ಆನಂದಿ ಸದಾಶಿವರಾವ್

Home/Birthday/ಆನಂದಿ ಸದಾಶಿವರಾವ್
Loading Events
This event has passed.

೨೦..೧೯೨೯ ಐದು ದಶಕಗಳ ಹಿಂದೆಯೇ ಮಾನವೀಯ ಸಂಬಂಧಗಳ ಸೂಕ್ಷ್ಮತೆ, ಗಾಢತೆ, ಸಮಸ್ಯೆಗಳು ಮತ್ತು ಪರಿಹಾರ ಮುಂತಾದ ವಸ್ತುಗಳನ್ನಾರಿಸಿಕೊಂಡು ಕಥೆ, ಕವನ, ಕಾದಂಬರಿ ಮತ್ತು ಲೇಖನಗಳನ್ನೂ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಸಮರ್ಥವಾಗಿ ನಿರೂಪಿಸಿದ ಆನಂದಿ ಸದಾ ಶಿವರಾವ್‌ರವರು ಹುಟ್ಟಿದ್ದು ೧೯೨೯ ರ ಜನವರಿ ೨೦ ರಂದು ಮಂಗಳೂರಿನಲ್ಲಿ. ತಂದೆ ನರಸಪ್ಪಯ್ಯ, ತಾಯಿ ಕಾವೇರಿಬಾಯಿ. ಓದಿದ್ದು ಕದ್ರಿಯ ಮುನಿಸಿಪಲ್‌ ಶಾಲೆ, ಬೆಸೆಂಟ್‌ ಬಾಲಿಕಾ ಪಾಠಶಾಲೆ, ಬಲ್ಮಠದ (BELMONT ಎಂಬ ಯುರೋಪಿಯನ್‌ ಇದ್ದ ಮನೆ ಹೆಸರಿನ ಜಾಗ-ಈಗ ಬಲ್ಮಠ) ಸರಕಾರಿ ಹೆಣ್ಣುಮಕ್ಕಳಶಾಲೆ, ಮಂಗಳೂರಿನ ಸೇಂಟ್‌ ಆಗ್ನೇಸ್‌ ಕಾಲೇಜು ಹೀಗೆ ವಿವಿಧೆಡೆಯಲ್ಲಿ ಪಡೆದ ಶಿಕ್ಷಣ. ಕಾಲೇಜಿನಲ್ಲಿದ್ದಾಗಲೇ ಒಂದೆಡೆ ಇಂಗ್ಲಿಷ್ ಸಾಹಿತ್ಯದ ಬಗ್ಗೆ ಆಸಕ್ತಿ ಹೊಂದಿ ಓದಿದ ಇಂಗ್ಲಿಷ್‌ ಕಾದಂಬರಿಗಳ ಜೊತೆಗೆ ಕನ್ನಡವನ್ನು ಬೋಧಿಸುತ್ತಿದ್ದ ಕಡೆಂಗೋಡ್ಲೂ ಶಂಕರ ಭಟ್ಟರ ಪ್ರಭಾವದಿಂದ ಕನ್ನಡ ಸಾಹಿತ್ಯದ ಬಗ್ಗೆಯೂ ಬೆಳೆದ ಪ್ರೀತಿ. ಇಂಟರ್ ಮೀಡಿಯೆಟ್‌ ಮುಗಿಸಿದ ನಂತರ ನ್ಯಾಯವಾದಿಯಾಗಿದ್ದ ಸದಾಶಿವರಾಯರೊಡನೆ ವಿವಾಹ. ಗಂಡನ ಮನೆಯಲ್ಲಿ ಸಾಹಿತ್ಯ ಕೃಷಿಗೆ ದೊರೆತ ಪ್ರೋತ್ಸಾಹದಿಂದ ಪತ್ರಿಕೆಗಳಿಗೆ ಬರೆದ ಹಲವಾರು ಲೇಖನಗಳು. ಪ್ರಕಟಗೊಂಡಾಗ ಮನೆ ಸದಸ್ಯರೆಲ್ಲರಿಂದಲೂ ದೊರೆತ ಪ್ರಶಂಸೆ. ಇವರು ಬರೆದ ಸಣ್ಣ ಕಥೆಗಳು ಜನಪ್ರಗತಿ, ಕಥಾವಳಿ, ಪ್ರಜಾಮತ, ಕರ್ಮವೀರ, ರಾಷ್ಟ್ರಬಂಧು, ಚಿತ್ರಗುಪ್ತ, ಸಚೇತನ ರಾಯಭಾರಿ, ನವಯುಗ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಿತ. ೧೯೬೧ ರಲ್ಲಿ ಪ್ರಕಟವಾದ ಮೊದಲ ಕಥಾ ಸಂಕಲನ ‘ಅಪರ್ಣಾ’. ಇದರಲ್ಲಿ ಹದಿಮೂರು ಕಥೆಗಳಿವೆ. ಎರಡನೆಯ ಕಥಾ ಸಂಕಲನ ‘ಕಲಾವಿದ’ ೧೯೮೫ ರಲ್ಲಿ ಪ್ರಕಟವಾಯಿತು. ಇದರಲ್ಲಿ ಹನ್ನೆರಡು ಕಥೆಗಳಿವೆ. ನಂತರ ಪ್ರಕಟಗೊಂಡದ್ದು ‘ಸ್ವಾಭಿಮಾನ’. ಇದರಲ್ಲಿ ಹನ್ನೆರಡು ಕಥೆಗಳಿವೆ. ೨೦೦೩ ರಲ್ಲಿ ಪ್ರಕಟಗೊಂಡ ಕಥಾಸಂಕಲನ ‘ಉಡುಗೊರೆ ಮತ್ತು ಇತರ ಕಥೆಗಳು’. ಇಂಗ್ಲಿಷ್‌ ಸಾಹಿತ್ಯದಲ್ಲೂ ಅಷ್ಟೇ ಪ್ರೌಢಬರವಣಿಗೆಯನ್ನು ರೂಢಿಸಿಕೊಂಡಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಅತಿ ವಿರಳ ಇಂಗ್ಲಿಷ್‌ ಬರಹಗಾರ್ತಿ ಎನಿಸಿ ತಮ್ಮ ಬಹುಮುಖ ಪ್ರತಿಭೆಯಿಂದ ಇವರ ಬರೆದ ಕಥೆ, ಕವನ, ಲೇಖನಗಳು ಪೊಯಟ್‌, ಉಷಾ ಮತ್ತು ಡೆಕ್ಕನ್‌ ಹೆರಾಲ್ಡ್‌ ಮುಂತಾದ ಇಂಗ್ಲಿಷ್‌ ಪತ್ರಿಕೆಗಳಲ್ಲೂ ಪ್ರಕಟಗೊಂಡಿವೆ. ಇವರ ಮೊದಲ ಇಂಗ್ಲಿಷ್‌ ಕವನ ಸಂಕಲನ ‘ಎಕೋಸ್‌ ಆಫ್‌ ಫ್ರೀಡಮ್‌’ (ECHOES OF FREEDOM) ೧೯೮೧ ರಲ್ಲಿ ಪ್ರಕಟವಾಯಿತು. ಅದರಲ್ಲಿ ೩೬ ಕವನಗಳಿದ್ದರೆ ಎರಡನೆಯ ಕವನ ಸಂಕಲನ ‘ಸಾಂಗ್ಸ್‌ ಆಫ್‌ ಸೈಲನ್ಸ್’ (SONGS OF SILENCE) ನಲ್ಲಿ ೩೯ ಕವನಗಳಿವೆ. ೨೦೦೫ ರಲ್ಲಿ ಪ್ರಕಟಗೊಂಡ ಮೂರನೆಯ ಕವನ ಸಂಕಲನ ಮ್ಯಾಜಿಕ್‌ ಆಫ್‌ ದಿ ಮೈಂಡ್‌ (MAGIC OF THE MIND) ನಲ್ಲಿ ಭಕ್ತಿಭಾವ, ಅಧ್ಯಾತ್ಮಿಕ ನೆಲೆಯ ಕವನಗಳ ರಚನೆಗಳಿಂದ ಕೂಡಿವೆ. ಅನುವಾದದಲ್ಲಿಯೂ ಆನಂದಿ ಸದಾಶಿವರಾಯರು ತಾವೊಬ್ಬ ಸಮರ್ಥ ಅನುವಾದಕಿ ಎನ್ನುವುದನ್ನೂ ನಿರೂಪಿಸಿದ್ದಾರೆ. ನ್ಯಾಷನಲ್‌ ಬುಕ್‌ ಟ್ರಸ್ಟ್‌ಗಾಗಿ ಚಕ್ರವರ್ತಿ ಸಿ. ರಾಜಗೋಪಾಲಚಾರಿಯವರ ಆಂಗ್ಲ ಉಪನ್ಯಾಸಗಳ ಅನುವಾದದ ಕೃತಿ ‘ನಿರ್ಲಿಪ್ತವಾಣಿ’, ಡಾ.