ಅಡ್ಯನಡ್ಕ ಕೃಷ್ಣಭಟ್

Home/Birthday/ಅಡ್ಯನಡ್ಕ ಕೃಷ್ಣಭಟ್
Loading Events
This event has passed.

೧೫.೦೩.೧೯೩೮ ಸಮಾಜದಲ್ಲಿ ವಿಜ್ಞಾನದ ಬಗ್ಗೆ ಅರಿವು ಮೂಡಿಸಲು ವೈಜ್ಙಾನಿಕ ಮನೋಭಾವವನ್ನು ಬೆಳೆಸಿಕೊಳ್ಳಲು ವೈಜ್ಞಾನಿಕ ಬರಹಗಳ ಮೂಲಕ, ಸಂವಾದ ಉಪನ್ಯಾಸಗಳ ಮೂಲಕ ಜನಪ್ರಿಯಗೊಳಿಸುತ್ತಿರುವವರಲ್ಲಿ ಅತಿಮುಖ್ಯರೆನೆಸಿರುವ ಕೃಷ್ಣಭಟ್ಟರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ-ಕಾಸರಗೋಡು ಹಾದಿಯಲ್ಲಿ ವಿಟ್ಲದಿಂದ ಹದಿನೈದು ಕಿ.ಮೀ. ದೂರದಲ್ಲಿರುವ ಪ್ರಾಕೃತಿಕ ಸೌಂದರ್ಯದ ನಿಧಿಯಂತಿರುವ ಅಡ್ಯನಡ್ಕ ಎಂಬಲ್ಲಿ. ತಂದೆ ತಿಮ್ಮಣ್ಣ ಭಟ್, ತಾಯಿ ಲಕ್ಷ್ಮಿ ಅಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಅಡ್ಯನಡ್ಕ. ಈ ಶಾಲೆಯನ್ನು ಸ್ಥಾಪಿಸಿದವರೇ ಇವರ ತಂದೆಯವರಾದ ತಿಮ್ಮಣ್ಣ ಭಟ್ಟರು. ಇದೀಗ ಪದವಿಪೂರ್ವ ಕಾಲೇಜಿನವರೆಗೂ ಉನ್ನತಿ ಹೊಂದಿ ನೂರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನದ ಕೇಂದ್ರವಾಗಿದೆ. ಕೃಷ್ಣಭಟ್ಟರ ಪ್ರೌಢಶಾಲಾ ವಿದ್ಯಾಭ್ಯಾಸ ಪುತ್ತೂರಿನ ಬೋರ್ಡ ಹೈಸ್ಕೂಲು. ಎಂ.ಜಿ.ಎಂ. ಕಾಲೇಜಿನಲ್ಲಿ ಇಂಟರ್‌ಮೀಡಿಯಟ್. ನಂತರ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಿಂದ ಪಡೆದ ಬಿ.ಎಸ್.ಸಿ. ಆರ್ನಸ್ ಪದವಿ ಹಾಗೂ ಸ್ನಾತಕೋತ್ತರ ಪದವಿಗಳು. ಎಂ.ಜಿ.ಎಂ. ಕಾಲೇಜಿನಲ್ಲಿ ಇಂಟರ್‌ಮೀಡಿಯಟ್ ಓದುತ್ತಿದ್ದಾಗಿನಿಂದಲೇ ವಿಜ್ಞಾನ ಬರಹಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡಿದ್ದು ಕಾಲೇಜಿನ ಗ್ರಂಥ ಭಂಡಾರದಲ್ಲಿ ದೊರೆಯುತ್ತಿದ್ದ ಎಡಿಂಗ್‌ಟನ್ ಜೆಮ್ಷ್‌ಜೀನ್ಸ್ ಮುಂತಾದವರುಗಳ ವಿಜ್ಞಾನ ಕೃತಿಗಳನ್ನು ಓದುವ ಅವಕಾಶ. ಇದರ ಜೊತೆಗೆ ಶಿವರಾಮ ಕಾರಂತರ ವೈಜ್ಞಾನಿಕ ಬರಹಗಳ ಪುಸ್ತಕ ಬಾಲ ಪ್ರಪಂಚ ಮುಂತಾದವುಗಳು ವಿಜ್ಞಾನದ ಬಗ್ಗೆ ಒಲವು ಮೂಡಲು ಪ್ರೇರಣೆ ನೀಡಿದವು. ಪ್ರೆಸಿಡೆನ್ಸಿ ಕಾಲೇಜಿನಿಂದಲೂ ದೊರೆತ ಸೌಲಭ್ಯಗಳಿಂದ ಮತ್ತಷ್ಟು ಪ್ರಬಾವಿತರಾಗಿ ವಿಜ್ಞಾನದ ಬಗ್ಗೆ ಹೆಚ್ಚಿನ ಓದಿಗೆ ದೊರೆತ ಮಾರ್ಗ.ನೊಬೆಲ್ ಪ್ರಶಸ್ತಿ ವಿಜೇತರಾದ ಸರ್.ಸಿ.ವಿ.ರಾಮನ್, ಸುಬ್ರಹ್ಮಣ್ಯಂ ಚಂದ್ರಶೇಖರವರುಗಳು ಓದಿದ, ಪ್ರಯೋಗ ನಡೆಸಿದ ಸ್ಥಳದಲ್ಲಿ ಓದತ್ತಿರುವ, ಪ್ರಯೋಗ ನಡೆಸುತ್ತಿದ್ದೇವೆಂಬ ಭಾವವೇ ವಿದ್ಯಾರ್ಥಿಗಳನ್ನು ವಿಜ್ಞಾನ ಲೋಕಕ್ಕೆ ಹುರಿದುಂಬಿಸಿ ಕರೆದುಕೊಂಡು ಹೋಗುವ ಅಂಶಗಳಾಗಿತ್ತು. ಭೌತ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದನಂತರ ಉದ್ಯೋಗಕ್ಕೆ ಸೇರಿದ್ದು ಎಂ.ಜಿ.ಎಂ. ಕಾಲೇಜಿನಲ್ಲಿ ಅಧ್ಯಾಪಕರಾಗಿ. ನಂತರ ಸೇಂಟ್ ಫಿಲೋಮಿನ ಕಾಲೇಜಿನಲ್ಲಿ ಕೆಲವರ್ಷ. ಆನಂತರ ಸೇರಿದ್ದು ಡಾ. ತೋನ್ಸೆ ಮಾಧವ ಅನಂತ ಪೈಗಳು ಸ್ಥಾಪಿಸಲು ಉದ್ದೇಶಿಸಿದ್ದ ವಿಜಯ ಕಾಲೇಜಿನಲ್ಲಿ. ವಿಜಯ ಕಾಲೇಜಿನಲ್ಲಿ ಭೌತವಿಜ್ಞಾನದ ವಿಭಾಗವನ್ನು ಕಟ್ಟಿ ಬೆಳಸಿದ ಕೀರ್ತಿ ಕೃಷ್ಣಭಟ್ಟರದು. ಮೂವತ್ತು ಮೂರು ವರ್ಷಗಳ ಸುದೀರ್ಘ ಸೇವೆಯ ನಂತರ ೧೯೯೬ರಲ್ಲಿ ನಿವೃತ್ತಿ. ಮಂಗಳೂರು ವಿಶ್ವವಿದ್ಯಾಲಯಕ್ಕೆ ಸೇರಿದ ವಿಜ್ಞಾನ ಕಾಲೇಜುಗಳ ಭೌತ ವಿಜ್ಞಾನ ಅಧ್ಯಾಪಕರ ಸಂಘದ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ, ಸಂಘದ ಚಟುವಟಿಕೆಗಳಿಗೆ ಹೊಸರೂಪ ನೀಡಿ, ವಿಜ್ಞಾನದ ಶಿಕ್ಷಣದ ಬಗ್ಗೆ ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸಿದರು. ಈ ಹಿಂದೆಯೇ ಶಿವರಾಮ ಕಾರಂತರಿಂದ ಪ್ರಾರಂಭವಾಗಿ, ಸ್ಥಗಿತಗೊಂಡಿದ್ದ ವಿಚಾರವಾಣಿ ಪತ್ರಿಕೆಯ ಸಂಪಾದಕರ ಹೊಣೆ ಹೊತ್ತು ವಿಜ್ಞಾನಕ್ಕೆ ಸಂಬಂಧಿಸಿದ ಲೇಖನಗಳನ್ನು ಬರೆದು ಜನಪ್ರಿಯಗೊಳಿಸಿದರು. ವಿಜಯಾ ಕಾಲೇಜಿನಲ್ಲಿ ಸ್ನೇಹಿತರೊಡನೆ ಪ್ರಾರಂಭಿಸಿದ್ದು ‘ರಿಸರ್ಚ್ ಅಂಡ್ ಪಬ್ಲಿಕೇಷನ್’. ಈ ಸಂಸ್ಥೆಯ ಮೂಲೋದ್ದೇಶ – ಸಾಮಾಜಿಕ ಚಿಂತನೆಗೆ ಅವಕಾಶ ಕೊಡುವುದು. ಪ್ರತಿ ಹದಿನೈದು ದಿವಸಕ್ಕೊಮ್ಮೆ ಕಲೆತು ವೈಜ್ಞಾನಿಕ ಪ್ರಬಂಧಗಳನ್ನು ಓದಿ, ಚರ್ಚಿಸಿ ಪ್ರಕಟಿಸುವುದು. ಹೀಗೆ ಈ ಸಂಸ್ಥೆಯ ಚರ್ಚೆಯ ಫಲವಾಗಿ ಪ್ರಕಟವಾದ ಮೊದಲ ಕೃತಿ ‘ಗಗನ ಯುಗ’ ಎಂಬ ಕಿರು ಹೊತ್ತಗೆ. ಈ ಹೊತ್ತಗೆಯಲ್ಲಿ ಗಗನಯಾನಿ ಯೂರಿಗಗಾರಿನ್ ಬಾಹ್ಯಾಕಾಶಕ್ಕೇರಿ ವಿಕ್ರಮ ಸಾಧಿಸಿದ್ದರ ಬಗ್ಗೆ ಮಾಹಿತಿ ನೀಡುವ ಕೃತಿಯಾಗಿದ್ದು ಅಂದು ಬಹು ಜನಪ್ರಿಯ ಕೃತಿ ಎಂದು ಪರಿಗಣಿತವಾಗಿತ್ತು. ವಿಜ್ಞಾನದ ಹರವನ್ನು ವಿಸ್ತರಿಸಲು ಪ್ರಾರಂಭಿಸಿದ ಸಂಸ್ಥೆ ‘ವಿಜ್ಞಾನ ಪ್ರತಿಷ್ಠಾನ’. ಈ ಪ್ರತಿಷ್ಠಾನದ ಮೂಲಕ ದ.ಕ.ಜಿಲ್ಲೆಯ ಶಾಲಾ, ಕಾಲೇಜುಗಳಲ್ಲಿ ನೀಡಿದ ವಿಜ್ಞಾನ ಉಪನ್ಯಾಸ, ಸಂವಾದ ಹಾಗೂ ಪ್ರಾತ್ಯಕ್ಷಿಕೆ. ಸಾಹಿತಿ ನಿರಂಜನರವರ ಮುಂದಾಳತ್ವದಲ್ಲಿ ಪ್ರಕಟಗೊಂಡ ‘ಜ್ಞಾನ ಗಂಗೋತ್ರಿ’ ಮೂರು ವಿಜ್ಞಾನ ಸಂಪುಟಗಳ ಸಂಪಾದಕರಾಗಿದ್ದಲ್ಲದೆ, ಟಿ.ಎಂ.ಎ. ಪೈಗಳ ೮೦ನೇ ವರ್ಷದ ಅಭಿನಂದನ ಗ್ರಂಥದ ಸಂಪಾದಕತ್ವವೂ ಇವರದ್ದೇ. ಜ್ಞಾನ ಗಂಗೋತ್ರಿಯು ಇಂದು ಕೂಡ ಶಾಲಾ ಕಾಲೇಜುಗಳಿಗೆ ವಿಜ್ಞಾನ ವಿಷಯಗಳ ಆಕರ ಗ್ರಂಥವೆನಿಸಿದೆ. ವಿಜ್ಞಾನ ಪ್ರಚಾರಕ್ಕಾಗಿ ಸ್ಥಾಪಿಸಿದ ಸ್ವಾಯತ್ತ ಸಂಸ್ಥೆಯೆಂದರೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು. ವಿಜ್ಞಾನ ಪರಿಷತ್ತಿನ ಸ್ಥಾಪಕ ಸದಸ್ಯರಾಗಿ ಪರಿಷತ್ತಿನ ಪತ್ರಿಕೆಯಾದ ‘ಬಾಲ ವಿಜ್ಞಾನ’ದ ಸಂಪಾದಕರಾಗಿ, ಉಪಾಧ್ಯಕ್ಷರಾಗಿ ಹೊತ್ತ ಜವಾಬ್ದಾರಿಗಳು. ಇಂಗ್ಲಿಷಿನ ವಿಜ್ಞಾನ ಪದಗಳ ಪಾರಿಭಾಷಿಕ ಪದಕೋಶ ಇಂಗ್ಲಿಷ್-ಕನ್ನಡ ವಿಜ್ಞಾನ ಕೋಶವನ್ನು ಪ್ರೊ. ಜಿ.ಆರ್. ಲಕ್ಷ್ಮಣರಾಯರೊಡನೆ ರಚಿಸಿದ್ದಾರೆ. ಇದಲ್ಲದೆ, ಇವರ ಇತರ ಕೃತಿಗಳೆಂದರೆ ಸರ್.ಸಿ.ವಿ. ರಾಮನ್, ಐಸಾಕ್ ನ್ಯೂಟನ್, ಮನುಷ್ಯನ ವಂಶಾವಳಿ, ಇಂಟ್ರಡಕ್ಟರಿ ಫಿಸಿಕ್ಸ್, ಮನುಷ್ಯನ ಕಥೆ, ಬೆಳ್ಳಿ ಚುಕ್ಕೆ, ನಮ್ಮ ವಾತಾವರಣ, ಕಿಶೋರ ವಿಜ್ಞಾನ ಮುಂತಾದವುಗಳು. ಮನುಷ್ಯನ ಕಥೆ ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ‘ಸುದರ್ಶನ’ ಪ್ರಕಾಶನಕ್ಕಾಗಿ ೨೦ನೆಯ ರಾಷ್ಟ್ರೀಯ ಉತ್ಕೃಷ್ಟ ಮುದ್ರಣ, ಪ್ರಕಾಶನ ಪ್ರಶಸ್ತಿ, ಮಣಿಪಾಲ ಅಕಾಡಮಿ ಆಫ್ ಜನರಲ್ ಎಜುಕೇಷನ್‌ನಿಂದ ಫೆಲೋಷಿಪ್, ಎನ್.ಸಿ.ಇ.ಆರ್.ಟಿ (ಭಾರತ ಸರ್ಕಾರ)ಯಿಂದ ರಾಷ್ಟ್ರೀಯ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top