾರ ಅಣ್ವಸ್ತ್ರ ಬಲದಿಂದ ಜಗತ್ತಿನ ಒಂದು ಶಕ್ತಿಕೇಂದ್ರವಾಗಿ ರೂಪುಗೊಂಡಿದ್ದ ಯುಎಸ್ಎಸ್ಆರ್,ಅದ್ಭುತ ತಾಂತ್ರಿಕ ಔನ್ನತ್ಯವನ್ನು ಸಾಧಿಸಿದಾಗಲೂ ಪತನಗೊಳ್ಳಬೇಕಾಗಿ ಬಂದಿದ್ದು ವಿಪರ್ಯಾಸವೇ ಸರಿ.2014ರಲ್ಲಿ ರಷ್ಯಾದ ನಿವ್ವಳ ದೇಶೀಯ ಉತ್ಪನ್ನ (GDP) 18,49,940 ದಶಲಕ್ಷ ಅಮೇರಿಕನ್ ಡಾಲರ್, ಅಂದರೆ ತಲಾ ನಿವ್ವಳ ದೇಶೀಯ ಉತ್ಪನ್ನ 12,897.9 ಅಮೇರಿಕನ್ ಡಾಲರ್ ಗಳಷ್ಟಿತ್ತು. ನಿವ್ವಳ ಮೌಲ್ಯವರ್ಧನೆ (GVA)ಯಲ್ಲಿ ಕೃಷಿಯ ಪಾಲು ಶೇ.4.1, ಕೈಗಾರಿಕೆಯ ಪಾಲು ಶೇ.36.8, ಸೇವಾ ವಲಯದ ಪಾಲು 59.1ರಷ್ಟಿತ್ತು.

ಪೆಟ್ರೋಲಿಯಂ, ನೈಸರ್ಗಿಕ ಅನಿಲ, ವಿವಿಧ ಖನಿಜಗಳು ಮತ್ತು ಟಿಂಬರ್ ಇಲ್ಲಿನ ಮುಖ್ಯ ಸಂಪನ್ಮೂಲ. ಚೈನಾ, ಜರ್ಮನಿ, ಅಮೇರಿಕ ಮತ್ತು ನೆದರ್ ಲ್ಯಾಂಡ್ಸ್ ಜೊತೆ ಮುಖ್ಯವಾದ ವ್ಯಾಪಾರ ಸಂಬಂಧಗಳಿವೆ. ಕ್ರೈಸ್ತ, ಇಸ್ಲಾಂ, ಬೌದ್ಧ ಮತ್ತು ಜುಡಾಯಿಸಂ ಧರ್ಮಗಳನ್ನು ನಂಬಿರುವ ಜನ ಇಲ್ಲಿದ್ದಾರೆ.ನಿರುದ್ಯೋಗದ ಪ್ರಮಾಣ 2005ರಲ್ಲಿ ಶೇ.7.1ರಷ್ಟಿದ್ದಿದ್ದು, 2014ರಲ್ಲಿ 5.2ಕ್ಕೆ ಇಳಿದಿದೆ. ಮಹಿಳಾ ಜನಸಂಖ್ಯೆಯಲ್ಲಿ ಶೇ.56.5ರಷ್ಟು ಕಾರ್ಮಿಕ ಬಲವಾಗಿದ್ದರೆ, ಪುರುಷರ ಜನಸಂಖ್ಯೆಯಲ್ಲಿ ಶೇ.70.8ರಷ್ಟು ಕಾರ್ಮಿಕ ಬಲವಾಗಿದ್ದಾರೆ. 2015ರಲ್ಲಿ ನಗರ ಜನಸಂಖ್ಯೆ ಶೇ.74ರಷ್ಟಿತ್ತು. ಹೆಚ್ಚು ಕಡಿಮೆ ಎಲ್ಲರಿಗೂ ಪ್ರಾಥಮಿಕ ಮತ್ತು ಸೆಕೆಂಡರಿ ಶಿಕ್ಷಣ ದೊರೆಯುತ್ತಿದೆ. ಶೇ.70.5ರಷ್ಟು ಜನ ಇಂಟರ್ನೆಟ್ ಉಪಯೋಗಿಸುತ್ತಿದ್ದಾರೆ. 2013ರ ಅಂದಾಜಿನಂತೆ ಶೇ.49.8ರಷ್ಟು ಭೂಮಿ ಅರಣ್ಯಪ್ರದೇಶವಾಗಿದೆ. ನಗರ ಪ್ರದೇಶದಲ್ಲಿ ಶೇ.99 ಮತ್ತು ಗ್ರಾಮೀಣ ಪ್ರದೇಶದಲ್ಲಿ ಶೇ.91ರಷ್ಟು ಜನಕ್ಕೆ ಶುದ್ಧ ಕುಡಿಯುವ ನೀರಿನ ಲಭ್ಯತೆ ಇದೆ.

ಇಂಥ ದೇಶದ ಮೇಲೆ ಅಮೇರಿಕ, ಯೂರೋಪಿಯನ್ ಯೂನಿಯನ್, ಆಸ್ಟ್ರೇಲಿಯ ಮುಂತಾದ ದೇಶಗಳು ನಿರ್ಬಂಧ ಹೇರಿರುವುದು ಮತ್ತೊಂದು ವೈಪರೀತ್ಯ. ಇದಕ್ಕೆ ಕಾರಣ ಉಕ್ರೇನ್ ಜೊತೆಗಿನ ವಿವಾದ.2014ರ ಆರಂಭದಲ್ಲಿ ಉಕ್ರೇನಿನ ಕ್ರಿಮಿಯ ಪ್ರದೇಶ (Crimea) ಮತ್ತು ಸೆವಾಸ್ಟೊಪೋಲ್ (Sevastopol) ನಗರದ ಮೇಲೆ ರಷ್ಯನ್ ಫೆಡರೇಷನ್ ಸೈನಿಕ ದಾಳಿ ನಡೆಸಿತು. ಅದರ ಬೆನ್ನ ಹಿಂದೆಯೇ ಮಾರ್ಚ್ 16, 2014ರಂದು ಸ್ವಾಯುತ್ತ ಕ್ರಿಮಿಯ ಗಣತಂತ್ರ ಶಾಸನಸಭೆ ಮತ್ತು ಸೆವಾಸ್ಟೊಪೋಲ್ ಸರ್ಕಾರಗಳು ಜನಾಭಿಪ್ರಾಯ ಸಂಗ್ರಹ ಮಾಡಿದವು. ರಷ್ಯಾ ಒಕ್ಕೂಟ ಪ್ರಜೆಗಳಾಗಿ ಸೇರ್ಪಡೆಗೊಳ್ಳುವುದು ಸರಿಯೋ ಅಥವಾ 1992ರ ಕ್ರಿಮಿಯ ಸಂವಿಧಾನವನ್ನು ಒಪ್ಪಿಕೊಂಡು, ಉಕ್ರೇನ್ ಜೊತೆಗಿರುವುದು ಸೂಕ್ತವೋ ಎನ್ನುವುದನ್ನು ಮತದಾರರು ನಿರ್ಧರಿಸಬೇಕಿತ್ತು. ಕ್ರಿಮಿಯ ಮತ್ತು ಸೆವಾಸ್ಟಪೋಲ್ ಜನತೆ ರಷ್ಯಾದ ಪ್ರಜೆಗಳಾಗುವತ್ತ ಒಲವು ತೋರಿದವು. ಹೀಗಾಗಿ ಅದು ತನ್ನ ಅಧಿಕೃತ ಭಾಗ ಎಂದು ರಷ್ಯಾ ವಾದಿಸುತ್ತಿದೆ.

ಆದರೆ ಈ ಜನಾಭಿಪ್ರಾಯ ಸಂಗ್ರಹವೇ ಅಕ್ರಮ ಎನ್ನುವುದು ಕೆಲವು ದೇಶಗಳ ವಾದ, ವಿಶ್ವಸಂಸ್ಥೆಯೂ ಈ ಜನಾಭಿಪ್ರಾಯಕ್ಕೆ ಮಾನ್ಯತೆ ನೀಡಿಲ್ಲ.ಈ ಹಿನ್ನೆಲೆಯಲ್ಲಿ ಅಮೇರಿಕ, ಕೆನಡಾ, ಯೂರೋಪಿಯನ್ ಒಕ್ಕೂಟ, ನಾರ್ವೆ ಮತ್ತು ಆಸ್ಟ್ರೇಲಿಯ ದೇಶಗಳು ರಷ್ಯಾದ ಮೇಲೆ ಮೂರು ಸುತ್ತಿನ ನಿರ್ಬಂಧ (sanctions) ವಿಧಿಸಿವೆ. ವ್ಯಾಪಾರ, ವ್ಯವಹಾರಗಳಲ್ಲಿ ನಿರ್ಬಂಧಗಳನ್ನು ಹೇರಲಾಗಿದೆ. ಆದರೆ ಯೂರೋಪ್ ಯೂನಿಯನ್ ನ ಕೆಲವು ದೇಶಗಳು ಈ ನಿರ್ಬಂಧವನ್ನು ಪ್ರಶ್ನಿಸುತ್ತಿರುವುದೂ ಕೂಡ ಸತ್ಯ. ಆದರೆ ಬಲಾಢ್ಯ ದೇಶವಾಗಿ ನಿರ್ಬಂಧವನ್ನು ಎದುರಿಸಬೇಕಾಗಿ ಬಂದಿದ್ದು, ಈ ಪರಿಸ್ಥಿತಿಯನ್ನು ಬಗೆಹರಿಸಿಕೊಳ್ಳಬೇಕಾಗಿರುವುದು, ಕುಸಿದುಹೋಗಿರುವ ರೂಬಲ್ ನ ಮೌಲ್ಯವನ್ನು ಹೆಚ್ಚಿಸಬೇಕಾಗಿರುವುದು ಅಧ್ಯಕ್ಷ ಪುತಿನ್ ಮಂದಿರುವ ಸವಾಲು.