ಬಾಬು ರಾಜೇಂದ್ರ ಪ್ರಸಾದರ ಆಂಗ್ಲಭಾಷಣಗಳ ಸಂಗ್ರಹ ‘ಭಾರತದ ಐಕ್ಯತೆ’ ಮತ್ತು ತಮ್ಮ ಮೆಚ್ಚಿನ ಲೇಖಕಿ ಪರ್ಲ್‌‌ಬಕ್‌ ಬರೆದ ಗುಡ್‌ ಆರ್ಫ್ ಕಾದಂಬರಿಯ ಕನ್ನಡಾನುವಾದ, ಇವು ಮೂರು ಅನುವಾದಿತ ಕೃತಿಗಳೂ ಪ್ರಕಟವಾಗಬೇಕಿದೆ. ಕ್ರಿಯಾಶೀಲ ವ್ಯಕ್ತಿತ್ವದ ಆನಂದಿ ಸದಾಶಿವರಾಯರು ಸಮಾಜ ಸೇವಕಿಯಾಗಿ, ಹಲವಾರು ಸಂಘ, ಸಂಸ್ಥೆಗಳೊಡನೆ ಒಡನಾಟ ಹೊಂದಿದ್ದಾರೆ. ಮಂಗಳೂರಿನ ಭಗಿನಿ ಸಮಾಜ, ಈಶ್ವರಾನಂದ ಸೇವಾಶ್ರಮ, ಗಿಲ್ಡ್‌ ಆಫ್‌ ಸರ್ವೀಸ್‌, ಮಹಿಳಾ ಗುಡಿ ಕೈಗಾರಿಕೆ ಮತ್ತು ದ.ಕ. ಸಹಕಾರಿ ಯೂನಿಯನ್‌ ಮಹಿಳಾ ಸಲಹಾ ಸಮಿತಿ ಮುಂತಾದವುಗಳಲ್ಲಿ ಕಾರ್ಯದರ್ಶಿಯಾಗಿ, ಆಡಳಿತ ಮಂಡಳಿಯ ಸದಸ್ಯೆಯಾಗಿ, ಅಧ್ಯಕ್ಷೆಯಾಗಿ ದುಡಿದಿದ್ದಾರೆ. ಇವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಾಹಿತ್ಯ ಸೇವೆಗಾಗಿ ಅಂತಾರಾಷ್ಟ್ರೀಯ ಮಹಿಳಾ ವರ್ಷದಲ್ಲಿ ಆರನೆಯ ದ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನ ಕುಂದಾಪುರದಲ್ಲಿ, ಧರ್ಮಸ್ಥಳದ ಸರ್ವಧರ್ಮ ಸಮ್ಮೇಳನದಲ್ಲಿ, ಕರಾವಳಿ ಲೇಖಕಿಯರ-ವಾಚಕಿಯರ ಸಂಘದಿಂದ, ಬೆಂಗಳೂರಿನಲ್ಲಿ ನಡೆದ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದಲ್ಲಿ,ಮಂಗಳೂರು ತಾಲ್ಲೂಕು ಮಟ್ಟದ ೧೦ ನೆಯ ಕನ್ಡಡ ಸಾಹಿತ್ಯ ಸಮ್ಮೇಳನ ಮುಂತಾದವುಗಳಲ್ಲಿ ಸನ್ಮಾನ, ಇದರ ಜೊತೆಗೆ ಚೇತನ ಸಾಹಿತ್ಯ ಬಳಗ, ಮಹಿಳಾ ಸಭಾ, ಸಮತಾಬಳಗ, ಕಾಂತಾವರ ಕನ್ನಡ ಸಂಘ ಮುಂತಾದವುಗಳಿಂದಲೂ ದೊರೆತ ಗೌರವ ಸನ್ಮಾನಗಳು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top