Categories
asia

ಇಟಲಿ

ಇಟಲಿ ಪ್ರಾಚೀನ ರೋಮ್ ನಾಗರೀಕತೆ (ಯವನರ) ಮತ್ತು ರೋಮ್ ಸಾಮ್ರಾಜ್ಯದ ತವರು, ಪುನರುಜ್ಜೀವನದ ಮಾತೃಭೂಮಿ. ಮೆಡಿಟರೇನಿಯನ್ ಸಮುದ್ರದಲ್ಲಿ ಚಾಚಿ ನಿಂತಿರುವ ಬಹುದೊಡ್ಡ ಪರ್ಯಾಯ ದ್ವೀಪ. ಗಾತ್ರದಲ್ಲಿ ಚಿಕ್ಕದಾಗಿದ್ದರೂ ಸಾಮ್ರಾಜ್ಯಗಳ ಯುಗದಲ್ಲಿ ಹೊಂದಿದ್ದ ವ್ಯಾಪ್ತಿ ಅಚ್ಚರಿಗೊಳಿಸುವಂತದ್ದು. ಇಡೀ ಯೂರೋಪ್ ಖಂಡವನ್ನೇ ಆಳಿದ ಕೀರ್ತಿ ರೋಮ್ ಸಾಮ್ರಾಜ್ಯಕ್ಕೆ ಸೇರುತ್ತದೆ. ಇದು ಜಗತ್ತಿಗೆ ನೀಡಿದ ಕೊಡುಗೆ ಅನನ್ಯವಾದದ್ದು. ಇಟಲಿಯ ಉತ್ತರಕ್ಕೆ ಆಲ್ಪ್ಸ್‌ ಪರ್ವತ ಶ್ರೇಣಿಯಿದ್ದು ಬಿಲ್ಲಿನಂತೆ ಬಾಗಿ ಹಬ್ಬಿದೆ. ಈ ಪರ್ವತ ಫ್ರಾನ್ಸ್, ಸ್ವಿಟ್ಜರ್ಲೆಂಡ್, ಆಸ್ಟ್ರಿಯಾ, ಯುಗೋಸ್ಲಾವಿಯಾಗಳಿಂದ ಇಟಲಿಯನ್ನು ಪ್ರತ್ಯೇಕಗೊಳಿಸಿದೆ. ಇಟಲಿ ಪರ್ಯಾಯ ದ್ವೀಪದ ವಾಯುವ್ಯದಲ್ಲಿ ಲುಗುರಿಯನ್ ಸಮುದ್ರ, ಪಶ್ಚಿಮದಲ್ಲಿ ಟೆರ್ಪೆನಿಯನ್ ಸಮುದ್ರ, ಆಗ್ನೇಯದಲ್ಲಿ ಐಯೋನಿಯನ್ ಸಮುದ್ರ, ಪೂರ್ವದಲ್ಲಿ ಏಡ್ರಿಯಾಟಿಕ್ ಸಮುದ್ರಗಳಿವೆ. ಸಿಸಿಲಿ ಮತ್ತು ಆಫ್ರಿಕಾ ನಡುವೆ ಇರುವ ಸಿಸಿಲಿಯನ್ ಜಲಸಂಧಿ ಕೇವಲ ೧೪೪ ಕಿ.ಮೀ., ಹೀಗಾಗಿ ಇಟಲಿ ಮತ್ತು ಸಿಸಿಲಿಯು ಮೆಡಿಟರೇನಿಯನ್ ಸಮುದ್ರವನ್ನೇ ಸ್ಥೂಲವಾಗಿ ಇಬ್ಭಾಗಿಸಿದೆ.  ಸಿಸಿಲಿ ಮತ್ತು ಸಾರ್ಡೀನಿಯಾ ದ್ವೀಪಗಳು ಇಟಲಿಗೆ ಸೇರಿದ್ದು ಮೆಡಿಟರೇನಿಯನ್ ಸಮುದ್ರದಲ್ಲಿವೆ. ವ್ಯಾಟಿಕನ್ ಸಿಟಿ (ಜಗತ್ತಿನ ಅತ್ಯಂತ ಚಿಕ್ಕ ದೇಶ ೦.೪೪ ಚ.ಕಿ.ಮೀ. ವಿಸ್ತಾರ ಹೊಂದಿದ್ದು ೬೧೮ ಜನಸಂಖ್ಯೆ ಇದೆ. ಕ್ರಿ.