ಆರ್.ಎಸ್. ಕೇಶವಮೂರ್ತಿ

Home/Birthday/ಆರ್.ಎಸ್. ಕೇಶವಮೂರ್ತಿ
Loading Events
This event has passed.

೦೪-೦೩-೧೯೦೩ ೧೭-೧೨-೧೯೮೨ ಪ್ರಖ್ಯಾತ ವೈಣಿಕ ವಿದ್ವಾಂಸರಾದ ಕೇಶವಮೂರ್ತಿಗಳು ಹುಟ್ಟಿದ್ದು ಬೇಲೂರಿನಲ್ಲಿ. ತಂದೆ ಸಂಗೀತಕ್ಕೆ ತೌರೂರೆನಿಸಿದ ರುದ್ರಪಟ್ಟಣ ಸುಬ್ಬರಾಯರು, ತಾಯಿ ಪುಟ್ಟಕ್ಕಯ್ಯ. ಪ್ರೌಢಶಾಲೆಯಲ್ಲಿ ಕಲಿಯುತ್ತಿರುವಾಗಲೇ ಸಂಗೀತದ ಕಡೆ ಬೆಳೆದ ಒಲವು. ಸಂಗೀತ ಬೋಧಕರಾಗಿದ್ದ ತಂದೆಯಿಂದಲೇ ಕೆಲಕಾಲ ವೀಣೆಯ ಪಾಠ. ಹೆಚ್ಚಿನ ಅಭ್ಯಾಸ ಮೈಸೂರಿನ ವೀಣೆ ಸುಬ್ಬಣ್ಣನವರ ಬಳಿ. ಗುರುವಿನ ಬಳಿ ಮಾಡಿದ ಯಮ ಸಾಧನೆ, ಸಾಧಿಸಿದ ವೀಣಾವಾದನ ಕಲೆ. ಬಿಡಾರಂ ಕೃಷ್ಣಪ್ಪನವರು ದೇಶಾಟನೆಮಾಡಿ ಬಂದ ಹಣದಿಂದ ಕಟ್ಟಿದ ರಾಮಮಂದಿರದಲ್ಲಿ ಕೇಶವಮೂರ್ತಿಗಳ ಮೊದಲ ವೀಣಾ ಕಚೇರಿ. ಭಾರತಾದ್ಯಂತ ನಡೆಸಿಕೊಟ್ಟ ಕಚೇರಿಗಳು. ವೀಣಾವಾದನಕ್ಕೆ ಮಾರುಹೋದ ರವೀಂದ್ರನಾಥ ಠಾಕೂರರಿಂದ ದೊರೆತ ಪ್ರಶಂಸೆ. ವಿಶ್ವಪರ್ಯಟನಕ್ಕೆ ಆಹ್ವಾನ. ಸಂಪ್ರದಾಯದ ಬದುಕಿನ ಕಾರಣದಿಂದ ಒಲ್ಲೆನೆಂಬ ಉತ್ತರ, ವೀಣಾವಾದನದಲ್ಲಿ ಕೈಗೊಂಡ ಸಂಶೋಧನೆ. ಸಾಂಪ್ರದಾಯಿಕ ಏಳುತಂತಿಯ ಜೊತೆ ಮತ್ತಷ್ಟು ತಂತಿ ಜೋಡಿಸಿ ಇಪ್ಪತ್ತನಾಲ್ಕು ತಂತಿಗಳಿಂದ ಹೊರಡಿಸಿದ ತುಂಬುನಾದ. ದೊಡ್ಡಪ್ಪನೊಡನೆ ಹಾಕಿದ ಸವಾಲಿನಂತೆ ಪಡೆದ ಆಸ್ಥಾನ ವಿದ್ವಾಂಸ ಪದವಿ, ನಾಲ್ವಡಿ ಕೃಷ್ಣರಾಜ ಒಡೆಯರಿಂದ ಆಗಾಗ್ಗೆ ಅರಮನೆಗೆ ಆಹ್ವಾನ. ಪ್ರತಿ ತಿಂಗಳೂ, ಹಬ್ಬ ಹರಿದಿನಗಳಲ್ಲಿ ಅರಮನೆಯಲ್ಲಿ ವೀಣಾ ಕಚೇರಿ. ೧೯೩೦ರಲ್ಲಿ ಹೈದರಾಬಾದಿನಲ್ಲಿ ಶ್ರೀಮತಿ ಧನರಾಜ ಗಿರಜಿಯವರು ರವೀಂದ್ರನಾಥ್ ಠಾಕೂರ್, ಸರೋಜಿನಿ ನಾಯ್ಡುರವರಿಗೆ ಏರ್ಪಡಿಸಿದ ಸಂತೋಷ ಕೂಟದಲ್ಲಿ ಏರ್ಪಡಿಸಿದ ವೀಣಾವಾದನ ಕಚೇರಿ. ಗಾಂಧೀಜಿಯವರ ಸಮ್ಮುಖದಲ್ಲೂ ವೀಣಾವಾದನ. ಮುಂಬಯಿ ಬಿರ್ಲಾ ಭವನದಲ್ಲಿ ವೀಣಾವಾದನ ಕಚೇರಿ. ವಾದನಕ್ಕೆ ಮನಸೋತ ಗಾಂಧೀಜಿಯವರಿಂದ ಸ್ವತಃ ತಾವೇ ನೇಯ್ದ ಜಮಖಾನದ ಬಳುವಳಿ. ಹೈದರಾಬಾದಿನ ಅಜಂ ಜಾ ರವರು ಬೇಗಮರೊಡನೆ ಆಲಿಸಿದ ಕಚೇರಿ. ಭಾವುಕರಾದ ನಿಜಾಮರು ವೀಣಾವಾದನವನ್ನು ಆಲಿಸಲು ಇವರ ಬಳಿಯೇ ಬಂದು ಕುಳಿತು ಪಟ್ಟ ಸಂತೋಷ. ಸಂದ ಪ್ರಶಸ್ತಿ ಗೌರವಗಳು ಹಲವಾರು. ಜಯಚಾಮರಾಜೇಂದ್ರ ಒಡೆಯರಿಂದ ವೈಣಿಕ ಪ್ರವೀಣ, ಗಂಡಭೇರುಂಡ ಚಿನ್ನದ ಪದಕ. ಗಾನಕಲಾ ಪರಿಷತ್ತಿನ ಸಮ್ಮೇಳನದ ಅಧ್ಯಕ್ಷತೆ, ಗಾನಕಲಾ ಭೂಷಣ ಪ್ರಶಸ್ತಿ, ಸ್ವರ್ಣ ಪದಕ, ಸಂಗೀತ ನಾಟಕ ಅಕಾಡಮಿಯಿಂದ ಸಂಗೀತ ಕಲಾಸಾಗರ ಬಿರುದು, ಇವರ ಹೆಸರಿನಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಟ್ರಸ್ಟ್‌ನಿಂದ ಪುರಸ್ಕಾರ.   ಇದೇ ದಿನ ಹುಟ್ಟಿದ ಕಲಾವಿದರು : ಶೇಷಗಿರಿ ದಂಡಾಪುರ – ೧೯೪೦ ಜಿ.ಆರ್. ಜಾಹ್ನವಿ – ೧೯೫೦ ಸುಬ್ರಹ್ಮಣ್ಯ ಕೆ.ಆರ್. – ೧೯೬೩ ಲೋಕಯ್ಯ ಕೆ.ಎಂ. – ೧೯೬೭

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top