ಈಚನೂರು ಜಯಲಕ್ಷ್ಮಿ

Home/Birthday/ಈಚನೂರು ಜಯಲಕ್ಷ್ಮಿ
Loading Events
This event has passed.

೨೧-೬-೧೯೪೭ ಪ್ರಸಿದ್ಧ ಕಾದಂಬರಿಕಾರ್ತಿ ಜಯಲಕ್ಷ್ಮಿಯವರು ಹುಟ್ಟಿದ್ದು ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಈಚನೂರು ಗ್ರಾಮ. ತಂದೆ ಪ್ರಸಿದ್ಧ ಸೂತ್ರದ ಬೊಂಬೆಯಾಟಗಾರರಾದ ಸೀತಾರಾಮಯ್ಯ, ತಾಯಿ ಸಾವಿತ್ರಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಹುಟ್ಟಿದೂರಿನಲ್ಲಿ. ತಿಪಟೂರು ಕಲ್ಪತರು ಕಾಲೇಜಿನಲ್ಲಿ ಬಿ.ಎ. ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ. ಉದ್ಯೋಗಕ್ಕಾಗಿ ಆಯ್ಕೆ ಮಾಡಿಕೊಂಡದ್ದು ಅಧ್ಯಾಪಕಿ ವೃತ್ತಿ. ‘ಶಿಶುಗೃಹ’ ಪ್ರೌಢಶಾಲೆಯಲ್ಲಿ ಅಧ್ಯಾಪಕಿಯಾಗಿ ಸೇವೆ. ಕಲಾವಿದರ ಮನೆತನದಲ್ಲಿ ಹುಟ್ಟಿದ್ದರಿಂದ ಸಾಹಿತ್ಯ, ಸಾಂಸ್ಕೃತಿಕ ಜಗತ್ತಿನೆಡೆಗೆ ಸೆಳೆತ. ತಂದೆ ಕಲಾವಿದರ ಗುಣ, ತಾಯಿಯವರು ಹಾಡುತ್ತಿದ್ದ ರಾಮಾಯಣ, ಮಹಾಭಾರತ ಧಾರ‍್ಮಿಕ ಗ್ರಂಥಗಳಿಂದ ಪ್ರೇರಿತರಾಗಿ ಸಾಹಿತ್ಯದತ್ತ ಹರಿದ ಮನಸ್ಸು. ಎಳೆವೆಯಿಂದಲೇ ಸಾಹಿತ್ಯದತ್ತ ಆಕರ್ಷಿತರಾಗಿ ಬರವಣಿಗೆ ಪ್ರಾರಂಭ. ಮೊದಲ ಕತೆ ‘ಮುತ್ತಿನ ಓಲೆ’ ಸುಧಾ ವಾರಪತ್ರಿಕೆಯಲ್ಲಿ ಪ್ರಕಟಗೊಂಡಾಗ ಆಕಾಶವೇ ಕೈಗೆಟುಕಿದಷ್ಟು ಸಂತಸ. ನಂತರ ಸತತವಾಗಿ ೨೫೦ಕ್ಕೂ ಹೆಚ್ಚು ಕತೆಗಳು ಪ್ರಕಟಿತ. ಆಕಾಶವಾಣಿಗಾಗಿ ರೂಪಕಗಳ ರಚನೆ, ಪ್ರಸಾರ. ಹಿಮದ ಹೂವು, ನೆನಪಿನ ನಾವೆ ಮೆಗಾ ಧಾರಾವಾಹಿಯಾಗಿ ಸಿದ್ಧಗೊಳ್ಳುತ್ತಿವೆ. ಅನೇಕ ಸಣ್ಣ ಕಥೆಗಳಿಗೆ ಬಹುಮಾನ ಇಲ್ಲವೇ ಮೆಚ್ಚುಗೆ ಗ್ಯಾರಂಟಿ. ಇವರು ಬರೆದ ಬೀಜ, ಅನವರತ, ಚಂಡು, ಮೊದಲಾದ ಕತೆಗಳು ಟಿ.