ಈಶ್ವರ ಚಂದ್ರ ಚಿಂತಾಮಣಿ

Home/Birthday/ಈಶ್ವರ ಚಂದ್ರ ಚಿಂತಾಮಣಿ
Loading Events

೧೦.೦೫.೧೯೨೬ ನಿರಂತರವಾಗಿ ಸಾಕ್ಷರತಾ ಆಂದೋಲನದಲ್ಲಿ ತೊಡಗಿಸಿಕೊಂಡಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿ ಆದರ್ಶ ಶಿಕ್ಷಕರೆನಿಸಿರುವ ಈಶ್ವರ ಚಂದ್ರ ಚಿಂತಾಮಣಿಯವರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ವಿಜಾಪುರ ತಾಲ್ಲೂಕಿನ ಬಿಜ್ಜರಗಿಯಲ್ಲಿ ೧೯೨೬ರ ಮೇ ೧೦ ರಂದು. ತಂದೆ ಅಮಗೌಡ ಸೋಮಲಿಂಗ ಚಿಂತಾಮಣಿ, ತಾಯಿ ನಾಗಮ್ಮ ಇವರ ಪ್ರೀತಿಯ ಏಳನೆಯ ಕುಡಿ. ಸಂಗೀತ, ನಾಟಕದ ಹುಚ್ಚಿನ ತಂದೆಗೆ ಪಿಟೀಲು ಜೀವನ ಸಂಗಾತಿ-ಪಾರಿಜಾತ ನಾಟಕ ಪ್ರಿಯರು. ಬೇಳೆದದ್ದು ಇಂತಹ ಸಾಂಸ್ಕೃತಿಕ, ಸಂಗೀತ ವಾಚನಾಭಿರುಚಿಯ ವಾತಾವರಣ. ಮನೆ ಮುಂದಿನ ಕೋಣೆಯಲ್ಲಿ ಅಣ್ಣನ ಸ್ನೇಹಿತರ ಕಂಠದಿಂದ ಸಣ್ಣ ದನಿಯಲ್ಲಿ ಸದಾ ಕೇಳಿಬರುತ್ತಿದ್ದ ಪಾರಿಜಾತದ ಪದಗಳು ಮತ್ತು ಹಂತಿಯ ಹಾಡುಗಳು. ಪ್ರಾರಂಭಿಕ ಶಿಕ್ಷಣ ಬಿಜ್ಜರಗಿ ಮತ್ತು ಬಿಜಾಪುರದಲ್ಲಿ. ಮಾಧ್ಯಮಿಕ ಮತ್ತು ಹೈಸ್ಕೂಲು ಬಾಗಲಕೋಟೆಯಲ್ಲಿ. ಜಮಖಂಡಿ ಸರಕಾರಿ ಟ್ರೈನಿಂಗ ಕಾಲೇಜಿನಿಂದ ಪಡೆದ ಶಿಕ್ಷಕರ ತರಬೇತಿ.೪೨ನೆಯ ವಯಸ್ಸಿನಲ್ಲಿ ಹಿರಿಯ ಮಗನೊಡನೆ ಎಸ್,ಎಸ್,ಎಲ್,ಸಿ ಪರೀಕ್ಷೆ ಬರೆದು ಉತ್ತೀರ್ಣರಾದರು. ಅಣ್ಣ ಮೂರ್ತಿಯು ಬಾಲಕೋಟೆಯಲ್ಲಿ ಸೆಂಟ್ರಲ್ ಶಾಲೆಯಲ್ಲಿ  ಶಿಕ್ಷಕರು, ಸಾಹಿತ್ಯ ಪ್ರೇಮಿ. ಅನಕೃ, ಸಾಸನೂರ, ಪಿ. ಎಂ. ನಾಡಗೌಡ, ಎಸ್. ಆರ್. ಕಂಠಿ ಮುಂತಾದವರ ಬಳಗದಲ್ಲಿದ್ದ ಅಣ್ಣನ ಜೊತೆ ತಮ್ಮನೂ ಪಾತ್ರಧಾರಿ. ಅಣ್ಣನಂತೆ ಸದಾ ಕಥೆ, ಕಾದಂಬರಿಗಳ ಓದು. ಈ ಬಳಗದಿಂದ ಮರಿಸಾಹಿತಿ ಎಂಬ ಬಿರುದು. ಇವರು ಬರೆದ ಮೊದಲ ಕತೆ ‘ಸುಬ್ಬಿಯ ಸುದಿನ’ ಬಾಗಲ ಕೋಟೆಯ ‘ಕರ್ನಾಟಕ ಬಂಧು’ ಪತ್ರಿಕೆಯಲ್ಲಿ ಪ್ರಕಟಗೊಂಡಾಗ ಅಣ್ಣನ ಗೆಳೆಯರು ಪೇಡೆ ತಿನ್ನಿಸಿ ಪ್ರೋತ್ಸಾಹಿಸಿದರು. ೧೯೪೨ರ ಚಲೇಜಾವ್ ಚಳವಳಿಯಲ್ಲಿ ಹೈಸ್ಕೂಲು ವಿದ್ಯಾರ್ಥಿಗಳೊಡನೆ ಸೇರಿಕೊಂಡು ಅನುಭವಿಸಿದ ಸೆರೆಮನೆವಾಸ. ವಿಜಾಪುರದ ಪ್ರಾಥಮಿಕ ಶಾಲೆಗೆ ಶಿಕ್ಷಕರಾಗಿ ಅಣ್ಣ ಬಂದು ಸೇರಿದಾಗ, ಆರ್ಥಿಕ ತೊಂದರೆಯಿಂದ ಹೈಸ್ಕೂಲಿಗೆ ಸೇರಲಾಗದ ವ್ಯಥೆ. ಅಣ್ಣನ ಸ್ನೇಹಿತರಾದ ವಿ. ಆರ್. ಮಳಗಿಯವರ ಸಹಾಯದಿಂದ ಪುಣೆಯ ಮಿಲಿಟರಿ ಕಚೇರಿಯಲ್ಲಿ ಕಾರಕೂನನ ಹುದ್ದೆ ದೊರೆತು ಪುಣೆಗೆ ಪಯಣ. ಬಿಡುವಿನ ವೇಳೆಯಲ್ಲಿ ಸಾಹಿತ್ಯಾಭ್ಯಾಸ. ಬೇಂದ್ರೆ, ಕುವೆಂಪು, ಮಧುರ ಚೆನ್ನ, ಗೋಕಾಕ್ ಮುಂತಾದವರ ಸಾಹಿತ್ಯದ ಪರಿಚಯ. ಬರೆದ ಕಥೆಗಳು ಕರ್ನಾಟಕ ಬಂಧು ಪತ್ರಿಕೆಯಲ್ಲದೆ ಬೆಂಗಳೂರಿನ ಉಷಾ, ಪ್ರಜಾಮತ, ವಾಹಿನಿ, ಕತೆಗಾರ, ಕರ್ಮವೀರ, ಜನಪ್ರಗತಿ, ಮುಂತಾದ ಪತ್ರಿಕೆಗಳಲ್ಲೂ ಪ್ರಕಟಗೊಂಡವು. ವಿ. ಕೃ. ಗೋಕಾಕರು ಪುಣೆಯಲ್ಲಿ ಕಟ್ಟಿ ಬೆಳೆಸಿದ ಕರ್ನಾಟಕ ಸಂಘದ ಕಾರ‍್ಯಕ್ರಮಗಳಲ್ಲಿ ಭಾಗಿ. ಬಿ. ಎಂ. ಶ್ರೀ., ಅನಕೃ ಮುಂತಾದವರ ಭಾಷಣಗಳಿಂದ ಕನ್ನಡದ ಬಗ್ಗೆ ಮೂಡಿದ ಒಲವು. ಪುಣೆಯ ಕಾರಕೂನ ವೃತ್ತಿಯು ಸರಿಬರಲಿಲ್ಲವೆಂದು ಶಿಕ್ಷಕ ವೃತ್ತಿಯಲ್ಲಿ ಆಸಕ್ತಿಹೊಂದಿ ಬಸವನ ಬಾಗೇವಾಡಿಯ ಕನ್ನಡ ಗಂಡು ಮಕ್ಕಳ ತಾಲ್ಲೂಕು ಶಾಲೆಯಲ್ಲಿ ಶಿಕ್ಷಕರಾಗಿ ನೇಮಕ. ನಂತರ ತೊರವಿ ಶಾಲೆ, ಅಲ್ಲಿಂದ ನಾಗಠಾಣ, ಗಂಡು ಮಕ್ಕಳ ಶಾಲೆ, ಬಬಲೇಶ್ವರ, ನಾಗಠಾಣ, ಜೈನಾಪುರ, ಇಂಡಿ ತಾಲ್ಲೂಕಿನ ತಾಂಬಾ, ಲಚ್ಯಾಣ ಪ್ರಾಕ್ಟೀಸಿಂಗ್ ಶಾಲೆ ಮತ್ತು ವಿಜಾಪುರ ಶಾಲೆ – ಹೀಗೆ ನಾನಾ ಕಡೆಗಳಲ್ಲಿ ಸಹಾಯಾಕ ಶಿಕ್ಷಕರಾಗಿ, ಮುಖ್ಯ ಗುರುಗಳಾಗಿ ನಿರ್ವಹಿಸಿದ ಜವಾಬ್ದಾರಿಗಳು. ಹೋದಕಡೆಯಲ್ಲೆಲ್ಲಾ ಶಾಲಾ ಅಭಿವೃದ್ಧಿಗಾಗಿ ಹಾಕಿಕೊಂಡ ಹಲವಾರು ಯೋಜನೆಗಳು, ಹಳ್ಳಿಯವರ ಸಹಾಯ ಮತ್ತು ಶಿಕ್ಷಣ ಇಲಾಖೆಯ ಸಹಾಯದಿಂದ ಶಾಲಾ ಕಟ್ಟಡಗಳು. ಏರ್ಪಡಿಸಿದ ಶೈಕ್ಷಣಿಕ ಸಮ್ಮೇಳನಗಳು. ಸಮ್ಮೇಳನಗಳಲ್ಲಿ ಶಾಲಾಬಾಲಕರನ್ನು ತೊಡಗಿಸಿಕೊಂಡು ನಡೆಸಿಕೊಟ್ಟ ಜನಪ್ರಿಯ ಕಾರ‍್ಯಕ್ರಮಗಳು. ಸಾಂಸ್ಕೃತಿಕ ಕಾರ‍್ಯಕ್ರಮಗಳನ್ನೇರ್ಪಡಿಸಿ  ಪಾಪ ಪುಣ್ಯ, ಕೋಳೂರ ಕೊಡಗೂಸು, ಸತ್ವ ಪರೀಕ್ಷೆ ಮುಂತಾದ ನಾಟಕಗಳನ್ನು ವಿದ್ಯಾರ್ಥಿಗಳಿಂದ ಪ್ರದರ್ಶಿಸಿ ಗಳಿಸಿದ ಜನಮನ್ನಣೆ, ರಾಜ್ಯ ಸಂಶೋಧನಾ ಇಲಾಖೆ (ಪಠ್ಯ ಪುಸ್ತಕ ವಿಭಾಗ) ಯಿಂದ ಸಾಹಿತ್ಯ ರಚನಾಲಯ, ಮೈಸೂರು ವಯಸ್ಕರ ಶಿಕ್ಷಣ ಇಲಾಖೆ, ಮಕ್ಕಳ ಸಾಹಿತ್ಯ ರಚನೆಗಾಗಿ ಹೊರರಾಜ್ಯದ ಸಂದರ್ಶನ ಮುಂತಾದವುಗಳಲ್ಲಿ ಭಾಗವಹಿಸಲು ತೆರಳಿದಾಗ ತರಗತಿಗಳು ಸುಗಮವಾಗಿ ನಡೆಯಲು ವಿದ್ಯಾರ್ಥಿಗಳಲ್ಲೇ ವರ್ಗದ ಮಂತ್ರಿ, ಸುವ್ಯವಸ್ಥೆ ಕಾಪಾಡಲು ಮುಖ್ಯಮಂತ್ರಿ, ಸ್ವಚ್ಛತೆಗಾಗಿ ಆರೋಗ್ಯ ಮಂತ್ರಿ, ಸಾಂಸ್ಕೃತಿಕ ಕಾರ‍್ಯಕ್ರಮಕ್ಕೆ ಸಾಂಸ್ಕೃತಿಕ ಮಂತ್ರಿ, ಹೀಗೆ ವಿದ್ಯಾರ್ಥಿಗಳನ್ನು ನೇಮಿಸಿ ಜವಾಬ್ದಾರಿಯನ್ನು ನಿರ್ವಹಿಸಲು ನೀಡಿದ ಮಾರ್ಗದರ್ಶನ-ಕಲಿಸಿದ ಪಾಠ. ಹಲವಾರು ನಾಟಕಗಳನ್ನು