Categories
asia

ಅಲ್ಬೇನಿಯಾ

ಆಲ್ಬೇನಿಯಾ ಯೂರೋಪ್ ಖಂಡದ ಆಗ್ನೇಯ ಭಾಗದಲ್ಲಿರುವ ದೇಶ. ಮೆಡಿಟರೇನಿಯನ್ ಸಂಘವನ್ನು ಹುಟ್ಟುಹಾಕಿದ ರಾಷ್ಟ್ರಗಳಲ್ಲಿ ಒಂದಾಗಿದ್ದು, ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯನ್ನು ಹೊಂದಿದೆ. ಮಧ್ಯಯುಗದ ಗ್ರೀಕ್ ಭಾಷೆಯಲ್ಲಿ ಈ ದೇಶವನ್ನು ಅಲ್ಬಾನಿಯಾ, ಅಲ್ಬನೀಶೀಯ, ಅರ್ಬನಿಶೀಯ ಎಂದು ಹೇಳಲಾಗಿದೆ. ಆಲ್ಬೇನಿಯನ್ನರು ತಮ್ಮನ್ನು ಶಿಕಿಪ್ಟಾರ್ ಎಂದು ಕರೆದುಕೊಳ್ಳುತ್ತಾರೆ. ಅಂದರೆ ‘ಹದ್ದುಗಳ ಪುತ್ರ’ ಎಂದು ಅರ್ಥೈಸಲಾಗುತ್ತದೆ. ಆದರೂ ಇವರು ಶಿಕಿಪ್ ಭಾಷೆಗೆ (ಆಲ್ಬೇನಿಯಾ) ಸಂಬಂಧಿಸಿದವರು ಮತ್ತು ತಮ್ಮ ದೇಶವನ್ನು ಶಿಕಿಪರಿಯಾ ಎಂದು ಉಲ್ಲೇಖಿಸಿದ್ದಾರೆ. ಮುಂದುವರಿದು ತಮ್ಮನ್ನು ಪ್ರಾಚೀನ ಇಲಿಯರಿಯನ್ನರ ವಂಶಸ್ಥರು ಎಂದು ಪರಿಗಣಿಸುತ್ತಾರೆ. ಆಲ್ಬೇನಿಯಾ ದೇಶವು ಏಡ್ರಿಯಾಟಿಕ್ ಸಮುದ್ರದ ದ್ವಾರವಾದ ಒಟ್ರಾಂಟೊ ಜಲಸಂಧಿಯಲ್ಲಿ ಬಾಲ್ಕನ್ ಪರ್ಯಾಯ ದ್ವೀಪದ ಪಶ್ಚಿಮ ಭಾಗದಲ್ಲಿದೆ. ರಾಜಧಾನಿ ತಿರಾನಾ (ಟಿರಾನಾ). ಅಧಿಕೃತ ಹೆಸರು ಆಲ್ಬೇನಿಯ ಗಣರಾಜ್ಯ. ಸಂಸತ್ತಿನ ಹೆಸರು ಕುವೆಂಡಿ. ಪೂರ್ವಕ್ಕೆ ಉತ್ತರ ಮ್ಯಾಸಿಡೋನಿಯಾ (೧೮೧.ಕಿ.ಮೀ), ಪಶ್ಚಿಮಕ್ಕೆ ಏಡ್ರಿಯಾಟಿಕ್ ಸಮುದ್ರ ಮತ್ತು ಏಜಿಯನ್ ಸಮುದ್ರಗಳು (೩೬೨.ಕಿ.ಮೀ), ಉತ್ತರಕ್ಕೆ ಮಾಂಟೆನೀಗ್ರೋ (೧೮೬.ಕಿ.ಮೀ) ಮತ್ತು ಕೊಸಾವೊ (೧೧೨.ಕಿ.ಮೀ), ದಕ್ಷಿಣಕ್ಕೆ ಗ್ರೀಸ್ (೨೧೨.ಕಿ.ಮೀ), ನಡುವೆ ೪೧೦0 ೨೦’ ಉತ್ತರ ಅಕ್ಷಾಂಶ ಮತ್ತು ೧೯೦0 ೪೮’ ಪೂರ್ವ ರೇಖಾಂಶಗಳ ಮಧ್ಯೆ ೨೮,೭೪೮ ಚ.ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ಮಜಾ ಇ ಕೊರಬಿಟ್ (೨೭೬೪ ಮೀ) ಅತೀ ಎತ್ತರದ ಪ್ರದೇಶವಾಗಿದೆ.

