Loading Events

« All Events

  • This event has passed.

ಆಗುಂಬೆ ಎಸ್. ನಟರಾಜ್

November 20, 2023

೨೦.೧೧.೧೯೩೯ ಕೇಂದ್ರ ಸರಕಾರದ ರಕ್ಷಣಾ ಇಲಾಖೆ, ಬ್ಯಾಂಕ್ ಉದ್ಯೋಗ, ಕಿರ್ಲೋಸ್ಕರ್ ಎಲೆಕ್ಟ್ರಿಕ್ ಕಂಪನಿ ಹೀಗೆ ನಾನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ನಟರಾಜ್ ರವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ೧೯೨೯ರ ನವಂಬರ್ ೨೦ ರಂದು. ತಂದೆ ಎ.ಎಸ್.ಭಟ್, ತಾಯಿ ಲಕ್ಷ್ಮಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ನಂಜನಗೂಡು, ಗುಂಡ್ಲು ಪೇಟೆ, ಮತ್ತು ಮೈಸೂರಿನಲ್ಲಿ. ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಬಿ.ಕಾಂ., ಬಿ.ಎಲ್ ಪದವಿಯ ಜೊತೆಗೆ ಬ್ಯಾಂಕ್ ಪರೀಕ್ಷೆಯಾದ ಸಿ.ಎ.ಐ.ಐ.ಬಿ., ಅರ್ಹತಾ ಪತ್ರ ಪಡೆದವರು. ಉದ್ಯೋಗಕ್ಕಾಗಿ ಸೇರಿದ್ದು ಕಿರ್ಲೋಸ್ಕರ್ ಎಲೆಕ್ಟ್ರಿಕ್ ಕಂಪನಿ (೧೯೫೮-೬೩), ನಂತರ ಕರ್ನಾಟಕ ಎಲೆಕ್ಟ್ರಿಸಿಟಿ ಬೋರ್ಡ್, ಕೇಂದ್ರ ಸರಕಾರದ ರಕ್ಷಣಾ ಇಲಾಖೆಯ ಲೆಕ್ಕ ಪತ್ರ ವಿಭಾಗದಲ್ಲಿ ಸಲ್ಲಿಸಿದ ಸೇವೆ. ೧೯೯೫ ರಿಂದ ಕೆನರಾಬ್ಯಾಂಕ್ ಸೇರಿ ವಿವಿಧ ಶಾಖೆಗಳಲ್ಲಿ ಸೇವೆ ಸಲ್ಲಿಸಿ ಪಡೆದ ಸ್ವಯಂ ನಿವೃತ್ತಿ. ಕಾಲೇಜು ದಿನಗಳಿಂದಲೂ ಸಾಹಿತ್ಯದ ಬಗ್ಗೆ ಒಲವಿದ್ದು, ನಿವೃತ್ತಿಯ ನಂತರ ಈಗ ಪೂರ್ಣ ಪ್ರಮಾಣದ ಬರಹಗಾರರು. ಸದಾ ಒಂದಿಲ್ಲೊಂದು ಕಡೆ ಪ್ರವಾಸ ಅಥವಾ ಬಿಡುವಿನ ವೇಳೆಯಲ್ಲಿ ಸಾಹಿತ್ಯ ರಚನೆ. ಇವರ ಪ್ರವಸಾನುಭವದ ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಿತ. ’ಹೊರನಾಡಿನ ಮೂರು ಕರ್ನಾಟಕ ರಾಜ್ಯಗಳು’ ಕೃತಿಯಲ್ಲಿ ನೇಪಾಳದ ಮಿಥಿಲಾ ರಾಜ್ಯದ ರಾಜಧಾನಿಯಾಗಿ ನಾನ್ಯದೇವ, ಕ್ರಿ. ಶ. ೧೦೯೭ ರಲ್ಲಿ ರಾಜ್ಯ ಸ್ಥಾಪನೆ ಮಾಡಿದ್ದು, ಎಂಟು ಶತಮಾನಗಳ ಹಿಂದೆ ಬಂಗಾಳದ ನದಿಯೂ ಅಥವಾ ನಬೋ ದ್ವೀಪವನ್ನು ಕರ್ನಾಟಕದ ಮೂಲದ ಸೇನರು ಆಳಿದ್ದು, ತಮಿಳು ನಾಡಿನ ಶ್ರೀರಂಗಂ ನಿಂದ ೧೫ ಕಿ.