Categories
asia

ಆಸ್ಟ್ರಿಯಾ

ಆಸ್ಟ್ರಿಯಾ ಮಧ್ಯಯೂರೋಪಿನಲ್ಲಿರುವ ಒಂದು ಸಣ್ಣ ದೇಶವಾದರೂ ಹಿಂದೆ ಕೆಲಕಾಲ ದೊಡ್ಡ ಸಾಮ್ರಾಜ್ಯವಾಗಿತ್ತು. ವಿಯನ್ನಾ ರಾಜಧಾನಿ ಅನೇಕ ಅಂತಾರಾಷ್ಟ್ರೀಯ ಒಪ್ಪಂದಗಳಿಗೆ ಸಾಕ್ಷಿಯಾಗಿದೆ. ಆಸ್ಟ್ರಿಯಾದ ಉತ್ತರಕ್ಕೆ ಜರ್ಮನಿ ಮತ್ತು ಚೆಕ್‌ ಗಣರಾಜ್ಯ, ಪೂರ್ವದಲ್ಲಿ ಸ್ಲೊವಾಕಿಯ ಮತ್ತು ಹಂಗೇರಿ, ದಕ್ಷಿಣದಲ್ಲಿ ಸ್ಲೊವಾಕಿಯ ಮತ್ತು ಇಟಲಿ ಹಾಗೂ ಪಶ್ಚಿಮದಲ್ಲಿ ಸ್ವಿಟ್ಜರ್‌ಲ್ಯಾಂಡ್ ಮತ್ತು ಲಿಚೈಸ್ಟೈನ್ ದೇಶಗಳಿವೆ. ಇದರ ರಾಜಧಾನಿ ದನುಬೆ ನದಿಯ ತೀರದಲ್ಲಿರುವ ವಿಯನ್ನಾ ನಗರ. ಸಂಯುಕ್ತ ಸಂಸದೀಯ ಗಣರಾಜ್ಯವನ್ನು ಹೊಂದಿರುವ ಆಸ್ಟ್ರಿಯಾ ದೇಶವು ೪೮೦0 ೧೨’ ಉತ್ತರ ಅಕ್ಷಾಂಶ ಮತ್ತು ೧೬೦0 ೨೧’ ಪೂರ್ವ ರೇಖಾಂಶಗಳ ನಡುವೆ ಹಬ್ಬಿದೆ. ಜರ್ಮನ್ ಭಾಷೆ ಪ್ರಮುಖವಾದರೆ ಸ್ಥಳೀಯವಾಗಿ ಮಾತನಾಡುವ ಸ್ಲೊವೆನ್, ಕ್ರೊಯೇಷಿಯನ್ ಮತ್ತು ಹಂಗೇರಿಯನ್ ಭಾಷೆಗಳು ಆಡಳಿತ ಭಾಷೆಗಳಾಗಿವೆ. ಜರ್ಮನಿ ಭಾಷೆ ಮಾತನಾಡುವವರ ಸಂಖ್ಯೆ ಶೇ. ೯೯% ರಷ್ಟಿದೆ. ೮೩,೮೭೨ ಚ.ಕಿ.ಮೀ ವಿಸ್ತಾರ ಹೊಂದಿದ್ದು ೨೦೧೭ರ ಜನಗಣತಿಯಂತೆ ೮,೩೧೬,೪೮೭ ಜನಸಂಖ್ಯೆ ಹೊಂದಿದೆ. ದೇಶದ ಸಾಕ್ಷರತೆ ಶೇ. ೯೮% ಇದ್ದು ೨೬ನೇ ಅಕ್ಟೋಬರ್ ೧೯೫೫ ರಿಂದ ರಾಷ್ಟ್ರೀಯ ದಿನವನ್ನು ಆಚರಿಸುತ್ತಾರೆ.

