ಅರವಿಂದ ನಾಡಕರ್ಣಿ

Home/Birthday/ಅರವಿಂದ ನಾಡಕರ್ಣಿ
Loading Events
This event has passed.

೦೧.೦೧.೧೯೩೧ ೧೯.೦೫.೨೦೦೮ ದೂರದ ಮುಂಬಯಿಯಲ್ಲಿದ್ದರೂ ಕಾವ್ಯಾಸಕ್ತರ ಮನಸೆಳೆದ ನಾಡಕರ್ಣಿಯವರು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ೧೯೩೧ರ ಜನವರಿ ೧ರಂದು. ತಂದೆ ಶಂಕರ ದತ್ತಾತ್ರೇಯ ನಾಡಕರ್ಣಿ, ತಾಯಿ ಉಮಾಬಾಯಿ (ಭವಾನಿ), ಪ್ರಾರಂಭಿಕ ಶಿಕ್ಷಣ ಹಾಗೂ ಬಾಲ್ಯ ಕಳೆದದ್ದು ಹನೇಹಳ್ಳಿ ಹಾಗೂ ಬಂಕಿಕೊಡ್ಲು ಹಳ್ಳಿಗಳಲ್ಲಿ. ಮಾಧ್ಯಮಿಕ ಶಾಲೆಯಲ್ಲಿ ಗೌರೀಶ ಕಾಯ್ಕಿಣಿ, ಸು.ರಂ.ಎಕ್ಕುಂಡಿ ಮುಂತಾದವರ ಸಂಪರ್ಕದಿಂದ ಕವಿತೆ ಬರೆಯುವುದರ ಬಗ್ಗೆ ಮೂಡಿದ ಒಲವು. ಬಿ.ಎಸ್ಸಿ ಪದವಿ ಪಡೆದದ್ದು ಮುಂಬಯಿಯ ರೂಯಿಯಾ ಕಾಲೇಜನಿಂದ. ಕೊಲ್ಲಾಪುರದ ಶಹಾಜೀ ಲಾ ಕಾಲೇಜಿನಿಂದ ಎಲ್‌.ಎಲ್‌ .ಬಿ ಪದವಿ. ಪುಣೆಯಲ್ಲಿದ್ದಾಗ ವಿ.ಕೃ. ಗೋಕಾಕ್‌, ರಂ.ಶ್ರೀ. ಮುಗಳಿಯವರ ಸಂಪರ್ಕದಿಂದ ಕವಿತೆಗಳ ರಚನೆ. ಜಯಂತಿ, ಜಯಕರ್ನಾಟಕ ಪತ್ರಿಕೆಗಳಲ್ಲಿ ಪ್ರಕಟಿತ. ಉದ್ಯೋಗಿಯಾಗಿ ಸೇರಿದ್ದು ಮುಂಬಯಿಯ ಇನ್‌ಕಮ್‌ಟಾಕ್ಸ್‌ ಕಚೇರಿಯಲ್ಲಿ ಗುಮಾಸ್ತರಾಗಿ. ಕಚೇರಿಯ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಗಳಿಸಿದ್ದು ಇನ್ ಸ್ಪೆಕ್ಟರ್ ಹುದ್ದೆ. ಈ ನೌಕರಿಯೂ ಬೇಡವೆನಿಸಿ ಸಲಹೆಗಾರರಾಗಿ ದುಡಿದು ನಿವೃತ್ತಿ. ಮುಂಬಯಿಯ ಕನ್ನಡ ಸಂಘಗಳೊಡನೆ ನಿಕಟ ಸಂಪರ್ಕ. ಮಾತುಂಗ (ಪೂರ್ವ)ದಲ್ಲಿ ಪ್ರಾರಂಭಿಸಿದ ಕನ್ನಡ ಸಂಘದ ಕಾರ್ಯದರ್ಶಿಯಾಗಿ ರೂಪಿಸಿದ ಹಲವಾರು ಕಾರ್ಯಕ್ರಮಗಳು. ‘ಸಾಹಿತ್ಯ ಸಂಧ್ಯೆ’ ಕಾರ್ಯಕ್ರಮದಡಿ ಕನ್ನಡ ಮತ್ತು ಮರಾಠಿ ಕವಿಗಳನ್ನು ಒಂದೇ ವೇದಿಕೆಗೆ ತಂದು ಕವಿತಾ ವಾಚನ ನಡೆಸಿ, ಪರಸ್ಪರ ಅನುವಾದದ ಕಾರ್ಯ ಕೈಗೊಂಡು ಎಲ್ಲರ ಮೆಚ್ಚುಗೆ ಪಡೆದ ಕಾರ್ಯಕ್ರಮ. ‘ಸೃಜನ ವೇದಿ’ ಚತುರ್ಮಾಸ ಪತ್ರಿಕೆ ಪ್ರಾರಂಭಿಸಿ ೪ ವರ್ಷಗಳ ಕಾಲ ಹೊತ್ತ ಸಂಪಾದಕರ ಜವಾಬ್ದಾರಿ. ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಲ್ಲದೆ, ಮುಂಬಯಿಯ ಆಕಾಶವಾಣಿ ಕೇಂದ್ರದಿಂದ ಹಲವಾರು ರೂಪಕಗಳು ಪ್ರಸಾರ. ೧೯೯೨ರಲ್ಲಿ ಸಂಸ್ಕೃತ ಅಧ್ಯಯನದಲ್ಲಿ ಆಸಕ್ತರಾಗಿ ಮುಂಬಯಿ ವಿ.ವಿ.ದಿಂದ ಪ್ರಥಮ ರ್ಯಾಂಕ್‌ನಲ್ಲಿ ಡಿಪ್ಲೊಮ ಪಡೆದುದಲ್ಲದೆ ಎಂ.ಎ. ಪದವಿಯನ್ನು ಮೊದಲ ದರ್ಜೆಯಲ್ಲಿ ಗಳಿಸಿದರು . ಇವರು ಬರೆದ ಹಲವಾರು ಕವಿತೆಗಳು ಪತ್ರಿಕೆಗಳಲ್ಲಿ ಬೆಳಕು ಕಂಡ ನಂತರ ‘ಕಾವ್ಯಾರ್ಪಣ’, ‘ಮಾಯಾವಿ’, ‘ಜರಾಸಂಧ’, ‘ನಾ ಭಾರತೀ ಕುಮಾರ’, ‘ನಗರಾಯಣ’, ‘ಆತ್ಮಭಾರತ’, ‘ಅಜ್ಞಾತ’, ‘ಜಂಕ್ಷನ್‌ ಕವಿತೆಗಳು’, ‘ಸಲೂನಿನಲ್ಲಿ ಹುಡುಗ’ ಮುಂತಾದ ಹತ್ತು ಕವನ ಸಂಕಲನಗಳಲ್ಲಿ ಸೇರಿವೆ. ಇವರು ಬರೆದ ವೈಚಾರಿಕ ಲೇಖನಗಳು ‘ಅಹತ’ ಎಂಬ ಸಂಗ್ರಹದಲ್ಲಿ ಪ್ರಕಟಗೊಂಡಿದೆ. ಭಟ್ಕಳದಲ್ಲಿ ನಡೆದ ಉತ್ತರಕನ್ನಡ ಜಿಲ್ಲಾ ಸಮ್ಮೇಳದ ಅಧ್ಯಕ್ಷತೆ, ಶಂಬಾ ಜೋಶಿಯವರ ಅಧ್ಯಕ್ಷತೆಯಲ್ಲಿ ಮಡಿಕೇರಿಯಲ್ಲಿ ೧೯೮ ೧ ರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ, ‘ಆತ್ಮಭಾರತ’ ಕವನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಮುಂತಾದ ಪ್ರಶಸ್ತಿ, ಗೌರವಗಳಿಗೆ ಪಾತ್ರರಾಗಿದ್ದ ಅರವಿಂದ ನಾಡಕರ್ಣಿಯವರು ಕಾವ್ಯಜಗತ್ತಿನಿಂದ ದೂರವಾದದ್ದು ೨೦೦೮ರ ಮೇ ೧೯ ರಂದು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

ಕೇಂದ್ರ ಸರ್ಕಾರದ ಜಾಲತಾಣಗಳು

ತಾಂತ್ರಿಕ‌ ಜಾಲತಾಣಗಳು

ಕನ್ನಡ ಸಂಬಂಧಿ ಜಾಲತಾಣಗಳು

ಆಯೋಗಗಳು

ನ್ಯಾಯಾಲಯಗಳು

ಡೌನ್‌ಲೋಡ್‌ಗಳು

Go to Top