Categories
asia

ಇಟಲಿ

ಇಟಲಿ ಪ್ರಾಚೀನ ರೋಮ್ ನಾಗರೀಕತೆ (ಯವನರ) ಮತ್ತು ರೋಮ್ ಸಾಮ್ರಾಜ್ಯದ ತವರು, ಪುನರುಜ್ಜೀವನದ ಮಾತೃಭೂಮಿ. ಮೆಡಿಟರೇನಿಯನ್ ಸಮುದ್ರದಲ್ಲಿ ಚಾಚಿ ನಿಂತಿರುವ ಬಹುದೊಡ್ಡ ಪರ್ಯಾಯ ದ್ವೀಪ. ಗಾತ್ರದಲ್ಲಿ ಚಿಕ್ಕದಾಗಿದ್ದರೂ ಸಾಮ್ರಾಜ್ಯಗಳ ಯುಗದಲ್ಲಿ ಹೊಂದಿದ್ದ ವ್ಯಾಪ್ತಿ ಅಚ್ಚರಿಗೊಳಿಸುವಂತದ್ದು. ಇಡೀ ಯೂರೋಪ್ ಖಂಡವನ್ನೇ ಆಳಿದ ಕೀರ್ತಿ ರೋಮ್ ಸಾಮ್ರಾಜ್ಯಕ್ಕೆ ಸೇರುತ್ತದೆ. ಇದು ಜಗತ್ತಿಗೆ ನೀಡಿದ ಕೊಡುಗೆ ಅನನ್ಯವಾದದ್ದು. ಇಟಲಿಯ ಉತ್ತರಕ್ಕೆ ಆಲ್ಪ್ಸ್‌ ಪರ್ವತ ಶ್ರೇಣಿಯಿದ್ದು ಬಿಲ್ಲಿನಂತೆ ಬಾಗಿ ಹಬ್ಬಿದೆ. ಈ ಪರ್ವತ ಫ್ರಾನ್ಸ್, ಸ್ವಿಟ್ಜರ್ಲೆಂಡ್, ಆಸ್ಟ್ರಿಯಾ, ಯುಗೋಸ್ಲಾವಿಯಾಗಳಿಂದ ಇಟಲಿಯನ್ನು ಪ್ರತ್ಯೇಕಗೊಳಿಸಿದೆ. ಇಟಲಿ ಪರ್ಯಾಯ ದ್ವೀಪದ ವಾಯುವ್ಯದಲ್ಲಿ ಲುಗುರಿಯನ್ ಸಮುದ್ರ, ಪಶ್ಚಿಮದಲ್ಲಿ ಟೆರ್ಪೆನಿಯನ್ ಸಮುದ್ರ, ಆಗ್ನೇಯದಲ್ಲಿ ಐಯೋನಿಯನ್ ಸಮುದ್ರ, ಪೂರ್ವದಲ್ಲಿ ಏಡ್ರಿಯಾಟಿಕ್ ಸಮುದ್ರಗಳಿವೆ. ಸಿಸಿಲಿ ಮತ್ತು ಆಫ್ರಿಕಾ ನಡುವೆ ಇರುವ ಸಿಸಿಲಿಯನ್ ಜಲಸಂಧಿ ಕೇವಲ ೧೪೪ ಕಿ.ಮೀ., ಹೀಗಾಗಿ ಇಟಲಿ ಮತ್ತು ಸಿಸಿಲಿಯು ಮೆಡಿಟರೇನಿಯನ್ ಸಮುದ್ರವನ್ನೇ ಸ್ಥೂಲವಾಗಿ ಇಬ್ಭಾಗಿಸಿದೆ.  ಸಿಸಿಲಿ ಮತ್ತು ಸಾರ್ಡೀನಿಯಾ ದ್ವೀಪಗಳು ಇಟಲಿಗೆ ಸೇರಿದ್ದು ಮೆಡಿಟರೇನಿಯನ್ ಸಮುದ್ರದಲ್ಲಿವೆ. ವ್ಯಾಟಿಕನ್ ಸಿಟಿ (ಜಗತ್ತಿನ ಅತ್ಯಂತ ಚಿಕ್ಕ ದೇಶ ೦.೪೪ ಚ.ಕಿ.ಮೀ. ವಿಸ್ತಾರ ಹೊಂದಿದ್ದು ೬೧೮ ಜನಸಂಖ್ಯೆ ಇದೆ. ಕ್ರಿ.ಶ. ೧೯೮೪ರಲ್ಲಿ ವಿಶ್ವಪರಂಪರೆ ಪಟ್ಟಿಗೆ ಸೇರ್ಪಡೆಯಾಗಿದೆ. ಕ್ರೈಸ್ತ ಧರ್ಮದ ಪವಿತ್ರ ನಗರ, ಧರ್ಮಗುರು ಪೋಪನ ಕೇಂದ್ರ ಸ್ಥಾನ) ಮತ್ತು ಸ್ಯಾನ್ ಮರಿನೋ ಗಣರಾಜ್ಯ (ವಿಶ್ವದ ಎರಡನೇ ಅತೀ ಚಿಕ್ಕ ಸ್ವತಂತ್ರ ರಾಷ್ಟ್ರ. ೬೧.೨ ಚ.ಕಿ.ಮೀ. ವಿಸ್ತಾರ ಹೊಂದಿದ್ದು ೨೮,೦೦೦ ಜನಸಂಖ್ಯೆ ಇದೆ.) ಪ್ರತ್ಯೇಕ ದೇಶಗಳು ಇಟಲಿಯಲ್ಲಿವೆ.

ಸಾರ್ಡೀನಿಯಾ ಮತ್ತು ಸಿಸಿಲಿ ದ್ವೀಪಗಳೂ ಸೇರಿದಂತೆ ದೇಶದ ಒಟ್ಟು ವಿಸ್ತೀರ್ಣ ೩,೦೧,೩೪೦ ಚದರ ಕಿ.ಮೀ. ೪೧೦ ೫೪ ಉತ್ತರ ಅಕ್ಷಾಂಶ ಮತ್ತು ೨೯೦ ೧೨ ಪೂರ್ವ ರೇಖಾಂಶಗಳ ನಡುವೆ ಇಟಲಿ ತನ್ನ ವ್ಯಾಪ್ತಿಯನ್ನು ಹೊಂದಿದೆ. ೨೦೧೧ರ ಜನಗಣತಿ ಪ್ರಕಾರ ೫೯,೪೩೩,೭೪೪ ಜನಸಂಖ್ಯೆ ಇದೆ. ರೋಮನ್ ಕ್ಯಾಥೋಲಿಕ್ ಶೇ. ೯೫% ರಷ್ಟಿದ್ದು ಶಾಲಾ ಕಾಲೇಜುಗಳಲ್ಲಿ ಕ್ಯಾಥೋಲಿಕ್ ಧಾರ್ಮಿಕ ಶಿಕ್ಷಣ ಕಡ್ಡಾಯವಾಗಿದೆ. ಉತ್ತರದಲ್ಲಿ ಆಲ್ಪ್ಸ್‌ ಪರ್ವತಗಳು ದಕ್ಷಿಣದ ಇಳಿಜಾರು ಇಟಲಿಯ ಖಂಡಾಂತರ ಪ್ರದೇಶವನ್ನು ಅಡಕತ್ತರಿಯಂತೆ ಹಿಡಿದುಕೊಂಡಿದೆ. ಮೌಂಟ್‌ ಬೈನ್‌ ಕೊ ಎತ್ತರದ ಶಿಖರ (೪,೮೧೦.ಮೀ); ಅಪೆಮಾಟಿಕೋಸ್, ಗ್ರಾನ್‌ಪಾರಡಿಸೋ, ಬರ್ನಿನಾ, ಸ್ಟೇಲ್ಪ್, ಡೋಲೊಮೀಟ್ಸ್ ಇತರ ಪರ್ವತಗಳು. ಉತ್ತರ ಬಯಲಿನ ಪಶ್ಚಿಮ ಭಾಗದಲ್ಲಿ ಪೊ ನದಿ ಹರಿಯುತ್ತಿದೆ. ಇದು ಅತ್ಯಂತ ಉದ್ದವಾದ ನದಿಯಾಗಿದ್ದು, ೬೫೨ ಕಿ.ಮೀ, ಹರಿದು, ಸುಂದರ ಕಣಿವೆ ಮತ್ತು ಕೃಷಿಗೆ ಉತ್ತಮ ಪರಿಸರವನ್ನು ಸೃಜಿಸಿದೆ. ಅದರ ಉಪನದಿಗಳು ಪೂರ್ವಾಭಿಮುಖವಾಗಿ ಹರಿಯುತ್ತವೆ. ಟೈಬರ್ ನದಿಯ ದಂಡೆಯ ಮೇಲೆ ರೋಮ್ ನಗರವಿದೆ. ಕಂಪ ನದಿಯ ಮೈದಾನದಲ್ಲಿ ಪ್ಲೇಗ್ರೀನ್‌ ಫೀಲ್ಡ್ಸ್ ಮತ್ತು ವಿಸೊವಿಯಸ್ ಜೀವಂತ ಅಗ್ನಿಪರ್ವತಗಳಿವೆ.

ಮೆಡಿಟರೇನಿಯನ್ ಸಸ್ಯವರ್ಗಕ್ಕೆ ಸೇರಿದ ಶಂಕುವಿನಾಕಾರದ ಕೊನಿಫರಸ್ ಮರಗಳುಳ್ಳ ಅಗಲೆಲೆಯ ಪರ್ಣಜಾತಿ ವೃಕ್ಷಗಳಿಂದ ಕೂಡಿದ ಕಾಡುಗಳು, ಕುರುಚಲು ಕಾಡು ಮತ್ತು ಹುಲ್ಲುಗಾವಲನ್ನು ಹೊಂದಿದೆ. ಅಂಬ್ರುಜಿ ಎಂಬಲ್ಲಿ ಕರಡಿ, ಆಪೆನೈನ್ ಶ್ರೇಣಿಗಳಲ್ಲಿ ತೋಳ, ಜಿಂಕೆ, ಕಾಡುಹಂದಿ, ಸಾರಾಂಗಗಳಿವೆ. ಹೆಜ್ಜೇಡಗಳು, ಹಾರುಜೇಡಗಳು ಇಲ್ಲಿನ ವಿಷಜಂತುಗಳಾಗಿವೆ. ಟ್ರೇ ಸಿಮೇ ರಾಷ್ಟ್ರೀಯ ಉದ್ಯಾನವನ ವಿಶ್ವಪರಂಪರೆಯ ನೈಸರ್ಗಿಕ ತಾಣವಾಗಿದೆ. ಇಟಲಿ ಕೃಷಿ ಪ್ರಧಾನ ದೇಶವಾಗಿದ್ದು ಗೋಧಿ, ಸಣ್ಣಗೋಧಿ, ಹೊಗೇಸೊಪ್ಪು, ಸೆಣಬು, ಆಲೂಗಡ್ಡೆ, ಜೋಳ, ಟೊಮ್ಯಾಟೊ, ಬೀಟ್‌ರೂಟ್, ಕಿತ್ತಳೆ, ನಿಂಬೆಹಣ್ಣು ಪ್ರಮುಖ ಬೆಳೆಗಳು, ಆಲೀವ್‌ ಎಣ್ಣೆ, ದ್ರಾಕ್ಷಾರಸ ಉತ್ಪಾದನೆಯಲ್ಲಿ ಪ್ರಮುಖ ಸ್ಥಾನ ಪಡೆದಿದೆ.

ಯೂರೋಪಿನ ಪ್ರಾಚೀನ ಶಿಲಾಯುಗದ ಪೂರ್ವ ಮತ್ತು ಮಧ್ಯಕಾಲದ ಕುರುಹುಗಳು ಇಟಲಿ ಪರ್ಯಾಯ ದ್ವೀಪದ ಕೆಲವು ಸ್ಥಳಗಳಲ್ಲಿ ಕಂಡುಬಂದಿವೆ. ಕ್ರೊಮ್ಯಾಗ್ನನ್, ಗ್ರಿಮಾಲ್ಡಿ ರೀತಿಯ ಜನರ ದೈಹಿಕ ಉಳಿಕೆಗಳು ಸಾರ್ಡೀನಿಯಾ ಮತ್ತು ಸಿಸಿಲಿ ದ್ವೀಪಗಳಲ್ಲೂ ಕಂಡುಬಂದಿವೆ. ಮೆಡಿಟರೇನಿಯನ್ ಗುಂಪಿಗೆ ಸೇರಿದ ಲಿಗೂರಿಯನ್ ಎಂಬ ಜನರು ಇಲ್ಲಿದ್ದರು. ಕ್ರಿ.ಪೂ. ಸುಮಾರು ೧೦೦೦-೬೦೦ ರವರೆಗೆ ವಿಲ್ಲನೋವ ಎಂಬ ಕಬ್ಬಿಣಯುಗದ ಸಂಸ್ಕೃತಿ ಇಲ್ಲಿ ಪ್ರಚಲಿತವಿತ್ತು. ಈ ಕಾಲದ ಕುರುಹುಗಳು ಎಮಿಲಿಯ, ಟಸ್ಕನಿ, ಲುಂಬ್ರಿಯ ದೇಶಗಳಲ್ಲಿ ಕಂಡುಬಂದಿವೆ. ಕ್ರಿ.ಪೂ. ೧೦ ಮತ್ತು ೮ನೇ ಶತಮಾನದಲ್ಲಿ ಇಟ್ರಸ್ಕಾನ್ ಜನರು ವಲಸೆ ಬಂದು ತಮ್ಮ ಸಂಸ್ಕೃತಿಯನ್ನು ಬೆಳೆಸಿದರು. ನಂತರ ಪೋನಿಷಿಯನ್ ಮತ್ತು ಗ್ರೀಕ್ ವಸಾಹತುಗಳು ಇಟಲಿ ಕರಾವಳಿಯಲ್ಲಿ ಸ್ಥಾಪನೆಯಾದವು. ಕ್ರಿ.ಪೂ. ೫ನೇ ಶತಮಾನದಲ್ಲಿ ಆಲ್ಪ್ಸ್‌ ಪರ್ವತ ಪ್ರದೇಶದಿಂದ ದಾಳಿ ಮಾಡಿದ ಗಾಲ್ ಜನ ರೋಮ್ ಸುತ್ತಮುತ್ತ ನೆಲೆಸಿ ವಿಶಿಷ್ಟ ರೋಮ್ ಸಂಸ್ಕೃತಿ ಬೆಳೆಯಲು ಕಾರಣರಾದರು. ಕ್ರಿ.ಪೂ. ೨೭ ರಿಂದ ಕ್ರಿ.ಪೂ. ೪೭೬ರಲ್ಲಿ ರೋಮ್ ಸಾಮ್ರಾಜ್ಯ (ಪ್ರಾಚೀನ ರೋಮ್ ನಾಗರೀಕತೆ) ಬೆಳೆಯಿತು.

ರೋಮ್ ಪೂರ್ವಜರು ಮೆಡಿಟರೇನಿಯನ್ ಜನ ಸಮೂಹಕ್ಕೆ ಸೇರಿದವರು. ಇವರ ಭಾಷೆ ಲ್ಯಾಟಿನ್ ಎಂದು ತಿಳಿದುಬರುತ್ತದೆ. ರೋಮಿನ ದಂತಕಥೆ ಪ್ರಕಾರ ಕ್ರಿ.ಪೂ. ೭೫೩ರಲ್ಲಿ ರೋಮುಲಸ್ ಮತ್ತು ರೇಮೂಸ್ ಎಂಬ ಅವಳಿ ಸಹೋದರರು ಟೈಬರ್ ನದಿಯ ದಂಡದಲ್ಲಿ ಪಾಲಟೈನ್‌ ಬೆಟ್ಟದ ಮೇಲೆ ರೋಮ್ ನಗರವನ್ನು ಸ್ಥಾಪಿಸಿದರು. ಇದರ ಪ್ರಥಮ ದೊರೆ ರೋಮುಲಸ್ ತನ್ನ ಜನರನ್ನು ಪೆಟ್ರಿಷಿಯನ್ (ಶ್ರೀಮಂತ) ಹಾಗೂ ಪ್ಲೇಬಿಯನ್ನ್ (ಜನಸಾಮಾನ್ಯ) ರೆಂದು ವಿಭಾಗಿಸಿದ. ಇವನ ತರುವಾಯ ಆರು ದೊರೆಗಳು ಆಳಿದರು. ಇವರ ಆಳ್ವಿಕೆಯಿಂದ ಬೇಸತ್ತ ರೋಮ್ ಜನತೆ ಕ್ರಿ.ಪೂ. ೫೦೭ರಲ್ಲಿ ದಂಗೆದ್ದು ರಾಜತ್ವವನ್ನು ಕೊನೆಗಾಣಿಸಿ ರಿಪಬ್ಲಿಕ್ (ಗಣರಾಜ್ಯ) ಸ್ಥಾಪಿಸಿದರು. ಕ್ರಿ.ಪೂ. ೨೮೭ರಲ್ಲಿ ಪ್ಲೇಬಿಯನ್ನರು ರಾಜಕೀಯ ಹಕ್ಕನ್ನು ಸ್ಥಾಪಿಸಿದರು. ಸಮರ್ಪಕ ಸೈನಿಕ ವ್ಯವಸ್ಥೆ ಹಾಗೂ ದಕ್ಷ ಆಡಳಿತ ವ್ಯವಸ್ಥೆಯಿಂದ ಹೊಸ ಹೊಸ ಪ್ರದೇಶಗಳನ್ನು ಆಕ್ರಮಿಸಿಕೊಂಡಿತು. ಇದರಿಂದ ಇಟಲಿಯ ಪ್ರತಿಯೊಬ್ಬ ಪ್ರಜೆಯೂ ಕನಿಷ್ಟ ೧೬ ದಂಡಯಾತ್ರೆಗಳಲ್ಲಿ ಭಾಗವಹಿಸಬೇಕಾಗಿತ್ತು. ಇವರ ದೇಶಾಭಿಮಾನದಿಂದ ಮೂರು ಕಾರ್ಥೆಜ್ ಅಥವಾ ಪ್ಯೂನಿಕ್ ಯುದ್ಧಗಳನ್ನು (ಆಫ್ರಿಕಾ ಮತ್ತು ಈಜಿಪ್ಟ್ ಗಡಿಯವರೆಗೆ) ಗೆದ್ದರು. ಮೆಡಿಟರೇನಿಯನ್ ಸಮುದ್ರದವರೆಗೆ ರೋಮ್ ಸಾಮ್ರಾಜ್ಯ ಸ್ಥಾಪನೆಯಾಯಿತು. ಕ್ರಿ.ಪೂ. ೧೪೮ರಲ್ಲಿ ಮ್ಯಾಸಿಡೋನಿಯಾ, ಕ್ರಿ.ಪೂ. ೫೦ರ ವೇಳೆಗೆ ಟರ್ಕಿವರೆಗೆ ಸಾಮ್ರಾಜ್ಯ ವಿಸ್ತರಿಸಿದರು. ಮೇರಿಯಸ್ ಮತ್ತು ಸುಲ್ಲಾ ಸರ್ವಾಧಿಕಾರಿಗಳಾಗಿ ಶಾಂತಿ ಸ್ಥಾಪಿಸಿದರು. ನಂತರ ಸಿಸಿರೊ, ಕ್ರಾಸಸ್, ಪಾಂಪೆ, ಜೂಲಿಯಸ್ ಸೀಸರ್ (ಜುಲೈ ತಿಂಗಳು ಈತನ ನೆನಪು) ಆಳಿದರು. ಜೂಲಿಯಸ್ ಸೀಸರ್ (ಕ್ರಿ.ಪೂ. ೧೦೨- ಕ್ರಿ.ಪೂ. ೪೪) ರೋಮನ್ ಸಾಮ್ರಾಜ್ಯ ಸ್ಥಾಪಿಸಿದ. ಮುಂದಿನ ದೊರೆ ಈತನ ಮಗ ಕ್ರಿ.ಪೂ. ೩೧ ರಿಂದ ಕ್ರಿ.ಶ. ೧೪ ರವರೆಗೆ ಆಳಿದ ಆಗಸ್ಟಸ್ ಸೀಸರ್ (ಆಗಸ್ಟ್ ತಿಂಗಳು ಇವನ ನೆನಪು) ಜೀಸಸ್‌ನ ಸಮಕಾಲೀನನಾಗಿ ಆಳಿದನು. ನೀರೋ ಆಳ್ವಿಕೆ ರೋಮ್ ಸಾಮ್ರಾಜ್ಯದ ಅವನತಿಯ ಕಾಲವಾಗಿತ್ತು. ಕಾನ್‌ಸ್ಟಾಂಟೈನ್ ಮತ್ತು ಥಿಯೋಡೋಸಿಯಸ್ ಪ್ರಸಿದ್ಧ ಕೊನೆಯ ರಾಜರಾಗಿ ಆಳಿದರು. ಕಾನ್‌ಸ್ಟಾಂಟೈನ್ ಪೂರ್ವದ ಬೈಜಾಂಟಿಯಂ ಸಾಮ್ರಾಜ್ಯವನ್ನು ಇಸ್ತಾನ್‌ ಬುಲ್‌ನಲ್ಲಿ ಸ್ಥಾಪಿಸಿದ. ಪೂರ್ವ ರೋಮ್ ಸಾಮ್ರಾಜ್ಯ ಕ್ರಿ.ಶ. ೧೪೫೩ ರವರೆಗೂ ರಾಜಧಾನಿಯಾಗಿತ್ತು. ರೋಮ್ ಕಾನೂನು – ಜ್ಯೂರಿ’, ಜಸ್ಟೀನಿಯನ್ – ಕಾನೂನು ಸಂಹಿತೆ. ಆಂಪಿಥಿಯೇಟರ್, ಕಲೋಷಿಯಂ, ಒಂದು ಲಕ್ಷಕ್ಕೂ ಹೆಚ್ಚಿನ ಅರಮನೆಗಳು, ಚರ್ಚ್‌ಗಳು, ಸ್ಮಾರಕಗಳು, ಐತಿಹಾಸಿಕ ಮನೆಗಳು, ಪ್ರತಿಮೆಗಳು, ಕಾರಂಜಿಗಳನ್ನು ಕಟ್ಟಿ ರೋಮನ್ನರು ಕೊಡುಗೆಯಾಗಿ ನೀಡಿದ್ದಾರೆ. ಕ್ರಿ.ಶ. ಒಂದನೇ ಶತಮಾನದಲ್ಲಿ ಯೇಸುವಿನ ಶಿಷ್ಯರಲ್ಲಿ ಒಬ್ಬನಾದ ಸೆಂಟ್ ಪಾಲ್ ಇಟಲಿಯಲ್ಲಿ ಕ್ರೈಸ್ತ ಧರ್ಮ ಪ್ರಚಾರಮಾಡಿದನು. ಥಿಯೋಡೋಸಿಯಸ್ ಆಳ್ವಿಕೆಯಲ್ಲಿ ಕ್ರೈಸ್ತ ಮತ ರಾಜ್ಯಧರ್ಮವಾಯಿತು.

ಕ್ರಿ.ಶ. ೧೫ ಮತ್ತು ೧೬ನೇ ಶತಮಾನದಲ್ಲಿ ಇಟಲಿಯಲ್ಲಿ ಪುನರುಜ್ಜೀವನ ಆರಂಭವಾಯಿತು. ಡಾಂಟೆ, ಪೆಟ್ರಾರ್ಕ್, ಬೊಕಾಷಿಯೋ ಮಹಾನ್ ಮಾನವತಾವಾದಿಗಳು. ಮೆಕೆವೆಲ್ಲಿಯಂತ ರಾಜನೀತಿ ಬರಹಗಾರರು ಇಟಲಿಯಲ್ಲಿದ್ದರು. ವೆನಿಸ್ ವರ್ತಕರಾದ ಮಾರ್ಕೋಪೋಲೋ ಮತ್ತು ನಿಕೊಲೊಪೋಲೊ ಜಗತ್ತಿನ ಮೊದಲ ಪ್ರವಾಸಿಗರು. ಬಹಮಾ ಮತ್ತು ವೆಸ್ಟಿಂಡೀಸ್ ದ್ವೀಪಗಳನ್ನು ಕಂಡುಹಿಡಿದ ಕ್ರಿಸ್ಟೋಫರ್ ಕೊಲಂಬಸ್, ಇಟಲಿಯ ವೆನಿಸ್ ನಾವಿಕ, ಅಮೇರಿಕಾ ಭೂಖಂಡ ಕಂಡುಹಿಡಿದ ಅಮೆರಿಗೋ ವೆಸ್ಪುಸ್ಸಿ, ನ್ಯೂಫೌಂಡ್‌ ಲ್ಯಾಂಡ್ ಕಂಡುಹಿಡಿದ ಜಾನ್ ಕೆಬೋಟ್ ಇಟಲಿ ದೇಶದ ಭೌಗೋಳಿಕ ಸಂಶೋಧಕರು. ಲಿಯೋನಾರ್ದೋ ಡಾವಿಂಚಿ, ಮೈಕಲ್ ಏಂಜಲೋ, ಟೈಟಿಯನ್ ಮುಂತಾದ ಜಗತ್‌ಪ್ರಸಿದ್ಧ ಕಲಾಕಾರರಿಗೆ ಜನ್ಮ ನೀಡಿದ ನಾಡು. ಪುನರುಜ್ಜೀವನದ ಕಾಲದಲ್ಲಿ ಇಟಲಿ ಜಗತ್ತಿಗೆ ಮತ್ತೊಮ್ಮೆ ಮಾದರಿಯಾಗಿ ಕಲೆ, ಸಂಸ್ಕೃತಿ, ಸಾಹಿತ್ಯ, ವಿಜ್ಞಾನ ಕ್ಷೇತ್ರದಲ್ಲಿ ಬೆಳೆಯಿತು.

ಕ್ರಿ.ಶ. ೧೮ನೇ ಶತಮಾನದಲ್ಲಿ ನೆಪೋಲಿಯನ್ ಆಳ್ವಿಕೆ, ನಂತರ ಆಸ್ಟ್ರಿಯಾದ ಮೆಟರ್ನಿಕ್ ಆಳ್ವಿಕೆಯಿಂದ ಬೇಸತ್ತು ಜೋಸೆಫ್ ಮ್ಯಾಜಿನಿ, ಕೌಂಟ್ ಡಿ ಕೆವೂರ್, ಗ್ಯಾರಿಬಾಲ್ಡಿ ಇಟಲಿಯ ಏಕೀಕರಣವನ್ನು ಆರಂಭಿಸಿ ಕ್ರಿ.ಶ. ೧೮೭೧ರಲ್ಲಿ ಪೂರ್ಣಗೊಳಿಸಿದರು. ಕ್ರಿ.ಶ. ೧೯೨೦ರಲ್ಲಿ ಮುಸೊಲೋನಿಯಿಂದ ಪ್ರಾರಂಭವಾದ ಫ್ಯಾಸಿಸಂ ಪಕ್ಷ ಇಟಲಿಯನ್ನು ಹೀನಸ್ಥಿತಿಗೆ ತಂದೊಡ್ಡಿತು. ದ್ವಿತೀಯ ಮಹಾಯುದ್ಧದಲ್ಲಿ ಪರಾಜಯಗೊಂಡ ಮೇಲೆ ಜನಮತಗಣನೆ ನಡೆದು ಸಂವಿಧಾನ ಸಭೆಗೆ ಪ್ರಥಮ ಬಾರಿಗೆ ಚುನಾವಣೆ ನಡೆಯಿತು. ಕ್ರಿ.ಶ. ೧೯೪೬ ಜೂನ್ ೧೦ರಿಂದ ಇಟಲಿ ಗಣರಾಜ್ಯವಾಗಿ, ಕ್ರಿ.ಶ. ೧೯೪೭ ಡಿಸಂಬರ್ ೨೭ರಂದು ನೂತನ ಸಂವಿಧಾನ ಅಂಗೀಕಾರವಾಗಿ ಕ್ರಿ.ಶ. ೧೯೪೮ ಜನವರಿ ೧ ರಂದು ಜಾರಿಗೆ ಬಂದಿದೆ.

Categories
asia

ಗ್ರೀಸ್

ಗ್ರೀಸ್ (ಗ್ರೀಕ್) ಪಾಶ್ಚಿಮಾತ್ಯ ನಾಗರೀಕತೆಗಳ ತೊಟ್ಟಿಲು. ಪ್ರಾಚೀನ ಹೆಲನಿಕ್ ಗಣರಾಜ್ಯ. ಪ್ರಜಾಪ್ರಭುತ್ವದ ಮಾತೃಭೂಮಿ, ಪಾಶ್ಚಿಮಾತ್ಯ ಇತಿಹಾಸ, ತತ್ವಶಾಸ್ತ್ರ, ಸಸ್ಯಶಾಸ್ತ್ರ, ರಾಜ್ಯಶಾಸ್ತ್ರ, ರೇಖಾಗಣಿತ, ಸಾಹಿತ್ಯ – ಹೀಗೆ ಅನೇಕ ಶಿಸ್ತಿನ ಅಧ್ಯಯನಗಳ ತವರು ಭೂಮಿ. ಗ್ರೀಕರು ನಾಟಕ ಮತ್ತು ಒಲಿಂಪಿಕ್ ಕ್ರೀಡೆಗಳ (ಕ್ರಿ.ಪೂ. ೭೭೬) ರೂವಾರಿಗಳು. ಗ್ರೀಸ್ ದೇಶ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ರಾಷ್ಟ್ರವಾಗಿದೆ. ಗ್ರೀಕನ್ನು ರೂಪಿಸುವಲ್ಲಿ ಅಲ್ಲಿನ ವಾಯುಗುಣ ಮತ್ತು ಏಜಿಯನ್ ಸಮುದ್ರ ಮುಖ್ಯ ಪಾತ್ರವಹಿಸಿವೆ. ದಕ್ಷಿಣ ಯೂರೋಪಿನ ಪರ್ಯಾಯ ದ್ವೀಪ, ಬೆಟ್ಟಗುಡ್ಡಗಳಿಂದ ಕೂಡಿದೆ. ಅನೇಕ ಸಣ್ಣಪುಟ್ಟ ದ್ವೀಪಗಳಿಂದ ಸುತ್ತುವರಿಯಲ್ಪಟ್ಟಿದೆ. ಏಜಿಯನ್ ಸಮುದ್ರ ಪಶ್ಚಿಮ ಏಷ್ಯಾ ಮತ್ತು ಗ್ರೀಸ್‌ಗೂ ವ್ಯಾಪಾರ ಸಂಪರ್ಕ ಮತ್ತು ಸಾಂಸ್ಕೃತಿಕ ಸಂಪರ್ಕಗಳಿಗೆ ಕೊಂಡಿಯಿದ್ದಂತೆ. ಏಜಿಯನ್ ಐಯೋನಿಯನ್ ಸಮುದ್ರಗಳು ಗ್ರೀಕರ ನೌಕಾಬಲವನ್ನು ಕಟ್ಟಿ ವ್ಯಾಪಾರ ವಿಸ್ತರಿಸಲು ಅನುಕೂಲವಾಗಿವೆ. ಪೂರ್ವದಿಂದ ಸರೋನಿಕ್ ಖಾರಿಯೂ ಪಶ್ಚಿಮದಿಂದ ಕೋರಿಂತ್ ಖಾರಿಯೂ ಗ್ರೀಸಿನ ಒಳಗೆ ನುಗ್ಗಿ ದೇಶವನ್ನು ಉತ್ತರ ದಕ್ಷಿಣ ಮತ್ತು ಗ್ರೀಸ್‌ಗಳನ್ನಾಗಿ ವಿಂಗಡಿಸಿವೆ. ದಕ್ಷಿಣೋತ್ತರವಾಗಿ ಹಬ್ಬಿರುವ ವಿಂಡ್ಸರ್ ಪರ್ವತ ಶ್ರೇಣಿ ಗ್ರೀಸ್ ದೇಶದ ಬೆನ್ನೆಲುಬಿನಂತಿದೆ. ಮ್ಯಾಸಿಡೋನಿಯಾ ಮತ್ತು ತೆಸಲಿ ಪರ್ವತ ಶ್ರೇಣಿ ಗ್ರೀಕ್ ಇತಿಹಾಸದಲ್ಲಿ ಹೆಸರಾಗಿದ್ದು ಗ್ರೀಕ್ ದೇವತೆಗಳ ವಾಸಸ್ಥಾನವೆಂಬ ಪ್ರತೀತಿಯಿಂದ ಪವಿತ್ರವೆನಿಸಿದೆ. ಪ್ರಾಚೀನ ನಗರ-ರಾಜ್ಯಗಳಾದ ಅಥೆನ್ಸ್, ಸ್ಪಾರ್ಟಾ, ಥೀಬ್ಸ್, ಮ್ಯಾಸಿಡೋನಿಯಾ, ಕೋರಿಯಂತ್ ಬೆಳವಣಿಗೆಗೆ ಇಲ್ಲಿನ ಭೌಗೋಳಿಕ ಪರಿಸರವೇ ಕಾರಣ.

ಗ್ರೀಸ್ ಬಾಲ್ಕನ್ ಪರ್ಯಾಯ ದ್ವೀಪದ ದಕ್ಷಿಣ ತುದಿಯಲ್ಲಿದೆ. ಯೂರೋಪ್, ಏಷಿಯಾ ಮತ್ತು ಆಫ್ರಿಕಾಗಳ ಮಾರ್ಗಮಧ್ಯೆಯಿದೆ. ವಾಯುವ್ಯಕ್ಕೆ ಆಲ್ಬೇನಿಯಾ, ಉತ್ತರಕ್ಕೆ ಮ್ಯಾಸಿಡೋನಿಯ ಮತ್ತು ಬಲ್ಗೇರಿಯ, ಈಶಾನ್ಯಕ್ಕೆ ಟರ್ಕಿ, ಪೂರ್ವಕ್ಕೆ ಏಜಿಯನ್ ಸಮುದ್ರ, ದಕ್ಷಿಣಕ್ಕೆ ಐಯೊನಿಯನ್ ಸಮುದ್ರ, ಕ್ರೀಟನ್ ಮತ್ತು ಮೆಡಿಟರೇನಿಯನ್ ಸಮುದ್ರಗಳ ನಡುವೆ ೩೭೦ ೫೮ ಉತ್ತರ ಅಕ್ಷಾಂಶ ಮತ್ತು ೨೩೦ ೪೩ ಪಶ್ಚಿಮ ರೇಖಾಂಶಗಳ ನಡುವೆ ೨೨೭ಕ್ಕೂ ಹೆಚ್ಚಿನ ಚಿಕ್ಕ-ದೊಡ್ಡ ದ್ವೀಪಗಳಿಂದ ಕೂಡಿದೆ. ಮೌಂಟ್ ಒಲಂಪಸ್ ಅತಿ ಎತ್ತರದ ಪರ್ವತ (೨೯೧೮ ಮೀಟರ್). ದೇಶಕ್ಕೆ ಒಂಭತ್ತು ಸಾಂಪ್ರದಾಯಿಕ ಭೌಗೋಳಿಕ ಪ್ರದೇಶಗಳಿವೆ. ಮ್ಯಾಸಿಡೋನಿಯಾ, ಗ್ರೀಸ್ ಕೇಂದ್ರ, ಪೆಲೊಪೋನಿಯನ್ಸ್, ಥೆಸ್ಸಿಲಿ, ಇಪಿರಸ್, ಏಜಿಯ್‌ ದ್ವೀಪ, ಥೇಸ್ಸ್, ಕ್ರೀಟ್, (ಅ)ಲೋನಿಯನ್‌ ದ್ವೀಪ. ೧,೩೧,೯೯೦ ಚದರ ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ಗ್ರೀಕ್ ಆರು ಬಗೆಯ ಜೀವಜಾಲದ ಪರಿಸರವನ್ನು ಹೊಂದಿದೆ. ಇಲೇರಿಯನ್ ಡೆಸಿಡಸ್ ಅರಣ್ಯಗಳು, ಪಿಂಡಸ್ ಪರ್ವತಗಳ ಮಿಶ್ರ ಕಾಡು, ಬಾಲ್ಕನ್ ಮಿಶ್ರ ಅರಣ್ಯ, ರೆಡೋಫ್ ಮಿಶ್ರ ಅರಣ್ಯ, ಏಜಿಯನ್ ಮತ್ತು ಪಶ್ಚಿಮ ಟರ್ಕಿ ಕ್ಯಾಲಿಫೋರ್ನಿಯನ್ ಮಿಶ್ರ ಕಾಡುಗಳು. ದೇಶದ ಶೇ. ೪% ಜನ ಮಾತ್ರ ಕೃಷಿ ಅವಲಂಬಿತ ಚಟುವಟಿಕೆ ಮಾಡುತ್ತಿದ್ದು, ಹತ್ತಿ, ಪಿಸ್ತಾ, ಅಕ್ಕಿ, ಆಲೀವ್. ಕಲ್ಲಂಗಡಿ, ಹೊಗೇಸೊಪ್ಪು, ಬಾದಾಮಿ ಪ್ರಮುಖ ಬೆಳೆಗಳನ್ನು ಬೆಳೆಯುತ್ತಾರೆ. ಶೇ. ೮೫% ರಷ್ಟು ಸೇವಾವಲಯ ಅದರಲ್ಲೂ ಮುಖ್ಯವಾಗಿ ಪ್ರವಾಸೋದ್ಯಮವನ್ನೇ ನಂಬಿ ಬದುಕಿರುವ ದೇಶ. ಗ್ರೀಸ್ ಆರ್ಥಿಕವಾಗಿ ವಿಶ್ವದ ೫೧ನೇ ದೇಶ. ಅಭಿವೃದ್ಧಿ ಹೊಂದಿದ ದೇಶವಾಗಿದ್ದು ಸೇವಾ ವಲಯದಲ್ಲಿ ಶೇ. ೮೦%, ಕೈಗಾರಿಕಾ ಕ್ಷೇತ್ರದಲ್ಲಿ ಶೇ. ೧೬%, ಕೃಷಿ ವಲಯವು ೨೦೧೭ರ ರಾಷ್ಟ್ರೀಯ ಆರ್ಥಿಕ ಉತ್ಪಾದನೆಯ ಶೇ. ೪%ರಷ್ಟು ಹೊಂದಿದೆ. ಗ್ರೀಸ್ ಮರ್ಚೆಂಟ್ ನೇವಿ ವಿಶ್ವದಲ್ಲೇ ಅತಿದೊಡ್ಡದಾಗಿದೆ. ಗ್ರೀಕ್ ಒಡೆತನದ ಹಡಗುಗಳು ೨೦೧೩ರ ಹೊತ್ತಿಗೆ ಜಾಗತಿಕ ಹೆಡ್ ವೈಟ್ ಟನ್‌ ನ ಶೇ. ೧೫%ರಷ್ಟು ಹೊಂದಿದೆ. ಗ್ರೀಸ್ ಬಾಲ್ಕನ್ ರಾಷ್ಟ್ರಗಳಲ್ಲೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿದ್ದು, ಸುಧಾರಿತ ಹೆಚ್ಚಿನ ಆದಾಯದ ಆರ್ಥಿಕತೆಯನ್ನು ಹೊಂದಿದೆ. ಕಪ್ಪುಸಮುದ್ರದ ಆರ್ಥಿಕ ಸಹಕಾರ ಸಂಘಟನೆಯ ಸಂಸ್ಥಾಪಕ ಸದಸ್ಯ ರಾಷ್ಟ್ರ.

೨೦೧೭ರ ಜನಗಣತಿ ಪ್ರಕಾರ ದೇಶದ ಜನಸಂಖ್ಯೆ ೧೦,೭೬೮,೪೭೭. ಪ್ರಾಚೀನ ಗ್ರೀಕ್ (ಅಭಿಜಾತ ಭಾಷೆ) ಭಾಷೆ ಆಡಳಿತ ಮತ್ತು ದೇಶಭಾಷೆಯಾಗಿದೆ. ಅಥೆನ್ಸ್ – ರಾಜಧಾನಿ. ಧ್ಯೇಯ – ’ಸ್ವಾತಂತ್ರ್ಯ ಇಲ್ಲವೆ ಮೃತ್ಯು’, ರಾಷ್ಟ್ರಗೀತೆ – ಹೈಯ್ಮ್ ಟು ಪ್ರೀಡಂ. ಸಾಂಪ್ರದಾಯಿಕ ಕ್ರೈಸ್ತ ಧರ್ಮವನ್ನು ಪಾಲಿಸಿದ ಮೊದಲ ದೇಶ ಗ್ರೀಕ್.

ಗ್ರೀಕರು ಮೊದಲು ಇತಿಹಾಸದ ಬೆಳಕನ್ನು ಕಂಡಿದ್ದು ಕ್ರೀಟನರಿಂದ. ಕ್ರಿ.ಪೂ. ೧೬೦೦-೧೨೦೦ರಲ್ಲಿ ತಾಮ್ರ ಯುಗದ ನಾಗರೀಕತೆ ಪ್ರವರ್ಧಮಾನಕ್ಕೆ ಬಂದಿತು. ಈ ಯುಗದ ಅವಶೇಷಗಳು ಮೈಸೀನೀ ಪಟ್ಟಣದಲ್ಲಿ ಕಂಡುಬಂದಿರುವುದರಿಂದ ಮೈಸೀನಿಯಾದ ಕಾಲವೆಂದು ಕರೆದಿದ್ದಾರೆ. ಟ್ರಾಯ್, ಮೈಸೀನಿ ಮತ್ತು ನಾಸಸ್ ಪಟ್ಟಣಗಳಲ್ಲಿ ಸಿಕ್ಕಿದ ಅವಶೇಷಗಳು ಒಂದೇ ಬಗೆಯಾದ್ದರಿಂದ ಇದನ್ನು ಏಜಿಯನ್ ನಾಗರೀಕತೆ (ಕ್ರಿ.ಪೂ. ೩೦೦೦-೧೩೫೦) ಎಂದು ಕರೆಯಲಾಗಿದೆ. ಗ್ರೀಕ್ ದೇಶ ಏಜಿಯನ್ ಸಮುದ್ರದಾಚೆಯ ಟ್ರಾಯ್ ದೇಶ, ಏಷ್ಯಾ ಮೈನರ್‌ನ ಅನೇಕ ಪ್ರದೇಶಗಳು, ಕಪ್ಪು ಸಮುದ್ರದ ತೀರದ ಭಾಗ ಮತ್ತು ಆಫ್ರಿಕಾದ ಮೆಡಿಟರೇನಿಯನ್ ಸಮುದ್ರತೀರಗಳನ್ನು ಒಳಗೊಂಡಿತ್ತು. ಗ್ರೀಕರನ್ನು (ಕ್ರಿ.ಪೂ. ೧೨೦೦-೫೫೦) ಹೆಲೆನರು ಎಂತಲೂ ಕರೆಯಲಾಗುತ್ತದೆ. ಪುರಾತನ ಕಾವ್ಯಗಳಲ್ಲಿ ಹೆಲ್ಲಾಸ್ ಎಂದು ಕರೆಯಲಾಗಿದೆ. ಹೋಮರ್ ಕವಿಯ ಈಲಿಯಡ್ ಮತ್ತು ಒಡಿಸ್ಸಿ ಮಹಾಕಾವ್ಯಗಳು ಮೈಸೀನೀ, ಅರೆಯನ್ನರು, ಗ್ರೀಕರು ಟ್ರಾಯ್ ನಗರದ ಮುತ್ತಿಗೆ ಹಾಕಿದ ಕುರಿತು ಮಾಹಿತಿ ನೀಡುತ್ತವೆ. ಇವು ಗ್ರೀಕರ ಪೂಜ್ಯ ಗ್ರಂಥಗಳು, ಗ್ರೀಕ್ ವೀರರ ಶೌರ್ಯ ಕಥನಗಳು. ಕ್ರಿ.ಪೂ. ೭ನೇ ಶತಮಾನದಲ್ಲಿ ಲಿಡಿಯಾ ದೇಶದ ರಾಜರಿಗೆ ಸೋತು ಶರಣಾದರು. ಕ್ರಿ.ಪೂ. ೫೦೦ರಲ್ಲಿ ಪರ್ಷಿಯನ್ನರ ರಾಜ ಸೈರಸ್ ಲಿಡಿಯ, ಮಿಡಿಯಾ ರಾಜ್ಯಗಳನ್ನು ಜಯಿಸಿದ. ತನ್ನ ಪ್ರತಿನಿಧಿಗಳನ್ನಾಗಿ ಸತ್ರಪರನ್ನು ನೇಮಿಸಿದ. ಕ್ರಿ.ಪೂ. ೪೯೯ರಲ್ಲಿ ಡೇರಿಯಸ್ ಆಳಿದ.

ಪೆರಿಕ್ಲೀನ್‌ ಯುಗ ಗ್ರೀಕ್‌ ನ ಸುವರ್ಣಯುಗ (ಕ್ರಿ.ಪೂ. ೪೫೯-೪೨೯) ಇಸ್ಕಿಲಸ್, ಯುರಿಪಿಡಸ್, ಸಾಪೊಕ್ಲಿಸ್ ದುರಂತ ನಾಟಕಕಾರರು, ಇತಿಹಾಸದ ಪಿತಾಮಹ ಹೆರೊಡಟಸ್, ಥ್ಯೂಸಿಡೈಡೀಸ್, ತತ್ವಜ್ಞಾನಿಗಳಾದ ಸಾಕ್ರಟೀಸ್, ಪ್ಲೇಟೋ ಅಥೆನ್ಸ್‌ ನಲ್ಲಿದ್ದರು. ಅಥೆನ್ಸ್ ನಗರವನ್ನು ಸುಂದರ ಬೃಹತ್ ಸೌಧಗಳಿಂದ ಅಲಂಕಾರಗೊಳಿಸಿ ಪಾರ್ಥೆನಾನ್ ದೇವಾಲಯ ಕಟ್ಟಿಸಿದ. ಅಥೆನಾ ದೇವರಿಂದ ಅಥೆನ್ಸ್ ಹೆಸರು ಬಂದಿದೆ. ತತ್ವಶಾಸ್ತ್ರ, ಸಸ್ಯಶಾಸ್ತ್ರ ಮತ್ತು ರಾಜ್ಯಶಾಸ್ತ್ರಗಳ ಪಿತಾಮಹ ಅರಿಸ್ಟಾಟಲ್, ರೇಖಾಗಣಿತದ ಜನಕ ಯೂಕ್ಲಿಡ್, ಪೈಥಾಗೋರಸ್, ಭೂಗೋಳಶಾಸ್ತ್ರದ ಪಿತಾಮಹ ಎರಟಾಸ್ತನೀಸ್, ವೈದ್ಯವಿಜ್ಞಾನದ ಪಿತಾಮಹ ಹಿಪ್ಪೋಕ್ರೆಟ್ಸ್, ಯೂರಿಪಿಡಸ್, ಆರ್ಕಿಮಿಡಿಸ್ ಹೀಗೆ ವೈಜ್ಞಾನಿಕ ಚಿಂತಕರನ್ನು ಹಾಗೂ ಘಟಾನುಘಟಿಗಳನ್ನು ಜಗತ್ತಿಗೆ ನೀಡಿದ ದೇಶ ಗ್ರೀಸ್.

ಅಲೆಕ್ಸಾಂಡರ್ ಮಹಾಶಯ ಪ್ರಸಿದ್ಧ ಮ್ಯಾಸಿಡೋನಿಯಾದ ರಾಜ (ಕ್ರಿ.ಪೂ. ೩೩೬-೩೨೩), ಪ್ರಸಿದ್ಧ ತತ್ವಜ್ಞಾನಿ ಅರಿಸ್ಟಾಟಲ್‌ನ ಶಿಷ್ಯ. ಜಗತ್ತನ್ನೇ ಗೆಲ್ಲಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದ ಭಾರತದ ಪಂಜಾಬಿನವರೆಗೂ ದಾಳಿಮಾಡಿ ತನ್ನ ಸೇನಾನಿ ಸೆಲ್ಯೂಕಸ್‌ನಿಗೆ ನೀಡಿ ವಾಪಸ್ಸಾದ. ಇವನ ಹೆಸರಿನಲ್ಲೇ ಅಲೆಕ್ಸಾಂಡ್ರಿಯಾ ಪಟ್ಟಣವನ್ನು ಕಟ್ಟಿಸಿದ. ಕ್ರಿ.ಶ. ೨ ಮತ್ತು ೩ನೇ ಶತಮಾನದಲ್ಲಿ ಗ್ರೀಕ್ ಪರಕೀಯರ ಸ್ಲಾವ್, ಹೂಣರು, ಗಾತಿಕ್, ತುರ್ಕಿ ಸುಲ್ತಾನರ ದಾಳಿಗೆ ತುತ್ತಾಯಿತು. ಇದರಲ್ಲಿ ಗಾತಿಕ್ ಪ್ರಮುಖರು. ಕ್ರಿ.ಶ. ೧೬೬೯ರಲ್ಲಿ ಸಂಪೂರ್ಣ ಆಟೋಮನ್ ಸಾಮ್ರಾಜ್ಯದ ಅಧೀನವಾಯಿತು. ರಷ್ಯಾ ಬೆಂಬಲದಿಂದ ಕ್ರಿ.ಶ. ೧೭೭೧ರಲ್ಲಿ ಮೊದಲ ದಂಗೆ ನಡೆಯಿತು. ಕ್ರಿ.ಶ. ೧೮೨೧ರಲ್ಲಿ ಗ್ರೀಕ್ ಸ್ವಾತಂತ್ರ್ಯ ಸಂಗ್ರಾಮ ಅಲೆಕ್ಸಾಂಡರ್ ಇಪ್ಸಿಲಾಂಟಿ ನಾಯಕತ್ವದಲ್ಲಿ ನಡೆಯಿತು. ಆಡ್ರಿಯಾನೋಪಲ್ ಶಾಂತಿ ಕೌಲಿನ ಪರಿಣಾಮವಾಗಿ ಸ್ವತಂತ್ರ ಗ್ರೀಕ್ ರಾಜ್ಯ ಉದಯಿಸಿತು. ಗ್ರೀಕ್ ಸ್ವಾತಂತ್ರ್ಯ ಯುದ್ಧದ ನಂತರ ಸಂಸದೀಯ ಗಣರಾಜ್ಯವನ್ನು ಕ್ರಿ.ಶ. ೧೮೨೧ ಮಾರ್ಚ್ ೨೫ ಹೊಂದಿತು. ಅಂದಿನಿಂದ ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಪ್ರಸ್ತುತ ಗ್ರೀಸ್ ಆರ್ಥಿಕ ಹಿಂಜರಿತ, ಭಾರಿ ಸಾರ್ವಜನಿಕ ಸಾಲದಿಂದ ಬಳಲುತ್ತಿದೆ. ಬಡತನ ಹೆಚ್ಚಾಗಿ, ಆರ್ಥಿಕ ಸಂಕಷ್ಟಗಳಿಂದ (೨೦೧೫ರ ವರದಿಯಂತೆ) ತನ್ನ ಒಂದೊಂದೇ ದ್ವೀಪಗಳನ್ನು ಮಾರಾಟಕ್ಕೆ ಇಟ್ಟಿತ್ತು.

Categories
asia

ಫ್ರಾನ್ಸ್

ಫ್ರಾನ್ಸ್ ಯೂರೋಪ್ ಖಂಡದ ಮೂರನೇ ಅತಿದೊಡ್ಡ ದೇಶ ಮತ್ತು ಪ್ರಬಲ ರಾಷ್ಟ್ರ. ವಿಶ್ವಸಂಸ್ಥೆಯ ಖಾಯಂ ಸದಸ್ಯ ರಾಷ್ಟ್ರಗಳಲ್ಲಿ ಒಂದಾಗಿದೆ. ಪ್ರಪಂಚದ ಅತಿಹೆಚ್ಚು ಪ್ರವಾಸಿಗರನ್ನು ಸೆಳೆಯುವ ದೇಶವಾಗಿದ್ದು, ಜಗತ್ತಿನಲ್ಲಿ ವಿಶ್ವ ಪರಂಪರೆಯ ತಾಣಗಳಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, ಪ್ರತಿವರ್ಷ ಎಂಟು ಕೋಟಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ‘ಲ ಮಾರ್ಸೈಎಸ್’ ಎಂಬುದು ಇಲ್ಲಿನ ರಾಷ್ಟ್ರಗೀತೆ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಧ್ಯೇಯಗಳಾಗಿದ್ದು ಇವು ಜಗತ್ತಿಗೆ ನೀಡಿದ ಕಾಣಿಕೆಯಾಗಿವೆ. ಇಂದಿಗೂ ಇವುಗಳನ್ನು ಪಡೆಯಲು ಜಗತ್ತಿನಾದ್ಯಂತ ಹೋರಾಟಗಳು ನಡೆಯುತ್ತಲೇ ಇವೆ. ಇದರ ರಾಜಧಾನಿ ಪ್ಯಾರೀಸ್ ಅನೇಕ ಅಂತಾರಾಷ್ಟ್ರೀಯ ಒಪ್ಪಂದಗಳಿಗೆ ಸಾಕ್ಷಿಯಾಗಿದ್ದು, ಫ್ರೆಂಚ್ ಭಾಷೆ ಆಡಳಿತ ಮತ್ತು ದೇಶ ಭಾಷೆಯಾಗಿದೆ. ಜುಲೈ ೧೪ ಸ್ವಾತಂತ್ರ್ಯ ದಿನ. (ಕ್ರಿ.ಶ. ೧೭೮೯ರ ಮಹಾಕ್ರಾಂತಿ, ಬ್ಯಾಸ್ಟಿಲೆ ಕಾರಾಗೃಹ ಪತನದ ನೆನಪು) ಶೇ. ೯೦% ರಷ್ಟು ರೋಮನ್ ಕ್ಯಾಥೊಲಿಕ್ ಧರ್ಮಿಯರಿದ್ದಾರೆ. ಫ್ರ‍್ಯಾಂಕ್ ನಾಣ್ಯವನ್ನು ಬಳಸುವ ಫ್ರಾನ್ಸ್‌ ನಲ್ಲಿ ಪುಟ್ಬಾಲ್ ಮತ್ತು ರಗ್ಬಿ ಜನಪ್ರಿಯ ಕ್ರೀಡೆಗಳು.

ಪಶ್ಚಿಮ ಯೂರೋಪಿನಲ್ಲಿ ಅಟ್ಲಾಂಟಿಕ್ ಮತ್ತು ಮೆಡಿಟರೇನಿಯನ್ ಸಮುದ್ರಗಳ ನಡುವೆ ೪೮೦ ೫೧ ಉತ್ತರ ಅಕ್ಷಾಂಶ ಮತ್ತು ೨೦ ೨೧ ಪಶ್ಚಿಮ ರೇಖಾಂಶಗಳ ನಡುವೆ ದೇಶ ಹಬ್ಬಿದೆ. ದೇಶದ ಉತ್ತರದಲ್ಲಿ ಇಂಗ್ಲಿಷ್ ಕಡಲ್ಗಾಲುವೆ, ಬೆಲ್ಜಿಯಂ ಮತ್ತು ಲಕ್ಸಂಬರ್ಗ್; ಪಶ್ಚಿಮದಲ್ಲಿ ಅಟ್ಲಾಂಟಿಕ್ ಸಾಗರ ಮತ್ತು ಬಿಸ್ಕೇ ಕೊಲ್ಲಿ; ದಕ್ಷಿಣದಲ್ಲಿ ಸ್ಪೇನ್ ಮತ್ತು ಮೆಡಿಟರೇನಿಯನ್ ಸಮುದ್ರ; ಪೂರ್ವದಲ್ಲಿ ಪಶ್ಚಿಮ ಜರ್ಮನಿ, ಸ್ವಿಟ್ಜರ್‌ಲ್ಯಾಂಡ್ ಮತ್ತು ಇಟಲಿಗಳಿದ್ದು ೬೪೦,೬೭೯ ಚದರ ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ೨೦೧೯ರ ಜನಗಣತಿ ಪ್ರಕಾರ ದೇಶದ ಜನಸಂಖ್ಯೆ ೬೪,೮೫೭,೦೦೦ ಕೋಟಿ.

ಫ್ರಾನ್ಸ್ ಯೂರೋಪಿನ ಅತ್ಯಂತ ವೈವಿಧ್ಯಮಯವಾದ ಮೇಲ್ಮೈ ಇರುವ ದೇಶ. ಸಮುದ್ರ ಪಾತಾಳಿಯಿಂದ ಹಿಡಿದು ಯೂರೋಪಿನ ಅತ್ಯುನ್ನತ ಶಿಖರವಾದ ಮೌಂಟ್‌ಬ್ಲ್ಯಾಂಕಿನ (೪೮೦೭ ಮೀಟರ್) ವರೆಗೆ ನೆಲದ ಎತ್ತರದಲ್ಲಿ ವ್ಯತ್ಯಾಸಗಳನ್ನು ಹೊಂದಿದೆ. ಆಲ್ಪ್ಸ್‌ ಪರ್ವತ ಮತ್ತು ಜುರಾ ಪರ್ವತಗಳು, ಸ್ಪೇನ್ ಕಡೆಗೆ ಪಿರನೀಸ್ ಪರ್ವತ ಶ್ರೇಣಿ ಹಬ್ಬಿವೆ. ಲವಾರ್, ಗರನ್, ಡಾರ್ಡೊನ್, ಅಡುರ್ ನದಿಗಳು ಬಿಸ್ಕೇ ಕೊಲ್ಲಿಯನ್ನು, ಸೇವ್, ಸಾಮ್ ನದಿಗಳು ಇಂಗ್ಲಿಷ್ ಕಡಲ್ಗಾಲುವೆಯನ್ನು, ರೋಸ್ ಮೆಡಿಟರೇನಿಯನ್ ಸಮುದ್ರವನ್ನು ಸೇರುತ್ತವೆ. ಓಕ್, ಬೀಟ್, ಪೈನ್, ಬರ್ಚ್‌ಪಾಪ್ಲರ್ ಮತ್ತು ವಿಲ್ಲೊ ವೃಕ್ಷಗಳ ಕಾಡುಗಳಿವೆ. ಚೆಸ್‌ನಟ್ ಮತ್ತು ಬೀಚ್‌ ಮರಗಳು ಹೆಚ್ಚಾಗಿವೆ. ಆಲ್ಪ್ಸ್‌ ಪರ್ವತಗಳ ಎಲ್ಲೆಯಲ್ಲಿ ಜ್ಯೂನಿಫರ್ ಮತ್ತು ಡ್ವಾರ್ಫ್‌ ವೈನ್ ಮರಗಳು ದಕ್ಷಿಣದಲ್ಲಿ ಪೈನ್ ಮತ್ತು ಓಕ್ ಮರಗಳು, ಮೆಡಿಟರೇನಿಯನ್ ಸಮುದ್ರ ತೀರದಲ್ಲಿ ದ್ರಾಕ್ಷಿಬಳ್ಳಿ, ಆಲೀವ್, ಹಿಪ್ಪುನೇರಳೆ ಮತ್ತು ಅಂಜೂರ ಮರಗಳು, ಲಾರೆನ್‌ ಗುಲ್ಮ ಮತ್ತು ಮಾಕ್ವಿಸ್ ಕುರುಚಲು ಬೆಳೆಯುತ್ತವೆ. ಗೋಧಿ, ಓಟ್ಸ್, ಬಾರ್ಲಿ ಪ್ರಮುಖ ಬೆಳೆಗಳು. ಪ್ಯಾರಿಸ್, ಮಾರ್ಸೆಲ್ಸ್, ಲಿಯಾನ್, ಟ್ಯುಲೂಸ್, ನೀಸ್, ಬಾರ್ಕೋನ್ಯಾನ್‌ಟ್ಸ್, ಸ್ಟ್ರಾಸ್‌ಬರ್ಗ್ ಸಾನ್‌ಟೇಟೈನ್, ಲಹಾವ್ರೆ ಪ್ರಮುಖ ನಗರಗಳು.