ಆಸ್ಟ್ರೀಯಾ ಒಂದು ಪ್ರಮುಖ ಸೇವಾವಲಯವನ್ನು ಹೊಂದಿರುವ, ಹೆಚ್ಚು ಅಭಿವೃದ್ಧಿ ಹೊಂದಿದ, ಕೈಗಾರಿಕೀಕರಣಗೊಂಡ ದೇಶವಾಗಿದೆ. ಸಾವಯವ ಕೃಷಿಯಲ್ಲಿ ಶೇ. ೨೨%ರಷ್ಟು ಪಾಲನ್ನು ಹೊಂದಿದೆ. ಆಸ್ಟ್ರಿಯಾದ ಆರ್ಥಿಕತೆಯು ‘ಸಣ್ಣ ಆದರೆ ಸುಂದರ’ದಿಂದ ನಿರೂಪಿಸಲ್ಪಟ್ಟಿದೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ೧೪ನೇ ಸ್ಥಾನದಲ್ಲಿದೆ. ಯೂರೋ ನಾಣ್ಯವನ್ನು ಬಳಸುತ್ತಿದೆ. ರೋಮನ್ ಕ್ಯಾಥೋಲಿಕ್ ಪ್ರಮುಖ ಧರ್ಮವಾಗಿದ್ದು, ಅದನ್ನು ಶೇ. ೯೦% ರಷ್ಟು ಪಾಲಿಸುತ್ತಾರೆ. ಉಳಿದವರು ಪ್ರಾಟೆಸ್ಟೆಂಟರು, ಯೆಹೂದ್ಯರು, ಮತ್ತು ಗ್ರೀಕರು. ಜುಲೈ ೨೭ ರಂದು ಸ್ವಾತಂತ್ರ್ಯ ದಿನ ಆಚರಿಸುತ್ತಾರೆ. ದೇಶದ ಜಿ.ಡಿ.ಪಿ ೫೧,೯೩೬. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ೧೭ನೇ ಸ್ಥಾನದಲ್ಲಿದೆ.

ಆಸ್ಟ್ರಿಯಾ ಪರ್ವತಮಯ ದೇಶವಾಗಿದ್ದು ಪೂರ್ವ ಆಲ್ಪ್ಸ್ ನ ಬಹುಭಾಗ ಆಸ್ಟ್ರಿಯಾದಲ್ಲಿದೆ. ೧೩೦ ಪೂರ್ವ ರೇಖಾಂಶ ಪೂರ್ವಭಾಗದಲ್ಲಿ ಎತ್ತರ ಕಡಿಮೆಯಾಗುತ್ತಾ ಬಂದು ಡ್ಯಾನ್ಯೂಬ್ ಕಣಿವೆಯನ್ನು ಸೇರಿಕೊಳ್ಳುತ್ತದೆ. ಆಲ್ಪ್ಸ್ ನಲ್ಲಿರುವ ಗ್ರೊಸ್ಸಿಲಾಕ್ನರ ಶಿಖರ (೩೭೯೭ ಮೀ.) ಎತ್ತರವಿದೆ. ಮುಖ್ಯ ನದಿಯಾದ ಡ್ಯಾನ್ಯೂಬ್ ಒಳನಾಡು ಸಾರಿಗೆ ವ್ಯವಸ್ಥೆಯನ್ನು ಹೊಂದಿದ್ದು ೩೫೦ ಕಿ.ಮೀ. ಹಡಗಿನಲ್ಲಿ ಸಂಚರಿಸಬಹುದು. ಇನ್ನೆ, ಡ್ರಾವ, ಮತ್ತು ಮೂರ್ ಇತರ ಪ್ರಮುಖ ನದಿಗಳು. ಅನೇಕ ಸರೋವರಗಳು ವಿಯನ್ನಾ ಮೈದಾನ, ಪರ್ವತ ತಪ್ಪಲುಗಳು ಸಸ್ಯವರ್ಗದಿಂದ ಕೂಡಿದೆ. ಇಲ್ಲಿ ಸುಣ್ಣದಕಲ್ಲು ಹೇರಳವಾಗಿದೆ. ಮೆಡಿಟರೇನಿಯನ್ ಮತ್ತು ಖಂಡಾಂತರ ವಾಯುಗುಣ ಎರಡೂ ಇವೆ. ಆಸ್ಟ್ರಿಯಾದ ಪೂರ್ವದ ಇಳಿಜಾರುಗಳಲ್ಲಿ ಅಗಲವಾದ ಎಲೆಗಳುಳ್ಳ ಮರಗಳು ಅತಿ ಎತ್ತರಕ್ಕೆ ಬೆಳೆಯುತ್ತವೆ. ಉತ್ತರದ ಪ್ರದೇಶಗಳಲ್ಲಿ ಮೊನಚಾದ ಹಾಗೂ ಆಲ್ಪೈನ್ ಹುಲ್ಲುಗಾವಲಿನ ಸಸ್ಯವರ್ಗವಿದೆ. ಬೀಚ್, ಬರ್ಚ್ ಮತ್ತು ಓಕ್ ಮುಂತಾದ ಎಲೆ ಉದುರುವ ಮರಗಳು, ಅನೇಕ ಬಗೆಯ ವನ್ಯಮೃಗಗಳು ಕಾಡುಜಿಂಕೆ, ಚಿಗರಿ, ಮೊಲ, ಗ್ರೌಸ್, ಕೌಜುಗ, ಫೆಸೆಂಟ್ ಹಕ್ಕಿಗಳು ಹೇರಳವಾಗಿವೆ. ದೇಶದ ಅರ್ಧಭಾಗದಷ್ಟು ಭೂಮಿ ವ್ಯವಸಾಯಕ್ಕೆ ಯೋಗ್ಯವಾಗಿದೆ. ಪಶುಪಾಲನೆ ಮುಖ್ಯ ಕಸುಬು. ಮೆಕ್ಕೆಜೋಳ, ಸಿಹಿಗೆಡ್ಡೆಗಳು, ಗೋಧಿ, ರೈ, ಓಟ್ಸ್, ಬಾರ್ಲಿ, ಆಲೂಗಡ್ಡೆ, ಪ್ರಮುಖವಾಗಿ ಬೆಳೆಯುತ್ತಾರೆ. ಹಾಲು ಹಾಲಿನ ಉತ್ಪನ್ನಗಳನ್ನು ರಪ್ತು ಮಾಡುತ್ತಾರೆ.

ಪುರಾತನ ಶಿಲಾಯುಗದಿಂದಲೂ ಇಲ್ಲಿ ಜನರು ವಾಸಿಸುತ್ತಿದ್ದರೆಂಬುದಕ್ಕೆ ಕುರುಹುಗಳು ಪತ್ತೆಯಾಗಿವೆ. ಕ್ರಿ.ಪೂ. ೧೪ರಲ್ಲಿ ರೋಮನ್ನರು ಡ್ಯಾನ್ಯೂಬ್ ನದಿಗೆ ದಕ್ಷಿಣಕ್ಕಿರುವ ಭಾಗವನ್ನೆಲ್ಲ ಸ್ವಾಧೀನಪಡಿಸಿಕೊಂಡು ನಾರಿಕಂ ಮತ್ತು ಪೆನೋನಿಯ ಎಂಬ ಎರಡು ಪ್ರಾಂತ್ಯಗಳನ್ನು ನಿರ್ಮಿಸಿದರು. ಪೆನೋನಿಯದಲ್ಲಿದ್ದ ವಿಂಡೊಬೋನ ಎಂಬ ನಗರವೇ ಇಂದಿನ ವಿಯನ್ನಾ. ಡ್ಯಾನ್ಯೂಬ್ ನದಿಯ ಉತ್ತರದಲ್ಲಿರುವ ಪ್ರಾಂತ್ಯವನ್ನು ಮಾರ್ಕೊಮ್ಯಾನಿ ಎಂಬ ಜನರು ಆಕ್ರಮಿಸಿದರು. ಮುಂದೆ ವ್ಯಾಂಡರು, ಗಾಥರು, ಹೂಣರು, ಲಂಬಾರ್ಡರು, ಆವಾರರು ಆಕ್ರಮಿಸಿಕೊಂಡರು. ಕ್ರಿ.ಶ. ೮ನೇ ಶತಮಾನದ ಅಂತ್ಯ ಭಾಗದಲ್ಲಿ ಸಾಮ್ರಾಟ ಚಾರ್ಲ್ಸ್ ಮಹಾಶಯ ಆವಾರರನ್ನು ಸೋಲಿಸಿ ಈಸ್ಟ್ ಮಾರ್ಕ್ ಎಂಬ ಪ್ರಾಂತ್ಯವನ್ನು ನಿರ್ಮಿಸಿದ. ಆಸ್ಟ್ರಿಯಾ ಸಾಮ್ರಾಜ್ಯದ ಇತಿಹಾಸ ಇಲ್ಲಿಂದ ಆರಂಭವಾಗುತ್ತದೆ. ಮುಂದೆ ಹಂಗೇರಿಯನ್ನರು ದಾಳಿ ಮಾಡಿದರು. ಆದರೆ ಕ್ರಿ.ಶ. ೯೫೫ರಲ್ಲಿ ಆಟೊ ಮಹಾಶಯ ಅವರನ್ನು ಆಗ್ಸ್‌ಬರ್ಗ್ ಕದನದಲ್ಲಿ ಸೋಲಿಸಿ ಈಸ್ಟ್ ಮಾರ್ಕ್ ಪ್ರಾಂತ್ಯವನ್ನು ಪುನರುಜ್ಜೀವನಗೊಳಿಸಿದ. ಕ್ರಿ.ಶ. ೯೭೩ರಲ್ಲಿ ಬೇಬನ್ಬರ್ಗ್ ವಂಶದ ಲಿಯೋಪಾಲ್ಡ್ ಎಂಬುವವನಿಗೆ ಮಾರ್ಗ್ರೆವ್ ಅಥವಾ ಗಡಿನಾಡಿನ ಸೈನಿಕ ಮಂಡಲಾಧಿಪತಿ ಎಂಬ ಬಿರುದನ್ನು ಕೊಟ್ಟ.

ಹ್ಯಾಪ್ಸ್ ಬರ್ಗ್ ರಾಜಮನೆತನದ ಆಳ್ವಿಕೆಯಲ್ಲಿ ಆಸ್ಟ್ರಿಯಾದ ಭವ್ಯ ಇತಿಹಾಸ ಆರಂಭವಾಯಿತು. ಮೊದಲ ದೊರೆ ಆಲ್ಬರ್ಟ್ ಆಸ್ಟ್ರಿಯಾದ ಡ್ಯೂಕನಾದ (ಕ್ರಿ.ಶ. ೧೨೮೨-೧೩೧೮) ಕಾರಿಂಥಿಯ, ಟೈರಾಲ್ ಮುಂತಾದ ನೆರೆಯ ರಾಜ್ಯಗಳು ಆಸ್ಟ್ರಿಯಾಕ್ಕೆ ಸೇರಿದವು. ೫ನೇ ಆಲ್ಬರ್ಟ್ ಸಿಜಸ್ಮಂಡ್ ಚಕ್ರವರ್ತಿಯ ಮಗಳನ್ನು ಮದುವೆಯಾಗಿ ಹಂಗೇರಿ, ಬೊಹಿಮಿಯಾ ರಾಜ್ಯಗಳಿಗೂ ದೊರೆಯಾದ. ೨ನೇ ಆಲ್ಬರ್ಟ್ ಎಂಬ ಹೆಸರಿನಿಂದ ಪವಿತ್ರ ರೋಮ್ ಸಾಮ್ರಾಜ್ಯದ ಚಕ್ರವರ್ತಿಯಾದ. ಮುಂದೆ ಆಸ್ಟ್ರಿಯಾದ ಹ್ಯಾಪ್ಸ್ ಬರ್ಗ್ ರಾಜರು ಕ್ರಿ.ಶ. ೧೭೪೦-೪೫ರವರೆಗಿನ ಕಾಲವನ್ನು ಹೊರತುಪಡಿಸಿ ಕ್ರಿ.ಶ. ೧೮೦೬ ರವರೆಗೂ ಪವಿತ್ರ ರೋಮ್ ಸಾಮ್ರಾಟರಾಗಿದ್ದರು. ಹೀಗೆ ಆಸ್ಟ್ರಿಯಾದ ಚರಿತ್ರೆ ಆ ಸಾಮ್ರಾಜ್ಯದ ಇತಿಹಾಸದೊಂದಿಗೆ ಹೆಣೆದುಕೊಂಡಿದೆ. ಪವಿತ್ರ ರೋಮ್ ಸಾಮ್ರಾಜ್ಯದ ಕಾಲಾವಧಿಯಲ್ಲಿ ಮುಸ್ಲಿಮರು ಮೇಲಿಂದ ಮೇಲೆ ಆಸ್ಟ್ರಿಯಾದ ಮೇಲೆ ನುಗ್ಗುತ್ತಿದ್ದರು, ಕ್ರಿ.ಶ ೧೬೮೯ರಲ್ಲಿ ವಿಯನ್ನಾಗೆ ಮುತ್ತಿಗೆ ಹಾಕಿ ಪರಾಭವಗೊಂಡ ನಂತರ ಅವರ ಹಾವಳಿ ನಿಂತಿತು.

