
- This event has passed.
ಎಂ.ಎಸ್. ಪುಟ್ಟಣ್ಣ
November 21
೨೧-೧೧-೧೮೫೪ ೧೧-೪-೧೯೩೦ ಹೊಸಗನ್ನಡದ ಪ್ರಾರಂಭಿಕ ಕಾಲದಲ್ಲಿ ಕನ್ನಡ ಪ್ರೇಮಿಯಾಗಿ, ಸಾಮಾಜಿಕ ಕಳಕಳಿ ಹೊಂದಿ ಕೃತಿ ರಚಿಸಿದ ಎಂ.ಎಸ್. ಪುಟ್ಟಣ್ಣ (ಲಕ್ಷ್ಮೀನರಸಿಂಹ ಶಾಸ್ತ್ರಿ)ನವರು ಹುಟ್ಟಿದ್ದು ಮೈಸೂರಿನಲ್ಲಿ. ತಂದೆ ಸೂರ್ಯನಾರಾಯಣ ಭಟ್ಟ, ತಾಯಿ ಲಕ್ಷ್ಮಮ್ಮ. ಹುಟ್ಟಿದ ಹತ್ತು ದಿವಸದಲ್ಲೇ ತಾಯಿಯನ್ನು ಕಳೆದುಕೊಂಡು ಬೆಳದದ್ದು ಸೋದರ ಮಾವನ ಮನೆಯಲ್ಲಿ. ಪ್ರಾರಂಭಿಕ ವಿದ್ಯಾಭ್ಯಾಸ ಖಾಸಗಿ ಮಠಗಳಲ್ಲಿ ಮತ್ತು ರಾಜಾ ಸ್ಕೂಲಿನಲ್ಲಿ (ಮಹಾರಾಜಾ ಕಾಲೇಜ್). ಎಫ್.ಎ. ತೇರ್ಗಡೆಯಾಗಿ ಸೇರಿದ್ದು ಕೋಲಾರದ ಪ್ರೌಢಶಾಲೆಯ ಸಹಾಯೋಪಾಧ್ಯಾಯರಾಗಿ. ೧೮೮೫ರಲ್ಲಿ ಮದರಾಸು ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ. ನಂತರ ಬೆಂಗಳೂರಿನ ಚೀಫ್ ಕೋರ್ಟಿನಲ್ಲಿ ಭಾಷಾಂತರಕಾರರಾಗಿ. ಅಮಲ್ದಾರರಾಗಿ ನೆಲಮಂಗಲ, ಚಾಮರಾಜನಗರ, ಬಾಗೇಪಲ್ಲಿ, ಮುಳಬಾಗಿಲು, ಹೊಸದುರ್ಗಗಳಲ್ಲಿ ಕಾರ‍್ಯ ನಿರ್ವಹಣೆ. ನಂತರ ರಾಜೀನಾಮೆ ನೀಡಿ ಕೈಗೊಂಡದ್ದು ಸಾಮಾಜಿಕ ಕಾರ‍್ಯಕ್ರಮಗಳು. ಕೆಲಕಾಲ ವಕೀಲರಾಗಿ, ವಿಶ್ವವಿದ್ಯಾಲಯ ಶಿಕ್ಷಣ ಮಂಡಲಿಗಳಲ್ಲಿ ಪರೀಕ್ಷಕರಾಗಿ, ಪಠ್ಯಪುಸ್ತಕ ಸಮಿತಿ ಸದಸ್ಯರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕ ಸದಸ್ಯರಾಗಿ, ಕೆಲಕಾಲ ಕಾರ್ಯದರ್ಶಿಯಾಗಿ ವಹಿಸಿದ ಜವಾಬ್ದಾರಿಗಳು. ಹಳೆ ಕಾವ್ಯಗಳ ಪ್ರಕಟಣೆ, ಭಾಷಾಂತರ, ಸ್ವತಂತ್ರ ಕೃತಿಗಳ ರಚನೆಗಳು ಕಾಣಿಸಿಕೊಂಡ ಸಾಹಿತ್ಯ ಸಂದರ್ಭದಲ್ಲಿ ಇವರು ಬರೆದದ್ದು