ರಚಿಸಿದಂತೆ ಶಾಲಾ ಪಠ್ಯಪುಸ್ತಕಗಳ ರಚನೆಯಲ್ಲಿಯೂ ತೊಡಗಿಸಿಕೊಂಡು ಬರೆದ ಪುಸ್ತಕಗಳು ಬಸವಣ್ಣನವರು, ಯುಗಪುರುಷ ಗಾಂಧೀಜಿ, ಮಾದರಿ ಮಲ್ಲಣ್ಣ, ಜನಪ್ರಿಯ ರಾಮಾಯಣ, ಬಾಳಿನ ಬೆಳಕು, ಮಹಾಭಾರತ ದರ್ಶನ, ಕರ್ನಾಟಕದ ಕಥೆಗಳು ಮುಂತಾದವು. ಇದಲ್ಲದೆ ಪೌರಾಣಿಕ ಕೃತಿಗಳಾದ ನಳ ದಮಯಂತಿ, ಸಾವಿತ್ರಿ ಸೌಭಾಗ್ಯ, ಸತ್ಯ ಹರಿಶ್ಚಂದ್ರ ಮುಂತಾದವುಗಳಾದರೆ, ಜಾನಪದ ಕೃತಿಗಳಾದ ಗರತಿಯ ಮನೆಯಿಂದ ಮತ್ತು ಒಡಪುಗಳು, ಭಾಗ್ಯದ ಬಾಗಿಲು, ಪುಣ್ಯ ಪುರುಷ – ಕಾದಂಬರಿಗಳು.  ಭಾಗ್ಯದ ಬಾಗಿಲು, ತೆರೆದಿಟ್ಟ ಪುಸ್ತಕ, ಊರ ಉಸಾಬರಿ, ನಂದಾದೀಪ, ಯಾರತಪ್ಪು, ಮೊಲಾದ ೨೦ಕ್ಕೂ ಹೆಚ್ಚು ರೇಡಿಯೋ ನಾಟಕಗಳು,; ಬಂಥನಾಳದ ಬೆಳಕು, ಕಾಯಕವೇ ಕೈಲಾಸ, ಕರ್ನಾಟಕ ಕಣ್ಮಣಿಗಳು, ನೆಹರು ದರ್ಶನ, ನನ್ನ ಮನೆ ಅಸ್ಸಾಂ ಮೊದಲಾದ ಮಕ್ಕಳ ಸಾಹಿತ್ಯ ಕೃತಿಗಳಲ್ಲದೆ ಭಕ್ತಾನುರಾಗಿ ಬಂಥನಾಳ ಶಿವಯೋಗಿ, ಅನುಭಾವ ಚಿಂತಾಮಣಿ, ಧರ್ಮದರ್ಶನ, ಪ್ರಸಾರವಾಣಿ, ಪ್ರಾರ್ಥನಯೋಗ ಮುಂತಾದ ಅಧ್ಯಾತ್ಮಿಕ ಗ್ರಂಥಗಳೂ ಸೇರಿ ಸುಮಾರು ಐವತ್ತಕ್ಕೂ ಹೆಚ್ಚು ಕೃತಿಗಳು ಪ್ರಕಟಿತ. ಹಲವಾರು ಸಂಸ್ಥೆಗಳೊಡನೆ ಒಡನಾಟ ಹೊಂದಿದ್ದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ, ವಯಸ್ಕರ ಶಿಕ್ಷಣ ಪಠ್ಯ ನಿರ್ಮಾಣ ಸಮಿತಿ ಅಧ್ಯಕ್ಷರಾಗಿ, ಬಿಜ್ಜರಗಿ ವಿದ್ಯಾವರ್ಧಕ ಸಂಘದ ಕಾರ‍್ಯಾಧ್ಯಕ್ಷರಾಗಿ, ಜಾನಪದ ಪರಿಷತ್ತಿನ ಕಾರ‍್ಯಕಾರಿ ಸಮಿತಿ, ವಯಸ್ಕರ ಶಿಕ್ಷಣ ಸಮಿತಿ ಸದಸ್ಯರಾಗಿ – ಹೀಗೆ ಹಲವಾರು ಸಂಸ್ಥೆಗಳಲ್ಲಿ ನಿರ್ವಹಿಸಿದ ಕಾರ‍್ಯಗಳು. ನಾಲ್ಕು ದಶಕಗಳಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ವಯಸ್ಕರ ಶಿಕ್ಷಣ, ನಾಟಕ, ವ್ಯಕ್ತಿ ಚಿತ್ರ, ಮಕ್ಕಳ ಸಾಹಿತ್ಯ, ಅಧ್ಯಾತ್ಮಿಕ, ಅನುಭಾವ ಸಾಹಿತ್ಯ- ಹೀಗೆ ಹಲವಾರು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಚಿಂತಾಮಣಿಯವರಿಗೆ ಆದರ್ಶ ಶಿಕ್ಷಕ ರಾಷ್ತ್ರಪ್ರಶಸ್ತಿ (೧೯೭೪),  ಜಾನಪದ ಅಕಾಡೆಮಿಯ ಪ್ರಶಸ್ತಿ,(೧೯೮೦), ಭಾರತ ಸರಕಾರದ ಫೆಲೋಷಿಪ್ (೧೯೯೦), ಕೂಡಲ ಸಂಗಮ ಮತ್ತು ಭಾಗ್ಯದ ಬಾಗಿಲು ಕೃತಿಗಳಿಗೆ ನವ ಸಾಕ್ಷರ ರಾಷ್ತ್ರ ಪ್ರಶಸ್ತಿ, ‘ಕಾಯಕವೇ ಕೈಲಾಸ’ ಕೃತಿಗೆ ಹುಬ್ಬಳ್ಳಿಯ ಮೂರು ಸಾವಿರ ಮಠದ ಪುರಸ್ಕಾರ, ಮುಳವಾಡದಲ್ಲಿ ನಡೆದ ೪ನೆಯ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ, ‘ಜಾನಪದ ಜ್ಯೋತಿ ಕೃತಿಗೆ’ ಹರ್ಡೇಕರ ಮಂಜಪ್ಪ ಪ್ರಶಸ್ತಿ, ‘ಭಕ್ತಾನುರಾಗಿ ಬಂಥನಾಳ ಶಿವಯೋಗಿ’ ಗ್ರಂಥಕ್ಕೆ ಇಳಕಲ್ಲ ವಿಜಯ ಮಹಾಂತೇಶ ಮಠದಿಂದ ಬಸವ ಗುರು ಕಾರುಣ್ಯ ಪ್ರಶಸ್ತಿ, ಮುಂತಾದ ಪ್ರಶಸ್ತಿ ಗೌರವಗಳಲ್ಲದೆ ಇವರ ಕೃತಿಗಳ ವಿವೇಚನೆ ನಡೆಸಿ’ ‘ಈಶ್ವರ ಚಂದ್ರ ಚಿಂತಾಮಣಿ ಬದುಕು-ಬರಹ’ ಮಹಾ ಪ್ರಬಂಧಕ್ಕೆ ೨೦೦೩ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಮಂಜುನಾಥ ಬಸವನ ಗೌಡ ಪಾಟೀಲರು ಡಾಕ್ಟರೇಟ್ ಪಡೆದಿದ್ದಾರೆ. ವಿದ್ಯಾರ್ಥಿಗಳು, ಅಭಿಮಾನಿಗಳು ೨೦೦೫ರಲ್ಲಿ ಅರ್ಪಿಸಿದ ಗೌರವ ಗ್ರಂಥ ‘ಚಿಂತಾಮಣಿ’.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top