ಶ. ೧೯೮೪ರಲ್ಲಿ ವಿಶ್ವಪರಂಪರೆ ಪಟ್ಟಿಗೆ ಸೇರ್ಪಡೆಯಾಗಿದೆ. ಕ್ರೈಸ್ತ ಧರ್ಮದ ಪವಿತ್ರ ನಗರ, ಧರ್ಮಗುರು ಪೋಪನ ಕೇಂದ್ರ ಸ್ಥಾನ) ಮತ್ತು ಸ್ಯಾನ್ ಮರಿನೋ ಗಣರಾಜ್ಯ (ವಿಶ್ವದ ಎರಡನೇ ಅತೀ ಚಿಕ್ಕ ಸ್ವತಂತ್ರ ರಾಷ್ಟ್ರ. ೬೧.೨ ಚ.ಕಿ.ಮೀ. ವಿಸ್ತಾರ ಹೊಂದಿದ್ದು ೨೮,೦೦೦ ಜನಸಂಖ್ಯೆ ಇದೆ.) ಪ್ರತ್ಯೇಕ ದೇಶಗಳು ಇಟಲಿಯಲ್ಲಿವೆ.

ಸಾರ್ಡೀನಿಯಾ ಮತ್ತು ಸಿಸಿಲಿ ದ್ವೀಪಗಳೂ ಸೇರಿದಂತೆ ದೇಶದ ಒಟ್ಟು ವಿಸ್ತೀರ್ಣ ೩,೦೧,೩೪೦ ಚದರ ಕಿ.ಮೀ. ೪೧೦ ೫೪ ಉತ್ತರ ಅಕ್ಷಾಂಶ ಮತ್ತು ೨೯೦ ೧೨ ಪೂರ್ವ ರೇಖಾಂಶಗಳ ನಡುವೆ ಇಟಲಿ ತನ್ನ ವ್ಯಾಪ್ತಿಯನ್ನು ಹೊಂದಿದೆ. ೨೦೧೧ರ ಜನಗಣತಿ ಪ್ರಕಾರ ೫೯,೪೩೩,೭೪೪ ಜನಸಂಖ್ಯೆ ಇದೆ. ರೋಮನ್ ಕ್ಯಾಥೋಲಿಕ್ ಶೇ. ೯೫% ರಷ್ಟಿದ್ದು ಶಾಲಾ ಕಾಲೇಜುಗಳಲ್ಲಿ ಕ್ಯಾಥೋಲಿಕ್ ಧಾರ್ಮಿಕ ಶಿಕ್ಷಣ ಕಡ್ಡಾಯವಾಗಿದೆ. ಉತ್ತರದಲ್ಲಿ ಆಲ್ಪ್ಸ್‌ ಪರ್ವತಗಳು ದಕ್ಷಿಣದ ಇಳಿಜಾರು ಇಟಲಿಯ ಖಂಡಾಂತರ ಪ್ರದೇಶವನ್ನು ಅಡಕತ್ತರಿಯಂತೆ ಹಿಡಿದುಕೊಂಡಿದೆ. ಮೌಂಟ್‌ ಬೈನ್‌ ಕೊ ಎತ್ತರದ ಶಿಖರ (೪,೮೧೦.ಮೀ); ಅಪೆಮಾಟಿಕೋಸ್, ಗ್ರಾನ್‌ಪಾರಡಿಸೋ, ಬರ್ನಿನಾ, ಸ್ಟೇಲ್ಪ್, ಡೋಲೊಮೀಟ್ಸ್ ಇತರ ಪರ್ವತಗಳು. ಉತ್ತರ ಬಯಲಿನ ಪಶ್ಚಿಮ ಭಾಗದಲ್ಲಿ ಪೊ ನದಿ ಹರಿಯುತ್ತಿದೆ. ಇದು ಅತ್ಯಂತ ಉದ್ದವಾದ ನದಿಯಾಗಿದ್ದು, ೬೫೨ ಕಿ.ಮೀ, ಹರಿದು, ಸುಂದರ ಕಣಿವೆ ಮತ್ತು ಕೃಷಿಗೆ ಉತ್ತಮ ಪರಿಸರವನ್ನು ಸೃಜಿಸಿದೆ. ಅದರ ಉಪನದಿಗಳು ಪೂರ್ವಾಭಿಮುಖವಾಗಿ ಹರಿಯುತ್ತವೆ. ಟೈಬರ್ ನದಿಯ ದಂಡೆಯ ಮೇಲೆ ರೋಮ್ ನಗರವಿದೆ. ಕಂಪ ನದಿಯ ಮೈದಾನದಲ್ಲಿ ಪ್ಲೇಗ್ರೀನ್‌ ಫೀಲ್ಡ್ಸ್ ಮತ್ತು ವಿಸೊವಿಯಸ್ ಜೀವಂತ ಅಗ್ನಿಪರ್ವತಗಳಿವೆ.