ಕಾದಂಬರಿಗಳು. ‘ಮಾಡಿದ್ದುಣ್ಣೋ ಮಹಾರಾಯ’, ‘ಮುಸುಕು ತೆಗೆಯೇ ಮಾಯಾಂಗನೆ’, ‘ಅವರಿಲ್ಲದೂಟ’ ಆಡುಮಾತಿನ ಮೇಲೆ ರಚಿಸಿದ ಕಾದಂಬರಿಗಳು ಬಹುಬೇಗ ಜನಪ್ರಿಯವಾದುವು. ಕಥಾಸಂಕಲನ – ನೀತಿ ಚಿಂತಾಮಣಿ, ಪುಟ್ಟಣ್ಣ ಹೇಳಿದ ಕಥೆಗಳು, ಪೇಟೆಮಾತೇನಜ್ಜಿ. ಜೀವನ ಚರಿತ್ರೆಗಳು-ಚೀನಾದೇಶದ ತತ್ವಜ್ಞಾನಿ ಕನ್‌ಫ್ಯೂಷಿಯಸ್ಸನನ್ನು ಕುರಿತು ಕಂಫ್ಯೂಷನ ಚರಿತ್ರೆ, ಕುಣಿಗಲ್ ರಾಮಾಶಾಸ್ತ್ರಿಗಳ ಚರಿತ್ರೆ, ಹೈದರಾಬಾದಿನ ಮಂತ್ರಿ ಸಾಲಾರ್ಜಂಗ್ ಮ್ಯೂಜಿಯಂ ಸ್ಥಾಪಕ ಸರ್ ಸಾಲಾರಜಂಗನ ಚರಿತ್ರೆ, ಬಹಮನಿ ಸಂಸ್ಥಾನದ ಮಂತ್ರಿ ಮಹಮದ್ ಗವಾನನ ಚರಿತ್ರೆ, ಛತ್ರಪತಿ ಶಿವಾಜಿ ಮಹಾರಾಜ ಮೊದಲಾದುವು. ಶೇಕ್ಸ್‌ಪಿಯರನ ನಾಟಕ ರೂಪಾಂತರ ಜಯಸಿಂಹರಾಜ ಚರಿತ್ರೆ (ಸಿಂಬಲೈನ್) ; ಹೇಮಚಂದ್ರ ರಾಜ ವಿಲಾಸ (ಕಿಂಗ್‌ಲಿಯರ್) ; ಹೇಮಲತ (ಹ್ಯಾಮ್ಲೆಟ್) ; ಸುಮತಿ ಮದನ ಸುಕುಮಾರ ಚರಿತ್ರೆ (ದ ಹಿಸ್ಟರಿ ಆಫ್ ಸ್ಯಾಂಡ್ ಫೋರ್ಡ್ ಅಂಡ್ ಮರ್ಟನ್) ; ಪರ್ಷಿಯನ್ ಮೂಲದ ಹಾತಿಂತಾಯ್ (ಅಪ್ರಕಟಿತ) ಪಾಳೇಗಾರರನ್ನು ಕುರಿತು ಬರೆದ ಕೃತಿಗಳು-ಪಾಳೇಗಾರರು, ಚಿತ್ರದುರ್ಗದ ಪಾಳೇಗಾರರು, ಗುಮ್ಮನಾಯಕನ ಪಾಳಯದ ಪಾಳಯಗಾರರು, ಹಾಗಲವಾಡಿ ಪಾಳಯಗಾರರು, ಇಕ್ಕೇರಿ ಸಂಸ್ಥಾನ ಚರಿತ್ರೆ. ಪಠ್ಯಪುಸ್ತಕದ ಕೊರತೆ ನೀಗಲು ಬರೆದ ಕೃತಿಗಳು-ಹಿಂದು ಚರಿತ್ರ ದರ್ಪಣ, ಹಿಂದು ಚರಿತ್ರ ಸಂಗ್ರಹ, ಕನ್ನಡ ಒಂದನೆಯ ಪುಸ್ತಕ, ಕನ್ನಡ ಲೇಖನ-ಲಕ್ಷಣ. ಕನ್ನಡಕ್ಕಾಗಿ ದುಡಿದ ಮಹನೀಯರು ತೀರಿಕೊಂಡದ್ದು ೧೯೩೦ರ ಏಪ್ರಿಲ್ ೧೧ರಂದು. ಇದೇ ದಿನ ಹುಟ್ಟಿದ ಸಾಹಿತಿಗಳು : ಎಸ್. ನಾಗರಾಜ್ – ೧೯೨೮ ಚಂದ್ರಕಲಾ ನಂದಾವರ – ೧೯೫೦