ಫ್ರಾನ್ಸ್‌ ನ ಸೋಮ್ ನದಿ ದಂಡೆಯಲ್ಲಿ ಶಿಲಾಯುಗದ ಸಂಸ್ಕೃತಿ ಕಂಡುಬಂದಿದೆ. ಚಿಲಿಯನ್, ಅಬ್ಬೆಲಿಯನ್, ಅಷ್ಯೂಲಿಯನ್, ಲೆವಲ್ವಾಸಿಯನ್, ಮೌಸ್ಟೀರಿನ್, ಅರಿಗ್ನೇಸಿಯನ್, ಸಲೂಟ್ರಿಯನ್, ಮ್ಯಾಗ್ಡಲೀನಿಯನ್ ಮುಂತಾದ ಸಂಸ್ಕೃತಿಗಳು ಫ್ರಾನ್ಸ್‌ ನಲ್ಲಿ ಬೆಳೆದಿದ್ದವು. ಈಗಿನ ಫ್ರಾನ್ಸ್ ಪ್ರದೇಶಕ್ಕೆ ಗಾಲ್ ಎಂಬ ಹೆಸರಿತ್ತು. ಕ್ರಿ.ಪೂ. ಒಂದನೇ ಶತಮಾನದಲ್ಲಿ ರೋಮನ್ನರ ಆಕ್ರಮಣಕ್ಕೆ ಗುರಿಯಾಯಿತು. ರೋಮ್ ದೊರೆ ಜೂಲಿಯಸ್ ಸೀಜರ್ (ಕ್ರಿ.ಪೂ. ೫೧-೫೮) ದಂಡೆಯಾತ್ರೆಗಳನ್ನು ಕೈಗೊಂಡು ಗಾಲ್ ಪ್ರದೇಶವನ್ನು ಗೆದ್ದನು. ರೋಮ್ ಸಾಮ್ರಾಜ್ಯದ ಪ್ರಾಬಲ್ಯ ಕ್ಷೀಣಿಸಿದಾಗ ಜರ್ಮನ್ ಬುಡಕಟ್ಟಿಗೆ ಸೇರಿದ ಬರ್ಗಂಡಿಯನ್ನರು, ಲಿಸಿಗಾತರು, ಫ್ರಾಂಕರು ದಾಳಿಮಾಡಿದರು. ಕ್ರಿ.ಶ. ಐದನೇ ಶತಮಾನದಿಂದ ಫ್ರಾಂಕರ ಆಳ್ವಿಕೆಯಿಂದ ಫ್ರಾನ್ಸ್‌ ಗೆ ಈಗಿನ ಹೆಸರು ಬಂದಿತು. ಫ್ರಾಂಕರು ಆಧುನಿಕ ಫ್ರಾನ್ಸ್‌ ನ ಬೆಳವಣಿಗೆಗೆ (ಗಾಲ್ ಪ್ರದೇಶವನ್ನು ಸಂಘಟಿಸಿ) ಅಸ್ತಿಭಾರ ಹಾಕಿದರು. ಮೆರೊವಿಂಜಿಯನ್, ಪಿಪಿನ್ ರಾಜರು ಫ್ರಾನ್ಸ್‌ ಅನ್ನು (ಕ್ರಿ.ಶ. ೪೮೧-೭೫೧) ಆಳಿದರು. ಇವರಲ್ಲಿ ಪ್ರಮುಖ ದೊರೆ ಕ್ಲೋವಿಸ್. ಪ್ಯಾರೀಸ್ ರಾಜಧಾನಿಯನ್ನಾಗಿ ಮಾಡಿಕೊಂಡು ತನ್ನ ಪ್ರಭುತ್ವವನ್ನು ಪಿರನೀಸ್ ಪರ್ವತ ಶ್ರೇಣಿಯವರೆಗೆ ವಿಸ್ತರಿಸಿದ. ಇವನು ಕ್ರೈಸ್ತ ಧರ್ಮವನ್ನು ಸ್ವೀಕರಿಸಿ ಕ್ಯಾಥೊಲಿಕ್ ಚರ್ಚ್‌ನ ಮತ್ತು ಪೋಪನ ಅಧಿಕಾರ ಪ್ರಾಬಲ್ಯಕ್ಕೆ ಉತ್ತೇಜನ ನೀಡಿದ. ನಂತರ ಬಂದ ಪೆಪಿನ್ನನ ಮಗ ಹಾಗೂ ಉತ್ತರಾಧಿಕಾರಿ ಷಾಲ್‌ರ್ಮೆನ್ ಮಧ್ಯಯುಗದ ಇತಿಹಾಸದಲ್ಲಿ ಅತ್ಯಂತ ಪ್ರಸಿದ್ಧ ರಾಜ. ಈತ ಪವಿತ್ರ ರೋಮ್ ಚಕ್ರವರ್ತಿಯಾದ ಲಂಬಾರ್ಡಿಯನ್ನರು, ಬವೇರಿಯನ್ನರು, ಸ್ಸಾಕ್ಸನರನ್ನು ಸೋಲಿಸಿ ವಿಶಾಲವಾದ ಪವಿತ್ರ ರೋಮ್ ಸಾಮ್ರಾಜ್ಯವನ್ನು ನಿರ್ಮಿಸಿದ. ಕ್ರಿ.ಶ. ೯೮೭-೧೩೨೮ ವರೆಗೆ ಕೆಫೀಷಿಯನ್ ಮನೆತನದ ರಾಜರು ಆಳಿದರು. ಕ್ರಿ.ಶ. ೧೩೨೮-೧೫೮೯ವರೆಗೆ ವ್ಯಾಲ್ವಾಯ್ ಮನೆತನದ ರಾಜರು ಆಳಿದರು. ಈ ಕಾಲದಲ್ಲಿ ಫ್ರಾನ್ಸ್ ನಲ್ಲಿ ಮಹತ್ತರ ಘಟನೆಗಳು ಸಂಭವಿಸಿ ಅನೇಕ ಬದಲಾವಣೆಗಳಾದವು.

ಕ್ರಿ.ಶ. ೧೩೪೦-೧೪೫೩ ರಲ್ಲಿ ಇಂಗ್ಲಿಷರು ಮತ್ತು ಫ್ರಾನ್ಸ್‌ ನ ನಡುವೆ ನೂರು ವರ್ಷಗಳ ಕದನಗಳು ನಡೆದವು. ಅಂತಹ ಗಂಡಾಂತರದ ಸಮಯದಲ್ಲಿ ರೈತನೊಬ್ಬನ ಮಗಳಾದ ಜಾನ್ ಆಫ್ ಆರ್ಕ್ (ಕ್ರಿ.ಶ. ೧೩೩೭-೧೪೫೩) ಫ್ರಾನ್ಸ್ ನ ಯೋಧರನ್ನು ಹುರಿದುಂಬಿಸಿ ರಾಷ್ಟ್ರಾಭಿಮಾನ ಬೆಳೆಯುವಂತೆ ಮಾಡಿದಳು. ಅವಳ ಸಾವಿನ ನಂತರವೂ ಸ್ಫೂರ್ತಿಯಿಂದ ಯೋಧರು ಯುದ್ಧ ಮಾಡಿ ಜಯಿಸಿದರು. ನೂರು ವರ್ಷಗಳ ಕದನದಿಂದ ದೇಶದ ಆರ್ಥಿಕ ಸ್ಥಿತಿ ಅಸ್ತವ್ಯಸ್ತವಾಯಿತು. ನಂತರ ೧೧ನೇ ಲೂಯಿಯು (ಕ್ರಿ.ಶ. ೧೪೬೧-೧೪೮೩) ಸಮರ್ಥ ನಾಯಕತ್ವ ಮತ್ತು ಆಂತರಿಕ ಶಾಂತಿಯನ್ನು ನೀಡಿದ. ನಂತರ ೮ನೇ ಚಾರ್ಲ್ಸ್, ೧೨ನೇ ಲೂಯಿ, ೧ನೇ ಫ್ರಾನ್ಸ್‌ ನ್ನು ಆಳಿದರು. ಕ್ರಿ.ಶ. ೧೫೮೯-೧೭೮೯ ವರೆಗೆ ಬೋರ್ಬನ್ ಮನೆತನದ ಆಳ್ವಿಕೆ ಆರಂಭವಾಯಿತು. ಕ್ರಿ.ಶ. ೧೫೮೯ರಲ್ಲಿ ಫ್ರಾನ್ಸಿನ ಸಿಂಹಾಸನವೇರಿದ ೪ನೇ ಹೆನ್ರಿ ಈ ವಂಶದ ಮೊದಲ ದೊರೆ. ಆರಂಭದಲ್ಲಿ ಉಜ್ವಲ ಅಧ್ಯಾಯ ಆರಂಭವಾಗಿ ಅಂತ್ಯದಲ್ಲಿ ದೇಶವನ್ನು ಆಳಿದ ದರ್ಪಿಷ್ಟ ದೊರೆಗಳಾದ ೧೪ನೇ ಲೂಯಿ (ಕ್ರಿ.ಶ. ೧೬೪೩-೧೭೧೫, ಲೂಯಿ ಯುಗ) ದೈವತ್ವದ ಹಕ್ಕಿನ ಸಿದ್ಧಾಂತವನ್ನು ಪ್ರತಿಪಾದಿಸಿ “ನಾನೇ ರಾಜ್ಯ, ರಾಜ್ಯವೇ ನಾನು” ಎಂದು ಪರಿಭಾವಿಸಿದನು. ಮಹಾನ್ ಚಕ್ರವರ್ತಿ ಎಂಬ ಬಿರುದನ್ನು ಪಡೆದು ದೇಶವನ್ನು ಅಧೋಗತಿಗೆ ತಂದನು. ಇವನ ಬುದ್ಧಿವಂತ ಅರ್ಥಮಂತ್ರಿ ಕೋಲ್ಬರ್ಟ್‌ ನ ಸಲಹೆಯಂತೆ ಕ್ರಿ.ಶ. ೧೬೬೪ರಲ್ಲಿ ಭಾರತದಲ್ಲಿ ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಗೆ ಅನುಮತಿ ನೀಡಿದನು. ನಂತರ ಬಂದ ೧೫ನೇ ಲೂಯಿ ಕಾಲದಲ್ಲಿ (ಕ್ರಿ.ಶ. ೧೭೧೫-೧೭೭೪) ದೇಶ ಅವನತಿಯತ್ತ ಸಾಗಿತು.  ’ನನ್ನ ನಂತರ ದೇಶ ವಿನಾಶ’ ಎಂದು ನುಡಿದನು. ನಂತರ ಆಳಿದ ೧೬ನೇ ಲೂಯಿ (ಕ್ರಿ.ಶ. ೧೭೭೪-೧೭೮೯) ಅನೇಕ ಸುಧಾರಣೆಗಳನ್ನು ಜಾರಿಗೆ ತಂದನು, ಆದರೂ ದೇಶ ಅವನತಿಯತ್ತ ಸಾಗಿತು. ಇವನ ರಾಣಿ ಮೇರಿ ಆಂಟಾಯ್ನೆಟ್ಟಳ ಪ್ರಭಾವಕ್ಕೆ ಒಳಗಾಗಿ ದೇಶ ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಯಿತು. ಜೆ.ಜೆ. ರೂಸೋ (ಫ್ರಾನ್ಸ್ ಕ್ರಾಂತಿಯ ಪಿತಾಮಹ), ವಾಲ್ಟೈರ್, ಮಾಂಟೆಸ್ಕ್ಯೂರಂತಹ ಬುದ್ಧಿಜೀವಿಗಳ ಬರಹಗಳಿಂದ ಉತ್ತೇಜಿತರಾದ ಜನ ಫ್ರಾನ್ಸಿನ ಮಹಾಕ್ರಾಂತಿ ನಡೆಸಿದರು. ಕ್ರಾಂತಿಯ ಶಿಶುವಾಗಿ ನೆಪೋಲಿಯನ್ ಬೋನಪಾರ್ಟೆ (ಕ್ರಿ.ಶ. ೧೭೯೯-೧೮೧೫) ಚಕ್ರವರ್ತಿಯಾಗಿ ನೆಪೋಲಿಯನ್ ಯುಗವನ್ನೇ ಆರಂಭಿಸಿದ. ಇವನ ಅವನತಿಯ ನಂತರ ೧೮೩೦ ಮತ್ತು ೧೮೪೮ರ ಕ್ರಾಂತಿಗಳು ನಡೆದು ಎರಡನೇ ಫ್ರೆಂಚ್ ಸಾಮ್ರಾಜ್ಯದ ಅಧ್ಯಕ್ಷನಾಗಿ ೩ನೇ ನೆಪೋಲಿಯನ್ ಆಳ್ವಿಕೆ ಮಾಡಿದನು. ಕ್ರಿ.ಶ. ೧೮೭೧ ರಲ್ಲಿ ಮೂರನೇ ಗಣರಾಜ್ಯ ೧೯೪೦ ರವರೆಗೂ ಮುಂದುವರಿಯಿತು. ಈ ಅವಧಿಯಲ್ಲಿ ಮೊದಲನೇ ಮಹಾಯುದ್ಧ (ಕ್ರಿ.ಶ. ೧೯೧೪-೧೮) ಮತ್ತು ಎರಡನೇ ಮಹಾಯುದ್ಧಗಳು (ಕ್ರಿ.ಶ. ೧೯೩೯-೪೫) ನಡೆದು ಫ್ರಾನ್ಸ್ ಮಿತ್ರಪಕ್ಷಗಳ ಪರವಾಗಿದ್ದು ಜಯಗಳಿಸಿತು.

Categories
asia

ಡೆನ್ಮಾರ್ಕ್

ಡೆನ್ಮಾರ್ಕ್ ಯೂರೋಪಿನ ಈಶಾನ್ಯ ದಿಕ್ಕಿನಲ್ಲಿರುವ ಸಣ್ಣ ರಾಷ್ಟ್ರ. ಇದರ ರಾಜಧಾನಿ ಕೋಪನ್‌ ಹೇಗನ್. ವಿಶ್ವದಲ್ಲೇ ಅತ್ಯಂತ ಪರಿಸರಸ್ನೇಹಿ ನಗರವೆಂದು ಕರೆಯಲ್ಪಟ್ಟಿದೆ. ಡೆನ್ಮಾರ್ಕ್‌ನ ಸಂವಿಧಾನಾತ್ಮಕ ರಾಜಪ್ರಭುತ್ವವನ್ನು ಡ್ಯಾನಿಶ್ ಸಂವಿಧಾನದಲ್ಲಿ ನಮೂದಿಸಲಾಗಿದೆ. ಇಲ್ಲಿ ರಾಜ ಸಾರ್ವಭೌಮ. ಸಂವಿಧಾನದ ನಿಬಂಧನೆ ೬ರ ಪ್ರಕಾರ ರಾಜವಂಶದ ಕುಟುಂಬ ಚರ್ಚ್‌ಗೆ ಸೇರಿದವರಾಗಿರಬೇಕು. ಡೆನ್ಮಾರ್ಕ್ ಸಲಿಂಗ ದಂಪತಿಗಳಿಗೆ ಮದುವೆಗಿರುವ ಎಲ್ಲಾ ರೀತಿಯ ಹಕ್ಕುಬಾಧ್ಯತೆ ಮತ್ತು ಜವಾಬ್ದಾರಿಯನ್ನು ಕೊಟ್ಟ ವಿಶ್ವದ ಮೊದಲ ರಾಷ್ಟ್ರವಾಗಿದೆ. (೧೯೮೯ರ ಡೆನ್ಮಾರ್ಕ್ ನೋಂದಣಿ ಸಹಭಾಗಿತ್ವ ಕಾನೂನು). ೨೦೧೯ರ ಪ್ರಕಾರ ದೇಶದ ಜನಸಂಖ್ಯೆ ೫,೮೨೨,೭೬೩. ದೇಶದ ಸಾಕ್ಷರತೆ ಪ್ರಮಾಣ ಶೇ. ೯೮.೨%ರಷ್ಟಿದೆ. ೨೦೦೯ರ ಜನವರಿಯ ಅಧಿಕೃತ ಅಂಕಿ ಅಂಶಗಳ ಪ್ರಕಾರ ಡೆನ್ಮಾರ್ಕ್ ಜನಸಂಖ್ಯೆಯಲ್ಲಿ ಶೇ. ೮೧.೫% ಜನರು ಲೂಥರನ್ ರಾಜ್ಯ ಚರ್ಚ್ ಹಾಗೂ ಡ್ಯಾನಿಶ್ ರಾಷ್ಟ್ರೀಯ ಚರ್ಚ್‌ನ ಸದಸ್ಯರು. ರಾಷ್ಟ್ರಭಾಷೆ – ಡ್ಯಾನಿಶ್. ಶೇ. ೯೦.೩%ರಷ್ಟು ಜನರು ಡೇನ್ ಜನರು, ಶೇ. ೨% ರಷ್ಟು ಮುಸ್ಲಿಂ ಸಮುದಾಯ ನೆಲೆಸಿದ್ದಾರೆ. ದೇಶದ ತಲಾದಾಯ ೫೧,೬೪೩ (೧೯ನೇ ಸ್ಥಾನ). ರಾಷ್ಟ್ರಗೀತೆ – ದೇರ್ ಈಸ್ ಎ ಲೌಲಿ ಕಂಟ್ರಿ.

ಪ್ರಪಂಚದ ಅತ್ಯಂತ ಹಸಿರು ದೇಶಗಳ ಪಟ್ಟಿಯಲ್ಲಿ ಡೆನ್ಮಾರ್ಕ್ ೧೦ನೇ ಸ್ಥಾನದಲ್ಲಿದೆ. ಪರಿಸರ ಸಂರಕ್ಷಣೆಯ ಬಗ್ಗೆ ಡೆನ್ಮಾರ್ಕ್ ಐತಿಹಾಸಿಕವಾದ ಪ್ರಗತಿಪರ ನಿಲುವನ್ನು ತಳೆದಿದೆ. ೧೯೭೧ರಲ್ಲಿ ಸರ್ಕಾರ ಪರಿಸರ ಖಾತೆಗೆ ಒಂದು ಪ್ರತ್ಯೇಕ ಮಂತ್ರಾಲಯವನ್ನು ಸ್ಥಾಪಿಸಿದೆ ಹಾಗೂ ೧೯೭೩ರಲ್ಲಿ ಪರಿಸರ ನಿಯಮಗಳನ್ನು ಜಾರಿಗೆ ತಂದ ವಿಶ್ವದ ಮೊದಲ ದೇಶವೆನಿಸಿದೆ. ಡೆನ್ಮಾರ್ಕ್ ಮಿಶ್ರ ಆರ್ಥಿಕತೆಯ ಮುಖ್ಯ ಲಕ್ಷಣ, ಪರಿಣಾಮಕಾರಿ ಮಾರುಕಟ್ಟೆ ಆಗಿದ್ದು ಅದು ಯೂರೋಪಿನ ಬದುಕಿನ ಗುಣಮಟ್ಟಕ್ಕಿಂತ ಹೆಚ್ಚಿನದಾಗಿದೆ ಹಾಗೂ ಒಂದು ವಿಶಾಲವಾದ ಕಲ್ಯಾಣ ರಾಜ್ಯವಾಗಿದೆ. ವಿಶ್ವದ ಅತ್ಯುನ್ನತ ಮಟ್ಟದ ವರಮಾನ ಸಮಾನತೆಯನ್ನು ಹೊಂದಿದೆ. ೨೦೦೬ ರಿಂದ ೨೦೦೮ರವರೆಗೆ ನಡೆಸಿದ ಸಮೀಕ್ಷೆ ಪ್ರಕಾರ ಆರೋಗ್ಯ, ಕ್ಷೇಮಾಭ್ಯುದಯ ಮತ್ತು ಶಿಕ್ಷಣ ಮಟ್ಟದಲ್ಲಿ  ಡೆನ್ಮಾರ್ಕ್ ವಿಶ್ವದಲ್ಲೇ ಅತ್ಯಂತ ಸಂತೋಷಪೂರ್ಣ ಸ್ಥಳ. ೨೦೦೯ರ ಗ್ಲೋಬಲ್ ಪೀಸ್ ಇಂಡೆಕ್ಸ್ ಪ್ರಕಾರ ವಿಶ್ವದ ಅತ್ಯಂತ ಶಾಂತಿಯುತ ರಾಷ್ಟ್ರಗಳ ಪೈಕಿ ೨ನೇ ಸ್ಥಾನದಲ್ಲಿದೆ. ೨೦೦೮ರ ಭ್ರಷ್ಟಾಚಾರ ಅಂಕಿಅಂಶದ ಪ್ರಕಾರ ಅತ್ಯಂತ ಕಡಿಮೆ ಭ್ರಷ್ಟಾಚಾರ ಹೊಂದಿರುವ ಹಿರಿಮೆಗೆ ಪಾತ್ರವಾಗಿದೆ. ೨೦೨೦ರ ಅಂಕಿಅಂಶದ ಪ್ರಕಾರ ಡೆನ್ಮಾರ್ಕ್ ಮಾಧ್ಯಮ ಸ್ವಾತಂತ್ರ್ಯದಲ್ಲಿ ವಿಶ್ವದಲ್ಲೇ ಐದನೇ ಸ್ಥಾನದಲ್ಲಿದೆ.

೨೦೦೮ರ ವಿಶ್ವ ಎಕನಾಮಿಕ್ ಫೋರಂ ವರದಿಯಂತೆ ವಿಶ್ವದಲ್ಲೇ ಡೆನ್ಮಾರ್ಕ್ ಅತ್ಯಂತ ಸ್ಪರ್ಧಾತ್ಮಕವಾದ ಆರ್ಥಿಕತೆಯನ್ನು ಹೊಂದಿದೆ. ಡೈರಿ ಉತ್ಪನ್ನಗಳು, ಸಹಕಾರ ಚಳವಳಿ, ತೋಟಗಾರಿಕೆ, ಆಹಾರ ಉದ್ಯಮ, ಸಗಟು ಮಾರಾಟ ಇವುಗಳಿಗೆ ಹೆಸರಾಗಿದೆ. ಶೇ. ೮೨% ಜನರು ಒಕ್ಕಲುತನ ಅವಲಂಬಿತರು. ದೇಶದ ಪ್ರಸಿದ್ಧ ಕ್ರೀಡೆ ಪುಟ್ಬಾಲ್, ನೌಕಾಯಾನ ಮತ್ತು ಜಲಕ್ರೀಡೆಗಳು. ಜನಪದ ಪ್ರಕಾರದ ಸಂಗೀತ ’ರಾಯಲ್ ಡ್ಯಾನಿಶ್’ ಆರ್ಕೇಸ್ಟ್ರಾ ವಿಶ್ವದ ಅತ್ಯಂತ ಹಳೆಯ ಆರ್ಕೆಸ್ಟ್ರಾಗಳಲ್ಲಿ ಒಂದು.

ಡೆನ್ಮಾರ್ಕ್ ತನ್ನ ದಕ್ಷಿಣಭಾಗದ ಕಡೆಗೆ ೬೮ ಕಿ.ಮೀ. ಜರ್ಮನಿಯೊಂದಿಗೆ ಗಡಿ ಹೊಂದಿದೆ. ಉಳಿದ ೭೩೧೪ ಕಿ.ಮೀ. ಕರಾವಳಿ ಗಡಿ. ಅದು ೪೩,೦೯೪ ಚ.ಕಿ.ಮೀ. ವಿಸ್ತಾರವನ್ನು ಹೊಂದಿದೆ. ೨೦೦೦ ದಿಂದೀಚೆಗೆ ಡೆನ್ಮಾರ್ಕ್‌ಗೂ ದಕ್ಷಿಣ ಸ್ವೀಡನ್ ಮಧ್ಯೆ ಒರೆಸಂಡ್ ಸೇತುವೆಯಿಂದ ಸಂಪರ್ಕ ಕಲ್ಪಿಸಲಾಗಿದೆ. ಪ್ಯುನೆನ್ ಮತ್ತು. ಜಿಲ್ಯಾಂಡ್‌ಗಳ ಮಧ್ಯೆ ಗ್ರೇಟ್ ಬೆಲ್ಟ್ ಸೇತುವೆ, ಜುಟ್‌ಲ್ಯಾಂಡ್ ಮತ್ತು ಪ್ಯೂನೆನ್ ನಡುವೆ ಲಿಟ್ಜಲ್ ಬೆಲ್ಟ್ ಸೇತುವೆಗಳು ಸಂಪರ್ಕಿಸುತ್ತವೆ. ಡೆನ್ಮಾರ್ಕ್‌ನ ಉತ್ತರ ತುದಿಯ ಬಿಂದು ೫೭೦ ೪೫’೭ದಲ್ಲಿರುವ ಸ್ಕೇಗನ್ಸ್ ತುದಿ ಮತ್ತು ದಕ್ಷಿಣ ತುದಿಯನ್ನು ಗೆಡ್ಸ್‌ರ್‌ ತುದಿ ಎನ್ನುತ್ತಾರೆ. ಉತ್ತರ ಅಕ್ಷಾಂಶ ಮತ್ತು ೮೦ ೪’೨೨ ನಲ್ಲಿ ಪೂರ್ವ ರೇಖಾಂಶದಲ್ಲಿರುವ ಪಶ್ಚಿಮದ ತುತ್ತತುದಿ ಬ್ಲಾವಾಂಡ್‌ ಶಕ್ ೧೫೦ ೧೧’೫೫ ನಲ್ಲಿ ಪೂರ್ವದ ರೇಖಾಂಶದಲ್ಲಿರುವ ಪೂರ್ವತೀರದ ತುದಿಯನ್ನು ಆಸ್ಟೇರ್ಸ್ಕರ್ ಎಂದು ಕರೆಯಲಾಗುತ್ತದೆ. ಬಾರ್ನ್‌ಹೋಂನಿಂದ ೧೮ ಕಿ.ಮೀ. ಈಶಾನ್ಯಕ್ಕಿರುವ ಎರ್ಥೊಲ್ಮಿನ್ ದ್ವೀಪ ಸಮೂಹದಲ್ಲಿದೆ. ಡೆನ್ಮಾರ್ಕ್ ಜುಟ್‌ಲ್ಯಾಂಡ್ ಜಿಲ್ಯಾಂಡ್‌ನ ಪರ್ಯಾಯ ದ್ವೀಪಗಳು ಮತ್ತು ೪೪೩ ಹೆಸರುಗಳುಳ್ಳ ದ್ವೀಪಗಳು ೯೭೬ ಜನವಸತಿ ಇಲ್ಲದ ದ್ವೀಪಗಳು, ೭೨ ಜನವಸತಿ ಇರುವ ದ್ವೀಪಗಳಿವೆ. ಇವುಗಳಲ್ಲಿ ಅತೀದೊಡ್ಡವು ಜಿಲ್ಯಾಂಡ್ ಮತ್ತು ಪ್ಯೂನೆನ್. ದೇಶದ ಪೂರ್ವಕ್ಕೆ ಬಾಲ್ಟಿಕ್ ಸಮುದ್ರದಲ್ಲಿ ಬಾರ್ನ್‌ಹೋಮ್ ದ್ವೀಪವಿದೆ. ಕೋಪನ್‌ ಹೆಗನ್, ಆರ್ಹಸ್, ಆಲ್ಬೊರ್ಗ್ ಮತ್ತು ಎಸ್ಬ್ಜರ್ಗ್ ಮತ್ತು ಓಡೆನ್ ಪ್ರಮುಖ ನಗರಗಳು. ಎತೀ ಎತ್ತರದ ನೈಸರ್ಗಿಕ ಬಿಂದು ಮೊಲ್ಲೆಹೋಜ್ ಕೇವಲ ೫೬೦ ಅಡಿ ಎತ್ತರವಾಗಿದೆ. ಡೆನ್ಮಾರ್ಕ್‌ನ ಯಾವುದೇ ಭೂಪ್ರದೇಶದ ಅಂತರ ಸಮುದ್ರ ತೀರದಿಂದ ೫೨ ಕಿ.ಮೀ ಗಿಂತ ದೂರವಿಲ್ಲ. ಅತೀ ಕಡಿಮೆ ಹಗಲು ಕ್ರಿಸ್‌ಮಸ್‌ನೊಂದಿಗೆ ಹೊಂದಿಕೆಯಾಗುತ್ತದೆ. ಅತೀ ದೀರ್ಘ ಹಗಲನ್ನು ಮಿಡ್‌ಸಮರ್‌ಡೇ ಎಂದು ಆಚರಿಸಲಾಗುತ್ತದೆ.

ಗ್ರೀನ್‌ಲ್ಯಾಂಡ್ ಡೆನ್ಮಾರ್ಕ್ ದೇಶದ ಸ್ವಯಂ ನಿರ್ವಹಿತ ಪ್ರಾಂತ್ಯ. ಆರ್ಕ್ಟಿಕ್ ದ್ವೀಪವಾಗಿರುವ ಇದು ಭೌಗೋಳಿಕವಾಗಿ ಹಾಗೂ ಸಾಮಾಜಿಕವಾಗಿ ಉತ್ತರ ಅಮೆರಿಕಾ ಖಂಡಕ್ಕೆ ಸೇರಿದೆ. ಐತಿಹಾಸಿಕವಾಗಿ ಮತ್ತು ರಾಜಕೀಯವಾಗಿ ಯೂರೋಪ್ ಖಂಡಕ್ಕೆ ಹೆಚ್ಚು ಸಂಬಂಧ ಹೊಂದಿದೆ. ಇದರ ರಾಜಧಾನಿ ನೂಕ್ಕ್. ಡೆನ್ಮಾರ್ಕ್ ಹೈಕಮಿಷನರ್ ಇಲ್ಲಿನ ಆಡಳಿತವನ್ನು ನೋಡಿಕೊಳ್ಳುತ್ತಾರೆ. ಇದು ಜಗತ್ತಿನ ಅತ್ಯಂತ ಜನನಿಬಿಡ ಪ್ರದೇಶ, ವಿಶ್ವದ ಅತೀದೊಡ್ಡ ಭೂಖಂಡೇತರ ದ್ವೀಪ ಮತ್ತು ವಿಶ್ವದ ಅತಿ ದೊಡ್ಡ ರಾಷ್ಟ್ರೀಯ ಉದ್ಯಾನವನವನ್ನು ಹೊಂದಿದೆ.

ಕ್ರಿ.ಪೂ. ೧೨,೫೦೦ ನಿಂದಲೂ ಡೆನ್ಮಾರ್ಕ್‌ನಲ್ಲಿ ಒಕ್ಕಲುತನ ಇತ್ತು ಎಂಬುದಕ್ಕೆ ಸಾಕ್ಷಿಗಳು ಲಭ್ಯವಾಗಿವೆ. ಡೆನ್ಮಾರ್ಕ್‌ನಲ್ಲಿ ನಾರ್ಡಿಕ್‌ಬ್ರಾಂಜ್ ಏಜ್ (ಕ್ರಿ.ಪೂ. ೧೮೦೦-೬೦೦) ಎಂದು ಗುರುತಿಸಿದ್ದು ಸಮಾಧಿಯ ದಿಣ್ಣೆಗಳಿಂದ ಕೂಡಿದ ಸಂಶೋಧನೆಗಳಾಗಿವೆ. ಕ್ರಿ.ಪೂ. ೫೦೦-ಕ್ರಿ.ಶ.೧ರ ಅವಧಿಯಲ್ಲಿ ಆರಂಭದ ರೋಮನ್ ಕಬ್ಬಿಣಯುಗವಾಗಿತ್ತು. ಮೂಲ ಡ್ಯಾನಿಶ್ ಜನಾಂಗ ದಕ್ಷಿಣದ ಕಡೆಯಿಂದ ವಲಸೆ ಬಂದವರು. ಜರ್ಮನಿಕ್ ಕಬ್ಬಿಣಯುಗ ಮತ್ತು ರೋಮನ್ ಕಬ್ಬಿಣಯುಗದಲ್ಲಿ (ಕ್ರಿ.ಶ. ೧-೪೦೦) ರೋಮನ್ ಪ್ರಾಂತ್ಯಗಳು ಡೆನ್ಮಾರ್ಕ್‌ನ ಮೂಲ ಬುಡಕಟ್ಟು ಜನಾಂಗದೊಡನೆ ಸಂಬಂಧ ಹೊಂದಿದ್ದವು. ಇವರು ತಮ್ಮ ವ್ಯಾಪಾರಮಾರ್ಗಗಳನ್ನು ಮಾಡಿಕೊಂಡಿದ್ದರು. ಡೇನ್ಸ್ ಪೂರ್ವಜರು ಡ್ಯಾನಿಶ್ ದ್ವೀಪದವರು. ಜಿಲ್ಯಾಂಡಿನವರು ಮತ್ತು ಸ್ಕೇನ್‌ನವರು ಹಾಗೂ ಉತ್ತರ ಜರ್ಮೇನಿಕ್‌ನ ಆರಂಭದ ಭಾಷಿಕರು. ಇವರು ಬರುವ ಮೊದಲೇ ಜೂಟ್‌ಗಳು ನೆಲೆಸಿದ್ದರು. ಕ್ರಿ.ಶ. ೮-೧೧ನೇ ಶತಮಾನಗಳ ಅವಧಿಯಲ್ಲಿ ಡ್ಯಾನಿಶ್ ಜನಾಂಗವನ್ನು ವೈಕಿಂಗ್‌ ಗಳೆಂದು ಕರೆಯಲಾಗುತ್ತಿತ್ತು. ೯ನೇ ಶತಮಾನದಲ್ಲಿ ವೈಕಿಂಗ್ ಶೋಧಕರು ಫ್ಯಾರೋ ದ್ವೀಪಗಳ ಕಡೆಗೆ ತೆರಳುತ್ತಿರುವಾಗ ಮೊದಲ ಎಸ್‌ ಲ್ಯಾಂಡನ್ನು ಪತ್ತೆಹಚ್ಚಿ ಅಲ್ಲಿಯೇ ನೆಲೆಯೂರಿದರು. ಅಲ್ಲಿಂದ ಗ್ರೀನ್‌ ಲ್ಯಾಂಡ್ ಮತ್ತು ವಿನ್‌ ಲ್ಯಾಂಡ್‌ಗಳಲ್ಲಿ ತಮ್ಮ ನೆಲೆಗಳನ್ನು ಸ್ಥಾಪಿಸಿದರು. ಹಡಗುಗಳನ್ನು ಕಟ್ಟುವ ನಿಪುಣತೆಯನ್ನು ಬಳಸಿಕೊಂಡರು. ಇವರು ಫ್ರಾನ್ಸ್ ನ ಕೆಲವು ಭಾಗಗಳನ್ನು ಮತ್ತು ಬ್ರಿಟಿಷ್ ಐನ್ಸ್‌ ಅನ್ನು ಆಕ್ರಮಿಸಿ ಜಯಿಸಿದರು. ಇವರು ವ್ಯಾಪಾರದಲ್ಲೂ ಮೇಲುಗೈ ಸಾಧಿಸಿ ಕರಾವಳಿ ಮತ್ತು ಯೂರೋಪಿನ ನದಿಗಳುದ್ದಕ್ಕೂ ವ್ಯಾಪಾರಿ ಮಾರ್ಗಗಳನ್ನು ಕಂಡುಹಿಡಿದರು. ಉತ್ತರದ ಗ್ರೀನ್‌ ಲ್ಯಾಂಡ್‌ನಿಂದ ರಷ್ಯನ್ ನದಿಗಳ ಮೂಲಕ ದಕ್ಷಿಣದ ಕಾನ್ಸ್ಟ್ಯಾಂಟಿನೋಪಲ್‌ವರೆಗೂ ಇವರ ವ್ಯಾಪಾರಿ ಕೇಂದ್ರಗಳಿದ್ದವು.

