ಪರ್ವತ ಪ್ರದೇಶಗಳು, ನಯನ ಮನೋಹರ ನದಿ, ಜಲಪಾತಗಳು, ನಡುವಿನ ಪ್ರಸ್ಥಭೂಮಿ, ಉಬ್ಬು ತಗ್ಗುಗಳ ಭೂ ಪ್ರದೇಶ, ಸುತ್ತಲೂ ಕರಾವಳಿ ಹೊಂದಿರುವ ಸುಂದರ ದ್ವೀಪ ಶ್ರೀಲಂಕ.ಮರಳುಭರಿತ ಕರಾವಳಿಯಲ್ಲಿ ತೆಂಗು ಬೆಳೆಯಲಾಗುತ್ತದೆ. ಜಗತ್ತಿನ ಐದನೇ ಅತಿ ಹೆಚ್ಚು ತೆಂಗು ಬೆಳೆಯುವ ದೇಶ ಇದು. ಪರ್ವತ ಪ್ರದೇಶಗಳಲ್ಲಿ ಟೀ ಮತ್ತು ರಬ್ಬರ್ ಹಾಗೂ ಮಹಾವೇಲಿ ನದಿ ಪ್ರದೇಶದಲ್ಲಿ ಭತ್ತವನ್ನು ಬೆಳೆಯಲಾಗುತ್ತದೆ.ಇಂದ್ರನೀಲಮಣಿ, ಪುಷ್ಯರಾಗ, ಮಾಣಿಕ್ಯ ಮುಂತಾದ ಮಣಿಗಳು ಇಲ್ಲಿ ಯಥೇಚ್ಛವಾಗಿ ದೊರೆಯುತ್ತವೆ. ಜೊತೆಗೆ ಗ್ರಾಫೈಟ್ ಮತ್ತು ಫಾಸ್ಫೇಟನ್ನು ಕೂಡ ಈ ದೇಶ ತನ್ನ ಗರ್ಭದಲ್ಲಿ ಅಡಗಿಸಿಕೊಂಡಿದೆ.ಹಣ್ಣು, ತರಕಾರಿ, ಹಾಗೂ ಮಸಾಲೆ ಪದಾರ್ಥಗಳನ್ನೂ ಇಲ್ಲಿ ಬೆಳೆಯಲಾಗುತ್ತದೆ.ಸಿಂಹಳೀಯ ಜನಾಂಗದವರು ಇಲ್ಲಿ ಶೇ.73,8ರಷ್ಟಿದ್ದರೆ, ತಮಿಳರು ಶೇ.8.5ರಷ್ಟಿದ್ದಾರೆ. ಧಾರ್ಮಿಕವಾಗಿ ವಿಂಗಡಿಸಿದಲ್ಲಿ, ಬೌದ್ಧರು ಶೇ.69.1, ಮುಸ್ಲಿಮರು ಶೇ.7.6, ಹಿಂದುಗಳು ಶೇ.7.1 ಮತ್ತು ಕ್ರಿಶ್ಚಿಯನ್ನರು ಶೇ.6.2ರಷ್ಟು ಪ್ರಮಾಣದಲ್ಲಿದ್ದಾರೆ.

