ಅನಂತ ಕಲ್ಲೋಳ

Home/Birthday/ಅನಂತ ಕಲ್ಲೋಳ
Loading Events
This event has passed.

೨೪-೩-೧೯೩೭ ಪ್ರಖ್ಯಾತ ನಗೆಲೇಖನಗಳ ಬರಹಗಾರರಾದ ಅನಂತಕಲ್ಲೋಳರವರು ಹುಟ್ಟಿದ್ದು ಕೊಲ್ಲಾಫುರ (ಮಹಾರಾಷ್ಟ್ರ)ದಲ್ಲಿ. ತಂದೆ ಅಣ್ಣಾಜಿ ಕಲ್ಲೋಳ, ತಾಯಿ ರಮಾಬಾಯಿ. ಕನ್ನಡ ಗಂಡು ಮಕ್ಕಳ ಶಾಲೆ ಕ್ರಮಾಂಕ-೧ರಲ್ಲಿ ಪ್ರಾಥಮಿಕ, ಮಾಧ್ಯಮಿಕ, ಹೈಸ್ಕೂಲು ವಿದ್ಯಾಭ್ಯಾಸ ನಡೆದುದು ಬೆಳಗಾವಿಯಲ್ಲಿ. ನಂತರ ಫಿಲಾಸಫಿ ಮತ್ತು ಸೈಕಾಲಜಿ ವಿಷಯಗಳಲ್ಲಿ ಬಿ.ಎ. ಆನರ್ಸ್ ಪದವಿ ಪಡೆದದ್ದು ಬೆಳಗಾವಿಯ ಲಿಂಗರಾಜ ಕಾಲೇಜು ಮತ್ತು ವಿಜಾಪುರದ ವಿಜಯ ಕಾಲೇಜಿನಿಂದ. ಉದ್ಯೋಗದ ಹುಡುಕಾಟ ಪ್ರಾರಂಭಿಸಿ ಸೇರಿದ್ದು ಕೇಂದ್ರೀಯ ಅಬಕಾರಿ ಮತ್ತು ಸುಂಕದ ಇಲಾಖೆಯಲ್ಲಿ. ಓದಿನಂತೆಯೇ ಅವರು ಹಚ್ಚಿಕೊಂಡದ್ದು ಸಾಹಿತ್ಯದ ಗೀಳು. ಅದರಲ್ಲೂ ಆಯ್ದುಕೊಂಡದ್ದು ಹಾಸ್ಯಪ್ರಕಾರ. ಇವರ ಹಾಸ್ಯ, ವಿಡಂಬನಾ ಲೇಖನಗಳು ನಾಡಿನ ಪ್ರಖ್ಯಾತ ಪತ್ರಿಕೆಗಳೆಲ್ಲದರಲ್ಲೂ ಪ್ರಕಟಗೊಂಡಿರುವುದು ವಿಶೇಷ. ಈಗಾಗಲೇ ನಗೆಬರಹಗಳ ಹತ್ತು ಸಂಕಲನಗಳನ್ನು ಹೊರತಂದಿದ್ದಾರೆ. ಹಗರಣ, ಮೂಗಿನ ತುದಿ, ತುಂಡು-ಮುಂಡು, ವೈಭೋಗದ ವೈಖರಿ, ರಾಜಾಪಾಯಿಂಟ್, ಕಂಡಲ್ಲಿ ಗುಂಡು, ತಾಮ್ರದತಗಡು, ಬ್ರಹ್ಮ ಹಾಕಿದ ಗಂಟು, ರೇಡಿಯೋದಿಂದ ವಿಡಿಯೋದವರೆಗೆ ಮುಂತಾದುವು. ನಾಟಕಗಳ ಸಂಕಲನ-ಅದೇ ದಾರಿ, ಕುಂಟು ಕಾಲಿಗೆ ವೈದ್ಯ, ಕನ್ನಡ ಸಂಚು-೧ ಪ್ರಕಟಿತ ಕೃತಿಗಳು. ಪ್ರಜಾವಾಣಿ ಏರ‍್ಪಡಿಸಿದ್ದ ನಾಟಕ ರಚನಾ ಸ್ಪರ್ಧೆಯಲ್ಲಿ ಎರಡು ಬಾರಿ ಬಹುಮಾನ ವಿಜೇತರು. ಪ್ರಜಾಮತ, ಪ್ರಜಾವಾಣಿ, ಉತ್ಥಾನ ಪತ್ರಿಕೆಗಳ ಕಥಾಸ್ಪರ್ಧೆಯಲ್ಲೂ  ಬಹುಮಾನ ವಿಜೇತರು. ಕನಕದಾಸರು, ರಾಮದಾಸರು, ದೊಂಢೋ ಕೇಶವ ಕರ್ವೆ, ಸಾವರ್ಕರ್ ಜೀವನಚರಿತ್ರೆಯನ್ನು ರಾಷ್ಟ್ರೋತ್ಥಾನದ ಭಾರತ-ಭಾರತಿ ಸಾಹಿತ್ಯಮಾಲೆಯ ಪುಸ್ತಕ ಸಂಪದಕ್ಕಾಗಿ ರಚನೆ. ಇವು ಮರಾಠಿ, ಇಂಗ್ಲಿಷಿಗೂ ತರ್ಜುಮೆ. ಬೆಳಗಿನ ಬೆಳಗು-ಬಸವೇಶ್ವರರ ಕುರಿತು ಜೀವನ ಚರಿತ್ರೆ ಪ್ರಕಟಣೆ. ಚಿನ್ನ ನಿಯಂತ್ರಣ ಅನಿಯಮವನ್ನು ಕುರಿತಾದ ಕಾನೂನಿನ ಪುಸ್ತಕವನ್ನು ಅನುವಾದಿಸಿದ್ದಾರೆ. ಪುಸ್ತಕ ಪ್ರಕಟಿಸುವ ವ್ಯಾಮೋಹದಿಂದ ದೂರ ಉಳಿದಿರುವುದರಿಂದ ಹಾಸ್ಯ ಸಂಕಲನಗಳು, ಕಥಾ ಸಂಕಲನಗಳು, ವೈಚಾರಿಕ ಲೇಖನಗಳು ಪುಸ್ತಕರೂಪ ತಾಳಿ ಬರಲು ಕಾದು ಕುಳಿತಿವೆ. ಸಂದ ಪ್ರಶಸ್ತಿ ಗೌರವಗಳು-‘ಹಗರಣ’ ವಿನೋದ ಸಾಹಿತ್ಯಕ್ಕಾಗಿ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ತುಂಡು-ಮುಂಡು ಕೃತಿಗೆ ಗೊರೂರು ಸಾಹಿತ್ಯ ಪ್ರಶಸ್ತಿ. ಇನ್ನುಳಿದು ಚಂದ್ರಮೌಳಿ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ, ಸಮಗ್ರ ಹಾಸ್ಯ ಸೇವೆಗಾಗಿ ಪ್ರಹ್ಲಾದಕುಮಾರ ಭಾಗೋಜಿ ಸಾಹಿತ್ಯ ಪ್ರಶಸ್ತಿ ಮುಂತಾದುವು ಸಂದಿವೆ.   ಇದೇ ದಿನ ಹುಟ್ಟಿದ ಸಾಹಿತಿಗಳು : ಪಂಕಜ ಶ್ರೀನಾಥ್ – ೧೯೩೨ ಜಯಶ್ರೀ ಶ್ರೀರಾಂ – ೧೯೩೩

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top