ಕ್ರಿ.ಶ. ೯೬೫ ರಲ್ಲಿ ಹಾರಾಲ್ಡ್ ಬ್ಲಾಟಾಂಡ್‌ನು ಡೇನ್ಸ್ ಜನರನೆಲ್ಲಾ ಒಗ್ಗೂಡಿಸಿ ಕ್ರಿಶ್ವಿಯನೀಕೃತಗೊಳಿಸಿದನು. ವೈಕಿಂಗ್‌ ಯುಗದಿಂದ ಹಿಡಿದು ೧೩ನೇ ಶತಮಾನದ ಅಂತ್ಯದವರೆಗೆ ಡೆನ್ಮಾರ್ಕ್ ಆಧಿಪತ್ಯವು ಜುಟ್‌ ಲ್ಯಾಂಡ್, ಐಡರ್ ನದಿಯ ಉತ್ತರ ಭಾಗ ಮತ್ತು ಜ್ಯಿಲ್ಯಾಂಡ್, ಪ್ಯೂನೆನ್, ಬಾರ್ನ್‌ ಹೋಂ, ಸ್ಕೆಯ್ನ್, ಹಾಲ್ಲಾಂಡ್ ಮತ್ತು ಬ್ಲೆಕಿಂಜ್‌ ಗಳನ್ನು ಒಳಗೊಂಡಿತ್ತು. ೧೨೦೦ರ ಅಂತ್ಯದಿಂದ ಐಡರ್ ನದಿ ಮತ್ತು ಕೊಂಗಿಯನ್ ನದಿಗಳ ನಡುವಣ ಭೂಪ್ರದೇಶವನ್ನು ಡ್ಯೂಶೀಸ್ ಆಫ್ ಶ್ಲೇಸ್ವಿ ಮತ್ತು ಹಾಲ್‌ಸ್ಟೀನ್ ಎಂದು ಎರಡು ಪಾಳೆಪಟ್ಟಿನ ಆಡಳಿತಗಳಾಗಿ ಇಬ್ಭಾಗ ಮಾಡಲಾಯಿತು. ೧೧ನೇ ಶತಮಾನದಲ್ಲಿ ಊಳಿಗಮಾನ್ಯ ಪದ್ಧತಿಯ ಕಾಲದಲ್ಲಿ ಕ್ರೈಸ್ತ ಸನ್ಯಾಸಿಗಳ ಕಟ್ಟಳೆಗಳಿಗೆ ಒಳಗಾಯಿತು. ೧೨ನೇ ಶತಮಾನದ ಕೊನೆಯಲ್ಲಿ ವಾಲ್ಡೆಮರ್ ದಿಗ್ರೇಟ್ ಮತ್ತು ಅಬ್ಸಲೋನ್ ಹೈಡ್ ತನ್ನ ಆಡಳಿತದ ಅವಧಿಯಲ್ಲಿ ಜರ್ಮನಿಯ ವೆಂಡ್ ಜನಾಂಗ ಮತ್ತು ಜರ್ಮನ್ ಸಾಮ್ರಾಜ್ಯದ ಜೊತೆ ಯಶಸ್ವಿ ಯುದ್ಧಗಳನ್ನು ಮಾಡಿ ಜರ್ಮನಿಯ ರಾಜಕೀಯ ಮತ್ತು ಧಾರ್ಮಿಕ ಪ್ರಭಾವವನ್ನು ಕೊನೆಗಾಣಿಸಿದರು. ೨ನೇ ವಾಲ್ಡೆಮರ್ (ಕ್ರಿ.ಶ. ೧೨೨೧) ಅವಧಿಯಲ್ಲಿ ಡೆನ್ಮಾರ್ಕ್ ಪ್ರಗತಿಯು ಉತ್ತುಂಗಕ್ಕೇರಿತು. ಡ್ಯಾನಿಶ್, ಬಾಲ್ಟಿಕ್, ’ಸಮುದ್ರ ರಾಜ್ಯಗಳ’ ನೇತೃತ್ವ ವಹಿಸಿದ. ಪೂರ್ವದ ಎಸ್ಟೋನಿಯಾದಿಂದ ಹಿಡಿದು ನಾರ್ವೆಯ ಉತ್ತರದವರೆಗೂ ರಾಜ್ಯವನ್ನು ವಿಸ್ತರಿಸಿದ. ೧೨೪೧ರಲ್ಲಿ ಕೋಡ್ ಆಫ್ ಜುಟ್‌ ಲ್ಯಾಂಡ್ ಜಾರಿಗೆ ತಂದನು. ಸ್ಕ್ಯಾನಿಯನ್ ಯುದ್ಧ (೧೬೭೫-೭೯) ಗ್ರೇಟ್ ನಾರ್ಥರ್ನ್ ಯುದ್ಧಗಳನ್ನು (೧೭೦೦-೨೧) ಮಾಡಿ ಅಭಿವೃದ್ಧಿಯ ಶಕೆ ಆರಂಭಿಸಿತು. ನೆಪೋಲಿಯನ್ ಯುದ್ಧಗಳ ಸಂದರ್ಭದಲ್ಲಿ ತಟಸ್ಥನೀತಿ ಅನುಸರಿಸಿತು. ೧೮೦೦ರಲ್ಲಿ ಡ್ಯಾನಿಶ್ ಪುರೋಗಾಮಿ ಮತ್ತು ರಾಷ್ಟ್ರೀಯ ಆಂದೋಲನಕ್ಕೆ ವೇಗ ದೊರಕಿತು. ಯೂರೋಪಿನಲ್ಲಿ ನಡೆದ ೧೮೪೮ರ ಕ್ರಾಂತಿಯ ತರುವಾಯ ಡೆನ್ಮಾರ್ಕ್ ಜೂನ್ ೫, ೧೮೪೯ರಂದು ಶಾಂತಿಯುತವಾಗಿ ಸಂವಿಧಾನಾತ್ಮಕ ರಾಜಪ್ರಭುತ್ವ ದೇಶವಾಯಿತು.

Categories
asia

ಬಲ್ಗೇರಿಯಾ

ಬಲ್ಗೇರಿಯಾ ಅಧಿಕೃತವಾಗಿ ಬಲ್ಗೇರಿಯಾ ಗಣರಾಜ್ಯ. ರಾಜಧಾನಿ ಮತ್ತು ದೊಡ್ಡ ನಗರ ಸೋಫಿಯಾ. ಯೂರೋಪಿಯನ್ ಯೂನಿಯನ್, ಯೂರೋಪಿಯನ್ ಕೌನ್ಸಿಲ್‌ನ ಸದಸ್ಯ ರಾಷ್ಟ್ರ. ಯೂರೋಪಿನ ಭದ್ರತೆ ಮತ್ತು ಸಹಕಾರ ಸಂಘಟನೆಯ ಸ್ಥಾಪಕ ರಾಷ್ಟ್ರವಾಗಿದ್ದು, ಮೂರು ಬಾರಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸ್ಥಾನ ಪಡೆದಿತ್ತು. ಬಲ್ಗೇರಿಯಾ ಅಭಿವೃದ್ಧಿಹೊಂದುತ್ತಿರುವ ದೇಶವಾಗಿದ್ದು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ೫೨ನೇ ಸ್ಥಾನದಲ್ಲಿದೆ. ವ್ಯಾಪಕ ಭ್ರಷ್ಟಾಚಾರವು ದೇಶವನ್ನು ಕಾಡುತ್ತಿದೆ. ಇದೊಂದು ದೇಶದ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಯಾಗಿದೆ. ೨೦೧೮ರಲ್ಲಿ ಯೂರೋಪಿಯನ್ ಒಕ್ಕೂಟದಲ್ಲಿ ಅತ್ಯಂತ ಭ್ರಷ್ಟರಾಷ್ಟ್ರವೆಂಬ ಸ್ಥಾನ ಪಡೆದಿದೆ. ಧ್ಯೇಯ – ’ಏಕತೆ ಬಲವನ್ನು ನೀಡುತ್ತದೆ’ ರಾಷ್ಟ್ರಗೀತೆ – ’ಆತ್ಮೀಯ ಮಾತೃಭೂಮಿ’. ಬಲ್ಗೇರಿಯಾ ಸಂಸದೀಯ ಪ್ರಜಾಪ್ರಭುತ್ವವಾಗಿದ್ದು ಪ್ರಧಾನಮಂತ್ರಿ ಸರ್ಕಾರದ ಮುಖ್ಯಸ್ಥನಾಗಿದ್ದಾನೆ. ಉನ್ನತ ಮಧ್ಯಮ ಆದಾಯದ ಮಾರುಕಟ್ಟೆ ವ್ಯವಸ್ಥೆಯನ್ನು ಹೊಂದಿದೆ. ಖಾಸಗಿ ವಲಯ ಶೇ. ೭೦% ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ. ಬಲ್ಗೇರಿಯಾ ಗೋಧಿ ಮತ್ತು ತರಕಾರಿಗಳನ್ನು ಬಾಹ್ಯಾಕಾಶದಲ್ಲಿ ಬೆಳೆದ ಮೊದಲ ದೇಶವಾಗಿದ್ದು, ಅದಕ್ಕಾಗಿ ಹಸಿರುಮನೆಯನ್ನು ಮಿರ್ ಬಾಹ್ಯಾಕಾಶದಲ್ಲಿ ಸ್ಥಾಪಿಸಿದೆ. ೨೦೧೧ರ ರಾಷ್ಟ್ರೀಯ ಜನಗಣತಿ ಪ್ರಕಾರ ದೇಶದ ಜನಸಂಖ್ಯೆ ೭,೩೬೦,೦೦೦. ಬಲ್ಗೇರಿಯಾ ಒಂದು ಜಾತ್ಯತೀತ ರಾಷ್ಟ್ರ. ಪೂರ್ವದ ಕ್ರಿಶ್ಚಿಯನ್ ಸಂಪ್ರದಾಯಸ್ಥರು ಶೇ. ೮೫% ಅಂದರೆ ಅರ್ಮೇನಿಯನ್, ಗ್ರೆಗೋರಿಯನ್, ಆರ್ಥೊಡಾಕ್ಸ್ ಚರ್ಚ್‌ನ ಅನುಯಾಯಿಗಳು ಅಂದರೆ ಪೆಂಟೆಕೊಸ್ಟಲ್, ಮೆಥೋಡಿಸ್ಟ್, ಬ್ಯಾಪ್ಟಿಸ್ಟ್, ಅಡ್ವೆಂಟಿಸ್ಟ್‌ಗಳು ಇದ್ದು ಶೇ. ೧೩% ರಷ್ಟು ಇಸ್ಲಾಂ ಅನುಯಾಯಿಗಳಿದ್ದಾರೆ. ದೇಶದ ಜನಸಂಖ್ಯೆಯಲ್ಲಿ ಶೇ. ೮೪.೮% ಬಲ್ಗೇರಿಯನ್ನರು, ಶೇ. ೮.೮% ಟರ್ಕರು, ಶೇ. ೪.೯% ರೋಮನ್ನರು ಇದ್ದಾರೆ. ಏಕೀಕೃತ ಸಂಸದೀಯ ಗಣರಾಜ್ಯ ಮಾದರಿಯ ಸರ್ಕಾರವನ್ನು ಹೊಂದಿರುವ ಈ ದೇಶದಲ್ಲಿ ಬಲ್ಗೇರಿಯನ್ ಪ್ರಮುಖ ಭಾಷೆಯಾಗಿದೆ. ಸ್ವಾತಂತ್ರ್ಯ ದಿನ – ಅಕ್ಟೋಬರ್ ೫, ೧೯೦೮. ದೇಶದಲ್ಲಿ ಬಳಕೆಯಲ್ಲಿರುವ ನಾಣ್ಯ ಲೆನ್. ದೇಶದ ಅತ್ಯಂತ ಜನಪ್ರಿಯ ಕ್ರೀಡೆ ಪುಟ್ಬಾಲ್. ಪ್ಲೋವ್ಡಿವ್, ವರ್ಣ ಮತ್ತು ಬುರ್ಗಾಸ್ ಪ್ರಮುಖ ನಗರಗಳು.

ಬಲ್ಗೇರಿಯಾ ಭೌಗೋಳಿಕವಾಗಿ ೪೨೦0 ೪೧’ ಉತ್ತರ ಅಕ್ಷಾಂಶ ಮತ್ತು ೨೩೦0 ೧೯’ ಪೂರ್ವ ರೇಖಾಂಶಗಳ ಮಧ್ಯೆ ೧೧೦,೯೯೪ ಚ.ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ದೇಶದ ಉತ್ತರಕ್ಕೆ ರೊಮೋನಿಯಾ (೬೦೯.ಕಿ.ಮೀ) ದೇಶವಿದೆ. ಇದರಲ್ಲಿ ಡ್ಯಾನೂಬ್ ನದಿ ೪೭೦ ಕಿ.ಮೀ ಹೊಂದಿದೆ. ಡ್ಯಾನ್ಯೂಬ್ ನದಿಯ ಉದ್ದಕ್ಕೂ ೪೮ ಬಲ್ಗೇರಿಯನ್ ಮತ್ತು ೩೨ ರೊಮೇನಿಯನ್ ದ್ವೀಪಗಳಿವೆ. ದೊಡ್ಡದಾದ ಬೆಲೆನ್ ದ್ವೀಪ ಬಲ್ಗೇರಿಯಾಗೆ ಸೇರಿದೆ. ಪಶ್ಚಿಮಕ್ಕೆ ಸರ್ಬಿಯಾ (೩೪೧ ಕಿ.ಮೀ.) ಮತ್ತು ಉತ್ತರ ಮ್ಯಾಸಿಡೋನಿಯಾ (೧೬೫ ಕಿ.ಮೀ.), ದಕ್ಷಿಣದ ಗಡಿ ಗ್ರೀಸ್‌ನೊಂದಿಗೆ (೪೯೩ ಕಿ.ಮೀ.) ಮತ್ತು ಟರ್ಕಿಯೊಂದಿಗೆ (೨೫೯ ಕಿ.ಮೀ.), ಪೂರ್ವಕ್ಕೆ ಕಪ್ಪುಸಮುದ್ರ ಗಡಿಯಾಗಿದೆ. ರೊಮೋನಿಯಾದ ಉತ್ತರದ ಗಡಿ ಸೀಸ್ಟ್ರಾ ನಗರದವರೆಗೂ ಡ್ಯಾನ್ಯೂಬ್ ನದಿ ಗಡಿಯನ್ನಾಗಿ ಹೊಂದಿದೆ. ಬಲ್ಗೇರಿಯಾದ ಭೌಗೋಳಿಕ ಕೇಂದ್ರವು ಉಜಾನಾದಲ್ಲಿದೆ. ರಿಲಾ, ಪಿರಿನ್ ಮತ್ತು ಬಾಲ್ಕನ್ ಪರ್ವತಗಳಲ್ಲಿನ ಹಿಮದಿಂದ ಆವೃತವಾದ ಶಿಖರಗಳಿಂದ ಹಿಡಿದು ಬಿಸಿಲಿನ ಕಪ್ಪುಸಮುದ್ರದ ಕರಾವಳಿವರೆಗೆ ಭೂದೃಶ್ಯದೊಂದಿಗೆ ಗಮನಾರ್ಹ ವೈವಿಧ್ಯತೆಯನ್ನು ಹೊಂದಿದೆ. ಉತ್ತರದಲ್ಲಿ ಡ್ಯಾನುಬಿಯನ್ ಬಯಲು ಪ್ರದೇಶದಿಂದ ಮ್ಯಾಸಿಕೋನಿಯಾದ ಕಣಿವೆಗಳಲ್ಲಿ ಮತ್ತು ಥೇಸ್‌ನ ತಗ್ಗುಪ್ರದೇಶದ ಮಾರಿಟ್ಸಾ ನದಿಯ ಉದ್ದಕ್ಕೂ ದಕ್ಷಿಣದ ಬಲವಾದ ಮೆಡಿಟರೇನಿಯನ್ ಹವಾಮಾನ ಪ್ರಭಾವವಿದೆ. ಬಲ್ಗೇರಿಯನ್ ಕಪ್ಪು ಸಮುದ್ರತೀರ, ಆಲ್ಪೈನ್ ಹವಾಮಾನವು ಎತ್ತರದ ಪರ್ವತಗಳಲ್ಲಿ ಮತ್ತು ದಕ್ಷಿಣದ ಪ್ರದೇಶ ಉಪಉಷ್ಣವಲಯದ ಹವಾಮಾನವನ್ನು ಹೊಂದಿದೆ. ಬಾಲ್ಕನ್ ಪರ್ವತಗಳು, ಥಾಸಿಯನ್ ಬಯಲು ಮತ್ತು ರಿಲಾರೋಡೋಪ್ ಮಾಸಿಫ್ ಎಂಬ ಭೌಗೋಳಿಕ ಲಕ್ಷಣಗಳನ್ನು ಹೊಂದಿದೆ. ವಿಟೋಶಾ, ಒಸೊಗೊವೊ ಮತ್ತು ಬೆಲಾಸಿಟ್ಸಾ ಪರ್ವತಗಳನ್ನು ಹೊಂದಿದೆ. ಮುಸಲಾ (೨೯೨೫ ಮೀ) ಅತ್ಯಂತ ಎತ್ತರದ ಪರ್ವತವಾಗಿದೆ. ಬಲ್ಗೇರಿಯಾ ಬಾಲ್ಕನ್ ಪರ್ಯಾಯ ದ್ವೀಪಗಳಲ್ಲಿ ಅತೀ ಎತ್ತರದ ಸ್ಥಳವಾಗಿದೆ. ಅತಿ ಉದ್ದವಾದ ನದಿ ಇಸ್ಕರ್ (೩೬೦ ಕಿ.ಮೀ) ಸ್ಟ್ರುಮಾ ಮತ್ತು ಮಾರಿಟ್ಸಾ ದಕ್ಷಿಣದ ಎರಡು ಪ್ರಮುಖ ನದಿಗಳಾಗಿವೆ. ಒಗೊಸ್ಟಾ ನದಿ ಕಣಿವೆಯಲ್ಲಿ ಹೆಚ್ಚಿನ ಮಳೆಯಾಗುತ್ತದೆ.

ಭೌಗೋಳಿಕಯಾಗಿ ಬಲ್ಗೇರಿಯಾ ಬೋರಿಯನ್ ಸಾಮ್ರಾಜ್ಯದೊಳಗಿನ ಸರ್ಕಂಬೊರಿಯಲ್ ಪ್ರದೇಶದ ಇಲಿಯರಿಯನ್ ಮತ್ತು ಯುಕ್ಷಿನಿಯನ್ ಪ್ರಾಂತ್ಯಗಳನ್ನು ವ್ಯಾಪಿಸಿದೆ. ದೇಶವು ಪ್ಯಾಲಿಯಾರ್ಕ್ವಿರ್ ಪರಿಸರ ವಲಯದ ಆರು ಭೂಪ್ರದೇಶಗಳ ವ್ಯಾಪ್ತಿಗೆ ಬರುತ್ತದೆ. ಬಾಲ್ಕನ್ ಮಿಶ್ರಕಾಡು, ರೋಡೋಪ್ ಮೊಂಟೇನ್ ಮಿಶ್ರಕಾಡು, ಯುಕ್ಷಿನ್ ಕೊಲ್ಟಿಕ್ ಪತನಶೀಲ ಕಾಡುಗಳು, ಏಜಿಯನ್ ಮತ್ತು ಟರ್ಕಿ ಸ್ಕೈರೋಫಿಲಸ್ ಮಿಶ್ರಕಾಡುಗಳು, ಪೂರ್ವ ಯೂರೋಪಿಯನ್ ಅರಣ್ಯ ಹುಲ್ಲುಗಾವಲು ಮತ್ತು ಪಾಂಟಿಕ್ ಕ್ಯಾಸ್ಪಿಯನ್ ಹುಲ್ಲುಗಾವಲುಗಳು. ಬಲ್ಗೇರಿಯಾ ಜೀವವೈವಿಧ್ಯತೆಯನ್ನು ಸಾರುವ ಮೂರು ರಾಷ್ಟ್ರೀಯ ಉದ್ಯಾನವನಗಳು, ೧೧ ಪ್ರಾಕೃತಿಕ ಉದ್ಯಾನವನಗಳು ಮತ್ತು ೫೪ ಪ್ರಕೃತಿ ಮೀಸಲು ಪ್ರದೇಶಗಳಾಗಿ ಸಂರಕ್ಷಿಸಲಾಗಿದೆ. ಪಿರಿನ್ ರಾಷ್ಟ್ರೀಯ ಉದ್ಯಾನವನ ಮತ್ತು ಸ್ರೆಬರ್ನ್ ನೇಚರ್ ರಿಸರ್ವ್ ಗಳನ್ನು ಯುನೆಸ್ಕೋ ವಿಶ್ವಪರಂಪರೆಯ ಪಟ್ಟಿಯಲ್ಲಿ ಸೇರಿಸಲಾಗಿದೆ.

ಬಲ್ಗೇರಿಯನ್ ಜನಪದದ ಒಂದು ಅಂಗ ಬೆಂಕಿ. ಇದನ್ನು ದುಷ್ಟಶಕ್ತಿಗಳು ಮತ್ತು ಕಾಯಿಲೆಗಳನ್ನು ಹೋಗಲಾಡಿಸಲು ಬಳಸುತ್ತಾರೆ. ದುಷ್ಟಶಕ್ತಿಗಳ ವಿರುದ್ಧದ ಕೆಲವು ಆಚರಣೆಗಳು ಇಂದಿಗೂ ಉಳಿದುಕೊಂಡಿವೆ. ಕುಕೇರಿ, ಬದುಕುಳಿದವರು, ಮರ್ಟೆನಿಟ್ಸಾವನ್ನು ವ್ಯಾಪಕವಾಗಿ ಆಚರಿಸಲಾಗುತ್ತದೆ. ನೆಸ್ಟಿನಾಸ್ಟೈವನ್ನು ಯೂನೆಸ್ಕೋ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ಸೇರಿಸಿದೆ. ಕ್ರಿ.ಶ. ೧೦ನೇ ಶತಮಾನದಲ್ಲಿ ಪ್ರೆಸ್ಲಾವ್ ಮತ್ತು ಓಹ್ರಿಡ್ ಸಾಹಿತ್ಯ ಶಾಲೆಗಳ ಸ್ಥಾಪನೆಯು, ಮಧ್ಯಯುಗದಲ್ಲಿ ಬಲ್ಗೇರಿಯಾ ಸಾಹಿತ್ಯದ ಸುವರ್ಣಯುಗವಾಗಿತ್ತು.

ಬಲ್ಗೇರಿಯಾ ಎಂಬ ಹೆಸರು ಈ ದೇಶವನ್ನು ಸ್ಥಾಪಿಸಿದ ತುರ್ಕಿಶ್ ಮೂಲದ ಬುಡಕಟ್ಟು ಜನಾಂಗದ ಬಲ್ಗರ್ಸ್‌ನಿಂದ ಬಂದಿದೆ. ಕ್ರಿ.ಪೂ. ೬೫೦೦ರ ಕರಣೋವೊ ಸಂಸ್ಕೃತಿಯು ಈ ಪ್ರದೇಶದಲ್ಲಿ ಹುಟ್ಟಿಕೊಂಡಿತು. ಈ ಪ್ರದೇಶದಲ್ಲಿ ಹಲವಾರು ನವ ಶಿಲಾಯುಗದ ಕುರುಹುಗಳು ಪತ್ತೆಯಾಗಿವೆ. ಕ್ರಿ.ಪೂ. ೬ ರಿಂದ ೩ನೇ ಶತಮಾನದಲ್ಲಿ ಈ ಪ್ರದೇಶವು ಥ್ರೇಶಿಯನ್ನರು, ಪರ್ಷಿಯನ್ನರು, ಸೆಲ್ಟ್ಸ್ ಮತ್ತು ಮ್ಯಾಸಿಡೋನಿಯನ್ನರಿಗೆ ಯುದ್ಧಭೂಮಿಯಾಗಿತ್ತು. ಕ್ರಿ.ಪೂ. ೫ನೇ ಶತಮಾನದಲ್ಲಿ ತಾಮ್ರಯುಗದ ವರ್ಣಸಂಸ್ಕೃತಿ ಚಿನ್ನದ ಲೋಹಶಾಸ್ತ್ರವನ್ನು ಕಂಡುಹಿಡಿದ ಕೀರ್ತಿಗೆ ಪಾತ್ರವಾಗಿದೆ. ಇದಕ್ಕೆ ಸಂಬಂಧಿಸಿದಂತೆ ವರ್ಣ ನೆಕ್ರೆಪೊಲಿಸ್ ನಿಧಿಯು ವಿಶ್ವದ ಅತ್ಯಂತ ಹಳೆಯ ಚಿನ್ನದ ಆಭರಣಗಳನ್ನು ಹೊಂದಿದೆ. ಕ್ರಿ.ಶ. ೪೫ರಲ್ಲಿ ರೋಮನ್ ಸಾಮ್ರಾಜ್ಯವು ಈ ಪ್ರದೇಶವನ್ನು ವಶಪಡಿಸಿಕೊಂಡಿತು. ಕ್ರಿ.ಶ. ೬೮೧ರಲ್ಲಿ ಬಲ್ಗರ್‌ಗಳು ಮೊದಲ ಬಲ್ಗೇರಿಯನ್ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಇದು ಬಾಲ್ಕನ್‌ನಲ್ಲಿ ಪ್ರಾಬಲ್ಯ ಸಾಧಿಸಿತು ಮತ್ತು ಸಿರಿಲಿಕ್ ಲಿಪಿಯನ್ನು ಅಭಿವೃದ್ಧಿಪಡಿಸುವುದರ ಮೂಲಕ ಸ್ಲಾವಿಕ್ ಸಂಸ್ಕೃತಿಯನ್ನು ಪರಸರಿಸಿತು. ಈ ರಾಜ್ಯವು ೧೧ನೇ ಶತಮಾನದ ಆರಂಭದವರೆಗೂ ಇತ್ತು. ನಂತರ ಬೈಜಾಂಟಿಯನ್ ಚಕ್ರವರ್ತಿ ೧೧ನೇ ಬೆಸಿಲ್ ವಶಪಡಿಸಿಕೊಂಡನು. ಕ್ರಿ.ಶ. ೧೧೮೫ರಲ್ಲಿ ಯಶಸ್ವಿ ಬಲ್ಗೇರಿಯನ್ ದಂಗೆ ಎರಡನೇ ಬಲ್ಗೇರಿಯನ್ ಸಾಮ್ರಾಜ್ಯವನ್ನು ಸ್ಥಾಪಿಸಿತು. ಇದು ೨ನೇ ಇವಾನ್ ಅಸೆನ್‌ನ (ಕ್ರಿ.ಶ. ೧೨೧೮-೧೨೪೧) ಅಡಿಯಲ್ಲಿ ಉತ್ತುಂಗಕ್ಕೇರಿತು. ಹಲವಾರು ಬಳಲಿಕೆಯ ಯುದ್ಧಗಳು ಮತ್ತು ಊಳಿಗಮಾನ್ಯ ಕಲಹಗಳ ನಂತರ ೨ನೇ ಬಲ್ಗೇರಿಯನ್ ಸಾಮ್ರಾಜ್ಯವು ಕ್ರಿ.ಶ. ೧೩೯೬ರಲ್ಲಿ ವಿಭಜನೆಯಾಯಿತು. ನಂತರ ೫ನೇ ಶತಮಾನಗಳ ಕಾಲ ಆಟೋಮನ್ ಆಳ್ವಿಕೆಗೆ ಒಳಪಟ್ಟಿತು.  ಕ್ರಿ.ಶ. ೧೮೭೭-೭೮ರ ರುಸ್ಸೊ-ಟರ್ಕಿಶ್ ಯುದ್ಧವು ಮೂರನೇ ಬಲ್ಗೇರಿಯನ್ ರಾಜ್ಯದ ರಚನೆಗೆ ಕಾರಣವಾಯಿತು. ಅನೇಕ ಬಲ್ಗೇರಿಯನ್ ಜನಾಂಗ ಮತ್ತು ಜನರನ್ನು ಗಡಿ ಹೊರಗೆ ಬಿಡಲಾಯಿತು. ಇದು ತನ್ನ ನೆರೆಹೊರೆಯೊಂದಿಗಿನ ಹಲವಾರು ಸಂಘರ್ಷಗಳಿಗೆ ಕಾರಣವಾಯಿತು. ಎರಡು ವಿಶ್ವಯುದ್ಧಗಳಲ್ಲಿ ಜರ್ಮನಿಯೊಂದಿಗೆ ಮೈತ್ರಿ ಮಾಡಿಕೊಂಡಿತು. ೧೯೪೬ರಲ್ಲಿ ಬಲ್ಗೇರಿಯಾ ಏಕಪಕ್ಷದ ಸಮಾಜವಾದಿ ರಾಜ್ಯವಾಯಿತು. ಸೋವಿಯತ್ ನೇತೃತ್ವದ ಈಸ್ಟನ್‌ ಬ್ಲಾಕ್‌ನ ಭಾಗವಾಯಿತು. ೧೯೮೯ರ ಕ್ರಾಂತಿಯ ನಂತರ ಕಮ್ಯುನಿಸ್ಟ್‌ ಪಕ್ಷವನ್ನು ತ್ಯಜಿಸಿ ಬಹುಪಕ್ಷ ಚುನಾವಣೆಗೆ ಅವಕಾಶ ನೀಡಿತು. ಇಂದು ಪ್ರಜಾಪ್ರಭುತ್ವ ರಾಷ್ಟ್ರವಾಗಿ ಪರಿವರ್ತನೆಗೊಂಡಿದೆ.

