ಎಂ.ಕೆ. ಜಯಲಕ್ಷ್ಮೀ

Home/Birthday/ಎಂ.ಕೆ. ಜಯಲಕ್ಷ್ಮೀ
Loading Events
This event has passed.

೦೬.೦೧.೧೯೨೯ ೧೪..೧೯೬೪ ಸುಮಾರು ಐವತ್ತು ಅರವತ್ತು ವರ್ಷಗಳ ಹಿಂದೆ ಹದಿಹರೆಯದ ಹೃದಯಗಳನ್ನು ತಲ್ಲಣಗೊಳಿಸುವ, ಮೃದುಭಾವನೆಗಳನ್ನು  ತುಂಬುವ, ಮನಸ್ಸಿನ ಭಾವನೆಗಳನ್ನು ಭಾವಾತಿರೇಕಕ್ಕೆ ಕೊಂಡೊಯ್ಯುವಂತಹ ವಸ್ತುಗಳನ್ನೇ ಮೂಲದ್ರವ್ಯವಾಗಿಸಿಕೊಂಡು ಕಥೆ, ಕಾದಂಬರಿಗಳನ್ನು ಬರೆಯತೊಡಗಿದ್ದ ಜಯಲಕ್ಷ್ಮೀಯವರು ಹುಟ್ಟಿದ್ದು ಜನವರಿ ೬ ರ ೧೯೨೯ ರಲ್ಲಿ. ತಂದೆ ಕಾಡಯ್ಯ, ತಾಯಿ ಮುತ್ತಮ್ಮ. ಓದಿದ್ದು ಇಂಟರ್ ಮೀಡಿಯಟ್‌ವರೆಗೆ. ನಂತರ ಮದುವೆ, ಕೆ.ಎಸ್‌. ಕೃಷ್ಣಮೂರ್ತಿಯವರೊಡನೆ. ತ್ರಿವೇಣಿಯವರ ಸಮಕಾಲೀನರಾದ ಇವರೂ ಕೂಡಾ ಅಲ್ಪಾಯುಷಿಯೆ. ತಾಯ್ತನದ ಸುಖವನ್ನನುಭವಿಸಬೇಕೆಂಬ ಹಂಬಲದಿಂದ ತಾಯಿಯಾದ ಬಳಿಕ ಕೆಲವೇ ದಿನಗಳಲ್ಲಿ ಅಗಲಿದ ತ್ರಿವೇಣಿಯವರ ಸಾವನ್ನೇ ಮನಸ್ಸಿನಲ್ಲಿ ತುಂಬಿಕೊಂಡು ಭಯದಿಂದ ಅವರಂತೆಯೇ ಮಗುವಿಗೆ ಜನ್ಮ ನೀಡಿ ಮರಣಿಸಿದ್ದು ಏಪ್ರಿಲ್‌ ೧೪ ರ ೧೯೬೪ ರಲ್ಲಿ. ತ್ರಿವೇಣಿಯವರಿಗಿಂತ ನಾಲ್ಕು ತಿಂಗಳು ಚಿಕ್ಕವರು, ಅವರು ತೀರಿಕೊಂಡ ಎಂಟು ತಿಂಗಳ ನಂತರ ಇವರೂ ತೀರಿಕೊಂಡರು. ಜೀವಿಸಿದ್ದ ಮೂವತ್ತೈದು ವರ್ಷಗಳಲ್ಲಿ ಹದಿನಾರು ಕಾದಂಬರಿ, ಹಲವಾರು ಕಥೆಗಳನ್ನು ಬರೆದರು. ಮೊದಲ ಕಾದಂಬರಿ ‘ಕನಸಿನ ಕಡೆ’ ಪ್ರಕಟವಾದದ್ದು ೧೯೫೬ ರಲ್ಲಿ. ಇದು ೧೯೮೩ ರಲ್ಲಿ ನಾಲ್ಕನೆಯ ಮುದ್ರಣ ಕಂಡು ಓದುಗರ ಮೆಚ್ಚುಗೆ ಪಡೆದ ಕಾದಂಬರಿ. ಓದಿನ ಆಸೆಯಿಂದ ಯಾವುದೇ ಆಸರೆಯಿಲ್ಲದ ಹೆಣ್ಣುಮಕ್ಕಳ ಹಾಸ್ಟೆಲ್‌ಗೆ ಸೇರಿ ಓದು ಮುಂದುವರೆಸಲು ಪ್ರಯತ್ನಿಸಿದವರ ಬಗ್ಗೆ ಸಮಾಜ ಬೇರೊಂದು ರೀತಿ ಯೋಚಿಸಿ ಹಾಸ್ಟೆಲಿನಲ್ಲಿರುವ ಹೆಣ್ಣುಮಕ್ಕಳ ಜೀವನ ವಿಧಾನದ ಬಗ್ಗೆ ತಪ್ಪುಕಲ್ಪನೆಗಳಿಂದ ಕೂಡಿರುವ ವಿಷಯವನ್ನೇ ಮೂಲವಾಗಿಟ್ಟುಕೊಂಡು ಬರೆದ ಕಾದಂಬರಿ. ಮಂಗಳವಾದ್ಯ ಮೊಳಗಿತು ಎಂಬ ಮತ್ತೊಂದು ಕಾದಂಬರಿಯಲ್ಲಿ ಸಮಾಜದಲ್ಲಿ ಹೇಗೆ ಹೆಣ್ಣು, ಗಂಡಿಗೆ ವಿವಿಧ ರೀತಿಯ ನಡುವಳಿಕೆ, ಸಂಪ್ರದಾಯಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂಬುದನ್ನು ವಿವೇಚಿಸುತ್ತಾ, ಅಲ್ಲಿ ಬರುವ ಕಮಲ ಎಂಬ ಪಾತ್ರದಲ್ಲಿ ವಿಧವೆಯಾದಾಗ ಸಮಾಜವನ್ನು ಧಿಕ್ಕರಿಸಿ ಮರುಮದುವೆಗೆ ಸಿದ್ಧಳಾಗುವಂತೆ ಚಿತ್ರಿಸಿದ್ದಾರೆ. ಸ್ತ್ರೀ ಶೋಷಣೆಯ ವಿರುದ್ಧ ಬಂಡಾಯದ ದನಿಯನ್ನು ಎಷ್ಟೋ ವರುಷಗಳ ಹಿಂದಿಯೇ ಎತ್ತಿ ದಾಖಲಿಸಿದ್ದಾರೆ. ಹೀಗೆ ಅವರ ಕಥೆ, ಕಾದಂಬರಿಗಳಲ್ಲಿ ಗಂಡುಹೆಣ್ಣಿನ ಬಗ್ಗೆ ಇರುವ ಸಮಾಜದ ದ್ವಿಮುಖ ನೀತಿಯನ್ನು ಪ್ರತಿಭಟಿಸುವ, ಅವೈಜ್ಞಾನಿಕವಾದ ಮೂಢನಂಬಿಕೆಗಳಿಗಿಂತ ನೀತಿ, ಧರ್ಮ, ಆದರ್ಶಗಳನ್ನೇ ಮೈಗೂಡಿಸಿಕೊಂಡು ಬಾಳುವೆ ಮಾಡುವ ಸುಶಿಕ್ಷಿತ ಮಹಿಳೆಯರಲ್ಲಿ ನಾಯಿಕೆಯರು ತೋರುವ ಸ್ವಾಭಿಮಾನ, ಪ್ರತಿಭಟನೆ, ಸಮಾಜವನ್ನು ಎದುರಿಸಿ ನಿಲ್ಲುವ ಪಾತ್ರಗಳ ಸೃಷ್ಟಿಯಿಂದ ಅಂದಿನ ಸಾಮಾನ್ಯ ಕಾದಂಬರಿ ರಚನೆಗಳಿಗಿಂತ ವಿಭಿನ್ನವಾಗಿ ಯೋಜಿಸಿ, ಆರೋಗ್ಯಕರ ಕಾದಂಬರಿಗಳತ್ತ ಜಯಲಕ್ಷ್ಮೀಯವರು ಗಮನ ಹರಿಸಿದ್ದಾರೆ. ಅತ್ಯಲ್ಪ ಕಾಲದಲ್ಲಿ ಇವರು ಬರೆದದ್ದು ಹದಿನಾರು ಕಾದಂಬರಿಗಳು. ಇವು ಜನಮೆಚ್ಚಿಗೆ ಪಡೆದ ಕಾದಂಬರಿಗಳೆನಿಸಿದ್ದವು. ಕನಸಿನ ಕಡೆ- ೧೯೫೬, ಬಾಳು ಬೆಳಗಿತು – ೧೯೬೦, ಸಂಸಾರದಲ್ಲಿ ಸಮರ – ೧೯೬೨, ಬಾಳುಮುಂಜಾವು – ೧೯೬೩, ಪ್ರೇಮಪಂಜರ – ೧೯೬೪, ಕನಸುನನಸು – ೧೯೬೬, ಹೂವುಚೆಲ್ಲಿದ ಹಾದಿ – ೧೯೭೩, ಮಾಯದ ಬಲೆ – ೧೯೭೮, ತಾಯ ಹರಕೆ – ೧೯೭೯, ತಾರೆಮಿನುಗಿತು – ೧೯೭೩, ಪ್ರೇಮಪಂಜರ – ೧೯೮೦, ಮಂಗಳವಾದ್ಯ ಮೊಳಗಿತು – ೧೯೮೯, ಬಾಳಿನ ಪಥ ಮತ್ತು ಮೋಡ ಚದುರಿತು. ಇಲ್ಲಿ ಕೆಲವು ಕಾದಂಬರಿಗಳು ಅವರು ತೀರಿಕೊಂಡ ನಂತರವೂ ಮರುಮುದ್ರಣಗೊಂಡಿವೆ ಎಂದರೆ ಜಯಲಕ್ಷ್ಮೀಯವರ ಜನಪ್ರಿಯತೆಯ ಅರಿವಾದೀತು. ‘ಸಂಸಾರದಲ್ಲಿ ಸಮರ’ ಕಾದಂಬರಿಗೆ ೧೯೬೨ರಲ್ಲಿ ಮೈಸೂರು ಸರಕಾರದಿಂದ ಪ್ರಶಸ್ತಿ ದೊರೆತಿತ್ತು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top