ಆರ್ಯಾಂಬ ಪಟ್ಟಾಭಿ

Home/Birthday/ಆರ್ಯಾಂಬ ಪಟ್ಟಾಭಿ
Loading Events
This event has passed.

೧೨..೧೯೩೬ ಸಣ್ಣಕಥೆ, ಕಾದಂಬರಿ, ವ್ಯಕ್ತಿ ಚಿತ್ರಣ, ಜೀವನಚರಿತ್ರೆ, ನಾಟಕ, ಪ್ರಬಂಧ, ಪ್ರವಾಸಗಳ ಬರಹಗಾರ್ತಿ ಮತ್ತು ಪ್ರಕಾಶಕಿ – ಹೀಗೆ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ತೊಡಗಿಸಿ ಕೊಂಡಿರುವ ಆರ್ಯಾಂಬ ಪಟ್ಟಾಭಿಯವರು ಹುಟ್ಟಿದ್ದು ಮಂಡ್ಯದಲ್ಲಿ. ೧೯೩೬ರ ಮಾರ್ಚ್‌೧೨ ರಂದು. ತಂದೆ ಬಿ.ಎಂ.ಕೃಷ್ಣಸ್ವಾಮಿ (ಬಿ.ಎಂ.ಶ್ರೀ. ಯವರ ತಮ್ಮ), ತಾಯಿ ತಂಗಮ್ಮ. ಪ್ರಾರಂಭಿಕ ಶಿಕ್ಷಣ ಮಂಡ್ಯದಲ್ಲಿ. ಇಂಟರ್‌ಮೀಡಿಯಟ್ ಮೈಸೂರು ಮಹಾರಾಣಿ ಕಾಲೇಜು, ಮಹಾರಾಜ ಕಾಲೇಜಿನಿಂದ ಬಿ.ಎ. ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಪಡೆದ ಎಂ.ಎ. (ಸಮಾಜಶಾಸ್ತ್ರ) ಪದವಿ. ಓದುವ ಹವ್ಯಾಸವನ್ನು ರೂಢಿಸಿಕೊಂಡಿದ್ದು, ಹೈಸ್ಕೂಲಿನಲ್ಲಿದ್ದಾಗಲೇ ಲೇಖನಗಳು, ಕಥೆಗಳ ಬರವಣಿಗೆ ಪ್ರಾರಂಭ. ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಶ್ರೀರಂಗಪಟ್ಟಣದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಾಗ ದೊರೆತ ಪ್ರೋತ್ಸಾಹದಿಂದ ಬರೆದ ಕಥೆಗಳು. ಮಹಾರಾಣಿ ಕಾಲೇಜಿನಲ್ಲಿದ್ದಾಗಲೂ ಎರಡು ವರ್ಷವೂ ಕಥಾಸ್ಪರ್ಧೆಯಲ್ಲಿ ಪಡೆದ ಪ್ರಥಮ ಬಹುಮಾನ. ನಂತರ ಹಲವಾರು ಕಥೆಗಳು ಪತ್ರಿಕೆಗಳಲ್ಲಿ ಪ್ರಕಟಿತ. ಅಕ್ಕನಾದ ತ್ರಿವೇಣಿಯು ಹಲವಾರು ಕಾದಂಬರಿಗಳನ್ನು ಬರೆದು ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದು, ತಂಗಿಯಾದ ಇವರಿಗೂ ಕಾದಂಬರಿ ಬರೆಯಲು ಒತ್ತಾಯಿಸಿದಾಗ ಬರೆದ ಮೊದಲ ಕಾದಂಬರಿಯನ್ನು ಓದಿದ ತ್ರಿವೇಣಿಯವರೇ ‘ಹೊಂಗನಸು’ ಎಂದು ನಾಮಕರಣ ಮಾಡಿ ಪ್ರಕಟಣೆಗೂ ನೆರವಾದರು. “ಬೃಹತ್ ಕಾದಂಬರಿಯನ್ನು ಬರೆಯಬೇಡ, ಬರವಣಿಗೆಯನ್ನು ಎಂದೂ ನಿಲ್ಲಿಸಬೇಡ, ಓದುಗರ ಪ್ರೀತಿ-ಅಭಿಮಾನವೇ ಸಾಹಿತಿಗಳಿಗೇ ಶ್ರೀರಕ್ಷೆ” ಇದು ಅಕ್ಕ ತ್ರಿವೇಣಿಯು ಇವರಿಗೆ ಹೇಳಿದ ಕಿವಿಮಾತು. ಅವರಿರುವಾಗಲೇ ಮೂರು ಕಾದಂಬರಿ ಬರೆದು ಪ್ರಕಟಿಸಿದ್ದರು. ‘ಹೊಂಗನಸು’ ಪ್ರಕಟವಾದದ್ದು ೧೯೬೧ ರಲ್ಲಿ ನಂತರ ಆರಾಧನೆ, ಪ್ರಿಯಸಂಗಮ, ಎರಡುಮುಖ, ಬೀಸಿದ ಬಲೆ ಮುಂತಾದ ೩೪ ಕಾದಂಬರಿಗಳು ಪ್ರಕಟಗೊಂಡಿವೆ. ಕಪ್ಪು-ಬಿಳುಪು ಕಾದಂಬರಿಯು ಕನ್ನಡ, ತಮಿಳು, ತೆಲುಗು, ಭಾಷೆಯಲ್ಲಿ ಚಲನಚಿತ್ರವಾಗಿದ್ದರೆ ಎರಡು ಮುಖ, ಮರಳಿಗೂಡಿಗೆ, ಸವತಿಯ ನೆರಳು, ಕನ್ನಡ ಚಲನ ಚಿತ್ರಗಳಾಗಿವೆ. ಎರಡುಮುಖ ಮತ್ತು ಮರಳಿಗೂಡಿಗೆ ಚಲನಚಿತ್ರಗಳು ರಾಜ್ಯಪ್ರಶಸ್ತಿ ಪಡೆದ ಚಿತ್ರಗಳಾಗಿವೆ. ಇವರು ಬರೆದ ಹಲವಾರು ಕಥೆಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲಿ ಪ್ರಕಟಗೊಂಡು ‘ಮರಳಿ ಬಂದ ಮಮತೆ’, ‘ಉದಯ ರವಿ’, ‘ನನ್ನವಳು’, ‘ತೆರೆಸರಿದಾಗ’ ಮುಂತಾದ ಕಥಾ ಸಂಕಲನಗಳಲ್ಲಿ ಸೇರಿವೆ. ಮಕ್ಕಳಿಗಾಗಿ ೧೨ ಕೃತಿಗಳನ್ನು ರಚಿಸಿದ್ದು ಅವುಗಳಲ್ಲಿ ಚ. ವಾಸುದೇವಯ್ಯ, ರವೀಂದ್ರನಾಥ ಠಾಕೂರ್, ತಾಯಿ ತೆರೇಸ, ನಾಲ್ವಡಿ ಕೃಷ್ಣರಾಜ ಒಡೆಯರ್, ಮೇರಿ ಕ್ಯೂರಿ ಮತ್ತು ತ್ರಿವೇಣಿ ಮುಂತಾದವುಗಳು. ನಾಟಕ ಕ್ಷೇತ್ರದಲ್ಲಿಯೂ ಸಾಕಷ್ಟು ಕೃಷಿಮಾಡಿದ್ದು ಸಾಲುದೀಪ, ಬೆಕ್ಕಿನಕಣ್ಣು, ಬೆಳಕಿನತ್ತ, ದುಡ್ಡಿದ್ದವನೆ ದೊಡ್ಡಪ್ಪ, ಸಾಕುಮಗ, ಕಸ್ತೂರಿ ಮುಂತಾದ ನಾಟಕಗಳನ್ನು ರಚಿಸಿದ್ದು ಬೆಂಗಳೂರು