Categories
asia

ಬೋಸ್ನಿಯಾ ಹರ್ಜೆಕೋ(ಗೋ)ವಿಯಾ

ಬೋಸ್ನಿಯಾ ಹರ್ಜೆಕೋವಿಯಾ ದಕ್ಷಿಣ ಯೂರೋಪಿನ ಬಾಲ್ಕನ್ ದ್ವೀಪಕಲ್ಪದ ಒಂದು ದೇಶ. ಬೋಸ್ನಿಯಾ ಮತ್ತು ಹರ್ಜೆಕೋವಿಯಾ ಎರಡು ಒಂದೇ ಭೌಗೋಳಿಕ ಪರಿಮಿತಿಯಲ್ಲಿರುವುದರಿಂದ ಬೋಸ್ನಿಯಾ ಎಂದೇ ಕರೆಯಲಾಗುತ್ತಿದೆ. ಇವುಗಳ ಗಡಿಯನ್ನು ವ್ಯಾಖ್ಯಾನಿಸಲಾಗಿಲ್ಲ. ಸೋಫಿಯಾ ರಾಜಧಾನಿ ಮತ್ತು ಅತ್ಯಂತ ದೊಡ್ಡ ನಗರ. ಇದಕ್ಕೆ ಒಲಿಂಪಿಕ್ ಸಿಟಿ, ಯೂರೋಪಿಯನ್ ಜೆರುಸಲೇಂ ಎಂಬ ನಾಮಾರ್ಥಗಳಿವೆ. ಮಾರ್ಚ್ ೧, ೧೯೯೨ರಲ್ಲಿ ಸಮಾಜವಾದಿ ಯುಗೊಸ್ಲಾವ್ ಯುದ್ಧಗಳಿಂದ ಮುಕ್ತಿ ಪಡೆದು ಸ್ವಾತಂತ್ರ್ಯವನ್ನು ಪಡೆದುಕೊಂಡವು. ದೇಶದ ರಾಷ್ಟ್ರಗೀತೆ – ‘ಬೋಸ್ನಿಯಾ ಮತ್ತು ಹರ್ಜೆಕೋವಿಯಾ ರಾಷ್ಟ್ರಗೀತೆ’. ದೇಶ ಸೀಮಿತ ಮಾರುಕಟ್ಟೆ ಸುಧಾರಣೆಗಳೊಂದಿಗೆ ಪರಿವರ್ತನೆಯ ಆರ್ಥಿಕತೆಯನ್ನು ಹೊಂದಿದೆ. ಬೋಸ್ನಿಯಾದಲ್ಲಿ ಮೂರು ಪ್ರಮುಖ ಧರ್ಮಗಳಿವೆ. ರೋಮನ್ ಕ್ಯಾಥೊಲಿಕ್, ಸರ್ಬಿಯನ್ ಆರ್ಥೊಡಾಕ್ಸ್ ಮತ್ತು ಮುಸ್ಲಿಂ; ೨೦೧೩ರ ಗಣತಿಯ ಪ್ರಕಾರ ಶೇ. ೫೦.೭% ಮುಸ್ಲಿಮರು, ಶೇ. ೩೦.೭೫% ಕ್ರಿಶ್ಚಿಯನ್ ಸಂಪ್ರದಾಯಸ್ಥರು ಮತ್ತು ಶೇ. ೧೫.೧೯% ರಷ್ಟು ರೋಮನ್ ಕ್ಯಾಥೋಲಿಕ್ಕರು. ಬೋಸ್ನಿಯನ್, ಸರ್ಬಿಯನ್, ಕ್ರೊಯೇಷಿಯಾ ಭಾಷೆಗಳನ್ನು ಮಾತನಾಡುತ್ತಾರೆ. ೨೦೧೬ರ ರಾಷ್ಟ್ರೀಯ ಜನಗಣತಿ ಪ್ರಕಾರ ದೇಶದ ಜನಸಂಖ್ಯೆ ೩,೫೧೧,೩೭೨.  ದೇಶ ಫೆಡರಲ್ ಪಾರ್ಲಿಮೆಂಟರಿ ಸಾಂವಿಧಾನಿಕ ಗಣರಾಜ್ಯ ಮಾದರಿಯ ಸರ್ಕಾರವನ್ನು ಹೊಂದಿದ್ದು ಮೇಲ್ಮನೆ – ಹೌಸ್ ಆಫ್ ಪೀಪಲ್ಸ್, ಕೆಳಮನೆ – ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್. ದೇಶದಲ್ಲಿ ಬಳಕೆಯಲ್ಲಿರುವ ನಾಣ್ಯ – ಕನ್ವರ್ಟಿಬಲ್ ಮಾರ್ಕ್.

ಬೋಸ್ನಿಯಾ ಭೌಗೋಳಿಕವಾಗಿ ಪಶ್ಚಿಮ ಬಾಲ್ಕನ್‌ನಲ್ಲಿದೆ. ದಕ್ಷಿಣಕ್ಕೆ ಆಡ್ರಿಯಾಟಿಕ್ ಸಮುದ್ರದಲ್ಲಿ ಕಿರಿದಾದ ಕರಾವಳಿಯನ್ನು ಹೊಂದಿದೆ. ಇದು ಸುಮಾರು ೨೦ ಕಿ.ಮೀ. ಉದ್ದವಿದ್ದು, ನ್ಯೂಮ್ ಪಟ್ಟಣವನ್ನು ಸುತ್ತುವರಿದಿದೆ. ಇದರ ಗಡಿ ಪೂರ್ವಕ್ಕೆ ಸರ್ಬಿಯಾ, ಆಗ್ನೇಯಕ್ಕೆ ಮಾಂಟೆನೆಗ್ರೋ ಮತ್ತು ದೇಶದ ಉತ್ತರ ಮತ್ತು ಪಶ್ಚಿಮಕ್ಕೆ ಕ್ರೊಯೇಷಿಯಾ ಇದ್ದು ೪೦೦ ೫೨ ಉತ್ತರ ಅಕ್ಷಾಂಶ ಮತ್ತು ೧೮೦ ೨೫ ಪೂರ್ವ ರೇಖಾಂಶಗಳ ಮಧ್ಯೆ ೫೧,೧೨೯ ಚ.ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ದೇಶವು ಹೆಚ್ಚಾಗಿ ಪರ್ವತಮಯವಾಗಿದ್ದು ಕೇಂದ್ರ ಡೈನರಿಕ್ ಆಲ್ಪ್ಸ್ ಒಳಗೊಂಡಿದೆ. ಮಾಂಟೆನೆಗ್ರೋ ಗಡಿಯಲ್ಲಿ ಎತ್ತರದ ಮ್ಯಾಗ್ಲಿಕ್ ಶಿಖರವು (೨೩೮೬ ಮೀ.) ದೇಶದ ಅತಿ ಎತ್ತರದ ಸ್ಥಳವಾಗಿದೆ. ಅರಣ್ಯ ಪ್ರದೇಶವು ಶೇ. ೫೦% ಇದ್ದು ಸಾವಾ ನದಿಯುದ್ದಕ್ಕೂ ಫಲವತ್ತಾದ ಕೃಷಿಭೂಮಿಯನ್ನು ಹೊಂದಿದೆ. ಈ ಬಯಲು ಕ್ರೊಯೇಷಿಯಾ ಮತ್ತು ಸರ್ಬಿಯಾಗಳಿಗೂ ವ್ಯಾಪಿಸಿದೆ. ಹಜೆಗೋವಿಯಾ-ನೆರೆಟ್ಟಾ ಕ್ಯಾಂಟನ್‌ನಲ್ಲಿರುವ ನ್ಯೂಮ್ ಪಟ್ಟಣದ ಸುತ್ತ ೨೦ ಕಿ.ಮೀ. ಕರಾವಳಿ ಹೊಂದಿದೆ. ಈ ನಗರವು ಕ್ರೊಯೇಷಿಯಾದ ಪರ್ಯಾಯ ದ್ವೀಪಗಳಿಂದ ಆವೃತವಾಗಿದ್ದರೂ ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ಬೋಸ್ನಿಯಾ ಸಮುದ್ರದ ಮೂಲಕ ಹಾದುಹೋಗಲು ಹಕ್ಕನ್ನು ನೀಡಲಾಗಿದೆ. ಬಾಂಜಾಲೂಕಾ ಮತ್ತು ಬಿಹ್ಯಾಕ್, ಕ್ರಜಿನ, ಬೋಸ್ನಿಯಾ, ಮೊಸ್ಟಾರ್, ಹರ್ಜೆಗೋವಿನಾ ಪ್ರಮುಖ ಪಟ್ಟಣಗಳು.

ಸಾವಾ ದೇಶದ ದೊಡ್ಡ ನದಿ. ಉನಾ, ಸನಾ, ಡ್ರೀನಾ, ನರೆಟ್ರಾ ನದಿಗಳೂ ಇವೆ. ಬೋಸ್ನಾ ನದಿಯಿಂದಲೇ ದೇಶಕ್ಕೆ ಬೋಸ್ನಿಯಾ ಎಂಬ ಹೆಸರು ಬಂದಿದೆ. ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ ಸಂಸ್ಥೆ ಪ್ರಕಾರ ಬೋಸ್ನಿಯಾ ಪ್ರದೇಶವನ್ನು ಮೂರು ಪರಿಸರ ಪ್ರದೇಶಗಳನ್ನಾಗಿ ವಿಂಗಡಿಸಲಾಗಿದೆ. ಪನ್ನೋನಿಯರ್ ಮಿಶ್ರ ಕಾಡುಗಳು, ಡೈನರಿಕ್ ಪರ್ವತ ಮಿಶ್ರಕಾಡುಗಳು ಮತ್ತು ಇಲಿಯಾರಿಯನ್ ಪತನಶೀಲ ಕಾಡುಗಳು. ಬೋಸ್ನಿಯಾದ ಮೊದಲ ಉಲ್ಲೇಖ ೧೦ನೇ ಶತಮಾನದಲ್ಲಿ ಬೈಜಾಂಟೈನ್ ಚಕ್ರವರ್ತಿ ೭ನೇ ಕಾನ್‌ಸ್ಟಾಂಟೈನ್ ಬರೆದ ರಾಜಕೀಯ ಭೌಗೋಳಿಕ ಕೈಪಿಡಿಯಲ್ಲಿ ಲಭ್ಯವಿದೆ. ಬೋಸ್ನಾ ಎಂದರೆ ಗ್ರೀಕ್ ಭಾಷೆಯಲ್ಲಿ ‘ಸಣ್ಣ ಭೂಮಿ’ ಎಂದರ್ಥ.

ಬೋಸ್ನಿಯಾ ಹರ್ಜೆಕೋವಿಯಾದ ಸಂಪೂರ್ಣ ಇತಿಹಾಸ ಶ್ರಿಮಂತವಾಗಿದೆ. ಬೊಸ್ನಿಯಾದಲ್ಲಿ ಹಳೆಯ ಶಿಲಾಯುಗ ಕಾಲದಿಂದಲೂ ಮಾನವರು ವಾಸವಾಗಿದ್ದರು. ಒದಂಜ್ ಗುಹೆಯಲ್ಲಿ ಅತ್ಯಂತ ಹಳೆಯ ಬಣ್ಣದ ಗುಹೆಯೊಂದು ಕಂಡುಬಂದಿದೆ. ನವಶಿಲಾಯುಗದ ಸಂಸ್ಕೃತಿಗಳಾದ ಬಟ್ಮಿರ್ ಮತ್ತು ಕಾಕಂಜ್ (ಕ್ರಿ.ಪೂ. ೬೨೩೦-೪೯೦೦) ಗಳಿದ್ದವು. ವಿಶಿಷ್ಟ ಸಂಸ್ಕೃತಿ ಮತ್ತು ಕಲಾಪ್ರಕಾರವನ್ನು ಹೊಂದಿರುವ ಜನಾಂಗೀಯ ಗುಂಪಾದ ಇಲಿಯರಿಯನ್ನರ ಕಂಚಿನ ಸಂಸ್ಕೃತಿಯು ಇಂದಿನ ಸ್ಲೊವೇನಿಯಾ, ಕ್ರೊಯೇಷಿಯಾ, ಬೋಸ್ನಿಯಾ, ಹರ್ಜೆಕೋವಿಯಾ, ಸರ್ಬಿಯಾ, ಕೊಸಾವೊ, ಮಾಂಟೆನಿಗ್ರೊ, ಆಲ್ಬೇನಿಯಾ ಮತ್ತು ಉತ್ತರ ಗ್ರೀಸ್‌ನ ಕೆಲವು ಭಾಗಗಳಲ್ಲಿ ಸಂಘಟಿತವಾಗಲು ಪ್ರಾರಂಭಿಸಿತು. ಕ್ರಿ.ಪೂ. ೮ನೇ ಶತಮಾನದಿಂದ ಇಲಿಯಾರಿಯನ್ ಬುಡಕಟ್ಟು ಜನಾಂಗಗಳು ರಾಜ್ಯಗಳಾಗಿ ವಿಕಸನಗೊಂಡಿವೆ. ಕ್ರಿ.ಪೂ. ೭ನೇ ಶತಮಾನ ಕಂಚಿನ ಯುಗದಿಂದ ಕಬ್ಬಿಣದ ಯುಗಕ್ಕೆ ಬದಲಾವಣೆಯಾಯಿತು. ಈ ಯುಗದಲ್ಲಿ ಅನೇಕ ಆಭರಣಗಳು ಮತ್ತು ಕಲಾವಸ್ತುಗಳನ್ನು ಕಂಚಿನಲ್ಲಿ ತಯಾರಿಸಲಾಗಿದೆ. ಇಲಿಯರಿಯನ್ ಬುಡಕಟ್ಟು ಜನಾಂಗದವರು ಉತ್ತರಕ್ಕೆ ಹಾಲಾಸ್ಟಾಟ್ ಸಂಸ್ಕೃತಿಗಳ ಪ್ರಭಾವದಿಂದ ಪ್ರಾದೇಶಿಕ ಕೇಂದ್ರಗಳನ್ನು ರಚಿಸಿದರು. ಕಬ್ಬಿಣಯುಗದ ಗ್ಲಾಸಿನಾಕ್ ಸಂಸ್ಕೃತಿಯು ಆಟರಿಯೇಟಾ ಬುಡಕಟ್ಟು ಜನಾಂಗದೊಂದಿಗೆ ಸಂಬಂಧ ಹೊಂದಿದೆ. ಇವರ ಜೀವನದ ಬಹುಮುಖ್ಯವಾದ ಅಂಗವೆಂದರೆ ಸತ್ತವರ ಆರಾಧನೆ. ಸಮಾಧಿಗಳನ್ನು ದೊಡ್ಡ ಕಲ್ಲುಗಳಿಂದ ಕಟ್ಟಿದ ಗೋರಿ ಅಥವಾ ಭೂಮಿಯಲ್ಲಿ ಹೂಳುತ್ತಿದ್ದರು. ಇದನ್ನು ಟುಮಿಲಿ (ಗ್ರೊಮೈಲ್) ಎಂದು ಕರೆಯಲಾಗುತ್ತದೆ. ಹರ್ಜೆಕೋವಿಯಾದಲ್ಲಿ ೫೦ ಮೀಟರ್‌ಗಿಂತ ಹೆಚ್ಚು ಅಗಲ ಮತ್ತು ೫ ಮೀಟರ್‌ಗಿಂತ ಎತ್ತರದ ಸ್ಮಾರಕಗಳಿವೆ. ಜಪೋಡಿಯನ್ ಬುಡಕಟ್ಟು ಜನಾಂಗದವರು ಅಲಂಕಾರಕ್ಕೆ ಹೆಚ್ಚಿನ ಒಲವು ಹೊಂದಿದ್ದರು.

ಕ್ರಿ.ಪೂ.೪ನೇ ಶತಮಾನದಲ್ಲಿ ಸೆಲ್ಟ್ಸ್ ನ ಮೊದಲ ಆಕ್ರಮಣವನ್ನು ದಾಖಲಿಸಲಾಗಿದೆ. ಕ್ರಿ.ಪೂ. ೨೨೯ರಲ್ಲಿ ಇಲಿಯಾರಿಯನ್ನರು ಮತ್ತು ರೋಮನ್ನರ ನಡುವಿನ ಸಂಘರ್ಷವು ಪ್ರಾರಂಭವಾಯಿತು. ಆದರೆ ರೋಮ್ ಕ್ರಿ.ಶ. ೯ ರವರೆಗೂ ಪೂರ್ಣವಾಗಿ ಈ ಪ್ರದೇಶವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಆಧುನಿಕ ಬೋಸ್ನಿಯಾ ಮತ್ತು ಹರ್ಜೆಕೋವಿಯಾದಲ್ಲಿ ರೋಮ್ ಮಾಡಿದ ಅತ್ಯಂತ ಕಠಿಣ ಯುದ್ಧ ಪ್ಯುನಿಕ್ ಯುದ್ಧ. ಈ ಕುರಿತು ರೋಮ್ ಇತಿಹಾಸಕಾರ ಸ್ಯೂಟೋನಿಯಸ್ ವಿವರಿಸಿದ್ದಾನೆ. ಕ್ರಿ.ಶ. ೩೩೭ ಮತ್ತು ೩೯೫ರ ನಡುವೆ ನಡೆದ ಸಾಮ್ರಾಜ್ಯದ ವಿಭಜನೆಯ ನಂತರ ಡಾಲ್ಮೇಷಿಯಾ ಮತ್ತು ಪನ್ನೋನಿಯಾ ಪಶ್ಚಿಮ ರೋಮನ್ ಸಾಮ್ರಾಜ್ಯದ ಭಾಗವಾಯಿತು. ಕ್ರಿ.ಶ. ೪೫೫ರಲ್ಲಿ ಈ ಪ್ರದೇಶವನ್ನು ಓಸ್ಟ್ರಾಗೋತ್ಸ್ ವಶಪಡಿಸಿಕೊಂಡರು. ತರುವಾಯ ಅಲನ್ಸ್ ಮತ್ತು ಹನ್ಸ್‌ ರ ನಡುವೆ ಬದಲಾವಣೆಗೆ ಒಳಪಟ್ಟಿತು. ೬ನೇ ಶತಮಾನದ ಹೊತ್ತಿಗೆ ಚಕ್ರವರ್ತಿ ಜಸ್ಟೀನಿಯನ್ ಬೈಜಾಂಟೈನ್ ಸಾಮ್ರಾಜ್ಯಕ್ಕಾಗಿ ಈ ಪ್ರದೇಶವನ್ನು ವಶಪಡಿಸಿಕೊಂಡನು. ೬ ಮತ್ತು ೭ನೇ ಶತಮಾನದಲ್ಲಿ ಸ್ಲಾವ್ಸ್ ಬಾಲ್ಕನ್‌ ಗಳ ಮೇಲೆ ದಾಳಿ ನಡೆಸಿದರು ಮತ್ತು ಬೈಜಾಂಟೈನ್‌ ಗಳಿಗೆ ಸ್ಕ್ಲವೆನಿ ಎಂದು ಕರೆದರು.

೧೦ನೇ ಶತಮಾನದ ಮಧ್ಯಭಾಗದಲ್ಲಿ ಬೈಜಾಂಟೈನ್ ಚಕ್ರವರ್ತಿ ಕಾನ್‌ಸ್ಟಾಂಟೈನ್ ಪೋರ್ಫೈರೊಜೆನಿಟರ್ಸ್ ಬೋಸ್ನಿಯಾವನ್ನು ಮೊದಲ ಭೂಮಿ ಎಂದು ಕರೆದನು. ಮಧ್ಯಯುಗದಲ್ಲಿ ರಾಜಕೀಯ ಸನ್ನಿವೇಶವು ಹಂಗೇರಿ ಸಾಮ್ರಾಜ್ಯ ಮತ್ತು ಬೈಜಾಂಟೈನ್ ಸಾಮ್ರಾಜ್ಯದ ನಡುವೆ ಸ್ಪರ್ಧೆಗೆ ಕಾರಣವಾಯಿತು. ಆದರೆ ಈ ಸ್ಪರ್ಧೆಗಳನ್ನು ಮೀರಿ ಬೋಸ್ನಿಯಾ ಬನೇಟ್ ಆಗಿ ಹೊರಹೊಮ್ಮಿತು. ನಂತರ ೧೪ನೇ ಶತಮಾನದಲ್ಲಿ ಬೋಸ್ನಿಯನ್ ಇತಿಹಾಸ ಯುಬಿಕ್ ಮತ್ತು ಕೊಟ್ರೊಮಾನಿಕ್ ಕುಟುಂಬಗಳ ನಡುವಿನ ಶಕ್ತಿಯ ಹೋರಾಟದಿಂದ ಗುರುತಿಸಲ್ಪಟ್ಟಿತು. ೧೩೨೨ರಲ್ಲಿ ಈ ಸಂಘರ್ಷ ಕೊನೆಗೊಂಡಿತು. ಆಟೋಮನ್ ಬೋಸ್ನಿಯಾ ಸಾಮ್ರಾಜ್ಯ (೧೪೬೩-೧೮೭೮) – ಬೋಸ್ನಿಯಾದ ಆಟೋಮನ್ ವಿಜಯವು ದೇಶದ ಇತಿಹಾಸದಲ್ಲಿ ಹೊಸಯುಗವನ್ನು ಗುರುತಿಸಿತು. ಇದು ರಾಜಕೀಯ, ಸಾಂಸ್ಕೃತಿಕ ಭೂದೃಶ್ಯದಲ್ಲಿ ತೀವ್ರ ಬದಲಾವಣಿಗಳನ್ನು ತಂದಿತು. ೧೮೭೮ರಲ್ಲಿ ಬರ್ಲಿನ್ ಕಾಂಗ್ರೆಸ್‌ನಲ್ಲಿ ಆಸ್ಟ್ರೋ-ಹಂಗೇರಿಯನ್ ವಿದೇಶಾಂಗ ಸಚಿವ (೧೮೭೮-೧೯೧೮) ಬೋಸ್ನಿಯಾ ಮತ್ತು ಹರ್ಜೆಕೋವಿಯಾದ ಆಡಳಿತವನ್ನು ಪಡೆದನು. ೨೮ನೇ ಜೂನ್ ೧೯೧೪ರಂದು ಸರ್ಬಿಯಾದ ಬೆಂಬಲಿತ ರಹಸ್ಯ ಚಳವಳಿಯ ಯುವ ಸದಸ್ಯ ಗವ್ರಿಲೊಪ್ರಿನ್ಸಿಪ್ ಎಂಬ ಯುಗೋಸ್ಲಾವ್ ರಾಷ್ಟ್ರೀಯವಾದಿ ಯುವಕ ಸರಾಜಿವೊದಲ್ಲಿ ಆಸ್ಟ್ರೋ-ಹಂಗೇರಿಯನ್ ಸಿಂಹಾಸನದ ಉತ್ತರಾಧಿಕಾರಿಯಾದ ಆರ್ಚ್ಡ್ಯೂಕ್ ಫ್ರಾಂಕ್ ಫರ್ಡಿನ್ಯಾಂಡ್‌ ನನ್ನು ಕೊಲೆಮಾಡಿದನು. ಈ ಘಟನೆಯು ಮೊದಲನೆ ಮಹಾಯುದ್ಧಕ್ಕೆ ತಕ್ಷಣದ ಕಾರಣವಾಯಿತು. ಯುದ್ಧ ಮುಗಿದ ಮೇಲೆ ಬೋಸ್ನಿಯಾ ಯುಗೋಸ್ಲೋವಾಕಿಯಾದ ಭಾಗವಾಯಿತು. ೧೯೪೫ ರಿಂದ ೧೯೯೨ರ ವರೆಗೆ ಸಮಾಜವಾದಿ ಫೆಡರೇಷನ್ ರಿಪಬ್ಲಿಕ್ ಆಫ್ ಯುಗೊಸ್ಲೋವಾಕಿಯಾ ಆಳ್ವಿಕೆ ನಡೆಸಿತು. ಬೋಸ್ನಿಯಾ ಯುದ್ಧದ ನಂತರ ಅಕ್ಟೋಬರ್ ೨೪, ೧೯೯೧ ರಂದು ಬೊಸ್ನಿಯಾ ಮತ್ತು ಹರ್ಜೆಕೋವಿಯಾದ ಸಂಸತ್ತು ರಚನೆಯಾಯಿತು.

Categories
asia

ಬೆಲ್ಜಿಯಂ

ಬೆಲ್ಜಿಯಂ ವಾಯುವ್ಯ ಯೂರೋಪಿನ ಚಿಕ್ಕ ರಾಷ್ಟ್ರ. ಯೂರೋಪಿನ ಯುದ್ಧಭೂಮಿ. ಯೂರೋಪಿಯನ್ ಒಕ್ಕೂಟದ ಆರು ಸಂಸ್ಥಾಪಕ ರಾಷ್ಟ್ರಗಳಲ್ಲಿ ಬೆಲ್ಜಿಯಂ ಒಂದಾಗಿದೆ. ಇದರ ರಾಜಧಾನಿ ಬ್ರಸೆಲ್ಸ್ – ಯೂರೋಪಿಯನ್ ಕೌನ್ಸಿಲ್, ಯೂರೋಪಿಯನ್ ಯೂನಿಯನ್ ಕೌನ್ಸಿಲ್‌ಗಳ ಅಧಿಕೃತ ಸ್ಥಾನವನ್ನು ಹೊಂದಿದೆ. ಬೆಲ್ಜಿಯಂ ಅಭಿವೃದ್ಧಿ ಹೊಂದಿದ ದೇಶವಾಗಿದ್ದು ಉನ್ನತ ಆದಾಯದ ಆರ್ಥಿಕತೆಯನ್ನು ಹೊಂದಿದೆ. ಇದು ಜೀವನದ ಗುಣಮಟ್ಟ, ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಉನ್ನತ ಮಟ್ಟದಲ್ಲಿದೆ. ಇದು ವಿಶ್ವದ ಸುರಕ್ಷಿತ, ಶಾಂತಿಯುತ ರಾಷ್ಟ್ರಗಳಲ್ಲಿ ಒಂದಾಗಿದೆ. ಯೂರೋಪ್ ಕೈಗಾರಿಕೀಕರಣಗೊಂಡ ಪ್ರದೇಶದ ಹೃದಯಭಾಗದಲ್ಲಿರುವ ಇದರ ಸ್ಥಾನವು ಕ್ರಿ.ಶ. ೨೦೦೭ರಲ್ಲಿ ವಿಶ್ವದ ೧೭ನೇ ಅತಿದೊಡ್ಡ ವ್ಯಾಪಾರ ರಾಷ್ಟ್ರ. ದ್ಯೇಯ ವಾಕ್ಯ – ಒಗ್ಗಟ್ಟಿನ ಮೂಲಕ ಶಕ್ತಿ. ರಾಷ್ಟ್ರಗೀತೆ – ದಿ ಬ್ರಬಾಯ್ನ್. ಬ್ರೆಜಿಲ್ ಫೆಡರಲ್ ಪಾರ್ಲಿಮೆಂಟ್, ಸಂಸದೀಯ ರಾಜಪ್ರಭುತ್ವವನ್ನು ಹೊಂದಿದ್ದು, ಸೆನೆಟ್ – ಮೇಲ್ಮನೆ ಮತ್ತು ಚೇಂಬರ್ ಆಫ್ ರೆಪ್ರೆಸೆಂಟೇಟಿವ್ಸ್ – ಕೆಳಮನೆಯಿಂದ ಕೂಡಿದೆ. ದೇಶದಲ್ಲಿ ಕ್ಯಾಥೋಲಿಕ್ ಪಕ್ಷ, ಉದಾರವಾದಿ ಪಕ್ಷ, ಬೆಲ್ಜಿಯಂ ಕಾರ್ಮಿಕ ಪಕ್ಷಗಳಿವೆ. ಜುಲೈ ೨೧ ಸ್ವಾತಂತ್ರ್ಯ ದಿನ. ದೇಶದ ಜಿಡಿಪಿ ೨೦೧೮ರಲ್ಲಿ ೪೬,೭೨೪ ಹೊಂದಿತ್ತು.

ಬೆಲ್ಜಿಯಂನ ದಕ್ಷಿಣ ಮತ್ತು ಪಶ್ಚಿಮಕ್ಕೆ ಫ್ರಾನ್ಸ್ (೬೨೦ ಕಿ.ಮೀ.), ಪೂರ್ವದಲ್ಲಿ ಜರ್ಮನಿ (೧೬೭ ಕಿ.ಮೀ.) ಮತ್ತು ಲಕ್ಸೆಂಬರ್ಗ್ (೧೪೮ ಕಿ.ಮೀ.), ಉತ್ತರಕ್ಕೆ ಉತ್ತರ ಸಮುದ್ರ, ನೆದರ್‌ಲ್ಯಾಂಡ್ (೪೫೦ ಕಿ.ಮೀ.) ನೊಂದಿಗೆ ತನ್ನ ಗಡಿಗಳನ್ನು ಹಂಚಿಕೊಂಡಿದೆ. ೫೦೦0 ೫೧’, ಉತ್ತರ ಅಕ್ಷಾಂಶ ಮತ್ತು ೪೦0 ೨೧’ ಪೂರ್ವ ರೇಖಾಂಶಗಳ ನಡುವೆ ದೇಶ ತನ್ನ ವ್ಯಾಪ್ತಿಯನ್ನು ಹೊಂದಿದ್ದು ೩೦,೬೮೯ ಚ.ಕಿ.ಮೀ. ವಿಸ್ತಾರವಾಗಿದೆ. ೨೦೧೯ರ ಜನಗಣತಿ ಪ್ರಕಾರ ೧೧,೫೧೫,೭೯೩ ಜನಸಂಖ್ಯೆಯನ್ನು ಹೊಂದಿದೆ. ದೇಶದ ಜನಸಂಖ್ಯೆಯಲ್ಲಿ ಕ್ರಿಶ್ಚಿಯನ್ನರು ಶೇ. ೬೨%, ಅನ್ಯ ಧರ್ಮೀಯರು ಶೇ. ೨೯.೩%, ಇಸ್ಲಾಂ ಶೇ. ೬.೮% ಹಾಗೂ ಇತರರು ಶೇ. ೧.೧% ರಷ್ಟಿದ್ದಾರೆ. ಕ್ರಿಶ್ಚಿಯನ್ನರಲ್ಲಿ ರೋಮನ್ ಕ್ಯಾಥೋಲಿಕ್ (ಶೇ. ೫೨%) ಅವಲಂಬಿಗಳು ಹೆಚ್ಚಾಗಿದ್ದಾರೆ. ಸುಮಾರು ೪೨ ಸಾವಿರ ಯೆಹೂದಿಗಳ ಆಂಟ್ವರ್ಪ್ ಸಮುದಾಯವಿದೆ. ಇವರು ಯಡ್ಡಿಶ್ ಭಾಷೆಯನ್ನಾಡುವ ಅತಿದೊಡ್ಡ ಯೆಹೂದಿ ಸಮುದಾಯ. ಉಳಿದಂತೆ ಶೇ. ೫೯% ಡಚ್, ಶೇ. ೪೦% ಪ್ರೆಂಚ್ ಹಾಗೂ ಶೇ. ೧% ಜರ್ಮನ್ ಭಾಷಿಕರಿರುವ ನಾಡು.

ಬೆಲ್ಜಿಯಂ ಮೂರು ಭೌಗೋಳಿಕ ಪ್ರದೇಶಗಳನ್ನು ಹೊಂದಿದೆ. ವಾಯುವ್ಯದಲ್ಲಿ ಕರಾವಳಿ ಬಯಲು ಮತ್ತು ಮಧ್ಯ ಪ್ರಸ್ಥಭೂಮಿ ಎರಡೂ ಆಂಗ್ಲೋ-ಬೆಲ್ಜಿಯಂ ಜಲಾನಯನ ಪ್ರದೇಶಕ್ಕೆ ಸೇರಿದೆ. ಆಗ್ನೇಯದಲ್ಲಿ ಅರ್ಡೆನ್ನೆಸ್ ಎತ್ತರದ ಪ್ರದೇಶಗಳು, ಹರ್ಸಿನೆಕ್ ಜೀವವೈವಿಧ್ಯತೆಯ ಸ್ಥಳಗಳೂ ಸೇರಿವೆ. ಪ್ಯಾರಿಸ್ ಜಲಾನಯನ ಪ್ರದೇಶವು ಬೆಲ್ಜಿಯಂನ ದಕ್ಷಿಣದ ತುದಿಯಲ್ಲಿರುವ ಬೆಲ್ಜಿಯಂ ಲೊರೆನ್ನದಲ್ಲಿ ಸೇರುತ್ತದೆ. ಕರಾವಳಿ ಬಯಲು ಮುಖ್ಯವಾಗಿ ಮರಳು ದಿಬ್ಬಗಳು ಮತ್ತು ಮಡಿಕೆಗಳನ್ನು ಒಳಗೊಂಡಿದೆ. ಫಲವತ್ತಾದ ಕಣಿವೆಗಳು ಮತ್ತು ಕ್ಯಾಂಪೈನ್‌ನ ಈಶಾನ್ಯ ಮರಳು ಬಯಲು, ದಟ್ಟವಾದ ಕಾಡು, ಬೆಟ್ಟಗಳು ಮತ್ತು ಅರ್ಡೆನ್ನೆಸ್‌ನ ಪ್ರಸ್ಥಭೂಮಿಗಳು ಗುಹೆಗಳು ಮತ್ತು ಸಣ್ಣ ಕಮರಿಗಳಿಂದ ಕೂಡಿದೆ. ಪಶ್ಚಿಮಕ್ಕೆ ಪ್ರಾನ್ಸ್ ವರೆಗೂ ವಿಸ್ತರಿಸಿರುವ ಈ ಪ್ರದೇಶ ಪೂರ್ವಕ್ಕೆ ಜರ್ಮನಿಯ ಐಫೆಲ್‌ನೊಂದಿಗೆ ಹೈಫಿನ್ಸ್ ಪ್ರಸ್ಥಭೂಮಿಯಿಂದ ಸಂಪರ್ಕಿಸಲಾಗಿದೆ. ಇಲ್ಲಿರುವ ನಿಗ್ನಲ್ ಡಿ ಬೊಟ್ರಂಜ್ (೨,೨೭೭ ಅಡಿ) ದೇಶದ ಅತ್ಯುನ್ನತ ಸ್ಥಳವಾಗಿದೆ. ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ ಪ್ರಕಾರ ಬೆಲ್ಜಿಯಂನ ಪ್ರದೇಶವು ಅಟ್ಲಾಂಟಿಕ್ ಮಿಶ್ರಕಾಡುಗಳ ಪರಿಸರ ಪ್ರದೇಶಕ್ಕೆ ಸೇರಿದೆ. ಓಯಿಸ್ ನದಿ ಇಂಗ್ಲಿಷ್ ಕಾಲುವೆಯನ್ನು ಸೇರುತ್ತದೆ. ಲೊಸೆಲ್ಲೆ, ರೈನ್, ಸೀನ್ ಸಣ್ಣ ನದಿಗಳಾದರೆ ಮ್ಯೂಸ್ ಇಲ್ಲಿನ ಪ್ರಮುಖ ನದಿಯಾಗಿದೆ. ಪ್ಲಾಂಡರ್ಸ್ ಮತ್ತು ವಾಲೋನಿಯಾ ಆರ್ಥಿಕ ಕೇಂದ್ರಗಳಾಗಿವೆ ಹಾಗೂ ಆಂಟ್ವರ್ಪ್ ಬಂದರು ಕೇಂದ್ರವಾಗಿದೆ. ಘೆಂಟ್, ಚಾರ್ಲೆರಾಯ್, ಲೀಜ್, ಸ್ಕಾರ್ಬಿಕ್, ಆಂಡರ್ಲೆಕ್ಟ್, ಬ್ರಗ್ಜ್, ನಮ್ಮೂರ್, ಲ್ಯುವೆನ್ ಪ್ರಮುಖ ನಗರಗಳು. ಸೈಕ್ಲಿಂಗ್, ಟೆನ್ನಿಸ್, ಈಜು, ಜೂಡೋ, ಬ್ಯಾಸ್ಕೆಟ್‌ ಬಾಲ್, ಪುಟ್ಬಾಲ್ ಪ್ರಮುಖ ಕ್ರೀಡೆಗಳಾಗಿವೆ.

ಕ್ರಿ.ಪೂ. ೫೫ರ ಆಸುಪಾಸಿನಲ್ಲಿ ಜೂಲಿಯಸ್ ಸೀಸರ್ ಗ್ಯಾಲಿಕ್‌ವಾರ್ ಸಮಯದಲ್ಲಿ ಬಳಸಲಾದ ಲ್ಯಾಟಿನ್ ಪದದಿಂದ ಬೆಲ್ಜಿಯಂ ಹೆಸರು ಬಂದಿದೆ. ಕ್ರಿ.ಶ. ೧೭ನೇ ಶತಮಾನದಲ್ಲಿ ಬೆಲ್ಜಿಯಂ ಪ್ರದೇಶವು ವಾಣಿಜ್ಯ ಮತ್ತು ಸಾಂಸ್ಕೃತಿಕ ಸಮೃದ್ಧ ಕಾಸ್ಮೋಪಾಲಿಟನ್ ಕೇಂದ್ರವಾಗಿತ್ತು. ಕ್ರಿ.ಶ. ೧೬ರಿಂದ ೧೯ನೇ ಶತಮಾನಗಳ ನಡುವೆ ಅನೇಕ ಯೂರೋಪಿನ ಶಕ್ತಿಗಳ ನಡುವಿನ ಯುದ್ಧಭೂಮಿಯಾಗಿ ಕಾರ್ಯನಿರ್ವಹಿಸಿತು. ಕ್ರಿ.ಶ. ೧೮೩೦ರ ಬೆಲ್ಜಿಯಂ ಕ್ರಾಂತಿಯ ನಂತರ ನೆದರ್ ಲ್ಯಾಂಡಿನಿಂದ ಬೇರ್ಪಟ್ಟು ಕೈಗಾರಿಕಾ ಕ್ರಾಂತಿಯ ಪರಿಣಾಮ ಆಫ್ರಿಕಾದಲ್ಲಿ ಅನೇಕ ವಸಾಹತುಗಳನ್ನು ಹೊಂದಿತು. ಜೂಲಿಯಸ್ ಸೀಸರ್ ಉಲ್ಲೇಖಿಸಿರುವಂತೆ ಗ್ಯಾಲಿಯಾ ಬೆಲ್ಜಿಕಾ ಇಂದಿನ ಬೆಲ್ಜಿಯಂ. ಸೀಜರನ ವಿಜಯದ ಪರಿಣಾಮವಾಗಿ ರೋಮನ್ ಪ್ರಾಂತ್ಯವಾಯಿತು. ಆಧುನಿಕ ಬೆಲ್ಜಿಯಂನ ಪೂರ್ವಭಾಗವನ್ನು ಒಳಗೊಂಡ ರೈನ್ ಗಡಿಗೆ ಹತ್ತಿರವಿರುವ ಪ್ರದೇಶಗಳು ಜರ್ಮೇನಿಯಾ ‍ಆಂತರಿಕ ಪ್ರಾಂತ್ಯದ ಭಾಗವಾಯಿತು. ರೋಮನ್ ಸಾಮ್ರಾಜ್ಯ ಪತನಗೊಂಡ ಸಮಯದಲ್ಲಿ ಬೆಲ್ಜಿಯಂ ಪ್ರದೇಶದಲ್ಲಿ ಫ್ರಾಂಕಿಷ್ ಬುಡಕಟ್ಟು ಜನಾಂಗದವರು ಮತ್ತು ರೋಮನೀಕೃತ ಜನಸಂಖ್ಯೆ ವಾಸಿಸುತಿತ್ತು. ಕ್ರಿ.ಶ. ೫ನೇ ಶತಮಾನದಲ್ಲಿ ಈ ಪ್ರದೇಶವು ಮೆರೋವಿಂಗಿಯನ್ ರಾಜರ ಆಳ್ವಿಕೆಗೆ ಒಳಪಟ್ಟಿತು. ಕ್ರಿ.ಶ. ೮೪೩ರಲ್ಲಿ ನಡೆದ ವರ್ಡೂನ ಒಪ್ಪಂದವು ಕ್ಯಾರೊಲಿಂಗಿಯನ್ ಸಾಮ್ರಾಜ್ಯವನ್ನು ಮೂರು ಭಾಗಗಳನ್ನಾಗಿ ವಿಂಗಡಿಸಿತು. ಇದರ ಗಡಿಗಳು ಮಧ್ಯಕಾಲಿನ ರಾಜಕೀಯ ಗಡಿಗಳ ಮೇಲೆ ಶಾಶ್ವತ ಪರಿಣಾಮ ಬೀರಿತು. ಆಧುನಿಕ ಬೆಲ್ಜಿಯಂನ ಬಹುಪಾಲು ಮಧ್ಯ ಸಾಮ್ರಾಜ್ಯದಲ್ಲಿತ್ತು. ನಂತರ ಇದನ್ನು ಲೋಥರಿಂಗಿಯಾ ಎಂದು ಕರೆಯಲಾಯಿತು. ಕ್ರಿ.ಶ. ೮೭೦ರಲ್ಲಿ ಆಧುನಿಕ ಬೆಲ್ಜಿಯಂ ಮೀರ್ಸಲ್ ಒಪ್ಪಂದದಿಂದ ಪಶ್ಚಿಮ ಸಾಮ್ರಾಜ್ಯದ ಭಾಗವಾಯಿತು. ಕ್ರಿ.ಶ. ೮೮೦ರ ರೈಜೆಮಾಂಟ್ ಒಪ್ಪಂದದಲ್ಲಿ ಲೋಥರಿಂಜಿಯಾ ಪವಿತ್ರ ರೋಮನ್ ಚಕ್ರವರ್ತಿಯ ಶಾಶ್ವತ ನಿಯಂತ್ರಣಕ್ಕೆ ಬಂದಿತು.

ಕ್ರಿ.ಶ. ೧೫೪೦ರಲ್ಲಿ ಚಕ್ರವರ್ತಿ ೫ನೇ ಚಾರ್ಲ್ಸ್ ಹದಿನೇಳು ಪ್ರಾಂತ್ಯಗಳ ವೈಯಕ್ತಿಕ ಒಕ್ಕೂಟವನ್ನು ವಿಸ್ತರಿಸಿದನು. ಎಂಭತ್ತು ವರ್ಷಗಳ ಯುಧ್ಧ (೧೫೬೮-೧೬೪೮) ಉತ್ತರ ಯುನೈಟೆಡ್ ಪ್ರಾಂತ್ಯಗಳನ್ನಾಗಿ ವಿಂಗಡಿಸಿತು. ಫೆಡರೇಟೆಡ್ ನೆದರ್‌ ಲ್ಯಾಂಡ್ಸ್, ರಾಯಲ್ ನೆದರ್‌ ಲ್ಯಾಂಡ್ಸ್, ಸ್ಪ್ಯಾನಿಷ್ ನೆದರ್‌ ಲ್ಯಾಂಡ್ಸ್, ಆಸ್ಟ್ರಿಯನ್ ನೆದರ್‌ ಲ್ಯಾಂಡ್ಸ್ ಗಳಾಗಿ ಆಧುನಿಕ ಬೆಲ್ಜಿಯಂನ ಹೆಚ್ಚಿನ ಭಾಗಗಳೇ ಬೆಲ್ಜಿಯಂನ ಪ್ರದೇಶಗಳಾಗಿ ಸೇರಿವೆ. ಒಂಬತ್ತು ವರ್ಷಗಳ ಯುದ್ಧ (೧೬೮೮-೯೭) ಸ್ಪ್ಯಾನಿಷ್ ಉತ್ತರಾಧಿಕಾರದ ಯುದ್ಧಗಳಿಂದ ಇದು ದೀರ್ಘಕಾಲದ ಯುದ್ಧಭೂಮಿಯಾಗಿತ್ತು. (೧೭೦೧-೧೪) ಮತ್ತು ವಾರ್ ಆಫ್ ದಿ ಆಸ್ಟ್ರಿಯನ್ ಉತ್ತರಾಧಿಕಾರ (೧೭೪೦-೪೮) ಪ್ರೆಂಚ್ ಕ್ರಾಂತಿಕಾರಿ ಯುದ್ಧಗಳ (೧೭೯೪) ನಂತರ ಹ್ಯಾಬ್ಸ್‌ ಬರ್ಗ್ ಆಳ್ವಿಕೆಯಲ್ಲಿ ಎಂದಿಗೂ ಹೆಸರಿಸದ ಪ್ರದೇಶಗಳಾದ ಪ್ರಿನ್-ಬಿಷಪ್ರಿಕ್ ಆಫ್ ಲೀಜ್ ಸೇರಿದಂತೆ ಫ್ರೆಂಚ್ ಪ್ರಥಮ ಗಣರಾಜ್ಯವು ಸ್ವಾಧೀನಪಡಿಸಿಕೊಂಡು ಆಸ್ಟ್ರಿಯನ್ ಆಡಳಿತವನ್ನು ಕೊನೆಗೊಳಿಸಿತು. ನೆಪೋಲಿಯನ್ ಅವನತಿಯ ನಂತರ ೧೮೪೪ರಲ್ಲಿ ಮೊದಲ ಫ್ರೆಂಚ್ ಸಾಮ್ರಾಜ್ಯದ ವಿಭಜನೆಯಲ್ಲಿ ನೆದರ್‌ ಲ್ಯಾಂಡ್ಸ್ ಯುನೈಟೆಡ್ ಕಿಂಗ್‌ಡಂ ಆಗಿ ಕಡಿಮೆ ರಾಜ್ಯಗಳ ಪುನರ್ ಏಕೀಕರಣವಾಯಿತು.

ಕ್ರಿ.ಶ. ೧೮೩೦ರಲ್ಲಿ ಬೆಲ್ಜಿಯಂ ಕ್ರಾಂತಿಯು ತಟಸ್ಥ ಸ್ವತಂತ್ರ ಬೆಲ್ಜಿಯಂನಲ್ಲಿ ತಾತ್ಕಾಲಿಕ ಸರ್ಕಾರ ಮತ್ತು ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಗೆ ಕಾರಣವಾಯಿತು. ಜುಲೈ ೨೧, ೧೮೩೧ರಂದು ಲಿಯೋಪೋಲ್ಡ್ ರಾಜನಾದನು. ಈ ದಿನವನ್ನು ರಾಷ್ಟ್ರೀಯ ದಿನವೆಂದು ಆಚರಿಸಲಾಗುತ್ತದೆ. ಬೆಲ್ಜಿಯಂ ಸಾಂವಿಧಾನಿಕ ರಾಜಪ್ರಭುತ್ವ ಮತ್ತು ಸಂಸದೀಯ ಪ್ರಜಾಪ್ರಭುತ್ವ ದೇಶವಾಗಿದೆ. ನೆಪೋಲಿಯನ್ ಸಂಹಿತೆಯ ಆಧಾರದ ಮೇಲೆ ಲೈಸಿಸ್ಟ್ ಸಂವಿಧಾನವನ್ನು ಹೊಂದಿದೆ. ೧೮೯೩ರ ಸಾಮಾನ್ಯ ಮುಷ್ಕರದ ನಂತರ ಸಾರ್ವತ್ರಿಕ ಮತದಾನದ ಹಕ್ಕನ್ನು ಪರಿಚಯಿಸಿತು. ೧೮೮೫ರ ಬರ್ಲಿನ್ ಸಮ್ಮೇಳನವು ಕಾಂಗೋಮುಕ್ತ ರಾಜ್ಯದ ನಿಯಂತ್ರಣವನ್ನು ೨ನೇ ಕಿಂಗ್ ಲಿಯೋಪೋಲ್ಡ್‌ ನ ಖಾಸಗಿ ಸ್ವಾಧೀನಕ್ಕೆ ಬಿಟ್ಟಿತು. ಲಿಯೋಪೋಲ್ಡ್ ಅವಧಿಯಲ್ಲಿ ಸುಮಾರು ೧೦ ಮಿಲಿಯನ್ ಜನರು ಕೊಲ್ಲಲ್ಪಟ್ಟರು. ೧೯೦೮ರಲ್ಲಿ ಈ ಆಕ್ರೋಶವು ಬೆಲ್ಜಿಯಂ ರಾಜ್ಯವನ್ನು ವಸಾಹತು ಸರ್ಕಾರದ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಪ್ರಚೋದಿಸಿತು. ಇದನ್ನು ಬೆಲ್ಜಿಯಂ ಕಾಂಗೊ ಎಂದು ಕರೆಯಲಾಗುತ್ತದೆ. ಮೊದಲನೇ ಮಹಾಯುದ್ಧದ ಕಾಲದಲ್ಲಿ ಜರ್ಮನಿ ಮಿತಿಮೀರಿತು. ಯುದ್ಧದ ಪ್ರಾರಂಭದ ತಿಂಗಳುಗಳನ್ನು ಬೆಲ್ಜಿಯಂನ ಅತ್ಯಾಚಾರ ಎಂದು ಕರೆಯಲಾಗುತ್ತಿತ್ತು. ಯುದ್ಧದ ಸಮಯದಲ್ಲಿ ಬೆಲ್ಜಿಯಂ ಜರ್ಮನಿಯ ವಸಾಹತುಗಳಾದ ರುವಾಂಡ, ಬುರುಂಡಿಯ ಮೇಲೆ ಹಿಡಿತ ಸಾಧಿಸಿತು. ೧೯೨೪ರಲ್ಲಿ ರಾಷ್ಟ್ರಗಳ ಸಂಘ ಬೆಲ್ಜಿಯಂಗೆ ಈ ವಸಾಹತುಗಳನ್ನು ನೋಡಿಕೊಳ್ಳಲು ಆದೇಶಿಸಿತು. ಮತ್ತೆ ೧೯೪೦ರಲ್ಲಿ ಜರ್ಮನ್ ಪಡೆಗಳು ಬೆಲ್ಜಿಯಂಅನ್ನು ಆಕ್ರಮಿಸಿದವು. ಈ ಸಮಯದಲ್ಲಿ ನಡೆದ ಹತ್ಯಾಕಾಂಡದಲ್ಲಿ ೪೦,೬೯೦ ಯೆಹೂದಿಗಳು ಕೊಲ್ಲಲ್ಪಟ್ಟರು. ೧೯೪೫ರ ಫೆಬ್ರವರಿಯಲ್ಲಿ ಮತ್ತೆ ಬೆಲ್ಜಿಯಂ ಸ್ವತಂತ್ರಗೊಂಡಿತು. ೧೯೬೦ರಲ್ಲಿ ಕಾಂಗೋ ಬಿಕ್ಕಟ್ಟಿನ ಸಂದರ್ಭದಲ್ಲಿ ಬೆಲ್ಜಿಯಂ ಕಾಂಗೊವಿಗೆ ಸ್ವಾತಂತ್ರ್ಯ ನೀಡಿತು. ನಂತರ ರುವಾಂಡ, ಬುರುಂಡಿ ದೇಶಗಳೂ ಸ್ವಾತಂತ್ರ್ಯವನ್ನು ಪಡೆದುಕೊಂಡವು.

Categories
asia

ಆಸ್ಟ್ರಿಯಾ

ಆಸ್ಟ್ರಿಯಾ ಮಧ್ಯಯೂರೋಪಿನಲ್ಲಿರುವ ಒಂದು ಸಣ್ಣ ದೇಶವಾದರೂ ಹಿಂದೆ ಕೆಲಕಾಲ ದೊಡ್ಡ ಸಾಮ್ರಾಜ್ಯವಾಗಿತ್ತು. ವಿಯನ್ನಾ ರಾಜಧಾನಿ ಅನೇಕ ಅಂತಾರಾಷ್ಟ್ರೀಯ ಒಪ್ಪಂದಗಳಿಗೆ ಸಾಕ್ಷಿಯಾಗಿದೆ. ಆಸ್ಟ್ರಿಯಾದ ಉತ್ತರಕ್ಕೆ ಜರ್ಮನಿ ಮತ್ತು ಚೆಕ್‌ ಗಣರಾಜ್ಯ, ಪೂರ್ವದಲ್ಲಿ ಸ್ಲೊವಾಕಿಯ ಮತ್ತು ಹಂಗೇರಿ, ದಕ್ಷಿಣದಲ್ಲಿ ಸ್ಲೊವಾಕಿಯ ಮತ್ತು ಇಟಲಿ ಹಾಗೂ ಪಶ್ಚಿಮದಲ್ಲಿ ಸ್ವಿಟ್ಜರ್‌ಲ್ಯಾಂಡ್ ಮತ್ತು ಲಿಚೈಸ್ಟೈನ್ ದೇಶಗಳಿವೆ. ಇದರ ರಾಜಧಾನಿ ದನುಬೆ ನದಿಯ ತೀರದಲ್ಲಿರುವ ವಿಯನ್ನಾ ನಗರ. ಸಂಯುಕ್ತ ಸಂಸದೀಯ ಗಣರಾಜ್ಯವನ್ನು ಹೊಂದಿರುವ ಆಸ್ಟ್ರಿಯಾ ದೇಶವು ೪೮೦0 ೧೨’ ಉತ್ತರ ಅಕ್ಷಾಂಶ ಮತ್ತು ೧೬೦0 ೨೧’ ಪೂರ್ವ ರೇಖಾಂಶಗಳ ನಡುವೆ ಹಬ್ಬಿದೆ. ಜರ್ಮನ್ ಭಾಷೆ ಪ್ರಮುಖವಾದರೆ ಸ್ಥಳೀಯವಾಗಿ ಮಾತನಾಡುವ ಸ್ಲೊವೆನ್, ಕ್ರೊಯೇಷಿಯನ್ ಮತ್ತು ಹಂಗೇರಿಯನ್ ಭಾಷೆಗಳು ಆಡಳಿತ ಭಾಷೆಗಳಾಗಿವೆ. ಜರ್ಮನಿ ಭಾಷೆ ಮಾತನಾಡುವವರ ಸಂಖ್ಯೆ ಶೇ. ೯೯% ರಷ್ಟಿದೆ. ೮೩,೮೭೨ ಚ.ಕಿ.ಮೀ ವಿಸ್ತಾರ ಹೊಂದಿದ್ದು ೨೦೧೭ರ ಜನಗಣತಿಯಂತೆ ೮,೩೧೬,೪೮೭ ಜನಸಂಖ್ಯೆ ಹೊಂದಿದೆ. ದೇಶದ ಸಾಕ್ಷರತೆ ಶೇ. ೯೮% ಇದ್ದು ೨೬ನೇ ಅಕ್ಟೋಬರ್ ೧೯೫೫ ರಿಂದ ರಾಷ್ಟ್ರೀಯ ದಿನವನ್ನು ಆಚರಿಸುತ್ತಾರೆ.

ಆಸ್ಟ್ರೀಯಾ ಒಂದು ಪ್ರಮುಖ ಸೇವಾವಲಯವನ್ನು ಹೊಂದಿರುವ, ಹೆಚ್ಚು ಅಭಿವೃದ್ಧಿ ಹೊಂದಿದ, ಕೈಗಾರಿಕೀಕರಣಗೊಂಡ ದೇಶವಾಗಿದೆ. ಸಾವಯವ ಕೃಷಿಯಲ್ಲಿ ಶೇ. ೨೨%ರಷ್ಟು ಪಾಲನ್ನು ಹೊಂದಿದೆ. ಆಸ್ಟ್ರಿಯಾದ ಆರ್ಥಿಕತೆಯು ‘ಸಣ್ಣ ಆದರೆ ಸುಂದರ’ದಿಂದ ನಿರೂಪಿಸಲ್ಪಟ್ಟಿದೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ೧೪ನೇ ಸ್ಥಾನದಲ್ಲಿದೆ. ಯೂರೋ ನಾಣ್ಯವನ್ನು ಬಳಸುತ್ತಿದೆ. ರೋಮನ್ ಕ್ಯಾಥೋಲಿಕ್ ಪ್ರಮುಖ ಧರ್ಮವಾಗಿದ್ದು, ಅದನ್ನು ಶೇ. ೯೦% ರಷ್ಟು ಪಾಲಿಸುತ್ತಾರೆ. ಉಳಿದವರು ಪ್ರಾಟೆಸ್ಟೆಂಟರು, ಯೆಹೂದ್ಯರು, ಮತ್ತು ಗ್ರೀಕರು. ಜುಲೈ ೨೭ ರಂದು ಸ್ವಾತಂತ್ರ್ಯ ದಿನ ಆಚರಿಸುತ್ತಾರೆ. ದೇಶದ ಜಿ.ಡಿ.ಪಿ ೫೧,೯೩೬. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ೧೭ನೇ ಸ್ಥಾನದಲ್ಲಿದೆ.

ಆಸ್ಟ್ರಿಯಾ ಪರ್ವತಮಯ ದೇಶವಾಗಿದ್ದು ಪೂರ್ವ ಆಲ್ಪ್ಸ್ ನ ಬಹುಭಾಗ ಆಸ್ಟ್ರಿಯಾದಲ್ಲಿದೆ. ೧೩೦ ಪೂರ್ವ ರೇಖಾಂಶ ಪೂರ್ವಭಾಗದಲ್ಲಿ ಎತ್ತರ ಕಡಿಮೆಯಾಗುತ್ತಾ ಬಂದು ಡ್ಯಾನ್ಯೂಬ್ ಕಣಿವೆಯನ್ನು ಸೇರಿಕೊಳ್ಳುತ್ತದೆ. ಆಲ್ಪ್ಸ್ ನಲ್ಲಿರುವ ಗ್ರೊಸ್ಸಿಲಾಕ್ನರ ಶಿಖರ (೩೭೯೭ ಮೀ.) ಎತ್ತರವಿದೆ. ಮುಖ್ಯ ನದಿಯಾದ ಡ್ಯಾನ್ಯೂಬ್ ಒಳನಾಡು ಸಾರಿಗೆ ವ್ಯವಸ್ಥೆಯನ್ನು ಹೊಂದಿದ್ದು ೩೫೦ ಕಿ.ಮೀ. ಹಡಗಿನಲ್ಲಿ ಸಂಚರಿಸಬಹುದು. ಇನ್ನೆ, ಡ್ರಾವ, ಮತ್ತು ಮೂರ್ ಇತರ ಪ್ರಮುಖ ನದಿಗಳು. ಅನೇಕ ಸರೋವರಗಳು ವಿಯನ್ನಾ ಮೈದಾನ, ಪರ್ವತ ತಪ್ಪಲುಗಳು ಸಸ್ಯವರ್ಗದಿಂದ ಕೂಡಿದೆ. ಇಲ್ಲಿ ಸುಣ್ಣದಕಲ್ಲು ಹೇರಳವಾಗಿದೆ. ಮೆಡಿಟರೇನಿಯನ್ ಮತ್ತು ಖಂಡಾಂತರ ವಾಯುಗುಣ ಎರಡೂ ಇವೆ. ಆಸ್ಟ್ರಿಯಾದ ಪೂರ್ವದ ಇಳಿಜಾರುಗಳಲ್ಲಿ ಅಗಲವಾದ ಎಲೆಗಳುಳ್ಳ ಮರಗಳು ಅತಿ ಎತ್ತರಕ್ಕೆ ಬೆಳೆಯುತ್ತವೆ. ಉತ್ತರದ ಪ್ರದೇಶಗಳಲ್ಲಿ ಮೊನಚಾದ ಹಾಗೂ ಆಲ್ಪೈನ್ ಹುಲ್ಲುಗಾವಲಿನ ಸಸ್ಯವರ್ಗವಿದೆ. ಬೀಚ್, ಬರ್ಚ್ ಮತ್ತು ಓಕ್ ಮುಂತಾದ ಎಲೆ ಉದುರುವ ಮರಗಳು, ಅನೇಕ ಬಗೆಯ ವನ್ಯಮೃಗಗಳು ಕಾಡುಜಿಂಕೆ, ಚಿಗರಿ, ಮೊಲ, ಗ್ರೌಸ್, ಕೌಜುಗ, ಫೆಸೆಂಟ್ ಹಕ್ಕಿಗಳು ಹೇರಳವಾಗಿವೆ. ದೇಶದ ಅರ್ಧಭಾಗದಷ್ಟು ಭೂಮಿ ವ್ಯವಸಾಯಕ್ಕೆ ಯೋಗ್ಯವಾಗಿದೆ. ಪಶುಪಾಲನೆ ಮುಖ್ಯ ಕಸುಬು. ಮೆಕ್ಕೆಜೋಳ, ಸಿಹಿಗೆಡ್ಡೆಗಳು, ಗೋಧಿ, ರೈ, ಓಟ್ಸ್, ಬಾರ್ಲಿ, ಆಲೂಗಡ್ಡೆ, ಪ್ರಮುಖವಾಗಿ ಬೆಳೆಯುತ್ತಾರೆ. ಹಾಲು ಹಾಲಿನ ಉತ್ಪನ್ನಗಳನ್ನು ರಪ್ತು ಮಾಡುತ್ತಾರೆ.