ಮೆಡಿಟರೇನಿಯನ್ ಸಸ್ಯವರ್ಗಕ್ಕೆ ಸೇರಿದ ಶಂಕುವಿನಾಕಾರದ ಕೊನಿಫರಸ್ ಮರಗಳುಳ್ಳ ಅಗಲೆಲೆಯ ಪರ್ಣಜಾತಿ ವೃಕ್ಷಗಳಿಂದ ಕೂಡಿದ ಕಾಡುಗಳು, ಕುರುಚಲು ಕಾಡು ಮತ್ತು ಹುಲ್ಲುಗಾವಲನ್ನು ಹೊಂದಿದೆ. ಅಂಬ್ರುಜಿ ಎಂಬಲ್ಲಿ ಕರಡಿ, ಆಪೆನೈನ್ ಶ್ರೇಣಿಗಳಲ್ಲಿ ತೋಳ, ಜಿಂಕೆ, ಕಾಡುಹಂದಿ, ಸಾರಾಂಗಗಳಿವೆ. ಹೆಜ್ಜೇಡಗಳು, ಹಾರುಜೇಡಗಳು ಇಲ್ಲಿನ ವಿಷಜಂತುಗಳಾಗಿವೆ. ಟ್ರೇ ಸಿಮೇ ರಾಷ್ಟ್ರೀಯ ಉದ್ಯಾನವನ ವಿಶ್ವಪರಂಪರೆಯ ನೈಸರ್ಗಿಕ ತಾಣವಾಗಿದೆ. ಇಟಲಿ ಕೃಷಿ ಪ್ರಧಾನ ದೇಶವಾಗಿದ್ದು ಗೋಧಿ, ಸಣ್ಣಗೋಧಿ, ಹೊಗೇಸೊಪ್ಪು, ಸೆಣಬು, ಆಲೂಗಡ್ಡೆ, ಜೋಳ, ಟೊಮ್ಯಾಟೊ, ಬೀಟ್‌ರೂಟ್, ಕಿತ್ತಳೆ, ನಿಂಬೆಹಣ್ಣು ಪ್ರಮುಖ ಬೆಳೆಗಳು, ಆಲೀವ್‌ ಎಣ್ಣೆ, ದ್ರಾಕ್ಷಾರಸ ಉತ್ಪಾದನೆಯಲ್ಲಿ ಪ್ರಮುಖ ಸ್ಥಾನ ಪಡೆದಿದೆ.

