ಆರ್‌.ನಾಗರತ್ನಮ್ಮ

Home/Birthday/ಆರ್‌.ನಾಗರತ್ನಮ್ಮ
Loading Events
This event has passed.

೨೧.೦೬.೧೯೨೬ ಪುರುಷರಿಗೆ ಸರಿಸಮಾನರಾಗಿ ನಾಟಕ ಸಂಸ್ಥೆ ಕಟ್ಟಿ, ಮಹಿಳೆಯರಿಂದಲೇ ನಾಟಕ ಮಾಡಿಸಿ ಪುರುಷ ಪಾತ್ರಗಳನ್ನು ನಿರ್ವಹಿಸಿ ಸೈ ಎನ್ನಿಸಿಕೊಂಡ ನಾಗರತ್ನಮ್ಮನವರು ಹುಟ್ಟಿದ್ದು ಮೈಸೂರು. ತಂದೆ ಕೃಷ್ಣಭಟ್ಟರು, ತಾಯಿ ರುಕ್ಮಿಣಮ್ಮ. ಓದಿಗಿಂತ ಎಳೆ ವಯಸ್ಸಿನಿಂದಲೇ ರಂಗಭೂಮಿಯತ್ತ ಬೆಳೆದ ಮನಸ್ಸು. ಕಲಾ ಸೇವಾ ಮಂಡಲಿಯ ಮೂಲಕ ರಂಗಭೂಮಿ ಪ್ರವೇಶ. ಮೊದಲ ನಾಟಕ ಸಂಸಾರ ನೌಕಾದಲ್ಲಿ ಅಭಿನಯ. ೧೫-೨೦ ವರ್ಷಕಾಲ ನಿರ್ವಹಿಸಿದ್ದು ಮಹಿಳಾ ಪಾತ್ರಗಳು. ರಾಜಕುಮಾರ್‌ ಮುಂತಾದ ದಿಗ್ಗಜರೊಡನೆಯೂ ಅಭಿನಯ. ಮಂಜುನಾಥ ಕೃಪಾಪೋಷಿತ ನಾಟಕ ಸಂಸ್ಥೆ, ಚಾಮುಂಡೇಶ್ವರಿ ನಾಟಕ ಸಂಸ್ಥೆ, ಹಿರಣ್ಣಯ್ಯ ಮಿತ್ರ ಮಂಡಲಿ, ಎಂ.ವಿ. ಸುಬ್ಬಯ್ಯನಾಯ್ಡು ಅವರ ಕಂಪನಿ, ಹೀಗೆ ಹಲವಾರು ಕಂಪನಿಗಳಲ್ಲಿ ರಾಜ್ಯಾದ್ಯಂತ ತಿರುಗಾಡಿ ಅಭಿನಯಿಸಿದ ನಾಟಕಗಳು, ಪ್ರದರ್ಶನಗಳಿಗೆ ಲೆಕ್ಕವಿಲ್ಲ. ನಂತರ ಪುರುಷ ಪಾತ್ರಗಳಿಗೂ ಜೀವ ತುಂಬಿದ ಅಭಿನಯ. ಕೃಷ್ಣಲೀಲಾ-ಕೃಷ್ಣ, ಕೃಷ್ಣಗಾರುಡಿ-ಭೀಮ, ಸುಭದ್ರಾಪರಿಣಯದ- ಬಲರಾಮ, ಬೇಡರ ಕಣ್ಣಪ್ಪ -ಕಣ್ಣಪ್ಪ, ಸದಾರಮೆ – ಕಳ್ಳ, ಸಂಸಾರ ನೌಕೆ- ಸುಂದರ, ಹೀಗೆ ಹಲವಾರು ನಾಟಕಗಳಲ್ಲಿ ಅಭಿನಯಿಸಿ ಪಡೆದ ಖ್ಯಾತಿ. ಮಹಿಳೆಯರೇ ಎಲ್ಲ ಪಾತ್ರಗಳನ್ನು ಏಕೆ ಅಭಿನಯಿಸಬಾರದೆಂದು ಅಭಿಮಾನಿ ಅಂಬುಜಮ್ಮನವರಿಂದ ಬಂದ ಸಲಹೆ – ಕೃಷ್ಣಗಾರುಡಿ ನಾಟಕದ ಪ್ರಾಕ್ಟೀಸ್, ಮಂಡ್ಯದಲ್ಲಿ ೩-೪ ಯಶಸ್ವಿ ಪ್ರಯೋಗ. ೧೯೫೮ ರಲ್ಲಿ “ಶ್ರೀ ಸ್ತ್ರೀ ನಾಟಕ ಮಂಡಲಿ”ಗೆ ಚಾಲನೆ. ಮಹಿಳೆಯರೇ ಪುರುಷ ಪಾತ್ರಗಳನ್ನು ನಿರ್ವಹಿಸಿ ಸ್ಥಾಪಿಸಿದ ಐತಿಹಾಸಿಕ ದಾಖಲೆ. ಇವರೊಡನೆ ಆರ್‌. ಮಂಜುಳಾ, ನಿರ‍್ಮಲ, ಎಚ್.