ಪುರಾತನ ಶಿಲಾಯುಗದಿಂದಲೂ ಇಲ್ಲಿ ಜನರು ವಾಸಿಸುತ್ತಿದ್ದರೆಂಬುದಕ್ಕೆ ಕುರುಹುಗಳು ಪತ್ತೆಯಾಗಿವೆ. ಕ್ರಿ.ಪೂ. ೧೪ರಲ್ಲಿ ರೋಮನ್ನರು ಡ್ಯಾನ್ಯೂಬ್ ನದಿಗೆ ದಕ್ಷಿಣಕ್ಕಿರುವ ಭಾಗವನ್ನೆಲ್ಲ ಸ್ವಾಧೀನಪಡಿಸಿಕೊಂಡು ನಾರಿಕಂ ಮತ್ತು ಪೆನೋನಿಯ ಎಂಬ ಎರಡು ಪ್ರಾಂತ್ಯಗಳನ್ನು ನಿರ್ಮಿಸಿದರು. ಪೆನೋನಿಯದಲ್ಲಿದ್ದ ವಿಂಡೊಬೋನ ಎಂಬ ನಗರವೇ ಇಂದಿನ ವಿಯನ್ನಾ. ಡ್ಯಾನ್ಯೂಬ್ ನದಿಯ ಉತ್ತರದಲ್ಲಿರುವ ಪ್ರಾಂತ್ಯವನ್ನು ಮಾರ್ಕೊಮ್ಯಾನಿ ಎಂಬ ಜನರು ಆಕ್ರಮಿಸಿದರು. ಮುಂದೆ ವ್ಯಾಂಡರು, ಗಾಥರು, ಹೂಣರು, ಲಂಬಾರ್ಡರು, ಆವಾರರು ಆಕ್ರಮಿಸಿಕೊಂಡರು. ಕ್ರಿ.ಶ. ೮ನೇ ಶತಮಾನದ ಅಂತ್ಯ ಭಾಗದಲ್ಲಿ ಸಾಮ್ರಾಟ ಚಾರ್ಲ್ಸ್ ಮಹಾಶಯ ಆವಾರರನ್ನು ಸೋಲಿಸಿ ಈಸ್ಟ್ ಮಾರ್ಕ್ ಎಂಬ ಪ್ರಾಂತ್ಯವನ್ನು ನಿರ್ಮಿಸಿದ. ಆಸ್ಟ್ರಿಯಾ ಸಾಮ್ರಾಜ್ಯದ ಇತಿಹಾಸ ಇಲ್ಲಿಂದ ಆರಂಭವಾಗುತ್ತದೆ. ಮುಂದೆ ಹಂಗೇರಿಯನ್ನರು ದಾಳಿ ಮಾಡಿದರು. ಆದರೆ ಕ್ರಿ.ಶ. ೯೫೫ರಲ್ಲಿ ಆಟೊ ಮಹಾಶಯ ಅವರನ್ನು ಆಗ್ಸ್‌ಬರ್ಗ್ ಕದನದಲ್ಲಿ ಸೋಲಿಸಿ ಈಸ್ಟ್ ಮಾರ್ಕ್ ಪ್ರಾಂತ್ಯವನ್ನು ಪುನರುಜ್ಜೀವನಗೊಳಿಸಿದ. ಕ್ರಿ.ಶ. ೯೭೩ರಲ್ಲಿ ಬೇಬನ್ಬರ್ಗ್ ವಂಶದ ಲಿಯೋಪಾಲ್ಡ್ ಎಂಬುವವನಿಗೆ ಮಾರ್ಗ್ರೆವ್ ಅಥವಾ ಗಡಿನಾಡಿನ ಸೈನಿಕ ಮಂಡಲಾಧಿಪತಿ ಎಂಬ ಬಿರುದನ್ನು ಕೊಟ್ಟ.

ಹ್ಯಾಪ್ಸ್ ಬರ್ಗ್ ರಾಜಮನೆತನದ ಆಳ್ವಿಕೆಯಲ್ಲಿ ಆಸ್ಟ್ರಿಯಾದ ಭವ್ಯ ಇತಿಹಾಸ ಆರಂಭವಾಯಿತು. ಮೊದಲ ದೊರೆ ಆಲ್ಬರ್ಟ್ ಆಸ್ಟ್ರಿಯಾದ ಡ್ಯೂಕನಾದ (ಕ್ರಿ.ಶ. ೧೨೮೨-೧೩೧೮) ಕಾರಿಂಥಿಯ, ಟೈರಾಲ್ ಮುಂತಾದ ನೆರೆಯ ರಾಜ್ಯಗಳು ಆಸ್ಟ್ರಿಯಾಕ್ಕೆ ಸೇರಿದವು. ೫ನೇ ಆಲ್ಬರ್ಟ್ ಸಿಜಸ್ಮಂಡ್ ಚಕ್ರವರ್ತಿಯ ಮಗಳನ್ನು ಮದುವೆಯಾಗಿ ಹಂಗೇರಿ, ಬೊಹಿಮಿಯಾ ರಾಜ್ಯಗಳಿಗೂ ದೊರೆಯಾದ. ೨ನೇ ಆಲ್ಬರ್ಟ್ ಎಂಬ ಹೆಸರಿನಿಂದ ಪವಿತ್ರ ರೋಮ್ ಸಾಮ್ರಾಜ್ಯದ ಚಕ್ರವರ್ತಿಯಾದ. ಮುಂದೆ ಆಸ್ಟ್ರಿಯಾದ ಹ್ಯಾಪ್ಸ್ ಬರ್ಗ್ ರಾಜರು ಕ್ರಿ.ಶ. ೧೭೪೦-೪೫ರವರೆಗಿನ ಕಾಲವನ್ನು ಹೊರತುಪಡಿಸಿ ಕ್ರಿ.ಶ. ೧೮೦೬ ರವರೆಗೂ ಪವಿತ್ರ ರೋಮ್ ಸಾಮ್ರಾಟರಾಗಿದ್ದರು. ಹೀಗೆ ಆಸ್ಟ್ರಿಯಾದ ಚರಿತ್ರೆ ಆ ಸಾಮ್ರಾಜ್ಯದ ಇತಿಹಾಸದೊಂದಿಗೆ ಹೆಣೆದುಕೊಂಡಿದೆ. ಪವಿತ್ರ ರೋಮ್ ಸಾಮ್ರಾಜ್ಯದ ಕಾಲಾವಧಿಯಲ್ಲಿ ಮುಸ್ಲಿಮರು ಮೇಲಿಂದ ಮೇಲೆ ಆಸ್ಟ್ರಿಯಾದ ಮೇಲೆ ನುಗ್ಗುತ್ತಿದ್ದರು, ಕ್ರಿ.ಶ ೧೬೮೯ರಲ್ಲಿ ವಿಯನ್ನಾಗೆ ಮುತ್ತಿಗೆ ಹಾಕಿ ಪರಾಭವಗೊಂಡ ನಂತರ ಅವರ ಹಾವಳಿ ನಿಂತಿತು.

೧೭ನೇ ಶತಮಾನದಲ್ಲಿ ಆಸ್ಟ್ರಿಯಾ ಮತೀಯ ಮತ್ತು ರಾಜಕೀಯ ಗೊಂದಲಕ್ಕೆ ಸಿಲುಕಿ ತನ್ನ ಪ್ರಾಮುಖ್ಯತೆ ಕಳೆದುಕೊಳ್ಳುತ್ತಾ  ಬಂತು. ೧೬೧೮-೪೮ ರವರೆಗೆ ನಡೆದ ೩೦ ವರ್ಷಗಳ ಯುದ್ಧದಲ್ಲಿ ಯೂರೋಪಿನ ಪ್ರಮುಖ ರಾಷ್ಟ್ರಗಳೆಲ್ಲ ಭಾಗವಹಿಸಿದ್ದವು. ಪವಿತ್ರ ರೋಮ್ ಸಾಮ್ರಾಜ್ಯ ಹೆಸರಿಗೆ ಮಾತ್ರ ಸಾಮಾನ್ಯವಾಗಿ ಉಳಿಯಿತು. ಇದರಿಂದ ಆಸ್ಟ್ರಿಯಾದ ಪ್ರಾಮುಖ್ಯತೆ ಕುಂದಿತು. ಈ ಸಮಯದಲ್ಲಿ ಪ್ರಷ್ಯಾ ರಾಜ್ಯ ತಲೆಯೆತ್ತಿ ಬಹುಬೇಗ ಬೆಳೆಯಿತು. ಫೆಡರಿಕ್ ಮಹಾಶಯ ಆಳ್ವಿಕೆಯಲ್ಲಿ ಪ್ರಷ್ಯಾ ಅಭಿವೃದ್ಧಿ ಹೊಂದಿ ಆಸ್ಟ್ರಿಯಾದ ಪ್ರಬಲ ಪ್ರತಿಸ್ಪರ್ಧಿಯಾಗಿ ನಿಂತಿತು. ೧೮ನೇ ಶತಮಾನದಲ್ಲಿ ಯೂರೋಪಿನಲ್ಲಿ ಫ್ರಾನ್ಸ್ ಅನ್ನು ಬಿಟ್ಟರೆ ಆಸ್ಟ್ರಿಯಾವೇ ಅತ್ಯಂತ ಪ್ರಮುಖ ರಾಜ್ಯವಾಗಿತ್ತು. ಅದು ಟರ್ಕರು, ಪ್ರಾಟಸ್ಟೆಂಟರ ವಿರುದ್ಧ ಮತ್ತು ಉದಾರನೀತಿಯ ವಿರುದ್ಧ ಪ್ರಮುಖ ರಾಷ್ಟ್ರವಾಗಿತ್ತು. ವರ್ಸೆಲ್ಸ್ ರಾಜಸ್ಥಾನದ ವೈಭವವನ್ನು ವಿಯನ್ನಾದ ರಾಜಸ್ಥಾನದಲ್ಲಿ ಕಾಣಬಹುದಾಗಿತ್ತು. ಸುಪ್ರಸಿದ್ಧ ಮಹಿಳಾ ಆಡಳಿತಗಾರ್ತಿ ಮರಿಯಾ ಥೆರೆಸಾ (ಕ್ರಿ.ಶ. ೧೭೪೫-೮೦) ಮತ್ತು ಆಕೆಯ ಮಗ ೨ನೇ ಜೋಸೆಫ್ ಬುದ್ಧಿವಂತ ನಿರಂಕುಶ ಪ್ರಭುಗಳಾಗಿದ್ದರು.

ನೆಪೋಲಿಯನ್ ಬೊನಾಪಾರ್ಟೆಯಿಂದ ಆಸ್ಟರ್ಲಿಟ್ಜ್ ಕದನದಲ್ಲಿ ತೀವ್ರ ಸೋಲನ್ನನುಭವಿಸಿತು. ನೆಪೋಲಿಯನ್ ಬೊನಾಪಾರ್ಟೆಯ ಅವನತಿ ನಂತರ ಆಸ್ಟ್ರಿಯಾದ ರಾಜ ಮೆಟರ್ನಿಕ್ ತನ್ನ ಯುಗ ಆರಂಭಿಸಿದ. ಆದರೆ ೧೮೪೮ರಲ್ಲಿ ಯೂರೋಪಿನಾದ್ಯಂತ ನಡೆದ ಕ್ರಾಂತಿಯ ಪರಿಣಾಮವಾಗಿ ಆಸ್ಟ್ರಿಯಾ ಕ್ಷೀಣಿಸಿತು. ಮೆಟರ್ನಿಕ್ ದೇಶಾಂತರ ಹೋಗಬೇಕಾಯಿತು. ಆದರೂ ದೊರೆ ಫ್ರಾನ್ಸಿಸ್ ಜೋಸೆಫ್ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡು ನಿರಂಕುಶ ಪ್ರಭುವಾಗಿ ಆಳಿದ. ೧೮೫೯ರಲ್ಲಿ ಇಟಲಿಯೊಂದಿಗೆ ನಡೆದ ಯುದ್ಧದಲ್ಲಿ ಆಸ್ಟ್ರಿಯಾ ಲಂಬಾರ್ಡಿಯವನ್ನು ಕಳೆದುಕೊಂಡಿತು. ೧೮೬೬ರಲ್ಲಿ ಪ್ರಷ್ಯಾದೊಂದಿಗೆ ಸಪ್ತವಾರಗಳ ಯುದ್ಧದಿಂದ ವೆನೆಷಿಯಾ ಕಳೆದುಕೊಳ್ಳಬೇಕಾಯಿತು. ೧೮೬೭ರಲ್ಲಿ ಆಸ್ಟ್ರಿಯಾಕ್ಕೆ ಸೇರಿದ ರಾಜ್ಯಗಳ ಪುನರ್ವ್ಯವಸ್ಥೆ ನಡೆದು ಆಸ್ಟ್ರಿಯಾ-ಹಂಗೇರಿ ರಾಜ್ಯ ಸ್ಥಾಪನೆಯಾಯಿತು. ಬಾಲ್ಕನ್ ಪ್ರದೇಶದ ಕ್ರಿಶ್ಚಿಯನ್ನರ ಹಿತ ಕಾಪಾಡಲು ಹೋಗಿ ಆಸ್ಟ್ರಿಯಾ ರಷ್ಯಾದ ವಿರೋಧ ಕಟ್ಟಿಕೊಂಡಿತು. ೧೯೧೪ ಜೂನ್ ೨೮ರಂದು ಆಸ್ಟ್ರಿಯಾದ ಚಕ್ರವರ್ತಿ ಅರ್ಚ್‌ಡ್ಯೂಕ್ ಫ್ರಾನ್ಸಿಸ್ ಫರ್ಡಿನಾಂಡ್ ಮತ್ತ ಆತನ ಪತ್ನಿ ಬೊಸ್ನಿಯಾದ ರಾಜಧಾನಿ ಸರಾಜಿವೋ ನಗರದ ಬೀದಿಯಲ್ಲಿ ಸರ್ಬಿಯಾದ ಪ್ರಜೆಯ ಕೊಲೆ ಮಾಡಿದ್ದು ಮೊದಲನೇ ಮಹಾಯುದ್ಧಕ್ಕೆ ತಕ್ಷಣದ ಕಾರಣವಾಯಿತು. ಒಂದನೇ ಮಹಾಯುದ್ಧದ ನಂತರ ಹಂಗೇರಿ ಪ್ರತ್ಯೇಕವಾಯಿತು. ಹ್ಯಾಪ್ಸ್ ಬರ್ಗ್ ಮನೆತನದ ಆಳ್ವಿಕೆಯೂ ಅಂತ್ಯವಾಯಿತು. ೧೯೩೮ರಲ್ಲಿ ನಾಜಿ ಪಕ್ಷದ ಹಿಟ್ಲರ್ ಆಸ್ಟ್ರಿಯಾವನ್ನು ಆಕ್ರಮಿಸಿ ಜರ್ಮನಿಯೊಂದಿಗೆ ವಿಲೀನ ಮಾಡಿಕೊಂಡ. ಎರಡನೇ ಮಹಾಯುದ್ಧ ಮುಗಿದ ನಂತರ ೧೯೪೫ರಲ್ಲಿ ಪ್ರಜಾ ಸರ್ಕಾರ ಸ್ಥಾಪನೆಯಾಯಿತು.

Categories
asia

ಅಲ್ಬೇನಿಯಾ

ಆಲ್ಬೇನಿಯಾ ಯೂರೋಪ್ ಖಂಡದ ಆಗ್ನೇಯ ಭಾಗದಲ್ಲಿರುವ ದೇಶ. ಮೆಡಿಟರೇನಿಯನ್ ಸಂಘವನ್ನು ಹುಟ್ಟುಹಾಕಿದ ರಾಷ್ಟ್ರಗಳಲ್ಲಿ ಒಂದಾಗಿದ್ದು, ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯನ್ನು ಹೊಂದಿದೆ. ಮಧ್ಯಯುಗದ ಗ್ರೀಕ್ ಭಾಷೆಯಲ್ಲಿ ಈ ದೇಶವನ್ನು ಅಲ್ಬಾನಿಯಾ, ಅಲ್ಬನೀಶೀಯ, ಅರ್ಬನಿಶೀಯ ಎಂದು ಹೇಳಲಾಗಿದೆ. ಆಲ್ಬೇನಿಯನ್ನರು ತಮ್ಮನ್ನು ಶಿಕಿಪ್ಟಾರ್ ಎಂದು ಕರೆದುಕೊಳ್ಳುತ್ತಾರೆ. ಅಂದರೆ ‘ಹದ್ದುಗಳ ಪುತ್ರ’ ಎಂದು ಅರ್ಥೈಸಲಾಗುತ್ತದೆ. ಆದರೂ ಇವರು ಶಿಕಿಪ್ ಭಾಷೆಗೆ (ಆಲ್ಬೇನಿಯಾ) ಸಂಬಂಧಿಸಿದವರು ಮತ್ತು ತಮ್ಮ ದೇಶವನ್ನು ಶಿಕಿಪರಿಯಾ ಎಂದು ಉಲ್ಲೇಖಿಸಿದ್ದಾರೆ. ಮುಂದುವರಿದು ತಮ್ಮನ್ನು ಪ್ರಾಚೀನ ಇಲಿಯರಿಯನ್ನರ ವಂಶಸ್ಥರು ಎಂದು ಪರಿಗಣಿಸುತ್ತಾರೆ. ಆಲ್ಬೇನಿಯಾ ದೇಶವು ಏಡ್ರಿಯಾಟಿಕ್ ಸಮುದ್ರದ ದ್ವಾರವಾದ ಒಟ್ರಾಂಟೊ ಜಲಸಂಧಿಯಲ್ಲಿ ಬಾಲ್ಕನ್ ಪರ್ಯಾಯ ದ್ವೀಪದ ಪಶ್ಚಿಮ ಭಾಗದಲ್ಲಿದೆ. ರಾಜಧಾನಿ ತಿರಾನಾ (ಟಿರಾನಾ). ಅಧಿಕೃತ ಹೆಸರು ಆಲ್ಬೇನಿಯ ಗಣರಾಜ್ಯ. ಸಂಸತ್ತಿನ ಹೆಸರು ಕುವೆಂಡಿ. ಪೂರ್ವಕ್ಕೆ ಉತ್ತರ ಮ್ಯಾಸಿಡೋನಿಯಾ (೧೮೧.ಕಿ.ಮೀ), ಪಶ್ಚಿಮಕ್ಕೆ ಏಡ್ರಿಯಾಟಿಕ್ ಸಮುದ್ರ ಮತ್ತು ಏಜಿಯನ್ ಸಮುದ್ರಗಳು (೩೬೨.ಕಿ.ಮೀ), ಉತ್ತರಕ್ಕೆ ಮಾಂಟೆನೀಗ್ರೋ (೧೮೬.ಕಿ.ಮೀ) ಮತ್ತು ಕೊಸಾವೊ (೧೧೨.ಕಿ.ಮೀ), ದಕ್ಷಿಣಕ್ಕೆ ಗ್ರೀಸ್ (೨೧೨.ಕಿ.ಮೀ), ನಡುವೆ ೪೧೦0 ೨೦’ ಉತ್ತರ ಅಕ್ಷಾಂಶ ಮತ್ತು ೧೯೦0 ೪೮’ ಪೂರ್ವ ರೇಖಾಂಶಗಳ ಮಧ್ಯೆ ೨೮,೭೪೮ ಚ.ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ಮಜಾ ಇ ಕೊರಬಿಟ್ (೨೭೬೪ ಮೀ) ಅತೀ ಎತ್ತರದ ಪ್ರದೇಶವಾಗಿದೆ.

ಒಟ್ರಾಂಟೊ ಜಲಸಂಧಿಯ ಉದ್ದಕ್ಕೂ ಕಾರ್ಯತಂತ್ರದ ಸ್ಥಳ ಆಡ್ರಿಯಾಟಿಕ್ ಸಮುದ್ರ ಮತ್ತು ಮೆಡಿಟರೇನಿಯನ್ ಸಮುದ್ರಕ್ಕೆ ಸಂಪರ್ಕಿಸುತ್ತದೆ. ೨೦೧೯ರ ಜನಗಣತಿ ಪ್ರಕಾರ ದೇಶದ ಜನಸಂಖ್ಯೆ ೨,೮೬೧,೦೦೦. ಆಲ್ಬೇನಿಯನ್ ಪ್ರಮುಖ ಭಾಷೆಯಾಗಿದೆ. ರಾಷ್ಟ್ರಗೀತೆ – ಬಾವುಟದ ಸುತ್ತ ಒಂದಾಗೋಣ. ಒಟ್ಟೋವನ್ ಸಾಮ್ರಾಜ್ಯದಿಂದ ಸ್ವಾತಂತ್ರ್ಯ ಪಡೆದ ದಿನ ನವೆಂಬರ್ ೨೮, ೧೯೧೨. ದೇಶದ ನಾಣ್ಯ ಲೆಕ್. ೨೦೧೭ರಲ್ಲಿ ದೇಶದ ತಲಾದಾಯ ೬,೨೫೯ ರೂಪಾಯಿ ಇತ್ತು. ೨೦೧೭ರ ಸಾಕ್ಷರತೆ ಪ್ರಮಾಣ: ಪುರುಷರು – ಶೇ. ೯೮.೪% ಮತ್ತು ಸ್ತ್ರೀಯರು – ಶೇ. ೯೬.೯%. ಜನಾಂಗೀಯವಾಗಿ ಆಲ್ಬೇನಿಯನ್ ಶೇ. ೮೨.೬% ರಷ್ಟಿದ್ದು ಆಲ್ಬೇನಿಯನ್ ಭಾಷೆಯನ್ನು ಮಾತನಾಡುವವರು ಶೇ. ೯೮.೮% ಇದ್ದಾರೆ. ಧಾರ್ಮಿಕವಾಗಿ ಮುಸ್ಲಿಂ ಶೇ. ೫೬.೭%, ರೋಮನ್ ಕ್ಯಾಥೊಲಿಕ್ ಶೇ. ೧೦%, ಸಂಪ್ರದಾಯವಾದಿಗಳು ಶೇ. ೬.೮% ರಷ್ಟಿದ್ದಾರೆ. ಆದರೆ ೧೯೬೭ರಲ್ಲಿ ಎಲ್ಲಾ ಮಸೀದಿಗಳು ಮತ್ತು ಚರ್ಚ್‌ಗಳನ್ನು ಮುಚ್ಚಲಾಯಿತು ಮತ್ತು ಧಾರ್ಮಿಕ ಆಚರಣೆಯನ್ನು ನಿಷೇಧಿಸಲಾಯಿತು. ಮತ್ತೆ ೧೯೯೦ರಲ್ಲಿ ಖಾಸಗಿ ಧಾರ್ಮಿಕ ಆಚರಣೆಗೆ ಅನುಮತಿ ನೀಡಲಾಯಿತು. ೨೦೧೭ರ ಆರ್ಥಿಕ ವರ್ಷದ ಗಣತಿ ಪ್ರಕಾರ ಕೃಷಿ ಪಾತ್ರ ಶೇ. ೨೧.೭%, ಉದ್ಯಮ ಶೇ. ೨೪.೨% ಮತ್ತು ಸೇವಾಕ್ಷೇತ್ರ ಶೇ. ೫೪.೧%ರಷ್ಟು ಅವಲಂಬಿಸಿದ್ದಾರೆ. ಪ್ರವಾಸೋದ್ಯಮವು ರಾಷ್ಟ್ರೀಯ ಆದಾಯದ ಪ್ರಮುಖ ಮೂಲವಾಗಿದೆ. ಪ್ರಸ್ತುತ ದೇಶ ಎದುರಿಸುತ್ತಿರುವ ಪ್ರಮುಖ ಸಮಸ್ಯೆ ಎಂದರೆ ಮಾದಕ ವಸ್ತುಗಳ ಕಳ್ಳ ವ್ಯಾಪಾರ.

ಆಲ್ಬೇನಿಯಾದ ಹೆಚ್ಚಿನ ಭಾಗವು ಪರ್ವತಗಳು ಮತ್ತು ಬೆಟ್ಟಗಳಿಂದ ಕೂಡಿದೆ. ಆಲ್ಬೇನಿಯನ್ ಆಲ್ಪ್ಸ್, ಈಶಾನ್ಯದಲ್ಲಿ ಶಾರ್ ಪರ್ವತಗಳು; ಮಧ್ಯದಲ್ಲಿ ಸ್ಕಂದರ್ ಬೇಗ್ ಪರ್ವತಗಳು, ಕೊಬರ್ ಪರ್ವತಗಳು; ನೈರುತ್ಯದಲ್ಲಿ ಸೆರೌನಿಯನ್ ಪರ್ವತಗಳು ಮತ್ತು ಅತಿದೊಡ್ಡ ಸರೋವರ ಶ್ಕೋಡರ್ ಆಲ್ಬೇನಿಯನ್ ಆಲ್ಪ್ಸ್ ಮತ್ತು ಆಡ್ರಿಯಾಟಿಕ್ ಸಮುದ್ರದಿಂದ ಆವೃತವಾಗಿದೆ. ಆಲ್ಬೇನಿಯಾ ಒಂದು ಸಣ್ಣ ದೇಶವಾಗಿದ್ದರೂ ಜೀವವೈವಿಧ್ಯತೆ, ಸೂಕ್ಷ್ಮ ಪರಿಸರ ವ್ಯವಸ್ಥೆ ಮತ್ತು ಜೀವ ಆವಾಸಸ್ಥಾನಗಳಿಗೆ ಹೆಸರಾಗಿದೆ. ಇದಕ್ಕಾಗಿ ೧೪ ರಾಷ್ಟ್ರೀಯ ಉದ್ಯಾನವನಗಳೂ ಸೇರಿದಂತೆ ೭೯೯ ಸುರಕ್ಷಿತ ಪ್ರದೇಶಗಳನ್ನು ಮೀಸಲಿರಿಸಿದ್ದಾರೆ. ಇದರಲ್ಲಿ ತೆಮೋರಿ ಪರ್ವತ ರಾಷ್ಟ್ರೀಯ ಉದ್ಯಾನವನ, ಒಂದು ಸಾಗರ ಉದ್ಯಾನವನ, ಎಂಟು ಪುರಾತತ್ವ ಉದ್ಯಾನವನಗಳು, ೭೫೦ ನೈಸರ್ಗಿಕ ಸ್ಮಾರಕಗಳು ಸೇರಿವೆ. ಎಂಟು ಗಮನಾರ್ಹ ನದಿಗಳು ಇದ್ದು ಡ್ರೀನ್ ನದಿ (೨೮೫ ಕಿ.ಮೀ.) ದೇಶದಲ್ಲಿ ಹರಿಯುತ್ತದೆ. ಇದರ ಜಲಾನಯನ ಪ್ರದೇಶವು ಯೂರೋಪಿನ ಅತ್ಯಂತ ಜೀವವೈವಿಧ್ಯ ಸ್ಥಳಗಳಲ್ಲಿ ಒಂದಾಗಿದೆ. ಶ್ಕೋಡರ್, ಓಹ್ರಿಡ್ ಮತ್ತು ಪ್ರೆಸ್ವಾ ಸರೋವರಗಳನ್ನು ಒಳಗೊಂಡಿದೆ. ವೊಜೋಸಾ, ಫ್ಯಾನ್, ಇಶೋಮ್, ಎರ್ಜೆನ್, ಮ್ಯಾಟ್, ಸೆಮನ್ ಮತ್ತು ಶುಕುಂಬಿನ್ ಇತರ ನದಿಗಳು. ಶ್ಕೋಡರ್ ಸರೋವರ ಹಾಗೂ ೨೫೦ಕ್ಕೂ ಹೆಚ್ಚಿನ ಸರೋವರಗಳನ್ನು ಹೊಂದಿರುವ ದೇಶವು ಓಹ್ರಿಡ್ ಸರೋವರ ಮ್ಯಾಸಿಡೋನಿಯಾದೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ದೇಶದ ಅತಿದೊಡ್ಡ ಲಗೂನ್ ಕರವಾಸ್ತಾ ಇದೆ.

ಆಲ್ಬೇನಿಯಾದ ಇತಿಹಾಸವು ಯೂರೋಪಿನ ಇತಿಹಾಸದ ಒಂದು ಭಾಗವಾಗಿದೆ. ಇತಿಹಾಸಪೂರ್ವ ಕಾಲದಿಂದಲೂ ಮಾನವ ಬದುಕಿರುವ ಕುರುಹುಗಳು ಆಲ್ಬೇನಿಯಾದ ಪೆಲ್ಲುಂಬಾಸ್ ಗುಹೆಯಲ್ಲಿ ಕಂಡುಬಂದಿದೆ. ಈ ಕುರುಹು ಮಧ್ಯ ಶಿಲಾಯುಗ ಮತ್ತು ನೂತನ ಶಿಲಾಯುಗಗಳಿಗೆ ಸೇರಿದವು. ಹಲವಾರು ಟ್ಯೂಮಲಸ್ ಸಮಾಧಿಗಳು, ಕಂಚಿನ ಯುಗದ ಕಲಾಕೃತಿಗಳು ಮಧ್ಯ ಮತ್ತು ದಕ್ಷಿಣ ಆಲ್ಬೇನಿಯಾದಲ್ಲಿ ಕಂಡುಬಂದಿವೆ. ಕ್ರಿ.ಪೂ. ೧೬೦೦ರ ಸುಮಾರಿಗೆ ಲೈಸೀನಿಯನ್ ನಾಗರಿಕತೆ ಹುಟ್ಟಿಕೊಂಡಿತು.

ಕಂಚಿನ ಯುಗದ ಕೊನೆಯಲ್ಲಿ ಮತ್ತು ಆರಂಭಿಕ ಕಬ್ಬಿಣಯುಗದಲ್ಲಿ ಆಧುನಿಕ ಆಲ್ಬೇನಿಯಾದ ಪ್ರಾಂತ್ಯಗಳಲ್ಲಿ ಹಲವಾರು ಬುಡಕಟ್ಟುಗಳ ಚಲನೆಗಳು ಸಂಭವಿಸಿದವು. ಇವುಗಳನ್ನು ಇಲಿಯಾರಿಯನ್ ಬುಡಕಟ್ಟು ಜನಾಂಗಗಳೆಂದು ಕರೆಯಲಾಗಿದೆ. ಅವುಗಳೆಂದರೆ ಅರ್ಡಿಯೈ, ಅಲ್ಟಾನೊಯ್, ಅಮಾಂಟಿನಿ, ಎನ್ಚೆಲ್, ಟಾಲಾಂಟಿ, ಮತ್ತು ಇತರರು. ಕ್ರಿ.ಪೂ. ೭ನೇ ಶತಮಾನದಿಂದ ಇಲಿಯರಿನ್ ಕರಾವಳಿಯಲ್ಲಿ ಗ್ರೀಕ್ ವಸಾಹತುಗಳನ್ನು ಸ್ಥಾಪಿಸಲಾಯಿತು. ಅವುಗಳೆಂದರೆ ಅಪೊಲೊನಿಯಾ (ವ್ಲೋರೆ), ಎಪಿಡಮ್ನೋಸ್ (ಡುರೆನ್), ಮತ್ತು ಲಿಸ್ಸಸ್. ಕ್ರಿ.ಪೂ. ೪ನೇ ಶತಮಾನದಲ್ಲಿ ಇಲಿಯಾರಿಯನ್ ರಾಜ ಬಾರ್ಡೈಲಿಸ್ ಹಲವಾರು ಇಲಿಯಾರಿಯನ್ ಬುಡಕಟ್ಟು ಜನಾಂಗಗಳನ್ನು ಒಂದುಗೂಡಿಸಿದನು. ಆಗ್ನೇಯದಲ್ಲಿ ಮ್ಯಾಸಿಡಾನ್‌ನೊಂದಿಗೆ ಸಂಘರ್ಷಣೆಗಳಲ್ಲಿ ತೊಡಗಿದನು. ಬಾರ್ಡೈಲಿಸ್ ನಂತರ ಬಂದ ಗ್ರಾಬೋಸ್, ಎರಡನೇ ಬಾರ್ಡಿಲಿ, ಕ್ಲಿಟಸ್‌ ದಿ ಇಲಿಯರಿಯನ್, ಅಲೆಗ್ಸಾಂಡರ್ ನಿಂದ ಸೋಲನ್ನು ಅನುಭವಿಸಿದರು. ಕ್ರಿ.ಪೂ. ೩ನೇ ಶತಮಾನದಲ್ಲಿ ಗ್ರೀಕರ ವಸಾಹತುಗಳನ್ನು ರೋಮನ್ನರು ವಷಪಡಿಸಿಕೊಂಡರು. ರೋಮನ್ ಪ್ರಾಂತ್ಯಗಳಾದ ಡಾಲ್ಮೇಷಿಯಾ, ಮ್ಯಾಸಿಡೋನಿಯಾ ಮತ್ತು ಮೆಯೆಸಿಯಾ ಸುಪೀರಿಯನ್ ಭಾಗವಾಯಿತು.