ಯೂರೋಪಿನ ಪ್ರಾಚೀನ ಶಿಲಾಯುಗದ ಪೂರ್ವ ಮತ್ತು ಮಧ್ಯಕಾಲದ ಕುರುಹುಗಳು ಇಟಲಿ ಪರ್ಯಾಯ ದ್ವೀಪದ ಕೆಲವು ಸ್ಥಳಗಳಲ್ಲಿ ಕಂಡುಬಂದಿವೆ. ಕ್ರೊಮ್ಯಾಗ್ನನ್, ಗ್ರಿಮಾಲ್ಡಿ ರೀತಿಯ ಜನರ ದೈಹಿಕ ಉಳಿಕೆಗಳು ಸಾರ್ಡೀನಿಯಾ ಮತ್ತು ಸಿಸಿಲಿ ದ್ವೀಪಗಳಲ್ಲೂ ಕಂಡುಬಂದಿವೆ. ಮೆಡಿಟರೇನಿಯನ್ ಗುಂಪಿಗೆ ಸೇರಿದ ಲಿಗೂರಿಯನ್ ಎಂಬ ಜನರು ಇಲ್ಲಿದ್ದರು. ಕ್ರಿ.ಪೂ. ಸುಮಾರು ೧೦೦೦-೬೦೦ ರವರೆಗೆ ವಿಲ್ಲನೋವ ಎಂಬ ಕಬ್ಬಿಣಯುಗದ ಸಂಸ್ಕೃತಿ ಇಲ್ಲಿ ಪ್ರಚಲಿತವಿತ್ತು. ಈ ಕಾಲದ ಕುರುಹುಗಳು ಎಮಿಲಿಯ, ಟಸ್ಕನಿ, ಲುಂಬ್ರಿಯ ದೇಶಗಳಲ್ಲಿ ಕಂಡುಬಂದಿವೆ. ಕ್ರಿ.ಪೂ. ೧೦ ಮತ್ತು ೮ನೇ ಶತಮಾನದಲ್ಲಿ ಇಟ್ರಸ್ಕಾನ್ ಜನರು ವಲಸೆ ಬಂದು ತಮ್ಮ ಸಂಸ್ಕೃತಿಯನ್ನು ಬೆಳೆಸಿದರು. ನಂತರ ಪೋನಿಷಿಯನ್ ಮತ್ತು ಗ್ರೀಕ್ ವಸಾಹತುಗಳು ಇಟಲಿ ಕರಾವಳಿಯಲ್ಲಿ ಸ್ಥಾಪನೆಯಾದವು. ಕ್ರಿ.ಪೂ. ೫ನೇ ಶತಮಾನದಲ್ಲಿ ಆಲ್ಪ್ಸ್‌ ಪರ್ವತ ಪ್ರದೇಶದಿಂದ ದಾಳಿ ಮಾಡಿದ ಗಾಲ್ ಜನ ರೋಮ್ ಸುತ್ತಮುತ್ತ ನೆಲೆಸಿ ವಿಶಿಷ್ಟ ರೋಮ್ ಸಂಸ್ಕೃತಿ ಬೆಳೆಯಲು ಕಾರಣರಾದರು. ಕ್ರಿ.ಪೂ. ೨೭ ರಿಂದ ಕ್ರಿ.ಪೂ. ೪೭೬ರಲ್ಲಿ ರೋಮ್ ಸಾಮ್ರಾಜ್ಯ (ಪ್ರಾಚೀನ ರೋಮ್ ನಾಗರೀಕತೆ) ಬೆಳೆಯಿತು.