ದಕ್ಷಿಣ ಏಷ್ಯಾದಲ್ಲಿ ದೊರೆತಿರುವ ಮಾನವನ ಪಳೆಯುಳಿಕೆಗಳಲ್ಲಿ ಅತ್ಯಂತ ಪ್ರಾಚಿನವಾದುದು ಶ್ರೀಲಂಕಾದ ಬಾಲನಗೊಂಡ ಗವಿಗಳಲ್ಲಿ ದೊರೆತ ಮೂಳೆ ಹಂದರ. ಬಾಲನಗೊಂಡ ಮಾನವ ಸುಮಾರು 34,000 ವರ್ಷಗಳ ಹಿಂದೆ ಜೀವಿಸಿದ್ದ ಎಂದು ಅಂದಾಜು ಮಾಡಲಾಗಿದೆ.ಈ ದೇಶದ ವಿಸ್ತೀರ್ಣ 65,510 ಚ.ಕಿ ಇದ್ದು, ಜನಸಂಖ್ಯೆ 2,08,11.000ರಷ್ಟಿದೆ. ರಾಜಧಾನಿ ಕೊಲೊಂಬೋದ ಜನಸಂಖ್ಯೆ ಕೇವಲ 7.07 ಲಕ್ಷ. ಇಲ್ಲಿನ ಕರೆನ್ಸಿ ಶ್ರೀಲಂಕಾ ರೂಪಾಯಿ (ಎಲ್ ಕೆ ಆರ್). 2010ರಲ್ಲಿ 49,566ದಶಲಕ್ಷ ಅಮೇರಿಕನ್ ಡಾಲರ್ ನಷ್ಟಿದ್ದ ನಿವ್ವಳ ದೇಶೀಯ ಉತ್ಪನ್ನ (ಜಿಡಿಪಿ),2014ರ ಹೊತ್ತಿಗೆ 74,941 ದಶಲಕ್ಷ ಅಮೇರಿಕನ್ ಡಾಲರ್ ಗೆ ಏರಿದೆ. ಅಂದರೆ ಜಾಗತಿಕ ಆರ್ಥಿಕ ಹಿನ್ನಡೆಯ ನಡುವೆಯೂ ಈ ದೇಶದ ಜಿಡಿಪಿಯಲ್ಲಿ ಗಮನಾರ್ಹ ಪ್ರಗತಿ ಕಂಡುಬಂದಿದೆ. 2014ರ ಅಂಕಿಅಂಶದಂತೆ ಜಿಡಿಪಿಯಲ್ಲಿ ಕೃಷಿಯ ಪಾಲು ಶೇ.9.9, ಕೈಗಾರಿಕೆ ಪಾಲು ಶೇ.33.8 ಮತ್ತು ಸೇವಾವಲಯದ ಪಾಲು ಶೇ.56.3ರಷ್ಟಿತ್ತು.

ಶ್ರೀಲಂಕಾ- ಬಲ್ಲಂಗೋಡ ಮಾನ್

ಕಾರ್ಮಿಕ ಬಲದ ಶೇ.30ರಷ್ಟು ಜನ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಒಟ್ಟು ಕಾರ್ಮಿಕ ಬಲದ ನಿರುದ್ಯೋಗ2010ರಲ್ಲಿ ಶೇ.4.9ರಷ್ಟಿದ್ದರೆ, 2014ರಲ್ಲಿ ಹೆಚ್ಚೇನೂ ಬದಲಾವಣೆ ಕಂಡಿಲ್ಲ. ಜನಸಂಖ್ಯೆ ವಾರ್ಷಿಕ ಶೇ.0.5ರಷ್ಟು ಹೆಚ್ಚುತ್ತಿದೆ ಆದರೆ ನಗರ ಜನಸಂಖ್ಯೆ ಪ್ರಮಾಣ ಕಳೆದ ವರ್ಷ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. ಆರೋಗ್ಯಕ್ಕೆ ಜಿಡಿಪಿಯ ಶೇ.3.5ರಷ್ಟು ವೆಚ್ಚ ಮಾಡುತ್ತಿದ್ದರೆ, ಶಿಕ್ಷಣಕ್ಕೆ ಕೇವಲ ಶೇ.1.6ರಷ್ಟು ಮಾತ್ರ ವ್ಯಯಿಸಲಾಗುತ್ತಿದೆ. ರಾಷ್ಟ್ರೀಯ ಸಂಸತ್ತಿನಲ್ಲಿ ಮಹಿಳೆಯರು ಸ್ಥಾನ ಪಡೆದುಕೊಂಡಿರುವುದು ಕೇವಲ ಶೇ.5.8ರಷ್ಟು ಮಾತ್ರ. ಇಂಟರ್ನೆಟ್ ಬಳಸುತ್ತಿರುವವರು ಶೇ.25.8 ರಷ್ಟು ಜನ ಮಾತ್ರ. ಇವೆಲ್ಲ ಅಂಕಿಅಂಶಗಳನ್ನು ಗಮನಿಸಿದಾಗ ಶ್ರೀಲಂಕಾದಲ್ಲಿ ಮಹಿಳೆಯರ ಸಬಲೀಕರಣ, ಶಿಕ್ಷಣ, ಕೈಗಾರಿಕಾ ಅಭಿವೃದ್ಧಿ ದಿಕ್ಕಿನಲ್ಲಿ ಪ್ರಗತಿ ಸಾಧಿಸಬೇಕಾಗಿದೆ ಎನ್ನುವುದು ಎದ್ದು ಕಾಣಿಸುತ್ತದೆ,ಶ್ರೀಲಂಕಾದ ಚರಿತ್ರೆ ಬಗ್ಗೆ ಬರೆದಿರುವ ಪ್ರಾಚೀನ ಗ್ರಂಥಗಳೆಂದರೆ ಮಹಾವಂಸ, ದೀಪವಂಸ, ಸಿಲಪ್ಪಟಿಕಾರಮ್ ಇತ್ಯಾದಿ. ಮಹಾವಂಸದಲ್ಲಿ ಅಶೋಕನ ಪಟ್ಟಾಭಿಷೇಕದ ವಿವರಗಳೆಲ್ಲ ದಾಖಲಾಗಿವೆ.ಮಹಾವಂಸದಲ್ಲಿ ಉಲ್ಲೇಖವಾಗಿರುವಂತೆ ನಾಲ್ಕನೇ ಶತನಮಾನದಲ್ಲಿ ಆಳಿದ ಅನುರಾಧಪುರ ಸಾಮ್ರಾಜ್ಯ ಆಡಳಿತ ನಡೆಸುತ್ತಿತ್ತು. ಅಶೋಕ ಚಕ್ರವರ್ತಿಯ ಮಗ ಅರಹಂತ ಮಹಿಂದ ಕ್ರಿ.ಪೂ.247ರಲ್ಲಿ ಶ್ರೀಲಂಕಾಗೆ ಆಗಮಿಸಿ, ಬೌದ್ಧಧರ್ಮವನ್ನು ಪ್ರಸಾರ ಮಾಡಿದರು. ಮಹಿಂದಾ ಸಹೋದರಿ ಸಂಗಮಿತ್ತ ಬೋಧಿವೃಕ್ಷದ ಸಸಿಯನ್ನು ಇಲ್ಲಿಗೆ ತಂದರು ಎನ್ನಲಾಗಿದೆ.ಮಹಾವಂಸದಲ್ಲಿ ಉಲ್ಲೇಖಿಸಿರುವಂತೆ, ವಿಜಯ ಎನ್ನುವ ಭಾರತದ ಸಿಂಹಬಾಹು ಎನ್ನುವ ರಾಜನ ಮಗ ವಿಜಯ ಎಂಬಾತ ದಾಳಿ ಮಾಡಿದ.ನಂತರ ಕ್ರಿ.ಶ.993ರಲ್ಲಿ ರಾಜರಾಜಚೋಳ ಅನುರಾಧಪುರ ಸಾಮ್ರಾಜ್ಯವನ್ನು ವಶಪಡಿಸಿಕೊಂಡ. ಆತನ ಮಗ ರಾಜೇಂದ್ರ ಚೋಳನ ಕಾಲದಲ್ಲಿ ಇಡೀ ಶ್ರೀಲಂಕಾ ಚೋಳರ ಆಡಳಿತಕ್ಕೆ ಸಿಲುಕಿತ್ತು. ನಂತರ ಪಾಂಡ್ಯರೂ ಸ್ವಲ್ಪ ಕಾಲ ಶ್ರೀಲಂಕಾವನ್ನು ಆಳಿದ್ದಾರೆ.
