೨೪.೫.೧೯೨೨ ೩೦.೧೧.೨೦೦೨ ಹಿರಿಯ ಮೃದಂಗ ವಿದ್ವಾಂಸರೆನಿಸಿದ್ದ ರಾಮಯ್ಯನವರು ಹುಟ್ಟಿದ್ದು ಮೈಸೂರು. ತಂದೆ ತಬಲ ವಿದ್ವಾಂಸರಾಗಿದ್ದ ಸುಬ್ಬಣ್ಣ. ತಂದೆ, ತಾತ, ಸಹೋದರರು ಎಲ್ಲರೂ ಸಂಗೀತದಲ್ಲಿ ಪಳಗಿದವರೆ. ಸಂಗೀತದ ವಾತಾವರಣದ ಮನೆತನ. ಬಾಲ್ಯದಿಂದ ತಂದೆಯ ಬಳಿಯೇ ಮೃದಂಗ ವಾದನದ ಅಭ್ಯಾಸ. ನಂತರ ಪ್ರಖ್ಯಾತ ಮೃದಂಗ ವಿದ್ವಾಂಸರೆನಿಸಿದ್ದ ಮುತ್ತುಸ್ವಾಮಿ ತೇವರ್ ಅವರ ಮಗ ವಿದ್ವಾನ್ ವೆಂಕಟೇಶ್ ತೇವರ್, ವಿದ್ವಾನ್ ಪುಟ್ಟಾಚಾರ್, ವಿದ್ವಾನ್ ಶ್ರೀನಿವಾಸಲು ನಾಯ್ಡು ಮುಂತಾದವರಲ್ಲಿ ಲಯ, ತಾಳಗಳ ಅಂತರಂಗದ ಸೂಕ್ಷ್ಮತೆಗಳ ಕಲಿಕೆ. ಜೊತೆಗೆ ಅಲಿ ಜಾನ್ ಸಾಹೇಬ್ರವರಲ್ಲಿ ಕಲಿತ ತಬಲ ವಾದನ. ವಿದ್ವಾನ್ ಪಲ್ಲವಿ ಚಂದ್ರಪ್ಪನವರಲ್ಲಿ ಪಲ್ಲವಿಯ ಮರ್ಮಗಳ ಶಿಕ್ಷಣ. ಡಾ. ಬಿ.ದೇವೇಂದ್ರಪ್ಪನವರಲ್ಲಿ ಕಲಿತ ಗಾಯನ ಮತ್ತು ವಾದನ ತಂತ್ರ. ಇವರ ಕಚೇರಿಗಳಿಗೂ ನೀಡಿದ ಮೃದಂಗದ ಸಹಕಾರ. ದೇಶಾದ್ಯಂತ ಅನೇಕ ಸಭೆ, ಸಮಾರಂಭಗಳಲ್ಲಿ ಕಾರ್ಯಕ್ರಮ ನೀಡಿಕೆ. ಡಾ. ಗೋಪಾಲಸ್ವಾಮಿಯವರು ಮೈಸೂರಿನಲ್ಲಿ ಆರಂಭಿಸಿದ ಆಕಾಶವಾಣಿ ಕೇಂದ್ರದಲ್ಲಿ ಮೃದಂಗ ವಾದನ ಕಲಾವಿದರಾಗಿ ದೊರೆತ ಗುತ್ತಿಗೆ ಹುದ್ದೆ. ಆಕಾಶವಾಣಿಯನ್ನು ಸರಕಾರ ವಹಿಸಿಕೊಂಡಾಗ ಖಾಯಂ ಉದ್ಯೋಗಿಯಾಗಿ ನೇಮಕ. ಆಕಾಶವಾಣಿಯಲ್ಲಿ ಹಾಡುತ್ತಿದ್ದ ಸಂಗೀತ ವಿದ್ವಾಂಸರುಗಳಾದ ಟೈಗರ್ ವರದಾಚಾರ್, ಪಲ್ಲಡಂ ಸಂಜೀವರಾವ್, ಆಲತ್ತೂರು ಸಹೋದರರು, ಶೆಮ್ಮಿಂಗುಡಿ ಶ್ರೀನಿವಾಸ್ ಅಯ್ಯರ್, ಚಿಂತನಪಲ್ಲಿ ವೆಂಕಟರಾಯರು, ಆರ್.