ಉಷಾ ಪಿ. ರೈ.

Home/Birthday/ಉಷಾ ಪಿ. ರೈ.
Loading Events

೨೩..೧೯೪೫ ಸಾಂಸ್ಕೃತಿಕ, ಸಾಹಿತ್ಯಿಕ, ಸಾಮಾಜಿಕ ಸಂಘಟಕಿ, ಚಿತ್ರಕಲಾವಿದೆ, ಲೇಖಕಿ ಉಷಾರವರು ಹುಟ್ಟಿದ್ದು ಉಡುಪಿಯಲ್ಲಿ. ತಂದೆ ಹೊನ್ನಯಶೆಟ್ಟರು ಸ್ವಾತಂತ್ರ್ಯ ಹೋರಾಟಗಾರರು, ಗಾಂಧಿವಾದಿ, ಪತ್ರಿಕೋದ್ಯಮಿ ಮತ್ತು ಪ್ರಕಾಶಕರು, ತಾಯಿ ಕೆ. ಪದ್ಮಾವತಿ ಶೆಟ್ಟಿ ಕುಶಲಕಲೆಗಳಲ್ಲಿ ಪರಿಣತೆ. ಓದಿದ್ದು ಉಡುಪಿಯ ಸೇಂಟ್‌ ಸಿಸಿಲಿಸ್‌ ಶಾಲೆಯಲ್ಲಿ ಪ್ರೌಢಶಾಲೆಯವರೆಗೆ. ಮಹಾತ್ಮಗಾಂಧಿ ಮೆಮೊರಿಯಲ್‌ ಕಾಲೇಜಿನಲ್ಲಿ ಪಿ.ಯು. ಮತ್ತು ಪೂರ್ಣ ಪ್ರಜ್ಞ ಕಾಲೇಜಿನಿಂದ ಪಡೆದ ಬಿ.ಎ. ಪದವಿ. ಹೈಸ್ಕೂಲಿನಲ್ಲಿದ್ದಾಗಲೇ ಎರಡು ಪಿರಿಯಡ್ಡುಗಳ  ನಡುವೆ ಬಿಡುವಿನ ವೇಳೆಯಲ್ಲಿ ಕಾಂಪೌಂಡ್‌ ಒಳಗಿನ ಮರದ ಕೆಳಗೆ ವೃತ್ತಾಕಾರವಾಗಿ ಕುಳಿತ ಸ್ನೇಹಿತೆಯರು ಹರಟೆ ಹೊಡೆಯಲು ತೊಡಗಿದರೆ ಇವರು ಪೆನ್ನು ಪೇಪರ್ ಹಿಡಿದು ‘ನಾವೆಲ್ಲ ಸೇರಿ ಒಂದು ಕತೆ ಬರೆಯುವಾ, ನೀವೆಲ್ಲ ಒಂದೊಂದು ಐಡಿಯಾ ಕೊಡಿ’ ಎನ್ನುತ್ತಾ ತೋಚಿದ್ದನ್ನು ಗೀಚತೊಡಗಿದ್ದರು. ಕಾಲೇಜಿನಲ್ಲಿದ್ದಾಗಲೂ ಓದುವ, ಬರೆಯುವ ಹವ್ಯಾಸವನ್ನೂ ರೂಢಿಸಿಕೊಂಡಿದ್ದು ಕಾಲೇಜಿನ ಮ್ಯಾಗಜಿನ್‌ಗೆ ಬರೆದ ವಿಮರ್ಶಾತ್ಮಕ ಲೇಖನ ‘ಇಲ್ಲದ ಕವಿತೆಯ ರಸವಿಮರ್ಶೆ’ ಎಲ್ಲರ ಗಮನ ಸೆಳೆದ ಲೇಖನವಾಗಿತ್ತು. ಹೀಗೆ ಬರೆಯುವ ಹವ್ಯಾಸವನ್ನು ರೂಢಿಸಿಕೊಂಡಿದ್ದು ಶಾಲಾ ಕಾಲೇಜು ದಿನಗಳಲ್ಲೇ ಬರೆದ ಕತೆ, ಕವನ, ಪ್ರಬಂಧ ಸ್ಪರ್ಧೆಯಲ್ಲಿ ಹಲವಾರು ಬಹುಮಾನಗಳನ್ನು ಗಳಿಸಿದ್ದರು. ಡಿಗ್ರಿ ಮುಗಿದ ಕೂಡಲೆ ಅನುರೂಪನಾದ ವರ ದೊರೆತನೆಂದು ವಿಜಯಾ ಬ್ಯಾಂಕಿನಲ್ಲಿ ಮ್ಯಾನೇಜರಾಗಿದ್ದ ಪ್ರಭಾಕರ ರೈರೊಡನೆ ಮದುವೆ. ಉಡುಪಿಯಿಂದ ಮಂಡ್ಯಕ್ಕೆ ಗಂಡನ ಮನೆಗೆ. ಅದೇಕೋ ಮಂಡ್ಯದ ಒಗ್ಗದ ಹವಾದಿಂದ ಕಾಡಿದ ಅಸ್ತಮಾ. ಮಗ ಹುಟ್ಟಿದ ಸಂತಸ ಒಂದೆಡೆಯಾದರೆ ಕಾಡುವ ಅಸ್ತಮಾ, ಜೊತೆಗೆ ಕಾಸರಗೋಡು, ನಂತರ ಚಿಕ್ಕಮಗಳೂರಿಗೆ ವರ್ಗಾವಣೆ. ಚಿಕ್ಕಮಗಳೂರಿನ ಶೀತದ ಹವಾ ಹಿಡಿಸದೆ ಮತ್ತೆ ಉಡುಪಿಗೆ. ಹುಟ್ಟಿದೂರಿನ ಹವಾದಿಂದ ಆರೋಗ್ಯ ಸುಧಾರಿಸಿಕೊಂಡು, ಮಗುವನ್ನೂ ಸಂಭಾಳಿಸಿ ಕೊಂಡು ಬಾಹ್ಯವಿದ್ಯಾರ್ಥಿನಿಯಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮಾಜ ಶಾಸ್ತ್ರದಲ್ಲಿ ಪಡೆದ ಸ್ನಾತಕೋತ್ತರ ಪದವಿಯು ದೊಡ್ಡ ಸಾಧನೆಯೆ. ೧೯೭೪ರಲ್ಲಿ ವಿಜಯಾ ಬ್ಯಾಂಕ್‌ನಲ್ಲಿ ಅಧಿಕಾರಿಯಾಗಿ ಸೇರಿ ೧೯೯೯ರಲ್ಲಿ ಪಡೆದ ನಿವೃತ್ತಿ. ಒಂದೆಡೆ ಕಚೇರಿ ಕೆಲಸದ ಒತ್ತಡ, ಮತ್ತೊಂದೆಡೆ ಸಂಸಾರದ ಕಡೆ ಗಮನ ಹರಿಸುವುದು ಇವುಗಳೊಡನೆ ಸಹಬಾಳ್ವೆ, ನಡೆಸುತ್ತಲೇ ಕೈಗೊಂಡ ಸಾಹಿತ್ಯ ರಚನೆಯಿಂದ ಮೊದಲ ಕಾದಂಬರಿ (೧೯೭೪) ‘ಅನುಬಂಧ’ ಪ್ರಜಾಮತ ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಾಗ ಹೇಳತೀರದ ಆನಂದ. ನಂತರ ಹಲವಾರು ಸಣ್ಣ ಕತೆಗಳೂ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡವು. ಎಲ್ಲ ಮಹಿಳೆಯರ ಕತೆ ಕಾದಂಬರಿಗಳಂತೆ ಮಹಿಳಾ ಪ್ರಧಾನ ಪಾತ್ರಗಳ ಕಾದಂಬರಿಗಳೇ ಆದರೂ ಸ್ವತಂತ್ರ ಪ್ರವೃತ್ತಿಯ ಮಹಿಳೆಯ ಅದ್ವಿತೀಯ ಪಾತ್ರಗಳನ್ನು ಚಿತ್ರಿಸಿರುವ ಕಾದಂಬರಿಗಳನ್ನು ಬರೆಯತೊಡಗಿದರು. ಹೀಗೆ ಇವರು ಬರೆದ ಎರಡನೆಯ ಕಾದಂಬರಿ ‘ಪರಿಭ್ರಮಣ’ ಕೂಡ ೧೯೭೫ರಲ್ಲಿ ಪ್ರಜಾಮತದಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು ಉಷಾರವರ ಬರವಣಿಗಳಿಗೆ ಓದುಗರು ಕಾತರಿಸುವಂತೆ ಮಾಡಿದರು. ನಂತರ ಬರೆದ ಕಾದಂಬರಿ ‘ಉತ್ತರಣ’ ೧೯೭೮ರಲ್ಲಿ ಪ್ರಕಟವಾಗಿ ೧೯೯೯ರಲ್ಲಿ ಮರುಮುದ್ರಣಗೊಂಡರೆ, ಸುಪ್ತಸ್ವರ ಕಾದಂಬರಿಯು ೧೯೮೬ರಲ್ಲಿ ಪ್ರಕಟವಾಗಿ ೧೯೯೯ರಲ್ಲಿ ಮರುಮುದ್ರಣಗೊಂಡಿತು. ‘ನಿಶಾನೆ’, ಜಾಗೃತಿ ಕಾದಂಬರಿಗಳೂ ಕೂಡಾ ಓದುಗರ ವಲಯದಲ್ಲಿ ಮೆಚ್ಚಿದ ಕಾದಂಬರಿಗಳಾಗಿದ್ದು ‘ನಿಯತಿ’ ಕಾದಂಬರಿಯು ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು ಜನಮೆಚ್ಚುಗೆ ಗಳಿಸಿತು. ಇದಲ್ಲದೆ ಕನಸುಗಳು ನನಸುಗಳು, ಹಕ್ಕಿ ಮತ್ತು ಗಿಡುಗ, ಭಾವಹನಿ ಮೊದಲಾದ ಕವನ ಸಂಕಲನಗಳು; ಬದುಕೆಂಬ ಚದುರಂಗದಾಟದ ದಾಳಗಳು ಮತ್ತು ಒಂದೇ ದೋಣಿಯ ಪ್ರಯಾಣಿಕರು ಕಥಾ ಸಂಕಲನಗಳು; ಆಂತರ್ಯ, ಮಧ್ಯಂತರ ಪ್ರಬಂಧ ಸಂಕಲನಗಳು ‘ಲಕ್ಷದ್ವೀಪಕ್ಕೆ ಲಗ್ಗೆ ಇಟ್ಟಾಗ’ ಎಂಬ ಪ್ರವಾಸ ಕಥನ, ಎಂ.ಕೆ. ಇಂದಿರಾ ಮತ್ತು ಮಲ್ಲಿಕಾ ಕಡಿದಾಳ್‌ ಮಂಜಪ್ಪ ಎಂಬ ಎರಡು ವ್ಯಕ್ತಿ ಚಿತ್ರ ಕೃತಿಗಳೂ ಪ್ರಕಟವಾಗಿವೆ. ಹೀಗೆ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡ ಉಷಾರವರನ್ನು ಹುಡುಕಿಕೊಂಡು ಬಂದ ಪದವಿ ಎಂದರೆ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಪದವಿ. ಎರಡು ಅವಧಿಯವರೆಗೆ ಅಧ್ಯಕ್ಷೆಯಾಗಿ ಆಯ್ಕೆಗೊಂಡು ಸಂಘಕ್ಕಾಗಿ ಬಹುಶ್ರದ್ಧೆಯಿಂದ ದುಡಿದರು. ಲೇಖಕಿಯರ ಸಂಘವು ಸಂವಾದ ಕಾರ್ಯಕ್ರಮಗಳನ್ನೇರ್ಪಡಿಸಿ, ಸಂವಾದದಲ್ಲಿ ಭಾಗವಹಿಸಿದ ಲೇಖಕಿಯರು ಹಂಚಿಕೊಂಡ ಜೀವನಾನುಭವ, ಸಾಧನೆ, ಎದುರಿಸಿದ ಆತಂಕ, ಸಂತಸ, ತೊಳಲಾಟ ಮತ್ತು ಬರವಣಿಗೆಯ ಜೀವನದಲ್ಲಿ ಅವರು ಕಂಡ ಸೋಲು-ಗೆಲುವುಗಳನ್ನೊಳಗೊಂಡ ಆತ್ಮ ಕಥನಗಳು ಪ್ರಕಟವಾಗಿದ್ದು ಅವುಗಳಲ್ಲಿ ಲೇಖ-ಲೋಕ-೩, ಲೇಖ-ಲೋಕ-೪ ಮತ್ತು ‘ಲೇಖಕಿ’ ಬೆಳ್ಳಿ ಹಬ್ಬದ ಪ್ರಕಟಣೆಗಳು, ಲೇಖಕಿಯರ ಸಣ್ಣ ಕಥೆಗಳು (೨ ಸಂಪುಟಗಳು), ‘ಎಪ್ಪತ್ತರ ವಯಸ್ಸು ಇಪತ್ತರ ಮನಸು’ ಮುಂತಾದ ಕೃತಿಗಳನ್ನು ಕರ್ನಾಟಕ ಲೇಖಕಿಯರ ಸಂಘಕ್ಕಾಗಿ ಸಂಪಾದಿಸಿಕೊಟ್ಟಿದ್ದಾರೆ. ‘ಇದಲ್ಲದೆ ತುಳುಕವಿತೆಲು ಬೊಕ್ಕುಗಾದೆಲು’ ತುಳು ಕೃತಿ ಮತ್ತು’ ನವಯುಗ ಪ್ರವರ್ತಕ ಕೆ. ಹೊನ್ನಯಶೆಟ್ಟಿ’ ಕೃತಿಗಳನ್ನು ಸಂಪಾದಿಸಿದ್ದಾರೆ. ಇದಲ್ಲದೆ ಸ್ನೇಹ ಚಿಂತನ, ಬೊಲ್ಲಿ, ಐಸಿರಿ, ಮಿಲೇನಿಯಂ ಸ್ತ್ರೀ, ಲೇಖಕಿ, ವಿಶೇಷ ಲೇಖಕಿ ಮುಂತಾದವುಗಳ ಗೌರವ ಸಂಪಾದಕಿಯಾಗಿದ್ದಾರೆ. ೨೦೦೫ರ ಜುಲೈ ೧೭, ಉಷಾರವರ ಜೀವನದ ದುರ್ದಿನ. ಕೊಚ್ಚಿನ್‌ ನಿಂದ ಬೆಂಗಳೂರಿಗೆ ಕಾರಿನಲ್ಲಿ ಬರುವಾಗ ಸಂಭವಿಸಿದ ರಸ್ತೆ ಅಪಘಾತದಿಂದ ಚೇತರಿಸಿಕೊಳ್ಳಲು ತಿಂಗಳುಗಳೇ ಹಿಡಿಸಿತಾದರೂ ಚೇತರಿಸಿಕೊಂಡ ನಂತರ ಇವರ ಪ್ರತಿಭೆಗೆ ಮತ್ತೊಂದು ಬಾಗಿಲು ತೆರೆದಂತೆ ಚಿತ್ರಕಲೆಯಲ್ಲಿ ಪ್ರಕಟಗೊಂಡು ಅದ್ವಿತೀಯ ಸಾಧನೆ ಮಾಡಿ ೨೦೦೭ರಲ್ಲಿ ಚಿತ್ರಕಲಾ ಪರಿಷತ್ತಿನಲ್ಲಿ ಮೂರು ದಿವಸಗಳ ಕಾಲ ಇವರು ಏರ್ಪಡಿಸಿದ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವೇ ಸಾಕ್ಷಿ. ಹೀಗೆ ಕಲೆ, ಸಾಹಿತ್ಯ ಎರಡು ಕ್ಷೇತ್ರಗಳಲ್ಲಿಯೂ ಸೃಜನಶೀಲತೆಯನ್ನು ತೋರಿದ ಉಷಾರವರಿಗೆ ಸಂದ ಪ್ರಶಸ್ತಿಗಳು, ಚಿತ್ರಕಲಾ ಪ್ರದರ್ಶನದ ಬಹುಮಾನಗಳು ಹಲವಾರು. ಕನ್ನಡ ಸಾಹಿತ್ಯ ಪರಿಷತ್ತಿನ ಬಿ. ಸರೋಜದೇವಿ ಪ್ರಶಸ್ತಿ, ಹಕ್ಕಿ ಮತ್ತು ಗಿಡುಗ ಕವನ ಸಂಕಲನಕ್ಕೆ ನೀಲಗಂಗಾದತ್ತಿ ಪ್ರಶಸ್ತಿ ಮತ್ತು ಗುಲಬರ್ಗದ ‘ಅಮ್ಮ’ ಪ್ರಶಸ್ತಿ, ದಕ್ಷಿಣ ಕನ್ನಡಿಗರ ಸಂಘದ ಕರಾವಳಿ ರತ್ನ ಪ್ರಶಸ್ತಿ, ತುಳುವೆರೆಂಕುಲು ಸಂಘದಿಂದ ಬಲಿಯೇಂದ್ರ ಪುರಸ್ಕಾರ, ಹಲವಾರು ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ಗೋಷ್ಠಿಗಳಲ್ಲಿ ಪ್ರಬಂಧ ಮಂಡನೆ ಮತ್ತು ಪುರಸ್ಕಾರ, ಟಿವಿ ಹಾಗೂ ರೇಡಿಯೋಗಳಿಗಾಗಿ ಸಂದರ್ಶನ ಕಾರ್ಯಕ್ರಮಗಳಲ್ಲಿ ಭಾಗಿ. ೨೦೧೦ರಲ್ಲಿ ಸ್ನೇಹಿತರು, ಅಭಿಮಾನಿಗಳು ಅರ್ಪಿಸಿದ ಅಭಿನಂದನ ಗ್ರಂಥ ‘ಸಮೃದ್ಧಿ’.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top