ಆರ್. ಶಾಮಾಶಾಸ್ತ್ರಿ

Home/Birthday/ಆರ್. ಶಾಮಾಶಾಸ್ತ್ರಿ
Loading Events
This event has passed.

೧೨.೦೧.೧೮೬೮ ೨೩.೦೧.೧೯೪೪ ಕನ್ನಡ, ಇಂಗ್ಲಿಷ್‌, ಸಂಸ್ಕೃತ ಭಾಷೆಗಳ ಜೊತೆಗೆ ಜ್ಯೋತಿಷ ಶಾಸ್ತ್ರದಲ್ಲೂ ಅಪಾರ ಪಾಂಡಿತ್ಯ ಹೊಂದಿದ್ದ ಶಾಮಶಾಸ್ತ್ರಿಗಳು ಹುಟ್ಟಿದ್ದು ರುದ್ರಪಟ್ಟಣದಲ್ಲಿ. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡರೂ ಸ್ವ-ಪ್ರಯತ್ನದಿಂದ ಮುಂದೆ ಬಂದರು. ಮೈಸೂರು ಸಂಸ್ಕೃತ ಕಾಲೇಜಿನಲ್ಲಿ ವಿದ್ವತ್‌ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು. ಅಂದಿನ ದಿವಾನರಾಗಿದ್ದ ಕೆ. ಶೇಷಾದ್ರಿ ಅಯ್ಯರ್ ರವರು ಇವರ ಪಾಂಡಿತ್ಯಕ್ಕೆ ಮೆಚ್ಚಿ ತಮ್ಮ ಮನೆಯಲ್ಲಿಯೇ ಊಟ-ವಸತಿಗೆ ವ್ಯವಸ್ಥೆ ಮಾಡಿ ಇಂಗ್ಲಿಷ್‌ ಕಲಿಯಲು ಪ್ರೋತ್ಸಾಹಿಸಿದರು. ಇಂಗ್ಲಿಷ್‌, ಸಂಸ್ಕೃತದ ಜೊತೆಗೆ ಭೌತ ಶಾಸ್ತ್ರವನ್ನೂ ಕಲಿತು ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನಲ್ಲಿ ಓದಿ ಮದರಾಸು ವಿಶ್ವವಿದ್ಯಾಲಯದ ಮೂಲಕ ಬಿ..ಎ. ಪದವಿ ಗಳಿಸಿದರು. ೧೯೧೮ ರಲ್ಲಿ ಮೈಸೂರಿನ ಪ್ರಾಚ್ಯ ಪುಸ್ತಕ ಭಂಡಾರದಲ್ಲಿ ದೊರೆತ ಉದ್ಯೋಗ. ಹಸ್ತಪ್ರತಿಗಳ ಗ್ರಂಥ ಸೂಚಿಯನ್ನು ಸಿದ್ಧಗೊಳಿಸುತ್ತಿದ್ದಾಗ ದೊರೆತ ಕೌಟಿಲ್ಯನ ಅರ್ಥಶಾಸ್ತ್ರವನ್ನು ಪರಿಷ್ಕರಿಸಿ ಸಂಸ್ಕೃತ ಹಾಗೂ ಇಂಗ್ಲಿಷ್‌ನಲ್ಲಿ ಪ್ರಕಟಿಸಿದರು. ೧೯೧೨ ರಿಂದ ೧೯೧೮ ರವರೆಗೆ ಬೆಂಗಳೂರಿನ ಸಂಸ್ಕೃತ ಮಹಾಪಾಠ ಶಾಲೆಯ ಅಧ್ಯಕ್ಷರ ಜವಾಬ್ದಾರಿಯನ್ನು ಹೊತ್ತಿದ್ದರು. ೧೯೯೮ ರಲ್ಲಿ ಮೈಸೂರಿನ ಪ್ರಾಚ್ಯ ಪುಸ್ತಕ ಭಂಡಾರದ ಕ್ಯೂರೇಟರಾಗಿ, ೧೯೨೨ ರಲ್ಲಿ ಪ್ರಾಚ್ಯ ಸಂಶೋಧನ ಇಲಾಖೆಯ ನಿರ್ದೇಶಕರಾದರು. ಕ್ಯೂರೇಟರ್ ಆಗಿದ್ದ ಸಂದರ್ಭದಲ್ಲಿ ಹಲವಾರು ಸಂಸ್ಕೃತ ಗ್ರಂಥಗಳನ್ನು ಸಂಶೋಧಿಸಿ ಪ್ರಕಟಿಸಿದರು. ಬ್ರಹ್ಮ ಸೂತ್ರ ಭಾಷ್ಯ, ಬೋಧಾಯನ ಗೃಹಸೂತ್ರ ಸ್ಮೃತಿಚಂದ್ರಿಕಾ, ತೈತ್ತರೀಯ ಬ್ರಾಹ್ಮಣ, ತೈತ್ತರೀಯ ಬ್ರಾಹ್ಮಣ (ಅಷ್ಟಕ) ಭಾಗ – ೨, ಭಟ್ಟ ಭಾಸ್ಕರ ಮತ್ತು ಸಾಯಣ ಭಾಷ್ಯಗಳೊಡನೆ ಅಲಂಕಾರ ಭಾಗ ಮಣಿಹಾರ ಭಾಗ – ೨, ಬ್ರಹ್ಮಸೂತ್ರಭಾಷ್ಯ (ಆನಂದತೀರ್ಥೀಯ) ತಾತ್ಪರ್ಯಚಂದ್ರಿಕೆಯೊಡನೆ ಭಾಗ – ೪, ಕೌಟಿಲ್ಯನ ಅರ್ಥಶಾಸ್ತ್ರ ಮತ್ತು ಅರ್ಥಶಾಸ್ತ್ರದ ಪದಸೂಚಿ, ಸರಸ್ವತಿ ವಿಲಾಸ ಮುಂತಾದ ೨೫ ಕ್ಕೂ ಹೆಚ್ಚು ಕೃತಿಗಳು ಪ್ರಕಟಿತ. ಸಂಸ್ಕೃತ ಗ್ರಂಥಗಳಲ್ಲದೆ ಕನ್ನಡದಲ್ಲೂ ಹಲವಾರು ಗ್ರಂಥಗಳನ್ನು ಸಂಪಾದಿಸಿ ಪ್ರಕಟಿಸಿದರು. ಕುಮಾರವ್ಯಾಸನ ಮಹಾಭಾರತ (ವಿರಾಟಪರ್ವ) ಲಿಂಗಣ್ಣನ ಕೆಳದಿಯ ನೃಪವಿಜಯ, ಸೋಮರಾಜನ ಉದ್ಭಟ ಕಾವ್ಯ, ರುದ್ರಭಟ್ಟನ ಜಗನ್ನಾಥ ವಿಜಯ,ಕುಮಾರವ್ಯಾಸ ಮಹಾಭಾರತದ ಉದ್ಯೋಗಪರ್ವ, ಸೋಮನಾಥನ ಅಕ್ರೂರ ಚರಿತೆ, ನಯಸೇನನ ಧರ್ಮಾಮೃತ ಭಾಗ-೧, ಕಂಠೀರವ ನರಸರಾಜ ವಿಜಯ, ನಯಸೇನನ ಧರ್ಮಾಮೃತ ಭಾಗ-೨ ಮೊದಲಾದ ಹತ್ತಾರು ಕೃತಿಗಳನ್ನು ಬೆಳಕಿಗೆ ತಂದರು. ಹಲವಾರು ಸಮಿತಿಗಳೊಡನೆ ನಿಕಟ ಸಂಪರ್ಕ ಹೊಂದಿದ್ದು ಮೈಸೂರಿನ ಮಹಾರಾಜ ಸಂಸ್ಕೃತ ಮಹಾಪಾಠ ಶಾಲೆಯ ಕಾರ್ಯಕಾರಿ ಸಮಿತಿ, ಸಂಸ್ಕೃತ ವಿದ್ವತ್ವರೀಕ್ಷಾ ಮಹಾಸಭೆಯ ಸದಸ್ಯರಾಗಿ, ಸಂಸ್ಕೃತ ಭಾಷಾ ವ್ಯಾಸಂಗದ ಅಭಿವೃದ್ಧಿಗಾಗಿ ದುಡಿದರು. ಸಂಸ್ಕೃತ ಭಾಷೆಯ ಪ್ರಚಾರಕ್ಕಾಗಿ ‘ಆರ್ಯ ಧರ್ಮೋಜ್ಜೀವಿನಿ ಸಭಾ’ ಎಂಬ ಸಂಸ್ಥೆಯನ್ನು ಪ್ರಾರಂಭಿಸಿ ಅದರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಇವರ ನಿಸ್ವಾರ್ಥ ಸೇವೆಗಾಗಿ ಅಮೆರಿಕದ ವಾಷಿಂಗ್‌ಟನ್‌ ವಿಶ್ವ ವಿದ್ಯಾಲಯಕ್ಕೆ ಸೇರಿದ ಓರಿಯಂಟಲ್‌ ಯೂನಿವರ್ಸಿಟಿಯ ಫಿಲಾಸಫಿಕಲ್‌ ಎಂಬ ಸಂಸ್ಥೆ ೧೯೧೯ ರಲ್ಲಿ ಇವರಿಗೆ ಪಿಎಚ್.ಡಿ ಪದವಿ ಕೊಟ್ಟು ಗೌರವಿಸಿತು. ೧೯೨೧ ರಲ್ಲಿ ರಾಯಲ್‌ ಏಷಿಯಾಟಿಕ್‌ ಸೊಸೈಟಿ (ಮುಂಬಯಿ ಶಾಖೆ) ಯುಕಾಂಪ್‌ಬೆಲ್‌ ಸ್ಮಾರಕ ಚಿನ್ನದ ಪದಕ ಕೊಟ್ಟು ಗೌರಿವಿಸಿತು. ಕಲ್ಕತ್ತ ವಿಶ್ವವಿದ್ಯಾಲಯವು ೧೯೨೧ ರಲ್ಲಿ ಡಾಕ್ಟರ್ ಆಫ್‌ ಫಿಲಾಸಫಿ ಪದವಿ ನೀಡಿತು. ಮೈಸೂರಿನ ಮಹಾರಾಜರಿಂದ ಅರ್ಥಶಾಸ್ತ್ರ ವಿಶಾರದ, ಆಗಿನ ಬ್ರಿಟಿಷ್‌ ಸರಕಾರ ಮಹಾಮಹೋಪಾಧ್ಯಾಯ ಪ್ರಶಸ್ತಿ, ಕಾಶಿಯ ಭಾರತ ಧರ್ಮ ಮಹಾಮಂಡಲದಿಂದ ವಿದ್ಯಾಲಂಕಾರ, ಪಂಡಿತರಾಜ ಬಿರುದು ಮತ್ತು ಪ್ರಶ್ತಿ ಮುಂತಾದವುಗಳನ್ನು ಪಡೆದ, ಬಹುಭಾಷಾ ಪ್ರಾಜ್ಞರಾಗಿದ್ದ ಶಾಮಾಶಾಸ್ತ್ರಿಗಳು ೨೩ ರ ಜನವರಿ ೧೯೪೪ ರಲ್ಲಿ ನಿಧನರಾದರು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top