ಮೀ. ದೂರದಲ್ಲಿರುವ ಕಣ್ಣಾನೂರನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಹೊಯ್ಸಳರು ರಾಜ್ಯವಳಿದ್ದು ಇವೆಲ್ಲವನ್ನು ತಮ್ಮ ಅನ್ವೇಷಣೆಯಿಂದ, ಸಂಶೋಧನೆಯಿಂದ ರಚಿಸಿದ ಕೃತಿ. ಹೀಗೆ ಹೊರರಾಜ್ಯಗಳಿಗೆ ಪ್ರವಾಸ ಹೋಗಿ ಸಂಶೋಧನೆಯ ಮುಖಾಂತರ ಕೃತಿ ಪ್ರಕಟಿಸುವುದರ ಜೊತೆಗೆ ‘ಇದು ದಿಲ್ಲಿ! ಇದು ದೆಹಲಿ!’ ‘ದಿಲ್ಲಿಯಿಂದ ತಾಯ್ಡೀ ಸುರ್ಲಾಗೆ’ ಮತ್ತು ‘ಇದು ಕಾಶಿ! ಇದು ವಾರಣಾಸಿ!’ ಮುಂತಾದ ಪ್ರವಾಸ ಕೃತಿಗಳ ರಚನೆ. ಪ್ರವಾಸ ಸಾಹಿತ್ಯವನ್ನಷ್ಟೇ ಅಲ್ಲದೆ ಕಾದಂಬರಿ, ಹನಿಗವನ, ಹಾಸ್ಯಕಥೆ, ವ್ಯಕ್ತಿ ಚಿತ್ರಗಳು, ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ‘ಬಾತುಕೋಳಿ’ ಮತ್ತು ‘ಆತಂಕ’ ಎಂಬ ಎರಡು ಕಾದಂಬರಿಗಳು. ‘ಚಕ್ಕಂದ’ ಎಂಬ ಹನಿಗವನ ಸಂಕಲನ, ‘ರಸನಿಮಿಷ’ ಎಂಬ ಹಾಸ್ಯಕಥೆಗಳ ಸಂಗ್ರಹ. ‘ರಸವೈಚಾರಿಕತೆ’ ಎಂಬ ವೈಚಾರಿಕ ಸಾಹಿತ್ಯ ಕೃತಿಯನ್ನು ರಚಿಸಿದ್ದಾರೆ. ಇವರು ರಚಿಸಿದ ಜೀವನ ಚಿತ್ರಾವಳಿಯಲ್ಲಿ ಜೀವನ ಚರಿತ್ರೆಗಳು, ವ್ಯಕ್ತಿ ಚಿತ್ರಣಗಳೂ ಸೇರಿವೆ. ಜೀವನ ಚಿತ್ರಾವಳಿ ಭಾಗ ೧ ರಿಂದ ೩ ರವರೆಗೆ ಯೂರೋಪಿನ ಕೆಲವು ಪ್ರಸಿದ್ಧ ದಾರ್ಶನಿಕರ ಸಂಕ್ಷಿಪ್ತ ವ್ಯಕ್ತಿ ಚಿತ್ರಣಗಳನ್ನು ಬಿಡಿಸಿದ್ದಾರೆ, ಸರ್ದಾರ್ ವಲ್ಲಭಾಯ್ ಪಟೇಲ್, ರಾಣಿ ವಿಕ್ಟೋರಿಯಾ, ಫ್ಲಾರೆನ್ಸ್ ನೈಟಿಂಗೇಲ್ ಮುಂತಾದ ಜೀವ ಚರಿತ್ರೆಗಳನ್ನು ರಚಿಸಿದ್ದಾರೆ. ‘SECULARISM’ ಎಂಬ ಪುಸ್ತಕವನ್ನು ಇಂಗ್ಲಿಷ್‌ನಲ್ಲಿ ರಚಿಸಿದಾಗ ಮುಸ್ಲಿಂರ ಪವಿತ್ರ ಗ್ರಂಥವಾದ ಖುರಾನ್‌ಬಗ್ಗೆ ಕೂಡಾ ಅರಿಯಲು ಯತ್ನಿಸಿ ‘ದಿ ಲೈಫ್ ಆಫ್ ಮೊಹಮದ್‌’ ಗ್ರಂಥ ಓದಿದ ನಂತರ ಬರೆದ ಗ್ರಂಥ ‘ಮೊಹಮದ್ ಪೈಗಂಬರ್‌ಮತ್ತು ಖಲೀಫರು’ ಎಂಬುದು ಇವರ ಮತ್ತೊಂದು ಬೃಹತ್ ಕೃತಿ. ‘ದಿಲ್ಲಿ ದಂಗೆ ಮತ್ತು ಇತರ ಕಥೆಗಳು – ಕಥಾ ಸಂಕಲನ. ಹೀಗೆ ಸಾಹಿತ್ಯ, ಪ್ರವಾಸ, ಸಂಶೋಧನೆಯಲ್ಲಿ ತೊಡಗಿಸಿ ಕೊಂಡಿದ್ದು ಒಟ್ಟು ೨೦ ವಿಶಿಷ್ಟ ರೀತಿಯ ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ.

Details

Date:
November 20, 2023
Event Category: