ಅ.ರಾ.ಸೇ (ಅ.ರಾ. ಸೇತುರಾಮರಾವ್)

Home/Birthday/ಅ.ರಾ.ಸೇ (ಅ.ರಾ. ಸೇತುರಾಮರಾವ್)
Loading Events
This event has passed.

೨೬.೦೧.೧೯೩೧. ಹಾಸ್ಯಲೇಖಕ, ಅಧ್ಯಾತ್ಮಿಕ ಗ್ರಂಥಗಳ ಕರ್ತೃ ಅ.ರಾ.ಸೇ.ಯವರು ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ ಭರಮ ಸಾಗರದಲ್ಲಿ. ೧೯೩೧ರ ಜನವರಿ ಗಣರಾಜ್ಯೋತ್ಸವದಂದು. ತಂದೆ ಅಣಜಿ ರಾಮಣ್ಣ, ತಾಯಿ ಸಂಜೀವಮ್ಮ. ಪ್ರಾರಂಭಿಕ ಶಿಕ್ಷಣ ಹುಟ್ಟಿದ ಊರಾದ ಭರಮ ಸಾಗರದಲ್ಲಿ. ಪ್ರೌಢಶಾಲೆ ಹಾಗೂ ಇಂಟರ್ ಮೀಡಿಯೆಟ್‌ ಓದಿದ್ದು ದಾವಣಗೆರೆಯಲ್ಲಿ. ಬಿ.ಎಸ್ಸಿ ಪದವಿ ಪಡೆದದ್ದು ಬೆಂಗಳೂರಿನಲ್ಲಿ. ಬೋಧಕ ವೃತ್ತಿಯನ್ನು ಪ್ರಾರಂಭಿಸಿದ್ದು ಕನ್ನಡ ಶಾಲಾ ಅಧ್ಯಾಪಕರಾಗಿ. ನಂತರ ಎಂ.ಎ., ಬಿ.ಎಡ್‌ ಪದವಿ ಗಳಿಸಿದ ನಂತರ ಜ್ಯೂನಿಯರ್ ಕಾಲೇಜಿನ ಉಪನ್ಯಾಸಕರಾಗಿ ನೇಮಕಗೊಂಡು ನಿವೃತ್ತರಾದರು. ಅಧ್ಯಾಪಕರಾಗಿದ್ದಾಗಿನಿಂದಲೂ ಭಾರತ ವ್ಯಾಖ್ಯಾನವನ್ನೂ ಬೆಳೆಸಿಕೊಂಡಿದ್ದು ಅ.ರಾ.ಸೇ. ಯವರಿಗೆ ಸಹವರ್ತಿಯಾಗಿದ್ದವರು ಎಸ್‌.ಜಿ. ಛಾಯಾಪತಿಯವರು. ೩೬ ವರ್ಷಗಳ ಕಾಲ ಸತತವಾಗಿ ಈ ಕೈಂಕರ್ಯವನ್ನೂ ನಡೆಸಿಕೊಂಡು ಬಂದರು. ೧೯೫೦ರಲ್ಲಿ ಕೆಲವು ಕವನಗಳನ್ನು ರಚಿಸುವುದರ ಮೂಲಕ ಸಾಹಿತ್ಯ ಲೋಕವನ್ನೂ ಪ್ರವೇಶಿಸಿ ಬರೆದದ್ದು ಹಲವಾರು ಕವನಗಳು. ಆದರೆ ರಾಶಿಯವರ ನೇತೃತ್ವದಲ್ಲಿ ಪ್ರಕಟವಾಗುತ್ತಿದ್ದ ಕೊರವಂಜಿ ಪತ್ರಿಕೆಗೆ ಹಾಸ್ಯಲೇಖನಗಳನ್ನು ಬರೆಯುವುದರ ಮೂಲಕ ಹಾಸ್ಯಲೇಖಕರೆನಿಸಿಕೊಂಡರು. ಕೊರವಂಜಿಯಲ್ಲದೆ ಇವರ ಹಾಸ್ಯ ಬರಹಗಳು ಪ್ರಮುಖ ಪತ್ರಿಕೆಗಳಲ್ಲೂ ಪ್ರಕಟವಾಗತೊಡಗಿದವು. ಹೀಗೆ ಪ್ರಕಟವಾದ ಹಾಸ್ಯ ಬರಹಗಳನ್ನೂ ‘ಸುಳಿನಗು’, ‘ಮುಗಿಲುಹಳ್ಳಿ ಬಖೈರು’, ‘ಚಿರತೆ ವೀರನ ಕೋಟೆ’, ‘ಸೀನಣ್ಣನ ರೊಮಾನ್ಸ್‌’ ಮುಂತಾದ ಸಂಕಲನಗಳಲ್ಲಿ ಸೇರಿವೆ. ೧೯೯೨ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿಗಾಗಿ’ ವಿನೋದ ಸಾಹಿತ್ಯ’ ವನ್ನೂ ಸಂಪಾದಿಸಿಕೊಟ್ಟಿದ್ದಾರೆ. ‘ಯಥಾಗತ’, ‘ತದನಂತರ’ ಇವರು ಬರೆದ ಎರಡು ಕಾದಂಬರಿಗಳು ಸುಧಾ ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿವೆ. ‘ಸ್ವಗದಿರುಳು ನಲ್ವಗಲು’ ಇವರು ಬರೆದ ಮತ್ತೊಂದು ಹಾಸ್ಯಕಾದಂಬರಿ. ಹಾಸ್ಯ ಲೇಖನಗಳಷ್ಟೇ ಲಘು ಕವನಗಳನ್ನು ಬರೆದು ‘ನಗೆಮುಗಿಲು’, ‘ಸುಸ್ಮಿತ’ ಎಂಬ ಸಂಗ್ರಹಗಳಲ್ಲಿ ಹೊರತಂದಿದ್ದಾರೆ. ‘ಮೂಡಲ ಪಯಣ’ ಎಂಬುದು ಇವರ ಪ್ರವಾಸ ಕಥನ ಕೃತಿ. ಹಾಸ್ಯ ಬರಹಗಳಿಂದ ಅಧ್ಯಾತ್ಮಿಕದ ಕಡೆ ಸಾಗಿದ ಅ.ರಾ.ಸೇ. ಯವರು ತೊರವೆ ರಾಮಾಯಣ, ವಾಲ್ಮೀಕಿ ರಾಮಾಯಣಗಳನ್ನಾಧರಿಸಿ ಬರೆದ ಕೃತಿ ‘ಶ್ರೀ ಸುಂದರ ಕಾಂಡ’. ದಕ್ಷಿಣ ವಾರಣಾಸಿ ಅಲಂಪೂರು, ಶಿಶುನಾಳ ಶರೀಫರ ನೂರಾರು ತತ್ತ್ವಪದಗಳು, ಪ್ರತಿಯೊಂದು ಪದಕ್ಕೂ ವ್ಯಾಖ್ಯಾನಮಾಡಿ, ನಾಲ್ಕಾರು ಮಹಾಭಾರತಗಳನ್ನು ತುಲನೆಮಾಡಿ, ಕೆಲಪ್ರಕ್ಷಿಪ್ತ ಭಾಗಗಳನ್ನು ಸೇರಿಸಿ ರಚಿಸಿದ ಕೃತಿ ‘ಕುಮಾರವ್ಯಾಸ ಭಾರತ’, ಲಕ್ಷ್ಮೀಶನ ಜೈಮಿನಿ ಭಾರತ, ಅಧ್ಯಾತ್ಮ ಸಾಹಿತ್ಯ ಕುರಿತ ಪರಿಚಯ ಗ್ರಂಥ ಬ್ರಹ್ಮ ಸೂತ್ರಗಳು, ಅನುಭವಾಮೃತ ಮತ್ತು ನಾಗರಸನ ಭಗವದ್ಗೀತೆಗಳ ಗದ್ಯರೂಪಾಂತರ, ಶ್ರೀ ಶಂಕರಲಿಂಗ ಭಗವಾನ್‌ ಸರಸ್ವತಿ ಪರಮಹಂಸರ ಜೀವನ ಚರಿತ್ರೆಯಾದ ‘ಶ್ರೀ ಗುರುಕಥಾಮೃತ’- ಇವು ಪ್ರಮುಖ ಸಂಪಾದಿತ ಕೃತಿಗಳು. ತುಂಬುಗೆರೆ ‘ಬ್ರಹ್ಮಾನಂದರು’ ಜೀವನ ಚರಿತ್ರೆ. ಇವಲ್ಲದೆ ಅಧ್ಯಾತ್ಮಿಕ ಪಾರಿಭಾಷಿಕ ಶಬ್ದಗಳ ಪದಕೋಶವಾದ ‘ಪರಮಾರ್ಥ ಪದಕೋಶ’, (ಮಿನಿ) ವಿಶ್ವಕೋಶ ಇವೆರಡೂ ಪ್ರಕಟಗೊಂಡಿವೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top