ಒಟ್ರಾಂಟೊ ಜಲಸಂಧಿಯ ಉದ್ದಕ್ಕೂ ಕಾರ್ಯತಂತ್ರದ ಸ್ಥಳ ಆಡ್ರಿಯಾಟಿಕ್ ಸಮುದ್ರ ಮತ್ತು ಮೆಡಿಟರೇನಿಯನ್ ಸಮುದ್ರಕ್ಕೆ ಸಂಪರ್ಕಿಸುತ್ತದೆ. ೨೦೧೯ರ ಜನಗಣತಿ ಪ್ರಕಾರ ದೇಶದ ಜನಸಂಖ್ಯೆ ೨,೮೬೧,೦೦೦. ಆಲ್ಬೇನಿಯನ್ ಪ್ರಮುಖ ಭಾಷೆಯಾಗಿದೆ. ರಾಷ್ಟ್ರಗೀತೆ – ಬಾವುಟದ ಸುತ್ತ ಒಂದಾಗೋಣ. ಒಟ್ಟೋವನ್ ಸಾಮ್ರಾಜ್ಯದಿಂದ ಸ್ವಾತಂತ್ರ್ಯ ಪಡೆದ ದಿನ ನವೆಂಬರ್ ೨೮, ೧೯೧೨. ದೇಶದ ನಾಣ್ಯ ಲೆಕ್. ೨೦೧೭ರಲ್ಲಿ ದೇಶದ ತಲಾದಾಯ ೬,೨೫೯ ರೂಪಾಯಿ ಇತ್ತು. ೨೦೧೭ರ ಸಾಕ್ಷರತೆ ಪ್ರಮಾಣ: ಪುರುಷರು – ಶೇ. ೯೮.೪% ಮತ್ತು ಸ್ತ್ರೀಯರು – ಶೇ. ೯೬.೯%. ಜನಾಂಗೀಯವಾಗಿ ಆಲ್ಬೇನಿಯನ್ ಶೇ. ೮೨.೬% ರಷ್ಟಿದ್ದು ಆಲ್ಬೇನಿಯನ್ ಭಾಷೆಯನ್ನು ಮಾತನಾಡುವವರು ಶೇ. ೯೮.೮% ಇದ್ದಾರೆ. ಧಾರ್ಮಿಕವಾಗಿ ಮುಸ್ಲಿಂ ಶೇ. ೫೬.೭%, ರೋಮನ್ ಕ್ಯಾಥೊಲಿಕ್ ಶೇ. ೧೦%, ಸಂಪ್ರದಾಯವಾದಿಗಳು ಶೇ. ೬.೮% ರಷ್ಟಿದ್ದಾರೆ. ಆದರೆ ೧೯೬೭ರಲ್ಲಿ ಎಲ್ಲಾ ಮಸೀದಿಗಳು ಮತ್ತು ಚರ್ಚ್‌ಗಳನ್ನು ಮುಚ್ಚಲಾಯಿತು ಮತ್ತು ಧಾರ್ಮಿಕ ಆಚರಣೆಯನ್ನು ನಿಷೇಧಿಸಲಾಯಿತು. ಮತ್ತೆ ೧೯೯೦ರಲ್ಲಿ ಖಾಸಗಿ ಧಾರ್ಮಿಕ ಆಚರಣೆಗೆ ಅನುಮತಿ ನೀಡಲಾಯಿತು. ೨೦೧೭ರ ಆರ್ಥಿಕ ವರ್ಷದ ಗಣತಿ ಪ್ರಕಾರ ಕೃಷಿ ಪಾತ್ರ ಶೇ. ೨೧.೭%, ಉದ್ಯಮ ಶೇ. ೨೪.೨% ಮತ್ತು ಸೇವಾಕ್ಷೇತ್ರ ಶೇ. ೫೪.೧%ರಷ್ಟು ಅವಲಂಬಿಸಿದ್ದಾರೆ. ಪ್ರವಾಸೋದ್ಯಮವು ರಾಷ್ಟ್ರೀಯ ಆದಾಯದ ಪ್ರಮುಖ ಮೂಲವಾಗಿದೆ. ಪ್ರಸ್ತುತ ದೇಶ ಎದುರಿಸುತ್ತಿರುವ ಪ್ರಮುಖ ಸಮಸ್ಯೆ ಎಂದರೆ ಮಾದಕ ವಸ್ತುಗಳ ಕಳ್ಳ ವ್ಯಾಪಾರ.

