೧೦.೦೫.೧೯೩೩ ಕರ್ನಾಟಕದ ಜಾನಪದ ಕಲೆಯಲ್ಲಿ ನಶಿಸಿ ಹೋಗಿದ್ದ ಸಲಾಕೆಗೊಂಬೆ ಕಲೆಗೆ ಮರು ಹುಟ್ಟು ನೀಡಿದ ರಂಗನಾಥರಾವ್ ರವರು ಹುಟ್ಟಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲ್ಲೂಕಿನ ದೊಡ್ಡಮುಡಿಗೆರೆ. ತಂದೆ ಎಂ. ರಂಗಯ್ಯ, ತಾಯಿ ಪುಟ್ಟ ಲಕ್ಷ್ಮಮ್ಮ. ಓದಿದ್ದು ಆಚಾರ್ಯ ಪಾಠಶಾಲಾ ಸಂಜೆ ಕಾಲೇಜಿನಲ್ಲಿ ಬಿ.ಎ. ಪದವಿ, ಹೈಸ್ಕೂಲು ಉಪಾಧ್ಯಾಯರಾಗಿ ಉದ್ಯೋಗ. ತಾತ ನರಸಿಂಹರಾಯರು ಗೊಂಬೆಯಾಟದ ಅದ್ವಿತೀಯ ಕಲಾವಿದರು. ಗೊಂಬೆಯಾಟದ ಬಗ್ಗೆ ಆಸ್ಥೆ ವಹಿಸಿದ ಇವರು ವೃತ್ತಿಗೆ ರಾಜೀನಾಮೆ ನೀಡಿದ ಕಲಿತದ್ದು ಗೊಂಬೆಯಾಟ. ಇದಕ್ಕಾಗಿ ಪಡೆದ ನಾಟಕ ತರಬೇತಿ, ಬಿ.ವಿ. ಕಾರಂತರೊಡನೆ ಮಾಡಿಕೊಂಡ ರಂಗ ಪರಿಚಯ. ಹಲವಾರು ರಂಗ ಸಂಸ್ಥೆಗಳಿಗೆ ನಾಟಕ ನಿರ್ದೇಶನ. ರವೀಂರ ಕಲಾಕ್ಷೇತ್ರದಲ್ಲಿ ನಡೆದ ಸೆಮಿನಾರ್ ಒಂದರಲ್ಲಿ ಕಮಲಾದೇವಿ ಚಟ್ಟೋಪಾಧ್ಯಾಯ ರವರು ಸಲಾಕೆಗೊಂಬೆ ಬಗ್ಗೆ ಮಾಡಿದ ಪ್ರಸಾದ. ತಾತನ ಕಲೆ ಉಳಿಸಲು ತೊಟ್ಟ ಪಣ. ಗೊಂಬೆಗಳ ಬಗ್ಗೆ ಯಾವ ತಿಳುವಳಿಕೆಯೂ ಇಲ್ಲದೆ ಸವಾಲು ಸ್ವೀಕರಿಸಿ ಗೊಂಬೆಗಳ ಬಗ್ಗೆ ಮಾಡಿದ ತಲಸ್ಪರ್ಶ ಅಧ್ಯಯನ. ಅಜ್ಜನ ಡೈರಿಯಿಂದ ಪಡೆದ ಬಹಳಷ್ಟು ಮಾಹಿತಿ. ಗೊಬೆಗಳ ನಿರ್ಮಾಣ, ಬಣ್ಣದ ಬಳಕೆ ಎಲ್ಲದರ ಅಭ್ಯಾಸ. ಮೊದಲ ರಂಗ ಪ್ರವೇಶಕ್ಕೆ ಆಯ್ಕೆ ಮಾಡಿಕೊಂಡದ್ದು ಕೃಷ್ಣ ಪಾರಿಜಾತ ಪ್ರಸಂಗ. ರಾಜಾಜಿನಗರದ ಕುಮಾರವ್ಯಾಸ ಮಂಟಪದಲ್ಲಿ ಮೊದಲ ಪ್ರಯೋಗ. ಅಂದೇ ರಂಗ ಪುತ್ಥಳಿ ಸಂಸ್ಥೆ ಹುಟ್ಟು, ನಂತರ ಕೃಷ್ಣತುಲಾಭಾರ, ಗಿರಿಜಾ ಕಲ್ಯಾಣ ಗೊಂಬೆಯಾಟ ಕಥೆಗಳ ರಚನೆ. ೧೯೮೧ ರಲ್ಲಿ ನಡೆದ ರಾಷ್ಟ್ರೀಯ ಸೂತ್ರದ ಗೊಂಬೆಯಾಟ ಸಮ್ಮೇಳನದಲ್ಲಿ ಭಾಗಿ. ದೆಹಲಿಯ ಸಂಗೀತ ನಾಟಕ ಅಕಾಡೆಮಿಯಿಂದ ಸಂದ ಪುರಸ್ಕಾರ. ಜಪಾನಿನಲ್ಲಿ ನಡೆದ ಗೊಂಬೆಯಾಟದಲ್ಲಿ ರಂಗ ಪುತ್ಥಳಿಗೆ ಆಹ್ವಾನ. ಪಡೆದ ವಿಶ್ವಮಾನ್ಯ ಸದಸ್ಯತ್ವ. ಶ್ರೇಷ್ಠ ಸಾಂಪ್ರದಾಯಕ ಮೇಳವೆಂಬ ಪ್ರಶಸ್ತಿ. ಬೆಂಗಳೂರಿನ ಸಾರ್ಕ್ ಸಮ್ಮೇಳನ, ಹೈದರಾಬಾದ್, ಚೆನ್ನೈನಲ್ಲಿ ಪ್ರದರ್ಶನ, ವಿದೇಶ ಪ್ರವಾಸ, ವಿದೇಶಿಯರಿಗೆ ಗೊಂಬೆಯಾಟ ತಯಾರಿಕೆ ಬಗ್ಗೆ ಕಮ್ಮಟ. ಕ್ಯಾಲಿಫೋರ್ನಿಯಾ, ಆಸ್ಟ್ರಿಯಾಗಳಲ್ಲಿ ಗೊಂಬೆಪ್ರದರ್ಶನ. ಸ್ವಿಟ್ಜರ್ಲ್ಯಾಂಡ್ನ ದಿ ಸ್ವಿಸ್ ಪಪೆಟ್ ಮ್ಯೂಸಿಯಂ ಕೌನ್ಸಿಲರ್ ಆಗಿ ಮೂರು ವರ್ಷ ಸೇವೆ. ಪೋಲೆಂಡ್ ಸಾಂಸ್ಕೃತಿಕ ಉತ್ಸವದಲ್ಲಿ ಭಾಗಿ. ಲಂಡನ್, ಜಪಾನ್, ಚೀನಾ, ಸ್ವಿಸ್ ಮ್ಯೂಸಿಯಂಗಳಲ್ಲಿ ಗೊಂಬೆಗಳು ಪಡೆದ ಸ್ಥಾನ. ವಿಶ್ವದಾದ್ಯಂತ ಗೊಂಬೆಯಾಟಕ್ಕೊಂದು ನೆಲೆ ಕಲ್ಪಿಸಿದ ರಂಗನಾಥರಾವ್ ಗೊಂಬೆ ಪ್ರಪಂಚದ ಪ್ರಮುಖ ವ್ಯಕ್ತಿ. ಇದೇ ದಿನ ಹುಟ್ಟಿದ ಕಲಾವಿದರು ರಾಘವೇಂದ್ರರಾವ್.ಎಸ್.- ೧೯೪೦ ದ್ವಾರಕಾನಾಥ್-೧೯೪೯ ಉಮಾಶ್ರೀ-೧೯೫೭ ದಿವ್ಯಾರಾಘವನ್ – ೧೯೭೭