ವಿ. ಕಥೆಯಾಗಿ ಪ್ರಸಾರ. ಹಲವಾರು ಕಾದಂಬರಿ, ಸಣ್ಣ ಕಥಾ ಸಂಕಲನಗಳು ಪ್ರಕಟಿತ. ಕಾದಂಬರಿಗಳು-ಬಾಳಪಲ್ಲವಿ, ಮೋಡದ ಮನೆ, ಹೆಜ್ಜೆಮೂಡದ ಹಾದಿ, ಆಗಂತುಕರು, ಕನಸುಗಳು, ಅಂತರ್ಗೀತ, ಗಿರಿದರ್ಶಿನಿ, ಹಿಮತೊಳೆದ ಹೂವು, ನಾಂದಿ, ಅಗ್ನಿರೇಖೆ, ಸಮಶ್ರುತಿ, ಚುಕ್ಕಿ ತಪ್ಪಿದ ರಂಗೋಲಿ, ಕಡಲಿನ ಒಡಲು, ಸ್ವಪ್ನಸೌಧ, ಅಸಹಾಯಕರು, ಮಾನಸರಾಗ, ಹಳೆಬೇರು ಹೊಸ ಚಿಗುರು, ಹಿಮದ ಬೊಂಬೆ, ವಸಂತ ಪಲ್ಲವಿ, ಪ್ರೇಮಬಂಧನ, ಚೈತ್ರದ ಹಾಡು ಮುಂತಾದ ೨೫ಕ್ಕೂ ಹೆಚ್ಚು ಕಾದಂಬರಿ ಪ್ರಕಟಿತ. ಕಥಾಸಂಕಲನ-ಒಳಗೂ ಹೊರಗೂ, ಒಮ್ಮೊಮ್ಮೆ, ಅಂತರಾಳದೊಳಗೊಂದು ಕಿರುದನಿ, ನಂಬಿಕೆ, ಬೊಂಬೆಯಾಟ ಮುಂತಾದುವುಗಳನ್ನೊಳಗೊಂಡು ೩೦ಕ್ಕೂ ಹೆಚ್ಚು ಕೃತಿ ಪ್ರಕಟಿತ. ಲೇಖಕಿಯರಿಗೆ ಬದುಕಿನ ವಿಭಿನ್ನ ನೆಲೆಯ ಅನುಭವದ ಕೊರತೆ ಎಂದು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳುವ, ಸಮಾಜದ ನಿಂದನೆಗೆ, ಬದುಕಿನ ಸುಖದಿಂದ ವಂಚಿತರಾಗುವುದರಿಂದ ಅಂತರ್ಜಾತಿ ವಿವಾಹವನ್ನು ಖಂಡಿಸುವ, ವರದಕ್ಷಿಣೆ ಪಿಡುಗು, ದಬ್ಬಾಳಿಕೆ ರೀತಿನೀತಿಯನ್ನು ಖಂಡಿಸಿ, ಹಿರಿಯರ-ಸಮಾಜದ ಒಪ್ಪಿಗೆಯಂತೆಯೇ ನಡೆಯುವ ಮದುವೆಯೇ ಹಿತವೆನ್ನುವುದೇ ಈ ಲೇಖಕಿಯ ನುಡಿ. ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನಿತರು.   ಇದೇ ದಿನ ಹುಟ್ಟಿದ ಸಾಹಿತಿಗಳು : ಕಾಮಾಕ್ಷಮ್ಮ. ಆರ್ – ೧೯೦೬ ಕೆರೆಮನೆ ಶಿವರಾಮ ಹೆಗಡೆ – ೧೯೦೭ ಶಂಭುಗೌಡ ನೀ. ಪಾಟೀಲ – ೧೯೫೬

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top