೦೩.೦೨.೧೯೫೦ ಅಪರೂಪದ ಸಂಗೀತ ರಚನಕಾರ, ಧ್ವನಿ ಅನ್ವೇಷಕ, ರಂಗಭೂಮಿಯ ನಟ ಅನಂತರಾಮ್ ರವರು ಹುಟ್ಟಿದ್ದು ಮೈಸೂರು. ತಂದೆ ಆರ್.ಜಿ. ಕೃಷ್ಣನ್, ತಾಯಿ ಸೀತಾಲಕ್ಷ್ಮಮ್ಮ. ಓದಿದ್ದು ಮರಿಮಲ್ಲಪ್ಪ ಹೈಸ್ಕೂಲು. ಬೆಳೆದ ರಂಗ ಚಟುವಟಿಕೆ, ಹಲವಾರು ವಾದ್ಯಗಳನ್ನು ನುಡಿಸುವುದರಲ್ಲಿ ಪಡೆದ ನೈಪುಣ್ಯತೆ. ಶೇಷಾದ್ರಿ ಗವಾಯಿಗಳಲ್ಲಿ ಕಲಿತದ್ದು ತಬಲ ವಾದನ. ಪದವಿ ಪಡೆದ ನಂತರ ಉದ್ಯೋಗಕ್ಕೆ ಸೇರಿದ್ದು ಬೆಂಗಳೂರಿನ ಕಂಪ್ಯೂಟರ್ ಸೆಂಟರ್ನಲ್ಲಿ. ಮೂವತ್ತು ವರ್ಷದ ಸೇವೆಯ ನಂತರ ಪಡೆದ ಸ್ವಯಂ ನಿವೃತ್ತಿ. ಬೆಂಗಳೂರಿನ ಹಲವಾರು ರಂಗ ಸಂಸ್ಥೆಗಳೊಡನೆ ಬೆಳೆದ ನಂಟು. ೧೯೭೧ರಲ್ಲಿ ಬಾಲಭವನದಲ್ಲಿ ಮಕ್ಕಳಿಗಾಗಿ ಏರ್ಪಡಿಸಿದ ನಾಟಕೋತ್ಸವದಲ್ಲಿ ಬಿ.ವಿ. ಕಾರಂತರು ನಿರ್ದೇಶಿಸಿದ ಅಪಾಯಕಾರಿ ಕಥೆ ನಾಟಕದಲ್ಲಿ ದೊರೆತ ಅವಕಾಶ, ಕಾರಂತರೊಡನೆ ಬೆಳೆದ ಒಡನಾಟ. ಅವರ ಅಂತಿಮ ದಿನಗಳವರೆಗೂ ಮುಂದುವರಿಕೆ. ೧೯೭೨ರಲ್ಲಿ ರಂಗ ಚಳವಳಿಯ ಸುಗ್ಗಿಯ ಕಾಲ. ಜಸ್ಮಾ ಓಡನ್, ಹಯವದನ, ಋಷ್ಯಶೃಂಗ ಮುಂತಾದ ಬಿ.ವಿ. ಕಾರಂತರ ನಾಟಕಗಳಿಗೆ ನೀಡಿದ ಸಂಗೀತ ಸಂಯೋಜನೆ. ನಂತರ ಟಿ.ಎಸ್. ನಾಗಾಭರಣರ ಬಿಲ್ಲಿಕ್ಲಬ್ ಕಸೆಟ್ಸ್ ನಾಟಕಕ್ಕೆ ಸ್ವತಂತ್ರ ಸಂಗೀತ ನಿರ್ದೇಶನ. ೧೯೭೬-೮೨ರ ವರೆಗೆ ಬಿ.ವಿ. ಕಾರಂತರು ನಿರ್ದೇಶಿಸಿದ ಸತ್ತವನ ನೆರಳು, ಕಾಗೆಕುಣಿತ, ಕಾಡು ಮುಂತಾದ ನಾಟಕಗಳಲ್ಲಿ ಅಭಿನಯದ ಜೊತೆಗೆ ಸಂಗೀತದ ಸಹಾಯ-ಮುಂದೆ ಹಯವದನ, ಅವಸ್ಥೆ, ಕತ್ತಲೆ ಬೆಳಕು, ಚೋರ ಚರಣದಾಸ, ಹೆಡ್ಡಾಯಣ, ಅಪರಾಧಿಕತೆ ಮುಂತಾದ ನಾಟಕಗಳಿಗೆ, ಪ್ರಸನ್ನರವರ ಹುತ್ತವ ಬಡಿದರೆ, ತದ್ರೂಪಿ; ಸುರೇಶ್ ಅನಗಳ್ಳಿಯವರ ಮಂಟೇಸ್ವಾಮಿ ಕಥಾ ಪ್ರಸಂಗ, ಮಧುರೈ ಕಾಂಡ; ಬಸವಲಿಂಗಯ್ಯನವರ ಮಾದಾರಿಮಾದಯ್ಯ; ಬಿ. ಜಯಶ್ರೀಯವರ ಕರಿಮಾಯಿ, ಲಕ್ಷಾಪತಿ ರಾಜನ ಕಥೆ, ಘಾಸಿರಾಮ ಕೊತ್ವಾಲ ಮುಂತಾದುವುಗಳಿಗೆ ನೀಡಿದ ಸಂಗೀತ ಸಹಕಾರ. ಎಲ್ಲಾ ರಂಗಸಂಸ್ಥೆಗಳಿಗೂ ಅನಿವಾರ್ಯವಾದ ಅಪರೂಪದ ಸಂಗೀತ ಸಹಾಯಕ. ಯಾವುದೇ ನಾಟಕಗಳಿಗೂ ಬಿರುಗಾಳಿ, ಮಳೆ ಶಬ್ದ, ಹರಿವ ನದಿ ನೀರಿನ ಜುಳುಜುಳು ನಾದ, ಕುದುರೆಯ ಖುರಪುಟ ಮುಂತಾದ ಹಿನ್ನೆಲೆ ಸಂಗೀತದ ಶಬ್ದವನ್ನು ಅನುಪಯೋಗಿ ವಸ್ತುಗಳಾದ ಕರಟ, ಕಲ್ಲು, ಗೋಲಿ, ಬೊಂಬು, ಪರಂಗಿ ಕೊಂಬು, ನೀರಿನ ಡಬರಿ, ಪ್ಲಾಸ್ಟಿಕ್ ಬಕೆಟ್ ಮುಂತಾದುವುಗಳಿಂದ ಹೊಮ್ಮಿಸುವ ನಾದ ವಿಶೇಷತೆ ಕರಗತ. ಶಾಸ್ತ್ರೀಯವಾಗಿ ಯಾವ ವಾದ್ಯ ಕಲಿತಿಲ್ಲದಿದ್ದರೂ ತಮಟೆ, ಹೂಡಿಕೆ, ಕಂಜಿರ, ಚಂಡೆ, ಬ್ಯಾಂಡ್, ಕರಡಿವಾದ್ಯ ಮುಂತಾದುವುಗಳನ್ನು ನುಡಿಸುವುದರಲ್ಲಿ ಪ್ರಾವೀಣ್ಯತೆ-‘ರಂಗಸ್ವರ’ ಸಂಸ್ಥೆಯ ಮೂಲಕ ರಂಗ ಗೀತೆಗಳ ಪ್ರಚಾರ, ಉಡುಪಿ, ಸುರತ್ಕಲ್, ಭೂಪಾಲ್, ದೆಹಲಿ ಮುಂತಾದೆಡೆ ನಡೆಸಿಕೊಟ್ಟ ರಂಗಗೀತೆ ಕಾರ್ಯಕ್ರಮ. ಹಲವಾರು ಧ್ವನಿಸುರಳಿಗಳ ಬಿಡುಗಡೆ, ಮಗ ಶಶಾಂಕ, ನೃತ್ಯಗಾರ್ತಿ ಮಗಳು ಅಚಲ ಭಾರ್ಗವಿ, ಪತ್ನಿ ಶ್ಯಾಮಲರೊಡನೆ ತಮ್ಮದೆ ‘ರಂಗ ಸ್ವರ’ ಸಂಸ್ಥೆಯ ಮೂಲಕ ರಾಜ್ಯಾದ್ಯಂತ ರಂಗ ಗೀತೆಗಳ ಕಾರ್ಯಕ್ರಮ. ಅಪರೂಪದ ಶಬ್ದಾನ್ವೇಷಿ ಸಂಗೀತ ಸಂಯೋಜಕ ಜೆರ್ರಿಯವರು ಪ್ರಶಸ್ತಿಗಳಿಂದ ದೂರವೇ.
* * *