೯-೫-೧೯೦೮ ೮-೭-೧೯೭೧ ಕನ್ನಡನಾಡು, ನುಡಿಯ ಬಗ್ಗೆ ಮುಂಚೂಣಿ ಹೋರಾಟಗಾರರಾಗಿ ತನು ಕನ್ನಡ, ಮನ ಕನ್ನಡ, ನುಡಿ ಕನ್ನಡ ಎಂದು ಬದುಕಿರುವವರೆಗೂ ನಂಬಿ, ಕನ್ನಡಿಗರಲ್ಲಿ ಕನ್ನಡತನವನ್ನು ಬಡಿದೆಬ್ಬಿಸಿದ ಅ.ನ.ಕೃ.ರವರು ಹುಟ್ಟಿದ್ದು ಹಾಸನ ಜಿಲ್ಲೆಯ ಅರಕಲಗೂಡು. ತಂದೆ ನರಸಿಂಗರಾಯರು, ತಾಯಿ ಅನ್ನಪೂರ್ಣಮ್ಮ . ಅಜ್ಜ ಕೃಷ್ಣಪ್ಪ ದೊಡ್ಡ ವಿದ್ವಾಂಸರು. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಬೆಂಗಳೂರು ಮತ್ತು ಕೋಲಾರ. ಓದಿದ್ದು ಇಂಟರ್ಮೀಡಿಯೆಟ್ವರೆಗೆ. ಕಲಕತ್ತಾದ ಶಾಂತಿನಿಕೇತನದಲ್ಲಿ ರವೀಂದ್ರನಾಥ ಠಾಕೂರರ ಶಿಷ್ಯತ್ವ ಕೆಲಕಾಲ. ಶಾಲಾ ಜೀವನದಲ್ಲೇ ಹತ್ತಿದ ಸಾಹಿತ್ಯದ ಗೀಳು. ನಟ ವರದಾಚಾರ್ಯರು ಒಡ್ಡಿದ ಸವಾಲಿಗೆ ಉತ್ತರವಾಗಿ ಒಂದೇ ರಾತ್ರಿಯಲ್ಲಿ ರಚಿಸಿದ ನಾಟಕ ‘ಮದುವೆಯೋ ಮನೆ ಹಾಳೋ.’ ಮುಂದೆ ಸಾಹಿತ್ಯವೇ ಬದುಕಾಯಿತು. ಜೀವನಯಾತ್ರೆ ಮೊದಲ ಕಾದಂಬರಿ. ಸಂಧ್ಯಾರಾಗ, ಉದಯರಾಗ, ಸಾಹಿತ್ಯರತ್ನ, ನಟಸಾರ್ವಭೌಮ, ವಿಜಯನಗರ ಸಾಮ್ರಾಜ್ಯ ಮಾಲೆಯ ಹತ್ತು ಸಂಪುಟಗಳು ಇಂದಿಗೂ ಮಹತ್ವದ ಕೃತಿಗಳು. ಕಲಾವಿದರ ಬದುಕನ್ನಾಧರಿಸಿ, ವೇಶ್ಯಾಜೀವನವನ್ನಾಧರಿಸಿ, ಸ್ತ್ರೀ ಕೇಂದ್ರೀಕೃತ ವಸ್ತುವುಳ್ಳ, ಸಂಗ್ರಾಮವನ್ನಾಧರಿಸಿದ…ಹೀಗೆ ಬದುಕಿನ ನಾನಾ ರಂಗಗಳನ್ನು ಪರಿಶೋಸಿ ತೆರೆದಿಟ್ಟ ಕಾದಂಬರಿಗಳ ಸಂಖ್ಯೆ ೧೧೬ (ಐತಿಹಾಸಿಕ ೧೪ ಕಾದಂಬರಿ ಸೇರಿ). ಅಗ್ನಿಕನ್ಯೆ, ಕಣ್ಣಾಮುಚ್ಚಾಲೆ, ಕಾಮನ ಸೋಲು, ಕಿಡಿ, ಪಾಪಪುಣ್ಯ ಮುಂತಾದ ಎಂಟು ಕಥಾ ಸಂಕಲನಗಳು ; ಮದುವೆಯೋ ಮನೆಹಾಳೋ, ಆದದ್ದೇನು ?, ಆಹುತಿ, ಬಣ್ಣದ ಬೀಸಣಿಗೆ ಮೊದಲಾದ ಹನ್ನೊಂದು ಸಾಮಾಜಿಕ ನಾಟಕಗಳು ; ಹಿರಣ್ಯಕಶಿಪು, ಸ್ವರ್ಣಮೂರ್ತಿ ಮುಂತಾದ ನಾಲ್ಕು ಪೌರಾಣಿಕ ನಾಟಕಗಳು; ಅನುಗ್ರಹ, ಜಗಜ್ಯೋತಿ, ರಜಪೂತ ಲಕ್ಷ್ಮಿ, ಕಿತ್ತೂರ ಚೆನ್ನಮ್ಮ ಮೊದಲಾದ ಏಳು ಐತಿಹಾಸಿಕ ನಾಟಕಗಳು, ಅಖಂಡ ಕರ್ನಾಟಕ, ಕನ್ನಡದ ದಾರಿ, ಕರ್ನಾಟಕದ ಹಿತಚಿಂತನೆ, ಬಳ್ಳಾರಿ ಸಮಸ್ಯೆ ಮತ್ತು ಕರ್ನಾಟಕ ಪ್ರಾಂತ್ಯ ಮುಂತಾದ ಇಪ್ಪತ್ತೊಂದು ಪ್ರಬಂಧ, ವಿಮರ್ಶೆಗಳು. ಹನ್ನೆರಡು ಜೀವನ ಚರಿತ್ರೆ, ಹನ್ನೊಂದು ಸಂಪಾದಿತ ಗ್ರಂಥ, ನಾಲ್ಕು ಅನುವಾದಗಳು ಸೇರಿ ಒಟ್ಟು ಇನ್ನೂರ ಐವತ್ತಕ್ಕೂ ಹೆಚ್ಚು ಕೃತಿ ರಚನೆ. ಸಾಹಿತ್ಯ, ನಾಟಕವಲ್ಲದೆ ಚಿತ್ರಕಲೆ, ಸಂಗೀತದಲ್ಲೂ ಆಸಕ್ತಿ, ಕಥಾಂಜಲಿ, ವಿಶ್ವವಾಣಿ, ಕನ್ನಡ ನುಡಿ, ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಮುಂತಾದುವುಗಳ ಸಂಪಾದಕರಾಗಿ, ಚಲನಚಿತ್ರೋದ್ಯಮದಲ್ಲಿ ಸಕ್ರಿಯರಾಗಿ, ಪ್ರಗತಿಶೀಲ ಚಳವಳಿಯ ಮುಂದಾಳಾಗಿ ದುಡಿದರು. ಕನ್ನಡ ನಾಡು ನುಡಿಗಾಗಿ ಶ್ರಮಿಸಿದ ಇವರನ್ನು ಮಣಿಪಾಲದ ೪೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ನಾಡು ಗೌರವಿಸಿತು. ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಥಮ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ರಸಚೇತನ ಅರ್ಪಿಸಿದ ಗೌರವ ಗ್ರಂಥ ; ಆತ್ಮಚರಿತ್ರೆ-ಬರಹಗಾರನ ಬದುಕು ಅನಕೃ, ಚಿರಚೇತನ ಸಂಸ್ಮರಣ ಗ್ರಂಥಗಳು. ಇದರ ಜೊತೆಗೆ ಸೇವ ನಮಿರಾಜಮಲ್ಲ, ಶಾ.ಮಂ.ಕೃಷ್ಣರಾಯ, ಜಿ.ಎಸ್.ಆಮೂರ ಮುಂತಾದ ೮ ಮಂದಿ ಸಾಹಿತಿಗಳು ಅ.ನ.ಕೃ. ಬಗ್ಗೆ ಗ್ರಂಥ ರಚಿಸಿ ಗೌರವ ತೋರಿದ್ದಾರೆ. ಇದೇ ದಿನ ಹುಟ್ಟಿದ ಸಾಹಿತಿಗಳು : ರಾ. ಸತ್ಯನಾರಾಯಣ – ೧೯೨೯ ಜಿ.ಕೆ. ಗುಂಡೂರಾವ್ – ೧೯೩೯ ಟಿ.ಎಸ್. ರಾಜಪ್ಪ – ೧೯೪೨

