೨೯.೦೬.೧೯೩೬ ಬಹುಮುಖ ಪ್ರತಿಭೆಯ ನೃತ್ಯಕಲಾವಿದೆ ಲಲಿತಾ ರಾಜ್ರವರು ಹುಟ್ಟಿದ್ದು ಕಲೆಗಳ ಸಂಗಮವಾದ ಮೈಸೂರಿನಲ್ಲಿ. ತಂದೆ ಪಿ. ವೆಂಕಟರಾಮಯ್ಯನವರು, ತಾಯಿ ಅಲಮೇಲಮ್ಮ. ಓದಿಗಿಂತ ನಾಟ್ಯದಲ್ಲಿ ಚಿಕ್ಕಂದಿನಿಂದಲೇ ಮೂಡಿದ ಆಸಕ್ತಿ. ಕೊಯಮತ್ತೂರಿನ ಇಂದ್ರಾಣಿ ಜನಾರ್ದನ್ರವರಿಂದ ನೃತ್ಯ ಶಿಕ್ಷಣ. ಚೆನ್ನೈನ ಪುಷ್ಪಾಂಜಲಿ ನೃತ್ಯಮಂದಿರದಲ್ಲಿ ಶ್ರೀಮತಿ ರಾಜಸುಲೋಚನ ರವರಿಂದ ಮುಂದುವರೆದ ಶಿಕ್ಷಣ. ಸಂಗೀತ ಭೂಷಣ, ಸೋದರ ಪದ್ಮನಾಭಯ್ಯನವರ ಬಳಿ ಕಲಿತ ಕರ್ನಾಟಕ ಸಂಗೀತ. ಭಾವಗೀತೆ, ಭಕ್ತಿಗೀತೆಗಳ ಹಾಡುಗಾರಿಕೆಯಲ್ಲಿ ಗಳಿಸಿದ ಪ್ರಾವೀಣ್ಯತೆ. ಜೊತೆಗೆ ಕೇಶಾಲಂಕಾರದಲ್ಲೂ ಪಡೆದ ಮಾನ್ಯತೆ. ಅನೇಕ ನಾಟಕಗಳಿಗೆ ನೀಡಿದ ಹಿನ್ನೆಲೆ ಗಾಯನ. ಚಿಕ್ಕಂದಿನಿಂದಲೂ ಭರತನಾಟ್ಯ, ಜಾನಪದ ನೃತ್ಯ, ಸಂಗೀತ ಕಾರ್ಯಕ್ರಮಗಳಿಗೆ ಪಡೆದ ಅನೇಕ ಬಹುಮಾನಗಳು. ೧೯೭೦-೭೬ರವರೆಗೆ ಮೈಸೂರಿನಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಭರತನಾಟ್ಯ, ಲಘು ಸಂಗೀತ, ಜಾನಪದ ನೃತ್ಯಗಳಲ್ಲಿ ನೀಡಿದ ತರಬೇತಿ. ೧೯೮೩ ರಲ್ಲಿ ತಿಪಟೂರಿನಲ್ಲಿ ಲಲಿತ ಕಲಾ ವೃಂದ ಸ್ಥಾಪಿಸಿ ಭರತನಾಟ್ಯ, ಸುಗಮಸಂಗೀತ, ಜಾನಪದ ನೃತ್ಯಗಳ ಶಿಕ್ಷಣ, ತಿಪಟೂರಿನ ಎಸ್.ವಿ.ಪಿ. ಕಾಲೇಜು, ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು, ನಳಂದ ಆಂಗ್ಲ ಶಾಲೆಗಳಲ್ಲಿ ನಡೆಸಿದ ನೃತ್ಯ ತರಬೇತಿಗಳು. ತುಮಕೂರಿನ ಬಸವೇಶ್ವರ ಶಾಲೆ, ಸೇಯಿಂಟ್ ಮೆರೀಸ್ ಆಂಗ್ಲಶಾಲೆ, ಸೇಂಟ್ ಮೋಸೆಸ್ ಶಾಲೆ, ಅಮ್ಮ ಸಂದ್ರದ ಸಿಮೆಂಟ್ ಕಾರ್ಖಾನೆಯ ಶಾಲೆ, ಕ್ವಾರಿಮೈನ್ಸ್ ಶಾಲೆ, ಗುಬ್ಬಿಯ ಪ್ರಿಯ ಆಂಗ್ಲ ಶಾಲೆ, ಅರಸೀಕೆರೆಯ ಸೇಂಟ್ ಮೇರೀಸ್ ಆಂಗ್ಲ ಶಾಲೆ ಮುಂತಾದ ಕೆಲವು ಕ್ರೈಸ್ತ ಸಂಪ್ರದಾಯ ಶಾಲೆಗಳಲ್ಲೂ ಭಾರತೀಯ ಪರಂಪರೆಯ ಭರತನಾಟ್ಯವನ್ನು ಕಲಿಸಿದ ಖ್ಯಾತಿ. ತುಮಕೂರಿನ ಕೈಗಾರಿಕಾ ಮತ್ತು ಕೃಷಿ ವಸ್ತು ಪ್ರದರ್ಶನದಲ್ಲಿ ಭರತನಾಟ್ಯ, ಮತ್ತು ಜಾನಪದ ನೃತ್ಯ ಕಾರ್ಯಕ್ರಮ, ತಿಪಟೂರಿನ ಕನ್ಯೂಮೆಕ್ಸ್ನಲ್ಲಿ ನಾಟ್ಯ ಕಾರ್ಯಕ್ರಮ. ಹಾಸನದಲ್ಲಿ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಮುಂತಾದೆಡೆ ನೀಡಿದ ನೃತ್ಯ ಕಾರ್ಯಕ್ರಮಗಳು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಿಯೋಜಿಸಲ್ಪಟ್ಟ ಕಾರ್ಯಕ್ರಮದಲ್ಲಿ ಪ್ರಶಸ್ತಿ, ಮೈಸೂರಿನ ಮಾನಸ ಗಂಗೋತ್ರಿಯ ಭಾಷಾ ಸಂಸ್ಥೆ ವಿಭಾಗದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಶಸ್ತಿ, ತುಮಕೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸುವರ್ಣ ಕರ್ನಾಟಕದ ಸಂಸ್ಕೃತಿ ದಿಬ್ಬಣ ತಿಪಟೂರು, ಇವರಿಂದ ಸುವರ್ಣ ಗೌರವ ಪ್ರಶಸ್ತಿ ಮುಂತಾದುವು. ಇದೇ ದಿನ ಹುಟ್ಟಿದ ಕಲಾವಿದರು ಲಲಿತಾ ಜಹಗೀರ್ದಾರ್ – ೧೯೫೪.
* * *