
ಅನಸೂಯಾ ರಾಮರೆಡ್ಡಿ
December 25
೨೫.೧೨.೧೯೨೯ ೨೮.೯.೨೦೦೦ ಸುಪ್ರಸಿದ್ಧ ಕಾದಂಬರಿಗಾರ್ತಿ ಅನಸೂಯ ರಾಮರೆಡ್ಡಿಯವರು ಹುಟ್ಟಿದ್ದು ಚಿತ್ರದುರ್ಗದ ಬಳಿಯ ತುರುವನೂರು ಎಂಬಲ್ಲಿ ೧೯೨೯ರ ಡಿಸೆಂಬರ್‌೨೫ ರಂದು. ತಂದೆ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಎಂ. ರಾಮರೆಡ್ಡಿ, ತಾಯಿ ಮಂಗಳಮ್ಮ. ಮನೆತನವೇ ಒಂದು ರೀತಿಯ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ. ಯಾವಾಗಲೂ ಮನೆಯಲ್ಲಿ ತುಂಬಿರುತ್ತಿದ್ದ ಕಾಂಗ್ರೆಸ್ ನೇತಾರರು. ಇದು ಬೆಳೆಯುತ್ತಿದ್ದ ಅನಸೂಯರ ಮೇಲೂ ಬೀರಿದ ಪ್ರಭಾವ. ಬದುಕಿನುದ್ದಕ್ಕೂ ರೂಢಿಸಿಕೊಂಡು ಬಂದ ಗಾಂಧೀಜಿಯವರ ಆದರ್ಶಗಳು. ತುರುವನೂರು ಊರು ಚಿಕ್ಕದಾಗಿದ್ದರೂ ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿ ಸರಳ ವಿವಾಹ, ಚರಕದಲ್ಲಿ ನೂಲುವುದು, ಕಾಂಗ್ರೆಸ್ ನಿಧಿ ಸಂಗ್ರಹ, ರಾಷ್ಟ್ರೀಯ ಸಮರ್ಪಣಾಭಾವ ಮುಂತಾದವುಗಳನ್ನು ಮೈಗೂಡಿಸಿಕೊಂಡಿದ್ದ ಊರಾಗಿತ್ತು. ಮನೆತನದ ಗಂಡಸರಿಗೆ ಸ್ವಾತಂತ್ರ್ಯ ಹೋರಾಟವೇ ಗುರಿಯಾಗಿದ್ದರೆ, ತಾಯಿ-ಅಜ್ಜಿ ಮುತ್ತಜ್ಜಿಯರಿಗೆ ಆಧ್ಯಾತ್ಮವೇ ಗುರಿಯಾಗಿತ್ತು. ಕವಿಗಳೆಂದು ಹೆಸರು ಗಳಿಸಿದ್ದ ಬೆಳಗೆರೆ ಚಂದ್ರಶೇಖರ ಶಾಸ್ತ್ರಿಗಳು ಇವರಿಗೆ ಗುರುಗಳು. ಬೆಳಗೆರೆ ಜಾನಕಮ್ಮ ಇವರ ಸ್ನೇಹಿತೆ. ಇಂಥ ಪರಿಸರದಲ್ಲಿ ಬೆಳೆದ ಅನಸೂಯರವರಿಗೆ ಓದಿನ ಗೀಳು ಹಿಡಿದು ಪುಸ್ತಕ ಹಿಡಿದು ಕುಳಿತರೆ ಮೈಮರೆತು ಬಿಡುತ್ತಿದ್ದರು. ವ್ಯಾಯಾಮ, ಯೋಗ, ಈಜು, ಸೈಕಲ್ ಸವಾರಿ, ಸಂಗೀತ, ಹಿಂದಿ, ಸಾಹಿತ್ಯ ಬಹುಪ್ರಿಯವಾದ ಹವ್ಯಾಸವಾಗಿತ್ತು. ಶಾಲೆಯ ಓದಿನ ಜೊತೆಗೆ ಮನೆಮೇಸ್ಟರಿಂದ ಹಿಂದಿ ಪರೀಕ್ಷೆಗೆ ಕುಳಿತು ರಾಷ್ಟ್ರಭಾಷಾ, ವಿಶಾರದ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಮದುವೆಯ ನಂತರ ಹಿಂದಿನ ಪ್ರವೀಣ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಿದ್ದಂತೆ ಚಿತ್ರದುರ್ಗದ ಬಾಲಕಿಯರ ಮಾಧ್ಯಮಿಕ ಶಾಲೆಯಲ್ಲಿ ದೊರೆತ ಹಿಂದಿ ಶಿಕ್ಷಕಿಯ ಹುದ್ದೆ. ಮೈಸೂರಿನ ಮಹಾರಾಣಿ ಶಿಕ್ಷಕರ ತರಬೇತಿ ಶಾಲೆಯಿಂದ ಪಡೆದ ಟಿ.ಸಿ.