೧೭ನೇ ಶತಮಾನದಲ್ಲಿ ಆಸ್ಟ್ರಿಯಾ ಮತೀಯ ಮತ್ತು ರಾಜಕೀಯ ಗೊಂದಲಕ್ಕೆ ಸಿಲುಕಿ ತನ್ನ ಪ್ರಾಮುಖ್ಯತೆ ಕಳೆದುಕೊಳ್ಳುತ್ತಾ  ಬಂತು. ೧೬೧೮-೪೮ ರವರೆಗೆ ನಡೆದ ೩೦ ವರ್ಷಗಳ ಯುದ್ಧದಲ್ಲಿ ಯೂರೋಪಿನ ಪ್ರಮುಖ ರಾಷ್ಟ್ರಗಳೆಲ್ಲ ಭಾಗವಹಿಸಿದ್ದವು. ಪವಿತ್ರ ರೋಮ್ ಸಾಮ್ರಾಜ್ಯ ಹೆಸರಿಗೆ ಮಾತ್ರ ಸಾಮಾನ್ಯವಾಗಿ ಉಳಿಯಿತು. ಇದರಿಂದ ಆಸ್ಟ್ರಿಯಾದ ಪ್ರಾಮುಖ್ಯತೆ ಕುಂದಿತು. ಈ ಸಮಯದಲ್ಲಿ ಪ್ರಷ್ಯಾ ರಾಜ್ಯ ತಲೆಯೆತ್ತಿ ಬಹುಬೇಗ ಬೆಳೆಯಿತು. ಫೆಡರಿಕ್ ಮಹಾಶಯ ಆಳ್ವಿಕೆಯಲ್ಲಿ ಪ್ರಷ್ಯಾ ಅಭಿವೃದ್ಧಿ ಹೊಂದಿ ಆಸ್ಟ್ರಿಯಾದ ಪ್ರಬಲ ಪ್ರತಿಸ್ಪರ್ಧಿಯಾಗಿ ನಿಂತಿತು. ೧೮ನೇ ಶತಮಾನದಲ್ಲಿ ಯೂರೋಪಿನಲ್ಲಿ ಫ್ರಾನ್ಸ್ ಅನ್ನು ಬಿಟ್ಟರೆ ಆಸ್ಟ್ರಿಯಾವೇ ಅತ್ಯಂತ ಪ್ರಮುಖ ರಾಜ್ಯವಾಗಿತ್ತು. ಅದು ಟರ್ಕರು, ಪ್ರಾಟಸ್ಟೆಂಟರ ವಿರುದ್ಧ ಮತ್ತು ಉದಾರನೀತಿಯ ವಿರುದ್ಧ ಪ್ರಮುಖ ರಾಷ್ಟ್ರವಾಗಿತ್ತು. ವರ್ಸೆಲ್ಸ್ ರಾಜಸ್ಥಾನದ ವೈಭವವನ್ನು ವಿಯನ್ನಾದ ರಾಜಸ್ಥಾನದಲ್ಲಿ ಕಾಣಬಹುದಾಗಿತ್ತು. ಸುಪ್ರಸಿದ್ಧ ಮಹಿಳಾ ಆಡಳಿತಗಾರ್ತಿ ಮರಿಯಾ ಥೆರೆಸಾ (ಕ್ರಿ.ಶ. ೧೭೪೫-೮೦) ಮತ್ತು ಆಕೆಯ ಮಗ ೨ನೇ ಜೋಸೆಫ್ ಬುದ್ಧಿವಂತ ನಿರಂಕುಶ ಪ್ರಭುಗಳಾಗಿದ್ದರು.