ಆಲ್ಬೇನಿಯಾದ ಹೆಚ್ಚಿನ ಭಾಗವು ಪರ್ವತಗಳು ಮತ್ತು ಬೆಟ್ಟಗಳಿಂದ ಕೂಡಿದೆ. ಆಲ್ಬೇನಿಯನ್ ಆಲ್ಪ್ಸ್, ಈಶಾನ್ಯದಲ್ಲಿ ಶಾರ್ ಪರ್ವತಗಳು; ಮಧ್ಯದಲ್ಲಿ ಸ್ಕಂದರ್ ಬೇಗ್ ಪರ್ವತಗಳು, ಕೊಬರ್ ಪರ್ವತಗಳು; ನೈರುತ್ಯದಲ್ಲಿ ಸೆರೌನಿಯನ್ ಪರ್ವತಗಳು ಮತ್ತು ಅತಿದೊಡ್ಡ ಸರೋವರ ಶ್ಕೋಡರ್ ಆಲ್ಬೇನಿಯನ್ ಆಲ್ಪ್ಸ್ ಮತ್ತು ಆಡ್ರಿಯಾಟಿಕ್ ಸಮುದ್ರದಿಂದ ಆವೃತವಾಗಿದೆ. ಆಲ್ಬೇನಿಯಾ ಒಂದು ಸಣ್ಣ ದೇಶವಾಗಿದ್ದರೂ ಜೀವವೈವಿಧ್ಯತೆ, ಸೂಕ್ಷ್ಮ ಪರಿಸರ ವ್ಯವಸ್ಥೆ ಮತ್ತು ಜೀವ ಆವಾಸಸ್ಥಾನಗಳಿಗೆ ಹೆಸರಾಗಿದೆ. ಇದಕ್ಕಾಗಿ ೧೪ ರಾಷ್ಟ್ರೀಯ ಉದ್ಯಾನವನಗಳೂ ಸೇರಿದಂತೆ ೭೯೯ ಸುರಕ್ಷಿತ ಪ್ರದೇಶಗಳನ್ನು ಮೀಸಲಿರಿಸಿದ್ದಾರೆ. ಇದರಲ್ಲಿ ತೆಮೋರಿ ಪರ್ವತ ರಾಷ್ಟ್ರೀಯ ಉದ್ಯಾನವನ, ಒಂದು ಸಾಗರ ಉದ್ಯಾನವನ, ಎಂಟು ಪುರಾತತ್ವ ಉದ್ಯಾನವನಗಳು, ೭೫೦ ನೈಸರ್ಗಿಕ ಸ್ಮಾರಕಗಳು ಸೇರಿವೆ. ಎಂಟು ಗಮನಾರ್ಹ ನದಿಗಳು ಇದ್ದು ಡ್ರೀನ್ ನದಿ (೨೮೫ ಕಿ.ಮೀ.) ದೇಶದಲ್ಲಿ ಹರಿಯುತ್ತದೆ. ಇದರ ಜಲಾನಯನ ಪ್ರದೇಶವು ಯೂರೋಪಿನ ಅತ್ಯಂತ ಜೀವವೈವಿಧ್ಯ ಸ್ಥಳಗಳಲ್ಲಿ ಒಂದಾಗಿದೆ. ಶ್ಕೋಡರ್, ಓಹ್ರಿಡ್ ಮತ್ತು ಪ್ರೆಸ್ವಾ ಸರೋವರಗಳನ್ನು ಒಳಗೊಂಡಿದೆ. ವೊಜೋಸಾ, ಫ್ಯಾನ್, ಇಶೋಮ್, ಎರ್ಜೆನ್, ಮ್ಯಾಟ್, ಸೆಮನ್ ಮತ್ತು ಶುಕುಂಬಿನ್ ಇತರ ನದಿಗಳು. ಶ್ಕೋಡರ್ ಸರೋವರ ಹಾಗೂ ೨೫೦ಕ್ಕೂ ಹೆಚ್ಚಿನ ಸರೋವರಗಳನ್ನು ಹೊಂದಿರುವ ದೇಶವು ಓಹ್ರಿಡ್ ಸರೋವರ ಮ್ಯಾಸಿಡೋನಿಯಾದೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ದೇಶದ ಅತಿದೊಡ್ಡ ಲಗೂನ್ ಕರವಾಸ್ತಾ ಇದೆ.

ಆಲ್ಬೇನಿಯಾದ ಇತಿಹಾಸವು ಯೂರೋಪಿನ ಇತಿಹಾಸದ ಒಂದು ಭಾಗವಾಗಿದೆ. ಇತಿಹಾಸಪೂರ್ವ ಕಾಲದಿಂದಲೂ ಮಾನವ ಬದುಕಿರುವ ಕುರುಹುಗಳು ಆಲ್ಬೇನಿಯಾದ ಪೆಲ್ಲುಂಬಾಸ್ ಗುಹೆಯಲ್ಲಿ ಕಂಡುಬಂದಿದೆ. ಈ ಕುರುಹು ಮಧ್ಯ ಶಿಲಾಯುಗ ಮತ್ತು ನೂತನ ಶಿಲಾಯುಗಗಳಿಗೆ ಸೇರಿದವು. ಹಲವಾರು ಟ್ಯೂಮಲಸ್ ಸಮಾಧಿಗಳು, ಕಂಚಿನ ಯುಗದ ಕಲಾಕೃತಿಗಳು ಮಧ್ಯ ಮತ್ತು ದಕ್ಷಿಣ ಆಲ್ಬೇನಿಯಾದಲ್ಲಿ ಕಂಡುಬಂದಿವೆ. ಕ್ರಿ.ಪೂ. ೧೬೦೦ರ ಸುಮಾರಿಗೆ ಲೈಸೀನಿಯನ್ ನಾಗರಿಕತೆ ಹುಟ್ಟಿಕೊಂಡಿತು.

ಕಂಚಿನ ಯುಗದ ಕೊನೆಯಲ್ಲಿ ಮತ್ತು ಆರಂಭಿಕ ಕಬ್ಬಿಣಯುಗದಲ್ಲಿ ಆಧುನಿಕ ಆಲ್ಬೇನಿಯಾದ ಪ್ರಾಂತ್ಯಗಳಲ್ಲಿ ಹಲವಾರು ಬುಡಕಟ್ಟುಗಳ ಚಲನೆಗಳು ಸಂಭವಿಸಿದವು. ಇವುಗಳನ್ನು ಇಲಿಯಾರಿಯನ್ ಬುಡಕಟ್ಟು ಜನಾಂಗಗಳೆಂದು ಕರೆಯಲಾಗಿದೆ. ಅವುಗಳೆಂದರೆ ಅರ್ಡಿಯೈ, ಅಲ್ಟಾನೊಯ್, ಅಮಾಂಟಿನಿ, ಎನ್ಚೆಲ್, ಟಾಲಾಂಟಿ, ಮತ್ತು ಇತರರು. ಕ್ರಿ.ಪೂ. ೭ನೇ ಶತಮಾನದಿಂದ ಇಲಿಯರಿನ್ ಕರಾವಳಿಯಲ್ಲಿ ಗ್ರೀಕ್ ವಸಾಹತುಗಳನ್ನು ಸ್ಥಾಪಿಸಲಾಯಿತು. ಅವುಗಳೆಂದರೆ ಅಪೊಲೊನಿಯಾ (ವ್ಲೋರೆ), ಎಪಿಡಮ್ನೋಸ್ (ಡುರೆನ್), ಮತ್ತು ಲಿಸ್ಸಸ್. ಕ್ರಿ.