ಮತ್ತು ಮೈಸೂರು ಆಕಾಶವಾಣಿ ಕೇಂದ್ರಗಳಿಂದ ಪ್ರಸಾರಗೊಂಡಿವೆ. ಇದಲ್ಲದೆ ಇವರು ಬರೆದ ‘ಭಾರತದ ಮಹಾಪುರುಷರು’ ಮಾಲಿಕೆಯಲ್ಲಿ ಆದಿಶಂಕರಾಚಾರ್ಯ, ಬಸವೇಶ್ವರ, ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ರವೀಂದ್ರನಾಥ ಠಾಕೂರ್, ಗಾಂಧಿ ಮತ್ತು ಅರವಿಂದ ಘೋಷ್ ಇವರುಗಳ ಬಗ್ಗೆ ಕೃತಿ ರಚಿಸಿದ್ದು ಈ ಪುಸ್ತಕಗಳು ೧೯೭೬, ೧೯೭೭ ರಲ್ಲಿ ಕರ್ನಾಟಕದ ರಾಜ್ಯದ ಪದವಿ ಪೂರ್ವ ತರಗತಿಗಳಿಗೆ ಪಠ್ಯ ಪುಸ್ತಕಗಳಾಗಿ ಆಯ್ಕೆಯಾಗಿದ್ದಲ್ಲದೆ ಕರ್ನಾಟಕ ಮತ್ತು ಕೇರಳದ ಪ್ರೌಢಶಾಲೆಗಳು ಗ್ರಂಥದ ಕೆಲಭಾಗಗಳನ್ನು ಪಠ್ಯವಾಗಿ ಅಳವಡಿಸಿಕೊಂಡಿವೆ. ವಿದ್ಯಾರ್ಥಿ ದೆಸೆಯಲ್ಲಿಯೇ ಕ್ರೀಡೆ, ಸಂಗೀತ, ನಾಟಕಾಭಿನಯಗಳಲ್ಲಿ ತೊಡಗಿಸಿಕೊಂಡಿದ್ದು ಅನೇಕ ಕನ್ನಡ, ಇಂಗ್ಲಿಷ್, ಸಂಸ್ಕೃತ ನಾಟಕಗಳಲ್ಲಿ ಅಭಿನಯಿಸಿದಂತೆ ಟೆಬಲ್ ಟೆನಿಸ್, ಟೆನಿಸ್, ಸಾಫ್ಟ್‌ಬಾಲ್, ಬ್ಯಾಡ್‌ಮಿಂಟನ್ ಮುಂತಾದ ಕ್ರೀಡೆಗಳಲ್ಲೂ ವಿಶ್ವವಿದ್ಯಾಲಯದ ಪ್ರತಿನಿಧಿಯಾಗಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ಪಡೆದಿದ್ದಾರೆ. ಟೆನಿಸ್ ಕ್ರೀಡೆಯ ಬಗ್ಗೆ ಸಮಗ್ರ ಅಧ್ಯಯನ ಮಾಡಿ ರಚಿಸಿದ ‘ಟೆನಿಸ್’ ಕೃತಿಯು ೧೯೮೭ ರಲ್ಲಿ ಪ್ರಕಟಗೊಂಡಿದ್ದು ಪರಿಷ್ಕೃತ ಎರಡನೆಯ ಮುದ್ರಣವನ್ನು ಮೈಸೂರು ವಿಶ್ವವಿದ್ಯಾಲವು (೨೦೧೨) ಹೊರತಂದಿದ್ದು ಟೆನಿಸ್ ಬಗ್ಗೆ ಪ್ರಕಟವಾಗಿರುವ ಕನ್ನಡದ ಏಕೈಕ ಗ್ರಂಥವೆನಿಸಿದೆ. ಅಮೆರಿಕ, ಕೆನಡ, ಸಿಂಗಪುರ ದೇಶಗಳನ್ನು ಸುತ್ತಿ ಬರೆದ ಪ್ರವಾಸಾನುಭವ ಕೃತಿ ‘ವಿದೇಶ ಪ್ರವಾಸ’. ಇದೀಗಲೂ ಕ್ರಿಯಾಶೀಲರಾಗಿದ್ದು ಮೈಸೂರಿನ ಕನ್ನಡ ಲೇಖಕಿಯರ ಟ್ರಸ್ಟ್‌ನ ಪ್ರಥಮ ಅಧ್ಯಕ್ಷಿಣಿಯಾಗಿದ್ದು, ಸದಸ್ಯೆಯಾಗಿ, ಮಹಿಳಾ ಧ್ಯಾನಪೀಠದ ಅಧ್ಯಕ್ಷಿಣಿ ಹಾಗೂ ಯೋಗ ಶಿಕ್ಷಕಿಯಾಗಿ, ಸಿ.