ಆಧುನಿಕ ಇತಿಹಾಸದಲ್ಲಿ ಶ್ರೀಲಂಕಾಗೆ ಮೊದಲು ಆಗಮಿಸಿದ್ದು ಪೋರ್ಚುಗೀಸರು. ಕ್ರಿ.ಶ.1505ರಲ್ಲಿ ಆಗಮಿಸಿದ ಪೋರ್ಚುಗೀಸರು, ಕೊಲೊಂಬೋದಲ್ಲಿ ಕೋಟೆ ಸ್ಥಾಪಿಸಿ, ಕ್ರಮೇಣ ಕರಾವಳಿ ತೀರದ ಮೇಲೆಲ್ಲ ಪ್ರಭುತ್ವ ಸಾಧಿಸಿದರು. ಆಗ ಸಿಂಹಳೀಯರು ಕಾಂಡಿಯನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರು.ಕಾಂಡ್ಯಾದ ರಾಜ ಎರಡನೇ ರಾಜಸಿಂಘೆ ಕ್ರಿ.ಶ.1638ರಲ್ಲಿ, ಪೋರ್ಚುಗೀಸರನ್ನು ಅಲ್ಲಿಂದ ಓಡಿಸುವ ಸಲುವಾಗಿ ಡಚ್ಚರೊಂದಿಗೆ ಒಪ್ಪಂದ ಮಾಡಿಕೊಂಡ. ದ್ವೀಪದಲ್ಲಿ ವ್ಯಾಪಾರ ಮಾಡಲು ಅನುವು ಮಾಡಿಕೊಟ್ಟ. ಡಚ್ಚರು ಕ್ರಿ.ಶ.1656ರಲ್ಲಿ ಕೊಲೊಂಬೋವನ್ನು ವಶಪಡಿಸಿಕೊಂಡರು. ಪೋರ್ಚುಗೀಸರಿಗಿಂತ ಹೆಚ್ಚು ತೆರಿಗೆ ವಿಧಿಸಿದರು. ನಂತರ ಅಲ್ಲಿ ದಾಳಿ ಎಸಗಿದ್ದು ಬ್ರಿಟಿಷರು. ಕ್ರಿ.ಶ.1803ರಲ್ಲಿ ನಡೆದ ಕಾಂಡ್ಯದ ಯುದ್ಧದಲ್ಲಿ ಶ್ರೀಲಂಕಾ ತನ್ನ ಸ್ವಾತಂತ್ರ್ಯವನ್ನು ಸಂಪೂರ್ಣ ಕಳೆದುಕೊಂಡಿತು.