ಭಾಗಶಃ ತಮ್ಮ ಪರ್ವತಭೂಮಿಯ ಒರಟಾದ ಭೂಪ್ರದೇಶದ ಕಾರಣದಿಂದಾಗಿ ಐತಿಹಾಸಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಅಂಶಗಳ ಕಾರಣ ಆಲ್ಬೇನಿಯಾ, ಬಹುಕಾಲದಿಂದ ವಿವಿಧ ರಾಷ್ಟ್ರಗಳು ಮತ್ತು ವಿದೇಶಗಳಲ್ಲಿ ವಿಜಯವನ್ನು ಬಯಸುವ ಸಾಮ್ರಾಜ್ಯಗಳಿಗೆ ಸೇತುವೆಯಾಗಿ ಕಾರ್ಯನಿರ್ವಹಿಸಿದೆ. ೪ನೇ ಶತಮಾನದ ಅಂತ್ಯದಿಂದ ಇಲಿಯಾರಿಯನ್ನರ ಬೈಜಾಂಟೈನ್ ಸಾಮ್ರಾಜ್ಯವು ಆಳಿತು. ವಿಸಿಗೋಥ್ಸ್, ಹನ್ಸ್, ಬಲ್ಗಾರ‍್ಸ್ ಮತ್ತು ಸ್ಲಾವ್ಸ್ ಶತಮಾನಗಳ ಆಕ್ರಮಣವನ್ನು ಅನುಭವಿಸಿದ ನಂತರ ಅಲ್ಬೇನಿಯನ್ನರನ್ನು ಅಂತಿಮವಾಗಿ ೧೫ನೇ ಶತಮಾನದಲ್ಲಿ ಆಟೋಮನ್ ಟರ್ಕರು ವಶಪಡಿಸಿಕೊಂಡರು. ಇದರಿಂದ ನಾಲ್ಕು ಶತಮಾನ ಪಾಶ್ಚಿಮಾತ್ಯ ನಾಗರಿಕತೆಯಿಂದ ದೂರ ಉಳಿದಿತ್ತು. ೧೯ನೇ ಶತಮಾನದ ಉತ್ತರಾರ್ಧದಲ್ಲಿ ದೇಶವು ಒಟ್ಟೊವನ್ (ಆಟೊಮನ್) ಟರ್ಕರ ಪ್ರಭಾವದಿಂದ ತಮ್ಮನ್ನು ತಾವೇ ತೆಗೆದುಹಾಕಲು ಪ್ರಾರಂಭಿಸಿದರು. ಮತ್ತೆ ಪಾಶ್ಚಿಮಾತ್ಯರೊಂದಿಗೆ ಹಳೆಯ ಸಂಬಂಧಗಳು ಮತ್ತು ಸಾಮಾನ್ಯ ಹಿತಾಸಕ್ತಿಗಳನ್ನು ಮರು ಶೋಧಿಸಲು ಆರಂಭಿಸಿದರು. ಕ್ರಿ.ಶ. ೧೯೧೨ರಲ್ಲಿ ಆಲ್ಬೇನಿಯಾ ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿತು. ೧೯೧೩ರಲ್ಲಿ ಯೂರೋಪಿನ ಪ್ರಬಲ ರಾಷ್ಟ್ರಗಳಾದ ಆಸ್ಟ್ರಿಯಾ, ಬ್ರಿಟನ್, ಪ್ರಾನ್ಸ್, ಜರ್ಮನಿ, ಇಟಲಿ ರಷ್ಯಾ ದೇಶಗಳು ತಂತಮ್ಮ ಗಡಿಗಳನ್ನು ಗುರುತಿಸಿದರು. ಇದರಿಂದ ತನ್ನ ಅರ್ಧದಷ್ಟು ಪ್ರದೇಶ ಮತ್ತು ಜನರು ನೆರೆಯ ರಾಜ್ಯಗಳ ಪಾಲಾಯಿತು. ವಿಶ್ವ ಯುದ್ಧಗಳ ನಡುವಿನಲ್ಲಿ ರಾಜಪ್ರಭುತ್ವವಾಗಿ ಆಳಲ್ಪಟ್ಟ ಆಲ್ಬೇನಿಯಾ ಎರಡನೇ ಮಹಾಯುದ್ಧದ ಹಿಂಸಾಚಾರದಿಂದ ನಲುಗಿತು. ೧೯೩೯ರಲ್ಲಿ ಇಟಲಿ ವಶಪಡಿಸಿಕೊಂಡರೆ ೧೯೪೩ರಲ್ಲಿ ಜರ್ಮನಿ ಆಕ್ರಮಿಸಿತು. ಕಮ್ಯುನಿಸ್ಟ್ ಆಡಳಿತಗಾರರು ೧೯೪೪ರಲ್ಲಿ ದೇಶವನ್ನು ಸ್ವಾಧೀನಪಡಿಸಿಕೊಂಡು ತಮ್ಮ ಸಾರ್ವಭೌಮತ್ವವನ್ನು ಉಗ್ರವಾಗಿ ರಕ್ಷಿಸಿದರು. ೧೯೮೯ರಿಂದ ಕಮ್ಯುನಿಸ್ಟ್ ಪ್ರಭುತ್ವಗಳ ಕುಸಿತದೊಂದಿಗೆ ಆಲ್ಬೇನಿಯಾದಲ್ಲಿ ಹೊಸ ಸಾಮಾಜಿಕ ಶಕ್ತಿಗಳು ಮತ್ತು ಪ್ರಜಾಪ್ರಭುತ್ವ ರಾಜಕೀಯ ಪಕ್ಷಗಳು ಹುಟ್ಟಿಕೊಂಡವು.

Categories
Europe

ಸ್ವಿಟ್ಜರ್‌ಲ್ಯಾಂಡ್

ಸ್ವಿಟ್ಜರ್‌ಲ್ಯಾಂಡ್

ಸ್ವಿಟ್ಜರ್‌ಲ್ಯಾಂಡ್ ಆಧುನಿಕ ವಿಶ್ವದಲ್ಲಿಯೇ ಅತ್ಯಧಿಕ ಬಂಡವಾಳಶಾಹಿ ಆರ್ಥಿಕತೆಯನ್ನು ಹೊಂದಿರುವ ರಾಷ್ಟ್ರ. ಸ್ವಿಸ್ ಗಡಿಯಾರಗಳು, ನೆಸ್ಲೆ ಆಹಾರ ಉತ್ಪನ್ನಗಳು, ಹಾಲಿನ ಚಾಕ್ಲೇಟ್ ತಯಾರಿಕೆ ಮತ್ತು ಸ್ವಿಸ್ ಬ್ಯಾಂಕಿ ನಿಂದ ಜಗತ್ಪ್ರಸಿದ್ಧವಾಗಿದೆ. ದೇಶ ದೀರ್ಘಕಾಲಮಾನದ ಅಲಿಪ್ತ ನೀತಿಯ ಇತಿಹಾಸವನ್ನು ಹೊಂದಿದೆ. ಕ್ರಿ.ಶ. ೧೮೧೫ ರಿಂದ ಇಲ್ಲಿಯವರೆಗೆ ಯಾವುದೇ ಅಂತಾರಾಷ್ಟ್ರೀಯ ಯುದ್ಧಗಳಲ್ಲಿ ಭಾಗವಹಿಸಿಲ್ಲ. ಸೇವಾ ಮನೋಭಾವನೆಯ ಅಂತಾರಾಷ್ಟ್ರೀಯ ರೆಡ್‌ಕ್ರಾಸ್ ಸಂಸ್ಥೆ (ಕ್ರಿ.ಶ. ೧೮೬೩), ಐರೋಪ್ಯ ಪ್ರಸರಣಾ ಒಕ್ಕೂಟಗಳ ಪ್ರಧಾನ ಕಛೇರಿ, ಲೀಗ್ ಆಫ್ ನೇಷನ್ಸ್ (ಕ್ರಿ.ಶ. ೧೯೨೦-೧೯೪೫ – ಇಂದು ಅಸ್ತಿತ್ವದಲ್ಲಿಲ್ಲ), ವಿಶ್ವ ಆರೋಗ್ಯ ಸಂಸ್ಥೆ, ಅಂತಾರಾಷ್ಟ್ರೀಯ ದೂರ ಸಂಪರ್ಕ ಒಕ್ಕೂಟ, ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ, ಅಂತಾರಾಷ್ಟ್ರೀಯ ಫುಟ್ಬಾಲ್ ಒಕ್ಕೂಟ, ಹೀಗೆ ಸುಮಾರು ೨೦೦ ಅಂತಾರಾಷ್ಟ್ರೀಯ ಸಂಸ್ಥೆಗಳು ಹಾಗೂ ಅದರ ಅಂಗಸ೦ಸ್ಥೆಗಳು ಸ್ವಿಟ್ಜರ್‌ಲ್ಯಾಂಡ್‌ನಲ್ಲಿವೆ.

ಸ್ವಿಟ್ಜರ್‌ಲ್ಯಾ೦ಡ್ ಕ್ಯಾಂಟನ್‌ಗಳೆ೦ದು ಕರೆಯಲಾಗುವ ೨೬ ರಾಜ್ಯಗಳನ್ನು ಹೊಂದಿರುವ ಸಂಯುಕ್ತ ಗಣರಾಜ್ಯವಾಗಿದೆ. ಬರ್ನ್ ರಾಜ್ಯಾಡಳಿತದ ಕೇಂದ್ರಸ್ಥಾನ ಹೊಂದಿದೆ. ಬರ್ನ್, ಜಿನೀವಾ, ಜ್ಯೂರಿಚ್, ಲಾಸನ್ನೆ, ಬಸೆಲ್ ಆರ್ಥಿಕ ಮತ್ತು ಜಾಗತಿಕ ಮಹಾನಗರಗಳು. ಈ ದೇಶದ ಕನಿಷ್ಟ ಜಿ.ಡಿ.ಪಿ ೬೭,೩೮೪ ಫ್ರಾಂಕ್. ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರ ಮತ್ತು ವಿಶ್ವದಲ್ಲೇ ಉತ್ತಮ ಜೀವನಮಟ್ಟವನ್ನು ಹೊಂದಿರುವ ಜ್ಯೂರಿಚ್ ಮತ್ತು ಜಿನೀವಾ ಈ ದೇಶದ ಕಾಣಿಕೆ. ಆಲ್ಫ್ಸ್ ಪರ್ವತ ಪ್ರದೇಶದಿಂದ ಆವೃತವಾದ ಭೂ ಪ್ರದೇಶ. ದೇಶದ ಉತ್ತರಕ್ಕೆ ಜರ್ಮನಿ, ಪಶ್ಚಿಮದಲ್ಲಿ ಫ್ರ‍್ರಾನ್ಸ್, ದಕ್ಷಿಣದಲ್ಲಿ ಇಟಲಿ ಮತ್ತು ಪೂರ್ವದಲ್ಲಿ ಲಿಯಶ್ಚಟೈನೈ, ಆಸ್ಟ್ರಿಯಾಗಳು ಗಡಿಗಳಾಗಿವೆ. ‘ಒನ್ ಫಾರ್ ಆಲ್; ಆಲ್ ಫಾರ್ ಒನ್’ ಧ್ಯೇಯವಾದರೆ, ‘ಸ್ವಿಸ್ ಪ್ಯಾಲಮ್’ ರಾಷ್ಟ್ರಗೀತೆಯಾಗಿದೆ. ಸಾಂಪ್ರದಾಯಿಕವಾಗಿ ಸ್ವಿಟ್ಜರ್‌ಲ್ಯಾಂಡ್ ಸ್ಥಾಪನೆಯು ಕ್ರಿ.ಶ. ೧೨೯೧ ಆಗಸ್ಟ್ ೧ರಲ್ಲಿ ಆಗಿದ್ದರಿಂದ ಈ ದಿನವೇ ಸ್ವಿಸ್ ರಾಷ್ಟ್ರೀಯ ದಿನ. ಜರ್ಮನ್, ಪ್ರೆಂಚ್, ಇಟಾಲಿಯನ್ ಮತ್ತು ರೋಮನ್ಸ್ ಹೀಗೆ ನಾಲ್ಕು ಆಡಳಿತ ಭಾಷೆಗಳನ್ನು ಹೊಂದಿದೆ. ಸ್ವಿಸ್ ಫ್ರಾಂಕ್ ದೇಶದ ನಾಣ್ಯ. ಅಧಿಕೃತವಾಗಿ ಯಾವುದೇ ಧರ್ಮ ಇಲ್ಲಿಲ್ಲ. ಆದರೂ ಕ್ಯಾಥೊಲಿಕ್ ಚರ್ಚು ಮತ್ತು ಸ್ವಿಸ್‌ನ ಸುಧಾರಿತ ಚರ್ಚುಗಳು ಇಲ್ಲಿವೆ. ಶೇ. ೪೧.೮% ಕ್ಯಾಥೊಲಿಕ್ ಶೇ. ೩೫.೩% ಪ್ರಾಟೆಸ್ಟೆಂಟ್‌ರಿದ್ದಾರೆ. ಉಲ್ರಿಚ್ ಜ್ವಿಂಗ್ಲಿ (೧೪೮೪-೧೫೩೧) ಮಾರ್ಟಿನ್ ಲೂಥರನ ಪ್ರಭಾವಕ್ಕೆ ಒಳಗಾಗಿ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಪ್ರಾಟೆಸ್ಟೆಂಟ್ ಪಂಥವನ್ನು ಜನಪ್ರಿಯಗೊಳಿಸಿದ.

ಆಲ್ಫ್ಸ್ ಪರ್ವತ ಶ್ರೇಣಿಯ ಉತ್ತರ ಮತ್ತು ದಕ್ಷಿಣ ಬದಿಗಳಲ್ಲಿರುವ ಸ್ವಿಟ್ಜರ್‌ಲ್ಯಾಂಡ್ ಕೇವಲ ೪೧,೨೮೫ ಚ.ಕಿ.ಮೀ. ವಿಸ್ತಾರವನ್ನು ಹೊಂದಿದೆ. ಸೀಮಿತ ವ್ಯಾಪ್ತಿಯಲ್ಲಿ ವೈವಿಧ್ಯಮಯ ಮಾದರಿಯ ವಿಶಾಲ ದೃಶ್ಯ ಮತ್ತು ಹವಾಗುಣವನ್ನು ಹೊಂದಿದೆ. ೨೦೧೫ರ ಪ್ರಕಾರ ೮೩,೨೭,೧೨೬ ಜನಸಂಖ್ಯೆಯನ್ನು ಹೊಂದಿದ್ದು, ೪೬೦ ೫೭, ಉತ್ತರ ಅಕ್ಷಾಂಶ ಮತ್ತು ೭೦ ೨೭ ಪೂರ್ವ ರೇಖಾಂಶಗಳ ನಡುವೆ ದೇಶ ತನ್ನ ವ್ಯಾಪ್ತಿಯನ್ನು ಹೊಂದಿದೆ. ದಕ್ಷಿಣದಲ್ಲಿ ಸ್ವಿಸ್ ಆಲ್ಫ್ಸ್, ಸ್ವಿಸ್ ಪ್ರಸ್ಥಭೂಮಿ ಅಥವಾ ಮಧ್ಯನಾಡು, ಉತ್ತರದಲ್ಲಿ ಜ್ಯೂರಾ ಪರ್ವತಗಳು ರಾಷ್ಟçದ ಶೇ. ೬೦%ರಷ್ಟು ಭೂ ಪ್ರದೇಶವನ್ನು ಆಲ್ಫ್ಸ್ ಪರ್ವತ ಪ್ರದೇಶವೇ ವಿಸ್ತೀರ್ಣವನ್ನು ಆವರಿಸಿದೆ. ಸ್ವಿಸ್ ಆಲ್ಪ್ನ ಎತ್ತರ ಶೃಂಗಗಳಲ್ಲಿ ಡುಪೊರ್‌ಸ್ವಿಟ್ಸ್ (೪೬೩೪ ಮೀಟರ್) ಅತಿ ಎತ್ತರವಾಗಿದೆ. ಹಿಮನದಿ ಮತ್ತು ಜಲಪಾತಗಳನ್ನು ಹೊಂದಿರುವ ಅಸಂಖ್ಯ ಕಣಿವೆಗಳೂ ಇವೆ. ರೈನ್, ರೋನ್, ಇನ್‌ಅರೆ ಮತ್ತು ಟಿಕಿನೊ ನದಿಗಳ ಮೂಲ ತೊರೆಗಳು ಅತಿದೊಡ್ಡ ಸ್ವಿಸ್ ಸರೋವರಗಳಾದ ಜನೀವಾ ಸರೋವರ (ಲಾಕ್ ಲೆಮನ್) ಜ್ಯೂರಿಚ್ ಸರೋವರ, ನ್ಯೂಚಾಟೆಲ್ ಸರೋವರ ಮತ್ತು ಕಾನ್‌ಸ್ಟಾನ್ಸ್ಗಳಿಗೆ ಸೇರುತ್ತವೆ.

ವಲಾಯಿಸ್‌ನಲ್ಲಿರುವ ಮ್ಯಾಟ್ಜರ್‌ಹಾರ್ನ್ (೪೪೭೮.ಮೀ), ಇಟಲಿಯ ಗಡಿಯಲ್ಲಿರುವ ಪೆನ್ನೈನ್ ಆಲ್ಫ್ಸ್ ಡುಪೋರ್‌ಸ್ವಿಟ್ಸ್ (೪೬೩೪.ಮೀ), ಡಾಮ್ (೪೫೪೫.ಮೀ), ವೇಯಿಸ್‌ಹಾರ್ನ್ (೪೫೦೬.ಮೀ) ಉಳಿದ ಕೆಲವು ಪ್ರಮುಖ ಪರ್ವತಗಳು. ಹಿಮನದಿಗಳಿರುವ ವಾಟರ್‌ಬ್ರುನೆನ್ ಕಣಿವೆಯ ಮೇಲಿರುವ ಬರ್ನ್ ಪ್ರಾಂತ್ಯದ ಆಲ್ಫ್ಸ್ ಭಾಗವು ೭೨ ಜಲಪಾತಗಳನ್ನು ಹೊಂದಿದ್ದು ಜುಂಗ್‌ಫ್ರಾ೦ವ್ (೪೧೫೮.ಮೀ) ಮತ್ತು ಐಗರ್ ಆಗ್ನೇಯದಲ್ಲಿ ಗ್ರಾವುಬುಂಡೆನ್ ಕ್ಯಾಂಟನ್‌ನ, ಸೆಂಟ್ ಮೊರಿಟ್ಜ್ ಪ್ರದೇಶದಲ್ಲಿರುವ ಎಂಗಾಡಿನ್ ಕಣಿವೆಗಳಿವೆ. ಸಮಶೀತೋಷ್ಣ ಹವಾಗುಣ ಹೊಂದಿದ್ದ ಪರ್ವತದ ತುದಿಗಳಲ್ಲಿನ ವಿಪರೀತ ಶೈತ್ಯದಿಂದ (ಶೀತ) ಹಿಡಿದು ದಕ್ಷಿಣದ ತುದಿ ಅಹ್ಲಾದಕರ ವಾತಾವರಣವನ್ನು ಹೊಂದಿದೆ. ಅರಣ್ಯಗಳೆಲ್ಲ ಹಿಮಾವೃತ ಮತ್ತು ಹುಲ್ಲುಗಾವಲುಗಳಿಂದ ತುಂಬಿದೆ.

ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಮಾನವ ಅಸ್ತಿತ್ವದ ಪ್ರಾಚೀನ ಕುರುಹುಗಳು ೧,೫೦,೦೦೦ ವರ್ಷಗಳ ಹಿಂದಿನವು. ಗ್ಯಾಕ್‌ಲಿಂಗೇನ್ ಎಂಬಲ್ಲಿ ಪತ್ತೆಯಾದ ಕೃಷಿ ನೆಲೆಯೇ ಅತಿ ಹಳೆಯ ಪರಿಚಿತ ನೆಲೆಯಾಗಿದ್ದು ಇದು ಸುಮಾರು ಕ್ರಿ.ಪೂ. ೫೩೦೦ ವರ್ಷಗಳಷ್ಟು ಹಳೆಯದಾಗಿದೆ. ಈ ಪ್ರದೇಶದ ಅತಿ ಹಳೆಯ ಸಂಸ್ಕೃತಿ ಎಂದರೆ ಹಾಲ್‌ಸ್ವಟ್ ಮತ್ತು ಲಾಟಿನೆ ಸಂಸ್ಕೃತಿಗಳು. ಲಾಟಿನೆ ಸಂಸ್ಕೃತಿಯು ಕಬ್ಬಿಣಯುಗದ ಉತ್ತರಭಾಗದಲ್ಲಿ ಸುಮಾರು ಕ್ರಿ.ಪೂ. ೪೫೦ರ ಕಾಲದಲ್ಲಿ ಗ್ರೀಕ್ ಮತ್ತು ಎಟ್ರುಸ್ಕ್ಯಾನ್  ನಾಗರಿಕತೆಗಳ ಪ್ರಭಾವದಲ್ಲಿ ಬೆಳೆದು ಏಳಿಗೆ ಹೊಂದಿತು. ಕ್ರಿ.ಶ. ೪ನೇ ಶತಮಾನದಿಂದ ಆಧುನಿಕ ಕಾಲದ ಸ್ವಿಟ್ಜರ್‌ಲ್ಯಾಂಡ್‌ನ ಪಶ್ಚಿಮ ಪ್ರದೇಶವು ಬರ್ಗಂಡಿಯನ್ ಅರಸರ ಸೀಮೆಗೆ ಒಳಪಟ್ಟಿತ್ತು. ಅಲೆಮಾನ್ನಿಗಳು ಸ್ವಿಸ್ ಪ್ರಸ್ಥಭೂಮಿಯಲ್ಲಿ ೫ನೇ ಶತಮಾನದಲ್ಲಿ ನೆಲೆಗೊಂಡರೆ ಆಲ್ಫ್ಸ್ ಕಣಿವೆಗಳಲ್ಲಿ ೮ನೇ ಶತಮಾನದಲ್ಲಿ ನೆಲೆಗೊಂಡು ಅಲೆಮಾನ್ನಿಯಾ ಪ್ರದೇಶವನ್ನು ರೂಪಿಸಿದರು. ಪ್ರಸ್ತುತ ಸ್ವಿಟ್ಜರ್‌ಲ್ಯಾಂಡ್‌ನ ಈಗಿನ ಪ್ರಾಂತ್ಯಗಳು ಮಧ್ಯ ಪ್ರಾನ್ಷಿಯಾ ಮತ್ತು ಪೂರ್ವ ಪ್ರಾನ್ಷಿಯಾಗಳಾಗಿ ವಿಭಜನೆಯಾದವು. ಕ್ರಿ.ಶ. ೧೦೦೦ರಲ್ಲಿ ಪವಿತ್ರ ರೋಮ್ ಸಾಮ್ರಾಜ್ಯ ಮರು ಏಕೀಕರಣಗೊಂಡಿತು. ಕ್ರಿ.ಶ. ೧೨೦೦ರ ಹೊತ್ತಿಗೆ ಸ್ವಿಸ್ ಪ್ರಸ್ಥಭೂಮಿಯು ಸೆವಾಯ್, ಝಹ್ರಿಂಗರ್, ಹಬ್ಸ್ಬರ್ಗ್ ಮತ್ತು ಕಿಬರ್ಗ್ ಆಡಳಿತಗಳ ಸ್ವಾಮ್ಯಕ್ಕೆ ಒಳಪಟ್ಟಿತು. ಕ್ರಿ.ಶ. ೧೨೬೪ರಲ್ಲಿ ಹಬ್ಸ್ಬರ್ಗ್ ಚಕ್ರವರ್ತಿ ರುಡಾಲ್ಫ್ನ ನೇತೃತ್ವದಲ್ಲಿ ಪೂರ್ವ ಸ್ವಿಸ್ ಪ್ರಸ್ಥಭೂಮಿಯವರೆಗೆ ತನ್ನ ಎಲ್ಲೆಯನ್ನು ವಿಸ್ತರಿಸಿಕೊಂಡಿತು. ಕ್ರಿ.ಶ. ೧೩೫೩ರ ಹೊತ್ತಿಗೆ ಮೂರು ಮೂಲ ಕ್ಯಾಂಟನ್‌ಗಳು ಎಂದರೆ ಗ್ಲಾರಸ್, ಝಗ್ ಮತ್ತು ಲ್ಯೂಸರ್ನ್ಗಳು ಜ್ಯೂರಿಚ್ ಮತ್ತು ಬರ್ನ್ ನಗರ ರಾಜ್ಯಗಳೊಂದಿಗೆ ಸೇರಿ ಎಂಟು ರಾಜ್ಯಗಳು ರೂಪುಗೊಂಡು ೧೫ನೇ ಶತಮಾನದ ಕೊನೆಯವರೆಗೂ ಅಸ್ತಿತ್ವದಲ್ಲಿದ್ದ ಹಳೆಯ ಒಕ್ಕೂಟವು ಅಸ್ತಿತ್ವಕ್ಕೆ ಬಂದಿತು.

ಹಬ್ಸ್ಬರ್ಗ್ಗಳ ಬಂರ್ಗ೦ಡಿಯ ದಿಟ್ಟ ಚಾರ್ಲ್ ಮೇಲಿನ ವಿಜಯದಿಂದ (ಕ್ರಿ.ಶ. ೧೪೭೦) ಸ್ವಿಸ್ ಕೂಲಿ ಸಿಪಾಯಿಗಳ ಯಶಸ್ಸಿನ ನಂತರ ಜ್ಯೂರ ಮತ್ತು ಆಲ್ಫ್ಸ್ ಪ್ರದೇಶಗಳ ಮೇಲಿನ ನಿಯಂತ್ರಣ ಸಾಧ್ಯವಾಯಿತು. ಸ್ಟಾಬಿಯನ್ ಯುದ್ಧದಲ್ಲಿ ಚಕ್ರವರ್ತಿ ಮ್ಯಾಕ್ಸಿಮಿಲಿಯನ್‌ನ ಸ್ಟಾಬಿಯನ್ ಒಕ್ಕೂಟದ ಮೇಲಿನ ಸ್ವಿಸ್‌ವಿಜಯವು ಪವಿತ್ರ ರೋಮ್ ಸಾಮ್ರಾಜ್ಯದೊಳಗೆ ವಸ್ತುತಃ ಸ್ವಾತಂತ್ರ್ಯ ಗಳಿಸಲು ಕಾರಣವಾಯಿತು. ಕ್ರಿ.ಶ. ೧೫೧೫ರಲ್ಲಿ ಸ್ವಿಸ್ ಚರಿತ್ರೆಯ ಧೀರ ಯುಗದ ಮುಕ್ತಾಯಕ್ಕೆ ನಾಂದಿಹಾಡಿತು.

ಕ್ರಿ.ಶ. ೧೬೪೮ರಲ್ಲಿ ವೆಸ್ಟ್ಪಾಲಿಯಾ ಒಪ್ಪಂದದ ಅಂಗವಾಗಿ ಐರೋಪ್ಯ ರಾಷ್ಟ್ರಗಳು ಪವಿತ್ರ ರೋಮ್ ಸಾಮ್ರಾಜ್ಯದಿಂದ ಸ್ವಿಸ್ ಸ್ವತಂತ್ರತೆಗೆ ಮತ್ತು ಅದರ ಅಲಿಪ್ತನೀತಿಗೆ ಮಾನ್ಯತೆ ನೀಡಿದವು. ಕ್ರಿ.ಶ. ೧೭೯೮ರಲ್ಲಿ ನೆಪೋಲಿಯನ್ ಬೊನಾಪಾರ್ಟೆಯ ನಾಯಕತ್ವದ ಪ್ರೆಂಚ್ ಕ್ರಾಂತಿಯ ಸೇನೆಯು ಸ್ವಿಸ್ ವಶಪಡಿಸಿಕೊಂಡು ಏಕೀಕೃತ ಸಂವಿಧಾನವನ್ನು ಹೇರಿತು. ಹೆಲ್ವೆನಿಕ್ ಗಣರಾಜ್ಯದ ಹೆಸರಿನಲ್ಲಿ ಪ್ರೆಂಚರ ಪರ ಹೋರಾಡಲು ಸ್ವಿಸ್ ಒಪ್ಪಲಿಲ್ಲ. ಕ್ರಿ.ಶ. ೧೮೦೩ರಲ್ಲಿ ನೆಪೋಲಿಯನ್ ಸ್ವಿಸ್ ಸ್ವಾಯತ್ತತೆಯನ್ನು ಕಾಪಾಡಿಕೊಂಡು ೧೯ ಕ್ಯಾಂಟನ್‌ಗಳ ಒಕ್ಕೂಟವೊಂದನ್ನು ಪರಿಚಯಿಸಿದ. ಕ್ರಿ.ಶ. ೧೮೧೫ರಲ್ಲಿ ನಡೆದ ವಿಯನ್ನಾದ ಆಡಳಿತ ಸ್ವಿಸ್ ಸ್ವತಂತ್ರತೆಯನ್ನು ಮರು ಸ್ಥಾಪನೆಗೊಳಿಸಿತು. ಸ್ವಿಟ್ಜರ್‌ಲ್ಯಾಂಡ್ ಸಂಸತ್ತು ಎರಡು ಸಭೆಗಳನ್ನು ಹೊಂದಿರುವ ಸ್ವಿಸ್ ಒಕ್ಕೂಟ ಸರ್ಕಾರ. ಸ್ವಿಸ್‌ವೈನ್ ವಲಾಯಿಸ್, ವಾಡ್, ಜಿನೀವಾ ಮತ್ತು ಟಿಕಿನೋಗಳಲ್ಲಿ ಉತ್ಪಾದಿಸಲಾಗುತ್ತದೆ. ಟೆನ್ನಿಸ್ ತಾರೆ, ವಿಶ್ವದ ನಂ-೧ ಆಟಗಾರ ರೋಜರ್ ಫೆಡರಲ್ ಸ್ವಿಟ್ಜರ್‌ಲ್ಯಾಂಡ್‌ನ ಪ್ರತಿಬೆ. ಸ್ಕೀಯಿಂಗ್ ಹಿಮದಲ್ಲಿ ಜಾರುವ ಸ್ಪರ್ಧೆಗೆ ಅಂತಾರಾಷ್ಟ್ರೀಯ ಖ್ಯಾತಿ ಹೊಂದಿದೆ. ಚಳಿಗಾಲದಲ್ಲಿ ಸ್ಕೀ ರೆಸಾರ್ಟ್ ಸಂಸ್ಕೃತಿ ಮತ್ತು ಬೇಸಿಗೆಯಲ್ಲಿ ಹೈಕಿಂಗ್ ಸಂಸ್ಕೃತಿಯನ್ನು ರೂಡಿಸಿಕೊಂಡಿದ್ದಾರೆ.