
- This event has passed.
ಎಂ.ಆರ್. ಶ್ರೀನಿವಾಸಮೂರ್ತಿ
August 28
೨೮-೮-೧೮೯೨ ೧೬-೯-೧೯೫೩ ವಿದ್ವಾಂಸರು, ಸಾಹಿತಿಗಳು, ಆಧುನಿಕ ಕನ್ನಡದ ನಿರ್ಮಾತೃಗಳಲ್ಲಿ ಒಬ್ಬರಾದ ಎಂ.ಆರ್.ಶ್ರೀ.ಯವರು ಹುಟ್ಟಿದ್ದು ಮೈಸೂರಿನಲ್ಲಿ. ತಂದೆ ರಾಮಚಂದ್ರರಾಯರು, ತಾಯಿ ಸಾವಿತ್ರಮ್ಮ. ರಾಮಚಂದ್ರರಾಯರು ಜಿಲ್ಲಾ ಕಚೇರಿಯಲ್ಲಿ ದ್ದುದರಿಂದ ಆಗಾಗ್ಗೆ ವರ್ಗಾವಣೆ. ಶ್ರೀನಿವಾಸಮೂರ್ತಿಗಳಿಗೂ ಪ್ರಾರಂಭಿಕ ಶಿಕ್ಷಣ ಹಲವೆಡೆ. ಪ್ರೌಢಶಾಲಾ ವ್ಯಾಸಂಗ ಬೆಂಗಳೂರು. ಸೆಂಟ್ರಲ್ ಕಾಲೇಜಿನಿಂದ ೧೯೧೫ರಲ್ಲಿ ಬಿ.ಎ. ಪದವಿ. ಪದವಿಯ ನಂತರ ಉದ್ಯೋಗಕ್ಕೆ ಸೇರಿದ್ದು ಮಾಧ್ಯಮಿಕ ಶಾಲಾ ಉಪಾಧ್ಯಾಯರಾಗಿ, ಮುಖ್ಯೋಪಾಧ್ಯಾಯರಾಗಿ, ರೇಂಜ್ ಇನ್‌ಸ್ಪೆಕ್ಟರಾಗಿ, ಜಿಲ್ಲಾ ವಿದ್ಯಾಕಾರಿಗಳಾಗಿ ಸೇವೆ ಸಲ್ಲಿಸಿ ೧೯೪೭ರಲ್ಲಿ ನಿವೃತ್ತಿ. ಪ್ರಚಂಡವಾಗ್ಮಿ, ಉತ್ತಮ ಶಿಕ್ಷಕರು, ಸಮರ್ಥ ಅಧಿಕಾರಿ. ಸಂಸ್ಕೃತ, ಹಳಗನ್ನಡಗಳ ಅಭ್ಯಾಸದ ಅನುಭವದಿಂದ ರಚಿಸಿದ ಕೃತಿಗಳು. ವಿದ್ಯಾರ್ಥಿ ದೆಸೆಯಲ್ಲಿಯೇ ರಚಿಸಿದ ಕಾದಂಬರಿ ‘ಸಾವಿತ್ರಿ.’ ಸ್ಕೌಟ್ ಬಾಲಕರ ಅಭಿನಯಕ್ಕೆಂದು ರಚಿಸಿದ ನಾಟಕ ‘ಕಂಠೀರವ ವಿಜಯ.’ ಇದೊಂದು ಕಿರು ನಾಟಕ. ಧರ್ಮದುರಂತ, ನಾಗರಿಕ, ಇನ್ನೆರಡು ನಾಟಕಗಳ ರಚನೆ. ಮಹಾತ್ಯಾಗ ಮತ್ತೊಂದು ಕಾದಂಬರಿ. ಎರಡು ಕಾದಂಬರಿಗಳೂ ಚಲನಚಿತ್ರಗಳಾಗಿ ಗಳಿಸಿದ ಪ್ರಸಿದ್ಧಿ. ‘ರಂಗಣ್ಣನ ಕನಸಿನ ದಿನಗಳು’ ಮತ್ತೊಂದು ಕೃತಿ. ಕನ್ನಡ ಸಾಹಿತ್ಯದಲ್ಲಿ ಇದೊಂದು ವಿಶಿಷ್ಟ ಬಗೆಯ ಕೃತಿ. ಗ್ರಾಮೀಣ ಬದುಕಿನ ಶಾಲಾ ಮಾಸ್ತರರ ಬದುಕು-ಬವಣೆಗಳ ನಿರೂಪಣೆಯ ಕೃತಿ. ವೀರಶೈವ ಸಾಹಿತ್ಯದಲ್ಲೂ ಅಪಾರ ಪಾಂಡಿತ್ಯ. ಹರಿಹರಮತ್ತು ಷಡಕ್ಷರಿಯ ಬಗ್ಗೆ ಮಾಡಿದ ಉಪನ್ಯಾಸವೇ ವೀರಶೈವ ಸಾಹಿತ್ಯವನ್ನು ಆಳವಾಗಿ ಅಭ್ಯಸಿಸುವಂತೆ ನೀಡಿದ ಪ್ರೇರಣೆ. ರಚಿಸಿದ ಗ್ರಂಥ ‘ವಚನ ಧರ್ಮಸಾರ’ ಎಂಬ ವಿಮರ್ಶಾ ಗ್ರಂಥ. ಆಳವಾದ ಅಭ್ಯಾಸದಿಂದ ಮೂಡಿ ಬಂದ ಮತ್ತೊಂದು ಕೃತಿ ‘ಭಕ್ತಿ ಭಂಡಾರಿ ಬಸವಣ್ಣ.’ ಸಂಪಾದಿತ ಕೃತಿಗಳು-ಚಾಮರಸನ ಪ್ರಭುಲಿಂಗಲೀಲೆ, ವಿರೂಪಾಕ್ಷ ಪಂಡಿತನ ಚನ್ನಬಸವಪುರಾಣ ಮುಖ್ಯವಾದುವು. ಕನ್ನಡ ಸಾಹಿತ್ಯ ಪರಿಷತ್ತನ್ನು ಬೆಳೆಸುವಲ್ಲಿ ಇವರ ಪಾಲು ಬಹಳ. ಪರಿಷತ್ತಿನ ಕಾರ‍್ಯಕಾರಿ ಸಮಿತಿ ಸದಸ್ಯರಾಗಿ, ಪರಿಷತ್ತಿನ ಅಧ್ಯಕ್ಷರಾಗಿ (೧೯೫೦-೫೩) ಸಲ್ಲಿಸಿದ ಸೇವೆ. ಕನ್ನಡ ನುಡಿ ಮತ್ತು ಪರಿಷತ್ ಪತ್ರಿಕೆಗಳ ಸಂಪಾದಕರ ಜವಾಬ್ದಾರಿ. ಇವರು ಸಲ್ಲಿಸಿದ ಕನ್ನಡ ನಾಡುನುಡಿ ಸೇವೆಗಾಗಿ ೧೯೪೦ರಲ್ಲಿ ಬಾದಾಮಿ ಶಿವಯೋಗ ಮಂದಿರದಿಂದ ‘ವಚನ ವಾಙ್ಮಯ ವಿಶಾರದ’ ಪ್ರಶಸ್ತಿ, ಸನ್ಮಾನ. ೧೯೫೦ರಲ್ಲಿ ಸೊಲ್ಲಾಪುರದಲ್ಲಿ ನಡೆದ ೩೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿ ತೋರಿದ ಗೌರವ. ಇವರ ನಿಧನಾ ನಂತರ ಲೇಖನ, ಮುನ್ನುಡಿ, ವಿಮರ್ಶೆ-ಬರಹಗಳನ್ನೆಲ್ಲಾ’ ಸಾಹಿತ್ಯಲೋಕ’ ಎಂಬ ಹೆಸರಿನಲ್ಲಿ ಮೈಸೂರು ವಿ.ವಿ.ದ ಕುವೆಂಪು ಅಧ್ಯಯನ ಸಂಸ್ಥೆಯಿಂದ ಪ್ರಕಟಿತ. ಇದೇ ದಿನ ಹುಟ್ಟಿದ ಸಾಹಿತಿಗಳು : ವೈ.ಕೆ. ತಿಮ್ಮರಸಯ್ಯ – ೧೯೨೪ ಜೋಶಿ. ಜಿ.ಡಿ. – ೧೯೩೩ ಎಚ್.ವಿ. ಮಹಾಬಲಯ್ಯ – ೧೯೩೬