ಎಚ್. ಟ್ರೈನಿಂಗ್, ಅಂಚೆ ಶಿಕ್ಷಣದ ಮೂಲಕ ಇಂಟರ್‌ಪಾಸು ಮಾಡಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದ ಬಿ.ಎ. ಮತ್ತು ಎಂ.ಎ. ಪದವಿಗಳು. ಇವರ ಮೊದಲ ಕೃತಿ ಗುರುಗೋವಿಂದ ಸಿಂಹರ ಜೀವನ ಚರಿತ್ರೆ. ನಂತರ ೧೯೬೫ರಿಂದ ೯೫ರ ಅವಧಿಯಲ್ಲಿ ಹದಿನೇಳು ಕಾದಂಬರಿಗಳನ್ನು ರಚಿಸಿದರು. ‘ದೇವಿಯ ದರ್ಶನ’ ಇವರ ಮೊದಲ ಕಾದಂಬರಿ. ನಂತರ ಬರೆದದ್ದು ‘ಮಮತೆಯ ಮಡಿಲು’. ಚಲನ ಚಿತ್ರ ನಿರ್ಮಾಪಕ ಚಂದೂಲಾಲ್ ಜೈನರಿಂದ ಚಲನ ಚಿತ್ರವಾಗಿ ತೆರೆಕಂಡು ಅಪಾರ ಜನಮೆಚ್ಚುಗೆ ಪಡೆಯಿತು. ನಂತರ ಬಂದ ಕಾದಂಬರಿಗಳು. ಕುಲದೀಪಕ, ಪ್ರತೀಕ್ಷೆ, ಈಚಲು ಮರ, ಹರಿಗೋಲು, ಬೆಳಕಿನಬಳ್ಳಿ, ಮಧುರತರಂಗ, ಮಂದಾನಿಲ, ಮೂರು ದಾರಿ, ಒಡೆದ ಹಾಲು, ಇದಿರುಗಾಳಿ, ಪಂಜರ, ಮಡಿಲ ಮೊಗ್ಗು, ತೆರೆಗಳು, ಸಂಭಾವಿತರು ಮತ್ತು ಅಂತ್ಯ ಮೊದಲಾದ ೧೭ ಕಾದಂಬರಿಗಳು. ‘ದಾರಿತೋರಿದ ದೇವಿಯರು ಮತ್ತು ಇತರ ಕಥೆಗಳು’ ಸ್ವರಜಿತ ಸಣ್ಣ ಕಥೆಗಳ ಸಂಗ್ರಹವಾದರೆ, ಹಿಂದಿಯ ಲೇಖಕ ಪ್ರೇಮ ಚಂದ್‌ರ ‘ಬಂದಿಯ ಬಿಡುಗಡೆ ಮತ್ತು ಇತರ ಕಥೆಗಳು’ ಅನುವಾದಿತ ಕಥಾ ಸಂಕಲನ. ಇದಲ್ಲದೆ ಕುಟುಂಬ ಯೋಜನೆಯ ವಸ್ತುವನ್ನೊಳಗೊಂಡ ‘ಮನೆಗೆ ಮೂರು ಮಾಣಿಕ್ಯ’ ಮತ್ತು ‘ಮುತ್ತಿನ ಹಾಗೆ ಎರಡು’ ಎಂಬ ಎರಡು ನಾಟಕಗಳ ಜೊತೆಗೆ ಸುಮಾರು ೩೦ ಕವಿತೆಗಳನ್ನು ರಚಿಸಿದ್ದಾರೆ. ‘ಮುತ್ತಿನ ಹಾಗೆ ಎರಡು’ ಎಂಬ ನಾಟಕವು ೧೯೭೫ ರಲ್ಲಿ ಕರ್ನಾಟಕ ಸರಕಾರದ ಕುಟುಂಬ ಯೋಜನಾ ಇಲಾಖೆಯ ಪ್ರಥಮ ಬಹುಮಾನ ಪಡೆದ ಕೃತಿಯಾದರೆ ಪಂಜರ ಎಂಬ ಕಾದಂಬರಿಗೆ ೧೯೮೩ ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾದತ್ತಿ ನಿಧಿ ಬಹುಮಾನ ದೊರೆಯಿತು. ‘ಪನ್ನ’ ಎಂಬ ನಾಟಕವು ಆಕಾಶವಾಣಿಯಿಂದ ಪ್ರಸಾರವಾದ ಜನಪ್ರಿಯ ನಾಟಕ. ಜಿ. ನಾರಾಯಣ ರವರ ಮಾರ್ಗದರ್ಶನದಲ್ಲಿ ಸ್ಥಾಪನೆಯಾದ ಕರ್ನಾಟಕ ಲೇಖಕಿಯರ ಸಂಘವು ಲೇಖಕಿಯರ ಭೇಟಿಗೆ ವೇದಿಕೆ ಒದಗಿಸಿದಾಗ ಅನಸೂಯ ರಾಮರೆಡ್ಡಿಯವರೂ ಸಾಹಿತ್ಯದ ಬಗ್ಗೆ ಇದ್ದ ಕುತೂಹಲದಿಂದ, ಆಗುತ್ತಿರುವ ಬದಲಾವಣೆ ಗಮನಿಸಲು, ಸಮಕಾಲೀನ ಲೇಖಕಿಯರನ್ನು ಭೇಟಿಯಾಗುತ್ತಿದ್ದವರು ಅನಾರೋಗ್ಯಕ್ಕೆ ತುತ್ತಾಗಿ ೨೮.೯.೨೦೦೦ ದಲ್ಲಿ ನಿಧನರಾದರು