ರೋಮ್ ಪೂರ್ವಜರು ಮೆಡಿಟರೇನಿಯನ್ ಜನ ಸಮೂಹಕ್ಕೆ ಸೇರಿದವರು. ಇವರ ಭಾಷೆ ಲ್ಯಾಟಿನ್ ಎಂದು ತಿಳಿದುಬರುತ್ತದೆ. ರೋಮಿನ ದಂತಕಥೆ ಪ್ರಕಾರ ಕ್ರಿ.ಪೂ. ೭೫೩ರಲ್ಲಿ ರೋಮುಲಸ್ ಮತ್ತು ರೇಮೂಸ್ ಎಂಬ ಅವಳಿ ಸಹೋದರರು ಟೈಬರ್ ನದಿಯ ದಂಡದಲ್ಲಿ ಪಾಲಟೈನ್‌ ಬೆಟ್ಟದ ಮೇಲೆ ರೋಮ್ ನಗರವನ್ನು ಸ್ಥಾಪಿಸಿದರು. ಇದರ ಪ್ರಥಮ ದೊರೆ ರೋಮುಲಸ್ ತನ್ನ ಜನರನ್ನು ಪೆಟ್ರಿಷಿಯನ್ (ಶ್ರೀಮಂತ) ಹಾಗೂ ಪ್ಲೇಬಿಯನ್ನ್ (ಜನಸಾಮಾನ್ಯ) ರೆಂದು ವಿಭಾಗಿಸಿದ. ಇವನ ತರುವಾಯ ಆರು ದೊರೆಗಳು ಆಳಿದರು. ಇವರ ಆಳ್ವಿಕೆಯಿಂದ ಬೇಸತ್ತ ರೋಮ್ ಜನತೆ ಕ್ರಿ.ಪೂ. ೫೦೭ರಲ್ಲಿ ದಂಗೆದ್ದು ರಾಜತ್ವವನ್ನು ಕೊನೆಗಾಣಿಸಿ ರಿಪಬ್ಲಿಕ್ (ಗಣರಾಜ್ಯ) ಸ್ಥಾಪಿಸಿದರು. ಕ್ರಿ.ಪೂ. ೨೮೭ರಲ್ಲಿ ಪ್ಲೇಬಿಯನ್ನರು ರಾಜಕೀಯ ಹಕ್ಕನ್ನು ಸ್ಥಾಪಿಸಿದರು. ಸಮರ್ಪಕ ಸೈನಿಕ ವ್ಯವಸ್ಥೆ ಹಾಗೂ ದಕ್ಷ ಆಡಳಿತ ವ್ಯವಸ್ಥೆಯಿಂದ ಹೊಸ ಹೊಸ ಪ್ರದೇಶಗಳನ್ನು ಆಕ್ರಮಿಸಿಕೊಂಡಿತು. ಇದರಿಂದ ಇಟಲಿಯ ಪ್ರತಿಯೊಬ್ಬ ಪ್ರಜೆಯೂ ಕನಿಷ್ಟ ೧೬ ದಂಡಯಾತ್ರೆಗಳಲ್ಲಿ ಭಾಗವಹಿಸಬೇಕಾಗಿತ್ತು. ಇವರ ದೇಶಾಭಿಮಾನದಿಂದ ಮೂರು ಕಾರ್ಥೆಜ್ ಅಥವಾ ಪ್ಯೂನಿಕ್ ಯುದ್ಧಗಳನ್ನು (ಆಫ್ರಿಕಾ ಮತ್ತು ಈಜಿಪ್ಟ್ ಗಡಿಯವರೆಗೆ) ಗೆದ್ದರು. ಮೆಡಿಟರೇನಿಯನ್ ಸಮುದ್ರದವರೆಗೆ ರೋಮ್ ಸಾಮ್ರಾಜ್ಯ ಸ್ಥಾಪನೆಯಾಯಿತು. ಕ್ರಿ.ಪೂ. ೧೪೮ರಲ್ಲಿ ಮ್ಯಾಸಿಡೋನಿಯಾ, ಕ್ರಿ.