೧೩.೦೩.೧೯೪೩ ರೂಢಿಗತ ಹಿತಾಸಕ್ತಿಗಳ ವಿರುದ್ಧ ಬಂಡಾಯದ ಗುಣವನ್ನು ಪ್ರಕಟಿಸುತ್ತಾ ಬಂದ ಆರ್. ನಾಗೇಶ್ರವರು ಹುಟ್ಟಿದ್ದು ಬೆಂಗಳೂರು ಸಮೀಪದ ರಾಮೋಹಳ್ಳಿ. ತಂದೆ ರಾಮರಾಜ ಅರಸು, ತಾಯಿ ಲಕ್ಷ್ಮೀದೇವಮ್ಮ. ಓದಿದ್ದು ಸೆಂಟ್ರಲ್ ಕಾಲೇಜಿನಲ್ಲಿ. ವಾರ್ತಾ ಇಲಾಖೆಯಲ್ಲಿ ಅಭಿರುಚಿಗೆ ತಕ್ಕ ಕೆಲಸ. ಹಲವಾರು ವರ್ಷಗಳ ನಂತರ ಪಡೆದ ಸ್ವಯಂ ನಿವೃತ್ತಿ. ೧೯೫೦-೬೦ರ ದಶಕದಲ್ಲಿ ಕೆ. ಗುಂಡಣ್ಣ, ಪರ್ವತಿವಾಣಿ, ಎ.ಎಸ್. ಮೂರ್ತಿ, ಕೈವಾರ ರಾಜಾರಾಯರ ನಗೆ ನಾಟಕಗಳದ್ದೇ ಕಾರುಬಾರು. ಅಂಥ ಸಂದರ್ಭದಲ್ಲಿ ವೈಚಾರಿಕ ನಾಟಕಗಳನ್ನು ರಂಗಕ್ಕೆ ತಂದ ನಾಗೇಶರದ್ದೂ ಸಿಂಹ ಪಾಲು. ನಟ, ನಿರ್ದೇಶಕ, ಬೆಳಕು ತಜ್ಞ, ರಂಗವಿನ್ಯಾಸಕ ಹೀಗೆ ಹಲವಾರು ಆಯಾಮಗಳಲ್ಲಿ ಅಭಿವ್ಯಕ್ತಿ. ೧೯೭೦ರ ದಶಕದಲ್ಲಿ ವೈಚಾರಿಕ ನಾಟಕಗಳ ಸುಗ್ಗಿಕಾಲ. ೧೯೭೨ ರಲ್ಲಿ ಜೆ. ಲೋಕೇಶ್, ಆನಂದ್, ಹರಿಕೃಷ್ಣರೊಡಗೆ ‘ರಂಗ ಸಂಪದ’; ೧೯೮೪ರಲ್ಲಿ ಮಾಲತಿರಾವ್ ರೊಡನೆ ‘ಸೂತ್ರಧಾರ’; ೧೯೮೯ರಲ್ಲಿ ಎಲ್. ಕೃಷ್ಣಪ್ಪ, ಮಾನು, ಹುಲಿವಾನ ಗಂಗಾಧರಯ್ಯ ರವರೊಡನೆ ಜನ ನಾಟ್ಯಮಂಡಲಿ… ಹೀಗೆ ಹಲವಾರು ನಾಟ್ಯ ಸಂಸ್ಥೆಗಳೊಡನೆ ಒಡನಾಟ. ಶ್ರೀರಂಗ, ಲಂಕೇಶ್, ಕಾರ್ನಾಡ್, ಚಂದ್ರಶೇಖರ ಪಾಟೀಲ, ಕಂಬಾರರ ನಾಟಕಗಳನ್ನು ರಂಗಕ್ಕೆ ತಂದುದಲ್ಲದೆ, ಪೂಚಂತೇ, ಅನಂತಮೂರ್ತಿ, ಶ್ರೀಕೃಷ್ಣ ಆಲನಹಳ್ಳಿ, ಕಾರಂತರ ಕಾದಂಬರಿಗಳಿಗೆ ಕೊಟ್ಟ ರಂಗ ರೂಪ. ಕಥೆಯಾಧಾರಿತ ನಾಟಕಗಳಿಗೆ ಹುಟ್ಟಿಕೊಂಡ ಹೊಸ ಪ್ರೇಕ್ಷಕ ವರ್ಗ. ನೀ ಕೊಡೆ ನಾ ಬಿಡೆ, ಕುಬಿ ಮತ್ತು ಇಯಾಲ, ತಾಮ್ರ ಪತ್ರದಲ್ಲಿ ನೀಡಿದ ಮನೋಜ್ಞ ಅಭಿನಯ. ಪ್ರಸನ್ನರ ನಿರ್ದೇಶನದ ಗೆಲಿಲಿಯೋ, ಕದಡಿದ ನೀರು, ವೈಕುಂಠರಾಜುರವರ ಸನ್ನಿವೇಶ ನಾಟಕಗಳಿಗೆ ಬೆಳಕಿನ ವಿನ್ಯಾಸ, ಅಸಂಗತ ನಾಟಕಗಳಿಗೆ ರಚಿಸಿದ ರಂಗಸಜ್ಜಿಕೆ, ಚೋಮ, ತಬರನ ಕಥೆ, ಯಯಾತಿ, ಕೃಷ್ಣೇಗೌಡನ ಆನೆ, ಮುಂತಾದವುಗಳಿಗೆ ಮಹತ್ವದ ನಿರ್ದೇಶನ, ಹಲವಾರು ತಂಡಗಳನ್ನು ಸೇರಿಸಿ ಬಿ.ಸಿ. ಯವರ ನಿರ್ದೇಶನದ ತುಘಲಕ್ ಮುಂತಾದುವು. ಸಂದ ಪ್ರಶಸ್ತಿ ಗೌರವಗಳು. ಕರ್ನಾಟಕ ನಾಟಕ ಅಕಾಡಮಿ, ಕೆಂಪೇಗೌಡ, ಆರ್ಯಭಟ, ರಾಜ್ಯೋತ್ಸವ, ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ. ನಾಟಕ ಅಕಾಡಮಿ ಅಧ್ಯಕ್ಷರ ಪದವಿ. ಜಿಲ್ಲೆಯ ನಾಟಕ ತಂಡಗಳಿಗೆ ನೀಡಿದ ಪ್ರಾತಿನಿಧ್ಯ, ತಿಂಗಳ ಬೆಳಕಲ್ಲಿ ರಂಗದ ಬೆರಗು-ದಾವಣಗೆರೆಯಲ್ಲಿ ಪ್ರತಿ ತಿಂಗಳ ವಿಶಿಷ್ಟ ನಾಟಕ ಪ್ರದರ್ಶನ. ಇದೇ ದಿನ ಹುಟ್ಟಿದ ಕಲಾವಿದರು : ಈಶ್ವರಪ್ಪಶಾಸ್ತ್ರಿ ಜಿ.ಆರ್. – ೧೯೩೨ ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್ – ೧೮೮೮
* * *