೨೩.೦೬.೧೮೯೬ ೦೯.೦೨.೧೯೭೭ ಕನ್ನಡ ರಂಗಭೂಮಿಯ ಭೀಷ್ಮಾಚಾರ್ಯರೆನಿಸಿದ್ದ ನಾಗೇಂದ್ರರಾಯರು ಹುಟ್ಟಿದ್ದು ಚಿತ್ರದುರ್ಗ ಜಿಲೆಯ ಹೊಳಲ್ಕೆರೆ. ತಂದೆ ರಟ್ಟೆಹಳ್ಳಿ ಕೃಷ್ಣರಾವ್, ತಾಯಿ ರುಕ್ಮಿಣಿದೇವಿ. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ನಾಗೇಂದ್ರರಾಯರು ಓದಿದ್ದು ಪ್ರೌಢಶಾಲೆಯವರೆಗೆ. ಓದುತ್ತಿದ್ದಾಗಲೇ ರಂಗಭೂಮಿಯಿಂದ ಆಕರ್ಷಿತರಾಗಿ ಸೇರಿದ್ದು ಸಿರಹಟ್ಟಿಯ ವೆಂಕೋಬರಾಯರ ನಾಟಕ ಮಂಡಲಿ. ವೃತ್ತಿ ರಂಗ ಭೂಮಿಯಲ್ಲಿ ಪುರುಷರೇ ಸ್ತ್ರೀ ಪಾತ್ರಗಳನ್ನು ಮಾಡುತ್ತಿದ್ದ ಕಾಲದಲ್ಲಿ ಆರೆನ್ನಾರ್ಗೆ ದೊರೆತದ್ದು ಸ್ತ್ರೀಪಾತ್ರಗಳೇ. ನಂತರ ಸೇರಿದ್ದು ಪ್ರಸಿದ್ಧ ನಟರಾದ ವರದಾಚಾರ್ಯರ ಕಂಪನಿ. ಇಲ್ಲೂ ದೊರೆತದ್ದು ಸ್ತ್ರೀಪಾತ್ರವೇ! ಸೀತೆ, ಚಂದ್ರಮತಿ, ಶಕುಂತಳೆ ಪಾತ್ರಗಳು ಖ್ಯಾತಿ ತಂದುವು. ಚಾಮುಂಡೇಶ್ವರಿ ನಾಟಕ ಸಭಾ ಸೇರಿದಾಗ ದೊರೆತ ವಿಭಿನ್ನರಂಗ ಚಟುವಟಿಕೆ. ಸ್ತ್ರೀ ಪಾತ್ರಗಳಿಗೆ ಸೀಮಿತವಾಗದೆ ತುಕಾರಾಂ, ಅಭಿಮನ್ಯು, ಕರ್ಣ ಮೊದಲಾದ ನಾಟಕಗಳ ರಚನೆ, ಪ್ರದರ್ಶನ, ಕರ್ನಾಟಕ ಸಂಗೀತ ಬಲ್ಲ ಆರೆನ್ನಾರ್ಗೆ ಪಾತ್ರ, ಹಾಡುಗಾರಿಕೆ ಎರಡೂ ಕರತಲಾಮಲಕ. ಸ್ತ್ರೀ ಪಾತ್ರಗಳನ್ನು ಅಭಿನಯಿಸಿ ರಂಜಿಸಿದಷ್ಟೇ ತಮ್ಮ ನಾಟಕ ರಚನೆಯಿಂದ ಪುರುಷ ಪಾತ್ರಗಳತ್ತ ಹರಿದ ಗಮನ. ನಾಯಕ ನಟನಾಗಿ ಅಭಿನಯಿಸಿ ಪಡೆದ ಯಶಸ್ಸು. ನಟರತ್ನ ಸುಬ್ಬಯ್ಯನಾಯ್ಡು ರವರ ಗೆಳೆತನದಿಂದ ಇಬ್ಬರೂ ಕೂಡಿ ಸ್ಥಾಪಿಸಿದ್ದು ವೃತ್ತಿ ನಾಟಕ ಸಂಸ್ಥೆ, “ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಲಿ”. ವಿಶೇಷ ರಂಗ ಸಜ್ಜಿಕೆ, ಬೆಳಕಿನ ವಿನ್ಯಾಸದಿಂದ ವೃತ್ತಿ ರಂಗ ಭೂಮಿಗೆ ನೀಡಿದ ಹೊಸ ಆಯಾಮ. ಆಂಧ್ರ ತಮಿಳು ನಾಡಿನಲ್ಲೂ ಪ್ರದರ್ಶಿಸಿ ಗಳಿಸಿದ ಜಯಭೇರಿ. ವಸಂತಸೇನಾದ ಶಕಾರನ ಪಾತ್ರ, ಹರಿಶ್ಚಂದ್ರ ನಾಟಕದ ವಿಶ್ವಾಮಿತ್ರ ಆರೆನ್ನರ್ರನ್ನು ಚಿರಸ್ಮರಣೀಯರನ್ನಾಗಿ ಮಾಡಿದ ಪಾತ್ರಗಳು. ಚಲನಚಿತ್ರರಂಗ ಕಣ್ಣು ಬಿಡುತ್ತಿದ್ದ ಕಾಲದಲ್ಲಿ ಹೊರಳಿದ್ದು ಚಲನ ಚಿತ್ರದತ್ತ. ಎಸ್.ಎಸ್. ವಾಸನ್ ನಿರ್ಮಿಸಿದ ‘ಅಪೂರ್ವ ಸಹೋದರ್ಗಳ್’ ಚಿತ್ರದ ಮಾರ್ತಾಂಡನ ಪಾತ್ರ, ಸುಬ್ಬಯ್ಯ ನಾಯ್ಡುರವರೊಡನೆ ಕೂಡಿ ನಿರ್ಮಿಸಿದ ಸತಿ ಸುಲೋಚನದಲ್ಲಿನ ರಾವಣನ ಪಾತ್ರ. ವಸಂತ ಸೇನಾ ಚಿತ್ರದ ಶಕಾರನ ಪಾತ್ರ ಪ್ರೇಕ್ಷಕರ ಮನಸೂರೆಗೊಂಡು, ಅಪಾರ ಕೀರ್ತಿ ಗೌರವಗಳನ್ನು ತಂದುಕೊಟ್ಟ ಪಾತ್ರಗಳು. ಜಾತಕಫಲ, ಗಾಳಿಗೋಪುರ, ವಿಜಯನಗರದ ವೀರಪುತ್ರ, ನಮ್ಮ ಮಕ್ಕಳ, ಹಣ್ಣೆಲೆ ಚಿಗುರಿದಾಗ, ಚಂದ್ರಹಾಸ, ಮದುವೆ ಮಾಡಿನೋಡು, ವೀರಕೇಸರಿ, ಕರುಳಿನ ಕರೆ ಮುಂತಾದುವುಗಳಲ್ಲಿ ಅಚ್ಚಳಿಯದ ಅಭಿನಯ. ಚಲನ ಚಿತ್ರ ತರಬೇತಿಗೆಂದೇ ಬೆಂಗಳೂರಿನಲ್ಲಿ ಪ್ರಾರಂಭಿಸಿದ ಆದರ್ಶ ಫಲ. ಇನ್ಸ್ಟಿಟ್ಯೂಟ್ನ ಸ್ಥಾಪಕ- ಮೊದಲ ಪ್ರಾಂಶುಪಾಲರು. ಇವರ ಮಕ್ಕಳಾದ ಆರ್.ಎನ್. ಸುದರ್ಶನ್, ಆರ್.ಎನ್. ಜಯಗೋಪಾಲ್, ಆರ್.ಎನ್.ಕೆ. ಪ್ರಸಾದ್ ಮೂವರೂ ಚಿತ್ರರಂಗದಲ್ಲಿ ಪ್ರಖ್ಯಾತರಾದವರು. ರಾಜ್ಯ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ಹಣ್ಣೆಲೆ ಚಿಗುರಿದಾಗ ಚಿತ್ರದ ನಟನೆಗೆ ಶ್ರೇಷ್ಠ ನಟ ಪ್ರಶಸ್ತಿ. ನಮ್ಮ ಮಕ್ಕಳು ನಿರ್ದೇಶನಕ್ಕೆ ರಜತ ಪದಕ ಮುಂತಾದ ಪ್ರಶಸ್ತಿ ಪುರಸ್ಕೃತರು. ಇದೇ ದಿನ ಹುಟ್ಟಿದ ಕಲಾವಿದರು ರಾಜಾರಾಮ್ ಗಿರಿಯನ್ – ೧೯೩೨ ಪ್ರಭಾಶಂಕರ್ – ೧೯೪೧ ಇಂದೂ ವಿಶ್ವನಾಥ್ – ೧೯೫೩ ಪುಟ್ಟೇಗೌಡ.ಎಚ್.ಬಿ. – ೧೯೫೫.
* * *