ಪೂ. ೪ನೇ ಶತಮಾನದಲ್ಲಿ ಇಲಿಯಾರಿಯನ್ ರಾಜ ಬಾರ್ಡೈಲಿಸ್ ಹಲವಾರು ಇಲಿಯಾರಿಯನ್ ಬುಡಕಟ್ಟು ಜನಾಂಗಗಳನ್ನು ಒಂದುಗೂಡಿಸಿದನು. ಆಗ್ನೇಯದಲ್ಲಿ ಮ್ಯಾಸಿಡಾನ್‌ನೊಂದಿಗೆ ಸಂಘರ್ಷಣೆಗಳಲ್ಲಿ ತೊಡಗಿದನು. ಬಾರ್ಡೈಲಿಸ್ ನಂತರ ಬಂದ ಗ್ರಾಬೋಸ್, ಎರಡನೇ ಬಾರ್ಡಿಲಿ, ಕ್ಲಿಟಸ್‌ ದಿ ಇಲಿಯರಿಯನ್, ಅಲೆಗ್ಸಾಂಡರ್ ನಿಂದ ಸೋಲನ್ನು ಅನುಭವಿಸಿದರು. ಕ್ರಿ.ಪೂ. ೩ನೇ ಶತಮಾನದಲ್ಲಿ ಗ್ರೀಕರ ವಸಾಹತುಗಳನ್ನು ರೋಮನ್ನರು ವಷಪಡಿಸಿಕೊಂಡರು. ರೋಮನ್ ಪ್ರಾಂತ್ಯಗಳಾದ ಡಾಲ್ಮೇಷಿಯಾ, ಮ್ಯಾಸಿಡೋನಿಯಾ ಮತ್ತು ಮೆಯೆಸಿಯಾ ಸುಪೀರಿಯನ್ ಭಾಗವಾಯಿತು.

ಭಾಗಶಃ ತಮ್ಮ ಪರ್ವತಭೂಮಿಯ ಒರಟಾದ ಭೂಪ್ರದೇಶದ ಕಾರಣದಿಂದಾಗಿ ಐತಿಹಾಸಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಅಂಶಗಳ ಕಾರಣ ಆಲ್ಬೇನಿಯಾ, ಬಹುಕಾಲದಿಂದ ವಿವಿಧ ರಾಷ್ಟ್ರಗಳು ಮತ್ತು ವಿದೇಶಗಳಲ್ಲಿ ವಿಜಯವನ್ನು ಬಯಸುವ ಸಾಮ್ರಾಜ್ಯಗಳಿಗೆ ಸೇತುವೆಯಾಗಿ ಕಾರ್ಯನಿರ್ವಹಿಸಿದೆ. ೪ನೇ ಶತಮಾನದ ಅಂತ್ಯದಿಂದ ಇಲಿಯಾರಿಯನ್ನರ ಬೈಜಾಂಟೈನ್ ಸಾಮ್ರಾಜ್ಯವು ಆಳಿತು. ವಿಸಿಗೋಥ್ಸ್, ಹನ್ಸ್, ಬಲ್ಗಾರ‍್ಸ್ ಮತ್ತು ಸ್ಲಾವ್ಸ್ ಶತಮಾನಗಳ ಆಕ್ರಮಣವನ್ನು ಅನುಭವಿಸಿದ ನಂತರ ಅಲ್ಬೇನಿಯನ್ನರನ್ನು ಅಂತಿಮವಾಗಿ ೧೫ನೇ ಶತಮಾನದಲ್ಲಿ ಆಟೋಮನ್ ಟರ್ಕರು ವಶಪಡಿಸಿಕೊಂಡರು. ಇದರಿಂದ ನಾಲ್ಕು ಶತಮಾನ ಪಾಶ್ಚಿಮಾತ್ಯ ನಾಗರಿಕತೆಯಿಂದ ದೂರ ಉಳಿದಿತ್ತು. ೧೯ನೇ ಶತಮಾನದ ಉತ್ತರಾರ್ಧದಲ್ಲಿ ದೇಶವು ಒಟ್ಟೊವನ್ (ಆಟೊಮನ್) ಟರ್ಕರ ಪ್ರಭಾವದಿಂದ ತಮ್ಮನ್ನು ತಾವೇ ತೆಗೆದುಹಾಕಲು ಪ್ರಾರಂಭಿಸಿದರು. ಮತ್ತೆ ಪಾಶ್ಚಿಮಾತ್ಯರೊಂದಿಗೆ ಹಳೆಯ ಸಂಬಂಧಗಳು ಮತ್ತು ಸಾಮಾನ್ಯ ಹಿತಾಸಕ್ತಿಗಳನ್ನು ಮರು ಶೋಧಿಸಲು ಆರಂಭಿಸಿದರು. ಕ್ರಿ.ಶ. ೧೯೧೨ರಲ್ಲಿ ಆಲ್ಬೇನಿಯಾ ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿತು. ೧೯೧೩ರಲ್ಲಿ ಯೂರೋಪಿನ ಪ್ರಬಲ ರಾಷ್ಟ್ರಗಳಾದ ಆಸ್ಟ್ರಿಯಾ, ಬ್ರಿಟನ್, ಪ್ರಾನ್ಸ್, ಜರ್ಮನಿ, ಇಟಲಿ ರಷ್ಯಾ ದೇಶಗಳು ತಂತಮ್ಮ ಗಡಿಗಳನ್ನು ಗುರುತಿಸಿದರು. ಇದರಿಂದ ತನ್ನ ಅರ್ಧದಷ್ಟು ಪ್ರದೇಶ ಮತ್ತು ಜನರು ನೆರೆಯ ರಾಜ್ಯಗಳ ಪಾಲಾಯಿತು. ವಿಶ್ವ ಯುದ್ಧಗಳ ನಡುವಿನಲ್ಲಿ ರಾಜಪ್ರಭುತ್ವವಾಗಿ ಆಳಲ್ಪಟ್ಟ ಆಲ್ಬೇನಿಯಾ ಎರಡನೇ ಮಹಾಯುದ್ಧದ ಹಿಂಸಾಚಾರದಿಂದ ನಲುಗಿತು. ೧೯೩೯ರಲ್ಲಿ ಇಟಲಿ ವಶಪಡಿಸಿಕೊಂಡರೆ ೧೯೪೩ರಲ್ಲಿ ಜರ್ಮನಿ ಆಕ್ರಮಿಸಿತು. ಕಮ್ಯುನಿಸ್ಟ್ ಆಡಳಿತಗಾರರು ೧೯೪೪ರಲ್ಲಿ ದೇಶವನ್ನು ಸ್ವಾಧೀನಪಡಿಸಿಕೊಂಡು ತಮ್ಮ ಸಾರ್ವಭೌಮತ್ವವನ್ನು ಉಗ್ರವಾಗಿ ರಕ್ಷಿಸಿದರು. ೧೯೮೯ರಿಂದ ಕಮ್ಯುನಿಸ್ಟ್ ಪ್ರಭುತ್ವಗಳ ಕುಸಿತದೊಂದಿಗೆ ಆಲ್ಬೇನಿಯಾದಲ್ಲಿ ಹೊಸ ಸಾಮಾಜಿಕ ಶಕ್ತಿಗಳು ಮತ್ತು ಪ್ರಜಾಪ್ರಭುತ್ವ ರಾಜಕೀಯ ಪಕ್ಷಗಳು ಹುಟ್ಟಿಕೊಂಡವು.