ಸುದೀರ್ಘ ಹೋರಾಟದ ನಂತರ ಕ್ರಿ.ಶ.1948ರಲ್ಲಿ ಶ್ರೀಲಂಕಾ ಬ್ರಿಟಿಷರಿಂದ ಸ್ವಾತಂತ್ರವನ್ನು ಪಡೆದುಕೊಂಡಿತು. ಆದರೆ ಆ ದೇಶದ ಸಮಸ್ಯೆಗಳು ಮುಗಿಯಲಿಲ್ಲ. ಜನಾಂಗೀಯ ಹೋರಾಟಗಳು ಪ್ರಾರಂಭವಾದವು. ತಮಿಳುನಾಡಿನಿಂದ ಬ್ರಿಟಿಷರ ಕಾಲದಲ್ಲಿ ಅವರನ್ನು ಟೀ ತೋಟದ ಕಾರ್ಮಿಕರನ್ನಾಗಿ ತಮಿಳರನ್ನು ಕರೆದೊಯ್ಯಲಾಗಿತ್ತು. ನಂತರದ ತಲೆಮಾರಿನ ಜನ ಸ್ಥಳೀಯರೇ ಆಗಿ ಹೋಗಿದ್ದರು. ಜಾಫ್ನಾ ಪ್ರದೇಶದಲ್ಲೇ ಹೆಚ್ಚಿನ ಪ್ರಮಾಣದ ತಮಿಳರು ನೆಲೆಸಿದ್ದರು. ಕ್ರಿ.ಶ.1956ರಲ್ಲಿ ತಮಿಳು ಮತ್ತು ಇಂಗ್ಲಿಷ್ ಎರಡೂ ಭಾಷೆಗಳನ್ನು ಅಧಿಕೃತ ಭಾಷೆಯ ಪಟ್ಟಿಯಿಂದ ತೆಗೆದುಹಾಕಿದ್ದರಿಂದ ಅವರು ಸಂಕಷ್ಟಕ್ಕೆ ಬಿದ್ದರು. ಆಡಳಿತಕ್ಕೆ ಮತ್ತು ಶಿಕ್ಷಣಕ್ಕೆ ಕೇವಲ ಸಿಂಹಳೀ ಭಾಷೆಯನ್ನು ಮಾತ್ರವೇ ಮಾಧ್ಯಮ ಭಾಷೆಯನ್ನಾಗಿ ಮಾಡಲಾಯಿತು.
ಆಗ ತಮಿಳರಿಂದ ಅಲ್ಲಿ ಚಳವಳಿಗಳು ಆರಂಭವಾದವು. 1980ರ ಹೊತ್ತಿಗೆ ತಮಿಳು ಪ್ರತ್ಯೇಕತಾವಾದ ತಲೆ ಎತ್ತಿ ನಿಂತಿತು. ತಮಗೆ ಅನ್ಯಾಯವಾಗುತ್ತಿದೆ ಎಂದು ತಮಿಳರು ಸಶಸ್ತ್ರ ಹೋರಾಟದ ದಾರಿ ಹಿಡಿದರು. ಮೂರು ದಶಕಗಳ ಕಾಲ ನಡೆದ ಈ ಹೋರಾಟದಲ್ಲಿ ಸಾವಿರಾರು ಜನ ಪ್ರಾಣ ಕಳೆದುಕೊಂಡರು. 2009ರಲ್ಲಿ ಎಲ್ಟಿಟಿಇ ಮುಖಂಡ ವೇಲುಪಿಳ್ಳೈ ಪ್ರಭಾಕರನ್ ಹತ್ಯೆಯಾದ ನಂತರವಷ್ಟೇ ಪ್ರತ್ಯೇಕತಾವಾದಕ್ಕೆ ತೆರೆ ಎಳೆಯಲು ಸಾಧ್ಯವಾಗಿದ್ದು.ಸ್ವಾತಂತ್ರ್ಯ ಬಂದಾಗಿನಿಂದಲೂ ಚಳವಳಿ ಹಾಗೂ ಮೂರು ದಶಕಗಳಿಂದ ಭಯೋತ್ಪಾದನೆಗೆ ಸಿಕ್ಕಿ ನಲುಗಿದ್ದ ಶ್ರೀಲಂಕಾದಲ್ಲಿ ಇದೀಗ ಶಾಂತಿಪರ್ವ ಆರಂಭವಾಗಿದೆ. ಆದರೆ ದಶಕಗಳ ನಾಗರಿಕ ಅಶಾಂತಿ, ದೇಶದ ಅಭಿವೃದ್ಧಿಗೆ ಭಾರಿ ಹೊಡೆತವನ್ನೇ ಕೊಟ್ಟಿದೆ. ಎಲ್ಲ ಜನಾಂಗದವರ ಮನಸುಗಳನ್ನು ಮತ್ತೆ ಬೆಸೆದು, ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕಾಗಿರುವುದು ಶ್ರೀಲಂಕಾ ಮುಂದಿರುವ ಸವಾಲು.