೧೮-೬-೧೯೧೨ ೧೬-೧-೧೯೯೪ ನವೋದಯ ಕಥೆಗಾರರಲ್ಲಿ ವಿಶಿಷ್ಟ ಲೇಖಕರೆನಿಸಿದ್ದ ಅಶ್ವತ್ಥನಾರಾಯಣ ರಾವ್ರವರು ಹುಟ್ಟಿದ್ದು ಮೈಸೂರಿನಲ್ಲಿ. ತಂದೆ ಸೋಮಯ್ಯನವರು, ತಾಯಿ ಲಕ್ಷ್ಮಮ್ಮ. ಮೂಲತಃ ತೀರ್ಥ ಹಳ್ಳಿಯವರಾದ ಇವರ ವಂಶಜರು ಬಂದು ನೆಲೆಸಿದ್ದು ಚಿಕ್ಕಮಗಳೂರು ಜಿಲ್ಲೆಯ ಕೂದುವಳ್ಳಿಯಲ್ಲಿ. ತಾಯಿಯ ಅಕಾಲ ಮರಣದಿಂದ ಅಶ್ವತ್ಥರು ಬೆಳೆದದ್ದು ಸಂಬಂಧಿಗಳಾದ ಕೆರೆಗೋಡು ಕೃಷ್ಣರಾಯರ ಮನೆಯಲ್ಲಿ. ಓದಿದ್ದು ಮೈಸೂರು ಹಾಗೂ ಬೆಂಗಳೂರಿನಲ್ಲಿ. ಎಂಜನಿಯರಿಂಗ್ ಪದವೀಧರರಾದ ಅಶ್ವತ್ಥರು ಕೆಲಕಾಲ ಲೋಕೋಪಯೋಗಿ ಇಲಾಖೆಯಲ್ಲಿ ಗುತ್ತಿಗೆ ಕೆಲಸ. ಕೆಲಕಾಲ ಸಿಮ್ಲಾದಲ್ಲಿ ಮಿಲಿಟರಿ ಎಂಜನಿಯರಿಂಗ್ನಲ್ಲೂ ಸೇವೆ. ದೇಶದಲ್ಲಿ ಹೊತ್ತು ಉರಿಯುತ್ತಿದ್ದ ಸ್ವಾತಂತ್ರ್ಯ ಚಳವಳಿಯಲ್ಲೂ ಭಾಗಿ. ಗಾಂಜಿಯವರಿಂದ ಪ್ರಭಾವಿತರಾಗಿ ಉದ್ಯೋಗಕ್ಕೆ ರಾಜೀನಾಮೆ. ನಂತರ ಮದನಮೋಹನ ಮಾಳವೀಯರಿಂದ ಬನಾರಸ್ ಹಿಂದೂ ಮಹಾವಿಶ್ವವಿದ್ಯಾಲಯಕ್ಕೆ ಅಧ್ಯಾಪಕರಾಗಿ ಆಹ್ವಾನ. ಹದಿನೆಂಟು ವರ್ಷಕಾಲ ತಮಗೆ ಪ್ರಿಯವೆನಿಸಿದ ಅಧ್ಯಾಪಕ ವೃತ್ತಿಯಲ್ಲಿ ದೀರ್ಘ ಸೇವೆ. ಎಂಟು ವರ್ಷ ಸೇವಾವ ಇರುವಾಗಲೇ ಸ್ವಯಂ ನಿವೃತ್ತಿ ಬಯಸಿ, ಮೈಸೂರಿಗೆ ಬಂದು ಪ್ರಾರಂಭಿಸಿದ್ದು ಅಧ್ಯಯನ ಹಾಗೂ ಬರವಣಿಗೆ. ನವೋದಯ ಕಾಲದ ಪ್ರತಿಭಾನ್ವಿತ ಕಥೆಗಾರರಲ್ಲೊಬ್ಬರೆನಿಸಿದರು. ಹಲವಾರು ಕಥೆ-ಕಾದಂಬರಿ, ನಾಟಕ, ಪ್ರಬಂಧ-ಹೀಗೆ ಎಲ್ಲಾ ಪ್ರಕಾರಗಳಲ್ಲೂ ಕೃತಿ ರಚನೆ. ಮಾಸ್ತಿಯವರ ‘ಜೀವನ’ ಪತ್ರಿಕೆಯಲ್ಲೂ ಹಲವಾರು ಕಥೆಗಳು ಪ್ರಕಟಿತ. ಪ್ರಕಟಿತ ಕಥಾ ಸಂಕಲನದಲ್ಲಿ ಮುಖ್ಯವಾದುವು-ದೂರದ ಕಾಶಿಯಲ್ಲಿ, ಬಾಳ ಹೊಳೆ, ಅಗ್ನಿಸಾಕ್ಷಿ, ಜಯಂತಿ, ನೋವು ನಲಿವು ಮುಂತಾದುವು. ಗಾಂತತ್ತ್ವ, ಹಾಸ್ಯ, ನೀತಿಯಿಂದ ಕೂಡಿದ ಕಥೆಗಳು ಎಲ್ಲರ ಮೆಚ್ಚುಗೆ ಪಡೆದಿದ್ದುವು. ಚಲನಚಿತ್ರ ಲೋಕದಲ್ಲೂ ಇವರ ಎರಡು ಕಾದಂಬರಿಗಳು ಗಳಿಸಿದ ಖ್ಯಾತಿ. ಮುನಿಯನ ಮಾದರಿ ಮತ್ತು ರಂಗನಾಯಕಿ. ಮತ್ತೊಂದು ಹೆಸರು ಗಳಿಸಿದ ಕಾದಂಬರಿ ಮರ್ಯಾದೆ ಮಹಲು. ರಚಿಸಿದ ನಾಟಕಗಳು ಹದಿನೆಂಟು. ಪ್ರಬಂಧ ಸಂಕಲನ-ಮೂಗಿನ ಮೇಲೆ, ಇದರಲ್ಲಿ ಮೂಗಿನ ಮೇಲೆ, ಇಂದಿನ ಪತ್ರಿಕೆ ನೋಡಿದ್ದೀರಾ, ಬನ್ನಿ ನನ್ನ ಉಪವನಕೆ, ನವ್ಯವಾಗಿ, ಬಡ ಮುತ್ತೈದೆ ಹಾರ್ಮೋನಿಯಂ, ಕ್ರಿಕೆಟ್ ಓದೋಣ, ಸಮಿತಿಮಯ ಜಗತ್, ರೋಗಿಷ್ಠರು ಮುಂತಾದ ೮ ಲೇಖನಗಳಿಂದ ಕೂಡಿದ ವಿಶಿಷ್ಟ ಪ್ರಬಂಧ ಸಂಕಲನ. ಖಂಡಕಾವ್ಯ-ಮಹಾಯುದ್ಧ. ಸೃಜನಶೀಲ ಅಶ್ವತ್ಥರದು ಬಹು ಸರಳ ಬದುಕು. ನಂಬಿದ ತತ್ತ್ವಗಳಿಗೆ ಬದ್ಧರಾದ ಬದುಕು. ಗಳಿಸಿದ್ದನ್ನೆಲ್ಲಾ ಸಾರ್ವಜನಿಕ ಉಪಯೋಗಕ್ಕೆ ಬಿಟ್ಟು ಹೋದ ತ್ಯಾಗಮಯಿ. ಪ್ರಶಸ್ತಿ, ಪುರಸ್ಕಾರ, ಮಾನ-ಸನ್ಮಾನಗಳಿಗೆ ಎಂದೂ ತಲೆಬಾಗಲೇ ಇಲ್ಲ. ಇದೇ ದಿನ ಹುಟ್ಟಿದ ಸಾಹಿತಿಗಳು. : ಬಿ.ಎಸ್. ಸಣ್ಣಯ್ಯ – ೧೯೨೮ ಚಂದ್ರಶೇಖರ ಪಾಟೀಲ – ೧೯೩೯ ಶಂಶ ಐತಾಳ – ೧೯೪೨ ಕವಿತಾ ಕುಸಗಲ್ಲ – ೧೯೭೮ ಡಾ. ಶ್ಯಾಮಲಾ ರತ್ನಕುಮಾರಿ ಬೆಂ.ಶಾ. – ೧೯೫೦