ಕೆ. ಶ್ರೀಕಂಠನ್, ಮುಂತಾದವರುಗಳಿಗೆ ನೀಡಿದ ಪಕ್ಕವಾದ್ಯದ ಸಾಥಿ. ಕರ್ನಾಟಕ ಶಾಸ್ತ್ರೀಯ ಸಂಗೀತಗಾರರಿಗಷ್ಟೇ ಅಲ್ಲದೆ ಹಿಂದೂಸ್ತಾನಿ ಸಂಗೀತಗಾರರಾದ ಪಂ. ಮಲ್ಲಿಕಾರ್ಜುನ ಮನಸೂರ್, ಪಂ. ಭೀಮಸೇನಜೋಶಿ, ಮುಂತಾದವರಿಗೂ ನೀಡಿದ ಮೃದಂಗದ ಸಹಕಾರ. ಧ್ವನಿವರ್ಧಕಗಳೇ ಇಲ್ಲದ ಕಾಲದಿಂದ ಸಂಗೀತ ಕಚೇರಿಗಳಿಗೆ ಪಕ್ಕವಾದ್ಯ ನುಡಿಸಲಾರಂಭಿಸಿ ಬದಲಾವಣೆಗೊಳಗಾದಾಗ ಅದನ್ನು ತುಂಬು ಮನಸ್ಸಿನಿಂದ ಒಪ್ಪಿ, ಕಾಲಕ್ಕೆ ತಕ್ಕಂತೆ ಸಂಗೀತಗಾರರ, ಶೋತೃಗಳ ಮನೋಭಿಷ್ಟದತೆ ಮೃದಂಗ ನುಡಿಸಿ ಗಳಿಸಿದ ಪ್ರಶಂಸೆ. ಸಂದ ಪ್ರಶಸ್ತಿ ಗೌರವಗಳು ಹಲವಾರು. ಗಾಯನ ಸಮಾಜದ ಸಮ್ಮೇಳನಾಧ್ಯಕ್ಷರಾಗಿ ಸಂಗೀತ ಕಲಾರತ್ನ ಬಿರುದು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾ ತಿಲಕ, ಮೈಸೂರಿನ ಹನುಮ ಜಯಂತಿ ಉತ್ಸವದ ಲಯವಾದ್ಯ ಚತುರ, ಕರ್ನಾಟಕ ಗಾನ ಕಲಾ ಪರಿಷತ್ತಿನಿಂದ ಪ್ರಶಸ್ತಿ. ಬೆಂಗಳೂರಿನ ಸಂಗೀತ ಕಲಾ ರತ್ನ, ಕರ್ನಾಟಕ ಸರಕಾರದ ಪ್ರತಿಷ್ಠಿತ ಕನಕಪುರಂದರ ಪ್ರಶಸ್ತಿ, ಕಲಾಜ್ಯೋತಿ ಪುರಸ್ಕಾರ, ಪಾಲ್ಘಾಟ್ಮಣಿ ಅಯ್ಯರ್ ಪ್ರಶಸ್ತಿ ಮುಖ್ಯವಾದುವು. ಇದೇ ದಿನ ಹುಟ್ಟಿದ ಕಲಾವಿದರು ಹರ್ತಿಕೋಟೆ ಸುಬ್ಬಣ್ಣ – ೧೯೦೫ ರಾಮನರಸಯ್ಯ ಎಂ. – ೧೯೨೨ ಮರಿಗೆಮ್ಮ. ಎಂ. – ೧೯೪೬ ಶುಭ ಧನಂಜಯ – ೧೯೬೮.
* * *