ಆದ್ಯರಾಮಾಚಾರ್ಯ

Home/Birthday/ಆದ್ಯರಾಮಾಚಾರ್ಯ
Loading Events

೧೪.೧೧.೧೯೨೪ .೧೨.೨೦೧೦ ಉತ್ತರಾಧಿ ಮಠದ ವೇದೇಶ ತೀರ್ಥದಲ್ಲಿ ಮನೆತನದ ಪೂರ್ವಜರು ವ್ಯಾಸಂಗ ಮಾಡಿದ್ದಕ್ಕೆ ಮನೆತನಕ್ಕೆ ಬಂದ ಗೌರವ ಬಿರುದು ‘ಆರ್ಯ’. ಸ್ವಾತಂತ್ರ್ಯ ಸಂಗ್ರಾಮ, ಗಡ ವಿವಾದ, ಕರ್ನಾಟಕ ಏಕೀಕರಣಕ್ಕಾಗಿ ದುಡಿದ ಆದ್ಯ ರಾಮಾಚಾರ್ಯರು ಹುಟ್ಟಿದ್ದು ಬಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣದಲ್ಲಿ ೧೪ ರ ನವಂಬರ್ ೧೯೨೪ ರಲ್ಲಿ. ತಂದೆ ಸೇತುರಾಮಾ ಚಾರ್‌ಆದ್ಯ, ತಾಯಿ ಕಾಶೀಬಾಯಿ. ಪ್ರಾರಂಭಿಕ ಶಿಕ್ಷಣ ಲಚ್ಯಾಣ ಮತ್ತು ಭುಯ್ಯಾರ ಶಾಲೆಗಳಲ್ಲಿ, ಮಾಧ್ಯಮಿಕ ಶಿಕ್ಷಣ ಬಿಜಾಪುರದ ದರ್ಬಾರ ಹೈಸ್ಕೂಲಿನಲ್ಲಿ. ಸ್ವಾತಂತ್ರ್ಯ ಚಳವಳಿಯಿಂದ ಪ್ರೇರಿತರಾಗಿ ಚಳವಳಿಯಲ್ಲಿ ಭಾಗಿ, ವಿದ್ಯೆಗೆ ವಿರಾಮ. ಉದ್ಯೋಗಕ್ಕೆ ಸೇರಿದ್ದು ಬಿಜಾಪುರದಲ್ಲಿ ಫ. ಗು. ಹಳಕಟ್ಟಿಯವರ ಮುದ್ರಣಾಲಯದಲ್ಲಿ ಕೆಲಕಾಲ. ತಂದೆ ಸೇತೂರಾಮಾಚಾರ್ಯರಿಗೆ ಮೈಸೂರು ಅರಮನೆಯಲ್ಲಿ ಭಾಗವತ ಪ್ರವಚನಕ್ಕೆ ಬಂದ ಆಹ್ವಾನ. ರಾಮಾಚಾರ್ಯರೂ ಮೈಸೂರು ಸೇರಿ ‘ಉಷಾ ಸಾಹಿತ್ಯ ಮಾಲೆ’ಯಲ್ಲಿ ಕಂಡುಕೊಂಡ ಉದ್ಯೋಗ. ನಂತರ ಬೆಂಗಳೂರಿಗೆ ವಲಸೆ ಬಂದು ಸಂಪಾದಿಸಿದ್ದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕೆಲಸ. ಈ ಸಂದರ್ಭದಲ್ಲಿ ಬೆಳೆದ ಸಾಹಿತ್ಯ ಪರಿಚಾರಿಕೆ, ಕೃತಿರಚನೆ, ಸಂಶೋಧನೆ ಮುಂತಾದವುಗಳಲ್ಲಿ ತೋರಿದ ಆಸಕ್ತಿ. ಸರಕಾರ ರಚಿಸಿದ ‘ಗಡಿನಾಡು ಸಮಿತಿ’ಗಾಗಿ, ‘ಅಖಿಲ ಕರ್ನಾಟಕ ಗಡಿನಾಡು ಸಮಿತಿ’ ಎಂಬ ಖಾಸಗಿ ಸಮಿತಿ ನೇಮಕಗೊಂಡಾಗ ಅದರ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ. ಮಹಾರಾಷ್ಟ್ರ, ತಮಿಳುನಾಡು, ಆಂಧ್ರದ ಗಡಿಪ್ರದಶದಲ್ಲೆಲ್ಲಾ ಸಂಚರಿಸಿ, ವಾಸ್ತವಾಂಶಗಳನ್ನು ಸಂಗ್ರಹಿಸಿ ಸರಕಾರದ ಸಮಿತಿಗೆ ನೀಡಿದ ಮಹತ್ವದ ಅಂಶಗಳು. ಹವ್ಯಾಸಕ್ಕಾಗಿ ಬರವಣಿಗೆಯನ್ನು ಪ್ರಾರಂಭಿಸಿದ ರಾಮಾಚಾರ್ಯರಿಗೆ ಅದೇ ಪ್ರಮುಖ ವೃತ್ತಿಯಾಯಿತು. ಸಂಯುಕ್ತ ಕರ್ನಾಟಕ, ಕರ್ಮವೀರ, ಕಸ್ತೂರಿ ಪತ್ರಿಎಕಗಳಿಗಾಗಿ ಬರೆದ ನೂರಾರು ವಿದ್ವತ್‌ಪೂರ್ಣ ಲೇಖನಗಳು. ಹುಟ್ಟಿದ ಕೋಟೆ ಕೊತ್ತಲಗಳ ನಾಡಾದ ಬಿಜಾಪುರದ ಪ್ರೇರಣೆಯಿಂದ ರಚಿಸಿದ ಐತಿಹಾಸಿಕ ಕೃತಿಗಳು ಹಲವಾರು. ಹನುಮಧ್ವಜ ಹಾರಿತು, ಸೂರ್ಯಾಸ್ತ, ವಿಜಾಪುರದ ಪತನ, ಶಂಭೂ, ಶ್ರೀದರ್ಶನ, ಶ್ರೀ ಸಮರ್ಥ, ಧನಂಜಯ, ಕಾಶ್ಮೀರದ ಜ್ವಾಲಾಮುಖಿ, ಮಾತೃಛಾಯ, ವಿಕ್ರಾಂತ ಕೇಸರಿ, ಭಾರತೀಯ ಮುಸಲ್ಮಾನರ ಶೋಧ ಹಾಗೂ ಬೋಧ, ರಂಭಾ, ಪ್ರಸನ್ನ ವೆಂಕಟ, ರಾಜಯೋಗಿ ಮುಂತಾದ ಕೃತಿಗಳು. ‘ರಾಜಯೋಗಿ’ಯು ಶಿವಾಜಿ ಮಹಾರಾಜರನ್ನು ಕುರಿತ ಅಧ್ಯಯನ ಪೂರ್ಣ ಕಾದಂಬರಿ ಎನಿಸಿ ಮಹಾರಾಷ್ಟ್ರದ ಸಂಶೋಧಕ, ಸಾಹಿತಿಗಳ ಗಮನ ಸೆಳೆದ ಕೃತಿ. ಮಹಾಭಾರತದ ಕರ್ಣನ ವ್ಯಕ್ತಿ ಚಿತ್ರಣದ ‘ರಾಧೇಯ’ ಮೂರು ಮುದ್ರಣ ಹಾಗೂ ಇಂಗ್ಲಿಷ್‌ಗೆ, ‘ಆಚಾರ್ಯದ್ರೋಣ’ ಎರಡು ಮುದ್ರಣ ಹಾಗೂ ಮಲಯಾಳಂಗೆ ಅನುವಾದಗೊಂಡ ಕೃತಿಗಳು. ೧೦ ಸಾಮಾಜಿಕ ಕಾದಂಬರಿಗಳು, ೧೨ ಧಾರ್ಮಿಕ ಗ್ರಂಥಗಳು, ತಿರುಪತಿಕ್ಷೇತ್ರ ಮತ್ತು ಶ್ರೀಕೃಷ್ಣ ದ್ವಾರಕಾ ಎಂಬ ಎರಡು ಕ್ಷೇತ್ರ ಪರಿಚಯ ಕೃತಿಗಳು, ೮ ಸಂಪಾದಿತ ಗ್ರಂಥಗಳೂ ಸೇರಿ ಒಟ್ಟು೬೦ ಕ್ಕೂ ಹೆಚ್ಚು ಕೃತಿ ಪ್ರಕಟಿತ. ಹಲವಾರು ಸಮಿತಿಗಳಲ್ಲಿ ಹೊತ್ತು ಜವಾಬ್ದಾರಿಯುತ ಸ್ಥಾನಗಳು. ಲೋಕಮಾನ್ಯ ತಿಲಕರ ಶತಮಾನೋತ್ಸವ ಸಮಿತಿ, ಮೈಸೂರ ಮಹಾರಾಜ ಸಂಸ್ಕೃತ ಕಾಲೇಜಿನ ಆಗಮ ಪರೀಕ್ಷಾ ವಿಭಾಗದ ಸಲಹಾ ಸಮಿತಿ, ಅಖಿಲ ಭಾರತ ಕಾಂಗ್ರೆಸ್ ಕಮಿಟಿ ಕಾರ್ಯದರ್ಶಿ, ತಿರುಪತಿ ದಾಸ ಸಾಹಿತ್ಯ ಪ್ರಾಜೆಕ್ಟ್ ಮತ್ತು ಪ್ರಾಚೀನ ಗ್ರಂಥಗಳ ಮುದ್ರಣ ಅನುದಾನ ಸಮಿತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಸದಸ್ಯರಾಗಿ, ಅಖಿಲ ಭಾರತ ಮಾಧ್ವ ಮಹಾಮಂಡಲದ ಕಾರ್ಯಕಾರಿಸಮಿತಿಯ ಸದಸ್ಯರಾಗಿ, ಹಲವಾರು ಧಾರ್ಮಿಕ ಸಂಸ್ಥೆಗಳ, ದೇವಸ್ಥಾನಗಳ ಸಂಚಾಲಕರಾಗಿಯೂ ಸಲ್ಲಿಸಿದ ಸೇವೆ. ಆದ್ಯರಾಮಾಚಾರ್ಯರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ತಂಜಾವೂರಿನ ಇತಿಹಾಸ ರಚನೆಗಾಗಿ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಪ್ರತಿಷ್ಠಾನದಿಂದ ಬಂಗಾರದ ಪದಕ, ಕರ್ನಾಟಕ ರಾಜ್ಯ ಸಾಮಾಜಿಕ ಹಿತರಕ್ಷಣೆ ಮತ್ತು ಸಾಂಸ್ಕೃತಿಕ ಸಂಘದಿಂದ ಸನ್ಮಾನ, ಪೇಜಾವರ ವಿಶ್ವೇಶ ತೀರ್ಥರಿಂದ, ಪುತ್ತಿಗೆ ಮತ್ತು ಉತ್ತರಾಧಿ ಮಠಾಧೀಶರಿಂದ ಗೌರವಗಳು, ಬೆಂಗಳೂರಿನ ಜ್ಞಾನ ಜ್ಯೋತಿ ಕಲಾಮಂದಿರ ಮುಂತಾದವುಗಳಿಂದ ದೊರೆತ ಸನ್ಮಾನ ಗೌರವಗಳನ್ನು ಪಡೆದ ಆದ್ಯರು ತೀರಿಕೊಂಡಿದ್ದು ೪.೧೨.೨೦೧೦ ರಲ್ಲಿ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top