೨೯.೦೩.೧೯೬೫ ಹಲವಾರು ತಲೆಮಾರುಗಳಿಂದ ಸಂಗೀತಕ್ಕೆ ಪ್ರಸಿದ್ಧವಾಗಿದ್ದ ಮನೆತನದಲ್ಲಿ ಅನಂತಕೃಷ್ಣಶರ್ಮರು ಹುಟ್ಟಿದ್ದು ಬೆಂಗಳೂರು. ತಂದೆ ಪ್ರಖ್ಯಾತ ಪಿಟೀಲು ವಾದಕರಾಗಿದ್ದ ಆನೂರು ರಾಮಕೃಷ್ಣ, ತಾಯಿ ಶ್ರೀಲಕ್ಷ್ಮಿ. ತಂದೆಯಿಂದಲೇ ಸಂಗೀತದಲ್ಲಿ ಪ್ರಾಥಮಿಕ ಶಿಕ್ಷಣ. ಮೃದಂಗದ ಕಡೆಗೆ ಬೆಳೆದ ಒಲವು. ವಿದ್ವಾನ್ ಆರ್.ಎ. ರಾಜಗೋಪಾಲ್ ರವರ ಬಳಿ ಲಯ-ವಾದ್ಯದಲ್ಲಿ ಪಡೆದ ಶಿಕ್ಷಣ. ಹದಿನೈದಿನೇ ವಯಸ್ಸಿನಿಂದಲೇ ದೇಶದ ಹಲವಾರು ಪ್ರತಿಷ್ಠಿತ ಸಂಗೀತ ಕಚೇರಿಗಳಲ್ಲಿ ಪ್ರಖ್ಯಾತ ಸಂಗೀತ ಗಾರರಿಗೆ ನೀಡಿದ ಮೃದಂಗದ ಸಾಥಿ. ಡಾ. ಬಾಲಮುರಳಿಕೃಷ್ಣ, ಎಂ.ಎಲ್. ವಸಂತಕುಮಾರಿ, ಟಿ.ವಿ. ಗೋಪಾಲಕೃಷ್ಣನ್, ಆರ್.ಕೆ. ಶ್ರೀಕಂಠನ್, ಎಸ್. ರಾಮನಾಥನ್, ಆರ್.ಕೆ. ಪದ್ಮನಾಭ, ಬಾಂಬೆ ಸಹೋದರಿಯರು, ಉನ್ನಿ ಕೃಷ್ಣನ್, ಕದ್ರಿ ಗೋಪಾಲನಾಥ್, ಎ.ಕೆ.ಸಿ. ನಟರಾಜನ್ ರವರ ಸಂಗೀತ ಕಚೇರಿಗಳಿಗೆ ಅನಿವಾರ್ಯ ಮೃದಂಗ ಪಟು. ಹಲವಾರು ಬಾರಿ ವಿದೇಶಯಾತ್ರೆ, ಜರ್ಮನಿ, ನೆದರ್ಲ್ಯಾಂಡ್ಸ್, ಇಟಲಿ, ಸ್ವಿಡ್ಚರ್ಲ್ಯಾಂಡ್ ಮುಂತಾದ ಯುರೋಪಿನ ದೇಶಗಳು. ಅಮೆರಿಕಾಗೆ ಎಂ.ಎಸ್. ಶೀಲ ರೊಡನೆ ಕೈಗೊಂಡ ಸಂಗೀತ, ಸಾಂಸ್ಕೃತಿಕ ಪ್ರವಾಸ. ಬರ್ಮಿಂಗ್ ಹ್ಯಾಂನಲ್ಲಿ ನಡೆದ ಚಿತ್ರಲೇಖಾ ತಂಡದ ನೃತ್ಯಕ್ಕೆ ನೀಡಿದ ಸಂಗೀತದ ಸಹಾಯ. ಅಮೆರಿಕದಲ್ಲಿ ಸುಮಾ ಸುಧೀಂದ್ರ, ಶ್ಯಾಮಲ ಜಿ. ಭಾವೆ, ನಾಗಮಣಿ ಶ್ರೀನಾಥ್ ರವರ ಸಂಗೀತ, ವೀಣಾವಾದನಗಳಿಗೆ ನೀಡಿದ ಮೃದಂಗ ವಾದನ ಸಹಕಾರ. ಜರ್ಮನಿಯ ಪೆಸಿಫಿಕ್ ಫೆಸ್ಟಿವಲ್ನಲ್ಲಿ ಪಿಟೀಲು ದ್ವಂದ್ವ ವಾದನದೊಡನೆ ನೀಡಿದ ಮೃದಂಗದ ಸಾಥಿ. ಓರ್ಲಾಂಡೋ, ಬಾಲ್ಟಿಮೋರ್ಗಳಲ್ಲಿ ನಡೆದ ‘ಅಕ್ಕಾ’ ಕನ್ನಡಿಗರ ಕೂಟದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಆಹ್ವಾನಿತ ಕಲಾವಿದರಾಗಿ ನಡೆಸಿಕೊಟ್ಟ ಕಾರ್ಯಕ್ರಮ. ಹಲವಾರು ಡ್ಯಾನ್ಸ್ಬ್ಯಾಲೆ, ಭಕ್ತಿಗೀತೆಗಳಿಗೆ, ಸಂಸ್ಕೃತ ಶ್ಲೋಕಗಳ ಧ್ವನಿ ಸುರಳಿ, ಸಿ.ಡಿ.ಗಳಿಗೆ ನೀಡಿದ ಸಂಗೀತದ ನಿರ್ದೇಶನ. ಕರ್ನಾಟಕ ಗಾನ ಕಲಾ ಪರಿಷತ್, ಪುರಂದರ-ತ್ಯಾಗರಾಜರ ಸಂಗೀತ ಸೇವಾ ಮಂಡಲಿ ಮುಂತಾದುವುಗಳ ಸಂಚಾಲಕರು. ಸಂದ ಪ್ರಶಸ್ತಿ ಗೌರವಗಳು ಹಲವಾರು. ಗಾಯನ ಸಮಾಜದಿಂದ ಶ್ರೇಷ್ಠ ಮೃದಂಗ ಪಟು, ಪರ್ಕಸಿವ್ ಆರ್ಟ್ ಸೆಂಟರಿನಿಂದ ಲಯ-ಕಲ ಪ್ರತಿಭಾಮಣಿ, ಮದರಾಸು ಮ್ಯೂಸಿಕ್ ಅಕಾಡಮಿಯಿಂದ ಶ್ರೇಷ್ಠ ಮೃದಂಗ ವಾದಕ, ನಾಡ ಜ್ಯೋತಿ ಸಂಗೀತ ಸಭಾದಿಂದ ‘ನಾಡ ಜ್ಯೋತಿ’, ಭಜನಾ ಸಂಸ್ಥೆಯಿಂದ ನಾದ-ಲಯ-ಸಾಮ್ರಾಟ, ಚಿಂತಾಮಣಿ ಗಾಯನ ಸಮಾಜದಿಂದ ನಾದ ಚಿಂತಾಮಣಿ ಮುಂತಾದ ಗೌರವಗಳು. ಇದೇ ದಿನ ಹುಟ್ಟಿದ ಕಲಾವಿದರು : ನಾರಾಯಣ ಢಗೆ – ೧೯೨೯ ಎಂ.ಎಸ್. ಗೋವಿಂದಸ್ವಾಮಿ – ೧೯೪೯ ಉದಯಶಂಕರ್ – ೧೯೫೩
* * *