ಪಿ.ಸರೋಜ, ಸುಜಾತ, ಕಮಲಮ್ಮ, ಎಂ.ಎನ್.ಪುಟ್ಟಮ್ಮ, ಕಾತ್ಯಾಯಿನಿ ಮುಂತಾದವರು ಪಾತ್ರವರ್ಗದಲ್ಲಿ – ಇಪ್ಪತ್ತು ವರ್ಷ ಕಾಲ ಕಂಪನಿಯನ್ನು ನಿಭಾಯಿಸಿದ ಖ್ಯಾತಿ. ಹೋದೆಡೆಯಲ್ಲೆಲ್ಲಾ ೫೦-೧೦೦ ಪ್ರದರ್ಶನಗಳು. ರಾಜ್ಯಾದ್ಯಂತ ಪಡೆದ ಜನ ಮೆಚ್ಚುಗೆ. ವಿಜಾಪುರ, ಸಾಲಿಗ್ರಾಮ, ಚಿಕ್ಕಮಗಳೂರು, ಹಾಸನದಲ್ಲಿ ಮಳೆ ಬಂದರೂ ನಿಲ್ಲದ ನಾಟಕ ಪ್ರದರ್ಶನ. ಕೊಡೆ ಹಿಡಿದು ಪ್ರೇಕ್ಷಕರು ನೋಡುತ್ತಿದ್ದರೆ ನಟಿಯರು ಮಳೆಯಲ್ಲಿ ತೊಯಿದು ಅಭಿನಯ. ಸುಭದ್ರಾ ಪರಿಣಯದ ಅರ್ಜುನ, ಕೃಷ್ಣ ಗಾರುಡಿಯ ಭೀಮನಾಗಿ ಗಳಿಸಿದ ಜನ ಪ್ರಿಯತೆ. ಕರ್ನಾಟಕ ನಾಟಕ ಅಕಾಡಮಿ ಸದಸ್ಯೆ, ಸ್ತ್ರೀ ನಾಟಕ ಮಂಡಲಿಯ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಸನ್ಮಾನಿತೆ, ಗುಬ್ಬಿ ವೀರಣ್ಣ ಪ್ರಶಸ್ತಿ ವಿಜೇತೆ, ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಎಲ್ಲಕ್ಕಿಂತ ಹೆಚ್ಚಾಗಿ ಭೀಮನ ಪಾತ್ರಧಾರಿ ನಾಗರತ್ನಮ್ಮನೆಂದೇ ಪಡೆದ ಖ್ಯಾತಿ.   ಇದೇ ದಿನ ಹುಟ್ಟಿದ ಕಲಾವಿದರು ಕೆರೆಮನೆ ಶಿವರಾಮ ಹೆಗಡೆ – ೧೯೦೭ ಎಂ.ಎಸ್. ಮಾಧವರಾವ್ – ೧೯೦೭ ಎಂ.ಎಸ್. ಶೇಷಪ್ಪ – ೧೯೩೨ ಆರ್‌.ಎಸ್. ನಂದಕುಮಾರ್‌ – ೧೯೬೦ ಸುಲೋಚನಾ ವೇಣುಗೋಪಾಲ್ – ೧೯೬೦ ಪ್ರೀತಿ ಕೃಷ್ಣ – ೧೯೭೨.

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top