ನೆಪೋಲಿಯನ್ ಬೊನಾಪಾರ್ಟೆಯಿಂದ ಆಸ್ಟರ್ಲಿಟ್ಜ್ ಕದನದಲ್ಲಿ ತೀವ್ರ ಸೋಲನ್ನನುಭವಿಸಿತು. ನೆಪೋಲಿಯನ್ ಬೊನಾಪಾರ್ಟೆಯ ಅವನತಿ ನಂತರ ಆಸ್ಟ್ರಿಯಾದ ರಾಜ ಮೆಟರ್ನಿಕ್ ತನ್ನ ಯುಗ ಆರಂಭಿಸಿದ. ಆದರೆ ೧೮೪೮ರಲ್ಲಿ ಯೂರೋಪಿನಾದ್ಯಂತ ನಡೆದ ಕ್ರಾಂತಿಯ ಪರಿಣಾಮವಾಗಿ ಆಸ್ಟ್ರಿಯಾ ಕ್ಷೀಣಿಸಿತು. ಮೆಟರ್ನಿಕ್ ದೇಶಾಂತರ ಹೋಗಬೇಕಾಯಿತು. ಆದರೂ ದೊರೆ ಫ್ರಾನ್ಸಿಸ್ ಜೋಸೆಫ್ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡು ನಿರಂಕುಶ ಪ್ರಭುವಾಗಿ ಆಳಿದ. ೧೮೫೯ರಲ್ಲಿ ಇಟಲಿಯೊಂದಿಗೆ ನಡೆದ ಯುದ್ಧದಲ್ಲಿ ಆಸ್ಟ್ರಿಯಾ ಲಂಬಾರ್ಡಿಯವನ್ನು ಕಳೆದುಕೊಂಡಿತು. ೧೮೬೬ರಲ್ಲಿ ಪ್ರಷ್ಯಾದೊಂದಿಗೆ ಸಪ್ತವಾರಗಳ ಯುದ್ಧದಿಂದ ವೆನೆಷಿಯಾ ಕಳೆದುಕೊಳ್ಳಬೇಕಾಯಿತು. ೧೮೬೭ರಲ್ಲಿ ಆಸ್ಟ್ರಿಯಾಕ್ಕೆ ಸೇರಿದ ರಾಜ್ಯಗಳ ಪುನರ್ವ್ಯವಸ್ಥೆ ನಡೆದು ಆಸ್ಟ್ರಿಯಾ-ಹಂಗೇರಿ ರಾಜ್ಯ ಸ್ಥಾಪನೆಯಾಯಿತು. ಬಾಲ್ಕನ್ ಪ್ರದೇಶದ ಕ್ರಿಶ್ಚಿಯನ್ನರ ಹಿತ ಕಾಪಾಡಲು ಹೋಗಿ ಆಸ್ಟ್ರಿಯಾ ರಷ್ಯಾದ ವಿರೋಧ ಕಟ್ಟಿಕೊಂಡಿತು. ೧೯೧೪ ಜೂನ್ ೨೮ರಂದು ಆಸ್ಟ್ರಿಯಾದ ಚಕ್ರವರ್ತಿ ಅರ್ಚ್‌ಡ್ಯೂಕ್ ಫ್ರಾನ್ಸಿಸ್ ಫರ್ಡಿನಾಂಡ್ ಮತ್ತ ಆತನ ಪತ್ನಿ ಬೊಸ್ನಿಯಾದ ರಾಜಧಾನಿ ಸರಾಜಿವೋ ನಗರದ ಬೀದಿಯಲ್ಲಿ ಸರ್ಬಿಯಾದ ಪ್ರಜೆಯ ಕೊಲೆ ಮಾಡಿದ್ದು ಮೊದಲನೇ ಮಹಾಯುದ್ಧಕ್ಕೆ ತಕ್ಷಣದ ಕಾರಣವಾಯಿತು. ಒಂದನೇ ಮಹಾಯುದ್ಧದ ನಂತರ ಹಂಗೇರಿ ಪ್ರತ್ಯೇಕವಾಯಿತು. ಹ್ಯಾಪ್ಸ್ ಬರ್ಗ್ ಮನೆತನದ ಆಳ್ವಿಕೆಯೂ ಅಂತ್ಯವಾಯಿತು. ೧೯೩೮ರಲ್ಲಿ ನಾಜಿ ಪಕ್ಷದ ಹಿಟ್ಲರ್ ಆಸ್ಟ್ರಿಯಾವನ್ನು ಆಕ್ರಮಿಸಿ ಜರ್ಮನಿಯೊಂದಿಗೆ ವಿಲೀನ ಮಾಡಿಕೊಂಡ. ಎರಡನೇ ಮಹಾಯುದ್ಧ ಮುಗಿದ ನಂತರ ೧೯೪೫ರಲ್ಲಿ ಪ್ರಜಾ ಸರ್ಕಾರ ಸ್ಥಾಪನೆಯಾಯಿತು.