ಪೂ. ೫೦ರ ವೇಳೆಗೆ ಟರ್ಕಿವರೆಗೆ ಸಾಮ್ರಾಜ್ಯ ವಿಸ್ತರಿಸಿದರು. ಮೇರಿಯಸ್ ಮತ್ತು ಸುಲ್ಲಾ ಸರ್ವಾಧಿಕಾರಿಗಳಾಗಿ ಶಾಂತಿ ಸ್ಥಾಪಿಸಿದರು. ನಂತರ ಸಿಸಿರೊ, ಕ್ರಾಸಸ್, ಪಾಂಪೆ, ಜೂಲಿಯಸ್ ಸೀಸರ್ (ಜುಲೈ ತಿಂಗಳು ಈತನ ನೆನಪು) ಆಳಿದರು. ಜೂಲಿಯಸ್ ಸೀಸರ್ (ಕ್ರಿ.ಪೂ. ೧೦೨- ಕ್ರಿ.ಪೂ. ೪೪) ರೋಮನ್ ಸಾಮ್ರಾಜ್ಯ ಸ್ಥಾಪಿಸಿದ. ಮುಂದಿನ ದೊರೆ ಈತನ ಮಗ ಕ್ರಿ.ಪೂ. ೩೧ ರಿಂದ ಕ್ರಿ.ಶ. ೧೪ ರವರೆಗೆ ಆಳಿದ ಆಗಸ್ಟಸ್ ಸೀಸರ್ (ಆಗಸ್ಟ್ ತಿಂಗಳು ಇವನ ನೆನಪು) ಜೀಸಸ್‌ನ ಸಮಕಾಲೀನನಾಗಿ ಆಳಿದನು. ನೀರೋ ಆಳ್ವಿಕೆ ರೋಮ್ ಸಾಮ್ರಾಜ್ಯದ ಅವನತಿಯ ಕಾಲವಾಗಿತ್ತು. ಕಾನ್‌ಸ್ಟಾಂಟೈನ್ ಮತ್ತು ಥಿಯೋಡೋಸಿಯಸ್ ಪ್ರಸಿದ್ಧ ಕೊನೆಯ ರಾಜರಾಗಿ ಆಳಿದರು. ಕಾನ್‌ಸ್ಟಾಂಟೈನ್ ಪೂರ್ವದ ಬೈಜಾಂಟಿಯಂ ಸಾಮ್ರಾಜ್ಯವನ್ನು ಇಸ್ತಾನ್‌ ಬುಲ್‌ನಲ್ಲಿ ಸ್ಥಾಪಿಸಿದ. ಪೂರ್ವ ರೋಮ್ ಸಾಮ್ರಾಜ್ಯ ಕ್ರಿ.ಶ. ೧೪೫೩ ರವರೆಗೂ ರಾಜಧಾನಿಯಾಗಿತ್ತು. ರೋಮ್ ಕಾನೂನು – ಜ್ಯೂರಿ’, ಜಸ್ಟೀನಿಯನ್ – ಕಾನೂನು ಸಂಹಿತೆ. ಆಂಪಿಥಿಯೇಟರ್, ಕಲೋಷಿಯಂ, ಒಂದು ಲಕ್ಷಕ್ಕೂ ಹೆಚ್ಚಿನ ಅರಮನೆಗಳು, ಚರ್ಚ್‌ಗಳು, ಸ್ಮಾರಕಗಳು, ಐತಿಹಾಸಿಕ ಮನೆಗಳು, ಪ್ರತಿಮೆಗಳು, ಕಾರಂಜಿಗಳನ್ನು ಕಟ್ಟಿ ರೋಮನ್ನರು ಕೊಡುಗೆಯಾಗಿ ನೀಡಿದ್ದಾರೆ. ಕ್ರಿ.ಶ. ಒಂದನೇ ಶತಮಾನದಲ್ಲಿ ಯೇಸುವಿನ ಶಿಷ್ಯರಲ್ಲಿ ಒಬ್ಬನಾದ ಸೆಂಟ್ ಪಾಲ್ ಇಟಲಿಯಲ್ಲಿ ಕ್ರೈಸ್ತ ಧರ್ಮ ಪ್ರಚಾರಮಾಡಿದನು. ಥಿಯೋಡೋಸಿಯಸ್ ಆಳ್ವಿಕೆಯಲ್ಲಿ ಕ್ರೈಸ್ತ ಮತ ರಾಜ್ಯಧರ್ಮವಾಯಿತು.

ಕ್ರಿ.ಶ. ೧೫ ಮತ್ತು ೧೬ನೇ ಶತಮಾನದಲ್ಲಿ ಇಟಲಿಯಲ್ಲಿ ಪುನರುಜ್ಜೀವನ ಆರಂಭವಾಯಿತು. ಡಾಂಟೆ, ಪೆಟ್ರಾರ್ಕ್, ಬೊಕಾಷಿಯೋ ಮಹಾನ್ ಮಾನವತಾವಾದಿಗಳು. ಮೆಕೆವೆಲ್ಲಿಯಂತ ರಾಜನೀತಿ ಬರಹಗಾರರು ಇಟಲಿಯಲ್ಲಿದ್ದರು. ವೆನಿಸ್ ವರ್ತಕರಾದ ಮಾರ್ಕೋಪೋಲೋ ಮತ್ತು ನಿಕೊಲೊಪೋಲೊ ಜಗತ್ತಿನ ಮೊದಲ ಪ್ರವಾಸಿಗರು. ಬಹಮಾ ಮತ್ತು ವೆಸ್ಟಿಂಡೀಸ್ ದ್ವೀಪಗಳನ್ನು ಕಂಡುಹಿಡಿದ ಕ್ರಿಸ್ಟೋಫರ್ ಕೊಲಂಬಸ್, ಇಟಲಿಯ ವೆನಿಸ್ ನಾವಿಕ, ಅಮೇರಿಕಾ ಭೂಖಂಡ ಕಂಡುಹಿಡಿದ ಅಮೆರಿಗೋ ವೆಸ್ಪುಸ್ಸಿ, ನ್ಯೂಫೌಂಡ್‌ ಲ್ಯಾಂಡ್ ಕಂಡುಹಿಡಿದ ಜಾನ್ ಕೆಬೋಟ್ ಇಟಲಿ ದೇಶದ ಭೌಗೋಳಿಕ ಸಂಶೋಧಕರು. ಲಿಯೋನಾರ್ದೋ ಡಾವಿಂಚಿ, ಮೈಕಲ್ ಏಂಜಲೋ, ಟೈಟಿಯನ್ ಮುಂತಾದ ಜಗತ್‌ಪ್ರಸಿದ್ಧ ಕಲಾಕಾರರಿಗೆ ಜನ್ಮ ನೀಡಿದ ನಾಡು. ಪುನರುಜ್ಜೀವನದ ಕಾಲದಲ್ಲಿ ಇಟಲಿ ಜಗತ್ತಿಗೆ ಮತ್ತೊಮ್ಮೆ ಮಾದರಿಯಾಗಿ ಕಲೆ, ಸಂಸ್ಕೃತಿ, ಸಾಹಿತ್ಯ, ವಿಜ್ಞಾನ ಕ್ಷೇತ್ರದಲ್ಲಿ ಬೆಳೆಯಿತು.

ಕ್ರಿ.ಶ. ೧೮ನೇ ಶತಮಾನದಲ್ಲಿ ನೆಪೋಲಿಯನ್ ಆಳ್ವಿಕೆ, ನಂತರ ಆಸ್ಟ್ರಿಯಾದ ಮೆಟರ್ನಿಕ್ ಆಳ್ವಿಕೆಯಿಂದ ಬೇಸತ್ತು ಜೋಸೆಫ್ ಮ್ಯಾಜಿನಿ, ಕೌಂಟ್ ಡಿ ಕೆವೂರ್, ಗ್ಯಾರಿಬಾಲ್ಡಿ ಇಟಲಿಯ ಏಕೀಕರಣವನ್ನು ಆರಂಭಿಸಿ ಕ್ರಿ.ಶ. ೧೮೭೧ರಲ್ಲಿ ಪೂರ್ಣಗೊಳಿಸಿದರು. ಕ್ರಿ.ಶ. ೧೯೨೦ರಲ್ಲಿ ಮುಸೊಲೋನಿಯಿಂದ ಪ್ರಾರಂಭವಾದ ಫ್ಯಾಸಿಸಂ ಪಕ್ಷ ಇಟಲಿಯನ್ನು ಹೀನಸ್ಥಿತಿಗೆ ತಂದೊಡ್ಡಿತು. ದ್ವಿತೀಯ ಮಹಾಯುದ್ಧದಲ್ಲಿ ಪರಾಜಯಗೊಂಡ ಮೇಲೆ ಜನಮತಗಣನೆ ನಡೆದು ಸಂವಿಧಾನ ಸಭೆಗೆ ಪ್ರಥಮ ಬಾರಿಗೆ ಚುನಾವಣೆ ನಡೆಯಿತು. ಕ್ರಿ.ಶ. ೧೯೪೬ ಜೂನ್ ೧೦ರಿಂದ ಇಟಲಿ ಗಣರಾಜ್ಯವಾಗಿ, ಕ್ರಿ.ಶ. ೧೯೪೭ ಡಿಸಂಬರ್ ೨೭ರಂದು ನೂತನ ಸಂವಿಧಾನ ಅಂಗೀಕಾರವಾಗಿ ಕ್ರಿ.ಶ. ೧೯೪೮ ಜನವರಿ ೧ ರಂದು ಜಾರಿಗೆ ಬಂದಿದೆ.