ಎಂ.ಎಸ್. ಪಂಡಿತ್

Home/Birthday/ಎಂ.ಎಸ್. ಪಂಡಿತ್
Loading Events
This event has passed.

೨೫-೩-೧೯೧೬ ೩೦-೩-೧೯೯೩ ರೊಮ್ಯಾಂಟಿಕ್ ಕಲೆಯ ರಸಋಷಿ ಎನಿಸಿದ್ದ ಎಂ.ಎಸ್. ಪಂಡಿತ್‌ರವರು ಹುಟ್ಟಿದ್ದು ಗುಲಬರ್ಗಾದಲ್ಲಿ. ತಂದೆ ಮೋನಪ್ಪ, ತಾಯಿ ಕಲ್ಲಮ್ಮ. ವೃತ್ತಿಯಲ್ಲಿ ಕಂಚುಗಾರ ಕುಟುಂಬದವರು. ಪ್ರಾರಂಭಿಕ ಶಿಕ್ಷಣ ಪಡೆದದ್ದು ಬೀದರಿನ ಭಾಸ್ಕರರಾವ್. ನಂತರ ಗುಲಬರ್ಗಾದ ಪ್ರಸಿದ್ಧ ಕಲಾವಿದರಾದ ಶಂಕರರಾವ್ ಆಳಂದಕರ್‌ರವರಲ್ಲಿ. ೧೯೩೬ರಲ್ಲಿ ಮದರಾಸಿನ ಕಲಾಶಾಲೆಯಿಂದ ಪಡೆದ ಡಿಪ್ಲೊಮ, ಮುಂಬಯಿಯ ಜೆ.ಜೆ. ಕಲಾಶಾಲೆಯಲ್ಲಿ ಗ್ಲಾಡ್‌ಸ್ಟನ್, ಭೋಂಸ್ಲೆ, ಚೂಡೇಕರ್, ದುರಂಧರ್ ಮುಂತಾದವರಿಂದ ಉಚ್ಛ ಶಿಕ್ಷಣ. ಮುಂಬಯಿಯಲ್ಲಿ ಪೋಸ್ಟರ್ ಬರೆದುಕೊಂಡು ಆರಂಭಿಸಿದ ಬದುಕು. ಜಲವರ್ಣ ಬಳಸಿ ಪೋಸ್ಟರ್ ಕಲೆಯಲ್ಲಿ ಸಾಧಿಸಿದ ಅದ್ವಿತೀಯ ಸಾಧನೆ. ಹಾಲಿವುಡ್‌ನ ಖ್ಯಾತ ಮೆಟ್ರೋ ಸಂಸ್ಥೆಗೆ ಚಿತ್ರ ರಚಿಸಿಕೊಟ್ಟ ಮೊದಲ ಭಾರತೀಯರೆಂಬ ಹೆಗ್ಗಳಿಕೆ. ೧೯೭೬ರಲ್ಲಿ ಲಂಡನ್‌ನಲ್ಲಿ ಪ್ರಥಮ ಪ್ರದರ್ಶನ. ಭಾರತೀಯರು ಪಂಡಿತರನ್ನು ಗುರುತಿಸಿದ್ದು ನಂತರವೇ. ಪೌರಾಣಿಕ ದೇವ ದೇವತೆಗಳ, ಇತಿಹಾಸ ಸನ್ನಿವೇಶಗಳಿಗೆ ರಮ್ಯತೆ (Romantic) ಜೀವಾಳವಾಗಿರಿಸಿ ಭಾವುಕತೆ ರಂಜಕತೆಯನ್ನು ಧಾರಾಳವಾಗಿ ಬಳಸಿ ಚಿತ್ರಿಸಿದ ಖ್ಯಾತಿ. ನಳದಮಯಂತಿ, ಶಕುಂತಲೆಯ ಪತ್ರಲೇಖನ, ವಿಶ್ವಾಮಿತ್ರ-ಮೇನಕೆ, ರಾಧಾಕೃಷ್ಣ ಸಲ್ಲಾಪ ಮುಂತಾದ ಚಿತ್ರಗಳು ಸಾರ್ವಜನಿಕರನ್ನು ಸಂಮ್ಮೋಹಗೊಳಿಸಿದುವು. ಕರ್ಣಾರ್ಜುನ ಕಾಳಗದ ದೃಶ್ಯದಲ್ಲಿ ಜೀವಂತಿಕೆಯನ್ನು ತುಂಬಿ ಕಣ್ಣೆದುರಿಗೆ ಮಹಾಭಾರತ ಯುದ್ಧವನ್ನು ತೆರೆದಿಟ್ಟ ಕಲಾವಿದ. ನಟನಟಿಯರ ಚಿತ್ರಗಳನ್ನು ಅತ್ಯಂತ ನೈಜತೆಯಿಂದ ಚಿತ್ರಿಸುತ್ತಿದ್ದುದರಿಂದ ಹಲವಾರು ಸಿನಿಮಾ ಕಲಾವಿದರು ಆಶ್ರಯಿಸಿದ್ದು ಪಂಡಿತರನ್ನು. ಪುಣೆಯ ಪ್ರಭಾತ್, ಮುಂಬಯಿಯ ಆರ್.ಕೆ. ಸ್ಟುಡಿಯೊ (ರಾಜ್‌ಕಪೂರ್) ಪ್ರಮುಖರು. ಚಲನಚಿತ್ರ ಮಾಸ ಪತ್ರಿಕೆಗಳಿಗೆ ಪಂಡಿತರದ್ದೇ ವಿನ್ಯಾಸ. ಮುಂಬಯಿಯ ಫಿಲ್ಮ್ ಇಂಡಿಯಾ ಮಾಸ ಪತ್ರಿಕೆಗೆ ಬರೆದ ಚಿತ್ರ ಪಡೆದ ಅಂತಾರಾಷ್ಟ್ರೀಯ ಖ್ಯಾತಿ. ಇದೇ ಚಿತ್ರಕ್ಕೆ ೧೯೪೬ರಲ್ಲಿ ಟೊರೆಂಟೋ ಪ್ರದರ್ಶನದಲ್ಲಿ ಬಹುಮಾನ. ಲಂಡನ್ನಿನ ರಾಯಲ್ ಸೊಸೈಟಿ ಫೆಲೋಷಿಪ್. ಕರ್ನಾಟಕ ರಾಜ್ಯ ಲಲಿತಕಲಾ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್. ಗಾಂಧೀಜಿಯವರ ಭಾವಚಿತ್ರ ನ್ಯೂ ಕೌನ್ಸಿಲ್ ಹಾಲ್, ಇಂದಿರಾಗಾಂಧಿ, ಮಾರ್ಗರೆಟ್ ಥ್ಯಾಚರ್ ಚಿತ್ರಗಳು ಕಾಮನ್‌ವೆಲ್ತ್ ಸಂಸ್ಥೆ ಆವರಣ, ರೋಮನ್ ಆರ್ಟ್ ಗ್ಯಾಲರಿ, ಇಂಡೋ ಬ್ರಿಟಿಷ್ ಅಸೋಸಿಯೇಷನ್ ಹಾಲ್ ಮುಂತಾದೆಡೆ ಸಂಗ್ರಹೀತ. ಇದೇ ದಿನ ಹುಟ್ಟಿದ ಕಲಾವಿದರು : ಎಲ್. ರಾಜಾರಾವ್ – ೧೯೦೯ ಉದ್ಯಾವರ ಮಾಧವ ಆಚಾರ್ಯ – ೧೯೪೧

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top