ಎನ್.ಜಯಲಕ್ಷ್ಮೀ ದೇವಿ ಟ್ರಸ್ಟ್‌ನ ಸ್ಥಾಪಕ ಸದಸ್ಯೆಯಾಗಿ ಮೈಸೂರು ವಿಮೆನ್ಸ್ ಸ್ಪೋರ‍್ಟ್‌ಸ್ ಕ್ಲಬ್‌ನ ಸ್ಥಾಪಕಿಯಾಗಿ (ಮಾಜಿ ಅಧ್ಯಕ್ಷಿಣಿ), ಮಹಾರಾಣಿ ಕಾಲೇಜು ಹಳೆಯ ವಿದ್ಯಾರ್ಥಿನಿಯರ ಸಂಘದ ಅಧ್ಯಕ್ಷಿಣಿಯಾಗಿಯೂ ಕಾರ್ಯನಿರತರಾಗಿದ್ದಾರೆ. ಹೀಗೆ ವಿಶಿಷ್ಟರೀತಿಯಲ್ಲಿ ಸಾಹಿತ್ಯ ಕೈಂಕರ್ಯದಲ್ಲಿ ತೊಡಗಿಸಿಕೊಂಡಿರುವ ಆರ್ಯಾಂಬ ಪಟ್ಟಾಭಿಯವರನ್ನು ಹುಡುಕಿಕೊಂಡು ಬಂದಿರುವ ಪ್ರಶಸ್ತಿಗಳು ಹಲವಾರು. ‘ಟೆನಿಸ್’ ಗ್ರಂಥಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ‘ಮಲ್ಲಿಕಾ ಪ್ರಶಸ್ತಿ’, ಅತ್ತಿಮಬ್ಬೆ ಪ್ರತಿಷ್ಠಾನದ ‘ಅತ್ತಿಮಬ್ಬೆ ಪ್ರಶಸ್ತಿ’, ವಿದೇಶ ಪ್ರವಾಸ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಲಿಂಗರಾಜ ಸಾಹಿತ್ಯ ಪ್ರಶಸ್ತಿ ಮತ್ತು ಕನ್ನಡ ಲೇಖಕಿಯರ ಪರಿಷತ್ತಿನ ಪ್ರಶಸ್ತಿಗಳು; ಸರ್.ಎಂ. ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿ, ಕರ್ನಾಟಕ ಚೇತನ ಪ್ರಶಸ್ತಿ, ಸಾವಿತ್ರಮ್ಮ ದೇಜಗೌ ಪ್ರಶಸ್ತಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಬಿ. ಸರೋಜದೇವಿ ಸಾಹಿತ್ಯ ಪ್ರಶಸ್ತಿ, ಸಂಚಿ ಹೊನ್ನಮ್ಮ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿ ಗೌರವಗಳು ದೊರೆತಿವೆ. ಸ್ನೇಹಿತರು, ಅಭಿಮಾನಿಗಳು ೨೦೦೨ ರಲ್ಲಿ ಅರ್ಪಿಸಿದ ಅಭಿನಂದನ ಗ್ರಂಥ ‘ಉನ್ಮೀಲನ’.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top