ಅರಳುಮಲ್ಲಿಗೆ ಪಾರ್ಥಸಾರಥಿ

Home/Birthday/ಅರಳುಮಲ್ಲಿಗೆ ಪಾರ್ಥಸಾರಥಿ
Loading Events
This event has passed.

೨೨-೩-೧೯೪೮ ಹರಿದಾಸ ಸಾಹಿತ್ಯ ಪ್ರತಿಪಾದಕರಾದ ಅರಳುಮಲ್ಲಿಗೆ ಪಾರ್ಥಸಾರಥಿಯವರು ಹುಟ್ಟಿದ್ದು ದೊಡ್ಡಬಳ್ಳಾಪುರ ಬಳಿಯ ಅರಳುಮಲ್ಲಿಗೆ ಎಂಬ ಹಳ್ಳಿಯಲ್ಲಿ. ತಂದೆ ಕೃಷ್ಣಮೂರ್ತಿರಾವ್, ತಾಯಿ ರಂಗಮ್ಮ . ಪ್ರಾಥಮಿಕ ವಿದ್ಯಾಭ್ಯಾಸ ನಡೆದುದು ಅರಳು ಮಲ್ಲಿಗೆಯಲ್ಲಿ. ಪ್ರೌಢಶಾಲೆಗೆ ಸೇರಿದ್ದು ದೊಡ್ಡಬಳ್ಳಾಪುರದ ಹೈಸ್ಕೂಲು. ಬೆಂಗಳೂರಿನ ಆರ್.ಸಿ. ಕಾಲೇಜಿನಿಂದ ಬಿ.ಕಾಂ., ಸೆಂಟ್ರಲ್ ಕಾಲೇಜಿನಿಂದ ಎಂ.ಕಾಂ, ಕ್ಯಾಲಿಫೋರ್ನಿಯ ಯೂನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ದೊರೆತ ಪದವಿಗಳು. ಓದು ಮುಗಿಸಿದ ನಂತರ ಉದ್ಯೋಗಕ್ಕಾಗಿ ಸೇರಿದ್ದು ಬೆಂಗಳೂರಿನ ಎಂ.ಇ.ಎಸ್. ಕಾಲೇಜು. ಪ್ರೊಫೆಸರಾಗಿ ೧೯೭೧ರಿಂದ ೨೮ ವರ್ಷಕಾಲ ಸುದೀರ್ಘ ಸೇವೆ, ನಂತರ ಸ್ವಯಂ ನಿವೃತ್ತಿ. ಹರಿದಾಸ ಮನೆತನದಿಂದ ಬಂದ ಬಳುವಳಿ ಇವರ ರಕ್ತದಲ್ಲೂ ಹರಿದದ್ದು ಹರಿದಾಸ ಸಾಹಿತ್ಯವೇ. ಆದರೆ ಸೆಂಟ್ರಲ್ ಕಾಲೇಜಿನಲ್ಲಿ ಓದುತ್ತಿದ್ದಾಗ ನವ್ಯ ಸಾಹಿತ್ಯದ ಸುಳಿಗೆ ಸಿಕ್ಕಿ, ನವ್ಯರಂತೆ ತಾವೂ ಸಾಹಿತ್ಯ ರಚಿಸದಿದ್ದರೆ ಸ್ಥಾನವಿಲ್ಲವೆಂಬ ಭ್ರಮೆ. ೧೯೭೧ರಲ್ಲಿ ಬರೆದ ಕಾದಂಬರಿ ‘ಹೂವು ಹಾವು ತೀರ್ಥ’. ಸ್ವಾಮೀಜಿಯೊಬ್ಬರು ಲೌಕಿಕ ಸೆಳೆತಕ್ಕೆ ಸಿಕ್ಕಿ ಪೀಠ ತ್ಯಜಿಸಿದ ಕಥಾವಸ್ತು. ಆದರೆ ಹರಿದಾಸ ಸಾಹಿತ್ಯದತ್ತ ಮನಸ್ಸು ವಾಲಿ ಹುಟ್ಟುಹಾಕಿದ್ದೇ ಹರಿದಾಸ ಅಕಾಡಮಿ. ಹರಿದಾಸ ಪ್ರಚಾರ, ಸಾಹಿತ್ಯ ಕೈಂಕರ್ಯಕ್ಕಾಗಿ ದೇಶ ಪರ್ಯಟನ. ಭಾರತದಷ್ಟೇ ಅಲ್ಲ ಸುತ್ತಿದ್ದು ಹಲವಾರು ದೇಶಗಳು, ಹಲವಾರು ಬಾರಿ, ಆಸ್ಟ್ರೇಲಿಯಾ, ಕೆನಡಾ, ಇಂಗ್ಲೆಂಡ್, ಸಿಂಗಪೂರ್, ಬಹರಿನ್, ದುಬೈ, ಅಬುದಾಬಿ, ಷಾರ್ಜ, ಖತಾರ್ ಮುಂತಾದೆಡೆ ಕಳೆದುಕೊಂಡ ಮನಸ್ಸುಗಳಿಗೆ ಸಾಂತ್ವನ ನೀಡುವಂತೆ ದಾಸಸಾಹಿತ್ಯದ ಉಪನ್ಯಾಸ. ಗಳಿಸಿದ್ದು ಅಂತಾರಾಷ್ಟ್ರೀಯ ಮನ್ನಣೆ. ಹರಿದಾಸ ಸಾಹಿತ್ಯ ಪ್ರಚಾರಕ್ಕೋಸ್ಕರ ರಚಿಸಿದ್ದು ಹಲವಾರು ಗ್ರಂಥಗಳು. ಶ್ರೀಪಾದರಾಜ ಸಂಪುಟ, ಶ್ರೀವಾದಿರಾಜ ಸಂಪುಟ, ಶ್ರೀವ್ಯಾಸರಾಜ ಸಂಪುಟ, ದಾಸ ಸಾಹಿತ್ಯ ವೈಭವ, ಹರಿದಾಸ ಸಾಹಿತ್ಯ ವಾಹಿನಿ, ಪುರಂದರ ಸಂಪುಟಗಳ ಜೊತೆಗೆ ಮಂತ ಕರ್ನಾಟಕ ಇತಿಹಾಸ ಮುಂತಾದ ೩೦ಕ್ಕೂ ಮಿಕ್ಕು ಗ್ರಂಥ ರಚನೆ-ಪ್ರಕಟಣೆ. ಹಲವಾರು ಧ್ವನಿ ಸುರುಳಿ, ಸಿ.ಡಿ.ಗಳ ಬಿಡುಗಡೆ. ಹಲವಾರು ಧಾರ್ಮಿಕ ಸಂಸ್ಥೆ, ದೇಶ-ವಿದೇಶಿ ಸಂಘ ಸಂಸ್ಥೆಗಳಿಂದ ಸನ್ಮಾನ, ಪುರಸ್ಕಾರ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೯೯)ಗಳು ದೊರೆತಿವೆ. ಮನೆತುಂಬ ಪ್ರಶಸ್ತಿ ಫಲಕಗಳ ಜೊತೆ ಫ್ಲಾರಿಡಾ ಕನ್ನಡ ಸಮುದಾಯ ಕೊಡಮಾಡಿರುವ ಮುಕ್ಕಾಲು ಅಡಿ ಅಳತೆ-ಅಗಲದ ಬಲಮುರಿ ಶಂಕದ ಜೊತೆ ಅಕ್ಕಿ ಕಾಳಿನಷ್ಟು ಗಾತ್ರದ ಬಲಮುರಿ ಶಂಕವನ್ನು ಕೊಟ್ಟು ಗೌರವಿಸಿದೆ.   ಇದೇ ದಿನ ಹುಟ್ಟಿದ ಸಾಹಿತಿಗಳು : ರಾಮಚಂದ್ರದೇವ – ೧೯೪೮ ಪ್ರಸನ್ನ – ೧೯೫೧ ಕೆ.ಎನ್. ರೇಖಾ – ೧೯೭೧

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top